Tag: digvijay singh

  • ಭಾರತೀಯರು ಎಚ್ಚೆತ್ತುಕೊಳ್ಳದಿದ್ರೆ 2024ಕ್ಕೆ ಕೊನೆ ಚುನಾವಣೆ ಆಗುತ್ತೆ: ದಿಗ್ವಿಜಯ್ ಸಿಂಗ್

    ಭಾರತೀಯರು ಎಚ್ಚೆತ್ತುಕೊಳ್ಳದಿದ್ರೆ 2024ಕ್ಕೆ ಕೊನೆ ಚುನಾವಣೆ ಆಗುತ್ತೆ: ದಿಗ್ವಿಜಯ್ ಸಿಂಗ್

    ನವದೆಹಲಿ: ದೇಶದ ಜನರು ಎಚ್ಚೆತ್ತುಕೊಳ್ಳದಿದ್ರೆ 2024ಕ್ಕೆ ಭಾರತದಲ್ಲಿ ನಡೆಯುವ ಕೊನೆ ಚುನಾವಣೆ ಆಗಬಹುದು ಎಂದು ಹೇಳುವ ಮೂಲಕ ಇವಿಎಂ ಮೇಲೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅನುಮಾನ ವ್ಯಕ್ತಪಡಿಸಿದ್ದಾರೆ.

    ಪತ್ರಕರ್ತರೊಬ್ಬರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ದಿಗ್ವಿಜಯ್ ಸಿಂಗ್, ಮೇಡಂ ನಿಮ್ಮ ಮಾತು ಸತ್ಯ. ಇವಿಎಂ ತಂತ್ರಜ್ಞಾನ ಭಾರತದ ಸಂಸದೀಯ ಚುನಾವಣೆಯನ್ನ ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದು, ಭಾರತದ ಪ್ರಜಾಪ್ರಭುತ್ವ ಅವನತಿಯ ಸ್ಥಿತಿಯಲ್ಲಿದೆ. ಒಂದು ವೇಳೆ ಬ್ಯಾಲೆಟ್ ಪೇಪರ್ ಮರಳದಿದ್ರೆ 2024ಕ್ಕೆ ಕೊನೆ ದೇಶದದಲ್ಲಿ ಕೊನೆಯ ಚುನಾವಣೆ ಆಗಬಹುದು ಎಂದು ಟ್ವೀಟ್ ಮಾಡಿದ್ದಾರೆ.

    ಕಮಲ್‍ನಾಥ್ ಸರ್ಕಾರ ಗೋಶಾಲೆಗಳಿಗಾಗಿ 132 ಕೋಟಿ ರೂ. ಅನುದಾನ ಮೀಸಲು ಇರಿಸಿತ್ತು. ಆದ್ರೆ ಬಿಜೆಪಿ ಸರ್ಕಾರ ಮೊತ್ತವನ್ನ ಕಡಿತಗೊಳಿಸಿ 11 ಕೋಟಿಗೆ ತಂದಿದೆ. ಗೋ ಮಾತೆಯ ಅಸಲಿ ಭಕ್ತರು ಯಾರು ಎಂದು ಜನರು ತೀರ್ಮಾನಿಸಬೇಕಿದೆ ಎಂದು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  • ಮಧ್ಯಪ್ರದೇಶದಲ್ಲಿ ಆಪರೇಷನ್ ‘ಕಮಲ್’ನಾಥ್ – ಬಹುಮತ ಇಲ್ಲವೆಂದ ದಿಗ್ವಿಜಯ್ ಸಿಂಗ್

    ಮಧ್ಯಪ್ರದೇಶದಲ್ಲಿ ಆಪರೇಷನ್ ‘ಕಮಲ್’ನಾಥ್ – ಬಹುಮತ ಇಲ್ಲವೆಂದ ದಿಗ್ವಿಜಯ್ ಸಿಂಗ್

    ಭೋಪಾಲ್: ಮಧ್ಯಪ್ರದೇಶದ ರಾಜಕೀಯ ಹೈಡ್ರಾಮಾಗೆ ಇಂದು ತೆರೆಬೀಳಲಿದ್ದು, ಸಿಎಂ ಕಮಲ್‍ನಾಥ್ ವಿಶ್ವಾಸಮತ ಸಾಬೀತಿಗೂ ಮುನ್ನ ಪದತ್ಯಾಗ ಮಾಡಲಿದ್ದಾರೆ ಎಂಬ ಸುಳಿವನ್ನು ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ನೀಡಿದ್ದಾರೆ.

