Tag: disease

  • ಹಾಸಿಗೆ ಹಿಡಿದ ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ

    ಹಾಸಿಗೆ ಹಿಡಿದ ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ

    ಮಂಡ್ಯ: ತಿಥಿ ಸಿನೆಮಾ ಖ್ಯಾತಿಯ ಗಡ್ಡಪ್ಪ ಅನಾರೋಗ್ಯ ಪೀಡಿತರಾಗಿದ್ದು, ಹಾಸಿಗೆ ಹಿಡಿದಿದ್ದಾರೆ.

    ಮಂಡ್ಯ ತಾಲೂಕಿನ ನೊದೇಕೊಪ್ಪಲು ಗ್ರಾಮದವರಾದ ಚನ್ನೇಗೌಡ ಅವರು ಗಡ್ಡಪ್ಪ ಹೆಸರಿನಿಂದಲೇ ಪ್ರಸಿದ್ಧಿ ಪಡೆದಿದ್ದಾರೆ. ತಿಥಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಗಡ್ಡಪ್ಪ ಅವರಿಗೆ ನಾಲ್ಕು ದಿನಗಳ ಹಿಂದೆ ಪಾರ್ಶ್ವವಾಯು ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದ ಅವರಿಗೆ ಮಾತನಾಡಲೂ ಕೂಡ ಕಷ್ಟ ಆಗಿದೆ.

    ಮೊದಲೇ ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಗಡ್ಡಪ್ಪ ಅವರ ಆರೋಗ್ಯದಲ್ಲಿ ಏರುಪೇರಾದ್ದರಿಂದ ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯಕ್ಕೆ ಗಡ್ಡಪ್ಪಗೆ ವೈದ್ಯರು ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದ್ದಾರೆ. ಗಡ್ಡಪ್ಪಗೆ ಚಿಕಿತ್ಸೆ ನೀಡಿರುವ ವೈದ್ಯರು ಬೆಡ್ ರೆಸ್ಟ್ ತೆಗೆದುಕೊಳ್ಳಲು ಸೂಚಿಸಿದ್ದಾರೆ. ವೈದ್ಯರ ಸಲಹೆಯಂತೆ ಗಡ್ಡಪ್ಪಗೆ ಸಂಬಂಧಿಕರು ಔಷಧೋಪಚಾರ ಮಾಡುತ್ತಿದ್ದಾರೆ.

    ತಿಥಿ ಸಿನಿಮಾವನ್ನು ಈರೇಗೌಡ ಕಥೆ ರಚಿಸಿ ರಾಮ್ ರೆಡ್ಡಿ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಕರ್ನಾಟಕದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತ್ತು. ಅಷ್ಟೇ ಅಲ್ಲದೇ 63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಪ್ರಾದೇಶಿಕ ಚಲನಚಿತ್ರ ವಿಭಾಗ ಪ್ರಶಸ್ತಿಗಳಲ್ಲಿ ‘ತಿಥಿ’ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾನಿಪುರಿ C/o ಯಮಪುರಿ-ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್

    ಪಾನಿಪುರಿ C/o ಯಮಪುರಿ-ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್

    ಗದಗ: ಗೋಬಿಮಂಚೂರಿ ಹಾಗೂ ಪಾನಿಪುರಿ ಐಟಮ್ಸ್, ಈ ಹೆಸರು ಕೇಳಿದರೆ ಎಲ್ಲರಿಗೂ ತಿನ್ನಬೇಕು ಅನ್ನಿಸುತ್ತದೆ. ಆದರೆ ಜಂಕ್ ಫುಡ್ ಹೇಗೆ, ಎಲ್ಲಿ ತಯಾರಾಗುತ್ತೆ ಅನ್ನೋ ಹಿಂದಿನ ಅಸಲಿ ಸತ್ಯ ಬಯಲಾಗಿದೆ.

    ಇತ್ತೀಚೆಗೆ ಎಲ್ಲೆಂದರಲ್ಲಿ ಚೈನಿಸ್ ಫುಡ್‍ಗಳದ್ದೇ ಹಾವಳಿವಾಗಿದ್ದು, ಅದರಲ್ಲೂ ಗೋಬಿಮಂಚುರಿ, ಪಾನಿಪುರಿ ಐಟಮ್ಸ್ ಅಂದರೆ ಸಾಕು ಜನ ಮುಗಿಬೀಳುತ್ತಾರೆ. ಆದರೆ ಮುದ್ರಣಾ ಕಾಶಿ ಗದಗನಲ್ಲಿ ಲಾಭದಾಸೆಗಾಗಿ ಜಂಕ್‍ಫುಡ್ ಮಾಡುವ ವ್ಯಾಪರಿಗಳು ಅವುಗಳನ್ನ ಅನೇಕ ಕೊಳೆತ ವಸ್ತುಗಳಿಂದ ತಯಾರಿಸುತ್ತಾರೆ. ಬೆಟಗೇರಿಯ ಬಸ್ ನಿಲ್ದಾಣದ ಹಿಂಭಾಗ, ತೆಂಗಿನಕಾಯಿ ಬಜಾರ, ತೋಂಟದಾರ್ಯ ಮಠದ ಮುಂದಿನ ರಸ್ತೆ, ಹಾತಲಗೇರಿ ನಾಕಾ, ಮುಳಗುಂದ ನಾಕಾ ಸೇರಿದಂತೆ ಅನೇಕ ಕಡೆಗಳಲ್ಲಿ ಜಂಕ್ ಫುಡ್ ಹೇಗೆಲ್ಲಾ ತಯಾರುತ್ತವೆ ಎಂಬುದನ್ನು ಪಬ್ಲಿಕ್ ಟಿವಿತಂಡ ರಹಸ್ಯ ಕಾರ್ಯಾಚರಣೆ ಮೂಲಕ ಬಯಲು ಮಾಡಿದೆ.

    ಜಂಕ್‍ಫುಡ್‍ಗೆ ಕೆಟ್ಟಿರುವ ಹೂ ಕೋಸು, ಕ್ಯಾಬೇಜ್, ಸ್ಟಾಕ್ ಮೈದಾಹಿಟ್ಟು, ಟೆಸ್ಟಿಂಗ್ ಪೌಡರ್, ಐಸ್ ಹೀಗೆ ಅನೇಕ ವಸ್ತುಗಳನ್ನ ಬಳಸಿ ತಯಾರಿಸಲಾಗುತ್ತದೆ. ಇದನ್ನು ಸೇವಿಸುವುದರಿಂದ ಮನುಷ್ಯ ಮಾರಕ ಕಾಯಿಲೆ ಒಳಗಾಗುತ್ತಾನೆ. ಕೊಬ್ಬಿನಾಂಶ, ಹೆಪಟೈಟಿಸ್-ಬಿ, ಕಾಮಾಲೆ, ಕ್ಯಾನ್ಸರ್, ಟೈಫಾಯಿಡ್ ಸೇರಿದಂತೆ ಗ್ಯಾಸ್ಟ್ರಿಕ್ ನಂತಹ ಮಾರಕ ರೋಗಗಳು ನಿಮಗೆ ಗೊತ್ತಿಲ್ಲದೇ ನಿಮ್ಮನ್ನ ಆವರಿಸಿಕೊಳ್ಳುತ್ತವೆ ಎಂಬುದು ವೈದ್ಯರ ಸಲಹೆಯಾಗಿದೆ.

    ಗಬ್ಬೆದ್ದು ನಾರುವ ಜಾಗದಲ್ಲಿ, ಶೌಚಾಲಯ ಪಕ್ಕದಲ್ಲಿ ಇದನ್ನೆಲ್ಲಾ ತಯಾರಿಸುತ್ತಾರೆ. ಜೊತೆಗೆ ಪೇಂಟಿಂಗ್ ಪ್ಲಾಸ್ಟಿಕ್ ಡಬ್ಬಗಳಲ್ಲಿ ಸಾಸ್ ತಯಾರಿಸುತ್ತಾರೆ. ಕೆಟ್ಟು, ಹುಳುಹತ್ತಿದ ಕ್ಯಾಬೇಜ್ ಹಾಗೂ ಹೂ ಕೋಸು ಬಳಸಿ ಗೋಬಿ ತಯಾರಿಸುತ್ತಾರೆ. ಹೋಟೆಲ್‍ಗಳಲ್ಲಿ ಪುರಿ, ಮಿರ್ಚಿ-ಬಜ್ಜಿ, ಕಾಂದಾ ಬಜ್ಜಿ, ಸೇವ್ ತಯಾರಿಸಿ ಉಳಿದ ವೆಸ್ಟ್ ಆಗಿರುವ ಎಣ್ಣೆ ತಂದು ಪಾನಿಪುರಿ ತೆಗೆಯುತ್ತಾರೆ. ಅಷ್ಟೇ ಅಲ್ಲದೇ ಬೇರೆ ಬೇರೆ ಎಣ್ಣೆ, ಬಹಳ ದಿನದ ಸ್ಟಾಕ್ ಮೈದಾಹಿಟ್ಟು, ಟೆಸ್ಟಿಂಗ್ ಪೌಡರ್, ಹೀಗೆ ಅನುಪಯುಕ್ತ ವಸ್ತುಗಳು, ಕಲುಷಿತ ನೀರಲ್ಲಿ ಕೆಟ್ಟುಹೋದ ಐಸ್ ಹಾಕುತ್ತಾರೆ ಎಂದು ತಿಳಿದು ಬಂದಿದೆ.

    ಇವತ್ತು ನಾಯಿ ಕೊಡೆಗಳ ರೀತಿ ಪಾನಿಪೂರಿ ಸ್ಟಾಲ್‍ಗಳು, ಗೋಬಿ ಮಂಚೂರಿ ಸ್ಟಾಲ್‍ಗಳು ತಲೆ ಎತ್ತಿವೆ. ದಾರಿಲೀ ಹೋಗುತ್ತಿದ್ದರೆ ಘಮ ಘಮ ಅನ್ನೋ ವಾಸನೆ ಮೂಗಿಗೆ ರಪ್ ಅಂತಾ ಹೊಡೆಯುತ್ತದೆ. ಇವುಗಳ ನಡುವೆ ಗೋಲ್‍ಗಪ್ಪಾ ಮಾರೋರ ಹಾವಳಿ ಬೇರೆ ಹೆಚ್ಚಾಗಿದೆ ಎಂದು ಪಾನಿಪುರಿ ಪ್ರಿಯರಾದ ಕವಿತಾ ಹೇಳಿದ್ದಾರೆ.

