Tag: diesel engines

  • ಭಾರತದಿಂದ ಬಾಂಗ್ಲಾದೇಶಕ್ಕೆ 10 ರೈಲ್ವೇ ಡೀಸೆಲ್‌‌ ಎಂಜಿನ್‌ ಹಸ್ತಾಂತರ

    ಭಾರತದಿಂದ ಬಾಂಗ್ಲಾದೇಶಕ್ಕೆ 10 ರೈಲ್ವೇ ಡೀಸೆಲ್‌‌ ಎಂಜಿನ್‌ ಹಸ್ತಾಂತರ

    ನವದೆಹಲಿ: ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ವಿಸ್ತರಿಸಲು ಭಾರತ ಬಾಂಗ್ಲಾದೇಶಕ್ಕೆ 10 ಬ್ರಾಡ್‌ಗೇಜ್‌ ರೈಲ್ವೇ ಎಂಜಿನ್‌ಗಳನ್ನು ಹಸ್ತಾಂತರಿಸಿದೆ.

    ಬ್ರಾಡ್ ಗೇಜ್ ಲೋಕೋಮೋಟಿವ್‌ಗಳಿಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು ಹಸಿರು ನಿಶಾನೆ ತೋರಿಸಿದರು. ಬಾಗ್ಲಾದೇಶದ ರೈಲ್ವೇ ಸಚಿವ ಎಂಡಿ ನೂರುಲ್ ಇಸ್ಲಾಂ ಸುಜನ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಅಬುಲ್ ಕಲಾಂ ಅಬ್ದುಲ್ ಮೊಮೆನ್ ಆನ್‌ಲೈನ್‌ ಮೂಲಕ ಈ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.

    ಈ ಸಂದರ್ಭದಲ್ಲಿ ಮಾತನಾಡಿದ ಜೈಶಂಕರ್, ಪರಸ್ಪರ ನಂಬಿಕೆ ಮತ್ತು ಗೌರವದ ಆಧಾರದ ಮೇಲೆ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಕೆಲಸ ಮಾಡುತ್ತದೆ. ಕೋವಿಡ್‌ 19ನಿಂದಾಗಿ ದ್ವಿಪಕ್ಷೀಯ ಸಹಕಾರದ ವೇಗ ಕಡಿಮೆಯಾಗಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ನೇಪಾಳ ಆಯ್ತು, ಈಗ ಢಾಕಾದತ್ತ ಕೈಚಾಚಿದ ಬೀಜಿಂಗ್‌

    2019 ರ ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಭಾರತ ಭೇಟಿಯ ಸಂದರ್ಭದಲ್ಲಿ ಭಾರತ ಸರ್ಕಾರ ನೀಡಿದ ಬದ್ಧತೆಯಂತೆ ಈಗ ಈ ಲೋಕೋಮೋಟಿವ್‌ಗಳನ್ನು ಹಸ್ತಾಂತರ ಮಾಡಲಾಗಿದೆ.

    ಭಾರತ ಸರ್ಕಾರ ತನ್ನ ಅನುದಾನದಿಂದ ಬಾಂಗ್ಲಾದೇಶ ರೈಲ್ವೆಯ ಅವಶ್ಯಕತೆಗಳಿಗೆ ಅನುಗುಣವಾಗಿ, ಲೋಕೋಮೋಟಿವ್‌ಗಳನ್ನು ಮಾರ್ಪಡಿಸಿದೆ. ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕ ಮತ್ತು ಸರಕು ರೈಲು ಕಾರ್ಯಾಚರಣೆಯನ್ನು ನಿರ್ವಹಿಸಲು ಈ ಲೋಕೋಮೋಟಿವ್‌ಗಳು ಸಹಾಯ ಮಾಡಲಿದೆ ಎಂದು ರೈಲ್ವೇ ತಿಳಿಸಿದೆ.

    ಎಲ್ಲಾ ಲೊಕೋಗಳು 28 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಯವರೆಗೆ ಬಾಳಿಕೆ ಬರುತ್ತದೆ. ಎಲ್ಲವೂ ಡಬ್ಲ್ಯೂಡಿಎಂ -3 ಡಿ ಟೈಪ್‌ ಡೀಸೆಲ್‌- ಎಲೆಕ್ಟ್ರಿಕ್‌ ಲೋಕೋಮೋಟಿವ್‌ ಆಗಿದೆ. 3,300 ಅಶ್ವಶಕ್ತಿ ಹೊಂದಿರುವ ಈ ಎಂಜಿನ್‌ಗಳು ಗಂಟೆಗೆ 120 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿವೆ.

    ಇತ್ತೀಚೆಗೆ, ಭಾರತ ಮತ್ತು ಬಾಂಗ್ಲಾದೇಶದ ನಡುವೆ ಪಾರ್ಸೆಲ್ ಮತ್ತು ಕಂಟೈನರ್‌ ರೈಲು ಸೇವೆಗಳು ಸಹ ಪ್ರಾರಂಭವಾಗಿವೆ. ಇದು ದ್ವಿಪಕ್ಷೀಯ ವ್ಯಾಪಾರದ ವ್ಯಾಪ್ತಿಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ರೈಲ್ವೇ ಹೇಳಿದೆ.