Tag: disqualified MLA Sudhakar

  • ಮೈತ್ರಿ ಸರ್ಕಾರದಲ್ಲಿ ನ್ಯಾಯ ಕೊಡಿಸೋಕೆ ನಿಮ್ಮ ಕೈಯಿಂದ ಆಗಲಿಲ್ಲ – ಸಿದ್ದು ವಿರುದ್ಧ ಸುಧಾಕರ್ ಕಿಡಿ

    ಮೈತ್ರಿ ಸರ್ಕಾರದಲ್ಲಿ ನ್ಯಾಯ ಕೊಡಿಸೋಕೆ ನಿಮ್ಮ ಕೈಯಿಂದ ಆಗಲಿಲ್ಲ – ಸಿದ್ದು ವಿರುದ್ಧ ಸುಧಾಕರ್ ಕಿಡಿ

    ಚಿಕ್ಕಬಳ್ಳಾಪುರ: ನಾವು ಸ್ವಾಭಿಮಾನಿಗಳು, ಸ್ವಾರ್ಥಿಗಳಲ್ಲ, ಹಂಗಂತ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದೇವೆ ಎಂದು ಎಲ್ಲಿಯೂ ಹೇಳಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಅನರ್ಹ ಶಾಸಕ ಸುಧಾಕರ್ ತಿರುಗೇಟು ನೀಡಿದ್ದಾರೆ.

    ತಾಲೂಕಿನ ಕುಪ್ಪಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ನಮಗೆ ನ್ಯಾಯ ಕೊಡಿಸೋಕೆ ನಿಮ್ಮ ಕೈಯಿಂದ ಆಗಲಿಲ್ಲ. ಸಿದ್ದರಾಮಯ್ಯ ನಾಯಕತ್ವದಲ್ಲಿ ನಮ್ಮ ಸ್ವಾಭಿಮಾನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರೇ ಘೋಷಣೆ ಮಾಡಿದ ಮೆಡಿಕಲ್ ಕಾಲೇಜಿಗೆ ಅನುದಾನ ಕೊಡಲಿಲ್ಲ. ಅನುದಾನ ಯಾಕೆ ಕೊಡಲಿಲ್ಲ? ಚಿಕ್ಕಬಳ್ಳಾಪುರ ಜಿಲ್ಲೆಗೆ ಕಾಲೇಜು ಉಪಯುಕ್ತ ಇಲ್ಲದ್ದಿದ್ದರೆ ಕನಕಪುರಕ್ಕೆ ಉಪಯುಕ್ತವಿದೆಯೇ ಎಂದು ಪ್ರಶ್ನಿಸಿದರು.

    ವಿವಿಧ ಕಾರಣಗಳಿಂದಾಗಿ ನಮ್ಮ ಸ್ವಾಭಿಮಾನ ಉಳಿಸಿಕೊಳ್ಳಲು, ಜನರ ಹಿತ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿಯೇ ರಾಜೀನಾಮೆ ನೀಡಿದ್ದೇವೆ ಎಂದು ತಿರುಗೇಟು ನೀಡಿದರು.

    ಸಿದ್ದರಾಮಯ್ಯನವರೇ ನೀವು ರಾಜಕೀಯ ಪ್ರಾರಂಭ ಮಾಡಿದ ಪಕ್ಷ ಯಾವುದು? ನೀವು ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದು ಯಾಕೆ? ಬಹುಶಃ ಸೋನಿಯಾಗಾಂಧಿ ಹಾಗೂ ಇಂದಿರಾ ಗಾಂಧಿಯವರನ್ನು ಬಹಳ ಟೀಕೆ ಮಾಡಿದವರ ಪೈಕಿ ರಾಜ್ಯದಲ್ಲಿ ನೀವೇ ಮೊದಲಿಗರು. ಆದರೆ ಈಗ ನೀವು ಕಾಂಗ್ರೆಸ್ ಪಕ್ಷ ಸೇರಿಲ್ಲವೇ? ರಾಜಕೀಯ ಬದುಕಲ್ಲಿ ಕೆಲವು ತಿರುವುಗಳಿರುತ್ತವೆ. ಅದು ನಿಮ್ಮ ಜೀವನದಲ್ಲೂ ಆಗಿದೆ. ರಾಜಕಾರಣಕ್ಕೋಸ್ಕರ ನಮ್ಮನ್ನು ಟೀಕೆ ಮಾಡುವುದು ಸರಿಯಲ್ಲ ಎಂದು ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದರು.

