Tag: dharawda

  • 4 ವರ್ಷದ ಬಳಿಕ ಧಾರವಾಡಕ್ಕೆ ಬಂದು ಮತದಾನ ಮಾಡಿ ಹೋದ ಶಾಸಕ ವಿನಯ್ ಕುಲಕರ್ಣಿ

    4 ವರ್ಷದ ಬಳಿಕ ಧಾರವಾಡಕ್ಕೆ ಬಂದು ಮತದಾನ ಮಾಡಿ ಹೋದ ಶಾಸಕ ವಿನಯ್ ಕುಲಕರ್ಣಿ

    ಧಾರವಾಡ: ಕ್ಷೇತ್ರದ ಹೊರಗಿದ್ದುಕೊಂಡೇ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಶಾಸಕ ವಿನಯ್ ಕುಲಕರ್ಣಿ (Vinay Kulkarni) ನಾಲ್ಕು ವರ್ಷದ ಬಳಿಕ ಧಾರವಾಡಕ್ಕೆ (Dharawda) ಕಾಲಿಟ್ಟಿದ್ದಾರೆ.

    ಜಿಲ್ಲಾ‌ ಪಂಚಾಯತ್‌ ಸದಸ್ಯ ಯೋಗೀಶ್‌ ಗೌಡ ಕೊಲೆ ಪ್ರಕರಣಕ್ಕೆ(Yogesh Gowda Murder Case) ಸಂಬಂಧಿಸಿದಂತೆ ಜೈಲುವಾಸ ಅನುಭವಿಸಿ, ಜಾಮೀನಿನ ಮೇಲೆ ಹೊರಗಿರುವ ವಿನಯ್ ಕುಲಕರ್ಣಿ ಅವರು ಯಾವುದೇ ಕಾರಣಕ್ಕೂ ಧಾರವಾಡ ಜಿಲ್ಲಾ ಪ್ರವೇಶ ಮಾಡಬಾರದು ಎಂದು ಸುಪ್ರೀಂ ಕೋರ್ಟ್ (Supreme Court) ನಿರ್ಬಂಧ ಹೇರಿದೆ. ಹೀಗಿದ್ದರೂ ವಿನಯ್ ಕುಲಕರ್ಣಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ  ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದನ್ನೂ ಓದಿ: ಒಕ್ಕಲಿಗ ನಾಯಕತ್ವಕ್ಕಾಗಿ ಚಿಲ್ರೆ ಕೆಲ್ಸ ಮಾಡಿದ್ರೆ ಆಗಲ್ಲ: ಡಿವಿಎಸ್‌

    ಚುನಾವಣೆ ಬಳಿಕ ಹಲವು ಬಾರಿ ತಮಗೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದು ನ್ಯಾಯಾಲಯಕ್ಕೆ ಅವರು ಅರ್ಜಿ ಸಲ್ಲಿಸುತ್ತಲೇ ಬಂದಿದ್ದರೂ ನ್ಯಾಯಾಲಯ ಮಾತ್ರ ಅವರ ಅರ್ಜಿಯನ್ನು ತಿರಸ್ಕರಿಸುತ್ತಲೇ ಬಂದಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡುವ ಸಲುವಾಗಿ ಧಾರವಾಡಕ್ಕೆ ಹೋಗಲು ಅವಕಾಶ ನೀಡಬೇಕು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ನ್ಯಾಯಾಲಯ ಕೂಡ ಅವರ ಅರ್ಜಿ ತಿರಸ್ಕರಿಸಿದ ಕಾರಣ ಅವರು ಬೆಂಗಳೂರಿನ ಹೈಕೋರ್ಟ್ (High Court) ಮೊರೆ ಹೋಗಿದ್ದರು.

    ವಿನಯ್ ಕುಲಕರ್ಣಿ ಮನವಿಗೆ ಸ್ಪಂದಿಸಿದ ಹೈಕೋರ್ಟ್‌, ಲೋಕಸಭಾ ಚುನಾವಣೆಗೆ (Lok Sabha Election) ಮತದಾನ ಮಾಡಿ ಬರಬಹುದು. ಮತಗಟ್ಟೆಗೆ ತೆರಳಿ ಮತದಾನ ಮಾಡಿದ ಕೂಡಲೇ ಧಾರವಾಡ ಬಿಟ್ಟು ಮತ್ತೆ ಹೊರಡಬೇಕು ಎಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಧಾರವಾಡ ಸಪ್ತಾಪುರದಲ್ಲಿರುವ ಶಾರದಾ ಸ್ಕೂಲ್‌‌ನ ಮತಗಟ್ಟೆ 75ಕ್ಕೆ ಬಂದ ವಿನಯ್ ಕುಲಕರ್ಣಿ ತಮ್ಮ ಹಕ್ಕು ಚಲಾಯಿಸಿ ಮತ್ತೆ ಅಲ್ಲಿಂದ  ತೆರಳಿದ್ದಾರೆ. ಇದನ್ನೂ ಓದಿ: ಕಾಡಿನಲ್ಲಿ ಇರೋದು ಒಬ್ಬನೇ ವ್ಯಕ್ತಿ – ಕೇವಲ ಒಂದೇ ವೋಟ್‌ನಿಂದ 100% ಮತದಾನ