    ಇಷ್ಟೆಲ್ಲಾ ಅಕ್ರಮ ನಡೆಯುತ್ತಿದ್ದರೂ ಆಹಾರ ಮತ್ತು ನಾಗರಿಕ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಸುಮ್ಮನ್ನಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅಧಿಕಾರಿಗಳು ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳದೇ ಹೋದರೆ ಆರೋಗ್ಯ ಇಲಾಖೆ ಹಾಗೂ ಆಹಾರ ಇಲಾಖೆ ಇದ್ದೂ ಇಲ್ಲದಂತಾಗುತ್ತವೆ. ಹೀಗಾಗಿ ಈ ಬಗ್ಗೆ ಗದಗನ ಜಿಲ್ಲಾ ಮಟ್ಟದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಕಳಪೆಮಟ್ಟದ ಪದಾರ್ಥಗಳನ್ನ ಬಳಸಿ ಸಿದ್ಧಗೊಳ್ಳುವ ಆಹಾರಕ್ಕೆ ಕಡಿವಾಣ ಹಾಕಬೇಕಿದೆ. ಈ ಮೂಲಕ ಅಮಾಯಕ ಜನರ ಆರೋಗ್ಯವನ್ನ ಉಳಿಸಬೇಕು ಎಂಬುದು ಜನರ ಉತ್ತಾಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂದು ವಿಶ್ವ ಏಡ್ಸ್ ದಿನ – ಈ ವಿಷಯಗಳು ನಿಮಗೆ ಗೊತ್ತಿರಲಿ

    ಇಂದು ವಿಶ್ವ ಏಡ್ಸ್ ದಿನ – ಈ ವಿಷಯಗಳು ನಿಮಗೆ ಗೊತ್ತಿರಲಿ

    1987ರಲ್ಲಿ ಭಾರತದಲ್ಲಿ ಮೊದಲ ಏಡ್ಸ್ ಪ್ರಕರಣ ಪತ್ತೆಯಾಯಿತು. 1990ರಿಂದ ಇದನ್ನು ಗಂಭೀರವಾಗಿ ಪರಿಗಣಿಸಿದ ಭಾರತ ಸರ್ಕಾರ ಮಾರಕ ಕಾಯಿಲೆ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಏಡ್ಸ್ ಗೆ ಗುರಿಯಾಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ತಿಳಿಸಿದೆ.

    ಕರ್ನಾಟಕ ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಹೆಚ್‍ಐವಿ ಮತ್ತು ಏಡ್ಸ್ ರೋಗ ಪೀಡಿತರಿದ್ದು, 2006ರಿಂದ ಸೋಂಕಿತರ ದೃಢೀಕರಣವಾಗಿರುವ ಪ್ರಕಾರ ART ಮಾತ್ರೆ ಪಡೆದುಕೊಳ್ಳುವರ ಸಂಖ್ಯೆ ಜಿಲ್ಲೆಯಲ್ಲಿ 14,994 ಇದ್ದು, ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಈ ಹಿಂದೆ ಬಾಗಲಕೋಟೆ ಜಿಲ್ಲೆಯಲ್ಲಿ ಹೆಚ್‍ಐವಿ ಮತ್ತು ಏಡ್ಸ್ ರೋಗ ಪೀಡಿತರ ಸಂಖ್ಯೆ ಹೆಚ್ಚಾಗಿದ್ದು, ಮೊದಲ ಸ್ಥಾನದಲ್ಲಿತ್ತು.

    ವಿಶ್ವ ಆರೋಗ್ಯ ಸಂಸ್ಥೆ (WHO) ನಡೆಸುವ ವಿಶ್ವ ಏಡ್ಸ್ ದಿನವನ್ನು 1988ರ ಡಿಸೆಂಬರ್ 1ರಿಂದ ಪ್ರತಿ ವರ್ಷ ಆಚರಿಸುತ್ತಾ ಬಂದಿದೆ. ಈ ದಿನದಂದು ಹೆಚ್‍ಐವಿ ಸೋಂಕಿನಿಂದ ಉಂಟಾಗುವ ಏಡ್ಸ್ ಸಾಂಕ್ರಾಮಿಕ ರೋಗದ ಬಗ್ಗೆ ಅರಿವು ಮೂಡಿಸುವ ಮೂಲಕ ಆಚರಿಸಲಾಗುತ್ತದೆ. 2017ರ ಏಡ್ಸ್ ದಿನವನ್ನು “”Right to Health” ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗಿತ್ತು. 2018ರ ಏಡ್ಸ್ ದಿನವನ್ನು #KnowYourStatus ಎಂಬ ಧ್ಯೇಯವಾಕ್ಯದೊಂದಿಗೆ ಆಚರಣೆ ಮಾಡಲಾಗುತ್ತಿದೆ.

    ಏಡ್ಸ್ ಅಂದರೇನು?
    ಅಕ್ವೈರ್ಡ್ ಇಮ್ಯುನೋ ಡಿಫಿಷಿಯೆನ್ಸಿ ಸಿಂಡ್ರೋಮ್ ಹೃಸ್ವ ರೂಪವೇ ಏಡ್ಸ್ (Acquired immune deficiency syndrome.) ಇದನ್ನು ರೋಗ ಅನ್ನುವಂತಕ್ಕಿಂತ ರೋಗಗಳ ಸರಮಾಲೆ ಎಂದು ಕರೆಯಬಹುದು. ಇದನ್ನು ಮೊಟ್ಟ ಮೊದಲ ಬಾರಿಗೆ 1981ರಲ್ಲಿ ಅಮೆರಿಕದಲ್ಲಿ ಗುರುತಿಸಲಾಯಿತು. ಭಾರತದಲ್ಲಿ 1986ರಲ್ಲಿ ಭಾರತದ ಚೆನ್ನೈನಲ್ಲಿ ಪತ್ತೆ ಮಾಡಲಾಯಿತು. ಏಡ್ಸ್ ಗೆ ಕಾರಣವಾದ ವೈರಸ್ ಹೆಚ್‍ಐವಿ (Human Immuno Deficiency Virus) ಇದನ್ನು ಮೊಟ್ಟ ಮೊದಲ ಬಾರಿಗೆ 1983ರಲ್ಲಿ ಫ್ರೆಂಚ್ ವಿಜ್ಞಾನಿಗಳು ಪತ್ತೆ ಹಚ್ಚಿದರು. 1984ರಲ್ಲಿ ಅಮೆರಿಕಾದ ವಿಜ್ಞಾನಿಗಳು ಏಡ್ಸ್ ಗೆ ಕಾರಣವಾಗುವ ವೈರಸ್ ಬಗ್ಗೆ ಸವಿವರವಾದ ಮಾಹಿತಿ ನೀಡಿದರು.

    ಅಭಾದತೆ: ರೋಗಗಳ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳಬಲ್ಲ ದೇಹದ ಸಾಮಥ್ರ್ಯಕ್ಕೆ ಅಭಾದತೆ ಎಂದು ಕರೆಯಲಾಗುತ್ತದೆ. ಈ ಅಭಾದತೆಯನ್ನು ಹಾಳುಮಾಡಬಲ್ಲ ರೋಗವೇ ಏಡ್ಸ್.

    ಏಡ್ಸ್ ಪತ್ತೆಯಾಗುವುದಕ್ಕೆ ಮುಂಚೆ, ಮಾನವರಲ್ಲಿ ಅಭಾದತೆ ಕುಂಠಿತಗೊಳ್ಳುವ ಮೂರು ಪರಿಸ್ಥಿತಿಗಳನ್ನು ಗುರುತಿಸಲಾಗಿತ್ತು.
    1. ಅನುವಂಶೀಯ (ತಂದೆ-ತಾಯಿಯಿಂದ ಮಕ್ಕಳಿಗೆ)
    2. ಪ್ರೇರಪಿತ (ಕಸಿ ಮಾಡುವಿಕೆಯಿಂದ)
    3. ಅರ್ಜಿತ (ಲೈಂಗಿಕ ಸಂಪರ್ಕದ ಮೂಲಕ ಉಂಟಾಗುವಿಕೆ)

    ಕುಂಠಿತಗೊಂಡ ಅಭಾದತೆಯು ಆಫ್ರಿಕಾದ ದೇಶಗಳಲ್ಲಿ ಹಾಗು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಏಷಿಯಾದ ಭಾರತ ಸೇರಿದಂತೆ ಇತರೆ ದೇಶಗಳಲ್ಲಿ ಹೆಚ್ಚಾಗಿ ಪತ್ತೆಯಾಗುತ್ತಿತ್ತು. ಆದರೆ ಇದನ್ನು ಪರಾವಲಂಬಿ ಜೀವಿಗಳಿಂದ ಉಂಟಾದ ರೋಗಗಳೆಂದು ಜೊತೆಗೆ ಪೋಷಣೆಯ ಕೊರತೆಯಿಂದಾಗಿ ಇನ್ನಷ್ಟು ಸಂಕೀರ್ಣಗೊಂಡ ಕಾಯಿಲೆಗಳಿಂದ ಭಾವಿಸಲಾಗಿತ್ತು.

    ಹೆಚ್‍ಐವಿ ರಚನೆ:
    ಹೆಚ್.ಐ.ವಿ ದುಂಡಾಗಿದ್ದು RNA ಯನ್ನು ಅನುವಂಶೀಯ ವಸ್ತುವನ್ನಾಗಿ ಹೊಂದಿದೆ. RNA ಸುತ್ತಲೂ ಪ್ರೋಟಿನ್ ಕವಚವಿದೆ. ಅದರ ಸುತ್ತಲೂ ಕೊಬ್ಬಿನ ಪದರ ಮಧ್ಯದಲ್ಲಿ ಆರ್.ಎನ್.ಎ ಜೊತೆಗೆ ರಿಸರ್ವ್ ಟ್ರಾನ್ಸ್ ಕಿಪ್ಟೇಸ್ ಎಂಬ ಕಿಣ್ವ ಇದೆ. ಹೆಚ್.ಐ.ವಿ ರಿಟ್ರೋವೈರಸ್ ಗಳ ಗುಂಪಿಗೆ ಸೇರುತ್ತದೆ. ಹೆಚ್.ಐ.ವಿ ಪೋಷಕ ಜೀವಿಯನ್ನು ಪ್ರವೇಶಿಸಿದ ನಂತರ ಲಿಂಪೋಸೈಟ್ ಗಳನ್ನು ನಾಶಪಡಿಸುತ್ತದೆ. ಬಿ ಮತ್ತು ಟಿ ಲಿಂಪೋಸೈಟ್ ಗಳು ಸೋಂಕಿನ ವಿರುದ್ಧ ದೇಹಕ್ಕೆ ರಕ್ಷಣೆಯನ್ನು ಒದಗಿಸುತ್ತದೆ.

    ಏಡ್ಸ್ ನ ಲಕ್ಷಣಗಳು:
    ಹೆಚ್‍ಐವಿ ವೈರಾಣುಗಳು ವ್ಯಕ್ತಿಯ ರಕ್ತವನ್ನು ಪ್ರವೇಶಿಸಿದ ಎರಡು ಅಥವಾ ಮೂರು ವಾರಗಳ ನಂತರ ಆತನಲ್ಲಿ ಜ್ವರ. ತಲೆನೋವು, ಕೀಲುಗಳಲ್ಲಿ ನೋವು ಹಾಗು ಬಾಯಿ ಮತ್ತು ಗಂಟಲಿನಲ್ಲಿ ಹುಣ್ಣುಗಳು ಕಾಣಿಸಿಕೊಳ್ಳುತ್ತವೆ. ದುಗ್ಧ ಗ್ರಂಥಿಗಳು ಊದಿಕೊಳ್ಳುವ ಜೊತೆಗೆ ಚರ್ಮದ ತುರಿಕೆ ಸಹ ಪ್ರಾರಂಭವಾಗುತ್ತದೆ. ಕೆಲವೊಮ್ಮೆ ತುರಿಕೆ ನಂತರ ಕಡಿಮೆ ಆಗುತ್ತದೆ. ಈ ಲಕ್ಷಣಗಳ ಜೊತೆಗೆ ವೈರಾಣುಗಳ ಸಂಖ್ಯೆ ಅಭಿವೃದ್ಧಿ ಹೊಂದುತ್ತಾ ಹೋಗುತ್ತದೆಯಾದರೂ ಯಾವುದೇ ಬಾಹ್ಯ ಲಕ್ಷಣಗಳು ಕಾಣಿಸಿಕೊಳ್ಳದೇ ಇರಬಹುದು.

    ಕ್ರಮೇಣ ದೇಹದ ರೋಗ ನಿರೋಧಕ ಶಕ್ತಿ ಕುಂದುತ್ತಾ ಹೋಗುತ್ತದೆ. ಏಡ್ಸ್ ರೋಗ ಪೂರ್ತಿ ಪ್ರಕಟವಾಗಲು ಮೊದಲು ದುಗ್ಧಗ್ರಂಥಿಗಳು ಊದಿಕೊಳ್ಳುತ್ತವೆ. ಅದರಲ್ಲಿಯೂ ಕತ್ತಿನ ಭಾಗದ ಸುತ್ತಮುತ್ತ ಈ ಊಟ ಕಂಡು ಬರುತ್ತದೆ. ಇದು ಏಡ್ಸ್ ರೋಗ ಸಂಪೂರ್ಣವಾಗಿ ಪ್ರಾರಂಭವಾಗಿರುವುದನ್ನು ಸೂಚಿಸುತ್ತದೆ. ಈ ಎಲ್ಲವನ್ನು ಮೊದಲ ಹಂತದ ಲಕ್ಷಣಗಳು ಎಂದು ಕರೆಯುತ್ತಾರೆ.

    ದ್ವಿತೀಯ ಹಂತದ ಲಕ್ಷಣಗಳು:
    1. ರೋಗ ನಿರೋಧಕ ಶಕ್ತಿ ಪೂರ್ಣವಾಗಿ ಕುಂದಿರುತ್ತದೆ.
    2. ಪ್ರತಿ ತಿಂಗಳು 10% ತೂಕ ಕಡಿಮೆ ಆಗುತ್ತದೆ.
    3. ಚರ್ಮದಲ್ಲಿ ತುರಿಕೆ, ಉಸಿರ್ನಾಳದಲ್ಲಿ ಉರಿಯೂತ, ಕೆಮ್ಮು ಹಾಗು ಕಫ ಉಂಟಾಗುವಿಕೆ
    4. ನಿರಂತರವಾಗಿ ತೀವ್ರ ಧಣಿವಾಗುವುದು.
    5. ಒಂದು ತಿಂಗಳಿಗೂ ದೀರ್ಘಕಾಲ ಉಳಿಯುವ ಜ್ವರ
    6. ಬಾಯಿಯಲ್ಲಿ ಬಿಳಿ ಮಚ್ಚೆಗಳು ಕಾಣಿಸಿಕೊಳ್ಳುಬವುದು.
    7. ಒಂದು ತಿಂಗಳಿಗೂ ಅಧಿಕ ಕಾಲ ಅತಿಸಾರ ಭೇದಿಯಾಗುದವುದು.
    8. ವ್ಯಕ್ತಿಯ ನೆನಪಿನನ ಶಕ್ತಿ ಕುಂದುತ್ತದೆ.

    ಸೋಂಕು ತಗುಲವ ರೀತಿ:
    1. ಸೋಂಕು ತಗುಲಿರುವ ವ್ಯಕ್ತಿಯ ಜೊತೆಗೆ ಅಸುರಕ್ಷಿತ ಲೈಂಗಿಕ ಸಂಪರ್ಕ: ಬಹುತೇಕ ಏಡ್ಸ್ ರೋಗಿಗಳು ಈಗಾಗಲೇ ಸೋಂಕು ತಗುಲಿರುವ ವ್ಯಕ್ತಿಗಳ ಜೊತೆಗೆ ಅಸುರಕ್ಷಿತ ಲೈಂಗಿಕ ಸಂಪರ್ಕ ಹೊಂದುವ ಮೂಲಕ ತಾವು ಸೋಂಕಿಗೆ ಒಳಗಾಗಿದ್ದಾರೆ.
    2. ಸೋಂಕು ತಗುಲಿದ ವ್ಯಕ್ತಿಯ ರಕ್ತವನ್ನು ದಾನ ಪಡೆಯುವ ಮೂಲಕ: ವೈರಾಣು ಇರುವ ರಕ್ತವನ್ನು ವ್ಯಕ್ತಿಯೊಬ್ಬನಿಂದ ದಾನ ಪಡೆದ ವ್ಯಕ್ತಿಗೆ ಸೋಂಕು ತಗುಲಬಹುದು.
    3. ಸೋಂಕು ತಗುಲಿದ ತಾಯಿಯಿಂದ ಮಗುವಿಗೆ: ಹೆಚ್‍ಐವಿ ಸೋಂಕು ತಗುಲಿರುವ ತಾಯಿಯಿಂದ ಆಕೆಯ ಮಗುವಿಗೆ ಈ ಕೆಳಗಿನ ರೀತಿಗಳಲ್ಲಿ ವೈರಾಣುಂವಿನ ಸೋಂಕು ಉಂಟಾಗಬಹುದು.
    ಎ. ಜರಾಯುವಿನ ಮೂಲಕ ಭ್ರೂಣಕ್ಕೆ(ಜರಾಯು ಎಂಬುದು ಬೆಳವಣಿಗೆಯಾಗುತ್ತಿರುವ ಭ್ರೂಣವನ್ನು ಗರ್ಭಾಶಯದ ಭಿತ್ತಿಗೆ ಜೋಡಿಸುವ ಒಂದು ಅಂಗ)
    ಬಿ. ಹೆರಿಗೆಯಾಗುವ ಸಂದರ್ಭದಲ್ಲಿ
    ಸಿ. ಮೊಲೆಯೂಡಿಸುವ ಮೂಲಕ
    4. ಸೋಂಕು ತಗುಲಿದ ವ್ಯಕ್ತಿಗಳು ಬಳಸಿದ ಸಿರಿಂಜ್ ಹಾಗೂ ಸೂಜಿಗಳನ್ನು ಸಂಸ್ಕರಿಸದೆ ಮತ್ತೆ ಬಳಕೆಸುವದರಿಂದ

    ಹೆಚ್‍ಐವಿ ಪತ್ತೆಗೆ ಇರುವ ಲಕ್ಷಣಗಳು:
    1. ಎಲಿಸಾ (ELISA) (Enzyme Linked Immunosorbent Assay)
    2. ಪಿಸಿಆರ್ ಪಾಲಿಮರೇಸ್ ಚೈನ್ ರಿಯಾಕ್ಷನ್ (Polymer Chain Reaction)
    3. ವೆಸ್ಟರ್ನ್ ಬ್ಲಾಟ್

    ಹೆಚ್‍ಐವಿ ವೈರಾಣವು ಒಬ್ಬ ವ್ಯಕ್ತಿಯ ದೇಹವನ್ನು ಪ್ರವೇಶಿಸಿದರೂ ದೀರ್ಘ ಸಮಯ ಯಾವುದೇ ರೋಗಲಕ್ಷಣವನ್ನು ಉಂಟು ಮಾಡದೇ ಇರಬಹುದು. ರೋಗವು ಪಕ್ವಗೊಳ್ಳುವ ಅವಧಿಯಲ್ಲಿ ಸೋಂಕು ತಗುಲಿದ ವ್ಯಕ್ತಿ ಸಾಮನ್ಯನಂತೆಯೇ ಇರುತ್ತಾನೆ. ಈ ಅವಧಿ ಮಕ್ಕಳಲ್ಲಿ 18 ರಿಂದ 24 ತಿಂಗಳಿದ್ದರೆ ಪ್ರೌಢವ್ಯಕ್ತಿಯಲ್ಲಿ 8 ರಿಂದ 10 ವರ್ಷಗಳಷ್ಟಿರಬಹುದು. ಒಂದು ತಿಳುವಳಿಕೆಯ ಪ್ರಕಾರ ಸೋಂಕು ತಗುಲಿದ ವ್ಯಕ್ತಿಗಳಲ್ಲಿ ಪ್ರತಿಶತ ಸುಮಾರು 50 ಮಂದಿಯಲ್ಲಿ ಏಡ್ಸ್ ರೋಗ ಸುಮಾರು ಹತ್ತು ವರ್ಷಗಳಲ್ಲಿ ಕಾಣಿಸಿಕೊಳ್ಳುತ್ತದೆ.

    ಏಡ್ಸ್ ಒಂದು ಸಾಂಕ್ರಾಮಿಕ ರೋಗವಾದರೂ ಅದು ಗಾಳಿ, ಆಹಾರಗಳ ಮೂಲಕ ಹರಡುವುದಿಲ್ಲ. ನೆಗಡಿ. ಇನ್ ಫ್ಲೂಯೆಂಜ್, ದಡಾರ ಮುಂತಾದ ರೋಗಗಳಂತೆ ಇದು ಸಾಂಕ್ರಾಮಿಕವಾಗಿ ಹರಡುವುದಿಲ್ಲ. ಇಂಥ ಒಂದು ಭಯಾನಕ ರೋಗಕ್ಕೆ ಯಾವುದೇ ರೀತಿಯ ಔಷಧವನ್ನು ಕಂಡುಹಿಡಿದಿಲ್ಲ. ಆದ್ರೆ ರೋಗ ಹರಡುವ ವೇಗವನ್ನು ಕುಂಠಿತಗೊಳಿಸುವ ಹಾಗೂ ರೋಗಿಯಲ್ಲಿ ಕಾಣಿಸಿಕೊಳ್ಳುವ ತಡೆಯುವ ಪ್ರಯತ್ನಗಳು ನಿರಂತರವಾಗಿ ಸಾಗಿವೆ.

    ಏಡ್ಸ್ ಈ ರೀತಿ ಹರಡಲ್ಲ:
    1. ಏಡ್ಸ್ ರೋಗಿ ಜೊತೆ ಹಸ್ತಲಾಘವ ಮಾಡುವ ಮೂಲಕ
    2. ಆಲಿಂಗನ ಮಾಡಿಕೊಳ್ಳುವ ಮೂಲಕ
    3. ಏಡ್ಸ್ ರೋಗಿ ಬಳಸಿದ ತಟ್ಟೆ, ಲೋಟ ಪಾತ್ರೆಗಳನ್ನು ಬಳಸುವುದರಿಂದ
    4. ರೋಗಿಯ ಜೊತೆ ಆಹಾರ ಸೇವಿಸುವುದರಿಂದ
    5. ಸಾರ್ವಜನಿಕ ಶೌಚಾಲಯಗಳನ್ನು, ಪಾರ್ಕ್, ಈಜುಕೊಳಗಳನ್ನು ಬಳಸುವುದರಿಂದ
    6. ಸೊಳ್ಳೆ ಅಥವಾ ಇತರ ಕೀಟಗಳ ಕಡಿತದಿಂದ

    ಎಚ್ಚರಿಕೆಯ ಕ್ರಮಗಳು
    1. ಸೋಂಕು ತಗುಲಿದ ವ್ಯಕ್ತಿಯ ಜೊತೆಗೆ ಲೈಂಗಿಕ ಸಂಪರ್ಕ ಹೊಂದುವುದನ್ನು ಸಂಪೂರ್ಣವಾಗಿ ತಡೆಯುವುದು.
    2. ಏಡ್ಸ್ ರೋಗಿ ಬಳಸಿದ ಸೂಜಿ ಸಿರಿಂಜ್ ಗಳನ್ನು ಬಳಸದೇ ಇರುವುದು
    3. ರಕ್ತದಾನ ಮಾಡುವುದಕ್ಕೆ ಇಲ್ಲವೇ ಪಡೆಯುವುದಕ್ಕೆ ಮುಂಚೆ ಹೆಚ್‍ಐವಿ ಸೋಂಕು ಇಲ್ಲದಿರುವುದನ್ನು ಖಚಿತ ಪಡಿಸಿಕೊಳ್ಳುವುದು.
    4. ಹೆಚ್‍ಐವಿ ಸೋಂಕು ತಗುಲಿರುವ ತಾಯಿಯ ತನ್ನ ಮಗುವಿಗೆ ಮೊಲೆಹಾಲು ನೀಡುವುದನ್ನು ತಡೆಯುವುದು.
    5. ಮಾದಕ ದ್ರವ್ಯ ವ್ಯಸನಿಯಾಗದಂತೆ ವ್ಯಕ್ತಿಗಳನ್ನು ತಡೆಯುವುದು. ಅಂಥವರಿಗೆ ದ್ರವ್ಯಸೇವನೆಯಯ ಹಂತದಲ್ಲಿ ಸೋಂಕು ತಗುಲುವ ಸಾಧ್ಯತೆಗಳಿರುತ್ತವೆ.

    ಏಡ್ಸ್ ಸೋಂಕಿತರಿಗೆ ಇರುವ ಯೋಜನೆಗಳು:
    ಅಂತ್ಯೋದಯ ಯೋಜನೆ, ರಾಜೀವ್ ಗಾಂಧಿ ವಸತಿ ಮನೆ ನಿರ್ಮಾಣ, ಉಚಿತ ಪರೀಕ್ಷೆ, ಕಡ್ಡಾಯ ಶಿಕ್ಷಣ, ವಿದ್ಯಾರ್ಥಿ ವೇತನ, ಧನಶ್ರೀ, ಮೈತ್ರಿ, ಚೇತನ ಯೋಜನೆ, ಉಚಿತ ಕಾನೂನು ಸೇವೆ, ಕಾಬಾ ಯೋಜನೆಗಳನ್ನು ಸರ್ಕಾರ ಅನುಷ್ಠಾನಗೊಳಿಸಿದೆ. ಸೋಂಕಿತ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆರೋಗ್ಯ ಆರೈಕೆಗಾಗಿ ಮಾಸಿಕ 650 ರೂ. ಮತ್ತು 750 ರೂ. ನೀಡಲಾಗುತ್ತಿದೆ.

    ಏಡ್ಸ್ ಬಗ್ಗೆ ಅರಿವು ಮೂಡಿಸಲು ಭಾರತೀಯ ರೈಲ್ವೆಯು ರೆಡ್ ರಿಬ್ಬನ್ ಎಕ್ಸ್ ಪ್ರೆಸ್ ಎಂಬ ಹೊಸ ರೈಲನ್ನು 2007 ಡಿಸೆಂಬರ್ 1ರಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಉದ್ಘಾಟಿಸಿದ್ದರು. 2017 ಡಿಸೆಂಬರ್ 2ರಂದು ಭಾರತ ಸರ್ಕಾರ ಆರೋಗ್ಯ ಮತ್ತು ಕಲ್ಯಾಣ ಕುಟುಂಬ ಕಲ್ಯಾಣ ಇಲಾಖೆ 2001-2014ರ ಅವಧಿಯ ರಾಷ್ಟ್ರೀಯ ಕಾರ್ಯತಂತ್ರ ಯೋಜನೆ ಮತ್ತು ಸಂಪರ್ಕ ಅಭಿಯಾನವನ್ನು ಡಿಸೆಂಬರ್ 1ರ ಏಡ್ಸ್ ದಿನಾಚರಣೆ ಅಂಗವಾಗಿ ಉದ್ಘಾಟಿಸಿದೆ. 2030ರೊಳಗೆ ಸಾಂಕ್ರಾಮಿಕ ರೋಗ ಏಡ್ಸ್ ನ್ನು ಸಂಪೂರ್ಣ ಹತೋಟಿಗೆ ತರುವ ಉದ್ದೇಶದಿಂದ 90:90:90 ಕಾರ್ಯತಂತ್ರವನ್ನು ಕೇಂದ್ರ ಸರ್ಕಾರ ರೂಪಿಸಿದೆ. ಇದರ ಅರ್ಥ ಶೇ.90 ದೇಶದ ಜನರಿಗೆ ಏಡ್ಸ್ ರೋಗದ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಮೂಡಿಸುವುದು. ಶೇ.90 ರಷ್ಟು ಹೆಚ್‍ಐವಿ ರೋಗದ ಸ್ಥಿತಿಯನ್ನು ಶೀಘ್ರವಾಗಿ ಗುರುತಿಸಿ ಎ.ಆರ್.ಟಿ. ಚಿಕಿತ್ಸೆ ನೀಡುವುದು ಮತ್ತು ಶೇ.90 ರಷ್ಟು ಜನರಿಗೆ ಎಆರ್‍ಟಿ (Antietroviral Theraphy) ಚಿಕಿತ್ಸೆ ನೀಡುವುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv 

  • ಮಹಾಮಳೆ ತಂದ ಆಪತ್ತು- ಇಲಿ ಜ್ವರಕ್ಕೆ 25 ಮಂದಿ ಸಾವು

    ಮಹಾಮಳೆ ತಂದ ಆಪತ್ತು- ಇಲಿ ಜ್ವರಕ್ಕೆ 25 ಮಂದಿ ಸಾವು

    ತಿರುವನಂತಪುರಂ: ಮಹಾಮಳೆಯ ಪ್ರವಾಹದಿಂದ ತತ್ತರಿಸಿದ್ದ ಕೇರಳ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದು, ಈ ವೇಳೆಯೇ ಇಲಿ ಜ್ವರದ ಭೀತಿ ಶುರುವಾಗಿದೆ. ಕಳೆದ 1 ತಿಂಗಳಿನಲ್ಲಿ ಇಲಿ ಜ್ವರಕ್ಕೆ 28 ಮಂದಿ ಸಾವನ್ನಪ್ಪಿದ್ದು, 1 ವಾರದಲ್ಲೇ 9 ಮಂದಿ ಶಂಕಿತ ಜ್ವರಕ್ಕೆ ಬಲಿಯಾಗಿದ್ದಾರೆ.

