Tag: Dharmasthala Manjunath

  • ಮೋದಿ ಕರ್ನಾಟಕಕ್ಕೆ ಇಂದೇ ಭೇಟಿ ಕೊಟ್ಟ ಮಹಾರಹಸ್ಯ ಗೊತ್ತಾ? – Public TV Super Exclusive

    ಮೋದಿ ಕರ್ನಾಟಕಕ್ಕೆ ಇಂದೇ ಭೇಟಿ ಕೊಟ್ಟ ಮಹಾರಹಸ್ಯ ಗೊತ್ತಾ? – Public TV Super Exclusive

    ಪವಿತ್ರ ಕಡ್ತಲ
    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳ ಮಂಜುನಾಥ ಕ್ಷೇತ್ರ ದರ್ಶನ ಹಾಗೂ ಬೆಂಗಳೂರಿನಲ್ಲಿ ನಡೆದ ಸೌಂದರ್ಯಲಹರಿ ಕಾರ್ಯಕ್ರಮ ಹಿಂದಿನ ಮಹಾರಹಸ್ಯ ಬಯಲಾಗಿದೆ. ಧರ್ಮಸ್ಥಳಕ್ಕೆ ಮೋದಿ ಇಂದೇ ಭೇಟಿ ಕೊಡಲು ವಿಶೇಷ ಕಾರಣವಿದೆ ಎಂದು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ. ಖ್ಯಾತ ಜ್ಯೋತಿಷಿಗಳ ಸಲಹೆಯ ಮೇರೆಗೆ ನರೇಂದ್ರ ಮೋದಿ ಧರ್ಮಸ್ಥಳಕ್ಕೆ ಬಂದಿರೋದಂತೆ.

    ಇಂದು ಶಿವ ದರ್ಶನ ಪಡೆದ್ರೆ ಅದ್ಭುತವೊಂದು ಸಂಭವಿಸಲಿದೆ. ಕಾರ್ತಿಕ ಮಾಸದ ನವಮಿ ಶ್ರೇಷ್ಠ ದಿನವಾಗಿದ್ದು ಇಂದು ಮಂಜುನಾಥನಿಗೆ ವಿಶೇಷ ಪೂಜೆ ಸಲ್ಲಿಸಿದರೆ ಅತೀತ ಶಕ್ತಿ ಸಿಗಲಿದೆ. ಶಿವಶಕ್ತಿಯ ಪ್ರಾಪ್ತಿಗಾಗಿಯೇ ಮೋದಿ ಕರ್ನಾಟಕಕ್ಕೆ ಬಂದ್ರು ಎನ್ನಲಾಗಿದೆ. ಕಾರ್ತಿಕ ಮಾಸ ಅಂದ್ರೆ ಧರ್ಮಸ್ಥಳದಲ್ಲಿ ಅದು ಪುಣ್ಯ ಮಾಸ. ಇಂದು ಈಶ್ವರ ಪೂಜೆಗೆ ಸರ್ವಶ್ರೇಷ್ಠ. ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ನಡೆಯುತ್ತಿದೆ. ಜೊತೆಗೆ ಇಂದು ನವಮಿಯೂ ಹೌದು.  ನವಮಿ ಪುರಾಣದಲ್ಲೂ ಉಲ್ಲೇಖವಿದೆ. ನವಮಿಯಲ್ಲಿ ಧರ್ಮಸ್ಥಳ ಯಾತ್ರೆ ಗೆಲುವಿಗೆ ಸಹಕಾರಿ. 2014ರಲ್ಲಿ ಮೋದಿ ಅಲೆ ಇತ್ತು, ಆದರೆ ಈಗ ಶ್ರಮ ಬೇಕಾಗಿದೆ. ಅದಕ್ಕಾಗಿ ಮಂಜುನಾಥನ ಕೃಪೆ ಅತ್ಯಗತ್ಯ. ವೀರೇಂದ್ರ ಹೆಗ್ಗಡೆಯವರ ಧರ್ಮಾಧಿಕಾರಿಗಳ ಪೀಠದಿಂದಲೇ ಅವ್ರಿಗೆ ಪುಣ್ಯ ಲಭಿಸುತ್ತದೆ. ಮೋದಿಗೆ ವೈಯಕ್ತಿಕ ಸ್ವಾರ್ಥ ಇಲ್ಲ, ಅವರು ಮನೆ ಮಾಡಿಕೊಂಡಿಲ್ಲ, ಅವರು ಸನ್ಯಾಸಿ. ದೇಶದ ಒಳಿತಿಗಾಗಿ ಬಯಸುವ ಮನಸ್ಸು ಮೋದಿಯದ್ದು. ಮೋದಿ ಮುಂದಿನ ಪ್ರಯಾಣ ಸುಖವಾಗಿರುತ್ತದೆ ಎಂದು ಖ್ಯಾತ ಜ್ಯೋತಿಷಿ ದ್ವಾರಕಾನಾಥ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಬೆಂಗಳೂರಿನಲ್ಲಿ ನಡೆದ ಸೌಂದರ್ಯ ಲಹರಿ ಕಾರ್ಯಕ್ರಮದಲ್ಲಿ ಕೂಡಾ ಶಕ್ತಿದಾಯಿ ಪಾರ್ವತಿ ಆರಾಧನೆ ನಡೆಯುತ್ತಿದೆ. ಶಿವ ಪಾರ್ವತಿ ಸಾಕ್ಷಾತ್ಕಾರದಿಂದ ಮೋದಿಗೆ ಅತೀತ ಶಕ್ತಿ ಬರಲಿದೆ. ಇದು ಶಿವ ಶಕ್ತಿಯ ಮುಖಾಮುಖಿ. ಒಂದೇ ದಿನಕ್ಕೆ ಶಿವ ಪಾರ್ವತಿಯ ದರ್ಶನ ಭಾಗ್ಯ. ರಾಜಕೀಯ ಶಕ್ತಿ ಪಡೆಯಲೆಂದೇ ಮೋದಿ ಕರ್ನಾಟಕಕ್ಕೆ ಬಂದಿದ್ದಾರೆ ಎಂದು ದ್ವಾರಕಾನಾಥ್ ಮಾಹಿತಿ ನೀಡಿದ್ದಾರೆ. ಪಾರ್ವತಿ ಈಶ್ವರನ ದರ್ಶನದಿಂದ ಜಗತ್ತೆ ಗೆಲ್ಲುವ ಶಕ್ತಿ ಪ್ರಾಪ್ತಿಯಾಗುತ್ತದೆ. ಇದಕ್ಕಾಗಿ ನವಮಿ ದಿನವೇ ಪುಣ್ಯ ಕ್ಷೇತ್ರಕ್ಕೆ ನರೇಂದ್ರ ಮೋದಿ ಬಂದು ಪ್ರಾರ್ಥನೆ ಸಲ್ಲಿಸಿದ್ರು ಎನ್ನಲಾಗಿದೆ. ಶಿವ ಪಾರ್ವತಿಯ ಆರಾಧನೆ ಇಂದು ನಡೆದ್ರೆ ಜಗತ್ತನ್ನೇ ನೀಡ್ತಾರೆ. ಭಾರತ ದೇಶವನ್ನು ಮೋದಿಯ ಕೈಯಲ್ಲಿ ಇಡೋದು ಗ್ಯಾರಂಟಿ. ಮೋದಿಗೆ ವಿರೋಧಿ ಶಕ್ತಿಯಿಂದಲೂ ರಕ್ಷಣೆ ಸಿಗಲಿದೆ. ದೇಶಕ್ಕೆ ಬಂದಿರುವ ಸಂಕಷ್ಟಗಳೆಲ್ಲಾ ದೂರವಾಗುತ್ತದೆ ಎನ್ನುವುದು ಜ್ಯೋತಿಷಿಗಳ ಮಾತು.

     

     

     

  • ಧರ್ಮಸ್ಥಳದಲ್ಲಿ ನಮೋ ಮೇನಿಯಾ- ಭಾಷಣದುದ್ದಕ್ಕೂ ಹೆಗ್ಗಡೆ ಅವರನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ

    ಧರ್ಮಸ್ಥಳದಲ್ಲಿ ನಮೋ ಮೇನಿಯಾ- ಭಾಷಣದುದ್ದಕ್ಕೂ ಹೆಗ್ಗಡೆ ಅವರನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ

    ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಮೋದಿ ಉಜಿರೆಯ ಕಾರ್ಯಕ್ರಮದಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ 12 ಲಕ್ಷ ಮಹಿಳೆಯರಿಗೆ ರುಪೇ ಕಾರ್ಡ್ ವಿತರಣೆ ಮಾಡಲಾಯಿತು.

    ಧರ್ಮಾಧಿಕಾರಿಯಾಗಿ 50 ವರ್ಷ ಪೂರೈಸಿರುವ ವೀರೇಂದ್ರ ಹೆಗ್ಗಡೆ ಅವರಿಗೆ ಶಾಲು ಹೊದಿಸಿ ಮೋದಿ ಸನ್ಮಾನಿಸಿದರು. ಸನ್ಮಾನದ ಬಳಿಕ ಧರ್ಮಸ್ಥಳದ ನನ್ನ ಪ್ರೀತಿಯ ಬಂಧು ಮಹಿಳೆಯರಿಗೆ ನನ್ನ ನಮಸ್ಕಾರಗಳು. ನನ್ನ ಪ್ರೀತಿಯ ಸಹೋದರಿಯರಿಗೆ ನನ್ನ ಧನ್ಯವಾದಗಳು ಎಂದು ಕನ್ನಡದಲ್ಲಿ ಪ್ರಧಾನಿ ಮೋದಿ ಮಾತು ಆರಂಭಿಸಿದರು.

    ಇದು ನನ್ನ ಸೌಭಾಗ್ಯ ಭಗವಾನ್ ಮಂಜುನಾಥ್ ಸ್ವಾಮಿಯ ದರ್ಶನದ ಜೊತೆಗೆ ನಿಮ್ಮೆಲ್ಲರ ದರ್ಶನ ಮಾಡುವ ಭಾಗ್ಯ ದೊರೆತಿದೆ. ಕಳೆದ ವಾರ ನಾನು ಕೇದರನಾಥ್ ತೆರಳಿದ್ದೆ, ಇಂದು ದಕ್ಷಿಣ ಭಾರತದ ಮಂಜುನಾಥ ಸ್ವಾಮಿಯ ದರ್ಶನ ಪಡೆದಿರುವುದು ಅತೀವ ಆನಂದವನ್ನು ತರಿಸಿದೆ. ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಹೆಗ್ಗಡೆ ಅವರನ್ನು ಸನ್ಮಾನಿಸಲು ನಾನು ತುಂಬಾ ಚಿಕ್ಕವನು. ದೇಶದ ಜನರು ನನ್ನನ್ನು ಒಂದು ಸ್ಥಾನದಲ್ಲಿ ಕೂರಿಸಿದ್ದರಿಂದ ಇಂದು ನಾನು ಹೆಗ್ಗಡೆಯವರನ್ನು ಸನ್ಮಾನಿಸಿದ್ದೇನೆ. ಇದು ನನ್ನ ಸೌಭಾಗ್ಯ ಎಂದು ಹೇಳಿದರು.

    ಸಮಾಜದ ರಕ್ಷಣೆ: ಹೆಗ್ಗಡೆ ಅವರನ್ನು ನಾನು ಎಷ್ಟು ಬಾರಿ ನೋಡಿದರೂ ಅವರ ಮುಖದ ಮೇಲಿನ ಮುಗುಳ್ನಗೆ ಎಂದು ಹೋಗಲ್ಲ. ನಾನು ಹೆಗ್ಗಡೆವರಿಂದ ಕಲಿಯುವುದು ತುಂಬಾ ಇದೆ. ಹೆಗ್ಗಡೆ ಅವರು ಶಿಕ್ಷಣ, ಗ್ರಾಮೀಣ ಅಭಿವೃದ್ಧಿ, ಕೌಶಲ್ಯ ತರಬೇತಿ ಎಲ್ಲಾ ವಿಭಾಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮಾನವ ಸಂಪನ್ಮೂಲದ ಬಳಕೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡ ಅವರ ಪಾತ್ರ ದೇಶದ ಅಭಿವೃದ್ಧಿಯಲ್ಲಿ ಪ್ರಮುಖವಾಗಿದೆ. ದೇಶ ಬದಲಾವಣೆಯತ್ತ ಸಾಗುತ್ತಿದ್ದು, ಇಂದು 12 ಲಕ್ಷ ಮಹಿಳೆಯರು ತಮ್ಮನ್ನು ಮ್ಮ ಹಣಕಾಸಿನ ವ್ಯವಹಾರವನ್ನು ಡಿಜಿಟಲ್ ಕ್ಷೇತ್ರದತ್ತ ಆರಂಭಿಸುತ್ತಿದ್ದಾರೆ. 21 ನೇ ಶತಮಾನ ಕೌಶಲ್ಯ ಅಭಿವೃದ್ಧಿಯತ್ತ ಸಾಗುತ್ತಿದೆ. ನಮ್ಮ ಹಿರಿಯರು ಪೂರ್ವಜರು ನಮಗೆ ಸಮಾಜ ಬಿಟ್ಟು ಹೋಗಿದ್ದು, ನಾವು ನಮ್ಮ ಮುಂದಿನ ಪೀಳಿಗೆಯವರಿಗೆ ಬಿಟ್ಟು ಕೊಡಬೇಕಾಗಿದೆ. ಪರಿಸರ ಮತ್ತು ಸಮಾಜದ ರಕ್ಷಣೆ ನಮ್ಮ ಮೇಲಿದೆ ಎಂದು ತಿಳಿಸಿದರು.

    ಪರ್ ಡ್ರಾಪ್ ಮೋರ್ ಕ್ರಾಪ್: ನಾವು ಎಂದೂ ಭೂಮಿ ತಾಯಿಯ ಬಗ್ಗೆ ಯೋಚನೆ ಮಾಡುವುದಿಲ್ಲ. ನಮಗೆ ನಮ್ಮ ಲಾಭ ಮಾತ್ರ ಮುಖ್ಯವಾಗಿದೆ. ಹಲವು ಕ್ರಿಮಿನಾಶಕಗಳನ್ನು ಬಳಸುತ್ತಿದ್ದೇವೆ. ಕ್ರಿಮಿನಾಶಕಗಳ ಬಳಕೆಯ ಪ್ರಮಾಣ ಕಡಿಮೆಗೊಳಿಸಬೇಕು. 2022ರೊಳಗೆ ಯೂರಿಯಾ ಉಪಯೋಗವನ್ನು ಶೇ.50ರಷ್ಟು ಕಡಿಮೆ ಬಳಕೆ ಮಾಡುತ್ತೇವೆ ಎಂದು ಎಲ್ಲ ಕೃಷಿ ಬಾಂಧವರು ಪ್ರತಿಜ್ಞೆಯನ್ನು ಮಾಡಬೇಕಾಗಿದೆ. ಮೈಕ್ರೋ ಇರಿಗೇಷನ್ `ಪರ್ ಡ್ರಾಪ್ ಮೋರ್ ಕ್ರಾಪ್’ ಎಂಬ ಸಂಕಲ್ಪವನ್ನು ನಮ್ಮ ರೈತ ಬಾಂಧವರು ಮಾಡಬೇಕಾಗಿದೆ ಎಂದ್ರು.

    ಸಚಿವರಾದ ಅನಂತ ಕುಮಾರ್, ಡಿ. ವಿ. ಸದಾನಂದ ಗೌಡ, ಅನಂತ್ ಕುಮಾರ್ ಹೆಗಡೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಕೆ. ವಸಂತ ಬಂಗೇರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷ ರಜನೀಶ್ ಕುಮಾರ್, ಜ್ಞಾನ ವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮೊದಲಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

    ಇಂದು 12.50ಕ್ಕೆ ರಸ್ತೆ ಮೂಲಕ ಧರ್ಮಸ್ಥಳ ಹೆಲಿಪ್ಯಾಡ್ ಗೆ ಪ್ರಯಾಣಿಸಿ ಹೆಲಿಕಾಪ್ಟರ್ ನಲ್ಲಿ ಮಂಗಳೂರು ವಿಮಾನ ನಿಲ್ದಾಣವಿರುವ ಬಜ್ಪೆಗೆ ಪ್ರಯಾಣಿಸಿದ್ದಾರೆ. ಮಧ್ಯಾಹ್ನ 1.10ಕ್ಕೆ ಬಜ್ಪೆಯಿಂದ ವಿಮಾನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಧ್ಯಾಹ್ನ 3.30ರವರೆಗೆ ಸೌಂದರ್ಯ ಲಹರಿ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 4.45ಕ್ಕೆ ಬೆಂಗಳೂರಿನಿಂದ ಬೀದರ್ ಗೆ ಪ್ರಯಾಣ ಬೆಳೆಸಿ ಸಂಜೆ 5.10ಕ್ಕೆ ಬೀದರ್-ಕಲಬುರಗಿ ರೈಲು ಲೋಕಾರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮ ಮುಗಿಸಿ ಸಂಜೆ 6.20ಕ್ಕೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

     

  • ಇದೇ ಭಾನುವಾರ ಧರ್ಮಸ್ಥಳಕ್ಕೆ ಪ್ರಧಾನಿ ಮೋದಿ -ಭದ್ರತೆ ಹಿನ್ನೆಲೆಯಲ್ಲಿ ಭಕ್ತರಿಗಿಲ್ಲ ದರ್ಶನ ಭಾಗ್ಯ

    ಇದೇ ಭಾನುವಾರ ಧರ್ಮಸ್ಥಳಕ್ಕೆ ಪ್ರಧಾನಿ ಮೋದಿ -ಭದ್ರತೆ ಹಿನ್ನೆಲೆಯಲ್ಲಿ ಭಕ್ತರಿಗಿಲ್ಲ ದರ್ಶನ ಭಾಗ್ಯ

    ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಪ್ರಧಾನಿಯಾದ ಬಳಿಕ ಮೋದಿ ಇದೇ ಮೊದಲ ಬಾರಿಗೆ ಮಂಜುನಾಥನ ದರ್ಶನ ಪಡೆಯುತ್ತಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಅಕ್ಟೋಬರ್28ರ ಶನಿವಾರದಿಂದ ಅಕ್ಟೋಬರ್ 29ರವರೆಗೆ ಸಾರ್ವಜನಿಕರಿಗೆ ಮಂಜುನಾಥನ ದರ್ಶನವನ್ನು ನಿರ್ಬಂಧಿಸಲಾಗಿದೆ.

    ಭದ್ರತೆಯ ದೃಷ್ಟಿಯಿಂದ ಶನಿವಾರ ಮಧ್ಯಾಹ್ನ 2 ಗಂಟೆಯಿಂದ ಭಾನುವಾರ ಮಧ್ಯಾಹ್ನ 2 ಗಂಟೆಯವರೆಗೆ ಭಕ್ತಾದಿಗಳಿಗೆ ಕ್ಷೇತ್ರದ ಸ್ವಾಮಿಯ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಆಡಳಿತ ವರ್ಗ ಹೇಳಿದೆ.

    ಇತ್ತ ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಅಕ್ಟೋಬರ್ 29ರಂದು ಬೆಳಿಗ್ಗೆ 11.30ಕ್ಕೆ ಮೋದಿ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲಿದ್ದಾರೆ. ಬಳಿಕ ಉಜಿರೆಗೆ ತೆರಳಲಿರುವ ಮೋದಿ ಎಸ್‍ಡಿಎಂ ಮೈದಾನದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ಬೃಹತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಭಾಷಣ ಮಾಡಲಿದ್ದಾರೆ.

    ಈ ಹಿನ್ನೆಲೆಯಲ್ಲಿ ಬುಧವಾರ ವಿಶೇಷ ಭದ್ರತಾ ತಂಡ ಧರ್ಮಸ್ಥಳದಲ್ಲಿ ಭದ್ರತಾ ಸಿದ್ಧತೆಗಳನ್ನು ಪರಿಶೀಲಿಸಿತು. ಇತ್ತ ಎಡಿಜಿಪಿ ಅಲೋಕ್ ಮೋಹನ್ ಸಮಾರಂಭ ನಡೆಯುವ ಮೈದಾನ, ಧರ್ಮಸ್ಥಳದ ಹೆಲಿಪ್ಯಾಡ್‍ನ್ನು ಪರಿಶೀಲನೆ ನಡೆಸಿದೆ. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರೊಂದಿಗೆ ಮಾತುಕತೆ ನಡೆಸಿದ್ರು. ಮೋದಿ ಪ್ರವಾಸ ಹಿನ್ನೆಲೆಯಲ್ಲಿ ಭದ್ರತೆಗಾಗಿ ಹತ್ತು ಎಸ್‍ಪಿ ಶ್ರೇಣಿಯ ಅಧಿಕಾರಿಗಳು, ಡಿವೈಎಸ್‍ಪಿ, ಇನ್ಸ್‍ಪೆಕ್ಟರ್, ಪಿಎಸ್‍ಐ ಸೇರಿದಂತೆ 150 ಮಂದಿ ಅಧಿಕಾರಿಗಳು, ಎರಡು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ನಕ್ಸಲ್ ಚಟುವಟಿಕೆ ಇರೋ ಧರ್ಮಸ್ಥಳ, ಬೆಳ್ತಂಗಡಿ ಪರಿಸರದ ದಟ್ಟ ಕಾಡಲ್ಲಿ ನಕ್ಸಲ್ ನಿಗ್ರಹ ದಳದ 25 ತಂಡಗಳು ಕೂಂಬಿಂಗ್ ಕಾರ್ಯಾಚರಣೆ ನಡೆಸಿದೆ.