Tag: disabled

  • ರಂಗೇರಿದ ಕರುನಾಡ ಹಬ್ಬ – ಕನ್ನಡ ಹಾಡಿಗೆ ಊರುಗೋಲು ಹಿಡಿದು ಅಂಗವಿಕಲನ ಸ್ಟೆಪ್

    ರಂಗೇರಿದ ಕರುನಾಡ ಹಬ್ಬ – ಕನ್ನಡ ಹಾಡಿಗೆ ಊರುಗೋಲು ಹಿಡಿದು ಅಂಗವಿಕಲನ ಸ್ಟೆಪ್

    ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ 64ನೇ ಕನ್ನಡ ಹಬ್ಬ ರಂಗೇರಿದ್ದು, ಅಂಗವಿಕಲ ಕನ್ನಡ ಪ್ರೇಮಿಯೊಬ್ಬ ಕನ್ನಡ ಡಿಜೆ ಹಾಡಿಗೆ ಊರುಗೋಲು ಹಿಡಿದು ಸಖತ್ ಸ್ಟೆಪ್ ಹಾಕಿದ್ದಾರೆ.

    ಹುಕ್ಕೇರಿ ತಾಲೂಕಿನ ಗುಟಗುದ್ದಿಯ ಅಶೋಕ್ ಕಳಸನ್ನ ಅವರು ಹುಟ್ಟು ಅಂಗವಿಕಲರಾಗಿದ್ದು, ಬಹುದೊಡ್ಡ ಕನ್ನಡ ಪ್ರೇಮಿಯಾಗಿದ್ದಾರೆ. ಇಂದು ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಡಿಜೆ ಅಳವಡಿಕೆ ಮಾಡಲಾಗಿತ್ತು. ಇಲ್ಲಿ ಆಶೋಕ್ ಅವರು ಮಲ್ಲ ಚಿತ್ರದ ಹಾಡಿಗೆ ಊರುಗೋಲು ಹಿಡಿದು ಭರ್ಜರಿ ಸ್ಟೆಪ್ ಹಾಕಿದ್ದಾರೆ.

    ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವವನ್ನ ಮಧ್ಯರಾತ್ರಿಯೇ ಆಚರಣೆ ಮಾಡುವ ಮೂಲಕ ಕುಂದಾನಗರಿಯಲ್ಲಿ ಕನ್ನಡಿಗರು ಸಂಭ್ರಮಿಸಿದ್ದಾರೆ. ನಗರದ ಚೆನ್ನಮ್ಮ ವೃತ್ತದಲ್ಲಿ ಸರಿಯಾಗಿ 12 ಗಂಟೆಗೆ ಕನ್ನಡಪರ ಸಂಘಟನೆ ಕಾರ್ಯಕರ್ತರೆಲ್ಲರೂ ಸೇರಿಕೊಂಡು ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೇ ಕನ್ನಡ ಹಬ್ಬ ಆಚರಿಸಿದ್ದಾರೆ. ಕೇಕ್ ಕಟ್ ಮಾಡಿ ಪಟಾಕಿ ಸಿಡಿಸಿ, ಮಳೆಯಲ್ಲೇ ಕನ್ನಡ ಗೀತೆಗಳಿಗೆ ಸ್ಟೆಪ್ಸ್ ಹಾಕಿದರು. 2005ರ ನಂತರ ಮೊದಲ ಬಾರಿಗೆ ಡಿಸಿ ಕಚೇರಿ ಮುಂಭಾಗದಲ್ಲಿ ಕನ್ನಡದ ಧ್ವಜವನ್ನು ಹಾರಿಸುವುದರ ಮೂಲಕ ಖುಷಿ ಪಟ್ಟರು.

    ಡಿಸಿ ಕಚೇರಿ ಮುಂಭಾಗದಲ್ಲಿ ಧ್ವಜಾರೋಹಣಕ್ಕೆ ಪೊಲೀಸರು ಕಾವಲಿದ್ದು, ಧ್ವಜಕ್ಕೆ ಧಕ್ಕೆಯಾಗದಂತೆ ನೋಡಿಕೊಂಡರು. ಮಧ್ಯರಾತ್ರಿ ಕನ್ನಡಿಗರೆಲ್ಲರೂ ರಾಜ್ಯೋತ್ಸವ ಆಚರಣೆ ಮಾಡುವ ಮೂಲಕ ಕನ್ನಡಾಭಿಮಾನ ಮೆರೆದಿದ್ದು, ಇಂದು ಇಡೀ ದಿನ ಕುಂದಾನಗರಿಯಲ್ಲಿ ಕನ್ನಡದ ಕಂಪು ಪಸರಿಸಲಿದೆ.

  • ಅಂಗವೈಕಲ್ಯವನ್ನು ಹಿಮ್ಮೆಟ್ಟಿ ಸಾಧನೆಯ ಮೆಟ್ಟಿಲೇರಿದ ನೂರ್ ಜಲೀಲಾ

    ಅಂಗವೈಕಲ್ಯವನ್ನು ಹಿಮ್ಮೆಟ್ಟಿ ಸಾಧನೆಯ ಮೆಟ್ಟಿಲೇರಿದ ನೂರ್ ಜಲೀಲಾ

    ತಿರುವನಂತಪುರಂ: ಸಾಧನೆ ಮಾಡಲು ಮನಸ್ಸು ಇದ್ದರೆ ಸಾಕು ಯಾವುದೇ ಅಡ್ಡಿಗಳನ್ನು ಹಿಮ್ಮೆಟ್ಟಿ ಗುರಿ ತಲುಪಬಹುದು ಎನ್ನುವುದಕ್ಕೆ ಕೇರಳದ ಕೋಝಿಕೋಡ್ ಮೂಲದ 17 ವರ್ಷದ ಯುವತಿ ಉದಾಹರಣೆಯಾಗಿದ್ದಾರೆ. ಅಂಗವೈಕಲ್ಯವಿದ್ದರು ತನ್ನ ಪ್ರತಿಭೆ ಮೂಲಕ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.

    ಕೋಝಿಕೋಡ್ ಮೂಲದವರಾದ ನೂರ್ ಜಲೀಲಾ ಅಂಗವಿಕಲೆಯಾಗಿ ಜನಿಸಿದ್ದರೂ, ತನ್ನ ಹಾದಿಗೆ ಅಂಗವೈಕಲ್ಯ ಯಾವತ್ತೂ ಕೂಡ ಅಡ್ಡಿಯಾಗಲೇ ಇಲ್ಲ ಅನ್ನೋದಕ್ಕೆ ಸ್ಪಷ್ಟ ನಿದರ್ಶನವಾಗಿದ್ದಾರೆ.

