Tag: digital

  • ಸ್ಥಳೀಯ ಕುಶಲಕರ್ಮಿ, ನೇಕಾರರಿಗೆ ಆನ್ ಲೈನ್ ಮಾರಾಟದಲ್ಲಿ ಭರ್ಜರಿ ಏರಿಕೆ

    ಸ್ಥಳೀಯ ಕುಶಲಕರ್ಮಿ, ನೇಕಾರರಿಗೆ ಆನ್ ಲೈನ್ ಮಾರಾಟದಲ್ಲಿ ಭರ್ಜರಿ ಏರಿಕೆ

    ಬೆಂಗಳೂರು: ಭಾರತೀಯ ಕುಶಲಕರ್ಮಿಗಳು (Handicraft) ಮತ್ತು ನೇಕಾರರು (Handloom) ತಮ್ಮ ಸಾಂಪ್ರದಾಯಿಕ ಕಲೆ ಮತ್ತು ಜೀವನೋಪಾಯವನ್ನು ಕಾಪಾಡಿಕೊಳ್ಳಲು ಭಾರೀ ಹೋರಾಟವನ್ನು ನಡೆಸುತ್ತಿದ್ದಾರೆ. ಸದ್ಯಕ್ಕೆ ತಾವು ಉತ್ಪಾದಿಸಿದ ವಸ್ತುಗಳ ಮಾರಾಟದಲ್ಲಿ ಭಾರೀ ಏರಿಕೆ ಕಾಣುತ್ತಿರುವುದಕ್ಕೆ ಆನ್‌ಲೈನ್ (Online) ಪ್ಲಾಟ್‌ಫಾರ್ಮ್‌ಗಳಿಗೆ ಋಣಿಯಾಗಿದ್ದಾರೆ.

    ಉದಾಹರಣೆಗೆ, ನಶಿಸುತ್ತಿರುವ ಕರಕುಶಲ ಕಲೆಯನ್ನು ಜೀವಂತವಾಗಿ ಇರಿಸಲು ಡಿಜಿಟಲ್‌ನ (Digital) ಶಕ್ತಿಯನ್ನು ಬಳಸಿಕೊಳ್ಳಲು ಪ್ರಾರಂಭಿಸಿದ್ದಾರೆ ಸ್ಥಳೀಯ ಮಾರಾಟಗಾರ ಅದಿಲ್. ಶತಮಾನದ ಹಳೆಯ ಅವರ ಕುಟುಂಬ ನಿಯಂತ್ರಿತ ವ್ಯಾಪಾರ ಚನ್ನಪಟ್ಟಣ ಆಟಿಕೆಗಳು ಹಲವಾರು ಸ್ಥಳೀಯ ಕುಶಲಕರ್ಮಿಗಳ ಮೇಲೆ ಪರಿಣಾಮ ಬೀರುತ್ತವೆ. ನನ್ನೊಂದಿಗೆ ಸುಮಾರು 35 ಕುಶಲಕರ್ಮಿಗಳು ಕೆಲಸ ಮಾಡುತ್ತಿದ್ದಾರೆ. ಕೆಲವರು 40 ವರ್ಷಕ್ಕೂ ಹೆಚ್ಚು ಕಾಲ ಕೆಲಸ ಮಾಡುತ್ತಿದ್ದರೆ, ಇನ್ನೂ ಕೆಲವರು 60 ವರ್ಷ ವಯಸ್ಸಿನವರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

    ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಈ ಕುಶಲಕರ್ಮಿಗಳಿಗೆ ಜೀವನೋಪಾಯದ ಪ್ರಮುಖ ಮೂಲವಾಗಿವೆ. ಈ ಸೌಲಭ್ಯಗಳು ನನ್ನ ತಂದೆ ಮತ್ತು ತಾತನಿಗೆ ಇರಲಿಲ್ಲ. ಆದರೆ ಇಂದು ನಾನು ಕಡಿಮೆ ಹೂಡಿಕೆಯೊಂದಿಗೆ ಖರೀದಿದಾರರ ಜೊತೆಗೆ ತೊಡಗಿಸಿಕೊಳ್ಳಲು ಮತ್ತು ದೊಡ್ಡ ಪರಿಣಾಮ ರೂಪಿಸಲು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಶಕ್ತಿಯನ್ನು ಬಳಸಿಕೊಳ್ಳಬಹುದು. ನಮ್ಮ ಭವ್ಯವಾದ ಕರಕುಶಲ ಪರಂಪರೆ ಸಂರಕ್ಷಿಸುವ ಜೊತೆಗೆ ವ್ಯಾಪಾರವನ್ನು ಹೆಚ್ಚಿಸಲು ಮತ್ತು ಈ ವಿಶಿಷ್ಟ ಚನ್ನಪಟ್ಟಣದ ಆಟಿಕೆಗಳನ್ನು ಭಾರತದಿಂದ ಜಗತ್ತಿಗೆ ಲಭ್ಯವಾಗುವಂತೆ ಮಾಡಲು ನಾನು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.

    ಆಂಧ್ರಪ್ರದೇಶ ಮೂಲದ ಆದಿಲಕ್ಷ್ಮಿ ಟಾಯ್ಸ್‌ನ ಮಾಲೀಕ ಅಡವಿ ಶ್ರೀನಿವಾಸ್ ಅವರಿಗೆ ತಮ್ಮ ಉದ್ಯಮಶೀಲತೆಯ ಕನಸನ್ನು ಉತ್ತೇಜಿಸಲು ಸಾಮಾಜಿಕ ಮಾಧ್ಯಮ ಮತ್ತು ಜಿಯೋಮಾರ್ಟ್ ಸೇರಿದಂತೆ ಹೊಸ ವಿತರಣೆ ಚಾನೆಲ್‌ಗಳತ್ತ ಮುಖ ಮಾಡಿದ್ದಾರೆ. ಜಿಯೋಮಾರ್ಟ್‌ನ ಕ್ರಾಫ್ಟ್ಸ್ ಮೇಳಗಳಂತಹ ಆನ್‌ಲೈನ್ ಮಳಿಗೆಗಳಿಂದ ಕುಶಲಕರ್ಮಿಗಳು ಮತ್ತು ಶ್ರೀನಿವಾಸ್ ಅವರಂತಹ ಉದ್ಯಮಿಗಳಿಗೆ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ದೇಶಾದ್ಯಂತದ ಹೊಸ ಗ್ರಾಹಕರಿಗೆ ತಲುಪಿಸಲು ಸಹಾಯ ಮಾಡುತ್ತವೆ.

    ತಮಿಳುನಾಡಿನ ಈರೋಡ್‌ನ ಲಾವಣ್ಯಾ ಅವರು ಹೊಸ ಗ್ರಾಹಕರನ್ನು ಹುಡುಕಲು ಮತ್ತು ಕಾರ್ಯಾಚರಣೆಯನ್ನು ಹೆಚ್ಚಿಸಲು ದರ್ಭಾಯಿ ಮತ್ತು ಸಾಂಬು ನದಿ ಹುಲ್ಲಿನಿಂದ ನೇಯ್ದ ಯೋಗ ಮತ್ತು ಧ್ಯಾನ ಮ್ಯಾಟ್‌ಗಳನ್ನು ಮಾರಾಟ ಮಾಡುವ 100 ವರ್ಷಗಳ ಹಳೆಯ ಮತ್ತು ಸ್ಪಾರ್ಟಾನ್ ಕುಟುಂಬ ನಡೆಸುವ ಅಂಗಡಿಯನ್ನು ಆನ್‌ಲೈನ್‌ನಲ್ಲಿ ತಂದಿದ್ದಾರೆ. ಸಾಂಕ್ರಾಮಿಕ ಸಮಯದಲ್ಲಿ ಕೆಲಸ ಕಳೆದುಕೊಂಡ ನಂತರ ನನ್ನ ಹಳ್ಳಿಯ ಜನರು ಇತರ ನಗರಗಳಿಂದ ಮರಳಿದರು ಎಂದು 17 ವರ್ಷಗಳ ಕೆಲಸದ ಅನುಭವ ಹೊಂದಿರುವ ಸಾಫ್ಟ್‌ವೇರ್ ಎಂಜಿನಿಯರ್ ಲಾವಣ್ಯಾ ಹೇಳುತ್ತಾರೆ.

