Tag: disease

  • ಮಂಗಗಳಲ್ಲಿ ಕಾಣಿಸಿಕೊಂಡ ಕೆಮ್ಮು, ಸುಸ್ತು: ಗ್ರಾಮದಲ್ಲಿ ಆತಂಕ

    ಮಂಗಗಳಲ್ಲಿ ಕಾಣಿಸಿಕೊಂಡ ಕೆಮ್ಮು, ಸುಸ್ತು: ಗ್ರಾಮದಲ್ಲಿ ಆತಂಕ

    ಕೋಲಾರ: ನಿತ್ಯ ತರ್ಲೆ ಮಾಡೋ ಕೋತಿಗಳು ಇದ್ದಕ್ಕಿದಂತೆ ಮಂಕಾಗಿವೆ. ಕಳೆದ ಕೆಲವು ದಿನಗಳಿಂದ ಈ ಕೋತಿಗಳ ಆರೋಗ್ಯದಲ್ಲಾದ ಏರು ಪೇರು ಇಡೀ ಗ್ರಾಮವನ್ನೇ ಬೆಚ್ಚಿ ಬೀಳಿಸಿದ್ದು, ಕೊರೊನಾ ಆತಂಕದ ನಡುವೆ ಕೋತಿಗಳು ಮಂಕಾಗಿರುವುದು ಜನರಲ್ಲಿ ಭಯ ಹುಟ್ಟಿಸಿದೆ.

    ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ಕೋಡುಗುರ್ಕಿ ಗ್ರಾಮದಲ್ಲಿ ಮಂಗಗಳು ಈ ರೀತಿ ವರ್ತಿಸುತ್ತಿದ್ದು, ಕೆಲವು ನಿತ್ರಾಣವಾಗಿ ಮಲಗಿದರೆ, ಇನ್ನೂ ಕೆಲವು ಏಳಲು ಸಾಧ್ಯವಾಗದೇ ಅಸಹಾಯಕ ಸ್ಥಿತಿಯಲ್ಲಿ ನೋಡುತ್ತಿವೆ. ಇನ್ನೂ ಹಲವು ಕೋತಿಗಳು ಕೆಮ್ಮುತ್ತಿವೆ. ಇದೆಲ್ಲವನ್ನೂ ಗ್ರಾಮಸ್ಥರು ಆತಂಕದಿಂದ ನೋಡುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲಾಗಿದ್ದರೆ ಗ್ರಾಮಸ್ಥರು ತೆಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಕೊರೊನಾ ಮಹಾಮಾರಿ ಒಕ್ಕರಿಸಿರುವ ಸಂದರ್ಭದಲ್ಲಿ ಕೋತಿಗಳು ಈ ರೀತಿ ಮಾಡುತ್ತಿರುವುದನ್ನು ಕಂಡು ಭಯಭೀತರಾಗಿದ್ದಾರೆ.

    ಕೋಡುಗುರ್ಕಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಈ ಕೋತಿಗಳ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೋತಿಗಳ ಹಾವ ಭಾವಗಳನ್ನ ಕಂಡ ಗ್ರಾಮಸ್ಥರು ಕೋತಿಗಳಿಗೂ ಕೊರೊನಾ ವೈರಸ್ ಹರಡಿದಿಯಾ ಎಂದು ಆತಂಕಗೊಂಡಿದ್ದಾರೆ. ಇದರ ನಡುವೆಯೂ ಕೋತಿಗಳ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.

    ಗ್ರಾಮದಲ್ಲಿರುವ ನೂರಾರು ಕೋತಿಗಳಲ್ಲಿ ಕೆಲವೊಂದು ರೋಗ ಲಕ್ಷಣಗಳು ಗೋಚರವಾಗಿವೆ. ಇಲ್ಲಿರುವ ಹೆಚ್ಚಿನ ಸಂಖ್ಯೆಯ ಕೋತಿಗಳು ಕೆಮ್ಮುವುದು, ಎಲ್ಲಂದರಲ್ಲಿ ನಿತ್ರಾಣವಸ್ಥೆಯಲ್ಲಿ ಮಲಗುವುದು, ಸುಸ್ತಾಗಿ ಬೀಳುವುದು. ಜನರು ಏನಾದರೂ ಆಹಾರ ಕೊಟ್ಟರೂ ತಿನ್ನದೆ ಇರೋದು ಹೀಗೆ ವರ್ತಿಸುತ್ತಿರುವ ಕೋತಿಗಳು ರಾತ್ರಿಯೆಲ್ಲಾ ಕೆಮ್ಮುತ್ತಿರುತ್ತವಂತೆ.

    ಕೋಲಾರದಲ್ಲಿ ಯಾವುದೇ ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿಲ್ಲ ಎಂದು ನೆಮ್ಮದಿಯಿಂದಿರುವ ಜನರು, ಇದೀಗ ಕೋತಿಗಳ ರೋಗ ಲಕ್ಷಣ ಕಂಡು ಮೈಸೂರು ಹಾಗೂ ಇನ್ನಿತರ ಭಾಗಗಳಲ್ಲಿ ಕಾಣಿಸಿಕೊಂಡ ಮಂಗನ ಕಾಯಿಲೆ ಏನಾದ್ರು ಕಾಣಿಸಿಕೊಂಡಿತಾ ಅಥವಾ ಕೊರೊನಾ ವೈರಸ್ಸೇ ಹಬ್ಬಿತಾ ಎಂಬ ಆಂತಂಕದಲ್ಲಿದ್ದಾರೆ. ಈ ಕುರಿತು ಸ್ಥಳೀಯ ಪಂಚಾಯಿತಿ ಪಿಡಿಓ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಗ್ರಾಮಕ್ಕೆ ಬಂದಿರುವ ಅರಣ್ಯ ಇಲಾಖೆ, ಆರೋಗ್ಯ ಹಾಗೂ ಪಶು ವೈದ್ಯಾಧಿಕಾರಿಗಳ ತಂಡ ಕೋತಿಗಳ ಪರಿಶೀಲನೆಯಲ್ಲಿ ತೊಡಗಿದೆ.