    ಕೇರಳದ ಕೊಯಿಕ್ಕೋಡ್ ಜಿಲ್ಲೆಯಲ್ಲಿ ಇಲಿ ಜ್ವರಕ್ಕೆ ಶನಿವಾರ ಮೂವರು ಬಲಿಯಾಗಿದ್ದು, ಪ್ರವಾಹ ರಕ್ಷಣಾ ಪರಿಹಾರ ಕಾರ್ಯದಲ್ಲಿ ತೊಡಗಿದ್ದ ಆಂಡಿ, ಶಿವದಾಸನ್ ಹಾಗೂ ಕೃಷ್ಣನ್ ಎಂಬವರು ಕೋಯಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಸೋಕಿನಿಂದ ಸಾವನ್ನಪ್ಪಿದ್ದಾರೆ. ಇನ್ನು ಜಿಲ್ಲೆಯೊಂದರಲ್ಲೇ ಮಹಾಮಾರಿಗೆ ಬಲಿಯಾದವರ ಸಂಖ್ಯೆ 20ಕ್ಕೆ ತಲುಪಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

    ಕಳೆದ ಮೂರು ದಿನಗಳಲ್ಲಿ 300 ಶಂಕಿತ ಇಲಿ ಜ್ವರ ಪ್ರಕರಣಗಳು ಪತ್ತೆಯಾಗಿದೆ ಎಂದು ಜಿಲ್ಲಾ ಹಿರಿಯ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ. ಕೇರಳ ಆರೋಗ್ಯ ಇಲಾಖೆ ಇಲಿ ಜ್ವರದ ಬಗ್ಗೆ ಕೋಯಿಕ್ಕೋಡ್, ಪಾಲಕ್ಕಾಡ್, ತ್ರಿಶ್ಶೂರ್, ಮಲಪ್ಪುರಂ, ಎರ್ನಾಕುಲಂ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ. ಅಲ್ಲದೇ ಹೆಚ್ಚುವರಿ ಔಷಧ ಹಾಗೂ ವೈದ್ಯಕೀಯ ನೆರವಿಗಾಗಿ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಮನವಿ ಸಲ್ಲಿಸಿದೆ.

    ಇಲಿ ಜ್ವರ ಹೇಗೆ ಬರುತ್ತೆ?
    ಮನುಷ್ಯನ ಸಂಪರ್ಕಕ್ಕೆ ಸಮೀಪವಿರುವ ಪ್ರದೇಶದಲ್ಲಿ ವಾಸಿಸುವ ಇಲಿ, ಹೆಗ್ಗಣ, ಬೆಕ್ಕು, ನಾಯಿ, ಹಸು ಸೇರಿದಂತೆ ಕೆಲ ಕಾಡು ಪ್ರಾಣಿಗಳ ದೇಹದಲ್ಲಿರುವ ವೈರಸ್ ಮೂತ್ರದ ಮೂಲಕ ನೀರಿನಲ್ಲಿ ಸೇರುತ್ತದೆ. ಇಂಥ ಕಲುಷಿತ ನೀರು ಮನುಷ್ಯರ ದೇಹದ ಸಂಪರ್ಕಕ್ಕೆ ಬಂದಾಗ ವೈರಸ್ ಶರೀರದಲ್ಲಿ ಸೇರ್ಪಡೆಯಾಗಿ 4 ರಿಂದ 19 ದಿನಗಳಲ್ಲಿ ವ್ಯಕ್ತಿ ಆನಾರೋಗ್ಯಕ್ಕೆ ಒಳಗಾಗುತ್ತಾರೆ. ಈ ಜ್ವರಕ್ಕೆ ಮೂಲ ಕಾರಣ ಝೂನೋಟಿಕ್ ವೈರಸ್ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

    ಲಕ್ಷಣಗಳು: ಜ್ವರ, ಮೈಕೈ ನೋವು ಹಾಗೂ ತಲೆನೋವು ಕೆಲವರಲ್ಲಿ ಜಾಂಡೀಸ್ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಅಲ್ಲದೇ ಬಾಯಿ, ಮೂಗು ಭಾಗಗಳಲ್ಲಿ ರಕ್ತಸ್ರಾವವಾಗುವ ಸಾಧ್ಯತೆಗಳು ಇದೆ. ಈ ಸೋಂಕು ಮೂತ್ರ ಪಿಂಡಕ್ಕೂ ವಿಸ್ತರಿಸಿ ಮೂತ್ರ ವಿಸರ್ಜನೆ ಪ್ರಮಾಣ ಕಡಿಮೆಯಾಗಬಹುದಾಗಿದೆ.

    ಲಕ್ಷಣ ಕಾಣಿಸಿಕೊಂಡ್ರೆ ಏನು ಮಾಡಬೇಕು?
    ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಬಹುಬೇಗ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖರಾಗಬಹುದು. ಇಲಿ ಜ್ವರ ದೃಢವಾದ ಬಳಿಕ ತಜ್ಞ ವೈದ್ಯರಿಂದ ಕ್ರಮಬದ್ಧ ಚಿಕಿತ್ಸೆ ಪಡೆಯುವುದು ಅಗತ್ಯವಾಗಿರುತ್ತದೆ. ಮುಖ್ಯವಾಗಿ ಸೋಂಕಿಗೆ ಒಳಗಾಗಿರುವ ವ್ಯಕ್ತಿಯಿಂದ ಆರೋಗ್ಯವಂತ ವ್ಯಕ್ತಿಗೆ ಸೋಂಕು ಹರಡುವುದಿಲ್ಲ.

    ಮುನ್ನೆಚ್ಚರಿಕೆ ಕ್ರಮ: ಕುಡಿಯಲು, ಸ್ನಾನ ಮಾಡಲು ಹಾಗೂ ದಿನನಿತ್ಯದ ಬಳಕೆಗೆ ಶುದ್ಧ ನೀರಿನ ಬಳಕೆ. ಸೋಂಕು ಕಾಣಿಸಿಕೊಂಡ ಪ್ರದೇಶದಲ್ಲಿ ಸಾಕು ಪ್ರಾಣಿಗಳನ್ನು ಕೊಳ, ಹೊಂಡ ಇನ್ನಿತರ ಸಾರ್ವಜನಿಕರ ಪ್ರದೇಶಗಳಲ್ಲಿ ಅವುಗಳ ಮೈ ತೊಳೆಯಬಾರದು. ಆಹಾರ ಪದಾರ್ಥಗಳ ರಕ್ಷಣೆ, ಮನೆಯ ಸುತ್ತಲು ನೈರ್ಮಲ್ಯ ಕಾಪಾಡಿಕೊಳ್ಳುವುದು. ಸೋಂಕು ಉಂಟಾದ ಪ್ರದೇಶದಲ್ಲಿ ಚಪ್ಪಲಿ ಧರಿಸಿ ಓಡಾಡುವುದು. ಜ್ವರದ ಬಂದ ಕೂಡಲೇ ನಿರ್ಲಕ್ಷ್ಯ ಮಾಡದೆ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳುವುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಡಿಸಿ ಕಚೇರಿ ದ್ವಾರದಲ್ಲಿ ಮಲಗಿಸಿ, ಮಗನಿಂದ ತಾಯಿಯ ದಯಾಮರಣಕ್ಕೆ ಮನವಿ

    ಡಿಸಿ ಕಚೇರಿ ದ್ವಾರದಲ್ಲಿ ಮಲಗಿಸಿ, ಮಗನಿಂದ ತಾಯಿಯ ದಯಾಮರಣಕ್ಕೆ ಮನವಿ

    ತುಮಕೂರು:ನಿಗೂಢ ಖಾಯಿಲೆಯಿಂದ ನರಳುತಿದ್ದ ತಾಯಿಯ ದಯಾಮರಣಕ್ಕೆ ಅನುಮತಿ ಕೊಡುವಂತೆ ಮಗನೊಬ್ಬ ತುಮಕೂರು ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.

    ನಿಸ್ತೇಜ ಸ್ಥಿತಿಯಲ್ಲಿರುವ ತಾಯಿಯನ್ನು ಡಿಸಿ ಕಚೇರಿ ದ್ವಾರದಲ್ಲಿ ಮಲಗಿಸಿ ದಯಾಮರಣಕ್ಕಾಗಿ ಮಗ ಅಂಗಲಾಚಿದ್ದಾರೆ. ತುಮಕೂರು ನಗರದ ಗಾರ್ಡನ್ ರಸ್ತೆಯ ನಿವಾಸಿ ನಾಗರಾಜ್ ತನ್ನ ತಾಯಿ ನಾಗರತ್ನಮ್ಮಾರ ದಯಾಮರಣಕ್ಕಾಗಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ದಯಾಮರಣಕ್ಕೆ ಸುಪ್ರೀಂ ಅನುಮತಿ: ಏನಿದು ಲಿವಿಂಗ್ ವಿಲ್? ತೀರ್ಪಿನಲ್ಲಿ ಏನಿದೆ? ತಪ್ಪು ಮಾಡಿದ್ರೆ ಶಿಕ್ಷೆ ಏನು?

    ಕೈಕಾಲು ಸ್ವಾದೀನ ಕಳೆದುಕೊಂಡ ನಾಗರತ್ನಮ್ಮ ಕಳೆದ 10 ವರ್ಷದಿಂದ ಹಾಸಿಗೆ ಹಿಡಿದಿದ್ದಾರೆ. ನಾಗರತ್ನಮ್ಮ ಅವರಿಗೆ ಎಷ್ಟೇ ಚಿಕಿತ್ಸೆ ಕೊಡಿಸಿದರೂ ಕಾಯಿಲೆ ಮಾತ್ರ ಗುಣಮುಖವಾಗಿರಲಿಲ್ಲ. ಇದರಿಂದ ಬೇಸತ್ತ ಮಗ ನಾಗರಾಜು ತಾಯಿಯನ್ನು ಕರೆದುಕೊಂಡು ಡಿಸಿ ಕಚೇರಿ ಬಳಿ ಹೋಗಿ ತಾಯಿಯ ದಯಾಮರಣಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ.

    ನಂತರ ತಾಯಿ ಮಗನ ಪರಿಸ್ಥಿತಿ ನೋಡಿದ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅವರು ತಕ್ಷಣ ನಾಗರತ್ನಮ್ಮಾಳರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಯಿಲೆಗೆ ತುತ್ತಾದ ಮಕ್ಕಳಿಗೆ ಸಹಾಯ ಮಾಡುವಂತೆ ಮನವಿ – 5 ಲಕ್ಷ ರೂ. ನೀಡಲು ಸಿಎಂ ಸೂಚನೆ

    ಕಾಯಿಲೆಗೆ ತುತ್ತಾದ ಮಕ್ಕಳಿಗೆ ಸಹಾಯ ಮಾಡುವಂತೆ ಮನವಿ – 5 ಲಕ್ಷ ರೂ. ನೀಡಲು ಸಿಎಂ ಸೂಚನೆ

    ಬೆಂಗಳೂರು: ಕುಟುಂಬವೊಂದು ಕಾಯಿಲೆಗೆ ತುತ್ತಾದ ಮಕ್ಕಳ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಬಳಿ ಸಹಾಯ ಕೇಳಿದ್ದು, ತಕ್ಷಣ ಅವರಿಗೆ 5 ಲಕ್ಷ ರೂ. ಪರಿಹಾರ ಧನವನ್ನು ನೀಡುವಂತೆ ಸೂಚಿಸಿದ್ದಾರೆ.

