ನವದೆಹಲಿ: ಬಾಲಿವುಡ್ ಬೆಡಗಿ ದಿಶಾ ಪಟಾನಿ ಟೀಂ ಇಂಡಿಯಾದ ಸ್ಟಾರ್ ಬೌಲರ್ ಜಸ್‍ಪ್ರೀತ್ ಬುಮ್ರಾಗೆ ಕ್ಲೀನ್ ಬೌಲ್ಡ್ ಆಗಿದ್ದಾರೆ. ಅಲ್ಲದೆ ಅವರ ಬೌಲಿಂಗ್ ಸ್ಕಿಲ್ ಕುರಿತು ದಿಶಾ ಹಾಡಿ ಹೊಗಳಿದ್ದು, ಬುಮ್ರಾ ತಂಡವನ್ನು ಗೆಲ್ಲಿಸಬಹುದಾದ ಆಟಗಾರ ಎಂದಿದ್ದಾರೆ.
ಪಂದ್ಯವನ್ನು ಗೆಲ್ಲಿಸಬಹುದಾದ ಆಟಗಾರನನ್ನು ಆಯ್ಕೆ ಮಾಡಿಕೊಳ್ಳುವಾದರೆ, ನಾನು ಜಸ್‍ಪ್ರೀತ್ ಬುಮ್ರಾ ಅವರನ್ನು ಆಯ್ಕೆ ಮಾಡುತ್ತೇನೆ. ಟೀಂ ಇಂಡಿಯಾ ಹೊಂದಿರುವ ಆಟಗಾರರಲ್ಲಿ ಬುಮ್ರಾ ಉತ್ತಮ ಆಟಗಾರ. ಫೆಬ್ರವರಿ 2ರಂದು ನ್ಯೂಜಿಲೆಂಡ್ ವಿರುದ್ಧ ನಡೆಯುವ ಪಂದ್ಯದಲ್ಲಿ ಬುಮ್ರಾ, ಕಿವೀಸ್ ಆಟಗಾರರನ್ನು ಬಗ್ಗು ಬಡಿಯುವುದು ನಮ್ಮೆಲ್ಲರ ಹೆಮ್ಮೆಯ ಕ್ಷಣವಾಗಿರಲಿದೆ ಎಂದು ದಿಶಾ ಹೇಳಿದ್ದರು. ಅದರಂತೆಯೇ ಭಾನುವಾರ ನಡೆದ ಪಂದ್ಯದಲ್ಲಿ 3 ವಿಕೆಟ್ ಕಬಳಿಸುವ ಮೂಲಕ ಬುಮ್ರಾ ಉತ್ತಮ ಬೌಲಿಂಗ್ ಮಾಡಿದ್ದಾರೆ. ಇದನ್ನೂ ಓದಿ: ಮಿಂಚಿನ ವೇಗದಲ್ಲಿ ರನೌಟ್ ಮಾಡಿದ ರಾಹುಲ್- ವಿಡಿಯೋ

ಇದೇನಪ್ಪಾ ಸಿಕ್ಕಾಪಟ್ಟೆ ಹೊಗಳುತ್ತಿದ್ದಾರೆ ದಿಶಾ ಏನಾದರೂ ಬುಮ್ರಾ ಪ್ರೀತಿಯ ಬಲೆಗೆ ಬಿದ್ದರಾ ಎಂದು ಭಾವಿಸಬೇಡಿ. ಇವರು ಕ್ರಿಕೆಟ್ ಬಗೆಗಿನ ಪ್ರಶ್ನೆಗೆ ಮಾತ್ರ ಉತ್ತರಿಸಿದ್ದಾರೆ. ಮಲಾಂಗ್ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಕ್ರಿಕೆಟ್ ಬಗೆಗಿನ ತಮ್ಮ ಆಸಕ್ತಿಯನ್ನು ದಿಶಾ ಹೊರಹಾಕಿದ್ದಾರೆ. ಈ ವೇಳೆ ಬುಮ್ರಾ ಅವರನ್ನು ಹಾಡಿ ಹೊಗಳಿದ್ದಾರೆ.
ಮಲಾಂಗ್ ಚಿತ್ರದಲ್ಲಿ ನಟಿಸಿರುವ ಹಿರಿಯ ನಟ ಅನಿಲ್ ಕಪೂರ್ ಸಹ ಇದೇ ಕಾರ್ಯಕ್ರಮದಲ್ಲಿ ಮಾತನಾಡಿ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಮನಸಾರೆ ಕೊಂಡಾಡಿದ್ದಾರೆ. ಕೊಹ್ಲಿ ನಮ್ಮೆಲ್ಲರ ಬಾಸ್. ಯಾರೇ ಎದುರಾಳಿಯಾಗಿರಲಿ ಕ್ರಿಕೆಟ್ ಬಗೆಗಿನ ಅವರ ತುಡಿತ ಎಲ್ಲರನ್ನೂ ಮನಸೂರೆಗೊಳಿಸುತ್ತದೆ ಎಂದಿದ್ದಾರೆ.

ಮತ್ತೊಬ್ಬ ನಟ ಕುನಾಲ್ ಕೆಮು ರೋಹಿತ್ ಶರ್ಮಾರ ಬ್ಯಾಟಿಂಗ್ ಸ್ಕಿಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಟೀಂ ಇಂಡಿಯಾದ ಹಿಟ್‍ಮ್ಯಾನ್ ಎಂದು ಪ್ರಶಂಸಿಸಿದ್ದಾರೆ. ಅಲ್ಲದೆ ನಟ ಆದಿತ್ಯ ರಾಯ್, ಕೆ.ಎಲ್.ರಾಹುಲ್ ಅವರ ಆಲ್‍ರೌಂಡರ್ ಆಟಕ್ಕೆ ಫಿದಾ ಆಗಿರುವುದಾಗಿ ಸಹ ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಕೊನೆಯ ಹಾಗೂ 5ನೇ ಪಂದ್ಯದಲ್ಲಿ ಜಸ್‍ಪ್ರೀತ್ ಬುಮ್ರಾ 4 ಓವರ್ ಬೌಲಿಂಗ್ ಮಾಡಿ ಕೇವಲ 12 ರನ್ ನೀಡಿ, ಮೂರು ವಿಕೆಟ್ ಪಡೆದು ಮಿಂಚಿದರು. ಟೀಂ ಇಂಡಿಯಾ ಯುವ ವೇಗದ ಬೌಲರ್ ಗಳಾದ ನವದೀಪ್ ಸೈನಿ ಹಾಗೂ ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಕಿತ್ತರೆ, ವಾಷಿಂಗ್ಟನ್ ಸುಂದರ್ ಒಂದು ವಿಕೆಟ್ ಪಡೆದರು. ಆದರೆ ಕೇವಲ ಒಂದು ಓವರ್ ಬೌಲಿಂಗ್ ಮಾಡಿದ ಶಿವಂ ದುಬೆ ಯಾವುದೇ ವಿಕೆಟ್ ಪಡೆಯದೆ 34 ರನ್ ನೀಡಿ ತಂಡಕ್ಕೆ ದುಬಾರಿಯಾದರು.