Tag: Dinesh Kallahalli

  • ಎಂಬಿ ಪಾಟೀಲ್‌ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ – ರಾಜ್ಯಪಾಲರಿಗೆ ದೂರು ಸಲ್ಲಿಕೆ

    ಎಂಬಿ ಪಾಟೀಲ್‌ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ – ರಾಜ್ಯಪಾಲರಿಗೆ ದೂರು ಸಲ್ಲಿಕೆ

    ಬೆಂಗಳೂರು: ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ (MB Patil) ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ಗೆ (Thawar Chand Gehlot) ದೂರು ಸಲ್ಲಿಕೆಯಾಗಿದೆ.

    ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ (Dinesh Kallahalli) ಅವರು ಇಂದು ರಾಜಭವನಕ್ಕೆ ತೆರಳಿ ದೂರು ನೀಡಿದ್ದಾರೆ.

    ಆರೋಪ ಏನು?
    ಎಂಬಿ ಪಾಟೀಲ್‌ ಅವರು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (KIADB) ಭೂಮಿಯನ್ನು ಕಾನೂನು ಬಾಹಿರವಾಗಿ ಹಂಚಿಕೆ ಮಾಡಿದ್ದಾರೆ. ನಿಯಮದ ಪ್ರಕಾರ ಆನ್‌ಲೈನ್‌ನಲ್ಲಿ ಪ್ರಕ್ರಿಯೆ ನಡೆಸಬೇಕಿತ್ತು. ಆದರೆ ಇವರು ಕೈಗಾರಿಕೆ ನಡೆಸದ ಕಂಪನಿಗಳಿಗೆ ಹಂಚಿಕೆ ಮಾಡಿದ್ದಾರೆ.  ಬಿಡದಿ, ವಸಂತನರಸಾಪುರ, ಕೋಲಾರ ನರಸಾಪುರ, ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶಗಳಲ್ಲಿ ನಿವೇಶನ‌ ಹಂಚಿಕೆಯಲ್ಲಿ ಅಕ್ರಮ‌ ಎಸಗಲಾಗಿದೆ. ಕಾನೂನು ಬಾಹಿರವಾಗಿ ನಿಯಮಗಳನ್ನು ಗಾಳಿಗೆ ತೂರಿ ನಿವೇಶನ ಹಂಚಿಕೆ ಮಾಡಲಾಗಿದೆ . ಇವರ ಕೆಲಸಗಳಿಗೆ ಕೆಲ ಅಧಿಕಾರಿಗಳು ಸಾಥ್‌ ನೀಡಿದ್ದಾರೆ. ಈ ಅಕ್ರಮ ಹಂಚಿಕೆಯಿಂದ ಕೆಐಎಡಿಬಿಗೆ ಕೋಟ್ಯಂತರ ರೂ. ನಷ್ಟವಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

    ಎಂ.ಬಿ ಪಾಟೀಲ್ ಮೇಲಿನ ದೂರಿನ ಪ್ರಮುಖ ಆರೋಪಗಳೆನು…?

    * ಕಂಪನಿಗಳಿಗೆ ಸಿ.ಎ ಜಮೀನು ಹಂಚಿಕೆಯಾಗಿದೆ. ಕೈಗಾರಿಕೆ ನಡೆಸದ ಕಂಪನಿಗಳಿಗೂ ಕೆಐಎಡಿಬಿಯು ತನ್ನ ನಿಯಮ 7ನ್ನು ಉಲ್ಲಂಘಿಸಿ ಸಿ.ಎ ನಿವೇಶನಗಳನ್ನು ಮಂಜೂರಾತಿ ಮಾಡಲಾಗಿದೆ. ಕೆಐಎಡಿಬಿಯ ಈ ಅಕ್ರಮದಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರುಪಾಯಿ ನಷ್ಟ ಉಂಟಾಗಿದೆ

    * ಭೂಮಿಗೆ ಹೆಚ್ಚಿನ ಬೇಡಿಕೆ ಇರುವ ಕೈಗಾರಿಕಾ ಪ್ರದೇಶಗಳಲ್ಲಿ ಇರುವ ಸಿಎ ನಿವೇಶನಗಳನ್ನು ಹಂಚಿಕೆ ಮಾಡಿದ್ದು, ಪಾರದರ್ಶಕತೆ ಕಾಯ್ದುಕೊಂಡಿಲ್ಲ. ಭೂಮಿ ಹಂಚಿಕೆ ಮಾಡುವ ನಕ್ಷೆಯನ್ನು ಬದಲಾಯಿಸಿ ಸಿಎ ಜಮೀನು ಹಂಚಿಕೆ ಮಾಡಲಾಗಿದೆ.

    * ಮಂಡಳಿಯಲ್ಲಿ ಖಾಲಿ ಇರುವ ಸಿ.ಎ/ಅಮಿನಿಟಿ ನಿವೇಶನಗಳನ್ನು ವಿಲೇವಾರಿ ಮಾಡುವ ಕುರಿತು ದಿನಾಂಕ: 05-02-2024 ಮತ್ತು ದಿನಾಂಕ: 07-02 2024 ರಂದು ಸಾರ್ವಜನಿಕ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿರುತ್ತದೆ. ನಂತರ ಸದರಿ ಪತ್ರಿಕಾ ಪ್ರಕಟಣೆಗೆ ಅರ್ಜಿ ಸಲ್ಲಿಸಲಾದ ಉದ್ದಿಮೆದಾರ ಪ್ರಸ್ತಾವನೆಗಳನ್ನು ದಿನಾಂಕ:05-03-2024 ರಂದು ನಡೆದ ರಾಜ್ಯಮಟ್ಟದ ಏಕಗಾವಾಕ್ಷಿ ಸಮಿತಿ ಸಭೆಯ ಮುಂದೆ ಮಂಡಿಸಿ ಅರ್ಹ ಉದ್ದಿಮೆದಾರರ ಅರ್ಜಿಗಳನ್ನು ಪರಿಗಣಿಸದೇ ತಮಗೆ ಬೇಕಾದ ಉದ್ದಿಮೆದಾರರಿಗೆ ಸಭೆಯಲ್ಲಿ ಅನುಮೋದನೆ ಮಾಡಿ ಅವರಿಗೆ ಬಾರಿ ಅನುಕೂಲ ಮಾಡಿಕೊಟ್ಟಿದ್ದಾರೆ.

    * ಸಂಪೂರ್ಣ ಪ್ರಕ್ರಿಯೆಯನ್ನು ಆನ್‌ಲೈನ್‌ ಮುಖಾಂತರ ಮಾಡಬೇಕಾಗಿತ್ತು, ಆದರೆ ಆಫ್ ಲೈನ್ ಮುಖೇನ ಮಾಡಿರುವುದು ಭಾರಿ ಅಕ್ರಮಕ್ಕೆ ಕಾರಣವಾಗಿದೆ.

    * ಸಚಿವರಾದ ಎಂ.ಬಿ ಪಾಟೀಲ್ ಅವರು ಅಧಿಕಾರಿಗಳಿಗೆ ಕರ್ತವ್ಯದಲ್ಲಿ ಅಕ್ರಮ ಎಸಗುವಂತೆ ಒತ್ತಡ ಸೃಷ್ಟಿ ಮಾಡಿರುವುದರಿಂದ ಸಚಿವರ ಪ್ರಭಾವಪ್ರಭಾವಕ್ಕೆ ಒಳಗಾಗಿ 1) ಡಾ. ಎಸ್. ಸೆಲ್ವಕುಮಾರ್, (IAS) ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಸರ್ಕಾರ, 2) ಡಾ.ಮಹೇಶ್ ಎಂ. (IAS) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಕಾರ್ಯನಿರ್ವಾಹಕ ಸದಸ್ಯರು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (KIADB) 3) ಶ್ರೀಮತಿ ಗುಂಜನ್ ಕೃಷ್ಣ, (IAS) ಕೈಗಾರಿಕಾ ಅಭಿವೃದ್ಧಿ ಆಯುಕ್ತರು ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕರು ಮತ್ತು ಸದಸ್ಯ ಕಾರ್ಯದರ್ಶಿ, (SLSSWCC) ಈ ಅಧಿಕಾರಿಗಳು ಅಕ್ರಮಕ್ಕೆ ಸಹಕಾರ ನೀಡಿದ್ದಾರೆ.

    * ಅತ್ಯಂತ ಬೆಲೆಬಾಳುವ ಸಿ.ಎ ಪ್ರದೇಶಗಳನ್ನು ಬಹಿರಂಗ ಹರಾಜು ಮೂಲಕ ಹಂಚಿಕೆ ಮಾಡಬೇಕಾಗಿತ್ತು. ಆದರೆ ತಮಗೆ ಬೇಕಾದವರಿಗೆ ಮಾರ್ಗಸೂಚಿ ಅನುಸರಿಸದೇ ಮನಸೋ ಇಚ್ಛೆ ಹಂಚಿಕೆ ಮಾಡಿದ್ದಾರೆ. ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆದಿಲ್ಲ ಇದಕ್ಕೆ ಸಮರ್ಥನೀಯ ಕಾರಣಗಳನ್ನು ಒದಗಿಸಿಲ್ಲ ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂ. ಆದಾಯ ನಷ್ಟ ಉಂಟಾಗಿದೆ.

