Tag: Dharmabeeru Nadaprabhu Kempegowda

  • ಕೆಂಪೇಗೌಡ ಪ್ಯಾನ್ ವರ್ಲ್ಡ್ ಸಿನಿಮಾ, ಯಾರಿಂದಲೂ ತಡೆಯೋಕೆ ಸಾಧ್ಯವಿಲ್ಲ: ನಿರ್ಮಾಪಕ ಕಿರಣ್

    ಕೆಂಪೇಗೌಡ ಪ್ಯಾನ್ ವರ್ಲ್ಡ್ ಸಿನಿಮಾ, ಯಾರಿಂದಲೂ ತಡೆಯೋಕೆ ಸಾಧ್ಯವಿಲ್ಲ: ನಿರ್ಮಾಪಕ ಕಿರಣ್

    ನಾಡಪ್ರಭು ಕೆಂಪೇಗೌಡ ಶೀರ್ಷಿಕೆಯ ಕುರಿತಂತೆ ಖ್ಯಾತ ನಿರ್ದೇಶಕ ಟಿ.ಎಸ್.ನಾಗಾಭರಣ ಅವರು ತಾತ್ಕಾಲಿಕ ತಡೆಯಾಜ್ಞೆ ತಂದಿದ್ದಾರೆ. ದಿನೇಶ್ ಬಾಬು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ (Dharmabeeru Nadaprabhu Kempegowda) ಚಿತ್ರಕ್ಕೆ ಅನುಮತಿ ನೀಡಬಾರದು ಎಂದು ಅವರು ಕೋರ್ಟಿಗೆ ಮೊರೆ ಹೋಗಿದ್ದರು. ಈ ಕುರಿತಂತೆ ಧರ್ಮಭೀರು ನಾಡಪ್ರಭು ಕೆಂಪೇಗೌಡ ಚಿತ್ರದ ನಿರ್ಮಾಪಕ ಕಿರಣ್ (Kiran), ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದು, ತಮ್ಮ ಪ್ಯಾನ್ ವರ್ಲ್ಡ್ ಸಿನಿಮಾ. ಅದು ಮೊದಲು ಇಂಗ್ಲಿಷ್ (English) , ನಂತರದಲ್ಲಿ ಕನ್ನಡ ಚಿತ್ರವಾಗಿ ಬರಲಿದೆ. ಯುಕೆಯಲ್ಲಿ ನಾವು ಟೈಟಲ್ ಸೇರಿದಂತೆ ಹಕ್ಕು ಸ್ವಾಮ್ಯವನ್ನು ಅಲ್ಲಿಯೇ ಮಾಡುತ್ತೇವೆ ಎಂದಿದ್ದಾರೆ.

    ಏನಿದು ಪ್ರಕರಣ?

    ನಾಡಪ್ರಭು ಕೆಂಪೇಗೌಡ ಶೀರ್ಷಿಕೆಯ ಹಕ್ಕುಸ್ವಾಮ್ಯ ಹೊಂದಿರುವ ಟಿ. ಎಸ್. ನಾಗಾಭರಣ ಅವರ ನಿರ್ದೇಶನದಲ್ಲಿ ಮೂಡಿ ಬರಬೇಕಿರುವ, ಕೆಂಪೇಗೌಡರ ಪಾತ್ರಕ್ಕೆ ಡಾಲಿ ಧನಂಜಯ್ ಆಯ್ಕೆಯಾಗಿರುವ ಸಿನಿಮಾದ ಚಿತ್ರೀಕರಣದ ಪೂರ್ವಸಿದ್ಧತೆಗಳು ಭರದಿಂದ ಸಾಗಿವೆ. ಈ ನಡುವೆಯೇ ಧರ್ಮಭೀರು ನಾಡಪ್ರಭು ಕೆಂಪೇಗೌಡ ಹೆಸರಿನಲ್ಲಿ ಸಿನಿಮಾವೊಂದು ಘೋಷಣೆ ಆಗಿತ್ತು. ಈ ಸಿನಿಮಾವನ್ನು ನಿಲ್ಲಿಸುವಂತೆ ನಾಗಾಭರಣ ಕೋರ್ಟ್ ಮೆಟ್ಟಿಲು ಏರಿದ್ದರು.

    ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು (Court)  ಮಧ್ಯಂತರ ಆದೇಶದ ಅನುಸಾರ, ನಿರ್ಮಾಪಕ ಕಿರಣ್ ತೋಟಂಬೈಲ್, ಚೇತನ್ ರಾಜ್, ಧರ್ಮೇಂದ್ರ ಕುಮಾರ್ ಅರೇಹಳ್ಳಿ ಮತ್ತು ದಿನೇಶ್ ಬಾಬೂ, ಅವರ ಉದ್ಯೋಗಿಗಳು, ಏಜೆಂಟರು, ಪಾಲುದಾರರು, ಸಹವರ್ತಿ, ಅಧಿಕಾರಿ, ಪ್ರತಿನಿಧಿ ಮತ್ತು ಅವರ ಪರವಾಗಿ ವರ್ತಿಸುವ ಇತರ ಎಲ್ಲ ವ್ಯಕ್ತಿಗಳ ವಿರುದ್ಧ  ‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ ಶೀರ್ಷಿಕೆಯ ಚಲನಚಿತ್ರವನ್ನು ಅಥವಾ ಆ ವಿಷಯವನ್ನು ಹೊಂದಿರುವ ಯಾವುದೇ ಚಲನಚಿತ್ರವನ್ನು ನಿರ್ಮಾಣ, ಪ್ರಸಾರ, ಸಾರ್ವಜನಿಕರಿಗೆ ಸಂವಹನ, ಪುನರುತ್ಪಾದನೆ, ಧ್ವನಿಮುದ್ರಣ, ವಿತರಣೆ, ಪ್ರಸಾರ, ಜಾಹೀರಾತು, ನಿರ್ದೇಶನ ಅಥವಾ ಇತರ ಯಾವುದೇ ರೀತಿಯಲ್ಲಿ ಪ್ರಕಟಿಸುವುದನ್ನು ತಾತ್ಕಾಲಿಕವಾಗಿ ತಡೆಯಾಜ್ಞೆ ವಿಧಿಸಲಾಗಿದೆ.

    ನಾಡಪ್ರಭು ಕೆಂಪೇಗೌಡ ಶೀರ್ಷಿಕೆಯ ಹಕ್ಕುಸ್ವಾಮ್ಯ ಹೊಂದಿರುವ ಈಶ್ವರ ಎಂಟರ್‌ಟೈನ್‌ಮೆಂಟ್ ಪ್ರೈವೇಟ್‌ ಲಿಮಿಟೆಡ್ ಪ್ರತಿನಿಧಿಗಳಾದ ನಿರ್ಮಾಪಕರಾದ ಎಂ. ಎನ್. ಶಿವರುದ್ರಪ್ಪ  ಮತ್ತು ರಾಹುಲ್ ಗುಂಡಾಲ, ನಿರ್ದೇಶಕ ಟಿ.ಎಸ್. ನಾಗಾಭರಣ, ಸಹಲೇಖಕಿ ಪ್ರತಿಭಾ ನಂದಕುಮಾರ್ ಇವರ “ನಾಡಪ್ರಭು ಕೆಂಪೇಗೌಡ” ಚಿತ್ರದ ಚಿತ್ರಕಥೆಯ ಟ್ರೇಡ್‌ಮಾರ್ಕ್, ಶೀರ್ಷಿಕೆ, ಬ್ರಾಂಡ್, ಪೂರ್ವಪ್ರತ್ಯಯ ಮತ್ತು ಪ್ರತ್ಯಯ ಸೇರಿಕೆ,  ರಿಮೇಕ್, ಅಳವಡಿಕೆ ಕುರಿತ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸಿ ಯಾವುದೇ ರೀತಿಯಲ್ಲಿ ಪ್ರಸ್ತಾವಿತ  ‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ ಚಲನಚಿತ್ರ ಕುರಿತ ನಿರ್ಮಾಣ, ನಿರ್ದೇಶನ, ಜಾಹೀರಾತು, ವಿತರಣೆ ಅಥವಾ ಸಾರ್ವಜನಿಕರಿಗೆ ಸಂವಹನಗಳನ್ನು ಮಾಡದಂತೆ ತಾತ್ಕಾಲಿಕವಾಗಿ ತಡೆಯಾಜ್ಞೆ ವಿಧಿಸಲಾಗಿದೆ.

     

    ನಾಡಪ್ರಭು ಕೆಂಪೇಗೌಡ ಕುರಿತಂತೆ ಟಿ.ಎಸ್. ನಾಗಾಭರಣ ಮತ್ತು ನಿರ್ಮಾಪಕ ಎಂ ಎನ್ ಶಿವರುದ್ರಪ್ಪ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿ, ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಬೆಂಗಳೂರು, ಇಲ್ಲಿ ದಾವೆ ಹೂಡಿದ್ದರು.

  • ದಿನೇಶ್ ಬಾಬು ನಿರ್ದೇಶನದಲ್ಲಿ ‘ಕೆಂಪೇಗೌಡ’ ಸಿನಿಮಾ

    ದಿನೇಶ್ ಬಾಬು ನಿರ್ದೇಶನದಲ್ಲಿ ‘ಕೆಂಪೇಗೌಡ’ ಸಿನಿಮಾ

    ನ್ನಡ ಸಿನಿಮಾ ರಂಗದಲ್ಲಿ ನಾಡಪ್ರಭು ಕೆಂಪೇಗೌಡರ ಜೀವನವನ್ನು ಆಧರಿಸಿದ ಸಂಪೂರ್ಣ ಸಿನಿಮಾ ಬಾರದೇ ಇದ್ದರೂ, ಕೆಲವು ಚಿತ್ರಗಳಲ್ಲಿ ಇವರ ಝಲಕ್‌ಗಳು ಕಾಣಿಸಿಕೊಂಡಿವೆ. ಅಷ್ಟೇ ಅಲ್ಲ ಹಾಡುಗಳಲ್ಲೂ ಮಿಂಚಿದ್ದಾರೆ. ಅಲ್ಲದೇ, ಕೆಂಪೇಗೌಡರ ಪ್ರತಿಮೆಯನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಹೆಣೆದಿರುವ ಹಲವು ದೃಶ್ಯಗಳನ್ನೂ ಕಾಣಬಹುದಾಗಿದೆ. ಆದರೀಗ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರವರ ಜೀವನ ಚರಿತ್ರೆ (biopic) ಸಿನಿಮಾವಾಗುತ್ತಿದೆ. ಬೆಂದಕಾಳೂರು ಕಟ್ಟಿದ ನಾಡಪ್ರಭುವಿನ‌ ಕಥೆಯನ್ನು ತೆರೆಗೆ ತರುವ ಕಾಲ ಕೂಡಿ ಬಂದಿದೆ. ಧರ್ಮಬೀರು ನಾಡಪ್ರಭು ಕೆಂಪೇಗೌಡ ಎಂಬ ಶೀರ್ಷಿಕೆಯಡಿ ಸಿನಿಮಾ ಘೋಷಣೆಯಾಗಿದೆ.

    ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಅಂತೆಲ್ಲಾ ಖ್ಯಾತಿ ಪಡೆದಿರುವ ಬೆಂಗಳೂರನ್ನು ಕಟ್ಟಿ ಬೆಳೆಸಿದ ನಾಡಪ್ರಭು ಕೆಂಪೇಗೌಡರ ಸಾಹಸ ಕಥೆಯನ್ನು ಸಿನಿಮಾ ರೂಪಕ್ಕೆ ಇಳಿಸುತ್ತಿರುವುದು ರಾಜ್ಯ ಪ್ರಶಸ್ತಿ ವಿಜೇತ ಖ್ಯಾತ ನಿರ್ದೇಶಕ ದಿನೇಶ್ ಬಾಬು. ಇನ್ಸ್‌ಪೆಕ್ಟರ್‌ ವಿಕ್ರಂ, ಅಭಿ ಸೇರಿದಂತೆ 50ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿರುವ ದಿನೇಶ್ ಬಾಬು (Dinesh Babu) ಧರ್ಮಬೀರು ನಾಡಪ್ರಭು ಕೆಂಪೇಗೌಡ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಾಗಿದ್ರೆ ನಾಡಪ್ರಭು ಕೆಂಪೇಗೌಡರಾಗಿ ಬಣ್ಣ ಹಚ್ಚುತ್ತಿರುವವರು ಯಾರು ಅನ್ನೋದನ್ನು ಸದ್ಯಕ್ಕೆ ಚಿತ್ರತಂಡ ರಿವೀಲ್ ಮಾಡಿಲ್ಲ. ಜನಪ್ರಿಯ ನಟರೊಬ್ಬರು ಕೆಂಪೇಗೌಡರಾಗಿ ರಾರಾಜಿಸಲಿದ್ದಾರೆ ಎನ್ನುತ್ತದೆ ಚಿತ್ರತಂಡ. ಸದ್ಯ ಆ ನಟ ತಮ್ಮ ಪಾತ್ರದ ತಯಾರಿಯಲ್ಲಿ ಬ್ಯುಸಿಯಾಗಿದ್ದು, ಮುಂದಿನ ದಿನಗಳಲ್ಲಿ ಅವರನ್ನು ನಿಮ್ಮ ಮುಂದೆ ಪರಿಚಯಿಸುವುದಾಗಿ ಚಿತ್ರತಂಡ ತಿಳಿಸಿದೆ.

    ವೃತ್ತಿಯಲ್ಲಿ ವೈದ್ಯರಾಗಿರುವ ಕಿರಣ್ ತೋಟಂಬೈಲ್ ಸಿನಿಮಾ ಮೇಲಿನ ಪ್ರೀತಿಯಿಂದಾಗಿ ಈ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕೆಂಪೇಗೌಡ ಮೆಡಿಕಲ್ ಕಾಲೇಜ್‌ನಲ್ಲಿ ವ್ಯಾಸಂಗ ಮಾಡುವಾಗಲೇ ಮುಂದೊಂದು ದಿನ ಕೆಂಪೇಗೌಡರ ಸಿನಿಮಾ ಮಾಡಬೇಕು ಅಂದುಕೊಂಡಿದ್ದರಂತೆ. ಅದರಂತೆ ಇಂದು ಧರ್ಮಬೀರು ನಾಡಪ್ರಭು ಕೆಂಪೇಗೌಡರ (Dharmabeeru Nadaprabhu Kempegowda)  ಸಿನಿಮಾ ನಿಮ್ಮ ಮುಂದೆ ತರಲು ಸಜ್ಜಾಗಿದ್ದಾರೆ.

    ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಕಥೆ ಬರೆದಿದ್ದು, ಸಂಕೇತ್ ಎಂವೈಎಸ್ ಈ ಸಿನಿಮಾಗೆ ಕ್ಯಾಮೆರಾ ಹಿಡಿಯುತ್ತಿದ್ದು, ಉಜ್ವಲ್ ಕುಲಕರ್ಣಿ ಸಂಕಲನ, ನಿರ್ಮಾಪಕರಾದ ಕಿರಣ್ ತೋಟಂಬೈಲ್ ಸಂಗೀತ ಒದಗಿಸುತ್ತಿದ್ದಾರೆ. ವಿ ನಾಗೇಂದ್ರ ಪ್ರಸಾದ್ ಹಾಗೂ ಸಂತೋಷ್ ನಾಯಕ್ ಸಾಹಿತ್ಯ ಹಾಡುಗಳಿಗಿದ್ದು, ಮಾಸ್ತಿ ಹಾಗೂ ರಘು‌ ನಿಡುವಳ್ಳಿ ಸಂಭಾಷಣೆ ಧರ್ಮಬೀರು ನಾಡಪ್ರಭು ಕೆಂಪೇಗೌಡ ಚಿತ್ರಕ್ಕಿದ್ದು, ಚೇತನ್ ರಾಜ್ ನಿರ್ಮಾಣ ನಿರ್ವಹಣೆಯನ್ನು  ಮಾಡುತ್ತಿದ್ದಾರೆ.  ಕನ್ನಡ ಹಾಗೂ‌‌‌ ಇಂಗ್ಲೀಷ್ ಭಾಷೆಯಲ್ಲಿ ಚಿತ್ರ‌ ನಿರ್ಮಾಣವಾಗಲಿದ್ದು,  ಮೇ ಅಥವಾ ಜೂನ್ ತಿಂಗಳಲ್ಲಿ‌ ಮುಹೂರ್ತ ನಡೆಯಲಿದೆ. ಮುಹೂರ್ತ ಮುಗಿಸಿಕೊಂಡು ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.