    ಅವರ ಮೂರನೇ ತಲೆಮಾರಿನ ವ್ಯವಹಾರವನ್ನು ಮುಂದುವರಿಸಲು ತಮ್ಮ 9-5 ಗಂಟೆ ತನಕ ಮಾಡುವ ಕೆಲಸವನ್ನು ತೊರೆದಿದ್ದಾರೆ. ಪುರುಷ ಮತ್ತು ಸ್ತ್ರೀ ಕುಶಲಕರ್ಮಿಗಳಿಗೆ ಕೈಮಗ್ಗದ ಟವೆಲ್ ಮತ್ತು ಯೋಗ ಹಾಗೂ ಧ್ಯಾನ ಮ್ಯಾಟ್‌ಗಳನ್ನು ನೇಯಲು ತರಬೇತಿ ನೀಡುವುದಕ್ಕೆ ನಾನು ನಿರ್ಧರಿಸಿದೆ. ಅವರ ಜೀವನೋಪಾಯವು ಇದರ ಮೇಲೆ ಅವಲಂಬಿತವಾಗಿದೆ ಎಂದು ತಿಳಿಸಿದ್ದಾರೆ.

    ಪ್ರಬಲವಾದ ವ್ಯಾಪಾರವನ್ನು ರೂಪಿಸುವುದಕ್ಕೆ ತನ್ನ ಹಳ್ಳಿಯಲ್ಲಿ ನೇಕಾರರ ಜೀವನೋಪಾಯವನ್ನು ಬೆಂಬಲಿಸಲು ಮತ್ತು ತನ್ನ ಸಮುದಾಯದ ಇತರ ಮಹಿಳೆಯರಿಗೆ ಮಾದರಿಯಾಗಿ, ಲಾವಣ್ಯಾ ತನ್ನದೇ ಆದ ವೆಬ್‌ಸೈಟ್ ಅನ್ನು ಪ್ರಾರಂಭಿಸಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಲು ಶುರು ಮಾಡಿದರು. ನಾನು ಜಿಯೋಮಾರ್ಟ್‌ನಂತಹ ಆನ್‌ಲೈನ್ ಮಾರ್ಕೆಟ್ ಪ್ಲೇಸ್‌ಗಳಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದೇನೆ. ಅಲ್ಲಿ ಇತ್ತೀಚೆಗೆ ನನ್ನ ಉತ್ಪನ್ನಗಳನ್ನು ಲಿಸ್ಟ್ ಮಾಡಿದ್ದೇನೆ ಮತ್ತು ಆರ್ಡರ್‌ಗಳನ್ನು ಪಡೆಯಲು ಪ್ರಾರಂಭಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಕೃಷಿ, ಜಲ ಸಂಪನ್ಮೂಲ ಅಭಿವೃದ್ಧಿಯಲ್ಲಿ ದೇಶದಲ್ಲೇ ರಾಯಚೂರಿಗೆ ಫಸ್ಟ್ ರ‍್ಯಾಂಕ್

    2019 ರಲ್ಲಿ ಹೈದರಾಬಾದ್‌ನ ದಿಲ್‌ಸುಖ್ ನಗರದಲ್ಲಿ ಆದಿಲಕ್ಷ್ಮಿ ಟಾಯ್ಸ್ ಪ್ರಾರಂಭಿಸಲು 18 ವರ್ಷಗಳ ಕೆಲಸವನ್ನು ತೊರೆದ ಇನ್ನೊಬ್ಬ ಮಾರಾಟಗಾರ ಶ್ರೀನಿವಾಸ್ ಕೂಡ ಡಿಜಿಟಲ್ ವಿತರಣಾ ಚಾನೆಲ್‌ಗಳನ್ನು ಅನುಸರಿಸುವ ಮೂಲಕ ಫೇಸ್‌ಬುಕ್ ಜಾಹೀರಾತುಗಳತ್ತ ಹೊರಳಿದರು ಮತ್ತು ದೃಢವಾದ ಸಾಮಾಜಿಕ ಮಾಧ್ಯಮ ಉಪಸ್ಥಿತಿಯನ್ನು ರೂಪಿಸುವ ಮೂಲಕ ಹೆಚ್ಚಿನ ಮಾರಾಟವನ್ನು ಮಾಡುತ್ತಿದ್ದಾರೆ.

    ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ನೇಕಾರರಿಗೆ ಡಿಜಿಟಲೈಸೇಷನ್ ಬಗ್ಗೆ ಸ್ವಲ್ಪವೇ ತಿಳಿದಿದೆ. ಅವರ ಕಲೆಯನ್ನು ಮುನ್ನಲೆಗೆ ತರುವುದು ಮತ್ತು ಅವರನ್ನು ಬೆಂಬಲಿಸುವುದು ಬಹಳ ಮುಖ್ಯ. ವಿಷಕಾರಿಯಲ್ಲದ, ಬಾಳಿಕೆ ಬರುವ ಮತ್ತು ಸುಸ್ಥಿರವಾಗಿರುವ ಮರದ ಆಟಿಕೆಗಳನ್ನು ಉತ್ತೇಜಿಸುವುದು ನಮ್ಮ ಗುರಿಯಾಗಿದೆ ಎಂದು ಜಿಯೋಮಾರ್ಟ್ನ ಮಾರಾಟಗಾರ ಶ್ರೀನಿವಾಸ್ ಹೇಳುತ್ತಾರೆ.

    ಹಲವಾರು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಂದ ಹೆಚ್ಚುತ್ತಿರುವ ಆರ್ಡರ್‌ಗಳನ್ನು ಪಡೆಯುವುದರ ಹೊರತಾಗಿ, ಅವರು ಸದ್ಯಕ್ಕೆ ಆಟಿಕೆಗಳನ್ನು ರಫ್ತು ಮಾಡುತ್ತಿದ್ದಾರೆ. ಇನ್ನೂ ಕುತೂಹಲಕಾರಿ ಅಂಶ ಏನೆಂದರೆ, ಅವರ ಗ್ರಾಹಕರಲ್ಲಿ ಹೆಚ್ಚಿನವರು 40 ರಿಂದ 50 ವರ್ಷ ವಯಸ್ಸಿನವರಾಗಿದ್ದಾರೆ. ಇದನ್ನೂ ಓದಿ: ವಿಜಯ್ ಮಲ್ಯಗೆ ಮುಳುವಾಗಿದ್ದ ಟಿಪ್ಪು ಖಡ್ಗ 145 ಕೋಟಿಗೆ ಹರಾಜು

  • ವಿವಿಗಳಲ್ಲಿ ಇ-ಆಫೀಸ್ ಕಡ್ಡಾಯ, ಮಾರ್ಚ್ 1ರವರೆಗೆ ಡೆಡ್‍ಲೈನ್: ಅಶ್ವತ್ಥ ನಾರಾಯಣ

    ವಿವಿಗಳಲ್ಲಿ ಇ-ಆಫೀಸ್ ಕಡ್ಡಾಯ, ಮಾರ್ಚ್ 1ರವರೆಗೆ ಡೆಡ್‍ಲೈನ್: ಅಶ್ವತ್ಥ ನಾರಾಯಣ

    ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ವಿಶ್ವವಿದ್ಯಾಲಯಗಳು ಮಾರ್ಚ್ 1ರಿಂದ ತನ್ನ ಎಲ್ಲ ಕಡತಗಳನ್ನು ಇ-ಕಚೇರಿ ಮೂಲಕವೇ ಅನ್‍ಲೈನ್‍ನಲ್ಲಿ ಕಳುಹಿಸುವುದನ್ನು ಕಡ್ಡಾಯ ಮಾಡಲಾಗಿದೆ. ಈ ಗಡುವಿನ ನಂತರ ಭೌತಿಕವಾಗಿ ಬರುವ ಎಲ್ಲ ಕಡತಗಳನ್ನು ವಾಪಸ್ ಕಳುಹಿಸುವಂತೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಈ ಬಗ್ಗೆ ತಮ್ಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ಇ-ಆಫೀಸ್ ತಂತ್ರಾಂಶದ ಮೂಲಕವೇ ಕಡತಗಳನ್ನು ಕಳುಹಿಸಲು ವಿ.ವಿ.ಗಳಿಗೆ ಈ ಹಿಂದೆಯೇ ಸೂಚಿಸಲಾಗಿತ್ತು. ಆದರೂ ಕೆಲ ವಿ.ವಿ.ಗಳಲ್ಲಿ ಈ ಕೆಲಸ ಆಗಿಲ್ಲದಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ:  ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

    ತಮ್ಮ ಕಚೇರಿಯು ಈಗಾಗಲೇ ಸಂಪೂರ್ಣವಾಗಿ ಇ-ಆಫೀಸ್ ತಂತ್ರಾಂಶದ ಮೇಲೆಯೇ ಕೆಲಸ ಮಾಡುತ್ತಿದೆ. ಆದರೆ ಇಲಾಖೆಗೆ ವಿ.ವಿ.ಗಳಿಂದ ಎಲ್ಲ ಪತ್ರಗಳು, ಕಡತಗಳು ಮತ್ತು ಪ್ರಸ್ತಾವನೆಗಳು ಭೌತಿಕ ರೂಪದಲ್ಲಿ ಬರುತ್ತಿವೆ. ಇದರಿಂದಾಗಿ ಇ-ಆಫೀಸ್ ತಂತ್ರಾಂಶ ಅಳವಡಿಕೆಯ ಮೂಲ ಉದ್ದೇಶವೇ ವಿಫಲವಾದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಉಕ್ರೇನ್‍ನಲ್ಲಿ ಸಿಲುಕಿದ್ದಾರೆ 10 ಮಂದಿ ಕರ್ನಾಟಕ ವಿದ್ಯಾರ್ಥಿಗಳು!

    ವಿ.ವಿ.ಗಳ ಆಡಳಿತವೂ ಸೇರಿದಂತೆ ಪ್ರತಿಯೊಂದು ಕೆಲಸವೂ ತ್ವರಿತವಾಗಿ ಮತ್ತು ಪಾರದರ್ಶಕವಾಗಿ ನಡೆಯುವಂತೆ ಮಾಡಬೇಕೆನ್ನುವುದು ಇ-ಆಫೀಸ್ ತಂತ್ರಾಂಶದ ಗುರಿಯಾಗಿದೆ. ವಿ.ವಿ.ಗಳು ಸಮಕಾಲೀನ ಶೈಲಿಯನ್ನು ಅಳವಡಿಸಿಕೊಳ್ಳದಿದ್ದರೆ ಅಪ್ರಸ್ತುತವಾಗಲಿವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

    ಎನ್‍ಇಪಿ ಅನುಸಾರ ವಿ.ವಿ.ಗಳಲ್ಲಿ ನಡೆಯುತ್ತಿರುವ ಡಿಜಿಟಲೀಕರಣ, ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಅಳವಡಿಕೆ, ರಾಷ್ಟ್ರೀಯ ಶೈಕ್ಷಣಿಕ ಕೋಶ (ಎನ್‍ಎಡಿ), ಇ-ಆಫೀಸ್ ಬಳಕೆಗೆ ವಿ.ವಿ.ಗಳಲ್ಲಿನ ಸಿಬ್ಬಂದಿಯನ್ನು ಹೇಗೆ ಸಿದ್ಧಗೊಳಿಸಲಾಗಿದೆ ಎನ್ನುವುದನ್ನು ಪರಿಶೀಲಿಸಲು ಒಂದು ಸಮಿತಿಯನ್ನು ರಚಿಸಿ, 15 ದಿನಗಳಲ್ಲಿ ತಮಗೆ ವರದಿ ನೀಡುವಂತೆಯೂ ಸೂಚಿಸಿದ್ದಾರೆ.

  • PhonePe ಮೂಲಕ ಹಣವನ್ನು ಸ್ವೀಕರಿಸುತ್ತಾನೆ ಡಿಜಿಟಲ್ ಭಿಕ್ಷುಕ

    PhonePe ಮೂಲಕ ಹಣವನ್ನು ಸ್ವೀಕರಿಸುತ್ತಾನೆ ಡಿಜಿಟಲ್ ಭಿಕ್ಷುಕ

    ಬಿಹಾರ: ನಾವು ಡಿಜಿಟಲ್ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಇಂದಿನ ದಿನಗಳಲ್ಲಿ ಹೆಚ್ಚಿನ ವ್ಯವಹಾರಗಳು ಆನ್‍ಲೈನ್ ಮೂಲಕವಾಗಿ ಆಗುತ್ತಿದೆ. ಸಾಂಕ್ರಾಮಿಕವು ನಮ್ಮ ಅನೇಕ ವಹಿವಾಟುಗಳನ್ನು ನಗದುರಹಿತವಾಗುವಂತೆ ಮಾಡಿತು. ಈ ಬದಲಾವಣೆಯನ್ನು ಅಳವಡಿಸಿಕೊಂಡ ಬಿಹಾರದ ಭಿಕ್ಷುಕ ಈಗ ಡಿಜಿಟಲ್ ಆಗಿ ಡಿಜಿಟಲ್ ಪಾವತಿಯನ್ನು ಸ್ವೀಕರಿಸುತ್ತಿದ್ದಾನೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ಬೆತಿಯಾ ರೈಲ್ವೇ ನಿಲ್ದಾಣದಲ್ಲಿ ಭಿಕ್ಷೆ ಕೇಳುವ 40 ವರ್ಷದ ರಾಜು ಪಟೇಲ್, ತನ್ನ ಕುತ್ತಿಗೆಗೆ ಸ್ಕ್ಯಾನಿಂಗ್ ಫಲಕವನ್ನು ಹಾಕಿಕೊಂಡಿದ್ದಾರೆ. ಆನ್‍ಲೈನ್ ಮೂಲವಾಗಿ ಹಣವನ್ನು ವರ್ಗಾಹಿಸಿ ಭಿಕ್ಷೆ ನೀಡಿ ಎಂದು ಕೇಳುತ್ತಾರೆ. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದುಬಿಟ್ರೆ ಇಡೀ ರಾಜ್ಯದ ಜನರಿಗೆ ಹಿಜಬ್ ಹಾಕಿಸುತ್ತಾರೆ: ಸುನಿಲ್ ಕುಮಾರ್

    ಖಾಸಗಿ ವಾಹಿನಿ ಜೊತೆ ಮಾತನಾಡಿದ ರಾಜು ಪಟೇಲ್, ನಾನು ಡಿಜಿಟಲ್ ಪಾವತಿಗಳನ್ನು ಸ್ವೀಕರಿಸುತ್ತೇನೆ. ನನ್ನ ಹೊಟ್ಟೆಯನ್ನು ತುಂಬಿಸಲು ಸಾಕು. ನಾನು ನನ್ನ ಬಾಲ್ಯದಿಂದಲೂ ಇಲ್ಲಿ ಭಿಕ್ಷೆ ಬೇಡುತ್ತಿದ್ದೆ ಆದರೆ ಈ ಡಿಜಿಟಲ್ ಯುಗದಲ್ಲಿ ಭಿಕ್ಷಾಟನೆಯ ವಿಧಾನವನ್ನು ಬದಲಾಯಿಸಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಕಿನಿ, ಜೀನ್ಸ್, ಹಿಜಬ್ ಹೀಗೆ ತಾನು ಏನು ಧರಿಸಬೇಕೆಂದು ನಿರ್ಧರಿಸುವುದು ಮಹಿಳೆಯ ಹಕ್ಕು : ಪ್ರಿಯಾಂಕಾ ಗಾಂಧಿ

    ಭಿಕ್ಷೆ ಬೇಡಿಕೊಂಡ ನಂತರ ನಾನು ನಿಲ್ದಾಣದಲ್ಲಿಯೇ ಮಲಗುತ್ತೇನೆ. ಜೀವನೋಪಾಯಕ್ಕೆ ಬೇರೆ ದಾರಿ ಕಾಣಲಿಲ್ಲ. ಅನೇಕ ಬಾರಿ, ಜನರು ತಮ್ಮ ಬಳಿ ಚಿಲ್ಲರೆ ಹಣವಿಲ್ಲ ಎಂದು ಭಿಕ್ಷೆ ನೀಡಲು ನಿರಾಕರಿಸುತ್ತಾರೆ. ಹೀಗಾಗಿ ಪೇ-ಫೋನ್‍ಗಳಂತಹ ಇ-ವ್ಯಾಲೆಟ್‍ಗಳ ಯುಗದಲ್ಲಿ ನಾವು ಹಣವನ್ನು ಕೈಯಲ್ಲಿಟ್ಟುಕೊಂಡು ಓಡಾಡುವುದಿಲ್ಲ ಎಂದು ಅನೇಕ ಪ್ರಯಾಣಿಕರು ಹೇಳಿದರು. ಈ ಕಾರಣದಿಂದಾಗಿ ನಾನು ಬ್ಯಾಂಕ್ ಖಾತೆ ಮತ್ತು ಇ-ವ್ಯಾಲೆಟ್‍ನ್ನು ತೆರೆದಿದ್ದೇನೆ. ಕೆಲವು ಕೈಯಲ್ಲಿ ಹಣ ನೀಡುತ್ತಾರೆ, ಇನ್ನೂ ಹಲವರು ಫೋನ್‌ಪೇ, ಗೂಗಲ್‌ಪೇ ಗಳನ್ನು ಬಳಸಿ ಹಣವನ್ನು ನೀಡುತ್ತಾರೆ ಎಂದು ಹೇಳಿದ್ದಾರೆ.