  • ಕೊರೊನಾ ಟೆನ್ಶನ್ ಮಧ್ಯೆ ಬೆಂಗ್ಳೂರಿನಲ್ಲಿ ವಿಚಿತ್ರ ಸಾಂಕ್ರಾಮಿಕ ಕಾಯಿಲೆ

    ಕೊರೊನಾ ಟೆನ್ಶನ್ ಮಧ್ಯೆ ಬೆಂಗ್ಳೂರಿನಲ್ಲಿ ವಿಚಿತ್ರ ಸಾಂಕ್ರಾಮಿಕ ಕಾಯಿಲೆ

    – ಬೆಂಗಳೂರಿಗರೇ ಕೇರ್ ಫುಲ್

    ಬೆಂಗಳೂರು: ಕೊರೊನಾ ಭಯದ ನಡುವೆ ಸಿಲಿಕಾನ್ ಸಿಟಿಯಲ್ಲಿ ವಿಚಿತ್ರ ಕಾಯಿಲೆ ಕಾಣಿಸಿದೆ. ಹೀಗಾಗಿ ಬೀದಿಬದಿ ಚಾಟ್ಸ್ ಮತ್ತು ಫುಡ್ ತಿನ್ನುವ ಮುನ್ನ ಎಚ್ಚರವಾಗಿದೆ.

    ಹೌದು. ಬೆಂಗಳೂರಿನಲ್ಲಿ ಕಲುಶಿತ ನೀರು, ಸ್ವಚ್ಛತೆಯಿಲ್ಲದ ಆಹಾರ ತಿಂದು ಕಾಲರಾ ಲಕ್ಷಣಗಳಿರುವ ಆದರೆ ಕಾಲರಾ ಅಲ್ಲದ ಕಾಯಿಲೆ ಕಾಣಿಸಿಕೊಂಡಿದೆ. ನಗರದ ಅನೇಕ ಆಸ್ಪತ್ರೆಗಳಲ್ಲಿ ಕಾಲರಾ ತರಹದ ರೋಗಲಕ್ಷಣಗಳನ್ನು ಹೊಂದಿರುವ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಕಾಲರಾ ಲಕ್ಷಣ ಆದರೆ ರಕ್ತದ ಮಾದರಿಯಲ್ಲಿ ಕಾಲರಾ ತರುವ ವಿಬ್ರಿಯೊ ಕಾಲರಾ ಬ್ಯಾಕ್ಟೀರಿಯಾಗಳು ಇರುವುದು ಪತ್ತೆಯಾಗಿಲ್ಲ. ಕಾಲರಾ ರೀತಿಯ ರೋಗ ಲಕ್ಷಣಗಳನ್ನು ಹೊಂದಿರುವ ಅಂದರೆ ರೋಗಿಗಳು ಅತಿಸಾರ, ನಿರ್ಜಲೀಕರಣ, ವಾಂತಿ ಮತ್ತು ಬಳಲಿಕೆ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಕೂಡ ಇದು ಏನು ಕಾಯಿಲೆ ಅಂತ ಟೆನ್ಶನ್ ಮಾಡಿಕೊಂಡಿದ್ದಾರೆ.

    ಈ ವಿಚಿತ್ರ ಕಾಯಿಲೆ ಈಗ ಆತಂಕಕ್ಕೆ ಕಾರಣವಾಗಿದೆ. ದೇಹ ತೀರಾ ನಿರ್ಜಲೀಕರಣಗೊಳ್ಳುತ್ತೆ, ಅತಿಸಾರ, ವಾಂತಿ ಭೇದಿ ಮತ್ತು ಜಠರಕರುಳಿನ ಸಮಸ್ಯೆಯಿಂದ ಜನ ಆಸ್ಪತ್ರೆಗೆ ದಾಖಲಾಗುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

    ಶುದ್ಧ ನೀರು, ಬಿಸಿ ಮಾಡಿ ಆರಿಸಿದ ನೀರು ಕುಡಿಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಅಲ್ಲದೇ ಬೀದಿ ಬದಿಯಲ್ಲಿ ಚಾಟ್ಸ್, ಸ್ವಚ್ಛತೆಯಿಲ್ಲದ ಆಹಾರ ತಿನ್ನಬೇಡಿ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಬೇಸಿಗೆಯ ಸಮಯದಲ್ಲಿ ಕೆಲವೊಂದು ಬ್ಯಾಕ್ಟೀರಿಯಾಗಳು ಈ ಸಮಸ್ಯೆಯನ್ನು ತರುತ್ತೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

  • ಬೆಂಗ್ಳೂರಿನ ವಾತಾವರಣದಲ್ಲಿ ಭಾರೀ ಏರುಪೇರು – ಎಚ್ಚರ ವಹಿಸದಿದ್ರೆ ಜನರಿಗೆ ಅಪಾಯ ಕಟ್ಟಿಟ್ಟ ಬುತ್ತಿ

    ಬೆಂಗ್ಳೂರಿನ ವಾತಾವರಣದಲ್ಲಿ ಭಾರೀ ಏರುಪೇರು – ಎಚ್ಚರ ವಹಿಸದಿದ್ರೆ ಜನರಿಗೆ ಅಪಾಯ ಕಟ್ಟಿಟ್ಟ ಬುತ್ತಿ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಮತ್ತೊಂದು ದೆಹಲಿ ಆಗುತ್ತಿದ್ಯಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ದೆಹಲಿ ವಾತಾವರಣದಂತೆ ಬೆಂಗಳೂರು ಕೂಡ ಬದಲಾಗುತ್ತಿದೆ. ಬೆಂಗಳೂರಿನ ವಾತಾವರಣದ ಜೊತೆಗೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಬಿಸಿಲಿನ ಏರುಪೇರು ಮತ್ತು ವಾತಾವರಣದ ಬದಲಾವಣೆಯಿಂದ ಅಸ್ತಮ ಕಾಯಿಲೆ ಜನರನ್ನು ಕಾಡುತ್ತಿದೆ.

    ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ರಾಜ್ಯದ ವಾತಾವರಣದಲ್ಲಿ ಭಾರೀ ಬದಲಾವಣೆಯಾಗುತ್ತಿದೆ. ಬೆಳಗ್ಗೆ ಚಳಿ, ಮಧ್ಯಾಹ್ನ ಬಿಸಿಲು ಮತ್ತು ರಾತ್ರಿ ಚಳಿ ಜಾಸ್ತಿಯಾಗುತ್ತಿದೆ. ಇತ್ತೀಚೆಗೆ ಬಿಸಿಲಿನ ತಾಪ ಹೆಚ್ಚಾಗಿದ್ದು, ವಾತಾವರಣದ ವಾಯು ಮಾಲಿನ್ಯದಿಂದಾಗಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗ್ತಿವೆ. ಆಸ್ಪತ್ರೆಗಳ ಮುಂದೆ ರೋಗಿಗಳ ಕ್ಯೂ ಹೆಚ್ಚಾಗ್ತಿದೆ. ವಾಯು ಮಾಲಿನ್ಯದಿಂದ ಅಸ್ತಮಾ ಕಾಯಿಲೆ ಜಾಸ್ತಿ ಆಗ್ತಿದ್ದು, ಬೆಂಗಳೂರಿನ ವಾಯುಮಾಲಿನ್ಯ ದೆಹಲಿ ರೀತಿ ಆಗದಂತೆ ಎಚ್ಚರ ವಹಿಸಬೇಕು ಎಂದು ವೈದ್ಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

    ಬೆಂಗಳೂರಿನ ವಾಯು ಮಾಲಿನ್ಯಕ್ಕೆ ಕಾರಣ ಟ್ರಾಫಿಕ್ ಸಮಸ್ಯೆ, ವಾಹನಗಳ ಸಂಖ್ಯೆ ಹೆಚ್ಚಳ, ಮರಗಳ ನಾಶ ಮತ್ತು ಫ್ಯಾಕ್ಟರಿಗಳಿಂದ ಬರುವ ವಿಷಾನಿಲ ಎನ್ನಲಾಗುತ್ತಿದೆ. ಪ್ರತಿ ತಿಂಗಳಿಗೆ ಅಸ್ತಮಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸಾಂಕ್ರಾಮಿಕ ರೋಗಗಳಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಜನರ ಕ್ಯೂ ಜಾಸ್ತಿಯಾಗಿದೆ.

    ವಾತಾವರಣ ಏರುಪೇರಿಂದ ಸಾಂಕ್ರಾಮಿಕ ರೋಗಕ್ಕೆ ತುತ್ತಾದವರ ಸಂಖ್ಯೆ ನೋಡೋದಾದ್ರೆ;
    1. ಡಿಸೆಂಬರಿನಲ್ಲಿ ಅಸ್ತಮಾ ರೋಗಿಗಳ ಸಂಖ್ಯೆ 300
    2. ಜನವರಿಯಲ್ಲಿ ಅಸ್ತಮಾ ರೋಗಿಗಳ ಸಂಖ್ಯೆ 350
    3. ಫೆಬ್ರವರಿಯಲ್ಲಿ ಇದರ ಸಂಖ್ಯೆ 550ಕ್ಕೆ ಹೆಚ್ಚಳ

    ವಾತಾವರಣದಲ್ಲಿ ಬದಲಾವಣೆ ಮತ್ತು ಬಿಸಿಲು ಹೆಚ್ಚಾದಂತೆ ಈ ಕಾಯಿಲೆಗಳು ಹೆಚ್ಚಾಗ್ತಿವೆ. ಇದರಿಂದ ಪಾರಾಗಲು ವಾಹನಗಳ ಸಂಖ್ಯೆ ಕಡಿಮೆ ಮಾಡಬೇಕು, ಮರ ಗಿಡಗಳನ್ನು ಬೆಳೆಸಬೇಕು, ಜೊತೆಗೆ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಬೇಕು ಇಲ್ಲವೆಂದರೆ ದೆಹಲಿ ರೀತಿ ಆಗುವುದು ಬೇಡಾ ಎಂದು ವೈದ್ಯರು ಹೇಳುತ್ತಾರೆ.

    ರಾಜ್ಯದಲ್ಲಿ ಜನವರಿಯಲ್ಲಿ ಆದ ರಥ ಸಪ್ತಮಿ ಬಳಿಕ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಸೂರ್ಯ ಉತ್ತರಾಯಣದ ಕಡೆ ಪಯಣ ಮಾಡುತ್ತಿರುವ ಹಿನ್ನೆಲೆ ಬಿಸಿಲಿನ ತಾಪ ಜಾಸ್ತಿ ಇರಲಿದೆಯಂತೆ. ಮಾರ್ಚ್ ಅಷ್ಟೋತ್ತಿಗೆ ಸೂರ್ಯ ಸಮಭಾಜಕ ವೃತ್ತದ ಬಳಿಗೆ ಬರಲಿದ್ದು ಬಿಸಿಲು ಜಾಸ್ತಿ ಆಗುವುದರಿಂದ ಸಾಂಕ್ರಾಮಿಕ ರೋಗಗಳು ಜಾಸ್ತಿ ಆಗಲಿದೆ ಎಂದು ಭೂ ಗರ್ಭ ಶಾಸ್ತ್ರಜ್ಞರು ತಿಳಿಸಿದರು.

    ರಥಸಪ್ತಮಿ ಬಳಿಕ ಬಿಸಿಲಿನ ತಾಪದಲ್ಲಿ ಆದ ಬದಲಾವಣೆಯನ್ನು ನೋಡೋದಾದರೆ;
    1. ಡಿಸೆಂಬರಿನಲ್ಲಿ ಬಿಸಿಲಿನ ತಾಪಮಾನ 25 ಡಿಗ್ರಿ ಸೆಲ್ಸಿಯಸ್
    2. ಜನವರಿ ಬಿಸಿಲಿನ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಆಗಿದೆ
    3. ಫೆಬ್ರವರಿಯಲ್ಲಿ ಇದರ ಪ್ರಮಾಣ 36ಕ್ಕೆ ಏರಿಕೆ
    4. ಮಾರ್ಚ್‍ನಲ್ಲಿ ಇನ್ನೂ ಜಾಸ್ತಿಯಾಗುವ ಸಾಧ್ಯತೆ ಇದೆ

  • ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ – ವೈದ್ಯರಲ್ಲಿ ಮಾಜಿ ಸಿಎಂ ಮನವಿ

    ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ – ವೈದ್ಯರಲ್ಲಿ ಮಾಜಿ ಸಿಎಂ ಮನವಿ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಾಂಕ್ರಾಮಿಕ ರೋಗದ ಬಗ್ಗೆ ಎಚ್ಚರಿಕೆ ಕೊಡುವ ಮೂಲಕ ವೈದ್ಯಕೀಯ ನೆರವು ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

    ಕುಮಾರಸ್ವಾಮಿ ಅವರು ಈ ಬಗ್ಗೆ “ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವೆ. ಪ್ರವಾಹ ಬಂದು ಹಲವಾರು ಹಳ್ಳಿಗಳು ಕೆಸರುಮಯವಾಗಿದ್ದು, ಇದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳಿವೆ. ಆದ್ದರಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಸಂತ್ರಸ್ತರಿಗೆ ವೈದ್ಯಕೀಯ ನೆರವು ನೀಡಬೇಕೆಂದು ನಾಡಿನ ಸಮಸ್ತ ವೈದ್ಯರಲ್ಲಿ ಕೇಳಿಕೊಳ್ಳುತ್ತೇನೆ” ಎಂದು ವೈದ್ಯರಿಗೆ ಟ್ವೀಟ್ ಮಾಡುವ ಮೂಲಕ ಮನವಿ ಮಾಡಿಕೊಂಡಿದ್ದಾರೆ.

