Tag: diamonds

  • ನೀರವ್ ಮೋದಿಗೆ ಇಡಿ ಶಾಕ್- 637 ಕೋಟಿ ರೂ. ಆಸ್ತಿ ಮುಟ್ಟುಗೋಲು

    ನೀರವ್ ಮೋದಿಗೆ ಇಡಿ ಶಾಕ್- 637 ಕೋಟಿ ರೂ. ಆಸ್ತಿ ಮುಟ್ಟುಗೋಲು

    ನವದೆಹಲಿ: ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಒಡೆತನದ ನ್ಯೂಯಾರ್ಕ್, ಲಂಡನ್ ಸೇರಿದಂತೆ ವಿವಿಧ ಕಡೆಯಲ್ಲಿದ್ದ ಒಟ್ಟು 637 ಕೋಟಿ.ರೂ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ(ಇಡಿ) ವಶಕ್ಕೆ ಪಡೆದುಕೊಂಡಿದೆ.

    ಲೇವಾದೇವಿ ಕಾಯ್ದೆ ಅನ್ವಯ ನ್ಯೂಯಾರ್ಕ್, ಲಂಡನ್‍ಗಳಲ್ಲಿರುವ ಆಸ್ತಿ, ಮುಂಬೈನ ಫ್ಲ್ಯಾಟ್, ಸಿಂಗಾಪುರ ಹಾಗೂ ವಿವಿಧ ದೇಶಗಳ ಬ್ಯಾಂಕ್‍ಗಳಲ್ಲಿ ಇರುವ ಹಣ, ಸಿಂಗಾಪುರದಿಂದ ಮುಂಬೈಗೆ ಬಂದಿದ್ದ ವಜ್ರವನ್ನು ಜಾರಿ ನಿರ್ದೇಶನಾಲಯವು ಮುಟ್ಟುಗೋಲು ಹಾಕಿಕೊಂಡಿದೆ.

    ಎಲ್ಲಲ್ಲಿ ಎಷ್ಟು ಆಸ್ತಿ?
    ನ್ಯೂಯಾರ್ಕ್‍ನ ಸೆಂಟ್ರಲ್ ಪಾರ್ಕ್ ಬಳಿಯ 216 ಕೋಟಿ ರೂ. ಮೌಲ್ಯದ ಎರಡು ಅಪಾರ್ಟಮೆಂಟ್, ಪೂರ್ವಿ ಮೋದಿ ಹೆಸರಿನಲ್ಲಿರುವ ಲಂಡನ್‍ನ ಮರ್ಲೆಬೋನ್ ನಲ್ಲಿರುವ 57 ಕೋಟಿ ರೂ. ಬೆಲೆಬಾಳುವ ಅಪಾರ್ಟಮೆಂಟ್, ಹಾಂಕಾಂಗ್‍ನಿಂದ ಭಾರತಕ್ಕೆ ಬಂದಿದ್ದ 22.69 ಕೋಟಿ ರೂ. ಮೊತ್ತದ ವಜ್ರದ ಆಭರಣಗಳು, ಸಿಂಗಾಪುರ ಬ್ಯಾಂಕ್ ಖಾತೆಯಲ್ಲಿ ಬ್ರಿಟಿಷ್ ವರ್ಜಿನ್ ಐಲ್ಯಾಂಡ್ ಮೂಲದ ಕಂಪನಿಯೊಂದರ ಹೆಸರಿನಲ್ಲಿದ್ದ 44 ಕೋಟಿ ರೂ., ಮುಂಬೈನಲ್ಲಿರುವ 19.5 ಕೋಟಿ ಮೌಲ್ಯದ ಫ್ಲ್ಯಾಟ್ ಅನ್ನು ವಶಕ್ಕೆ ಪಡೆದುಕೊಂಡಿದೆ.

    ಈ ಆಸ್ತಿಯಲ್ಲಿ ಕೆಲವೊಂದು ನೀರವ್ ಮೋದಿ ಸಹೋದರಿ ಪೂರ್ವಿ ಮೋದಿ ಹಾಗೂ ಆಕೆಯ ಪತಿ ಮಾಯಂಕ್ ಮೆಹ್ತಾ ಅವರಿಗೆ ಸೇರಿದೆ. ನೀರವ್ ಮೋದಿ ಬಂಧನಕ್ಕಾಗಿ ತನಿಖಾಧಿಕಾರಿಗಳು ಪ್ರಯತ್ನ ಮುಂದುವರಿಸಿದ್ದಾರೆ. ಜೊತೆಗೆ ವಿವಿಧ ದೇಶಗಳ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು. ಅದರ ಪರಿಣಾಮ ಈಗ ನೀರವ್ ಮೋದಿ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಲಾಗಿದೆ. ಜೊತೆಗೆ ವಿದೇಶದಲ್ಲಿದ್ದ ಆಭರಣಗಳನ್ನು ಭಾರತಕ್ಕೆ ತರಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

    ಏನಿದು ಪ್ರಕರಣ?
    ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿದ್ದು, ಯಾವುದೇ ದೇಶದಲ್ಲಿ ಅಡಗಿದ್ದರೂ ಬಂಧನಕ್ಕೆ ಆದೇಶ ಸಿಕ್ಕಿದೆ.

    ನೀರವ್ ಮೋದಿ ಜೊತೆ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗೀತಾಂಜಲಿ ಜುವೆಲ್ಲರಿಯ ಮೆಹುಲ್ ಚೋಕ್ಸಿ ವಿರುದ್ಧ ಕೂಡ ಸಿಬಿಐ ಎಫ್‍ಐಆರ್ ದಾಖಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನಾಲ್ಕು ಬಾರಿ ಸಮನ್ಸ್ ನೀಡಿದರೂ ಆರೋಪಿಗಳಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಇಂಟರ್ ಪೋಲ್‍ಗೆ ಮನವಿ ಮಾಡಿಕೊಂಡಿತ್ತು.

    ಏನಿದು ರೆಡ್ ಕಾರ್ನರ್ ನೋಟಿಸ್?
    ಸ್ವದೇಶದಲ್ಲಿ ಯಾವುದೇ ಒಬ್ಬ ವ್ಯಕ್ತ ಅಪರಾಧಿ ಹಿನ್ನೆಲೆಯಲ್ಲಿ ದೇಶವನ್ನು ತೊರೆದು ವಿದೇಶದಲ್ಲಿ ತಲೆಮರೆಸಿಕೊಂಡಿದ್ದರೆ, ಅಂತಹ ವ್ಯಕ್ತಿಯನ್ನು ಹುಡುಕಿ ಬಂಧಿಸಿ ಅವನನ್ನು ಮರಳಿ ಆ ದೇಶಕ್ಕೆ ಹಸ್ತಾಂತರಿಸುವಂತೆ ಇಂಟರ್ ಪೋಲ್ ಹೊರಡಿಸುವ ನೋಟಿಸಿಗೆ ರೆಡ್ ಕಾರ್ನರ್ ನೋಟಿಸ್ ಎಂದು ಕರೆಯಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 45 ಲಕ್ಷ ರೂ. ಮೌಲ್ಯದ ವಜ್ರಗಳನ್ನ ಹಿಂದಿರುಗಿಸಿದ ವಾಚ್‍ಮ್ಯಾನ್ ಮಗ

    45 ಲಕ್ಷ ರೂ. ಮೌಲ್ಯದ ವಜ್ರಗಳನ್ನ ಹಿಂದಿರುಗಿಸಿದ ವಾಚ್‍ಮ್ಯಾನ್ ಮಗ

    ಸೂರತ್: 45 ಲಕ್ಷ ರೂ. ಮೌಲ್ಯದ ವಜ್ರಗಳಿದ್ದ ಪೊಟ್ಟಣವನ್ನ ಮಾಲೀಕನಿಗೆ ಹಿಂದಿರುಗಿಸಿದ 15 ವರ್ಷದ ಬಾಲಕ ಹಾಗೂ ವಾಚ್‍ಮ್ಯಾನ್ ಆಗಿ ಕೆಲಸ ಮಾಡೋ ಆತನ ತಂದೆಗೆ ಸೂರತ್ ಡೈಮಂಡ್ ಅಸೋಸಿಯೇಷನ್(ಎಸ್‍ಡಿಎ) ಶನಿವಾರದಂದು ಸನ್ಮಾನ ಮಾಡಿದೆ.

    ಬಾಲಕ ವಿಶಾಲ್ ಉಪಾಧ್ಯಾಯ ಹಾಗೂ ಆತನ ತಂದೆ ಫುಲ್‍ಚಂದ್ ಅವರಿಗೆ ಸನ್ಮಾನ ಮಾಡಲಾಗಿದೆ. ಅಲ್ಲದೆ ವಿಶಾಲ್‍ನ ಪ್ರಾಮಾಣಿಕತೆಗೆ ಬಹುಮಾನವಾಗಿ ಆತನ ಒಂದು ವರ್ಷದ ಶಿಕ್ಷಣದ ಖರ್ಚನ್ನು ಭರಿಸುವುದಾಗಿ ಅಸೋಸಿಯೇಷನ್‍ನ ಮಾಜಿ ಅಧ್ಯಕ್ಷ ದಿನೇಶ್ ನವಾಡಿಯಾ ಹೇಳಿದ್ದಾರೆ.

    ವಜ್ರ ವ್ಯಾಪಾರಿ ಆಗಿರೋ ಮನ್‍ಸುಖ್‍ಭಾಯ್ ಸವಾಲಿಯಾ ಕಳೆದ ಭಾನುವಾರ ಸೇಫ್ ಲಾಕರ್‍ನಿಂದ ವಜ್ರದ ಪ್ಯಾಕೆಟ್‍ಗಳನ್ನ ತೆಗೆದುಕೊಂಡು ಹೋಗ್ತಿದ್ರು. ಈ ವೇಳೆ 45 ಲಕ್ಷ ರೂ. ಮೌಲ್ಯದ ವಜ್ರಗಳಿದ್ದ ಒಂದು ಪ್ಯಾಕೆಟ್ ಕೆಳಗೆ ಬಿದ್ದುಹೋಗಿತ್ತು. ಅಲ್ಲೇ ಹತ್ತಿರದಲ್ಲಿ ಕ್ರಿಕೆಟ್ ಆಡ್ತಿದ್ದ ಬಾಲಕ ವಿಶಾಲ್ ಆ ಪ್ಯಾಕೆಟ್ ನೋಡಿದ್ದು, ಅದನ್ನು ತೆಗೆದುಕೊಂಡು ಮನೆಗೆ ಹೋಗಿ ತನ್ನ ತಂದೆಗೆ ಅದನ್ನು ತೋರಿಸಿದ್ದ ಎಂದು ನವಾಡಿಯಾ ಹೇಳಿದ್ರು.

    ಮರುದಿನ ಸೋಮವಾರ ಹಾಗೂ ಮಂಗಳವಾರ ರಜೆ ಇದ್ದಿದ್ದರಿಂದ ಡೈಮಂಡ್ ಮಾರುಕಟ್ಟೆ ಮುಚ್ಚಲಾಗಿತ್ತು. ಬುಧವಾರ ಅಸೋಸಿಯೇಷನ್ ತೆರೆದ ಕೂಡಲೇ ಫುಲ್‍ಚಂದ್ ವಜ್ರಗಳನ್ನ ಹಿಂದಿರುಗಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

    ಮತ್ತೊಂದು ಕಡೆ ಮನ್‍ಸುಖ್‍ಭಾಯ್ ವಜ್ರಗಳಿಗಾಗಿ ಎಲ್ಲಾ ಕಡೆ ಹುಡುಕಾಡಿದ್ದರು. ಆ ಪ್ರದೇಶದ ಸಿಸಿಟಿವಿ ಪರಿಶೀಲಿಸಿ ಏನಾದ್ರೂ ಸುಳಿವು ಸಿಗುತ್ತಾ ಎಂದು ನೋಡಿದ್ದರು. ಆದ್ರೆ ರಜೆಯಿದ್ದ ಕಾರಣ ಸೇಫ್ ಲಾಕರ್‍ನ ಸಿಸಿಟಿವಿ ದೃಶ್ಯಾವಳಿಯನ್ನ ಪರಿಶೀಲಿಸಲು ಸಾಧ್ಯವಾಗಿರಲಿಲ್ಲ.

    ಎಸ್‍ಡಿಎ ಕಚೇರಿ ತೆರೆದ ನಂತರ ಬಾಲಕ ಹಾಗೂ ಆತನ ತಂದೆ ವಜ್ರಗಳನ್ನ ಹಿಂದಿರುಗಿಸಿದ್ದು, ಬಳಿಕ ಅಸೋಸಿಯೇಷನ್‍ನವರು ಇದರ ಮಾಲೀಕನ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಯನ್ನ ಪರಿಶೀಲಿಸಿದ್ದರು. ನಂತರ ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಬ್ರೋಕರ್ ಸಂಪರ್ಕ ಮಾಡಿ ಅವರು ಕಳೆದುಕೊಂಡಿದ್ದ ವಜ್ರಗಳನ್ನ ಹಿಂದಿರುಗಿಸಿದ್ರು ಎಂದು ನವಾಡಿಯಾ ಹೇಳಿದ್ದಾರೆ.

    ಇಡೀ ವಿಶ್ವದಲ್ಲೇ ಸೂರತ್ ಅತೀ ದೊಡ್ಡ ವಜ್ರ ಪಾಲಿಶಿಂಗ್ ಕೇಂದ್ರವಾಗಿದೆ.