ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಸೋಲಿಗೆ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಹಿರಿಯ ಮುಖಂಡ ಆರ್.ವಿ ದೇಶಪಾಂಡೆ ಕಾರಣ ಎಂದು ಮಾಜಿ ಸಚಿವರ ಬೆಂಬಲಿಗರು ಆರೋಪಿಸಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿನಯ್ ಕುಲಕರ್ಣಿ, ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಅವರ ವಿರುದ್ಧ 2,05,072 ಮತಗಳ ಅಂತರದಲ್ಲಿ ಸೋತಿದ್ದರು. ಈ ಸೋಲಿಗೆ ದಿನೇಶ್ ಗುಂಡೂರಾವ್, ಆರ್ ವಿ ದೇಶಪಾಂಡೆ ಕಾರಣ ಎಂದು ವಿನಯ್ ಕುಲಕರ್ಣಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ವಿನಯ್ ಕುಲಕರ್ಣಿ ಸಪೋರ್ಟರ್ಸ್ ಎಂಬ ಫೇಸ್‍ಬುಕ್ ಪೇಜ್‍ನಲ್ಲಿ, ವಿನಯ್ ಕುಲಕರ್ಣಿ ಸೋಲಿಗೆ ನೇರವಾಗಿ ದಿನೇಶ್ ಗುಂಡೂರಾವ್ ಹಾಗು ಆರ್ ವಿ ದೇಶಪಾಂಡೆ ಕಾರಣ ಏಕೆಂದರೆ ವಿನಯ್ ಕುಲಕರ್ಣಿಯವರ ಹೆಸರು ಬೇಗ ಹೈಕಮಾಂಡ್ ಕಳಿಸದೆ ತಮ್ಮ ಬ್ರಾಹ್ಮಣ ಜಾತಿಯ ವ್ಯಕ್ತಿ ಜೋಶಿ ಗೆಲ್ಲಿಸಲು ಸಹಾಯ ಮಾಡಿದ್ದಾರೆ. ಚುನಾವಣೆಯ ಕೊನೆಯ ಗಳಿಗೆಯಲ್ಲಿ ಟಿಕೆಟ್ ನೀಡಿದ್ದಲ್ಲದೆ ಮುಸ್ಲಿಂ ಧರ್ಮದವರ ಹೆಸರನ್ನು ಮಧ್ಯಕ್ಕೆ ತಂದು ಅವರ ಭಾವನೆಗಳಿಗೆ ದಕ್ಕೆ ತರುವಂತ ಕೆಲಸ ಮಾಡಿದರು. ಕಾಂಗ್ರೆಸ್ ನಾಯಕರು ಪ್ರಹ್ಲಾದ್ ಜೋಶಿ ಗೆಲುವುವಿಗಾಗಿ ಮಾಧ್ಯಮದವರ ಮುಂದೆ ಅವರನ್ನು ಹೊಗಳಿದ್ದರು ಎಂದು ಬರೆದುಕೊಂಡಿದ್ದಾರೆ.
ಇಂತಹ ನಾಯಕರಿಂದ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವೇ? ಮೊದಲು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಿ ಲಿಂಗಾಯತರಿಗೆ ಈ ಸ್ಥಾನವನ್ನು ನೀಡಿ ಪಕ್ಷವನ್ನು ಉಳಿಸಿ ಎಂದು ಫೇಸ್‍ಬುಕ್ ಪೇಜ್‍ನಲ್ಲಿ ಮನವಿ ಮಾಡಿದ್ದಾರೆ.
ಬೆಂಗಳೂರು: ಇಂದು ರೋಷನ್ ಬೇಗ್ ಹೊಸ ಸಿನಿಮಾ ಟೀಸರ್ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಎರಡು ವಿಲನ್ ಗಳನ್ನು ಫೋಕಸ್ ಮಾಡಿದ್ದಾರೆ. ಕಾಂಗ್ರೆಸ್ಸಿನಲ್ಲಿ ಹೀರೋಗಳೇ ಇಲ್ಲ. ಅಲ್ಲಿ ಬರೀ ವಿಲನ್‍ಗಳು, ಕಾಮಿಡಿಯನ್‍ಗಳೇ ಇದ್ದಾರೆ ಎಂದು ಬಿಜೆಪಿ ಶಾಸಕ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ವಿರುದ್ಧ ಕೈ ಶಾಸಕ ರೋಷನ್ ಬೇಗ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇಂದು ಹೊಸ ಸಿನಿಮಾ ಟೀಸರ್ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಎರಡು ವಿಲನ್ ಗಳನ್ನು ಈಗ ಫೋಕಸ್ ಮಾಡಿದ್ದಾರೆ. ಮೈನ್ ವಿಲನ್ ಸಿದ್ದರಾಮಯ್ಯ, ಸಬ್ ವಿಲನ್ ದಿನೇಶ್ ಗುಂಡೂರಾವ್ ಹಾಗೂ ಕೆ.ಸಿ. ವೇಣುಗೋಪಾಲ್ ಕಾಮಿಡಿಯನ್. 23ರ ನಂತರ ಮುಖ್ಯ ಫಿಲ್ಮ್ ರಿಲೀಸ್ ಅಗಲಿದೆ. ಆಗ ಎಷ್ಟು ಜನ ವಿಲನ್ ಗಳು ಬರುತ್ತಾರೋ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಹೀರೋಗಳು ಇಲ್ಲ, ಬರೀ ವಿಲನ್ ಗಳು, ಕಾಮಿಡಿಯನ್ ಗಳು ಮಾತ್ರ ಇದ್ದಾರೆ ಎಂದು ಕೈ ನಾಯಕರಿಗೆ ಟಾಂಗ್ ನೀಡಿದರು. ಇದನ್ನೂ ಓದಿ:ಸಿದ್ದರಾಮಯ್ಯಗೆ ಅಹಂಕಾರ, ಒಡೆದು ಆಳಿದ್ದಕ್ಕೆ ಕಾಂಗ್ರೆಸ್ಸಿಗೆ ಈ ಸ್ಥಿತಿ ಬಂದಿದೆ – ರೋಷನ್ ಬೇಗ್ ಕಿಡಿ
ಮೇ 23 ಬಿಜೆಪಿಗೆ ಸಂಭ್ರಮದ ದಿನ. ಕಾಂಗ್ರೆಸ್ಸಿನವರಿಗೆ ರೆಸಾರ್ಟ್ ಕಡೆ ಓಡೋ ದಿನ. ಕಾಂಗ್ರೆಸ್ ನಡೆ ರೆಸಾರ್ಟ್ ಗೆ ಓಡುವ ಕಡೆ ಆಗಲಿದೆ. ಇವತ್ತು ರೋಷನ್ ಬೇಗ್ ಸ್ಯಾಂಪಲ್ ಬಿಡುಗಡೆ ಮಾಡಿದ್ದಾರೆ. ಬಳ್ಳಾರಿ, ಬೆಳಗಾವಿಯ ಫಿಲ್ಮ್ ಗಳು ಇನ್ನೂ ರಿಲೀಸ್ ಆಗುವುದು ಬಾಕಿ ಇವೆ. ಮಂಡ್ಯ, ತುಮಕೂರಿನ ರಿಸಲ್ಟ್ ಮೇಲೆ ಸಮ್ಮಿಶ್ರ ಸರ್ಕಾರದ ಭವಿಷ್ಯ ನಿಂತಿದೆ ಎಂದು ವ್ಯಂಗ್ಯವಾಡಿದರು.
23ಕ್ಕೆ ಲಾವಾರಸ ಉಕ್ಕಿ ಯಾರ ಮೇಲೆ ಹರಿಯುತ್ತದೋ ಗೊತ್ತಿಲ್ಲ. ಭೂಕಂಪ ಆಗಿ ಕಾಂಗ್ರೆಸ್ ಮನೆ ಬಿದ್ದು ಹೋಗಲಿದೆ. ಕಾಂಗ್ರೆಸ್ಸಿನವರೇ ಈ ಫಿಲ್ಮ್ ಪ್ರೊಡ್ಯೂಸರ್ ಗಳಾಗಿದ್ದು, 23 ರಂದು ಈ ಸರ್ಕಾರ ಸತ್ತು ಹೋಗುತ್ತದೆ ಎಂದು ಡಾಕ್ಟರ್ ಘೋಷಣೆ ಮಾಡಲಿದ್ದಾರೆ. ಕೇವಲ ರೋಷನ್ ಬೇಗ್ ಒಬ್ಬರ ಪ್ರಶ್ನೆ ಅಲ್ಲ, ಅನೇಕ ಜನ ದಾರಿ ಹುಡುಕುತ್ತಿದ್ದಾರೆ. ದಾರಿ ಯಾವುದಯ್ಯಾ ಎಂದು ಹುಡುಕುತ್ತಿರುವವರಿಗೆ ಬಿಜೆಪಿ ದಾರಿ ತೋರಿಸಲಿದೆ ಎಂದು ಕೈ ನಾಯಕರನ್ನು ಗೇಲಿ ಮಾಡಿದರು.
ಬಳ್ಳಾರಿ: ಬಳ್ಳಾರಿ ಕಾಂಗ್ರೆಸ್ ನಾಯಕರ ನಡುವೆ ಆರಂಭವಾಗಿದ್ದ ಕಿತ್ತಾಟಕ್ಕೆ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರು ಬ್ರೇಕ್ ಹಾಕಲು ಮೊದಲ ಹಂತದಲ್ಲಿ ಯಶಸ್ವಿಯಾಗಿದ್ದು, ಶಾಸಕ ಆನಂದ್ ಸಿಂಗ್ ಹಾಗೂ ಭೀಮಾನಾಯ್ಕ ನಡುವಿನ ಅಸಮಾಧಾನವನ್ನು ಶಮನಗೊಳಿಸಲು ಯಶಸ್ವಿಯಾಗಿದ್ದಾರೆ.
ಈಗಲ್ಟನ್ ರೆಸಾರ್ಟಿನಲ್ಲಿ ಕಂಪ್ಲಿ ಶಾಸಕ ಗಣೇಶ್ ಹಾಗೂ ಆನಂದ್ ಸಿಂಗ್ ನಡುವೆ ಜಗಳ ನಡೆಯಲು ಪ್ರಮುಖ ಕಾರಣವೇ ಭೀಮಾನಾಯ್ಕ್ ನಡುವಿನ ಅಸಮಾಧಾನ. ಸದ್ಯ ಇಬ್ಬರ ನಡುವಿನ ಗುದ್ದಾಟಕ್ಕೆ ಬ್ರೇಕ್ ಹಾಕಿರುವ ಕೆಪಿಸಿಸಿ ಮೊದಲ ಹಂತವಾಗಿ ಹಗರಿಬೊಮ್ಮನಹಳ್ಳಿಯಲ್ಲಿ ಆನಂದ್ ಸಿಂಗ್ ಅಭಿಮಾನಿ ಬಳಗ ತೆರೆದಿದ್ದ ಕಚೇರಿಯನ್ನು ತೆರವುಗೊಳಿಸಲು ಯಶಸ್ವಿಯಾಗಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆ ಶಾಸಕ ಭೀಮಾನಾಯ್ಕ್ ಕ್ಷೇತ್ರದಲ್ಲಿ ಆನಂದ್ ಸಿಂಗ್ ಅಭಿಮಾನಿಗಳು ಕಚೇರಿ ತೆರೆದು ಸಾಮಾಜಿಕ ಕಾರ್ಯಗಳನ್ನು ನಡೆಸಲು ಆರಂಭಿಸಿದ್ದರು. ಈ ಕುರಿತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಈ ಸಭೆಯಲ್ಲಿ ಸಂಧಾನ ಸಫಲವಾದ ಕಾರಣ ಇಂದು ಬೆಳಗ್ಗೆ ಕಚೇರಿಯನ್ನು ತೆರವುಗೊಳಿಸಲಾಗಿದೆ.
ಇತ್ತ ಆನಂದ್ ಸಿಂಗ್ ಹಾಗು ಭೀಮಾನಾಯ್ಕ್ ನಡುವೆ ಸಂಧಾನ ಯಶಸ್ವಿಯಾಗುತ್ತಿದಂತೆ ಕೆಪಿಸಿಸಿ ನಾಯಕರು ಕಂಪ್ಲಿ ಶಾಸಕ ಗಣೇಶ್ ಹಾಗೂ ಆನಂದ್ ಸಿಂಗ್ ನಡುವೆ ಸಂಧಾನ ಮಾಡಲು ಪ್ರಯತ್ನಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ಶಿವಮೊಗ್ಗ: ಕಾಂಗ್ರೆಸ್ ಪ್ರಚೋದನಾ ರಾಜಕೀಯ ಮಾಡುತ್ತಿಲ್ಲ, ಅಭಿವೃದ್ಧಿಯ ರಾಜಕಾರಣ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ಮಾತನಾಡಿದ ಅವರು ಸಮನ್ವಯ ಸಮಿತಿ ಸದಸ್ಯರು ಯಾರಾಗಬೇಕು ಎಂಬುದು ಚರ್ಚಾಸ್ಪದ ವಿಷಯವಲ್ಲ. ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಇಂದಿಗೂ ಅಸ್ಥಿರಗೊಳಿಸುವ ಯತ್ನ ನಡೆಯುತ್ತಿದೆ. ಸಿಎಂ ಹೇಳಿಕೆ ಸರಿಯಾಗಿಯೇ ಇದ್ದು, ಬಿಜೆಪಿ ಈ ಕೆಲಸ ಮಾಡುತ್ತಿದೆ. ಈ ಪ್ರಯತ್ನವನ್ನು ಬಿಟ್ಟು ಉತ್ತಮ ಪ್ರತಿಪಕ್ಷವಾಗಿ ಕೆಲಸ ಮಾಡುವುದನ್ನು ಬಿಜೆಪಿ ಕಲಿಯಬೇಕು ಎಂದರು.
ಯಡಿಯೂರಪ್ಪ ಜನಪರ ಹೋರಾಟ ಮಾಡಿಲ್ಲ. ಲೋಕಸಭೆಯಲ್ಲಿ ರಾಜ್ಯದ ಪರವಾಗಿ ಮಾತನಾಡಿಲ್ಲ. ಯಡಿಯೂರಪ್ಪ ಹಾಗೂ ಬಿಜೆಪಿ ಅಧಿಕಾರಕ್ಕಾಗಿ ಹೋರಾಟ ನಡೆಸುತ್ತಿವೆ ಎಂದು ಟೀಕಿಸಿದರು.
ಸಮನ್ವಯ ಸಮಿತಿ ಶೀಘ್ರವೇ ಸಭೆ ಸೇರಲಿದ್ದು, ರೈತರ ಸಾಲ ಮನ್ನಾ ಬಿಟ್ಟು ಬೇರೆ ಯಾವುದೇ ಪ್ರಮುಖ ನಿರ್ಧಾರವನ್ನು ಸಿಎಂ ಕೈಗೊಂಡಿಲ್ಲ. ಗೌರಿ ಹತ್ಯೆ ತನಿಖೆ ನಡೆಸುತ್ತಿರುವ ಎಸ್‍ಐಟಿಗೆ ಅಭಿನಂದನೆ ಸಲ್ಲಿಸಬೇಕು. ಈ ತನಿಖೆಯಿಂದ ಹತ್ಯೆ ಹಿಂದೆ ಇರುವವರು ಯಾರು ಎಂಬುದು ಬೆಳಕಿಗೆ ಬಂದಿದೆ. ಬಿಜೆಪಿ ಆರ್‍ಎಸ್‍ಎಸ್ ದೇಶವನ್ನು ತಪ್ಪು ಹಾದಿಗೆ ತೆಗೆದುಕೊಂಡು ಹೋಗುತ್ತಿದೆ. ದೇಶದ ಭವಿಷ್ಯದ ಜೊತೆ ಚೆಲ್ಲಾಟ ಆಡಬಾರದು. ಪ್ರಧಾನ ಮಂತ್ರಿ ಮನ್ ಕೀ ಬಾತ್ ನಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸುತ್ತಿಲ್ಲ ಎಂದು ದೂಷಿಸಿದರು.
ಬೆಳಗಾವಿ: ಸುದ್ದಿಗೋಷ್ಠಿ ವೇಳೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಪಕ್ಕದಲ್ಲೇ ಕೂರಬೇಕೆಂದು ಕುರ್ಚಿಗಾಗಿ ಸ್ಥಳೀಯ ಮುಖಂಡರು ಕಿತ್ತಾಟ ನಡೆಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಮೋಹನ್ ಹಾಗೂ ಮಾಜಿ ಶಾಸಕ ಫಿರೋಜ್ ಸೇಠ್ ನಡುವೆ ಗಲಾಟೆ ಪ್ರಾರಂಭವಾಗಿದೆ. ತನ್ನ ತಮ್ಮನಿಗೆ ಕುರ್ಚಿ ಬಿಟ್ಟುಕೊಡುವಂತೆ ಮೋಹನ್ ಗೆ ಫಿರೋಜ್ ಸೇಠ್ ಅವಾಜ್ ಹಾಕಿದ್ದಾರೆ. ಬಳಿಕ ದಿನೇಶ್ ಗುಂಡೂರಾವ್ ಅವರೇ ಕುರ್ಚಿಗಾಗಿ ಕಿತ್ತಾಡುತ್ತಿದ್ದ ಮುಖಂಡರನ್ನು ಸಮಾಧಾನಪಡಿಸಿದ್ದಾರೆ.
ಕುರ್ಚಿ ಕಿತ್ತಾಟ ಶಮನಗೊಳಿಸಿ ಮಾತನಾಡಿದ ಗುಂಡೂರಾವ್, ಕಾಂಗ್ರೆಸ್ ಪಕ್ಷ ಎಲ್ಲಾ ಕಡೆಗಳಲ್ಲಿ ಸ್ಪರ್ಧೆ ಮಾಡಿದೆ. ನಮಗೆ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಮಾಡಲಿಲ್ಲ ಅಂತ ಜನರು ನಮ್ಮನ್ನ ತಿರಸ್ಕಾರ ಮಾಡಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಸೋಲಿಗೆ ಬೇರೆ ಬೇರೆ ಕಾರಣವಿದೆ. ಮುಂದಿನ ಲೋಕಸಭಾ ಚುನಾವಣೆಯ ಬೆಳಗಾವಿ, ಚಿಕ್ಕೋಡಿ ಗೆಲ್ಲುವುದು ನಮ್ಮ ಗುರಿಯಾಗಿದೆ ಎಂದರು.
ಸಾಲ ಮನ್ನಾ ವಿಚಾರದಲ್ಲಿ ಸಿಎಂ ಎಚ್‍ಡಿಕೆ ಕಾಂಗ್ರೆಸ್ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಯಾವುದೇ ತೀರ್ಮಾನ ಆದರೂ ಅದರಲ್ಲಿ ಇಬ್ಬರ ಪಾತ್ರ ಇರುತ್ತದೆ. ಸಾಲ ಮನ್ನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದ ಬೆಂಬಲವಿದೆ. ಒಂದೇ ಪಕ್ಷದ ಸರ್ಕಾರ ಇದ್ದಾಗ ಸಮನ್ವಯತೆ ಸಮಸ್ಯೆ ಇರುವುದಿಲ್ಲ. ಚುನಾವಣೆಯಲ್ಲಿ ವಿರೋಧ ಮಾಡದ ಪಕ್ಷಗಳು ಒಂದಾದಾಗ ಹೊಂದಾಣಿಕೆ ಸ್ವಲ್ಪ ಕಷ್ಟವಾಗುತ್ತೆ. ಹೀಗಾಗಿ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಣ್ಣಪುಟ್ಟ ಗೊಂದಲ ಸಹಜ. ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಸಮ್ಮಿಶ್ರ ಸರ್ಕಾರ ಬೀಳಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು, ನಮ್ಮ ಶಾಸಕರಿಗೆ ಹಣ, ಅಧಿಕಾರದ ಆಮೀಷ ಒಡ್ಡುತ್ತಿದ್ದಾರೆ. ನಾಲ್ಕು ವರ್ಷದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ನ್ಯಾಯ ಕೊಡಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಆದರೆ ಈಗ ಅಧಿಕಾರಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಕಳೆದ ನಾಲ್ಕು ವರ್ಷದಲ್ಲಿ ದೇಶಕ್ಕೆ ಮೋದಿ ಕೊಡುಗೆ ಏನು? ಬಿಜೆಪಿ ಕಾರ್ಯಕ್ರಮವೇ ಜನರ ದಿಕ್ಕು ತಪ್ಪಿಸುವುದು ಆಗಿದೆ ಎಂದು ತಿರುಗೇಟು ನೀಡಿದರು.
ಬೀದರ್: ಆಗಸ್ಟ್ 13 ರಂದು ನಡೆಯಲಿರುವ “ಜನಧ್ವನಿ” ಕಾರ್ಯಕ್ರಮದ ಮೂಲಕ ಲೋಕಸಭಾ ಚುನಾವಣೆಗೆ ರಣಕಹಳೆಯನ್ನು ಊದುವಂತ ಕೆಲಸ ಬೀದರ್ ಜಿಲ್ಲೆಯಿಂದ ಪ್ರಾರಂಭವಾಗುತ್ತೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಖಾಸಗಿ ಹೋಟೆಲ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದ ಮೂಲಕ ಲೋಕಸಭಾ ಚುನಾವಣೆಗೆ ರಣಕಹಳೆ ಮೊಳಗಲಿದ್ದು ಎಐಸಿಸಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಸಾಕ್ಷಿಯಾಗಲಿದ್ದಾರೆ. ಈ ಕಾರ್ಯಕ್ರಮಕ್ಕೆ 2 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದರು.
ಇದೇ ವೇಳೆ ಪ್ರಧಾನಿ ಮೋದಿ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ವೈ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದಲ್ಲಿ ಭಯೋತ್ಪಾದನೆ ಇವರ ಕಾಲದಲ್ಲಿ ಜಾಸ್ತಿಯಾಗಿದ್ದು, 4 ವರ್ಷದಲ್ಲಿ ಮೋದಿಯ ಕ್ರಾಂತಿಕಾರಿ ಸಾಧನೆ ಏನು?. ಭ್ರಷ್ಟಾಚಾಲ್ದ ವಿರುದ್ಧ ಲೋಕಪಾಲ್ ಮಸೂದೆ ರಚನೆ ಮಾಡೋಕೆ ಆಗಿಲ್ಲ. 4 ವರ್ಷದಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿ ಮಾಡದಂತಹ ಪ್ರಧಾನಿ ಮೋದಿ ಎಂದು ಕಿಡಿಕಾರಿದರು.
ಅಧಿಕಾರವಿಲ್ಲದೆ ಮುಖ್ಯಮಂತ್ರಿ ಆಗಬೇಕು ಎಂದು ಬಹಳ ಆಸೆ ಇಟ್ಟುಕೊಂಡವರು. ಆದ್ರೆ ಇದೀಗ ಅಧಿಕಾರ ಇಲ್ಲ. ಅದಕ್ಕೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಕೂಡಾ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.
ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಯ ಹಿನ್ನೆಲೆಯಲ್ಲಿ ಗುರುವಾರ ತಡರಾತ್ರಿ ಕೆಪಿಸಿಸಿ ಕಚೇರಿಯಲ್ಲಿ ರಹಸ್ಯ ಸಭೆಯೊಂದು ನಡೆದಿದೆ ಎಂದು ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಡಿ.ಕೆ.ಶಿವಕುಮಾರ್ ಮತ್ತು ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಸಭೆ ನಡೆದಿದೆ ಎನ್ನಲಾಗಿದೆ. ಸಭೆಯಲ್ಲಿ ಸ್ಥಳೀಯ ಚುನಾವಣೆಯ ದಿನಾಂಕ ಸಮೀಪಿಸುತ್ತಿದ್ದು, ಕಾಂಗ್ರೆಸ್‍ನಲ್ಲಿ ಹಣಕಾಸಿನ ಸಮಸ್ಯೆ ಕಾಣಿಸಿಕೊಂಡಿದೆಯಂತೆ. ಈ ಸಂಬಂಧ ಚುನಾವಣೆಗೆ ಹಣ ಹೇಗೆ ಹೊಂದಿಸಬೇಕು? ಹೇಗೆ ವ್ಯಯಿಸಬೇಕೆಂಬುದರ ಬಗ್ಗೆ ರಹಸ್ಯ ಮಾತುಕತೆಗಳು ನಡೆದಿವೆಯಂತೆ.
ಪಕ್ಷ ಕರೆದ ಸಭೆಗೆ ಸಚಿವ ಸ್ಥಾನ ಆಕಾಂಕ್ಷಿಗಳು ದೂರ ಉಳಿದಿದ್ದು, ಅಧಿಕಾರ ಮಾತ್ರ ನಿಮಗೆ ಹಣ ನಮ್ಮದು ಹೇಗೆ ಅಂತಾ ಹಿರಿಯ ನಾಯಕರನ್ನು ಪ್ರಶ್ನಿಸುತ್ತಿದ್ದಾರಂತೆ. ಮೊದಲು ಸಂಪುಟ ವಿಸ್ತರಣೆ ಮಾಡಿ, ಆಮೇಲೆ ಹಣ ಕೇಳಿ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಕೆಪಿಸಿಸಿ ಅಧ್ಯಕ್ಷರನ್ನು ಪ್ರಶ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇತ್ತ ಬೆಂಗಳೂರಿನಲ್ಲಿಯೇ ಇದ್ದರೂ ಸಚಿನ ಕೆ.ಜೆ.ಜಾರ್ಜ್ ಸಭೆಗೆ ಗೈರಾಗಿದ್ದರು. ಚುನಾವಣೆಗೆ ಹಣ ಹೊಂದಿಸುವ ಚಿಂತೆ ದಿನೇಶ್ ಗುಂಡೂರಾವ್ ಅವರನ್ನು ಕಾಡುತ್ತಿದೆಯಂತೆ. ಸದ್ಯಕ್ಕೆ ಹಣ ಹೊಂದಿಸುವ ವಿಚಾರವಾಗಿ ಡಿಸಿಎಂ ಪರಮೇಶ್ವರ್, ಡಿಕೆಶಿ ಹಾಗೂ ದೇಶಪಾಂಡೆಯಷ್ಟೇ ದಿನೇಶ್ ಗುಂಡೂರಾವ್ ನೆರವಿಗೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಬೆಂಗಳೂರು: ಕಾಂಗ್ರೆಸ್ ನಾಯಕರ ಅಜ್ಮೇರ್ ಯಾತ್ರೆಗೂ ಪೊಲಿಟಿಕಲ್ ಟ್ವಿಸ್ಟ್ ಸಿಕ್ಕಿದ್ದು ಹೈಕಮಾಂಡ್‍ಗೆ ದೂರು ದಾಖಲಾಗಿದೆ.
ಮಂಗಳವಾರ ಪೌರಾಡಳಿತ, ಬಂದರು ಮತ್ತು ಒಳನಾಡು ಸಾರಿಗೆ ರಮೇಶ್ ಜಾರಕಿಹೊಳಿ, ಸಂಸದ ಬಿ.ವಿ.ನಾಯಕ್, ವಿಧಾನ ಪರಿಷತ್ ಸದಸ್ಯ ವೀರಕುಮಾರ್ ಪಾಟೀಲ್, ಶಾಸಕರಾದ ಶ್ರೀಮಂತ ಕುಮಾರ್ ಪಾಟೀಲ್, ಬಳ್ಳಾರಿಯ ಬಿ.ನಾಗೇಂದ್ರ, ಗಣೇಶ್, ಭೀಮಾನಾಯಕ್, ತುಕಾರಾಂ, ಬಿ.ನಾರಾಯಣರಾವ್ ಸೇರಿದಂತೆ 13 ಮಂದಿ 5 ದಿನಗಳ ಅಜ್ಮೇರ್ ದರ್ಗಾ ಪ್ರವಾಸ ಕೈಗೊಂಡಿದ್ದಾರೆ. ಹರಕೆ ಪ್ರವಾಸ ಎಂದು ನಾಯಕರು ಹೇಳಿಕೊಳ್ಳುತ್ತಿದ್ದರೂ ಇದು ಶಕ್ತಿ ಪ್ರದರ್ಶನಕ್ಕೆ ಆಯೋಜಿಸಲಾದ ಪ್ರವಾಸ ಎನ್ನುವ ಮಾತು ಕೈ ವಲಯದಿಂದಲೇ ಕೇಳಿ ಬಂದಿದೆ.
ನಾಯಕರು ಅಜ್ಮೇರ್ ಪ್ರವಾಸಕ್ಕೆ ತೆರಳಿದ ವಿಚಾರಕ್ಕೆ ಸಂಬಂಧಿಸಿದಂತೆ ದೂರು ಬಂದ ಹಿನ್ನೆಲೆಯಲ್ಲಿ ಈ ವಿಚಾರವನ್ನು ಉಸ್ತುವಾರಿ ವೇಣುಗೋಪಾಲ್ ಗಂಭೀರವಾಗಿದೆ ಪರಿಗಣಿಸಿದ್ದಾರೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‍ಗೆ ದೂರವಾಣಿ ಕರೆ ಮಾಡಿರುವ ವೇಣುಗೋಪಾಲ್ ಯಾವ ಕಾರಣಕ್ಕೆ ರಮೇಶ್ ಜಾರಕಿಹೊಳಿ ನೇತೃತ್ವದ ತಂಡ ಒಟ್ಟಾಗಿ ಹೋಗಿದೆ? ನಿಮ್ಮ ಗಮನಕ್ಕೆ ತಂದು ಪ್ರವಾಸ ಹೋಗಿರುವರೇ ಎನ್ನುವ ಪ್ರಶ್ನೆಗಳಿಗೆ ಇಂದು ಸಂಜೆಯೊಳಗಾಗಿ ವರದಿ ನೀಡಬೇಕು ಎಂದು ಸೂಚಿಸಿದ್ದಾರೆ.
ಶಕ್ತಿ ಪ್ರದರ್ಶನ ಏನಕ್ಕೆ?
ಆಷಾಢ ಬಳಿಕ ಸಂಪುಟ ವಿಸ್ತರಣೆಯಾಗಲಿದ್ದು, ಜಿಲ್ಲೆಗೆ ಒಬ್ಬರಿಗೆ ಮಾತ್ರ ಮಂತ್ರಿಗಿರಿಯನ್ನು ಹೈಕಮಾಂಡ್ ನೀಡಲಿದೆ. ಹೀಗಾಗಿ ಮಾಜಿ ಸಚಿವ ಸತೀಶ್ ಜಾರಕಿಹೊಳಿಗೆ ಮಂತ್ರಿಗಿರಿ ನೀಡಿದರೆ ತಮ್ಮ ಸ್ಥಾನಕ್ಕೆ ಕುತ್ತು ಬರುತ್ತದೆ ಎಂದು ಅರಿತ ರಮೇಶ್ ಜಾರಕಿಹೊಳಿ ಪ್ರವಾಸದ ನೆಪದಲ್ಲಿ ಕಾಂಗ್ರೆಸ್ ನಾಯಕರಿಗೆ ತಮಗಿರುವ ಬೆಂಬಲ ತಿಳಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಸಚಿವರ ನೇತೃತ್ವದ ತಂಡವು ಬಿಜೆಪಿ ಶಾಸಕ ಶ್ರೀರಾಮುಲು ಜೊತೆಗೆ ಸಂಪರ್ಕದಲ್ಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಕೆಲವು ನಾಯಕರು ಕೆ.ಸಿ.ವೇಣುಗೋಪಾಲ್‍ಗೆ ಈ ಹಿಂದೆ ದೂರು ನೀಡಿದ್ದರು. ಹೀಗಾಗಿಯೇ ಕಾಂಗ್ರೆಸ್ಸಿನಲ್ಲಿ ರಮೇಶ್ ಜಾರಕಿಹೊಳಿ ಪ್ರವಾಸ ಗೊಂದಲಕ್ಕೆ ಕಾರಣವಾಗಿದೆ. ತನ್ನನ್ನ ಕಾಂಗ್ರೆಸ್ಸಿನಲ್ಲಿ ಕಡೆಗಣಿಸಿದರೆ ನನ್ನ ಜೊತೆಗೆ ಶಾಸಕರು ಇದ್ದಾರೆ ಎನ್ನುವ ಸಂದೇಶವನ್ನು ಹೈಕಮಾಂಡಿಗೆ ರವಾನಿಸಿ ಮಂತ್ರಿಗಿರಿ ಉಳಿಸಿಕೊಳ್ಳಲು ರಮೇಶ್ ಜಾರಕಿಹೊಳಿ ಈ ತಂತ್ರ ಹೂಡಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಬಿಜೆಪಿಯವರು ಹಿಂದುತ್ವವನ್ನು ಇಟ್ಟುಕೊಂಡು ಮಾಡಿದ ಅಪಪ್ರಚಾರಕ್ಕೆ ಸರಿಯಾಗಿ ಕೌಂಟರ್ ಕೊಡಲು ಸಾಧ್ಯವಾಗದ ಕಾರಣ ಚುನಾವಣೆಯಲ್ಲಿ ನಮಗೆ ಸೋಲಾಯಿತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಡೆದ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಮಾತನಾಡಿದ ಮಾಜಿ ಸಿಎಂ, ಬಿಜೆಪಿಯವರ ಸುಳ್ಳು ಪ್ರಚಾರವನ್ನು ಹತ್ತಿಕ್ಕುವಲ್ಲಿ ನಾವು ವಿಫಲವಾದೆವು. ಇದರಿಂದಾಗಿ ಕರಾವಳಿಯಲ್ಲಿ ಕಳೆದ ಬಾರಿ 19ರಲ್ಲಿ ನಾವು 13 ಕ್ಷೇತ್ರಗಳಲ್ಲಿ ಜಯಗಳಿಸಿದ್ದೇವು. ಆದರೆ ಈ ಬಾರಿ ಕೇವಲ 3 ಸ್ಥಾನ ಗೆಲುವು ಸಾಧಿಸಬೇಕಾಯಿತು ಎಂದು ಹೇಳಿದರು.
ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಯವರು 30 ಮತದಾರರಿಗೆ ಒಬ್ಬ ಏಜೆಂಟರ್ ಅನ್ನು ನೇಮಿಸಿದ್ದರು. ಅವರ ಕಾಯಕ ಮತದಾರರಿಗೆ ಸುಳ್ಳು ಹೇಳುವುದೇ ಆಗಿತ್ತು. ಅವರ ತಂತ್ರಕ್ಕೆ ನಾವು ಪ್ರಭಲ ಸ್ಪರ್ಧೆ ನೀಡಲಿಲ್ಲ. ಇದೇ ನಮಗೆ ಮುಳುವಾಯಿತು. 2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲು ಸಜ್ಜಾಗಬೇಕು. ಕೇಂದ್ರ ಬಿಜೆಪಿ ಸರ್ಕಾರ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಕಳೆದ ನಾಲ್ಕು ವರ್ಷದಿಂದ ಬಿಜೆಪಿಯವರು ಹಿಂದುತ್ವದ ವಿಚಾರ ಇಟ್ಟುಕೊಂಡು ಜನರನ್ನು ಯಮಾರಿಸುತ್ತಿದ್ದಾರೆ. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು. ದೇಶದಲ್ಲಿ ಬಿಜೆಪಿ ಮತ್ತೇ ಅಧಿಕಾರಕ್ಕೆ ಬರಬಾರದು. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 20 ಸ್ಥಾನಗಳನ್ನು ನಾವು ಗೆಲ್ಲಲೇಬೇಕು ಎಂದು ಕರೆ ಕೊಟ್ಟರು.
ಅನ್ನಭಾಗ್ಯದ ಅಕ್ಕಿ 7 ಕೆಜಿಯಿಂದ 5 ಕೆಜಿಗೆ ಇಳಿಸಲಾಗಿದೆ. ಅದನ್ನು ಮತ್ತೇ 7 ಕೆಜಿಗೆ ಹೆಚ್ಚಿಸಬೇಕು. ಪೆಟ್ರೋಲ್ ಹಾಗೂ ಡೀಸೆಲ್ ತೆರಿಗೆಯನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವೆ ಎಂದು ಈ ವೇಳೆ ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಯುವ ನಾಯಕರು. ಈಶ್ವರ್ ಖಂಡ್ರೆ ಅವರ ಆಯ್ಕೆಯಿಂದ ಉತ್ತರ ಕರ್ನಾಟಕ್ಕೆ ಮಹತ್ವ ಸಿಕ್ಕಿದೆ. ಹೀಗಾಗಿ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕಿದೆ. ಅಚ್ಚೇದಿನ್ ಆಯೇಗಾ ಮರೆಯಾಗಲಿದೆ. ಕೇಂದ್ರ ಸರ್ಕಾರ ನಾಲ್ಕು ವರ್ಷದಿಂದ ಮಾಡಿದ್ದೇನು? ರೈತರ ಅಭಿವೃದ್ಧಿಗೆ ಬಗ್ಗೆ ಕೇಂದ್ರ ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ. ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹೇಳಿದರು.
ಸದ್ಯದಲ್ಲಿಯೇ ಆಂಧ್ರಪ್ರದೇಶ, ಮಿಜೋರಾಂ, ಛತ್ತೀಸ್‍ಘಡ್ ಗಳಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿದೆ. ಈ ವೇಳೆ ಬಿಜೆಪಿಗೆ ಮತದಾರರು ಬುದ್ಧಿ ಕಲಿಸಲಿದ್ದಾರೆ. ದೇಶವನ್ನು ಒಡೆದು ಆಳುವವರಿಗೆ ಅವಕಾಶ ನೀಡಬಾರದು ಎಂದು ಅವರು ಕಿಡಿಕಾರಿದರು.
https://youtu.be/qPQ96qS9Bs0
ನಾಡಗೀತೆ ಹಾಡುವಾಗ ಎಡವಟ್ಟು:
ಸಮಯ ಉಳಿಸಲು ಎಲ್ಲರೂ ವೇದಿಕೆಗೆ ಆಗಮಿಸಿದ್ದರು. ಈ ವೇಳೆ ಯಾವುದೇ ಸೂಚನೆ ನೀಡದೇ, ಕಾರ್ಯಕ್ರಮ ಆರಂಭಕ್ಕು ಮುನ್ನವೆ ಏಕಾಏಕಿ ನಾಡಗೀತೆ ಆರಂಭಿಸಲಾಯಿತು. ಇದರಿಂದಾಗಿ ಸ್ವಲ್ಪ ಸಮಯದ ನಂತರ ಒಬ್ಬೊಬ್ಬರಾಗಿ ನಾಯಕರು ಎದ್ದು ನಿಂತರು. ಅಷ್ಟೇ ಅಲ್ಲದೆ ನಾಡಗೀತೆಯ ಮಧ್ಯೆದಲ್ಲಿಯೇ ಮೈಕಿನಲ್ಲಿ ಎಲ್ಲರೂ ಎದ್ದು ನಿಲ್ಲಿ, ಎದ್ದು ನಿಲ್ಲಿ ಎಂದು ಪ್ರಕಟಣೆ ಮಾಡಲಾಯಿತು. ಆದರೆ ಕೆಲವರು ಮೊಬೈಲ್ ನಲ್ಲಿಯೇ ಮಾತನಾಡುತ್ತ ನಿಂತಿದ್ದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ಆಗಮನಕ್ಕು ಮುನ್ನವೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜ್ಯೋತಿ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಳ್ಳಿ ಗದೆ ನೀಡಿ ಸನ್ಮಾನಿಸಲಾಯಿತು.
ಬೆಂಗಳೂರು: ನಾನು ಸಚಿವನಾಗಿ ಕೆಲಸ ಮಾಡಿದ್ದಕ್ಕಿಂತ ಹೆಚ್ಚು ಪಕ್ಷದ ಸಂಘಟನೆಯಲ್ಲಿಯೇ ತೊಡಗಿಸಿಕೊಂಡಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನ ಬಲಗೊಳಿಸುವುದೇ ನನ್ನ ಗುರಿ ಆ ನಿಟ್ಟಿನಲ್ಲಿ ಕಾರ್ಯ ಯೋಜನೆಗಳ ಬಗ್ಗೆ ರಾಜ್ಯದ ಹಿರಿಯ ಮತ್ತು ಹೈಕಮಾಂಡ್ ಜೊತೆ ಚರ್ಚಿಸಿ ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಅಂತಾ ಕೆಪಿಸಿಸಿಯ ನೂತನ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ಎರಡು ಪಕ್ಷಗಳು, ಸಮನ್ವಯದಿಂದ ಆಡಳಿತ ನಡೆಸುವುದರ ಜೊತೆಗೆ ಜನರ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ಮುಖ್ಯ, ಆ ಜವಾಬ್ದಾರಿಯನ್ನ ನಾನು ಸಮರ್ಥವಾಗಿ ನಿರ್ವಹಿಸುತ್ತೇನೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ನನಗೆ ಕೆಪಿಸಿಸಿ ಅಧ್ಯಕ್ಷರ ಜವಾಬ್ದಾರಿಯನ್ನ ನೀಡಿದ್ದಾರೆ. ರಾಹುಲ್ ಗಾಂಧಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಿರಿಯ ನಾಯಕರಿಗೆ ಕೃತಜ್ಞತೆ ಸಲ್ಲಿಸಿದರು.
2019 ರ ಲೊಕಸಭೆ ಚುನಾವಣೆಯ ಕಾಲಘಟ್ಟದಲ್ಲಿ ಪಕ್ಷ ಪ್ರಮುಖ ಜವಾಬ್ದಾರಿ ನೀಡಿದೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಎಂಪಿಗಳನ್ನ ಆರಿಸಿ ಕಳಿಸಬೇಕಿದೆ. ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ವಾಪಸ್ಸಾದ ಬಳಿಕ ಹಿರಿಯ ನಾಯಕರಾದ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಮನೆಗೆ ಬೇಟಿ ಕೊಟ್ಟು ಕೃತಜ್ಞತೆ ಸಲ್ಲಿಸಿದರು. ತಡರಾತ್ರಿ ದಿನೇಶ್ ಗುಂಡೂರಾವ್ ಮನೆಗೆ ಹೆಬ್ಬಾಳ ಶಾಸಕ ಭೈರತಿ ಸುರೇಶ್ ಮತ್ತು ಕಾಂಗ್ರಸ್ ಕಾರ್ಯಕರ್ತರು ಆಗಮಿಸಿ ಶುಭಾಶಯ ತಿಳಿಸಿದರು.
I thank @INCIndia President @RahulGandhi ji for appointing me as President, @INCKarnataka PCC. Along with @eshwar_khandre, we will strengthen the party & will try to live upto the expectations of all the leaders & workers.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) July 4, 2018