    ಸವದತ್ತಿಯ ದೀಪಾ ಹಾಗೂ ಯಂಕಪ್ಪ ಪೂಜಾರಿಯ ಇಬ್ಬರು ಮಕ್ಕಳು ಅತಿ ಅಪರೂಪವಾದ ಜನಟಿಕ್ ಕಾಯಿಲೆ (ಎಪಿಡರ್ ಮುಲ್ಲಾಯಿಸಿಸ್ ಬುಲ್ಲೂಸಾ) ಎಂಬ ಕಾಯಿಲೆಗೆ ತುತ್ತಾಗಿದ್ದರು. ಆದ್ದರಿಂದ ಇಂದು ವಿಧಾನಸೌಧದ ಬಳಿ ಬಂದು ಪೋಷಕರು ಸಿಎಂ ಕುಮಾರಸ್ವಾಮಿ ಬಳಿ ತಮ್ಮ ಮಕ್ಕಳ ಚಿಕಿತ್ಸೆಗಾಗಿ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಕುಟುಂಬದ ಕಷ್ಟ ಆಲಿಸಿದ ಕುಮಾರಸ್ವಾಮಿ ತಕ್ಷಣ ಅವರಿಗೆ ಸ್ಪಂಧಿಸಿ ಮಕ್ಕಳ ಚಿಕಿತ್ಸೆಗಾಗಿ 5 ಲಕ್ಷ ರೂ. ಪರಿಹಾರ ಧನವನ್ನು ನೀಡುವಂತೆ ಸೂಚನೆ ನೀಡಿದ್ದಾರೆ.

    ಅಷ್ಟೇ ಅಲ್ಲದೇ ಮಕ್ಕಳ ತಂದೆಗೆ ಸವದತ್ತಿ ಆಸ್ಪತ್ರೆಯಲ್ಲಿ ತಾತ್ಕಾಲಿಕ ಕೆಲಸ ಕೊಡಿಸುವುದಾಗಿ ಹಾಗೂ ಮಕ್ಕಳ ಚಿಕಿತ್ಸಾ ವೆಚ್ಚ ಸಂಪೂರ್ಣ ಭರಿಸುವ ಭರವಸೆಯನ್ನು ಕೂಡ ನೀಡಿದ್ದಾರೆ. ಜೊತೆಗೆ ಕುಟುಂಬದವರಿಗೆ ವಿಧಾನಸೌಧದಲ್ಲೇ ಊಟ ಕೊಡಿಸಿ ಸಮಾಧಾನಪಡಿಸಿ ಕಳುಹಿಸಿದ್ದಾರೆ.

  • ಬೆಳಕಿಗಾಗಿ ಹಂಬಲಿಸುತ್ತಿರೋ ಯಕ್ಷಗಾನ ಕಲಾವಿದನ ಕುಟುಂಬಕ್ಕೆ ಸಹಾಯ ಮಾಡಿ ಪ್ಲೀಸ್

    ಬೆಳಕಿಗಾಗಿ ಹಂಬಲಿಸುತ್ತಿರೋ ಯಕ್ಷಗಾನ ಕಲಾವಿದನ ಕುಟುಂಬಕ್ಕೆ ಸಹಾಯ ಮಾಡಿ ಪ್ಲೀಸ್

    ಕಾರವಾರ: ಕಲಾವಿದರ ಬದುಕೇ ಹಾಗೆ, ತನ್ನ ಜೀವನವನ್ನೇ ಧಾರೆಯೆರೆದು ಕಲಾಪೋಷಣೆಗೆ ನಿಲ್ಲುವ ಇವರು ತಮ್ಮ ಬದುಕನ್ನೇ ಕತ್ತಲಾಗಿಸಿಕೊಂಡು ಕಲಾ ಆರಾಧನೆ ಮಾಡುತ್ತಾರೆ.

    ಹೊನ್ನಾವರ ತಾಲೂಕಿನ ನಿವಾಸಿಯಾಗಿರುವ ಮಂಜುನಾಥ್ ಭಂಡಾರಿ ಮೂರು ತಲೆಮಾರುಗಳಿಂದ ಯಕ್ಷಗಾನದ ಹಿಮ್ಮೇಳಕ್ಕೆ ಜೀವ ತುಂಬಿ ಇದಕ್ಕಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಆದ್ರೆ ಮಂಜುನಾಥ್ ಅವರ ಬಾಳಲ್ಲಿ ಬರ ಸಿಡಿಲಿನಂತೆ ಅನಾರೋಗ್ಯ ಆವರಿಸಿದೆ. ಒಂಬತ್ತು ವರ್ಷಗಳು ಕಳೆದರೂ ಈ ಕೂಪದಿಂದ ಹೊರಬರಲಾಗದೇ ಇಡೀ ಕುಟುಂಬ ಬಡತನ ಬದುಕು ಸಾಗಿಸುತ್ತಿದ್ದು ಬೆಳಕಿಗಾಗಿ ಹಂಬಲಿಸುತ್ತಿದೆ.

    ಮೃದಂಗ, ಚಂಡೆ ವಾದಕರಾಗಿ ಇದರ ತಯಾರಿಕೆಯನ್ನು ಸಹ ಮಾಡುತ್ತಿರುವ ಈ ಕಲೆ ಮುತ್ತಜ್ಜನಿಂದ ಬಳುವಳಿಯಾಗಿ ಬಂದಿದೆ. ಮಂಜುನಾಥರ ತಂದೆ ಪ್ರಭಾಕರ್ ಪಾಂಡುರಂಗ ಭಂಡಾರಿ ಕೂಡ ಕರಾವಳಿ ಭಾಗದಲ್ಲಿ ಪ್ರಸಿದ್ಧ ಮೃದಂಗ ವಾದಕರಾಗಿದ್ದು, 2002ರಲ್ಲಿ ಅಂದಿನ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಸಹ ನೀಡಿ ಸನ್ಮಾನಿಸಿತ್ತು.

    ಮಂಜುನಾಥ್ ಭಂಡಾರಿಯವರು ಮೃದಂಗ, ಚಂಡೆ ವಾದನದ ಜೊತೆಗೆ ಮಣ್ಣಿನ ಕಲಾಕೃತಿ ರಚನೆಯಲ್ಲಿಯೂ ಸಿದ್ಧಹಸ್ತರು. ಹೀಗಾಗಿ ಅನೇಕ ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಇನ್ನು ತನ್ನ ಮಡದಿ ಶಾರದಾ, ತಂದೆ ಪಾಂಡುರಂಗ ಭಂಡಾರಿ, ಇಬ್ಬರು ಹೆಣ್ಣುಮಕ್ಕಳಾದ ಮಧುರ, ಮಾನಸಾ ಎಂಬವರೊಂದಿಗೆ ಕಲಾರಾಧನೆ ಮೂಲಕ ನೆಮ್ಮದಿ ಜೀವನ ನಡೆಸುತ್ತಿದ್ದರು. ಆದ್ರೆ ಈಗ ಇವರಿಗೆ ವಾತ ಹಾಗೂ ಮೂಳೆ ಸಮಸ್ಯೆ ಎದುರಾಗಿ ತನ್ನ ದೇಹದ ಶಕ್ತಿ ಕಳೆದುಕೊಳ್ಳುವ ಜೊತೆಗೆ ಕೈಗಳ ಮೂಳೆ ಬೆಳೆದು ಸ್ವಾಧೀನ ಇಲ್ಲದಂತಾಗಿ ಇಡೀ ಕುಟುಂಬದ ಜವಾಬ್ದಾರಿ ಹೊತ್ತ ಇವರು ದಿನದ ತುತ್ತಿಗೂ ಕಷ್ಟಪಡುವಂತಾಗಿದೆ.

    ಚಿಕಿತ್ಸೆಗಾಗಿ ಕೂಡಿಟ್ಟ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಬಲಗೈಗೆ ರಾಡ್ ಹಾಕುವ ಮೂಲಕ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆದ್ರೆ ಗುಣಮುಖವಾಗುವ ಬದಲು ಕೈಯಲ್ಲಿದ್ದ ಹಣ ಖಾಲಿಯಾಗಿ ಇತ್ತ ಮೃದಂಗ, ಚಂಡೆಯ ಬಾರ್ ಕಟ್ಟಲೂ ಶಕ್ತನಾಗದೇ ಈ ಕೆಲಸವನ್ನೇ ಬಿಡುವಂತಾಯ್ತು. ಮಂಜುನಾಥ್ ಅವರ ಕಷ್ಟಕ್ಕೆ ಯಕ್ಷಾಭಿಮಾನಿಗಳು ಧನ ಸಹಾಯ ಮಾಡಿ ಮತ್ತಷ್ಟು ಚಿಕಿತ್ಸೆಗೆ ಸಹಕರಿಸಿದ್ರು. ಇದರಿಂದ ಸ್ವಲ್ಪ ಮಟ್ಟಿಗೆ ಆರೋಗ್ಯ ಸುಧಾರಿಸಿದೆ. ಆದರೆ ಬೆಳದು ನಿಂತ ಹಿರಿಯ ಮಗಳು ಮಧುರಾ ಅವರಿವರ ಸಹಾಯದಿಂದ ಬಿಎಡ್ ಮಾಡಿ ಎಂಎ ಮಾಡುತ್ತಿದ್ದಾರೆ. ಎರಡನೇ ಮಗಳು ಮಾನಸ ಅಂತಿಮ ಬಿಕಾಂ ಓದುತ್ತಿದ್ದು, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹಣ ಹೊಂದಿಸಲು ಕಷ್ಟಪಡುತ್ತಿದ್ದು ಬೆಳಕು ಕಾರ್ಯಕ್ರಮದ ಮೂಲಕ ಸಹಾಯ ಬೇಡಿದ್ದಾರೆ.

    ಮಂಜುನಾಥ್ ಭಂಡಾರಿ ಕಳೆದ ಒಂಬತ್ತು ವರ್ಷಗಳಿಂದ ಅಕಾಲಿಕ ರೋಗದಿಂದಾಗಿ ಮೃದಂಗ, ಚಂಡೆ ತೆಯಾರಿಕೆಯನ್ನು ಮಾಡಲಾಗದೇ ಜೀವನಕ್ಕೆ ಆಧಾರವಾಗಿದ್ದ ಕಸುಬನ್ನು ಬಿಟ್ಟು ಪಾಶ್ರ್ವ ವಾಯು ಪೀಡಿತ ತಂದೆ, ಇಬ್ಬರ ಮಕ್ಕಳ ಶಿಕ್ಷಣ ನೋಡಿಕೊಳ್ಳಲು ಪರದಾಡುತ್ತಿದ್ದಾರೆ. ಇತ್ತ ಅವರ ಚಿಕಿತ್ಸೆ ಜೊತೆಯಲ್ಲಿ ಮಕ್ಕಳ ಓದಿಗೆ ಸಹಾಯ ಮಾಡಿದ್ದಲ್ಲಿ ಅವರ ಉದ್ಯೋಗದಿಂದ ಜೀವನ ನಡೆಸಬಹುದಾಗಿದ್ದು ಕಷ್ಟಗಳು ದೂರವಾಗುತ್ತವೆ ಎಂಬವುದು ಅಭಿಮಾನಿಗಳ ಹಂಬಲ.

    ಮೂರು ತಲೆಮಾರುಗಳಿಂದ ಯಕ್ಷಗಾನ ಲೋಕಕ್ಕೆ ತನ್ನದೇ ಆದ ಸೇವೆಯನ್ನು ಈ ಕುಟುಂಬ ನೀಡುತ್ತಾ ಬಂದಿದೆ. ಇವರ ಈ ಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ಸರ್ಕಾರ ನೀಡಿದೆ. ಒಂಬತ್ತು ವರ್ಷದ ವನವಾಸದಲ್ಲಿ ಅಭಿಮಾನಿಗಳ ಹೊರತಾಗಿ ಸರ್ಕಾರ ಮಾತ್ರ ಈ ಕುಟುಂಬದ ಸಹಾಯಕ್ಕೆ ಬರಲಿಲ್ಲ. ತಮ್ಮ ಆರೋಗ್ಯ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯಕ್ಕೆ ಯಾರಾದರೂ ಸಹಾಯ ಮಾಡಬಹುದು ಎನ್ನುವ ನಿರೀಕ್ಷೆಯಲ್ಲಿ ಮಂಜುನಾಥ್ ಭಂಡಾರಿ ಇದ್ದಾರೆ.

     

    https://youtu.be/0MfO9F_5xyg

  • ರಾಜ್ಯದ ಅತಿ ಎತ್ತರದ ಮನುಷ್ಯನ ಬಾಳಲ್ಲಿ ಬಿರುಗಾಳಿ!

    ರಾಜ್ಯದ ಅತಿ ಎತ್ತರದ ಮನುಷ್ಯನ ಬಾಳಲ್ಲಿ ಬಿರುಗಾಳಿ!

    ಬೆಂಗಳೂರು: ರಾಜ್ಯದ ಅತಿ ಎತ್ತರದ ಮನುಷ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಅಪರೂಪದ ವ್ಯಕ್ತಿಯ ಬಾಳಲ್ಲಿ ಇದೀಗ ಬಿರುಗಾಳಿ ಬೀಸಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಶಿರಗನಹಳ್ಳಿ ಗ್ರಾಮದ ನಿವಾಸಿ ಕುಮಾರ್ (35) ರಾಜ್ಯದ ಎತ್ತರದ ವ್ಯಕ್ತಿಯಾಗಿದ್ದಾರೆ. ಬರೋಬ್ಬರಿ 7 ಅಡಿ 2 ಇಂಚು ಎತ್ತರ ಇರುವ ಇವರು ಇತ್ತೀಚಿಗೆ ಪಿಟ್ಯೂಟರಿ ಮೈಕ್ರೋ ಡೆನೋಮಾ ರೋಗದಿಂದ ಬಳಲಿ ಬೆಂಡಾಗಿದ್ದಾರೆ.

    11 ವರ್ಷದ ಬಾಲಕನಾಗಿರುವಾಗಲೇ ಈ ಕಾಯಿಲೆಯಿಂದ ಬಳಲಿ ಕುಮಾರ್ ದೇಹ ವಿನ್ಯಾಸದಲ್ಲಿ ಬದಲಾವಣೆಯಾಗಿ ಅತೀ ಉದ್ದವಾಗಿ ಬೆಳೆದು ನಿಂತಿದ್ದು, ಸದ್ಯ ವೈದ್ಯಕೀಯ ಲೋಕಕ್ಕೆ ಸವಾಲಾಗಿ ನಿಂತಿದ್ದಾರೆ. ತನ್ನ ಕುಟುಂಬಕ್ಕೆ ಆಸರೆಯಾಗಿದ್ದ ಕುಮಾರ್ ಕೂಲಿನಾಲಿ ಮಾಡಿ ಕುಟುಂಬ ನಿರ್ವಹಣೆ ಮಾಡುತಿದ್ದರು. ಆದರೆ ಇತ್ತೀಚಿಗೆ ಅಪಘಾತವಾಗಿದ್ದರಿಂದ ಕಾಲು ಮುರಿತವಾಗಿ ನಡೆಯಲು ಸಹ ಆಗದ ಸ್ಥಿತಿ ತಲುಪಿದ್ದಾರೆ.

    ಇನ್ನೂ ತಂದೆ ರಾಮಕೃಷ್ಣಯ್ಯ ಸಹ ಹಲವು ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ. ತಾಯಿ ನಾಗರತ್ನಮ್ಮ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಮಗನ ಅಪಘಾತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತ ಕುಮಾರ್ ಪತ್ನಿ ಕೂಡ ಇವರ ಸ್ಥಿತಿ ನೋಡಿ ಮನೆ ಬಿಟ್ಟು ಹೋಗಿದ್ದು, ತನ್ನ ಬಡ ರೈತಾಪಿ ಕುಟುಂಬವನ್ನು ಸಾಗಿಸುವುದೇ ಕುಮಾರ್ ಅವರಿಗೆ ಕಷ್ಟಕರವಾಗಿದೆ. ಹೀಗಾಗಿ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ, ಯಾರಾದರೂ ದಾನಿಗಳು ನಮಗೆ ಸಹಾಯ ಮಾಡಬಹುದು ಎನ್ನುವ ನಿರೀಕ್ಷೆಯನ್ನು ಇಟ್ಟುಕೊಂಡು ಕುಮಾರ್ ಕುಟುಂಬ ದಿನ ದೂಡುತ್ತಿದೆ.

  • ಹೃದಯಾಘಾತವಾಗಿ ಶ್ರೀದೇವಿ ನಿಧನ- ಹೃದಯಾಘಾತವಾಗಲು ಕಾರಣವೇನು? ಅಂಥ ಸಮಯದಲ್ಲಿ ಏನು ಮಾಡಬೇಕು? ಈ ಸುದ್ದಿ ಓದಿ

    ಹೃದಯಾಘಾತವಾಗಿ ಶ್ರೀದೇವಿ ನಿಧನ- ಹೃದಯಾಘಾತವಾಗಲು ಕಾರಣವೇನು? ಅಂಥ ಸಮಯದಲ್ಲಿ ಏನು ಮಾಡಬೇಕು? ಈ ಸುದ್ದಿ ಓದಿ

    ಮುಂಬೈ: ಹಿರಿಯ ಬಹು ಭಾಷಾ ನಟಿ ಶ್ರೀದೇವಿ ಶನಿವಾರ ಹೃದಯಾಘಾತದಿಂದ ದುಬೈನಲ್ಲಿ ನಿಧನರಾಗಿದ್ದಾರೆ. 80-90 ದಶಕದಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ಆ ಮೋಹಕ ತಾರೆ ನಮ್ಮನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

    ಹೃದಯಾಘಾತದಿಂದ ಆಕಸ್ಮಿಕವಾಗಿ ವಿಧಿವಶವಾಗಿರುವ ಶ್ರೀದೇವಿ ಅವರ ಆರೋಗ್ಯದಲ್ಲಿ ಈ ಹಿಂದೆ ಯಾವುದೇ ರೀತಿಯ ಏರುಪೇರು ಕಂಡುಬಂದಿರಲಿಲ್ಲ. ಹೃದಯಾಘಾತ ಯಾರಿಗೆ ಯಾವಾಗ ಬರುತ್ತದೆ ಎಂದು ಹೇಳುವುದು ಅಸಾಧ್ಯ.

    ಹೃದಯಾಘಾತ ಎಂದರೆ ಏನು?: ಕಾರ್ಡಿಯಾಕ್ ಅರೆಸ್ಟ್ ಅಥವಾ ಹೃದಯಾಘಾತ ಎನ್ನುವುದು ಒಬ್ಬ ಮನುಷ್ಯನ ಹೃದಯಕ್ಕೆ ರಕ್ತ ಪೂರೈಕೆಯನ್ನ ನಿಲ್ಲಿಸುತ್ತದೆ. ಇದರಿಂದ ಹೃದಯ ಬಡಿತ ನಿಂತುಹೋಗುತ್ತದೆ. ಈ ಸಮಯದಲ್ಲಿ ಎದೆ ನೋವು, ತಲೆ ಸುತ್ತು, ಉಸಿರಾಟಕ್ಕೆ ತೊಂದರೆಯಾಗುವುದು ಮತ್ತು ಮೂರ್ಛೆ ಹೋಗುವ ಪರಿಸ್ಥಿತಿ ಎದುರಾಗಬಹುದು.

    ಹೃದಯಾಘಾತಕ್ಕೆ ಕಾರಣಗಳೇನು?: ಒಬ್ಬ ಆರೋಗ್ಯವಂತ ವ್ಯಕ್ತಿಗೆ ಒಂದು ಸೆಕೆಂಡ್‍ನಲ್ಲಿ 60-100 ಹೃದಯ ಬಡಿತವಿರುತ್ತದೆ. ಆದರೆ ಹೃದಯಾಘಾತವಾಗುವ ಸಮಯದಲ್ಲಿ ಅಸಹಜ ಬಡಿತ ಕಾಣಿಸಿಕೊಳ್ಳಲಿದ್ದು, ಈ ಪರಿಸ್ಥಿತಿಯನ್ನು ಅರೆಥ್ಮಿಯಾಸ್ ಎಂದು ಕರೆಯಲಾಗುವುದು. ದೈಹಿಕ ಒತ್ತಡ, ರಕ್ತದ ಕೊರತೆ, ಹೃದಯಕ್ಕೆ ಅವಶ್ಯಕವಾದ ಆಮ್ಲಜನಕದ ಕೊರತೆ, ಅಧಿಕವಾಗಿ ವ್ಯಾಯಾಮ ಮಾಡುವುದು ಮತ್ತು ಅನುವಂಶಿಯ ಕಾರಣಗಳಿಂದ ಕಾರ್ಡಿಯಾಕ್ ಅರೆಸ್ಟ್ ಅಥವಾ ಹೃದಯಾಘಾತ ಆಗಬಹುದು.

    ಸ್ಥೂಲಕಾಯ, ಅಧಿಕ ರಕ್ತದ ಒತ್ತಡ, ಧೂಮಪಾನ, ಮಧುಮೇಹ, ಅತಿಯಾಗಿ ಮದ್ಯಪಾನ ಮಾಡುವುದರಿಂದ ಹೃದಯಾಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚಿವೆ.

    ತಡೆಗಟ್ಟುವ ವಿಧಾನಗಳೇನು?: ನಿಯಮಿತವಾಗಿ ವೈದ್ಯರಲ್ಲಿ ಹೃದಯವನ್ನ ಪರೀಕ್ಷಿಸಿಕೊಳ್ಳುವುದು, ಆರೋಗ್ಯಕರ ಆಹಾರವನ್ನ ಸೇವಿಸುವುದು, ದೇಹದ ತೂಕದ ಬಗ್ಗೆ ಗಮನ ಹರಿಸುವುದು ಮತ್ತು ಧೂಮಪಾನ ಮಾಡದಿರುವುದರಿಂದ ಹೈದಯದ ಆರೋಗ್ಯ ಕಾಪಾಡಿಕೊಳ್ಳಬಹುದು.

    ವ್ಯಕ್ತಿಗೆ ಹೃದಯಾಘಾತವಾದಾಗ ಏನು ಮಾಡಬೇಕು?: ಇಂತಹ ತುರ್ತು ಪರಿಸ್ಥಿತಿಯಲ್ಲಿ ಹೃದಯ ಮತ್ತು ಶ್ವಾಸಕೋಶ ಪ್ರಚೋದಕ(ಸಿಪಿಆರ್) ಮಾಡಬೇಕು ಅಥವಾ ಡಿಫಿಬ್ರಿಲೇಟರ್ ಉಪಯೋಗಿಸಬೇಕು. ಹೃದಯವನ್ನ ಜೋರಾಗಿ ಮೇಲಿಂದ ಒತ್ತಬೇಕು ಇದರಿಂದ ರಕ್ತ ಹೆಪ್ಪುಗಟ್ಟಿದ್ದರೆ ಸುಲಭವಾಗಿ ಹೃದಯಕ್ಕೆ ರಕ್ತ ಸಂಚಾರವಾಗುತ್ತದೆ. ಇದರ ಜೊತೆಗೆ ವ್ಯಕ್ತಿಗೆ ಉಸಿರಾಟದ ತೊಂದರೆಯಾದರೆ ವ್ಯಕ್ತಿಯ ಬಾಯಿಗೆ ಕೃತಕವಾಗಿ ಇನ್ನೊಬ್ಬ ವ್ಯಕ್ತಿ ಗಾಳಿಯನ್ನ ಊದಬೇಕು. ಇದರಿಂದ ಅವರ ದೇಹಕ್ಕೆ ಆಮ್ಲಜನಕದ ಪೂರೈಕೆಯಾಗುತ್ತದೆ. ಇದರ ನಂತರ ವ್ಯಕ್ತಿಯನ್ನ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕು.

  • ಕೊಕ್ಕರೆ ಬೆಳ್ಳೂರಿನಲ್ಲಿ ಅಸ್ವಸ್ಥಗೊಂಡು ಮೇಲಿನಿಂದ ನೆಲಕ್ಕೆ ಬೀಳುತ್ತಿವೆ ವಿದೇಶಿ ಕೊಕ್ಕರೆಗಳು

    ಕೊಕ್ಕರೆ ಬೆಳ್ಳೂರಿನಲ್ಲಿ ಅಸ್ವಸ್ಥಗೊಂಡು ಮೇಲಿನಿಂದ ನೆಲಕ್ಕೆ ಬೀಳುತ್ತಿವೆ ವಿದೇಶಿ ಕೊಕ್ಕರೆಗಳು

    ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನಲ್ಲಿರುವ ಪ್ರಸಿದ್ಧ ಪಕ್ಷಿಧಾಮ ಕೊಕ್ಕರೆ ಬೆಳ್ಳೂರಿನಲ್ಲಿ ಅಸ್ವಸ್ಥಗೊಂಡು ಹಾರಲು ಸಾಧ್ಯವಾಗದೇ ಕೊಕ್ಕರೆಗಳು ನೆಲಕ್ಕೆ ಬೀಳುತ್ತಿದ್ದು, ಇದು ಎಲ್ಲರ ಆತಂಕಕ್ಕೆ ಕಾರಣವಾಗಿದೆ.

    ಕೊಕ್ಕರೆ ಬೆಳ್ಳೂರು ಗ್ರಾಮಕ್ಕೆ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ದೇಶ, ವಿದೇಶಗಳಿಂದ ವಿವಿಧ ಜಾತಿಗೆ ಸೇರಿದ ಕೊಕ್ಕರೆಗಳು ವಲಸೆ ಬರುತ್ತವೆ. ನಂತರ ಇಲ್ಲಿ ಬಂದು ನೆಲೆಸಿ ಸಂತಾನೋತ್ಪತ್ತಿ ಮಾಡಿ ಜೂನ್, ಜುಲೈ ತಿಂಗಳಲ್ಲಿ ವಾಪಸ್ ಹೋಗುತ್ತವೆ. ಆದರೆ ಈ ಬಾರಿ ವಲಸೆ ಬಂದಿರುವ ಕೊಕ್ಕರೆಗಳು ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಸಂಕಟ ಪಡುತ್ತಿದ್ದು, ಹಾರಲಾರದೇ ನೆಲಕ್ಕೆ ಬೀಳುತ್ತಿವೆ.

    ಇದನ್ನು ಗಮನಿಸಿದ ಗ್ರಾಮಸ್ಥರು ಪಕ್ಷಿಗಳಿಗೆ ತಮ್ಮ ಕೈಲಾದ ಆರೈಕೆ ಮಾಡುತ್ತಿದ್ದಾರೆ. ವಿಷಯ ತಿಳಿದು ವೈದ್ಯರು ಸ್ಥಳಕ್ಕೆ ಧಾವಿಸಿ ಪಕ್ಷಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಈಗಾಗಲೇ ಸುಮಾರು ಮೂರು ಪಕ್ಷಿಗಳು ಅನಾರೋಗ್ಯಕ್ಕೀಡಾಗಿದ್ದು, ಅದರಲ್ಲಿ ಒಂದು ಪಕ್ಷಿ ಸಾವನ್ನಪ್ಪಿದೆ.

    ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲೇ ಪಕ್ಷಿಗಳು ಅನಾರೋಗ್ಯಕ್ಕೆ ತ್ತುತ್ತಾಗಿ ಆತಂಕಕ್ಕೆ ಕಾರಣವಾಗಿತ್ತು. ಈಗ ಮತ್ತೆ ಪಕ್ಷಿಗಳ ಅನಾರೋಗ್ಯ ಮರುಕಳಿಸಿದೆ. ಕಳೆದ ವರ್ಷ ಮೈಸೂರು ಸೇರಿದಂತೆ ಹಲವೆಡೆ ಪಕ್ಷಿಗಳ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಈಗಾಗಲೇ ಮೃತಪಟ್ಟ ಪಕ್ಷಿಯನ್ನು ವಶಕ್ಕೆ ಪಡೆದಿರುವ ಅರಣ್ಯಾಧಿಕಾರಿಗಳು ಅಸ್ವಸ್ಥಕ್ಕೆ ನಿಖರ ಕಾರಣ ತಿಳಿಯಲು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

    ಕಳೆದ ವರ್ಷ ಕೂಡ ಇದೇ ರೀತಿ ಐದಕ್ಕೂ ಹೆಚ್ಚು ಕೊಕ್ಕರೆ ಸಾವನ್ನಪ್ಪಿದ್ದವು. ಈ ಬಾರಿಯೂ ಪ್ರಾರಂಭದಲ್ಲಿಯೇ ಕೊಕ್ಕರೆ ಅನಾರೋಗ್ಯಕ್ಕೆ ತುತ್ತಾಗಿರುವುರಿಂದ ನಾವು ಪಕ್ಷಿಗಳ ತಪಾಸಣೆ ನಡೆಸಿದ್ದೇವೆ. ಒಂದು ವೇಳೆ ಮತ್ತೆ ಪಕ್ಷಿಗಳು ಅನಾರೋಗ್ಯಕ್ಕೆ ತುತ್ತಾದ್ರೆ ಪ್ರಯೋಗಾಲಯದಲ್ಲಿ ಪರಿಶೀಲಿಸಿ, ನಂತರ ಅಲ್ಲಿಂದ ವರದಿ ತರಿಸಿಕೊಂಡು ಚಿಕಿತ್ಸೆ ಕೊಡುತ್ತೇವೆ ಎಂದು ಡಾ. ಸತೀಶ್ ತಿಳಿಸಿದ್ದಾರೆ.

    ತಕ್ಷಣ ಪಕ್ಷಿಗಳು ಅಸ್ವಸ್ಥಗೊಳ್ಳುತ್ತಿರುವುದಕ್ಕೆ ಶೀಘ್ರವೇ ಕಾರಣ ಹುಡುಕಿ ಮುಂದೆ ಯಾವುದೇ ಪಕ್ಷಿಗಳಿಗೂ ತೊಂದರೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕೆಂದು ಪಕ್ಷಿ ಪ್ರಿಯರು, ಗ್ರಾಮಸ್ಥರು ಆಗ್ರಹಿಸಿದ್ದಾರೆ.