Tag: Disqualified MLAs

  • ಅನರ್ಹರು ನಮಗಾಗಿ ತ್ಯಾಗ ಮಾಡಿದ್ದಾರೆ, ನಂಬಿಕೆದ್ರೋಹ ಮಾಡಲ್ಲ: ಸಿಎಂ

    ಅನರ್ಹರು ನಮಗಾಗಿ ತ್ಯಾಗ ಮಾಡಿದ್ದಾರೆ, ನಂಬಿಕೆದ್ರೋಹ ಮಾಡಲ್ಲ: ಸಿಎಂ

    ಬೆಂಗಳೂರು: ಸುಪ್ರೀಂ ತೀರ್ಪಿನ ಬಳಿಕ ಇಂದು ಅನರ್ಹ ಶಾಸಕರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದು, ನೀವು ನಮಗಾಗಿ ಎಲ್ಲಾ ರೀತಿಯ ತ್ಯಾಗ ಮಾಡಿದ್ದೀರಿ, ನಿಮಗೆ ಕೊಟ್ಟ ಮಾತನ್ನು ನಾವು ಅಕ್ಷರಶಃ ಪಾಲಿಸುತ್ತೇವೆ. ಯಾವುದೇ ನಂಬಿಕೆದ್ರೋಹ, ವಿಶ್ವಾಸದ್ರೋಹ ಮಾಡಲ್ಲ ಎಂದು ಸಿಎಂ ಯಡಿಯೂರಪ್ಪ ಭರವಸೆ ಕೊಟ್ಟಿದ್ದಾರೆ.

    ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಅನರ್ಹ ಶಾಸಕರು ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಅವರು, ಇದೊಂದು ಐಹಿಹಾಸಿಕ ದಿನ. ಬಹುಶಃ ವಿಧಾನಸೌಧದ ಮೂರನೇ ಮಹಡಿಯಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಈ 17 ಮಂದಿ ಜೆಡಿಎಸ್, ಕಾಂಗ್ರೆಸ್ ಶಾಸಕರು ಕಾರಣ. ಅವರು ತಮ್ಮ ಸಚಿವ ಸ್ಥಾನ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಮಗಾಗಿ ಎಲ್ಲಾ ರೀತಿಯ ತ್ಯಾಗವನ್ನ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪಿನ ನಂತರ ಅವರೆಲ್ಲರೂ ನಮ್ಮ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ಸದಸ್ಯತ್ವವನ್ನು ಪಡೆದು ಬಿಜೆಪಿ ಸೇರಿದ್ದಾರೆ ಎಂದರು.

    ರಾಜೀನಾಮೆ ಕೊಟ್ಟು ನಮ್ಮ ಜೊತೆ ಬಂದಂತಹ ವೇದಿಕೆ ಮೇಲಿರುವ ಶಾಸಕರಿಗೆ, ಬೆಂಬಲಿಗರಿಗೆ ಸಿಎಂ ಆಗಿ ನಳಿನ್ ಕುಮಾರ್ ಅವರ ಪರವಾಗಿ ಭರವಸೆ ಕೊಡುತ್ತಿದ್ದೇನೆ. ನಾವೇನು ನಿಮಗೆ ಭರವಸೆ ಮಾತನ್ನು ಕೊಟ್ಟಿದ್ದೀವೋ ಅದನ್ನು ನಾವು ಅಕ್ಷರಶಃ ಪಾಲಿಸುತ್ತೇವೆ. ನಿಮಗೆ ನಂಬಿಕೆದ್ರೋಹ ಅಥವಾ ವಿಶ್ವಾಸದ್ರೋಹ ಮಾಡುವುದಿಲ್ಲ ಎಂದು ಹೇಳಿದರು.

    ಬಹುಶಃ ದೇಶದ ರಾಜಕಾರಣದಲ್ಲಿ ಈ ರೀತಿ 17 ಮಂದಿ ಶಾಸಕರು, ಮಂತ್ರಿಗಳು ರಾಜೀನಾಮೆ ಕೊಟ್ಟು ಹೊರಬಂದ ಉದಾಹರಣೆ ಇಲ್ಲ. ಇವರು ನಮಗಾಗಿ ಎಲ್ಲಾ ರೀತಿಯ ತ್ಯಾಗ ಮಾಡಿದ್ದಾರೆ. ಹೀಗಾಗಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಕೈ ಜೊಡಿಸಿ ಪ್ರಾರ್ಥಿಸುತ್ತೇನೆ, ಇವರ ಗೆಲುವು ನಮ್ಮ ಜವಾಬ್ದಾರಿ. ಉಪಚುನಾವಣೆಯಲ್ಲಿ ಒಟ್ಟಿಗೆ ಕೆಲಸ ಮಾಡೋಣ ಎಂದು ಕರೆ ನೀಡಿದರು.

    ಇಂದು ರಮೇಶ್ ಜಾರಕಿಹೊಳಿ, ಎಚ್. ವಿಶ್ವನಾಥ್, ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್, ಪ್ರತಾಪ್ ಗೌಡ ಪಾಟೀಲ್, ಶಿವರಾಂ ಹೆಬ್ಬಾರ್, ಬಿಸಿ ಪಾಟೀಲ್, ಆನಂದ್ ಸಿಂಗ್, ಡಾ.ಸುಧಾಕರ್, ಬೈರತಿ ಬಸವರಾಜ್, ಎಸ್‍ಟಿ ಸೋಮಶೇಖರ್, ಮುನಿರತ್ನ ಅವರು ಬಿಎಸ್‍ವೈ, ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ನಾಯಕರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಿದ್ದಾರೆ.

  • ಪ್ರಳಯ ಆದ್ರೂ ಅನರ್ಹ ಶಾಸಕರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಲ್ಲ- ಎಸ್.ಆರ್.ಪಾಟೀಲ್

    ಪ್ರಳಯ ಆದ್ರೂ ಅನರ್ಹ ಶಾಸಕರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಲ್ಲ- ಎಸ್.ಆರ್.ಪಾಟೀಲ್

    ಬಾಗಲಕೋಟೆ: ಅನರ್ಹ ಶಾಸಕರನ್ನು ಮರಳಿ ಕಾಂಗ್ರೆಸ್ಸಿಗೆ ಕರೆದುಕೊಳ್ಳುವ ಪ್ರಶ್ನೆಯೇ ಇಲ್ಲ. ನನ್ನ ವೈಯಕ್ತಿಕ, ಪಕ್ಷದ ನಾಯಕರ ಅಭಿಪ್ರಾಯವೂ ಇದೇ ಆಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

    ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗತ್ತು ಪ್ರಳಯ ಆದರೂ ಅನರ್ಹ ಶಾಸಕರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳುವುದಿಲ್ಲ. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂಬುದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಪಕ್ಷದ ನಾಯಕರ ಅಭಿಪ್ರಾಯವಾಗಿದೆ. ಜೊತೆಗೆ ನನ್ನ ವೈಯಕ್ತಿಕ ಅಭಿಪ್ರಾಯವೂ ಸಹ ಅಂತಹವರನ್ನು ಪಕ್ಷಕ್ಕೆ ಕರೆ ತರುವುದು ಸೂಕ್ತವಲ್ಲ. ಇದು ನನ್ನ ಖಡಾಖಂಡಿತ ಅಭಿಪ್ರಾಯವಾಗಿದೆ ಎಂದು ಸ್ಪಷ್ಟಪಡಿಸಿದರು.

    ರಾಜ್ಯದ ಉಪ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸುತ್ತೇವೆ. ಹೆಚ್ಚು ಸ್ಥಾನ ಗೆಲ್ಲಲು ಸಾಮೂಹಿಕ ನಾಯಕತ್ವ ಅಗತ್ಯ. ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಅವರಿಗೂ ಇದನ್ನೇ ಹೇಳಿದ್ದೇವೆ. ಸಿದ್ದರಾಮಯ್ಯ, ಡಿಕೆಶಿ ಇಬ್ಬರ ಸಂಬಂಧವೂ ಚೆನ್ನಾಗಿದೆ. ಪಕ್ಷ ಶಕ್ತಿಶಾಲಿ ಆಗಲು ಐಕ್ಯತೆಯಿಂದ ಒಂದು ಮನಸ್ಸಿನಿಂದ ಕೆಲಸ ಮಾಡಬೇಕು. ಎತ್ತು ಏರಿಗೆ, ಕೋಣ ಕೆರೆಗೆ ಎಳೆದರೆ ಪಕ್ಷಕ್ಕೆ ಒಳ್ಳೆಯದಾಗುವುದಿಲ್ಲ. ವಿಚಾರ ಭಿನ್ನ ಇರಬಹುದು. ಆದರೆ ಹೈಕಮಾಂಡ್ ತೀರ್ಮಾನದಂತೆ ಎಲ್ಲರೂ ನಡೆಯುತ್ತಾರೆ. ಪಕ್ಷದ ಹಿತದೃಷ್ಟಿಯಿಂದ ಚರ್ಚೆಗಳು ನಡೆಯುತ್ತಿವೆ. ಪಕ್ಷಕ್ಕೆ ಮಾರಕವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಸ್ಪೀಕರ್ ನೀಡಿದ್ದ ಶಿಕ್ಷೆಯನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ಶಿಕ್ಷೆಯ ಅವಧಿಯನ್ನು ಕಡಿಮೆ ಮಾಡಿದೆ ಅಷ್ಟೇ. ಜೀವಾವಧಿ ಶಿಕ್ಷೆಯನ್ನು ಕಡಿಮೆ ಮಾಡಿದೆ. ಸಾಯುವವರೆಗೂ ಜೈಲಿನಲ್ಲಿ ಇರುವ ಬದಲಿಗೆ ಅವಧಿ ಕಡಿಮೆ ಮಾಡಿದೆ. ಆದರೆ ಒಂದು ದಿನ ಜೈಲಿನಲ್ಲಿ ಇದ್ದರೂ ಅದು ಶಿಕ್ಷೆಯೇ, ಅನರ್ಹ ಶಾಸಕರಾಗಿಯೇ ಅವರು ಜನತಾ ನ್ಯಾಯಾಲಯದ ಮುಂದೆ ಹೋಗಬೇಕು ಎಂದರು.

    ಅನರ್ಹ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಕಾಂಗ್ರೆಸ್‍ಗೆ ಎಷ್ಟು ದ್ರೋಹ ಮಾಡಿದ್ದಾರೋ ಅದಕ್ಕಿಂತ ಹೆಚ್ಚು ಬಿಜೆಪಿಗೆ ದ್ರೋಹ ಮಾಡುತ್ತಾರೆ. ಇಲ್ಲಿ ಸಲ್ಲದವರು ಎಲ್ಲಿಯೂ ಸಲ್ಲುವುದಿಲ್ಲ. ಅಲ್ಲಿ ಸಲ್ಲದವರು ಕಾಂಗ್ರೆಸಿನಲ್ಲಿ ಸಲ್ಲಬಹುದು. ಕಳೆದ ಚುನಾವಣೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿಗಳು ಕಾಂಗ್ರೆಸಿಗೆ ಬಂದರೆ ಸ್ವಾಗತ. ಅವರ ಸಿಟ್ಟು ಇಮ್ಮಡಿ ಆಗಿದೆ. ಅದರಿಂದಲೆ ಅನರ್ಹ ಶಾಸಕರು ಸೋಲುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಜನ್ಮ ಜನ್ಮಕ್ಕೂ ಮರೆಯದ ತೀರ್ಪು ಕೊಡೋಣ: ಅನರ್ಹರ ವಿರುದ್ಧ ಪ್ರಕಾಶ್ ರಾಜ್ ಕಿಡಿ

    ಜನ್ಮ ಜನ್ಮಕ್ಕೂ ಮರೆಯದ ತೀರ್ಪು ಕೊಡೋಣ: ಅನರ್ಹರ ವಿರುದ್ಧ ಪ್ರಕಾಶ್ ರಾಜ್ ಕಿಡಿ

    ಬೆಂಗಳೂರು: ಜನ್ಮ ಜನ್ಮಕ್ಕೂ ಮರೆಯದ ತೀರ್ಪು ಕೊಡುವುದು ಈಗ ನಮ್ಮ ಜವಾಬ್ದಾರಿ ಎಂದು ನಟ ಪ್ರಕಾಶ್ ರಾಜ್, ಅನರ್ಹ ಶಾಸಕರ ವಿರುದ್ಧ ಕಿಡಿಕಾರಿದ್ದಾರೆ.

    ಸ್ಪೀಕರ್ ರಮೇಶ್ ಕುಮಾರ್ ಅನರ್ಹ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಎನ್.ವಿ. ರಮಣ, ನ್ಯಾ. ಸಂಜೀವ್ ಖನ್ನಾ, ನ್ಯಾ. ಕೃಷ್ಣ ಮುರಾರಿ ನೇತೃತ್ವದ ಪೀಠ ಇಂದು ಮಹತ್ವದ ಆದೇಶ ಪ್ರಕಟಿಸಿದ್ದು, ಅನರ್ಹರು ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ತೀರ್ಪಿತ್ತಿದೆ. ಹೀಗಾಗಿ 17 ಮಂದಿ ಅನರ್ಹ ಶಾಸಕರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ವಿಚಾರವಾಗಿ ಪ್ರಕಾಶ್ ರಾಜ್, ಹಾವೂ ಸಾಯ್ಬಾರ್ದು.. ಕೋಲೂ ಮುರೀಬಾರ್ದು ಎನ್ನುವ ರೀತಿ ತೀರ್ಪು ಬಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಪ್ರಕಾಶ್ ರಾಜ್, ‘ಹಾವೂ ಸಾಯ್ಬಾರ್ದು.. ಕೋಲೂ ಮುರೀಬಾರ್ದು’ ಎನ್ನುವ ತೀರ್ಪಿನ ಆಶೀರ್ವಾದ ಪಡೆದುಕೊಂಡು ‘ತೃಪ್ತ’ ಶಾಸಕರು ಕೊಂಕಣ ಸುತ್ಕೊಂಡು ಮೈಲಾರಕ್ಕೆ ಬಂದಿವೆ. ಒಳ್ಳೇದೆ ಆಯ್ತು, ಸ್ವಾಭಿಮಾನಿ ಕನ್ನಡಿಗರೇ ಇವುಗಳು ಜನ್ಮ ಜನ್ಮಕ್ಕೂ ಮರೆಯದೆ ಇರುವ ತೀರ್ಪು ಕೊಡುವುದು ಈಗ ನಮ್ಮ ಜವಾಬ್ದಾರಿ ಎಂದು ಬರೆದುಕೊಂಡಿದ್ದಾರೆ.

    ಸುಪ್ರೀಂಕೋರ್ಟ್ ನಲ್ಲಿ ಗೆದ್ದು ಬೀಗುತ್ತಿರುವ ಅನರ್ಹ ಶಾಸಕರನ್ನು ಉಪ ಚುನಾವಣೆಯಲ್ಲಿ ಸೋಲಿಸಬೇಕು. ಈ ಮೂಲಕ ಅವರಿಗೆ ತಕ್ಕ ಪಾಠವನ್ನು ಕಲಿಸಬೇಕು ಎಂದು ಪ್ರಕಾಶ್ ರಾಜ್ ಮತದಾರರಿಗೆ ಮನವಿ ಮಾಡಿಕೊಂಡಿದ್ದಾರೆ.

    17 ಮಂದಿ ಶಾಸಕರನ್ನು ಅನರ್ಹ ಮಾಡಿದ ಸ್ಪೀಕರ್ ನಿರ್ಧಾರ ಸರಿ. ಆದರೆ ವಿಧಾನಸಭೆ ಮುಗಿಯುವರೆಗೆ ಅನರ್ಹ ಮಾಡಿದ ಸ್ಪೀಕರ್ ನಿರ್ಧಾರ ಸರಿಯಲ್ಲ. ಹೀಗಾಗಿ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಬಹುದು. ಆದರೆ ಚುನಾವಣೆಗೆ ಆಯ್ಕೆಯಾಗದ ಹೊರತು ಸರ್ಕಾರದಲ್ಲಿ ಯಾವುದೇ ಅಧಿಕಾರ ಹೊಂದುವಂತಿಲ್ಲ. ಸ್ಪೀಕರ್ ಅವರಿಗೆ ಅನರ್ಹತೆ ಮಾಡಲು ಮಾತ್ರ ಅಧಿಕಾರ ಇರುತ್ತದೆ ಹೊರತು ನಿರ್ಧಿಷ್ಟ ಸಮಯದವರೆಗೆ ಅನರ್ಹ ಮಾಡಲು ಅವಕಾಶ ಇಲ್ಲ ಎಂದು ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

    ಅನರ್ಹತೆಯಾದರೂ ಉಪಚುನಾವಣೆಗೆ ಸ್ಪರ್ಧಿಸಬಹುದು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಅನರ್ಹ ಶಾಸಕರು ಡಿಸೆಂಬರ್ 5ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತೇವೆ ಎಂದು ಕೆಲವರು ಸ್ಪಷ್ಟಪಡಿಸಿದ್ದಾರೆ.

    ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೆರೂರು, ರಾಣಿಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆಆರ್ ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆಆರ್ ಪೇಟೆ, ಹುಣಸೂರು ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಮತದಾನ ನಡೆಯಲಿದೆ.

  • ಯಡಿಯೂರಪ್ಪ ಸರ್ಕಾರ ಮೂರೂವರೆ ವರ್ಷ ಸೇಫ್- ಎಚ್‍ಡಿಡಿ ಭವಿಷ್ಯ

    ಯಡಿಯೂರಪ್ಪ ಸರ್ಕಾರ ಮೂರೂವರೆ ವರ್ಷ ಸೇಫ್- ಎಚ್‍ಡಿಡಿ ಭವಿಷ್ಯ

    ಬೆಂಗಳೂರು: ತೀರ್ಪಿನಿಂದ ಯಡಿಯೂರಪ್ಪಗೆ ಯಾವುದೇ ಆತಂಕ ಇಲ್ಲ. ಯಡಿಯೂರಪ್ಪ ಮೂರೂವರೆ ವರ್ಷ ಸೇಫ್ ಆಗಿರುತ್ತಾರೆ ಎಂದು ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ಹಳೆಯ ಸ್ಪೀಕರ್ ಸಿದ್ದರಾಮಯ್ಯಗೆ ಅಭಿನಂದನೆ ಸಲ್ಲಿಸುತ್ತಾರೆ. ಇದರರ್ಥ ಏನೂ ನನಗೆ ಗೊತ್ತಿಲ್ಲ. ಅದರ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ ಎಂದು ಹೇಳುವ ಮೂಲಕ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗೆ ಎಚ್‍ಡಿಡಿ ತಿವಿದರು.

    ನಾವು ಮತ್ತೆ ಕಾಂಗ್ರೆಸ್ ಜೊತೆ ದೋಸ್ತಿ ಮಾಡುವುದಿಲ್ಲ. ಉಳಿದ ಮೂರೂವರೆ ವರ್ಷ ಪಕ್ಷ ಸಂಘಟನೆ ಮಾಡುತ್ತೇವೆ. ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಕುಮಾರಸ್ವಾಮಿ ಮಾತನಾಡುತ್ತಾರೆ. 17 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತೇವೆ ಎಂದು ಕುಮಾರಸ್ವಾಮಿಯವರೇ ಹೇಳಿದ್ದಾರೆ. ಅದರ ಬಗ್ಗೆ ಎಚ್‍ಡಿಕೆ ತೀರ್ಮಾನ ಮಾಡುತ್ತಾರೆ. ಆದರೆ 17 ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ನಿಶ್ಚಿತ ಎಂದು ದೇವೇಗೌಡರು ಹೇಳಿದರು.

    ಉಪ ಚುನಾವಣೆಯಲ್ಲಿ 17 ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳೇ ಗೆದ್ದರೂ ಅವರಿಗೆ ಸಚಿವರನ್ನಾಗಿ ಮಾಡುವ ಹಾಗಿಲ್ಲ, ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಕೊಡುವ ಹಾಗಿಲ್ಲ, ಕೇವಲ ಶಾಸಕರಾಗಿ ಇರಬಹುದು. ಆಗ ಮೂಲ ಬಿಜೆಪಿಗರನ್ನೇ 27 ಜನರನ್ನು ಮಂತ್ರಿಗಳನ್ನಾಗಿ ಮಾಡಬಹುದು. 104 ಶಾಸಕರಲ್ಲಿ 50 ಜನರನ್ನು ನಿಗಮ ಮಂಡಳಿಗಳ ಅಧ್ಯಕ್ಷರನ್ನಾಗಿ ಮಾಡಬಹುದು. ಹೀಗಾಗಿ ಯಡಿಯೂರಪ್ಪನವರು ಮೂರು ವರ್ಷ ಸೇಫ್ ಆಗಿ ಆಡಳಿತ ನಡೆಸಬಹುದು ಎಂದು ವಿವರಿಸಿದರು.

    ಸುಪ್ರೀಂ ಆದೇಶದಲ್ಲಿ ಏನಿದೆ?
    ಶಾಸಕರನ್ನು ಅನರ್ಹ ಮಾಡಿದ ಸ್ಪೀಕರ್ ನಿರ್ಧಾರ ಸರಿಯಿದೆ. ಆದರೆ ವಿಧಾನಸಭೆಯ ಅವಧಿ ಮುಗಿಯುವವರೆಗೂ ಅನರ್ಹತೆ ಮಾಡಲು ಸಾಧ್ಯವಿಲ್ಲ. ಅನರ್ಹತೆಯಾದ ಪರಿಣಾಮ ಈಗ ಅವರು ಯಾವುದೇ ಸಾಂವಿಧಾನಿಕ ಹುದ್ದೆಯನ್ನು ಪಡೆಯುವ ಅರ್ಹತೆ ಹೊಂದಿಲ್ಲ. ಈ ಅನರ್ಹರು ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಕೋರ್ಟ್ ತೀರ್ಪು ನೀಡಿದೆ.

    ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೆರೂರು, ರಾಣಿಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆಆರ್ ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆಆರ್ ಪೇಟೆ, ಹುಣಸೂರು ಕ್ಷೇತ್ರಗಳಿಗೆ ಡಿ.5 ರಂದು ಮತದಾನ ನಡೆಯಲಿದ್ದು ಡಿ.9 ಸೋಮವಾರದಂದು ಫಲಿತಾಂಶ ಪ್ರಕಟವಾಗಲಿದೆ. ತೆರವಾದ ಕ್ಷೇತ್ರಗಳಿಗೆ 6 ತಿಂಗಳ ಒಳಗಡೆ ಚುನಾವಣೆ ನಡೆಸಬೇಕಾಗುತ್ತದೆ.

  • ಅನರ್ಹರಿಗೆ ಅನ್ಯಾಯವಾಗಲು ಬಿಡಲ್ಲ, ಎಲ್ಲರಿಗೂ ಟಿಕೆಟ್ ಸಿಗುತ್ತೆ- ಆರ್.ಅಶೋಕ್ ಭರವಸೆ

    ಅನರ್ಹರಿಗೆ ಅನ್ಯಾಯವಾಗಲು ಬಿಡಲ್ಲ, ಎಲ್ಲರಿಗೂ ಟಿಕೆಟ್ ಸಿಗುತ್ತೆ- ಆರ್.ಅಶೋಕ್ ಭರವಸೆ

    ಬೆಂಗಳೂರು: ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಅನರ್ಹರು ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ. ಇನ್ನೊಂದೆಡೆ ಬಿಜೆಪಿ ನಾಯಕರು ಸಹ ಇದಕ್ಕೆ ಪೂರಕವಾದ ಹೇಳಿಕೆಯನ್ನು ನೀಡುತ್ತಿದ್ದಾರೆ.

    ಈ ಕುರಿತು ಕಂದಾಯ ಸಚಿವ ಆರ್.ಅಶೋಕ್ ಪ್ರತಿಕ್ರಿಯಿಸಿ, ಅನರ್ಹ ಶಾಸಕರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಎಲ್ಲರಿಗೂ ಟಿಕೆಟ್ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

    ಅನರ್ಹ ಶಾಸಕರ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದ ನಿರಾಳರಾಗಿದ್ದೇವೆ. ಅನರ್ಹರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ. ಎಲ್ಲರಿಗೂ ಟಿಕೆಟ್ ನೀಡಲಾಗುವುದು. ಮತ್ತೆ ಶಾಸಕರಾಗಿ ಆಯ್ಕೆಯಾಗಲು ಯಾವ ಅಡೆತಡೆಯೂ ಇಲ್ಲ. ಈಗ ಅವರಿಗೆ ಮಂತ್ರಿಯಾಗಲು ಅವಕಾಶ ಇಲ್ಲ. ಅದಕ್ಕಿಂತ ಮುಖ್ಯವಾಗಿ ಈಗ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಸುಪ್ರೀಂ ಕೋರ್ಟ್ ಅವಕಾಶ ಕೊಟ್ಟಿದೆ ಎಂದರು.

    ಮಾತನಾಡಿರುವುದರ ಪ್ರಕಾರವೇ ನಡೆದುಕೊಳ್ಳುತ್ತೇವೆ. ನಮಗೆ ಸಹಾಯ ಮಾಡಿದವರನ್ನು ನಾವು ಕೈಬಿಡುವದಿಲ್ಲ. ಅನರ್ಹರು ಬಿಜೆಪಿ ಅಭ್ಯರ್ಥಿಗಳಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾವು ಅನರ್ಹ ಶಾಸಕರ ಪರವಾಗಿದ್ದೇವೆ ಎಂದು ಭರವಸೆ ನೀಡಿದರು.

    ಸಂಜೆ ಕೋರ್ ಕಮಿಟಿ ಸಭೆ ಇದೆ, ಯಾರ್ಯಾರು ಎಲ್ಲೆಲ್ಲಿ ಅಭ್ಯರ್ಥಿಗಳಾಗಬೇಕು ಎಂಬುದು ನಿರ್ಧಾರವಾಗಲಿದೆ. ಯಡಿಯೂರಪ್ಪನವರ ಸರ್ಕಾರ ಇರಬೇಕು ಎಂಬುದು ಎಲ್ಲರ ಬಯಕೆಯಾಗಿದೆ. ಕಾಂಗ್ರೆಸ್‍ನಲ್ಲಿಯೂ ಸಹ ಭಿನ್ನಮತ ಸ್ಫೋಟವಾಗಿದೆ. ಜೆಡಿಎಸ್ ಇನ್ನೂ ಚುನಾವಣೆ ತಯಾರಿ ನಡೆಸಿಲ್ಲ. ವಿರೋಧ ಪಕ್ಷಗಳಲ್ಲಿ ಗೊಂದಲವಿದೆ. ಹೀಗಾಗಿ ಉಪಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಶರತ್ ವಿರುದ್ಧ ಗರಂ!
    ನಮ್ಮ ಪಕ್ಷದವರು ಯಾರೇ ಆಗಲಿ ಅನರ್ಹ ಶಾಸಕರು ಸ್ಪರ್ಧಿಸುವುದನ್ನು ತಡೆಯುವುದಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಅನರ್ಹರಿಗೆ ಮೋಸವಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಶರತ್ ಇದನ್ನೆಲ್ಲ ಅರ್ಥ ಮಾಡಿಕೊಳ್ಳುತ್ತಾರೆ. ನಾನೂ ಸಹ ಈ ಕುರಿತು ಅವರ ಬಳಿ ಮಾತನಾಡುತ್ತೇನೆ. ಅಭ್ಯರ್ಥಿ ಘೋಷಣೆಗೂ ಮೊದಲು ಇಂತಹ ಗೊಂದಲಗಳು ಸಹಜ. ಆದರೆ ಪಕ್ಷ ಒಂದು ಬಾರಿ ಅಭ್ಯರ್ಥಿಗಳನ್ನು ಘೋಷಿಸಿದರೆ ಯಾರೂ ಅದರ ವಿರುದ್ಧ ಮಾತನಾಡಬಾರದು. ಈ ರೀತಿಯ ಕೆಲಸಕ್ಕೆ ಅವಕಾಶ ನೀಡುವುದಿಲ್ಲ ಎಂದು ನಾನು ನಂಬಿದ್ದೇನೆ ಎಂದರು.

  • ಬೇರೆ ಪಕ್ಷಕ್ಕೆ ಹೋಗುವವರಿಗೆ ಇದೊಂದು ಪಾಠ – ಸಿದ್ದರಾಮಯ್ಯ

    ಬೇರೆ ಪಕ್ಷಕ್ಕೆ ಹೋಗುವವರಿಗೆ ಇದೊಂದು ಪಾಠ – ಸಿದ್ದರಾಮಯ್ಯ

    ಬೆಂಗಳೂರು: ಅನರ್ಹ ಶಾಸಕರ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ನಾನು ಸ್ವಾಗತಿಸುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಪ್ರೀಂ ಕೋರ್ಟಿನ ತೀರ್ಪನ್ನು ಸ್ವಾಗತಿಸುತ್ತೇನೆ. ರಮೇಶ್ ಕುಮಾರ್ ಅವರ ಆದೇಶವನ್ನು ಕೋರ್ಟ್ ಭಾಗಶಃ ಎತ್ತಿಹಿಡಿದಿದೆ. ಕಾಂಗ್ರೆಸ್ಸಿನ 14 ಶಾಸಕರು ಹಾಗೂ ಜೆಡಿಎಸ್‍ನ 3 ಶಾಸಕರು ರಾಜೀನಾಮೆ ನೀಡಿ, ವಿಪ್ ಉಲ್ಲಂಘಿಸಿದ್ದರು. ಆಗ ನಾನು ಮತ್ತು ದಿನೇಶ್ ಗುಂಡುರಾವ್ ಅವರು ಸ್ಪೀಕರ್ ಮುಂದೆ ಅರ್ಜಿ ಸಲ್ಲಿಸಿದ್ದೇವು. ಅದರ ಆಧಾರದ ಮೇಲೆ ಸ್ಪೀಕರ್ ಕುಲಂಕುಶವಾಗಿ ವಿಚಾರಣೆ ನಡೆಸಿ ರಾಜೀನಾಮೆ ಕೊಟ್ಟ ಶಾಸಕರು ಅನರ್ಹರು ಎಂದು ಆದೇಶ ಹೊರಡಿಸಿದ್ದರು. ಅದರಲ್ಲಿ ಎರಡು ಭಾಗಗಳಿವೆ. ಒಂದು ಭಾಗ ಪಕ್ಷಾಂತರ ಮಾಡಿದ್ದಾರೆ ಎಂದು ಹಾಗೂ ಇನ್ನೊಂದು ಭಾಗ 15ನೇ ವಿಧಾನಸಭಾ ಅವಧಿ ಮುಗಿಯುವವರೆಗೂ ಉಪಚುನಾವಣೆಗೆ ನಿಲ್ಲಬಾರದು ಎಂದು ಆದೇಶಿಸಿದ್ದರು. ಇದನ್ನೂ ಓದಿ:ಸಿದ್ದರಾಮಯ್ಯ, ಸ್ಪೀಕರ್ ಷಡ್ಯಂತ್ರಕ್ಕೆ ಸುಪ್ರೀಂ ತಕ್ಕ ತೀರ್ಪು ಕೊಟ್ಟಿದೆ: ಸಿಎಂ ಬಿಎಸ್‍ವೈ

    ಪ್ರಜಾಪ್ರಭುತ್ವದಲ್ಲಿ ಹಾಗೂ 10ನೇ ಶೆಡ್ಯೂಲ್‍ನಲ್ಲಿ ಒಂದು ಪಕ್ಷದಿಂದ ಗೆದ್ದವರು ರಾಜೀನಾಮೆ ಕೊಡಬಾರದು ಎಂದೇನಿಲ್ಲ. ಆದರೆ ಸ್ವಯಂ ಪ್ರೇರಣೆಯಿಂದ ಹಾಗೂ ಯಾವುದೇ ಬಾಹ್ಯ ಒತ್ತಡಗಳಿಲ್ಲದೆ ಹೋದರೆ ರಾಜೀನಾಮೆ ನೀಡಬಹುದು. ಹಾಗಿಲ್ಲದಿದ್ದರೆ ರಾಜೀನಾಮೆಯನ್ನು ಪರಿಗಣಿಸಲು ಆಗುವುದಿಲ್ಲ. ಒಂದು ಪಕ್ಷದಿಂದ ಆಯ್ಕೆಯಾದ ಮೇಲೆ ಅವರು ಮನಸೋಯಿಚ್ಛೆ ನಡೆಕೊಳ್ಳುವಂತಿಲ್ಲ. ಹೀಗಾಗಿ ಸುಪ್ರೀಂ ಕೋರ್ಟಿನಲ್ಲಿ ನೈತಿಕತೆ ಬಗ್ಗೆಯೂ ವಿಚಾರಣೆ ನಡೆದಿದೆ. ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗುವುದು ಅನೈತಿಕತೆ ಎನ್ನುವುದು ಸುಪ್ರೀಂ ನಿಲುವಾಗಿದೆ. ಇದು ಅನೈತಿಕವಾದದ್ದು, ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು, ಅಸಂವಿಧಾನಾತ್ಮಕವಾದದ್ದು, ಮತದಾದರ ನಂಬಿಕೆ ದ್ರೋಹ ಮಾಡಿದಂತೆ, ಇದು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗುವ ಎಂಎಲ್‍ಎಗಳಿಗೆ ಪಾಠವಾಗಿದೆ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನ ಮೂಲಕ ಹೇಳಿದೆ ಎಂದು ಅಭಿಪ್ರಾಯ ತಿಳಿಸಿದರು. ಇದನ್ನೂ ಓದಿ:ಭಾಗಶ: ತೃಪ್ತಿ, ಅನರ್ಹತೆ ಎನ್ನುವುದೇ ಒಂದು ಕಳಂಕ – ರಮೇಶ್ ಕುಮಾರ್

    ಅನರ್ಹರು ಉಪಚುನಾವಣೆಗೆ ನಿಲ್ಲಬಹುದು ಎಂದು ಸುಪ್ರೀಂ ಹೇಳಿದೆ ಅದನ್ನು ನಾನು ಸ್ವಾಗತಿಸುತ್ತೇನೆ. ಕೋರ್ಟಿನ ಸಂಪೂರ್ಣ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಆದರೆ ಪಕ್ಷಾಂತರ ಮಾಡಿದನ್ನು ಕೋರ್ಟ್ ಒಪ್ಪಿಲ್ಲ. ಬದಲಿಗೆ ಸ್ಪೀಕರ್ ಆದೇಶ ಸರಿಯಂದಿದೆ. ಯಾರೆಲ್ಲಾ ಬೇರೆ ಪಕ್ಷಕ್ಕೆ ಹೋಗಲು ಮುಂದಾಗುತ್ತಾರೋ ಅವರಿಗೂ ಇದು ಪಾಠವಾಗಲಿದೆ ಎಂದು ಹೇಳಿದ್ದಾರೆ. ಉಪಚುನಾವಣೆಯಲ್ಲಿ ನಿಂತರೂ ಜನರು ಅನರ್ಹ ಶಾಸಕರನ್ನ ಸೋಲಿಸುತ್ತಾರೆ. ಅದಕ್ಕೆ ಗುಜರಾತ್ ಹಾಗೂ ಮಹಾರಾಷ್ಟ್ರ ಉದಾಹರಣೆ. ಈ ರಾಜ್ಯಗಳಲ್ಲಿ ಪಕ್ಷಾಂತರ ಮಾಡಿದವರು ಬಹುತೇಕ ಸೋತಿದ್ದಾರೆ ಎಂದು ತಿಳಿಸಿ ಅನರ್ಹರಿಗೆ ಟಾಂಗ್ ಕೊಟ್ಟರು.

  • ಬಿಜೆಪಿ ಸರ್ಕಾರ ಅಕ್ರಮ ಸರ್ಕಾರ ಎಂಬುದು ಸಾಬೀತಾಗಿದೆ: ದಿನೇಶ್ ಗುಂಡೂರಾವ್

    ಬಿಜೆಪಿ ಸರ್ಕಾರ ಅಕ್ರಮ ಸರ್ಕಾರ ಎಂಬುದು ಸಾಬೀತಾಗಿದೆ: ದಿನೇಶ್ ಗುಂಡೂರಾವ್

    ಬೆಂಗಳೂರು: ಅನರ್ಹ ಶಾಸಕರ ಪ್ರಕರಣದ ತೀರ್ಪು ಹೊರ ಬೀಳುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಿಜೆಪಿ ವಿರುದ್ಧ ಗುಡುಗಿದ್ದಾರೆ. ಬಿಜೆಪಿ ಸರ್ಕಾರ ಅಕ್ರಮ ಸರ್ಕಾರ ಎಂಬುದು ಸಾಬೀತಾಗಿದೆ. ಅದನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಈ ಕುರಿತು ಟ್ಟೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷರು, ಕಾಂಗ್ರೆಸ್ ಮತ್ತು ಜೆಡಿಎಸ್‍ನಿಂದ ಪಕ್ಷಾಂತರಗೊಂಡ ಎಲ್ಲ 17 ಶಾಸಕರ ಅನರ್ಹತೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಕರ್ನಾಟಕ ಬಿಜೆಪಿ ಸರ್ಕಾರ ಅಕ್ರಮ ಸರ್ಕಾರ ಎಂಬುದನ್ನು ಇದು ಸಾಬೀತುಪಡಿಸುತ್ತದೆ. ಬಹುಮತವನ್ನು ರೂಪಿಸಲು ಬಿಜೆಪಿ ಅಸಂವಿಧಾನಿಕ ವಿಧಾನಗಳನ್ನು ಬಳಸಿಕೊಂಡಿದೆ. ಬಿಜೆಪಿ ಸರ್ಕಾರವನ್ನು ತಕ್ಷಣ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಎರಡು ದಿನಗಳಲ್ಲಿ ಅನರ್ಹರು ಬಿಜೆಪಿಗೆ ಸೇರ್ಪಡೆ

    ಅನರ್ಹ ಶಾಸಕರ ಪ್ರಕರಣದ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಮೈತ್ರಿ ಸರ್ಕಾರ ಬೀಳಿಸುವಲ್ಲಿ ಬಿಜೆಪಿ ಕೈವಾಡ ಈಗ ಸ್ಪಷ್ಟವಾಗಿದೆ. ಇದರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಭಾಗಿಯಾಗಿರುವುದು ಸ್ಪಷ್ಟವಾಗಿದೆ. ಬಿಜೆಪಿಗೆ ನೈತಿಕತೆ ಇದ್ದರೆ ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬಾರದು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಮ್ಮ ರಾಜಕೀಯ ಭವಿಷ್ಯ ಮುಗಿಯುತ್ತೆ ಎಂದವರಿಗೆ ಸುಪ್ರೀಂ ಆದೇಶವೇ ತಕ್ಕ ಉತ್ತರ – ವಿಶ್ವನಾಥ್

    ಸುಪ್ರೀಂ ಕೋರ್ಟಿನಿಂದ ಇಂದು ತೀರ್ಪು ಹೊರಬಿದ್ದಿದ್ದು, 17 ಮಂದಿ ಅನರ್ಹ ಶಾಸಕರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸ್ಪೀಕರ್ ರಮೇಶ್ ಕುಮಾರ್ ಅನರ್ಹ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಎನ್.ವಿ. ರಮಣ, ನ್ಯಾ. ಸಂಜೀವ್ ಖನ್ನಾ, ನ್ಯಾ. ಕೃಷ್ಣ ಮುರಾರಿ ನೇತೃತ್ವದ ಪೀಠ ಇಂದು ಮಹತ್ವದ ಆದೇಶ ಪ್ರಕಟಿಸಿದ್ದು, ಅನರ್ಹರು ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ತೀರ್ಪಿತ್ತಿದೆ.

    17 ಮಂದಿ ಶಾಸಕರನ್ನು ಅನರ್ಹ ಮಾಡಿದ ಸ್ಪೀಕರ್ ನಿರ್ಧಾರ ಸರಿ. ಆದರೆ ವಿಧಾನಸಭೆ ಮುಗಿಯುವವರೆಗೆ ಅನರ್ಹ ಮಾಡಿದ ಸ್ಪೀಕರ್ ನಿರ್ಧಾರ ಸರಿಯಲ್ಲ. ಹೀಗಾಗಿ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಬಹುದು ಎಂದು ತೀರ್ಪು ನೀಡಿದೆ.

    ಈ ವಿಚಾರವಾಗಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸುಪ್ರೀಂಕೋರ್ಟ್ ತೀರ್ಪಿನಿಂದ ನನಗೆ ಭಾಗಶಃ ಸಂತೋಷವಾಗಿದೆ. ನನ್ನ ಅಭಿಪ್ರಾಯವನ್ನು ಮಾನ್ಯ ಮಾಡಿದ್ದು ತೃಪ್ತಿ ತಂದಿದೆ. ಮೇಲ್ಮನವಿ ಸಲ್ಲಿಸಬೇಕೇ ಬೇಡವೇ ಎನ್ನುವ ನಿರ್ಧಾರವನ್ನು ನಾನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಪಕ್ಷದ ತೀರ್ಮಾನದ ಮೇಲೆ ನಿಂತಿದೆ ಎಂದು ತಿಳಿಸಿದ್ದಾರೆ.

    ಅನರ್ಹತೆ ಎನ್ನುವುದೇ ಒಂದು ಕಳಂಕ. ನಾನು ನಿಯಮದ ಪ್ರಕಾರವೇ ವಿಧಾನಸಭೆ ಮುಗಿಯುವರೆಗೆ ಅನರ್ಹತೆ ಮಾಡಿ ಮಾಡಿದ್ದೇನೆ ಎಂದು ಹೇಳಿದ್ದಾರೆ.

  • ನಮ್ಮ ರಾಜಕೀಯ ಭವಿಷ್ಯ ಮುಗಿಯುತ್ತೆ ಎಂದವರಿಗೆ ಸುಪ್ರೀಂ ಆದೇಶವೇ ತಕ್ಕ ಉತ್ತರ – ವಿಶ್ವನಾಥ್

    ನಮ್ಮ ರಾಜಕೀಯ ಭವಿಷ್ಯ ಮುಗಿಯುತ್ತೆ ಎಂದವರಿಗೆ ಸುಪ್ರೀಂ ಆದೇಶವೇ ತಕ್ಕ ಉತ್ತರ – ವಿಶ್ವನಾಥ್

    ನವದೆಹಲಿ: ಅನರ್ಹತೆಗೊಂಡು ಸೋತಿದ್ದ ಶಾಸಕರು ಈಗ ಸುಪ್ರೀಂ ತೀರ್ಪಿನಿಂದ ಗೆದ್ದಿದ್ದು ಉಪಚುನಾವಣೆಗೆ ಸ್ಪರ್ಧಿಸಲು ತಯಾರಾಗಿದ್ದಾರೆ.

    ಈ ಕುರಿತು ಕೋರ್ಟ್ ಆವರಣದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅನರ್ಹ ಶಾಸಕ ಎಚ್.ವಿಶ್ವನಾಥ್, ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಇದರಿಂದ ನಮಗೆ ಸಂತಸವಾಗಿದೆ. ಸುಪ್ರೀಂ ಕೋರ್ಟ್ ನಮಗೆ ದೊಡ್ಡ ಅವಕಾಶ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಾಗಶ: ತೃಪ್ತಿ, ಅನರ್ಹತೆ ಎನ್ನುವುದೇ ಒಂದು ಕಳಂಕ – ರಮೇಶ್ ಕುಮಾರ್

    ನಾವು ಬೇಕಾದಷ್ಟು ಬೇಡಿಕೆ ಇಟ್ಟಿರುತ್ತೇವೆ. ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎನ್ನುವುದು ನಮ್ಮ ಪ್ರಮುಖ ಬೇಡಿಕೆಯಾಗಿತ್ತು. ಈ ಕುರಿತು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದ್ದು ಗೊಂದಲ ಬಗೆಹರಿದಿದೆ ಎಂದರು.

    ಸ್ಪೀಕರ್ ಕಾಂಗ್ರೆಸ್, ಜೆಡಿಎಸ್ ಜೊತೆಗೂಡಿಕೊಂಡು ನಮ್ಮ 17 ಜನರನ್ನು, ಮೂರೂವರೆ ವರ್ಷಗಳ ಕಾಲ ಕರ್ನಾಟಕ ರಾಜಕೀಯದಿಂದ ದೂರ ಮಾಡಲು ಹುನ್ನಾರ ನಡೆಸಿದ್ದರು. ಆದರೆ ಆ ಹುನ್ನಾರವನ್ನು ಸುಪ್ರೀಂ ಕೋರ್ಟ್ ಕಡೆಗಣಿಸಿದೆ. ಈಗ ಮತ್ತೆ ಸ್ಪರ್ಧಿಸಿ ಗೆದ್ದು, ಕ್ಷೇತ್ರವನ್ನು ಪ್ರತಿನಿಧಿಸುವುದಕ್ಕೆ ಅವಕಾಶ ನೀಡಿದೆ. ಕೆಲವರು ನಮ್ಮ ರಾಜಕೀಯ ಭವಿಷ್ಯವೇ ಮುಗಿಯಿತು. ಇನ್ನು ಮೂರೂವರೆ ವರ್ಷ ಚುನಾವಣೆಗೆ ಸ್ಪರ್ಧಿಸಲು ಆಗುವುದಿಲ್ಲ. ಅನರ್ಹ ಶಾಸಕರು ಮೂಲೆಗುಂಪಾದರು ಎನ್ನುವಂತಹ ಮಾತುಗಳನ್ನಾಡುತ್ತಿದ್ದರು. ಇದಕ್ಕೆ ಸುಪ್ರೀಂ ಕೋರ್ಟ್ ತಕ್ಕ ಉತ್ತರ ನೀಡಿದಂತಾಗಿದೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.

    ಉಪಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ಚುನಾವಣೆಗೆ ಸ್ಪರ್ಧಿಸುವ ಕುರಿತು ಇನ್ನಷ್ಟೇ ನಿರ್ಧರಿಸಬೇಕಿದೆ. ನಾನು ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸುದೋ ಅಥವಾ ಇಲ್ಲವೋ ಎಂಬುದರ ಕುರಿತು ನಮ್ಮ ಕಾರ್ಯಕರ್ತರೊಂದಿಗೆ ಚರ್ಚಿಸಿ ನಿರ್ಧರಿಸುತ್ತೇವೆ. ಎಲ್ಲರೂ ಸೇರಿ ಚರ್ಚಿಸಿ ನಿರ್ಧರಿಸುತ್ತೇವೆ ಎಂದರು.

  • ಅನರ್ಹರ ತೀರ್ಪು: ಮಧ್ಯಾಹ್ನ 3 ಗಂಟೆವರೆಗೆ ಸಿಎಂ ಎಲ್ಲಾ ಪ್ರೋಗ್ರಾಂ ಕ್ಯಾನ್ಸಲ್

    ಅನರ್ಹರ ತೀರ್ಪು: ಮಧ್ಯಾಹ್ನ 3 ಗಂಟೆವರೆಗೆ ಸಿಎಂ ಎಲ್ಲಾ ಪ್ರೋಗ್ರಾಂ ಕ್ಯಾನ್ಸಲ್

    ಬೆಂಗಳೂರು: ಇಂದು ಅನರ್ಹ ಶಾಸಕರ ಭವಿಷ್ಯ ಏನು ಎನ್ನುವುದನ್ನ ಸುಪ್ರೀಂ ಕೋರ್ಟ್ ನಿರ್ಧರಿಸಲಿದೆ. ಹೀಗಾಗಿ ಅನರ್ಹರಿಗಷ್ಟೇ ಅಲ್ಲ ಬಿಜೆಪಿಗೂ ತೀರ್ಪು ಏನಾಗಲಿದೆ ಎಂಬ ಎದೆಬಡಿತ ಹೆಚ್ಚಾಗಿದೆ.

    ಸುಪ್ರೀಂ ಕೋರ್ಟಿನ ತೀರ್ಪು ಹೊರಬಿದ್ದ ಬಳಿಕ ಬಿಜೆಪಿ ಮಹತ್ವದ ಕೋರ್ ಕಮಿಟಿ ಸಭೆ ನಡೆಸಲಿದೆ ಎನ್ನಲಾಗಿದೆ. ಉಪಚುನಾವಣೆಗೆ ಟಿಕೆಟ್ ಹಂಚಿಕೆ ಸಂಬಂಧ ಮಹತ್ವದ ನಿರ್ಧಾರವನ್ನು ಬಿಜೆಪಿ ಕೈಗೊಳ್ಳಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಷ್ಟೇ ಅಲ್ಲದೆ ಇಂದು ಮಧ್ಯಾಹ್ನ 3 ಗಂಟೆವರೆಗೆ ಸಿಎಂ ಯಡಿಯೂರಪ್ಪ ಅವರು ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಅನರ್ಹರ ತೀರ್ಪಿಗಾಗಿ ಕಾಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ:ಸುಪ್ರೀಂಕೋರ್ಟಿನಿಂದ ಇಂದು ಜಡ್ಜ್‌ಮೆಂಟ್ – ಅಗ್ನಿ ಪರೀಕ್ಷೆಯಲ್ಲಿ ಪಾಸ್ ಆಗ್ತಾರಾ ರೆಬೆಲ್ಸ್?

    ಹಾಗೆಯೇ ಈ ಮಧ್ಯೆ ಅನರ್ಹರ ಭವಿಷ್ಯ ಏನಾಗಲಿದೆ ಎಂಬ ಹಲವು ಪ್ರಶ್ನೆಗಳು ರಾಜಕೀಯ ಪಾಳಯದಲ್ಲಿ ಹುಟ್ಟಿಕೊಂಡಿದೆ. ಕಾಂಗ್ರೆಸ್ ಉಪಚುನಾವಣೆಗೆ ಉಳಿದ ಟಿಕೆಟ್ ಅನೌನ್ಸ್ ಮಾಡುತ್ತಾ? ಬಿಜೆಪಿ ಟಿಕೆಟ್ ಹಂಚಿಕೆ ಗೊಂದಲಕ್ಕೆ ಇಂದೇ ತೆರೆ ಬೀಳುತ್ತಾ? ಯಾರಿಗೆ ಸಿಗುತ್ತೆ ಬಿಜೆಪಿ ಟಿಕೆಟ್? ಅನರ್ಹರಿಗಾ ಅಥವಾ ಅವರ ಕುಟುಂಬಸ್ಥರಿಗಾ? ಇಲ್ಲಾ ಪಕ್ಷದವರಿಗಾ ಎನ್ನುವ ಸಾಲು ಸಾಲು ಪ್ರಶ್ನೆಗಳು ರಾಜ್ಯ ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರ ತಲೆ ಕಡೆಸಿದೆ.

    ಇಂದು ಬೆಳಗ್ಗೆ 10.30ಕ್ಕೆ ಸುಪ್ರೀಂ ಕೋರ್ಟಿನಿಂದ ತೀರ್ಪು ಹೊರಬೀಳಲಿದ್ದು, ಈ ಹಿನ್ನೆಲೆಯಲ್ಲಿ ಅನರ್ಹ ಶಾಸಕರಾದ ರಮೇಶ್ ಜಾರಕಿಹೋಳಿ, ಮುನಿರತ್ನ, ಎಸ್.ಟಿ ಸೋಮಶೇಖರ್, ಬಿಸಿ ಪಾಟೀಲ್, ಬೈರತಿ ಬಸವರಾಜ್, ಹೆಚ್. ವಿಶ್ವ ನಾಥ್, ರೋಷನ್ ಬೇಗ್, ಆರ್ ಶಂಕರ್ ಸೇರಿ ಇನ್ನು ಹಲವರು ದೆಹಲಿ ತಲುಪಿದ್ದು ಇಂದಿನ ತೀರ್ಪು ಬಗ್ಗೆ ವಕೀಲರ ಜೊತೆ ಚರ್ಚೆ ಮಾಡುತ್ತಿದ್ದಾರೆ.

    ಒಟ್ಟಿನಲ್ಲಿ ತಿಂಗಳುಗಳ ಕಾನೂನು ಹೋರಾಟಕ್ಕೆ ಅಂತಿಮ ದಿನ ಬಂದಿದ್ದು ಇನ್ನೇನು ಕೆಲವೇ ಗಂಟೆಗಳಲ್ಲಿ ಅನರ್ಹ ಶಾಸಕರ ಭವಿಷ್ಯ ನಿರ್ಧಾರ ಆಗಲಿದೆ.

  • ಸಹಾಯ ಮಾಡಿದವರನ್ನು ಬಿಜೆಪಿ ಕೊಲ್ಲುತ್ತೆ – ಶಿವರಾಜ್ ತಂಗಡಗಿ ಕಿಡಿ

    ಸಹಾಯ ಮಾಡಿದವರನ್ನು ಬಿಜೆಪಿ ಕೊಲ್ಲುತ್ತೆ – ಶಿವರಾಜ್ ತಂಗಡಗಿ ಕಿಡಿ

    – ಬಿಎಸ್‍ವೈಗೆ ತತ್ವನೂ ಇಲ್ಲಾ, ಸಿದ್ದಾಂತನೂ ಇಲ್ಲಾ

    ಕೊಪ್ಪಳ: ಬಿಜೆಪಿಯಲ್ಲಿ ಒಂದು ಸಿದ್ದಾಂತವಿದೆ, ಯಾರು ಅವರ ಪಕ್ಷಕ್ಕೆ ಸಹಾಯ ಮಾಡಿರುತ್ತಾರೋ ಅವರನ್ನು ಕೊಲ್ಲುವ ಕೆಲಸ ಬಿಜೆಪಿ ಮಾಡುತ್ತದೆ ಎಂದು ಕಮಲದ ವಿರುದ್ಧ ಮಾಜಿ ಸಚಿವ ಶಿವರಾಜ ತಂಗಡಗಿ ವಾಗ್ದಾಳಿ ನಡೆಸಿದ್ದಾರೆ.

    ಮಹತ್ಮಾ ಗಾಂಧಿಜಿಯ 150ನೇ ಜಯಂತಿ ಆಚರಣೆ ಅಂಗವಾಗಿ ಸದ್ಭಾವನಾ ಯಾತ್ರೆ ವೇಳೆ ಬಿಜೆಪಿ ವಿರುದ್ಧ ಶಿವರಾಜ ತಂಗಡಗಿ ವಾಗ್ದಾಳಿ ನೆಡಸಿದರು. ಸಹಾಯ ಮಾಡಿರುವವರನ್ನು ಕೊಲ್ಲುವ ಕೆಲಸ ಬಿಜೆಪಿ ಮಾಡುತ್ತದೆ. ಇದು ಬಿಜೆಪಿ ಸಿದ್ಧಾಂತ. ಇದೀಗ ಅನರ್ಹರನ್ನು ಕೊಲ್ಲುವ ಕೆಲಸ ಬಿಜೆಪಿ ಮಾಡುತ್ತಿದೆ. ಈ ಹಿಂದೆ ನಾವು ಆರು ಜನ ಬಿಜೆಪಿಗೆ ಸಹಾಯ ಮಾಡಿದ್ದೆವು. ನಾವು ಸಹಾಯ ಮಾಡಿದಕ್ಕೆ ಯಡಿಯೂರಪ್ಪ ಮುಖ್ಯಮಂತ್ರಿಯಾದರು ಎಂದು ಹೇಳಿ ಕಿಡಿಕಾರಿದರು.

    ಸಿಎಂ ಯಡಿಯೂರಪ್ಪಗೆ ತತ್ವನೂ ಇಲ್ಲಾ, ಸಿದ್ದಾಂತನೂ ಇಲ್ಲಾ. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಆರ್‍ಎಸ್‍ಎಸ್ ಮತ್ತು ಬಿಜೆಪಿ ಸಿದ್ಧವಾಗಿದೆ. ಬಿಜೆಪಿ ಅನರ್ಹರನ್ನು ಬೀದಿಗೆ ತಂದು ನಿಲ್ಲಿಸಿದೆ. ಸುಪ್ರಿಂ ಕೋರ್ಟ್ ತೀರ್ಪಿನ ಮೇಲೆ ಅನರ್ಹರ ಭವಿಷ್ಯ ನಿಂತಿದೆ. ಒಂದು ವೇಳೆ ಅನರ್ಹರ ವಿರುದ್ಧ ತೀರ್ಪು ಬಂದಿದ್ದೆ ಆದಲ್ಲಿ ಅನರ್ಹರು ಬಿಜೆಪಿ ವಿರುದ್ಧ ಬೊಬ್ಬೆ ಹೊಡೆಯುವ ಪರಿಸ್ಥಿತಿ ಬರುತ್ತದೆ ಎಂದು ಹೇಳಿದರು. ಹಾಗೆಯೇ ಬಿಎಸ್‍ವೈ ಆಡಿಯೋ ಲೀಕ್ ಬಗ್ಗೆ ಪ್ರತಿಕ್ರಿಯಿಸಿ, ಆಡಿಯೋದಲ್ಲಿ ಹೇಳಿದ್ದು ಸತ್ಯವಾದ ಮಾತು, 16 ಜನ ಕಾಂಗ್ರೆಸ್-ಜೆಡಿಎಸ್ ಪಕ್ಷದಿಂದ ಹೊರ ಬರದಿದ್ದರೆ ಇಂದು ಬಿಜೆಪಿ ಸರ್ಕಾರ ಆಗುತ್ತಿರಲಿಲ್ಲ ಎಂದು ಸಿಎಂ ವಿರುದ್ಧ ಮಾತಿನ ಚಾಟಿ ಬೀಸಿದರು.

    ಅಯೋಧ್ಯೆ ಪ್ರಕರಣದ ಬಗ್ಗೆ ಮಾತನಾಡಿ, ರಾಮ ಮಂದಿರ ಕಟ್ಟುವುದಕ್ಕೆ ಯಾರ ವಿರೋಧವಿಲ್ಲ. ಆದರೆ ದೇಶದ ಜನರನ್ನು ದಾರಿ ತಪ್ಪಿಸುವ ಸಲುವಾಗಿ ಬಿಜೆಪಿ ರಾಮ ಮಂದಿರ ವಿಚಾರವನ್ನು ದೊಡ್ಡದಾಗಿ ಮಾಡುತ್ತಿದೆ. ಸುಪ್ರೀಂ ಕೋರ್ಟ್ ಏನೇ ತೀರ್ಪು ಕೊಟ್ಟರೂ ನಾವು ಅದನ್ನು ಸ್ವಾಗತಿಸುತ್ತೇವೆ ಎಂದು ತಿಳಿಸಿದರು.