  • ಶಿವಶಂಕರರೆಡ್ಡಿ ವಿರುದ್ಧ ಸುಧಾಕರ್ ಬೆಂಬಲಿಗರಿಂದ ಎಫ್‍ಐಆರ್

    ಶಿವಶಂಕರರೆಡ್ಡಿ ವಿರುದ್ಧ ಸುಧಾಕರ್ ಬೆಂಬಲಿಗರಿಂದ ಎಫ್‍ಐಆರ್

    ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಎನ್.ಎಚ್ ಶಿವಶಂಕರರೆಡ್ಡಿ ವಿರುದ್ಧ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊದಲು ಎನ್‍ಸಿಆರ್(ಗಂಭೀರವಲ್ಲದ ಪ್ರಕರಣ) ದಾಖಲಾಗಿತ್ತು. ಆದರೆ ಈ ಬಗ್ಗೆ ಸುಧಾಕರ್ ಬೆಂಬಲಿಗ ಚಿಕ್ಕಬಳ್ಳಾಪುರ ನಿವಾಸಿ ರವಿಚಂದ್ರ ಎಂಬವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಶಿವಶಂಕರರೆಡ್ಡಿ ವಿರುದ್ಧ ಪಿಸಿಆರ್(ನಾಗರಿಕ ಹಕ್ಕುಗಳ ರಕ್ಷಣಾ ಕಾಯ್ದೆ) ಅಡಿ ದೂರು ಸಲ್ಲಿಸಿದ್ದು, ಶಿವಶಂಕರರೆಡ್ಡಿ ಹೇಳಿಕೆ ಕುರಿತು ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದಾರೆ.

    ರವಿಚಂದ್ರ ಅವರ ಅರ್ಜಿ ಮಾನ್ಯ ಮಾಡಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಶಿವಶಂಕರರೆಡ್ಡಿ ಹೇಳಿಕೆ ಸಂಬಂಧ ಡಿಸೆಂಬರ್ 2ರೊಳಗೆ ತನಿಖೆ ನಡೆಸಿ ವರದಿ ನೀಡುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದೆ. ಸದ್ಯ ಶಿವಶಂಕರರೆಡ್ಡಿ ವಿರುದ್ಧ ಅನರ್ಹ ಶಾಸಕ ಸುಧಾಕರ್ ಕಾನೂನು ಸಮರ ಸಾರಿದ್ದು, ಶಿವಶಂಕರರೆಡ್ಡಿ ವಿರುದ್ಧ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 120ಬಿ(ಅಪರಾಧ ಪಿತೂರಿ), 121(ಯುದ್ಧಕ್ಕೆ ಪ್ರಚೋದಿಸುವುದು), 124(ಆಕ್ರಮಣಕಾರಿ ಹೇಳಿಕೆ), 141(ಕಾನೂನು ಬಾಹಿರ ಸಭೆ), 506 (ಬೆದರಿಕೆ) ಅಡಿ ಪ್ರಕರಣ ದಾಖಲಾಗಿದೆ.

