Tag: Dhavalsinh Zala

  • ರಾಹುಲ್ ನಮಗೆ ಏನನ್ನೂ ಮಾಡಿಲ್ಲ: ಇಬ್ಬರು `ಕೈ’ ರೆಬೆಲ್ ಶಾಸಕರು ರಾಜೀನಾಮೆ

    ರಾಹುಲ್ ನಮಗೆ ಏನನ್ನೂ ಮಾಡಿಲ್ಲ: ಇಬ್ಬರು `ಕೈ’ ರೆಬೆಲ್ ಶಾಸಕರು ರಾಜೀನಾಮೆ

    ಗಾಂಧಿನಗರ: ಗುಜರಾತ್ ಕಾಂಗ್ರೆಸ್‍ನ ರೆಬೆಲ್ ಶಾಸಕರಾದ ಅಲ್ಪೇಶ್ ಠಾಕೂರ್ ಹಾಗೂ ಧವಲ್ ಸಿನ್ಹಾ ಜಾಲಾ ಅವರು ತಮ್ಮ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.

    ರಾಜ್ಯಸಭೆ ಎರಡು ಸ್ಥಾನಗಳ ಉಪಚುನಾವಣೆಯಲ್ಲಿ ಮತ ಚಲಾಯಿಸಿದ ಬಳಿಕ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದ ಅಲ್ಪೇಶ್ ಠಾಕೂರ್ ಹಾಗೂ ಧವಲ್ ಸಿನ್ಹಾ ಅವರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧವೇ ಮತ ಹಾಕಿದ್ದಾರೆ ಎನ್ನಲಾಗುತ್ತಿದೆ.

    ರಾಜೀನಾಮೆ ಬಳಿಕ ಮಾತನಾಡಿದ ಅಲ್ಪೇಶ್ ಠಾಕೂರ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮೇಲೆ ನಂಬಿಕೆ, ವಿಶ್ವಾಸವಿಟ್ಟು ನಾನು ಪಕ್ಷಕ್ಕೆ ಸೇರಿಕೊಂಡೆ. ದುರಾದೃಷ್ಟವಶಾತ್ ಅವರು ನಮಗೆ ಏನನ್ನೂ ಮಾಡಲಿಲ್ಲ. ನಾವು ಪದೇ ಪದೇ ಅವಮಾನಕ್ಕೆ ಒಳಗಾದೆವು. ಹೀಗಾಗಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದರು.

    ಕಾಂಗ್ರೆಸ್ಸಿಗರು ನಮ್ಮನ್ನು ಅವಮಾನಿಸಿದ್ದಾರೆ. ಅಷ್ಟೇ ಅಲ್ಲದೆ ಪಕ್ಷದ ನಾಯಕರು ಕಾರ್ಯಕರ್ತರ ಮಾತುಗಳನ್ನು ಆಲಿಸುವುದಿಲ್ಲ ಎಂದು ಧವಲ್ ಸಿನ್ಹಾ ದೂರಿದ್ದಾರೆ.

    ಅಲ್ಪೇಶ್ ಠಾಕೂರ್ ಗುಜರಾತ್ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಸವಾಲು ಹಾಕಿ ಸದ್ದು ಮಾಡಿದ್ದರು. ಕೆಲ ದಿನಗಳ ಹಿಂದೆ ಅಲ್ಪೇಶ್ ಠಾಕೂರ್ ಬಿಜೆಪಿ ಸೇರುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಈ ಕುರಿತು ಸ್ಪಷ್ಟನೆ ನೀಡಿದ್ದ ಅವರು, ಇಂತಹ ವದಂತಿಗಳನ್ನು ಯಾರು ಹಬ್ಬಿಸುತ್ತಿದ್ದಾರೆ ನನಗೆ ತಿಳಿದಿಲ್ಲ. ಆದರೆ ನಾನು ಬಿಜೆಪಿ ಸೇರ್ಪಡೆಯಾಗುವುದಿಲ್ಲ. ಕಾಂಗ್ರೆಸ್ ಜೊತೆಗಿದ್ದೇನೆ ಹಾಗೂ ಕಾಂಗ್ರೆಸ್ ಜೊತೆಯಲ್ಲೇ ಇರುತ್ತೇನೆ. 20,000 ಅನುಯಾಯಿಗಳ ಅಭಿಪ್ರಾಯ ಪಡೆದು ಕಾಂಗ್ರೆಸ್‍ಗೆ ಸೇರ್ಪಡೆಯಾಗಿರುವೆ. ಬಿಹಾರವೂ ಸೇರಿದಂತೆ ನಾನು ರಾಷ್ಟ್ರೀಯ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ ಎಂದು ತಿಳಿಸಿದ್ದರು.

    ಗುಜರಾತ್ ಚುನಾವಣೆ ವೇಳೆ ಯುವ ತ್ರಿವಳಿ ನಾಯಕರಾದ ಅಲ್ಪೇಶ್ ಠಾಕೂರ್, ಹಾರ್ದಿಕ್ ಪಾಟೇಲ್, ಜಿಗ್ನೇಶ್ ಮೇವಾನಿ ಬಿಜೆಪಿಗೆ ತಲೆನೋವಾಗಿದ್ದರು. 2011 ರಲ್ಲಿ ಗುಜರಾತ್ ಕ್ಷತ್ರಿಯ ಠಾಕೂರ್ ಸೇನಾ ಸಂಘಟನೆ ನಿರ್ಮಿಸಿದ್ದ ಠಾಕೂರ್ ತಮ್ಮ ಜನಾಂಗದ ಪರ ಹೋರಾಟಕ್ಕೆ ಇಳಿದಿದ್ದರು. ಅಲ್ಲದೆ ಓಬಿಸಿ, ಎಸ್‍ಟಿ ಎಸ್‍ಸಿ ಏಕತಾ ವೇದಿಕೆ ನಿರ್ಮಿಸಿ ಶೋಷಿತ ಸಮುದಾಯಗಳ ಪರ ಆಂದೋಲಗಳನ್ನು ರೂಪಿಸಿದ್ದರು.