    * ಸಾರ್ವಜನಿಕ ಹಿತಾಸಕ್ತಿಯ ಹೊರತಾಗಿ ಅಕ್ರಮವಾಗಿ ಜಮೀನು ಸಿಎ ನಿವೇಶನ ಹಂಚಿಕೆ ಮಾಡಿದ್ದು ಕಾನೂನುಬಾಹಿರವಾಗಿದೆ. ಈ ಮೂಲಕ ತಮ್ಮ ಸಾರ್ವಜನಿಕ ಕಚೇರಿಯನ್ನು ಸಾರ್ವಜನಿಕ ಹಿತಾಸಕ್ತಿ ವಿರುದ್ಧವಾಗಿ ದುರುಪಯೋಗ ಪಡಿಸಿಕೊಂಡು ಸರ್ಕಾರದ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿ ತಾನು ಮಾಡುತ್ತಿರುವ ಅಕ್ರಮದಿಂದ ಖಾಸಗಿ ವ್ಯಕ್ತಿಗಳಿಗೆ ಲಾಭವಾಗುತ್ತದೆ ಎಂದು ಗೊತ್ತಿದ್ದರು ಸಹ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿಗಳ ನಷ್ಟ ಉಂಟು ಮಾಡಿ ಖಾಸಗಿ ವ್ಯಕ್ತಿಗಳಿಗೆ ಲಾಭ ಮಾಡಿಕೊಟ್ಟಿದ್ದಾರೆ.

    * ರಾಜ್ಯದ ಹಲವು ಕೈಗಾರಿಕೆ ಪ್ರದೇಶದಲ್ಲಿ ನಾಗರಿಕ ಸೇವೆ (ಸಿಎ)ಗೆ ಮೀಸಲಿದ್ದ ಭೂಮಿಯಲ್ಲಿ ನಕಲಿ, ಅಪ್ರಾಮಾಣಿಕ ಮತ್ತು ದೋಷಪೂರಿತ ವಿವರಣೆಗಳನ್ನು ಆಧರಿಸಿ ಅವರು ಸಿ.ಎ ಭೂಮಿಯನ್ನು ಕಡಿಮೆ ದರಕ್ಕೆ ಹಲವು ಉದ್ಯಮಿಗಳಿಗೆ ಹಂಚಿಕೆ ಮಾಡಿ ನಿಯಮ ಉಲ್ಲಂಘಿಸಿದ್ದಾರೆ

    * ಕೆಐಎಡಿಬಿ ಮಂಡಳಿ ಈ ಹಿಂದಿನ ನಿಯಮದಂತೆ ಸಿಎ ಜಮೀನುಗಳನ್ನು ಹರಾಜು ಪ್ರಕ್ರಿಯೆ ಕೈಗೊಳ್ಳಬೇಕಿತ್ತು. ಆದರೆ ಈ ನಿಯಮ ಉಲ್ಲಂಘಿಸಿ ಕಡಿಮೆ ದರಕ್ಕೆ ಸಿಎ ಜಮೀನುಗಳನ್ನು ಹಂಚಿಕೆ ಮಾಡಲಾಗಿದೆ. ಈಗ ಸಿಎ ಜಮೀನು ಪಡೆದ ಕೆಲವರು ನೈಜ ಕೈಗಾರಿಕೋದ್ಯಮಿಗಳು ಆಗದೇ ಇರುವುದರಿಂದ ಮುಂದಿನ 10 ವರ್ಷದಲ್ಲಿ ಸಿಎ ಜಮೀನು ಮತ್ತೆ ಮಾರಾಟವಾಗುತ್ತೆ ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತೆ.

    * ಈಗ ಹಂಚಿಕೆ ಮಾಡಿರುವ ಸಿಎ ಜಮೀನಿಗೆ ಹಲವು ಕೈಗಾರಿಕೋದ್ಯಮಿಗಳು ಮುಂಗಡ ಅರ್ಜಿಸಲ್ಲಿಸಿದ್ದರು ಅವರಿಗೆ ಸಿಗದ ಈ ಭೂಮಿ ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಮೇಲೆ ತಿಳಿಸಲಾದ ಕಂಪನಿಗಳಿಗೆ ದೊರೆಯುವಂತೆ ಸಂಚು ಮಾಡಲಾಗಿದೆ.

    * ಕೆಐಎಡಿಬಿಯಲ್ಲಿ ಸಿಎ ನಿವೇಶನ ಕೈಗಾರಿಕೋದ್ಯಮಕ್ಕೆ ಮಂಜೂರು ಮಾಡುವಂತಿಲ್ಲ ಎಂಬ ಹಿಂದಿನ ಕಾನೂನುನ್ನು ರದ್ದು ಪಡಿಸಿ ಸಿಎ ಭೂಮಿ ಮಂಜೂರಿಗೆ (SLSWCC) ಸಭೆ ಶಿಫಾರಸು ಮಾಡಿದ್ದಾರೆ.

    * ಕೈಗಾರಿಕಾ ಪ್ರದೇಶಗಳಲ್ಲಿ ನಿಯಮಾನುಸಾರ ಒದಗಿಸಬೇಕಾದ ಚಟುವಟಿಕೆಗಳು, ಮೂಲ ಸೌಕರ್ಯಗಳಿಗಾಗಿ ಸಿಎ/ ಅಮೆನಿಟಿ ನಿವೇಶನಗಳನ್ನು ಮೀಸಲಿಡಬೇಕು. ಹೊಸ ಆದೇಶದನ್ವಯ ಸಿ.ಎ ಮೀಸಲಿಟ್ಟ ನಿವೇಶನಗಳನ್ನು ಸ್ಥಳ, ಉದ್ದೇಶ ಸಹಿತ ಜಾಹೀರಾತು ನೀಡಿ ನಿವೇಶನಗಳ ಹಂಚಿಕೆಗೆ ಅರ್ಜಿ ಸ್ವೀಕರಿಸಬೇಕು. ಸ್ವೀಕರಿಸಿದ ಅರ್ಜಿಗಳನ್ನು ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ಕಾರ್ಯಕಾರಿ ಸದಸ್ಯರ ಅಧ್ಯಕ್ಷತೆಯಲ್ಲಿ ಮಂಡಳಿ ಅಧಿಕಾರಿಗಳೊಂದಿಗೆ ಉಪ ಸಮಿತಿ ರಚಿಸಿ ಮಾನದಂಡಗಳ ಅನುಸಾರ ಅರ್ಜಿ ಪರಿಶೀಲಿಸಿ ರಾಜ್ಯಮಟ್ಟದ ಏಕ ಗವಾಕ್ಷಿ ಸಮಿತಿ ಸಭೆಯ ಮುಂದೆ ಚರ್ಚಿಸಿ ಅನುಮೋದನೆ ಪಡೆಯಬೇಕು ನಂತರ ಈ ನಿವೇಶನಗಳನ್ನು ಹಂಚಿಕೆದಾರರಿಗೆ ಶುದ್ಧ ಕ್ರಯ ಮಾಡಿಕೊಡಬೇಕು ಎಂದು ಸರ್ಕಾರ ಆದೇಶಿಸಿದೆ ಈ ಆದೇಶದ ಹಿಂದೆ ಬಹು ದೊಡ್ಡ ಒಳ ಸಂಚು ನಡೆದಿದ್ದು ಇದರಲ್ಲಿ ಕೋಟ್ಯಂತರ ರೂಪಾಯಿಗಳ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಂಶಯ ಇದೆ

    * ಕೈಗಾರಿಕೆ ಉದ್ದೇಶಕ್ಕಾಗಿ ನಿವೇಶನ ಹಂಚಿಕೆ ಮಾಡಲು ಅರ್ಜಿ ಆಹ್ವಾನಿಸುವಾಗ ಕನಿಷ್ಠ 30 ದಿನ ಸಮಯ ಕೊಡಬೇಕು ಎಂಬ ನಿಯಮ ಇದೆ. ಈ ವಸಾಹುತಗಳಲ್ಲಿನ ನಾಗರಿಕ ಸೌಲಭ್ಯ (ಸಿ.ಎ) ಹಾಗೂ ಇತರ ಸೌಲಭ್ಯಗಳಿಗೆ (ಅಮೆನಿಟಿ) ಮೀಸಲಿಟ್ಟ ಜಾಗಗಳ ಹಂಚಿಕೆಗೆ ಕಳೆದ ಫೆಬ್ರುವರಿ 5ರಂದು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಫೆ.23ರಂದೇ ಕೊನೆ ದಿನ. ಹಂಚಿಕೆಗೆ ಪ್ರಸ್ತಾಪಿಸಲಾದ ಸಿಎ/ಅಮೆನಿಟಿ ನಿವೇಶನಗಳ ಪಟ್ಟಿಯನ್ನು ಫೆ.8ರಂದು ಅಂತರ್ಜಾಲ ತಾಣದಲ್ಲಿ ಪ್ರಕಟಿಸಲಾಗಿದೆ. ಅರ್ಜಿ ಸಲ್ಲಿಕೆಗೆ ರಜೆ ದಿನ ಸೇರಿ 18 ದಿನಗಳ ಕಾಲಾವಕಾಶವನ್ನು ಕೊಡಲಾಗಿತ್ತು. ರಜೆ ದಿನಗಳಲ್ಲಿ ಕಳೆದರೆ 15 ದಿನ ಮಾತ್ರ ಅರ್ಜಿದಾರರಿಗೆ ಅವಕಾಶ ಸಿಕ್ಕಿದ್ದು ಇದರಿಂದ ಅರ್ಹ ಕೈಗಾರಿಕೋದ್ಯಮಿಗಳು ಅರ್ಜಿ ಸಲ್ಲಿಸುವುದನ್ನು ತಪ್ಪಿಸಲು ಈ ನಿಯಮ ರೂಪಿಸಲಾಗಿದೆ.

    * 1991ರಲ್ಲಿ ಕೆಐಎಡಿಬಿ ಹೊರಡಿಸಿದ್ದ ಅಧಿಸೂಚನೆಯಲ್ಲಿ ಕೆಲವು ಚಟುವಟಿಕೆಗಳನ್ನು ಅಮೆನಿಟಿ ಎಂದು ನಿಗದಿಪಡಿಸಲಾಗಿತ್ತು. 2023 ನವೆಂಬರ್ 11ರಂದು ಹೊರಡಿಸಲಾದ ಅಧಿಸೂಚನೆ (ಸಿಐ78 ಎಸ್‌ಪಿಕ್ಯೂ 2021)ಯಲ್ಲಿ ನಿಗದಿಪಡಿಸಲಾದ ಅಮೆನಿಟಿ ಚಟುವಟಿಕೆಗಳನ್ನು ಪಟ್ಟಿಯಿಂದ ಹಿಂಪಡೆಯಲಾಗಿತ್ತು. ಆ ಮೂಲಕ ನಿರ್ದಿಷ್ಟ ಸೌಲಭ್ಯ ಕಲ್ಪಿಸಲು ಮೀಸಲಾಗಿದ್ದ ನಿವೇಶನ/ಆಸ್ತಿಗಳನ್ನು ಬೇರೆ ಉದ್ದೇಶಕ್ಕೆ ಬಳಸಲು ಅವಕಾಶ ಕಲ್ಪಿಸಿ ವ್ಯಾಪಕ ಭ್ರಷ್ಟಚಾರ ಎಸಗಲಾಗಿದೆ ‘ಅನರ್ಹ ಕೈಗಾರಿಕೋದ್ಯಮಿಗಳಿಗೆ ಹಂಚಿಕೆ ಮಾಡುವ ಉದ್ದೇಶದಿಂದಷ್ಟೇ ಈ ರೀತಿಯ ವಾಮಮಾರ್ಗ ಹಿಡಿಯಲಾಗಿದೆ.

    * KIADB ಅಭಿವೃದ್ಧಿ ಅಧಿಕಾರಿಗಳು ಕೆಲವು ಪ್ರಕರಣಗಳಲ್ಲಿ ಮೂಲೆ ನಿವೇಶನಗಳನ್ನು ನೋಟಿಫಿಕೇಷನ್ ಮಾಡಿ ಹರಾಜು ಪ್ರಕ್ರಿಯೆಯಲ್ಲಿ ಹಂಚಿಕೆ ಮಾಡಲಾಗುತ್ತಿದೆ. ಅದೇ ಸಿ.ಎ ಜಮೀನು ಹಂಚಿಕೆ ಪ್ರಸ್ತಾವನೆಯನ್ನು ಪರಿಗಣಿಸಲು ಸಾಧ್ಯವಿಲ್ಲವೆಂದು ತಿರಸ್ಕರಿಸಿ ದ್ವಿಮುಖ ನೀತಿ ಅನುಸರಿಸಿದ್ದಾರೆ ಮಾರ್ಗಸೂಚಿ ದರದ ಶೇ. 1.14 ವಿಧಿಸಿ ಹಂಚಿಕೆ ಮಾಡಿದ್ದರೇ ಮಂಡಳಿಗೆ ಕೋಟ್ಯಂತರ ರೂ. ಲಾಭ ಬರುತ್ತಿತ್ತು. ಆದ್ರೆ ಹಂಚಿಕೆ ದರದಲ್ಲಿ ಹಂಚಿಕೆ ಮಾಡಿರುವುದರಿಂದ ಸರ್ಕಾರಕ್ಕೆ ದೊಡ್ಡ ಮಟ್ಟದಲ್ಲಿ ಆರ್ಥಿಕ ನಷ್ಟವಾಗಿದೆ.

    * ನಿವೇಶನಗಳನ್ನು ಹಂಚಿಕೆ ಮಾಡುವ ಮುನ್ನ ಅರ್ಜಿ ಸಲ್ಲಿಸಿದ ಸಂಸ್ಥೆಗಳಿಗೆ ನಿರ್ದಿಷ್ಟ ಕೇತ್ರದಲ್ಲಿ ಎಷ್ಟು ವರ್ಷ ಅನುಭವ ಇದೆ? ಯೋಜನೆ ಜಾರಿ ಮಾಡುವ ಸಾಮರ್ಥ್ಯ ಇದೆಯೇ ಎಂದು ಪರಿಶೀಲಿಸಿಲ್ಲ ಎಂದು ದೂರಿನಲ್ಲಿ ನಮೂದಿಸಲಾಗಿದೆ.

  • ನಾನು ನಿರಪರಾಧಿ, ಒತ್ತಾಯದಿಂದ ದೂರು ನೀಡಿದ್ದೆ – ಅಬ್ಬರಿಸಿದ್ದ ಕಲ್ಲಹಳ್ಳಿ ಈಗ ಥಂಡಾ

    ನಾನು ನಿರಪರಾಧಿ, ಒತ್ತಾಯದಿಂದ ದೂರು ನೀಡಿದ್ದೆ – ಅಬ್ಬರಿಸಿದ್ದ ಕಲ್ಲಹಳ್ಳಿ ಈಗ ಥಂಡಾ

    – ಎಸ್‌ಐಟಿಗೆ ಮೂರು ಪುಟಗಳ ಹೇಳಿಕೆ
    – ಕೇಸಿನಲ್ಲಿ ನಾನೂ ಪಾಲುದಾರನೂ ಅಲ್ಲ
    – ಪಾಲನ್ನು ಕೂಡ ಪಡೆದಿಲ್ಲ

    ಬೆಂಗಳೂರು: ಜಾರಕಿಹೊಳಿ ಸಿಡಿ ಪ್ರಕರಣ ದಿನದಿನವೂ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಸಿಡಿ ರಿವೈಂಡ್ ಮಾಡಿದಷ್ಟು ಸುಳ್ಳು ತೆರೆದುಕೊಳ್ಳುತ್ತಿದೆ. ದೂರು ಕೊಟ್ಟಾಗ ಅಬ್ಬರಿಸಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಈಗ ಥಂಡಾ ಹೊಡೆದಿದ್ದಾರೆ.

    ಹೌದು. ಕನಕಪುರದ ದಿನೇಶ್ ಕಲ್ಲಹಳ್ಳಿ ಸಿಡಿ ಕೇಸ್‍ನಲ್ಲಿ ನಾನು ನಿರಪರಾಧಿ ಎಂದು ವಿಶೇಷ ತನಿಖಾ ತಂಡಕ್ಕೆ ಹೇಳಿಕೆ ನೀಡಿದ್ದಾರೆ. ನಾನು ಒತ್ತಾಯಕ್ಕೆ ಒಳಗಾಗಿದ್ದೆ, ಒತ್ತಾಯದಿಂದ ದೂರು ಕೊಟ್ಟಿದ್ದೇನೆ. ದೂರು ಕೊಡಲೇಬೇಕು ಅಂತ ಒತ್ತಾಯ ಮಾಡಲಿಲ್ಲ. ಹುಡುಗಿಗೆ ನ್ಯಾಯ ಕೊಡಿಸಬೇಕು ಅಂತ ಒತ್ತಾಯ ಮಾಡಿದ್ದರು ಎಂದು ಹೇಳಿದ್ದಾರೆ.

    3 ದಿನಗಳ ಕಾಲ ನಿರಂತರವಾಗಿ ಕರೆ ಮಾಡಿದ್ದರಿಂದ ನಾನು ದೂರು ಕೊಡಲು ಮುಂದಾದೆ. ನನ್ನ ಮನೆಗೆ ಭೇಟಿ ನೀಡಿ ದೂರು ಸಿಡಿ ಕೊಟ್ಟಿದ್ದರು ಎಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿಗೆ 3 ಪುಟಗಳ ಹೇಳಿಕೆ ನೀಡಿದ್ದಾರೆ.

