Tag: Dharmastala

  • ಧರ್ಮಸ್ಥಳ ಲಕ್ಷ ದೀಪೋತ್ಸವ – ಕ್ಷೇತ್ರಾದ್ಯಂತ ಝಗಮಗಿಸ್ತಿದೆ ವಿದ್ಯುತ್ ದೀಪಗಳು

    ಧರ್ಮಸ್ಥಳ ಲಕ್ಷ ದೀಪೋತ್ಸವ – ಕ್ಷೇತ್ರಾದ್ಯಂತ ಝಗಮಗಿಸ್ತಿದೆ ವಿದ್ಯುತ್ ದೀಪಗಳು

    ಮಂಗಳೂರು: ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಈಗ ಲಕ್ಷ ದೀಪೋತ್ಸವದ ಸಂಭ್ರಮ. ಶುಕ್ರವಾರದಿಂದ ಧರ್ಮಸ್ಥಳ ಕ್ಷೇತ್ರಾದ್ಯಂತ ವಿದ್ಯುತ್ ದೀಪಗಳು ಝಗಮಗಿಸುತ್ತಿದ್ದು, ವರ್ಷಂಪ್ರತಿಯಂತೆ ಕ್ಷೇತ್ರದ ಪರಿಸರ ದೀಪಗಳಿಂದ ಕಂಗೊಳಿಸಲಿದೆ.

    ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಆಗಮಿಸಲಿದ್ದು, ಮಂಜುನಾಥನ ದರ್ಶನ ಪಡೆಯಲಿದ್ದಾರೆ. ಇದೇ ವೇಳೆ, ಸರ್ವ ಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನವೂ ಜರಗಲಿದೆ. ನ.25ರಂದು 84ನೇ ವರ್ಷದ ಸರ್ವ ಧರ್ಮ ಸಮ್ಮೇಳನ ಹಾಗೂ 26ರಂದು ಸಾಹಿತ್ಯ ಸಮ್ಮೇಳನ ಜರುಗಲಿದ್ದು ಸರ್ವ ಧರ್ಮಗಳ ಸಾಹಿತ್ಯಾಸಕ್ತರನ್ನು ಆಕರ್ಷಿಸಲಿದೆ.

    ಈ ಬಾರಿಯ ಸರ್ವ ಧರ್ಮ ಸಮ್ಮೇಳನವನ್ನು ಮಾಜಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಉದ್ಘಾಟಿಸಲಿದ್ದಾರೆ. ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ನಡೆಯುವ ಈ ಲಕ್ಷ ದೀಪೋತ್ಸವದ ವಿಶೇಷ ಎಂದರೆ, ಉತ್ಸವದ ಕೊನೆಯ ದಿನ ದೇವರ ಮೂರ್ತಿಯನ್ನು ಹೊತ್ತು ಭಕ್ತರ ದರ್ಶನಕ್ಕಾಗಿ ಮೆರವಣಿಗೆ ನಡೆಯಲಿದೆ.

    ಮಂಜುನಾಥನ ಮೂರ್ತಿಯೊಂದಿಗೆ ಕ್ಷೇತ್ರದ ಆವರಣದಲ್ಲಿ ಮೆರವಣಿಗೆ ನಡೆದು, ಐದು ಕಟ್ಟೆಗಳಲ್ಲಿ ಪೂಜೆ ನಡೆಯಲಿದೆ. ಹಿಂದಿನ ಕಾಲದಲ್ಲಿ ಲಕ್ಷ ದೀಪಗಳಿಂದಲೇ ಕ್ಷೇತ್ರವನ್ನು ಝಗಮಗಿಸುತ್ತಿದ್ದರೆ, ಈಗಿನ ಕಾಲದಲ್ಲಿ ವಿದ್ಯುತ್ ದೀಪಗಳಿಂದ ಧರ್ಮಸ್ಥಳ ಕ್ಷೇತ್ರ ಕಂಗೊಳಿಸುವಂತೆ ಮಾಡಲಾಗುತ್ತಿದೆ.

  • ಬರದನಾಡಿಗೆ ವೀರೇಂದ್ರ ಹೆಗ್ಗಡೆ ಭಗೀರಥ – ಬಯಲುಸೀಮೆಗೆ ನೀರುಣಿಸಿದ ಜೀವದಾತ

    ಬರದನಾಡಿಗೆ ವೀರೇಂದ್ರ ಹೆಗ್ಗಡೆ ಭಗೀರಥ – ಬಯಲುಸೀಮೆಗೆ ನೀರುಣಿಸಿದ ಜೀವದಾತ

    ಚಿಕ್ಕಬಳ್ಳಾಪುರ: ರಾಜ್ಯದ ಹಲವೆಡೆ ಬರ ತಾಂಡವವಾಡುತ್ತಿದೆ. ಬರದ ಎಫೆಕ್ಟ್ ಪವಿತ್ರ ಕ್ಷೇತ್ರ ಧರ್ಮಸ್ಥಳಕ್ಕೂ ತಟ್ಟಿತ್ತು. ಭಕ್ತಾದಿಗಳು ಸ್ವಲ್ಪ ದಿನ ಧರ್ಮಸ್ಥಳ ಪ್ರವಾಸ ಮುಂದೂಡಿ ಎಂದು ವೀರೇಂದ್ರ ಹೆಗ್ಗಡೆಯವರು ಮನವಿ ಮಾಡಿದ್ದರು. ಆದರೆ ಧರ್ಮಸ್ಥಳದ ಧರ್ಮಾಧಿಕಾರಿ ಈಗ ಭಗೀರಥರಾಗಿದ್ದಾರೆ.

    ಹೌದು. ಚಿಕ್ಕಬಳ್ಳಾಪುರ ಜಿಲ್ಲೆಯ 300ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇದೆ. ಜಿಲ್ಲೆಯ ಯಾವ ಹಳ್ಳಿಗೆ ಹೋದರೂ ಖಾಲಿ ಕೊಡಗಳ ದರ್ಶನವಾಗುತ್ತದೆ. ಜೀವಜಲಕ್ಕಾಗಿ ಜನ-ಜಾನುವಾರುಗಳ ಪರದಾಡುವಂತಾಗಿದೆ. ಸರ್ಕಾರ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದರೂ ಸಾಕಾಗುತ್ತಿಲ್ಲ. ಇಂತಹ ಹೊತ್ತಲ್ಲಿ ಚಿಕ್ಕಬಳ್ಳಾಪುರಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ದೇವರಂತೆ ಬಂದಿದ್ದಾರೆ.

    ಜಿಲ್ಲಾಡಳಿತದ ಜೊತೆ ಕೈ ಜೋಡಿಸಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಜಿಲ್ಲೆಯ 37 ಹಳ್ಳಿಗಳಲ್ಲಿ ಸ್ವಯಂಪ್ರೇರಿತವಾಗಿ ಸಮರ್ಪಕವಾಗಿ ವಾರಕ್ಕೆ 2 ಬಾರಿ ಕುಡಿಯವ ನೀರು ಪೂರೈಸುವ ಕೆಲಸ ಮಾಡುತ್ತಿದೆ. ತೀವ್ರ ಬರಗಾಲದಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರ್ಕಾರದಿಂದ ಕೊರೆಸಿರುವ ಅರ್ಧಕ್ಕಿಂತಲೂ ಹೆಚ್ಚು ಬೋರ್‍ವೆಲ್‍ಗಳು ನೀರಿಲ್ಲದೇ ನಿಂತು ಹೋಗಿವೆ.

    ಕೆಲವು ಖಾಸಗಿಯವರ ನೀರು ಸಿಕ್ಕಿದ್ರೂ ಬೆಳೆಗಳಿಗೆ ನೀರಿಲ್ಲ ಎಂದು ಅವರ್ಯಾರು ನೀರು ಕೊಡಲ್ಲ. ಅಡುಗೆ ಮಾಡುವುದಕ್ಕೆ, ಜನರ ನಿತ್ಯ ಕರ್ಮಗಳಿಗೆ ಸೇರಿ ಜಾನುವಾರುಗಳಿಗೂ ಗುಟುಕು ನೀರಿಲ್ಲ. ಹನಿ ನೀರಿಲ್ಲದ ಹೊತ್ತಲ್ಲಿ ಆಪತ್ಬಾಂಧವರಂತೆ ಬಂದು ನೀರು ಕೊಟ್ಟು ದಾಹ ನೀಗಿಸ್ತಿರುವ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಕಾರ್ಯ ಎಲ್ಲರೂ ಮೆಚ್ಚುವಂತಾಗಿದೆ.

  • ಧರ್ಮಸ್ಥಳ ಬಳಿಕ ಸಿದ್ದಗಂಗಾ ಮಠದಲ್ಲೂ ನೀರಿಗೆ ಬರ!

    ಧರ್ಮಸ್ಥಳ ಬಳಿಕ ಸಿದ್ದಗಂಗಾ ಮಠದಲ್ಲೂ ನೀರಿಗೆ ಬರ!

    ತುಮಕೂರು: ಎಲ್ಲೆಲ್ಲೂ ನೀರಿಗೆ ಬರ. ಧರ್ಮಸ್ಥಳದ ಆ ದೇವರಿಗೂ ಬರ ತಟ್ಟಿತ್ತು. ಇದೀಗ ತುಮಕೂರಿನ ಸಿದ್ದಗಂಗಾ ಮಠದಲ್ಲೂ ನೀರಿಗೆ ಬವಣೆ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಜೂನ್ ತಿಂಗಳಲ್ಲಿ ಮಳೆ ಬಾರದೇ ಇದ್ದರೆ ನೀರಿಗಾಗಿ ಪರದಾಟಪಡಬೇಕಾಗುತ್ತದೆ.

    ಧರ್ಮಸ್ಥಳದಲ್ಲಿ ನೀರಿನ ಲಭ್ಯತೆ ಕಡಿಮೆಯಾದ ಹಿನ್ನೆಲೆಯಲ್ಲಿ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರು ಸದ್ಯಕ್ಕೆ ಮಂಜುನಾಥನ ದರ್ಶನಕ್ಕೆ ಬರಬೇಡಿ ಎಂದು ಭಕ್ತರಲ್ಲಿ ಮನವಿ ಮಾಡಿದ್ದರು. ಇದೀಗ ತ್ರಿವಿಧ ದಾಸೋಹದ ಕ್ಷೇತ್ರ ತುಮಕೂರಿನ ಸಿದ್ದಗಂಗಾ ಮಠದಲ್ಲೂ ನೀರಿನ ಸಮಸ್ಯೆಗೆ ಬರ ಎದುರಾಗುವ ಪರಿಸ್ಥಿತಿ ಬಂದಿದೆ.