    ಮತ್ತೊಂದು ಟ್ವೀಟ್‍ನಲ್ಲಿ, ಪ್ರವಾಹ ಪೀಡಿತ ಹಳ್ಳಿಗಳಿಗೆ ತೆರಳುವ ವ್ಯದ್ಯರು ಹಾಗೂ ದಾದಿಯರಿಗೆ ಈ ಕುರಿತು ಅನುಕೂಲಗಳನ್ನು ಒದಗಿಸಬೇಕೆಂದು ರಾಜ್ಯ ಸರ್ಕಾರಕ್ಕೂ ಮನವಿ ಮಾಡಿಕೊಂಡಿದ್ದಾರೆ. ಪ್ರವಾಹದಿಂದ ತತ್ತರಿಸಿ ಹೋಗಿರುವ ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

  • ಟಿಕ್‍ಟಾಕ್ ಖ್ಯಾತಿಯ ಬಾಲ ನಟಿ ದುರ್ಮರಣ

    ಟಿಕ್‍ಟಾಕ್ ಖ್ಯಾತಿಯ ಬಾಲ ನಟಿ ದುರ್ಮರಣ

    ತಿರುವನಂತಪುರಂ: ಮಲಯಾಳಂನ ಬಾಲ ನಟಿ, ಟಿಕ್‍ಟಾಕ್ ವಿಡಿಯೋಗಳ ಮೂಲಕ ಖ್ಯಾತಿ ಪಡೆದಿದ್ದ ಆರುಣಿ ಎಸ್. ಕುರುಪ್(9) ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದಾಳೆ.

    ಮೃತ ಆರುಣಿ ಅಪರಿಚಿತ ಕಾಯಿಲೆಯಿಂದ ಬಳಲುತ್ತಿದ್ದಳು. ಆ ಕಾಯಿಲೆ ಆಕೆಯ ಮೆದುಳಿನ ಮೇಲೆ ಪರಿಣಾಮ ಬೀರಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ.

    ಕಳೆದ ಕೆಲವು ದಿನಗಳ ಹಿಂದೆ ಆರುಣಿಗೆ ಜ್ವರ ಮತ್ತು ತಲೆನೋವು ಕಾಣಿಸಿಕೊಂಡಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆರುಣಿಯನ್ನು ತಿರುವನಂತಪುರದ ಎಸ್.ಐ.ಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆರುಣಿಯ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಸಾನ್ನಪ್ಪಿದ್ದಾಳೆ.

    ಕಳೆದ ವರ್ಷ ಸೌದಿ ಅರೇಬಿಯಾದಲ್ಲಿ ನಡೆದ ಅಪಘಾತದಲ್ಲಿ ಆರುಣಿಯ ತಂದೆ ಮೃತಪಟ್ಟಿದ್ದರು ಎಂದು ವರದಿಯಾಗಿದೆ. ಮೃತ ಆರುಣಿ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆದರೆ ಅನೇಕ ಟಿಕ್‍ಟಾಕ್ ವಿಡಿಯೋಗಳನ್ನು ಮಾಡಿ ಯೂಟ್ಯೂಬ್‍ನಲ್ಲಿ ಖ್ಯಾತಿ ಪಡೆದಿದ್ದಳು.

    ಆರುಣಿ ಅಪಾರ ಅಭಿಮಾನಿಯ ಬಳಗವನ್ನು ಹೊಂದಿದ್ದು, ಸಾಮಾಜಿಕ ತಾಣಗಳಲ್ಲಿ ಸುಮಾರು 14 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದರು. ಆರುಣಿಯ ಸಾವಿನ ಸುದ್ದಿ ತಿಳಿದ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

    https://www.youtube.com/watch?v=OiSVXu97pNI

  • ಕಾಫಿನಾಡಿನಲ್ಲಿ ಜ್ವರಕ್ಕೆ ಒಂದೇ ತಿಂಗಳಲ್ಲಿ ಮೂವರು ಬಲಿ

    ಕಾಫಿನಾಡಿನಲ್ಲಿ ಜ್ವರಕ್ಕೆ ಒಂದೇ ತಿಂಗಳಲ್ಲಿ ಮೂವರು ಬಲಿ

    ಚಿಕ್ಕಮಗಳೂರು: ಎರಡು ತಿಂಗಳಿನಿಂದ ಚಿಕ್ಕಮಗಳೂರು ತಾಲೂಕಿನ ಮರ್ಲೆ, ತಿಮ್ಮನಹಳ್ಳಿ, ನಾಗರಹಳ್ಳಿ, ಗೌಡನಹಳ್ಳಿ, ಇಂದಾವರ ಸೇರಿದಂತೆ ಹಲವು ಗ್ರಾಮದ ಜನರು ಜ್ವರದಿಂದ ಬಳಲುತ್ತಿದ್ದಾರೆ. ಒಂದೇ ತಿಂಗಳಲ್ಲಿ ಜ್ವರಕ್ಕೆ ಮೂವರು ಬಲಿಯಾಗಿದ್ದಾರೆ.

    ಕಳೆದ ಒಂದು ತಿಂಗಳಲ್ಲಿ ಏಳಕ್ಕೂ ಹೆಚ್ಚು ಗ್ರಾಮದ ಜನ ಹಾಸಿಗೆ ಹಿಡಿದಿದ್ದು, ಹಳ್ಳಿಯಿಂದ ಹಳ್ಳಿಗೆ ಹರಡುತ್ತಿರುವ ವೈರಲ್ ಫಿವರ್ ನಿಂದ ಸಾವಿರ ಜನಸಂಖ್ಯೆವುಳ್ಳ ಗ್ರಾಮದಲ್ಲಿ ಆರೋಗ್ಯವಾಗಿ ಇರುವವರನ್ನು ಹುಡುಕುವಂತಾಗಿದೆ. ಜನ ಹಾಸಿಗೆ ಹಿಡಿಯುತ್ತಿರುವುದರಿಂದ ಹಳ್ಳಿ ಮಂದಿ ಆತಂಕಕ್ಕೀಡಾಗಿದ್ದಾರೆ. ಒಂದೇ ತಿಂಗಳಲ್ಲಿ ಏಳು ತಿಂಗಳ ಲೋಚನ್, 16ರ ಹರೆಯದ ಮೇಘನಾ ಹಾಗೂ ತಿಮ್ಮಣ್ಣ(56) ಎಂಬ ಮೂವರು ಜ್ವರಕ್ಕೆ ಬಲಿಯಾಗಿದ್ದಾರೆ.

    ಆಶಾ ಕಾರ್ಯಕರ್ತರು, ನರ್ಸ್‍ಗಳು ಬರುತ್ತಾರೆ ಮಾತ್ರೆ ಕೊಟ್ಟು ಹೋಗುತ್ತಾರೆ. ಆದರೆ ಜನರು ಮಾತ್ರ ಹುಷಾರಾಗುತ್ತಿಲ್ಲ. ಹುಷಾರಾದವರು ವಾರವಷ್ಟೇ ಓಡಾಡಿ ಮತ್ತೆ ಮಲಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆಯೂ ಸಿಗದ ಕಾರಣ ಹಳ್ಳಿ ಜನ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಗೌಡನಹಳ್ಳಿ, ಚಿಕ್ಕಮಗಳೂರು ನಗರದಿಂದ ಕೂಗಳತೆ ದೂರದಲ್ಲಿರುವ 300 ಮನೆಗಳುಳ್ಳ ಗ್ರಾಮವಾಗಿದೆ. ಆದರೆ ಈ ಗ್ರಾಮದಲ್ಲಿ ಆರೋಗ್ಯವಾಗಿರುವವರನ್ನು ಹುಡುಕಬೇಕಾಗಿದೆ. ಯಾಕೆಂದರೆ 300 ಮನೆಗಳ ಗ್ರಾಮದಲ್ಲಿ ಇರುವವರೆಲ್ಲರೂ ಕಾಯಿಲೆಯಿಂದ ಮಲಗಿದ್ದಾರೆ. ಹೇಳುವುದಕ್ಕೆ ಚಿಕ್ಕ ಹಳ್ಳಿಯಾದರು ಪ್ರತಿದಿನ ಆಸ್ಪತ್ರೆಗೆ ಹೋಗುವವರ ಸಂಖ್ಯೆ 300ಕ್ಕೂ ಅಧಿಕವಾಗಿದೆ. ಅಂಬಳೆ ಹೋಬಳಿಯ ಬಹುತೇಕ ರೋಗಿಗಳು ಅಲ್ಲಿಗೆ ಬರುತ್ತಾರೆ.

    ಆರ್ಥಿಕವಾಗಿ ಬಲವಿದ್ದವರು ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದಾರೆ. ಕೂಲಿ ಕಾರ್ಮಿಕರು, ರೈತರು ಜಿಲ್ಲಾಸ್ಪತ್ರೆಗೆ ಬಂದು ನರಳಾಡುತ್ತಾ ಬದುಕುತ್ತಿದ್ದಾರೆ. ಇಂಜೆಕ್ಷನ್ ಪವರ್ ಇರುವ ತನಕ ನಾರ್ಮಲ್ ಆಗಿರೋರು ಬಳಿಕ ಮತ್ತೆ ಕುಂಟುತ್ತಾ ಸಾಗುತ್ತಾರೆ. ವಾರಕ್ಕೆ ಹುಷಾರಾದವರು ಮುಂದಿನ ವಾರ ಮತ್ತೆ ಆಸ್ಪತ್ರೆಗೆ ಬರುವಂತಾಗಿದೆ. ಕೂಡಲೇ ಜಿಲ್ಲಾಡಳಿತ ಇಲ್ಲಿನ ಕಾಯಿಲೆಗೆ ಶಾಶ್ವತ ಪರಿಹಾರ ಹುಡುಕಬೇಕೆಂದು ಗ್ರಾಮಸ್ಥ ಮರೀಗೌಡ ಒತ್ತಾಯಿಸಿದ್ದಾರೆ.

    ಕಾಫಿನಾಡಿನ ಗ್ರಾಮೀಣ ಭಾಗದ ಒಂದಲ್ಲ ಒಂದು ಹಳ್ಳಿಯ ಜನ ಪ್ರತಿದಿನ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದಾರೆ. ಅಲ್ಲಿನ ಜನ ಹಾಸಿಗೆ ಹಿಡಿಯುತ್ತಿರುವುದು ಚಿಂತೆಗೀಡು ಮಾಡಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸೋಂಕು ತಗಲದಿರುವ ಗ್ರಾಮಗಳತ್ತ ಗಮನ ಹರಿಸಿ ಮುಂದಾಗುವ ಅನಾಹುತವನ್ನ ತಪ್ಪಿಸಬೇಕು. ಜೊತೆಗೆ ಡೇಂಘಿ ಹಾಗೂ ಚಿಕೂನ್ ಗುನ್ಯಾದಿಂದ ಬಳಲುತ್ತಿರುವ ಗ್ರಾಮಗಳಲ್ಲಿ ಹೆಲ್ತ್ ಕ್ಯಾಂಪ್ ಹಾಕಿ ಜನರ ಆರೋಗ್ಯವನ್ನು ಸುಧಾರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಚಾಮರಾಜನಗರದ ಕಾಡಂಚಿನಲ್ಲಿ ವಿಚಿತ್ರ ಕಾಯಿಲೆ

    ಚಾಮರಾಜನಗರದ ಕಾಡಂಚಿನಲ್ಲಿ ವಿಚಿತ್ರ ಕಾಯಿಲೆ

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಕಾಡಂಚಿನ ಗ್ರಾಮದಲ್ಲಿ ವಿಚಿತ್ರ ಕಾಯಿಲೆ ಕಾಣಿಸಿಕೊಂಡಿದ್ದು, ಇದರಿಂದ ಇಲ್ಲಿನ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

    ಹನೂರು ತಾಲೂಕಿನ ಕಾಡಂಚಿನ ಗ್ರಾಮಗಳಾದ ಟಿ.ಜಿ.ದೊಡ್ಡಿ, ಆರ್ ಬಿ ತಾಂಡದ ಗ್ರಾಮದ ಜಾಗೇರಿ ತಾಂಡ ಜನಾಂಗದ 450ಕ್ಕೂ ಹೆಚ್ಚು ಜನರಿಗೆ ವಿಚಿತ್ರ ಕಾಯಿಲೆ ಕಾಣಿಸಿಕೊಂಡಿದೆ. ಮೊದಲಿಗೆ ತಲೆ ನೋವು, ಜ್ವರ, ಕೀಲು ನೋವು, ತಲೆ ಸುತ್ತು ಕಾಣಿಸಿಕೊಂಡು ಸುಸ್ತಿನಿಂದ ಇಲ್ಲಿನ ಜನ ಬಳಲುತ್ತಿದ್ದಾರೆ.

    ಜನರು ಆಸ್ಪತ್ರೆಗೆ ಹೋದರೆ ಇದು ಯಾವ ಕಾಯಿಲೆ ಎಂದು ವೈದ್ಯರು ಹೇಳುತ್ತಿಲ್ಲ. ವೈದ್ಯರು ಕೊಡುವ ಔಷಧಿಯನ್ನು ತೆಗೆದುಕೊಂಡರೂ ಕಾಯಿಲೆ ಮಾತ್ರ ಗುಣ ಮುಖವಾಗುತ್ತಿಲ್ಲ. ಹೀಗಾಗಿ ಸದ್ಯ ಇಲ್ಲಿನ ಜನ ಆಸ್ಪತ್ರೆಗೂ ಹೋಗದ ಸ್ಥಿತಿ ನಿರ್ಮಾಣವಾಗಿದೆ.

    ಈ ಬಗ್ಗೆ ಸ್ಥಳೀಯ ಕಾಂಗ್ರೆಸ್ ಶಾಸಕ ಆರ್.ನರೇಂದ್ರಗೆ ತಿಳಿಸಿದರೂ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಮಾತು ಕತೆ ನಡೆಸಿಲ್ಲ. ಹೀಗಾಗಿ ಇಲ್ಲಿನ ಜನ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

  • ಡೌನ್ ಸಿಂಡ್ರೋಮ್ ಕಾಯಿಲೆಯನ್ನ ಡೌನ್ ಮಾಡಿ, SSLC ಪರೀಕ್ಷೆಯಲ್ಲಿ ಬಾಲಕಿಯ ಸಾಧನೆ

    ಡೌನ್ ಸಿಂಡ್ರೋಮ್ ಕಾಯಿಲೆಯನ್ನ ಡೌನ್ ಮಾಡಿ, SSLC ಪರೀಕ್ಷೆಯಲ್ಲಿ ಬಾಲಕಿಯ ಸಾಧನೆ

    ಚಿತ್ರದುರ್ಗ: ಎಲ್ಲಾ ಅಂಗಾಂಗಗಳು ಸರಿ ಇದ್ದರೂ ವಿದ್ಯಾರ್ಥಿಗಳು ಓದೋದು ಕಷ್ಟ. ಆದರೆ ಡೌನ್ ಸಿಂಡ್ರೋಮ್ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿಯೊಬ್ಬಳು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇಕಡ 80 ಅಂಕಗಳನ್ನ ಪಡೆದು ಸಾಧನೆ ಮಾಡಿದ್ದಾಳೆ.

    ಜಿಲ್ಲೆಯ ಹೊಸದುರ್ಗ ಪಟ್ಟಣ ನಿವಾಸಿ ಸುಶ್ರಾವ್ಯ 80% ಅಂಕ ಪಡೆದು ಸಾಧನೆ ಮಾಡಿರುವ ಬಾಲಕಿ. ಹುಟ್ಟಿನಿಂದಲೂ ಈ ಕಾಯಿಲೆಯಿಂದ ಬಳಲುತ್ತಿರುವ ಸುಶ್ರಾವ್ಯಗೆ ಕಲಿಕಾ ದೌರ್ಬಲ್ಯವಿದೆ. ಮರೆವು ಹಾಗೂ ಅಲ್ಪ ಬುದ್ದಿಮಾಂದ್ಯತೆ ಸಹ ಇದೆ. ಆದರೂ ಎದೆಗುಂದದೇ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಮಂಡಳಿ ನೀಡುವ ವಿನಾಯತಿಯ ಅಡಿ ಪರೀಕ್ಷೆ ಬರೆದು 400 ಕ್ಕೆ 321 ಅಂಕ ಗಳಿಸಿ ತೇರ್ಗಡೆ ಹೊಂದಿದ್ದಾಳೆ. (ವಿನಾಯತಿ ಪರೀಕ್ಷೆಯಲ್ಲಿ 400 ಅಂಕಕ್ಕೆ ಮಾತ್ರ ಪರೀಕ್ಷೆ ಬರೆಯಲಾಗುತ್ತದೆ)

    ಈ ಮೂಲಕ ಪರೀಕ್ಷಾ ಮಂಡಳಿ ಮತ್ತು ಶಿಕ್ಷಕರ ಪ್ರೋತ್ಸಾಹದಿಂದ ಸುಶ್ರಾವ್ಯ ಕನಸು ಚಿಗುರಿದೆ. ನನ್ನ ಸಾಧನೆಗೆ ಎಸ್.ಡಿ.ಎ ಶಾಲೆಯ ಎಲ್ಲ ಶಿಕ್ಷಕರ ಸಂಪೂರ್ಣ ಸಹಕಾರ ಹಾಗೂ ನನ್ನ ತಾಯಿ ರೇಖಾರವರ ಪ್ರಾಮಾಣಿಕ ತರಬೇತಿ ಕಾರಣ ಎಂದು ಬಾಲಕಿ ಹೇಳಿದ್ದಾಳೆ.

    ಅನಾರೋಗ್ಯವನ್ನು ದಿಕ್ಕರಿಸಿ ಸಾಧನೆಗೈದ ಸುಶ್ರಾವ್ಯ ಸಾಧನೆಗೆ ಕೋಟೆನಾಡಿನ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಮಲೆನಾಡ ಹೆಬ್ಬಾಗಿಲಿಗೆ ಕಾಲಿಟ್ಟ ಮಂಗನ ಕಾಯಿಲೆ

    ಮಲೆನಾಡ ಹೆಬ್ಬಾಗಿಲಿಗೆ ಕಾಲಿಟ್ಟ ಮಂಗನ ಕಾಯಿಲೆ

    ಚಿಕ್ಕಮಗಳೂರು: ಮಲೆನಾಡಿಗರ ನಿದ್ದೆಗೆಡಿಸಿದ್ದ ಮಂಗನ ಕಾಯಿಲೆ ಭೀತಿ ಇದೀಗ ಮಲೆನಾಡ ಹೆಬ್ಬಾಗಿಲು ತರೀಕೆರೆಗೂ ಕಾಲಿಟ್ಟಿರುವ ಸಂಶಯ ಮೂಡಿದೆ.