    ಹುಟ್ಟಿನಿಂದಲೂ ಜಲೀಲಾಗೆ ಮುಂದೋಳು, ಕಾಲುಗಳು ಇಲ್ಲ. ಆದರೆ ಮೈಕ್ ಹಿಡಿದು ಮಾತಿಗೆ ನಿಂತರೆ ಸಭೆಯಲ್ಲಿ ಇದ್ದವರು ಮಂತ್ರಮುಗ್ಧವಾಗುವಂತೆ ವಾಕ್ಚಾತುರ್ಯ ಹೊಂದಿದ್ದಾರೆ. ಸಾಮಾಜಿಕ ಹೋರಾಟಗಾರ್ತಿಯಾಗಿ ಸಾಮಾಜ ಸೇವೆ ಜೊತೆಗೆ ಪ್ರೇರಣಾ ಭಾಷಣಗಳನ್ನು ಮಾಡಿ, ಹಲವರಿಗೆ ಸ್ಪೂರ್ತಿ ಆಗಿದ್ದಾರೆ. ವಯೊಲಿನ್ ಹಿಡಿದು ನುಡಿಸಲು ನಿಂತರೆ ಕೇಳುಗರನ್ನು ಸಂಗೀತ ಸುಧೆಯಲ್ಲಿ ತೇಲುವಂತೆ ಮಾಡುತ್ತಾರೆ. ಹಾಡು, ಚಿತ್ರಕಲೆ, ಭಾಷಣ ಮಾಡುವುದು ಹೀಗೆ ಬಹುಮುಖ ಪ್ರತಿಭೆಯನ್ನು ಜಲೀಲಾ ಹೊಂದಿದ್ದಾರೆ.

    ಚಿಕ್ಕ ವಯಸ್ಸಿನಲ್ಲಿದ್ದಾಗ ಒಂದು ದಿನ ಜಲೀಲಾ ಪುಸ್ತಕದಲ್ಲಿ ಬಣ್ಣ ಹಚ್ಚುತ್ತಿದ್ದರು. ಇದನ್ನು ನೋಡಿದ ಪೋಷಕರು ಮಗಳಿಗೆ ಪ್ರೋತ್ಸಾಹಿಸಿದರು. ಆಕೆಗೆ ಕಲೆಯನ್ನು ಮುಂದುವರಿಸಲು ಸಹಕರಿಸಿದರು. ಬಳಿಕ 7ನೇ ತರಗತಿಯಲ್ಲಿದ್ದಾಗ ವಯೊಲಿನ್ ನುಡಿಸುವುದನ್ನು ಕಲಿತು, ಚಿತ್ರಕಲೆ ಜೊತೆಗೆ ಸಂಗೀತವನ್ನು ಕರಗತ ಮಾಡಿಕೊಂಡು ಹಲವಾರು ಸ್ಪರ್ಧೆಗಳಲ್ಲಿ ಗೆದ್ದು ಜಲೀಲಾ ಕೀರ್ತಿ ಗಳಿಸಿದ್ದಾರೆ.

    ಸದ್ಯ ಎನ್‍ಜಿಓ ಜೊತೆಗೆ ಕೈಜೋಡಿಸಿರುವ ಜಲೀಲಾ, ತಮ್ಮಂತೆ ಅಂಗವಿಕಲರಾಗಿರುವ ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ. ಜಲೀಲಾರ ಈ ಹುಮ್ಮಸ್ಸು, ಪ್ರತಿಭೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ ಅಮೆರಿಕದ ನಾಸಾಗೆ ಭೇಟಿ ನೀಡಬೇಕು, ಮೌಂಟ್ ಎವರೆಸ್ಟ್ ಹತ್ತುಬೇಕು ಎಂಬುದು ನನ್ನ ಕನಸು ಎಂದು ಜಲೀಲಾ ಹೇಳಿಕೊಂಡಿದ್ದಾರೆ.

    ಎಲ್ಲಾ ಸರಿಯಿದ್ದರೂ ಕೂಡ ಕೆಲವರು ನಮ್ಮ ಕೈಯಲ್ಲಿ ಏನೂ ಆಗಲ್ಲ ಎಂದು ತಮ್ಮ ಕನಸಿಗೆ ಬೀಗ ಹಾಕಿಟ್ಟುಕೊಂಡು ಸುಮ್ಮನಾಗಿ ಬಿಡುತ್ತಾರೆ. ಆದರೆ ಮುಂದೋಳು, ಕಾಲುಗಳು ಇಲ್ಲದಿದ್ದರೂ ಜೀವನದಲ್ಲಿ ಹತಾಶರಾಗದೆ ತಮ್ಮಗಿದ್ದ ಸಮಸ್ಯೆಯನ್ನು ಹಿಮ್ಮೆಟ್ಟಿ ಅನೇಕರಿಗೆ ಜಲೀಲಾ ಸ್ಪೂರ್ತಿಯಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಸಾಧಕರ ಪಟ್ಟಿಗೆ ಸೇರಿದ್ದಾರೆ.

  • ಆಯೋಗದಿಂದ ಹೊಸ ಪ್ಲಾನ್ – ವಿಕಲಚೇತನರಿಗೆ ಸಿಗಲಿದೆ ಕ್ಯಾಬ್‍ನಿಂದ ಪಿಕ್ ಅಪ್ ಡ್ರಾಪ್

    ಆಯೋಗದಿಂದ ಹೊಸ ಪ್ಲಾನ್ – ವಿಕಲಚೇತನರಿಗೆ ಸಿಗಲಿದೆ ಕ್ಯಾಬ್‍ನಿಂದ ಪಿಕ್ ಅಪ್ ಡ್ರಾಪ್

    – ಬೆಂಗಳೂರು ಸ್ಪೇಷಲ್ ವೊಟರ್ಸ್‍ ಗೆ ಬಂಪರ್

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಹೊಸ ಪ್ಲಾನ್ ಮಾಡಿದೆ. ಬೆಂಗಳೂರಿನ ವಿಕಲಚೇತನರಿಗೆ ವಿಶೇಷ ಸೌಲಭ್ಯ ನೀಡಲು ಚಿಂತನೆ ನಡೆದಿದೆ.