    ಸಿದ್ದಗಂಗಾ ಮಠದಲ್ಲಿ ದಿನಕ್ಕೆ ಸಾವಿರಾರು ಭಕ್ತಾದಿಗಳು ದಾಸೋಹ ಮಾಡುತ್ತಾರೆ. 10 ಸಾವಿರ ವಿದ್ಯಾಥಿಗಳು ವ್ಯಾಸಂಗ ಮಾಡುತ್ತಾರೆ. ಮಠದ ಉಪಯೋಗಕ್ಕೆ ಸರಿ ಸುಮಾರು ದಿನವೊಂದಕ್ಕೆ 80 ಸಾವಿರ ಲೀಟರ್ ನೀರು ಬೇಕಾಗುತ್ತೆ. ಈಗ ವಿದ್ಯಾರ್ಥಿಗಳು ರಜೆ ನಿಮಿತ್ತ ಊರಿಗೆ ಹೋಗಿದ್ರಿಂದ 50 ಸಾವಿರ ಲೀಟರ್ ನೀರಿನ ಅಗತ್ಯತೆ ಇದೆ.

    ಸದ್ಯಕ್ಕೆ 50 ಸಾವಿರ ಲೀಟರ್ ನೀರು ಸುಲಭವಾಗಿ ದೊರೆಯುತ್ತೆ. ಆದರೆ ಜೂನ್ ತಿಂಗಳಲ್ಲಿ ಶಾಲೆ ಆರಂಭವಾಗೋದ್ರಿಂದ 80 ಸಾವಿರ ಲೀಟರ್ ನೀರು ಬೇಕಾಗುತ್ತದೆ. ಜೂನ್ ತಿಂಗಳಲ್ಲಿ ಮಳೆಯಾದರೆ ನೀರಿನ ಸಮಸ್ಯೆ ಆಗಲ್ಲ. ಇಲಾಂದ್ರೆ ನೀರಿಗೆ ಬರ ಬರಲಿದೆ ಎಂದು ಹೇಳಲಾಗುತ್ತಿದೆ.

    ಮಠದಲ್ಲಿ ನೂರಾರು ಜಾನುವಾರುಗಳಿದರೂ ಅವುಗಳ ಸಾಕಾಣಿಕೆಗೆ ನೀರಿನ ಅವಶ್ಯಕತೆ ಇದೆ. ಸುಮಾರು 30 ಬೋರ್‍ವೆಲ್‍ಗಳಿವೆ. ಅವುಗಳಲ್ಲಿ 5-6 ಬೋರ್ ವೆಲ್ ಕೈ ಕೊಟ್ಟಿವೆ. ಇನ್ನುಳಿದವುಗಳಲ್ಲಿ ಅಲ್ಪ ಸ್ವಲ್ಪ ನೀರು ಬರುತ್ತಿದೆ. ಈ ನೀರಿನಿಂದಲೇ ನಿತ್ಯದ ಕೆಲಸ ಸಾಗಿದೆ. ಮಹಾನಗರ ಪಾಲಿಕೆಯಿಂದ ನೀಡುತ್ತಿದ್ದ ಹೇಮಾವತಿ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಮೈದಾಳ ಕೆರೆಯಿಂದ ನೀರು ಹರಿಸುವ ಯೋಜನೆಯೂ ಸ್ಥಗಿತಗೊಂಡಿದೆ.

  • 15 ದಿನ ಮಳೆ ಬರದಿದ್ದರೆ ಮಂಜುನಾಥನ ಅಭಿಷೇಕಕ್ಕೂ ನೀರಿಲ್ಲ: ಡಾ. ವೀರೇಂದ್ರ ಹೆಗ್ಗಡೆ

    15 ದಿನ ಮಳೆ ಬರದಿದ್ದರೆ ಮಂಜುನಾಥನ ಅಭಿಷೇಕಕ್ಕೂ ನೀರಿಲ್ಲ: ಡಾ. ವೀರೇಂದ್ರ ಹೆಗ್ಗಡೆ

    ಮಂಗಳೂರು: 15 ದಿನ ಮಳೆ ಬರದಿದ್ದರೆ ಮಂಜುನಾಥನ ಅಭಿಷೇಕಕ್ಕೂ ನೀರಿಲ್ಲ. ಈಗ ಅಭಿಷೇಕಕ್ಕೆ ನೇತ್ರಾವತಿಯಲ್ಲಿ ತಾತ್ಕಲಿಕವಾಗಿ ನೀರಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ತಮ್ಮ ಕಳವಳವನ್ನು ಹೊರಹಾಕಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ನೀರಿನ ಸಮಸ್ಯೆಯಾಗಿದೆ. ಘಟ್ಟದ ಭಾಗದಲ್ಲಿ ಮಳೆಯಾಗದ ಕಾರಣ ನೇತ್ರಾವತಿಯಲ್ಲಿ ನೀರಿಲ್ಲ. ಅಲ್ಲದೆ ಹವಾಮಾನ ಇಲಾಖೆ ಇನ್ನೂ ಹತ್ತು ದಿನ ಮಳೆ ಬರಲ್ಲ ಎಂದು ಸೂಚನೆ ಕೊಟ್ಟಿದೆ. ಹೀಗಾಗಿ ಕ್ಷೇತ್ರ ದರ್ಶನ ಮುಂದೂಡಿ ಎಂದು ವಿನಂತಿ ಮಾಡುತ್ತಿದ್ದೇವೆ.

    ನಾವು ಈ ಬಗ್ಗೆ ಎಷ್ಟೇ ಎಚ್ಚರಿಕೆ ವಹಿಸಿದ್ದರು ಕೂಡ ಶೌಚಾಲಯಗಳಿಗೆ ನೀರು ಕೊಡಬೇಕಾಗುತ್ತದೆ. ನಮ್ಮ ವಸತಿಯಲ್ಲಿ ಇರುವವರಿಗೆ ಶೌಚಾಲಯದಲ್ಲಿ ನೀರು ಕೊಡಲೇಬೇಕು. ಶಾಲೆಗಳಿಗೆ ರಜೆ ಇರುವುದರಿಂದ ಎಲ್ಲರೂ ಇಲ್ಲಿಗೆ ಬರುತ್ತಾರೆ. ಆದರೆ ಇಲ್ಲಿ ನೀರಿನ ಸಮಸ್ಯೆ ಇದೆ. ಇಲ್ಲಿ ಬಂದರೂ ಸಾಕಷ್ಟು ನೀರು ಬೇಕಾಗುತ್ತದೆ. ಹಾಗಾಗಿ ಧರ್ಮಸ್ಥಳಕ್ಕೆ ಈಗಲೆ ಯಾರೂ ಬರಬೇಡಿ ಎಂದು ವಿನಂತಿ ಮಾಡುತ್ತಿದ್ದೇನೆ ಎಂದರು. ಇದನ್ನೂ ಓದಿ: ಮೊದಲ ಬಾರಿಗೆ ಧರ್ಮಸ್ಥಳ ಕ್ಷೇತ್ರಕ್ಕೂ ತಟ್ಟಿದ ನೀರಿನ ಅಭಾವದ ಬಿಸಿ

    15 ದಿನ ಮಳೆ ಬರದಿದ್ದರೆ ಮಂಜುನಾಥನ ಅಭಿಷೇಕಕ್ಕೂ ನೀರಿಲ್ಲ. ಈಗ ಅಭಿಷೇಕಕ್ಕೆ ನೇತ್ರಾವತಿಯಲ್ಲಿ ತಾತ್ಕಾಲಿಕವಾಗಿ ನೀರಿದೆ. ಅದು ನೇತ್ರಾವತಿ ಕಿಂಡಿ ಅಣೆಕಟ್ಟಿನಲ್ಲಿ ತಾತ್ಕಾಲಿಕ ನೀರು ಹಾಗೂ ತೀರ್ಥದ ಗುಂಡಿಯಲ್ಲಿ ಸ್ವಲ್ಪ ನೀರಿದೆ. ಮುಂದೆ ಮಳೆ ಬರದಿದ್ದರೆ ಮಂಜುನಾಥನಿಗೂ ಬರದ ಬಿಸಿ ತಟ್ಟಲಿದೆ. ಅಲ್ಲಿನ ತೀರ್ಥ ಗುಂಡಿಯಲ್ಲೂ ನಾಲ್ಕು ಅಡಿ ನೀರು ಕಡಿಮೆ ಆಗಿದೆ. ಹಿಂದೆಯೂ ಈ ರೀತಿ ಆಗಿದೆ. ಆದರೆ ಇಷ್ಟು ತೀವ್ರವಾಗಿ ಆಗಿರಲಿಲ್ಲ. ಉಪನದಿಗಳಲ್ಲಿ ನೀರು ಬತ್ತಿರುವ ಪರಿಣಾಮ ನೀರಿಗೆ ಸಮಸ್ಯೆ ಆಗಿದೆ. ಕಾಡು ಉಳಿಸದೇ ಇರುವ ಕಾರಣ ಈ ಸಮಸ್ಯೆ ಎದುರಾಗಿದೆ ಎಂದು ಅವರು ತಿಳಿಸಿದರು.

    ಇದೇ ವೇಳೆ ಸರ್ಕಾರ ಮತ್ತು ಜಲತಜ್ಞರು ಈ ಬಗ್ಗೆ ಯೋಚನೆ ಮಾಡಬೇಕು. ಮುಂದಿನ 15-20 ವರ್ಷಗಳ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕು. ಪಶ್ಚಿಮ ಘಟ್ಟದಲ್ಲಿ ಅರಣ್ಯನಾಶದಿಂದ ನೀರಿನ ಸಮಸ್ಯೆ ಆಗಿದೆ ಎಂದು ವೀರೇಂದ್ರ ಹೆಗ್ಗಡೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

  • ಧರ್ಮಸ್ಥಳ ಮಂಜುನಾಥನ ಪಾದ ತೊಳೆಯುವ ಪರಿಶುದ್ಧ ನೀರು ಮನೆ ಬಾಗಿಲಿಗೆ ಬರಲಿದೆ: ವೀರಪ್ಪಮೊಯ್ಲಿ

    ಧರ್ಮಸ್ಥಳ ಮಂಜುನಾಥನ ಪಾದ ತೊಳೆಯುವ ಪರಿಶುದ್ಧ ನೀರು ಮನೆ ಬಾಗಿಲಿಗೆ ಬರಲಿದೆ: ವೀರಪ್ಪಮೊಯ್ಲಿ

    ಚಿಕ್ಕಬಳ್ಳಾಪುರ: ಬಿಸ್ಲೆರಿ ಬಾಟಲಿಗಿಂತ ಶುದ್ಧವಾದ ಹಾಗೂ ಧರ್ಮಸ್ಥಳ ಮಂಜುನಾಥನ ಪಾದ ತೊಳೆಯುವಂತಹ ಪರಿಶುದ್ಧ ನೀರು ಮನೆ ಬಾಗಿಲಿಗೆ ಬರಲಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವೀರಪ್ಪಮೊಯ್ಲಿ ಹೇಳಿದ್ದಾರೆ.

    ಎತ್ತಿನಹೊಳೆ ಯೋಜನೆಗೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್ ಬಳಿ ಕೇಳಿಕೊಂಡರೂ ನಯಾಪೈಸೆ ಬಿಡುಗಡೆ ಮಾಡಲಿಲ್ಲ. ಆದರೆ ಪುಣ್ಯಾತ್ಮ ಸಿದ್ದರಾಮಯ್ಯ 14 ಸಾವಿರ ಕೋಟಿ ರೂಪಾಯಿ ಹಣ ಮಂಜೂರು ಮಾಡಿದರು. ಹೀಗಾಗಿ ಅಂದಿನಿಂದ ಹಗಲು ರಾತ್ರಿ ಎನ್ನದೆ ಎತ್ತಿನಹೊಳೆ ಯೋಜನೆಯ ಕಾಮಗಾರಿ ಭರದಿಂದ ಸಾಗಿದೆ ಎಂದರು.

    ಕೇವಲ 80 ಕಿ.ಮೀ ನಷ್ಟು ಕೆಲಸ ಮಾತ್ರ ಬಾಕಿ ಇದೆ. ಇನ್ನೂ ಒಂದೆರೆಡು ವರ್ಷದಲ್ಲಿ ಬಿಸ್ಲೆರಿ ಬಾಟಲಿಗಿಂತಲೂ ಶುದ್ಧವಾದ ಹಾಗೂ ಶ್ರೀ ಧರ್ಮಸ್ಥಳದ ಮಂಜುನಾಥನ ಪಾದ ತೊಳೆಯುವಂತಹ ಪರಿಶುದ್ಧವಾದ ನೀರು ನಿಮ್ಮ ಮನೆ ಬಾಗಿಲಿಗೆ ಬರಲಿದೆ ಎಂದು ವೀರಪ್ಪಮೊಯ್ಲಿ ಹೇಳಿದರು.

    ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ತಿಪ್ಪೇನಹಳ್ಳಿ ಗ್ರಾಮದಲ್ಲಿ ವೀರಪ್ಪಮೊಯ್ಲಿ ಚುನಾವಣಾ ಪ್ರಚಾರದ ಸಭೆ ನಡೆಸಿದರು. ಈ ವೇಳೆ ವೀರಪ್ಪಮೊಯಿಗೆ ಶಾಸಕ ಸುಧಾಕರ್ ಸಾಥ್ ನೀಡಿದರು.

  • ನಾಳೆಯಿಂದ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕ ಸಂಭ್ರಮ

    ನಾಳೆಯಿಂದ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕ ಸಂಭ್ರಮ

    ಮಂಗಳೂರು: ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಫೆ. 9ರಿಂದ 18ರ ವರೆಗೆ ಮಹಾಮಸ್ತಕಾಭಿಷೇಕದ ಸಂಭ್ರಮ. ಮಹಾನ್ ವಿರಾಗಿ ಬಾಹುಬಲಿಗೆ 12 ವರ್ಷಕ್ಕೊಮ್ಮೆ ನಡೆಯುವ ಮಹಾಮಜ್ಜನಕ್ಕೆ ಮಂಜುನಾಥನ ಕ್ಷೇತ್ರ ಸಜ್ಜಾಗಿದೆ.

    ಕ್ಷೇತ್ರದ ಆವರಣದಲ್ಲಿರುವ ಬಾಹುಬಲಿ ಬೆಟ್ಟದಲ್ಲಿ ಬಾಹುಬಲಿಯ ಮೂರ್ತಿಗೆ ವಿವಿಧ ದ್ರವ್ಯಗಳಿಂದ ಅಭಿಷೇಕ ನಡೆಯಲಿದೆ. 9 ದಿನಗಳ ಉತ್ಸವಕ್ಕೆ ಫೆ.9 ರಂದು ಸಿಎಂ ಎಚ್.ಡಿ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಉತ್ಸವದ ಪ್ರತಿ ದಿನವೂ ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು ಇಂದು(ಶುಕ್ರವಾರ) ಸಂತ ಸಮ್ಮೇಳನ ಆಯೋಜಿಸಲಾಗಿದೆ.

    ಸಮ್ಮೇಳನಕ್ಕೆ ವಿಶೇಷ ಆಹ್ವಾನಿತರಾಗಿ ಜೆಡಿಎಸ್ ವರಿಷ್ಠ ದೇವೇಗೌಡ ಆಗಮಿಸಲಿದ್ದಾರೆ. ಕೊನೆಯ ಮೂರು ದಿನಗಳಲ್ಲಿ ಅಂದರೆ, 16, 17 ಹಾಗೂ 18ರಂದು ಹೆಗ್ಗಡೆ ಕುಟುಂಬಸ್ಥರು ಮತ್ತು ಜೈನ ಧರ್ಮೀಯ ಸಾಧು ಸಂತರಿಂದ ಅಭಿಷೇಕ ನಡೆಯಲಿದ್ದು ವಿರಾಟ್ ಮೂರ್ತಿ ವಿವಿಧ ದ್ರವ್ಯಗಳ ಮೂಲಕ ಸ್ನಾನ ಮಾಡಿಸಲಾಗುತ್ತದೆ.

    2008ರ ಬಳಿಕ 12 ವರ್ಷಗಳ ಆವರ್ತನವಾಗಿ ಬಾಹುಬಲಿ ಮೂರ್ತಿಗೆ ಈ ಬಾರಿ ನಾಲ್ಕನೇ ಮಸ್ತಕಾಭಿಷೇಕ. 1972ರಲ್ಲಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲೇ ಬಾಹುಬಲಿ ಮೂರ್ತಿಯ ಪ್ರತಿಷ್ಠಾಪನೆಯಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊಲ್ಲೂರಿನಿಂದ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಯಶ್ ಭೇಟಿ

    ಕೊಲ್ಲೂರಿನಿಂದ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಯಶ್ ಭೇಟಿ

    ಮಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರು ಇಂದು ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಈ ವಾರ ಬಹುನಿರೀಕ್ಷಿತ `ಕೆಜಿಎಫ್’ ಸಿನಿಮಾ ರಿಲೀಸ್ ಹಿನ್ನೆಲೆಯಲ್ಲಿ ಯಶ್ ಚಿತ್ರತಂಡದ ಜೊತೆ ಸೇರಿ ದೇವಸ್ಥಾನಗಳಿಗೆ ಭೇಟಿ ಮಾಡುತ್ತಿದ್ದಾರೆ. ನಟ ಯಶ್ ಮತ್ತು ಚಿತ್ರತಂಡ ಬೆಂಗಳೂರಿನಿಂದ ಹೊರಟು ಮೊದಲು ಕೊಲ್ಲೂರು ದೇವಸ್ಥಾನ ನಂತರ ಧರ್ಮಸ್ಥಳ ಬಳಿಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದಾರೆ. ಇದೇ ವೇಳೆ ಉಜಿರೆಯಲ್ಲಿರೋ ಪ್ರಸಿದ್ಧ ಸುರ್ಯ ದೇವಸ್ಥಾನಕ್ಕೂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.  ಇದನ್ನೂ ಓದಿ: ಕೊಲ್ಲೂರು ದೇವಸ್ಥಾನಕ್ಕೆ ನಟ ಯಶ್ ಭೇಟಿ

    ಯಶ್ ಹೆಲಿಕಾಫ್ಟರ್ ನಿಂದ ಕೊಲ್ಲೂರಿಗೆ ಬಂದು ನೇರವಾಗಿ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದು ನಂತರ ಧರ್ಮಸ್ಥಳ, ಕುಕ್ಕೆಗೆ ಭೇಟಿ ನೀಡಿದ್ದಾರೆ. ತಂದೆಯಾದ ಬಳಿಕ ಯಶ್ ಮೊದಲ ಬಾರಿಗೆ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಕೆಜಿಎಫ್ ಚಿತ್ರದ ಯಶಸ್ಸಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.

    ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಬಿಡುಗಡೆ ಹಿನ್ನೆಲೆಯಲ್ಲಿ ಪೂಜೆ ಸಲ್ಲಿಸಿದ್ದು, ಯಶ್, ನಿರ್ಮಾಪಕ ವಿಜಯ್ ಕಿರಗಂದೂರ್ ಸ್ನೇಹಿತರ ಜೊತೆ ಸೇರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇದೇ ವಾರ 21ರಂದು ಕೆಜಿಎಫ್ ಸಿನಿಮಾ ರಿಲೀಸ್ ಆಗಲಿದೆ. ಹೀಗಾಗಿ ಚಿತ್ರದ ಒಳಿತಿಗಾಗಿ ಕೆಜಿಎಫ್ ಟೀಮ್ ದೇವಸ್ಥಾನಕ್ಕೆ ಭೇಟಿ ನೀಡುತ್ತಿದೆ ಎಂದು ಹೇಳಲಾಗುತ್ತಿದೆ.

    ‘ಕೆಜಿಎಫ್’ ಸಿನಿಮಾದ ಹಿಂದಿಯ ಸ್ಪೆಷಲ್ ಹಾಡೊಂದು ಈಗಾಗಲೇ ರಿಲೀಸ್ ಆಗಿದ್ದು, ಮೌನಿ ರಾಯ್ ಹಾಗೂ ಯಶ್ ‘ಗಲಿ ಗಲಿ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸದ್ಯ ಹಾಡು ಹೊಸ ದಾಖಲೆಯನ್ನು ನಿರ್ಮಿಸಿದೆ. ಕಳೆದ ಬುಧವಾರ ಕೆಜಿಎಫ್ ಸಿನಿಮಾದ ‘ಗಲಿ ಗಲಿ’ ಹಾಡು ಬಿಡುಗಡೆಯಾಗಿತ್ತು. ಬಿಡುಗಡೆಯಾದ ಮೊದಲ ದಿನವೇ ಈ ಹಾಡು 13 ಮಿಲಿಯನ್ ವ್ಯೂ ಪಡೆದುಕೊಂಡಿದೆ. ವಿಶ್ವದ ಯಾವ ಸಿನಿಮಾ ಹಾಡು ಕೂಡ ಒಂದು ದಿನಕ್ಕೆ ಈ ಮಟ್ಟಿನ ಹಿಟ್ಸ್ ಪಡೆದುಕೊಂಡಿಲ್ಲ. ಈಗ ಕೆಜಿಎಫ್ ಚಿತ್ರದ ಈ ಹಾಡು ಬಿಡುಗಡೆಯಾಗಿ ಹೊಸ ದಾಖಲೆ ಸೃಷ್ಟಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಕಾರ ಮಾಡಲಾಗದ ಯೋಜನೆಗಳನ್ನು ವೀರೇಂದ್ರ ಹೆಗ್ಗಡೆಯವರು ಜಾರಿಗೆ ತಂದಿದ್ದಾರೆ: ನಿರ್ಮಲಾ ಸೀತಾರಾಮನ್

    ಸರ್ಕಾರ ಮಾಡಲಾಗದ ಯೋಜನೆಗಳನ್ನು ವೀರೇಂದ್ರ ಹೆಗ್ಗಡೆಯವರು ಜಾರಿಗೆ ತಂದಿದ್ದಾರೆ: ನಿರ್ಮಲಾ ಸೀತಾರಾಮನ್

    ಮಂಗಳೂರು: ಸರ್ಕಾರಗಳು ಮಾಡಲಾಗದ ಯೋಜನೆಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗೆಡೆಯವರು ಜಾರಿಗೆ ತಂದಿದ್ದಾರೆಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ಆರಂಭಿಸಲಾಗಿರುವ ಆರೋಗ್ಯ ವಿಮೆ ಪ್ರಗತಿ ರಕ್ಷಾ ಕವಚ್ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ಚಿಕ್ಕವಳಿದ್ದಾಗ ಧರ್ಮಸ್ಥಳಕ್ಕೆ ಹೆತ್ತವರ ಜೊತೆ ಬಂದಿದ್ದೆ. ಆದರೆ ಇಂದು ರಕ್ಷಣಾ ಸಚಿವೆಯಾಗಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು ನನ್ನ ಸೌಭಾಗ್ಯ. ಧರ್ಮಸ್ಥಳದಲ್ಲಿ ಧರ್ಮ, ನ್ಯಾಯದಿಂದ ಕೂಡಿದೆ ಎಂದು ಹೇಳಿದರು.

    ಸಾಲವನ್ನು ತೀರಿಸಲಾಗದೇ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂದರ್ಭಗಳಲ್ಲಿ ಗ್ರಾಮಾಭಿವೃದ್ಧಿ ಯೋಜನೆಯು ಜನರ ಸಾಲದ ಭಯವನ್ನು ಹೋಗಲಾಡಿಸಿದೆ. ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರು ಸರ್ಕಾರ ಮಾಡಲಾಗದ ಯೋಜನೆಗಳನ್ನು ಜಾರಿಗೆ ತಂದು ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.

    ಕಾರ್ಯಕ್ರಮಕ್ಕೂ ಮುನ್ನ ಸಚಿವೆ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದುಕೊಂಡರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ) ಮತ್ತು ಭಾರತೀಯ ಜೀವ ವಿಮಾ ನಿಗಮಗಳು ಜಂಟಿಯಾಗಿ ಎಸ್‌ಕೆಡಿಆರ್‌ಡಿಪಿ ಸದಸ್ಯರಿಗಾಗಿ ರೂಪಿಸಿರುವ `ಪ್ರಗತಿ ರಕ್ಷಾ ಕವಚ್’ ವಿಮಾ ಯೋಜನೆಗೆ ಅಧಿಕೃತ ಚಾಲನೆ ನೀಡಿದರು.

    ಏನಿದು ಪ್ರಗತಿ ರಕ್ಷಾ ಕವಚ್ ಯೋಜನೆ?
    ಎಸ್‌ಕೆಡಿಆರ್‌ಡಿಪಿ ಸದಸ್ಯರು ಅಕಾಲಿಕವಾಗಿ ಮೃತಪಟ್ಟ ಸಂದರ್ಭಗಳಲ್ಲಿ ಅವರು ಪಡೆದ ಸಾಲದ ಬಾಕಿಯನ್ನು ತಪ್ಪಿಸಲು ಹಾಗೂ ಮೃತರ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಈ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಸ್ಥಳ ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗ್ಗಡೆಯವರು ವಹಿಸಿಕೊಂಡಿದ್ದರು. ಸಮಾರಂಭಕ್ಕೆ ಹೇಮಾವತಿ ಹೆಗ್ಗಡೆ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಎಸ್.ಅಂಗಾರ, ಸಂಜೀವ ಮಠಂದೂರು, ಭಾರತೀಯ ಜೀವ ವಿಮಾ ನಿಗಮದ ಅಧ್ಯಕ್ಷ ವಿ.ಕೆ.ಶರ್ಮ, ನಿರ್ದೇಶಕ ಕದಿರೇಶನ್, ಸುಶೀಲ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಧರ್ಮಸ್ಥಳಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭೇಟಿ

    ಧರ್ಮಸ್ಥಳಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭೇಟಿ

    ಮಂಗಳೂರು: ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ 20ನೇ ವರ್ಷದ ಭಜನಾ ಕಮ್ಮಟದ ಸಮಾರೋಪದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪಾಲ್ಗೊಂಡಿದ್ದಾರೆ.

    ಏಳು ದಿನಗಳ ಕಾರ್ಯಕ್ರಮದಲ್ಲಿ 300 ಭಜನಾ ತಂಡಗಳು ಭಾಗವಹಿಸಿದ್ದವು. ಸಮಾರೋಪದ ಅಂಗವಾಗಿ ಭಜನಾ ತಂಡಗಳ 3 ಸಾವಿರಕ್ಕೂ ಹೆಚ್ಚು ಭಜನಾ ಪಟುಗಳಿಂದ ಭಜನೆಯೊಂದಿಗೆ ನಡೆದ ಶೋಭಾಯಾತ್ರೆ ಅಮೋಘವಾಗಿತ್ತು.

    ಈ ಕಾರ್ಯಕ್ರಮದಲ್ಲಿ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮುಖ್ಯ ಆಕರ್ಷಣೆಯಾಗಿದ್ದರು. ಭಜನಾ ತಂಡಗಳ ಜೊತೆ ಪುನೀತ್ ರಾಜ್‍ಕುಮಾರ್, ರಾಘವೇಂದ್ರ ಸ್ವಾಮಿಗಳ ಕೀರ್ತನೆಯನ್ನು ಹಾಡಿದರು. ಅಲ್ಲದೇ ಪುನೀತ್ ತಮ್ಮ ತಂದೆ ರಾಜಕುಮಾರ್ ಜೊತೆ ಧರ್ಮಸ್ಥಳಕ್ಕೆ ಬಂದ ನೆನಪುಗಳನ್ನು ಹಂಚಿಕೊಂಡರು.

    ಧರ್ಮಸ್ಥಳದ ನನ್ನ ಹಾಗೂ ನನ್ನ ತಂದೆಯ ನಂಟು, ನೆನೆಪು ಸಾಕಷ್ಟು ಇದೆ. ಇಲ್ಲಿ ಚಿತ್ರೀಕರಣ ಮಾಡುವಾಗ ನನ್ನ ತಂದೆ ಜೊತೆ ಬಂದ ನೆನೆಪಿದೆ ಹಾಗೂ ಮಂಜುನಾಥನ ಆಶೀರ್ವಾದ ಪಡೆಯೋಕೆ ಪ್ರತಿ ಎರಡು ವರ್ಷಕ್ಕೊಮ್ಮೆ ಬರುತ್ತೇನೆ. ಆದರೆ ಸಾಂಸ್ಕೃತಿಕ, ಭಜನಾ ಕಾರ್ಯಕ್ರಮಕ್ಕೆ ಬಂದಿದ್ದು ಇದೇ ಮೊದಲ ಬಾರಿ ಬಂದಿದ್ದು ಎಂದು ಹೇಳಿದರು.

    ಅಷ್ಟೇ ಅಲ್ಲದೇ ಪುನೀತ್ ರಾಜ್‍ಕುಮಾರ್ ಧರ್ಮಸ್ಥಳ ಹಾಗೂ ಧರ್ಮಧಿಕಾರಿ ವೀರೇಂದ್ರ ಹೆಗ್ಡೆ ಬಗ್ಗೆ ಮಾತನಾಡಿದರು. ಅಲ್ಲದೇ ಕಾರ್ಯಕ್ರಮದಲ್ಲಿ ಪುನೀತ್ ತಮ್ಮ ತಂದೆ ಅವರ ಚಿತ್ರದ ‘ಹಾಲಲ್ಲಾದರು ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ..’ ಹಾಡನ್ನು ಕಾರ್ಯಕ್ರಮದಲ್ಲಿ ಹಾಡಿದರು. ಪುನೀತ್ ಹಾಡಿಗೆ ನೆರೆದಿದ್ದರವರು ಕೂಡ ದನಿಗೂಡಿಸಿರುವುದು ವಿಶೇಷವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv