Tag: Dharma Samskad

  • ನಾನು ಅಂಬೇಡ್ಕರ್ ಗೆ ಅವಮಾನ ಮಾಡಿಲ್ಲ: ಪೇಜಾವರಶ್ರೀ

    ನಾನು ಅಂಬೇಡ್ಕರ್ ಗೆ ಅವಮಾನ ಮಾಡಿಲ್ಲ: ಪೇಜಾವರಶ್ರೀ

    ಉಡುಪಿ: ನಾನು ಸಂವಿಧಾನ ಬದಲಿಸಿ ಎಂದು ಧರ್ಮ ಸಂಸದ್ ನಲ್ಲಿ ಹೇಳಿಲ್ಲ. ಅಂಬೇಡ್ಕರ್ ಗೆ ಅಪಮಾನ ಮಾಡಿಲ್ಲ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸ್ವಾಮೀಜಿ, ಸಂವಿಧಾನದಲ್ಲಿ ತಿದ್ದುಪಡಿ ಆಗಬೇಕೆಂದು ನಾನು ಹೇಳಿದೆ. ಆದರೆ ದಲಿತರ ಮೀಸಲಾತಿ ವಿಚಾರ ನಾನು ಮಾತನಾಡಲೇ ಇಲ್ಲ. ದಲಿತರಿಗೆ ಮೀಸಲಾತಿ ವಿಸ್ತರಿಸಬೇಕು ಎಂದು ಹೇಳುವವರಲ್ಲಿ ನಾನು ಒಬ್ಬ. ಸಂವಿಧಾನಕ್ಕೆ ಅಪಮಾನ ಮಾಡಿದರೆ ದೇಶಕ್ಕೆ ಅಪಮಾನ ಮಾಡಿದಂತೆ ಎಂದರು.

    ವೇದಿಕೆಯಲ್ಲಿದ್ದ ಸಾಹಿತಿಗಳಿಗೂ ಇದು ಅರ್ಥವಾಗಲಿಲ್ಲವಲ್ಲ ಅನ್ನುವುದೇ ವಿಪರ್ಯಾಸ. ಸಂವಿಧಾನ ಅಂಬೇಡ್ಕರ್ ಒಬ್ಬರೇ ರಚನೆ ಮಾಡಿದ್ದಲ್ಲ. ಸಂವಿಧಾನ ರಚನಾ ಸಮಿತಿಯಲ್ಲಿ ದೇಶದ ಎಲ್ಲಾ ಪ್ರತಿನಿಧಿಗಳು ಇದ್ದರು. ಸಂವಿಧಾನ ರಚನಾ ಸಮಿತಿಯಲ್ಲಿ ಅಲ್ಲಾಡಿ ಕೃಷ್ಣಸ್ವಾಮಿ, ಅಯ್ಯರ್, ಕೆ.ಎಂ ಮುನ್ಶಿ, ಬೆನಗಲ್, ಅಂಬೇಡ್ಕರ್ ಕೆಲಸಕ್ಕೆ ಕೈಜೋಡಿಸಿದ್ದ ಪ್ರಮುಖರು. ತಮ್ಮ ಹೇಳಿಕೆ ಹೋರಾಟಗಾರ ದ್ವಾರಕನಾಥ್ ರಂತ ದೊಡ್ಡ ವಕೀಲರಿಗೂ ಅರ್ಥವಾಗಲಿಲ್ಲ ಎಂಬುವುದೇ ವಿಪರ್ಯಾಸ ಎಂದು ಹೇಳಿದರು.

    ಧರ್ಮದ ಹೆಸರಲ್ಲಿ ವಿಭಜನೆ ಬೇಡ. ಚರ್ಚ್-ಮಸೀದಿಗಿರುವ ಸ್ವಾಯತ್ತತೆ ಎಲ್ಲರಿಗೂ ಬರಲಿ. ಶಾದಿಭಾಗ್ಯ ದಲಿತರಿಗೆ ಯಾಕಿಲ್ಲ, ದಲಿತರಲ್ಲಿ ಬಡವರು ಇಲ್ವಾ ಎಂದು ಇದೇ ವೇಳೆ ಪ್ರಶ್ನಿಸಿದರು.

    ಉಡುಪಿ ಧರ್ಮ ಸಂಸದ್ ಯಶಸ್ವಿಯಾಗಿದೆ. ಧರ್ಮ ಸಂಸದ್ ಯಶಸ್ವಿಯಾದದ್ದನ್ನು ಬುದ್ಧಿ ಜೀವಿಗಳಿಗೆ, ಸಾಹಿತಿಗಳಿಗೆ ಸಹಿಸಲಾಗುತ್ತಿಲ್ಲ. ಸಾಹಿತಿಗಳಿಂದ ಮೊಸರಲ್ಲಿ ಕಲ್ಲು ಹುಡುಕುವ ಕೆಲಸವಾಗುತ್ತಿದೆ. ಪಾಪದ ದಲಿತರನ್ನು ಇವರು ವಿವಾದವೆಂದು ಹೇಳಿ ಎಳೆದು ತರುತ್ತಿದ್ದಾರೆ ಎಂದು ಆರೋಪಿಸಿದರು.

    ಪೇಜಾವರ ಶ್ರೀ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯಾದ್ಯಂತ ಹಲವು ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

     


  • ಮೋದಿ ಸರ್ಕಾರದ ಅವಧಿ ಪೂರ್ಣವಾಗುವ ಮೊದಲೇ ರಾಮ ಮಂದಿರ ನಿರ್ಮಾಣ!

    ಮೋದಿ ಸರ್ಕಾರದ ಅವಧಿ ಪೂರ್ಣವಾಗುವ ಮೊದಲೇ ರಾಮ ಮಂದಿರ ನಿರ್ಮಾಣ!

    ಉಡುಪಿ/ಮೈಸೂರು: ಮೋದಿ ಸರ್ಕಾರದ ಅವಧಿ ಮುಗಿಯುವ ಮೊದಲೇ ರಾಮಮಂದಿರ ನಿರ್ಮಾಣ ಮಾಡಬೇಕು ಎನ್ನುವ ನಿರ್ಣಯವನ್ನು ಧರ್ಮ ಸಂಸದ್ ನಲ್ಲಿ ಕೈಗೊಳ್ಳಲಾಗಿದೆ.

    ಆಯೋಧ್ಯೆಯಲ್ಲಿ ರಾಮಮಂದಿರಕ್ಕೆ ಇದ್ದ ಅಡೆತಡೆಗಳು ನಿವಾರಣೆಯಾಗಿದೆ. ಕೇಂದ್ರದಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ಹೀಗಾಗಿ 2019 ರ ಒಳಗಡೆ ರಾಮಮಂದಿರ ನಿರ್ಮಾಣವಾಗಬೇಕು ಎನ್ನುವ ನಿರ್ಧಾರವನ್ನು ಈ ಧರ್ಮಸಂಸದ್ ನಲ್ಲಿ ಕೈಗೊಳ್ಳಲಾಗಿದೆ ಎಂದು ವಿಎಚ್‍ಪಿ ಮೂಲಗಳು ತಿಳಿಸಿವೆ.

    ರಾಮಮಂದಿರ ನಿರ್ಮಾಣವಾಗಲಿರುವುದರಿಂದಲೇ ಮುಂದಿನ ಧರ್ಮ ಸಂಸದ್ ಆಯೋಧ್ಯೆಯನ್ನು ನಡೆಸಲು ವಿಎಚ್‍ಪಿ ಈಗಾಗಲೇ ನಿಶ್ಚಯಿಸಿದೆ. ರಾಮಮಂದಿರಕ್ಕೆ ಇದ್ದ ಅಡೆತಡೆಗಳು ನಿವಾರಣೆಯಾದ ಹಿನ್ನೆಲೆಯಲ್ಲಿ 2019 ರ ಒಳಗಡೆ ಮಂದಿರ ನಿರ್ಮಾಣವಾಗಬೇಕೆಂಬ ಅಭಿಪ್ರಾಯ ಈ ಧರ್ಮ ಸಂಸದ್‍ನಲ್ಲಿ ವ್ಯಕ್ತವಾಗಿದೆ.

    ಈಗಾಗಲೇ ಹೋರಾಟಗಳು ಪೂರ್ಣವಾಗಿದ್ದು, ಈಗ ಅಂತಿಮ ಹೋರಾಟದಲ್ಲಿ ಇದ್ದೇವೆ. ಇಂತಹ ಸಂದರ್ಭದಲ್ಲಿ ಜಾತಿ, ಮತದ ಭೇದ ಬಿಟ್ಟು, ಎಲ್ಲರೂ ಒಟ್ಟಾಗಿ ರಾಮನ ಸೈನಿಕರಾಗಿ ಮುಂದುವರಿಯಬೇಕು ಎಂದು ಚಿನ್ಮಯಾನಂದಜಿ ಮಹಾರಾಜ್ ತಿಳಿಸಿದ್ದರು.

    4 ತಿಂಗಳಿನಲ್ಲಿ ಪ್ರಕರಣ ಇತ್ಯರ್ಥ: ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ವಿರಾಟ್ ಹಿಂದೂಸ್ಥಾನ್ ಸಂಗಮ ಸಂಘಟನೆ ಶನಿವಾರ ಆಯೋಜಿಸಿದ್ದ ರಾಮಮಂದಿರ ಮುಂದಿನ ನಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಬಿಜೆಪಿ ಮುಖಂಡ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ, ಮುಂದಿನ 4 ತಿಂಗಳಲ್ಲಿ ಸುಪ್ರೀಂಕೋರ್ಟ್ ನಲ್ಲಿ ರಾಮಮಂದಿರ ಪ್ರಕರಣ ಇತ್ಯರ್ಥವಾಗಲಿದೆ ಎಂದು ಹೇಳಿದ್ದಾರೆ.

    ಮುಂದಿನ ದೀಪಾವಳಿ ವೇಳೆಗೆ ಸುಪ್ರೀಂಕೋರ್ಟ್ ಆದೇಶ ಬರಲಿದೆ. ಬಹುಶಃ ರಾಮಮಂದಿರ ನಿರ್ಮಾಣ ವಿಷಯವನ್ನು ದೀಪಾವಳಿಯಲ್ಲಿ ಆಚರಿಸಬಹುದು. ಜನವರಿ ಫೆಬ್ರವರಿಯಲ್ಲಿ ನ್ಯಾಯಾಲಯದಲ್ಲಿ ನಡೆಯುವ ನನ್ನ ವಾದ ಬರಿ ಉತ್ತರವಾಗುವುದಿಲ್ಲ. ರಾಮಮಂದಿರಕ್ಕಾಗಿ ಅದು ನನ್ನ ಬ್ರಹ್ಮಾಸ್ತ್ರ ಎಂದು ತಿಳಿಸಿದರು.

    ಅಯೋಧ್ಯೆಯಲ್ಲಿ 21 ಮಸೀದಿಗಳಿವೆ. ಅಲ್ಲಿಗೆ ಯಾರು ಸಹ ನಮಾಜ್ ಮಾಡಲು ಹೋಗುವುದೇ ಇಲ್ಲ. ಆದರೆ ರಾಮಮಂದಿರ ಇದ್ದ ಜಾಗದಲ್ಲಿ ಮಾತ್ರ ನಮಾಜ್‍ಗೆ ಹೋಗುತ್ತಾರೆ. ರಾಮಮಂದಿರ ಇದ್ದ ಜಾಗದಲ್ಲಿ ದೇವಾಲಯ ಇತ್ತು ಅಂತ ಸಾಕ್ಷಿಗಳೇ ಹೇಳಿವೆ. ದಾಖಲೆಗಳೇ ರಾಮಮಂದಿರವನ್ನು ಉಳಿಸಿಕೊಂಡಿದೆ ಎಂದು ಹೇಳಿದರು.

    ದೇವಾಲಯ ಹಾಗೂ ಮಸೀದಿ ಒಂದೇ ಅಲ್ಲ. ಮಸೀದಿಯಲ್ಲಿ ಮಾತ್ರ ನಮಾಜ್ ಮಾಡಬೇಕೆಂದಿಲ್ಲ. ನಮಾಜ್ ಅನ್ನು ಎಲ್ಲಿ ಬೇಕಾದರೂ ಮಾಡಬಹುದು. ಇಸ್ಲಾಮ್ ನಲ್ಲಿ ನಮಾಜ್‍ಗೆ ಕಡ್ಡಾಯ ಸ್ಥಳ ನಿಗದಿ ಮಾಡಿಲ್ಲ. ರಸ್ತೆ, ಏರ್ ಪೋರ್ಟ್, ಕೋಣೆ ಎಲ್ಲಿ ಬೇಕಾದರೂ ಮಾಡಬಹುದು. ಆದರೆ ದೇವರನ್ನ ಎಲ್ಲಿ ಬೇಕಾದರೂ ಪೂಜಿಸಲು ಆಗುವುದಿಲ್ಲ ಎಂದರು.

    ಈ ಕಾರ್ಯಕ್ರಮದಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ, ಹಿಂದೂ ಮುಖಂಡ ಜಗದೀಶ್ ಶೆಟ್ಟಿ. ಮಾಜಿ ರಾಮದಾಸ್, ನಟಿ ಮಾಳವಿಕ ಭಾಗಿಯಾಗಿದ್ದರು.