Tag: Disqualified MLAs

  • ಇಂಧನ ಖಾತೆ ನೀಡಿದ್ರೆ ಅಚ್ಚುಕಟ್ಟಾಗಿ ಕೆಲಸ ಮಾಡ್ತೇನೆ: ಹೆಚ್.ನಾಗೇಶ್

    ಇಂಧನ ಖಾತೆ ನೀಡಿದ್ರೆ ಅಚ್ಚುಕಟ್ಟಾಗಿ ಕೆಲಸ ಮಾಡ್ತೇನೆ: ಹೆಚ್.ನಾಗೇಶ್

    ಕೋಲಾರ: ನನಗೆ ಇಂಧನ ಖಾತೆಯ ಮೇಲೆ ಆಸೆ ಇದೆ. ಜೊತೆಗೆ ಆ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವವಿದೆ. ಹೀಗಾಗಿ ಇಂಧನ ಖಾತೆ ಸಿಕ್ಕರೆ ಸಂತೋಷ ಎಂದು ಸಚಿವ ನಾಗೇಶ್ ಮತ್ತೊಮ್ಮೆ ಇಂಧನ ಖಾತೆ ಮೇಲೆ ತಮ್ಮ ಒಲವನ್ನು ವ್ಯಕ್ತಪಡಿಸಿದ್ದಾರೆ.

    ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಹಿಂದಿನಿಂದಲೂ ಇಂಧನ ಖಾತೆ ಮೇಲೆ ಒಲವಿತ್ತು. ಅಲ್ಲದೆ, ಆ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವವಿದೆ. ಇಂಧನ ಖಾತೆ ನೀಡಿದರೆ ಅಚ್ಚುಕಟ್ಟಾಗಿ ಕೆಲಸ ಮಾಡುತ್ತೇನೆ. ಈ ಕುರಿತು ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದೇನೆ ನನಗೆ ಅದೇ ಖಾತೆ ನೀಡುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

    ಬಿಜೆಪಿಯಲ್ಲಿ ಸ್ಥಾನ ಖಚಿತ:
    ಅನರ್ಹ ಶಾಸಕರೆಲ್ಲರಿಗೂ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಖಚಿತ. ಅದಕ್ಕಾಗಿ0iÉುೀ ಅರ್ಧದಷ್ಟು ಸಚಿವ ಸ್ಥಾನಗಳನ್ನು ಉಳಿಸಿಕೊಳ್ಳಲಾಗಿದೆ. ಶೀಘ್ರದಲ್ಲೇ ನಾನು, ಮಾಜಿ ಶಾಸಕರಾದ ಕೊತ್ತೂರು ಮಂಜುನಾಥ್, ಮಾಲೂರು ಮಾಜಿ ಶಾಸಕ ಮಂಜುನಾಥಗೌಡ ಹಾಗೂ ಚಿಂತಾಮಣಿ ಮಾಜಿ ಶಾಸಕ ಸುಧಾಕರ್ ಬಿಜೆಪಿ ಸೇರ್ಪಡೆಯಾಗಲಿದ್ದೇವೆ ಎಂದು ಇದೇ ವೇಳೆ ಬಾಂಬ್ ಸಿಡಿಸಿದ್ದಾರೆ.

    ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿರುವ ಎಲ್ಲರೂ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ಮೂಲಕ ಜಿಲ್ಲೆಯ ಮತ್ತೆ ಆಪರೇಷನ್ ಕಮಲ ನಡೆಯುತ್ತದೆ ಎಂಬ ಸುಳಿವನ್ನು ನೀಡಿದ್ದಾರೆ.

    ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರ ವಾಕ್ಸಮರದ ಕುರಿತು ಪ್ರತಿಕ್ರಿಯಿಸಿದ ಅವರು, 14 ತಿಂಗಳು ಮೇಲ್ನೋಟಕ್ಕೆ ಚೆನ್ನಾಗಿದ್ದರು. ನಂತರ ಮುಸುಕಿನ ಗುದ್ದಾಟ ಆರಂಭವಾಗಿತ್ತು. ಮೈತ್ರಿ ಸರ್ಕಾರವಿದ್ದಾಗ ನನಗೂ ನೋವಿತ್ತು. ಆರಂಭದಲ್ಲೇ ಕೊಡಬೇಕಿದ್ದ ಖಾತೆಯನ್ನು ವರ್ಷದ ನಂತರ ಕೊಟ್ಟು, ಖಾತೆ ಕೊಡಲು ಹತ್ತು ದಿನ ಸತಾಯಿಸಿದ್ದರು ಎಂದು ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದರು.

    ಒಬ್ಬರು ಇಬ್ಬರು ಭಿನ್ನಮತೀಯರಿಂದ ಏನೂ ಮಾಡಲಾಗುವುದಿಲ್ಲ. ಬಿಜೆಪಿ ಜೊತೆ ನಾವಿದ್ದೇವೆ ಎಂದು ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಮತದ ಕುರಿತು ಪ್ರತಿಕ್ರಿಯಿಸಿದರು. ಇದೆ ವೇಳೆ ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ನಿಧನಕ್ಕೆ ಸಂತಾಪ ಸಲ್ಲಿಸಲಾಯಿತು. ದೇಶದ ಒಳ್ಳೆಯ ನಾಯಕರು ಪ್ರಧಾನಿ ಮೋದಿಯವರಿಗೆ ಆಪ್ತರಾಗಿದ್ದ ಜೇಟ್ಲಿ ನಿಧನ ಬೇಸರ ತಂದಿದೆ, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ನಾಗೇಶ್ ಪ್ರಾರ್ಥಿಸಿದರು.

  • ಗೌಡ್ರ ಕುಟುಂಬಕ್ಕೆ, ಜೆಡಿಎಸ್‍ಗೆ ವಿಶ್ವನಾಥ್ ಎಂಬ ಕಾರ್ಕೋಟಕ ವಿಷ ಹಾಕಿದ್ದು ನಾನೇ- ಸಾ.ರಾ ಮಹೇಶ್

    ಗೌಡ್ರ ಕುಟುಂಬಕ್ಕೆ, ಜೆಡಿಎಸ್‍ಗೆ ವಿಶ್ವನಾಥ್ ಎಂಬ ಕಾರ್ಕೋಟಕ ವಿಷ ಹಾಕಿದ್ದು ನಾನೇ- ಸಾ.ರಾ ಮಹೇಶ್

    ಮೈಸೂರು: ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ಹಾಗೂ ಜನತಾ ದಳಕ್ಕೆ ವಿಷ ಹಾಕಿದ್ದು ನಾನೇ. ಆ ಕಾರ್ಕೋಟಕ ವಿಷದ ಹೆಸರು ವಿಶ್ವನಾಥ್ ಎಂದು ಹೇಳುವ ಮೂಲಕ ಅನರ್ಹ ಶಾಸಕ ಎಚ್. ವಿಶ್ವನಾಥ್ ವಿರುದ್ಧ ಮಾಜಿ ಸಚಿವ ಸಾ.ರಾ ಮಹೇಶ್ ಕೆಂಡಾಮಂಡಲವಾಗಿದ್ದಾರೆ.

    ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಚ್.ವಿಶ್ವನಾಥ್ ಅವರನ್ನು ನಾನು ಜೆಡಿಎಸ್‍ಗೆ ಕರೆ ತಂದು ನಮ್ಮ ಪಕ್ಷಕ್ಕೆ ವಿಷ ಹಾಕಿದೆ. ಸದನದಲ್ಲಿ ನಾನು ಅವರ ವಿರುದ್ಧ ಮಾತಾಡಿದ್ದಕ್ಕೆ ಈಗಲೂ ಬದ್ಧನಾಗಿದ್ದೇನೆ. ಅವರ ಜೊತೆ ಚರ್ಚೆಗೆ ಬರಲು, ದೇವಸ್ಥಾನಕ್ಕೆ ಹೋಗಲು ನಾನು ಸದಾ ಸಿದ್ಧ. ಅವರ ಜೊತೆಯೇ ಕೂತು ಅವರ ಇನ್ನಷ್ಟು ಚರಿತ್ರೆ ಬಿಚ್ಚಿಡುತ್ತೇನೆ. ಕ್ಷೇತ್ರದ ಜನರ ಸಮಸ್ಯೆ ಪರಿಹರಿಸಿ ಕೊಡಿ ಎಂದು ವಿಶ್ವನಾಥ್, ಮಾಜಿ ಸಿಎಂ ಕುಮಾರಸ್ವಾಮಿ ಅವರ ಬಳಿ ಕೇಳಿದರೋ, ಇಲ್ಲವೋ ಅವರ ವೈಯಕ್ತಿಕ ಸಮಸ್ಯೆ ಬಗೆಹರಿಸಿ ಕೊಡಲು ಕೇಳಿದರೋ ಎಂಬುದರ ಕುರಿತು ಸಹ ಹೇಳುತ್ತೇನೆ ಎಂದು ಎಚ್.ವಿಶ್ವನಾಥ್ ವಿರುದ್ಧ ಹರಿಹಾಯ್ದರು.

    ಹಳ್ಳಿ ಹಕ್ಕಿ ಒಂದೊಂದು ಋತುವಿನಲ್ಲಿ ಒಂದೊಂದು ಗೂಡು ಸೇರುತ್ತದೆ. ಒಂದು ಋತುವಿನಲ್ಲಿ ವಲಸೆ ಹೋಗುತ್ತದೆ. ಲಾಭ ಎಲ್ಲಿರುತ್ತೋ ಅಲ್ಲಿಗೆ ಹಕ್ಕಿಗಳು ವಲಸೆ ಹೊಗುತ್ತವೆ. ಎಚ್.ವಿಶ್ವನಾಥ್ ಕೂಡ ಅದೇ ರೀತಿ. ನನ್ನನ್ನು ಒಬ್ಬ ಶಾಸಕನನ್ನಾಗಿ ಮಾಡಿ ಸಾಕು ಎಂದು ನಮ್ಮ ಬಳಿ ಕೇಳಿದ್ದರು. ಈಗ ನಮ್ಮ ವಿರುದ್ಧವೇ ತಿರುಗಿ ಬಿದ್ದಿದ್ದಾರೆ ಎಂದು ಆರೋಪಿಸಿದರು.

    ವಿಶ್ವನಾಥ್ ಗೆ ಸವಾಲು:
    ನಾನು ರಿಯಲ್ ಎಸ್ಟೇಟ್ ಮಾಡುತ್ತೇನೆ. ಆದರೆ ವರ್ಗಾವಣೆಯಲ್ಲಿ ಹಣ ಮಾಡಿಲ್ಲ. ರಾಹುಲ್ ಗಾಂಧಿ ಅವರ ಸಭೆಗೆ ಆಗಮಿಸುವಂತೆ ವಿಶ್ವನಾಥ್ ಅವರನ್ನು ನಾನೇ ಕರೆದೆ. ಆಗ ನಾನು ಸಿದ್ದರಾಮಯ್ಯ ಇರುವ ಸಭೆಗೆ ಬರುವುದಿಲ್ಲ ಎಂದು ವಿಶ್ವನಾಥ್ ಅವರೇ ಹೇಳಿದ್ದರು. ಅಲ್ಲದೆ, ವಿಶ್ವನಾಥ್ ಅವರು ತಾವು ಯಾವುದೇ ಆಸೆ, ಆಮೀಷಕ್ಕೆ ಬಲಿ ಆಗಲಿಲ್ಲ ಎಂದು ತಾಯಿ ಚಾಮುಂಡಿ ಮುಂದೆ ಪ್ರಮಾಣ ಮಾಡಲಿ. ನೀವು ಯಾವುದೇ ಆಮೀಷಕ್ಕೊಳಗಾಗಿ ರಾಜೀನಾಮೆ ನೀಡಿಲ್ಲ ಎಂದಾದರೆ, ನಾನು ಇವತ್ತೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಾರ್ವಜನಿಕ ಜೀವನದಿಂದ ದೂರ ಸರಿಯುತ್ತೇನೆ ಎಂದು ಸಾ.ರಾ.ಮಹೇಶ್ ಅವರು ವಿಶ್ವನಾಥ್ ಅವರಿಗೆ ಸವಾಲು ಹಾಕಿದರು.

    ವಿಶ್ವನಾಥ್ ರಾಜಕಾರಣದ ವ್ಯಭಿಚಾರಿ, ಆಮೀಷಕ್ಕೊಳಗಾಗಿ ಪಕ್ಷ ಬದಲಿಸುವುದು ರಾಜಕಾರಣದ ವ್ಯಭಿಚಾರ, ರಿಯಲ್ ಎಸ್ಟೇಟ್ ನನ್ನ ವ್ಯವಹಾರ, ಅದು ನನ್ನ ಬದುಕು. ಇದು ಧರ್ಮ-ಅಧರ್ಮದ ನಡುವೆ ನಡೆಯುತ್ತಿರುವ ವಾಗ್ವಾದ. ನಮ್ಮ ಪಕ್ಷದವರೇ ನನಗೆ ವಿರೋಧ ಮಾಡಿದರೂ ಕೆ.ಆರ್ ನಗರ ಕ್ಷೇತ್ರದ ಜನತೆ ನನ್ನನ್ನು ಗೆಲ್ಲಿಸಿದರು. ದೇವೇಗೌಡರಿಗೆ, ಜೆಡಿಎಸ್‍ಗೆ ವಿಷ ಹಾಕಿದವರು ಬಹಳ ಜನ ಇದ್ದಾರೆ. ಅದನ್ನೆಲ್ಲ ಜೀರ್ಣಿಸಿಕೊಳ್ಳುವ ಶಕ್ತಿ ನಮ್ಮ ನಾಯಕರಿಗೆ, ಪಕ್ಷಕ್ಕೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಇತ್ತೀಚೆಗಷ್ಟೇ ಮೈಸೂರಿನಲ್ಲಿ ಅನರ್ಹ ಶಾಸಕ ಎಚ್.ವಿಶ್ವನಾಥ್ ಸುದ್ದಿಗೋಷ್ಠಿ ನಡೆಸಿ, ಮೈತ್ರಿ ಸರ್ಕಾರ, ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಹಾಗೂ ಸಾ.ರಾ.ಮಹೇಶ್ ವಿರುದ್ಧ ಹರಿಹಾಯ್ದಿದ್ದರು. ಇದೀಗ ಮಾಜಿ ಸಚಿವ ಸಾ.ರಾ.ಮಹೇಶ್ ಅವರು ಸುದ್ದಿಗೋಷ್ಠಿಯನಡೆಸಿ ಎಚ್.ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  • ಅನರ್ಹಗೊಂಡ ಕೈ ಶಾಸಕರ ತಿಥಿ ಮಾಡಿದ ಕಾರ್ಯಕರ್ತರು

    ಅನರ್ಹಗೊಂಡ ಕೈ ಶಾಸಕರ ತಿಥಿ ಮಾಡಿದ ಕಾರ್ಯಕರ್ತರು

    ಹಾಸನ: ಭಾನುವಾರ ಸ್ಪೀಕರ್ ರಮೇಶ್ ಕುಮಾರ್ ಅವರು 14 ಮಂದಿ ಕೈ ಶಾಸಕರನ್ನು ಅನರ್ಹಗೊಳಿಸಿರುವ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಅವರ ತಿಥಿ ಕಾರ್ಯ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

    ನಮ್ಮ ಪಕ್ಷಕ್ಕೆ ದ್ರೋಹ ಎಸಗಿ ಹೋದವರು ನಮ್ಮ ಪಾಲಿಗೆ ಸತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ತಿಥಿ ವಡೆ, ಹಾರ ಪ್ರದರ್ಶಿಸಿ ಹಾಸನದ ಕಾಂಗ್ರೆಸ್ ಭವನದಲ್ಲಿ ಕಾರ್ಯಕರ್ತರು ಅನರ್ಹಗೊಂಡ ಶಾಸಕರ ತಿಥಿ ಕಾರ್ಯ ಮಾಡಿದರು. ಅಲ್ಲದೆ ಅನರ್ಹಗೊಂಡ ಶಾಸಕರನ್ನು ಮುಂದೆ ಪಕ್ಷಕ್ಕೆ ಸೇರಿಸದಂತೆ ಹೈಕಮಾಂಡಿಗೆ ಮನವಿ ಮಾಡಿ, ಸ್ಪೀಕರ್ ರಮೇಶ್ ಕುಮಾರ್ ಅವರ ಕ್ರಮಕ್ಕೆ ಹರ್ಷ ವ್ಯಕ್ತಪಡಿಸಿದರು.

    ಮಸ್ಕಿ ಶಾಸಕ ಪ್ರತಾಪ್‍ಗೌಡ ಪಾಟೀಲ್, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ವಿಜಯನಗರದ ಆನಂದ್ ಸಿಂಗ್, ರಾಜರಾಜೇಶ್ವರಿ ನಗರದ ಮುನಿರತ್ನ, ಚಿಕ್ಕಬಳ್ಳಾಪುರದ ಕೆ.ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್, ಯಲ್ಲಾಪುರದ ಶಿವರಾಂ ಹೆಬ್ಬಾರ್, ಶಿವಾಜಿನಗರದ ರೋಷನ್ ಬೇಗ್, ಕೆ.ಆರ್.ಪುರಂನ ಬೈರತಿ ಬಸವರಾಜ್, ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ, ಕಾಗವಾಡದ ಶ್ರೀಮಂತ್ ಪಾಟೀಲ್, ಹುಣಸೂರಿನ ಹೆಚ್.ವಿಶ್ವನಾಥ್ ಮತ್ತು ಕೆ.ಆರ್.ಪೇಟೆಯ ನಾರಾಯಣಗೌಡ ಅವರನ್ನು ಅನರ್ಹಗೊಳಿಸಿ ಸ್ಪೀಕರ್ ತೀರ್ಪು ಪ್ರಕಟಿಸಿದ್ದಾರೆ.

    ಈ ಹಿಂದೆ ಅನರ್ಹಗೊಂಡ ಮೂವರು ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮುಟಳ್ಳಿ ಹಾಗೂ ಆರ್. ಶಂಕರ್ ಬೈ ಎಲೆಕ್ಷನ್ ಗೆ ನಿಲ್ಲುವಂತಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಖಡಕ್ಕಾಗಿ ತಿಳಿಸಿದ್ದಾರೆ.

  • ಅನರ್ಹ ಆದೇಶ ಪ್ರಶ್ನಿಸಿದ ಮೂವರು ರೆಬೆಲ್ ಶಾಸಕರಿಂದ ಸುಪ್ರೀಂಗೆ ಅರ್ಜಿ

    ಅನರ್ಹ ಆದೇಶ ಪ್ರಶ್ನಿಸಿದ ಮೂವರು ರೆಬೆಲ್ ಶಾಸಕರಿಂದ ಸುಪ್ರೀಂಗೆ ಅರ್ಜಿ

    ನವದೆಹಲಿ: ಸ್ಪೀಕರ್ ರಮೇಶ್ ಕುಮಾರ್ ಅವರು ಅನರ್ಹತೆಗೊಳಿಸಿದ ಆದೇಶವನ್ನು ಪ್ರಶ್ನಿಸಿ ಮೂವರು ರೆಬೆಲ್ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

    ರೆಬೆಲ್ ಶಾಸಕರಾದ ಮಹೇಶ್ ಕುಮಟಳ್ಳಿ, ರಮೇಶ್ ಜಾರಕಿಹೊಳಿ, ಆರ್.ಶಂಕರ್ ಅವರು ಸ್ಪೀಕರ್ ಆದೇಶ ಪ್ರಶ್ನಿಸಿ ಇಂದು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ಸಂಬಂಧ ಇಂದು ವಿಚಾರಣೆ ನಡೆಯುವ ಸಾಧ್ಯತೆ ಇಲ್ಲ. ಹೀಗಾಗಿ ಮಂಗಳವಾರ ಇಲ್ಲವೇ ಬುಧವಾರ ವಿಚಾರಣೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಈ ಮೂವರು ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅವರು ಜುಲೈ 23ರಂದು ಅನರ್ಹಗೊಳಿಸಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿರುವ ರೆಬೆಲ್ ಶಾಸಕರು, ಸುಮಾರು ದಿನಗಳಿಂದ ಹಾಗೇ ಉಳಿದಿದ್ದ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಇತ್ಯರ್ಥ ಮಾಡಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಅವರು ಅನರ್ಹತೆ ಮಾಡಲು ಏಕಾಏಕಿ ನಿರ್ಧಾರ ಕೈಗೊಂಡಿದ್ದಾರೆ. ದ್ವೇಷದಿಂದ ಹೀಗೆ ಮಾಡಿದ್ದು ಸರಿಯಲ್ಲ. ಈ ಸಂಬಂಧ ಸೂಕ್ತ ನ್ಯಾಯ ಒದಗಿಸಬೇಕು ಎಂದು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

    ಮುಂದಿನ ದಿನಗಳಲ್ಲಿ ಅನರ್ಹಗೊಂಡ ಉಳಿದ ಶಾಸಕರು ಕೂಡ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲಿದ್ದಾರೆ. ಹೀಗಾಗಿ ಎಲ್ಲಾ ಅರ್ಜಿಗಳನ್ನು ಒಟ್ಟಾಗಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಮುಂದಾಗುವ ಸಾಧ್ಯತೆಯಿದೆ.