    ಧಾರವಾಡಕ್ಕೆ ಬರುತ್ತಿದ್ದಂತೆ  ಸೇರಿದ್ದ ವಿನಯ್ ಅವರ ಬೆಂಬಲಿಗರು ಅವರ ಪರ ಘೋಷಣೆಗಳನ್ನು ಕೂಗಿದರು. ಅವರ ಕೈ ಕುಲುಕಿ ಖುಷಿಪಟ್ಟರು. ವಿನಯ್ ಅವರು ಆಗಮಿಸುತ್ತಿದ್ದಂತೆ ಅವರ ಪತ್ನಿ ಶಿವಲೀಲಾ ಹಾಗೂ ಪುತ್ರಿ ವೈಶಾಲಿ ಕೂಡ ಹರ್ಷ ವ್ಯಕ್ತಪಡಿಸಿ ಅವರನ್ನು ಭೇಟಿಯಾದರು. ಅಲ್ಲದೇ ಕಾರ್ಯಕರ್ತರು ವಿನಯ್ ಅವರ ಕಾರಿನ ಮೇಲೆ ಹೂಮಳೆ ಸುರಿಸಿದರು.

    ವಿನಯ್ ಅವರಿಗೆ ಶಾಸಕ ಎನ್.ಎಚ್.ಕೋನರಡ್ಡಿ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಸಾಥ್ ನೀಡಿದರು.

     

  • ಮಾಜಿ ಶಾಸಕ ಎನ್.ಎಚ್ ಕೋನರೆಡ್ಡಿ ನಾಳೆ ಕಾಂಗ್ರೆಸ್‍ಗೆ ಸೇರ್ಪಡೆ

    ಮಾಜಿ ಶಾಸಕ ಎನ್.ಎಚ್ ಕೋನರೆಡ್ಡಿ ನಾಳೆ ಕಾಂಗ್ರೆಸ್‍ಗೆ ಸೇರ್ಪಡೆ

    ಧಾರವಾಡ: ಜಿಲ್ಲೆಯ ಮಾಜಿ ಶಾಸಕರೊಬ್ಬರು ಈಗ ಕಾಂಗ್ರೆಸ್ ಸೇರ್ಪಡೆಗೆ ಸಿದ್ಧರಾಗಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ಕ್ಷೇತ್ರದ ಜೆಡಿಎಸ್‍ನ ಮಾಜಿ ಶಾಸಕ ಎನ್.ಎಚ್ ಕೋನರೆಡ್ಡಿ ಅವರೇ ನಾಳೆ ಕಾಂಗ್ರೆಸ್ ಸೇರ್ಪಡೆಗೆ ಸಿದ್ಧರಾಗಿದ್ದಾರೆ.

    ಕಳೆದ ಹಲವು ದಿನಗಳಿಂದ ಇವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ತಾರೆ ಎಂದು ಮಾಹಿತಿ ಇತ್ತು. ಅಲ್ಲದೇ ಕೋನರೆಡ್ಡಿ ವಿಧಾನ ಪರಿಷತ್ ಚುನಾವಣೆಯಲ್ಲಿ ನವಲಗುಂದ ಕ್ಷೇತ್ರದಲ್ಲಿ ಓಡಾಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿದ್ದರು. ಈಗ ಅವರೇ ಪಬ್ಲಿಕ್ ಟಿವಿಗೆ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಖಚಿತ ಮಾಹಿತಿ ನೀಡಿದ್ದಾರೆ.

    ನಾಳೆ ಬೆಳಗಾವಿ ಅಧಿವೇಶನಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗಮಿಸುತ್ತಿದ್ದಾರೆ. ಅವರ ಸಮ್ಮುಖದಲ್ಲೇ ಬೆಳಗಾವಿ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕೋನರೆಡ್ಡಿ ಕೈ ಸೇರ್ಪಡೆ ಆಗಲಿದ್ದಾರೆ.

    ಕಳೆದ 30 ವರ್ಷಗಳಿಂದ ಜೆಡಿಎಸ್ ನಲ್ಲಿದ್ದ ಕೋನರೆಡ್ಡಿ, ಕ್ಷೇತ್ರದ ಜನರ ಒತ್ತಾಯಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೆ ಜೆಡಿಎಸ್ ಪಕ್ಷ, ಕುಮಾರಸ್ವಾಮಿ ಹಾಗೂ ದೇವೇಗೌಡರ ಬಗ್ಗೆ ನನಗೆ ಅಪಾರ ಗೌರವ ಇದೆ ಎಂದು ಕೂಡ ಕೋನರೆಡ್ಡಿ ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಓಮಿಕ್ರಾನ್ ಸೋಂಕು ಪತ್ತೆ- ರಾಜ್ಯದಲ್ಲಿ ಸಂಖ್ಯೆ 3ಕ್ಕೇರಿಕೆ

    ಕಳೆದ 2013 ರಲ್ಲಿ ಕೋನರೆಡ್ಡಿ ಒಮ್ಮೆ ಮಾತ್ರ ನವಲಗುಂದ ಕ್ಷೇತ್ರದಿಂದ ಗೆದ್ದು ಬಂದಿದ್ದು, ಈಗ ಕಾಂಗ್ರೆಸ್ ಸೇರಿದ ಮೇಲೆ ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಯತ್ನ ನಡೆಸಲಿದ್ದಾರೆ. ಇದನ್ನೂ ಓದಿ: ಇಸ್ರೇಲ್ ಪ್ರಧಾನಿಗೆ ಭಗವದ್ಗೀತೆ ಗಿಫ್ಟ್ ಕೊಟ್ಟ ಐರಾವತ ನಟಿ

  • 17 ವರ್ಷಗಳಿಂದ ಬಿಸ್ಕೆಟ್, ಗಂಜಿ ತಿನ್ನೋ ಯುವತಿಯ ಚಿಕಿತ್ಸೆಗೆ ಬೇಕಿದೆ ಸಹಾಯ

    17 ವರ್ಷಗಳಿಂದ ಬಿಸ್ಕೆಟ್, ಗಂಜಿ ತಿನ್ನೋ ಯುವತಿಯ ಚಿಕಿತ್ಸೆಗೆ ಬೇಕಿದೆ ಸಹಾಯ

    ಧಾರವಾಡ: ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದ ನಿವಾಸಿ ಸಿದ್ದವ್ವ ಶೆರೆವಾಡರಿಗೆ ಹುಟ್ಟಿದಾಗಿನಿಂದ ಒಂದು ತೊಂದರೆ ಇದೆ. ಅದೇನಪ್ಪಾ ಅಂದ್ರೇ, ಅವರಿಗೆ ಬಾಯಿನೇ ಬಿಡಲು ಆಗಲ್ಲ. ಹೀಗಾಗಿ ಅವರು ಗಂಜಿ ಹಾಗೂ ಬಿಸ್ಕೆಟ್ ಬಿಟ್ಟು ಏನೂ ತಿನ್ನೊಲ್ಲ. ಸದ್ಯ ಅವರ ಬಾಯಿಯ ಶಸ್ತ್ರ ಚಿಕಿತ್ಸೆ ಮಾಡಿಸಿದ್ರೆ, ತಿನ್ನಬಹುದು ಹಾಗೂ ಮಾತನಾಡೊದು ಸಾಧ್ಯ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ಇದೀಗ ಈ ಯುವತಿಯ ಕುಟುಂಬ ಸಹಾಯಕ್ಕಾಗಿ ಪಬ್ಲಿಕ್ ಟಿವಿಯ ಮೊರೆ ಬಂದಿದೆ.

    ಹೌದು. 17 ವರ್ಷ ವಯಸ್ಸಿನ ಸಿದ್ದವ್ವ ಶೆರೆವಾಡ ಬಾಯಿ ತೆರೆಯೋಕೆ ಆಗದೇ ಅದೇಷ್ಟು ಒದ್ದಾಟ ನಡೆಸಿದ್ದಾರೆ. ನೀರು ಕುಡಿಯಲು ಕೂಡಾ ಪರದಾಡುತ್ತಾರೆ. ಇನ್ನು ಹುಟ್ಟಿದಾಗಿನಿಂದ ಇವರು ಅನ್ನ, ರೊಟ್ಟಿಯಂಥ ಪದಾರ್ಥಗಳನ್ನು ತಿಂದಿಲ್ಲ. ಕೇವಲ ಗಂಜಿ, ಪುಡಿ ಮಾಡಿದ ಬಿಸ್ಕೆಟ್ ಮಾತ್ರ ತಿನ್ನೊಕೆ ಇವರಿಗೆ ಆಗತ್ತೆ. ಇದು ಇವರ ವೈಯಕ್ತಿಕ ಸಮಸ್ಯೆಯಾದ್ರೆ, ಇನ್ನೊಂದು ಕಡೆ ಇವರದ್ದು ಕಿತ್ತು ತಿನ್ನುವ ಬಡತನದ ಕುಟುಂಬ.

    ಕಳೆದ 5 ವರ್ಷಗಳ ಹಿಂದೆ, ಯುವತಿಯ ತಂದೆ ಬಸಪ್ಪ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಇನ್ನು ಮನೆಯಲ್ಲಿ ತಾಯಿಯೊಬ್ಬಳೇ ಕೂಲಿ-ನಾಲಿ ಮಾಡಿ ಮೂರು ಮಕ್ಕಳನ್ನ ಸಾಕಬೇಕು. ಸಿದ್ದವ್ವಳ ತಂಗಿ ಶಾಲೆ ಕಲಿಯುತಿದ್ರೆ, ಅಣ್ಣ ಕಾಲೇಜಿಗೆ ಹೋಗ್ತಾರೆ. ಸಿದ್ದವ್ವ ಕೂಡಾ ಬಾಯಿ ತೆರೆಯೊಕೆ ಆಗದೇ ಇದ್ರೂ ಎಸ್‍ಎಸ್‍ಎಲ್‍ಸಿ ಮುಗಿಸಿದ್ದಾರೆ. ಆದರೆ ಇವರ ಬಾಯಿ ಶಸ್ತ್ರ ಚಿಕಿತ್ಸೆಗೆ ಹಣ ಇಲ್ಲದೇ 17 ವರ್ಷಗಳಿಂದ ಇದೇ ರೀತಿ ಬಿಸ್ಕೆಟ್ ಹಾಗೂ ಗಂಜಿಯ ಮೇಲೆ ಜೀವನ ಸಾಗಿಸುತ್ತಿದ್ದಾರೆ.

    ಮಗಳ ಸ್ಥಿಯಿಂದ ಕಂಗೆಟ್ಟ ತಾಯಿ ಬಾಯಿ ಶಸ್ತ್ರ ಚಿಕಿತ್ಸೆ ಮಾಡಿಸಲೆಂದು ಬೆಂಗಳೂರು, ಬೆಳಗಾವಿ ಸೇರಿದಂತೆ ಹಲವು ಆಸ್ಪತ್ರೆಗೆ ಅಲೆದಾಡಿದ್ದಾರೆ. ಆದ್ರೆ ಮಗಳ ಚಿಕಿತ್ಸೆ ಸಾಧ್ಯವಿಲ್ಲ ಅಂತಾ ವೈದ್ಯರ ಉತ್ತರ. ಕೊನೆಗೆ ಧಾರವಾಡದ ಎಸ್‍ಡಿಎಂ ಆಸ್ಪತ್ರೆಯಲ್ಲಿ ಬಾಯಿ ಶಸ್ತ್ರ ಚಿಕಿತ್ಸೆ ಬಗ್ಗೆ ಕೇಳಿದಾಗ ಅಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆ ಮಾಡ್ತೀವಿ ಅಂತಾ ಹೇಳಿದಾಗ ತಾಯಿಗೆ ಸ್ವಲ್ಪ ನಿಟ್ಟುಸಿರು ಬಿಟ್ಟಂತಾಗಿದೆ. ಆದರೆ ಅದಕ್ಕೆ ಹಣ ಬೇಕಲ್ಲ.

    ಹೇಗಾದ್ರು ಮಾಡಿ ಹಣದ ಸಹಾಯವಾದ್ರೆ ಮಗಳಿಗೆ ಹೊಸ ಜೀವನ ಸಿಗುತ್ತೆ ಅನ್ನೊದು ತಾಯಿಯ ಆಸೆ. ಸಿದ್ದವ್ವಳಿಗೆ ಕೂಡಾ ಮುಂದೆ ಕಲಿಬೇಕು ಅನ್ನೋ ಆಸೆಯೂ ಇದೆ. ಯುವಕರು ಬಾಯಿ ನೋಡಿ ಚುಡಾಯಿಸಿದ್ದಕ್ಕೆ ಬೇಸರಗೊಂಡು ಕಾಲೇಜ್ ಮೆಟ್ಟಿಲು ಕುಡಾ ಏರಲಿಲ್ಲ ಸಿದ್ದವ್ವ. ಸದ್ಯ 1 ಲಕ್ಷ ರೂಪಾಯಿ ಇದ್ರೆ ಇವಳು ಬಾಯಿ ಬಿಚ್ಚಿ ಮಾತನಾಡಬಹುದು ಹಾಗೂ ಬೇಕಾದ್ದನ್ನು ತಿನ್ನಬಹುದು. ಹೀಗಾಗಿ ಪಬ್ಲಿಕ್ ಟಿವಿ ಮೊರೆ ಬಂದಿರುವ ಈ ಕುಟುಂಬ, ಸಹಾಯಕ್ಕೆ ಮನವಿ ಮಾಡುತ್ತಿದೆ.

    https://www.youtube.com/watch?v=ltAvEyRpenQ