    ಹೌದು. ತಪ್ಪದೇ ಮತದಾನ ಮಾಡಿ, ನಿಮಗೆ ಮತ ಹಾಕಲು ಆಸೆಯಿದ್ದರೂ ಮತಗಟ್ಟೆಗೆ ಬರಲು ಕಷ್ಟವಿರುವ ವಿಕಲಚೇತನರಿಗಾಗಿ ಹೊಸ ಸವಲತ್ತು ರೆಡಿ ಇದೆ. ಮತದಾನ ಮಾಡಲು ನಿಮ್ಮನ್ನು ಕರೆದೊಯ್ಯಲು ಮನೆ ಬಾಗಿಲಿಗೆ ಕ್ಯಾಬ್ ಬರುತ್ತದೆ. ನಂತರ ಮತಗಟ್ಟೆ ಕರೆದುಕೊಂಡು ಮತ ಹಾಕಿಸುತ್ತಾರೆ. ಇದು ಚುನಾವಣಾ ಆಯೋಗದ ಹೊಸ ಐಡಿಯಾವಾಗಿದೆ.

    ಈ ರೀತಿಯ ಪ್ಲಾನ್ ಗೆ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಖಾಸಗಿ ಕ್ಯಾಬ್ ಕಂಪನಿ ಒಪ್ಪಂದ ಮಾಡಿಕೊಂಡಿದೆ. ಈ ಪ್ರಕಾರ ಉಚಿತವಾಗಿ ವಿಕಲಚೇತರನ್ನ ಮನೆಯಿಂದಲೇ ಕರೆದುಕೊಂಡು ಮತಗಟ್ಟೆಯಲ್ಲಿ ಮತದಾನ ಮಾಡಿ ಮತ್ತೆ ಮನೆಗೆ ವಾಪಸ್ಸು ಬಿಡಲು ಒಪ್ಪಂದ ಆಗಿದೆ. ಇದಕ್ಕಾಗಿ ಮತದಾರರು ಯಾವುದೇ ಹಣ ವೆಚ್ಚ ಮಾಡುವಂತಿಲ್ಲ. ಮತದಾನ ಪ್ರಮಾಣ ಹೆಚ್ಚಿಸಲು ಈ ನೂತನ ಐಡಿಯಾ ಮಾಡಲಾಗಿದೆ. ಖಾಸಗಿ ಕ್ಯಾಬ್ ಕಂಪನಿ ಮತದಾನ ಪ್ರಮಾಣ ಹೆಚ್ಚಿಸಲು ಈ ವಾಹನ ಸೇವೆ ಪ್ರಸ್ತಾವನೆ ನೀಡಿತು. ಇರದ ಆಧಾರದಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

    ಹೊಸ ಸೌಲಭ್ಯ ಪಡೆಯಬೇಕಾದ್ರೆ ಹೀಗೆ ಮಾಡಿ:
    ಮೊದಲಿಗೆ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿ ನಂತರ ವಿಕಲಚೇತನ ವಾಹನ ಸೇವೆ ಬಳಸಲು ರಿಜಿಸ್ಟಾರ್ ಮಾಡಿಸಿಕೊಳ್ಳಿ. ಬಳಿಕ ಮತದಾನ ಬೂತ್ ಹಾಗೂ ಸಮಯವನ್ನ ಖಾತ್ರಿ ಪಡಿಸಿ. ಆಗ ವಿಶೇಷ ಸೇವೆ ಖಾತ್ರಿಗಾಗಿ ವಿಕಲಚೇತನರಿಗೆ ಎಸ್‍ಎಂಎಸ್ ಬರಲಿದೆ. ಅಷ್ಟೇ ಅಲ್ಲದೆ ಮತಗಟ್ಟೆ ಬಳಿ ವ್ಹೀಲ್‍ಚೇರ್ ಸೇವೆ ಕೂಡ ಇದೆ. ನಿಮ್ಮನ್ನ ಪಿಕ್ ಮಾಡಿ ಮತ್ತೆ ಡ್ರಾಪ್ ಮಾಡುತ್ತವೆ.

    ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿರಬಾರದು. ನಿಗದಿತ ಪಕ್ಷಕ್ಕೆ ಮತ ಹಾಕುವಂತೆ ಒತ್ತಾಯ ಮಾಡುವಂತಿಲ್ಲ. ಈ ಕ್ಯಾಬ್ ಸೇವೆ ನೀಡುವ ಸಂಸ್ಥೆ ಮತದಾನ ಹೆಚ್ಚಿಸುವ ದೃಷ್ಟಿಯನ್ನ ಮಾತ್ರ ಹೊಂದಿರಬೇಕು. ಹೀಗೆ ಹತ್ತಾರು ಷರತ್ತುಗಳನ್ನ ಹಾಕಿ ಖಾಸಗಿ ಕ್ಯಾಬ್ ಸೇವೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

  • ಅಂಗವೈಕಲ್ಯ ಮೆಟ್ಟಿ ನಿಂತವನಿಗೆ ಆಶ್ರಯದಾತನಾಗುವ ಕನಸು

    ಅಂಗವೈಕಲ್ಯ ಮೆಟ್ಟಿ ನಿಂತವನಿಗೆ ಆಶ್ರಯದಾತನಾಗುವ ಕನಸು

    ಹಾವೇರಿ: ಇದು ಸ್ವಾಭಿಮಾನಿ ಯುವಕನ ಕಥೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕು ಮಮದಾಪುರ ತಾಂಡಾದ ನಿವಾಸಿ ನಾಗರಾಜ್ ಲಮಾಣಿ ಅಂಗವೈಕಲ್ಯವನ್ನು ಸಹ ಮೆಟ್ಟಿನಿಂತು ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ. ನಾಗರಾಜ್ ಓದಿದ್ದು ಎಸ್.ಎಸ್.ಎಲ್.ಸಿ, ಅಂಗವಿಕಲನಾದ್ರೂ ತಾನೇ ದುಡಿಮೆ ಮಾಡಿ ತಂದೆ-ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳಬೇಕು ಅನ್ನೋ ಛಲಗಾರ.

    ಮಮದಾಪುರ ತಾಂಡಾದ ಗುಡ್ಡಗಾಡು ಪ್ರದೇಶದ ಬಳಿ ಎರಡುವರೆ ಎಕರೆ ಜಮೀನು ಇದ್ದು, ಕಳೆದ ಸುಮಾರು ವರ್ಷಗಳಿಂದ ಕೃಷಿಯ ಜೊತೆಗೆ ಕುರಿಸಾಕಾಣೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ. ಸುತ್ತಮುತ್ತಲಿನ ಜನರ ಬಳಿ ಕುರಿ ಸಾಕಾಣಿಕೆ ಬಗ್ಗೆ ಕೇಳಿ ದೊಡ್ಡ ಪ್ರಮಾಣದಲ್ಲಿ ಕುರಿ ಸಾಕಾಣಿಕೆಗೆ ಒಂದು ಮನೆ ಹಾಗೂ ಅದಕ್ಕೆ ಬೇಕಾಗುವ ಸಲಕರಣೆ ಖರೀದಿ ಮಾಡಲು ಬ್ಯಾಂಕ್‍ಗೆ ಸಾಲಕ್ಕಾಗಿ ಅರ್ಜಿ ಹಾಕಿದ್ದಾನೆ. ಅದ್ರೆ ಬ್ಯಾಂಕ್‍ನಿಂದ ಯಾವುದೇ ಸಾಲ ಸಿಕ್ಕಿಲ್ಲ.

    ನಾಗರಾಜ್ ಲಮಾಣಿ ಮನೆಯ ಸಮೀಪದಲ್ಲಿಯ ಮೂರು ಗುಂಟೆ ಜಮೀನಿದ್ದು, ಅದರಲ್ಲಿ ಕುರಿಗಳಿಗೆ ಶೆಡ್ ನಿರ್ಮಾಣ ಮಾಡುವ ಯೋಜನೆ ಹಾಕಿಕೊಂಡಿದ್ದಾನೆ. ಸದ್ಯ ಜಮೀನಿನಲ್ಲಿ ಸೀರೆಯನ್ನ ಕಟ್ಟಿ ಅದರ ಒಳಗೆ ಕುರಿಯನ್ನ ಬಿಟ್ಟು ಸಾಕಾಣಿಕೆ ಮಾಡುತ್ತಿರೋ ಸ್ವಾಭಿಮಾನಿ ಅಂಗವಿಕಲ ಬ್ಯಾಂಕ್‍ಗೆ ಬೇಕಾದ ಎಲ್ಲಾ ದಾಖಲೆಗಳನ್ನ ನೀಡುತ್ತೇನೆ ದಯಮಾಡಿ ಸಾಲ ಸಹಾಯ ಕಲ್ಪಿಸಿ ಎಂದು ಪಬ್ಲಿಕ್ ಟಿವಿಯ ಮೊರೆ ಬಂದಿದ್ದಾನೆ.

    ವಿಕಲಚೇತನಾದ್ರೂ ಸ್ವಾಭಿಮಾನದ ಜೀವನ ಮಾಡಲು ನಾಗರಾಜ್ ನಾನು ಕುರಿ ಸಾಕಾಣಿಕೆ ಮಾಡುವ ಮಹಾದಾಸೆಯನ್ನು ಹೊಂದಿದ್ದು, ಇತನ ಸ್ವಾಭಿಮಾನದ ಸಕಾರ್ಯಕ್ಕೆ ಸ್ಫೂರ್ತಿ ತುಂಬಲು ಈ ಸ್ಟೋರಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

    https://www.youtube.com/watch?v=k7jgNDPBpK8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 2 ಕಾಲುಗಳಿಲ್ಲದಿದ್ರೂ 12 ವರ್ಷಗಳಿಂದ ಉಚಿತ ಯೋಗ ಪಾಠ ಮಾಡ್ತಿದ್ದಾರೆ ಹುಬ್ಬಳ್ಳಿಯ ಮೃತ್ಯುಂಜಯ

    2 ಕಾಲುಗಳಿಲ್ಲದಿದ್ರೂ 12 ವರ್ಷಗಳಿಂದ ಉಚಿತ ಯೋಗ ಪಾಠ ಮಾಡ್ತಿದ್ದಾರೆ ಹುಬ್ಬಳ್ಳಿಯ ಮೃತ್ಯುಂಜಯ

    ಹುಬ್ಬಳ್ಳಿ: ಕೆಲವರು ಅಂಗವಿಕಲತೆಗೆ ಒಳಗಾದ್ರೆ ಜೀವನವೇ ಮುಗಿಯಿತು ಅಂತ ತಲೆ ಮೇಲೆ ಕೈಹೊತ್ತು ಕೂರುತ್ತಾರೆ. ಆದರೆ ಅಪಘಾತದಲ್ಲಿ ಎರಡು ಕಾಲನ್ನೂ ಕಳೆದುಕೊಂಡಿರೋ ನಮ್ಮ ಪಬ್ಲಿಕ್ ಹೀರೋ ಹುಬ್ಬಳ್ಳಿಯ ಮೃತ್ಯುಂಜಯ ಅವರು ಯೋಗದಲ್ಲಿ ಮಗ್ನರಾಗಿದ್ದಾರೆ.

    ಅಂಗವೈಕಲ್ಯ ಮೆಟ್ಟಿ ನಿಂತು ಯೋಗ ಗುರುವಾಗಿರುವ 45 ವರ್ಷದ ಮೃತ್ಯುಂಜಯ ಹಿರೇಮಠ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಹುಬ್ಬಳ್ಳಿಯ ವಿದ್ಯಾನಗರ ನಿವಾಸಿಯಾಗಿರುವ ಇವರು ಬಿ.ಕಾಂ. ಮುಗಿಸಿದ ಬಳಿಕ ಯೋಗಕ್ಕೆ ಆಕರ್ಷಿತರಾಗಿ ಕಠ್ಮಂಡುವಿನಲ್ಲಿ ಯೋಗ ತರಬೇತಿ ಪಡೆದು ಬಂದಿದ್ದಾರೆ.

    ಕಳೆದ 12 ವರ್ಷಗಳಿಂದ ರಾಜ್ಯ, ಹೊರ ರಾಜ್ಯದಲ್ಲಿಯ ಸಾವಿರಾರು ಜನರಿಗೆ ಯೋಗ ತರಬೇತಿ ನೀಡಿದ್ದಾರೆ. ಎರಡು ವರ್ಷಗಳ ಹಿಂದೆ ಬೆಂಗಳೂರಿನ ಯೋಗ ಕ್ಲಾಸ್ ಮುಗಿಸಿ ವಾಪಸ್ ಆಗುತ್ತಿದ್ದಾಗ ಅಪಘಾತವಾಗಿ ತಮ್ಮ ಎರಡು ಕಾಲು ಕಳೆದುಕೊಂಡಿದ್ದಾರೆ. ಆದರೂ ಯೋಗದ ಮೇಲಿನ ಪ್ರೀತಿ ಮಾತ್ರ ದೂರವಾಗಿಲ್ಲ.

    ಪ್ರತಿದಿನ ಮುಂಜಾನೆ ಮತ್ತು ಮುಸ್ಸಂಜೆಯಲ್ಲಿ ಸ್ನೇಹಿತರು ಮತ್ತು ವಿದ್ಯಾರ್ಥಿಗಳಿಗೆ ಯೋಗ ಕಲಿಸುತ್ತಾರೆ. ಮತ್ತೊಂದು ವಿಶೇಷ ಅಂದ್ರೆ ಇವರು ನೀಡುವ ಯೋಗ ತರಬೇತಿಗೆ ಯಾವುದೇ ಹಣ ಪಡೆಯುವುದಿಲ್ಲ.

    https://www.youtube.com/watch?v=jxRoJimVsR0

  • ನಾಗರಹಾವು ಕೊರಳಲ್ಲಿ ಹಾಕಿಕೊಂಡು ತಹಶೀಲ್ದಾರ್ ಕಚೇರಿಗೆ ಎಂಟ್ರಿಕೊಟ್ಟು ಪ್ರತಿಭಟನೆ!

    ನಾಗರಹಾವು ಕೊರಳಲ್ಲಿ ಹಾಕಿಕೊಂಡು ತಹಶೀಲ್ದಾರ್ ಕಚೇರಿಗೆ ಎಂಟ್ರಿಕೊಟ್ಟು ಪ್ರತಿಭಟನೆ!

    ಗದಗ: ಜೀವಂತ ನಾಗರ ಹಾವನ್ನು ಕೊರಳಿಗೆ ಸುತ್ತಿಕೊಂಡು ವ್ಯಕ್ತಿಯೊಬ್ಬರು ರೋಣ ತಾಲೂಕು ಅಧಿಕಾರಿಗಳ ಕಚೇರಿಯನ್ನು ಪ್ರವೇಶಿಸಿ ಪ್ರತಿಭಟಿಸಿದ್ದಾರೆ.

    ಮಕ್ತುಮಸಾಬ್ ರಾಜೇಖಾನ್ (65) ನಿಂದ ವಿಭಿನ್ನ ಪ್ರತಿಭಟನೆ ನಡೆಸಿದ ವ್ಯಕ್ತಿ. ರಾಜೇಖಾನ್ ಅವರಿಗೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಮನೆಯಿಂದ ಅವರನ್ನು ಹೊರ ಹಾಕಿದ್ದಾರೆ. ಅದ್ದರಿಂದ ಅಂಗವಿಕಲರಾದ ಕಾರಣ ಸರ್ಕಾರದಿಂದ ಬರುವ ಸಹಾಯದ ಹಣವನ್ನು ಪಡೆಯಲು ಕಳೆದ ಆರು ತಿಂಗಳ ಹಿಂದೆ ಅರ್ಜಿ ಸಲ್ಲಿಸಿ ಅಧಿಕಾರಿಗಳ ಹಿಂದೆ ಸುತ್ತುತ್ತಿದ್ದಾರೆ.

    ಸದ್ಯ ರಾಜೇಖಾನ್ ಮನೆಯ ಬಳಿಯ ಪ್ರತ್ಯೇಕ ಕೊಣೆಯೊಂದರಲ್ಲಿ ವಾಸವಿದ್ದು, ಯಾವುದೇ ಕೆಲಸ ಮಾಡಿ ಹಣ ಸಂಪಾದನೆ ಮಾಡಲು ಆಗದೇ ಊಟಕ್ಕಾಗಿ ಸಮಸ್ಯೆ ಎದುರಿಸುತ್ತಾರೆ. ಈ ಕುರಿತು ಅಧಿಕಾರಿಗಳ ಬಳಿ ತಮ್ಮ ಸಮಸ್ಯೆ ಹೇಳಿಕೊಂಡು ಪರಿಹಾರಕ್ಕಾಗಿ ವಿನಂತಿ ಮಾಡಿದ್ದಾರೆ. ಆದರೆ ಅಧಿಕಾರಿಗಳು ನಿರ್ಲಕ್ಷವಹಿಸಿ ಮಾತನಾಡಿದ್ದು ಇದರಿಂದ ಬೇಸತ್ತ ರಾಜೇಖಾನ್ ಇಂದು ಜೀವಂತ ಹಾವು ಕೊರಳಿಗೆ ಸುತ್ತಿಕೊಂಡು ನೇರ ತಹಶೀಲ್ದಾರ್ ಹಾಗೂ ಉಪಖಜಾನೆ ಅಧಿಕಾರಿಗಳ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ.

  • 20 ವರ್ಷಗಳಿಂದ ಮೂವರು ಮಕ್ಕಳೊಂದಿಗೆ ಪೆಟ್ಟಿಗೆ ಅಂಗಡಿಯಲ್ಲಿ ವಾಸಿಸುತ್ತಿರೋ ವ್ಯಕ್ತಿಗೆ ಬೇಕಿದೆ ಬೆಳಕು

    20 ವರ್ಷಗಳಿಂದ ಮೂವರು ಮಕ್ಕಳೊಂದಿಗೆ ಪೆಟ್ಟಿಗೆ ಅಂಗಡಿಯಲ್ಲಿ ವಾಸಿಸುತ್ತಿರೋ ವ್ಯಕ್ತಿಗೆ ಬೇಕಿದೆ ಬೆಳಕು

    ತುಮಕೂರು: ಅಂಗೈ ಅಗಲ ಜಾಗದಲ್ಲಿ ಇವರು ಮಲಗಿದ್ದನ್ನು ಕಂಡರೆ ಎಂಥವರ ಮನಸ್ಸೂ ಕೂಡಾ ಕರಗದೇ ಇರಲಾರದು. ಮಂಜುನಾಥ್ ಎಂಬ ಅಂಗವಿಕಲ ಕಳೆದ 20 ವರ್ಷಗಳಿಂದ ತುಮಕೂರು ವಿಶ್ವವಿದ್ಯಾಲಯದ ಪಕ್ಕದ ಬಿ.ಎಚ್. ರಸ್ತೆ ಬದಿಯ ಪೆಟ್ಟಿಗೆ ಅಂಗಡಿಯಲ್ಲೇ ಮೂವರು ಮಕ್ಕಳೊಂದಿಗೆ ವಾಸವಿದ್ದಾರೆ.

    ಚಮ್ಮಾರಿಕೆ ವೃತ್ತಿ ಮಾಡುವ ಇವರು ಮಳೆ-ಬಿಸಿಲು-ಚಳಿ ಎನ್ನದೆ 5 ಅಡಿ ಅಗಲ, 6 ಅಡಿ ಉದ್ದ ಇರುವ ಪುಟ್ಟ ಅಂಗಡಿಯಲ್ಲೇ ಜೀವನ ಸಾಗಿಸ್ತಾ ಇದ್ದಾರೆ. ಮಕ್ಕಳು ಮೇಣದ ಬತ್ತಿಯ ಬೆಳಕಿನಲ್ಲಿ ಓದುವ ಪರಿಸ್ಥಿತಿ. ಪತ್ನಿ ಜಯಲಕ್ಷ್ಮಿ ಎರಡು ವರ್ಷದ ಹಿಂದೆ ತೀರಿಹೋಗಿದ್ದರಿಂದ ಸಂಸಾರದ ಸಂಪೂರ್ಣ ಭಾರ ಮಂಜುನಾಥರ ಮೇಲೆ ಬಿದ್ದಿದೆ. ಚಮ್ಮಾರಿಕೆ ವೃತ್ತಿಯಿಂದ ಬಂದಂತಹ ಅಲ್ಪಸ್ವಲ್ಪ ಹಣದಿಂದ ಮಕ್ಕಳನ್ನು ಓದಿಸ್ತಾರೆ.

    ಹುಟ್ಟುತ್ತಲೇ ಇವರ ಬಲಗಾಲು ಪೋಲಿಯೋಗೆ ತುತ್ತಾಗಿದೆ. ಹಾಗಾಗಿ ಓಡಾಡಲು ಹಾಗೂ ಕಷ್ಟದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಬಾಡಿಗೆ ಮನೆ ಮಾಡಿಕೊಂಡಿದ್ದರೆ ಮಕ್ಕಳ ವಿದ್ಯಾಭ್ಯಾಸ, ಊಟ-ಬಟ್ಟೆಗೆ ಹಣ ಹೊಂದಿಸೋದು ಕಷ್ಟ. ಹಾಗಾಗಿ ಕಳೆದ 20 ವರ್ಷಗಳಿಂದ ಇದೇ ಪೆಟ್ಟಿಗೆ ಅಂಗಡಿಯಲ್ಲಿ ವಾಸ ಇದ್ದಾರೆ. ಆದ್ರೂ ಇವರಿಗೆ ಸರ್ಕಾರದ ಅಂಗವಿಕಲ ಭತ್ಯೆಯಾಗಲಿ, ಇನ್ನಿತರ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. ದಿಬ್ಬೂರಿನಲ್ಲಿ ಸರ್ಕಾರದಿಂದ ಕಟ್ಟಿದ ವಸತಿ ಸಂಕೀರ್ಣದಲ್ಲೂ ಇವರಿಗೆ ಮನೆ ಸಿಕ್ಕಿಲ್ಲ. ಸಚಿವ ಜಯಚಂದ್ರ, ಎಸ್ಪಿ, ಡಿಸಿಗಳು ಈ ಹೆದ್ದಾರಿಯಲ್ಲೇ ಸಂಚರಿಸ್ತಾರೆ. ಆದ್ರೂ ಈ ಬಡಪಾಯಿಯ ಕಷ್ಟ ಇವರ ಕಣ್ಣಿಗೆ ಬಿದ್ದಿಲ್ಲ.

    ಮಂಜುನಾಥರಿಗೆ ಯಾವುದೇ ಆಸ್ತಿ-ಪಾಸ್ತಿ ಇಲ್ಲ. ಅವರ ತಂದೆ-ತಾಯಿಗಳು ಕೂಡಾ ಬೀದಿ ಬದಿಯಲ್ಲಿ ಜೀವನ ಸಾಗಿಸ್ತಾ ಇದ್ರು. ಆದ್ರೆ ತಾನೂ ಹೇಗಾದ್ರು ಮಾಡಿ ಸೂರೊಂದನ್ನು ಕಟ್ಟಿಕೊಳ್ಳಬೇಕು ಎಂಬ ಹಂಬಲ ಇದೆ. ಜತೆಗೆ ಮಕ್ಕಳನ್ನು ಓದಿಸಿ ವಿದ್ಯಾವಂತರನ್ನಾಗಿ ಮಾಡಬೇಕು ಎಂಬ ಛಲವು ಇವರಲ್ಲಿದೆ. ಬಡತನ ಎಲ್ಲದಕ್ಕೂ ಅಡ್ಡಿಯಾಗಿದೆ.

    https://www.youtube.com/watch?v=xQxmghst0Ps

  • ಅಪಘಾತದಲ್ಲಿ ಕೈ ಕಳೆದುಕೊಂಡರೂ ಒಂದೇ ಕೈಯಲ್ಲಿ ಆಟೋ ಓಡಿಸಿ ಜೀವನ ಮಾಡ್ತಿರೋ ಛಲಗಾರ

    ಅಪಘಾತದಲ್ಲಿ ಕೈ ಕಳೆದುಕೊಂಡರೂ ಒಂದೇ ಕೈಯಲ್ಲಿ ಆಟೋ ಓಡಿಸಿ ಜೀವನ ಮಾಡ್ತಿರೋ ಛಲಗಾರ

    ಧಾರವಾಡ: ಅಪಘಾತದಲ್ಲಿ ಕೈ ಕಳೆದುಕೊಂಡರೆ ಅಧಿಕ ಮಂದಿ ಧೃತಿಗೆಡುವುದೇ ಹೆಚ್ಚು. ಆದರೆ ಇಲ್ಲೊಬ್ಬರು ಒಂದೇ ಕೈಯಲ್ಲಿ ಆಟೋ ಓಡಿಸಿ ಜೀವನ ನಡೆಸುತ್ತಿದ್ದಾರೆ.

    ಜಿಲ್ಲೆಯ ಕೊಳಿಕೇರಿಯ ನಿವಾಸಿ ಅಮಜದ್ ಹುನಗುಂದ ಒಂದು ಕೈಯಲ್ಲಿ ಆಟೋ ಓಡಿಸುವ ಮೂಲಕ ಧಾರವಾಡದ ಇತರರಿಗೆ ಪ್ರೇರಕರಾಗಿದ್ದಾರೆ. ಇವರು 8 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಒಂದು ಕೈಯನ್ನು ಕಳೆದುಕೊಂಡಿದ್ದರು. ಆದರೂ ಛಲ ಬಿಡದೆ ಆಟೋ ಓಡಿಸಿ ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ.


    ಒಂದೇ ಕೈಯಲ್ಲಿ ಆಟೋ ಓಡಿಸಲು ಕಷ್ಟವಾಗುವ ಕಾರಣ ಆಟೋಗೆ ಕಾಲಿನಲ್ಲಿ ಎಕ್ಸಲೇಟರ್ ಮಾಡಿಸಲಾಗಿದೆ. ಪ್ರತಿ ದಿನ 200 ರಿಂದ 400 ರೂ. ವರೆಗೆ ದುಡಿಮೆ ಮಾಡಿ ಜೀವನ ನಡೆಸುತ್ತಿದ್ದಾರೆ. ಇವರಿಗೆ ಮನೆಯಲ್ಲಿ ತಂದೆ, ತಾಯಿ, ಪತ್ನಿ ಸೇರಿದಂತೆ ಇಬ್ಬರು ಮಕ್ಕಳು ಇದ್ದಾರೆ. ಆಟೋ ಓಡಿಸಿಯೇ ಇವರೆಲ್ಲರನ್ನು ಸಾಕುತ್ತಿದ್ದಾರೆ. ಆಟೋದಲ್ಲಿ ಕುಳಿತುಕೊಳ್ಳುವ ಕೆಲ ಪ್ರಯಾಣಿಕರು ಒಂದೇ ಕೈಯಲ್ಲಿ ಆಟೋ ಓಡಿಸುವುದನ್ನ ನೋಡಿ ಬೆರಗಾಗಿದ್ದು ಕೂಡಾ ಇದೆ.

    ನನಗೆ ಈ ರೀತಿ ಆಗಿ 8 ವರ್ಷ ಆಯಿತು. ನನಗೆ ಆಟೋ ಓಡಿಸುತ್ತಿರುವುದರಿಂದ ಯಾವುದೇ ಸಮಸ್ಯೆ ಇಲ್ಲ. ಕೋರ್ಟ್‍ನಿಂದ ಅನುಮತಿ ಪಡೆದಿದ್ದೇನೆ. ಇಡೀ ಸಂಸಾರಕ್ಕೆ ನಾನೊಬ್ಬನೇ ಆಧಾರ. ಆದ್ದರಿಂದ ನಾನು ಆಟೋ ಓಡಿಸುತ್ತಿದ್ದೇನೆ. ಪ್ರಯಾಣಿಕರನ್ನು ಮನೆಗೆ ಬಿಟ್ಟಾಗ 100-200 ಕೊಡಲು ಬರುತ್ತಾರೆ. ಆದರೆ ನಾನು ದುಡಿದು ಸಂಪಾದನೆ ಮಾಡುತ್ತೇನೆ, ನನಗೆ ಬೇಡ ಎಂದು ಬರುತ್ತೇನೆ ಎಂದು ಅಮಜದ್ ಹುನಗುಂದ ಹೇಳಿದರು.

  • ದಿವ್ಯಾಂಗರಾದ್ರೂ ಕುಗ್ಗದ ಉತ್ಸಾಹ- 70 ವರ್ಷವಾದ್ರೂ ಸ್ವಾವಲಂಬಿ ಬದುಕು ನಡೆಸ್ತಿರೋ ನಾಗರಾಜು

    ದಿವ್ಯಾಂಗರಾದ್ರೂ ಕುಗ್ಗದ ಉತ್ಸಾಹ- 70 ವರ್ಷವಾದ್ರೂ ಸ್ವಾವಲಂಬಿ ಬದುಕು ನಡೆಸ್ತಿರೋ ನಾಗರಾಜು

    ಬೆಂಗಳೂರು: ಹುಟ್ಟು ಅಂಗವಿಕಲರಾದ್ರು ಛಲ ಅನ್ನೋದಿದ್ರೆ ಏನು ಬೇಕಾದರೂ ಸಾಧಿಸಬಹದು ಎಂಬುದನ್ನು ಇವತ್ತಿನ ನಮ್ಮ ಪಬ್ಲಿಕ್ ಹೀರೋ ತೋರಿಸಿಕೊಟ್ಟಿದ್ದಾರೆ. 70 ವರ್ಷ ದಾಟಿದರೂ ಇವರ ಉತ್ಸಾಹದ ಚಿಲುಮೆ ಕಡಿಮೆಯಾಗಲಿಲ್ಲ. ಸ್ವಾವಲಂಬಿ ಬದಕನ್ನು ನಡೆಸುವ ಮೂಲಕ ಹಲವರಿಗೆ ಇವರು ಮಾದರಿಯಾಗಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹೊಸ ನಿಜಗಲ್ ಗ್ರಾಮದ ನಿವಾಸಿ ನಾಗರಾಜು ಬಡತನದಲ್ಲಿ ಬೆಳೆದ್ರೂ ಎಸ್‍ಎಸ್‍ಎಲ್‍ಸಿ ಪಾಸಾಗಿದ್ದು, 1965ರಲ್ಲಿ ಅಂಗವಿಕಲ ಕೋಟಾದಡಿ ಸರ್ಕಾರಿ ಕೆಲಸಕ್ಕೆ ಸೇರಿದ್ರು. ಆದರೆ ಕೆಲ ದಿನಗಳಲ್ಲಿ ರಾಜೀನಾಮೆ ನೀಡಿ ಸಿವಿಲ್ ಕಂಟ್ರಾಕ್ಟರ್ ಆಗಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಸರ್ಕಾರಿ ಕಟ್ಟಡ ಕಾಮಗಾರಿಗಳನ್ನ ನಡೆಸಿದ್ರು.

    ರಾಜಕಾರಣಿಗಳು ಹಾಗೂ ಅಧಿಕಾರಿಗಳ ಕಿರಿಕಿರಿ ತಾಳದೆ ಕಂಟ್ರಾಕ್ಟರ್ ಕೆಲಸಕ್ಕೂ ಗುಡ್ ಬೈ ಹೇಳಿದ್ದಾರೆ. ಆಮೇಲೆ ಖಾಸಗಿ ಕಂಟ್ರಾಕ್ಟರ್ ಆಗಿ ಸಣ್ಣಪುಟ್ಟ ಕೆಲಸ ಮಾಡಿದ್ದಾರೆ. ಜೊತೆಗೆ ತಮ್ಮ ಜಮೀನಿನಲ್ಲಿ ರೈತನಾಗಿ ದುಡಿಯುತ್ತಿದ್ದಾರೆ. ಕೃಷಿ ಜೊತೆಗೆ ಹೈನುಗಾರಿಕೆ, ಇಟ್ಟಿಗೆ ತಯಾರಿಕಾ ಘಟಕಗಳನ್ನೂ ಹೊಂದಿದ್ದಾರೆ. ಬರುವ ಆದಾಯದಲ್ಲಿ ದೇವಸ್ಥಾನ, ಗ್ರಾಮಗಳ ಅಭಿವೃದ್ಧಿಗೆ ದೇಣಿಗೆ, ಗ್ರಾಮಕ್ಕೆ ಉಚಿತ ನೀರಿನ ಸರಬರಾಜು ಮಾಡ್ತಿದ್ದಾರೆ. ಒಟ್ಟಾರೆ ದಿವ್ಯಾಂಗರಾಗಿದ್ದರೂ ಈ ಇಳಿವಯಸ್ಸಿನಲ್ಲಿನಲ್ಲಿ ನಾಗರಾಜು ಅವರು ಯುವಕರನ್ನೂ ಮೀರಿಸುವಂತೆ ಚಟುವಟಿಕೆಯಿಂದ ಇದ್ದಾರೆ.

    https://www.youtube.com/watch?v=w-F4rWgWgzA

     

  • ಅಂಗವಿಕಲರ ತ್ರಿಚಕ್ರ ಬೈಸಿಕಲ್ ಕೊಟ್ಟು ಫೋಟೋ ತೆಗೆಸಿ ಕಸಿದುಕೊಂಡ್ರು!

    ಅಂಗವಿಕಲರ ತ್ರಿಚಕ್ರ ಬೈಸಿಕಲ್ ಕೊಟ್ಟು ಫೋಟೋ ತೆಗೆಸಿ ಕಸಿದುಕೊಂಡ್ರು!

    ಚಿತ್ರದುರ್ಗ: ಅಂಗವಿಕಲ ಫಲಾನುಭವಿ ಅಂತಾ ವಾಹನ ಕೊಟ್ಟಿದೀವಿ ಅಂತಾ ಫೋಟೋ ತೆಗೆದು ಕಾರ್ಯಕ್ರಮ ಮುಗಿದ ಮೇಲೆ ಎರಡು ದಿನ ಆದ್ಮೇಲೆ ಗಾಡಿ ಕೊಡ್ತೀವಿ ಎಂದು ಹೇಳಿ ಎರಡೂವರೆ ತಿಂಗಳಾದ್ರೂ ನೀಡದೇ ಅವಮಾನ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಹೊಳಲ್ಕೆರೆ ತಾಲೂಕಿನ ಕೆಂಗುಂಟೆ ಗ್ರಾಮದ ನಿವಾಸಿ ಪ್ರಸನ್ನ ಕುಮಾರ್ ಹುಟ್ಟು ಅಂಗವಿಕಲನಾಗಿದ್ದು, ಮೂರು ಚಕ್ರದ ಬೈಸಿಕಲ್‍ಗಾಗಿ ತಾಲೂಕು ಪಂಚಾಯ್ತಿಗೆ ಅರ್ಜಿ ಸಲ್ಲಿಸಿದ್ರು. ಸಿ.ರವಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸಲ್ಲಿಸಿದ ಅರ್ಜಿಗೆ ಅನುಮೋದನೆ ಸಿಕ್ಕಿತ್ತು. ಬಳಿಕ ಅಧ್ಯಕ್ಷರು ಬದಲಾಗಿ ಸುನಿತಾ ಧನಂಜ್ ನಾಯಕ್ ಅಧ್ಯಕ್ಷರಾದ್ರು. ಇವ್ರು ಅಧ್ಯಕ್ಷರಾದ ಸುಮಾರು ಒಂದು ವರ್ಷಕ್ಕೆ ಅಂದ್ರೆ 2016 ಡಿಸೆಂಬರ್ 5 ರಂದು 17 ಮಂದಿಗೆ ಮೂರು ಚಕ್ರದ ಬೈಸಿಕಲ್ ನೀಡಲಾಯಿತು.

    ಕಾರ್ಯಕ್ರಮ ಮುಗಿದ ಮೇಲೆ ಕೊಟ ವಾಹನವನ್ನ ಅಧಿಕಾರಿಗಳು ನಿಮ್ಮ ವಾಹನದ ಟಿ.ಪಿಯಾಗಿಲ್ಲ ಅಂತಾ ವಾಪಸ್ ಪಡೆದಿದ್ದಾರೆ. ಬೆಳಗ್ಗೆ ಪತ್ರಿಕೆಗಳಲ್ಲಿ ವಾಹನ ಕೊಡಲಾಗಿದೆ ಅನ್ನೋ ಫೋಟೋ ನೋಡಿ ಗಾಬರಿಯಾಗಿದ್ರು. ಸುಮಾರು ಎರಡೂವರೆ ತಿಂಗಳಿನಿಂದ ಅಲೆಯುತಿದ್ದರೂ ಪ್ರಸನ್ನಕುಮಾರ್ ಅವರಿಗೆ ವಾಹನ ಭಾಗ್ಯ ಸಿಕ್ಕಿಲ್ಲ.

    ತಾಲೂಕು ಪಂಚಾಯ್ತಿ ಅಧಿಕಾರಿಗಳೇ ದಾಖಲೆಗಳನ್ನ ಜಿಲ್ಲಾ ವಿಕಲ ಚೇನತರ ಕಲ್ಯಾಣಾಧಿಕಾರಿಗಳ ಕಚೇರಿಗೆ ತಲುಪಿಸುವಲ್ಲಿ ವಿಳಂಬ ಮಾಡಿದ್ದಾರೆ. ಇದ್ರಲ್ಲಿ ನಮ್ಮದೇನೂ ಪಾತ್ರ ಇಲ್ಲ. ಕಚೇರಿಗೆ ಬಂದ ದಿನವೇ ವಾಹನಗಳನ್ನ ಕೊಡಿಸುವ ಉಸ್ತುವಾರಿ ಹೊತ್ತಿರುವ ಹಾವೇರಿಯ ಕಂಪನಿಗೆ ನಾವು ಪತ್ರ ರವಾನಿಸಿದ್ದೇವೆ. ಉಳಿದಂತೆ ತಾಂತ್ರಿಕವಾಗಿ ಯಾವುದೇ ತೊಂದರೆ ಇಲ್ಲ. ಟಿ.ಪಿ. ಬಂದ ಕೂಡಲೇ ವಾಹನ ನೀಡ್ತೀವಿ ಎಂದು ವಿಕಲ ಚೇತನರ ಕಲ್ಯಾಣ ಅಧಿಕಾರಿ ವೈಶಾಲಿ ಹೇಳಿದ್ದಾರೆ.

    ಅಧಿಕಾರಿಗಳ ಬೇಜವಾಬ್ದಾರಿಯಿಂದ ವಿಕಲ ಚೇತನ ಪ್ರಸನ್ನ ಕುಮಾರರಿಗೆ ವಾಹನಭಾಗ್ಯ ಇದ್ರೂ, ಪಡೆಯುವ ಭಾಗ್ಯ ಇಲ್ಲವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಿಂಗಳುಗಟ್ಟಲೆ ವಿಕಲಚೇತನರನ್ನ ಕಚೇರಿಗೆ ಅಲೆಸಿಕೊಳ್ಳುವುದನ್ನ ಬಿಟ್ಟು ಪೂರಕವಾಗಿ ಕೆಲಸ ಮಾಡುವ ಮನಸ್ಸು ಬೇಕಿದೆ.