Tag: dipak misra

  • ಭಾರತದ 45ನೇ ಮುಖ್ಯನ್ಯಾಯಾಧೀಶರಾಗಿ ದೀಪಕ್ ಮಿಶ್ರಾ ಪ್ರಮಾಣವಚನ

    ಭಾರತದ 45ನೇ ಮುಖ್ಯನ್ಯಾಯಾಧೀಶರಾಗಿ ದೀಪಕ್ ಮಿಶ್ರಾ ಪ್ರಮಾಣವಚನ

    ನವದೆಹಲಿ: ನ್ಯಾ. ದೀಪಕ್ ಮಿಶ್ರಾ ಅವರು ಇಂದು ಭಾರತದ 45ನೇ ಮುಖ್ಯನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

    ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‍ನಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್, ಮಿಶ್ರಾ ಅವರಿಗೆ ಪ್ರಮಾಣವಚನ ಬೋಧಿಸಿದ್ರು. ದೇವರ ಹೆಸರಿನಲ್ಲಿ ಮಿಶ್ರಾ ಪ್ರಮಾಣವಚನ ಸ್ವೀಕರಿಸಿದ್ರು.

    2018ರ ಅಕ್ಟೋಬರ್ 2ವರೆಗೆ 13 ತಿಂಗಳು ಹಾಗೂ 6 ದಿನಗಳ ಕಾಲ ಮಿಶ್ರಾ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾ. ಜೆಎಸ್ ಖೆಹರ್ ಶುಕ್ರವಾರದಂದು ನಿವೃತ್ತರಾದ್ರು. ಸ್ಥಾಪಿತ ರೂಢಿಯಂತೆ ಕಳೆದ ತಿಂಗಳು ಖೆಹರ್, ಮಿಶ್ರಾ ಅವರನ್ನ ಮುಖ್ಯನ್ಯಾಯಾಧೀಶರಾಗಿ ನೇಮಿಸಿದ್ದರು.

    2011ರ ಅಕ್ಟೋಬರ್‍ನಲ್ಲಿ ಸುಪ್ರೀಂ ಕೋರ್ಟ್‍ನ ನ್ಯಾಯಾಧೀಶರಾಗುವುದಕ್ಕೂ ಮುನ್ನ ಮಿಶ್ರಾ ಅವರು ಪಾಟ್ನಾ ಹೈಕೋರ್ಟ್ ಹಾಗೂ ದೆಹಲಿ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿದ್ರು. 1977ರಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ ಮಿಶ್ರಾ ಒಡಿಶಾ ಹೈಕೋರ್ಟ್‍ನಲ್ಲಿ ಸಾಂವಿಧಾನಿಕ, ಸಿವಿಲ್, ಕ್ರಿಮಿನಲ್, ರೆವೆನ್ಯೂ, ಸವೀರ್ಸ್ ಮತ್ತು ಮಾರಾಟ ತೆರಿಗೆಯಲ್ಲಿ ಪ್ರಾಕ್ಟೀಸ್ ಮಾಡ್ತಿದ್ರು. 1996ರ ಜನವರಿ 17ರಂದು ಮಿಶ್ರಾ ಅವರನ್ನ ಒಡಿಶಾ ಹೈಕೋರ್ಟ್‍ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕ ಮಾಡಲಾಯ್ತು. ನಂತರ ಮಧ್ಯಪ್ರದೇಶ ಹೈಕೋರ್ಟ್‍ಗೆ ವರ್ಗಾವಣೆಯಾದ್ರು. 1997ರ ಡಿಸೆಂಬರ್ 19ರಂದು ಶಾಶ್ವತ ನ್ಯಾಯಾಧೀಶರಾದ್ರು.

    ಕಾವೇರಿ ಹಾಗೂ ಕೃಷ್ಣಾ ನದಿಗಳ ವಿವಾದದ ಕುರಿತು ವಿಚಾರಣೆ ನಡೆಸುತ್ತಿರುವ ಪೀಠಕ್ಕೆ ಸದ್ಯ ನ್ಯಾ. ಮಿಶ್ರಾ ಅವರು ನೇತೃತ್ವ ವಹಿಸಿಕೊಂಡಿದ್ದಾರೆ. ಅಲ್ಲದೆ ಬಿಸಿಸಿಐ ಸುಧಾರಣೆ, ಸಹಾರಾ ಕೇಸ್ ಹಾಗೂ ಇನ್ನಿತರೆ ಕೇಸ್‍ಗಳನ್ನು ಇವರು ವಿಚಾರಣೆ ನಡೆಸುತ್ತಿದ್ದಾರೆ.

    ಇಂದಿನ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಹಾಗೂ ಹಲವಾರು ಕೇಂದ್ರ ಮಂತ್ರಿಗಳು ಹಾಜರಿದ್ರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಜ್ಯಸಭಾದ ವಿರೋಧಪಕ್ಷ ನಾಯಕ ಗುಲಾಮ್ ನಬೀ ಆಜಾದ್ ಕೂಡ ಸಮಾರಂಭದಲ್ಲಿ ಭಾಗವಹಿಸಿದ್ರು.