Tag: dharmasthala mela

  • ಯಕ್ಷರಂಗದ ಸಿಡಿಲಮರಿ ಶ್ರೀಧರ ಭಂಡಾರಿ ವಿಧಿವಶ

    ಯಕ್ಷರಂಗದ ಸಿಡಿಲಮರಿ ಶ್ರೀಧರ ಭಂಡಾರಿ ವಿಧಿವಶ

    ಮಂಗಳೂರು: ತೆಂಕುತಿಟ್ಟು ಯಕ್ಷಗಾನದಲ್ಲಿ ಸಿಡಿಲಮರಿ ಎಂದೇ ಖ್ಯಾತಿ ಪಡೆದಿದ್ದ ಧರ್ಮಸ್ಥಳ ಮೇಳದ ಹಿರಿಯ ಕಲಾವಿದ ಡಾ. ಶ್ರೀಧರ ಭಂಡಾರಿ (73) ವಿಧಿವಶರಾಗಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಬನ್ನೂರು ನಿವಾಸಿಯಾಗಿದ್ದ ಶ್ರೀಧರ ಭಂಡಾರಿ ಒಂದು ವರ್ಷದ ಹಿಂದೆ ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಇಂದು ಮುಂಜಾನೆ ಶ್ರೀಧರ ಭಂಡಾರಿ ನಿಧನರಾಗಿದ್ದು, ಮೃತರು ಪತ್ನಿ ಉಷಾ ಭಂಡಾರಿ, ಪುತ್ರಿಯರಾದ ಕೋಕಿಲಾ, ಶಾಂತನಾ, ಪುತ್ರರಾದ ಡಾ ಅನಿಲ, ದೇವಿ ಪ್ರಕಾಶ್ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

    ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಜನರಾಗಿದ್ದ ಶ್ರೀಧರ ಭಂಡಾರಿ ಧರ್ಮಸ್ಥಳ ಮೇಳದ ಹಿರಿಯ ಯಕ್ಷಗಾನ ಕಲಾವಿದರಾಗಿದ್ದರು. ಪುಂಡುವೇಷದ ಗಂಡುಗಲಿ, ಧೀಂಗಿಣ ವೀರ ಎಂದೇ ಪ್ರಸಿದ್ಧಿ ಪಡೆದಿದ್ದರು.

    ಪುಂಡು ವೇಷಗಳಿಗೆ ಹೆಸರು ಪಡೆದಿದ್ದ ಇವರಿಗೆ ರಂಗಸ್ಥಳದಲ್ಲಿ ಚುರುಕಿನ, ವೇಗದ ನಡೆಯಿಂದ ಅವರಿಗೆ ಸಿಡಿಲಮರಿ ಎಂಬ ಬಿರುದು ಒಲಿದಿತ್ತು. ಒಂದೇ ಬಾರಿಗೆ 200ರಿಂದ 250ರಷ್ಟು ಧೀಂಗಿಣ ಹಾಕುತ್ತಿದ್ದ ಶ್ರೀಧರ ಭಂಡಾರಿ ಅವರು ಬಭ್ರುವಾಹನ, ಅಶ್ವತ್ಥಾಮ, ಕುಶ, ಭಾರ್ಗವ ಮುಂತಾದ ಪಾತ್ರಗಳಲ್ಲಿ ಸೈ ಎನಿಸಿಕೊಂಡಿದ್ದರು.

    ತಮ್ಮ 62ನೇ ವಯಸ್ಸಿನಲ್ಲಿ ಖಾಸಗಿ ಸುದ್ದಿವಾಹಿನಿಯ ‘ಶಭಾಶ್ ಇಂಡಿಯಾ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀಧರ ಭಂಡಾರಿಯವರು 3 ನಿಮಿಷಗಳಲ್ಲಿ 148 ಧೀಂಗಿಣಗಳನ್ನು ಹೊಡೆದಿದ್ದರು. ಕಲಾ ಸೇವೆಗಾಗಿ ಅಮೇರಿಕಾದ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಶ್ರೀಧರ ಭಂಡಾರಿ ಅವರನ್ನು ಗೌರವಿಸಿತ್ತು.

    ಅಜ್ಜನಿಂದ ಪ್ರಭಾವಿತರಾಗಿ ಯಕ್ಷಗಾನದತ್ತ ಆಕರ್ಷಿತರಾಗಿದ್ದ ಇವರು ಕುರಿಯ ವಿಠಲ ಶಾಸ್ತ್ರಿ ಅವರಿಂದ ಶಾಸ್ತ್ರಬದ್ಧವಾಗಿ ಯಕ್ಷಗಾನ ಅಭ್ಯಾಸ ಮಾಡಿದ್ದರು. ಸುಬ್ರಹ್ಮಣ್ಯ ಮೇಳ, ಬಾಳಂಬೆಟ್ಟು ಮೇಳ, ಪುತ್ತೂರು ಮೇಳಗಳಲ್ಲಿ ಸೇವೆ ಸಲ್ಲಿಸಿದ ಶ್ರೀಧರ ಭಂಡಾರಿ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವೇರ ಮೇಳದಲ್ಲಿ ಸುದೀರ್ಘ 45 ವರ್ಷಗಳ ಕಾಲ ಪ್ರಮುಖ ವೇಷಧಾರಿಯಾಗಿ ಕಲಾ ಸೇವೆಗೈದಿದ್ದರು.