Tag: director

  • ಡೈರೆಕ್ಟರ್ ಜೊತೆ ಓಡೋಗಿ ಮದ್ವೆ- ತಾಯಿಯ ಅಂತ್ಯಕ್ರಿಯೆಗೂ ಬಾರದ ನಟಿ

    ಡೈರೆಕ್ಟರ್ ಜೊತೆ ಓಡೋಗಿ ಮದ್ವೆ- ತಾಯಿಯ ಅಂತ್ಯಕ್ರಿಯೆಗೂ ಬಾರದ ನಟಿ

    ಮಂಡ್ಯ: ಮಗಳು ನಿರ್ದೇಶಕನೊಂದಿಗೆ ಓಡಿ ಹೋಗಿದ್ದಕ್ಕೆ ಮನನೊಂದು ವಿಷ ತೆಗೆದುಕೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ನಟಿ ವಿಜಯಲಕ್ಷ್ಮಿ ತಾಯಿ ಇಂದು ಕೊನೆಯುಸಿರೆಳೆದಿದ್ದಾರೆ. ಆದರೆ ನಟಿ ತಾಯಿಯ ಅಂತ್ಯಕ್ರಿಯೆಗೂ ಬಂದಿಲ್ಲ. ಇದನ್ನೂ ಓದಿ: ‘ನಮ್ಮನ್ನು ಬದುಕಲು ಬಿಡಿ’- ನಿರ್ದೇಶಕನ ಜೊತೆ ಓಡಿಹೋಗಿದ್ದ ನಟಿ ರಾಯಚೂರಿನಲ್ಲಿ ಪ್ರತ್ಯಕ್ಷ

    ಸವಿತಾ ಮೃತ ತಾಯಿ. ಕಳೆದ ಒಂದು ವಾರದ ಹಿಂದೆ ನಟಿ ವಿಜಯಲಕ್ಷ್ಮಿ ನಿರ್ದೇಶಕ ಆಂಜನಪ್ಪ ಜೊತೆ ಓಡಿ ಹೋಗಿದ್ದಳು. ಈ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ತಾಯಿ ಸವಿತಾ ಹಾಗೂ ಅಜ್ಜಿ ವಿಷ ತೆಗೆದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ವಿಷ ತೆಗೆದುಕೊಂಡ ಪರಿಣಾಮ ವಿಜಯಲಕ್ಷ್ಮಿ ಅಜ್ಜಿ ಸಾವನ್ನಪ್ಪಿದ್ದರು. ಅಂದು ವಿಜಯಲಕ್ಷ್ಮಿ ಅಜ್ಜಿಯ ಅಂತ್ಯಸಂಸ್ಕಾರಕ್ಕೂ ಬಂದಿರಲಿಲ್ಲ. ಇದನ್ನೂ ಓದಿ: ನಿರ್ದೇಶಕನೊಂದಿಗೆ ನಟಿ ಪರಾರಿ- ತಾಯಿ ಆತ್ಮಹತ್ಯೆಗೆ ಯತ್ನ, ಅಜ್ಜಿ ಸಾವು

    ತಾಯಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರು. ಅವರನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ವಿಜಯಲಕ್ಷ್ಮಿ ತಾಯಿ ಸವಿತಾ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತಾಯಿ ಸಾವನ್ನಪ್ಪಿದರೂ ವಿಜಯಲಕ್ಷ್ಮಿ ಮಾತ್ರ ತಾಯಿಯ ಮುಖ ನೋಡಲು ಸಹ ಬಂದಿಲ್ಲ. ಸವಿತಾ ಅವರ ಅಂತ್ಯಕ್ರಿಯೆಯನ್ನು ಜಿಲ್ಲೆಯ ಮದ್ದೂರು ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಮಾಡಲಾಗಿದೆ.

    ಏನಿದು ಪ್ರಕರಣ?
    ಕನ್ನಡ ಚಿತ್ರರಂಗದಲ್ಲಿ ಸುಮಾರು 16 ಸಿನಿಮಾಗಳಲ್ಲಿ ನಟಿಸಿರುವ ವಿಜಯಲಕ್ಷ್ಮಿ ಇದೀಗ ಪ್ರೇಮಮಹಲ್, ಜವಾರಿ ಲವ್, ಪ್ರೊಡಕ್ಷನ್ ನಂ.1 ಎಂಬ ಸಿನಿಮಾಗಳಿಗೆ ಸಹಿ ಹಾಕಿ ತುಂಗಾಭದ್ರಾ ಚಿತ್ರದ ನಿರ್ದೇಶಕ ಆಂಜನಪ್ಪ ಜೊತೆ ಓಡಿ ಹೋಗಿದ್ದರು. ನಂತರ ನಟಿ ವಿಜಯಲಕ್ಷ್ಮಿ ರಾಯಚೂರಿನಲ್ಲಿ ಪತಿಯ ಜೊತೆ ಪ್ರತ್ಯಕ್ಷವಾಗಿದ್ದರು.

    ನಾನು ತುಂಗಭದ್ರಾ ಸಿನಿಮಾದಲ್ಲಿ ನಟಿಸುವಾಗ ಲವ್ ಮಾಡಿ ಮದುವೆ ಆಗಿದ್ದೇನೆ. ನನ್ನನ್ನು ಯಾರೂ ಕರೆದುಕೊಂಡು ಬಂದಿಲ್ಲ. ನಾನು ಪ್ರೀತಿಸಿ ಮದುವೆ ಆಗಿದ್ದೇನೆ. ನಮ್ಮ ಅಜ್ಜಿ ಸಾವನ್ನಪ್ಪಿಲ್ಲ, ನಮ್ಮ ತಾಯಿ ನಾಟಕ ಮಾಡುತ್ತಿದ್ದಾರೆ. ನಾವು ಗಂಗಾವತಿಯಲ್ಲಿ ಮದುವೆ ಆಗಿದ್ದೇವೆ. ನನ್ನ ತಾಯಿ ಸವಿತಾ ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

    ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮೆಳ್ಳಹಳ್ಳಿ ಗ್ರಾಮದ ವಿಜಯಲಕ್ಷ್ಮಿ, ಕಳೆದ 10 ವರ್ಷಗಳಿಂದ ಚನ್ನಪಟ್ಟಣದಲ್ಲಿ ವಾಸವಾಗಿದ್ದರು. ತಮ್ಮ ಸಾಕು ತಂದೆ ಸ್ವಾಮಿ ಅವರ ಪೋಷಣೆಯಲ್ಲಿ ವಿದ್ಯಾಭ್ಯಾಸ ಮುಗಿಸಿ, ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ನಟಿ ವಿಜಯಲಕ್ಷ್ಮಿ ಶಿವರಾಜ್‍ಕುಮಾರ್ ನಟನೆಯ ಆಯುಷ್ಮಾನುಭವ ಸೇರಿದಂತೆ 16 ಚಿತ್ರಗಳಲ್ಲಿ ಸಹ ನಟಿಯಾಗಿ ನಟಿಸಿದ್ದರು. ನಂತರ ತುಂಗಾಭಧ್ರಾ, ಪ್ರೇಮಮಹಲ್, ಜವಾರಿ ಲವ್, ಪ್ರೊಡಕ್ಷನ್ ನಂ.1 ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸುವ ಅವಕಾಶ ಬಂದಿದ್ದವು. ಈ ಸಿನಿಮಾಗಳಲ್ಲಿ ಕೆಲವು ಸಿನಿಮಾಗಳು ಅರ್ಧದಷ್ಟು ಶೂಟಿಂಗ್ ಆಗಿದೆ.

     

  • ನಿರ್ದೇಶಕನೊಂದಿಗೆ ನಟಿ ಪರಾರಿ- ತಾಯಿ ಆತ್ಮಹತ್ಯೆಗೆ ಯತ್ನ, ಅಜ್ಜಿ ಸಾವು

    ನಿರ್ದೇಶಕನೊಂದಿಗೆ ನಟಿ ಪರಾರಿ- ತಾಯಿ ಆತ್ಮಹತ್ಯೆಗೆ ಯತ್ನ, ಅಜ್ಜಿ ಸಾವು

    – ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ತಾಯಿ
    – ಸಾಕು ತಂದೆಗೆ ಮೋಸ ಮಾಡಿದ್ಲಾ ನಟಿ?

    ಮಂಡ್ಯ: ಸ್ಯಾಂಡಲ್‍ವುಡ್ ನಟಿ ಮೂರು ಸಿನಿಮಾಗಳಿಗೆ ಸಹಿ ಹಾಕಿ ಅಡ್ವಾನ್ಸ್ ತೆಗೆದುಕೊಂಡು ನಿರ್ದೇಶಕನೊಂದಿಗೆ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದ ಮನನೊಂದು ಆತ್ಮಹತ್ಯೆ ಯತ್ನಿಸಿದ್ದ ತಾಯಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದು, ಅಜ್ಜಿ ಮೃತಪಟ್ಟಿದ್ದಾರೆ.

    ಕನ್ನಡ ಚಿತ್ರರಂಗದಲ್ಲಿ ಸುಮಾರು 16 ಸಿನಿಮಾಗಳಲ್ಲಿ ನಟಿಸಿರುವ ವಿಜಯಲಕ್ಷ್ಮಿ ಇದೀಗ ಪ್ರೇಮಮಹಲ್, ಜವಾರಿ ಲವ್, ಪ್ರೊಡಕ್ಷನ್ ನಂ.1 ಎಂಬ ಸಿನಿಮಾಗಳಿಗೆ ಸಹಿ ಹಾಕಿ ತುಂಗಾಭದ್ರಾ ಚಿತ್ರದ ನಿರ್ದೇಶಕ ಆಂಜನಪ್ಪ ಎಂಬವನ ಜೊತೆ ಓಡಿ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮೆಳ್ಳಹಳ್ಳಿ ಗ್ರಾಮದ ವಿಜಯಲಕ್ಷ್ಮಿ, ಕಳೆದ 10 ವರ್ಷಗಳಿಂದ ಚನ್ನಪಟ್ಟಣದಲ್ಲಿ ವಾಸವಾಗಿದ್ದರು. ತಮ್ಮ ಸಾಕು ತಂದೆ ಸ್ವಾಮಿ ಅವರ ಪೋಷಣೆಯಲ್ಲಿ ವಿದ್ಯಾಭ್ಯಾಸ ಮುಗಿಸಿ, ಚಿತ್ರರಂಗಕ್ಕೆ ಕಾಲಿಟ್ಟಿದ್ದರು.

    ನಟಿ ವಿಜಯಲಕ್ಷ್ಮಿ ಶಿವರಾಜ್‍ಕುಮಾರ್ ನಟನೆಯ ಆಯುಷ್ಮಾನುಭವ ಸೇರಿದಂತೆ 16 ಚಿತ್ರಗಳಲ್ಲಿ ಸಹ ನಟಿಯಾಗಿ ನಟಿಸಿದ್ದರು. ನಂತರ ತುಂಗಾಭಧ್ರಾ, ಪ್ರೇಮಮಹಲ್, ಜವಾರಿ ಲವ್, ಪ್ರೊಡಕ್ಷನ್ ನಂ.1 ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸುವ ಅವಕಾಶ ಬಂದಿದ್ದವು. ಈ ಸಿನಿಮಾಗಳಲ್ಲಿ ಕೆಲವು ಸಿನಿಮಾಗಳು ಅರ್ಧದಷ್ಟು ಶೂಟಿಂಗ್ ಆಗಿದೆ.

    ತುಂಗಾಭದ್ರಾ ಚಿತ್ರದ ನಿರ್ದೇಶಕ ಆಂಜನಪ್ಪ ಜೊತೆ ಶೂಟಿಂಗ್ ವೇಳೆ ಲವ್ ಆಗಿದೆ ಎಂದು ವಿಜಯಲಕ್ಷ್ಮಿ ಸಾಕು ತಂದೆ ಸ್ವಾಮಿ ಹೇಳಿದ್ದಾರೆ. ಕಳೆದ ಡಿಸೆಂಬರ್ ತಿಂಗಳಿನಲ್ಲಿ ರಾಯಚೂರಿಗೆ ಶೂಟಿಂಗ್‍ಗಾಗಿ ಹೋದ ಮಗಳು ಮತ್ತೆ ಮನೆಗೆ ಬಂದಿರಲಿಲ್ಲ. ಇದಕ್ಕೆ ಗಾಬರಿಯಾದ ಸ್ವಾಮಿ ಹಾಗೂ ತಾಯಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು. ನಂತರ ಆಂಜನಪ್ಪ ಜೊತೆ ವಿಜಯಲಕ್ಷ್ಮಿ ಇದ್ದಾಳೆ ಎಂದು ತಿಳಿದು ಬಂದಿತ್ತು. ಆದರೆ ಸ್ವಾಮಿ ಅವರು ಆಂಜನಪ್ಪನನ್ನು ವಿಚಾರಿಸಿದರೆ, ವಿಜಯಲಕ್ಷ್ಮಿ ನನ್ನ ಬಳಿ ಇಲ್ಲ ಎಂದು ಹೇಳಿದ್ದ. ಇದಾದ ಬಳಿಕ ಡಿಸೆಂಬರ್ ಮೂರನೇ ವಾರದಲ್ಲಿ ವಿಜಯಲಕ್ಷ್ಮಿ ಮನೆಗೆ ಬಂದಿದ್ದಳು. ಆಗ ಆಕೆಗೆ ಮನೆಯವರು ಬೈದು ಬುದ್ಧಿ ಹೇಳಿದ್ದರು. ಪೋಷಕರ ಮಾತಿನಂತೆ ನಡೆದುಕೊಳ್ಳುವ ಭರವಸೆ ನೀಡಿದ್ದ ವಿಜಯಲಕ್ಷ್ಮಿ, ಆಂಜನಪ್ಪ ತನ್ನನ್ನು ಒಂದು ಮನೆಯಲ್ಲಿ ಇರಿಸಿದ್ದ. ಮುಖಕ್ಕೆ ಬಟ್ಟೆ ಕಟ್ಟಿದ್ದ. ಇನ್ನು ಮುಂದೆ ನಾನು ಅವನೊಂದಿಗೆ ಹೋಗುವುದಿಲ್ಲ ಎಂದು ಹೇಳಿಕೊಂಡಿದ್ದಳು.

    ವಿಜಯಲಕ್ಷ್ಮಿ ಜನವರಿ 3 ರಂದು ಬೆಳಗ್ಗೆ ಇದ್ದಕ್ಕಿಂದ್ದಂತೆ ಕಾಣೆಯಾಗಿದ್ದಳು. ಇದರಿಂದ ಮತ್ತೆ ಗಾಬರಿಗೊಂಡ ಸಾಕು ತಂದೆ ಸ್ವಾಮಿ ಅವರು ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು. ಆದರೆ ವಿಜಯಲಕ್ಷ್ಮಿಯ ಪತ್ತೆ ಆಗಲಿಲ್ಲ. ಹೀಗಾಗಿ ಅವರು ಮತ್ತೆ ಆಂಜನಪ್ಪನಿಗೆ ಫೋನ್ ಮಾಡಿ ವಿಜಯಲಕ್ಷ್ಮಿ ಎಲ್ಲಿ ಎಂದು ವಿಚಾರಿಸಿದ್ದರು. ಆದರೆ ಆಂಜನಪ್ಪ, ಆಕೆ ನನ್ನ ಬಳಿ ಇಲ್ಲ ಎಂದು ಹೇಳಿದ್ದ. ಈ ಬೆನ್ನಲ್ಲೇ ಆಂಜನಪ್ಪನ ಸಂಬಂಧಿಯೊಬ್ಬರು ಸ್ವಾಮಿ ಅವರಿಗೆ ಫೋನ್ ಮಾಡಿ, ವಿಜಯಲಕ್ಷ್ಮಿ ಆಂಜನಪ್ಪ ಬಳಿಯೇ ಇದ್ದಾಳೆ ಎಂದು ತಿಳಿಸಿದ್ದರು.

    ಖಚಿತ ಮಾಹಿತಿಯೊಂದಿಗೆ ಸ್ವಾಮಿ ಅವರು ಆಂಜನಪ್ಪ ಮನೆಗೆ ಹೋಗಿದ್ದರು. ಆದರೆ ಅಲ್ಲಿ ಆಂಜನಪ್ಪ ಮತ್ತು ವಿಜಯಲಕ್ಷ್ಮಿ ಇಬ್ಬರು ಸಹ ಇರಲಿಲ್ಲ. ಹೀಗಾಗಿ ಸ್ವಾಮಿ ಅವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ಹಾಗೂ ಚನ್ನಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಮಗಳು ಕಾಣೆಯಾದ ಆತಂಕದಲ್ಲಿ ಇದ್ದ ವಿಜಯಲಕ್ಷ್ಮಿ ತಾಯಿ ಹಾಗೂ ಅಜ್ಜಿಗೆ ಪ್ರತಿ ದಿನವೂ ನಿರ್ಮಾಪಕರು ಬಂದು ನಿಮ್ಮ ಮಗಳು ಎಲ್ಲಿ ಎಂದು ಕೇಳುತ್ತಿದ್ದರು. ಹೀಗೆ ಪದೇ ಪದೇ ಕೇಳುತ್ತಿದ್ದರಿಂದ ಮನನೊಂದ ವಿಜಯಲಕ್ಷ್ಮಿ ತಾಯಿ ಮತ್ತು ಅಜ್ಜಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ವಿಷ ತೆಗೆದುಕೊಂಡ ಪರಿಣಾಮ ವಿಜಯಲಕ್ಷ್ಮಿ ಅಜ್ಜಿ ಸಾವನ್ನಪ್ಪಿದ್ದು, ತಾಯಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಅವರನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

  • ರಂಗಾಯಣ ನಿರ್ದೇಶಕರಾಗಿ ರಮೇಶ್ ಪರವಿನಾಯ್ಕರ್ ಅಧಿಕಾರ ಸ್ವೀಕಾರ

    ರಂಗಾಯಣ ನಿರ್ದೇಶಕರಾಗಿ ರಮೇಶ್ ಪರವಿನಾಯ್ಕರ್ ಅಧಿಕಾರ ಸ್ವೀಕಾರ

    ಧಾರವಾಡ: ಜಿಲ್ಲೆಯ ರಂಗಾಯಣದ ನೂತನ ನಿರ್ದೇಶಕರಾಗಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ರಮೇಶ್ ಪರವಿನಾಯ್ಕರ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.

    ಅಧಿಕಾರ ಸ್ವಿಕರಿಸಿದ ಬಳಿಕ ಮಾತನಾಡಿದ ಅವರು, ನಾನೂ ರಂಗಭೂಮಿ ಕುಟುಂಬದಿಂದ ಬಂದವನು. 2009ರಿಂದ ಬಸವೇಶ್ವರ, ಸಂಗೊಳ್ಳಿ ರಾಯಣ್ಣ ನಾಟಕ ಮಾಡಿದ್ದೇನೆ. ಹಳ್ಳಿ-ಹಳ್ಳಿಗೆ ಹೋಗಿ ಜಾಗೃತಿ, ನಾಟಕ ಮಾಡಿರುವೆ. ಅಲ್ಲದೇ ಚಲನಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ್ದಾಗಿ ತಿಳಿಸಿದರು.

    ರಾಜ್ಯದ ನಾಲ್ಕು ರಂಗಾಯಣಗಳ ಪೈಕಿ ಧಾರವಾಡ ಮಾದರಿ ರಂಗಾಯಣ ನಿರ್ಮಾಣಕ್ಕೆ ಶ್ರಮಿಸುವೆ ಎಂದರು. ಹಿರಿಯ ಸಾಹಿತಿಗಳು, ರಂಗ ಸಮಾಜದ ಸದಸ್ಯರ, ರಂಗಕರ್ಮಿಗಳ ಸಲಹೆ ಪಡೆಯುವೆ. ರಂಗಾಯಣದ ಬಗ್ಗೆ ಕನಸುಗಳಿವೆ. ಧಾರವಾಡ ರಂಗಾಯಣ ಎತ್ತರಕ್ಕೆ ಒಯ್ಯುವ ಮಹದಾಸೆ ಹೊಂದಿರುವುದಾಗಿ ಹೇಳಿದರು.

    ಏಣಗಿ ನಟರಾಜ್ ನಮ್ಮ ತಾಲೂಕಿನವರು, ಅವರ ಕನಸು ನನಸು ಮಾಡುವೆ. ನಾನು ಬಿಜೆಪಿ ಕಾರ್ಯಕರ್ತ ಇರಬಹುದು, ಆದರೆ ನನ್ನ ಕಲೆ, ಪ್ರತಿಭೆಗೆ ಬೆಲೆ ನೀಡಿ ಸರ್ಕಾರ ನನಗೆ ಈ ಜವಾಬ್ದಾರಿ ನೀಡಿದೆ. ಪಕ್ಷದ ಸಿದ್ಧಾಂತ ಇಲ್ಲಿ ಇಲ್ಲ. ಕಲಾವಿದರ ಮೇಲೆ ಬೇಧ-ಭಾವ ಮಾಡಲ್ಲ ಎಂದರು.

  • ಬಿಜೆಪಿ ವಕ್ತಾರನಾಗಿದ್ದೇ ರಂಗಾಯಣ ನಿರ್ದೇಶಕನಾಗಲೂ ಕಾರಣ ಇರಬಹುದು: ಅಡ್ಡಂಡ ಕಾರ್ಯಪ್ಪ

    ಬಿಜೆಪಿ ವಕ್ತಾರನಾಗಿದ್ದೇ ರಂಗಾಯಣ ನಿರ್ದೇಶಕನಾಗಲೂ ಕಾರಣ ಇರಬಹುದು: ಅಡ್ಡಂಡ ಕಾರ್ಯಪ್ಪ

    ಮೈಸೂರು: ಮೈಸೂರಿನ ರಂಗಾಯಣ ಸಂಸ್ಥೆಯ ನೂತನ ನಿರ್ದೇಶಕರಾಗಿ ನಾಡಿನ ಹಿರಿಯ ರಂಗಕರ್ಮಿ ಹಾಗೂ ಸಾಹಿತಿ ಅಡ್ಡಂಡ ಕಾರ್ಯಪ್ಪ ಇಂದು ಮೈಸೂರಿನ ಕಲಾಮಂದಿರದ ರಂಗಾಯಣದ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.

    ಕೊಡಗು ಮೂಲದ ಹಿರಿಯ ರಂಗಕರ್ಮಿ ಹಾಗೂ ಸಾಹಿತಿಯಾಗಿರುವ ಅಡ್ಡಂಡ ಕಾರ್ಯಪ್ಪ, ಕಳೆದ ಮೂರು ತಿಂಗಳಿನಿಂದ ಖಾಲಿ ಇದ್ದ ರಂಗಾಯಣದ ನಿರ್ದೇಶಕ ಹುದ್ದೆ ಅಲಂಕರಿಸಿದರು. ಅಧಿಕಾರ ಸ್ವೀಕಾರ ಮಾಡಿದ ವೇಳೆ ಹಿರಿಯ ರಂಗಕರ್ಮಿಗಳು ಹಾಗೂ ರಂಗಾಯಣದ ಕಲಾವಿದರು ಪುಷ್ಪಗುಚ್ಚ ನೀಡಿ ಶುಭ ಹಾರೈಸಿದರು.

    ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಡ್ಡಂಡ ಕಾರ್ಯಪ್ಪ, ರಂಗಾಯಣದ ನಿರ್ದೇಶಕನಾಗಿ ಅಧಿಕಾರ ವಹಿಸಿಕೊಂಡಿದ್ದು ಸಂತಸ ತಂದಿದೆ. ರಂಗಾಯಣದ ಏಳಿಗೆಗಾಗಿ ಸಾಕಷ್ಟು ಕನಸುಗಳನ್ನು ಕಂಡಿದ್ದೇನೆ. ಹಿರಿಯ ರಂಗಕರ್ಮಿ ಬಿ. ವಿ ಕಾರಂತರು ಸ್ಥಾಪಿಸಿರುವ ರಂಗಾಯಣವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತೇನೆ. ಪ್ರತಿವರ್ಷ ಸಂಕ್ರಾತಿಯ ದಿನ ಆರಂಭವಾಗುತ್ತಿದ್ದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಈ ಬಾರಿ ಮುಂದೂಡಿಕೆ ಆಗಲಿದೆ. ನಿಧಾನವಾಗಿಯಾದರೂ ಪ್ರಧಾನವಾಗಿ ಬಹುರೂಪಿ ನಾಟಕೋತ್ಸವನ್ನು ಆಯೋಜನೆ ಮಾಡುತ್ತೇವೆ ಎಂದರು.

    ಸಾಂಸ್ಕೃತಿಕ ಸಂಸ್ಥೆಗಳಿಗೆ ನಿರ್ದೇಶಕರನ್ನು ಆಯ್ಕೆ ಮಾಡುವ ಸರ್ಕಾರಗಳು, ನಿರ್ದೇಶಕರು ಅಧಿಕಾರವನ್ನು ಪೂರೈಸಲು ಅವಕಾಶ ಮಾಡಿಕೊಡಬೇಕು. ಈ ಬಗ್ಗೆ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ನೀಡಿರುವ ವರದಿಯನ್ನು ಪರಿಗಣಿಸಬೇಕು. ಸರ್ಕಾರಗಳು ಬದಲಾದಾಗ ಸಾಂಸ್ಕೃತಿಕ ಸಂಸ್ಥೆಗಳ ನಿರ್ದೇಶಕರನ್ನು ಬದಲಾವಣೆ ಮಾಡುವುದು ಸರಿಯಾದ ಕ್ರಮವಲ್ಲ. ಇದರಿಂದ ಸಂಬಂಧಪಟ್ಟ ಸಾಂಸ್ಕೃತಿಕ ಸಂಸ್ಥೆಯ ಮೇಲೂ ಪರಿಣಾಮ ಬೀರುತ್ತದೆಯಲ್ಲದೆ ಅದರ ಚಟುವಟಿಕೆಗಳಿಗೆ ಹಿನ್ನಡೆ ಆಗುತ್ತದೆ. ಯಾವುದೇ ಸಾಂಸ್ಕೃತಿಕ ಸಂಸ್ಥೆಯ ನಿರ್ದೇಶಕರನ್ನು ಮೂರು ವರ್ಷ ಪೂರ್ತಿ ಅಧಿಕಾರ ಪೂರೈಸಲು ಅನುವು ಮಾಡಿಕೊಡಬೇಕು ಎಂದು ಹೇಳಿದರು.

    ರಂಗಾಯಣದ ನಿರ್ದೇಶಕರಾಗಿರುವುದಕ್ಕೆ ನಾನು ಬಿಜೆಪಿ ವಕ್ತಾರನಾಗಿದ್ದು ಕಾರಣವಾಗಿರಲೂಬಹುದು. ನಾನು ರಂಗಾಯಣದ ನಿರ್ದೇಶಕನಾಗಬೇಕೆಂದು ಪ್ರಯತ್ನ ಪಟ್ಟಿದ್ದೆ. ಆದರೆ ಈ ಹುದ್ದೆ ನಿರೀಕ್ಷೆಯಲ್ಲಿ ಇರಲಿಲ್ಲ. ಆದರೂ ಕೂಡ ಸರ್ಕಾರ ನನ್ನ ಮೇಲೆ ನಂಬಿಕೆಯಿಟ್ಟು ಈ ಹುದ್ದೆ ನೀಡಿದೆ. ನನಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.

  • ಮಹಿಳೆಯರು ತಮ್ಮ ಜೊತೆ ಕಾಂಡೋಮ್ ಇಟ್ಟುಕೊಂಡು ಅತ್ಯಾಚಾರಿಗಳಿಗೆ ಸಹಕರಿಸಬೇಕು: ನಿರ್ದೇಶಕ

    ಮಹಿಳೆಯರು ತಮ್ಮ ಜೊತೆ ಕಾಂಡೋಮ್ ಇಟ್ಟುಕೊಂಡು ಅತ್ಯಾಚಾರಿಗಳಿಗೆ ಸಹಕರಿಸಬೇಕು: ನಿರ್ದೇಶಕ

    ಹೈದರಾಬಾದ್: ಮಹಿಳೆಯರು ತಮ್ಮ ಜೊತೆ ಕಾಂಡೋಮ್ ಇಟ್ಟುಕೊಂಡು ಅತ್ಯಾಚಾರಿಗಳಿಗೆ ಸಹಕರಿಸಬೇಕು ಎಂದು ನಿರ್ದೇಶಕನೊಬ್ಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾನೆ.

    ನಿರ್ದೇಶಕ ಡೇನಿಯಲ್ ಶ್ರವಣ್ ತನ್ನ ಫೇಸ್‍ಬುಕ್‍ನಲ್ಲಿ ರೀತಿಯ ಪೋಸ್ಟ್ ಹಾಕಿಕೊಂಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಹೈದರಾಬಾದ್‍ನಲ್ಲಿ ನಡೆದ ಪಶುವೈದ್ಯೆಯ ಹತ್ಯೆಗೆ ಸಂಬಂಧಿಸಿದಂತೆ ಡೇನಿಯಲ್ ತನ್ನ ಫೇಸ್‍ಬುಕ್‍ನಲ್ಲಿ ಈ ರೀತಿಯ ಪೋಸ್ಟ್ ಹಾಕಿಕೊಂಡಿದ್ದಾನೆ. ಬಳಿಕ ಈ ಪೋಸ್ಟ್ ತನ್ನ ಚಿತ್ರದ ವಿಲನ್ ಡೈಲಾಗ್ ಎಂದು ಡಿಲೀಟ್ ಮಾಡಿದ್ದಾನೆ.

    ಪೋಸ್ಟ್ ನಲ್ಲಿ ಏನಿತ್ತು?
    ಮಹಿಳೆಯರು ತಮ್ಮ ಜೊತೆ ಕಾಂಡೋಮ್ ಇಟ್ಟುಕೊಂಡು ಅತ್ಯಾಚಾರಿಗಳಿಗೆ ಸಹಕರಿಸಬೇಕು. ಅತ್ಯಾಚಾರಕ್ಕೆ ಒಳಗಾದವರ ಹತ್ಯೆಯನ್ನು ನಿಯಂತ್ರಿಸುವ ಏಕೈಕ ದಾರಿ ಏನೆಂದರೆ ‘ಹಿಂಸಾಚಾರವಿಲ್ಲದೆ ಅತ್ಯಾಚಾರಗಳನ್ನು’ ಕಾನೂನುಬದ್ಧಗೊಳಿಸುವುದು. 18 ವರ್ಷ ಮೇಲ್ಪಟ್ಟ ಯುವತಿಯರಿಗೆ ಅತ್ಯಾಚಾರದ ಬಗ್ಗೆ ಶಿಕ್ಷಣ ನೀಡಬೇಕು. ಹೀಗೆ ಮಾಡಿದರೆ ಮಾತ್ರ ಈ ರೀತಿ  ಪ್ರಕರಣಗಳು ನಡೆಯುವುದಿಲ್ಲ. ಭಾರತದ ಮಹಿಳೆಯರಿಗೆ ಸೆಕ್ಸ್ ಎಜುಕೇಶನ್ ಬಗ್ಗೆ ತಿಳಿದಿರಬೇಕು ಎಂದು ಬರೆದುಕೊಂಡಿದ್ದನು.

    ಪುರುಷರ ಬಯಕೆ ಈಡೇರಿದರೆ ಅವರು ಮಹಿಳೆಯರನ್ನು ಕೊಲೆ ಮಾಡುವುದಿಲ್ಲ. ಅತ್ಯಾಚಾರ ನಂತರ ಕೊಲೆ ಮಾಡುವುದನ್ನು ತಡೆಯಲು ಸರ್ಕಾರ ಈ ರೀತಿಯಂತಹ ಯೋಜನೆಗಳನ್ನು ಜಾರಿಗೆ ತರಬೇಕು. ಸಮಾಜ, ಸರ್ಕಾರ ಹಾಗೂ ಮಹಿಳಾ ಸಂಘಟನೆ ನಿರ್ಭಯಾ ಕಾಯ್ದೆ, ಪೆಪ್ಪರ್ ಸ್ಪ್ರೇಯಿಂದ ಅತ್ಯಾಚಾರಿಗಳನ್ನು ಹೆದರಿಸುತ್ತಿದೆ. ಅತ್ಯಾಚಾರಿಗಳು ತಮ್ಮ ಲೈಂಗಿಕ ಆಸೆಯನ್ನು ಈಡೇರಿಸಿಕೊಳ್ಳುವುದಕ್ಕೆ ಯಾವುದೇ ಮಾರ್ಗ ಕೊಂಡುಕೊಳ್ಳುತ್ತಿಲ್ಲ. ಹಾಗಾಗಿ ಅವರಿಗೆ ಕೊಲೆ ಮಾಡುವ ಯೋಚನೆ ಬರುತ್ತಿದೆ. ಮಹಿಳೆಯರು ಪುರುಷರ ಜೊತೆಗೆ ದೈಹಿಕ ಸಂಬಂಧ ಬೆಳೆಸುವುದು ಒಳ್ಳೆಯದು ಎಂದು ಬರೆದು ಡೇನಿಯಲ್ ಶ್ರವಣ್ ಪೋಸ್ಟ್ ಹಾಕಿದ್ದನು.

    ನಿರ್ದೇಶಕ ಡೇನಿಯಲ್ ಪೋಸ್ಟ್ ಗೆ ಹಿನ್ನೆಲೆ ಗಾಯಕಿ ಚಿನ್ಮಯಿ ಶ್ರೀಪಾದ ಹಾಗೂ ಬಾಲಿವುಡ್ ನಟಿ ಕುಬ್ರಾ ಸೇಠ್ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

  • ನಿರ್ದೇಶಕರು ನನ್ನನ್ನು ರೂಮಿಗೆ ಕರೆದು ಬಾಗಿಲು ಹಾಕ್ತಿದ್ರು: ರಾಖಿ ಸಾವಂತ್

    ನಿರ್ದೇಶಕರು ನನ್ನನ್ನು ರೂಮಿಗೆ ಕರೆದು ಬಾಗಿಲು ಹಾಕ್ತಿದ್ರು: ರಾಖಿ ಸಾವಂತ್

    ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಇತ್ತೀಚೆಗೆ ತನ್ನ 41ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾಳೆ. ಈ ವೇಳೆ ಆಕೆ ತನಗಾದ ಕಾಸ್ಟಿಂಗ್ ಕೌಚ್ ಅನುಭವನ್ನು ಹಂಚಿಕೊಂಡಿದ್ದಾಳೆ.

    ರಾಖಿ ವೆಬ್‍ಸೈಟ್‍ಗೆ ಸಂದರ್ಶನ ನೀಡಿದ್ದು, ಈ ವೇಳೆ ಆಕೆ, ಚಿತ್ರದ ನಿರ್ದೇಶಕರು, ನಿರ್ಮಾಪಕರು ಕೆಟ್ಟ ಉದ್ದೇಶದಿಂದ ನನಗೆ ಕರೆ ಮಾಡುತ್ತಿದ್ದರು. ನಾನು ಇಲ್ಲಿಗೆ ಬಂದ ನಂತರ ಎಲ್ಲವನ್ನು ಸಹಿಸಿಕೊಳ್ಳುತ್ತಿದೆ. ಮೊದಲು ನನ್ನ ಹೆಸರು ನೀರೂ ಭೇದಾ ಆಗಿತ್ತು. ನಾನು ಆಡಿಶನ್‍ಗೆ ಹೋಗುವಾಗ ನಿರ್ದೇಶಕರು ಹಾಗೂ ನಿರ್ಮಾಪಕರು ನನಗೆ ಟ್ಯಾಲೆಂಟ್ ತೋರಿಸಿ ಎಂದು ಹೇಳುತ್ತಿದ್ದರು. ಆಗ ನನಗೆ ಅವರು ಯಾವ ಟ್ಯಾಲೆಂಟ್ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದು ತಿಳಿದಿರಲಿಲ್ಲ ಎಂದು ಹೇಳಿದ್ದಾಳೆ.

    ಆಡಿಶನ್‍ಗೆ ನಾನು ನನ್ನ ಫೋಟೋ ತೆಗೆದುಕೊಂಡು ಹೋಗುತ್ತಿದೆ. ಆಗ ಅವರು ನನಗೆ ರೂಮಿನೊಳಗೆ ಕರೆದು ಬಾಗಿಲು ಮುಚ್ಚುತ್ತಿದ್ದರು. ನಾನು ಕಷ್ಟಪಟ್ಟು ಅಲ್ಲಿಂದ ಹೊರಗೆ ಬರುತ್ತಿದೆ. ನಾನು ತುಂಬಾ ಬಡತನವನ್ನು ಅನುಭವಿಸಿದ್ದೇನೆ. ನನ್ನ ತಾಯಿ ಆಸ್ಪತ್ರೆಯಲ್ಲಿ ಕಸ ಎತ್ತುವ ಕೆಲಸ ಮಾಡುತ್ತಿದ್ದರು. ಆಗ ನಮ್ಮ ಬಳಿ ಊಟ ಮಾಡಲು ಹಣ ಸಹ ಇರುತ್ತಿರಲಿಲ್ಲ. ನಾನು ಹಾಗೂ ನನ್ನ ತಾಯಿ ಉಳಿದ ಊಟವನ್ನು ಮಾಡುತ್ತಿದ್ದೇವು ಎಂದು ರಾಖಿ ತನ್ನ ಹಳೆಯ ದಿನಗಳನ್ನು ನೆನಪಿಸಿಕೊಂಡಳು.

    ಜುಲೈ 28ರಂದು ರಾಖಿ ಮುಂಬೈನ ಜೆ.ಡಬ್ಲೂ ಮ್ಯಾರಿಯಟ್ ಹೋಟೆಲ್‍ನಲ್ಲಿ ಗೌಪ್ಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ರಾಖಿ ಇನ್‍ಸ್ಟಾಗ್ರಾಂನಲ್ಲಿ ಸಕ್ರಿಯಳಾಗಿದ್ದು, ಯಾವಾಗಲೂ ತನ್ನ ಪತಿ ರಿತೇಶ್ ಬಗ್ಗೆ ಮಾತನಾಡುತ್ತಿರುತ್ತಾಳೆ. ಆದರೆ ಈವರೆಗೂ ರಾಖಿ ತನ್ನ ಪತಿಯ ಫೋಟೋವನ್ನು ರಿವೀಲ್ ಮಾಡಿಲ್ಲ.

  • ಶಿವಣ್ಣ ಲಾಂಗ್ ಹಿಡಿದರೆ ನಾನು ಹಿಂದೆ ನಿಲ್ಲುತ್ತೇನೆ: ದರ್ಶನ್

    ಶಿವಣ್ಣ ಲಾಂಗ್ ಹಿಡಿದರೆ ನಾನು ಹಿಂದೆ ನಿಲ್ಲುತ್ತೇನೆ: ದರ್ಶನ್

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಲಾಂಗ್ ಹಿಡಿದರೆ ನಾನು ಹಿಂದೆ ನಿಲ್ಲುತ್ತೇನೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ದರ್ಶನ್ ಒಟ್ಟಿಗೆ ಸಿನಿಮಾ ಮಾಡ್ತಾರಾ ಎಂಬ ಪ್ರಶ್ನೆ ಈಗ ಗಾಂಧಿ ನಗರದಲ್ಲಿ ಸಖತ್ ಚರ್ಚೆ ಆಗುತ್ತಿದ್ದು ಇಂದು ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

    ನವ ನಟ ಧ್ರುವನ್ ಹಾಗೂ ಪ್ರಿಯಾ ವಾರಿಯರ್ ನಟನೆ ಇನ್ನೂ ಹೆಸರಿಡದ ಸಿನಿಮಾ ಪೂಜೆಗೆ ಇವರಿಬ್ಬರೂ ಒಟ್ಟಿಗೆ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಶಿವಣ್ಣ, ಒಳ್ಳೆ ಕಥೆ ಸಿಕ್ಕರೆ ಖಂಡಿತಾ ಒಟ್ಟಿಗೆ ಸಿನಿಮಾ ಮಾಡುತ್ತೇವೆ ಎಂದು ಉತ್ತರಿಸಿದ್ದಾರೆ.

    ನಾನು ದರ್ಶನ್ ಯಾವಗಲೂ ಈ ವಿಚಾರದ ಬಗ್ಗೆ ಮಾತನಾಡುತ್ತಿರುತ್ತೇವೆ. ಸಿನಿಮಾ ಮಾಡಿದರೆ ಒಳ್ಳೆಯ ಕಥೆ ಇಟ್ಟುಕೊಂಡು ಸಿನಿಮಾ ಮಾಡಬೇಕು. ಆ ರೀತಿಯ ಕಥೆ ಬಂದರೆ ಖಂಡಿತಾ ಇಬ್ಬರು ಒಟ್ಟಿಗೆ ಮಾಡುತ್ತೇವೆ ಎಂದು ಹೇಳಿದರು.

    ಈ ವೇಳೆ ಶಿವಣ್ಣನ ಜೊತೆಯಲ್ಲೇ ಈ ಪ್ರಶ್ನೆಗೆ ಉತ್ತರಿಸಿದ ದರ್ಶನ್, ಶಿವಣ್ಣ ಸೀನಿಯರ್ ಅವರು ಲಾಂಗ್ ಹಿಡಿದರೆ ಮುಂದೆ ನಿಂತರೆ ನಾನು ಅವರ ಹಿಂದೆ ನಿಲ್ಲುತ್ತೇನೆ. ಇನ್ನೊಂದು ಹೇಳಬೇಕು ಎಂದರೆ ನಮ್ಮಿಬ್ಬರನ್ನು ಹ್ಯಾಂಡಲ್ ಮಾಡೋ ಡೈರೆಕ್ಟರ್ ಯಾರೂ ಇಲ್ಲ. ಈ ರೀತಿಯ ಡೈರೆಕ್ಟರ್ ಇದ್ದರೆ ಅವರು ಕಥೆ ಮಾಡಿಕೊಂಡು ಬಂದರೆ ಖಂಡಿತಾ ಸಿನಿಮಾ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದರು.

    ಇತ್ತೀಚಿನ ದಿನಗಳಲ್ಲಿ ಮಲ್ಟಿಸ್ಟಾರ್ಸ್‍ ಗಳ ಸಿನಿಮಾದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಶಿವಣ್ಣ, ಈ ಹಿಂದೆ ರೋರಿಂಗ್ ಸ್ಟಾರ್ ಶ್ರೀಮುರುಳಿ ಜೊತೆ ಮಫ್ತಿ ಸಿನಿಮಾದಲ್ಲಿ ನಟಿಸಿದ್ದರು. ನಂತರ ಜೋಗಿ ಪ್ರೇಮ್ ನಿರ್ದೇಶನ ದಿ ವಿಲನ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರ ಜೊತೆ ನಟಿಸಿದ್ದರು.

    ದರ್ಶನ್ ಕೂಡ ಅಭಿಷೇಕ್ ಅಂಬರೀಷ್ ನಟನೆಯ ಅಮರ್ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಈಗ ಈ ಇಬ್ಬರು ಸ್ಟಾರ್ ನಟರನ್ನು ಒಂದೇ ಸಿನಿಮಾದಲ್ಲಿ ನೋಡಲು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.

  • ದರ್ಶನ್‍ರನ್ನು ಹೊಗಳಿದ ಬಾಲಿವುಡ್ ಸ್ಟಾರ್ ನಿರ್ದೇಶಕ- ವಿಡಿಯೋ ವೈರಲ್

    ದರ್ಶನ್‍ರನ್ನು ಹೊಗಳಿದ ಬಾಲಿವುಡ್ ಸ್ಟಾರ್ ನಿರ್ದೇಶಕ- ವಿಡಿಯೋ ವೈರಲ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಬಾಲಿವುಡ್ ಸ್ಟಾರ್ ನಿರ್ದೇಶಕ ರೋಹಿತ್ ಶೆಟ್ಟಿ ಅವರು ಹೊಗಳಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ನಿರ್ದೇಶಕ ರೋಹಿತ್ ಶೆಟ್ಟಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ದರ್ಶನ್ ಹಾಗೂ ಅವರ ಅಭಿಮಾನಿಗಳ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೋ ಹಳೆಯದಾಗಿದ್ದು, ಸಾಕಷ್ಟು ವೈರಲ್ ಆಗುತ್ತಿದೆ. ಅಲ್ಲದೆ ದರ್ಶನ್ ಅವರ ಅಭಿಮಾನಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

    ವಿಡಿಯೋದಲ್ಲಿ ರೋಹಿತ್ ಶೆಟ್ಟಿ, “ನಾನು ಕನ್ನಡ ನಟನೊಬ್ಬನ ವಿಡಿಯೋ ನೋಡಿದೆ. ಅವರ ಹುಟ್ಟುಹಬ್ಬದ ದಿನ ಸಾವಿರಾರು ಅಭಿಮಾನಿಗಳು ಅವರ ಮನೆ ಮುಂದೆ ನಿಂತಿದ್ದರು. ಮಧ್ಯರಾತ್ರಿ 12 ಗಂಟೆಯಿಂದ ಮರುದಿನ ಮಧ್ಯರಾತ್ರಿ 12 ಗಂಟೆವರೆಗೂ ಅವರು ತಮ್ಮ ಪ್ರತಿಯೊಬ್ಬ ಅಭಿಮಾನಿಯನ್ನು ಭೇಟಿ ಮಾಡಿದ್ದಾರೆ. ಅವರು ತಮ್ಮ ಹುಟ್ಟುಹಬ್ಬದಂದು ಸಾವಿರಾರು ಕೇಕ್ ಕಟ್ ಮಾಡಿರುತ್ತಾರೆ. ಹೀಗೆ ಅವರು ತಮ್ಮ ಅಭಿಮಾನಿಗಳನ್ನು ಹೆಚ್ಚಿಸಿಕೊಳ್ಳುತ್ತಾರೆ” ಎಂದು ಹೇಳಿದ್ದಾರೆ.

    ರೋಹಿತ್ ಶೆಟ್ಟಿ ಬಾಲಿವುಡ್‍ನಲ್ಲಿ ‘ಚೆನ್ನೈ ಎಕ್ಸ್ ಪ್ರೆಸ್, ದಿಲ್‍ವಾಲೆ, ಸಿಂಗಂ, ಸಿಂಗಂ ರಿಟನ್ಸ್, ಗೋಲ್‍ಮಾಲ್-3, ಬೋಲ್ ಬಚ್ಚನ್ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಅಲ್ಲದೆ ಅವರ ಸಾಕಷ್ಟು ಚಿತ್ರಗಳು ಸೂಪರ್ ಹಿಟ್ ಆಗಿವೆ.

    https://www.instagram.com/p/B43sxqBgZQu/?utm_source=ig_embed

     

  • ಪುಟ್ಟಣ್ಣ ಕಣಗಾಲ್‍ಗೆ ರಂಗನಾಯಕಿಯ ಗೌರವ!

    ಪುಟ್ಟಣ್ಣ ಕಣಗಾಲ್‍ಗೆ ರಂಗನಾಯಕಿಯ ಗೌರವ!

    ಬೆಂಗಳೂರು: ರಂಗನಾಯಕಿ ಎಂಬ ಹೆಸರು ಕೇಳಿದಾಕ್ಷಣವೇ ಕನ್ನಡದ ಪ್ರೇಕ್ಷಕರಿಗೆ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನೆನಪಾಗುತ್ತಾರೆ. ಆರತಿಯವರ ಮನೋಜ್ಞ ಅಭಿನಯ ನೆನಪಾಗುತ್ತದೆ. ಆ ಕಾಲಕ್ಕೆ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿ ಸೂಪರ್ ಹಿಟ್ ಆಗಿದ್ದ ಈ ಚಿತ್ರ ಈವರೆಗೂ ತನ್ನೆಡೆಗಿನ ಕ್ರೇಜ್ ಆನ್ನು ಹಾಗೆಯೇ ಕಾಯ್ದಿಟ್ಟುಕೊಂಡು ಬಂದಿದೆ. ಇದೀಗ ದಯಾಳ್ ಪದ್ಮನಾಭನ್ ಅದೇ ಶೀರ್ಷಿಕೆಯನ್ನಿಟ್ಟುಕೊಂಡು ನಿರ್ದೇಶನ ಮಾಡಿರೋ ಚಿತ್ರ ಇದೇ ನವೆಂಬರ್ ಎಂಟರಂದು ತೆರೆಗಾಣುತ್ತಿದೆ.

    ಒಂದು ಯಶಸ್ವೀ ಚಿತ್ರದ ಶೀರ್ಷಿಕೆಯಲ್ಲಿಯೆ ಹೊಸಾ ಚಿತ್ರಗಳು ತೆರೆ ಕಾಣೋದೇನು ಹೊಸತಲ್ಲ. ಆದರೆ ಕಥೆ ಪೂರಕವಾಗಿ, ಮೂಲ ಚಿತ್ರದ ಘನತೆಯನ್ನು ಮತ್ತಷ್ಟು ಮಿರುಗಿಸುವಂಥಾ ಕಥೆಗಳು ದೃಷ್ಯ ರೂಪ ಪಡೆಯೋದು ಮಾತ್ರ ಅಪರೂಪದ ಬೆಳವಣಿಗೆ. ಆರಂಭದಲ್ಲಿ ಕಣಗಾಲ್ ನಿರ್ದೇಶನದ ರಂಗನಾಯಕಿ ಎಂಬ ಶೀರ್ಷಿಕೆಯನ್ನು ತಮ್ಮ ಚಿತ್ರಕ್ಕಿಡೋ ಸಂದರ್ಭ ಬಂದಾಗ ಖುದ್ದು ದಯಾಳ್ ಅವರೇ ತಲ್ಲಣಿಸಿದ್ದರಂತೆ. ರಂಗನಾಯಕಿಯ ಹೆಸರಿಗೆ ಕುಂದುಂಟಾಗದಂತೆ ಈ ಸಿನಿಮಾ ನಿರ್ದೇಶನ ಮಾಡಲು ತನ್ನಿಂದ ಸಾಧ್ಯವಾಗುತ್ತದಾ ಎಂದು ಕೇಳಿಕೊಂಡಿದ್ದರಂತೆ.

    ಇದೀಗ ರಂಗನಾಯಕಿ ರೆಡಿಯಾಗಿ ನಿಂತಿದೆ. ದಯಾಳ್ ಕೂಡಾ ನಿರಾಳ ಭಾವದಿಂದಿದ್ದಾರೆ. ಇದು ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಗೆ ಗೌರವ ಸೂಚಿಸುವ ರೀತಿಯಲ್ಲಿ ಮೂಡಿ ಬಂದಿದೆ ಎಂಬ ಸಾರ್ಥಕ ಭಾವ ಅವರಲ್ಲಿದೆ. ಈ ಚಿತ್ರ ಗೋವಾ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್‍ಗೆ ಆಯ್ಕೆಯಾಗಿರೋದೇ ಒಂದು ಗೌರವದ ವಿಚಾರ. ಅದು ಪುಟ್ಟಣ್ಣ ಕಣಗಾಲ್ ಅವರಂಥಾ ಮೇರು ನಿರ್ದೇಶಕನಿಗೆ ಸಲ್ಲಿಸೋ ಮಹಾ ಗೌರವ ಎಂಬುದರಲ್ಲಿ ಎರಡು ಮಾತಿಲ್ಲ. ಬಿಡುಗಡೆ ಪೂರ್ವದಲ್ಲಿಯೇ ಇಷ್ಟೊಂದು ಮಿಂಚುತ್ತಿರೋ ರಂಗನಾಯಕಿ ಬಿಡುಗಡೆಯ ನಂತರ ದೇಶ ಮಟ್ಟದಲ್ಲಿ ಸದ್ದು ಮಾಡಲಿದೆ ಎಂಬ ನಂಬಿಕೆ ಚಿತ್ರತಂಡದಲ್ಲಿದೆ.

  • ಕಡೆಮನೆ: ಸಿನಿಮಾ ಹಂಬಲ ಹಾಡುಗಾರನನ್ನು ನಿರ್ಮಾಪಕನನ್ನಾಗಿಸಿತು!

    ಕಡೆಮನೆ: ಸಿನಿಮಾ ಹಂಬಲ ಹಾಡುಗಾರನನ್ನು ನಿರ್ಮಾಪಕನನ್ನಾಗಿಸಿತು!

    ಬೆಂಗಳೂರು: ಈ ಸಿನಿಮಾ ಎಂಬ ಮಾಯೆ ಯಾರನ್ನು ಯಾವ ದಿಕ್ಕುಗಳಿಂದ ಸೆಳೆದು ತರುತ್ತದೆಂಬುದನ್ನು ಸಲೀಸಾಗಿ ಊಹಿಸಲು ಸಾಧ್ಯವಿಲ್ಲ. ಜೀವನದ ಅನಿವಾರ್ಯತೆ ಅದೆತ್ತ ಎಸೆದರೂ, ಯಾವ ಹುದುಲಲ್ಲಿ ಸಿಕ್ಕಿಕೊಳ್ಳುವಂತೆ ಮಾಡಿದರೂ ಸಿನಿಮಾ ಆಕಾಂಕ್ಷೆಯೆಂಬುದು ತಾನೇ ತಾನಾಗಿ ಬರಸೆಳೆದುಕೊಳ್ಳುತ್ತೆ. ಅದಕ್ಕೆ ಬೇಕಾದಂಥಾ ಪರಿಶ್ರಮ, ಪ್ರತಿಭೆಗಳಿದ್ದರೆ ಅಂಥವರ ಹೆಜ್ಜೆಗುರುತು ಕೂಡಾ ಗೆಲುವಾಗಿ ಮೂಡಿಕೊಳ್ಳುತ್ತದೆ. ಇದೀಗ ತನ್ನ ಶೀರ್ಷಿಕೆ ಮತ್ತು ಕಥೆಯ ಹೊಳಹುಗಳ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿಕೊಂಡಿರೋ ‘ಕಡೆಮನೆ’ ಎಂಬ ಚಿತ್ರದ ನಿರ್ಮಾಪಕರಾದ ನಂದನ್ ಅವರದ್ದೂ ಕೂಡ ಇದೇ ವೆರೈಟಿಯ ಕಥನ. ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಲೇ ಸಿನಿಮಾ ಕನಸು ಕಂಡ ಅವರೀಗ ಯಶಸ್ವಿ ನಿರ್ಮಾಪಕರಾಗುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಿಟ್ಟಿದ್ದಾರೆ.

    ನಂದನ್ ಪಾಲಿಗೆ ಕಡೆಮನೆ ಚೊಚ್ಚಲ ನಿರ್ಮಾಣದ ಚಿತ್ರ. ನಿರ್ದೇಶಕ ವಿನಯ್ ಪಾಲಿಗೂ ಇದು ಮೊದಲ ಸಿನಿಮಾ. ಹೊಸಬರ ತಂಡ, ಫ್ರೆಶ್ ಆದ ಹಾರರ್ ಕಥನದ ಮೂಲಕ ಗೆಲುವಿನ ಭರವಸೆಯಿಟ್ಟುಕೊಂಡಿರೋ ಇಡೀ ತಂಡವನ್ನು ನಂದನ್ ಸಮರ್ಥವಾಗಿ ನಿಭಾಯಿಸಿದ್ದಾರೆ. ಮೂಲತಃ ನಂಜನಗೂಡಿನವರಾದ ನಂದನ್ ದಶಕಗಳ ಹಿಂದೆ ತುಮಕೂರಿಗೆ ಬಂದು ಅಲ್ಲಿಯೇ ಬದುಕು ಕಟ್ಟಿಕೊಂಡವರು. ಹಾಡುವ ಕಲೆ ಸಿದ್ಧಿಸಿದ್ದರಿಂದ ಈ ಭಾಗದ ಆರ್ಕೆಸ್ಟ್ರಾ ತಂಡಗಳಲ್ಲಿ ಹಾಡುವುದನ್ನೇ ಅನ್ನದ ಮೂಲವಾಗಿಸಿಕೊಂಡಿದ್ದ ನಂದನ್ ಪಾಲಿಗೆ ಡಾ.ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಸಿನಿಮಾಗಳೇ ಬಣ್ಣದ ಲೋಕದತ್ತ ಆಸಕ್ತಿ ಹುಟ್ಟಿಕೊಳ್ಳುವಂತೆ ಮಾಡಿದ್ದವು.

    ಆರ್ಕೆಸ್ಟ್ರಾಗಳಲ್ಲಿ ಹಾಡೋದನ್ನೇ ಹವ್ಯಾಸವಾಗಿಸಿಕೊಂಡಿದ್ದ ನಂದನ್ ತಮ್ಮ ಕಾರ್ಯಕ್ಷೇತ್ರದಲ್ಲಾಗುತ್ತಿದ್ದ ಬದಲಾವಣೆಗಳನ್ನು ಕಂಡು ಅದನ್ನು ಜೀರ್ಣಿಸಿಕೊಳ್ಳಲೂ ಆಗದೆ, ಬದಲಾಯಿಸಲೂ ಆಗದೆ ಸಂದಿಗ್ಧ ಸ್ಥಿತಿ ತಲುಪಿಕೊಂಡಿದ್ದರು. ಬಹುತೇಕ ಹಾಡುಗಾರರಂತೆ ನಂದನ್ ಪಾಲಿಗೂ ಆರ್ಕೆಸ್ಟ್ರಾ ಎಂಬುದು ಕಲೆಯ ಅನಾವರಣಕ್ಕಿರೋ ವೇದಿಕೆ. ಆದರೆ ನೋಡನೋಡುತ್ತಲೇ ಡ್ಯಾನ್ಸು, ಸೌಂಡಿನ ಭರಾಟೆ ಹಾಡನ್ನು ಮರೆಮಾಚಲು ಶುರು ಮಾಡಿದಾಗ ಮೆಲ್ಲಗೆ ಬೇರೆಡೆಗೆ ಹೊರಳಿಕೊಂಡಿದ್ದ ಅವರ ಪಾಲಿಗೆ ಪ್ರಧಾನ ಕನಸಾಗಿ ಕಾಡಲಾರಂಭಿಸಿದ್ದು ಸಿನಿಮಾ. ತಾನೂ ಕೂಡ ಜನ ಸದಾ ನೆನಪಲ್ಲಿಟ್ಟುಕೊಳ್ಳುವಂತಹ ಸಿನಿಮಾ ಮಾಡಬೇಕೆಂಬ ಕನಸಿಟ್ಟುಕೊಂಡಿದ್ದ ಅವರ ಪಾಲಿಗೆ ಅದು ನನಸಾಗೋ ಸಂದರ್ಭ ಕೂಡಿ ಬಂದಿದ್ದು ಕೂಡ ಆಕಸ್ಮಿಕವಾಗಿಯೇ.

    ನಂದನ್‍ರಿಗೆ ತುಮಕೂರಿನವರೇ ಆದ ನಿರ್ದೇಶಕ ವಿನಯ್ ಎಂಬ ಪ್ರತಿಭಾವಂತ ಹುಡುಗನ ಪರಿಚಯವಾಗಿದ್ದು ಮನೆ ಬಳಿಯ ಹೋಟೆಲೊಂದರಲ್ಲಿ. ಅದಾಗಲೇ ಸೈಕಾಲಜಿಯಲ್ಲಿ ಎಂಎಸ್‍ಸಿ ಮಾಡಿಕೊಂಡಿದ್ದ ವಿನಯ್ ಸಿನಿಮಾ ಕಥೆಯೊಂದನ್ನು ಸಿದ್ಧಪಡಿಸಿಕೊಂಡು, ಸ್ಕ್ರಿಪ್ಟ್ ವರ್ಕನ್ನೂ ಮುಗಿಸಿಕೊಂಡು ನಿರ್ಮಾಪಕರಿಗಾಗಿ ಕಾಯುತ್ತಿದ್ದರು. ನಂದನ್ ಸಿನಿಮಾ ನಿರ್ಮಾಣ ಮಾಡಲು ರೆಡಿಯಾಗಿ ಒಂದೊಳ್ಳೆ ಕಥೆಗಾಗಿ ಹುಡುಕುತ್ತಿದ್ದರು. ಇವರಿಬ್ಬರೂ ಹೋಟೆಲೊಂದರಲ್ಲಿ ಸಂಧಿಸಿ, ಅಲ್ಲಿಯೇ ಪರಿಚಯವಾಗಿ ಆತ್ಮೀಯತೆ ಚಿಗುರಿಕೊಂಡ ನಂತರ ಸಿನಿಮಾ ಬಗ್ಗೆ ಮನಬಿಚ್ಚಿ ಮಾತಾಡಲಾರಂಭಿಸಿದ್ದರು. ಬಳಿಕ ವಿನಯ್ ಹೇಳಿದ ಕಥೆಯನ್ನು ಬಹುವಾಗಿ ಮೆಚ್ಚಿಕೊಂಡ ನಂದನ್ ಗ್ರೀನ್ ಸಿಗ್ನಲ್ ನೀಡಿದ್ದರು. ಈವತ್ತಿಗೆ ಹೊಸ ಅಲೆಯ ಚಿತ್ರವಾಗಿ ಗಮನ ಸೆಳೆದಿರುವ ‘ಕಡೆಮನೆ’ ಜೀವ ಪಡೆದದ್ದು ಅಲ್ಲಿಂದಲೇ!

    ಹಳ್ಳಿ ಬೇಸಿನ ಕಥೆ ಹೊಂದಿರೋ ಈ ಚಿತ್ರ ನಮ್ಮ ಕಣ್ಣೆದುರೇ ಮರೆಯಾಗುತ್ತಿರೋ ಅದೆಷ್ಟೋ ವಿಚಾರಗಳನ್ನೊಳಗೊಂಡಿದೆಯಂತೆ. ಹಾರರ್ ಶೈಲಿಯದ್ದಾದರೂ ಅಪರೂಪದ, ಗಟ್ಟಿ ಕಥೆಯನ್ನೊಳಗೊಂಡಿರೋ ಕಡೆಮನೆಯನ್ನು ನಂದನ್ ಕೀರ್ತನಾ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರವೀಗ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ತಯಾರಾಗಿದೆ.