ದಾವಣಗೆರೆ: ಹದಿನೇಳು ಜನ ಅನರ್ಹ ಶಾಸಕರು ಬಿಜೆಪಿ ಸೇರಿದ್ದಾರೆ ಎಂದು ಹೇಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಪೇಚಿಗೆ ಸಿಲುಕಿದ ಪ್ರಸಂಗ ನಗರದಲ್ಲಿ ನಡೆದಿದೆ.
ನಗರದ ಜಿಲ್ಲಾ ಪಂಚಾಯತ್ ಮುಂಭಾಗದಲ್ಲಿರುವ ಜೆ.ಎಚ್.ಪಾಟೀಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಶಾಸಕರು ಮಾಧ್ಯಮಗಳ ಜೊತೆ ಮಾತನಾಡಿ, ರಾಜ್ಯದಲ್ಲಿ ಹೊಸ ಜಿಲ್ಲೆ ಮಾಡುವುದರಿಂದ ಆಡಳಿತಕ್ಕೆ ಒಳ್ಳೆಯದಾಗುತ್ತದೆ. ಹೊಸ ಜಿಲ್ಲೆ ಮಾಡಿ ಎಂದು ನಿಯೋಗವು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮುಂದೆ ಮನವಿ ಇಟ್ಟಿತ್ತು. ಅಷ್ಟೇ ಅಲ್ಲದೆ ಹೊಸ ಜಿಲ್ಲೆಗೆ ಹಲವು ಶಾಸಕರ ವಿರೋಧ ಕೂಡ ಇದೆ. ನಾಳೆ ಸಿಎಂ ಸಭೆ ಕರೆದಿದ್ದಾರೆ. ಅಲ್ಲಿ ಸಣ್ಣಪುಟ್ಟ ಗೊಂದಲಗಳನ್ನು ಬಗೆಹರಿಸಲಾಗುತ್ತದೆ ಎಂದು ತಿಳಿಸಿದರು.
ನನ್ನ ನಡಿಗೆ ತಂತಿ ಮೇಲಿನ ನಡಿಗೆಯಂತಾಗಿದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿರುವುದನ್ನು ಪ್ರತಿಪಕ್ಷಗಳು ಕುತಂತ್ರದಿಂದ ಬಳಸಿಕೊಳ್ಳುತ್ತಿವೆ. ಅವರು ಸುಮ್ಮನೆ ತಂತಿ ಮೇಲೆ ನಡಿಗೆ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ. ಯಡಿಯೂರಪ್ಪನವರು ಸಂಕಷ್ಟಗಳನ್ನು ಸಮರ್ಪಕವಾಗಿ ಎದುರಿಸುತ್ತಾರೆ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಮೂರುವರೇ ವರ್ಷ ಯಡಿಯೂರಪ್ಪನವರೇ ಸಿಎಂ ಆಗಿರುತ್ತಾರೆ ಎನ್ನುವುದು ಅಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಅನರ್ಹ ಶಾಸಕರು ಬಿಜೆಪಿ ಸೇರುತ್ತಾರೆ ಎಂದು ಬಾಯಿತಪ್ಪಿ ಹೇಳಿ ಪೇಚೆಗೆ ಸಿಲುಕಿಹಾಕಿಕೊಂಡರು. ನಂತರ ಉಲ್ಟಾ ಹೊಡೆದು ಬಾಯಿ ತಪ್ಪಿನಿಂದ ನಾನು ಹೇಳಿದ್ದೇನೆ. ಅವರೇನಾದರು ಬಿಜೆಪಿಗೆ ಸೇರ್ಪಡೆಯಾದರೆ ಉಪ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಅನ್ನು ಅವರಿಗೆ ಕೊಡಲಾಗುತ್ತದೆ. ಅವರಿಂದಲೇ ನಾವು ಅಧಿಕಾರಕ್ಕೆ ಬಂದಿದ್ದೇವೆ, ನಾವು ಕುರ್ಚಿ ಮೇಲೆ ಕೂರಲು ಅವರು ಕಾರಣ ಎಂದು ತಮ್ಮ ಹೇಳಿಕೆಯನ್ನು ಸರಿಪಡಿಸಿಕೊಂಡರು.
ಬೆಂಗಳೂರು: ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಅವರದ್ದು ನಾಲಿಗೆಯಾ ಅಥವಾ ಬೇರೆನಾ? ಬಸ್ ಏಜೆಂಟ್ ಆಗಿದ್ದವರನ್ನು ತಂದು ಕಾಂಗ್ರೆಸ್ ಪಕ್ಷ ಜನನಾಯಕನನ್ನಾಗಿ ಮಾಡಿದೆ. ಮಾತನಾಡುವುದಕ್ಕೂ ಮುನ್ನ ಒಮ್ಮೆ ಅವರು ಬೆಳೆದು ಬಂದ ರೀತಿಯನ್ನು ನೋಡಿಕೊಳ್ಳಲಿ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.
ತಲಘಟ್ಟಪುರದಲ್ಲಿ ಎಸ್.ಟಿ.ಸೋಮಶೇಖರ್ ವಿರುದ್ಧದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ತಾನು ಜನಪ್ರತಿನಿಧಿಯಾಗಿದ್ದು ಹೇಗೆ ಎಂಬುದನ್ನು ಮೊದಲು ಅವರು ಅರಿಯಬೇಕು. ಯಾವುದೇ ಜನನಾಯಕನ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಅವರಿಗೆ ಈ ಸ್ಥಾನ ನೀಡಿದ್ದು, ಪಕ್ಷ, ಜನತೆ. ಅವರ ಮಾತನ್ನು ಧಿಕ್ಕರಿಸಿ ಕಾಂಗ್ರೆಸ್ ಬಿಟ್ಟು ಹೋಗಿದ್ದಾರೆ. ಯಾವ ಕಾರಣಕ್ಕೆ ಕಾಂಗ್ರೆಸ್ ಬಿಟ್ಟರು ಎಂದು ಸ್ಪಷ್ಟಪಡಿಸಿಲ್ಲ. ಈ ಹಿಂದೆ ಸಿದ್ದರಾಮಯ್ಯನವರು ಅನುದಾನ ಕೊಡದಿದ್ದರೆ ನಮ್ಮ ಕ್ಷೇತ್ರ ಅಭಿವೃದ್ಧಿಯಾಗುತ್ತಿರಲಿಲ್ಲ. ಹಣ ಸಿಗುತ್ತಿರಲಿಲ್ಲ ಎನ್ನುತ್ತಿದ್ದವರು ಇಂದು ಅವರ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮಾತನಾಡುವುದಕ್ಕೂ ಮೊದಲು ಏನಾಗಿದ್ದರು ಎಂಬುದನ್ನು ಅರಿಯಬೇಕು. ಬಿಡಿಎ ಸದಸ್ಯರಾಗಿ, ಅಧ್ಯಕ್ಷತೆಯೇ ಬೇಕು ಎಂದು ಪಟ್ಟು ಹಿಡಿದು, ಪಡೆದಿದ್ದರು. ಬಿಡಿಎನಲ್ಲಿ ಏನೇನು ಮಾಡಿದ್ದೀರಿ ನೋಡಬೇಕಿದೆ. ಗುಂಡೂರಾವ್ ಅವರ ಮಗ ಎಂಬ ಕಾರಣಕ್ಕಾಗಿ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿಲ್ಲ. ಸಂಘಟನೆ ಮಾಡಿ, ರಾಜ್ಯಾದ್ಯಂತ ಪ್ರಚಾರ ಮಾಡಿ ರಾಜ್ಯಾಧ್ಯಕ್ಷರಾದರು. ಮಾತನಾಡುವ ಮೊದಲು ಹಿಂದೆ ಏನಾಗಿದ್ದೆ ಎಂಬುದನ್ನು ಅರಿಯಬೇಕು. ಒಬ್ಬ ಸಾಮಾನ್ಯ ಟಿಕೆಟ್ ಏಜೆಂಟ್ ಅಗಿದ್ದವರು ಜನಪ್ರತಿನಿಧಿಯಾಗಿ ಈ ಮಟ್ಟಕ್ಕೆ ಬೆಳೆದಿದ್ದು ಹೇಗೆ ಎಂಬುದನ್ನು ಅರಿಯಬೇಕು ಎಂದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಎಸ್‍ಬಿಎಂ ಮೂವರು ಆಡಿದ ಆಟ ಗೊತ್ತಿಲ್ಲವೇ, ಸೋಮಶೇಖರ್, ಭೈರತಿ ಬಸವರಾಜ್, ಮುನಿರತ್ನ ಆಡಿದ್ದ ಆಟ ನಾವೂ ನೋಡಿದ್ದೇವೆ. ಮೊದಲು ಸಿದ್ದರಾಮಯ್ಯನವರನ್ನು ಹಾಡಿ ಹೊಗಳುತ್ತಿದ್ದವರ ನಾಲಿಗೆ ಈಗ ಏನಾಗಿದೆ? ಎಲ್ಲ ಅಧಿಕಾರ ಅನುಭವಿಸಿ ಈಗ ಬಿಜೆಪಿ ಬಾಗಿಲಿಗೆ ಹೋಗಿ ನಿಂತಿದ್ದೀರಲ್ಲ, ನಿಮಗೇನಾದರೂ ಮಾನ ಮರ್ಯಾದೆ ಇದೆಯಾ? ಎಲ್ಲ ಸವಲತ್ತುಗಳನ್ನು ಪಡೆದುಕೊಂಡು ಈಗ ಅವರ ವಿರುದ್ಧವೇ ಮಾತನಾಡುತ್ತೀರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯನವರ ಮನೆಗೆ ಬಂದರೆ ನಿಮಗೆ ಸ್ಪೆಷಲ್ ಟ್ರೀಟ್ಮೆಂಟ್ ಸಿಗುತ್ತಿತ್ತು. ಈಗ ಅವರ ಬಗ್ಗೆಯೇ ಮಾತನಾಡುತ್ತೀರಲ್ಲ ನಾಚಿಕೆ ಆಗಲ್ವಾ? ಕೃಷ್ಣ ಭೈರೇಗೌಡರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುತ್ತೇವೆ ಅಂದಿದ್ದರಲ್ಲ ಈಗ ನಿಮ್ಮ ನಾಲಿಗೆಗೆ ಏನಾಗಿದೆ. ಬಹಳ ದಿನ ನಿಮ್ಮ ಆಟ ನಡೆಯುವುದಿಲ್ಲ. ಮುಂದೆ ನಿಮಗೆ ಮಾರಿಹಬ್ಬ ಇದೆ ಎಂದು ಹರಿಹಾಯ್ದರು.
ಶಿವಮೊಗ್ಗ: ಅನರ್ಹರ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಯಡಿಯೂರಪ್ಪ ಕರೆಕೊಟ್ಟಿದ್ದಾರೆ.
ರಾಜ್ಯದಲ್ಲಿ ಉಪ ಚುನಾವಣೆ ದಿನಾಂಕ ಈಗಾಗಲೇ ನಿಗದಿಯಾಗಿದ್ದು, ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಜಿಲ್ಲೆಯ ಶಿಕಾರಿಪುರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಈ ಹಿಂದೆ ಕಾಂಗ್ರೆಸ್ ಹಾಗೂ ಜೆಡಿಎಸ್‍ನ 15 ಶಾಸಕರು ರಾಜೀನಾಮೆ ನೀಡಿ ಹೊರ ಬಂದಿದ್ದಾರೆ. ಈ ಸರ್ಕಾರ ಬರಲು ಕಾರಣರಾಗಿದ್ದಾರೆ. ಆದ್ದರಿಂದ ಉಪ ಚುನಾವಣೆಯಲ್ಲಿ ಅನರ್ಹ ಶಾಸಕರೆಲ್ಲರಿಗೂ ಟಿಕೆಟ್ ನೀಡಲು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸಹ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಎಂದರು. ಚುನಾವಣೆಯಲ್ಲಿ ಅನರ್ಹ ಶಾಸಕರ ಪರ ಕೆಲಸ ಮಾಡಿ ಗೆಲ್ಲಿಸುವ ಜವಾಬ್ದಾರಿ ಸಹ ನಮ್ಮ ಮೇಲಿದೆ ಎಂದು ತಿಳಿಸಿದರು. ಇದನ್ನೂ ಓದಿ:ಅವರ ದಾರಿ ಅವರಿಗೆ, ನಮ್ಮ ದಾರಿ ನಮಗೆ – ಅನರ್ಹರಿಗೆ ತಿವಿದ ಕತ್ತಿ
ಇದೇ ವೇಳೆ ಚುನಾವಣೆ ನಡೆಯುವ ಪ್ರತಿ ಕ್ಷೇತ್ರಕ್ಕೂ ಇಬ್ಬರು ಸಚಿವರನ್ನು ಉಸ್ತುವಾರಿಯಾಗಿ ನೇಮಕ ಮಾಡಿ ಜವಾಬ್ದಾರಿ ನೀಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಅಲ್ಲದೇ ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿದವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು. ಜೊತೆಗೆ ಬಿಬಿಎಂಪಿ ಮೇಯರ್ ಚುನಾವಣೆ ನ್ಯಾಯಾಲಯದಲ್ಲಿದ್ದು, ಚುನಾವಣೆ ಒಂದೂವರೆ ತಿಂಗಳುಗಳ ಕಾಲ ವಿಳಂಬವಾಗಲಿದೆ ಎಂದರು. ಇದನ್ನೂ ಓದಿ:ತಂತಿ ಮೇಲೆ ನಡೆದು ಯಡಿಯೂರಪ್ಪ ಬಿದ್ದುಬಿಟ್ಟಾರು: ಸಿದ್ದರಾಮಯ್ಯ ಟಾಂಗ್
ಉಪ ಚುನಾವಣೆಗೆ ಇವಿಎಂ ಬೇಡ, ಬ್ಯಾಲೆಟ್ ಪೇಪರ್ ಉಪಯೋಗಿಸಬೇಕು ಎನ್ನು ಕೂಗು ಕೇಳಿಬರುತ್ತಿದೆ. ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಇವಿಎಂ ಬಗ್ಗೆ ಅನುಮಾನವಿದೆ ಎಂದಿದ್ದರು. ಈ ಬಗ್ಗೆ ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಗೆದ್ದಾಗ ಇವಿಎಂ ಸರಿಯಿತ್ತು, ಈಗ ಸರಿಯಿಲ್ಲ ಎಂಬುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿ ಹರಿಹಾಯ್ದರು.
