Tag: Diamond League

  • ಮತ್ತೊಂದು ಇತಿಹಾಸ ಸೃಷ್ಟಿ – ಡೈಮಂಡ್‌ ಲೀಗ್‌ ಗೆದ್ದ ನೀರಜ್‌ ಚೋಪ್ರಾ

    ಮತ್ತೊಂದು ಇತಿಹಾಸ ಸೃಷ್ಟಿ – ಡೈಮಂಡ್‌ ಲೀಗ್‌ ಗೆದ್ದ ನೀರಜ್‌ ಚೋಪ್ರಾ

    ಲಾಸನ್‌: ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಜಾವೆಲಿನ್‌ ಥ್ರೋ ಸ್ಪರ್ಧಿ ನೀರಜ್‌ ಚೋಪ್ರಾ(Neeraj Chopra) ಅವರು ಲಾಸನ್‌ನಲ್ಲಿ ನಡೆದ ಡೈಮಂಡ್‌ ಲೀಗ್‌(Diamond League) ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

    ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ನೀರಜ್‌ 89.04 ಮೀ. ಸಾಧನೆಯೊಂದಿಗೆ ಮೊದಲ ಸ್ಥಾನ ಪಡೆದರು. ಈ ವಿಶಿಷ್ಟ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್‌ ಎಂಬ ಗೌರವಕ್ಕೆ ನೀರಜ್‌ ಪಾತ್ರರಾಗಿದ್ದಾರೆ. ಈ ಜಯದೊಂದಿಗೆ ಮುಂದಿನ ತಿಂಗಳು ಜ್ಯೂರಿಚ್‌ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ ಫೈನಲ್‌ಗೆ ನೀರಜ್‌ ಅರ್ಹತೆ ಪಡೆದಿದ್ದಾರೆ.

    ಮೊದಲ ಪ್ರಯತ್ನದಲ್ಲೇ ನೀರಜ್‌ ಈ ಸಾಧನೆ ಮಾಡಿದ್ದು ವಿಶೇಷ. ಜೇಕಬ್‌ ವಾಡ್ಲೆಚ್‌ (85.88 ಮೀ.) ಎರಡನೇ ಸ್ಥಾನ ಪಡೆದರೆ, ಅಮೆರಿಕದ ಕರ್ಟಿಸ್‌ ಥಾಂಪ್ಸನ್‌ (83.72 ಮೀ.) ಮೂರನೇ ಸ್ಥಾನ ಗಳಿಸಿದರು. ಇದನ್ನೂ ಓದಿ: ಅಂದುಕೊಂಡಂತೆ ನಡೆದರೆ ಮುಂದಿನ ಮೂರು ಭಾನುವಾರ ಇಂಡೋ-ಪಾಕ್ ಫೈಟ್ ಗ್ಯಾರಂಟಿ

    ಒಲಿಂಪಿಕ್ಸ್‌ ಟ್ರ್ಯಾಕ್‌ ಆಂಡ್‌ ಫೀಲ್ಡ್‌ ಸ್ಪರ್ಧೆಯಲ್ಲಿ ಭಾರತ ಇಲ್ಲಿಯವರೆಗೆ ಚಿನ್ನದ ಪದಕ ಗೆದ್ದಿರಲಿಲ್ಲ. ಆದರೆ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನೀರಜ್‌ ಚೋಪ್ರಾ ತಮ್ಮ ಎರಡನೇ ಪ್ರಯತ್ನದಲ್ಲಿ 87.58 ಮೀಟರ್‌ ದೂರಕ್ಕೆ ಜಾವೆಲಿನ್‌ ಎಸೆದು ಚಿನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದರು. ಗಾಯಗೊಂಡ ಹಿನ್ನೆಲೆಯಲ್ಲಿ ನೀರಜ್‌ ಚೋಪ್ರಾ ಈ ಬಾರಿಯ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪಾಲ್ಗೊಂಡಿರಲಿಲ್ಲ.

    ಡಿಸ್ಕಸ್‌ ಥ್ರೋ ಸ್ಪರ್ಧಿ ವಿಕಾಸ್‌ ಗೌಡ ಅವರು ಎರಡನೇ ಸ್ಥಾನ ಪಡೆದದ್ದು, ಡೈಮಂಡ್‌ ಲೀಗ್‌ನಲ್ಲಿ ಭಾರತದ ಅಥ್ಲೀಟ್‌ವೊಬ್ಬರ ಇದುವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು. ವಿಕಾಸ್‌ ಅವರು 2012 ರ ನ್ಯೂಯಾರ್ಕ್‌ ಮತ್ತು 2014ರ ದೋಹಾ ಕೂಟದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದರು. 2015 ರಲ್ಲಿ ಶಾಂಘೈ ಮತ್ತು ಯೂಜಿನ್‌ ಕೂಟಗಳಲ್ಲಿ ಮೂರನೇ ಸ್ಥಾನ ಗಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]