    ಕಳೆದೊಂದು ತಿಂಗಳ ಅವಧಿಯಲ್ಲಿ ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕಿನಲ್ಲಿ ಒಟ್ಟು 9 ಮಂಗಗಳು ಮೃತಪಟ್ಟಿದ್ದು, ನಾಲ್ಕು ಮಾದರಿಯ ರಕ್ತವನ್ನು ಮೈಸೂರು, ಮಂಗಳೂರು, ಶಿವಮೊಗ್ಗ ಹಾಗೂ ಪುಣೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ತಾಲೂಕು ಹಾಗೂ ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

    ಇದೀಗ ಮಲೆನಾಡ ಹೆಬ್ಬಾಗಿಲು ತರೀಕೆರೆ ತಾಲೂಕಿನ ಲಕ್ಕವಳ್ಳಿ ಸಮೀಪದ ಗೋಪಾಲ ಕಾಲೋನಿಯಲ್ಲೂ ಒಂದೇ ದಿನ ನರಳಿ-ನರಳಿ ದಿಢೀರನೇ ಎರಡು ಮಂಗಗಳು ಮೃತಪಟ್ಟರುವದರಿಂದ ಸುತ್ತಮುತ್ತಲಿನ ಜನರು ಆತಂಕಕ್ಕೀಡಾಗಿದ್ದಾರೆ. ಇದನ್ನೂ ಓದಿ: ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

    ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ತಾಲೂಕು ವೈದ್ಯಾಧಿಕಾರಿ ಚಂದ್ರಶೇಖರ್ ಭೇಟಿ ನೀಡಿ, ಮಂಗಗಳ ರಕ್ತದ ಮಾದರಿಯನ್ನು ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಬಳಿಕ ಗ್ರಾಮದ ಸುತ್ತಲೂ ಔಷಧಿ ಸಿಂಪಡಿಸಿ, ಮಂಗಗಳನ್ನು ಸುಟ್ಟು ಹಾಕಿದ್ದಾರೆ. ಭದ್ರಾ ಡ್ಯಾಂ ತಪ್ಪಲಿನಲ್ಲಿರುವ ಲಕ್ಕವಳ್ಳಿ ಗ್ರಾಮದ ಸುತ್ತಲೂ ದಟ್ಟ ಅರಣ್ಯವಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಳಿಗಾಲದಲ್ಲಿ ಏನೆಲ್ಲ ಆರೋಗ್ಯ ಸಮಸ್ಯೆ ಕಾಡುತ್ತೆ, ಯಾವ ರೀತಿ ಕಾಪಾಡಿಕೊಳ್ಳಬೇಕು- ಇಲ್ಲಿದೆ ಟಿಪ್ಸ್

    ಚಳಿಗಾಲದಲ್ಲಿ ಏನೆಲ್ಲ ಆರೋಗ್ಯ ಸಮಸ್ಯೆ ಕಾಡುತ್ತೆ, ಯಾವ ರೀತಿ ಕಾಪಾಡಿಕೊಳ್ಳಬೇಕು- ಇಲ್ಲಿದೆ ಟಿಪ್ಸ್

    ಬೆಂಗಳೂರು: ಚಳಿಗಾಲ ಈಗ ಶುರುವಾಗಿದ್ದು, ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸಿಬೇಕು. ಬೆಂಗಳೂರಿನಲ್ಲಿ ಶೀತ ಗಾಳಿ ಹೆಚ್ಚಾಗಿದ್ದು ದಾಖಲೆಯ ಮಟ್ಟದಲ್ಲಿ ಚಳಿ ನಡುಗಿಸುತ್ತಿದೆ. ಚಳಿಗಾಲ ಶುರುವಾದಂತೆ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು ಕೂಡ ಕಾಡುತ್ತವೆ.

    ಚಳಿಗಾಲದಲ್ಲಿ ದೇಹದ ಉಷ್ಣತೆ ಕಡಿಮೆಯಾಗಿ ರಕ್ತದ ಚಲನೆಯ ವೇಗವೂ ಕಡಿಮೆಯಾಗುತ್ತದೆ. ವಾತಾವರಣ ವೈಪರೀತ್ಯದಿಂದಾಗಿ ದೇಹದಲ್ಲಿ ಬ್ಯಾಕ್ಟೀರಿಯಾ ವೈರಸ್ ಬೆಳವಣಿಗೆಯಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ಚಳಿಗಾಲದಲ್ಲಿ ಸೋಂಕುಗಳು ಬೇಗ ಹರಡುತ್ತೆ. ಚಳಿಗಾಲದಲ್ಲಿ ಏನೆಲ್ಲ ಆರೋಗ್ಯ ಸಮಸ್ಯೆ ಕಾಡುತ್ತೆ, ಯಾವೆಲ್ಲ ರೀತಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಬೇಕು, ಏನ್ ಫುಡ್ ತಗೋಬೇಕು. ಹೆಲ್ತ್ ಟಿಪ್ಸ್ ಇಲ್ಲಿದೆ. ಇದನ್ನೂ ಓದಿ: ಚಳಿಗಾಲದಲ್ಲಿ ಮಗು ಆರೋಗ್ಯವಾಗಿರಲು ಹೀಗೆ ಮಾಡಿ