    ಅಕ್ಟೋಬರ್ 19ರಂದು ಗೌರಿಬಿದನೂರು ತಾಲೂಕಿನ ಗಂಗಸಂದ್ರ ಬಳಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಶಿವಶಂಕರರೆಡ್ಡಿ ಸುಧಾಕರ್ ವಿರುದ್ಧ ಹರಿಹಾಯ್ದಿದ್ದರು. ರಾಜ್ಯ ಸರ್ಕಾರ ಈಗಾಗಲೇ ಘೋಷಣೆ ಮಾಡಿರುವ ನೂತನ ಮಂಚೇನಹಳ್ಳಿ ತಾಲೂಕಿಗೆ ಗೌರಿಬಿದನೂರು ಹಳ್ಳಿಗಳನ್ನು ಸೇರಿಸಲು ವಿರೋಧ ವ್ಯಕ್ತಪಡಿಸಿದ್ದರು. ಮಾತನಾಡುವ ಭರದಲ್ಲಿ ಶಿವಶಂಕರರೆಡ್ಡಿ ಅವರು ಗೌರಿಬಿದನೂರು ತಂಟೆಗೆ ಬಂದರೆ ಅನರ್ಹ ಶಾಸಕ ಸುಧಾಕರ್ ಕೈ ಕತ್ತರಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ಸುಧಾಕರ್ ಬೆಂಬಲಿಗರು ಎಫ್‍ಐಆರ್ ದಾಖಲಿಸಿದ್ದಾರೆ.

  • ಸುಧಾಕರ್‌ಗೆ ಮಣೆ- ಬಿಜೆಪಿ ಕಾರ್ಯಕರ್ತರ ಅಸಮಾಧಾನ, ನಳಿನ್‌ಗೆ ದೂರು

    ಸುಧಾಕರ್‌ಗೆ ಮಣೆ- ಬಿಜೆಪಿ ಕಾರ್ಯಕರ್ತರ ಅಸಮಾಧಾನ, ನಳಿನ್‌ಗೆ ದೂರು

    ಚಿಕ್ಕಬಳ್ಳಾಪುರ: ಅನರ್ಹ ಶಾಸಕ ಸುಧಾಕರ್ ಬೆಂಬಲಿಗರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಣೆ ಹಾಕುತ್ತಿದ್ದು, ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಂಜುನಾಥ್ ಕಾರ್ಯಕರ್ತರೊಂದಿಗೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನ ಭೇಟಿಯಾಗಿ ದೂರು ಸಲ್ಲಿಸಿದ್ದಾರೆ.

    ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಎಲ್)ದಲ್ಲಿ ನಳಿನ್ ಕುಮಾರ್ ಅವರನ್ನು ಮಂಜುನಾಥ್ ಭೇಟಿಯಾಗಿದ್ದಾರೆ. ಅನರ್ಹ ಶಾಸಕ ಸುಧಾಕರ್ ಬೆಂಬಲಿಗರಿಗೆ ಮುಖ್ಯಮಂತ್ರಿಗಳು ಮಣೆ ಹಾಕುತ್ತಿದ್ದಾರೆ. ಈ ಮೂಲಕ ಬಿಜೆಪಿಯ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ. ಸುಧಾಕರ್ ಬೆಂಬಲಿಗರಿಗೆ ಹೆಚ್ಚು ಅಧಿಕಾರ ನೀಡುತ್ತಿದ್ದು, ಇದರಿಂದಾಗಿ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಿಗೆ ಅಧಿಕಾರ ಸಿಗದಂತಾಗಿದೆ ಎಂದು ಮಂಜುನಾಥ್ ಅಳಲು ತೋಡಿಕೊಂಡಿದ್ದಾರೆ.

    ಮುಖ್ಯಮಂತ್ರಿ ಹಾಗೂ ಸರ್ಕಾರದ ನಡೆ ವಿರುದ್ಧ ಕಟೀಲ್‌ಗೆ ದೂರು ನೀಡಿರುವ ಮಂಜುನಾಥ್, ಈ ಕುರಿತು ಚಿತ್ತ ಹರಿಸುವಂತೆ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ನಂತರ ಮಂಜುನಾಥ್ ನೇತೃತ್ವದ ಬಿಜೆಪಿ ನಿಯೋಗ ಕಟೀಲ್ ಅವರನ್ನು ಭೇಟಿ ಮಾಡಿತ್ತು. ಈ ಮೂಲಕ ತಮ್ಮ ಅಹವಾಲನ್ನು ನಾಯಕರಿಗೆ ಸಲ್ಲಿಸಿದ್ದಾರೆ.

    ಈ ಎಲ್ಲ ಬೆಳವಣಿಗೆ ಬೆನ್ನಲ್ಲೇ ಕಂದಾಯ ಸಚಿವ ಆರ್.ಆಶೋಕ್ ಕಾರಿನಲ್ಲೇ ಅನರ್ಹ ಶಾಸಕ ಸುಧಾಕರ್ ಸುತ್ತಾಡಿದ್ದಾರೆ. ವೈದ್ಯಕೀಯ ಕಾಲೇಜು ಜಾಗ ವೀಕ್ಷಣೆಗೆ ಆಗಮಿಸಿದ್ದ ಆರ್.ಆಶೋಕ್ ಜೊತೆಯಲ್ಲಿ ಸುಧಾಕರ್ ಸಹ ತೆರಳಿದ್ದಾರೆ. ಇಬ್ಬರೂ ಒಟ್ಟಿಗೆ ಕಾಲೇಜು ಜಾಗವನ್ನು ವೀಕ್ಷಣೆ ಮಾಡಿದರು. ಚಿಕ್ಕಬಳ್ಳಾಪುರ ತಾಲೂಕಿನ ಆರೂರು ಬಳಿ ವೈದ್ಯಕೀಯ ಕಾಲೇಜಿಗೆ ಜಾಗ ಗುರುತಿಸಲಾಗಿದೆ.

    ಈ ವೇಳೆ ಮಾತನಾಡಿದ ಸಚಿವ ಆರ್.ಅಶೋಕ್, ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜಿಗೆ ಜಾಗ ಮಂಜೂರು ಮಾಡಲಾಗಿದೆ. ಆರೂರು ಗ್ರಾಮದ ಸರ್ವೆ ನಂಬರ್ 201 ಹಾಗೂ 202 ರಲ್ಲಿ 60 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಕಾನೂನು ಪ್ರಕಾರ ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ನೀಡಲಾಗಿದೆ. ಯಾವುದೇ ಅಡ್ಡದಾರಿ ಶಾರ್ಟ್ ಕಟ್ ಇಲ್ಲ. ಸುಧಾಕರ್ ಈ ಬಗ್ಗೆ ಹೋರಾಟ ಮಾಡಿದ್ದಾರೆ. ಜಿಲ್ಲಾ ಕೇಂದ್ರಗಳಿಗೆ ವೈದ್ಯಕೀಯ ಕಾಲೇಜು ನೀಡುವುದನ್ನು ಮೊದಲು ಪೂರ್ಣಗೊಳಿಸಬೇಕು ಎಂದರು.

    ತಾಲೂಕು ಮಟ್ಟಕ್ಕೆ ಮೆಡಿಕಲ್ ಕಾಲೇಜು ನೀಡುವುದು ಇನ್ನು ಬಂದಿಲ್ಲ. ಜಿಲ್ಲಾ ಕೇಂದ್ರಕ್ಕೆ ಮೆಡಿಕಲ್ ಕಾಲೇಜು ನೀಡಲು ಮಾತ್ರ ಶಕ್ತಿಯಿದೆ. ತಾಲೂಕು ಕೇಂದ್ರಕ್ಕೆ ಮೆಡಿಕಲ್ ಕಾಲೇಜು ಕೊಡುವ ಶಕ್ತಿ ಇಲ್ಲ. ಕಾನೂನು ಪ್ರಕಾರ ನೀಡಿದ್ದೇವೆ ಇದರಲ್ಲಿ ಯಾವುದೇ ದ್ವೇಷವಿಲ್ಲ. ಅಡ್ಡ ದಾರಿಯಲ್ಲಿ ಮಾಡುವ ಕಾರ್ಯಕ್ರಮ ಯಶಸ್ವಿಯಾಗುವುದಿಲ್ಲ. ರಾಮನಗರದಲ್ಲಿ ಮೆಡಿಕಲ್ ಕಾಲೇಜು ಆಗಿದ್ದರೆ ಯಾವುದೇ ತೊಂದರೆ ಇರುತ್ತಿರಲಿಲ್ಲ. ಆದರೆ ಜಿಲ್ಲಾ ಕೇಂದ್ರ ಬಿಟ್ಟು ತಾಲೂಕು ಕೇಂದ್ರಕ್ಕೆ ಕಾಲೇಜು ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ನೀಡಿದರು.