    ಸುಪ್ರೀಂಕೋರ್ಟ್ ಇಂದು ಸಂಜೆ 5 ಗಂಟೆಯೊಳಗೆ ವಿಶ್ವಾಸಮತ ಸಾಬೀತು ಪಡಿಸಬೇಕೆಂದು ಸೂಚನೆ ನೀಡಿತ್ತು. ಮ್ಯಾಜಿಕ್ ನಂಬರ್ ಇಲ್ಲದ ಕಾರಣ ಸಿಎಂ ಕಮಲನಾಥ್ ಪದತ್ಯಾಗ ಮಾಡಿದ್ದಾರೆ. ಈ ಕುರಿತು ಮಾತಾಡಿರುವ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, 22 ಶಾಸಕರ ರಾಜೀನಾಮೆಯಿಂದಾಗಿ ನಮ್ಮ ಬಳಿ ಬಹುಮತ ಇಲ್ಲ. ಹಣ ಮತ್ತು ಅಧಿಕಾರ ಪ್ರಯೋಗದಿಂದಾಗಿ ಬಹುಮತದ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಇಂದು ಸಂಜೆಯೊಳಗೆ ಕಮಲ್‍ನಾಥ್ ಬಹುಮತ ಸಾಬೀತು ಮಾಡದಿದ್ದರೆ ಸರ್ಕಾರ ಪತನವಾಗೋದು ಖಚಿತವಾಗಲಿದೆ. ವಿಶ್ವಾಸಮತ ಸಾಬೀತಿಗೂ ಮುನ್ನವೇ ದಿಗ್ವಿಜಯ್ ಸಿಂಗ್ ತಮ್ಮ ಬಳಿ ಬಹುಮತವಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದ ದಿಗ್ವಿಜಯ್ ಸಿಂಗ್ ನಗರದ ಹೊರವಲಯದ ರೆಸಾರ್ಟಿನಲ್ಲಿ ಉಳಿದುಕೊಂಡಿರುವ ಮಧ್ಯಪ್ರದೇಶದ ಶಾಸಕರ ಭೇಟಿಗೆ ಮುಂದಾಗಿದ್ದರು. ಆದ್ರೆ ಪೊಲೀಸರು ಭೇಟಿಗೆ ಅವಕಾಶ ಕಲ್ಪಿಸಲಿಲ್ಲ.

  • ಹೋಟೆಲ್‍ನಲ್ಲಿರುವ ಶಾಸಕರ ಭೇಟಿಯಾಗಲು ಕಾಂಗ್ರೆಸ್ ನಾಯಕರ ಹೈಡ್ರಾಮ

    ಹೋಟೆಲ್‍ನಲ್ಲಿರುವ ಶಾಸಕರ ಭೇಟಿಯಾಗಲು ಕಾಂಗ್ರೆಸ್ ನಾಯಕರ ಹೈಡ್ರಾಮ

    – ಡಿಜಿ ಭೇಟಿಯಾದರೂ ಪ್ರಯೋಜನವಾಗಲಿಲ್ಲ
    – ವೈಯಕ್ತಿಕ ನಿರ್ಧಾರ ಎಂದು ಅರ್ಜಿ ವಜಾ ಮಾಡಿದ ಹೈ ಕೋರ್ಟ್

    ಬೆಂಗಳೂರು: ಮಧ್ಯ ಪ್ರದೇಶದ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಲು ಅವಕಾಶ ನೀಡಬೇಕು ಎಂದು ಮಧ್ಯ ಪ್ರದೇಶದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಇಂದು ಬೆಂಗಳೂರಿನ ಯಲಹಂಕದ ಖಾಸಗಿ ರೆಸಾರ್ಟ್ ಬಳಿ ಪ್ರತಿಭಟನೆ ನಡೆಸಿದರು.

    ಯಲಹಂಕದ ಖಾಸಗಿ ಹೋಟೆಲ್ ಬಳಿ ದಿಗ್ವಿಜಯ್ ಸಿಂಗ್ ಧಾವಿಸುತ್ತಿದ್ದಂತೆ ಶಾಸಕರ ಭೇಟಿಗೆ ಅವಕಾಶ ಕೇಳಿದರು. ಆದರೆ ಪೊಲೀಸರು ಶಾಸಕರ ಭೇಟಿಗೆ ಅವಕಾಶ ನೀಡಲಿಲ್ಲ. ಇದರಿಂದ ಬೇಸತ್ತ ದಿಗ್ವಿಜಯ್ ಸಿಂಗ್ ರೆಸಾರ್ಟ್ ಮುಂಭಾಗದಲ್ಲಿ ಪ್ರತಿಭಟನೆಗೆ ಮುಂದಾದರು. ಈ ವೇಳೆ ಅಮೃತಹಳ್ಳಿ ಪೊಲೀಸರು ದಿಗ್ವಿಜಯ್ ಸಿಂಗ್ ಮತ್ತು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಲ್ಲ ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದರು.

    ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ನಿಯೋಜಿತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪೊಲೀಸರ ಕ್ರಮವನ್ನು ಖಂಡಿಸಿದರು. ನಂತರ ದಿಗ್ವಿಜಯ್ ಸಿಂಗ್ ಅವರನ್ನು ಬೆಂಗಳೂರು ನಗರ ಪೊಲೀಸರ ಕಚೇರಿಗೆ ಕರೆದುಕೊಂಡು ಹೋಗಿ ರೆಸಾರ್ಟ್‍ನಲ್ಲಿರುವ ಶಾಸಕರ ಭೇಟಿಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಅಲ್ಲೂ ಕೂಡ ಭೇಟಿಗೆ ಅವಕಾಶ ನೀಡಲು ನಿರಾಕರಿಸಲಾಯಿತು.

    ನಂತರ ಡಿಜಿ ಪ್ರವೀಣ್ ಸೂದ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದರು. ಹೈಕೋರ್ಟ್ ಸಹ ಭೇಟಿಗೆ ಅವಕಾಶ ನೀಡಲು ಸಾಧ್ಯವಿಲ್ಲ. ಅದು ಅವರ ಖಾಸಗಿ ನಿರ್ಧಾರ ಎಂದು ಅರ್ಜಿ ವಜಾಗೊಳಿಸಿತು. ಬಿಜೆಪಿ ಸರ್ಕಾರ ಮತ್ತು ನಗರ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಾಯಕರು, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಿದರು.

  • ಹಂದಿ ಜ್ವರದಿಂದ ಬಳಲ್ತಿದ್ದಾರಂತೆ ಜ್ಯೋತಿರಾದಿತ್ಯ ಸಿಂಧಿಯಾ!

    ಹಂದಿ ಜ್ವರದಿಂದ ಬಳಲ್ತಿದ್ದಾರಂತೆ ಜ್ಯೋತಿರಾದಿತ್ಯ ಸಿಂಧಿಯಾ!

    ಭೋಪಾಲ್: ಮಧ್ಯಪ್ರದೇಶದ ರಾಜಕೀಯದಲ್ಲಿ ಕ್ಷಣಕ್ಕೊಂದು ಬೆಳವಣಿಗೆಗಳು ನಡೆಯುತ್ತಿದ್ದು, ಬೆಂಗಳೂರಿನಲ್ಲಿರುವ ಕಾಂಗ್ರೆಸ್ ಶಾಸಕರ ಮುಂದಾಳತ್ವ ವಹಿಸಿರುವ ಜ್ಯೋತಿರಾದಿತ್ಯ ಸಿಂಧಿಯಾ ಹಂದಿಜ್ವರದಿಂದ ಬಳಲುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

    ನಾವು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೇವೆ. ಆದರೆ ಅವರು ಹಂದಿ ಜ್ವರದಿಂದ ಬಳಲುತ್ತಿದ್ದಾರಂತೆ. ಹೀಗಾಗಿ ನಾವು ಅವರೊಂದಿಗೆ ಮಾತನಾಡಲು ಸಾಧ್ಯವಾಗಿಲ್ಲ ಎಂದು ನಾಯಕರು ಫೋನ್ ಸ್ವಿಚ್ ಆಫ್ ಮಾಡಿಕೊಂಡಿರುವುದಕ್ಕೆ ಅಸಮಾಧಾನವನ್ನು ಹೊರ ಹಾಕಿದ್ದಾರೆ.

    ಮಧ್ಯಪ್ರದೇಶದಲ್ಲಿ ಮತದಾರರ ಆದೇಶವನ್ನು ಅಗೌರವಗೊಳಿಸಲು ಪ್ರಯತ್ನಿಸಿದರೆ ಅವರಿಗೆ ರಾಜ್ಯದ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ವಿರುದ್ಧ ದಿಗ್ವಿಜಯ್ ಸಿಂಗ್ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಕಮಲನಾಥ್ ಸಂಪುಟದ ಎಲ್ಲ ಸಚಿವರ ರಾಜೀನಾಮೆ

    ಮಧ್ಯಪ್ರದೇಶದ 6 ಸಚಿವರು, 12 ಕಾಂಗ್ರೆಸ್ ಶಾಸಕರು ಈಗಾಗಲೇ ಬೆಂಗಳೂರಿಗೆ ಬಂದಿದ್ದು, ಮಾರತಹಳ್ಳಿಯ ಖಾಸಗಿ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಬೆಂಗಳೂರಿಗೆ ಬಂದ ಕೈ ನಾಯಕರು ಜ್ಯೋತಿರಾದಿತ್ಯ ಸಿಂಧಿಯಾ ಬೆಂಬಲಿಗರಾಗಿದ್ದು ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಎಲ್ಲ ನಾಯಕರ ಫೋನ್ ಸ್ವಿಚ್ ಆಫ್ ಆಗಿದೆ.

    ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಏರಿದ ಬಳಿಕ ಮುಖ್ಯಮಂತ್ರಿ ಪಟ್ಟದ ವಿಚಾರದಲ್ಲಿ ಕಮಲನಾಥ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ನಡುವೆ ಸ್ಪರ್ಧೆ ಏರ್ಪಟಿತ್ತು. ಕೊನೆಗೆ ಕಾಂಗ್ರೆಸ್ ಹೈಕಮಾಂಡ್ ಕಮಲನಾಥ್ ಅವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ನೀಡಿತ್ತು. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಶಾಸಕರ ಮಧ್ಯೆ 2 ಬಣಗಳಿದ್ದು 23 ಮಂದಿ ನಾಯಕರು ಸಿಎಂ ಹುದ್ದೆಗೆ ಜ್ಯೋತಿರಾದಿತ್ಯ ಸಿಂಧಿಯಾ ಪರ ಬ್ಯಾಟಿಂಗ್ ಮಾಡಿದ್ದರು. ಈ ಶಾಸಕರ ಪೈಕಿ ಹಲವು ಶಾಸಕರು ಈಗ ಬೆಂಗಳೂರಿಗೆ ಆಗಮಿಸಿದ್ದಾರೆ ಎನ್ನಲಾಗುತ್ತಿದೆ.

  • ಕೊಟ್ಟ ಮಾತು ಉಳಿಸಿಕೊಳ್ಳದ ರಾಹುಲ್ ಕ್ಷಮೆ ಕೇಳಲಿ- ಕೈ ನಾಯಕ, ದಿಗ್ವಿಜಯ್ ಸಿಂಗ್ ಸಹೋದರ

    ಕೊಟ್ಟ ಮಾತು ಉಳಿಸಿಕೊಳ್ಳದ ರಾಹುಲ್ ಕ್ಷಮೆ ಕೇಳಲಿ- ಕೈ ನಾಯಕ, ದಿಗ್ವಿಜಯ್ ಸಿಂಗ್ ಸಹೋದರ

    ಭೋಪಾಲ್: ಸಾಲ ಮನ್ನಾ ವಿಚಾರದಲ್ಲಿ ಕಾಂಗ್ರೆಸ್ ನಾಯಕ ಗಾಂಧಿ ಮಾತು ತಪ್ಪಿದ್ದು, ಈ ಕುರಿತು ಜನತೆ ಬಳಿ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್‍ನ ಹಿರಿಯ ನಾಯಕ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಕಿರಿಯ ಸಹೋದರ ಲಕ್ಷ್ಮಣ್ ಸಿಂಗ್ ಒತ್ತಾಯಿಸಿದ್ದಾರೆ.

    ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ 10 ದಿನಗಳಲ್ಲಿ ಮಧ್ಯಪ್ರದೇಶದ ರೈತರ ಬಾಕಿ ಸಾಲವನ್ನು ಮನ್ನಾ ಮಾಡುತ್ತೇವೆ ಎಂದು ನೀಡಿದ್ದ ಭರವಸೆಯನ್ನು ಈಡೇರಿಸುವಲ್ಲಿ ವಿಫಲರಾಗಿದ್ದು, ಹೀಗಾಗಿ ರಾಹುಲ್ ಗಾಂಧಿ ಜನತೆಯ ಬಳಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

    ಭರವಸೆ ಈಡೇರಿಸದೇ ದೂರ ಇರುವುದರಿಂದ ಹಾಗೂ 10 ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡದಿರುವುದರಿಂದ ಕ್ಷಮೆಯಾಚಿಸಬೇಕು. ಇಂತಹ ಭರವಸೆಗಳನ್ನು ನೀಡಬಾರದು. ಭರವಸೆ ನೀಡುವ ಬದಲು ರೈತರ ಸಂಪೂರ್ಣ ಸಾಲವನ್ನು ಯಾವಾಗ ಮನ್ನಾ ಮಾಡಲಾಗುವುದು ಎಂದು ಸಮಯದ ಚೌಕಟ್ಟನ್ನು ನಿಗದಿಪಡಿಸಬೇಕು ಎಂದು ಲಕ್ಷ್ಮಣ್ ಸಿಂಗ್ ಹೇಳಿದ್ದಾರೆ.

    ಕಳೆದ ವರ್ಷ ಜೂನ್‍ನಲ್ಲಿ ರಾಜ್ಯದ ಮಂಡ್‍ಸೌರ್ ಜಿಲ್ಲೆಯಲ್ಲಿ ನಡೆದ ರೈತರ ರ್ಯಾಲಿಯನ್ನುದ್ದೇಶಿಸಿ ಮಾತನಾಡುವಾಗ ರಾಹುಲ್ ಗಾಂಧಿ ಈ ಭರವಸೆ ನೀಡಿದ್ದರು. ಆಗ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ, ರಾಜಸ್ಥಾನ ಮತ್ತು ಚತ್ತಿಸ್‍ಗಢದಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದರೆ ಆಡಳಿತ ವಹಿಸಿಕೊಂಡ 10 ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ತಿಳಿಸಿದ್ದರು.

    ನನ್ನನ್ನೂ ಸೇರಿದಂತೆ ಎಲ್ಲ ಕಾಂಗ್ರೆಸ್ ಶಾಸಕರು ಪ್ರತಿದಿನ ರೈತರನ್ನು ಭೇಟಿಯಾಗುತ್ತೇವೆ. ರಾಜ್ಯ ಸರ್ಕಾರ ಅವರಿಗೆ ಸಾಲ ಮನ್ನಾ ಪತ್ರಗಳನ್ನು ನೀಡಿದ್ದರೂ, ಸಂಬಂಧಪಟ್ಟ ಬ್ಯಾಂಕ್ ಆಡಳಿತದ ಮಟ್ಟದಲ್ಲಿ ಇನ್ನೂ ಸಾಲ ಮನ್ನಾ ಆಗಿಲ್ಲ ಎಂದು ನಮ್ಮ ಬಳಿ ಹೇಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೈತರು ಏನು ಮಾಡಲು ಸಾಧ್ಯ ಎಂದು ಲಕ್ಷಣ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.

    ಚಚೋಡಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಲಕ್ಷ್ಮಣ್ ಸಿಂಗ್ ಅವರು, ಕಮಲ್‍ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಸ್ಥಾನಮಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ. ಕಳೆದ ತಿಂಗಳು ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಹ ಅವರು ಹಾಡಿಹೊಗಳಿದ್ದರು.

  • ನೋಟ್ ಬ್ಯಾನ್ ವೇಳೆ ಕೂಡಿಟ್ಟ ಹಣದಿಂದ ಬಿಜೆಪಿ ಆಪರೇಷನ್ : ದಿಗ್ವಿಜಯ್ ಸಿಂಗ್

    ನೋಟ್ ಬ್ಯಾನ್ ವೇಳೆ ಕೂಡಿಟ್ಟ ಹಣದಿಂದ ಬಿಜೆಪಿ ಆಪರೇಷನ್ : ದಿಗ್ವಿಜಯ್ ಸಿಂಗ್

    ಮುಂಬೈ: ನೋಟ್ ಬ್ಯಾನ್ ಸಂದರ್ಭದಲ್ಲಿ ಕೂಡಿಟ್ಟ ಕೋಟ್ಯಂತರ ಹಣವನ್ನು ಇದೀಗ ವಿರೋಧ ಪಕ್ಷದ ಶಾಸಕರನ್ನು ಖರೀದಿಸಲು ಬಿಜೆಪಿ ಬಳಸುತ್ತಿದೆ ಎಂದು ಕಾಂಗ್ರೆಸ್‍ನ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.

    ಡಿ.ಕೆ.ಶಿವಕುಮಾರ್ ಅವರು ಮುಂಬೈನಲ್ಲಿದ್ದ ತಮ್ಮ ಸ್ನೇಹಿತ(ರೆಬೆಲ್ ಶಾಸಕ)ರನ್ನು ಭೇಟಿಯಾಗಲು ಬಂದಾಗ ಪೊಲೀಸರು ಹೋಟೆಲ್ ಒಳಗಡೆ ಪ್ರವೇಶಿಸಲು ನಿರಾಕರಿಸಿದರು. ಶಾಸಕರೂ ಸಹ ಅವರ ಕರೆ ಸ್ವೀಕರಿಸಿರಲಿಲ್ಲ. ಹೀಗಾಗಿ ಡಿ.ಕೆ.ಶಿವಕುಮಾರ್ ಹೋಟೆಲ್ ಪ್ರವೇಶಿಸಲು ಯತ್ನಿಸಿದ್ದರು. ಆದರೆ, ಪೊಲೀಸರು ಅವರನ್ನು ತಡೆದರು ಎಂದು ಡಿಕೆಶಿ ಪ್ರಕರಣವನ್ನು ದಿಗ್ವಿಜಯ್ ಸಿಂಗ್ ಪ್ರಸ್ತಾಪಿಸಿ, ಬಿಜೆಪಿ ಆಪರೇಷನ್ ಕಮಲದ ವಿರುದ್ಧ ಹರಿಹಾಯ್ದರು.

    ಇದೇ ವೇಳೆ ಮಧ್ಯಪ್ರದೇಶದ ಕಮಲ್‍ನಾಥ್ ಅವರ ಮೈತ್ರಿ ಸರ್ಕಾರದ ಕುರಿತು ಪ್ರತಿಕ್ರಿಯಿಸಿದ ಅವರು, ವಧ್ಯಪ್ರದೇಶದ ಸರ್ಕಾರ ಸುರಕ್ಷಿತವಾಗಿದೆ. ಮುಖ್ಯಮಂತ್ರಿ ಕಮಲ್‍ನಾಥ್ ಅವರು 121 ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಬಿಜೆಪಿ ಸರ್ಕಾರ ಬೀಳಿಸಲು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದೆ. ಮಧ್ಯಪ್ರದೇಶ ಸರ್ಕಾರ ಬೀಳುತ್ತದೆ ಎಂಬುದು ಕೇವಲ ವದಂತಿ. ಸರ್ಕಾರ ಸುಭದ್ರವಾಗಿದೆ ಎಂದು ಭರವಸೆ ವ್ಯಕ್ತಪಡಿಸಿದರು.

    ಡಿಕೆಶಿ ಮುಂಬೈ ಹೈಡ್ರಾಮಾ
    ಡಿ.ಕೆ.ಶಿವಕುಮಾರ್ ಅವರು ಅತೃಪ್ತ ಶಾಸಕರನ್ನು ಭೇಟಿ ಮಾಡಲು ತೆರಳಿದಾಗ ಮುಂಬೈ ಪೊಲೀಸರು ವಶಕ್ಕೆ ಪಡೆದು ಸಂಜೆ ಹೊತ್ತಿಗೆ ವಾಪಸ್ ಕಳುಹಿಸಿದ್ದರು. ಹೋಟೆಲ್ ಒಳಗಡೆ ಹೋಗಲು ಪೊಲೀಸರು ನಿರಾಕರಿಸುತ್ತಿದ್ದಂತೆಯೇ ಡಿಕೆಶಿ ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ನಿನ್ನೆ ಬಿಜೆಪಿಯವರನ್ನು ಬಿಟ್ಟಿದ್ದೀರಿ, ಇವತ್ತು ನಮ್ಮವರನ್ನು ಭೇಟಿ ಮಾಡಲು ಯಾಕೆ ಅವಕಾಶ ನೀಡುತ್ತಿಲ್ಲ ಎಂದು ಡಿಕೆಶಿ ಪ್ರಶ್ನಿಸಿದ್ದರು. ಹೀಗಾಗಿ ಇಬ್ಬರು ಮುಖಂಡರೊಂದಿಗೆ ಡಿಕೆಶಿ ಹೋಟೆಲ್ ಹೊರಗಡೆಯೇ ಕಾದು ಕುಳಿತಿದ್ದರು. ಕೊನೆಗೆ ಹೋಟೆಲ್ ಸಿಬ್ಬಂದಿ ಡಿಕೆ ಶಿವಕುಮಾರ್ ಹಠಕ್ಕೆ ಮಣಿದು ಶಾಸಕರು ತಂಗಿರುವ ಬಿಲ್ಡಿಂಗ್ ಬಿಟ್ಟು ಬೇರೆ ಬಿಲ್ಡಿಂಗ್‍ನಲ್ಲಿ ರೂಮ್ ಕೊಡಲು ನಿರ್ಧಾರ ಮಾಡಿದ್ದರು. ಆದರೆ, ಪಟ್ಟು ಬಿಡದ ಶಿವಕುಮಾರ್ ಶಾಸಕರು ತಂಗಿರುವ ಬಿಲ್ಡಿಂಗ್‍ನಲ್ಲೇ ರೂಮ್ ನೀಡುವಂತೆ ಹಠ ಹಿಡಿದಿದ್ದರು. ನಿಷೇಧಾಜ್ಞೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪೊಲೀಸರು ಡಿಕೆಶಿವಕುಮಾರ್ ಅವರನ್ನು ವಶಕ್ಕೆ ಪಡೆದು ಸಂಜೆ ವೇಳೆಗೆ ಬಿಡುಗಡೆ ಮಾಡಿದ್ದರು.

  • ಚುನಾವಣೆಯಲ್ಲಿ ದಿಗ್ವಿಜಯ್ ಸಿಂಗ್‍ಗೆ ಸೋಲು – ಸಮಾಧಿಗೆ ಅವಕಾಶ ನೀಡಿ ಎಂದ ‘ಮಿರ್ಚಿ ಬಾಬಾ’

    ಚುನಾವಣೆಯಲ್ಲಿ ದಿಗ್ವಿಜಯ್ ಸಿಂಗ್‍ಗೆ ಸೋಲು – ಸಮಾಧಿಗೆ ಅವಕಾಶ ನೀಡಿ ಎಂದ ‘ಮಿರ್ಚಿ ಬಾಬಾ’

    ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಗೆಲ್ಲದಿದ್ದರೆ ಸಮಾಧಿ ಆಗುವುದಾಗಿ ಹೇಳಿದ್ದ ವೈರಗಾನಂದ್ ಬಾಬಾ ಅಲಿಯಾಸ್ ಮಿರ್ಚಿ ಬಾಬಾ ಮತ್ತೆ ಸುದ್ದಿಯಲ್ಲಿದ್ದಾರೆ.

    ಚುನಾವಣೆಯಲ್ಲಿ ದಿಗ್ವಿಜಯ್ ಸಿಂಗ್ ಅವರು ಸಾಧ್ವಿ ಪ್ರಗ್ಯಾ ಸಿಂಗ್ ವಿರುದ್ಧ ಗೆಲುವು ಪಡೆಯುತ್ತಾರೆ. ಇಲ್ಲವಾದರೆ ತಾವು ಸಮಾಧಿ ತೆಗೆದುಕೊಳ್ಳುವುದಾಗಿ ಬಾಬಾ ತಿಳಿಸಿದ್ದರು. ಸದ್ಯ ಸಾಧ್ವಿ ಪ್ರಗ್ಯಾ ಸಿಂಗ್ ಪ್ರಚಂಡ ಗೆಲುವು ಪಡೆದ ಕಾರಣ ತಾನು ಸಾಯೋದಕ್ಕೆ ಸಮಾಧಿ ಅವಕಾಶ ನೀಡಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಬಾಬಾರ ಈ ಮನವಿಯನ್ನು ಜಿಲ್ಲಾಧಿಕಾರಿಗಳು ತಳ್ಳಿ ಹಾಕಿದ್ದಾರೆ.

    ಲೋಕಸಭಾ ಚುನಾವಣೆಯ ಮತದಾನಕ್ಕೂ ಮುನ್ನ ಮಿರ್ಚಿ ಬಾಬಾ ದಿಗ್ವಿಜಯ್ ಸಿಂಗ್ ಗೆಲುವಿಗಾಗಿ ಭಾರೀ ಪ್ರಮಾಣದಲ್ಲಿ ಹೋಮ ಹವನ ನಡೆಸಿದ್ದರು. ಆ ವೇಳೆ ಹವನ ಮಾಡಿಸಿದ್ದರೆ ದಿಗ್ವಿಜಯ್ ಸಿಂಗ್ ಗೆಲುವು ಖಚಿತ ಎಂದು ಹೇಳಿದ್ದರು. ಮಿರ್ಚಿ ಬಾಬಾ ಸಲ್ಲಿಸಿರುವ ಮನವಿ ಅನ್ವಯ ಜೂನ್ 16 ರ ಮಧ್ಯಾಹ್ನ 2 ಗಂಟೆ 11 ನಿಮಿಷಕ್ಕೆ ಬಾಬಾ ಸಮಾಧಿ ತೆಗೆದುಕೊಳ್ಳಲು ಅನುಮತಿ ನೀಡುವಂತೆ ಕೋರಿದ್ದರು.

  • ದಿಗ್ವಿಜಯ್ ಸಿಂಗ್ ಪರ ಬಿಜೆಪಿಯ ಮಾಜಿ ಸಚಿವ ಪ್ರಚಾರ

    ದಿಗ್ವಿಜಯ್ ಸಿಂಗ್ ಪರ ಬಿಜೆಪಿಯ ಮಾಜಿ ಸಚಿವ ಪ್ರಚಾರ

    ಭೋಪಾಲ್: ಬಿಜೆಪಿಯ ಮಾಜಿ ಸಚಿವ ಕಂಪ್ಯೂಟರ್ ಬಾಬಾ ಅವರು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಪರ ಪ್ರಚಾರ ಮಾಡುತ್ತಿದ್ದಾರೆ.

    ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ಲೋಕಸಭಾ ಕ್ಷೇತ್ರದಿಂದ ದಿಗ್ವಿಜಯ್ ಸಿಂಗ್ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಅವರ ಗೆಲುವಿಗಾಗಿ ಕಂಪ್ಯೂಟರ್ ಬಾಬಾ ಅವರು ಹಠ ಯೋಗ ಮಾಡುತ್ತಿದ್ದಾರೆ. ಸಾವಿರಾರು ಸಾಧುಗಳು ಕೂಡ ಹಠ ಯೋಗದಲ್ಲಿ ಭಾಗಿಯಾಗಿದ್ದಾರೆ.

    ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕಂಪ್ಯೂಟರ್ ಬಾಬಾ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಐದು ವರ್ಷ ಸರ್ಕಾರ ನಡೆಸಿದರೂ ರಾಮ ಮಂದಿರ ನಿರ್ಮಾಣ ಮಾಡಲಿಲ್ಲ. ರಾಮ ಮಂದಿನ ಇಲ್ಲವೆಂದಮೇಲೆ ಮೋದಿಯೂ ಇಲ್ಲ ಎಂದು ಹೇಳಿದ್ದಾರೆ.

    ಕಂಪ್ಯೂಟರ್ ಬಾಬಾ ನೇತೃತ್ವದಲ್ಲಿ ದಿಗ್ವಿಜಯ್ ಸಿಂಗ್ ಅವರು ಇಂದು ಕುಟುಂಬ ಸಮೇತ ವಿಶೇಷ ಪೂಜೆ ನೆರವೇರಿಸಿದರು. ಇತ್ತ ಅನೇಕ ಸಾಧುಗಳು ಹಠ ಯೋಗದಲ್ಲಿ ನಿರತರಾಗಿದ್ದಾರೆ.

    ದಿಗ್ವಿಜಯ್ ಸಿಂಗ್ ಅವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಸಾಧ್ವಿ ಪ್ರಜ್ಞಾಸಿಂಗ್ ಕಣಕ್ಕೆ ಇಳಿದಿದ್ದಾರೆ. ಹೀಗಾಗಿ ಈ ನಾಯಕರ ಮಧ್ಯೆ ಭರ್ಜರಿ ಪೈಪೋಟಿ ಏರ್ಪಟ್ಟಿದೆ. ಮಧ್ಯಪ್ರದೇಶದ ಸಾಗರ್, ಭೋಪಾಲ್ ಸೇರಿದಂತೆ 8 ಲೋಕಸಭಾ ಕ್ಷೇತ್ರಗಳ ಮತದಾನವು ಮೇ 12ರಂದು ನಡೆಯಲಿದೆ.

  • ದೇಶಕ್ಕೆ ಗಾಂಧಿ ಬೇಕೇ ಹೊರತು, ಹಿಟ್ಲರ್, ಮೋದಿಗಳಲ್ಲ: ದಿಗ್ವಿಜಯ್ ಸಿಂಗ್

    ದೇಶಕ್ಕೆ ಗಾಂಧಿ ಬೇಕೇ ಹೊರತು, ಹಿಟ್ಲರ್, ಮೋದಿಗಳಲ್ಲ: ದಿಗ್ವಿಜಯ್ ಸಿಂಗ್

    ನವದೆಹಲಿ: ದೇಶಕ್ಕೆ ಮಹಾತ್ಮಾ ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್ ಅವರತಂಹ ನಾಯಕರು ಬೇಕೇ ಹೊರತು, ಸರ್ವಾಧಿಕಾರಿಗಳಾದ ಹಿಟ್ಲರ್, ಮುಸ್ಲೋನಿ, ಮೋದಿಗಳಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಪ್ರಧಾನಿ ವಿರುದ್ಧ ಕಿಡಿಕಾರಿದ್ದಾರೆ.

    ನ್ಯೂಜಿಲ್ಯಾಂಡ್‍ನಲ್ಲಿ ನಡೆದ ಮಸೀದಿ ದಾಳಿಯನ್ನು ಖಂಡಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ್ದಾರೆ. ಇದನ್ನು ರೀ ಟ್ವೀಟ್ ಮಾಡಿದ ದಿಗ್ವಜಯ್ ಸಿಂಗ್ ಅವರು, ಕೇಂದ್ರ ಸರ್ಕಾರ ಹಾಗು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ರಾಹುಲ್ ಜೀ ಅವರ ಮಾತನ್ನು ನಾನು ಒಪ್ಪಿಕೊಳ್ಳುತ್ತೇನೆ. ಜಗತ್ತು ಪ್ರೀತಿ, ಶಾಂತಿಯ ಸಿದ್ಧಾಂತವನ್ನು ಬಯಸುತ್ತದೆ. ಹೀಗಾಗಿ ಮಹಾವೀರ್ ಹಾಗೂ ಗೌತಮ ಬುದ್ಧನ ಶಾಂತಿ ಹಾಗೂ ಸಹಬಾಳ್ವೆಯನ್ನು ಜನರಿಗೆ ನೀಡಲು ಯತ್ನಿಸಬೇಕೇ ಹೊರತು ದ್ವೇಷ, ಯುದ್ಧಗಳನ್ನಲ್ಲ ಎಂದು ದಿಗ್ವಜಯ್ ಸಿಂಗ್ ತಿಳಿಸಿದ್ದಾರೆ.

    ರಾಹುಲ್ ಗಾಂಧಿ ಹೇಳಿದ್ದೇನು?:
    ನ್ಯೂಜಿಲ್ಯಾಂಡ್‍ನಲ್ಲಿ ಉಗ್ರರು ನಡೆಸಿದ ಅಮಾನವೀಯ ಕೃತ್ಯ ಖಂಡನೀಯವಾಗಿದೆ. ವಿಶ್ವದಲ್ಲಿ ಸಹಾನುಭೂತಿ ಮತ್ತು ತಿಳುವಳಿಕೆ ಅವಶ್ಯಕವಾಗಿದೆ. ಭಯೋತ್ಪಾದನೆಯನ್ನು ದ್ವೇಷಿಸಬೇಕೇ ಹೊತು ಧರ್ಮವನಲ್ಲ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಂತಾಪ ತಿಳಿಸುತ್ತಿರುವೆ. ಜೊತೆಗೆ ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಧಾನಿ ಮೋದಿಗೆ ದಿಗ್ವಿಜಯ್ ಸಿಂಗ್ ಚಾಲೆಂಜ್

    ಪ್ರಧಾನಿ ಮೋದಿಗೆ ದಿಗ್ವಿಜಯ್ ಸಿಂಗ್ ಚಾಲೆಂಜ್

    ನವದೆಹಲಿ: ನಿಮಗೆ ಅಷ್ಟೊಂದು ಧೈರ್ಯವಿದ್ದರೆ, ದಯವಿಟ್ಟು ನನ್ನ ವಿರುದ್ಧ ಕೇಸ್ ಹಾಕಿ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಸವಾಲೆಸೆದಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಸಿಂಗ್, ನೀವು ಹಾಗೂ ನಿಮ್ಮ ಸಚಿವರು ನನ್ನನ್ನು ಪಾಕಿಸ್ತಾನಕ್ಕೆ ಬೆಂಬಲಿಸುವವ ಹಾಗೂ ದೇಶದ್ರೋಹಿ ಎಂದು ಹೇಳಿದ್ದೀರಿ. ನಾನು ಆ ಟ್ವೀಟನ್ನು ದೆಹಲಿಯಿಂದಲೇ ಮಾಡಿದ್ದೆ. ಹೀಗಾಗಿ ದೆಹಲಿಯಲ್ಲಿರುವ ಪೊಲೀಸರು ಕೇಂದ್ರ ಸರ್ಕಾರದ ಅಧೀನದಲ್ಲಿ ಬರುತ್ತಾರಲ್ಲವೇ..? ಹೀಗಾಗಿ ನಿಮಗೆ ಧೈರ್ಯವಿದ್ದರೆ ನನ್ನ ವಿರುದ್ಧ ಕೇಸ್ ದಾಖಲಿಸಿ ಎಂದು ಚಾಲೆಂಜ್ ಹಾಕಿದ್ದಾರೆ.

    ಸಿಂಗ್ ಮಾಡಿದ್ದ ಟ್ವೀಟ್ ನಲ್ಲೇನಿತ್ತು..?
    ದಿಗ್ವಿಜಯ ಸಿಂಗ್ ಅವರು ಮಂಗಳವಾರ ಏರ್ ಸ್ಟ್ರೈಕ್ ನಡೆಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲದೆ ಪುಲ್ವಾಮಾ ದಾಳಿ ಒಂದು ಘಟನೆ ಆಕ್ಸಿಡೆಂಟ್ ಮಾತ್ರ ಎಂದು ಶಂಕೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಪುಲ್ವಾಮಾ ದುರ್ಘಟನೆಯ ನಂತರ ಭಾರತೀಯ ವಾಯುಪಡೆ ನಡೆಸಿದ ದಾಳಿಯಿಂದ ಪಾಕಿಸ್ತಾನದಲ್ಲಿರುವ ಉಗ್ರಗಾಮಿ ಶಿಬಿರಗಳು ನಾಶವಾಗಿರುವ ಬಗ್ಗೆ ವಿದೇಶಿ ಮಾಧ್ಯಮಗಳು ಅನುಮಾನ ವ್ಯಕ್ತಪಡಿಸಿವೆ. ಇದು ಸರ್ಕಾರ ನೀಡುತ್ತಿರುವ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಕೂಡ ಅವರು ಹೇಳಿದ್ದರು.

    ಈ ಹೇಳಿಕೆಗೆ ವಿಕೆ ಸಿಂಗ್ ತಿರುಗೇಟು ನೀಡಿ ದಿಗ್ವಿಜಯ್ ಸಿಂಗ್ ಸೇರಿದಂತೆ ಏರ್ ಸ್ಟ್ರೈಕ್ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಬಗ್ಗೆ ಕಿಡಿಕಾರಿದ್ದರು. ನಾನು ದಿಗ್ವಿಜಯ್ ಸಿಂಗ್‍ರನ್ನು ಗೌರವದಿಂದ ಪ್ರಶ್ನೆ ಮಾಡುತ್ತಿದ್ದೇನೆ. ರಾಜೀವ್ ಗಾಂಧಿ ಅವರ ಹತ್ಯೆ ಅಪಘಾತವೇ ಅಥವಾ ಉಗ್ರರ ದಾಳಿಯೇ ಎಂದು ಪ್ರಶ್ನಿಸಿದ್ದರು.

    ಏರ್ ಸ್ಟ್ರೈಕ್ ನಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಪ್ರಶ್ನೆಗೆ ವಾಯುಸೇನೆ ಉತ್ತರ ನೀಡಿರಲಿಲ್ಲ. ಏರ್ ಚೀಫ್ ಮಾರ್ಷಲ್ ಧನೋವಾ ಅವರು ಸತ್ತವರ ಹೆಣವನ್ನು ಲೆಕ್ಕಹಾಕುವುದು ನಮ್ಮ ಕೆಲಸವಲ್ಲ. ನಮಗೆ ಏನು ಗುರಿಯನ್ನು ನೀಡಲಾಗಿತ್ತೋ ಆ ಗುರಿಯನ್ನು ಯಶಸ್ವಿಯಾಗಿ ಹೊಡೆದು ಹಾಕಿದ್ದೇವೆ ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv