Tag: diaries

  • ಬಿಎಸ್‍ವೈಗೆ ಡೈರಿ ಬರೆಯುವ ಅಭ್ಯಾಸವೇ ಇಲ್ಲ: ಶೋಭಾ ಕರಂದ್ಲಾಜೆ

    ಬಿಎಸ್‍ವೈಗೆ ಡೈರಿ ಬರೆಯುವ ಅಭ್ಯಾಸವೇ ಇಲ್ಲ: ಶೋಭಾ ಕರಂದ್ಲಾಜೆ

    – ನಕಲಿ ಕಾಂಗ್ರೆಸ್‍ನಿಂದ ನಕಲಿ ಡೈರಿ ಆರೋಪ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಡೈರಿ ಬರೆಯುವ ಅಭ್ಯಾಸವೇ ಇಲ್ಲ. ಕಾಂಗ್ರೆಸ್‍ನವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

    ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಅವರ ಆರೋಪದ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಸಂಸದೆ, ಡೈರಿಯನ್ನು ಕಾಂಗ್ರೆಸ್‍ನವರೇ ಬರೆದಿದ್ದಾರೆ. ಅವರೇ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಬಿ.ಎಸ್.ಯಡಿಯೂರಪ್ಪ ಅವರ ಸಹಿಯನ್ನು ನಕಲಿ ಮಾಡಿದ್ದಾರೆ ಎಂದು ದೂರಿದರು. ಇದನ್ನು ಓದಿ : 1800 ಕೋಟಿ ಬಿಎಸ್‌ವೈ ಡೈರಿ ಬಾಂಬ್ – ಗಡ್ಕರಿಗೆ 150 ಕೋಟಿ, ಅಡ್ವಾಣಿಗೆ 50 ಕೋಟಿ!

    ರಾಜ್ಯದಲ್ಲಿ ಬಿಜೆಪಿ ಅಧಿಕಾರ ಮುಗಿದು 6-7 ವರ್ಷಗಳೇ ಕಳೆದಿವೆ. ಆದರೆ ಈಗ ಡೈರಿ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಇಷ್ಟು ದಿನದ ಇಲ್ಲದ ಆರೋಪ ಈಗ ಮಾಡಿದ್ದು ಯಾಕೆ? ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಹೀಗಾಗಿ ಇಂತಹ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

    ದಿವಂಗತ ಕೇಂದ್ರ ಸಚಿವ ಅನಂತ್‍ಕುಮಾರ್ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಮಧ್ಯೆ ಮಾತುಕತೆಯಾಗಿದ್ದು ಸುಳ್ಳು. ಅವರ ಮಾತುಕತೆಗೂ ಈ ಡೈರಿಗೂ ಯಾವುದೇ ಸಂಬಂಧವಿಲ್ಲ. ಅನವಶ್ಯಕವಾಗಿ ಆರೋಪ ಮಾಡುವ ಮೂಲಕ ದೇಶದ ಹಾಗೂ ರಾಜ್ಯದ ಜನತೆಯ ದಾರಿ ತಪ್ಪಿಸಲಾಗುತ್ತಿದೆ ಎಂದು ಕಿಡಿಕಾರಿದರು.

    ಕಾಂಗ್ರೆಸ್ ಸರ್ಕಾರ ಇರುವ ರಾಜ್ಯಗಳಲ್ಲಿ ಯಾವುದೇ ಅಭಿವೃದ್ಧಿಯಾಗುತ್ತಿಲ್ಲ. ಸಾಧನೆ, ಅಭಿವೃದ್ಧಿ ಕೆಲಸಗಳನ್ನು ಜನರ ಮುಂದಿಟ್ಟು ಪ್ರಚಾರಕ್ಕೆ ಹೋಗುವ ನೈತಿಕತೆ ಕಾಂಗ್ರೆಸ್‍ಗೆ ಇಲ್ಲ. ಹೀಗಾಗಿ ಇಂತಹ ಆರೋಪವನ್ನು ಮಾಡುತ್ತಿದ್ದಾರೆ ಎಂದರು.

    ವಿಧಾನಪರಿಷತ್ ಸದಸ್ಯ ಗೋವಿಂದರಾಜು ಅವರ ಡೈರಿ ಐಟಿ ಅಧಿಕಾರಿಗಳಿಗೆ ಸಿಕ್ಕಿತ್ತು. ಇದನ್ನು ಆಧಾರವಾಗಿಟ್ಟುಕೊಂಡು ನಾವು ಆರೋಪ ಮಾಡಿದ್ದೇವು. ಆದರೆ ಈಗ ಕಾಂಗ್ರೆಸ್ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ. ಡೈರಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಇದು ಸುಳ್ಳು ಆರೋಪ ಎಂದು ಹೇಳಿದರು.