ತಂತಿ ಮೇಲಿನ ನಡಿಗೆ ಕುರಿತ ನನ್ನ ಹೇಳಿಕೆಗೆ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ. ಸೀಮಿತ ಸಂಪನ್ಮೂಲವನ್ನೆಲ್ಲಾ ಸಮಾಜ ಮತ್ತು ರಾಜ್ಯದ ಅಭಿವೃದ್ಧಿಗೆ ಬಳಸಬೇಕಿದೆ. ಹೀಗಾಗಿ ಹೆಚ್ಚಿನ ಅನುದಾನವನ್ನು ನೀಡುವುದು ಕಷ್ಟಸಾಧ್ಯ. ಅದನ್ನೇ ಹೇಳಿದ್ದೇನೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ಯಡಿಯೂರಪ್ಪ ಅವರಿಂದಾಗಿ ಲಿಂಗಾಯತ ವೀರಶೈವ ಧರ್ಮ ಉಳಿದಿದೆ ಶಾಸಕ ಎಂಬ ಶಾಮನೂರು ಅವರ ಹೇಳಿಕೆ ಬಗ್ಗೆ ಮಾತನಾಡಿ, ಅದು ಅವರ ವೈಯಕ್ತಿಕ ಅಭಿಪ್ರಾಯ. ಹಿಂದಿನ ಸರ್ಕಾರ ವೀರಶೈವ ಧರ್ಮವನ್ನು ಲಿಂಗಾಯತ ಧರ್ಮದಿಂದ ಪ್ರತ್ಯೇಕಿಸುವ ಸಂದರ್ಭದಲ್ಲಿ ನಾನು ಕಠಿಣ ನಿಲುವು ತೆಗೆದುಕೊಂಡಿದ್ದನ್ನು ಶಾಮನೂರು ಸ್ವಾಗತಿಸಿದ್ದರು. ಬಹುಶಃ ಆ ಕಾರಣಕ್ಕೆ ಅವರು ಹೀಗೆ ಹೇಳಿರಬಹುದು ಎಂದರು. ಇದೇ ವೇಳೆ ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗ ನಿರ್ಮಾಣಕ್ಕೆ ರಾಜ್ಯದ ಪಾಲು 750 ಕೋಟಿ ರೂ. ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಬಾಗಲಕೋಟೆ: ಬಿಜೆಪಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಕಟೀಲ್ ನಡುವೆ ಮುಸುಕಿನ ಕಾಳಗ ಇದೆ. ರಾಜ್ಯಾಧ್ಯಕ್ಷರಿಗೆ ಹೈಕಮಾಂಡ್ ಬೆಂಬಲ ಇದೆ. ಆದರೆ ಯಡಿಯೂರಪ್ಪ ಅವರಿಗೆ ಫ್ರಿ ಹ್ಯಾಂಡ್ ಕೊಟ್ಟಿಲ್ಲ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ್ ಹರಿಹಾಯ್ದಿದ್ದಾರೆ.
ತಂತಿ ಮೇಲೆ ನಡೆಯುತ್ತಿದ್ದೇನೆ ಎಂಬ ಸಿಎಂ ಬಿಎಸ್‍ವೈ ಹೇಳಿಕೆ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರಿಗೆ ಕೆಲಸ ಕಾರ್ಯದಲ್ಲಿ ವರಿಷ್ಠರು ಅಡೆತಡೆ ಉಂಟು ಮಾಡುತ್ತಿರಬಹುದು. ಸಿಎಂಗೆ ವರಿಷ್ಠರಿಂದ ಮೂಗುದಾರ ಹಾಕುವ ಕೆಲಸ ನಡೆಯುತ್ತಿದೆ. ಮುಖ್ಯಮಂತ್ರಿಗಳಿಗೆ ಸ್ವಾತಂತ್ರ್ಯ ಕೊಡಬೇಕಿತ್ತು. ಆದರೆ ಹೈ ಕಮಾಂಡ್ ಹಿಡಿತ ಸಾಧಿಸುತ್ತಿದೆ. ಇದು ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ. ಉಪಚುನಾವಣೆ ನಂತರ ಯಡಿಯೂರಪ್ಪ ಅವರಿಗೆ ನಿಶ್ಚಿತವಾಗಿಯೂ ತೊಂದರೆ ಇದೆ ಎಂದು ಬಿಜೆಪಿ ಹೈಕಮಾಂಡ್ ವಿರುದ್ಧ ವಾಗ್ದಾಳಿ ನಡೆಸಿದರು.
ಅನರ್ಹ ಶಾಸಕರು ಸ್ಪರ್ಧೆ ಮಾಡಿದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. 15 ಸ್ಥಾನದಲ್ಲಿ ಕನಿಷ್ಟ 12 ಜನ ಶಾಸಕರು ಕಾಂಗ್ರೆಸ್‍ನಿಂದ ಆಯ್ಕೆಯಾಗುತ್ತಾರೆ. ಬಿಜೆಪಿ ಮೇಲೆ ಇದು ಪರಿಣಾಮ ಬೀರುತ್ತದೆ. ಉಪಚುನಾವಣೆ ಬಳಿಕ ಬಿಎಸ್‍ವೈ ಸರ್ಕಾರಕ್ಕೆ ತೊಂದರೆ ಇದೆ. ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಉಮೇಶ್ ಕತ್ತಿ ಅನರ್ಹರಿಗೆ ಟಿಕೆಟ್ ಕೊಟ್ಟರೆ ಹುಷಾರ್ ಅಂತ ಹೇಳುತ್ತಾರೆ. ಇತ್ತ ಸಿಎಂ ತಂತಿ ಮೇಲೆ ನಡೆಯುತ್ತಿದ್ದೇನೆ ಎನ್ನುತ್ತಾರೆ. ಬಿಜೆಪಿಯಲ್ಲಿ ಆಂತರಿಕವಾಗಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಮುಸುಕಿನ ಗುದ್ದಾಟಗಳು ನಡೆದಿವೆ. ಇವರ ಆಂತರಿಕ ಕಚ್ಚಾಟ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ ಎಂದು ಕಿಡಿ ಕಾರಿದರು.
ಕೋರ್ಟ್ ಆದೇಶದ ಮೇಲೆ ಅನರ್ಹ ಶಾಸಕರ ಭವಿಷ್ಯ ನಿಂತಿದೆ. ಅನರ್ಹರನ್ನು ಯಾರೂ ಕ್ಷಮಿಸುವುದಿಲ್ಲ, ಕ್ಷೇತ್ರದ ಜನರು ಸಹ ಅವರನ್ನು ಕ್ಷಮಿಸುವುದಿಲ್ಲ. ಅವರ ಭವಿಷ್ಯ ಡೋಲಾಯಮಾನ ಸ್ಥಿತಿಯಲ್ಲಿದೆ, ಒಳ್ಳೆಯದಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಹಾಗೂ ಕೆ.ಹೆಚ್.ಮುನಿಯಪ್ಪ ವಾಕ್ಸಮರದ ಕುರಿತು ಮಾತನಾಡಿದ ಅವರು, ನಾನು ಕೆ.ಎಚ್.ಮುನಿಯಪ್ಪ ಸ್ನೇಹಿತರು ಎಂದು ಸಿದ್ದರಾಮಯ್ಯನವರೇ ಹೇಳಿದ್ದಾರೆ. ಪಕ್ಷದ ಬಗ್ಗೆ ಇಬ್ಬರೂ ಚರ್ಚೆ ಮಾಡಿದ್ದಾರೆ. ಒಬ್ಬರಿಗೊಬ್ಬರು ಸಮಜಾಯಿಷಿ ನೀಡಿದ್ದಾರೆ. ಚರ್ಚೆ ಮಾಡಿದ್ದನ್ನೇ ಭಿನ್ನಾಭಿಪ್ರಾಯ ಎಂದು ತೋರಿಸಬಾರದು. ಇದು ಪಕ್ಷದ ಆಂತರಿಕ ವಿಚಾರ ಎಂದು ಸ್ಪಷ್ಟಪಡಿಸಿದರು.
ರಾಯಚೂರು: ಸಿಎಂ ಯಡಿಯೂರಪ್ಪ ತಂತಿ ಮೇಲೆ ಯಾಕೆ ನಡೆಯಬೇಕು. ರಾಜಿನಾಮೆ ಕೊಟ್ಟು ಸಿಎಂ ಸ್ಥಾನದಿಂದ ಕೆಳಗೆ ಇಳಿಯಲಿ. ತಂತಿ ಮೇಲೆ ನಡೆದು ಬಿದ್ದುಬಿಟ್ಟಾರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ವೀಕ್ ಚೀಫ್‍ಮಿನಿಸ್ಟರ್, ಯಡಿಯೂರಪ್ಪ ಅವರಿಗೆ ಪಕ್ಷದವರೇ ತುಂಬಾ ತೊಂದರೆ ಕೊಡುತ್ತಿದ್ದಾರೆ. ಅವರು ರೆಕ್ಕೆ ಪುಕ್ಕಗಳು ಕಟ್ ಮಾಡಿದ್ದಾರೆ. ಅಮಿತ್ ಶಾ, ಮೋದಿ ಬಳಿ ಯಡಿಯೂರಪ್ಪಗೆ ಮಾತನಾಡುವ ಶಕ್ತಿಯಿಲ್ಲ. ನೆರೆ ಪ್ರವಾಹ ಪರಿಹಾರ ಕೇಂದ್ರದಲ್ಲಿ ಕೇಳಲು ಧೈರ್ಯವಿಲ್ಲ. ಬಿಜೆಪಿಗೆ 103 ಸೀಟ್‍ಗಳು ಇವೆ. ಹೀಗಾಗಿ ಬಿಜೆಪಿ ಸರ್ಕಾರ ಪತನವಾಗುತ್ತೆ. ನಮ್ಮ ಶಾಸಕರಿಗೆ ಆಸೆ ತೋರಿಸಿ ಅಧಿಕಾರಕ್ಕೆ ಬಂದಿದ್ದಾರೆ. ಮಧ್ಯಂತರ ಚುನಾವಣೆ ಬರುತ್ತೆ ಆದರೆ ಜೆಡಿಎಸ್ ಬಿಜೆಪಿ ಜೊತೆಗೆ ಹೋಗುವುದಿಲ್ಲ ಎಂದು ಮಾತಿನ ಚಾಟಿ ಬೀಸಿದ್ದಾರೆ. ಇದನ್ನೂ ಓದಿ:ಬಿಜೆಪಿಯಲ್ಲಿ ಪ್ರಾಬಲ್ಯ ಸಾಧಿಸಿದ್ರಾ ನಳಿನ್ ಕುಮಾರ್ ಕಟೀಲ್?
ಈ ಸರ್ಕಾರಕ್ಕೆ ಕಣ್ಣು, ಕಿವಿ, ಮೂಗು ಏನು ಇಲ್ಲ. 2.5 ಲಕ್ಷ ಮನೆಗಳು ನೆರೆಯಿಂದ ಬಿದ್ದಿವೆ. ಬಿಎಸ್‍ವೈ ಪರಿಹಾರ ಇವತ್ತು ಬರುತ್ತೆ, ನಾಳೆ ಬರುತ್ತೆ ಎಂದು ಹೇಳುತ್ತಿದ್ದಾರೆ. ಇಷ್ಟು ನಷ್ಟವಾಗಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರುಪಯುಕ್ತವಾಗಿವೆ. ನನ್ನ ಪ್ರಕಾರ ಅಧಿವೇಶನ ಬೆಳಗಾವಿಯಲ್ಲಿ ನಡೆಸಬೇಕಾಗಿತ್ತು. ಆದರೆ ಪ್ರವಾಹದಿಂದ ಬೆಳಗಾವಿ ಹೆಚ್ಚು ನಷ್ಟವಾಗಿದೆ. ಬಾಗಲಕೋಟೆ, ವಿಜಯಪುರ, ರಾಯಚೂರಿನಲ್ಲೂ ಬಹಳಷ್ಟು ನಷ್ಟವಾಗಿದೆ ಎಂದು ಕಿಡಿಕಾರಿದರು. ಬಳಿಕ ಸರ್ಕಾರ ಬಾಡಿಗೆ ಮನೆಗಳಲ್ಲಿ ಉಳಿದಿರುವ ಸಂತ್ರಸ್ತರಿಗೆ 5 ಸಾವಿರ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಳ್ಳಿಯಲ್ಲಿ ಬಾಡಿಗೆ ಮನೆಗಳು ಸಿಗುತ್ತವೆಯಾ ಎಂದು ಪ್ರಶ್ನಿಸಿ, ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪ ರಾಜ್ಯದ ಎಲ್ಲೆಡೆ ಬಿಜೆಪಿ ಎಂಎಲ್‍ಎ ಇದ್ದಾರೆ ಅಂದುಕೊಂಡಿದ್ದಾರೆ. ಆದರೆ ಉಪ ಚುನಾವಣೆಯಲ್ಲಿ ಆಡಳಿತ ಪಕ್ಷ ಗೆಲ್ಲಲ್ಲ. ಹೀಗಾಗಿ ಮಧ್ಯಂತರ ಚುನಾವಣೆ ಬರುತ್ತದೆ ಎಂದರು. ಹಾಗೆಯೇ ಕಾಂಗ್ರೆಸ್ ನಾಯಕರಾದ ಚಿದಂಬರಂ, ಡಿಕೆ ಶಿವಕುಮಾರ್ ಮೇಲೆ ಕಾನೂನು ಕ್ರಮ ತೆಗೆಕೊಳ್ಳಲಿ. ಆದರೆ ಜಾಮೀನನ್ನೇ ಕೊಡಲ್ಲ ಎಂದರೇನು? ಇದು ದ್ವೇಷ, ಅಮಾನವೀಯ ರಾಜಕೀಯವಾಗಿದೆ. ಇಂತಹ ರಾಜಕೀಯ ತಿರುಗುಬಾಣವಾಗುತ್ತದೆ. ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್‍ಗೆ ಹೋಗುವುದು ಒಳ್ಳೆಯದು. ಯಾಕೆಂದರೆ ಇವಿಎಂ ದುರುಪಯೋಗ ಬಗ್ಗೆ ನನಗೂ ಅನುಮಾನಗಳಿವೆ. ಬಹಳ ಜನ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ, ಆದರೂ ಚುನಾವಣಾ ಆಯೋಗ ಯಾಕೆ ಇವಿಎಂ ಬಿಡುತ್ತಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ:ಬಿಜೆಪಿಗೆ ಬೇಡವಾದ್ರಾ ಬಿಎಸ್‍ವೈ?
ಚುನಾವಣಾ ಆಯೋಗ, ಸಿಬಿಐ ಸೇರಿ ಎಲ್ಲಾ ಸಂಸ್ಥೆ ದುರ್ಬಳಕೆಯಾಗುತ್ತಿವೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಅನರ್ಹ ಶಾಸಕರಿಗೆ ಟೈಮ್ ಸಿಗಲಿ ಎಂದು ಚುನಾವಣೆ ಘೋಷಣೆಯಾಗುತ್ತಿದೆ. ಅನರ್ಹ ಶಾಸಕರ ಕ್ಷೇತ್ರಕ್ಕೆ ಹಣ ಕೊಟ್ಟಿದ್ದಾರೆ. ಅನರ್ಹ ಶಾಸಕರು ಅವರ ಕ್ಷೇತ್ರದಲ್ಲಿ ತಯಾರಿಯಾಗಲು ಅನುವು ಮಾಡಿಕೊಡಲಾಗುತ್ತಿದೆ. ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕೈಯಲ್ಲಿದೆ ಎಂದು ಕಿಡಿಕಾರಿದರು. ಬೆಳಗಾವಿ ಜಿಲ್ಲೆಯನ್ನೇ ವಿಭಜನೆ ಮಾಡಿಲ್ಲ, ಬಳ್ಳಾರಿಯನ್ನ ವಿಭಜನೆ ಬೇಕಿಲ್ಲ. ಆದರೆ ಅನಹಃ ಶಾಸಕ ಆನಂದ್ ಸಿಂಗ್ ತಮ್ಮ ರಾಜಕೀಯಕ್ಕಾಗಿ ಹೀಗೆ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.
ದಸರಾಕ್ಕೆ ನನಗೆ ಆಹ್ವಾನ ಇಲ್ಲ. ಕರೆಯದೇ ಬರುವವನಿಗೆ ಏನಂತಾರೆ? ಅದಕ್ಕೆ ನಾನು ಹೋಗಿಲ್ಲ. ನಾವು ಹಿಂದೆ ದಸರಾ ಮಾಡಿದ್ದೇವೆ. ಈಗ ಅವರು ಮಾಡುತ್ತಿದ್ದಾರೆ ಮಾಡಲಿ ಎಂದು ದಸರಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದಿರುವ ಬಗ್ಗೆ ಸ್ಪಷ್ಟನೆ ನೀಡಿದರು. ಜೊತೆಗೆ ಸೋಮಶೇಖರ್ ನನ್ನ ಅನರ್ಹ ಮಾಡಿಸಿದ್ದೆ ನಾನು ಎಂದು ಅವನು ಹೇಳುತ್ತಾನೆ. ಹೊಟ್ಟೆ ಉರಿಗೆ ಏನೇನೋ ಮಾತನಾಡುತ್ತಾನೆ. ಅದಕ್ಕೆಲ್ಲಾ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಅನರ್ಹ ಶಾಸಕ ಸೋಮಶೇಖರ್ ಹೇಳಿಕೆಗೆ ತಿರುಗೇಟು ನೀಡಿದರು. ಇದನ್ನೂ ಓದಿ:ಏಕಾಂಗಿಯಾದ ಆನಂದ್ ಸಿಂಗ್-ತಿರುಗಿಬಿದ್ದ ಬಿದ್ದ ಬಿಜೆಪಿ ಶಾಸಕರು!
ಸಿಎಂ ಹೇಳಿದ್ದೇನು?
ನಾನು ಒಂದು ರೀತಿ ತಂತಿ ಮೇಲೆ ನಡೆಯುತ್ತಿದ್ದೇನೆ, ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕಾದಲ್ಲಿ ಹತ್ತಾರು ಸಲ ವಿಚಾರ ಮಾಡಬೇಕಾಗಿದೆ. ನಿರ್ಧಾರ ತೆಗೆದುಕೊಳ್ಳುವಾಗ ಅದು ಬೇರೆ ಸಮಾಜದ ಮೇಲೆ ಹೇಗೆ ಪರಿಣಾಮ ಎನಾಗುತ್ತದೆ ಎಂಬುದನ್ನೂ ಚಿಂತನೆ ಮಾಡಬೇಕಾಗಿದೆ ಎಂದು ದಾವಣಗೆರೆಯಲ್ಲಿ ಭಾನುವಾರ ಯಡಿಯೂರಪ್ಪ ಭಾವನಾತ್ಮಕವಾಗಿ ಹೇಳಿಕೆ ನೀಡಿದ್ದರು.
ಚಿಕ್ಕಬಳ್ಳಾಪುರ: ಅನರ್ಹ ಶಾಸಕರು ಬಿಜೆಪಿ ಸೇರ್ಪಡೆ ಆಗಬೇಕು ಎನ್ನುವುದು ನಮ್ಮ ಉದ್ದೇಶ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಹೇಳಿದ್ದಾರೆ.
ತಾಲೂಕಿನ ಮುದ್ದೇನಹಳ್ಳಿಯಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕರು ಇನ್ನೂ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ. ಅವರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತ. ಇನ್ನು ಯಾರೂ ನಮ್ಮ ಪಕ್ಷಕ್ಕೆ ಸೇರ್ಪಡೆ ಆಗಿಲ್ಲ. ಮುಂಬರುವ ಉಪ ಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲೂ ನಾವೇ ಗೆಲ್ಲುವುದು ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ವಿಜಯನಗರ ಪ್ರತ್ಯೇಕ ಜಿಲ್ಲೆ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲರೂ ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳು ಚರ್ಚಿಸಿ ಒಳ್ಳೆಯ ನಿಲುವು ತೆಗೆದುಕೊಳ್ಳಲಿದ್ದಾರೆ. ಒಳ್ಳೆಯ ಕಾರ್ಯಗಳು ಆಗಬೇಕಿದೆ, ಹೀಗಾಗಿ ಪ್ರತ್ಯೇಕ ಜಿಲ್ಲೆ ಆ ಭಾಗದ ಜನರ ಬೇಡಿಕೆಯಾಗಿದೆ. ಜನರ ಬೇಡಿಕೆ ಈಡೇರಿಸುವುದು ಸರ್ಕಾರದ ಕರ್ತವ್ಯ ಎಂದರು.
ಮುಖ್ಯಮಂತ್ರಿಗಳ ನಿಲುವಿನಂತೆ ಅನುಷ್ಠಾನ ಮಾಡುವ ಕೆಲಸವನ್ನು ನಾವು ಮಾಡುತ್ತೇವೆ. ವಿಜಯನಗರ ಇತಿಹಾಸ ಪ್ರಸಿದ್ಧ ಸ್ಥಳ, ವಿಜಯನಗರ ಸಾಮ್ರಾಜ್ಯ ನಮ್ಮ ಹೆಮ್ಮೆ. ವಿಜಯನಗರ ಒಂದು ಜಿಲ್ಲೆಯಾಗಿ ಬೆಳೆಯಲು ಎಲ್ಲರೂ ಮುಖ್ಯಮಂತ್ರಿಗಳ ನಿರ್ಧಾರವನ್ನು ಸ್ವಾಗತಿಸಬೇಕು. ವಿಜಯನಗರ ಜಿಲ್ಲೆಯಾಗಿ ಮಾಡಲು ತಯಾರಿ ನಡೆದಿದೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯಿಂದ ನೂತನ ಬಿಬಿಎಂಪಿ ಮೇಯರ್ ಆಯ್ಕೆ ಕುರಿತು ಪ್ರತಿಕ್ರಿಯಿಸಿದ ಅವರು, ಬೆಂಗಳೂರು ಮೇಯರ್ ಆಯ್ಕೆಗೆ ಭಾರೀ ಬೇಡಿಕೆಯಿದೆ. ಬಿಬಿಎಂಪಿಯಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತವಿದ್ದರೂ ಅಧಿಕಾರ ಸಿಕ್ಕಿರಲಿಲ್ಲ. ಈಗ ಒಳ್ಳೆಯ ಅವಕಾಶಕ್ಕಾಗಿ ಎಲ್ಲರೂ ಹಾತೊರೆಯುತ್ತಿದ್ದಾರೆ. ನಾಳೆ ಸಂಜೆ ನೂತನ ಮೇಯರ್ ಆಯ್ಕೆ ಘೋಷಣೆ ಆಗುತ್ತದೆ ಎಂದು ತಿಳಿಸಿದರು.
ಚಿಕ್ಕೋಡಿ(ಬೆಳಗಾವಿ): ಅನರ್ಹ ಶಾಸಕರ ದಾರಿ ಅವರಿಗೆ ನಮ್ಮ ದಾರಿ ನಮಗೆ ಎಂದು ಹೇಳುವ ಮೂಲಕ ಬಿಜೆಪಿ ಮುಖಂಡ ಹಾಗೂ ಶಾಸಕ ಉಮೇಶ ಕತ್ತಿ ಅನರ್ಹ ಶಾಸಕರಿಗೆ ಮಾತಿನ ಮೂಲಕ ತಿವಿದಿದ್ದಾರೆ.
ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಹಿರೇಮಠದಿಂದ ಆಯೋಜಿಸಿದ್ದ ದಸರಾ ಉತ್ಸವದಲ್ಲಿ ಭಾಗಿಯಾಗಿ ಸುದ್ದಿಗಾರರೊಂದಿಗೆ ಅವರು, ಬೆಳಗಾವಿ ಜಿಲ್ಲೆಯ ಮೂವರು ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ಸಿಗುವುದಿಲ್ಲ. ಕಳೆದ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ಟಿಕೆಟ್ ಸಿಗುತ್ತದೆ. ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಅವರಿಗೂ ಟಿಕೆಟ್ ಸಿಗುವುದಿಲ್ಲ. ಕಾಗವಾಡ ಕ್ಷೇತ್ರದ ಮಾಜಿ ಶಾಸಕ ರಾಜು ಕಾಗೆಗೆ ಟಿಕೆಟ್ ಸಿಗುವುದು ಫಿಕ್ಸ್. ರಾಜು ಕಾಗೆ ಬಿಜೆಪಿ ಪಕ್ಷ ಬಿಡುವುದಿಲ್ಲ ಅವರಿಗೆ ಉಪ ಚುನಾವಣೆಯ ಟಿಕೆಟ್ ಸಿಗುವುದು ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ.
ಅನರ್ಹ ಶಾಸಕ ಶ್ರೀಮಂತ ಪಾಟೀಲ ಪರಿಸ್ಥಿತಿ ಏನು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಅವರ ದಾರಿ ಅವರಿಗೆ, ನಮ್ಮ ದಾರಿ ನಮಗೆ ಎಂದು ಉತ್ತರಿಸಿದರು.
ಒಂದೆಡೆ ಗ್ರಾಮೀಣಾಭೀವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪನವರು ಅನರ್ಹ ಶಾಸಕರು ಅಳಿಯಂದಿರಿದ್ದಂತೆ. ಬಿಜೆಪಿ ಅಧಿಕಾರಕ್ಕೆ ಬರಲು ಅವರೇ ಕಾರಣ. ಸುಪ್ರೀಂ ಕೋರ್ಟ್ ಅವಕಾಶ ನೀಡಿದಲ್ಲಿ ಉಪಚುನಾವಣೆಯಲ್ಲಿ ಅವರೇ ಸ್ಪರ್ಧಿಸುತ್ತಾರೆ. ಇಲ್ಲವಾದರೆ ಅವರು ಸೂಚಿಸಿದವರಿಗೆ ಟಿಕೆಟ್ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಆದರೆ ಬಿಜೆಪಿಯ ಕೆಲ ಶಾಸಕರು ಹಾಗೂ ಕಾರ್ಯಕರ್ತರು ಅನರ್ಹ ಶಾಸಕರು ಪಕ್ಷ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕತ್ತಿ ಸಹ ಇಂದು ಅನರ್ಹರಿಗೆ ತಿವಿದಿದ್ದಾರೆ.
ಬೀದರ್: ರಾತ್ರಿ ಒಂದು ಪೆಗ್ ಹಾಕದಿದ್ದರೆ ನಿದ್ದೆನೇ ಬರಲ್ಲ ಎಂದು ಅನರ್ಹ ಶಾಸಕರ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಲೇವಡಿ ಮಾಡಿದ್ದಾರೆ.
ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಬಿಜೆಪಿ ನಾಯಕರು ಅನರ್ಹರಿಗೆ ಕೈಕೊಟ್ಟು, ಮೋಸ ಮಾಡಿದ್ದರಿಂದ ಅನರ್ಹ ಶಾಸಕರಿಗೆ ಟೆನ್ಷನ್ ಆಗಿ ರಾತ್ರಿ ನಿದ್ದೆ ಬರುತ್ತಿಲ್ಲ. ನಮ್ಮ ಭವಿಷ್ಯ ಹಾಳಾಗಿದೆ ಎಂದು ಗೊತ್ತಾಗಿದ್ದು, ಶಾಸಕರು ಪಶ್ಚಾತ್ತಾಪ ಪಡುತ್ತಾ ಪ್ರತಿದಿನ ರಾತ್ರಿ ಒಂದು ಪೆಗ್ ಹಾಕಿ ಮಲಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಟಾಚಾರಕ್ಕೆ ಬೆಂಗಳೂರಿನಲ್ಲಿ ಅಧಿವೇಶನ ಕರೆದಿದ್ದು, ಬೆಳಗಾವಿಯಲ್ಲಿ ಈ ಅಧಿವೇಶನ ಕರೆಯಬೇಕಿತ್ತು. ಆದರೆ ಸಂತ್ರಸ್ತರ ಆಕ್ರೋಶ ಎದುರಿಸಬೇಕಾಗುತ್ತದೆ ಎಂದು ಬೆಂಗಳೂರಿನಲ್ಲಿ ಮಾಡುತ್ತಿದ್ದಾರೆ. ಬಿಜೆಪಿಗೆ ಸಂತ್ರಸ್ತರ ಕುರಿತು ಭಯವಿದೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದು, ಚುನಾವಣೆ ದಿನಾಂಕ ಘೋಷಣೆ ಮಾಡುವುದು, ಮುಂದೂಡಿಕೆ ಮಾಡುವುದನ್ನು ಮಾಡುತ್ತಿದೆ. ಉಪ ಚುನಾವಣೆಯಲ್ಲಿ 15ಕ್ಕೆ 15 ಸೀಟನ್ನೂ ನಾವು ಗೆಲ್ಲುತ್ತೇವೆ. ಬಳಿಕ ಈ ಬಿಜೆಪಿ ಸರ್ಕಾರ ಇರುವುದಿಲ್ಲ ಎಂದು ಈಶ್ವರ್ ಖಂಡ್ರೆ ಭವಿಷ್ಯ ನುಡಿದರು.
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಯೋಗ್ಯ, ಅವನು ಸರಿಯಿದ್ದಿದ್ದರೆ ನಾವೇಕೆ ಪಕ್ಷ ಬಿಡುತ್ತಿದ್ದೇವು? ಅವನು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಚೇಲಾ ಎಂದು ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಕೊಠಡಿಯಲ್ಲಿ ಸೋಮಶೇಖರ್ ದಿನೇಶ್ ಗುಂಡೂರಾವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದಿನೇಶ್ ಗುಂಡೂರಾವ್ ಸಿದ್ದರಾಮಯ್ಯ ಚೇಲಾ, ಬಕೆಟ್. ಅವನು ನಮ್ಮ ಬಗ್ಗೆ ಏನ್ ಮಾತಾಡೋದು? ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ, ರಿಜ್ವಾನ್ ಅರ್ಷಾದ್‍ದು. ಇದು ಸಿದ್ದರಾಮಯ್ಯನ ಕಾಂಗ್ರೆಸ್ಸಾ? ಓರಿಜನಲ್ ಕಾಂಗ್ರೆಸ್ಸಾ ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕಿದರು.
ದಿನೇಶ್ ಗುಂಡೂರಾವ್ ಅಯೋಗ್ಯ ಅಧ್ಯಕ್ಷ, ಅವನು ಸರಿಯಿದ್ದಿದ್ದರೆ ನಾವೇಕೆ ರಾಜೀನಾಮೆ ಕೊಡುತ್ತಿದ್ದೇವು? ಅವನು ನನ್ನ ಜೊತೆಯಲ್ಲಿ ಸದಸ್ಯ ಆಗಿದ್ದವನು. ರಮೇಶ್ ಕುಮಾರ್ ಮುನಿಯಪ್ಪನ ಸೋಲಿಸಿದರು. ಕೆ.ಎಚ್.ಮುನಿಯಪ್ಪಗೆ ಅವಮಾನ ಮಾಡಿದ್ದಾರೆ. ಅವರ ಮೇಲೆ ಏನು ಕ್ರಮ ಕೈಗೊಂಡರು? ಹರಿಪ್ರಸಾದ್, ಮುನಿಯಪ್ಪ ಹೇಳಿದ್ದು ಸರಿ ಇದೆ. ದಿನೇಶ್ ಗುಂಡೂರಾವ್ ನನ್ನ ಜೊತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆಗಿದ್ದವನು, ಅವರ ಅಪ್ಪ ಮುಖ್ಯಮಂತ್ರಿ ಆಗಿದ್ದರು ಎಂದು ಅವನು ಇಷ್ಟು ಮೇಲೆ ಬಂದ ಎಂದು ಹರಿಹಾಯ್ದರು.
ಅವನೇನು ನಮ್ಮ ಬಗ್ಗೆ ಮಾತಾಡೋದು? ಪದೇ ಪದೇ ನಮ್ಮ ಬಗ್ಗೆ ಮಾತಾಡ್ತಾನೆ. ನಮ್ಮ ತಂಟೆಗೆ ಬರೋದು ಬೇಡ. ನಿನಗೆ ಕೆಲಸ ಮಾಡಲು ಬಿಡುವಿಲ್ಲ, ಆ ಯೋಗ್ಯತೆಯಿಲ್ಲ. ನೀನೇನು ಅನರ್ಹರ ಬಗ್ಗೆ ಮಾತನಾಡುತ್ತೀಯಾ ಎಂದು ಏಕವಚನದಲ್ಲಿ ಬೈದು ಆಕ್ರೋಶ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿ ಜೊತೆ ಕರೆಯಲ್ಲಿ ಮಾತನಾಡಿದ ಸೋಮಶೇಖರ್ ಅವರು, ಅವನಿಗೆ ಕೆಪಿಸಿಸಿ ಅಧ್ಯಕ್ಷನಾಗಿ ಯಾವ ಪದವನ್ನು ಬಳಕೆ ಮಾಡಬೇಕು ಎಂಬ ಕಾಮನ್ ಸೆನ್ಸ್ ಇಲ್ಲ. ಒಬ್ಬ ಫುಟ್‍ಪಾತ್‍ನಲ್ಲಿ ಮಾತನಾಡುವ ಹಾಗೆ ಮಾತನಾಡುತ್ತಾನೆ. ನಮ್ಮ ಅನರ್ಹತೆಯ ವಿಚಾರ ಸುಪ್ರೀಂನಲ್ಲಿ ವಿಚಾರಣೆ ನಡೆಯುತ್ತಿದೆ. ಅದನ್ನ ನಾವು ನೋಡಿಕೊಳ್ಳುತ್ತೇವೆ. ಆದೆರೆ ಇವನಿಗೆ ಕೆಪಿಸಿಸಿ ಅಧ್ಯಕ್ಷನಾಗಿ ಮಾಡಲು ಸಾಕಷ್ಟು ಕೆಲಸಗಳಿವೆ. ಅದನ್ನ ಬಿಟ್ಟು ಪದೇ ಪದೇ ರಾಜಕೀಯ ವ್ಯಭಿಚಾರಿ, ದೇಶದ್ರೋಹಿಗಳು ಎಂದು ನಮ್ಮ ಬಗ್ಗೆ ಮಾತನಾಡೋದು ಸರಿಯಲ್ಲ. ಅವನ ಯೋಗ್ಯತೆಗೆ ಕಚೇರಿಯಲ್ಲಿ ಒಬ್ಬ ಅಟೆಂಡರ್ ಕೂಡ ಇವನ ಮಾತು ಕೇಳೋದಿಲ್ಲ. ಇಂಥವನು ನಮ್ಮ ಬಗ್ಗೆ ಮಾತನಾಡುತ್ತಾನೆ. ನಾವು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟಿರಲಿಲ್ಲ. ಕೇವಲ ನಮ್ಮ ಶಾಸಕ ಸ್ಥಾನಕ್ಕೆ ನಾವು ರಾಜೀನಾಮೆ ನೀಡಿದ್ದೇವು. ಆದ್ರೆ ಇವರು ಅದನ್ನೇ ತಪ್ಪಾಗಿ ಅರ್ಥೈಸಿಕೊಂಡು ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರು: ರಾಜ್ಯದಲ್ಲಿ ಅರ್ಧ ಸರ್ಕಾರವಿದ್ದು, ಪೂರ್ಣ ಸರ್ಕಾರ ಮಾಡಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೊರಟಿದ್ದಾರೆ. ಆದರೆ ಬಿಎಸ್‍ವೈರ ಈ ನಿರ್ಧಾರಕ್ಕೆ ಹೈಕಮಾಂಡ್ ಹಾಗೂ ಅನರ್ಹ ಶಾಸಕರು ಒಪ್ಪಿಗೆ ನೀಡುತ್ತಾರಾ ಎಂಬ ಅನುಮಾನ ಮೂಡಿದೆ.
ಸದ್ಯ ಸಿಎಂ ಬಿಎಸ್‍ವೈ ಅವರ ಬಳಿ 46 ಖಾತೆಗಳಲ್ಲಿ 23 ಖಾತೆಗಳಿದ್ದು, ಇದರಲ್ಲಿ ಪ್ರಮುಖ ಖಾತೆಗಳನ್ನು ಹಂಚಿಕೆ ಮಾಡಲು ಚಿಂತನೆ ನಡೆಸಿದ್ದಾರೆ. ಆ ಮೂಲಕ ರಾಜ್ಯದ ಅಭಿವೃದ್ಧಿ ಕಾರ್ಯಗಳ ವೇಗವನ್ನು ಹೆಚ್ಚಿಸುವ ಚಿಂತನೆಯನ್ನು ಬಿಎಸ್‍ವೈ ಹೊಂದಿದ್ದು, ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದರೆ 1 ವಾರದಲ್ಲೇ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ.
ಸಂಪುಟ ವಿಸ್ತರಣೆಗೆ ಇಬ್ಬರಿಂದಲೂ ಅನುಮತಿ ಸಿಗದಿದ್ದರೆ ಸಿಎಂ ಬಿಎಸ್‍ವೈ ‘ಪ್ಲಾನ್ ಬಿ’ ಕೂಡ ಸಿದ್ಧಪಡಿಸಿಕೊಂಡಿದ್ದಾರೆ. ಇದರಂತೆ ಹೈಕಮಾಂಡ್, ಅನರ್ಹ ಶಾಸಕರ ಒಪ್ಪಿಗೆ ಸಿಗದಿದ್ದರೆ ‘ಪ್ಲಾನ್ ಬಿ’ ಅಳವಡಿಕೊಳ್ಳಲು ಮುಂದಾಗಲಿದ್ದಾರೆ. ಈಗಾಗಲೇ ಸಂಪುಟ ಸಚಿವ ಖಾತೆ ಪಡೆದಿರುವ ಸಚಿವರಿಗೆ ಹೆಚ್ಚುವರಿ ಜವಾಬ್ದಾರಿಯನ್ನು ಷರತ್ತಿನ ಅನ್ವಯ ನೀಡಲು ಬಿಎಸ್‍ವೈ ‘ಪ್ಲಾನ್ ಬಿ’ ಅಡಿ ನಿರ್ಧರಿಸಿದ್ದಾರೆ. ಪ್ರಮುಖ ಖಾತೆಗಳಾದ ಜಲಸಂಪನ್ಮೂಲ, ಇಂಧನ, ಕೃಷಿ, ಬೆಂಗಳೂರು ಅಭಿವೃದ್ಧಿ ಖಾತೆಗಳು ಸಿಎಂ ಅವರ ಬಳಿಯೇ ಇದ್ದು, ಈ ಖಾತೆಗಳನ್ನು ಹೆಚ್ಚುವರಿ ಜವಾಬ್ದಾರಿಯಾಗಿ ನೀಡಲು ಸಿಎಂ ಚಿಂತನೆ ನಡೆಸಿದ್ದಾರೆ. ಅನರ್ಹ ಚುನಾವಣೆಗೆ ಸ್ಪರ್ಧೆ ಮಾಡಿ ಗೆದ್ದು ಬಂದ ಸಂದರ್ಭದಲ್ಲಿ ಖಾತೆಗಳನ್ನು ಬಿಟ್ಟು ಕೊಡುವ ಷರತ್ತಿನ ಅನ್ವಯ ‘ಪ್ಲಾನ್ ಬಿ’ ಜಾರಿ ಮಾಡಲಿದ್ದಾರೆ ಎನ್ನಲಾಗಿದೆ.
ಹೆಚ್ಚುವರಿ ಖಾತೆ ಯಾರಿಗೆ ಸಿಗುತ್ತೆ?
ಸಂಪುಟ ವಿಸ್ತರಣೆಯಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿರುವ ಸಿಎಂ ಬಿಎಸ್‍ವೈ, ಸದ್ಯ ತಮ್ಮ ಬಳಿ ಇರುವ 23 ಖಾತೆಗಳನ್ನು ಹಂಚಿಕೆ ಮಾಡಿದರೆ ಪ್ರಮುಖ ಖಾತೆಗಳ ಹೆಚ್ಚಿನ ಜವಾಬ್ದಾರಿ ಸಚಿವರಿಗೆ ಸಿಗಲಿದೆ ಎಂಬ ಅಂಶವೂ ಪ್ರಮುಖವಾಗಿದೆ. ಈಗಾಗಲೇ ಕಾನೂನು ಮತ್ತು ಸಂಸದೀಯ ವ್ಯವಹಾರ ಸೇರಿದಂತೆ ಸಣ್ಣ ನೀರಾವರಿ ಖಾತೆ ಹೊಂದಿರುವ ಸಚಿವ ಮಾಧುಸ್ವಾಮಿ ಅವರಿಗೆ ಹೆಚ್ಚುವರಿಯಾಗಿ ಕೃಷಿ ಖಾತೆ ಸಿಗುವ ಸಾಧ್ಯತೆ ಇದೆ. ಸಿ.ಸಿ.ಪಾಟೀಲ್- ಅರಣ್ಯ ಖಾತೆ, ಆರ್.ಅಶೋಕ್- ರೇಷ್ಮೆ ಖಾತೆ, ಸಹಕಾರ ಖಾತೆ, ವಿ.ಸೋಮಣ್ಣ-ನಗರಾಭಿವೃದ್ಧಿ ಖಾತೆ, ಕೆಎಸ್ ಈಶ್ವರಪ್ಪ- ಪೌರಾಡಳಿತ ಖಾತೆ, ಬಸವರಾಜ ಬೊಮ್ಮಾಯಿ- ಜಲಸಂಪನ್ಮೂಲ ಖಾತೆ, ಶ್ರೀರಾಮುಲು- ಕಾರ್ಮಿಕ ಖಾತೆ, ಲಕ್ಷ್ಮಣ ಸವದಿ- ಸಕ್ಕರೆ ಖಾತೆ, ಸುರೇಶ್ ಕುಮಾರ್- ಕೌಶಲ್ಯಾಭಿವೃದ್ಧಿ ಖಾತೆ ಹಾಗೂ ಪ್ರಭು ಚವ್ಹಾಣ್-ಯುವಜನ ಸೇವೆ ಮತ್ತು ಕ್ರೀಡೆ ಖಾತೆ ಲಭಿಸುವ ಸಾಧ್ಯತೆಗಳಿವೆ.