Tag: Disqualified MLAs

  • ಅನರ್ಹರು ಸೋತರೆ ಸಚಿವ ಸ್ಥಾನ ಇಲ್ಲ: ಈಶ್ವರಪ್ಪ

    ಅನರ್ಹರು ಸೋತರೆ ಸಚಿವ ಸ್ಥಾನ ಇಲ್ಲ: ಈಶ್ವರಪ್ಪ

    – ಡಿಸಿಎಂ ಆಸೆ ಹೊಂದಿರುವ ಅನರ್ಹ ಶಾಸಕರಿಗೆ ಈಶ್ವರಪ್ಪ ಟಾಂಗ್

    ಬೆಂಗಳೂರು: ರಾಜ್ಯದಲ್ಲಿ ನಡೆದ 15 ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಡಿ.9 ರಂದು ಪ್ರಕಟವಾಗಲಿದ್ದು, ಆ ಬಳಿಕ ರಾಜ್ಯದಲ್ಲಿರುವ ಅತಂತ್ರ ರಾಜಕಾರಣ ಪರಿಸ್ಥಿತಿ ದೂರವಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಅವರು ಹೇಳಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಮೂರುವರೇ ವರ್ಷ ಬಿಜೆಪಿ ಸರ್ಕಾರ ಇರುತ್ತೆ. ಇದು ಜನರ ಅಭಿಪ್ರಾಯ ಕೂಡ ಆಗಿತ್ತು. ಅದೇ ರೀತಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರಲಿದೆ. ಉಪಚುನಾವಣೆಯ ನಡೆದ 15 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಪಡೆಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಅನರ್ಹರ ಶಾಸಕರು ರಾಜೀನಾಮೆ ಕೊಡಲಿಲ್ಲ ಎಂದಿದ್ದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿರಲಿಲ್ಲ. ಹೀಗಾಗಿ ಅವರ ಋಣ ತೀರಿಸಬೇಕಾಗಿದ್ದು, ಯಾವುದೇ ಕಾರಣಕ್ಕೂ ಅವರಿಗೆ ನಾವು ಅನ್ಯಾಯ ಮಾಡುವುದಿಲ್ಲ. ಗೆದ್ದ ಎಲ್ಲರನ್ನು ಮಂತ್ರಿ ಮಾಡುತ್ತೇವೆ. ಆದರೆ ಸೋತವರಿಗೆ ಏನು ಇಲ್ಲ. ಈಗಾಗಲೇ ಈ ಬಗ್ಗೆ ಶಾಸಕರೊಂದಿಗೆ ಮಾತನಾಡಿದ್ದು, ಎಂಎಲ್‍ಸಿ ಮಾಡಿ ಮಂತ್ರಿ ಮಾಡುತ್ತೇವೆ ಎಂದು ಹೇಳಿದ್ದೇವು. ಆದರೆ ಅವರು ಚುನಾವಣೆ ಎದುರಿಸಿ ಮಂತ್ರಿಯಾಗುತ್ತೇವೆ ಎಂದರು. ಹೀಗಾಗಿ ಗೆದ್ದರೆ ಮಾತ್ರ ಅವರನ್ನು ಮಂತ್ರಿ ಮಾಡುತ್ತೇವೆ ಎಂದರು.

    ಬೆಳಗಾವಿಯ ಎಲ್ಲಾ ಅನರ್ಹರನ್ನು ಮಂತ್ರಿ ಮಾಡುತ್ತೇವೆ. ಈಗಾಗಲೇ ಲಕ್ಷ್ಮಣ್ ಸವದಿ ಅವರ ವಿಚಾರ ಸ್ಪಷ್ಟವಾಗಿದ್ದು, ಅವರು ಡಿಸಿಎಂ ಆಗಿಯೇ ಮುಂದುವರಿಯುತ್ತಾರೆ. ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್ ಅವರನ್ನು ಮಂತ್ರಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

    ಇದೇ ವೇಳೆ ಅನರ್ಹ ಶಾಸಕರನ್ನು ಡಿಸಿಎಂ ಮಾಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಡಿಸಿಎಂ ಆಗಲು ರಾಜಕಾರಣದಲ್ಲಿ ಯಾರಿಗೆ ಇಷ್ಟ ಇರಲ್ಲ ಹೇಳಿ? ವಯಸ್ಸಿಗೆ ಬಂದಂತವರು ಇದ್ದಕ್ಕಿದ್ದಂತೆ ಐಶ್ವರ್ಯ ರೈ ಬೇಕು ಎಂದು ಕೇಳುತ್ತಾರೆ. ಆದರೆ ಐಶ್ವರ್ಯ ರೈ ಇರುವುದು ಒಬ್ಬರೇ ತಾನೇ. ಇದರಂತೆ ಡಿಸಿಎಂ ಸ್ಥಾನಕ್ಕೆ ಹಲವರು ಅಪೇಕ್ಷೆ ಪಡುತ್ತಾರೆ, ಆದರೆ ಅವರಿಗೆ ಅವಕಾಶ ಆಗಬೇಕಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಅನರ್ಹರಿಗೆ ಏನೇನು ಹುದ್ದೆ ಕೊಡುತ್ತಾರೆ ನನಗೆ ಗೊತ್ತಿಲ್ಲ. ಅದನ್ನು ಸಿಎಂ ಬಿಎಸ್‍ವೈ ತೀರ್ಮಾನ ಮಾಡುತ್ತಾರೆ ಎಂದು ಡಿಸಿಎಂ ಕನಸ್ಸು ಕಾಣುತ್ತಿರುವ ಗೋಕಾಕ್ ಸಾಹುಕಾರ ಹಾಗೂ ಹಳ್ಳಿ ಹಕ್ಕಿ ವಿಶ್ವನಾಥ್ ಅವರಿಗೆ ಈಶ್ವರಪ್ಪ ಅವರು ಪರೋಕ್ಷ ಟಾಂಗ್ ನೀಡಿದರು.

    ಇದೇ ವೇಳೆ ಘನ ತ್ಯಾಜ್ಯ ನಿರ್ವಹಣೆ ಬಗ್ಗೆ ಕೈಗೊಂಡ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಸಚಿವರು, ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ವಿಶೇಷವಾದ ಯೋಜನೆ ರೂಪಿಸಲಾಗಿದೆ. ಪ್ರತಿ ಪಂಚಾಯಿತಿಗೂ ಈಗಾಗಲೇ ಕೇಂದ್ರ ಸರ್ಕಾರದಿಂದ 20 ಲಕ್ಷ ಬಿಡುಗಡೆ ಮಾಡಿದ್ದಾರೆ. 6,021 ಗ್ರಾಮ ಪಂಚಾಯತಿಗಳಲ್ಲಿ ಈ ಯೋಜನೆ ಜಾರಿಗೆ ತಂದು, ಕಸ ಇಲ್ಲದೆ ರೀತಿ ಕೆಲಸ ಮಾಡುತ್ತೇವೆ. ರಾಜ್ಯದಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು. ಅಲ್ಲದೇ ಮತ್ತೊಂದು ಯೋಜನೆ ಮೂಳಕ ಗ್ರಾಮ ಪಂಚಾಯತಿ ಕಟ್ಟಡಗಳಿಗೆ ಸೋಲಾರ್ ಅಳವಡಿಕೆ ಕಾರ್ಯಕ್ಕೆ ಒತ್ತು ನೀಡುತ್ತಿದ್ದೇವೆ ಎಂದು ವಿವರಿಸಿದರು.

  • 15 ಕ್ಷೇತ್ರಗಳಿಗೆ ಇಂದು ಮತದಾನ- ತಪ್ಪದೇ ನಿಮ್ಮ ಹಕ್ಕನ್ನು ಚಲಾಯಿಸಿ

    15 ಕ್ಷೇತ್ರಗಳಿಗೆ ಇಂದು ಮತದಾನ- ತಪ್ಪದೇ ನಿಮ್ಮ ಹಕ್ಕನ್ನು ಚಲಾಯಿಸಿ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರದ ಅಳಿವು-ಉಳಿವು, ಕಾಂಗ್ರೆಸ್-ಜೆಡಿಎಸ್ ನಾಯಕರ ಮರು ಮೈತ್ರಿ, ಅನರ್ಹರ ಅರ್ಹತೆಯ ಸವಾಲು ಎಲ್ಲವನ್ನೂ ನಿರ್ಣಯಿಸಲಿರೋ ದಿನ ಬಂದೇ ಬಿಟ್ಟಿದೆ. 15 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯಲಿದೆ. ಹೊಸಕೋಟೆ, ಚಿಕ್ಕಬಳ್ಳಾಪುರ, ಕೆಆರ್ ಪುರ, ಶಿವಾಜಿನಗರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಕೆ.ಆರ್ ಪೇಟೆ, ಹುಣಸೂರು, ಹಿರೇಕೆರೂರು, ರಾಣೆಬೆನ್ನೂರು, ಹೊಸಪೇಟೆ, ಯಲ್ಲಾಪುರ, ಕಾಗವಾಡ, ಅಥಣಿ, ಗೋಕಾಕ್ ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಮತದಾನ ಶುರುವಾಗಲಿದೆ.

    ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಹಾಗೂ ಪಕ್ಷೇತರ 165 ಅಭ್ಯರ್ಥಿಗಳ ಹಣೆಬರಹ ಇವಿಎಂಗಳಲ್ಲಿ ಅಡಕವಾಗುತ್ತಾ ಹೋಗುತ್ತದೆ. ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆ ಸಕಲ ರೀತಿಯಲ್ಲೂ ಸಜ್ಜಾಗಿದೆ.

    15 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಒಟ್ಟು 165 ಮಂದಿ ಕಣದಲ್ಲಿದ್ದಾರೆ. ಬೆಂಗಳೂರಿನ ಶಿವಾಜಿನಗರದಲ್ಲಿ ಒಟ್ಟು 19 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. 37,82,681 ಮಂದಿ ಮತದಾರರಿದ್ದು, ಇದರಲ್ಲಿ ಪುರುಷ ಮತದಾರರು 18,52,027 ಮಹಿಳಾ ಮತದಾರರು 19,25,529 ಮಂದಿ ಇದ್ದಾರೆ. 4,185 ಕಡೆಗಳಲ್ಲಿ ಮತಗಟ್ಟೆಗಳನ್ನು ತೆರೆಯಲಾಗಿದೆ. ಸೂಕ್ತ ಭದ್ರತೆಗಾಗಿ 42,509 ಭದ್ರತಾ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ. 11,241 ಮಂದಿ ಪೊಲೀಸ್ ಸಿಬ್ಬಂದಿ, 2,511,900 ಸಿಆರ್‍ಪಿಎಫ್ ಸಿಬ್ಬಂದಿ ಹಾಗೂ ಸೂಕ್ಷ್ಮ ವೀಕ್ಷಕರನ್ನು ನಿಯೋಜಿಸಲಾಗಿದೆ.

    ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನಾಲ್ಕು ಕ್ಷೇತ್ರಗಳಲ್ಲಿ 5,988 ಚುನಾವಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೆ.ಆರ್.ಪುರ ಕ್ಷೇತ್ರಕ್ಕೆ ಐಟಿಐ ವಿದ್ಯಾಮಂದಿರ, ಯಶವಂತಪುರ ಕ್ಷೇತ್ರಕ್ಕೆ ಆರ್.ವಿ. ಎಂಜಿನಿಯರಿಂಗ್ ಕಾಲೇಜು, ಮಹಾಲಕ್ಷ್ಮಿ ಲೇಔಟ್‍ಗೆ ವಿದ್ಯಾವರ್ಧಕ ಸಂಘದ ಹೈಸ್ಕೂಲ್, ಶಿವಾಜಿನಗರ ಕ್ಷೇತ್ರಕ್ಕೆ ಮೌಂಟ್ ಕಾರ್ಮೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕೇಂದ್ರಗಳನ್ನು ತೆರೆಯಲಾಗಿದೆ.

    ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,361 ಮತಗಟ್ಟೆಗಳಿವೆ. ಈ ಪೈಕಿ 12 `ಸಖಿ’ ಮತಗಟ್ಟೆ, 4 ಮಾದರಿ ಮತಗಟ್ಟೆಗಳಿವೆ. ಪ್ರತಿ ಮತಗಟ್ಟೆಯಲ್ಲೂ ಮೆಡಿಕಲ್ ಕಿಟ್ ನೀಡಲಾಗಿದೆ. 15 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾನಕ್ಕೆ ಅನುಕೂಲವಾಗುವಂತೆ ರಜೆ ಕೂಡ ಘೋಷಣೆ ಮಾಡಲಾಗಿದೆ.

    ಒಟ್ಟಾರೆ ಸಿಎಂ ಯಡಿಯೂರಪ್ಪ ಅವರಿಗೆ ಈ ಉಪಚುನಾವಣೆ ಅಗ್ನಿ ಪರೀಕ್ಷೆಯಾಗಿದ್ದು, ಅನರ್ಹರ ಪರ ತಾವೇ ಖುದ್ದಾಗಿ ಪ್ರಚಾರ ನಡೆಸಿದ್ದಾರೆ. 15 ಕ್ಷೇತ್ರಗಳ ಪೈಕಿ ಸರ್ಕಾರ ಉಳಿಸಿಕೊಳ್ಳಲು 7 ಸ್ಥಾನಗಳಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಇದೆ. ಇತ್ತ ಪ್ರತಿಪಕ್ಷಗಳು ಸರ್ಕಾರ ಪತನವಾಗಲಿದೆ ಎಂದು ಮೈತ್ರಿ ಮಾತುಕತೆಗೆ ನಾಂದಿ ಹಾಡಿವೆ. ಎಲ್ಲಾ ಅನರ್ಹರನ್ನು ಸೋಲಿಸಬೇಕೆಂದು ಕಾಂಗ್ರೆಸ್ ಶಪಥ ಮಾಡಿದೆ. 3 ಕ್ಷೇತ್ರಗಳಲ್ಲಿ ಜೆಡಿಎಸ್ ಉಳಿಸಿಕೊಳ್ಳಲು ದಳಪತಿಗಳು ಹೋರಾಟ ಮಾಡಿದ್ದಾರೆ. ಈ ಎಲ್ಲದಕ್ಕೂ ತೆರೆಬಿದ್ದಿದ್ದು, ಮತದಾರರು ಇಂದು ಅಂತಿಮ ತೀರ್ಪು ನೀಡಲಿದ್ದಾರೆ. ಡಿಸೆಂಬರ್ 9 ರಂದು 15 ಕ್ಷೇತ್ರಗಳ ಫಲಿತಾಂಶ ಹೊರಬೀಳಲಿದ್ದು, ಅಭ್ಯರ್ಥಿಗಳ ಎದೆಯಲ್ಲಿ ಈಗಾಗಲೇ ಢವಢವ ಶುರುವಾಗಿದೆ.

  • ಅನರ್ಹರ ಆರೋಗ್ಯ ಸರಿಯಿಲ್ಲ, ಒಳ್ಳೆ ತಲೆ ಡಾಕ್ಟರ್‌ಗೆ ತೋರಿಸಿ: ರಮೇಶ್ ಕುಮಾರ್

    ಅನರ್ಹರ ಆರೋಗ್ಯ ಸರಿಯಿಲ್ಲ, ಒಳ್ಳೆ ತಲೆ ಡಾಕ್ಟರ್‌ಗೆ ತೋರಿಸಿ: ರಮೇಶ್ ಕುಮಾರ್

    ಬೆಳಗಾವಿ: ಅನರ್ಹರ ಆರೋಗ್ಯ ಸರಿಯಿಲ್ಲ, ಅವರನ್ನು ತಲೆಗೆ ಸಂಬಂಧಿಸಿದ ವೈದ್ಯರ ಬಳಿ ತೋರಿಸೋದು ಒಳ್ಳೆದು ಎಂದು ಅಥಣಿಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅನರ್ಹರಿಗೆ ಟಾಂಗ್ ಕೊಟ್ಟಿದ್ದಾರೆ.

    ಅಥಣಿಯ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನರ್ಹಗೊಂಡ ನಂತರವೂ ಶಾಸಕರು ತಾವು ಅರ್ಹರು ಎಂದು ಹೇಳಿಕೊಳ್ಳುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಸುಪ್ರೀಂ ಕೋರ್ಟಿನಲ್ಲೂ ಅನರ್ಹಗೊಂಡ ನಂತರ ಅರ್ಹರು ಎಂದು ಹೇಳಿಕೊಳ್ಳುತ್ತಿದ್ದಾರೆ. ಅನರ್ಹರ ಆರೋಗ್ಯ ಸರಿಯಿಲ್ಲ, ಒಳ್ಳೆಯ ತಲೆ ಸಂಬಂಧಿಸಿದ ವೈದ್ಯರಿಗೆ ತೋರಿಸಿ ಎಂದು ಕಾಲೆಳೆದಿದ್ದಾರೆ.

    ನಾನು ಯಾರನ್ನೂ ವ್ಯಕ್ತಿಗತವಾಗಿ ಅನರ್ಹಗೊಳಿಸಿಲ್ಲ. ಸಂವಿಧಾನಾತ್ಮಕವಾಗಿ ಅವರನ್ನು ಅನರ್ಹರು ಅಂತ ಘೋಷಣೆ ಮಾಡಿದ್ದೆ. ಸುಪ್ರೀಂ ಕೋರ್ಟ್ ಸಹ ನನ್ನ ಆದೇಶ ಎತ್ತಿ ಹಿಡಿದಿದೆ. ನಾನು ಕೊಟ್ಟ ತೀರ್ಪು ಸರಿಯೇ ಎಂದು ಪರಿಶೀಲಿಸಿದ್ದೇನೆ. ಜನರು ಕೂಡ ನೀವು ಮಾಡಿದ್ದು ಸರಿಯಾಗಿದೆ ಎಂದಿದ್ದಾರೆ. ಆದರೆ ಕೋರ್ಟ್ ಅನರ್ಹರಿಗೆ ಉಪಚುನಾವಣೆಗೆ ನಿಲ್ಲಲು ಅವಕಾಶ ನೀಡಿದೆ. ಕೋರ್ಟಿನ ತೀರ್ಪನ್ನು ನಾನು ಗೌರವಿಸುತ್ತೇನೆ. ಉಪಚುನಾವಣೆಯಲ್ಲಿ ಜನರು ಅನರ್ಹರಿಗೆ ಉತ್ತರ ನೀಡುತ್ತಾರೆ ಎಂದು ಕಿಡಿಕಾರಿದರು.

    ನಾನು ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ. ಒಂದು ವೇಳೆ ಪಕ್ಷದಲ್ಲಿ ನೀನು ಕಸ ಗುಡಿಸಬೇಕು ಎಂದರೆ ನಾನು ಗುಡಿಸಬೇಕು, ಅದು ಪಕ್ಷದ ಶಿಸ್ತು. ಹಿಂದೆ ಸಮ್ಮಿಶ್ರ ಸರ್ಕಾರವಿದ್ದಾಗ ಯಾರೂ ಹೆಚ್ಚು ಉತ್ಸಾಹ ತೋರಲಿಲ್ಲ. ಪಕ್ಷದ ನಾಯಕ ವೇಣುಗೋಪಾಲ್ ಅವರು ನೀವು ಸ್ಪೀಕರ್ ಆಗಬೇಕು ಎಂದು ಹೇಳಿದಾಗ, ಪಕ್ಷ ಏನೇ ಜವಾಬ್ದಾರಿ ನೀಡಿದರೂ ನಾನು ವಹಿಸಿಕೊಳ್ಳುತ್ತೇನೆ ಎಂದು ಹೇಳಿದ್ದೆ. ಜನರ ಮನಸ್ಸಲ್ಲಿ ಗೌರವಾನ್ವಿತ ಸ್ಥಾನ ಸಿಕ್ಕಾಗ ಅದಕ್ಕೆ ಮಿಗಿಲಾದದ್ದು ಯಾವ ಸ್ಥಾನವೂ ಇಲ್ಲ ಎಂದು ರಮೇಶ್ ಕುಮಾರ್ ಹೇಳಿದರು.

  • ಅನರ್ಹ ಶಾಸಕರ ವಿರುದ್ಧ ದೇಶದ್ರೋಹ ಆರೋಪ- ನಾಳೆಗೆ ವಿಚಾರಣೆ ಮುಂದೂಡಿಕೆ

    ಅನರ್ಹ ಶಾಸಕರ ವಿರುದ್ಧ ದೇಶದ್ರೋಹ ಆರೋಪ- ನಾಳೆಗೆ ವಿಚಾರಣೆ ಮುಂದೂಡಿಕೆ

    ಬೆಂಗಳೂರು: ಅನರ್ಹ ಶಾಸಕರ ವಿರುದ್ಧ ವಕೀಲ ಎಸ್.ಬಾಲಕೃಷ್ಣನ್ ದಾಖಲಿಸಿದ್ದ ಅರ್ಜಿಯ ವಿಚಾರಣೆಯನ್ನು ಎನ್‍ಐಎ (ರಾಷ್ಟ್ರೀಯ ತನಿಖಾ ದಳ) ನ್ಯಾಯಾಲಯ ನಾಳೆಗೆ ಮುಂದೂಡಿದೆ. ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಅರ್ಜಿಯ ವಿಚಾರಣೆ ನಡೆಯಲಿದೆ. ಇಂದು ಬಾಲಕೃಷ್ಣನ್ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಿ ಮಧ್ಯಾಹ್ನ 4 ಗಂಟೆಗೆ ವಿಚಾರಣೆ ನಡೆಸುವುದಾಗಿ ಹೇಳಿತ್ತು.

    17 ಅನರ್ಹ ಶಾಸಕರು ಮತ್ತು ಇನ್ನಿತರರ ವಿರುದ್ಧ ಬಾಲನ್ ದೂರು ದಾಖಲು ಮಾಡಿದ್ದಾರೆ. ಅನರ್ಹ ಶಾಸಕರು ಅಕ್ರಮ ಹಣ ಪಡೆದು ಬಿಜೆಪಿ ಸೇರಿದ್ದಾರೆ. ಆಪರೇಷನ್ ಕಮಲಕ್ಕೆ ಬಿಜೆಪಿ ಅಕ್ರಮ ಹಣ ಬಳಕೆ ಮಾಡಿದ್ದು, ದುಡ್ಡಿನ ಮೂಲ ಯಾವುದು ಅಂತಾ ಗೊತ್ತಾಗಬೇಕಿದೆ. ರಾಜಕೀಯ ಪಕ್ಷಗಳಿಗೆ ಭಯೋತ್ಪಾದಕ ಸಂಘಟನೆಗಳಿಂದ ಹಣ ಬರುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಹಾಗಾಗಿ ಅನರ್ಹ ಶಾಸಕರ ಪಡೆದಿದ್ದಾರೆ ಎನ್ನಲಾದ ಹಣದ ಬಗ್ಗೆ ತನಿಖೆ ಆಗಬೇಕು ಎಂದು ಬಾಲಕೃಷ್ಣನ್ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

    ಇತ್ತ ಸಿಎಂ ಬಿ.ಎಸ್.ಯಡಿಯೂರಪ್ಪ ಸಹ ಅನರ್ಹರಿಂದಾಗಿಯೇ ಬಿಜೆಪಿ ಸರ್ಕಾರ ರಚನೆ ಮಾಡಿದ್ದೇವೆ. ಚುನಾವಣೆಯಲ್ಲಿ ಗೆದ್ದ ಬಳಿಕ ಅನರ್ಹ ಶಾಸಕರನ್ನು ಮಂತ್ರಿ ಮಾಡುತ್ತೇವೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಅನರ್ಹ ಶಾಸಕರು ಪಡೆದಿರುವ ಹಣದ ಬಗ್ಗೆ ತನಿಖೆಯಾಗಬೇಕಿದೆ. ಆಪರೇಷನ್ ಕಮಲಕ್ಕೆ ಸಾವಿರ ಕೋಟಿ ರೂ. ಅಕ್ರಮ ಹಣ ಬಳಕೆಯಾಗಿದಿದೆ. ಆಪರೇಷನ್ ಕಮಲಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪನವರ ಆಡಿಯೋಗಳು ಸಹ ಲೀಕ್ ಆಗಿದೆ ಎಂದು ಬಾಲಕೃಷ್ಣನ್ ಆರೋಪಿಸಿದ್ದಾರೆ.

  • ಅನರ್ಹ ಶಾಸಕರಿಗೆ ಮತ್ತೆ ಢವ ಢವ

    ಅನರ್ಹ ಶಾಸಕರಿಗೆ ಮತ್ತೆ ಢವ ಢವ

    ಬೆಂಗಳೂರು: ಅನರ್ಹ ಶಾಸಕರ ವಿರುದ್ಧ 52ನೇ ಎನ್‍ಐಎ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ.

    ಅನರ್ಹ ಶಾಸಕರು ಅಕ್ರಮ ಹಣ ಪಡೆದು ಬಿಜೆಪಿ ಸೇರ್ಪಡೆಯಾಗಿದ್ದಾರೆಂದು ಆರೋಪಿಸಿ ವಕೀಲ ಎಸ್.ಬಾಲಕೃಷ್ಣನ್ ಎಂಬವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಬಾಲಕೃಷ್ಣನ್ ಅರ್ಜಿ ಪರಿಗಣಿಸಿರುವ ನ್ಯಾಯಾಲಯ ಇಂದು ಸಂಜೆ 4 ಗಂಟೆಗೆ ಸಾಕ್ಷಿ ಸಮೇತ ವಾದ ಮಂಡಿಸಲು ಅವಕಾಶ ನೀಡಿದೆ.

    17 ಅನರ್ಹ ಶಾಸಕರು ಮತ್ತು ಇನ್ನಿತರರ ವಿರುದ್ಧ ಬಾಲನ್ ದೂರು ದಾಖಲು ಮಾಡಿದ್ದಾರೆ. ಅನರ್ಹ ಶಾಸಕರು ಅಕ್ರಮ ಹಣ ಪಡೆದು ಬಿಜೆಪಿ ಸೇರಿದ್ದಾರೆ. ಆಪರೇಷನ್ ಕಮಲಕ್ಕೆ ಬಿಜೆಪಿ ಅಕ್ರಮ ಹಣ ಬಳಕೆ ಮಾಡಿದ್ದು, ದುಡ್ಡಿನ ಮೂಲ ಯಾವುದು ಅಂತಾ ಗೊತ್ತಾಗಬೇಕಿದೆ. ಇತ್ತ ಸಿಎಂ ಬಿ.ಎಸ್.ಯಡಿಯೂರಪ್ಪ ಸಹ ಅನರ್ಹರಿಂದಾಗಿಯೇ ಬಿಜೆಪಿ ಸರ್ಕಾರ ರಚನೆ ಮಾಡಿದ್ದೇವೆ. ಚುನಾವಣೆಯಲ್ಲಿ ಗೆದ್ದ ಬಳಿಕ ಅನರ್ಹ ಶಾಸಕರನ್ನು ಮಂತ್ರಿ ಮಾಡುತ್ತೇವೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.

    ಅನರ್ಹ ಶಾಸಕರು ಪಡೆದಿರುವ ಹಣದ ಬಗ್ಗೆ ತನಿಖೆಯಾಗಬೇಕಿದೆ. ಆಪರೇಷನ್ ಕಮಲಕ್ಕೆ ಸಾವಿರ ಕೋಟಿ ರೂ. ಅಕ್ರಮ ಹಣ ಬಳಕೆಯಾಗಿದಿದೆ. ಆಪರೇಷನ್ ಕಮಲಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪನವರ ಆಡಿಯೋಗಳು ಸಹ ಲೀಕ್ ಆಗಿದೆ ಎಂದು ಬಾಲಕೃಷ್ಣನ್ ಆರೋಪಿಸಿದ್ದಾರೆ.

  • ಅನ್ನ ಉಂಡ ಜನ ನಮಗೆ ಮತ ಹಾಕ್ಲಿಲ್ಲ, ಅನ್ನ ನೀಡದ ಬಿಜೆಪಿ ಗೆಲ್ಲಿಸಿದ್ರು: ಹೆಚ್.ಆಂಜನೇಯ

    ಅನ್ನ ಉಂಡ ಜನ ನಮಗೆ ಮತ ಹಾಕ್ಲಿಲ್ಲ, ಅನ್ನ ನೀಡದ ಬಿಜೆಪಿ ಗೆಲ್ಲಿಸಿದ್ರು: ಹೆಚ್.ಆಂಜನೇಯ

    ದಾವಣಗೆರೆ: ನಾವು ನೀಡಿದ ಅನ್ನ ಉಂಡ ಜನ ನಮಗೆ ಮತ ಹಾಕಲಿಲ್ಲ. ಅನ್ನ ನೀಡದ ಬಿಜೆಪಿಯನ್ನು ಗೆಲ್ಲಿಸಿದರು ಎಂದು ಮಾಜಿ ಸಚಿವ ಹೆಚ್ ಆಂಜನೇಯ ಬೇಸರ ವ್ಯಕ್ತಪಡಿಸಿದ್ದಾರೆ.

    ನಗರದ ಅಥಿತಿ ಗೃಹದಲ್ಲಿ ಮಾತನಾಡಿದ ಮಾಜಿ ಸಚಿವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅನ್ನಭಾಗ್ಯ ಯೋಜನೆ ಮೂಲಕ ಬಡವರ ಹೊಟ್ಟೆ ತುಂಬಿಸಿದ್ವಿ, ಬಡ ಮಕ್ಕಳಿಗೆ ಶಿಕ್ಷಣ, ಶೂ ಭಾಗ್ಯ, ಕ್ಷೀರ ಭಾಗ್ಯ ಯೋಜನೆಯನ್ನು ಜಾರಿಗೆ ತಂದ್ವಿ. ಜನರ ಏಳಿಗೆಗಾಗಿ ಶ್ರಮಿಸಿದ್ದೇವು. ಆದರೆ ಮತದಾರರು ಕಾಂಗ್ರೆಸ್ ಕೈ ಬಿಟ್ಟು ಬಿಜೆಪಿಯನ್ನು ಗೆಲ್ಲಿಸಿದರು ಎಂದರು.

    ರಾಜ್ಯದ 15 ಕ್ಷೇತ್ರಗಳಿಗೆ ಉಪ ಚುನಾವಣೆ ಬೇಕಾಗಿತ್ತಾ? ಈ 15 ಜನ ಅನರ್ಹ ಶಾಸಕರ ರಾಜೀನಾಮೆ ಹಿಂದೆ ಸ್ವಾರ್ಥ, ಅಧಿಕಾರ ದಾಹ, ಹಣದ ಆಸೆ ಇದೆ. ಪಕ್ಷಕ್ಕೆ ದ್ರೋಹ ಮಾಡಿ ರಾಜೀನಾಮೆ ನೀಡಿ ಈಗ ಚುನಾವಣೆಗೆ ನಿಂತಿದ್ದಾರೆ. ಅವರನ್ನು ಜನರು ಸೋಲಿಸಿ, ತಕ್ಕ ಪಾಠ ಕಲಿಸುತ್ತಾರೆ. ಅಲ್ಲದೆ ಸುಪ್ರೀಂಕೋರ್ಟ್ ಉತ್ತಮ ತೀರ್ಪು ನೀಡಿದೆ. ಇಲ್ಲವಾದರೆ ಅನರ್ಹರು ಸಚಿವರಾಗಿ ನಂತರ ಚುನಾವಣೆಗೆ ಹೋಗುತ್ತಿದ್ದರು. ಪ್ರಜಾಪ್ರಭುತ್ವ ಉಳಿಸಬೇಕು ಎಂದರೆ ಅನರ್ಹರು ಅರ್ಹರರಾಗಿಯೇ ಉಳಿಯುವಂತೆ ಮಾಡಬೇಕು ಎಂದು ಹೇಳಿದರು.

    ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಬಫೂನ್ ಎಂದು ನಿಂದಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಆಂಜನೇಯ ಅವರು, ರೇಣುಕಾಚಾರ್ಯ ಬಫೂನ್ ಇರಬೇಕು. ಅದಕ್ಕಾಗಿ ಹೀಗೆ ಮಾತನಾಡುತ್ತಿದ್ದಾರೆ. ಯಾರನ್ನು ಕೂಡ ಟೀಕೆ ಮಾಡಬಾರದು. ಟೀಕೆ ಮಾಡಿದರೆ ಅದು ಆರೋಗ್ಯಕರವಾಗಿರಬೇಕು ಎಂದು ತಿಳಿಸಿದರು.

  • ಅನರ್ಹರು ಬಿಜೆಪಿ ನಾಯಕರ ಚಡ್ಡಿ, ಪ್ಯಾಂಟು ಹರೀತಾರೆ: ಡಿಕೆಶಿ ಲೇವಡಿ

    ಅನರ್ಹರು ಬಿಜೆಪಿ ನಾಯಕರ ಚಡ್ಡಿ, ಪ್ಯಾಂಟು ಹರೀತಾರೆ: ಡಿಕೆಶಿ ಲೇವಡಿ

    – ಉಪ್ಪು ತಿಂದವರು ನೀರು ಕುಡೀಬೇಕು ಅಂದವರಿಗೆ ನೀರು ಕುಡಿಸುತ್ತೇನೆ
    – ಕಡಿಮೆ ಮಾತನಾಡುವಂತೆ ಗುರುಗಳು ಸಲಹೆ ನೀಡಿದ್ದಾರೆ

    ಹುಬ್ಬಳ್ಳಿ: ಅನರ್ಹ ಶಾಸಕರು ಬಿಜೆಪಿ ನಾಯಕರ ಚಡ್ಡಿ, ಪ್ಯಾಂಟು, ಜೇಜು ಎಲ್ಲಾ ಹರಿಯುತ್ತಾರೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ.

    ನಗರದಲ್ಲಿ ನಡೆದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ಕಡಿಮೆ ಮಾತನಾಡಿ ಅಂತ ನಮ್ಮ ಗುರುಗಳು ಹೇಳಿದ್ದಾರೆ. ಮೌನಕ್ಕೆ ಶರಣಾಗಬೇಕೆಂಬ ಆಸೆ ನನಗಿದೆ. ಆದರೆ ನನ್ನ ಸ್ನೇಹಿತರು, 17 ಜನ ಅನರ್ಹ ಶಾಸಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಗಿಫ್ಟ್ ನೀಡಿದ್ದಾರೆ. ಅವರು ನಮ್ಮನ್ನೇ ಬಿಟ್ಟಿಲ್ಲ, ಇನ್ನು ಬಿಜೆಪಿ ನಾಯಕರನ್ನ ಬಿಡುತ್ತಾರಾ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು. ಇದನ್ನೂ ಓದಿ: ಉಪ್ಪು ತಿಂದವರು ನೀರು ಕುಡಿಯಬೇಕು, ಇದು ಈ ನೆಲದ ಸಂಸ್ಕೃತಿ: ಸಿಟಿ ರವಿ

    ನಾನು ತಪ್ಪು ಮಾಡಿಲ್ಲ. ನನಗೆ ಅಗ್ನಿ ಪರೀಕ್ಷೆ ಬಂದಾಗ ನನ್ನ ಜೊತೆ ನೀವು ಇದ್ರಿ. ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಯಾರು ಗೂಟ ಹೊಡೆದುಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಹಾಲಿ ಸಿಎಂ ಜೈಲಿಗೆ ಹೋಗಿದ್ರಲ್ಲ, ಅವರು ಉಪ್ಪು ಅಥವಾ ಸಕ್ಕರೆ ತಿಂದಿದ್ರಾ- ಡಿಸಿಎಂಗಳಿಗೆ ಉಗ್ರಪ್ಪ ತಿರುಗೇಟು

    ನಾನು ಬಂಧನಕ್ಕೆ ಒಳಗಾಗುವ ಮುನ್ನ ನನ್ನ ತಂದೆಯ ಪೂಜೆಗೆ ಅವಕಾಶ ನೀಡಲಿಲ್ಲ. ಹೀಗಾಗಿ ಕಣ್ಣೀರು ಹಾಕಿದ್ದೆ. ಈ ವಿಚಾರವಾಗಿ ಅನೇಕರು ಸಾಕಷ್ಟು ಟೀಕೆ, ವ್ಯಾಖ್ಯಾನ ಮಾಡಿದರು. ಉಪ್ಪು ತಿಂದವನು ನೀರು ಕುಡಿಯಲೇಬೇಕು ಎಂದು ಹೇಳಿದ್ದರು. ಅವರಿಗೆ ಮುಂದಿನ ದಿನಗಳಲ್ಲಿ ನೀರು ಕುಡಿಸುತ್ತೇನೆ ಎಂದು ಗುಡುಗಿದರು.

    ಉಪ ಚುನಾವಣೆಯಲ್ಲಿ ಪಕ್ಷದ ಪರ ಕೆಲಸ ಮಾಡುತ್ತೇನೆ. ಆದರೆ ಮೇಲಿಂದ ಮೇಲೆ ನೋಟಿಸ್‍ಗಳು ಬರುತ್ತಿವೆ. ಹೀಗಾಗಿ ಕೋರ್ಟು, ಕಚೇರಿಗೆ ಅಲೆದಾಡುತ್ತಿದ್ದೇನೆ. ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕ್ಷಾಂಕಿಯಲ್ಲ. ದಿನೇಶ್ ಗುಂಡೂರಾವ್ ಅಧ್ಯಕ್ಷರಾಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದಾರೆ. ನಾನು ಪಕ್ಷದ ಕೆಲಸವನ್ನು ಮಾಡಬೇಕಿದೆ. ನನ್ನ ರಕ್ಷಣೆಯನ್ನು ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

    ಮಹದಾಯಿ ವಿಚಾರದಲ್ಲಿ ಬಿಜೆಪಿ ನಾಯಕರಿಗೆ ಒಂದು ನೋಟಿಫಿಕೇಷನ್ ಮಾಡಿಸಲು ಆಗಲಿಲ್ಲ. ಮತಗಳು ಎನ್ನುವುದು ಒಂದು ವ್ಯಾಪಾರವಾಗಿದೆ. ಮಹದಾಯಿ ವಿಚಾರದಲ್ಲಿ ಬಿಜೆಪಿಯವರಿಗೆ ನ್ಯಾಯ ಒದಗಿಸಿಕೊಡಲು ಆಗಲಿಲ್ಲ. ಹೀಗಾಗಿ ಅವರಿಗೆ ಮತದ ಮೂಲಕ ಉತ್ತರ ನೀಡಬೇಕು ಎಂದು ಕಿಡಿಕಾರಿದರು.

  • ಜೊತೆಗಿದ್ದು ಹೊಗಳಿದ್ದವ್ರು ಈಗ ನನ್ನ ವಿರುದ್ಧವೇ ಮಾತ್ನಾಡುತ್ತಿದ್ದಾರೆ: ಸಿದ್ದರಾಮಯ್ಯ

    ಜೊತೆಗಿದ್ದು ಹೊಗಳಿದ್ದವ್ರು ಈಗ ನನ್ನ ವಿರುದ್ಧವೇ ಮಾತ್ನಾಡುತ್ತಿದ್ದಾರೆ: ಸಿದ್ದರಾಮಯ್ಯ

    -ಶಿವಸೇನೆ ಈಗ ಕೋಮುವಾದಿಯಲ್ಲ

    ಮೈಸೂರು: ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಆಪ್ತರ ವಿರುದ್ಧ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಜೊತೆಗಿದ್ದು ನನ್ನ ಬಗ್ಗೆ ಹೊಗಳುತ್ತಿದ್ದವರು ಇದೀಗ ನನ್ನ ವಿರುದ್ಧವೇ ಮಾತನಾಡುತ್ತಿದ್ದಾರೆ. ನೀವು ನನ್ನ ವಿರುದ್ಧ ಬಿದ್ದರೆ ಕಷ್ಟ ಆಗುತ್ತದೆ. ಮುಂದೆ ನಿಮ್ಮ ಪರವಾಗಿ ಯಾರು ಮಾತನಾಡುತ್ತಾರೆ. ಇದಕ್ಕೆ ಯಾರು ಬರಬೇಕು ಅಂತ ನೀವು ಯೋಚನೆ ಮಾಡಿ ಎಂದು ಕಾಂಗ್ರೆಸ್ ಕಾರ್ಯಕರ್ತರನ್ನು ಪ್ರಶ್ನಿಸಿದ್ದಾರೆ.

    ನಾನು ಸಾಮಾಜಿಕ ನ್ಯಾಯದ ಪರವಾಗಿ ಇದ್ದೇನೆ. ಅದಕ್ಕೆ ನನ್ನ ಮೇಲೆ ಎಲ್ಲರೂ ಮುಗಿ ಬೀಳುತ್ತಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿಯವರು ನನ್ನ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ ಎಂದರು.

    ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಉಪ ಚುನಾವಣೆಯಲ್ಲಿ ಅನರ್ಹ ಶಾಸಕರನ್ನು ಸೋಲಿಸುವುದು ನಮ್ಮ ಉದ್ದೇಶ. ಅವರನ್ನ ಅನರ್ಹಗೊಳಿಸಲು ಹೋರಾಟ ಮಾಡಿದ್ದೆ. ಹೀಗಾಗಿ ಅವರಿಗೆ ನಾನೇ ಟಾರ್ಗೆಟ್ ಆಗಿದ್ದೇನೆ. ಎಲ್ಲ 15 ಕ್ಷೇತ್ರದ ಅಭ್ಯರ್ಥಿಗಳು ಫೈನಲ್ ಆಗಿದ್ದಾರೆ. ಈಗಾಗಲೇ ಕೆಲವರು ನಾಮಪತ್ರ ಸಲ್ಲಿಸಿದ್ದು, ಉಳಿದವರು ನಾಳೆ ಸಲ್ಲಿಸುತ್ತಾರೆ. ಉಪ ಚುನಾವಣೆಯಲ್ಲಿ 15 ಆಗದಿದ್ದರೂ 12 ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸಿದ್ದರಾಮಯ್ಯ ಬಂಡವಾಳ ಬಿಚ್ಚುತ್ತೇನೆ ಎಂಬ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ, 30 ವರ್ಷದಿಂದ ಬಿಚ್ಚದ ಬಂಡವಾಳವನ್ನು ಈಗ ಬಿಚ್ಚುತ್ತಾರಂತಾ? ಅಂದಿನಿಂದ ಆಗದ್ದು ಈಗ ಆಗುತ್ತಾ? ಅವರೇಲ್ಲ ಅನರ್ಹರಾಗಿ ಹತಾಶರಾಗಿದ್ದಾರೆ. ಅವರ ಮಾತಿಗೆ ಕಿಮ್ಮತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಮಾನ ಮರ್ಯಾದೆ ಇದ್ದಿದ್ದರೆ ಮಂತ್ರಿಯಾಗಿ ಕ್ಷೇತ್ರ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುತ್ತಿದ್ರಾ? ಕೋರ್ಟ್ ನಲ್ಲೇ ಅನರ್ಹರು ಅಂತ ಹಣೆಪಟ್ಟಿ ಕಟ್ಟುಕೊಂಡು ಬಂದಿದ್ದಾರೆ. ಈಗ ಗೆದ್ದು ಮಂತ್ರಿಯಾಗಿ ಕ್ಷೇತ್ರ ಅಭಿವೃದ್ಧಿ ಮಾಡುತ್ತಾರಾ? ಇದೇಲ್ಲ ಚುನಾವಣೆಗೆ ಮಾತ್ರ ಮಾತನಾಡುವ ಮಾತುಗಳು. ಎಚ್.ವಿಶ್ವನಾಥ್ ಅವರು ಸಹ ಚುನಾವಣೆಗೋಸ್ಕರ ಜಿಲ್ಲೆಯನ್ನು ಇಬ್ಭಾಗ ಮಾಡುವ ಮಾತು ಆಡುತ್ತಿದ್ದಾರೆ. 30 ವರ್ಷ ಕಾಂಗ್ರೆಸ್‍ನಲ್ಲಿ ಇದ್ದಾಗ ಹಾಗೂ ಕಳೆದ ವರ್ಷ ಜೆಡಿಎಸ್‍ನಲ್ಲಿ ಇದ್ದಾಗ ಯಾಕೆ ಜಿಲ್ಲೆಯ ವಿಭಜಣೆ ಬಗ್ಗೆ ಮಾತನಾಡಲಿಲ್ಲ. ಅನರ್ಹರಾಗಿ ಗೆಲ್ಲುವುದಕ್ಕೆ ಆಗುವುದಿಲ್ಲ ಅಂತ ಹುಣಸೂರನ್ನು ಜಿಲ್ಲೆ ಮಾಡುತ್ತೇನೆ ಅಂತ ಹೇಳಿದ್ದಾರೆ. ಇದು ಚುನಾವಣೆ ಗಿಮಿಕ್. ಇದು ವರ್ಕ್ ಆಗುವುದಿಲ್ಲ ಎಂದರು.

    ಶಿವಸೇನೆಯು ಅಧಿಕೃತವಾಗಿ ಎನ್‍ಡಿಎದಿಂದ ಹೊರ ಬಂದಿದೆ. ಹಾಗಾಗಿ ಶಿವಸೇನೆ ಈಗ ಕೋಮುವಾದಿಯಲ್ಲ. ಕೋಮುವಾದದಿಂದ ದೂರ ಉಳಿಯುವುದಾಗಿ ಶಿವಸೇನೆ ಹೇಳಿದೆ. ಇದರಿಂದಾಗಿ ಮಹಾರಾಷ್ಟ್ರದಲ್ಲಿ ಸರ್ಕಾರಕ ರಚನೆಗಾಗಿ ಎನ್‍ಸಿಪಿ ಹಾಗೂ ಕಾಂಗ್ರೆಸ್ ಶಿವಸೇನೆ ಜೊತೆ ಕೈ ಜೋಡಿಸಲು ಮುಂದಾಗಿವೆ. ಮುಂದೇನಾದರು ಶಿವಸೇನೆ ಕೋಮುವಾದ ಪ್ರತಿಪಾದಿಸಿದರೆ ಅದರಿಂದ ದೂರಾಗುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

  • ಅಥಣಿ, ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸೂರ್ಯ-ಚಂದ್ರರಷ್ಟೇ ಸತ್ಯ: ಸವದಿ

    ಅಥಣಿ, ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸೂರ್ಯ-ಚಂದ್ರರಷ್ಟೇ ಸತ್ಯ: ಸವದಿ

    ಬೆಳಗಾವಿ: ಸೂರ್ಯ-ಚಂದ್ರ ಹುಟ್ಟುವುದು ಎಷ್ಟು ಸತ್ಯವೊ ಅಥಣಿ, ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದು ಕೂಡ ಅಷ್ಟೇ ಸತ್ಯ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

    ಅಥಣಿಯಲ್ಲಿ ಮಾತನಾಡಿದ ಡಿಸಿಎಂ, ಉಪ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಹಾಗೂ ಕಾಗವಾಡ ಕ್ಷೇತ್ರದಿಂದ ಶ್ರೀಮಂತ ಪಾಟೀಲ್ ಗೆಲುವು ಖಚಿತ. ನಮ್ಮ ಕಾರ್ಯಕರ್ತರಲ್ಲಿ ಸ್ವಲ್ಪಮಟ್ಟಿಗೆ ಗೊಂದಲ ಇರುವುದು ಸತ್ಯ. ಅದನ್ನು ಮೂರು ದಿನಗಳಲ್ಲಿ ಸರಿ ಮಾಡುತ್ತೇನೆ. ಹೊಸ ಸೋಸೆ ಮನೆಗೆ ಬಂದಾಗ ಪ್ರಾರಂಭದಲ್ಲಿ ವ್ಯತ್ಯಾಸ ಇದ್ದೆ ಇರುತ್ತೆ. ಇದನ್ನ ಸರಿಪಡಿಸಿಕೊಂಡು ಹೋಗುತ್ತೇವೆ ಎಂದು ತಿಳಿಸಿದರು.

    ನನಗೆ ಯಾವುದೆ ರೀತಿಯ ಮುನಿಸಿಲ್ಲ. ಹಾಗೊಂದು ವೇಳೆ ಮುನಿಸಿದ್ದರೆ ಇಲ್ಲಿಗೆ ಬರುತ್ತಿರಲಿಲ್ಲ. ನಾನು ಯಾವಾಗಲೂ ನೇರ ಮತ್ತು ಸ್ಪಷ್ಟ ಇದ್ದೇನೆ. ಬಿಜೆಪಿಯ ಯಾವುದೇ ಕಾರ್ಯಕರ್ತರು ಪಕ್ಷದ ಹುದ್ದೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಿಲ್ಲ. ಎಲ್ಲರೂ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಾರೆ. ನೂರಕ್ಕೆ ನೂರರಷ್ಟು ನಾವೇ ಮತ ಹಾಕಿಸಿ ಮಹೇಶ್ ಕುಮಟಳ್ಳಿ ಅವರನ್ನು ಗೆಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.

    ಇದಕ್ಕೂ ಮುನ್ನ ಅಥಣಿ ಮತಕ್ಷೇತ್ರದ ಚುನಾವಣೆ ಹಿನ್ನೆಲೆ ಪಟ್ಟಣದ ಆರ್.ಎಸ್.ಎಚ್ ಕುಲಕರ್ಣಿ ಸಭಾಭವನದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಆದರೆ ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗ ಬೇಕಿದ್ದ ಸಭೆ ಬರೋಬ್ಬರಿ 3 ಗಂಟೆ ತಡವಾಗಿ ಪ್ರಾರಂಭವಾಯಿತು. ಲಕ್ಷ್ಮಣ ಸವದಿ ಕಾರ್ಯಕ್ರಮಕ್ಕೆ ಬರುತ್ತಾರಾ ಅಥವಾ ಇಲ್ಲವಾ ಎನ್ನುವುದೇ ಭಾರೀ ಗೊಂದಲ ಮೂಡಿಸಿತ್ತು. ಈ ಮಧ್ಯೆ ಸಭೆಗೆ ಹೋಗದಂತೆ ಲಕ್ಷ್ಮಣ ಸವದಿ ಅವರನ್ನು ಅಭಿಮಾನಿಗಳು, ಕೆಲ ಬಿಜೆಪಿ ಕಾರ್ಯಕರ್ತರು ತಡೆದರು. ನಂತರ ಮಾಜಿ ಸಿಎಂ ಜಗದೀಶ ಶೆಟ್ಟರ್, ಕುಡಚಿ ಶಾಸಕ ಪಿ.ರಾಜು, ಮಹೇಶ ಕುಮಟಳ್ಳಿ ಸೇರಿದಂತೆ ಬಿಜೆಪಿ ನಾಯಕರು ಲಕ್ಷ್ಮಣ ಸವದಿ ಅವರ ಮನೆಗೆ ತೆರಳಿ ಸಭೆಗೆ ಕರೆತರಲು ತೆರಳಿದ್ದರು. ಆಗ ಡಿಸಿಎಂ ಮನೆ ಮುಂದೆ ಹೈಡ್ರಾಮಾನೇ ನಡೆಯಿತು.

    ಜಗದೀಶ್ ಶೆಟ್ಟರ್ ಕಾರಿಗೆ ಲಕ್ಷ್ಮಣ ಸವದಿ ಅಭಿಮಾನಿಗಳು ಅಡ್ಡಬಿದ್ದು ತಡೆದರು. ಅಲ್ಲದೆ ಜಗದೀಶ್ ಶೆಟ್ಟರ್ ಅವರನ್ನ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡರು. ಕುಡಚಿ ಶಾಸಕ ರಾಜು ಅವರಿಗೂ ಸವದಿ ಅಭಿಮಾನಿಗಳು ಕ್ಲಾಸ್ ತೆಗೆದುಕೊಂಡರು. ನಂತರ ಹರಸಾಹಸ ಪಟ್ಟು ಬಿಜೆಪಿ ನಾಯಕರು ಲಕ್ಷ್ಮಣ ಸವದಿ ಅವರನ್ನ ಸಭೆಗೆ ಕರೆದುಕೊಂಡು ಬಂದರು. ಆದರೆ ಅಲ್ಲೂ ಕೂಡ ಸವದಿ ಅಭಿಮಾನಿಗಳು ಯಾರನ್ನು ಕೇಳಿ ಸಭೆ ಕರೆದಿದ್ದೀರಿ ಎಂದು ಗಲಾಟೆ ಮಾಡಿದರು.ನಂತರ ಲಕ್ಷ್ಮಣ ಸವದಿ ಖುದ್ದಾಗಿ ಬಂದು ಅಭಿಮಾನಿಗಳಿಗೆ ಕೈ ಮುಗಿದು, ಕಾಲು ಬಿದ್ದು ಗಲಾಟೆ ಮಾಡದೆ ಇಲ್ಲಿಂದ ತೆರಳಿ ಎಂದು ಮನವಿ ಮಾಡಿದರು.

    ಕಾರ್ಯಕ್ರಮದಲ್ಲಿದ್ದ ಲಕ್ಷ್ಮಣ ಸವದಿ ಅವರು ಅಭಿಮಾನಿಗಳು ಜಗದೀಶ್ ಶೆಟ್ಟರ್, ಮಹೇಶ್ ಕುಮಠಳ್ಳಿ ಭಾಷಣದ ವೇಳೆ ತಮ್ಮ ನಾಯಕನ ಪರ ಜೈಕಾರ ಹಾಕಿ ಭಾಷಣಕ್ಕೆ ಅಡ್ಡಿ ಪಡಿಸಿದರು.

    https://www.youtube.com/watch?v=fk_vASHUtJU

  • ಡಿಕೆಶಿ ಸಜ್ಜನರ ಸಹವಾಸ ಮಾಡಲಿ: ರಾಜಗುರು ದ್ವಾರಕಾನಾಥ್

    ಡಿಕೆಶಿ ಸಜ್ಜನರ ಸಹವಾಸ ಮಾಡಲಿ: ರಾಜಗುರು ದ್ವಾರಕಾನಾಥ್

    – ಅಹರ್ನ ಶಾಸಕರಿಗೆ ಶಿಕ್ಷೆ ಫಿಕ್ಸ್

    ಹಾಸನ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಜ್ಜನರ ಸಹವಾಸ ಮಾಡಲಿ ಎಂದು ರಾಜಗುರು ದ್ವಾರಕಾನಾಥ್ ಸಲಹೆ ನೀಡಿದ್ದಾರೆ.

    ಹುಟ್ಟೂರು ರಾಮನಗರ ಜಿಲ್ಲೆಯ ಚನ್ನರಾಯಪಟ್ಟಣದ ಅಣತಿ ಗ್ರಾಮದಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರಿಗೆ ನಮ್ಮ ಮನೆ ಬಾಗಿಲು ತೆರೆದಿದೆ. ಅವರಿಗೆ ಈಗ ಎದುರಾಗಿರುವುದು ಕಂಟಂಕ ಅಲ್ಲ. ರಾಮ ವನವಾಸ ಮುಗಿಸಿದ ಮೇಲೆ ಅಯೋಧ್ಯೆಗೆ ಬಂದು ಕೂರಲಿಲ್ಲವೆ? ಅಂತೆ ಡಿ.ಕೆ.ಶಿವಕುಮಾರ್ ಅವರು ಹೊರ ಬಂದಿದ್ದಾರೆ. ಇನ್ನು ಮುಂದೆ ಸಜ್ಜನರ ಸಹವಾಸ ಮಾಡಲಿ ಎಂದು ತಿಳಿಸಿದ್ದಾರೆ.

    ಡಿ.ಕೆ.ಶಿವಕುಮಾರ್ ಅವರು ಇಲ್ಲಿವರೆಗೂ ನನ್ನ ಬಳಿ ಬಂದಿಲ್ಲ. ಅವರು ಅಲ್ಲೆಲ್ಲೋ ಹೋಗಿದ್ದಾರೆ ಎನ್ನುತ್ತಾರೆ. ನಾನು ಅವರನ್ನ ಸಂಪರ್ಕಿಸಿಲ್ಲ. ಅವರೊಂದಿಗೆ ಯಾರೂ ಇಲ್ಲದಿದ್ದಾಗ ನಾನಿದ್ದೆ. ಅವರ ಜೀವನದಲ್ಲಿ ಮೊದಲು ಬಂದವನು ನಾನು. ಬಂಗಾರಪ್ಪ ಮಂತ್ರಿಮಂಡಲದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಸಚಿವರಾಗಿ ಮಾಡಿದ್ದೆ. ಮಾಜಿ ಸಚಿವರ ಜೀವನದಲ್ಲಿ ನನ್ನ ಪಾತ್ರ ಬಹಳ ಇದೆ. ನಮ್ಮ ಮನೆಗೆ ಬರುವರೆಲ್ಲಾ ದೇವರೆ. ಡಿ.ಕೆ.ಶಿವಕುಮಾರ್ ಗಂಧದ ಜೊತೆಗೆ ಗುದ್ದಾಡಲಿ. ಉತ್ತಮರೊಂದಿಗೆ ಹೋರಾಡಲಿ ಎಂದು ಹೇಳಿದರು.

    ಉಪ ಚುನಾವಣೆಯಲ್ಲಿ ಪಕ್ಷಾಂತರಿಗಳಿಗೆ ಆಘಾತ ಕಾದಿದೆ. ಅನರ್ಹ ಶಾಸಕರಿಗೆ ದೇವರೇ ಶಿಕ್ಷೆ ಕೊಡುತ್ತಾನೆ. ತಂದೆ-ತಾಯಿ ಬೈದರೆಂದು ಮನೆ ಬಿಟ್ಟು ಹೋಗಲು ಸಾಧ್ಯವೆ? ಪಕ್ಷ ತಾಯಿ ಸಮಾನ. ಸರಿ ಹೊಂದದೆ ಇದ್ದರೆ ಗೆದ್ದ ಪಕ್ಷದಿಂದ ಐದು ವರ್ಷ ಪೂರೈಸಿ ಬಿಡಬೇಕು. ಹೀಗೆ ಮಧ್ಯದಲ್ಲಿ ಪಕ್ಷ ಬಿಟ್ಟು ಹೋದರೆ ಸಾರ್ವಜನಿಕರ ಸಮಯ, ಹಣ ವ್ಯರ್ಥವಾಗುತ್ತದೆ ಎಂದು ಅನರ್ಹ ಶಾಸಕರ ವಿಚಾರದಲ್ಲಿ ಮಾರ್ಮಿಕವಾಗಿ ಭವಿಷ್ಯ ನುಡಿದರು.

    ನವೆಂಬರ್ 4ರಂದು ಗುರು ಮುಂದೆ ಚಲಿಸಿದ್ದಾನೆ. ಹೀಗಾಗಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಮಾರ್ಚ್ ವರೆಗೆ ಆಘಾತಗಳಿವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹುಷಾರಾಗಿ ಸರ್ಕಾರ ನಡೆಸಬೇಕು ಎಂದು ತಿಳಿಸಿದರು.