    ಚಳಿಗಾಲದ ಕಾಯಿಲೆಗಳು- ಆರೋಗ್ಯ ಜೋಪಾನ!
    * ಶೀತ, ಕೆಮ್ಮು, ಜ್ವರ ಸಾಮಾನ್ಯ.
    * ಚಳಿಗಾಲದಲ್ಲಿ ಜ್ವರ ಬಹುತೇಕ ನ್ಯೂಮೋನಿಯಾವಾಗಿ ಬದಲಾಗುತ್ತೆ. ಜ್ವರ ಬಂದಾಗ ಜೋಪಾನವಾಗಿರಿ.
    * ಶ್ವಾಸಕೋಶ ಸಂಬಂಧಿ ಕಾಯಿಲೆ ಹೆಚ್ಚಾಗುತ್ತೆ. ಉಸಿರಾಟದ ತೊಂದರೆ ಕಾಣಿಸುತ್ತೆ.
    * ಅಸ್ತಮಾ ರೋಗಿಗಳಿಗೆ ಇನ್ನು ತೊಂದರೆ ಹೆಚ್ಚು ಆಗುತ್ತದೆ.
    * ವಯಸ್ಸಾದವರಿಗೆ ಪಾದಗಳಲ್ಲಿ ನೋವು, ಮಂಡಿನೋವು ಚಳಿಗಾಲದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ.
    * ಚರ್ಮಶುಷ್ಕವಾಗುತ್ತೆ ಹಾಗೂ ಚರ್ಮ ಸಂಬಂಧಿ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
    * ಚಳಿಗಾಲದಲ್ಲಿ ಹೃದಯಾಘಾತ ಪ್ರಮಾಣ ಹೆಚ್ಚು ಎನ್ನಲಾಗಿದೆ. ಹೀಗಾಗಿ ಹೃದಯ ಸಂಬಂಧಿ ಕಾಯಿಲೆಯುಳ್ಳವರು ಎಚ್ಚರ ವಹಿಸುವುದು ಅತೀ ಮುಖ್ಯ. ಚಳಿಗಾಲದ ರಾತ್ರಿಗಳಲ್ಲಿ ತಾಪಮಾನ ಕಡಿಮೆ ಇರುವುದರಿಂದ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ರಕ್ತದೊತ್ತಡ ಹಾಗೂ ಪ್ರೋಟಿನ್ ಪ್ರಮಾಣ ಹೆಚ್ಚಾಗಿ ರಕ್ತ ಹೆಪ್ಪುಗಟ್ಟಬಹುದು. ಇದರಿಂದ ರಕ್ತ ಸಂಚಾರಕ್ಕೆ ತೊಂದರೆಯಾಗಿ ಹೃದಯಕ್ಕೆ ಸಾಕಷ್ಟು ಆಮ್ಲಜನಕ ದೊರೆಯದೇ ಹೃದಯಾಘಾತವಾಗುವ ಸಾಧ್ಯತೆ ಅಧಿಕ.
    * ಮಧುಮೇಹ ಇದ್ದವರಿಗೆ ಚಳಿಗಾಲದಲ್ಲಿ ಹೆಚ್ಚು ಆರೋಗ್ಯ ಸಮಸ್ಯೆ ಕಾಣಿಸುತ್ತೆ. ಇದನ್ನೂ ಓದಿ: ಚುಮು ಚುಮು ಚಳಿಗೆ ಡ್ರೈ ಸ್ಕಿನ್ ಸಮಸ್ಯೆನಾ? – ಚಳಿಗಾಲದಲ್ಲಿ ಚರ್ಮದ ಆರೈಕೆ ಹೀಗಿರಲಿ

    ಚಳಿಗಾಲದ ಹೆಲ್ತ್ ಟಿಪ್ಸ್:
    * ಸಾಧ್ಯವಾದಷ್ಟು ಬೆಚ್ಚಗಿರುವ ಬಟ್ಟೆಗಳನ್ನು ಬಳಸಿ.
    * ಜ್ವರ, ಶೀತ, ನೆಗಡಿ, ಕೆಮ್ಮು ಕಾಣಿಸಿಕೊಂಡಾಗ ನಿರ್ಲಕ್ಷ್ಯ ಮಾಡದೇ ವೈದ್ಯರನ್ನು ಭೇಟಿಯಾಗಿ
    * ಸೀಸನಲ್ ಫ್ರೂಟ್ಸ್ ತಿನ್ನಿ ಹೆಚ್ಚಾಗಿ ದಾಳಿಂಬೆ, ಕಿತ್ತಳೆ ಸೇವಿಸಿ. ಇದ್ರಿಂದ ರಕ್ತಕಣ ಹೆಚ್ವಾಗುತ್ತೆ
    * ಸಾಧ್ಯವಾಷ್ಟು ಬಿಸಿ ಬಿಸಿ ಇರುವ ಊಟ, ತಿಂಡಿಯನ್ನು ಮಾಡಿ. ಬಿಸಿ ಪಾನೀಯ, ಕಾಫಿ, ರಾಗಿ ಗಂಜಿ ತರಕಾರಿ ಸೂಪ್ ಕುಡಿಯಿರಿ.
    * ಚರ್ಮದ ಸಮಸ್ಯೆ ಹೆಚ್ಚಾಗಿ ಕಾಣಿಸೋದ್ರಿಂದ ಕೊಬ್ಬರಿ ಎಣ್ಣೆಯನ್ನು ಮೈ ಕೈಗೆ ಹಚ್ಚಿಕೊಳ್ಳಿ. ವೀಕೆಂಡ್ ನಲ್ಲಿ ಎಣ್ಣೆಸ್ನಾನ ಬೆಸ್ಟ್.
    * ಶುಂಠಿ, ಬೆಳ್ಳುಳ್ಳಿ, ಚಕ್ಕೆ ಲವಂಗ ಕರಿಮೆಣಸಿನ ಬಳಕೆ ಆಹಾರ ಪದಾರ್ಥದಲ್ಲಿ ಹೆಚ್ಚಿರಲಿ.
    * ಬಿಸಿ ನೀರನ್ನು ಸೇವಿಸಿ. ಎಣ್ಣೆ ಹೆಚ್ಚಾಗಿ ಹಾಕಿದ ಆಹಾರ ಪದಾರ್ಥಗಳನ್ನು ಸೇವಿಸಬೇಡಿ. ಕರಿದ ತಿಂಡಿಗಳನ್ನು ಸೇವಿಸಬೇಡಿ.

    ಮಕ್ಕಳು ವೃದ್ಧರು ಹುಷಾರು: ಮಕ್ಕಳಿಗೆ ಹಾಗೂ ವೃದ್ಧರಿಗೆ ಚಳಿಗಾಲ ಬಂದರೆ ಆಹಾರ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತೆ. ಮಕ್ಕಳಿಗೆ ಬೆಚ್ಚಗಿನ ಬಟ್ಟೆ, ಕುಲಾವಿ ಹಾಕಿ. ವಯಸ್ಸಾದವರೂ ಕೂಡ ಆರೋಗ್ಯದ ಕಾಳಜಿ ಚಳಿಗಾಲದಲ್ಲಿ ಹೆಚ್ಚಾಗಿ ಮಾಡಬೇಕು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv