Tag: Disbanded

  • ಮಹಾತ್ಮ ಗಾಂಧಿಯವರ ಇಚ್ಛೆಯಂತೆ ಕಾಂಗ್ರೆಸ್ ವಿಸರ್ಜನೆಯಾಗಬೇಕು: ಯೋಗಿ ಆದಿತ್ಯನಾಥ್

    ಮಹಾತ್ಮ ಗಾಂಧಿಯವರ ಇಚ್ಛೆಯಂತೆ ಕಾಂಗ್ರೆಸ್ ವಿಸರ್ಜನೆಯಾಗಬೇಕು: ಯೋಗಿ ಆದಿತ್ಯನಾಥ್

    ಭೋಪಾಲ್: ರೈತರ ಪರವಾಗಿ ಕಾಂಗ್ರೆಸ್ ಕೆಲಸ ಮಾಡುತ್ತಿಲ್ಲ ಹೀಗಾಗಿ ಮಹಾತ್ಮ ಗಾಂಧೀಜಿಯವರ ಇಚ್ಛೇಯಂತೆ ಅದನ್ನು ವಿಸರ್ಜನೆ ಮಾಡಬೇಕೆಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

    ಮಧ್ಯಪ್ರದೇಶದ ರಾಜಗರ್ ಜಿಲ್ಲೆಯಲ್ಲಿ ಭರ್ಜರಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಅವರು, ಕಾಂಗ್ರೆಸ್ಸಿನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರಿಗೆ ನಗರ ನಕ್ಸಲ್ ಗಳೊಂದಿಗೆ ನಂಟಿದೆ ಎಂಬ ಆರೋಪವನ್ನು ಅಸ್ತ್ರವನ್ನಾಗಿ ಬಳಸಿಕೊಂಡು ಪ್ರಚಾರ ನಡೆಸುತ್ತಿದ್ದಾರೆ.

    ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಪ್ರಮುಖ ಕಾಂಗ್ರೆಸ್ ಮುಖಂಡರ ಹೆಸರು ನಕ್ಸಲರ ಜೊತೆ ಕೇಳಿಬರುತ್ತಿದೆ. ಭಯೋತ್ಪಾದನೆ ಹಾಗೂ ನಕ್ಸಲ್ ಚಟುವಟಿಕೆ ದೇಶಕ್ಕೆ ಬಹುದೊಡ್ಡ ಸಮಸ್ಯೆಯಾಗಿದೆ. ಆದರೆ ಕಾಂಗ್ರೆಸ್ ಅಂತಹವರ ಮೇಲೆ ಅನುಕಂಪವನ್ನು ಹೊಂದಿರುವುದು ಖಂಡನೀಯ. ಕಾಂಗ್ರೆಸ್ ರೈತರ ಪರವಾಗಿ ಕೆಲಸ ಮಾಡುತ್ತಿಲ್ಲವೆಂದರೇ, ಗಾಂಧೀಜಿಯವರ ಬಯಕೆಯಂತೆ ಅದನ್ನು ವಿಸರ್ಜಿಸಬೇಕು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

    15 ವರ್ಷದ ಹಿಂದೆಯೇ ಮಧ್ಯಪ್ರದೇಶದಲ್ಲಿ ನಕ್ಸಲ್ ಚಟುವಟಿಕೆ ಶುರುವಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಮಧ್ಯಪ್ರದೇಶ ಬಹುತೇಕ ರಸ್ತೆಗಳು ಗುಂಡಿಗಳಿಂದ ಕೂಡಿದ್ದವು. ನಿರುದ್ಯೋಗದ ಸಮಸ್ಯೆ ತಾಂಡವವಾಡುತ್ತಿತ್ತು. ಈಗ ರಾಜ್ಯ ಅಭಿವೃದ್ಧಿಯ ಕಡೆಗೆ ಸಾಗುತ್ತಿವೆ. ಮಧ್ಯಪ್ರದೇಶ ಹಾಗೂ ಇತರೆ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿಯನ್ನು ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ದಿಗ್ವಿಜಯ್ ಸಿಂಗ್ ವಿರುದ್ಧದ ಆರೋಪವೇನು?
    ಭೀಮಾ ಕೊರೆಗಾಂವ್ ಘರ್ಷಣೆಯ ಕುರಿತು ತನಿಖೆ ನಡೆಸುತ್ತಿರುವಾಗ ಪುಣೆ ಪೊಲೀಸರಿಗೆ ಪತ್ರವೊಂದು ಸಿಕ್ಕಿತ್ತು. ಆ ಪತ್ರದಲ್ಲಿ ದಿಗ್ವಿಜಯ್ ಸಿಂಗ್ ಅವರ ಹೆಸರು ಉಲ್ಲೇಖವಾಗಿತ್ತು. ಅಲ್ಲದೇ ಅವರಿಗೆ ನಗರ ನಕ್ಸಲ ಜೊತೆ ನಂಟಿದೆ ಎಂದು ಆರೋಪಿಸಲಾಗಿತ್ತು. ಆದರೆ ಇದನ್ನು ತಿರಸ್ಕರಿಸಿದ್ದ ದಿಗ್ವಿಜಯ್ ಸಿಂಗ್, ತಾಕತ್ ಇದ್ದರೆ ನನ್ನನ್ನು ಬಂಧಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದರು.

    ಏನಿದು ಭೀಮಾ ಕೊರೆಗಾಂವ್ ಘರ್ಷಣೆ?
    1818 ಜನವರಿ 1ರಂದು ದಲಿತರು ಮತ್ತು ಮರಾಠರ ನಡುವೆ ನಡೆದ ಗಲಭೆಯೆ ಭೀಮಾ ಕೊರೆಗಾಂವ್ ಘರ್ಷಣೆ. ಭೀಮಾ ನದಿಯ ತೀರದಲ್ಲಿರುವ ಕೊರೆಗಾಂವ್ ಗ್ರಾಮದಲ್ಲಿ ಘರ್ಷಣೆ ನಡೆದಿದ್ದರಿಂದ ಭೀಮಾ ಕೊರೆಗಾಂವ್ ಎಂದು ಹೆಸರು ಬಂದಿತ್ತು. ಈ ಗಲಭೆಯ 200ನೇ ವರ್ಷಾಚರಣೆಯನ್ನು 2017ರ ಡಿಸೆಂಬರ್ ತಿಂಗಳಲ್ಲಿ ನಡೆಸಿದ್ದರು. ಈ ಸಂದರ್ಭದಲ್ಲಿ ಮರಾಠರ ವಿರುದ್ಧ ಯುದ್ಧ ಗೆದ್ದ ದಿನವನ್ನು `ವಿಜಯ್ ದಿನಸ್’ ಎಂಬ ಹೆಸರಿನಲ್ಲಿ ದಲಿತರು ಆಚರಿಸುತ್ತಿದ್ದರು. ಈ ವೇಳೆ ಏಕಾಏಕಿ ಘರ್ಷಣೆ ಉಂಟಾಗಿ ಓರ್ವ ದಲಿತ ವ್ಯಕ್ತಿ ಮೃತಪಟ್ಟಿದ್ದ. ಹೀಗಾಗಿ ಮತ್ತೊಮ್ಮೆ ಈ ಘರ್ಷಣೆ ಉಗ್ರ ರೂಪವನ್ನು ಪಡೆದು, ಸಾಕಷ್ಟು ಜನ ಗಾಯಾಳುಗಳಾಗಿದ್ದರು. ಜೊತೆಗೆ ಮಹಾರಾಷ್ಟ್ರವನ್ನು ಬಂದ್ ಸಹ ಮಾಡಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv