ಬೆಳಗಾವಿ: ಸಿಎಂ ಯಡಿಯೂರಪ್ಪ ಅವರಿಗೆ ರಾಜಕೀಯ ಮಾಡಿಕೊಂಡು, ಅಧಿಕಾರ ಅನುಭವಿಸಬೇಕಿದೆ. ಅವರು ಯಾಕೆ ಪ್ರವಾಹ ಸಂತ್ರಸ್ತರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಟಾಂಗ್ ಕೊಟ್ಟಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದ ಪ್ರವಾಹ ಸಂತ್ರಸ್ತರಿಗೆ ಸ್ಪಂದಿಸದ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಆಂತರಿಕ ಸಮಸ್ಯೆಗಳು ಹೆಚ್ಚಾಗಿವೆ. ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಲು ಸಿಎಂ ಬಳಿ ಸಮಯವಿಲ್ಲ. ಸಿಎಂ ಅವರಿಗೆ ಕೇವಲ ರಾಜಕೀಯ ಮಾಡಬೇಕಿದೆ. ಅಧಿಕಾರ ಅನುಭವಿಸಬೇಕಿದೆ ಅಷ್ಟೇ. ಆದ್ದರಿಂದ ಪ್ರವಾಹದಿಂದ ಜನರ ಬದುಕು ಬೀದಿಗೆ ಬಂದರೂ ಸಿಎಂ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಮಾತಿನ ಚಾಟಿ ಬೀಸಿದರು.
ಒಂದೆಡೆ ಸುಪ್ರೀಂ ಕೋರ್ಟಿನಲ್ಲಿ ಅನರ್ಹ ಶಾಸಕರ ವಿಚಾರಣೆ ಇರುವ ಕಾರಣ ಸಿಎಂ ಟೆನ್ಷನ್‍ನಲ್ಲಿದ್ದಾರೆ. ಇನ್ನೊಂದೆಡೆ ಸರ್ಕಾರಕ್ಕೆ ಏನಾಗುತ್ತೋ ಎಂಬ ಆತಂಕದಿಂದ ಸಿಎಂ ದೆಹಲಿಗೆ ತೆರಳಿದ್ದಾರೆ. ಅನರ್ಹ ಶಾಸಕರೆಲ್ಲರೂ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ ಎಂದು ಟೀಕಿಸಿದರು. ಹಾಗೆಯೇ ಬಿಜೆಪಿ ಶ್ರಮ ಪಟ್ಟು ಅಧಿಕಾರಕ್ಕೆ ಬಂದಿಲ್ಲ. ಹೀಗಾಗಿ ಜನರ ಕಷ್ಟ ಅವರಿಗೆ ಅರಿವಾಗುತ್ತಿಲ್ಲ. ಆದ್ದರಿಂದ ಸರ್ಕಾರದ ಗಮನ ಸೆಳೆಯಲೆಂದೇ ನಾಳೆ ಕಾಂಗ್ರೆಸ್ ಬೃಹತ್ ಸಮಾವೇಶ ನಡೆಸುತ್ತಿದೆ ಎಂದು ಹೇಳುವ ಮೂಲಕ ಬಿಜೆಪಿ ಸರ್ಕಾರಕ್ಕೆ ಕಾಂಗ್ರೆಸ್ ಬಿಸಿ ಮುಟ್ಟಿಸಲಿದೆ ಎಂದು ಎಚ್ಚರಿಕೆ ನೀಡಿದರು.
– 7 ದಿನ ಅವಕಾಶ ನೀಡಲಿಲ್ಲ
– ಸ್ಪೀಕರ್ ವಿರುದ್ಧ ಅಧಿಕಾರ ದುರ್ಬಳಕೆ ಆರೋಪ
– ಉಪ ಚುನಾವಣೆಗೆ ಸುಪ್ರೀಂ ತಡೆ ನೀಡಬೇಕು
ನವದೆಹಲಿ: ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆದೇಶ ಪ್ರಶ್ನಿಸಿ 17 ಮಂದಿ ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಬುಧವಾರಕ್ಕೆ ಮುಂದೂಡಿದೆ.
ಇಂದು ನ್ಯಾ. ಎನ್‍ವಿ ರಮಣ ನೇತೃತ್ವದ ತ್ರಿ ಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. ಅನರ್ಹ ಶಾಸಕರ ಪರ ಹಿರಿಯ ವಕೀಲ ಮುಕುಲ್ ರೋಹ್ಟಗಿ ಹಾಗೂ ಕಾಂಗ್ರೆಸ್ ಪರ ಕಪಿಲ್ ಸಿಬಲ್ ವಾದ ಮಂಡಿಸಿದರು.
ಆರಂಭದಲ್ಲಿ ವಾದ ಆಲಿಸಿದ ಸುಪ್ರೀಂಕೋರ್ಟ್ ಕೆಲ ಹೊತ್ತು ವಿಚಾರಣೆ ಮುಂದೂಡಿತು. ಬಳಿಕ ಮಧ್ಯಾಹ್ನ 12:30 ಬಳಿಕ ಒಂದೂವರೆ ಗಂಟೆಗಳ ಕಾಲ ಸುದೀರ್ಘ ವಿಚಾರಣೆ ನಡೆಯಿತು. ಮೊದಲು ವಾದ ಆರಂಭಿಸಿದ ಅನರ್ಹ ಶಾಸಕರ ವಕೀಲ ಮುಕುಲ್ ರೋಹ್ಟಗಿ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವಾಗ ಚುನಾವಣಾ ಆಯೋಗ ಉಪಚುನಾವಣೆ ಘೋಷಣೆ ಮಾಡಿದೆ. ಸೆಪ್ಟೆಂಬರ್ 30 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಹಾಗಾಗಿ ಮಧ್ಯಂತರ ಚುನಾವಣೆಗೆ ತಡೆಯಾಜ್ಞೆ ನೀಡಬೇಕು. ಇಲ್ಲದಿದ್ದರೆ ಎಲ್ಲ ಅನರ್ಹ ಶಾಸಕರಿಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪರ ವಾದ ಮಂಡಿಸಿದ ಕಪಿಲ್ ಸಿಬಲ್ ಸುದೀರ್ಘ ವಿಚಾರಣೆ ಅವಕಾಶ ಕೊಡಬೇಕು ಮತ್ತು ಚುನಾವಣೆಗೆ ತಡೆ ನೀಡಬಾರದು. ಅನರ್ಹ ಶಾಸಕರು ಚುನಾವಣೆ ಸ್ಪರ್ಧೆಗೆ ಅವಕಾಶ ಕೊಡಬಾರದು ಎಂದರು. ಈ ಬಗ್ಗೆ ಸುಧೀರ್ಘ ವಿಚಾರಣೆ ನಡೆಸುವುದಾಗಿ ಹೇಳಿದ ಪೀಠ ಬುಧವಾರ ಮುಕುಲ್ ರೋಹ್ಟಗಿ ಹಾಗೂ ಗುರುವಾರ ಕಪಿಲ್ ಸಿಬಲ್ ವಾದ ಮಂಡನೆಗೆ ಅವಕಾಶ ನೀಡುವುದಾಗಿ ಹೇಳಿತು. ಮಧ್ಯಂತರ ಆದೇಶಕ್ಕೆ ಸೀಮಿತವಾಗಿರುವಂತೆ ವಾದ ಮಂಡಿಸಲು ಸೂಚನೆ ನೀಡಿತು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸ್ಪೀಕರ್ ಕಚೇರಿಗೆ, ಜೆಡಿಎಸ್ ರಾಜ್ಯಧ್ಯಕ್ಷ ಹೆಚ್.ಕೆ ಕುಮಾರಸ್ವಾಮಿ, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ರೋಹ್ಟಗಿ ವಾದ ಹೀಗಿತ್ತು:
ಶಾಸಕರ ರಾಜೀನಾಮೆ ವಿಚಾರದಲ್ಲಿ ಅಂದಿನ ಸ್ಪೀಕರ್ ಅವರು ನ್ಯಾಯಬದ್ಧವಾಗಿ ನಡೆದುಕೊಂಡಿಲ್ಲ. ರಾಜೀನಾಮೆ ಅಂಗೀಕಾರ ಮಾಡದೇ ಅನರ್ಹ ಮಾಡಿದ್ದಾರೆ. ಸುಪ್ರೀಂಕೋರ್ಟಿಗೆ ಮೊದಲು ರಾಜೀನಾಮೆ ಅಂಗಿಕರಿಸಲು ಹೇಳಿತ್ತು. ಅದಾಗ್ಯೂ ಅನರ್ಹ ಮಾಡಿದ್ದಕ್ಕೆ ಶಾಸಕರೆಲ್ಲ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಬೆಂಗಳೂರಿನಲ್ಲಿ ರಾಜ್ಯ ಚುನಾವಣಾ ಆಯುಕ್ತರು ಹೇಳಿದ್ದಾರೆ. ಈ ಮೂಲಕ ಅನರ್ಹ ಶಾಸಕರ ಹಕ್ಕನ್ನೇ ಕಸಿಯಲಾಗಿದೆ. ಹೀಗಾಗೀ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಲೇಬೇಕು.
ಶಾಸಕರ ರಾಜೀನಾಮೆ ಸ್ವಯಂಪ್ರೇರಿತ ಹಾಗೂ ವೈಯಕ್ತಿಕ. ಆದರೆ ಅಂದಿನ ಸ್ಪೀಕರ್ ಅದನ್ನು ಕ್ರಮಬದ್ಧವಾಗಿ ತೆಗೆದುಕೊಂಡು ಹೋಗಲಿಲ್ಲ. ಶಾಸಕರನ್ನು ಅನರ್ಹಗೊಳಿಸಿದ್ದೇ ಕಾನೂನು ಬಾಹಿರ ಮತ್ತು ಆತುರದ ನಿರ್ಧಾರ. ಸ್ಪೀಕರ್ ನೋಟಿಸ್ ನೀಡಿದ ಬಳಿಕ ಅದಕ್ಕೆ ಉತ್ತರಿಸಲು ಏಳು ದಿನ ಕಾಲಾವಕಾಶ ನೀಡಬೇಕು. ಆದರೆ ಮೂರು ದಿನ ಮಾತ್ರ ನೀಡಲಾಗಿತ್ತು. ಸ್ಪೀಕರ್ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಬಂಡಾಯ ಎದ್ದಿದ್ದ ಈ ಶಾಸಕರ ಮನವಿಯನ್ನು ಪುರಸ್ಕಾರ ಮಾಡಲಿಲ್ಲ. ಇದು ವಿಪ್ ಉಲ್ಲಂಘನೆಯ ಪ್ರಕರಣ ಅಲ್ಲವೇ ಅಲ್ಲ.
ಅರ್ಜಿ ಸಲ್ಲಿಸಿ ಎಂಟು ವಾರಗಳಾಗಿದ್ದು ಈಗ ಉಪ ಚುನಾವಣೆಗೆ ದಿನಾಂಕ ಪ್ರಕಟವಾಗಿದೆ. ನಾಮಪತ್ರ ಸಲ್ಲಿಕೆ ಗೆ ಸೆಪ್ಟೆಂಬರ್ 30 ಕೊನೆಯ ದಿನ ಹಾಗಾಗಿ ಪ್ರಕರಣದ ತುರ್ತು ವಿಚಾರಣೆ ನಡೆಯಬೇಕು. ಉಪಚುನಾವಣೆ ಅಧಿಸೂಚನೆ ತಡೆ ನೀಡಬೇಕು, ಇಲ್ಲ ಉಪ ಚುನಾವಣೆ ನಿಲ್ಲಲು ಅವಕಾಶ ನೀಡಬೇಕು ಅಥವಾ ಸ್ಪೀಕರ್ ಆದೇಶ ರದ್ದು ಮಾಡಬೇಕು. ಸಂವಿಧಾನದ ಪ್ರಕಾರ ಅನರ್ಹ ಶಾಸಕರಿಗೆ ಸ್ಪರ್ಧಿಸುವ ಅವಕಾಶ ಇದೆ. ಸ್ಪೀಕರ್ 2023ರವರೆಗೆ ಸ್ಪರ್ಧೆಗೆ ನಿಷೇಧ ಹೇರಿದ್ದು ಅಪ್ರಸ್ತುತ. ಈಗ ಪ್ರಕರಣ ಇತ್ಯರ್ಥ ಆಗದಿದ್ದರೆ 2023 ರವರೆಗೂ ಸ್ಪರ್ಧೆ ಸಾಧ್ಯವಿಲ್ಲ. ಅನರ್ಹ ಶಾಸಕರು ತಮ್ಮ ಅವಕಾಶ ಕಳೆದುಕೊಳ್ಳುತ್ತಾರೆ.
ಚುನಾವಣಾ ಆಯೋಗ ಕೂಡಾ ಸ್ಪರ್ಧೆ ಮಾಡುವಂತಿಲ್ಲ ಎಂದಿದೆ. ಹೀಗಾಗಿ ಕೋರ್ಟ್ ಮಧ್ಯಪ್ರವೇಶ ಮಾಡಲೇಬೇಕು. ಅನರ್ಹ ಶಾಸಕರು ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಉದಾಹರಣೆ ಇಲ್ಲ, ಯಾವುದೇ ಆಧಾರ ಇಲ್ಲದೇ ಪಕ್ಷ ವಿರೋಧಿ ಚಟುವಟಿಕೆ ಆರೋಪ ಮಾಡಿ ಅನರ್ಹ ಮಾಡಿರುವ ಸ್ಪೀಕರ್ ನಿರ್ಧಾರ ಕಾನೂನುಬಾಹಿರ. ಈ ಹಿಂದೆ ಅಪರೂಪದ ಪ್ರಕರಣದಲ್ಲಿ ಚುನಾವಣೆಗೆ ತಡೆ ನೀಡಿದ ಉದಾಹರಣೆಗಳಿವೆ. 2015 ರಲ್ಲಿ ಅಲಹಾಬಾದ್ ಹೈಕೋರ್ಟ್ ಅನರ್ಹತೆ ಪ್ರಕರಣದಲ್ಲಿ ಇಂತದೊಂದು ಆದೇಶ ನೀಡಿತ್ತು. ಈ ಆಧಾರದ ಮೇಲೆ ಚುನಾವಣೆಗೆ ತಡೆ ನೀಡಬಹದು.
ಸಂವಿಧಾನದಲ್ಲಿ ಎರಡು ರೀತಿಯಲ್ಲಿ ಶಾಸಕರನ್ನು ಅನರ್ಹತೆ ಮಾಡಲು ಅವಕಾಶವಿದೆ. ವಿಧಿ 191/1 ಪ್ರಕಾರ ಎರಡು ಸದ್ಯ ಇರುವ ಶಾಸಕತ್ವದಿಂದ ಅನರ್ಹತೆ ಮಾಡಬಹುದು. ಮುಂದೆ ಅವಧಿ ಮುಗಿಯುವವರೆಗೂ ಶಾಸಕರಾಗುವಂತಿಲ್ಲ ಎಂದು ಅನರ್ಹ ಮಾಡಬಹುದು. ಶಾಸಕ ಕ್ರಿಮಿನಲ್ ಪ್ರಕರಣದ ಅಡಿ ಜೈಲು ಸೇರಿರಬೇಕು ಅಥವಾ ಆರೋಗ್ಯದ ಸಮಸ್ಯೆ, ಬುದ್ಧಿ ಭ್ರಮಣೆ ಮುಂತಾದ ಸಂದರ್ಭದಲ್ಲಿ ಇದು ಅನ್ವಯವಾಗುತ್ತದೆ.
191/2 ವಿಧಿ ಪ್ರಕಾರ ಶಾಸಕ ಸ್ಥಾನದಿಂದ ಮಾತ್ರ ಅನರ್ಹಗೊಳಿಸಲು ಸಾಧ್ಯ, ಅನರ್ಹರ ಮರು ಆಯ್ಕೆ ಬಗ್ಗೆ ಯಾವುದೇ ಆದೇಶ ಮಾಡುವಂತಿಲ್ಲ. ವಿಧಿ 361/ಬಿ ಪ್ರಕಾರ ಅನರ್ಹರಾದವರು ಅವಧಿ ಮುಗಿಯುವರೆಗೂ ಲಾಭದಾಯಕ ಹುದ್ದೆ ಹೊಂದುವಂತಿಲ್ಲ, ಮರು ಆಯ್ಕೆ ಆಗುವ ವಿಷಯದ ಬಗ್ಗೆ ಯಾವುದೇ ಉಲ್ಲೇಖ ಇಲ್ಲ.
ಸಿಬಲ್ ಆಕ್ಷೇಪ
ರಮೇಶ್ ಜಾರಕಿಹೋಳಿಗೆ ಕಾಲಾವಕಾಶ ನೀಡಲಾಗಿತ್ತು. ಫೆಬ್ರವರಿಯಲ್ಲಿ ನೋಟಿಸ್ ನೀಡಲಾಗಿತ್ತು, ಸಂವಿಧಾನಿಕ ಕ್ರಮಗಳನ್ನು ಅನುಸರಿಸಿ ಅನರ್ಹ ಮಾಡಲಾಗಿದೆ. ಪ್ರಕರಣದ ಸುದೀರ್ಘ ವಿಚಾರಣೆ ಅವಶ್ಯಕತೆ ಇದೆ. ಮುಂದಿನ ವಾರಕ್ಕೆ ವಿಚಾರಣೆ ಮುಂದೂಡಬೇಕು ಎಂದು ಕೆಪಿಸಿಸಿ ಪರ ಕಪಿಲ್ ಸಿಬಲ್ ವಾದಿಸಿದರು. ಈ ವಾದಕ್ಕೆ ರೋಹ್ಟಗಿ ಆಕ್ಷೇಪಿಸಿ ಪ್ರತಿಕ್ರಿಯೆ ಇಬ್ಬರಿಗೆ ಮಾತ್ರ ಮೊದಲು ನೋಟಿಸ್ ನೀಡಲಾಗಿದೆ. ಮಿಕ್ಕವರು ರಾಜೀನಾಮೆ ಸಲ್ಲಿಸಿದ ನಂತರವೇ ನೋಟಿಸ್ ನೀಡಲಾಗಿದೆ ಎಂದು ಪ್ರತಿಕ್ರಿಯಿಸಿದರು.
ಈ ವೇಳೆ ಮಧ್ಯ ಪ್ರವೇಶ ಮಾಡಿದ ನ್ಯಾಯಪೀಠ ಬುಧವಾರ ರೊಹ್ಟಗಿ ವಾದ ಮಂಡಿಸಲಿ, ನೀವೂ ಗುರುವಾರ ವಾದ ಮಾಡಿ ಎಂದು ಕಪಿಲ್ ಸಿಬಲ್ ಅವರಿಗೆ ಸೂಚನೆ ನೀಡಿತು. ಬಳಿಕ ಬುಧುವಾರಕ್ಕೆ ವಿಚಾರಣೆ ಮುಂದೂಡಿಕೆ ಮಾಡಿತು. ಕೋರ್ಟ್ ಹಾಲ್ ನಲ್ಲಿ ಉಪಸ್ಥಿತಿ ಇದ್ದ ಚುನಾವಣೆ ಆಯೋಗ ಪರ ವಕೀಲ ರಾಕೇಶ್ ದ್ವಿವೇದಿ ಅನರ್ಹ ಶಾಸಕರು ಸ್ಪರ್ಧೆ ಮಾಡುವ ಬಗ್ಗೆ ಆಕ್ಷೇಪಣೆ ಇಲ್ಲ ಅವರು ಸ್ಪರ್ಧೆ ಮಾಡಲಿ, ಚುನಾವಣೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೆಪಿಸಿಸಿ ಪರ ವಕೀಲ ಕಪಿಲ್ ಸಿಬಲ್ ವಿರೋಧ ವ್ಯಕ್ತಪಡಿಸಿದರು, ನೀವು ಇನ್ನೂ ಪ್ರಕರಣದಲ್ಲಿ ಪಾರ್ಟಿ ಆಗಿಲ್ಲ. ಹೀಗಾಗಿ ನೀವೂ ಅಭಿಪ್ರಾಯ ವ್ಯಕ್ತಪಡಿಸಬಾರದು ಎಂದು ವಿರೋಧಿಸಿದ್ರು. ಈ ವೇಳೆ ಕೋರ್ಟ್ ಪ್ರಕರಣದಲ್ಲಿ ಪಾರ್ಟಿ ಮಾಡುವಂತೆ ಮುಕುಲ್ ರೊಹ್ಟಗಿಗೆ ಸೂಚನೆ ನೀಡಿತು. ಪಾರ್ಟಿ ಆಗಿರದ ಕಾರಣ ಕೋರ್ಟ್ ಕೂಡಾ ಚುನಾವಣೆ ಆಯೋಗದ ಅಭಿಪ್ರಾಯ ಪರಿಗಣಿಸಲಿಲ್ಲ.
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಗನನ್ನು ಕಳೆದುಕೊಂಡ ನೋವಿಗಿಂತ, ತಾವು ಮಾಡದೇ ಇರುವ ತಪ್ಪಿಗೆ ಹೆಚ್ಚು ನೋವು ಅನುಭವಿಸಿದ್ದಾರೆ ಎಂದು ಶಾಸಕ ರಮೇಶ್ ಕುಮಾರ್ ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಆಡಳಿತ ಅಂತರಂಗ ಬಹಿರಂಗ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೈಗೆ ಬಂದ ಮಗ ಕಣ್ಮುಂದೆ ಸಾವು, ಜನರಿಗೆ ಇನ್ನಷ್ಟು ಉತ್ತಮ ಕೆಲಸ ಮಾಡಬೇಕು ಅಂದುಕೊಂಡಾಗ ಸೋಲು. ಈ ಸೋಲಿನಿಂದ ಆ ಜೀವ ಎಷ್ಟು ಪರಿತಪಿಸಿರಬಹುದು. ಅವಿಭಕ್ತ ಕುಟುಂಬದಲ್ಲಿ ಆದ ಸಣ್ಣ ಗಲಾಟೆ ಕುಟುಂಬ ಒಡೆಯಿತು. ಅದೇ ರೀತಿ ಕಾಂಗ್ರೆಸ್‍ನಲ್ಲಿ ಆದ ಬೆಳವಣಿಗೆಗಳಿಂದ ಸಿದ್ದರಾಮಯ್ಯ ಅವರಿಗೆ ಈ ಪರಿಸ್ಥಿತಿಗೆ ಬರಬೇಕಾಯಿತು. ಮಾಡದ ತಪ್ಪಿಗೆ ಅವರು ನೋವು ಅನುಭವಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರ ಪರಿಸ್ಥಿತಿ ತಿಳಿಸಿ ದುಃಖಿಸಿದರು.
2018ರಲ್ಲಿ ಕಾಂಗ್ರೆಸ್ ಸೋಲುವುದಕ್ಕೆ ಕಾಂಗ್ರೆಸ್ ಒಳಜಗಳವೇ ಕಾರಣ. ದೇವರಾಜು ಅರಸು ಬಂದ ಬಳಿಕ ಭ್ರಷ್ಟಾಚಾರ ಜಾಸ್ತಿ ಆಯ್ತು ಎಂದು ಹೇಳಿದರು. ಯಾಕೆಂದರೆ ಅವರನ್ನ ಸಮರ್ಥಿಸಿಕೊಳ್ಳುವವರು ಯಾರು ಇರಲಿಲ್ಲ. ಹಾಗೆಯೇ ಸಿದ್ದರಾಮಯ್ಯ ಅವರಿಗೂ ಅದೇ ಪರಿಸ್ಥಿತಿ ಆಗಿದೆ. ಇವರಿಬ್ಬರಿಗಿಂತ ಮೊದಲು ಬಂದವರು ಬಹಳ ಹಣ ತಿಂದರು. ಅವರಿಗೆ ಸಮರ್ಥಿಸಿಕೊಳ್ಳಲು ಜನರಿದ್ದರು ಎಂದರು.
ನೀವು ನೋಡಿರುವುದು ಬಹಿರಂಗ ಆದರೆ ಒಳಗೆ ಕೈ, ಕಾಲು ಹಿಡಿದುಕೊಂಡು ನಮ್ಮನ್ನ ಬದುಕಿಸಿ ಎಂದು ಸಹಿ ಹಾಕಿಸಿರುತ್ತಾರೆ, ಅದು ಅಂತರಂಗ. ಇದರ ಬಗ್ಗೆ ಪುಸ್ತಕದಲ್ಲಿ ಬರೆದಿಲ್ಲ, ಇದು ಸಿದ್ದರಾಮಯ್ಯ ಅವರೇ ಬರೆಯಲು ಸಾಧ್ಯ. ಹೀಗಾಗಿ ಟೈಟಲ್ ಕೊಟ್ಟಿರುವುದು ಸರಿಯಲ್ಲ ಎಂದು ಪುಸ್ತಕದ ಬಗ್ಗೆ ಅಭಿಪ್ರಾಯ ತಿಳಿಸಿದರು.
ಕೋಲಾರಕ್ಕೆ ಬನ್ನಿ ಎಂದು ನಾನು, ನಜೀರ್ ಅಹಮದ್ ಸಿದ್ದರಾಮಯ್ಯ ಅವರನ್ನು ಬೇಡಿಕೊಂಡಿದ್ದೆವು. ತನ್ನ ಕ್ಷೇತ್ರ ಬಿಟ್ಟು ಬರಬಾರದು ಎಂದು ಅವರು ಬರಲಿಲ್ಲ. ಕೆಲವರು ಬಿಟ್ಟಿಲ್ಲವಾ ಕ್ಷೇತ್ರವನ್ನ? ಅವರಿಗಿಲ್ಲದು ನಿಮಗೆ ಬೇಕಾ? ಚಾಮುಂಡೇಶ್ವರಿ ಸೋಲಿನಿಂದ ಹೊರಬನ್ನಿ. ನೀವೇ ಸಾಕಿದ ಗಿಣಿ ನಿಮಗೆ ಕುಕ್ಕಿದೆ ಎಂದು ಹಾಡು ಹೇಳಿ, ಅನರ್ಹ ಶಾಸಕರು ಕೇಳಿದ್ದೆಲ್ಲ ಕೊಟ್ಟಿರಿ, ಆದರೆ ಅವರು ನಿಮಗೆ ಕುಕ್ಕಿ ಹೋಗಿದ್ದಾರೆ. ಆದ್ದರಿಂದ ನಿಮ್ಮ ಮುಖದ ಮೇಲೆ ಗಾಯ ಆಗಿದೆ. ಅದನ್ನ ಹೊಗಲಾಡಿಸಬೇಕಿದೆ ಎಂದು ಅನರ್ಹ ಶಾಸಕರ ವಿರುದ್ಧ ರಮೇಶ್ ಕುಮಾರ್ ಕಿಡಿಕಾರಿದರು.
ವಿಜಯಪುರ: ಒಳ್ಳೆಯದು ಚುನಾವಣೆ ಅಗಲೇಬೇಕು, ಚುನಾವಣೆ ನಡೆಯುವ ಮತಕ್ಷೇತ್ರಗಳಲ್ಲಿ ಜನತೆ ನಿಶ್ಚಿತವಾಗಿ ಕಾಂಗ್ರೆಸ್‍ಗೆ ಗೆಲುವುವನ್ನು ತಂದುಕೊಡುತ್ತಾರೆ ಎಂದು ಉಪಚುನಾವಣೆ ಕುರಿತು ಎಂ.ಬಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉಪಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹದ ಸಂದರ್ಭದಲ್ಲಿ ನಾನು ಹೋದಕಡೆಯಲ್ಲ ಜನತೆ ಶಾಸಕರಿದ್ದಿದ್ದರೆ ಒಳ್ಳೆಯದಾಗುತಿತ್ತು. ನಮಗೆ ಸೂಕ್ತ ನ್ಯಾಯ, ಸ್ಪಂದನೆ ಸಿಗುತಿತ್ತು. ಇಂತಹ ಕಷ್ಟದ ಸಂದರ್ಭದಲ್ಲಿ ಶಾಸಕರು ನಮ್ಮನ್ನು ನಡು ನೀರಿನಲ್ಲಿ ಬಿಟ್ಟು ಹೋಗಿದ್ದಾರೆ. ನೊಂದು ಬದುಕನ್ನು ಕಳೆದುಕೊಂಡ ಸಂದರ್ಭದಲ್ಲಿ ಇವರು ಏನು ಮಾಡಲಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದು ಪರೋಕ್ಷವಾಗಿ ಅನರ್ಹ ಶಾಸಕರ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಅ.21ಕ್ಕೆ ಕರ್ನಾಟಕ, ಮಹಾರಾಷ್ಟ್ರ, ಹರ್ಯಾಣದಲ್ಲಿ ಚುನಾವಣೆ – ಅ. 24ರಂದು ಫಲಿತಾಂಶ
ಅನರ್ಹ ಶಾಸಕರ ಹಣೆಬರಹ ಇನ್ನು ಸುಪ್ರೀಂ ಕೋರ್ಟ್‍ನಲ್ಲಿ ಏನಾಗುತ್ತದೆ ನೋಡೋಣ. ಈ ಉಪಚುನಾವಣೆಯಲ್ಲಿ ಒಟ್ಟು 15ರ ಪೈಕಿ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸುವ ವಿಶ್ವಾಸವಿದೆ. ನಾನು, ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್, ಶಿವಾನಂದ ಪಾಟೀಲ ಸೇರಿದಂತೆ ಎಲ್ಲರೂ ಜಂಟಿಯಾಗಿ ಸೇರಿ ಚುನಾವಣೆ ಎದುರಿಸುತ್ತೇವೆ ಎಂದು ತಿಳಿಸಿದರು.
ಕರ್ನಾಟಕ ಉಪಚುನಾವಣೆ, ಮಹಾರಾಷ್ಟ್ರ, ಹರ್ಯಾಣ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಸುದ್ದಿಗೋಷ್ಠಿ ನಡೆಸಿ ಇಂದು ದಿನಾಂಕ ಪ್ರಕಟಿಸಿದ್ದಾರೆ. ಕರ್ನಾಟಕದ 15 ಕ್ಷೇತ್ರಗಳಲ್ಲಿ ಉಪಚುನಾವಣೆ ಸೇರಿದಂತೆ ಎರಡು ರಾಜ್ಯಗಳಲ್ಲಿ ಅಕ್ಟೋಬರ್ 21 ರಂದು ಚುನಾವಣೆ ನಡೆಯಲಿದ್ದು, 24ಕ್ಕೆ ಮತ ಎಣಿಕೆ ನಡೆಯಲಿದೆ. ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದೆ.
ಉಪ ಚುನಾವಣೆ ನಡೆಯಲಿರುವ ಕ್ಷೇತ್ರಗಳು
ಗೋಕಾಕ್, ಅಥಣಿ, ಕಾಗವಾಡ, ಹಿರೆಕೆರೂರು, ಯಲ್ಲಾಪುರ, ಯಶವಂತಪುರ, ವಿಜಯನಗರ, ಶಿವಾಜಿನಗರ, ಹೊಸಕೋಟೆ, ಹುಣಸೂರು, ಕೆಆರ್ ಪೇಟೆ, ಮಹಾಲಕ್ಷ್ಮಿ ಲೇಔಟ್, ಕೆಆರ್ ಪುರ, ರಾಣೇಬೆನ್ನೂರು, ಚಿಕ್ಕಬಳ್ಳಾಪುರದಲ್ಲಿ ಉಪಚುನಾವಣೆ ನಡೆದರೆ ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ರಾಯಚೂರಿನ ಮಸ್ಕಿ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುದಿಲ್ಲ.
ಉಡುಪಿ: ಅನರ್ಹತೆ ಹೊಂದಿದ ಶಾಸಕರಿಗೆ ಮತ್ತೆ ಸ್ಪರ್ಧೆ ಮಾಡುವ ಅವಕಾಶ ಸಿಗುತ್ತದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಅನರ್ಹ ಶಾಸಕರ ಕುರಿತು ಭರವಸೆಯ ಮಾತುಗಳನ್ನಾಡಿದ್ದಾರೆ.
ಉಪಚುನಾವಣೆಯ ವೇಳಾಪಟ್ಟಿ ಪ್ರಕಟವಾದ ಹಿನ್ನೆಲೆ ನಗರದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಸೋಮವಾರ ಸುಪ್ರೀಂ ಕೋರ್ಟ್‍ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಯಲಿದೆ. ಒಂದೇ ದಿನದಲ್ಲಿ ಎಲ್ಲವೂ ಇತ್ಯರ್ಥ ಆಗಬಹುದು. ನಾಮಪತ್ರ ಸಲ್ಲಿಸಲು ಇನ್ನೂ ಹಲವು ದಿನ ಬಾಕಿ ಇದೆ. ಕಾನೂನಿನ ಚೌಕಟ್ಟಿನಲ್ಲಿ ಶಾಸಕರಿಗೆ ಸಮಸ್ಯೆಗಳು ಆಗಿದೆ. ಇದು ಸೋಮವಾರ ಇತ್ಯರ್ಥವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಅನರ್ಹರು ಮೊದಲು ಬಿಜೆಪಿ ಸೇರುತ್ತಾರೆ. ನಂತರ ಬಿಜೆಪಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಪಕ್ಷದ ತೀರ್ಮಾನಕ್ಕೆ ಅನರ್ಹ ಶಾಸಕರು ಬದ್ಧರಾಗಿದ್ದರೆ ಅವರು ಬಿಜೆಪಿಯಿಂದಲೇ ಸ್ಪರ್ಧಿಸಲಿದ್ದಾರೆ ಎಂದು ಸದಾನಂದಗೌಡರು ಸ್ಪಷ್ಟಪಡಿಸಿದ್ದಾರೆ.
ನಾವು ಚುನಾವಣೆಗೆ ಸಿದ್ಧರಿದ್ದೇವೆ, ಸರ್ಕಾರ ರಚನೆಯಾದಾಗಿನಿಂದಲೂ ಚುನಾವಣೆಗೆ ತಯಾರಿ ಶುರು ಮಾಡಿದ್ದೇವೆ. ಲೋಕಸಭಾ ಚುನಾವಣಾ ಫಲಿತಾಂಶದ ಮೂಲಕ ಜನ ತೀರ್ಮಾನಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರದ ಕನಸನ್ನು ಜನ ಕಂಡಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಶಾಸಕರು ಅಯೋಗ್ಯ ಸರ್ಕಾರವನ್ನು ತಿರಸ್ಕರಿಸಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿ 15 ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ನೆರೆ ಪರಿಹಾರ ಸದುಪಯೋಗ ಆಗುವಾಗ ಕೇಂದ್ರ ಸರ್ಕಾರ ಪರಿಹಾರ ಕೊಡುತ್ತದೆ. ಕೇಂದ್ರ ಸರ್ಕಾರ ಎಸ್‍ಡಿಆರ್‍ಎಫ್ ನಿಂದ ಈಗಾಗಲೇ 380 ಕೋಟಿ ರೂ. ಕೊಟ್ಟಿದೆ. ನೆರೆ ನಷ್ಟದ ವರದಿಗಳನ್ನು ಗೃಹ ಇಲಾಖೆ ಪಡೆದುಕೊಂಡಿದೆ. ತಾತ್ಕಾಲಿಕ ಪರಿಹಾರಕ್ಕೆ ರಾಜ್ಯದಲ್ಲಿ ಸಾಕಷ್ಟು ದುಡ್ಡು ಇದೆ. ಕೇಂದ್ರದ ನೆರೆ ಪರಿಹಾರ ಬೇಡ, ರಾಜ್ಯದ ಬೊಕ್ಕಸದಲ್ಲಿ ಸಾಕಷ್ಟು ಹಣ ಇದೆ ಅಂದಿರುವ ಸಂಸದ ತೇಜಸ್ವಿ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಡಿವಿಎಸ್, ಸಂಸದರು ಸದ್ಯಕ್ಕೆ ಪರಿಹಾರ ಬೇಡ ಅಂದಿರಬಹುದು. ಆದರೆ ಶಾಶ್ವತ ಕಾಮಗಾರಿಗೆ ಕೇಂದ್ರದ ಅನುದಾನ ಅವಶ್ಯಕ. ಅಷ್ಟು ದೊಡ್ಡ ಮೊತ್ತ ಕೇಂದ್ರ ದಿಂದ ಕೊಡಲು ಮಾತ್ರ ಸಾಧ್ಯ ಎಂದರು.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಜೆಡಿಎಸ್ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡದ್ದೇ ಆಶ್ಚರ್ಯ. ಅವರಪ್ಪ- ಇವರಪ್ಪ ಅಂತ ಬೈದುಕೊಂಡವರು ಒಂದಾದದ್ದು ಬಹಳ ವಿಶೇಷ. ಅಧಿಕಾರಕ್ಕಾಗಿ ಮೈತ್ರಿಯಾದದ್ದು ಹೆಚ್ಚು ಬಾಳಿಕೆ ಬರಲ್ಲ. ಎರಡೂ ಪಕ್ಷದ ಸಜ್ಜನ ಶಾಸಕರು ಮೈತ್ರಿಯಿಂದ ನೊಂದು ಹೊರ ಬರಬೇಕಾಯ್ತು ಎಂದರು.
ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂಬ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿವಿಎಸ್, ಅಧಿಕಾರಕ್ಕಾಗಿ ಜೆಡಿಎಸ್, ಕಾಂಗ್ರೆಸ್ ಏನು ಬೇಕಾದರೂ ಮಾಡುತ್ತವೆ. ಕುರ್ಚಿಗಾಗಿ ಅಂತಹ ಹೇಳಿಕೆ ಸಾಮಾನ್ಯ. ಸಿದ್ದರಾಮಯ್ಯನವರಿಗೆ ಮತ್ತೆ ಸಿಎಂ ಆಗುವ ಆಸೆಯಿದೆ. ಸೋತರೂ ಗೆದ್ದರೂ ಅವರಿಗೆ ಯಾವುದಾದರೂ ಕುರ್ಚಿ ಬೇಕೆ ಬೇಕು. ಕುಮಾರಸ್ವಾಮಿಯನ್ನು ಇಳಿಸಿ ಕುರ್ಚಿ ಹಿಡಿಯಲಿಲ್ವೇ? ಇದೆಲ್ಲ ಪಕ್ಷದ ವರಿಷ್ಠರಿಗೆ ಗೊತ್ತಾಗಿದೆ. ಅದೇ ಕಾರಣಕ್ಕೆ ಸೋನಿಯಾ ಗಾಂಧಿ ಭೇಟಿಗೆ ಅವಕಾಶ ಸಿಗಲಿಲ್ಲ. ಅಧಿಕಾರಕ್ಕಾಗಿ ಸಿದ್ದರಾಮಯ್ಯ ಎಲ್ಲ ಪಕ್ಷಕ್ಕೆ ಹೋಗಿ ಬಂದರು. ಆದರೆ ಬಿಜೆಪಿಯಲ್ಲಿ ಮಾತ್ರ ಸಿದ್ದರಾಮಯ್ಯನವರಿಗೆ ಪ್ರವೇಶವಿಲ್ಲ ಎಂದರು.
ಬೆಂಗಳೂರು: ಅನರ್ಹ ಶಾಸಕರು ನಮ್ಮ ಪಕ್ಷದಲ್ಲಿದ್ದಾಗ ರಾಜರಂತೆ ಮೆರೆಯುತ್ತಿದ್ದರು. ಈಗ ಬಿಜೆಪಿಯವರ ಮುಂದೆ ಭಿಕ್ಷೆ ಬೇಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆಯೇ ನಾನು ಈ ಕುರಿತು ಹೇಳಿದ್ದೆ. ಬಿಜೆಪಿ ನಂಬಿ ಹೋಗಬೇಡಿ ಎಂದು ಸಲಹೆ ನೀಡಿದ್ದೆ. ಈಗ ಹೋಗಿ ಬಿಜೆಪಿ ಮುಂದೆ ಭಿಕ್ಷೆ ಬೇಡುತ್ತಿದ್ದಾರೆ. ನಮ್ಮ ಪಕ್ಷದಲ್ಲಿದ್ದಾಗ ಅವರ ಬೇಡಿಕೆಗಳನ್ನು ಈಡೇರಿಸುತ್ತಿದ್ದೆವು. ಎಲ್ಲ ಸಮಸ್ಯೆಗಳನ್ನು ಆಲಿಸುತ್ತಿದ್ದೆವು. ಇಲ್ಲಿ ಅವರಿಗೆ ಮುಕ್ತ ಅವಕಾಶವಿತ್ತು. ಇಷ್ಟಾದರೂ ಪಕ್ಷ ಬಿಟ್ಟು ಹೋಗಿದ್ದಾರೆ. ಕಾಂಗ್ರೆಸ್ ಏನು ಮಾಡಿತ್ತು ಅವರಿಗೆ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಸುಪ್ರೀಂ ನ್ಯಾಯಾಧೀಶ ಶಾಂತನಗೌಡರ್ ಪ್ರಕರಣದ ವಿಚಾರಣೆಯಿಂದ ಹಿಂದಕ್ಕೆ ಸರಿದಿದ್ದಾರೆ. ರಮೇಶ್ ಕುಮಾರ್ ಸಹ ಈ ಹಿಂದೆ ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಂಡಿದ್ದಾರೆ. ಶಾಸಕರ ರಾಜೀನಾಮೆ ಬಗ್ಗೆ ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ. ಶಾಸಕರನ್ನು ಅನರ್ಹ ಮಾಡಿರುವುದು ಉತ್ತಮ ನಿರ್ಧಾರ. ಅವರು ಪಕ್ಷಾಂತರಿಗಳು ಅನ್ನೋದು ರಾಜ್ಯದ ಜನರಿಗೆ ಗೊತ್ತಿದೆ. ಅನರ್ಹರು ಕಾಂಗ್ರೆಸ್‍ಗೆ ವಾಪಸ್ ಬರುವ ಪ್ರಶ್ನೆಯೇ ಇಲ್ಲ. ನಾವು ಈಗಾಗಲೇ ಬಹಳ ಸ್ಪಷ್ಟವಾಗಿ ಹೇಳಿದ್ದೇವೆ. ಪಕ್ಷಕ್ಕೆ ಅವರನ್ನು ವಾಪಸ್ ಸೇರಿಸಿಕೊಳ್ಳುವ ಪ್ರಮೇಯವೇ ಬರುವುದಿಲ್ಲ. ಈಗಲೂ ನಮ್ಮ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಯಾವುದೇ ಕಾರಣಕ್ಕೂ ಅವರನ್ನು ವಾಪಸ್ ಸೇರಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮಹಾತ್ಮಾ ಗಾಂಧೀಜಿಯವರನ್ನು ಸ್ವಚ್ಛತೆಗಷ್ಟೇ ಸೀಮಿತಗೊಳಿಸಲಾಗಿದೆ. ನಾವು ಪೊರಕೆ ಹಿಡಿದು ಪೋಸ್ ಕೊಡಲ್ಲ ಬದಲಿಗೆ ಪಾದಯಾತ್ರೆ ಮೂಲಕ ಅವರ ತತ್ವಾದರ್ಶಗಳನ್ನು ತಿಳಿಸುತ್ತೇವೆ. ರಾಜ್ಯಾದ್ಯಂತ ಪಾದಯಾತ್ರೆ ಹಮ್ಮಿಕೊಳ್ಳುವ ಮೂಲಕ ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ನೆನಪಿಸುತ್ತೇವೆ. ಗಾಂಧಿಯವರ ಆದರ್ಶಗಳನ್ನು ಇಂದು ನೆನೆಪಿಸಿಕೊಳ್ಳುತ್ತಿಲ್ಲ. ಬದಲಿಗೆ ಅವರನ್ನು ಸ್ವಚ್ಛತೆಗಷ್ಟೇ ಸೀಮಿತಗೊಳಿಸಲಾಗಿದೆ. ರಾಷ್ಟ್ರೀಯತೆ ಪದ ರಾಜಕಾರಣಕ್ಕೆ ಬಳಕೆಯಾಗುತ್ತಿದೆ. ಇದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತೇವೆ ಎಂದರು.
ಅಕ್ಟೋಬರ್ 2 ರಿಂದ ಜನವರಿ 31ರ ವರೆಗೆ ಗಾಂಧಿ ಜಯಂತಿ ಆಚರಣೆ ಮಾಡಲಾಗುವುದು. ಈ ಮೂಲಕ ದೇಶಕ್ಕಾಗಿ ತ್ಯಾಗ ಮಾಡಿದವರನ್ನು ನೆನಪಿಸಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ವಿನೂತನ ಕಾರ್ಯಕ್ರಮ ನಡೆಸಿ ಅವರ ತತ್ವಾದರ್ಶಗಳನ್ನು ಜನರಿಗೆ ತಿಳಿಸುತ್ತೇವೆ. ಬಿಜೆಪಿಯವರು ಪೊರಕೆ ಹಿಡಿದು ಸ್ವಚ್ಛತೆ ಅಂತ ಪೋಸ್ ಕೊಡುತ್ತಾರೆ. ನಾವು ಅಂತಹ ಕೆಲಸವನ್ನು ಮಾಡುವುದಿಲ್ಲ. ಗಾಂಧಿ ಆದರ್ಶವನ್ನು ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತೇವೆ. ಧರ್ಮವನ್ನು ವಿಭಜಿಸುವ ಕೆಲಸ ನಡೆಯುತ್ತಿದೆ. ಇದನ್ನು ಸಹ ಜನರಿಗೆ ತಿಳಿಸಬೇಕು ಎಂದು ಮಾಹಿತಿ ನೀಡಿದರು.
ಪಾವಗಡದ ಗೊಲ್ಲರಹಟ್ಟಿಗೆ ಸಂಸದ ನಾರಾಯಣಸ್ವಾಮಿಯವರಿಗೆ ಪ್ರವೇಶ ನಿರಾಕರಿಸಿದ್ದರ ಕುರಿತು ಪ್ರತಿಕ್ರಿಯಿಸಿದ ಅವರು, ಇದೊಂದು ತಲೆ ತಗ್ಗಿಸುವ ವಿಚಾರ, ಒಬ್ಬ ಸಂಸದರಿಗೆ ಹೀಗಾದರೆ ಹೇಗೆ? ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ. ನಮ್ಮ ಸಮಾಜದಲ್ಲಿ ಇನ್ನೂ ಸುಧಾರಣೆಯಾಗಬೇಕು. ಸಮಾಜದಲ್ಲಿರುವ ಕೆಟ್ಟ ಪದ್ಧತಿಗಳನ್ನು ತೊಲಗಿಸಬೇಕು. ಎಲ್ಲರೂ ಸೇರಿ ಇದರ ಬಗ್ಗೆ ಗಮನ ಸೆಳೆಯಬೇಕು. ಸರ್ಕಾರ ಈ ಕುರಿತು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ದಿನೇಶ್ ಗುಂಡೂರಾವ್ ಒತ್ತಾಯಿಸಿದರು.
ನವದೆಹಲಿ: ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠದ ಪೈಕಿ ಕರ್ನಾಟಕ ಮೂಲದ ಓರ್ವ ನ್ಯಾಯಾಧೀಶರು ಹಿಂದಕ್ಕೆ ಸರಿದ ಪರಿಣಾಮ ಅನರ್ಹ ಶಾಸಕರ ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆಯಾಗಿದೆ.
ಸುಪ್ರೀಂಕೋರ್ಟಿನ ತ್ರಿ ಸದಸ್ಯ ಪೀಠದ ಕರ್ನಾಟಕ ಮೂಲದ ನ್ಯಾಯಮೂರ್ತಿ ಮೋಹನ್ ಶಾಂತನಗೌಡರ್ ವಿಚಾರಣೆಯಿಂದ ಹಿಂದೆ ಸರಿದ ಪರಿಣಾಮ ಅರ್ಜಿಯನ್ನು ಮುಂದೂಡಲಾಗಿದೆ. ನ್ಯಾ.ಎನ್.ವಿ.ರಮನ್, ನ್ಯಾ. ಮೋಹನ್ ಶಾಂತನಗೌಡರ್ ಮತ್ತು ನ್ಯಾ.ಅಜಯ್ ರಸ್ತೋಗಿ ತ್ರಿ ಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿತ್ತು. ನ್ಯಾಯಾಧೀಶರು ಹಿಂದೆ ಸರಿದ ಪರಿಣಾಮ ಮತ್ತೊಬ್ಬರನ್ನು ನೇಮಕ ಮಾಡಿ ಮರುಪೀಠ ರಚನೆಯಾಗಬೇಕು.
ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ, ನಮ್ಮ ಕಕ್ಷಿದಾರರು ಆಗಸ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಸಾಕಷ್ಟು ಸಮಯವಾಗಿದ್ದು, ಆದಷ್ಟು ಬೇಗ ಅರ್ಜಿಯ ವಿಚಾರಣೆ ನಡೆಸಬೇಕೆಂದು ನ್ಯಾಯಾಲಯದ ಮುಂದೆ ಮನವಿ ಮಾಡಿಕೊಂಡರು. ವಿಚಾರಣೆ ಮುಂದೂಡುವುದರಿಂದ ನಮಗೆ ಯಾವುದೇ ತೊಂದರೆ ಇಲ್ಲ ಎಂದು ಕೆಪಿಸಿಸಿ ಪರ ವಕೀಲ ಕಪಿಲ್ ಸಿಬಲ್ ತಿಳಿಸಿದ್ದಾರೆ.
ನ್ಯಾ.ಮೋಹನ್ ಶಾಂತನಗೌಡರು ಕರ್ನಾಟಕದ ಹಾವೇರಿ ಜಿಲ್ಲೆಯವರು. ಅರ್ಜಿ ಸಲ್ಲಿಸಿರುವ ಶಾಸಕರ ಪೈಕಿ ಬಿ.ಸಿ.ಪಾಟೀಲ್ ಸಹ ಹಾವೇರಿ ಮೂಲದವರಾಗಿದ್ದರಿಂದ ನಾವೇ ಅರ್ಜಿಯನ್ನು ಕೈಗೆತ್ತಿಕೊಳ್ಳುವುದು ಉತ್ತಮ ಅಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೂ ಆಪರೇಷನ್ ಕಮಲದ ಕಸರತ್ತುಗಳು ಮಾತ್ರ ನಿಂತಂತೆ ಕಾಣುತ್ತಿಲ್ಲ. ಸರ್ಕಾರವನ್ನು ಮತ್ತಷ್ಟು ಸುಭದ್ರ ಮಾಡಿಕೊಳ್ಳಲು ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿದೆಯಂತೆ. ಇತ್ತ ಅನರ್ಹ ಶಾಸಕರು ನಮ್ಮ ಸ್ಥಾನಮಾನ ಅಂತಿಮವಾಗುವರೆಗೂ ನೋ ಆಪರೇಷನ್ ಕಮಲ ಎಂದು ಬಿಜೆಪಿಗೆ ಷರತ್ತು ಹಾಕಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.
ಬಿಜೆಪಿಯ ಆಪರೇಷನ್ ಕಮಲಕ್ಕೆ ಅನರ್ಹ ಶಾಸಕರು ಅಡ್ಡಿಯಾಗಿದ್ದಾರೆ. ನಮಗೆ ಸಿಗಬೇಕಾದ ಸ್ಥಾನಮಾನಗಳು ಸಿಕ್ಕಿಲ್ಲ. ಇತ್ತ ನ್ಯಾಯಾಲಯದಲ್ಲಿ ಪ್ರಕರಣ ವಿಳಂಬವಾಗುತ್ತಿದ್ದು, ಎಲ್ಲರೂ ಅನರ್ಹರಾಗಿ ಅತಂತ್ರ ಸ್ಥಿತಿಯಲ್ಲಿದ್ದೇವೆ. ರಾಜೀನಾಮೆ ನೀಡಿ ಬಂದಿರುವ ನಮಗೆ ಮೊದಲ ಆದ್ಯತೆ ನೀಡಬೇಕು. ನಮಗೆ ಪಕ್ಷದಲ್ಲಿ ಮತ್ತು ಸಂಪುಟದಲ್ಲಿ ಸ್ಥಾನಮಾನಗಳು ಖಾತ್ರಿಯಾದ ಬಳಿಕವಷ್ಟೇ ನೀವು ಆಪರೇಷನ್ ಕಮಲಕ್ಕೆ ಮುಂದಾಗಬೇಕು. ನಮ್ಮೆಲ್ಲರ ರಾಜಕೀಯ ಭವಿಷ್ಯ ಮೊದಲು ಗಟ್ಟಿ ಮಾಡಿಕೊಡಬೇಕು. ನಮ್ಮಿಂದನೇ ಸರ್ಕಾರ ರಚಿಸಿ ನಮಗೇನೂ ಮಾಡದೇ ಮತ್ತೆ ಆಪರೇಷನ್ ಮಾಡಕೂಡದು ಎಂಬ ಎಚ್ಚರಿಕೆಯ ಸಂದೇಶವನ್ನು ಬಿಜೆಪಿಗೆ ರವಾನಿಸಿದ್ದಾರೆ ಎನ್ನಲಾಗಿದೆ.
ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆದು ತೀರ್ಪು ಬರೋವರೆಗೂ ಅನರ್ಹ ಶಾಸಕರು ಕಾಯಲೇಬೇಕು. ಈ ಮಧ್ಯೆ ಜೆಡಿಎಸ್ ನಿಂದ ಮತ್ತೆ ಕೆಲ ಶಾಸಕರು ಬಿಜೆಪಿಗೆ ಬರಲು ಸಿದ್ಧಗೊಂಡಿರುವ ಇರೋ ಸುದ್ದಿ ಅನರ್ಹ ಶಾಸಕರ ನಿದ್ದೆ ಕೆಡಿಸಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಎಲ್ಲ ಶಾಸಕರು ಒಂದೆಡೆ ಸೇರಿ ಸಭೆ ನಡೆಸಿ ತಮ್ಮ ತೀರ್ಮಾನವನ್ನು ಬಿಜೆಪಿ ವರಿಷ್ಠರಿಗೆ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಪರೇಷನ್ ಕಮಲಕ್ಕೆ ನೋ ಅಂದಿದ್ಯಾಕೆ?
ಒಂದು ವೇಳೆ ಜೆಡಿಎಸ್ ಅಥವಾ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬಂದ್ರೆ ಅವರಿಗೆ ಯಾವುದೇ ಕಾನೂನು ತೊಡಕುಗಳು ಎದುರಾಗಲ್ಲ. ಯಾಕಂದ್ರೆ ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಒಂದು ವೇಳೆ ಆಪರೇಷನ್ ಕಮಲ ಮಾಡಿ ಹೊಸ ಟೀಂ ಬಂದ್ರೆ ನಮ್ಮನ್ನು ಕಡೆಗಣಿಸೋ ಸಾಧ್ಯತೆಯೇ ಹೆಚ್ಚು. ಎರಡನೇ ಬಾರಿ ಬಂದವರು ನೇರವಾಗಿ ಸಂಪುಟ ಸೇರಿಕೊಳ್ಳಬಹುದು. ಮುಂದೆ ನಡೆಯುವ ಉಪಚುನಾವಣೆಗೂ ಸ್ಪರ್ಧೆ ಮಾಡಬಹುದು. ಆಗ ಬಿಜೆಪಿಗೆ ನಾವು 17 ಜನರೂ ಅನಿವಾರ್ಯ ಆಗಲ್ಲ. ಈ ಹಂತದಲ್ಲೇ ನಾವು ಎಚ್ಚೆತ್ತುಕೊಂಡು ಬಿಜೆಪಿಯನ್ನು ಬಿಗಿ ಮಾಡಬೇಕು. ಇಲ್ಲದಿದ್ದರೆ ಪರಿಸ್ಥಿತಿ ಕೈಮೀರಿ ಹೋದ ಮೇಲೆ ಏನೂ ಮಾಡಲು ಆಗಲ್ಲ. ಗಂಭೀರವಾಗಿ ಯೋಚನೆ ಮಾಡಿರುವ ಅನರ್ಹರು ಈಗ ಬಿಜೆಪಿಗೆ ಹೊಸ ಷರತ್ತು ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.
ತುಮಕೂರು: ಕಾಂಗ್ರೆಸ್ ನಾಯಕರ ನಡುವಿನ ಕಿತ್ತಾಟ, ಒಗ್ಗಟ್ಟು ಇಲ್ಲದಿರುವುದೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿಗೆ ಕಾರಣ ಎಂದು ಸತ್ಯಶೋಧನಾ ಸಮಿತಿ ವರದಿ ನೀಡಿರುವುದು ನಿಜ. ಈ ಕುರಿತು ಮುಂದೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನ ಹೆಗ್ಗೆರೆಯ ಸಿದ್ಧಾರ್ಥ ಮೆಡಿಕಲ್ ಕಾಲೇಜಿನ ಘಟಿಕೋತ್ಸವ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸತ್ಯಶೋಧನಾ ಸಮಿತಿ ವರದಿಯಲ್ಲಿ ಒಗ್ಗಟ್ಟಿನ ಕೊರತೆಯಿಂದಲೇ ಸೋಲುಂಟಾಗಿದೆ ಎಂದು ತಿಳಿದು ಬಂದಿದೆ. ನಾಯಕರ ನಡುವೆ ಯಾಕೆ ಭಿನ್ನಾಭಿಪ್ರಾಯ ಮೂಡಿತು ಎನ್ನುವುದರ ಕುರಿತು ಚರ್ಚೆ ಮಾಡುತ್ತೇವೆ. ಪಕ್ಷದ ಪ್ರಮುಖ ನಾಯಕತ್ವದಿಂದ ಆಗಿದೆಯೋ ಅಥವಾ ಸ್ಥಳೀಯ ಮುಖಂಡರಿಂದ ಆಗಿದೆಯೋ ಎಂಬುದನ್ನು ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಈ ಕುರಿತು ಸೆಪ್ಟೆಂಬರ್ 18ರಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ತಪ್ಪು ಮಾಡಿದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಕ್ರಮ ಕೈಗೊಳ್ಳುವ ಕುರಿತು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು.
ಅದಷ್ಟು ಬೇಗ ಹೈಕಮಾಂಡ್ ವಿರೋಧ ಪಕ್ಷ ನಾಯಕರನ್ನು ಆಯ್ಕೆ ಮಾಡಲಿದೆ. ಸಿದ್ದರಾಮಯ್ಯ, ಎಚ್.ಕೆ.ಪಾಟೀಲ್ ಸೇರಿದಂತೆ ಹಲವರ ಹೆಸರು ಕೇಳಿ ಬಂದಿದೆ. ಯಾರೇ ಆದರೂ ನಮ್ಮ ನಾಯಕರೇ. ಹೈ ಕಮಾಂಡ್ ಯಾರನ್ನು ಆಯ್ಕೆ ಮಾಡುತ್ತದೆಯೋ ಗೊತ್ತಿಲ್ಲ. ನನಗೆ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೆನೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಅನರ್ಹರಿಗೆ ತಪ್ಪಿನ ಅರಿವಾಗಿದೆ
ಅನರ್ಹ ಶಾಸಕರಿಗೆ ತಮ್ಮ ತಪ್ಪಿನ ಅರಿವಾಗಿದೆ. ಮುಂದಿನ ದಿನದಲ್ಲಿ ಏನಾಗುತ್ತೋ ಕಾದು ನೋಡೋಣ. ಅನರ್ಹರನ್ನು ಮತ್ತೆ ಪಕ್ಷಕ್ಕೆ ಕರೆದುಕೊಳ್ಳುವ ಸನ್ನಿವೇಶ ಬರುವುದಿಲ್ಲ. ಒಂದು ವೇಳೆ ಬಂದರೆ, ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ. ರಾಜ್ಯ ಬಿಜೆಪಿ ಸರ್ಕಾರದ ಉಳಿವಿನ ಬಗ್ಗೆ ಸಮಯ ನಿಗದಿ ಮಾಡಲ್ಲ, ಆದರೆ ಹೆಚ್ಚು ಕಾಲ ಈ ಸರ್ಕಾರ ಉಳಿಯುವುದಿಲ್ಲ. ಮಧ್ಯಂತರ ಚುನಾವಣೆ ಕುರಿತು ನನಗೆ ತಿಳಿದಿಲ್ಲ. ಆದರೆ, ಮಧ್ಯಂತರ ಚುನಾವಣೆ ನಡೆದರೆ ನಾವು ತಯಾರಾಗುತ್ತಿದ್ದೇವೆ ಎಂದು ಪರಮೇಶ್ವರ್ ತಿಳಿಸಿದರು.
ವರದಿಯಲ್ಲೇನಿದೆ?
ಕಾಂಗ್ರೆಸ್ ಶಾಸಕರ ಸ್ವಪ್ರತಿಷ್ಠೆ, ಕೆಲವರ ಪಕ್ಷ ವಿರೋಧಿ ಚಟುವಟಿಕೆ, ನಾಯಕರ ನಡುವಿನ ಆಂತರಿಕ ಕಿತ್ತಾಟಗಳಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ ಎಂದು ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ನೇತೃತ್ವದ ಸತ್ಯ ಶೋಧನಾ ಸಮಿತಿ ತಿಳಿಸಿದೆ. ತನ್ನ ವರದಿಯಲ್ಲಿ ಸಮಿತಿ ಕಾಂಗ್ರೆಸ್ ಕಾಯಕರ್ತರು ಕೆಲಸ ಮಾಡಿದ್ದರೂ ನಾಯಕರ ಒಳಜಗಳಿಂದಾಗಿ ಅಭ್ಯರ್ಥಿಗಳು ಸೋತಿದ್ದಾರೆ. ಚುನಾವಣೆ ಸೋಲಿಗೆ ಮೈತ್ರಿಯೂ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಕ್ಟೋಬರ್ 2ರಂದು ಕೆಪಿಸಿಸಿಗೆ ಈ ವರದಿಯನ್ನು ಸಲ್ಲಿಸಲು ಸಮಿತಿ ತೀರ್ಮಾನಿಸಿದೆ.
ಬೆಂಗಳೂರು: ರಾಜಕೀಯ ಭವಿಷ್ಯದ ಬಗ್ಗೆ ಆತಂಕಗೊಂಡ ಅನರ್ಹ ಶಾಸಕರು ಸೇಫ್ ಗೇಮ್ ಪ್ಲಾನ್ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿಗು ಮುನ್ನ ಅನರ್ಹರು ಚುನಾವಣೆ ಆಯೋಗದ ಮೊರೆ ಹೋಗಿದ್ದಾರೆ.
ಅನರ್ಹಗೊಂಡ 17 ಶಾಸಕರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ಬರೋತನಕ ಉಪ ಚುನಾವಣೆ ನಡೆಸದಂತೆ ಚುನಾವಣೆ ಆಯೋಗಕ್ಕೆ ಅನರ್ಹರು ಮನವಿ ಮಾಡಿದ್ದಾರೆ. ಈ ಮೂಲಕ ಅತೃಪ್ತ ನಾಯಕರು ಸೇಫ್ ಗೇಮ್‍ಗಿಳಿದಿದ್ದಾರೆ.
ಸ್ಪೀಕರ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ದಿನಾಂಕ ನಿಗದಿ ಪಡಿಸುವಂತೆ ಅನರ್ಹ ಶಾಸಕರು ನ್ಯಾ. ಎನ್.ವಿ.ರಮಣ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆ ಮನವಿ ಮಾಡಿಕೊಂಡಿದ್ದರು. ತುರ್ತು ಅರ್ಜಿ ವಿಚಾರಣೆ ಸಾಧ್ಯವಿಲ್ಲ ಎಂದು ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್ ಶಾಕ್ ನೀಡಿತ್ತು.
ಈ ಹಿಂದೆ ಅನರ್ಹ ಶಾಸಕರು ನ್ಯಾ.ಅರುಣ್ ಮಿಶ್ರಾ ದ್ವಿಸದಸ್ಯ ಪೀಠದ ಮುಂದೆ ತುರ್ತು ವಿಚಾರಣೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ನ್ಯಾ.ಅರುಣ್ ಮಿಶ್ರಾ ದ್ವಿಸದಸ್ಯ ಪೀಠ ತುರ್ತು ವಿಚಾರಣೆಗೆ ಒಪ್ಪಿರಲಿಲ್ಲ. ಮತ್ತೊಮ್ಮೆ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕೆಂದು ಮನವಿ ಮಾಡಿಕೊಂಡಿದ್ದರು. ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದು ಅನರ್ಹ ಶಾಸಕರ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಮಂಗಳವಾರ ತ್ರಿಸದಸ್ಯ ಪೀಠ ಅನರ್ಹರ ತುರ್ತು ವಿಚಾರಣೆಗೆ ಒಪ್ಪಿಗೆ ಸೂಚಿಸಿದೆ.