Tag: Directors

  • ಚಲನಚಿತ್ರ ಮಂಡಳಿಗೆ ಅಮಾವಾಸ್ಯೆ ಕತ್ತಲು ಆವರಿಸಿದೆ : ರಾಜೇಂದ್ರ ಸಿಂಗ್ ಬಾಬು

    ಚಲನಚಿತ್ರ ಮಂಡಳಿಗೆ ಅಮಾವಾಸ್ಯೆ ಕತ್ತಲು ಆವರಿಸಿದೆ : ರಾಜೇಂದ್ರ ಸಿಂಗ್ ಬಾಬು

    ಬೆಂಗಳೂರು: ನಮ್ಮ ಚಲನಚಿತ್ರ ಮಂಡಳಿಗೆ ಅಮಾವಾಸ್ಯೆ  ಕತ್ತಲು ಹಿಡಿದಿದೆ. ಅದು ಬಿಟ್ಟು ಹೋಗೋದಿಲ್ಲ ಅನಿಸುತ್ತದೆ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳಿಕೆ ನೀಡಿದ್ದಾರೆ.

    ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿ ನಡೆ ವಿಚಾರವಾಗಿ ಇಂದು ಸ್ಯಾಂಡಲ್‍ವುಡ್‍ನ ಕೆಲವು ನಿರ್ಮಾಪಕರು ಮತ್ತು ನಿರ್ದೇಶಕರು ಸುದ್ದಿಗೋಷ್ಠಿ ನಡೆಸಿದರು. ರಾಜೇಂದ್ರಸಿಂಗ್ ಬಾಬು ಮಾತನಾಡಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಚುನಾವಣೆಗೆ ತಡೆಯೊಡ್ಡಿ ಸಹಕಾರ ಸಂಘಗಳ ಉಪನಿಬಂಧನಾ ಅಧಿಕಾರಿ ಮಧ್ಯಂತರ ಆದೇಶ ಹೊರಡಿಸಿದೆ. ಆದರೂ ವಾಣಿಜ್ಯ ಮಂಡಳಿ ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ಸಮಾನ ಮನಸ್ಕರೆಲ್ಲ ಸೇರಿ ಈ ಬಗ್ಗೆ ಹೋರಾಟ ಮಾಡಲು ನಿರ್ಧಸಿದ್ದೇವೆ ಎಂದು ತಿಳಿಸಿದರು.

    ನಮ್ಮ ಚಲನಚಿತ್ರ ಮಂಡಳಿಗೆ ಅಮಾವಾಸ್ಯೆ ಕತ್ತಲು ಹಿಡಿದಿದೆ. ಅದು ಬಿಟ್ಟು ಹೋಗುವುದಿಲ್ಲ ಎನಿಸುತ್ತದೆ. ಚೇಂಬರ್‍ನಿಂದಾಗಿ ನಾವೇ ಧ್ವನಿ ಇಲ್ಲದೇ ಇರುವ ಹಾಗೇ ಆಗಿದ್ದೇವೆ. ಅಲ್ಲದೆ ರಿಜಿಸ್ಟ್ರಾರ್ ಆಫ್ ಸೊಸೈಟಿಯಿಂದ  ಫಿಲಂ ಚೇಂಬರ್ ಗೆ ಒಂದು ಪತ್ರ ಬಂದಿದೆ. ಅದರಲ್ಲಿ ಸಾಕಷ್ಟು ಆರೋಪಗಳಿವೆ ಎಂದು ಹೇಳಿದರು.

    ಚೇಂಬರ್ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದು ತಿಳಿಯುತ್ತಿಲ್ಲ. ಕೃಷ್ಣೇ ಗೌಡ ಮತ್ತು ಜೆಡಿ ಎಂಬುವವರು 20 ಅಂಶಗಳಲ್ಲಿ ಅಕ್ರಮ ನಡೆದಿದೆ ಎಂಬುವುದರ ಬಗ್ಗೆ ದೂರು ನೀಡಿದ್ದಾರೆ. ಹಾಗಾಗಿ ಈ ಬಾರಿಯ ಚುನಾವಣೆಯನ್ನು ತಡೆಹಿಡಿಯಲಾಗಿದೆ. ಈಗಾಗಲೇ ರಿಜಿಸ್ಟ್ರಾರ್‌ನ್ನ ಮಂಡಳಿಗೆ ನೇಮಕ ಮಾಡಲಾಗಿದೆ. ಆದರೆ ಮಂಡಳಿಯಿಂದ ರಾಜಕೀಯವಾಗಿ ಒತ್ತಡ ತಂದು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಇಲ್ಲಿ ಸತ್ಯ ಹೊರ ಬರಬೇಕು ಎಂಬ ಉದ್ದೇಶದಿಂದ ನಾವು  ರಿಜಿಸ್ಟ್ರಾರ್‌ಗೆ ಮನವಿ ಮಾಡುತ್ತಿದ್ದೇವೆ. ರಿಜಿಸ್ಟ್ರಾರ್ ಆಫೀಸಿಗೆ ಈ ಮನವಿ ನೀಡಿ ಅದು ಸಿಎಂ ಬಳಿಗೆ ತಲುಪಿಸುತ್ತೇವೆ. ಇಲ್ಲಿ ಯಾರು ತಪ್ಪು ಮಾಡಿದ್ದಾರೆ, ಸತ್ಯ ಯಾವುದು ಎನ್ನುವುದು ಎಲ್ಲರಿಗೂ ಗೊತ್ತಾಗಬೇಕು ಎಂದರು.

    ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ಕೋವಿಡ್ ಸಂಕಷ್ಟ ಸಾಕು ಎನ್ನುತ್ತೀರುವಾಗಲೇ ಈ ಮರಿ ಕೋವಿಡ್ ಗಳನ್ನು ನೋಡಿ ಗಾಬರಿಯಾಗಿದೆ. ಚುನಾವಣಾ ಪ್ರಕ್ರಿಯೆ ನಡೆಯುವವರೆಗೂ ಯಾವುದು ಸರಿಯಾಗುವುದಿಲ್ಲ. ಅಲ್ಲಿ ಒಂದು ಗುಂಪು ಸೇರಿಕೊಂಡಿದೆ. ಅವರು ಬೈಲಾ ತಿದ್ದುಪಡಿ ಮಾಡುತ್ತಾರೆ, ಅದರಿಂದ ಅವರಿಗೆ ಬೇಕಾದ ರೀತಿಯಲ್ಲಿ ತಿದ್ದುಪಡಿ ಮಾಡಿಕೊಳ್ಳುತ್ತಾರೆ. ನಾವು ನಮ್ಮ ಪಾಡಿಗೆ ಶೂಟಿಂಗ್ ಮಾಡುವುದರಲ್ಲಿ ನಿರತರಾಗಿರುತ್ತೇವೆ. ಆದರೆ ಇಲ್ಲಿ ನಡೆಯುವುದನ್ನು ಕೇಳುವವರು ಇಲ್ಲ ಎಂದು ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಶೈಲೇಂದ್ರ ಬಾಬು, ಸುರೇಶ್, ಮುರಳಿ, ಮದನ್ ಪಟೇಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

  • ಬ್ಯಾನ್ ಟಿಕ್‍ಟಾಕ್ ಅಭಿಯಾನಕ್ಕೆ ನಿಂತ ಚಂದನವನದ ಸ್ಟಾರ್ ನಿರ್ದೇಶಕರು

    ಬ್ಯಾನ್ ಟಿಕ್‍ಟಾಕ್ ಅಭಿಯಾನಕ್ಕೆ ನಿಂತ ಚಂದನವನದ ಸ್ಟಾರ್ ನಿರ್ದೇಶಕರು

    ಬೆಂಗಳೂರು: ಇತ್ತೀಚೆಗೆ ಸಖತ್ ಸದ್ದು ಮಾಡುತ್ತಿರುವ ಟಿಕ್‍ಟಾಕ್ ಆ್ಯಪ್ ಅನ್ನು ಇಂಡಿಯಾದಲ್ಲಿ ಬ್ಯಾನ್ ಮಾಡುವಂತೆ ಟ್ವಿಟ್ಟರ್‍ನಲ್ಲಿ ಅಭಿಯಾನವನ್ನು ಆರಂಭಿಸಿದ್ದಾರೆ.

    ನಮ್ಮ ಯುವ ಪೀಳಿಗೆ ಇತ್ತೀಚೆಗೆ ಜಾಸ್ತಿ ಬಳಕೆ ಮಾಡುತ್ತಿರುವ ಸಾಮಾಜಿಕ ಜಾಲತಾಣದಲ್ಲಿ ಟಿಕ್‍ಟಾಕ್ ಕೂಡ ಒಂದು. ಇದು ಯಾವ ಮಟ್ಟಕ್ಕೆ ಪ್ರಚಲಿತದಲ್ಲಿ ಇದೆ ಎಂದರೆ ಇಲ್ಲಿ ವಿಡಿಯೋವನ್ನು ಮಾಡಲು ಹೋಗಿ ಜನರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಈಗ ಈ ಆ್ಯಪ್ ಅನ್ನು ಬ್ಯಾನ್ ಮಾಡುವಂತೆ ಕೆಲವರು ಒತ್ತಾಯ ಮಾಡುತ್ತಿದ್ದಾರೆ. ಇದರಿಂದ ಮೊದಲಿಗೆ 4.6ರ ರೇಟಿಂಗ್‍ನಲ್ಲಿ ಇದ್ದ ಟಿಕ್‍ಟಾಕ್ ಆ್ಯಪ್ ಈಗ 1.3ಕ್ಕೆ ಇಳಿದಿದೆ.

    ಟಿಕಾಟಾಕ್ ಚೀನಾದ ಆ್ಯಪ್ ಆಗಿದ್ದು, ಸ್ವದೇಶಿ ವಸ್ತುಗಳನ್ನು ಬಳಸಿ ಹಾಗೂ ಚೀನಾದ ವಸ್ತುಗಳನ್ನು ತಿರಸ್ಕರಿಸಬೇಕು ಎಂಬ ನಿಟ್ಟಿನಲ್ಲಿ ಕೆಲವರು ಟಿಕ್‍ಟಾಕ್ ಅನ್ನು ವಿರೋಧ ಮಾಡುತ್ತಿದ್ದರೆ, ಇನ್ನೂ ಕೆಲವರು ಇದರಲ್ಲಿ ವಿಡಿಯೋ ಮಾಡಿ ಜನಪ್ರಿಯತೆ ಪಡೆಯುವ ಗೀಳಿಗೆ ಬಿದ್ದ ಯುವಕ-ಯುವತಿಯರು ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ ಎಂದು ವಾದಿಸುತ್ತಿದ್ದಾರೆ. ಈ ಎಲ್ಲ ಕಾರಣದಿಂದ ಟಿಕ್‍ಟಾಕ್ ಬ್ಯಾನ್ ಆಗಬೇಕು ಎಂದು ಅಭಿಯಾನವನ್ನು ಆರಂಭಿಸಿದ್ದಾರೆ.

    ಟಿಕ್‍ಟಾಕ್ ಆ್ಯಪ್ ನಲ್ಲಿ ಕೆಲ ಸೆಲೆಬ್ರಿಟಿಗಳು ವಿಡಿಯೋ ಮಾಡುತ್ತಿದ್ದರೆ, ಈ ಕಡೆ ಕೆಲ ಸೆಲೆಬ್ರಿಟಿಗಳು ಅದನ್ನು ಬ್ಯಾನ್ ಮಾಡುವಂತೆ ಟ್ವೀಟ್ ಮಾಡುತ್ತಿದ್ದಾರೆ. ಈಗ ಸ್ಯಾಂಡಲ್‍ವುಡ್‍ನ ಸ್ಟಾರ್ ನಿರ್ದೇಶಕರಾದ ಸಂತೋಷ್ ಅನಂದ್‍ರಾಮ್, ಪವನ್ ಒಡೆಯರ್ ಮತ್ತು ಎಪಿ ಅರ್ಜೂನ್ ಟಿಕ್‍ಟಾಕ್ ಅನ್ನು ಬ್ಯಾನ್ ಮಾಡಿ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಕೆಲ ಬಾಲಿವುಡ್ ನಟರು ಕೂಡ ಕೈಜೋಡಿಸಿದ್ದು, ಟಿಕ್‍ಟಾಕ್ ಬ್ಯಾನ್ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ.

    ಯುವ ಜನತೆಯನ್ನು ಟಿಕ್‍ಟಾಕ್ ತಪ್ಪು ದಾರಿಗೆ ಎಳೆಯುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅಭಿಪ್ರಾಯಪಟ್ಟಿದ್ದು, ಟಿಕ್‍ಟಾಕ್ ಅನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದರು. ಮನರಂಜನೆಗಾಗಿ ಆರಂಭವಾದ ಟಿಕ್‍ಟಾಕ್ ಇಂದು ಹಿಂಸೆಯನ್ನು ಪ್ರೇರೇಪಿಸುತ್ತಿದೆ. ಮಹಿಳೆಯ ಮೇಲಿನ ಅತ್ಯಾಚಾರ, ಆ್ಯಸಿಡ್ ದಾಳಿಗೆ ಪ್ರೇರಣೆ ನೀಡುವ ವಿಡಿಯೋಗಳು ಟಿಕ್‍ಟಾಕ್‍ನಲ್ಲಿ ಹೆಚ್ಚಾಗುತ್ತಿದೆ ಎಂದು ಬಿಜೆಪಿ ನಾಯಕ ತಾಜೀಂದರ್ ಸಿಂಗ್ ಮಾಡಿರುವ ಟ್ವೀಟ್‍ಗೆ ರೇಖಾ ಶರ್ಮಾ ಪ್ರತಿಕ್ರಿಯೆ ನೀಡಿದ್ದರು.

    ಆ್ಯಸಿಡ್ ದಾಳಿಗೆ ಪ್ರೇರಣೆ ನೀಡುವ ರೀತಿ ಟಿಕ್‍ಟಾಕ್ ವಿಡಿಯೋ ಮಾಡಿ ಹರಿಬಿಡಲಾಗಿದೆ. ಇತ್ತೀಚೆಗೆ ಟಿಕ್‍ಟಾಕ್‍ನಲ್ಲಿ 1.34 ಕೋಟಿ ಹಿಂಬಾಲಕರನ್ನು ಹೊಂದಿದ್ದ ಫೈಜಲ್ ಸಿದ್ದಿಕಿ ಇಂತಹ ವಿಡಿಯೋ ಮಾಡಿದ್ದ. ಇಂತಹ ವಿಡಿಯೋಗಳು ಸಮಾಜದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರುತ್ತವೆ. ವಿಡಿಯೋ ಮಾಡಿ ಹರಿಬಿಟ್ಟ ವ್ಯಕ್ತಿಯ ವಿರುದ್ಧ ಕ್ರಮಕೈಗೊಳ್ಳಲು ಮಹಾರಾಷ್ಟ್ರ ಡಿಜಿಪಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ರೇಖಾ ಶರ್ಮಾ ಮಾಹಿತಿ ನೀಡಿದ್ದರು.

    ಹಿಂಸೆಗೆ ಪ್ರಚೋದಿಸುವ ವಿಡಿಯೋಗಳನ್ನು ಕೂಡಲೇ ಆ್ಯಪ್‍ನಿಂದ ತೆಗೆದು ಹಾಕುವಂತೆ ಆಗ್ರಹಿಸಿರುವ ಅವರು, ಇಂತಹ ಆಕ್ಷೇಪರ್ಹ ವಿಡಿಯೋಗಳು ಮಾತ್ರವಲ್ಲದೇ ಮಾತ್ರವಲ್ಲದೇ ಟಿಕ್‍ಟಾಕ್ ಯುವ ಜನತೆಯನ್ನು ಅನುತ್ಪಾದಕ ಜೀವನ ಹಾಗೂ ಕೆಲ ಹಿಂಬಾಲಕರನ್ನು ಪಡೆಯವತ್ತ ತಳ್ಳುತ್ತಿದೆ. ಅನುಯಾಯಿಗಳು ಸಿಕ್ಕದಿದ್ದಾಗ ಕೆಲವರು ಸಾವಿಗೂ ಶರಣಾಗುತ್ತಿದ್ದಾರೆ ಎಂದು ರೇಖಾ ಶರ್ಮಾ ಕಳವಳ ವ್ಯಕ್ತಪಡಿಸಿದ್ದರು.

  • ಎಸ್ಕೇಪ್ ಮುನ್ನ 3ನೇ ಹೆಂಡ್ತಿಗೆ ಮರು ಮದುವೆ – ಐಎಂಎನಲ್ಲಿ ಮತ್ತಷ್ಟು ಚಿನ್ನ, ಗನ್ ಪತ್ತೆ

    ಎಸ್ಕೇಪ್ ಮುನ್ನ 3ನೇ ಹೆಂಡ್ತಿಗೆ ಮರು ಮದುವೆ – ಐಎಂಎನಲ್ಲಿ ಮತ್ತಷ್ಟು ಚಿನ್ನ, ಗನ್ ಪತ್ತೆ

    ಬೆಂಗಳೂರು: ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಹಾರಿರುವ ಮನ್ಸೂರ್ ಖಾನ್ ವಿದೇಶಕ್ಕೆ ಪರಾರಿಯಾಗುವ ಮುನ್ನ ಮಹಾನ್ ಕಾರ್ಯವನ್ನು ಮಾಡಿದ್ದು, ತನ್ನ ಮೂರನೇ ಹೆಂಡತಿಗೆ ಮರುಮದುವೆ ಮಾಡಿ ಸೂರು ಕಲ್ಪಿಸಿದ್ದಾನೆ.

    ಮನ್ಸೂರ್ ಖಾನ್ ಮೂರನೇ ಹೆಂಡತಿ ತನ್ನ ಮೊದಲ ಗಂಡನನ್ನು ಬಿಟ್ಟು ಬಂದಿದ್ದಳು. ಆದರೆ ದಿನ ಕಳೆಯುತ್ತಾ ಅದೇನಾಯಿತೋ, ವಿದೇಶಕ್ಕೆ ಹಾರುವ ಮುನ್ನ ತನ್ನ ಮೂರನೇ ಹೆಂಡತಿಗೆ ಆಕೆಯ ಮೊದಲ ಗಂಡನ ಜೊತೆಗೆ ತಿಂಗಳ ಹಿಂದಷ್ಟೇ ವಿವಾಹ ಮಾಡಿಸಿದ್ದಾನೆ.

    ಇತ್ತ ಮನ್ಸೂರ್ ಖಾನ್ 2ನೇ ವಿಡಿಯೋ ಆಧಾರವಾಗಿಟ್ಟುಕೊಂಡು ಜಾಲಾಡಿದ ಪೊಲೀಸರಿಗೆ ಮತ್ತಷ್ಟು ಚಿನ್ನಾಭರಣ, ಹಣ ಮತ್ತು ಗನ್ ಪತ್ತೆಯಾಗಿದೆ. ಹೂಡಿಕೆದಾರರ ಮನಸ್ಸಲ್ಲಿ ಒಳ್ಳೆಯವನಾಗಲು 2ನೇ ವಿಡಿಯೋ ಬಿಡುಗಡೆ ಮಾಡಿದ್ದ ಮನ್ಸೂರ್ ಖಾನ್, ಡೈರೆಕ್ಟರ್ಸ್ ಹಾಗೂ ಸಂಬಂಧಿಗಳು ಚಿನ್ನ ಸಾಗಿಸಿದ್ದಾರೆ ಎಂದು ವಿಡಿಯೋದಲ್ಲಿ ಆರೋಪ ಮಾಡಿದ್ದ. ಇದರಿಂದ ಪುನಃ ಐಎಂಎ ಜ್ಯುವೆಲರ್ಸ್ ಮಳಿಗೆ ಜಾಲಾಡಿ ಪೊಲೀಸರಿಗೆ ಮತ್ತಷ್ಟು ಚಿನ್ನ ಹಾಗೂ ಗನ್ ಪತ್ತೆಯಾಗಿದೆ.

    ಇತ್ತ ಎಸ್‍ಐಟಿ ತಂಡದ ವಿಚಾರಣೆ ವೇಳೆ ಮನ್ಸೂರ್ ಖಾನ್ ಬಗ್ಗೆ ಐಎಂಎ ಡೈರೆಕ್ಟರ್ಸ್ ಗೌಪ್ಯತೆ ಕಾಪಾಡಿದ್ದರು ಎನ್ನಲಾಗಿದೆ. ಆದರೆ ಮನ್ಸೂರ್ ಖಾನ್ ಅವರ ಮೇಲೆಯೇ ಆರೋಪ ಮಾಡಿದ್ದ. ಈ ವಿಡಿಯೋವನ್ನ ಪೊಲೀಸರು ಡೈರೆಕ್ಟರ್ಸ್ ಮುಂದೇ ಇಟ್ಟಿದ್ದರು. ವಿಡಿಯೋ ನೋಡಿದ ಡೈರೆಕ್ಟರ್ಸ್ ಐಎಂಎ ಜ್ಯುವೆಲರ್ಸ್ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದರು. ಈ ವೇಳೆ ಮಾಹಿತಿ ಪಡೆದು ದಾಳಿ ನಡೆಸಿದ ಎಸ್‍ಐಟಿ ಅಧಿಕಾರಿಗಳಿಗೆ ಮತ್ತಷ್ಟು ಚಿನ್ನ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

  • ಟಾಲಿವುಡ್ ಅಂಗಳದಲ್ಲಿ ರಶ್ಮಿಕಾ ಮಂದಣ್ಣ ಹವಾ ಶುರು- ಸ್ಟಾರ್ ನಟರ ಜೊತೆ ಕೊಡಗಿನ ಬೆಡಗಿ ಸ್ಕ್ರೀನ್ ಶೇರ್

    ಟಾಲಿವುಡ್ ಅಂಗಳದಲ್ಲಿ ರಶ್ಮಿಕಾ ಮಂದಣ್ಣ ಹವಾ ಶುರು- ಸ್ಟಾರ್ ನಟರ ಜೊತೆ ಕೊಡಗಿನ ಬೆಡಗಿ ಸ್ಕ್ರೀನ್ ಶೇರ್

    ಬೆಂಗಳೂರು: ಟಾಲಿವುಡ್ ಅಂಗಳದಲ್ಲಿ ಚಮಕ್ ಚೆಲುವೆ ರಶ್ಮಿಕಾ ಮಂದಣ್ಣ ಹವಾ ಶುರುವಾಗಿದೆ. ಯುವನಟರಿಂದ ಹಿಡಿದು ಸ್ಟಾರ್ ಹೀರೋಗಳ ಸಿನಿಮಾಗಳಿಗೂ ರಶ್ಮಿಕಾನೇ ಬೇಕು ಎನ್ನುವಷ್ಟರ ಮಟ್ಟಿಗೆ ಡಿಮ್ಯಾಂಡ್ ಸೃಷ್ಟಿಯಾಗಿದೆ.

    ಸದ್ಯ ಟಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಿ ಬರುತ್ತಿರುವ ಸುದ್ದಿ ಅಂದರೆ, ರಶ್ಮಿಕಾ ಜೂ. ಎನ್‍ಟಿಆರ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಈಗಾಗಲೇ ಜೂ. ಎನ್‍ಟಿಆರ್ ಪ್ರೊಡಕ್ಷನ್ ಹೌಸ್‍ನಿಂದ ರಶ್ಮಿಕಾರನ್ನು ಸಂಪರ್ಕ ಮಾಡಿದ್ದು ಮಾತುಕತೆ ಹಂತದಲ್ಲಿದೆಯಂತೆ. ಶೀಘ್ರದಲ್ಲೇ ಆ ಸಿನಿಮಾದ ಅಧಿಕೃತ ಮಾಹಿತಿಯನ್ನು ರಶ್ಮಿಕಾ ರಿವೀಲ್ ಮಾಡಲಿದ್ದಾರೆ.

    ರಶ್ಮಿಕಾ ಈಗಾಗಲೇ ‘ಚಲೋ’ ಹಾಗೂ ‘ಗೀತಾ ಗೋವಿಂದಂ’ ಸಿನಿಮಾ ಮೂಲಕ ತೆಲುಗು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಸದ್ಯ ಗೀತಾ ಗೋವಿಂದಂ ಸಿನಿಮಾ ನೋಡಿ ರಶ್ಮಿಕಾರನ್ನು ಹಾಡಿ ಹೊಗಳಿರುವ ಮಹೇಶ್ ಬಾಬು ಹಾಗೂ ರಾಮ್‍ಚರಣ್ ಶೀಘ್ರದಲ್ಲೇ ತಮ್ಮ ಪ್ರೊಡಕ್ಷನ್ ಹೌಸ್ ಕಡೆಯಿಂದ ರಶ್ಮಿಕಾಗೆ ಕಾಲ್ ಮಾಡಿಸಿ ಕಾಲ್‍ಶೀಟ್ ಪಡೆಯುವ ಸಾಧ್ಯತೆ ಇದೆ.

    ಸದ್ಯ ರಶ್ಮಿಕಾ `ದೇವದಾಸ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಕ್ಕಿನೇನಿ ನಾಗಾರ್ಜುನ್ ಹಾಗೂ ನಾನಿ ಜೊತೆ ಸ್ಕ್ರೀನ್ ಶೇರ್ ಮಾಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಅರ್ಜುನ್ ರೆಡ್ಡಿ ಜೊತೆ `ಡಿಯರ್ ಕಾಮ್ರೇಡ್’ ಸಿನಿಮಾವನ್ನು ಕೂಡ ಒಪ್ಪಿಕೊಂಡಿದ್ದಾರೆ. ತೆಲುಗು, ತಮಿಳು, ಹಿಂದಿ ಚಿತ್ರರಂಗದಿಂದಲೂ ರಶ್ಮಿಕಾರನ್ನು ಅಪ್ರೋಚ್ ಮಾಡುತ್ತಿದ್ದಾರೆ. ಇತ್ತ ಸ್ಯಾಂಡಲ್‍ವುಡ್ ಡೈರೆಕ್ಟರ್ ಗಳು ರಶ್ಮಿಕಾ ಕಾಲ್‍ಶೀಟ್ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv