Tag: Disabled Person

  • ಚಿತ್ರದುರ್ಗ | ಸರ್ಕಾರಿ ಸ್ಕೀಂ ಹೆಸರಲ್ಲಿ ವಿಶೇಷಚೇತನ ವ್ಯಕ್ತಿಗೆ ಉಂಡೆನಾಮ

    ಚಿತ್ರದುರ್ಗ | ಸರ್ಕಾರಿ ಸ್ಕೀಂ ಹೆಸರಲ್ಲಿ ವಿಶೇಷಚೇತನ ವ್ಯಕ್ತಿಗೆ ಉಂಡೆನಾಮ

    ಚಿತ್ರದುರ್ಗ: ಸಬ್ಸಿಡಿ ಲೋನ್ ಕೊಡಿಸುತ್ತೇವೆ ಎಂದು ನಂಬಿಸಿ ಜನರನ್ನು ವಂಚಿಸುವ ವಂಚಕರ ಕಥೆ ಹೊಸದೇನಲ್ಲ. ಆದರೆ ವಿಶೇಷಚೇತನರೊಬ್ಬರಿಗೆ (Disabled Person) ಸರ್ಕಾರದಿಂದ ವಿಶೇಷ ಸ್ಕೀಂ (Govt Scheme) ಮಾಡಿಸಿಕೊಡುತ್ತೇನೆ ಎಂದು ನಂಬಿಸಿ ಹಣ ಪಡೆದು ವಂಚಿಸಿರುವ ಪ್ರಕರಣ ಚಿತ್ರದುರ್ಗದಲ್ಲಿ (Chitradurga) ಬೆಳಕಿಗೆ ಬಂದಿದೆ.

    ಸೊಂಟ ಸ್ವಾಧೀನವಿಲ್ಲದೇ ತೆವಳುವ ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯ ನಿವಾಸಿ ಜಯಪ್ರಕಾಶ್ ಎಂಬ ವಿಶೇಷಚೇತನ ಗಾಂಧಿ ಸರ್ಕಲ್‌ನಲ್ಲಿ ಚಿಲ್ಲರೆ ಅಂಗಡಿ ನಡೆಸುತ್ತಾ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಇವರಿಗೆ ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂದು ಪರಿಚಯ ಮಾಡಿಕೊಂಡ ಮಂಜುನಾಥ್ ಎಂಬ ಆಸಾಮಿ, ನಿಮಗೆ ವಿಕಲಚೇತನರ ವಿಶೇಷ ಸ್ಕೀಂ ಮಾಡಿಸಿಕೊಡುತ್ತೇವೆ. ಅದರಿಂದ ನೀವು ಕಟ್ಟಿದ ಹಣವನ್ನು ದ್ವಿಗುಣಗೊಳಿಸಿ ಕೊಡುತ್ತೇವೆ. ಅದು ನಿಮ್ಮ ಮುಂದಿನ ಜೀವನೋಪಾಯಕ್ಕೆ ಸಹಕಾರಿಯಾಗಲಿದೆ ಎಂದು ಜಯಪ್ರಕಾಶ್ ಅವರನ್ನು ನಂಬಿಸಿ ವಂಚಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: Haveri | ಕೋಟಿ ಕೋಟಿ ಖರ್ಚು ಮಾಡಿ ರೈತರಿಗಾಗಿ ನಿರ್ಮಿಸಿದ ಮೆಗಾ ಮಾರ್ಕೆಟ್ ಪಾಳು

    ಈ ಸ್ಕೀಂನಿಂದ ನನಗೂ ಒಳ್ಳೆಯ ಹೆಸರು ಬರಲಿದೆ ಎಂದು ಹೇಳಿ 13,500 ರೂ. ಹಣ ಪಡೆದು ಜಯಪ್ರಕಾಶ್‌ಗೆ ವಂಚಿಸಿದ್ದಾರೆ. ಹಣಕಟ್ಟಿ ಹಲವು ತಿಂಗಳಾದರು ಹಣ ಬಾರದ ಹಿನ್ನೆಲೆಯಲ್ಲಿ ನನ್ನ ಹಣ ನನಗೆ ವಾಪಸ್ ಕೊಡಿ ಎಂದು ಕೇಳಿದಾಗ, ಸರ್ಕಾರವು ಆ ಸ್ಕೀಂ ನಿಲ್ಲಿಸಿದೆ ಎಂದು ತಪ್ಪಿಸಿಕೊಂಡು ಓಡಾಡುತ್ತಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಹಕ್ಕಲಪುರದಲ್ಲಿ ಬೋನಿಗೆ ಸೆರೆಯಾದ ಚಿರತೆ – ರೈತರು ನಿರಾಳ

    ಅಲ್ಲದೇ ಇವರ ಮತ್ತೋರ್ವ ಸ್ನೇಹಿತ ವೆಂಕಟೇಶ ಎಂಬ ಆಸಾಮಿ ಕೂಡ ಮನೆ ಸಮಸ್ಯೆಗಾಗಿ ಇವರಿಂದ 20 ಸಾವಿರ ರೂ. ಹಣವನ್ನು ಸಾಲವಾಗಿ ಪಡೆದು ವಂಚಿಸಿದ್ದಾರೆಂದು ಆರೋಪಿಸಿದ್ದಾರೆ. ಇದರಿಂದ ಮನನೊಂದ ಜಯಪ್ರಕಾಶ್, ಪ್ರಾಂಸರಿ ಪತ್ರ ಸೇರಿದಂತೆ ಇತರೆ ದಾಖಲೆಗಳ ಸಹಿತ ಚಿತ್ರದುರ್ಗ ನಗರ ಠಾಣೆ ಪೊಲೀಸರು ಹಾಗೂ ಎಸ್ಪಿಗೆ ದೂರು ನೀಡಿದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ನನ್ನ ಜೀವನ ಕಷ್ಟಕರವಾಗಿದೆ ಎಂದು ಜಯಪ್ರಕಾಶ್ ಅಸಹಾಯಕತೆ ಹೊರಹಾಕಿದ್ದಾರೆ. ಇದನ್ನೂ ಓದಿ: ಮುಡಾ ಕುರಿತು ಇ.ಡಿಯವರ ಪತ್ರಿಕಾ ಪ್ರಕಟಣೆ ರಾಜಕೀಯ ಪ್ರೇರಿತ: ಸಿದ್ದರಾಮಯ್ಯ

    ಇನ್ನು ಈ ಬಗ್ಗೆ ವಂಚಿಸಿರೋ ಮಂಜುನಾಥ್‌ನನ್ನು ಕೇಳಿದಾಗ, ಜಯಪ್ರಕಾಶ್ ಅವರ ಆರೋಪವನ್ನು ಅಲ್ಲೆಗಳೆದಿದ್ದಾನೆ. ಆದರೆ ಮತ್ತೋರ್ವ ವೆಂಕಟೇಶ್ ಮಾತ್ರ ಹಣವನ್ನು ಪಡೆದಿರುವುದನ್ನು ಒಪ್ಪಿಕೊಂಡಿದ್ದು, ಶೀಘ್ರದಲ್ಲೇ ಹಣ ಹಿಂತಿರುಗಿಸುವುದಾಗಿ ಭರವಸೆ ನೀಡಿದ್ದಾನೆ ಹೊರತು ಹಣ ಹಿಂತಿರುಗಿಸಿಲ್ಲ. ಹೀಗಾಗಿ ವಿಕಲಚೇತನ ಗಳಿಸಿದ ಹಣ ಕೊಟ್ಟು ಕಂಗಾಲಾಗಿರೋದು ವಿಪರ್ಯಾಸ ಎನಿಸಿದೆ. ಇದನ್ನೂ ಓದಿ: Kotekar Bank Robbery | ಗುಪ್ತಚರ ಇಲಾಖೆ ಸಹಾಯದಿಂದ ಆರೋಪಿಗಳ ಬಂಧನ: ಕಮಿಷನರ್ ಅನುಪಮ್ ಅಗರ್ವಾಲ್

  • ಸಾಲಕ್ಕೆ ಸಿಗರೇಟ್ ನೀಡದ್ದಕ್ಕೆ ಅಂಗವಿಕಲನ ಪೆಟ್ಟಿಗೆ ಅಂಗಡಿ ಸುಟ್ಟ ಪುಡಾರಿಗಳು

    ಸಾಲಕ್ಕೆ ಸಿಗರೇಟ್ ನೀಡದ್ದಕ್ಕೆ ಅಂಗವಿಕಲನ ಪೆಟ್ಟಿಗೆ ಅಂಗಡಿ ಸುಟ್ಟ ಪುಡಾರಿಗಳು

    -ಅಂಗಡಿ ಕಳೆದುಕೊಂಡು ಕಣ್ಣೀರಿಟ್ಟ ಅಂಗವಿಕಲ

    ಬೆಂಗಳೂರು: ಅಂಗವೈಫಲ್ಯದ ಕಾರಣಕ್ಕೆ ಎಷ್ಟೋ ಮಂದಿ ಭಿಕ್ಷೆಬೇಡಿ ಜೀವನ ನಡೆಸುತ್ತಾರೆ. ಅಂತಹ ಜನರ ನಡುವೆ ತಮ್ಮ ಅಂಗವಿಕಲತೆಯನ್ನು ಲೆಕ್ಕಿಸದೆ ಸ್ವಾಭಿಮಾನದಿಂದ ದುಡಿದು ಬದುಕುವ ಮಂದಿ ಕೂಡ ಇದ್ದಾರೆ. ಹೀಗೆ ಸ್ವಾಭಿಮಾನದಿಂದ ಅಂಗಡಿ ನಡೆಸುತ್ತಿದ್ದ ಅಂಗವಿಕಲ ವ್ಯಕ್ತಿಯೊಬ್ಬರು ಸಾಲ ನೀಡಲು ನಿರಾಕರಿಸಿದ್ದಕ್ಕೆ ಅವರ ಪೆಟ್ಟಿಗೆ ಅಂಗಡಿಗೆ ಬೆಂಕಿ ಇಟ್ಟು ಸುಟ್ಟು ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ.

    ಎರಡು ಕಾಲುಗಳನ್ನು ಕಳೆದುಕೊಂಡಿದ್ದ ಚಿನ್ನಸ್ವಾಮಿ ಅವರು ಚಾಮರಾಜಪೇಟೆಯಲ್ಲಿ ಒಂದು ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ತಮ್ಮ ತಂದೆ-ತಾಯಿಯನ್ನು ಕೂಡ ನೋಡಿಕೊಳ್ಳುತ್ತಿದ್ದರು. ಆದರೆ ಇವರ ಅಂಗಡಿಗೆ ಬರುತ್ತಿದ್ದ ಕೆಲ ಸ್ಥಳೀಯ ಪುಡಾರಿಗಳು ಹಣ ನೀಡದೆ ಸಾಲದಲ್ಲಿ ಟೀ-ಸಿಗರೇಟು ಖರೀದಿಸುತ್ತಿದ್ದರು. ಹೀಗೆ ಸಾಲದ ಪಟ್ಟಿ ಹೆಚ್ಚಾಗಿದಕ್ಕೆ ಚಿನ್ನಸ್ವಾಮಿ ಅವರ ವ್ಯಾಪಾರದಲ್ಲಿ ನಷ್ಟವಾಗುತ್ತಿತ್ತು. ಆದ್ದರಿಂದ ಅವರು ಸಾಲ ಕೊಡಲ್ಲ, ಹಣ ಕೊಟ್ಟು ವ್ಯಪಾರ ಮಾಡಿ ಎಂದು ಹೇಳಿದ್ದಕ್ಕೆ ಕೋಪಗೊಂಡ ದುಷ್ಕರ್ಮಿಗಳು ಮಾನವೀಯತೆ ಮರೆತು ಚಿನ್ನಸ್ವಾಮಿಯವರ ಅಂಗಡಿಗೆ ಬೆಂಕಿ ಇಟ್ಟು ಸುಟ್ಟಿದ್ದಾರೆ.

    ಕಿಡಿಗೇಡಿಗಳು ರಾತ್ರೋರಾತ್ರಿ ಚಿನ್ನಸ್ವಾಮಿ ಪೆಟ್ಟಿಗೆ ಅಂಗಡಿಗೆ ಬೆಂಕಿಯಿಟ್ಟು ಸೇಡು ತೀರಿಸಿಕೊಂಡಿದ್ದಾರೆ. ಇದರಿಂದ ಜೀವನಕ್ಕೆ ಆಧಾರವಾಗಿದ್ದ ಒಂದು ಅಂಗಡಿಯನ್ನು ಕಳೆದುಕೊಂಡು ಚಿನ್ನಸ್ವಾಮಿ ಹಾಗೂ ಅವರ ವೃದ್ಧ ತಂದೆ-ತಾಯಿ ಕಣ್ಣೀರಿಡುತ್ತಿದ್ದಾರೆ.

    ದುರುಳರ ವಿಕೃತತನಕ್ಕೆ ಚಿನ್ನಸ್ವಾಮಿ ಅವರ ಪೆಟ್ಟಿಗೆ ಅಂಗಡಿ ಬೆಂಕಿ ಕೆನ್ನಾಲಿಗೆಯಲ್ಲಿ ಹೊತ್ತಿಯುರಿದಿದೆ. ಕಿಡಿಗೇಡಿಗಳು ಪೆಟ್ಟಿಗೆ ಅಂಗಡಿಗೆ ಬೆಂಕಿಯಿಟ್ಟಿದಷ್ಟೇ ಅಲ್ಲದೆ, ಪಕ್ಕದ ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ಗಳಿಗೆ ಲಾಂಗು-ಮಚ್ಚುಗಳಿಂದ ಹಾನಿ ಮಾಡಿ ದುಷ್ಟತನ ಮೆರೆದಿದ್ದಾರೆ.

    ಅಂಗಡಿಗೆ ಬೆಂಕಿ ಹಂಚಿರುವ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸಂಪೂರ್ಣ ಸುಟ್ಟುಹೋಗುತ್ತಿದ್ದ ಅಂಗಡಿಯ ಬೆಂಕಿಯನ್ನು ಪೊಲೀಸರು ಸ್ಥಳೀಯರ ಸಹಾಯ ಪಡೆದು ನಂದಿಸಿದ್ದಾರೆ. ಸದ್ಯ ಈ ಘಟನೆ ಬಗ್ಗೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಸೆರೆಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.

  • ಅಂಗೈಯಲ್ಲಿ ನಾದ ಚಿಮ್ಮಿಸೋ ವಿಕಲಾಂಗನಿಗೆ ಬೇಕಿದೆ ಪಿಯಾನೋ ಕೀ ಬೋರ್ಡ್

    ಅಂಗೈಯಲ್ಲಿ ನಾದ ಚಿಮ್ಮಿಸೋ ವಿಕಲಾಂಗನಿಗೆ ಬೇಕಿದೆ ಪಿಯಾನೋ ಕೀ ಬೋರ್ಡ್

    ಮೈಸೂರು: ಐದನೇ ವಯಸ್ಸಿನಲ್ಲಿಯೇ ಪೋಲಿಯೋಗೆ ತುತ್ತಾಗಿ ಕಾಲು ಕಳೆದುಕೊಂಡ್ರೂ ಪಿಯುಸಿವರೆಗೂ ವಿದ್ಯಾಭ್ಯಾಸ ಮಾಡಿ, ಓದಿನ ಜೊತೆಗೆ ಕೀ ಬೋರ್ಡ್ ಅಭ್ಯಾಸ ಕಲಿತಿದ್ದಾರೆ. ಈಗ ಅದೇ ಪಿಯಾನೋ ಕೀ ಬೋರ್ಡ್ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಆದ್ರೆ ಈಗ ಪಿಯಾನೋ ಕೀ ಬೋರ್ಡ್ ಹಳೆಯದಾಗಿ ಹೊಸ ಕೀ ಬೋರ್ಡ್ ಕೊಡಿಸಿ ಅಂತಾ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಅಮ್ಮತೂರು ಗ್ರಾಮದ ನಿವಾಸಿ ಜವರನಾಯಕ, ತನ್ನ 5ನೇ ವಯಸ್ಸಿನ್ಲಲಿ ಪೋಲಿಯೋಗೆ ತುತ್ತಾಗಿ ಕಾಲು ಕಳೆದುಕೊಂಡರೂ ಕಷ್ಟ ಪಟ್ಟು ಪಿಯುಸಿವರೆಗೆ ಓದಿದ್ದಾರೆ. ತನ್ನ ಅಂಗವಿಕಲತೆಯನ್ನು ಬದಿಗಿರಿಸಿ ಊರಿನ ದೇವಸ್ಥಾನದಲ್ಲಿ ದೇವರನಾಮ ಪಠಣೆ, ಸತ್ತವರ ಮನೆಯಲ್ಲಿ ರಾತ್ರಿಯ ವೇಳೆ ಭಜನೆ ಮಾಡುವಾಗ ಅವರ ಜೊತೆಯಲ್ಲಿ ಕುಳಿತು ಭಜನೆ ಕಲಿತು ಜೊತೆಗೆ ಕೀ ಬೋರ್ಡ್ ನುಡಿಸುವುದನ್ನು ಕಲಿತಿದ್ದಾರೆ.

    ನಡೆಯಲು ಬಾರದಿದ್ದರೂ ಸ್ವಾವಲಂಬಿಯಾಗಿ ಬದುಕಬೇಕೆಂದು ಕೀ ಬೋರ್ಡ್ ನುಡಿಸುವುದನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ಆರ್ಕೆಸ್ಟ್ರಾ, ನಾಟಕ, ಭಜನೆ ಎಲ್ಲ ಕಡೆ ಕಾರ್ಯಕ್ರಮ ಮಾಡಿ ಪತ್ನಿ ಮತ್ತು ತಾಯಿಯನ್ನು ಸಾಕುತ್ತಿದ್ದಾರೆ. ತುಂಬಾ ವರ್ಷಗಳಿಂದ ಉಪಯೋಗಿಸುತ್ತಿರುವ ಕೀ ಬೋರ್ಡ್ ಹಳೆಯದಾಗಿ ಕಾರ್ಯಕ್ರಮದಲ್ಲಿ ಆಗಾಗ ಕೆಡುತ್ತಿದ್ದರಿಂದ ಕಾರ್ಯಕ್ರಮಗಳಿಗೆ ಕರೆಯುವುದು ಕಡಿಮೆ ಮಾಡಿದ್ದಾರೆ.

    ಕುಟುಂಬದ ಜವಾಬ್ದಾರಿ ಜವರಾಯಕನ ಮೇಲಿದ್ದು, ಕೀಬೋರ್ಡ್ ಇಲ್ಲದೇ ಜೀವನ ನಡೆಸಲು ಕಷ್ಟ ಸಾಧ್ಯವಾಗಿದೆ. ಈಗ ಮಾರುಕಟ್ಟೆಗೆ ಹೊಸ ತಂತ್ರಜ್ನಾನದ ಕೀ ಬೋರ್ಡ್ ಗಳು ಬಂದಿವೆ. ಹೊಸ ಕೀ ಬೋರ್ಡ್ ತೆಗೆದುಕೊಳ್ಳಲು ಇವರ ಬಳಿ ಹಣ ಇಲ್ಲದೇ ಜೀವನ ನಡೆಸಲು ಕಷ್ಟ ಪಡುತ್ತಿದ್ದಾರೆ.

    ಯಾರಾದ್ರೂ ದಾನಿಗಳು ಹೊಸ ತಂತ್ರಜ್ಞಾನದ ಕೀಬೋರ್ಡ್ ನೀಡಿದ್ರೆ ಕಾರ್ಯಕ್ರಮಗಳನ್ನು ಮಾಡಿ ಸಂಪಾದಿಸಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಹಾಯವಾಗುತ್ತೆ ಎಂದು ಬೆಳಕು ಕಾರ್ಯಕ್ರಮದಲ್ಲಿ ನೆರವು ಬಯಸುತ್ತಿದ್ದಾರೆ. ಸ್ವಾಭಿಮಾನದ ಬದುಕು ಹಸನಾಗಿಸಲು ದಾನಿಗಳು ಕೈ ಜೋಡಿಸಲಿ ಎಂಬುದು ಬೆಳಕು ಕಾರ್ಯಕ್ರಮದ ಆಶಯವಾಗಿದೆ.

    https://www.youtube.com/watch?v=bQx7xFYkXqA