Tag: disqualify

  • ಅನರ್ಹತೆಗೆ ನಾವು ಹೆದರೋದಿಲ್ಲ: ವಿಶ್ವನಾಥ್ ತಿರುಗೇಟು

    ಅನರ್ಹತೆಗೆ ನಾವು ಹೆದರೋದಿಲ್ಲ: ವಿಶ್ವನಾಥ್ ತಿರುಗೇಟು

    ಮುಂಬೈ: ಸ್ಪೀಕರ್ ಮೂವರನ್ನ ಅನರ್ಹಗೊಳಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಜೆಡಿಎಸ್ ನಾಯಕ ಎಚ್. ವಿಶ್ವನಾಥ್ ಅವರು ಅನರ್ಹತೆಗೆ ನಾವು ಹೆದರೋದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

    ಗುರುವಾರದಂದು ರಾಣೇಬೆನ್ನೂರು ಶಾಸಕ ಆರ್.ಶಂಕರ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಈ ಮೂವರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದಾರೆ. ಈ ಬಗ್ಗೆ ಮುಂಬೈನಲ್ಲಿ ಮಾತನಾಡಿದ ವಿಶ್ವನಾಥ್, ಅನರ್ಹತೆಗೆ ನಾವು ಹೆದರೋದಿಲ್ಲ. ಇನ್ನು 2-3 ದಿನಗಳಲ್ಲಿ ಬೆಂಗಳೂರಿಗೆ ವಾಪಸ್ ಬರುತ್ತೇವೆ. ಅನರ್ಹತೆ ವಿಚಾರವನ್ನ ಸುಪ್ರಿಂಕೋರ್ಟಿನಲ್ಲಿ ಪ್ರಶ್ನೆ ಮಾಡುತ್ತೇವೆ ಎಂದು ಕಿಡಿಕಾರಿದ್ದಾರೆ.

    ಶಾಸಕ ಆರ್.ಶಂಕರ್, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮೂವರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಲಾಗಿದೆ. ಇನ್ನುಳಿದ ರಾಜೀನಾಮೆ ನೀಡಿರುವ ಶಾಸಕರ ಪ್ರಕರಣಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಸವಿವರವಾಗಿ ಮಾಹಿತಿ ನೀಡುತ್ತೇನೆ. ಅನರ್ಹಗೊಂಡಿರುವ ಶಾಸಕರು 15 ವಿಧಾನಸಭೆ ಅವಧಿ ಅಂದರೆ 3 ವರ್ಷ 10 ತಿಂಗಳು ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂಬುದನ್ನು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದರು.

    ಸ್ಪೀಕರ್ ಅವರು ಮೂವರು ರೆಬೆಲ್ ಶಾಸಕರನ್ನು ಅನರ್ಹಹೊಳಿಸಿ ಆದೇಶ ಹೊರಡಿಸಿದ್ದಕ್ಕೆ ಕಾಂಗ್ರೆಸ್ ವಲಯದಲ್ಲಿ ಸಂತಸ ವ್ಯಕ್ತವಾಗಿದೆ. ಈ ಕುರಿತು ಕಾಂಗ್ರೆಸ್ ನಾಯಕರು ಟ್ವೀಟ್ ಮೇಲೆ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ ಜಿ. ಪರಮೇಶ್ವರ್ ಅವರು ಟ್ವೀಟ್ ಮಾಡಿ ಸ್ಪೀಕರ್ ನಿರ್ಧಾರವನ್ನ ಶ್ಲಾಘಿಸಿದ್ದಾರೆ.

    ಟ್ವೀಟ್‍ಗಳಲ್ಲಿ ಏನಿದೆ?
    ರೆಬೆಲ್ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಆರ್.ಶಂಕರ್ ಅವರನ್ನು ಅನರ್ಹಗೊಳಿಸಲಾಗಿದೆ. ಸ್ಪೀಕರ್ ರಮೇಶ್ ಕುಮಾರ್ ಅವರ ತೀರ್ಪನ್ನ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದರು.

    ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ನಮ್ಮ ಪಕ್ಷದ ಮೂವರು ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್ ಅವರ ನಿರ್ಣಯವನ್ನು ಸ್ವಾಗರಿಸುತ್ತೇನೆ. ಪ್ರಜಾಪ್ರಭುತ್ವದ ರಕ್ಷಣೆಗಾಗಿ ಇಂತ ನಿರ್ಧಾರಗಳು ಅತ್ಯಗತ್ಯ. ಸ್ವಾರ್ಥ ಸಾಧನೆಗಾಗಿ ಜನಾದೇಶವನ್ನು ಉಲ್ಲಂಘಿಸಿದವರಿಗೆ ಈ ಐತಿಹಾಸಿಕ ನಿರ್ಣಯ ಎಚ್ಚರಿಕೆಯ ಗಂಟೆಯಗಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು.

    ಬಂಡಾಯ ಶಾಸಕರು ಅಧಿಕಾರದ ಆಸೆಗೆ ಪಕ್ಷ ತೊರೆದು ಹೋದರು. ಈ ಮೂಲಕ ತಮ್ಮನ್ನು ಆರಿಸಿದ ಜನರನ್ನು ಇಡೀ ದೇಶದ ಜನರ ಎದುರಿಗೆ ನಗೆಪಾಟಲಿಗೆ ತಳ್ಳಿದರು. ರೆಬೆಲ್ ಶಾಸಕರಾದ ರಮೇಶ್ ಜಾರಕಿಹೊಳಿ, ಆರ್.ಶಂಕರ್ ಹಾಗೂ ಮಹೇಶ್ ಕುಮಟಳ್ಳಿ ಅವರನ್ನು ಅಮಾನತು ಮಾಡಿರುವ ಸಭಾಧ್ಯಕ್ಷರ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಬಂಡಾಯ ಶಾಸಕರ ನಡವಳಿಕೆಯಿಂದಾಗಿ ರಾಜಕಾರಣದ ಬಗ್ಗೆ ಜನರಲ್ಲಿ ಹೇಸಿಗೆ ಹುಟ್ಟಿದೆ ಎಂದು ಜಿ. ಪರಮೇಶ್ವರ್ ಕಿಡಿಕಾರಿದ್ದರು.

  • ಮೂವರು ಮಕ್ಕಳಿದ್ದಿದ್ದಕ್ಕೆ ಪಾಲಿಕೆ ಸದಸ್ಯೆ ಅನರ್ಹ

    ಮೂವರು ಮಕ್ಕಳಿದ್ದಿದ್ದಕ್ಕೆ ಪಾಲಿಕೆ ಸದಸ್ಯೆ ಅನರ್ಹ

    ಹೈದರಾಬಾದ್: ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಕ್ಕೆ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ(ಜಿಎಚ್‍ಎಂಸಿ) ಸದಸ್ಯರೊಬ್ಬರನ್ನು ನಾಂಪಲ್ಲಿ ನ್ಯಾಯಾಲಯವು ಅನರ್ಹಗೊಳಿಸಿ ಆದೇಶ ಹೊರಡಿಸಿದೆ.

    ಟಿಆರ್‍ಎಸ್‍ಗೆ ಸೇರಿದ ಕಚೆಗುಡ ಕಾರ್ಪೋರೇಟರ್ ಎಕ್ಕಲ ಚೈತನ್ಯ ಕಣ್ಣ ಅವರನ್ನು ಕೋರ್ಟ್ ಅನರ್ಹಗೊಳಿಸಿದೆ. ಜಿಎಚ್‍ಎಂಸಿ ಕಾಯ್ದೆ 2009 ರ ಸೆಕ್ಷನ್ 21 ಬಿ ಪ್ರಕಾರ ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಮಹಾನಗರ ಪಾಲಿಕೆ ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗಿರುತ್ತಾರೆ.

    ಕಣ್ಣ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ವೇಳೆ ಅಫಿಡವಿಟ್‍ನಲ್ಲಿ ತಮಗೆ ಕೇವಲ ಇಬ್ಬರು ಮಕ್ಕಳಿದ್ದಾರೆ ಎಂದು ಉಲ್ಲೇಖಿಸಿದ್ದರು. ಮಾಜಿ ಕಾರ್ಪೋರೇಟರ್ ಮತ್ತು ಬಿಜೆಪಿ ಮುಖಂಡ ಕೆ.ರಮೇಶ್ ಯಾದವ್ ಅವರು ಕಣ್ಣ ಅವರಿಗೆ ಮೂವರು ಮಕ್ಕಳಿದ್ದಾರೆ ಎಂದು ಅವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಜೊತೆಗೆ ಮೂವರು ಮಕ್ಕಳಿದ್ದಾರೆ ಎಂಬುದಕ್ಕೆ ಪುರಾವೆಗಳನ್ನು ಸಲ್ಲಿಸಿದ್ದರು.

    ಟಿಆರ್‍ಎಸ್ ಕಾರ್ಪೊರೇಟರ್ ಅವರು ಅಫಿಡವಿಟ್‍ನಲ್ಲಿ ಇಬ್ಬರು ಮಕ್ಕಳಿದ್ದಾರೆ ಎಂದು ಸುಳ್ಳು ಹೇಳಿದ್ದರು. ಹೀಗಾಗಿ ಅವರ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಕಣ್ಣ ಅವರಿಗೆ ಮೂರು ಮಕ್ಕಳಿದ್ದಾರೆ. ಹೀಗಾಗಿ ಸುಮಾರು ಮೂರೂವರೆ ವರ್ಷಗಳ ಕಾಲ ವಿಚಾರಣೆ ನಡೆಸಿದ ಕೋರ್ಟ್ ಅಂತಿಮವಾಗಿ ಕಾರ್ಪೊರೇಟರ್ ಅವರನ್ನು ಅನರ್ಹಗೊಳಿಸಿದೆ ಎಂದು ಯಾದವ್ ತಿಳಿಸಿದ್ದಾರೆ.