    ಬ್ಯಾಂಕ್ ಖಾತೆ ತೆರೆಯಲು ಆಧಾರ್ ಮತ್ತು ಪ್ಯಾನ್ ಕಾರ್ಡ್ ಕೇಳಿದ್ದರು. ಎಲ್ಲಾ ದಾಖಲೆಗಳನ್ನು ಸಿದ್ಧಮಾಡಿಕೊಂಡು ಬೆತಿಯಾದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಶಾಖೆಯಲ್ಲಿ ಖಾತೆಯನ್ನು ತೆರೆದೆ. ಸದ್ಯ ಬೆಟ್ಟಿಯಾ ರೈಲು ನಿಲ್ದಾಣದ ಸುತ್ತಮುತ್ತ ಡಿಜಿಟಲ್ ಭಿಕ್ಷೆ ಕೇಳುತ್ತೇನೆ ಎಂದು ಹೇಳಿದ್ದಾರೆ.

  • ಮಾರ್ಚ್ ಹೊತ್ತಿಗೆ ಇಡೀ ಶಿಕ್ಷಣ ವ್ಯವಸ್ಥೆ ಡಿಜಿಟಲ್ ರೂಪಾಂತರ: ಅಶ್ವಥ್ ನಾರಾಯಣ್

    ಮಾರ್ಚ್ ಹೊತ್ತಿಗೆ ಇಡೀ ಶಿಕ್ಷಣ ವ್ಯವಸ್ಥೆ ಡಿಜಿಟಲ್ ರೂಪಾಂತರ: ಅಶ್ವಥ್ ನಾರಾಯಣ್

    -ಶಿಕ್ಷಣದಲ್ಲಿ ಉತ್ಕೃಷ್ಟತೆ ಸಾಧಿಸದೆ ನಮಗೆ ಉಳಿಗಾಲವಿಲ್ಲ

    ಬಳ್ಳಾರಿ: ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಅನ್ವಯಿಸುವ ಮೂಲಕ ಕ್ರಾಂತಿಕಾರಕ ಬದಲಾವಣೆಗಳನ್ನು ತರುತ್ತಿದ್ದು, ಮುಂಬರುವ ಮಾರ್ಚ್ ಹೊತ್ತಿಗೆ ರಾಜ್ಯದ ಇಡೀ ಶಿಕ್ಷಣ ವ್ಯವಸ್ಥೆಯನ್ನು ಡಿಜಿಟಲ್ ಆಗಿ ರೂಪಾಂತರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವಥ್ ನಾರಾಯಣ್  ಹೇಳಿದ್ದಾರೆ.

    ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಮತ್ತು ನಾಸ್ಕಾಂ ನಡುವಿನ ಒಡಂಬಡಿಕೆಗೆ ಮತ್ತು ಎನ್‍ಇಪಿ ವಿಚಾರ ಸಂಕಿರ್ಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಲ್ಲಿ ಡಿಜಿಟಲಿಕರಣದಿಂದಾಗಿ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಸ್ಕಿಲ್ಸ್ ಪಾಸ್ ಪೋರ್ಟ್, ಸ್ಕಿಲ್ಸ್ ವ್ಯಾಲೆಟ್ ಮತ್ತು ಬ್ಯಾಡ್ಜಸ್ ನಂತಹ ಜಾಗತಿಕ ಗುಣಮಟ್ಟದ ಕೌಶಲ್ಯಗಳು ಉಚಿತವಾಗಿ ಸಿಗಲಿವೆ ಎಂದರು. ಇದನ್ನೂ ಓದಿ: ಭಾರತೀಯ ಮಕ್ಕಳ ಸರ್ವಾಂಗಿಣ ಅಭಿವೃದ್ಧಿಗಾಗಿ ನೂತನ ಶಿಕ್ಷಣ ನೀತಿ ಜಾರಿ: ಬೊಮ್ಮಾಯಿ

    ಶಿಕ್ಷಣದಲ್ಲಿ ಉತ್ಕೃಷ್ಟತೆ ಸಾಧಿಸದೆ ನಮಗೆ ಉಳಿಗಾಲವಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು, ನಾಸ್ಕಾಂನ `ಫ್ಯೂಚರ್ ಸ್ಕಿಲ್ಸ್ ಪ್ರೈಮ್’ ವೇದಿಕೆ ಸೇರಿದಂತೆ ಇತರ ಮೂಲಗಳಿಂದ ಈ ಶೈಕ್ಷಣಿಕ ವರ್ಷದಿಂದಲೇ 10 ಸಾವಿರ ಶಿಕ್ಷಕರಿಗೆ ಡಿಜಿಟಲ್ ತರಬೇತಿ ಕೊಡಲಾಗುವುದು. ಇನ್ಫೋಸಿಸ್ ಸಂಸ್ಥೆ ಮತ್ತು ಧಾರವಾಡದ ಉನ್ನತ ಶಿಕ್ಷಣ ಅಕಾಡೆಮಿ ಮೂಲಕವೂ 3 ಸಾವಿರ ಶಿಕ್ಷಕರಿಗೆ ಇಂತಹ ವಿಶ್ವ ಗುಣಮಟ್ಟದ ತರಬೇತಿಯನ್ನು ಒದಗಿಸಲಾಗುವುದು ಎಂದು ಮಾಹಿತಿ ಹಂಚಿಕೊಂಡರು.

    ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕೇವಲ ಎರಡು ವರ್ಷಗಳಲ್ಲಿ 3.50 ಲಕ್ಷ ಕಲಿಕಾ ಸಾಮಗ್ರಿ ಸಿದ್ಧಪಡಿಸಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಎಲ್ಲಿದ್ದರೂ ನಿರಂತರವಾಗಿ ಕಲಿಯಬಹುದಾಗಿದೆ. ಬಹಳ ಉತ್ತಮವಾದ ಕಲಿಕೆಯ ಮಾದರಿಯನ್ನು ಪ್ರಪ್ರಥಮವಾಗಿ ಅಳವಡಿಸಿಕೊಂಡಿರುವ ರಾಜ್ಯದತ್ತ ಇಡೀ ಭಾರತವೇ ತಿರುಗಿ ನೋಡುತ್ತಿದೆ ಎಂದು ಸಚಿವರು ನುಡಿದರು. ಇದನ್ನೂ ಓದಿ: ಹೊಸ ಶಿಕ್ಷಣ ನೀತಿಯಲ್ಲಿ ಕಾಂಬಿನೇಶನ್‍ನಿಂದ ಕೋರ್ಸ್, ಸಬ್ಜೆಕ್ಟ್‌ಗೆ ಬದಲಾಯಿಸಲಾಗಿದೆ: ಅಶ್ವಥ್ ನಾರಾಯಣ್

    ಕರ್ನಾಟಕವೇ ಇವತ್ತು ದೇಶದ ಜ್ಞಾನ ಮತ್ತು ಆರ್ಥಿಕ ರಾಜಧಾನಿಯಾಗಿದ್ದು, ಅಮೆರಿಕದಂತೆ ಉಜ್ವಲ ಅವಕಾಶಗಳಿವೆ. ಈ ವಿಚಾರದಲ್ಲಿ ನಾವು ಮುಂಬೈಯನ್ನು ಹಿಂದಿಕ್ಕಿದ್ದೇವೆ. ಸಂಶೋಧನೆ ಮತ್ತು ಆವಿಷ್ಕಾರಗಳ ತೊಟ್ಟಿಲಾಗಿರುವ ರಾಜ್ಯದ ಶಿಕ್ಷಣ ಕ್ಷೇತ್ರದತ್ತ ಈಗ ಇಡೀ ವಿಶ್ವವೇ ನೋಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಆನ್‍ಲೈನ್ ಪಾಠ ಕೇಳಿ ಕುಗ್ಗಿದ್ದ ಮಕ್ಕಳಿಗೆ ವಿಶೇಷ ತರಬೇತಿ ನೀಡಿದ ಸುರಾನ ವಿದ್ಯಾಲಯ

    ಎನ್‍ಇಪಿ ಗುರಿಯಂತೆ ಪ್ರತಿಯೊಬ್ಬ ಶಿಕ್ಷಿಕನಿಗೂ ಉದ್ಯೋಗ ಸಿಗಬೇಕು, ಇಲ್ಲವೇ ಉದ್ಯೋಗದಾತನಾಗಬೇಕು. ಈ ನಿಟ್ಟಿನಲ್ಲಿ ಕಲಿಕೆ, ಪ್ರಾಯೋಗಿಕತೆ, ನಾಯಕತ್ವ, ಕೌಶಲ್ಯ ಮತ್ತು ಪ್ರಾಜೆಕ್ಟ್ ಆಧರಿತ ಕಲಿಕೆಯನ್ನು ಜಾರಿಗೆ ತರಲಾಗಿದೆ. ಜೊತೆಗೆ ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನ ಆಯಾಯ ತರಗತಿಗಳಲ್ಲೇ ನಡೆಯಲಿದೆ ಎಂದು ವಿವರಿಸಿದರು.

  • ಜಿಯೋ ಟಿವಿ ಪ್ಲಸ್‌ – ನೆಟ್‌ಫ್ಲಿಕ್ಸ್‌, ಪ್ರೈಂ, ಹಾಟ್‌ಸ್ಟಾರ್‌, ಯೂಟ್ಯೂಬ್‌.. ಎಲ್ಲದ್ದಕ್ಕೂ ಒಂದೇ ಲಾಗಿನ್‌ ಐಡಿ

    ಜಿಯೋ ಟಿವಿ ಪ್ಲಸ್‌ – ನೆಟ್‌ಫ್ಲಿಕ್ಸ್‌, ಪ್ರೈಂ, ಹಾಟ್‌ಸ್ಟಾರ್‌, ಯೂಟ್ಯೂಬ್‌.. ಎಲ್ಲದ್ದಕ್ಕೂ ಒಂದೇ ಲಾಗಿನ್‌ ಐಡಿ

    ಮುಂಬೈ: ನೆಟ್‌ಫ್ಲಿಕ್ಸ್‌,ಅಮೆಜಾನ್‌ ಪ್ರೈಂ, ಡಿಸ್ನಿ ಹಾಟ್‌ಸ್ಟಾರ್‌… ಇವುಗಳನ್ನು ಇನ್ನು ಮುಂದೆ ಒಂದೇ ಲಾಗಿನ್‌ ಐಡಿ ಮೂಲಕ ವೀಕ್ಷಿಸಬಹುದು.  ಜಿಯೋಫೈಬರ್ ಸೆಟ್ ಟಾಪ್ ಬಾಕ್ಸ್‌  ಸೆಟ್‌ಟಾಪ್‌ ಬಾಕ್ಸ್‌ ಖರೀದಿಸಿದ್ರೆ ಈ ಎಲ್ಲ ಒಟಿಟಿ(ಓವರ್‌ ದಿ ಟಾಪ್‌) ಅಪ್ಲಿಕೇಶನ್‌ಗಳನ್ನು ಜಿಯೋ ಟಿವಿ‌ ಪ್ಲಸ್ ನಲ್ಲಿ ನೋಡಬಹುದು.

    ರಿಲಯನ್ಸ್‌ ಇಂಡಸ್ಟ್ರೀಸ್‌ ಕಂಪನಿಯ ವಾರ್ಷಿಕ ಸಭೆಯಲ್ಲಿ ಕಂಪನಿ ಈ ಘೋಷಣೆ ಮಾಡಿದೆ. ಇದರ ವಿಶೇಷ ಏನೆಂದರೆ ಧ್ವನಿ ಮೂಲಕ ಸರ್ಚ್‌ ಮಾಡಬಹುದಾಗಿದೆ. ಉದಾಹರಣೆಗೆ ನಟ/ನಟಿಯ ಬಗ್ಗೆ ಸರ್ಚ್‌ ಮಾಡಿದರೆ ಈ ಎಲ್ಲ ಒಟಿಟಿ ಪ್ಲಾಟ್‌ಫರಂನಲ್ಲಿರುವ ಆ ನಟ/ನಟಿಗೆ ಸಂಬಂಧಿಸಿದ ವಿಡಿಯೋಗಳು ಪರದೆಯಲ್ಲಿ ಕಾಣುತ್ತದೆ.

    ಗ್ರಾಹಕರು ಮತ್ತು ವಾಹಿನಿಗಳು ಸಹ ಜಿಯೋ ಟಿವಿ ಪ್ಲಸ್‌ ಮೂಲಕ ಸಂವಹನ ಮಾಡಬಹುದು. ರಿಮೋಟ್‌ ಮೂಲಕವೇ ವೋಟ್‌ ಮಾಡಬಹುದು ಎಂದು ಅಕಾಶ್‌ ಅಂಬಾನಿ ತಿಳಿಸಿದರು.

    ಗ್ರಾಹಕರಿಗೆ ಬೇಕಾದ ವಿಷಯಗಳು ಸುಲಭವಾಗಿ ಸಿಗಲು ಜಿಯೋ ಟಿವಿ ಪ್ಲಸ್‌ನಲ್ಲಿ ಚಲನ ಚಿತ್ರ, ಮ್ಯೂಸಿಕ್‌, ಲೈವ್‌ ಟಿವಿ, ಕಿಡ್ಸ್‌, ವಿಭಾಗಗಳಿವೆ.

    ಯಾವುದೆಲ್ಲ ಇದೆ?
    ಜಗತ್ತಿನ ಪ್ರಸಿದ್ಧ 12 ಒಟಿಟಿ ಕಂಪನಿಗಳ ಅಪ್ಲಿಕೇಶನ್‌ಗಳನ್ನು ಒಂದೇ ಐಡಿ ಮೂಲಕ ವೀಕ್ಷಿಸಬಹುದು. ನೆಟ್‌ ಫ್ಲಿಕ್ಸ್‌, ಅಮೇಜಾನ್‌ ಪ್ರೈಂ ವಿಡಿಯೋ, ಡಿಸ್ನಿ ಹಾಟ್‌ಸ್ಟಾರ್‌, ವೂಟ್‌, ಸೋನಿ, ಝಿ5, ಲಯನ್ಸ್‌ ಗೇಟ್‌ ಪ್ಲೇ, ಜಿಯೋ ಸಿನಿಮಾ, ಶಿಮಾರೋ, ಜಿಯೋ ಸಾವನ್‌, ಯೂಟ್ಯೂಬ್‌, ಇರೋಸ್‌ ನೌ ಇದೆ.

  • ಮಕ್ಕಳ ದಿನಾಚರಣೆ ಅಂಗವಾಗಿ ವಿಜಯಪುರ ಸರ್ಕಾರಿ ಶಾಲೆಯ ಮಕ್ಕಳಿಗೆ ಬಂಪರ್ ಗಿಫ್ಟ್

    ಮಕ್ಕಳ ದಿನಾಚರಣೆ ಅಂಗವಾಗಿ ವಿಜಯಪುರ ಸರ್ಕಾರಿ ಶಾಲೆಯ ಮಕ್ಕಳಿಗೆ ಬಂಪರ್ ಗಿಫ್ಟ್

    ವಿಜಯಪುರ: ಖಾಸಗಿ ಶಾಲೆಗಳ ಭರಾಟೆಯಲ್ಲಿ ಸರ್ಕಾರಿ ಶಾಲೆಗಳು ವಿಮುಕ ಆಗಿ ಹೊರಟಿವೆ. ಸರ್ಕಾರಿ ಶಾಲೆಗಳಿಗೆ ಜನರು ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಾರೆ. ಆದರೆ ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಸಚಿವ ಎಂ.ಬಿ.ಪಾಟೀಲ್ ಪ್ಲಾನ್ ಮಾಡಿದ್ದಾರೆ.

