ಚೆನ್ನೈ: ಮಲಯಾಳಂನ ‘ಸೂಫಿಯುಂ ಸುಜಾತಯುಂ’ ಚಿತ್ರದ ನಿರ್ದೇಶಕ ನಾರಾನಿಪುಳ ಶಾನವಾಸ್(37) ನಿಧನರಾಗಿದ್ದಾರೆ.
‘ಗಾಂಧಿರಾಜನ್’ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾಗ ಶೂಟಿಂಗ್ ಸೆಟ್ ನಲ್ಲೇ ಶಾನವಾಸ್‍ಗೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಶಾನವಾಸ್ ಅವರಿಗೆ ಮಾರ್ಗಮಧ್ಯೆ ಎರಡನೇ ಬಾರಿ ಹೃದಯಾಘಾತವಾಯಿತು. ಹೀಗಾಗಿ ಅವರ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದ್ದು, ಬುಧವಾರ ರಾತ್ರಿ 10.20ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಮಳಪುರಂ ಮೂಲದವರಾಗಿರುವ ಶಾನವಾಸನ್ ಅವರು 2015ರಲ್ಲಿ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದರು. ‘ಮಲಯಳಂ ನ ಸೂಫಿಯುಂ ಸುಜಾತಯುಂ’ ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿತ್ತು. ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾದ ಮೊದಲ ಮಲಯಾಳಂ ಚಿತ್ರವೂ ಇದಾಗಿತ್ತು. ಈ ಸಿನಿಮಾದಿಂದ ಸಿನಿಮಾದಿಂದ ಶಾನವಾಸ್ ಅವರಿಗೆ ಸಾಕಷ್ಟು ಜನಮನ್ನಣೆ ಸಿಕ್ಕಿತ್ತು. ಚಿತ್ರದಲ್ಲಿ ಬಾಲಿವುಡ್ ನಟಿ ಅದಿತಿ ರಾವ್ ಹೈದರಿ, ಜಯಸೂರ್ಯ, ದೇವ್ ಮೋಹನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
ಸದ್ಯ ಶಾನವಾಸ್ ಅಕಾಲಿಕ ನಿಧನಕ್ಕೆ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಬೆಂಗಳೂರು: ಚಲನಚಿತ್ರ ನಿರ್ದೇಶಕ, ನಟ ಬೂದಾಳ್ ಕೃಷ್ಣಮೂರ್ತಿ ಇಂದು ಬೆಳಗ್ಗೆ 7 ಗಂಟೆಯ ವೇಳೆಯಲ್ಲಿ ಕೆಂಗೇರಿ ಶಿರ್ಕಿ ಅಪಾರ್ಟಮೆಂಟಿನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಚಿತ್ರದುರ್ಗದಲ್ಲಿ 1949ರಲ್ಲಿ ಜನಿಸಿದ ಇವರು 1973ರಲ್ಲಿ ಸಿದ್ಧಲಿಂಗಯ್ಯನವರ ಬೂತಯ್ಯನ ಮಗ ಅಯ್ಯು ಚಲನಚಿತ್ರದ ಸಹಾಯಕ ನಿರ್ದೇಶಕರಾಗುವ ಮೂಲಕ ಚಿತ್ರರಂಗ ಪ್ರವೇಶಿಸಿದರು. ಎರಡು ದಂಡೆಯ ಮೇಲೆ, ಒಲವಿನ ಕಾಣಿಕೆ, ಸೀತಾಂಜನೇಯ, ಶುಭಲಗ್ನ, ಲಂಚ ಸಾಮ್ರಾಜ್ಯ ಮುಂತಾದ ಚಿತ್ರಗಳನ್ನು ಬೂದಾಳ್ ನಿರ್ದೇಶಿಸಿದ್ದರು.
ಪ್ರೊಫೆಸರ್, ಶ್ರೀಗಂಧ, ಅರಿಶಿನ ಕುಂಕುಮ, ಬಲ್ ನನ್ಮಗ, ಪ್ರಜಾಶಕ್ತಿ, ನಿರ್ಣಯ, ಆರ್ಯಭಟ ಮುಂತಾದ ಚಿತ್ರಗಳಲ್ಲಿ ಬೂದಾಳ್ ಕೃಷ್ಣಮೂರ್ತಿ ಅಭಿನಯಿಸಿದ್ದರು. ಕೆಲವು ಕಾಲದಿಂದ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಬೆಂಗಳೂರು: ಕನ್ನಡದ ಸೂಪರ್ ಹಿಟ್ ಚಿತ್ರಗಳ ನಿರ್ಮಾಪಕ ದಿನೇಶ್ ಗಾಂಧಿ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ.
ಇಂದು ಬೆಳಗ್ಗೆ ಸುಮಾರು 5.30ಕ್ಕೆ ದಿನೇಶ್ ಗಾಂಧಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ದಿನೇಶ್ ಗಾಂಧಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನ ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ದಿನೇಶ್ ಗಾಂಧಿ ಅವರಿಗೆ 52 ವರ್ಷ ವಯಸ್ಸಾಗಿತ್ತು.
ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ವೀರ ಮದಕರಿ, ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಹೂ ಸಿನಿಮಾಗಳನ್ನ ದಿನೇಶ್ ಗಾಂಧಿ ನಿರ್ಮಾಣ ಮಾಡಿದ್ದರು. ನರಸಿಂಹ ಮತ್ತು ಧಳಪತಿ ಸಿನಿಮಾಗಳು ದಿನೇಶ್ ನಿರ್ದೇಶನದಲ್ಲಿ ಮೂಡಿ ಬಂದಿದ್ದವು .
– ಪ್ರಭಾವಿ ರಾಜಕಾರಣಿಯ ಕೈವಾಡ ದೊಡ್ಡದಾಗಿದೆ
– ಸಿಸಿಬಿ ತನಿಖೆ ಅಷ್ಟು ಖುಷಿ ಕೊಟ್ಟಿಲ್ಲ
ಬೆಂಗಳೂರು: ಡ್ರಗ್ಸ್ ಮಾಫಿಯಾದಲ್ಲಿ ನಟಿಯರಷ್ಟೇ ಅಲ್ಲ ನಟರು, ರಾಜಕಾರಣಿಗಳ ಮಕ್ಕಳು, ಹಿರಿಯ ನಿರ್ದೇಶಕರ ಮಕ್ಕಳಿದ್ದಾರೆ. ಸರ್ಕಾರದಲ್ಲೇ ಕೆಲಸ ಮಾಡುತ್ತಿರುವ ಹಿರಿಯ ನಿರ್ದೇಶಕರ ಮಗನನ್ನ ಯಾಕೆ ಇನ್ನೂ ಕರೆಸಿಲ್ಲ? ಬೇರೇ ಇಲ್ಲದೆ ಇರುವವರನ್ನು ಕರೆದುಕೊಂಡು ಬಂದು ಸುಮ್ಮನೆ ವಿಚಾರಣೆ ಮಾಡುತ್ತಿದ್ದಾರೆ. ಹೀಗಾಗಿ ಇದು ಯಾವುದೇ ರಾಜಕೀಯ ಪ್ರಭಾವ ಇಲ್ಲದೆ ನಡೆಸುತ್ತಿರುವ ವಿಚಾರಣೆ ಎಂದು ನಮಗೆ ಅನ್ನಿಸುತ್ತಿಲ್ಲ ಎಂದು ನಟ, ನಿರ್ದೇಶಕ ಇಂದ್ರಜಿತ್ ಹೇಳಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ದಂಧೆಯಲ್ಲಿ ರಾಗಿಣಿ ಆ್ಯಕ್ಟಿವ್ ಮೆಂಬರ್ – ಸೆ.24ರವರೆಗೂ ರಾಗಿಣಿ, ಸಂಜನಾಗೆ ಜೈಲು ಫಿಕ್ಸ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂದ್ರಜಿತ್, ನನಗೆ ಗೊತ್ತಿರುವ ವಿಚಾರವನ್ನು ಸಿಸಿಬಿ ಮುಂದೆ ಹೇಳಿದ್ದೇನೆ. ಈ ಮೂಲಕ ಇಡೀ ಕರ್ನಾಟಕಕ್ಕೆ, ವಿದ್ಯಾರ್ಥಿಗಳಿಗೆ, ಯುವಕರಿಗೆ ಡ್ರಗ್ಸ್ ಸೇವನೆ ಮಾಡುವುದು ತಪ್ಪು ಎಂಬ ಸಂದೇಶ ಹೋಗಿದೆ. ಆದರೆ ನಾನು ಸಿಸಿಬಿಗೆ ಮಾಹಿತಿ ಕೊಟ್ಟ ನಂತರ ಆದ ಬೆಳವಣಿಗೆ ಅಷ್ಟು ಖುಷಿ, ಸಂತೋಷ ಕೊಟ್ಟಿಲ್ಲ. ಏನು ಆಗಬೇಕಿತ್ತೋ ಅದು ಇನ್ನೂ ಹೆಚ್ಚಾಗಿ ಆಗಬೇಕಿತ್ತು. ನಮ್ಮ ಪೊಲೀಸರು ಕೆಲಸ ಮಾಡುತ್ತಿದ್ದರೂ ಎಲ್ಲೋ ಒಂದುಕಡೆ ಕೈ ಕಟ್ಟಿ ಹಾಕಿರುವಾಗಿದೆ ಎಂದು ಅಭಿಪ್ರಾಯಪಟ್ಟರು.
ಡ್ರಗ್ಸ್ ಮಾಫಿಯಾದಲ್ಲಿ ನಟಿಯಷ್ಟೇ ಅಲ್ಲ ನಟರು, ರಾಜಕಾರಣಿಗಳ ಮಕ್ಕಳು, ಹಿರಿಯ ನಿರ್ದೇಶಕರ ಮಕ್ಕಳಿದ್ದಾರೆ. ಈವೆಂಟ್ ಮ್ಯಾನೇಜರ್‌ಗಳು, ಹಲವಾರು ರಾಜಕಾರಣಿಗಳು ಇದ್ದಾರೆ. ಆದರೆ ಇಲ್ಲಿ ಇಬ್ಬರೂ ನಟಿಯನ್ನು ಮಾತ್ರ ಅರೆಸ್ಟ್ ಮಾಡಿ, ಇಲ್ಲಿ ಎಲ್ಲೂ ಬೇರೇ ಇಲ್ಲದೆ ಇರುವವರನ್ನು ಕರೆದುಕೊಂಡು ಬಂದು ನಾಮಕಾವಸ್ಥೆಗೆ ಮಾಡಿದಂತೆ ಇದೆ. ಯಾವುದೇ ರಾಜಕೀಯ ವ್ಯಕ್ತಿಗಳ ಒತ್ತಡವಿಲ್ಲದೆ, ಯಾರ‍್ಯಾರು ದೊಡ್ಡ ವ್ಯಕ್ತಿಗಳಿದ್ದಾರೆ, ನಟರ ಮಕ್ಕಳು, ರಾಜಕಾರಣಿಗಳ ಮಕ್ಕಳು, ಹಿರಿಯ ನಿರ್ದೇಶಕರ ಮಕ್ಕಳನ್ನು ಕರೆಸಿ ಕೂಲಂಕುಶವಾಗಿ ವಿಚಾರಣೆ ಮಾಡಬೇಕು. ಆಗ ನಿಮ್ಮ ಬಗ್ಗೆ ನಮಗೆ ಗೌರವ ಹೆಚ್ಚಾಗುತ್ತದೆ. ಆಗ ಇಡೀ ಕರ್ನಾಟಕಕ್ಕೆ ಒಂದು ಸಂದೇಶ ಕೊಟ್ಟದಂತಾಗುತ್ತದೆ ಎಂದು ಸಿಸಿಬಿ ತನಿಖೆ ಬಗ್ಗೆ ಮಾತನಾಡಿದರು.
ಸರ್ಕಾರದಲ್ಲೇ ಕೆಲಸ ಮಾಡುತ್ತಿರುವ ಹಿರಿಯ ನಿರ್ದೇಶಕರ ಮಗನನ್ನ ಯಾಕೆ ಇನ್ನೂ ಕರೆಸಿಲ್ಲ? ಎಂದು ಪ್ರಶ್ನೆ ಮಾಡಿದರು. ಇಲ್ಲಿ ಬೇರೇ ಇಲ್ಲದೆ ಇರುವವರನ್ನು ಕರೆದುಕೊಂಡು ಬಂದು ಸುಮ್ಮನೆ ವಿಚಾರಣೆ ಮಾಡುತ್ತಿದ್ದಾರೆ. ಹೀಗಾಗಿ ಇದು ಯಾವುದೇ ರಾಜಕೀಯ ಪ್ರಭಾವ ಇಲ್ಲದೆ ನಡೆಸುತ್ತಿರುವ ವಿಚಾರಣೆ ಎಂದು ನಮಗೆ ಅನ್ನಿಸುತ್ತಿಲ್ಲ. ಇದು ಯಾವುದೇ ಲವ್ ಜಿಹಾದ್ ಅಲ್ಲ. ಡ್ರಗ್ ವಿಚಾರವನ್ನ ಡೈವರ್ಟ್ ಮಾಡಲು ಹೋಗಬೇಡಿ. ಒಬ್ಬ ನಟಿಗೆ ಲವ್ ಜಿಹಾದ್ ಮಾಡಲಿಕೆ ಸಾಧ್ಯವೇ ಎಂದು ಪ್ರಶ್ನಿಸಿದರು.
ಒಬ್ಬ ನಟಿ ಒಂದು ಬಾರಿ ಹಂದಿ, ನಾಯಿ ಅಂತ ಹೇಳಿರುವುದು. ಆದರೆ ಅದನ್ನು ಹೇಳಿಸಿಕೊಂಡಿರುವುದು ಹತ್ತತ್ತು ಸಾರಿ ಹೇಳುವ ಮೂಲಕ ಹಾಸ್ಯಾಸ್ಪದ ಮಾಡುತ್ತಿದ್ದಾರೆ ಎಂದು ಪ್ರಶಾಂತ್ ಸಂಬರಗಿಗೆ ಇಂದ್ರಜಿತ್ ಟಾಂಗ್ ನೀಡಿದರು. ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಯ ಕೈವಾಡ ದೊಡ್ಡದಾಗಿದೆ. ಕರ್ನಾಟಕದಲ್ಲಿ ಸರಿಯಿಲ್ಲ ಅನ್ನಿಸುತ್ತದೆ. ಬಿಜೆಪಿ ಸರ್ಕಾರ ಇದೆ. ಆದರೆ ಕೇಂದ್ರ ಸರ್ಕಾರಕ್ಕೆ ಸರಿಯಾದ ವಿಷಯ ರವಾನೆ ಆಗುತ್ತಿರಲಿಲ್ಲ ಎಂದರು.
ಆದಿತ್ಯ ಆಳ್ವಾನ ಇನ್ನೂ ಬಂದಿಸಿಲ್ಲ. ಎ1 ಆರೋಪಿಯನ್ನ ಬಂಧಿಸಿಲ್ಲ. 12 ದಿನಗಳ ಬಳಿಕ ಒಂದಿಬ್ಬರನ್ನ ಬಂಧಿಸಿದ್ದಾರೆ. ಆದರೆ ನಟರ ಮಕ್ಕಳು, ರಾಜಕಾರಣಿ ಮಕ್ಕಳನ್ನ ಇನ್ನೂ ಯಾಕೆ ವಿಚಾರಣೆಗೆ ಕರೆಸಿಲ್ಲ. ಸುಶಾಂತ್ ಕೇಸ್ ಕೂಡ ಸೂಸೈಡ್ ಅಂತ ಹೇಳಿದರು. ಆದರೆ ಸಿಸಿಬಿಗೆ ಕೇಸ್ ಒಪ್ಪಿಸಲಾಗಿದೆ. ಇಲ್ಲೂ ಪ್ರಭಾವಿ ನಾಯಕರು ಫೋನ್ ಮಾಡಿ ಬಿಟ್ಟು ಬಿಡಿ ಅಂತಿದ್ದಾರೆ. ಇಂದು ವಿರೋಧ ಪಕ್ಷ ಕೇಳಬೇಕಾದ ಪ್ರಶ್ನೆಯನ್ನು ಮಾಧ್ಯಮ ಕೇಳುತ್ತಿದೆ. ಪ್ರಭಾವಿ ನಾಯಕರು ಫೋನ್ ಮಾಡಿ ಬಿಟ್ಟು ಬಿಡಿ ಅಂತಿದ್ದಾರೆ ಎಂದು ಇಂದ್ರಜಿತ್ ಹೇಳಿದರು.
ಡ್ರಗ್ ಮಾಫಿಯಾ ಸಣ್ಣ ವಿಷಯ ಅಲ್ಲ. ರಾಜಕಾರಣಿ ಪುತ್ರ ಎಂದು ಆಳ್ವಾನನ್ನು ಅರೆಸ್ಟ್ ಮಾಡಿಲ್ಲ. ಸರ್ಕಾರದಲ್ಲಿ ಕೆಲಸ ಮಾಡುತ್ತಿರುವ ನಿರ್ದೇಶಕನ ಪುತ್ರ ಇದ್ದಾನೆ. ಅವನು ಪೆಡ್ಲರ್, ಅವನನ್ನ ಯಾಕೆ ಕರೆದು ವಿಚಾರಣೆ ಮಾಡುತ್ತಿಲ್ಲ. ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ತ್ಯಾಪೆ ಕೆಲಸ ಮಾಡಬೇಡಿ. ವಿಚಾರಣೆಯನ್ನ ಕೇವಲ ನೆಪವಾಗಿ ಮಾಡಬೇಡಿ. ರಾಜಕೀಯ ಪಕ್ಷದ ಮಕ್ಕಳನ್ನ ಕರೆಸಬೇಕು. ಹಳೆಯ ಡ್ರಗ್ ಪ್ರಕರಣಗಳನ್ನ ಕೆದಕಿದರೆ ಇನ್ನೂ ಸಾಕಷ್ಟು ಪ್ರಕರಣ ಬಯಲಿಗೆ ಬರುತ್ತೆ. ಆದರೆ ಈಗ ಪ್ರಕರಣದ ತನಿಖೆ ಬೇರೆ ಸ್ವರೂಪವನ್ನು ಪಡೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾರಿಗೆ ರಾಜಕೀಯ ಪ್ರಭಾವ ಇಲ್ಲ ಅಂತವರನ್ನ ಕರೆದು ವಿಚಾರಣೆ ಮಾಡುತ್ತಿದ್ದಾರೆ. ಯಾರು ಸರ್ಕಾರದಿಂದ ಈ ಪ್ರಕರಣ ಮುಚ್ಚು ಹಾಕಲು ಒತ್ತಡ ಹಾಕ್ತಿರೋರು? ಆ ವಿಚಾರ ಯಾರು ಮಾತನಾಡುತ್ತಿಲ್ಲ. ಅವರಿಗೂ ಡ್ರಗ್ ಮಾಫಿಯಾಗೂ ಏನ್ ಕನೆಕ್ಷನ್ ಇದೆ? ಅನ್ನೋದರ ಬಗ್ಗೆ ತನಿಖೆ ಆಗಬೇಕು. ಡ್ರಗ್ ಮಾಫಿಯಾ ಚಿಕ್ಕ ವಿಷಯ ಅಲ್ಲ. ಚಿಕ್ಕ ಮಕ್ಕಳಿಗೆ ಚಾಕ್ಲೇಟ್ ರೀತಿ ಸಿಗುತ್ತಿದೆ. ತನಿಖೆ ಸರಿಯಾಗಿ ಆದರೆ ಪೆಟ್ಟಿಗೆಯಲ್ಲಿರುವ ಶವಗಳು ಆಚೆ ಬರುತ್ತದೆ ಎಂದು ಇಂದ್ರಜಿತ್ ಹೇಳಿದರು.
ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬದ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು, ಎಚ್‍ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಹಿರಿಯ ಪುತ್ರ ಸೂರಜ್ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಎಚ್.ಡಿ.ರೇವಣ್ಣ ಹಿರಿಯ ಪುತ್ರ ಡಾ.ಸೂರಜ್ ರೇವಣ್ಣ ಹಾಸನದ ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಇದೀಗ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಡಾ.ಸೂರಜ್ ರೇವಣ್ಣ ಹೊಳೆನರಸೀಪುರ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಅವರ ವಿರುದ್ಧ ಯಾರೊಬ್ಬರೂ ನಾಮಪತ್ರ ಸಲ್ಲಿಸದಿದ್ದರಿಂದ ಸೂರಜ್ ರೇವಣ್ಣ ಹೆಚ್‍ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಡಿಸಿಸಿ ಬ್ಯಾಂಕ್ ನಿರ್ದೇಶಕರಾಗುವ ಮೂಲಕ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬದ ಮತ್ತೊಂದು ಕುಡಿ ನೇರವಾಗಿ ರಾಜಕೀಯ ಅಖಾಡಕ್ಕೆ ಎಂಟ್ರಿ ಕೊಟ್ಟಿದೆ. ಪ್ರಜ್ವಲ್ ರೇವಣ್ಣ ಬಳಿಕ ಸೂರಜ್ ರೇವಣ್ಣ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಬೆಂಗಳೂರು: ‘ರಾಜಕುಮಾರ’ ಸಿನಿಮಾ ಖ್ಯಾತಿಯ ನಿರ್ದೇಶಕ ಸಂತೋಷ್ ಆನಂದ್ ರಾಮ್ ತಂದೆಯಾದ ಸಂತಸದಲ್ಲಿದ್ದು, ಅವರ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಸಂತೋಷ್ ಆನಂದ್ ರಾಮ್ ಪತ್ನಿ ಸುರಭಿ ಹತ್ವಾರ್ ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ನಿರ್ದೇಶಕರ ಮನೆಗೆ ಹೊಸ ಅತಿಥಿಯ ಆಗಮನವಾಗಿದ್ದು, ಕುಟುಂಬದವರು ಸಂಭ್ರಮ ಪಡುತ್ತಿದ್ದಾರೆ. ಈ ಬಗ್ಗೆ ಸಂತೋಷ್ ಸೋಶಿಯಲ್ ಮೀಡಿಯಾದಲ್ಲಿ ತಾವು ತಂದೆಯಾಗಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ.
“ನಾನು ಗಂಡು ಮಗುವಿನ ತಂದೆಯಾಗಿದ್ದಾನೆ. ನಿಮ್ಮೆಲ್ಲರ ಶುಭಾಶಯಗಳಿಗಾಗಿ ನಮ್ಮ ಕುಟುಂಬದ ಪರವಾಗಿ ಧನ್ಯವಾದಗಳು. ಈ ಮೂಲಕ ನಮ್ಮ ಕುಟುಂಬ ದೊಡ್ಡದಾಗಿದೆ. ಅಮ್ಮ-ಮಗ ಕ್ಷೇಮವಾಗಿದ್ದಾರೆ. ನಿಮ್ಮ ಆಶೀರ್ವಾದ ನಮ್ಮ ಶ್ರೀರಕ್ಷೆ” ಎಂದು ಬರೆದುಕೊಳ್ಳುವ ಮೂಲಕ ತಂದೆಯಾಗಿರುವ ಖುಷಿಯನ್ನು ಶೇರ್ ಮಾಡಿಕೊಂಡಿದ್ದಾರೆ. ನಿರ್ದೇಶಕರು ಟ್ವೀಟ್ ಮಾಡಿದ ತಕ್ಷಣ ಅನೇಕರು ವಿಶ್ ಮಾಡುತ್ತಿದ್ದಾರೆ.
ಸಂತೋಷ್ ಆನಂದ್ ರಾಮ್ ಫೆಬ್ರವರಿ 2018ರಲ್ಲಿ ಬಳ್ಳಾರಿ ಮೂಲದ ಸುರಭಿ ಹತ್ವಾರ್ ಜೊತೆ ಸಪ್ತಪದಿ ತುಳಿದಿದ್ದರು. ಬೆಂಗಳೂರಿನ ಜೆ.ಪಿ ನಗರದ ಸಿಂಧೂರಿ ಕನ್ವೆಂಷನ್ ಸೆಂಟರಿನಲ್ಲಿ ಆರತಕ್ಷತೆ ನಡೆದಿತ್ತು. ಅದ್ಧೂರಿಯಾಗಿ ನಡೆದ ಆರತಕ್ಷತೆ ಸಮಾರಂಭಕ್ಕೆ ಕನ್ನಡ ಚಿತ್ರೋದ್ಯಮದ ಅನೇಕ ಗಣ್ಯರು ಬಂದು ಶುಭಾಶಯ ತಿಳಿಸಿದ್ದರು.
ಸ್ಯಾಂಡಲ್‍ವುಡ್‍ನಲ್ಲಿ ‘ಮಿಸ್ಟರ್ ಆ್ಯಂಡ್ ಮಿಸಸ್ ರಾಮಚಾರಿ’ ಸಿನಿಮಾದ ಮೂಲಕ ನಿರ್ದೇಶನಕ್ಕೆ ಎಂಟ್ರಿ ಕೊಟ್ಟ ಸಂತೋಷ್ ಆನಂದ್ ರಾಮ್ ಅವರ ಮೊದಲ ಚಿತ್ರವೇ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಎರಡನೇ ಚಿತ್ರ ‘ರಾಜಕುಮಾರ’ ಕೂಡ ಅದ್ಧೂರಿ ಹಿಟ್ ಚಿತ್ರ. ಇದೀಗ ಸಂತೋಷ್ ಆನಂದ್ ರಾಮ್, ಪುನೀತ್ ರಾಜ್‍ಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದಾರೆ.
Blessed with A Baby Boy👦(17-08-2020) Thanks to My extended Family for ur Constant wishes & Blessings To My Life🤗ಅಮ್ಮ-ಮಗ ಕ್ಷೇಮವಾಗಿದ್ದರೆ 😍ನಿಮ್ಮ ಆಶೀರ್ವಾದ ನಮ್ಮ ಶ್ರೀರಕ್ಷೆ🙏🙏🙏
ಬೆಂಗಳೂರು: ನಟ, ನಿರ್ದೇಶಕ ಜೋಗಿ ಪ್ರೇಮ್ ಅವರ ತಾಯಿ ಭಾಗ್ಯಮ್ಮ (75) ನಿಧನರಾಗಿದ್ದಾರೆ
ಭಾಗ್ಯಮ್ಮ ಕೆಲವು ತಿಂಗಳಿನಿಂದ ಲ್ಯುಕೇಮಿಯಾ ಕ್ಯಾನ್ಸರ್ ನಿಂದ (ರಕ್ತ ಕ್ಯಾನ್ಸರ್) ಬಳಲುತ್ತಿದ್ದರು. ಹೀಗಾಗಿ ಬೆಂಗಳೂರಿನ ಜಯನಗರದ ಶಾಂತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರೇಮ್ ಅವರ ತಾಯಿ ಶುಕ್ರವಾರ ರಾತ್ರಿ ಸುಮಾರು 9 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.
ಅತ್ತೆ ಭಾಗ್ಯಮ್ಯ ಅವರ ನಿಧನದ ಸುದ್ದಿಯನ್ನು ರಕ್ಷಿತಾ ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಭಾಗ್ಯಮ್ಮ ಅವರಿಗೆ ಪ್ರೇಮ್ ಮತ್ತು ಅರುಣ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
ಭಾಗ್ಯಮ್ಮ ಅವರಿಗೆ ಕೊರೊನಾ ಪರೀಕ್ಷೆ ಮಾಡಿಸಿದ್ದು, ವರದಿ ನೆಗೆಟಿವ್ ಬಂದಿದೆ. ಇಂದು ಮಂಡ್ಯದ ಬೆಸಗರಹಳ್ಳಿ ಫಾರ್ಮ್ ಹೌಸ್‍ನಲ್ಲಿ ಅಂತ್ಯಕ್ತಿಯೆ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಬೆಂಗಳೂರು: ಕನ್ನಡದ ಎದೆಗಾರಿಕೆಯ ನಿರ್ದೇಶಕಿ ಅಂತಾನೇ ಪ್ರಖ್ಯಾತಿ ಪಡೆದುಕೊಂಡಿದ್ದ ಸುಮನಾ ಕಿತ್ತೂರ್ ಕೊರೊನಾ ಕಾಲದಲ್ಲಿ ಹೊಸ ಬಾಳಿಗೆ ಎಂಟ್ರಿಕೊಟ್ಟಿದ್ದಾರೆ.
ಸುಮನಾ ಕಿತ್ತೂರು ಕೆಲ ಸಮಯದಿಂದ ಪಾಂಡಿಚೇರಿಯಲ್ಲಿ ನೆಲೆಸಿದ್ದು ಅಲ್ಲಿಯೇ ಶಿವಮೊಗ್ಗ ಮೂಲದ ಎಂಜಿನಿಯರ್ ಶ್ರೀನಿವಾಸ್ ಅವರನ್ನು ಮದುವೆಯಾಗಿದ್ದಾರೆ. ಈಗ ಸುಮನಾ ಅವರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಗೆಳೆಯ ಶ್ರೀನಿವಾಸ್ ಅವರನ್ನು ಕುವೆಂಪು ಅವರ ‘ಮಂತ್ರ ಮಾಂಗಲ್ಯ’ ವಿವಾಹ ಪದ್ದತಿಯ ಮೂಲಕ ಕುಪ್ಪಳ್ಳಿಯಲ್ಲೇ ವಿವಾಹವಾಗಬೇಕೆಂದು ಸುಮನಾ ಬಯಸಿದ್ದರು. ಆದರೆ ಕೋವಿಡ್ 19 ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‍ಡೌನ್ ಜಾರಿಯಾದ ಕಾರಣ ಪಾಂಡಿಚೇರಿಯಲ್ಲಿ ಮದುವೆಯಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸುಮನಾ ಅವರು, ಎರಡೂ ಕುಟುಂಬಗಳ ಸಮ್ಮುಖದಲ್ಲಿ ಸರಳವಾಗಿ ನಮ್ಮ ವಿವಾಹ ನಡೆದಿದೆ. ಏಪ್ರಿಲ್ ನಲ್ಲಿ ಲಾಕ್‍ಡೌನ್ ತೆರವಾದ ಬಳಿಕ ಕುವೆಂಪು ಅವರ ಹುಟ್ಟೂರು ಕುಪ್ಪಳ್ಳಿಯಲ್ಲಿ ಮಂತ್ರ ಮಾಂಗಲ್ಯ ಪದ್ದತಿಯ ಪ್ರಕಾರ ವಿವಾಹವಾಗಬೇಕೆಂದು ಬಯಸಿದ್ದೆವು. ಆದರೆ ಈ ಆಸೆ ಈ ಸಮಯದಲ್ಲಿ ಕಷ್ಟ ಸಾಧ್ಯವಾಗಿದ್ದರಿಂದ ಪಾಂಡಿಚೇರಿಯಲ್ಲಿ ಸರಳವಾಗಿ ನಮ್ಮ ವಿವಾಹ ನಡೆಯಿತು ಎಂದು ತಿಳಿಸಿದ್ದಾರೆ.
ಸುಮನಾ ಅವರ ಗೆಳೆಯ ಶ್ರೀನಿವಾಸ್ ಅವರ ಕುಟುಂಬ ಕೆಲ ವರ್ಷಗಳಿಂದ ಪಾಂಡಿಚೇರಿಯಲ್ಲಿ ನೆಲೆಸಿದೆ. ಮುಂದೆ ಕರ್ನಾಟಕದಲ್ಲಿ ನೆಲೆಸುವ ನಿರ್ಧಾರವನ್ನು ದಂಪತಿ ಮಾಡಿದ್ದಾರೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಕಿತ್ತೂರಿನಲ್ಲಿ ಜನಿಸಿದ ಇವರು ಕಳ್ಳರ ಸಂತೆ, ಸ್ಲಂ ಬಾಲ, ಎದೆಗಾರಿಕೆ, ಕಿರಗೂರಿನ ಗಯ್ಯಾಳಿಗಳು ಸಿನಿಮಾವನ್ನು ಸುಮನಾ ಕಿತ್ತೂರು ನಿರ್ದೇಶನ ಮಾಡಿದ್ದಾರೆ. ಕಳ್ಳರ ಸಂತೆ, ಎದೆಗಾರಿಕೆ, ಕಿರಗೂರಿನ ಗಯ್ಯಾಳಿಗಳು ಸಿನಿಮಾಗಳಿಗೆ ರಾಜ್ಯ ಪ್ರಶಸ್ತಿ ಬಂದಿದೆ.
ಚೆನ್ನೈ: ರಸ್ತೆ ಅಪಘಾತದಲ್ಲಿ ತಮಿಳಿನ ಯುವ ನಿರ್ದೇಶಕರೊಬ್ಬರು ಕೊಯಮತ್ತೂರಿನ ಮೆಟ್ಟುಪಾಳ್ಯಂ ಸಮೀಪ ಮೃತಪಟ್ಟಿದ್ದಾರೆ.
ಎ.ವಿ.ಅರುಣ್ ಪ್ರಸಾದ್ ಅಲಿಯಾಸ್ ವೆಂಕಟ್ ಪಕ್ಕರ್ ಮೃತ ಯುವ ನಿರ್ದೇಶಕ. ಪ್ರಸಾದ್ ಅವರು ಬೈಕಿನಲ್ಲಿ ಹೋಗುತ್ತಿದ್ದಾಗ ಲಾರಿಯೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಪ್ರಸಾದ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
Heartbroken by the sudden demise of the young director and my ex-assistant, Arun. You were always sweet, positive and hardworking. My prayers are forever with you and my deepest condolences to your family and friends.🙏 pic.twitter.com/ZA6kvfcYLj
— Shankar Shanmugham (@shankarshanmugh) May 15, 2020
ಮೃತ ಪ್ರಸಾದ್ ಖ್ಯಾತ ನಿರ್ದೇಶಕ ಶಂಕರ್ ಅವರ ಬಳಿ ವೆಂಕಟ್ ಪಕ್ಕರ್ ಎಂಬ ಹೆಸರಿನಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ವಿಕ್ರಮ್ ಅಭಿನಯದ ‘ಐ’ ಸೇರಿದಂತೆ ಹಲವು ಚಿತ್ರಗಳಿಗೆ ಕೆಲಸ ಮಾಡಿದ್ದರು. ಹೀಗಾಗಿ ನಿರ್ದೇಶಕ ಶಂಕರ್ ಪ್ರಸಾದ್ ಸಾವಿಗೆ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.
“ಯುವ ನಿರ್ದೇಶಕ ಮತ್ತು ನನ್ನ ಮಾಜಿ ಸಹಾಯಕ ಅರುಣ್ ಸಾವಿನ ಸುದ್ದಿ ಕೇಳಿ ನನಗೆ ತುಂಬಾ ನೋವಾಯಿತು. ನೀವು ಯಾವಾಗಲು ಸಿಹಿಯಾದ, ಸಕಾರಾತ್ಮಕ ಮತ್ತು ಕಠಿಣ ಪರಿಶ್ರಮಿಯಾಗಿದ್ದಿರಿ. ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಸಂತಾಪ ಸೂಚಿಸಿದ್ದಾರೆ.
‘4ಜಿ’ ಸಿನಿಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಪ್ರಸಾದ್ ಪರಿಚಿತರಾಗುತ್ತಿದ್ದರು. ಈ ಚಿತ್ರದಲ್ಲಿ ಜಿ.ವಿ. ಪ್ರಕಾಶ್ ಮತ್ತು ಗಾಯತ್ರಿ ಸುರೇಶ್ ಪ್ರಮುಖ ತಾರಾಗಣ ಅಭಿನಯಿಸಿದ್ದಾರೆ. ಆದರೆ ಅವರ ಮೊದಲ ಚಿತ್ರ ಇನ್ನೂ ಬಿಡುಗಡೆಯಾಗಿರಲಿಲ್ಲ. ಹೀಗಾಗಿ ಸಿನಿಮಾ ತೆರೆಕಾಣುವ ಮೊದಲೇ ಅರುಣ್ ಮೃತಪಟ್ಟಿದ್ದಾರೆ.
எப்போதும் நட்போடும் நம்பிக்கையோடும் பழகும் ஒரு இனிய சகோதரன் என் இயக்குனர் வெங்கட் பாக்கர் சாலை விபத்தில் மரணமடைந்த செய்தி கேட்டு மிகுந்த துயருற்றேன்… அவரை இழந்து வாடும் உறவினர்களுக்கும் நண்பர்களுக்கும் என் ஆழ்ந்த இரங்கல்.. நண்பரின் ஆன்மா இறைவனடி இளைப்பாறட்டும் @AVArunPrasath 😭 pic.twitter.com/wQvtoYOTTF
ಬೆಂಗಳೂರು: ಲಾಕ್‍ಡೌನ್ ನಡುವೆಯೂ ಅನೇಕ ನಟ-ನಟಿಯರು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಲಾಕ್‍ಡೌನ್ ನಡುವೆ ಸ್ಯಾಂಡಲ್‍ವುಡ್‍ನಲ್ಲಿ ಮತ್ತೊಂದು ಮದುವೆ ಸಂಭ್ರಮ ನಡೆದಿದೆ.
ಸ್ಯಾಂಡಲ್‍ವುಡ್ ಖ್ಯಾತ ನಿರ್ದೇಶಕ ಎ.ಪಿ.ಅರ್ಜುನ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅರ್ಜುನ್ ಹಾಸನ ಮೂಲದ ಬಿ.ಆರ್.ಅನ್ನಪೂರ್ಣ ಜೊತೆ ಸರಳವಾಗಿ ಮದುವೆಯಾಗಿದ್ದಾರೆ. ರಾಮಸಂದ್ರದ ಮಹಾಲಕ್ಷ್ಮಿ ಎನ್‍ಕ್ಲೇವ್ ನಲ್ಲಿ ಅರ್ಜುನ್ ಮತ್ತು ಅನ್ನಪೂರ್ಣ ಸಪ್ತಪದಿ ತುಳಿದ್ದಾರೆ.
ಲಾಕ್‍ಡೌನ್ ಹಿನ್ನೆಲೆಯಲ್ಲಿ ಅರ್ಜುನ್ ಮದುವೆಗೆ ಸ್ಯಾಂಡಲ್‍ವುಡ್ ಕಲಾವಿದರು ಬರಲು ಸಾಧ್ಯವಾಗಿಲ್ಲ. ಆದರೆ ಕೆಲವೇ ಆಪ್ತರ ಸಮ್ಮುಖದಲ್ಲಿ ಅರ್ಜುನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆಗೆ ನಟ ಧ್ರುವ ಸರ್ಜಾ ಮತ್ತು ಕಿಸ್ ಸಿನಿಮಾ ಖ್ಯಾತಿಯ ವಿರಾಟ್ ಸೇರಿದಂತೆ ಕೆಲ ಕಲಾವಿದರು ಮಾತ್ರ ಭಾಗಿಯಾಗಿದ್ದು, ನವ ಜೋಡಿಗೆ ಶುಭಾ ಹಾರೈಸಿದ್ದಾರೆ.
ನಿರ್ದೇಶಕ ಎ.ಪಿ.ಅರ್ಜುನ್ ‘ತಂಗಿಗಾಗಿ’ ಸಿನಿಮಾದಲ್ಲಿ ಗೀತರಚನೆಕಾರನಾಗಿ ಚಿತ್ರರಂಗಕ್ಕೆ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅರ್ಜುನ್ ಅವರು ‘ಅಂಬಾರಿ’, ‘ಅದ್ಧೂರಿ’, ‘ಐರಾವತ’, ಮತ್ತು ‘ರಾಟೆ’ ಸಿನಿಮಾಗಳಲ್ಲಿ ನಿರ್ದೇಶಿಸುವ ಮೂಲಕ ಹೆಸರುವಾಸಿಯಾಗಿದ್ದಾರೆ. ಗೀತರಚನೆಕಾರರಾಗಿ ಹಲವು ಸಿನಿಮಾಗಳಿಗೆ ಕೆಲಸ ಮಾಡಿದ್ದು, ಸಹಾಯಕ ನಿರ್ದೇಶಕನಾಗಿಯೂ ಕೂಡ ಕೆಲ ಚಿತ್ರಗಳಲ್ಲಿ ಕೆಲಸ ಮಾಡಿದ್ದರು.
ಕಳೆದ ವರ್ಷ ಅರ್ಜುನ್ ನಿರ್ದೇಶನದ ‘ಕಿಸ್’ ಸಿನಿಮಾ ರಿಲೀಸ್ ಆಗಿ ಯಶಸ್ವಿ ಕಂಡಿತ್ತು. ಈ ಚಿತ್ರದಲ್ಲಿ ನಾಯಕನಾಗಿ ವಿರಾಟ್ ಮತ್ತು ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದರು. ನಟ ನಿಖಿಲ್ ಕುಮಾರಸ್ವಾಮಿ ಮುಂದಿನ ಸಿನಿಮಾಕ್ಕೂ ಇವರೇ ನಿರ್ದೇಶನದ ಜವಾಬ್ದಾರಿ ಹೊರಲಿದ್ದಾರೆ ಎಂದು ತಿಳಿದು ಬಂದಿದೆ.