    ಹೇಳಿಕೆಯಲ್ಲಿ ಏನಿದೆ?
    ನಾನು ಕನಕಪುರ ತಾಲೂಕಿನ ಕಲ್ಲಹಳ್ಳಿ ಗ್ರಾಮದವನಾಗಿದ್ದು ಸಾಕಷ್ಟು ವರ್ಷಗಳಿಂದ ಸಾಮಾಜಿಕ ಹೋರಾಟವನ್ನು ಮಾಡುತ್ತಿದ್ದೇನೆ. ನನ್ನದೇ ಆದ ನಾಗರಿಕ ಹೋರಾಟ ಸಮಿತಿಯೂ ಇದೆ. ಅದರಲ್ಲಿ ನಾನು ಸಾಕಷ್ಟು ಹೋರಾಟಗಳನ್ನು ಮಾಡಿದ್ದೇನೆ. ಪಕ್ಷಾತೀತವಾಗಿ ನಾನು ಹೋರಾಟ ಮಾಡಿದ್ದು, ಇದುವರೆಗೂ ಯಾವುದೇ ಪಕ್ಷದ ಜೊತೆ ಗುರುತಿಸಿಕೊಂಡಿಲ್ಲ.

    ನನ್ನ ಹೋರಾಟಗಳಲ್ಲಿ ಸಾಕಷ್ಟು ಗೆಲುವು ಸಾಧಿಸಿ, ಜೊತೆಗೆ ನ್ಯಾಯವನ್ನು ದೊರಕಿಸಿಕೊಟ್ಟಿದ್ದೇನೆ. ನಾನು ಈ ರೀತಿಯ ಹೋರಾಟ ಮಾಡುವಾಗ ಸಾಕಷ್ಟು ಜನರ ಪರಿಚಯ ಇತ್ತು. ನನ್ನ ಹೋರಾಟಕ್ಕೆ ಸಹಾಯ ಮಾಡಿದ್ದು ಅಲ್ಲದೆ ನನ್ನ ಹೋರಾಟಗಳು ಮಾಧ್ಯಮಗಳಲ್ಲಿ ಬರುತ್ತಿತ್ತು. ಹೀಗೆ ಪರಿಚಯ ಆದವರ ಹೆಸರಲ್ಲಿ ಲಕ್ಷ್ಮಿಪತಿಯೂ ಒಬ್ಬರು.

    ನಾನು ಅವರ ಜೊತೆ ಸಾಕಷ್ಟು ವರ್ಷಗಳಿಂದ ಒಡನಾಟ ಇಟ್ಟುಕೊಂಡಿದ್ದೆ. ಆದರೆ ಅದು ಕೇವಲ ಸುದ್ದಿಯ ವಿಚಾರದಲ್ಲಿ ಆಗಿತ್ತು. ಹೀಗೆ ಪರಿಚಯ ಇದ್ದ ಲಕ್ಷ್ಮಿಪತಿಯವರು ಎಸಿಬಿ ಒಂದರ ಸುದ್ದಿಯ ವಿಚಾರಕ್ಕೆ ಮಾತನಾಡಿದ್ದರು. ಬಳಿಕ ನಾನು ನಿಮಗೆ ಒಂದು ಹೋರಾಟದ ತಿರುಳನ್ನು ಕೊಡುತ್ತೇನೆ ಅದನ್ನ ಇಟ್ಟುಕೊಂಡು ಹೋರಾಟ ಮಾಡಬೇಕು. ಹೋರಾಟ ಮಾಡಿ ನ್ಯಾಯ ಒದಗಿಸಬೇಕು ಅಂತ ಕೇಳಿಕೊಂಡರು. ಅವಾಗ ನಾನು ಈ ವಿಚಾರವಾಗಿ ತಿಳಿದುಕೊಂಡಿರಲಿಲ್ಲ. ಬಳಿಕ ವಿಚಾರ ಏನು ಎಂಬುದನ್ನು ತಿಳಿದುಕೊಳ್ಳವ ಪ್ರಯತ್ನ ಮಾಡಿದೆ.

    ಆ ಸಂದರ್ಭದಲ್ಲಿ ರಾಸಲೀಲೆಗೆ ಸಂಬಂಧಪಟ್ಟ ವಿಚಾರ ಎನ್ನುವುದು ಗೊತ್ತಾಯ್ತು. ಆ ಬಳಿಕ ನಾನು ಈ ವಿಚಾರವನ್ನು ಮಾಡೋದಿಲ್ಲ ಅಂತ ಹೇಳಿದೆ. ಆದರೆ ಲಕ್ಷ್ಮಿಪತಿಯವರು ನನಗೆ ಒತ್ತಾಯ ಮಾಡೋದಕ್ಕೆ ಪ್ರಾರಂಭ ಮಾಡಿದರು. ಎಷ್ಟೋ ಹೋರಾಟಗಳನ್ನು ನೀವು ಮಾಡಿದ್ದೀರಿ. ಈ ಹೋರಾಟವನ್ನು ನೀವೇ ಮಾಡಿದ್ರೆ ಅದರ ಬಲವೇ ಬೇರೆ ಆಗುತ್ತೆ. ಜೊತೆಗೆ ಅನ್ಯಾಯಕ್ಕೆ ಒಳಗಾದ ಯುವತಿಗೆ ನ್ಯಾಯ ಬೇಕು ಅಷ್ಟೇ. ನ್ಯಾಯವನ್ನು ನೀವೇ ನಿಂತು ಕೊಡಿಸಬೇಕು ಅಂತ ಒತ್ತಾಯ ಮಾಡಿದ್ದರು.

    ಮೂರು ದಿನಗಳ ಒತ್ತಾಯದ ಬಳಿಕ ನಾನು ಒಪ್ಪಿಕೊಂಡೆ. ಬಳಿಕ ಲಕ್ಷ್ಮಿಪತಿ ಅವರು ನಮ್ಮ ಹಳ್ಳಿಗೆ ಬಂದು ಸಿಡಿಯನ್ನು ಕೊಟ್ಟಿದ್ದರು. ನಾನು ಆ ಸಿಡಿಯನ್ನು ಪ್ಲೇ ಮಾಡಿಯೂ ನೋಡಿರಲಿಲ್ಲ. ಬಳಿಕ ಮಾಧ್ಯಮಗಳಿಗೆ ತಿಳಿಸಿ ಕಮಿಷನರ್ ಕಚೇರಿಗೆ ಬಂದು ದೂರು ಕೊಟ್ಟೆ. ಇದರಲ್ಲಿ ನಾನೂ ಪಾಲುದಾರನೂ ಅಲ್ಲ, ಪಾಲನ್ನು ಕೂಡ ಪಡೆದಿಲ್ಲ.

  • ರಾಸಲೀಲೆ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ: ದಿನೇಶ್ ಕಲ್ಲಳ್ಳಿ

    ರಾಸಲೀಲೆ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ: ದಿನೇಶ್ ಕಲ್ಲಳ್ಳಿ

    – ಎಸ್‍ಐಟಿ ವಶಕ್ಕೆ ಪಡೆದವರು ನನಗೆ ಸಿಡಿ ಕೊಟ್ಟಿಲ್ಲ

    ಬೆಂಗಳೂರು: ಮಾಜಿ ಸಚಿವರ ರಾಸಲೀಲೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ದಿನೇಶ್ ಕಲ್ಲಹಳ್ಳಿ, ನಿನ್ನೆ ವಿಚಾರಣೆ ನಡೆಸಿದವರಲ್ಲಿ ಓರ್ವ ಮಾತ್ರ ಪರಿಚಯ. ಆದ್ರೆ ಅವನು ನನಗೆ ಸಿಡಿ ತಂದು ಕೊಟ್ಟಿಲ್ಲ. ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರು ಹಿಂಪಡೆದುಕೊಂಡಿದ್ದೇನೆ. ಸದ್ಯಕ್ಕೆ ಪ್ರಕರಣಕ್ಕೂ ನಗಗೂ ಸಂಬಂಧ ಇಲ್ಲ. ಎಸ್‍ಐಟಿ ಈವರೆಗೆ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಿಲ್ಲ. ಒಂದು ವೇಳೆ ನೋಟಿಸ್ ನೀಡಿದ್ರೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದರು.

    ಮಾಜಿ ಸಚಿವರ ರಾಸಲೀಲೆ ಪ್ರಕರಣದ ಕುರಿತು ತನಿಖೆಗೆ ಒತ್ತಾಯಿಸಿ ದಿನೇಶ್ ಕಲ್ಲಹಳ್ಳಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇತ್ತ ಅದೇ ದಿನ ಸೋಶಿಯಲ್ ಮೀಡಿಯಾದಲ್ಲಿ ಮಾಜಿ ಮಂತ್ರಿಗಳ ವೀಡಿಯೋ ವೈರಲ್ ಆಗಿತ್ತು. ಆದ್ರೆ ದಿನೇಶ್ ಕಲ್ಲಹಳ್ಳಿ ದಿಢೀರ್ ಅಂತ ತಾವು ಸಲ್ಲಿಸಿದ ದೂರು ಹಿಂಪಡೆದುಕೊಳ್ಳುವ ಮೂಲಕ ಯೂ ಟರ್ನ್ ತೆಗೆದುಕೊಂಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಸೌಮೆಂದು ಮುಖರ್ಜಿ ನೇತೃತ್ವದಲ್ಲಿ ಮಧ್ಯಾಹ್ನ 2ಕ್ಕೆ ಎಸ್‍ಐಟಿ ರಚನೆ ಮಾಡಲಾಗಿತ್ತು. ಎಸ್‍ಐಟಿ ರಚನೆಯಾದ ಎರಡು ಗಂಟೆಯಲ್ಲಿ ಇಬ್ಬರು ಸಿಡಿಗೇಡಿಗಳು ವಶಕ್ಕೆ ಪಡೆಯಲಾಯ್ತು. ಬೆಂಗಳೂರಿನಲ್ಲಿ ಎರಡು ಕಡೆ ಪ್ರತ್ಯೇಕ ದಾಳಿ ನಡೆಸಿದ ಅಧಿಕಾರಿಗಳು ಇಬ್ಬರನ್ನ ವಶಕ್ಕೆ ಪಡೆದುಕೊಂಡಿದ್ದರು. ವಶಕ್ಕೆ ಪಡೆದ ಇಬ್ಬರನ್ನ ನಾಲ್ಕು ಗಂಟೆಗಳ ಕಾಲು ಆರು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

    ಎಸ್‍ಐಟಿ ತೀವ್ರ ವಿಚಾರಣೆಗೆ ಇಬ್ಬರು ತಮ್ಮ ಜೊತೆಯಲ್ಲಿದ್ದ ಮೂವರ ಮಾಹಿತಿಯನ್ನ ನೀಡಿದ್ದಾರೆ. ಇಬ್ಬರ ಮಾಹಿತಿ ಆಧರಿಸಿ ಮತ್ತೆ ಮೂವರಿಗೆ 3 ರಾಜ್ಯಗಳಲ್ಲಿ ಎಸ್‍ಐಟಿ ಬಲೆ ಬೀಸಿತ್ತು. ಹೈದರಾಬಾದ್, ಚೆನ್ನೈ ಮತ್ತು ಮಂಗಳೂರಲ್ಲಿ ತಲಾ ಒಬ್ಬರನ್ನ ವಶಕ್ಕೆ ಪಡೆಯಲಾಗಿದೆ. ಕೇವಲ ಆರು ಗಂಟೆಗಳಲ್ಲಿ ಐವರ ಆಪರೇಷನ್ ಮುಗಿಸಿದೆ. ಸದ್ಯ ಐವರು ಸಿಡಿಗೇಡಿಗಳ ಪೈಕಿ ನಾಲ್ವರಷ್ಟೇ ಎಸ್‍ಐಟಿ ವಶದಲ್ಲಿದ್ದು, ಒಬ್ಬರನ್ನು ವಿಚಾರಣೆ ಮಾಡಿ ಷರತ್ತಿನ ಮೇರೆಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

     

  • ರಾಜಕಾರಣಕ್ಕೆ ಸೇರಿಕೊಳ್ಳುವ ಇಚ್ಛೆ ಇಲ್ಲ: ದಿನೇಶ್ ಕಲ್ಲಹಳ್ಳಿ

    ರಾಜಕಾರಣಕ್ಕೆ ಸೇರಿಕೊಳ್ಳುವ ಇಚ್ಛೆ ಇಲ್ಲ: ದಿನೇಶ್ ಕಲ್ಲಹಳ್ಳಿ

    ರಾಮನಗರ: ನಾನು ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಸೇರಿಕೊಳ್ಳಲ್ಲ. ಅಲ್ಲದೆ ನಾನು ಯಾವುದೇ ಒತ್ತಡಗಳಿಗೆ ಮಣಿದಿಲ್ಲ ಎಂದು ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಹೇಳಿದ್ದಾರೆ.

    ಸಿಡಿ ದೂರು ವಾಪಸ್ ಪಡೆದ ನಂತರ ಕನಕಪುರದ ಕಲ್ಲಹಳ್ಳಿ ನಿವಾಸದಲ್ಲಿ ಸುದ್ದಿಗಾರರಿಗೆ ಮೊದಲ ಪ್ರತಿಕ್ರಿಯೆ ನೀಡಿದ ದಿನೇಶ್, ನನ್ನ ವಕೀಲರು ಹೇಳಿದ ಬಳಿಕ ನಾನು ಠಾಣೆಗೆ ಹೋಗಿ ದೂರು ವಾಪಸ್ ಪಡೆದಿದ್ದೇನೆ. ಐದು ಪುಟಗಳ ಸುದೀರ್ಘವಾಗಿ ಪತ್ರ ಬರೆದಿದ್ದೇನೆ. ದೂರು ವಾಪಸ್ ಪಡೆಯಲು ಹಲವಾರು ಕಾರಣಗಳಿವೆ ಎಂದರು.

    ವಿಚಾರಣೆಗೆ ಕರೆದರೆ ಮತ್ತೆ ಠಾಣೆಗೆ ಕಾನೂನಾತ್ಮಕವಾಗಿ ಹೋಗುತ್ತೇನೆ. ಸುಮೊಟೊ ಕೇಸ್ ದಾಖಲು ಬಗ್ಗೆ ತನಿಖಾಧಿಕಾರಿಗೆ ಬಿಟ್ಟಿದ್ದು. ಗುರುತರ ಆರೋಪಗಳಿಂದ ನಾನು ಮೊದಲು ಮುಕ್ತನಾಗಬೇಕು. ಹಲವು ಜನ ನನ್ನ ಮೇಲೆ ಟೀಕೆಗಳನ್ನು ಮಾಡುತ್ತಿದ್ದಾರೆ. ಯಾರಾದರೂ ದಾಖಲೆಗಳನ್ನು ಇಟ್ಟು ಆರೋಪ ಮಾಡಿದರೆ ನಾನು ಯಾವುದೇ ಹೋರಾಟ ಮಾಡುವುದಿಲ್ಲ ಎಂದು ತಿಳಿಸಿದರು.

    ಕೆಲವರು ತೆವಲಿಗೆ ಮಾತನಾಡ್ತಿದ್ದಾರೆ ಅಷ್ಟೇ, ಮಾತನಾಡೋದು ಸುಲಭ. ಆದರೆ ಮಾತಿನಂತೆ ಹೋರಾಟ ಮಾಡಲು ಕಷ್ಟ ಇದೆ. ತೆವಲಿಗೆ ಮಾತನಾಡಬಾರದು ಎಂದು ಹೇಳುವ ಮೂಲಕ ಮಾಜಿ ಸಿಎಂ ಹೆಚ್‍ಡಿಕೆ ಹೆಸರು ಬಳಸದೇ ದಿನೇಶ್ ಟಾಂಗ್ ನೀಡಿದರು.

    ನನ್ನ ಘನತೆಗೆ ಧಕ್ಕೆಯಾದ್ದರಿಂದ ಪ್ರಕರಣದಿಂದ ಹಿಂದೆ ಸರಿದಿದ್ದೇನೆ. ಮಾಹಿತಿಗಳನ್ನ ಮಾತ್ರ ಅಧಿಕಾರಿಗಳಿಗೆ ಕೊಟ್ಟು ಸತ್ಯ ಇದ್ರೆ ತನಿಖೆ ಮಾಡಿ ಎಂದು ಕೊಟ್ಟಿದ್ದೇನೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಹಾನಾಯಕ ಇದ್ದಾರೆ ಎಂಬ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ಯಾರು ಮಹಾ ನಾಯಕ ಎಂಬುದು ನನಗೆ ಗೊತ್ತಿಲ್ಲ ಎಂದರು.

    ನನ್ನ ವಿರುದ್ಧ ಷಡ್ಯಂತ್ರ ಮಾಡಿದವರನ್ನ ಜೈಲಿಗೆ ಕಳುಹಿಸುವೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಮಾತನಾಡಿ, ಕಾನೂನಾತ್ಮಕವಾಗಿ ಹೋರಾಟ ಮಾಡಲು ಎಲ್ಲರಿಗೂ ಅವಕಾಶವಿದೆ. ಅವರು ಹೋರಾಟ ಮಾಡಲಿ, ನಾನು ಕಾನೂನಾತ್ಮಕವಾಗಿ ಹೋರಾಟ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದರು.

  • ಖುದ್ದು ಠಾಣೆಗೆ ತೆರಳಿ ದೂರು ಹಿಂಪಡೆದ ದಿನೇಶ್ ‌ಕಲ್ಲಹಳ್ಳಿ

    ಖುದ್ದು ಠಾಣೆಗೆ ತೆರಳಿ ದೂರು ಹಿಂಪಡೆದ ದಿನೇಶ್ ‌ಕಲ್ಲಹಳ್ಳಿ

    ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಅವರು ಮಾಜಿ ಸಚಿವರ ವಿರುದ್ಧ ನೀಡಿದ್ದ ದೂರನ್ನು ಹಿಂದಕ್ಕೆ ಪಡೆದಿದ್ದಾರೆ.

    ಕಬ್ಬನ್‌ ಪಾರ್ಕ್‌ ಠಾಣೆಗೆ ತೆರಳಿ ದಿನೇಶ್‌ ಕಲ್ಲಹಳ್ಳಿ ದೂರನ್ನು ಹಿಂದಕ್ಕೆ ಪಡೆದಿದ್ದಾರೆ. ಭಾನುವಾರ ವಕೀಲರ ಮೂಲಕ ದೂರನ್ನು ಹಿಂದಕ್ಕೆ ಪಡೆಯಲು ದಿನೇಶ್‌ ಮುಂದಾಗಿದ್ದರು. ಆದರೆ ಪೊಲೀಸರು ತಾವೇ ಠಾಣೆಗೆ ಬಂದು ದೂರನ್ನು ಹಿಂದಕ್ಕೆ ಪಡೆಯಬೇಕು ಎಂದು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸಂಜೆ ಠಾಣೆಗೆ ತೆರಳಿ ದೂರನ್ನು ಹಿಂದಕ್ಕೆ ಪಡೆದಿದ್ದಾರೆ.

    ಮಾರ್ಚ್ 2ರಂದು ಮಾಜಿ ಸಚಿವರ ವಿರುದ್ಧ ದಿನೇಶ್ ಕಲ್ಲಹಳ್ಳಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಶುಕ್ರವಾರ ಪೊಲೀಸರ ಮುಂದೆ ಹಾಜರಾಗಿ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದರು. ಇತ್ತ ವಿಡಿಯೋ ಸಂಚಲನ ಸೃಷ್ಟಿಸಿ ಮಾಜಿ ಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಹ ನೀಡಿದ್ದರು. ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ದಿನೇಶ್ ಕಲ್ಲಹಳ್ಳಿ, ಇನ್ನೂ ಮೂವರ ವೀಡಿಯೋಗಳು ತಮ್ಮ ಬಳಿಯಲ್ಲಿರುವ ಬಗ್ಗೆ ಹೇಳಿದ್ದರು.

    ಮಾಜಿ ಸಿಎಂ ಕುಮಾರಸ್ವಾಮಿ ಡೀಲ್ ಆರೋಪದ ಹೇಳಿಕೆ ಬೇಸರ ತಂದಿದೆ. ದೂರು ನೀಡಿದ್ದವರನ್ನ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ದಿನೇಶ್ ಆರೋಪಿಸಿದ್ದರು.

    ದೂರು ಹಿಂಪಡೆಯುವ ಬಗ್ಗೆ ವಕೀಲರ ಜೊತೆ ಚರ್ಚಿಸಿದ್ದೇನೆ. ಕುಮಾರಸ್ವಾಮಿ ಅವರು ದೂರುದಾರ 5 ಕೋಟಿ ತೆಗೆದುಕೊಂಡು ಡೀಲ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಕುಮಾರಸ್ವಾಮಿ ಅವರ ಹೇಳಿಕೆಯಿಂದ ಜನರು ನನ್ನನ್ನು ಸಂಶಯದಿಂದ ನೋಡುತ್ತಿದ್ದಾರೆ. ಈ ಆರೋಪ ನನ್ನ ಸಾಮಾಜಿಕ ಹೋರಾಟಕ್ಕೆ ಹಿನ್ನಡೆ ಅಂತ ನಾನು ಅರ್ಥೈಸಿಕೊಂಡಿದ್ದೇನೆ. ಮಾಹಿತಿ ನೀಡುವವರನ್ನು ಟಾರ್ಗೆಟ್ ಮಾಡೋದು ಬಹಳ ನೋವಿನ ಸಂಗತಿ ಎಂದು ಬೇಸರ ಹೊರ ಹಾಕಿದ್ದರು.

  • ಸಿಡಿ ಪ್ರಕರಣದ ತನಿಖೆಗೆ ಸರ್ಕಾರ ಸಿದ್ಧ: ಬಿ.ಎಸ್ ಯಡಿಯೂರಪ್ಪ

    ಸಿಡಿ ಪ್ರಕರಣದ ತನಿಖೆಗೆ ಸರ್ಕಾರ ಸಿದ್ಧ: ಬಿ.ಎಸ್ ಯಡಿಯೂರಪ್ಪ

    ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣ ಸಂಬಂಧ ತನಿಖೆಗೆ ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

    ಇಂದು ಬಜೆಟ್ ಬಳಿಕ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ಸಿಡಿ ವಿಚಾರವನ್ನಿ ಸಿಎಂ ಪ್ರಸ್ತಾಪ ಮಾಡಿದರು. ವಿಪಕ್ಷದವರು ಯಾವ ತನಿಖೆಗೆ ಹೇಳಿದರೂ ತನಿಖೆ ಮಾಡಿಸಲು ಸಿದ್ಧ ಎಂದು ತಿಳಿಸಿದರು.

    ಸಿಡಿ ಬಗ್ಗೆ ತನಿಖೆ ವಿಚಾರ ವಿಧಾನಸಭೆಯಲ್ಲಿ ಚರ್ಚೆಯಾಗಲಿ. ಆಗ ಅವರು ಏನು ಸಲಹೆ ಕೊಡ್ತಾರೆ ಅದರ ಆಧಾರದ ಮೇಲೆ ತನಿಖೆ ಬಗ್ಗೆ ತೀರ್ಮಾನ ಮಾಡ್ತೇವೆ ಎಂದು ಹೇಳಿದರು.

    ಮಾಜಿ ಸಚಿವ ರಾಸಲೀಲೆ ಸಿಡಿ ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ಆದರೆ ಈ ಮಧ್ಯೆ ಸಂತ್ರಸ್ತ ಯುವತಿ ಪೊಲೀಸರ ಮುಂದೆ ಯಾವುದೇ ಹೇಳಿಕೆ ನೀಡಿಲ್ಲ. ಹೀಗಾಗಿ ಪೊಲೀಸರು ಇನ್ನೂ ಎಫ್‍ಐಆರ್ ದಾಖಲಿಸಿಕೊಂಡಿರಲಿಲ್ಲ. ಈ ಮಧ್ಯೆ ಪ್ರಕರಣ ಸಂಬಂಧ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು ವಾಪಸ್ ಪಡೆಯುವುದಾಗಿ ತಿಳಿಸಿದ್ದರು.

    ಮಾಜಿ ಸಿಎಂ ಕುಮಾರಸ್ವಾಮಿ ಡೀಲ್ ಆರೋಪದ ಹೇಳಿಕೆ ಬೇಸರ ತಂದಿದೆ. ದೂರು ನೀಡಿದ್ದವರನ್ನ ಟಾರ್ಗೆಟ್ ಮಾಡಲಾಗ್ತಿದೆ ಎಂದು ದಿನೇಶ್ ಆರೋಪಿಸಿದ್ದರು. ದಿನೇಶ್ ಕಲ್ಲಹಳ್ಳಿ ಪೊಲೀಸರಿಗೆ ಬರೆದ ಪತ್ರ ಸಹ ಪಬ್ಲಿಕ್ ಟಿವಿಗೆ ಕೂಡ ಲಭ್ಯವಾಗಿತ್ತು. ದೂರು ಹಿಂಪಡೆಯುವ ಬಗ್ಗೆ ವಕೀಲರ ಜೊತೆ ಚರ್ಚಿಸಿದ್ದೇನೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ನಮ್ಮ ವಕೀಲರು ಹೋಗಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರು ದೂರುದಾರ 5 ಕೋಟಿ ತೆಗೆದುಕೊಂಡು ಡೀಲ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಕುಮಾರಸ್ವಾಮಿ ಅವರ ಹೇಳಿಕೆಯಿಂದ ಜನರು ನನ್ನನ್ನು ಸಂಶಯದಿಂದ ನೋಡುತ್ತಿದ್ದಾರೆ. ಈ ಆರೋಪ ನನ್ನ ಸಾಮಾಜಿಕ ಹೋರಾಟಕ್ಕೆ ಹಿನ್ನಡೆ ಅಂತ ನಾನು ಅರ್ಥೈಸಿಕೊಂಡಿದ್ದೇನೆ. ಮಾಹಿತಿ ನೀಡುವವರನ್ನ ಟಾರ್ಗೆಟ್ ಮಾಡೋದು ಬಹಳ ನೋವಿನ ಸಂಗತಿ ಎಂದು ಬೇಸರ ಹೊರಹಾಕಿದ್ದರು.

  • ಹೆಚ್‍ಡಿಕೆ ವಿರುದ್ಧ ಕಾನೂನು ಹೋರಾಟ ಮಾಡ್ತೇನೆ: ದಿನೇಶ್ ಕಲ್ಲಹಳ್ಳಿ

    ಹೆಚ್‍ಡಿಕೆ ವಿರುದ್ಧ ಕಾನೂನು ಹೋರಾಟ ಮಾಡ್ತೇನೆ: ದಿನೇಶ್ ಕಲ್ಲಹಳ್ಳಿ

    ರಾಮನಗರ: ಕುಮಾರಸ್ವಾಮಿ ಅವರ ಹೇಳಿಕೆಯಿಂದ ನಾನು ಈ ಪ್ರಕರಣದಿಂದ ಹಿಂದೆ ಸರಿಯಬೇಕಾಗಿದೆ. ಕುಮಾರಸ್ವಾಮಿ ಅವರ ಆರೋಪದ ವಿರುದ್ಧ ನಾನು ಈಗ ಹೋರಾಟ ಮಾಡಬೇಕಿದೆ ಎಂದು ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಹೇಳಿದ್ದಾರೆ.

    ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಹೇಳಿಕೆಯಿಂದ ನಾನು ಈ ಪ್ರಕರಣದಿಂದ ಹಿಂದೆ ಸರಿಯಬೇಕಾಗಿದೆ. ನಾನು ಶುದ್ಧ ಹಸ್ತನಿದ್ದೇನೆ ಎಂದು ಸಾಬೀತು ಮಾಡಬೇಕು. ಹೀಗಾಗಿ ನಾನು ಈ ಪ್ರಕರಣದಿಂದ ಹಿಂದೆ ಬರಲು ಯೋಚಿಸಿದ್ದೇನೆ ಎಂದರು.

    ಕುಮಾರಸ್ವಾಮಿ ಅವರ ಹೇಳಿಕೆ ವಿರುದ್ಧ ಕಾನೂನು ಹೋರಾಟ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಎಲ್ಲೋ ಕೂತುಕೊಂಡು ಕುಮಾರಸ್ವಾಮಿ ಅವರು ಈ ರೀತಿ ಆರೋಪ ಮಾಡಬಾರದು. ಅವರ ಬಳಿ ಆಧಾರ ಇದ್ದರೆ ಪೊಲೀಸರ ಮುಂದೆಯೋ ಮಾಧ್ಯದ ಮುಂದೆಯೇ ನೀಡಬೇಕು. ಇದನ್ನು ಬಿಟ್ಟು ಹಿಟ್ ಅಂಡ್ ರನ್ ಮಾಡಬಾರದು ಎಂದು ತಿಳಿಸಿದರು.

    ನಾನು ಸಿಡಿ ಪ್ರಕರಣದಲ್ಲಿ ನೀಡಿರುವ ಹೇಳಿಕೆ ಹಾಗೂ ಮಾಹಿತಿ ಎಲ್ಲವೂ ಸತ್ಯವಾಗಿದೆ. ನನ್ನ ಹೇಳಿಕೆಗಳಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ಮೊದಲು ನಾನು ಶುದ್ಧನಿದ್ದೇನೆ ಎಂದು ಸಾಬೀತು ಪಡಿಸಬೇಕು. ನಂತರ ಸಿಡಿ ವಿಚಾರವಾಗಿ ಹೋರಾಟ ಮಾಡಬೇಕು. ಹೀಗಾಗಿ ನಾನು ಕೇಸ್‍ನ್ನು ಹಿಂಪಡೆಯುತ್ತಿದ್ದೇನೆ. ತನಿಖಾ ಅಧಿಕಾರಿಗಳು ನಾನು ಬಂದು ದೂರು ವಾಪಸ್ ಪಡೆಯಬೇಕು ಎಂದರೆ ನಾನು ಹೋಗುತ್ತೇನೆ. ನಾನು ಯಾರ ಬೆದರಿಕೆಗೂ ಹಾಗೂ ಆಮಿಷಕ್ಕೂ ಒಳಗಾಗಿಲ್ಲ. ನನ್ನ ಹೋರಾಟ ನಿರಂತವಾಗಿ ಇರುತ್ತದೆ ಎಂದು ದಿನೇಶ್ ಹೇಳಿದರು.

  • ವೀಡಿಯೋಗಾಗಿ 15 ಕೋಟಿ ವೆಚ್ಚ, ಇದು ಹನಿಟ್ರ್ಯಾಪ್: ಬಾಲಚಂದ್ರ ಜಾರಕಿಹೊಳಿ

    ವೀಡಿಯೋಗಾಗಿ 15 ಕೋಟಿ ವೆಚ್ಚ, ಇದು ಹನಿಟ್ರ್ಯಾಪ್: ಬಾಲಚಂದ್ರ ಜಾರಕಿಹೊಳಿ

    – ದಿನೇಶ್ ಕಲ್ಲಹಳ್ಳಿ ಬಗ್ಗೆ ಮೃದು ಧೋರಣೆ

    ಬೆಂಗಳೂರು: ವೀಡಿಯೋ ಅಪ್ಲೋಡ್ ಮಾಡಲು 15 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದ್ದು, ಇದೊಂದು ಹನಿಟ್ರ್ಯಾಪ್ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

    ದಿನೇಶ್ ಕಲ್ಲಹಳ್ಳಿ ಕೇಸ್ ಹಿಂಪಡೆದ ನಂತರ ಸುದ್ದಿಗೋಷ್ಠಿ ನಡೆಸಿದ ಬಾಲಚಂದ್ರ ಜಾರಕಿಹೊಳಿ, ಈ ಹಿಂದೆ ದೊಡ್ಡ ಷಡ್ಯಂತ್ರವಿದ್ದು, ಸಂತ್ರಸ್ಥ ಮಹಿಳೆ ಅಂತ ಕರೆಯಬೇಡಿ. ಕಲ್ಲಹಳ್ಳಿ ದೂರು ದಾಖಲಿಸುವ ಮುನ್ನವೇ ಮೂರು ಗಂಟೆ ಮೊದಲು ರಷ್ಯಾದಲ್ಲಿ ವೀಡಿಯೋ ಅಪ್ಲೋಡ್ ಮಾಡಲಾಗಿತ್ತು. ಜಾರಕಿಹೊಳಿ ಕುಟುಂಬದ ಹೆಸರು ಹಾಳು ಮಾಡಲು ಪ್ಲಾನ್ ಮಾಡಲಾಗಿದೆ. ಹಾಗಾಗಿ ಈ ಸಂಬಂಧ ಸಿಬಿಐ ತನಿಖೆಗೆ ಮುಖ್ಯಮಂತ್ರಿಗಳು ನೀಡಬೇಕು. ರಮೇಶ್ ಜಾರಕಿಹೊಳಿ ಅವರು ಮನೆಯಿಂದ ಹೊರ ಬಂದು ದೂರು ದಾಖಲಿಸಬೇಕು. ನಮಗೆ ದೂರು ನೀಡಲು ಅನುಮತಿ ನೀಡಬೇಕು ಎಂದು ಸೋದರನಲ್ಲಿ ಮನವಿ ಮಾಡಿಕೊಂಡರು.

    ನಮ್ಮ ಮೂಲಗಳ ಪ್ರಕಾರ ಮಹಿಳೆ ಮುಂದೆ ತನ್ನ ಭವಿಷ್ಯದ ಬಗ್ಗೆ ಆ ಕಾಣದ ಕೈಗಳಿಗೆ ಕೇಳಿದಾಗ ಆಕೆಗೆ 50 ಲಕ್ಷ ನಗದು ಮತ್ತು ದುಬೈನಲ್ಲಿ ಕೆಲಸ ಕೊಡಿಸೋದಾಗಿ ಆಮಿಷ ನೀಡಿದ್ದಾರೆ. 15 ಕೋಟಿ ಹಣ ವ್ಯಯ ಮಾಡಿ ವೀಡಿಯೋ ಅಪ್ಲೋಡ್ ಮಾಡಲಾಗಿದೆ. ಮಹಿಳೆ ಹಿಂದೆ ಇಬ್ಬರು, ಇಬ್ಬರ ಹಿಂದೆ ಮೂವರು ಮತ್ತು ಮೂವರ ಹಿಂದೆ ನಾಲ್ಕು ಜನ ವ್ಯವಸ್ಥಿತವಾಗಿ ವೀಡಿಯೋ ಹರಿಬಿಟ್ಟಿದ್ದಾರೆ. ಆದ್ರೆ ವೀಡಿಯೋ ಅಪ್ಲೋಡ್ ಮಾಡಿದವರ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದರು.

    ಕಲ್ಲಹಳ್ಳಿ ಬಗ್ಗೆ ಮೃದುಧೋರಣೆ: ಸಿಡಿ ಬಿಡುಗಡೆಯಾದಾಗ ದಿನೇಶ್ ಕಲ್ಲಹಳ್ಳಿ ವಿರುದ್ಧ ಗುಡುಗಿದ್ದ ಬಾಲಚಂದ್ರ ಜಾರಕಿಹೊಳಿ ಇಂದು ಮೃದುಧೋರಣೆ ತೋರಿದ್ದು ಕಾಣಿಸಿತು. ಕಲ್ಲಹಳ್ಳಿ ಅವರಿಗೂ ಪೂರ್ಣ ಮಾಹಿತಿ ಇಲ್ಲ ಅನ್ನೋದು ನನ್ನ ಗಮನಕ್ಕೆ ಬಂದಿದೆ. ಕಲ್ಲಹಳ್ಳಿ ಅವರನ್ನ ಸಹ ಈ ಪ್ರಕರಣದಲ್ಲಿ ಟ್ರ್ಯಾಪ್ ಮಾಡಲಾಗಿದೆ ಎಂದು ತಿಳಿದು ಬಂದಿದೆ ಎಂದರು. ಕಲ್ಲಹಳ್ಳಿ ಕೇಸ್ ಹಿಂಪಡೆದ ಬಗ್ಗೆ ನಮ್ಮ ವಕೀಲರ ಜೊತೆ ಚರ್ಚಿಸಿ ಕಾನೂನಿನ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

  • ಯಾವ ಕಾರಣಕ್ಕೆ ಕೇಸ್ ಹಿಂಪಡೆದಿದ್ದಾರೆಂದು ಗೊತ್ತಿಲ್ಲ : ಹೆಚ್‍ಡಿಕೆ

    ಯಾವ ಕಾರಣಕ್ಕೆ ಕೇಸ್ ಹಿಂಪಡೆದಿದ್ದಾರೆಂದು ಗೊತ್ತಿಲ್ಲ : ಹೆಚ್‍ಡಿಕೆ

    – ನಿನ್ನೆ, ಮೊನ್ನೆ ನಡೆದಿದ್ದೇನು ಅನ್ನೋದು ಗೊತ್ತಾಗಬೇಕು

    ಕೋಲಾರ: ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಯಾವ ಕಾರಣಕ್ಕೆ ಸಿಡಿ ಕೇಸ್ ವಾಪಸ್ ಪಡೆದುಕೊಂದ್ದಾರೆ ಎಂದು ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ಇಂದು ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಿನೇಶ್ ಕಲ್ಲಹಳ್ಳಿ ಯಾವ ಕಾರಣಕ್ಕೆ ಕೇಸ್ ವಾಪಸ್ಸು ಪಡೆದುಕೊಂದ್ದಾರೆ ಎಂದು ಗೊತ್ತಿಲ್ಲ. ಯಾವ ಕಾರಣಕ್ಕೆ ಕೇಸ್ ಹಾಕಿದ್ದಾರೆಂದು ಕೂಡ ಗೊತ್ತಿಲ್ಲ. ಪ್ರಕರಣದ ಬಗ್ಗೆ ಸರ್ಕಾರಕ್ಕೆ ಜವಾಬ್ದಾರಿ ಇದೆ. ಸರ್ಕಾರವೇ ಈ ಪ್ರಕರಣದಲ್ಲಿ ಸುಮೋಟೋ ಕೇಸ್ ದಾಖಲಿಸಬಹುದು. ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಅಸಹ್ಯಕರವಾದ ಘಟನೆಗಳು ನಡೆಯುತ್ತಿವೆ. ಸರ್ಕಾರ ಗೌರವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜನತೆಗೆ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು ಎಂದರು.

    ಕೇಸ್ ವಾಪಸ್ಸು ತೆಗೆದುಕೊಳ್ಳುವುದಕ್ಕೆ ಯಾರು ಪ್ರೇರಣೆ ಮಾಡಿದರು, ನಿನ್ನೆ ಮೊನ್ನೆ ರಾತ್ರಿ ಏನೇನು ನಡೆದಿದೆ. ಅದಲ್ಲೆವನ್ನು ತಿಳಿದುಕೊಳ್ಳಬೇಕು. ಇಲ್ಲಿಯವರೆಗೂ ಸಂತ್ರಸ್ಥ ಮಹಿಳೆ ಅನ್ಯಾಯವಾಗಿದೆ ಎಂದು ಯಾವತ್ತು ಹೊರಗಡೆ ಬಂದಿಲ್ಲ. ಯಾವ ಕಾರಣಕ್ಕೆ ಈ ಪ್ರಕರಣ ಹೊರ ಬಂದಿದೆ, ಇದರ ಸತ್ಯಾಂಶತೆ ಕುರಿತು ಜನರ ಮುಂದಿಡಬೇಕು ಎಂದು ಹೇಳಿದರು.

    ಇದೇ ವೇಳೆ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದರು. ಯೋಗೇಶ್ವರ್ ಗ್ರಾಫಿಕ್ಸ್ ನಲ್ಲಿ ಎಕ್ಸ್‍ಪರ್ಟ್ ಇದ್ದಾರೆ, ಅವರಿಗೆ ಅನುಭವ ಇರುವುದರಿಂದ ಈ ಹೇಳಿಕೆ ಕೊಟ್ಟಿದ್ದಾರೆ. ಇದಕ್ಕೆ ನನ್ನ ಉತ್ತರ ಅನವಶ್ಯಕ ಎಂದು ಮಾತಿನ ಚಾಟಿ ಬೀಸಿದರು.

     

  • ಟಿವಿಯಲ್ಲಿ ಬಂದಿರುವುದನ್ನು ವಾಪಸ್ ತೆಗೆದುಕೊಳ್ಳಲು ಆಗುತ್ತಾ..?: ಸಿದ್ದರಾಮಯ್ಯ

    ಟಿವಿಯಲ್ಲಿ ಬಂದಿರುವುದನ್ನು ವಾಪಸ್ ತೆಗೆದುಕೊಳ್ಳಲು ಆಗುತ್ತಾ..?: ಸಿದ್ದರಾಮಯ್ಯ

    ತುಮಕೂರು: ಟಿ.ವಿಯಲ್ಲಿ ಬಂದಿರುವುದನ್ನು ವಾಪಸ್ ತೆಗೆದುಕೊಳ್ಳಲು ಆಗುತ್ತಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

    ದಿನೇಶ್ ಕಲ್ಲಹಳ್ಳಿ ಕೇಸ್ ವಾಪಸ್ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ಮಧುಗಿರಿಯಲ್ಲಿ ಹೇಳಿಕೆ ನೀಡಿದ ಮಾಜಿ ಸಿಎಂ, ದಿನೇಶ್ ಕಲ್ಲಹಳ್ಳಿ ದೂರು ವಾಪಸ್ ತೆಗೆದುಕೊಂಡಿದ್ದಾರೆ. ಆದರೆ ಟಿವಿಯಲ್ಲಿ ಬಂದಿರುವ ವೀಡಿಯೋಗಳನ್ನು ವಾಪಸ್ ತೆಗೆದುಕೊಳ್ಳಲು ಆಗುತ್ತಾ ಎಂದು ಹೇಳಿದ್ದಾರೆ.

    ಮಾಜಿ ಸಚಿವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಹಿಂಪಡೆದ ಬಳಿಕ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಪ್ರತಿಕ್ರಿಯಿಸಿ, ಮಾಜಿ ಸಿಎಂ ಕುಮಾರಸ್ವಾಮಿ ಡೀಲ್ ಆರೋಪದ ಹೇಳಿಕೆ ಬೇಸರ ತಂದಿದೆ. ದೂರು ನೀಡಿದ್ದವರನ್ನ ಟಾರ್ಗೆಟ್ ಮಾಡಲಾಗ್ತಿದೆ ಎಂದು ಆರೋಪಿಸಿದ್ದಾರೆ.

    ದೂರು ಹಿಂಪಡೆಯುವ ಬಗ್ಗೆ ವಕೀಲರ ಜೊತೆ ಚರ್ಚಿಸಿದ್ದೇನೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ನಮ್ಮ ವಕೀಲರು ಹೋಗಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರು ದೂರುದಾರ 5 ಕೋಟಿ ತೆಗೆದುಕೊಂಡು ಡೀಲ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಕುಮಾರಸ್ವಾಮಿ ಅವರ ಹೇಳಿಕೆಯಿಂದ ಜನರು ನನ್ನನ್ನು ಸಂಶಯದಿಂದ ನೋಡುತ್ತಿದ್ದಾರೆ. ಈ ಆರೋಪ ನನ್ನ ಸಾಮಾಜಿಕ ಹೋರಾಟಕ್ಕೆ ಹಿನ್ನಡೆ ಅಂತ ನಾನು ಅರ್ಥೈಸಿಕೊಂಡಿದ್ದೇನೆ. ಮಾಹಿತಿ ನೀಡುವವರನ್ನ ಟಾರ್ಗೆಟ್ ಮಾಡೋದು ಬಹಳ ನೋವಿನ ಸಂಗತಿ ಎಂದು ಬೇಸರ ಹೊರ ಹಾಕಿದರು.

    ಮಾರ್ಚ್ 2ರಂದು ಮಾಜಿ ಸಚಿವರ ವಿರುದ್ಧ ದಿನೇಶ್ ಕಲ್ಲಹಳ್ಳಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಶುಕ್ರವಾರ ಪೊಲೀಸರ ಮುಂದೆ ಹಾಜರಾಗಿ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದರು. ಇತ್ತ ವೀಡಿಯೋ ಸಂಚಲನ ಸೃಷ್ಟಿಸಿ ಮಾಜಿ ಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಹ ನೀಡಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ದಿನೇಶ್ ಕಲ್ಲಹಳ್ಳಿ, ಇನ್ನೂ ಮೂವರ ವೀಡಿಯೋಗಳು ತಮ್ಮ ಬಳಿಯಲ್ಲಿರುವ ಬಗ್ಗೆ ಹೇಳಿದ್ದರು.