    ಸಾಮಾನ್ಯವಾಗಿ ಮಕ್ಕಳ ದಿನಾಚರಣೆ ಬಂದಾಗ ಜಿಲ್ಲಾ ಕೇಂದ್ರ ಮತ್ತು ತಾಲೂಕಾ ಕೇಂದ್ರಗಳಲ್ಲಿ ಶಿಕ್ಷಣ ಇಲಾಖೆ ಕಾರ್ಯಕ್ರಮ ಆಯೋಜಿಸುತ್ತದೆ. ಆದರೆ ಈ ಬಾರಿ ವಿಜಯಪುರದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್,ವಿಜಯಪುರ ತಾಲೂಕಿನ 100 ಸರ್ಕಾರಿ ಶಾಲೆಗಳನ್ನು ಡಿಜಿಟಲ್ ಮಾಡಿಸಿದ್ದಾರೆ. ಶಾಸಕರ ಅನುದಾನದಲ್ಲಿ ಒಂದು ಶಾಲೆಗೆ 1 ಲಕ್ಷ ರೂ.ಯಂತೆ ಡಿಜಿಟಲ್ ಕೋಣೆ ಮಾಡಲಾಗಿದೆ. ಕಬ್ಬಿಣದ ಕಡಲೆಯಂತಿರುವ ವಿಜ್ಞಾನ, ಗಣಿತ ಮತ್ತು ಇಂಗ್ಲೀಷ್ ಸೇರಿದಂತೆ ಕಠಿಣ ವಿಷಯಗಳು ಮಕ್ಕಳಿಗೆ ಸರಳವಾಗಿ ಅರ್ಥವಾಗಲು ಎಲ್‍ಇಡಿ ಟಿವಿ ಅಳವಡಿಸಲಾಗಿದೆ. ಎಲ್‍ಇಡಿಯಲ್ಲಿ ವಿಷಯಕ್ಕೆ ತಕ್ಕಂತೆ ವಿಡಿಯೋ ಹಾಗು ಚಿತ್ರಗಳು ಬರೋದ್ರಿಂದ ಮಕ್ಕಳ ಮನದಲ್ಲಿ ವಿಷಯಗಳು ಅಚ್ಚಳಿಯದೇ ಉಳಿಯುತ್ತದೆ.

    ಈಗಾಗಲೇ ಲೋಡ್ ಶೆಡ್ಡಿಂಗ್ ಶುರುವಾಗಿದ್ದು ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ. ಹಾಗಾಗಿ ಎಲ್‍ಇಡಿ ಟಿವಿಗಳಿಗೆ ಸೋಲಾರ್ ಹಾಕಿಸಿದ್ದು, ತಡೆಯಿಲ್ಲದೆ 8 ಗಂಟೆ ನಿರಂತರ ಅಭ್ಯಾಸ ಮಾಡಬಹುದು. ಈ ಯೋಜನೆಗೆ ಟೆಲ್ಕೋ ಸೋಲಾರ್ ಕಂಪನಿ ಕೈ ಜೋಡಿಸಿದ್ದು, ಅರ್ಧದಷ್ಟು ಹಣ ಕಂಪನಿ, ಉಳಿದ ಅರ್ಧ ಹಣ ಶಾಸಕರ ಅನುದಾನದಲ್ಲಿ ಸಿಗುತ್ತದೆ.

  • ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋವನ್ನು ಹಿಂದಿಕ್ಕಿ ಈಗ ವಿಶ್ವದಲ್ಲೇ ಬೆಂಗ್ಳೂರು ನಂ.1

    ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋವನ್ನು ಹಿಂದಿಕ್ಕಿ ಈಗ ವಿಶ್ವದಲ್ಲೇ ಬೆಂಗ್ಳೂರು ನಂ.1

    ಬೆಂಗಳೂರು:ಭಾರತದ ಸಿಲಿಕಾನ್ ಸಿಟಿ ಬೆಂಗಳೂರು ಈಗ ಡಿಜಿಟಲ್ ಟ್ರಾನ್ಸ್ಫರ್ಮೆಶನ್ ವಿಚಾರದಲ್ಲಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋವನ್ನು ಹಿಂದಿಕ್ಕಿ ವಿಶ್ವದಲ್ಲೇ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ.

    ಡಿಜಿಟಲ್ ಪರಿಸರದಲ್ಲಿ ಉದ್ಯಮ ವಿಶ್ವಾಸ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಈಗ ಇರುವ ಪರಿಸರದಲ್ಲಿ ಕೌಶಲ್ಯ ಮತ್ತು ಮೂಲಭೂತ ಸೌಕರ್ಯಗಳ ಆಧಾರದಲ್ಲಿ ‘ದಿ ಎಕಾನಮಿಸ್ಟ್ ಇಂಟೆಲಿಜೆನ್ಸಿ ಯೂನಿಟ್’ ಬಿಡುಗಡೆ ಮಾಡಿದ ವಿಶ್ವದ 45 ಮಹಾ ನಗರಗಳ ಶ್ರೇಯಾಂಕ ಪಟ್ಟಿಯಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ ಸಿಕ್ಕಿದೆ.

    ಎರಡನೇ ಸ್ಥಾನದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಇದ್ದರೆ, ಮೂರು ಮತ್ತು ನಾಲ್ಕನೇಯ ಸ್ಥಾನವನ್ನು ಕ್ರಮವಾಗಿ ಮುಂಬೈ ಮತ್ತು ದೆಹಲಿ ಪಡೆದುಕೊಂಡಿದೆ. ಚೀನಾದ ರಾಜಧಾನಿ ಬೀಜಿಂಗ್ ಪಟ್ಟಿಯಲ್ಲಿ 5ನೇ ಸ್ಥಾನವನ್ನು ಪಡೆದುಕೊಂಡಿದೆ.

    ಉದ್ಯಮಶೀಲತೆ, ಆವಿಷ್ಕಾರ, ಕೌಶಲ್ಯ ಹೊಂದಿರುವ ಜನ, ಹೊಸ ತಂತ್ರಜ್ಞಾನ ಬೆಳವಣಿಗೆ, ಆರ್ಥಿಕ ವಾತಾವರಣ, ಮಾಹಿತಿ ಸಂವಹನ ತಂತ್ರಜ್ಞಾನ(ಐಸಿಟಿ) ಸೌಕರ್ಯಗಳ ವಿಚಾರಗಳನ್ನು ಅಧ್ಯಯನಕ್ಕೆ ಪರಿಗಣಿಸಿ ನಗರಗಳಿಗೆ ಶ್ರೇಯಾಂಕ ಪಟ್ಟಿಯನ್ನು ನೀಡಲಾಗಿದೆ.

    ಜೂನ್ ಮತ್ತು ಜುಲೈ ತಿಂಗಳಿನಲ್ಲಿ 45 ಮಹಾ ನಗರಗಳ 2,620 ಕಾರ್ಯನಿರ್ವಹಣಾಧಿಕಾರಿಗಳು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.

    ಪಟ್ಟಿಯಲ್ಲಿ ಕೊನೆಯ ಐದು ಸ್ಥಾನವನ್ನು ಅನುಕ್ರಮವಾಗಿ ಬರ್ಲಿನ್(ಜರ್ಮನಿ), ಯೋಕೋಹಾಮಾ(ಜಪಾನ್), ಟೋಕಿಯೋ(ಜಪಾನ್), ತೈಪೆ(ತೈವಾನ್), ರೋಟರ್ಡಮ್(ನೆದರ್‍ಲ್ಯಾಂಡ್) ಪಡೆದುಕೊಂಡಿದೆ. ಇಂಗ್ಲೆಂಡಿನ ರಾಜಧಾನಿ ಲಂಡನ್ 9ನೇ ಸ್ಥಾನವನ್ನು ಪಡೆದುಕೊಂಡಿದ್ದರೆ, ಸ್ಪೇನ್ ರಾಜಧಾನಿ ಮ್ಯಾಡ್ರಿಡ್ 10ನೇ ಸ್ಥಾನವನ್ನು ಪಡೆದುಕೊಂಡಿದೆ.

    ಇದನ್ನೂ ಓದಿ: ಸುಲಭ ವಹಿವಾಟು ವಿಶ್ವದ ಸೂಚ್ಯಂಕ ಪಟ್ಟಿಯಲ್ಲಿ 30 ಸ್ಥಾನ ಏರಿ 100ನೇ ಸ್ಥಾನಕ್ಕೆ ಜಿಗಿದ ಭಾರತ

  • ಮೂರು ಡಿಜಿಟಲ್ ಕ್ಷೇತ್ರಗಳಿಗೆ ಭಾರೀ ಹೊಡೆತ ನೀಡಲಿದೆ ಜಿಯೋ ಫೋನ್!

    ಮೂರು ಡಿಜಿಟಲ್ ಕ್ಷೇತ್ರಗಳಿಗೆ ಭಾರೀ ಹೊಡೆತ ನೀಡಲಿದೆ ಜಿಯೋ ಫೋನ್!

    ಮುಂಬೈ: ಜಿಯೋದ ಕಡಿಮೆ ಬೆಲೆಯ ಫೀಚರ್ ಫೋನ್ ದೇಶದ ಮೂರು ಕ್ಷೇತ್ರಗಳ ಮಾರುಕಟ್ಟೆಯನ್ನು ಬುಡಮೇಲು ಮಾಡಲಿದೆ ಎನ್ನುವ ವಿಶ್ಲೇಷಣೆ ಈಗ ಆರಂಭವಾಗಿದೆ.

    ಟೆಲಿಕಾಂ ಕಂಪೆನಿ, ಕೇಬಲ್ ಮತ್ತು ಸ್ಮಾರ್ಟ್ ಫೋನ್ ತಯಾರಕ ಕಂಪೆನಿಗಳಿಗೆ ಜಿಯೋ ಹೊಡೆತ ನೀಡಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಇದಕ್ಕೆ ಪೂರಕ ಎಂಬಂತೆ ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಭೆಯಲ್ಲಿ ಜಿಯೋ ಫೋನ್ ಬಿಡುಗಡೆಯಾಗುತ್ತಿದ್ದಂತೆ ಟೆಲಿಕಾಂ ಮತ್ತು ಡಿಟಿಎಚ್ ಕಂಪೆನಿಗಳ ಶೇರುಗಳು ಭಾರೀ ಕುಸಿತಗೊಂಡಿದೆ.

    ಸ್ಮಾರ್ಟ್ ಫೋನ್ ಕಂಪೆನಿಗಳಿಗೆ ಹೊಡೆತ ಹೇಗೆ?
    ದೇಶದಲ್ಲಿ ಪ್ರಸ್ತುತ ಕಡಿಮೆ ಬೆಲೆಯ ವೋಲ್ಟ್ ಫೋನ್ ಗಳಿಗೆ ಕನಿಷ್ಠ 3-4 ಸಾವಿರ ರೂ. ಬೆಲೆ ಇದೆ. ಆದರೆ ಜಿಯೋ 1500 ರೂ. ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲದೇ 3 ವರ್ಷದ ಬಳಿಕ ಈ ಹಣವನ್ನು ಹಿಂದಿರುಗಿಸಲಾಗುವುದು ಎಂದು ಹೇಳಿದೆ. ಹೀಗಾಗಿ ಉಚಿತವಾಗಿ ಸಿಗುವ ಕಾರಣ ಜನ ಜಿಯೋ ಫೋನ್ ಖರೀದಿಸಿಲು ಆರಂಭಿಸಿದರೆ ಸ್ಮಾರ್ಟ್ ಫೋನ್ ಕಂಪೆನಿಗಳಿಗೆ ಭಾರೀ ಹೊಡೆತ ಬೀಳುವ ಸಾಧ್ಯತೆಯಿದೆ.

    2016- 17ರ ಹಣಕಾಸು ವರ್ಷದಲ್ಲಿ ಭಾರತೀಯ ಸ್ಮಾರ್ಟ್ ಫೋನ್ ಕಂಪೆನಿಗಳು ಹೆಚ್ಚು ಫೋನ್ ಮಾರಾಟ ಆಗದೇ ಇರಲು ಜಿಯೋ ಕಾರಣ ಎನ್ನುವ ಮಾತುಗಳು ಕೇಳಿ ಬಂದಿತ್ತು. ಭಾರತೀಯ ಕಂಪೆನಿಗಳು ಈ ಹಿಂದೆ ಫೋನ್ ಗಳನ್ನು ಬಿಡುಗಡೆ ಮಾಡಿದ್ದರೂ ಆ ಫೋನ್ ಗಳ ಪೈಕಿ ಬಹುತೇಕ ಫೋನ್ ಗಳು ಎಲ್‍ಟಿಇ ಟೆಕ್ನಾಲಜಿಗೆ ಸಪೋರ್ಟ್ ಮಾಡುತ್ತಿರಲಿಲ್ಲ. ಹೀಗಾಗಿ ಜನರು ಜಿಯೋಗೆ ಸಪೋರ್ಟ್ ಮಾಡುವ ಎಲ್‍ಟಿಇ ಫೋನ್ ಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದರು. ಪರಿಣಾಮ ಚೀನಾ ಕಂಪೆನಿಗಳ ಮಾರುಕಟ್ಟೆ ಪಾಲು ಭಾರತದಲ್ಲಿ ಹೆಚ್ಚಾಗಿತ್ತು. ಈಗ 1500 ರೂ. ಬೆಲೆಯಲ್ಲಿ ಫೋನ್ ಬಿಡುಗಡೆ ಮಾಡಿದ್ದು ಎಲ್‍ಟಿಇ ಫೋನ್ ತಯಾರಿಸುತ್ತಿದ್ದ ಚೀನಾ ಕಂಪೆನಿಗಳಿಗೂ ಜಿಯೋದಿಂದಾಗಿ ಪೆಟ್ಟು ಬೀಳುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

    ಡಿಟಿಎಚ್, ಕೇಬಲ್ ಟಿವಿ:
    ಇಲ್ಲಿಯವರೆಗೆ ಜನ ಟಿವಿ ವೀಕ್ಷಿಸಲು ಡಿಟಿಎಚ್, ಕೇಬಲ್ ಗಳನ್ನು ಅವಲಂಭಿಸಿದ್ದರು. ಆದರೆ ಜಿಯೋ ಈಗಾಲೇ ಟಿವಿ ಆಪ್ ಬಿಡುಗಡೆ ಮಾಡಿದ್ದು, ಇದರಲ್ಲಿ ಕನ್ನಡ ಸೇರಿದಂತೆ ದೇಶದ 10 ಭಾಷೆಯಲ್ಲಿರುವ ವಾಹಿನಿಗಳು, ಕ್ರೀಡಾ ವಾಹಿನಿಗಳು ಲಭ್ಯವಿದೆ. ಈ ಆಪ್‍ನಲ್ಲಿ ಯಾವ ಸಮಯದಲ್ಲಿ ಯಾವ ಕಾರ್ಯಕ್ರಮ ಪ್ರಸಾರವಾಗಿದೆಯೋ ಆ ಕಾರ್ಯಕ್ರಮವನ್ನು ಮತ್ತೆ ವೀಕ್ಷಿಸಲು ಸಾಧ್ಯವಿದೆ.

    ಈಗ ಹೊಸದಾಗಿ ಮೊಬೈಲ್ ನಿಂದ ಟಿವಿ ವೀಕ್ಷಿಸಲು ‘ಜಿಯೋ ಫೋನ್ ಟಿವಿ ಕೇಬಲ್’ ತಂದಿದ್ದು, ಇದು ಕೇವಲ ಸ್ಮಾರ್ಟ್ ಟಿವಿ ಮಾತ್ರ ಅಲ್ಲ ಈಗ ಇರುವ ಟಿವಿಗಳಿಗೆ ಕನೆಕ್ಟ್ ಮಾಡಬಹುದಾಗಿದೆ. ಅಷ್ಟೇ ಅಲ್ಲದೇ 309 ರೂ. ಜಿಯೋ ಧನ್ ಧನಾ ಧನ್ ಆಫರ್ ಹಾಕಿದ್ರೆ ಪ್ರತಿ ದಿನ 3-4 ಗಂಟೆ ವಿಡಿಯೋಗಳನ್ನು ಸಹ ವೀಕ್ಷಿಸಬಹುದಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಡಿಟಿಎಚ್, ಕೇಬಲ್ ಟಿವಿ ಉದ್ಯಮಕ್ಕೆ ಹೊಡೆತ ಬೀಳಬಹುದು ಎನ್ನುವ ವಿಶ್ಲೇಷಣೆ ಆರಂಭವಾಗಿದೆ.

    ಟೆಲಿಕಾಂ ಕ್ಷೇತ್ರ:
    ಜಿಯೋ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಬಳಿಕ ಭಾರತ ಟೆಲಿಕಾಂ ರಂಗದಲ್ಲಿ ಹೊಸ ಕ್ರಾಂತಿ ಆರಂಭವಾಗಿತ್ತು. ಅಲ್ಲಿಯವರೆಗೆ 1 ಜಿಬಿ ಡೇಟಾಗೆ 250 ರೂ. ದರ ನಿಗದಿ ಮಾಡಿದ್ದ ಕಂಪೆನಿಗಳು ಜಿಯೋದಿಂದಾಗಿ ಅವುಗಳು ಹೊಸ ಹೊಸ ಆಫರ್ ಬಿಡುಗಡೆ ಮಾಡುವ ಮೂಲಕ ಡೇಟಾ ಸಮರ ಆರಂಭಗೊಂಡಿತ್ತು. ಈ ನಡುವೆ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ ಟೆಲಿಕಾಂ ಕಂಪೆನಿಗಳ ವಿಲೀನ ಪ್ರಕ್ರಿಯೆ ಸಹ ನಡೆದಿತ್ತು. ಆರಂಭದಲ್ಲಿ ಜಿಯೋದ 4ಜಿ ಇಂಟರ್ ನೆಟ್ ವೇಗ ಕಡಿಮೆ ಇದ್ದರೆ ನಂತರದ ದಿನಗಳಲ್ಲಿ ದೇಶದಲ್ಲಿ ವೇಗದ ಇಂಟರ್ ನೆಟ್ ಸೇವೆಯನ್ನು ಜಿಯೋ ನೀಡುತ್ತಾ ಬಂದಿದೆ.

    ಶುಕ್ರವಾರದ ವಾರ್ಷಿಕ ಸಭೆಯಲ್ಲಿ ಮುಕೇಶ್ ಅಂಬಾನಿ ತಮ್ಮ ಭಾಷಣದಲ್ಲಿ, ದೇಶದಲ್ಲಿ 50 ಕೋಟಿ ಜನರು ಡಿಜಿಟಲ್ ಜಗತ್ತಿಗೆ ಸೇರ್ಪಡೆಯಾಗಿಲ್ಲ. ಹೀಗಾಗಿ ಅವರನ್ನು ಈ ಜಗತ್ತಿಗೆ ಸೇರಿಸಲು ಈ ಎಲ್‍ಟಿಟಿ ಫೋನ್ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಹೀಗಾಗಿ ಕಡಿಮೆ ಬೆಲೆ ಜೊತೆಗೆ ಕರೆ, ಸಂದೇಶಗಳು ಉಚಿತವಾಗಿ ಸಿಗುವ ಕಾರಣ ಜಿಯೋಗೆ ಮತ್ತಷ್ಟು ಗ್ರಾಹಕರು ಹೊಸದಾಗಿ ಸೇರ್ಪಡೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

    ಜಿಯೋ ಎಫೆಕ್ಟ್: 7 ವರ್ಷದಲ್ಲಿ ಮೊದಲ ಬಾರಿಗೆ ಟೆಲಿಕಾಂ ಕಂಪೆನಿಗಳ ಆದಾಯ ಭಾರೀ ಇಳಿಕೆ

    ಕಡಿಮೆ ಬೆಲೆಯಲ್ಲಿ ಯಾಕೆ?
    ಜಿಯೋ ಈಗ ಹೊಸ ಗ್ರಾಹಕರನ್ನು ಸೆಳೆಯುಲು ಮಂದಾಗುತ್ತಿದೆ. ಸೆಪ್ಟೆಂಬರ್ ನಲ್ಲಿ ಆರಂಭವಾದ ಬಳಿಕ ನಂತರದ ತಿಂಗಳಿನಲ್ಲಿ ಭಾರೀ ಸಂಖ್ಯೆಯಲ್ಲಿ ಗ್ರಾಹಕರು ಜಿಯೋಗೆ ಸೇರ್ಪಡೆಯಾಗಿದ್ದರು. ಆದರೆ ಮಾರ್ಚ್ ತಿಂಗಳಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ಗ್ರಾಹಕರು ಸೇರ್ಪಡೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಜಿಯೋ ಈಗ 2ಜಿ ಸೇವೆಯನ್ನು ಬಳಸುತ್ತಿರುವ ಗ್ರಾಹಕರ ಆಕರ್ಷಿಸಲು ಫೀಚರ್ ಫೋನ್ ತಯಾರಿಸಿದೆ. ಅಷ್ಟೇ ಅಲ್ಲದೇ ಪ್ರಸ್ತುತ ಮಾರುಕಟ್ಟೆಯಲ್ಲಿ 4ಜಿ ಎಲ್‍ಟಿಇ ಬೆಂಬಲಿಸುವ ಫೋನ್ ಗಳಿದ್ದರೂ ಇವುಗಳ ಬೆಲೆ ಜಾಸ್ತಿ ಇರುವ ಕಾರಣ ಜಿಯೋ ಈಗ ಫೋನ್ ತಯಾರಿಸಿದೆ.

    ಜಿಯೋ 999 ರೂ.ನಿಂದ ಆರಂಭವಾಗಿ 1500 ರೂ ಒಳಗಡೆ ಕೀ ಪ್ಯಾಡ್ ಹೊಂದಿರುವ ಎಲ್‍ಟಿಇ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡುವ ಫೀಚರ್ ಫೋನ್‍ಗಳನ್ನು ಬಿಡುಗಡೆ ಮಾಡಲಿದೆ ಎನ್ನುವ ವರದಿ ಈ ಹಿಂದೆ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಪ್ರಸ್ತುತ ಜಿಯೋ ಎಲ್‍ವೈಎಫ್ ಹೆಸರಿನಲ್ಲಿ ಆಂಡ್ರಯ್ಡ್ ಫೋನ್‍ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.

    ಏನಿದು ವಾಯ್ಸ್ ಓವರ್ ಎಲ್‍ಟಿಇ? ಉಚಿತ ಕರೆ ಯಾಕೆ?
    ಇಲ್ಲಿಯವರೆಗೆ ಟೆಲಿಕಾಂ ಕಂಪೆನಿಗಳು ಕರೆ ಮತ್ತು ಡೇಟಾ ಸೇವೆಗಳನ್ನು ಪ್ರತ್ಯೇಕವಾಗಿ ನಿಭಾಯಿಸುತಿತ್ತು. ಆದರೆ ಜಿಯೋ ಈ ಎರಡನ್ನೂ ಒಟ್ಟಿಗೆ ನಿಭಾಯಿಸುತ್ತದೆ. ಇದರಿಂದಾಗಿ ಖರ್ಚು ಕಡಿಮೆ ಆಗುತ್ತದೆ. ಡೇಟಾವನ್ನು ಬಳಸಿಕೊಂಡು ಕರೆ ಮಾಡುವ ತಂತ್ರಜ್ಞಾನವೇ ವಾಯ್ಸ್ ಓವರ್ ಲಾಂಗ್ ಟರ್ಮ್ ಎವಲ್ಯೂಶನ್(ಎಲ್‍ಟಿಇ). ಇದರಲ್ಲಿ ಕರೆಗೆ ಬೇರೆ, ಡೇಟಾಗೆ ಬೇರೆ ಎಂದು ಹಣ ನೀಡಬೇಕಿಲ್ಲ. ಡೇಟಾಗೆ ನೀಡಿದ ಹಣದಲ್ಲೇ ಕರೆಯನ್ನೂ ಉಚಿತವಾಗಿ ಮಾಡಬಹುದು. ವೇಗದ ಇಂಟರ್ನೆಟ್ ಇದ್ದರೆ ಮಾತ್ರ ಈ ಸೇವೆಯನ್ನು ಗ್ರಾಹಕರು ಯಶಸ್ವಿಯಾಗಿ ಬಳಸಿಕೊಳ್ಳಬಹುದು. ಹಲವು ಫೋನ್ ಗಳು ಎಲ್‍ಟಿಇ ಬೆಂಬಲಿಸದ ಕಾರಣ ಜಿಯೋ ಸಿಮ್ ಹಾಕಲು ಸಾಧ್ಯವಾಗುತ್ತಿರಲಿಲ್ಲ. ಏರ್ಟೆಲ್ ಮತ್ತು ವೊಡಾಫೋನ್‍ಗಳು ಪ್ರಯೋಗಿಕ ಪರೀಕ್ಷೆ ನಡೆಸುತ್ತಿದ್ದು ಕೆಲ ತಿಂಗಳಿನಲ್ಲಿ ಈ ವೋಲ್ಟ್ ಸೇವೆ ಗ್ರಾಹಕರಿಗೆ ಲಭ್ಯವಾಗಲಿದೆ. ಜಿಯೋ ಸೇವೆ ಆರಂಭವಾದ ಬಳಿಕ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಬಹುತೇಕ ಕಂಪೆನಿಗಳ ಫೋನ್ ಗಳು ಎಲ್‍ಟಿಇ ಟೆಕ್ನಾಲಜಿಯನ್ನು ಬೆಂಬಲಿಸುತ್ತಿದೆ.