Tag: dharam singh

  • ಸಮುದಾಯ ನಂಬದೇ ಅಭಿವೃದ್ಧಿ ಕೆಲಸದಿಂದ ಜಯ: ಇದು ಕಲಬುರಗಿ ವಿಶೇಷತೆ

    ಸಮುದಾಯ ನಂಬದೇ ಅಭಿವೃದ್ಧಿ ಕೆಲಸದಿಂದ ಜಯ: ಇದು ಕಲಬುರಗಿ ವಿಶೇಷತೆ

    ಕಲಬುರಗಿ: ‌ ಚುನಾವಣೆಯಲ್ಲಿ ಗೆಲ್ಲಬೇಕಾದರೆ ಸಮುದಾಯದ ಜನರ ಸಂಖ್ಯೆ ಹೆಚ್ಚಿರಬೇಕು ಎಂಬ ಮಾತು ಪ್ರಚಲಿತದಲ್ಲಿದೆ. ಆದರೆ  ಸೂಫಿ ಸಂತರ ನಾಡು ಎಂದೇ ಖ್ಯಾತಿ ಪಡೆದಿರುವ ಕಲಬುರಗಿ (Kalaburagi) ಜಿಲ್ಲೆಯ ಹಲವು ನಾಯಕರು ಅವರ ಸಮುದಾಯದ (Community) ಮತಗಳು ಬೆರಳೆಣಿಕೆಯಷ್ಟಿದ್ದರೂ ಕ್ಷೇತ್ರದಲ್ಲಿ ಹಲವು ಬಾರಿ ಜಯಗಳಿಸಿದ್ದಾರೆ.‌ ಅಂತಹ ಸಾಲಿಗೆ‌ ಮಾಜಿ ಸಿಎಂ ದಿವಂಗತ ಧರಂ ಸಿಂಗ್ ಆಳಂದ ಶಾಸಕ ಸುಭಾಶ್ ಗುತ್ತೇದಾರ ಹಾಗೂ ಹಾಲಿ ಜೇವರ್ಗಿ ಶಾಸಕ ಧರಂಸಿಂಗ್ ಪುತ್ರ ಅಜಯ್ ಸಿಂಗ್ ಸಮುದಾಯ‌ ನಂಬದೇ ಅಭಿವೃದ್ಧಿ ಕೆಲಸಗಳಿಂದ ಜಯಗಳಿಸಿದವರು ಎಂದರೇ ತಪ್ಪಾಗಲಾರದು.

    ಧರಂಸಿಂಗ್: ರಾಜಕೀಯದಲ್ಲಿ ಅಜಾತ ಶತ್ರು ಎಂದೇ ಖ್ಯಾತಿ ಹೊಂದಿದ ಮಾಜಿ ಸಿಎಂ ಧರಂಸಿಂಗ್ (Dharam Singh) ಜೇವರ್ಗಿ ಕ್ಷೇತ್ರದಿಂದ ಸತತ 8 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಈ ಕ್ಷೇತ್ರದಲ್ಲಿ ಧರಂ ಸಿಂಗ್ ಅವರ ರಜಪೂತ ಜನಾಂಗದ ಮತಗಳು ಇರುವ ಮನೆಗಳು ಕೇವಲ ಬೆರಳೆಣಿಕೆಯಷ್ಟು ಮಾತ್ರ ಇದೆ. ಹೀಗಿದ್ದರೂ ಧರಂಸಿಂಗ್ ಅವರು ಜನಪರ‌ ಕಾಳಜಿ ಹಾಗೂ ಅಭಿವೃದ್ಧಿ ಹೆಚ್ಚು ಒತ್ತು ನೀಡಿದ್ದರು. ಎಲ್ಲಾ ಸಮುದಾಯದ ಜೊತೆ ಉತ್ತಮ ಸಂಬಂಧದಿಂದ ಅವರ ಸಮುದಾಯದ‌ ಜನಸಂಖ್ಯೆ ಇಲ್ಲದಿದ್ದರೂ ಸತತ ಜಯಗಳಿಸಿದ್ದರು. ಇದನ್ನೂ ಓದಿ: ಗೌರಿಬಿದನೂರು ಕ್ಷೇತ್ರದಲ್ಲಿ ಪಕ್ಷೇತರರದ್ದೇ ನಿರ್ಣಾಯಕ ಪಾತ್ರ – ಈ ಬಾರಿ ಶಿವಶಂಕರ ರೆಡ್ಡಿ ಗೆಲ್ತಾರಾ?

    ಸುಭಾಶ್ ಗುತ್ತೇದಾರ್: ಸದ್ಯ ಬಿಜೆಪಿಯ (BJP) ಆಳಂದ ಕ್ಷೇತ್ರದ ಶಾಸಕರಾದ ಸುಭಾಶ್ ಗುತ್ತೇದಾರ್ (Subhash Guttedar) ಅವರು ಈಡಿಗ ಸಮುದಾಯಕ್ಕೆ ಸೇರಿದ್ದಾರೆ. ಆಳಂದ ಕ್ಷೇತ್ರದಲ್ಲಿ 500 ರಿಂದ 600 ಮತಗಳು ಮಾತ್ರ ಅವರ ಸಮುದಾಯಕ್ಕೆ ಸೇರಿದ ಮತಗಳಾಗಿವೆ. ಆದರೆ ಸಮುದಾಯದ‌ ಮತ ಇಲ್ಲದಿದ್ದರೂ ಕ್ಷೇತ್ರದ ಬಹುಸಂಖ್ಯಾತ ಲಿಂಗಾಯತ, ದಲಿತ ಸೇರಿದಂತೆ ಹಿಂದುಳಿದ ವರ್ಗದ ಮತ ಪಡೆದು ಕ್ಷೇತ್ರದಲ್ಲಿ ಇಲ್ಲಿಯವರೆಗೆ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ.

    ಅಜಯ್‌ಸಿಂಗ್: ಸದ್ಯ ಜೇವರ್ಗಿ (Jevargi) ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಅಜಯ್ ಸಿಂಗ್ (Dr Ajay Singh) ಸಹ ತಂದೆ ಹಾಕಿಕೊಟ್ಟ ಮಾರ್ಗದಲ್ಲಿಯೇ ಸಾಗಿದ್ದು, ತಂದೆಯ ಬಳಿಕ ಎರಡನೇ ಬಾರಿ ಜೇವರ್ಗಿ ಕ್ಷೇತ್ರದ ಶಾಸಕರಾಗಿದ್ದಾರೆ. 2023ರಲ್ಲಿ ಮತ್ತೆ ಸ್ಪರ್ಧಿಸಿ ಹ್ಯಾಟ್ರಿಕ್ ಜಯಗಳಿಸಲು ಪ್ರಯತ್ನಿಸುತ್ತಿದ್ದಾರೆ.

  • ಧರಂ ಸಿಂಗ್ ಸಾವಿಗೆ ನಾನು ಕಾರಣ ಅಲ್ಲ: ಸಿಎಂ

    ಧರಂ ಸಿಂಗ್ ಸಾವಿಗೆ ನಾನು ಕಾರಣ ಅಲ್ಲ: ಸಿಎಂ

    ಬೆಂಗಳೂರು: ವಿಶ್ವಾಸಮತಯಾಚನೆಯನ್ನು ಸದನದಲ್ಲಿ ಮಂಡನೆ ಮಾಡಿ ಚರ್ಚೆ ಆರಂಭಿಸಿರುವ ಮುಖ್ಯಮಂತ್ರಿಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಈ ಹಿಂದಿನ ರಾಜಕೀಯ ನಡೆಗಳ ಬಗ್ಗೆಯೂ ಮಾತನಾಡಿದ್ದು, ತಾವು ಮಾಜಿ ಸಿಎಂ ಧರಂ ಸಿಂಗ್ ಅವರ ಸಾವಿಗೆ ಕಾರಣವಲ್ಲ ಎಂದು ಹೇಳಿದ್ದಾರೆ.

    ಸದನದಲ್ಲಿ ಮಾತನಾಡಿದ ಸಿಎಂ ಅವರು, ನಾನು ನನ್ನ ಜೀವನದಲ್ಲಿ ನಮ್ಮ ತಂದೆ ದೇವೇಗೌಡರ ಅಭಿಪ್ರಾಯದ ವಿರುದ್ಧವಾಗಿ ಮೊದಲ ಬಾರಿಗೆ ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಿ ತಪ್ಪು ಮಾಡಿದ್ದೆ ಎಂದರು. ಇದೇ ವೇಳೆ ಧರಂ ಸಿಂಗ್ ಅವರ ಸಾವಿಗೆ ನಾನು ಕಾರಣವಲ್ಲ ಎಂದರು.

    ಧರಂ ಸಿಂಗ್ ಹಾಗೂ ನಾನು 5 ವರ್ಷ ಪಾರ್ಲಿಮೆಂಟಿನಲ್ಲಿ ಪಕ್ಕದಲ್ಲಿ ಕುಳಿತು ಅವರೊಂದಿಗೆ ಇದ್ದೆ. ಅವರು ನನ್ನ ತಂದೆಗೆ ಸಾಮಾನರಾಗಿದ್ದರು. ಅಂದು ಸಿಎಂ ಸ್ಥಾನಕ್ಕಾಗಿ ಅಧಿಕಾರ ಹಿಡಿಯಲಿಲ್ಲ. ಆ ಕನಸು ನನಗೆ ಇರಲಿಲ್ಲ, ನಾವು ದೇವರ ಮೇಲೆ ಭಯ ಇಟ್ಟು ಬಂದಿದ್ದೇನೆ. ಎಲ್ಲಾ ವಿಧಿಯಂತೆ ನಡೆದಿದೆಯಷ್ಟೇ ಎಂದರು.

    ನಾನು ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದಿದ್ದೇನೆ. ಆದರೆ ಪಕ್ಷದ, ಶಾಸಕರಿಗಾಗಿ ಬಿಜೆಪಿಯೊಂದಿಗೆ ಕೈ ಜೋಡಿಸಿದ್ದೇನೆ ಎಂದರು. ಇದೇ ವೇಳೆ ನಾವು ಮಾಟಮಂತ್ರ ಮಾಡಿಸುವ ಕುಟುಂಬ ಅಲ್ಲ ಎಂದು ತಿರುಗೇಟು ನೀಡಿದ ಸಿಎಂ, ದೇವಾಲಯಕ್ಕೆ ಹೋದ ಸಂದರ್ಭದಲ್ಲಿ ಅರ್ಚಕರು ನೀಡಿರುವ ಏಲಕ್ಕಿ ಹಾರ, ನಿಂಬೆ ಹಣ್ಣು ತರುವುದು ತಪ್ಪೇ ಎಂದು ಪ್ರಶ್ನೆ ಮಾಡಿದರು.

    ಎಷ್ಟು ದಿನ ಇರುತ್ತೀರಿ ನೋಡುತ್ತೇನೆ: ಹೊಸದಾಗಿ ಮಾಡಲು ನೀವು ಮಾಡಿರುವ ಸಾಹಸದಿಂದ ಎಷ್ಟು ದಿನ ಸುಭದ್ರ ಸರ್ಕಾರ ನೀಡುತ್ತೀರಿ ಎಂಬುವುದನ್ನ ನಾನು ಕುಳಿತು ನೋಡುತ್ತೇನೆ. ಸರ್ಕಾರ ರಚನೆ ಆಗಿದ್ದ ಕ್ಷಣದಿಂದ ಏನೆಲ್ಲಾ ಮಾಡಿದ್ದೀರಿ ಎಂಬುವುದು ನನಗೆ ತಿಳಿದಿದೆ. ಅಲ್ಲದೇ ಇಂದು ನಡೆಯುತ್ತಿರುವ ಎಲ್ಲಾ ರಾಜಕೀಯ ನಡೆಗಳ ಬಗ್ಗೆಯೂ ಸಾಕಷ್ಟು ಫೋಟೋಗಳಿವೆ. ಆದರೆ ನೀವು ತಾತ್ಕಾಲಿಕವಾಗಿ ಸಂತಸ ಪಡೆಯುತ್ತಿದ್ದು, ಮುಂದೇ ನಿಮಗೂ ಕಾದಿದೆ ಎಂದರು.

  • ಪುತ್ರನ ಗೆಲುವಿಗಾಗಿ ಕುಕ್ಕೆಗೆ ಮೊರೆ – ಎಚ್‍ಡಿಕೆಯಿಂದ ಸುಬ್ರಹ್ಮಣ್ಯನಿಗೆ ಬಂಗಾರದ ರಥ!

    ಪುತ್ರನ ಗೆಲುವಿಗಾಗಿ ಕುಕ್ಕೆಗೆ ಮೊರೆ – ಎಚ್‍ಡಿಕೆಯಿಂದ ಸುಬ್ರಹ್ಮಣ್ಯನಿಗೆ ಬಂಗಾರದ ರಥ!

    – ಕೊನೆಗೂ ಈಡೇರುತ್ತಾ ಧರಂ ಸಿಂಗ್ ಕಾಲದ ಹರಕೆ

    ಬೆಂಗಳೂರು: ಮಂಡ್ಯದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ಸಿಎಂ ಕುಮಾರಸ್ವಾಮಿ ಇದುವರೆಗೂ ಅಸಾಧ್ಯವಾಗಿಯೇ ಉಳಿದಿರುವ ಕಾಯಕವನ್ನ ಪೂರ್ಣಗೊಳಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಈ ಮೂಲಕ ಶಾಪ ವಿಮೋಚನೆಗಾಗಿ ಮುಂದಾಗಿದ್ದಾರೆ.

    ಹೌದು. ಕುಕ್ಕೆ ಸುಬ್ರಹ್ಮಣ್ಯನಿಗೆ ಬಂಗಾರದ ರಥ ಮಾಡಿಸುವ ಹರಕೆಯನ್ನ ಈಡೇರಿಸಲು ಎಚ್‍ಡಿಕೆ ಮುಂದಾಗಿದ್ದಾರೆ. 15 ವರ್ಷಗಳ ಹಿಂದೆ ಧರಂ ಸಿಂಗ್ ಅವರು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಿಎಂ ಆಗಿದ್ದಾಗ ಕುಕ್ಕೆಗೆ ಚಿನ್ನದ ರಥ ಕೊಡಿಸುವುದಾಗಿ ಭರವಸೆ ಕೊಟ್ಟಿದ್ದರು. ಆದರೆ ಅವತ್ತು ಸುಬ್ರಹ್ಮಣ್ಯನಿಗೆ ಕೊಟ್ಟಿದ್ದ ವಾಗ್ದಾನ ಇದುವರೆಗೂ ಪೂರ್ಣಗೊಂಡಿಲ್ಲ. ಯಡಿಯೂರಪ್ಪ ಜೊತೆ ಸೇರಿ ಮೈತ್ರಿ ಸರ್ಕಾರ ರಚಿಸಿ ಸಿಎಂ ಆದರೂ ಕುಮಾರಸ್ವಾಮಿಗೆ ಚಿನ್ನದ ರಥ ಮಾಡಿಸಲು ಆಗಿರಲಿಲ್ಲ. ಒಂದೂವರೆ ದಶಕದಷ್ಟು ಹಳೆಯದಾದ ಹರಕೆಯನ್ನು ಈಡೇರಿಸುವಂತೆ ಇತ್ತೀಚೆಗಷ್ಟೇ ಜ್ಯೋತಿಷಿ ದ್ವಾರಕನಾಥ್ ಸಿಎಂ ಕುಮಾರಸ್ವಾಮಿಗೆ ಹೇಳಿದ್ದರು.

    ಹರಕೆ ಈಡೇರಿಸಿಲ್ಲ ಅಂದರೆ ಸುಬ್ರಹ್ಮಣ್ಯನ ಶಾಪ ತಟ್ಟುತ್ತದೆ. ಸಿಎಂ ಸ್ಥಾನದಲ್ಲಿ ಇರುವವರು ಇದನ್ನು ನೆರವೇರಿಸಬೇಕು. ಇಲ್ಲದಿದ್ದರೆ ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ದ್ವಾರಕನಾಥ್‍ರನ್ನು ಮನೆಗೆ ಕರೆಸಿಕೊಂಡು ಸಿಎಂ ಮಾತುಕತೆ ನಡೆಸಿದ್ದಾರೆ.

    ಸುಬ್ರಹ್ಮಣ್ಯನಿಗೆ ಇನ್ನೂರು ಕೋಟಿ ರೂಪಾಯಿ ಮೊತ್ತದ ಚಿನ್ನದ ರಥ ಮಾಡಿಸುವಂತೆ ಮುಜರಾಯಿ ಇಲಾಖೆಗೆ ಸೂಚಿಸಿದ್ದಾರೆ. ಒಂದೆಡೆ ಮಂಡ್ಯದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಊರಲ್ಲಿರುವ ದೇವರಿಗೆಲ್ಲ ಪೂಜೆ ಮಾಡುತ್ತಿದ್ದರೆ, ಇತ್ತ ಕುಮಾರಸ್ವಾಮಿ ಅವರು ಕುಕ್ಕೆಗೆ ಬಂಗಾರದ ರಥ ಕೊಟ್ಟು ಶಾಪ ವಿಮೋಚನೆ ಮೂಲಕ ಮಗನ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ದ್ವಾರಕಾನಾಥ್, 2014ರಲ್ಲಿ ಧರಂ ಸಿಂಗ್ ಕಾಲದಲ್ಲಿ ಸುಬ್ರಹ್ಮಣ್ಯ ದೇವರಿಗೆ ಒಂದು ಬಂಗಾರದ ರಥ ಅರ್ಪಣೆ ಮಾಡಬೇಕೆಂದು ತೀರ್ಮಾನ ಮಾಡಿದ್ದರು. ಅಲ್ಲದೆ ಮುಖ್ಯಮಂತ್ರಿ ಆದ ಮೇಲೆ ಬಂಗಾರದ ರಥ ಮಾಡಿಕೊಡುತ್ತೇನೆ ಎಂದು ಧರಂ ಸಿಂಗ್ ಮಾತು ಕೊಟ್ಟಿದ್ದರು. ಮಾತು ಕೊಟ್ಟ ಬಳಿಕ ಅವರಿಗೆ ಅಧಿಕಾರಿಗಳು ಯಾರೂ ಕೂಡ ಸಹಕಾರ ಕೊಡಲಿಲ್ಲ. ಅಲ್ಲದೆ ಮುಂದಿನ ಸರ್ಕಾರ ಕೂಡ ಅದನ್ನು ಜಾರಿ ಮಾಡಿಲ್ಲ. ಸದ್ಯ ಈ ಬಗ್ಗೆ ಕುಮಾರಸ್ವಾಮಿ ನನ್ನ ಜೊತೆ ಈ ಬಗ್ಗೆ ಮಾತುಕತೆ ನಡೆಸಿ, ಚಾಲನೆ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.

  • ಖರ್ಗೆಯನ್ನು ಸೋಲಿಸಲು ಮುಂದಾದ ಕುಚುಕು ಗೆಳೆಯ ಧರಂಸಿಂಗ್ ಪುತ್ರ?

    ಖರ್ಗೆಯನ್ನು ಸೋಲಿಸಲು ಮುಂದಾದ ಕುಚುಕು ಗೆಳೆಯ ಧರಂಸಿಂಗ್ ಪುತ್ರ?

    ಕಲಬುರಗಿ: ಕಲಬುರಗಿ ಲೋಕಸಭಾ ಕ್ಷೇತ್ರದ ರಾಷ್ಟ್ರವ್ಯಾಪಿ ಚರ್ಚೆಗೆ ಒಳಗಾಗುತ್ತಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಉಮೇಶ್ ಜಾಧವ್ ಈ ಬಾರಿಯ ಕಮಲದ ಅಭ್ಯರ್ಥಿ ಎಂದು ಬಿಂಬಿತರಾಗಿದ್ದಾರೆ. ಇದೀಗ ತಂದೆಯ ಕುಚುಕು ಗೆಳೆಯ ಮಲ್ಲಿಕಾರ್ಜುನ ಖರ್ಗೆಯರನ್ನು ಸೋಲಿಸಲು ಮಾಜಿ ಸಿಎಂ ಧರಂಸಿಂಗ್ ಪುತ್ರ ಅಜಯ್ ಸಿಂಗ್ ಮುಂದಾದ್ರಾ ಎಂದು ಕೈ ವಲಯದಲ್ಲಿ ಚರ್ಚೆ ಶುರುವಾಗಿದೆ.

    ಉಮೇಶ್ ಜಾಧವ್ ಬಿಜೆಪಿ ಸೇರ್ಪಡೆ ಬಳಿಕ ನನ್ನ ಬಳಿಯೂ ಅಸ್ತ್ರಗಳಿವೆ. ಸಮಯ ಬಂದಾಗ ಪ್ರಯೋಗಿಸುತ್ತೇನೆ ಎಂದು ಹೇಳಿಕೆಯನ್ನು ನೀಡಿದ್ದರು. ಈ ಸುದ್ದಿಯನ್ನು ಪಬ್ಲಿಕ್ ಟಿವಿ ವೈಬ್‍ಸೈಟ್ ಪ್ರಕಟಿಸಿತ್ತು. ಈ ಸುದ್ದಿಗೆ ಫೇಸ್‍ಬುಕ್ ನಲ್ಲಿ ಶಾಸಕ ಅಜಯ್ ಸಿಂಗ್ ಖಾತೆಯಿಂದ ‘ಗ್ರೇಟ್ ಜಾಧವ್ ಜೀ’ ಎಂದು ಕಮೆಂಟ್ ಮಾಡುವ ಮೂಲಕ ಪರೋಕ್ಷವಾಗಿ ಬಿಜೆಪಿ ಬೆಂಬಲಕ್ಕೆ ನಿಂತ್ರಾ ಎಂಬ ಪ್ರಶ್ನೆ ಹುಟ್ಟುಹಾಕಿದೆ.

    ಅಜಯ್ ಸಿಂಗ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉಮೇಶ್ ಜಾಧವ್ ಅವರನ್ನು ಬೆಂಬಲಿಸುತ್ತಾರಾ ಎಂಬುದರ ಬಗ್ಗೆ ತೀವ್ರ ಚರ್ಚೆಗಳು ಆರಂಭಗೊಂಡಿವೆ. ಇತ್ತ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಮತ್ತು ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್ ಇಬ್ಬರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಚುನಾವಣಾ ತಂತ್ರಗಳನ್ನು ರಚಿಸುತ್ತಿದ್ದಾರೆ.

    ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎದುರು ಡಾ.ಉಮೇಶ್ ಜಾಧವ್ ಸ್ಪರ್ಧೆಯಿಂದ ಕಲಬುರಗಿ ಲೋಕಸಭೆ ಇದೀಗ ಸ್ಟಾರ್ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಈ ಬಾರಿ ಕನಿಷ್ಟ ಅಂದ್ರು 200 ಕೋಟಿಗೂ ಅಧಿಕ ಕುರುಡು ಕಾಂಚಾಣ ಹರಿಯಲ್ಲಿದೆಯಂತೆ. ಹೀಗಾಗಿ ಚುನಾವಣಾ ಆಯೋಗ ಈ ಕ್ಷೇತ್ರದ ಮೇಲೆ ಹದ್ದಿನ ಕಣ್ಣಿಟ್ಟಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಅಜಯ್ ಸಿಂಗ್, ಕಮೆಂಟ್ ಬಂದಿರುವ ಫೇಸ್ ಬುಕ್ ಖಾತೆ ನನ್ನದಲ್ಲ ಎಂದು  ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಧರಂಸಿಂಗ್ ವಿಚಾರಕ್ಕೆ ಕಲಾಪದಲ್ಲಿ ಕೋಲಾಹಲ

    ಧರಂಸಿಂಗ್ ವಿಚಾರಕ್ಕೆ ಕಲಾಪದಲ್ಲಿ ಕೋಲಾಹಲ

    ಬೆಂಗಳೂರು: ಇಂದು ನಡೆದ ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಮಾಜಿ ಮುಖ್ಯಮಂತ್ರಿ ದಿ.ಧರಂಸಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಕೆಲಕಾಲ ನಾಯಕರ ನಡುವೆಯೇ ಕೋಲಾಹಲ ನಡೆಯಿತು.

    ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮಾತನಾಡುವಾಗ, ಕುಮಾರಸ್ವಾಮಿಯವರು ಅಂದು ಮಾಜಿ ಮುಖ್ಯಮಂತ್ರಿ ಧರಂಸಿಂಗ್‍ವರ ಬೆನ್ನಿಗೆ ಚೂರಿ ಹಾಕಿ ದ್ರೋಹ ಮಾಡಿ ನೀವು ಅವರ ಸಾವಿಗೆ ಕಾರಣವಾಗಿದ್ದೀರಿ. ಕಾಂಗ್ರೆಸ್‍ಗೆ ಕೈ ಕೊಟ್ಟು ನಮ್ಮ ಜೊತೆ ಬಂದು ಸಿಎಂ ಆದವರು ನೀವು ಎಂದು ವಾಗ್ದಾಳಿ ನಡೆಸಿದರು.

     

    ಯಡಿಯೂರಪ್ಪರ ಮಾತಿಗೆ ಆಕ್ಷೇಪ ವ್ಯಕ್ತಡಿಸಿದ ಸಿಎಂ ಮತ್ತು ಇತರೆ ಕಾಂಗ್ರೆಸ್ ನಾಯಕರು, ಸಾವಿಗೆ ಕಾರಣ ಎಂಬ ಪದ ಅಸಂವಿಧಾನಿಕ. ಬಿಜೆಪಿಯವರು ಸಾವಿನ ರಾಜಕಾರಣ ಮಾಡುತ್ತಿದ್ದಾರೆ ತಿರುಗೇಟು ನೀಡಲು ಆರಂಭಿಸಿದರು. ಈ ವೇಳೆ ಮಾಜಿ ಸಚಿವ ರೇಣುಕಾಚಾರ್ಯ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಕೆಲಕಾಲ ಮಾತಿನ ಚಕಮಕಿ ಏರ್ಪಟ್ಟಿತ್ತು. ಇತ್ತ ಕಲಾಪದಲ್ಲಿದ್ದ ಧರಂಸಿಂಗ್ ಪುತ್ರ ಅಜಯ್ ಸಿಂಗ್ ಯಡಿಯೂರಪ್ಪರ ಮಾತಿಗೆ ಕಿಡಿಕಾರಿದ್ರು.

    ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಮಾತಿನ ಚಕಮಕಿ ಹೆಚ್ಚಾಗುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಸ್ಪೀಕರ್ ರಮೇಶ್ ಕುಮಾರ್, ಧರಂಸಿಂಗ್ ಅವರ ವಿಚಾರ ಇಲ್ಲಿ ಅಪ್ರಸ್ತುತ ಬಿಜೆಪಿ-ಜೆಡಿಎಸ್ ಸರ್ಕಾರ ರಚನೆಯಾದ 11 ವರ್ಷಗಳ ನಂತರ ಸ್ವರ್ಗವಾಸಿಗಳಾಗಿದ್ದಾರೆ. ಸಮ್ಮಿಶ್ರ ಸರ್ಕಾರ ರಚನೆಯಾದ ಒಂದೆರೆಡು ತಿಂಗಳಿಗೆ ದಿವಂಗತರಾಗಿದ್ದರೆ ಯಡಿಯೂರಪ್ಪರ ಮಾತು ಪೂರಕ ಅಂತಾ ಹೇಳಬಹುದು ಎಂದು ಹೇಳಿ ಚರ್ಚೆಯನ್ನು ನಿಯಂತ್ರಣಗೊಳಿಸಿ ಕಲಾಪ ಸುಗಮವಾಗಿ ಸಾಗುವವಂತೆ ನೋಡಿಕೊಂಡರು.

    https://youtu.be/3-xpV9vWtNo

  • ಹೃದಯಾಘಾತಕ್ಕೆ ಒಳಗಾಗಿದ್ದ ಕಲಬುರಗಿಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಇನ್ನಿಲ್ಲ

    ಹೃದಯಾಘಾತಕ್ಕೆ ಒಳಗಾಗಿದ್ದ ಕಲಬುರಗಿಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಇನ್ನಿಲ್ಲ

    ಕಲಬುರಗಿ: ಮಾಜಿ ಸಿಎಂ ಧರಂ ಸಿಂಗ್ ಸಾವಿನ ಸುದ್ದಿ ತಿಳಿದು ಹೃದಯಾಘಾತಕ್ಕೆ ಒಳಗಾಗಿದ್ದ, ಕಲಬುರಗಿಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವಿದ್ಯಾಧರ ಗುರೂಜಿ ವಿಧಿವಶರಾಗಿದ್ದಾರೆ.

    ಜುಲೈ 28 ರಂದು ಧರಂ ಸಿಂಗ್ ಅವರ ಅಂತಿಮ ದರ್ಶನ ಪಡೆದು ಹಿಂದಿರುಗುತ್ತಿರುವಾಗ ವಿದ್ಯಾಧರ ಗೂರೂಜಿ ಹೃದಯಾಘಾತಕ್ಕೆ ಒಳಗಾಗಿದ್ದರು. ನಂತರ ಅವರನ್ನು ಕಲಬುರಗಿಯ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಆದ್ರೆ ಚಿಕಿತ್ಸೆ ಫಲಕಾರಿಯಾಗೇ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿಯೇ ನಿಧನರಾಗಿದ್ದಾರೆ.

    ಇದನ್ನೂ ಓದಿ: ಕಲಬುರಗಿಯಲ್ಲಿ ಧರಂ ಸಿಂಗ್ ಅಂತಿಮ ದರ್ಶನ- ಎನ್‍ವಿ ಮೈದಾನದಲ್ಲಿ ಅಭಿಮಾನಿ ಸಾಗರ

     

     

     

  • ಕಲಬುರಗಿಯಲ್ಲಿ ಧರಂ ಸಿಂಗ್ ಅಂತಿಮ ದರ್ಶನ- ಎನ್‍ವಿ ಮೈದಾನದಲ್ಲಿ ಅಭಿಮಾನಿ ಸಾಗರ

    ಕಲಬುರಗಿಯಲ್ಲಿ ಧರಂ ಸಿಂಗ್ ಅಂತಿಮ ದರ್ಶನ- ಎನ್‍ವಿ ಮೈದಾನದಲ್ಲಿ ಅಭಿಮಾನಿ ಸಾಗರ

    – ಸಂಜೆ ನೆಲೋಗಿಯಲ್ಲಿ ಅಂತ್ಯಸಂಸ್ಕಾರ

    ಕಲಬುರಗಿ: ಗುರುವಾರದಂದು ಹೃದಯಾಘಾತದಿಂದ ನಿಧನರಾದ ಮಾಜಿ ಸಿಎಂ ಧರಂ ಸಿಂಗ್ ಅವರ ಅಂತ್ಯಸಂಸ್ಕಾರ ಇಂದು ನೆರವೇರಲಿದೆ. ಈಗಾಗಲೇ ಪಾರ್ಥಿವ ಶರೀರ ಕಲಬುರುಗಿಯಲ್ಲಿದೆ.

    ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಪಾರ್ಥಿವ ಶರೀರ ಬೀದರ್ ಏರ್‍ಪೋರ್ಟ್ ತಲುಪಿತ್ತು. 8.30ರಿಂದ ಸುಮಾರು 9.45ರ ತನಕ ಏರ್‍ಪೋರ್ಟ್ ಹೊರಗೆ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಸಾವಿರಾರು ಮಂದಿ ಅಂತಿಮ ದರ್ಶನ ಪಡೆದ್ರು. ಬಳಿಕ ಬೀದರ್‍ನಿಂದ ಕಲಬುರಗಿ ಕಡೆ ಪಾರ್ಥಿವ ಶರೀರ ರಸ್ತೆ ಮಾರ್ಗವಾಗಿ ಸಾಗಿತು. ಅಣದುರ್ಗ, ಹಳ್ಳಿಖೇಡ್, ಹುಮ್ನಾಬಾದ್ ಮಾರ್ಗದುದ್ದಕ್ಕೂ ಸಾವಿರಾರು ಜನರು ಧರಂ ಸಿಂಗ್ ಅಂತಿಮ ದರ್ಶನ ಪಡೆದ್ರು.

    ಇಂದು ಬೆಳಗ್ಗೆಯಿಂದ ಕಲಬುರಗಿಯ ಎನ್‍ವಿ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 12.30ರ ವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. 1.30ಕ್ಕೆ ಧರ್ಮಸಿಂಗ್ ಕರ್ಮಭೂಮಿ, ಅವರ ಕ್ಷೇತ್ರವಾದ ಜೇವರ್ಗಿಗೆ ಪಾರ್ಥೀವ ಶರೀರ ರವಾನೆ ಆಗಲಿದೆ. ಇಲ್ಲೇ ಮಧ್ಯಾಹ್ನ 3 ಗಂಟೆವರೆಗೆ ಅಂತಿಮ ದರ್ಶನಕ್ಕೆ ಜಿಲ್ಲಾಡಳಿತ ಸಕಲ ವ್ಯವಸ್ಥೆ ಮಾಡಿದೆ. ಮಧ್ಯಾಹ್ನ 3 ಗಂಟೆಗೆ ಜೇವರ್ಗಿಯಿಂದ 35 ಕಿಲೋ ಮೀಟರ್ ದೂರವಿರುವ ಸ್ವಗ್ರಾಮ ನೆಲೋಗಿಗೆ ಪಾರ್ಥಿವ ಶರೀರ ಸಾಗಲಿದೆ. ಸಂಜೆ 4 ರಿಂದ 5 ಗಂಟೆವರೆಗೆ ಇಲ್ಲೇ ಅಂತಿಮ ದರ್ಶನಕ್ಕೆ ಇಡಲಾಗುತ್ತೆ. ಬಳಿಕ ಸಂಜೆ 6 ಗಂಟೆ ಸುಮಾರಿಗೆ ರಜಪೂತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಲಿದೆ.

    ಕಲಬುರುಗಿಯ ರಿಂಗ್ ರೋಡ್‍ನಲ್ಲಿರೋ ನಾಗನಹಳ್ಳಿಯಲ್ಲಿರುವ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡಲು ಧರ್ಮಸಿಂಗ್ ಕುಟುಂಬ ಈ ಮೊದಲು ನಿರ್ಧರಿಸಿತ್ತು. ಆದರೆ ಜೇವರ್ಗಿ ಹಾಗೂ ನೆಲೋಗಿ ಜನರು ನೆಲೋಗಿಯಲ್ಲೇ ಅಂತ್ಯಸಂಸ್ಕಾರ ಮಾಡಬೇಕೆಂದು ಪಟ್ಟು ಹಿಡಿದು ಅತ್ತು, ಕರೆದು ಗೋಳಾಡಿದ್ರು. ಪ್ರತಿಭಟನೆ ಕೂಡಾ ಮಾಡಿದ್ರು. ಆಮೇಲೆ ಹುಟ್ಟೂರು ನೆಲೋಗಿಯಲ್ಲೇ ಅಂತ್ಯಸಂಸ್ಕಾರ ಮಾಡಲು ಕುಟುಂಬ ನಿರ್ಧರಿಸಿತು.

    ಇಂದು ಸಂಜೆ 6 ಗಂಟೆ ಬಳಿಕ ನೆಲೋಗಿಯಲ್ಲಿ ಅಂತಿಮ ಸಂಸ್ಕಾರದ ವಿಧಿವಿಧಾನಗಳು ಶುರುವಾಗಲಿವೆ. ರಜಪೂತ ಸಂಪ್ರದಾಯದಂತೆ ಧರ್ಮಸಿಂಗ್ ದೇಹಕ್ಕೆ ಅಗ್ನಿಸ್ಪರ್ಶ ಮಾಡಲಾಗುತ್ತೆ. ಇದಕ್ಕಾಗಿ ಮಹರಾಷ್ಟ್ರದ ಲಾತೂರ್‍ನಿಂದ ಗಂಧದ ಕಟ್ಟಿಗೆ ಕೂಡಾ ತರಿಸಲಾಗಿದೆ. ಸಚಿವ ಶರಣ ಪ್ರಕಾಶ್ ಪಾಟೀಲ್, ಅಂತ್ಯಸಂಸ್ಕಾರದ ಜವಾಬ್ದಾರಿ ಹೊತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಇಡೀ ಸಚಿವ ಸಂಪುಟವೇ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲಿದೆ ಎನ್ನಲಾಗಿದೆ.

  • ಧರಂ ಸಿಂಗ್ ಜೇವರ್ಗಿ ಕ್ಷೇತ್ರದ ಮತ ಪ್ರಭುಗಳಿಗೆ ಕೊನೇ ಬಾರಿ ನಮನ ಸಲ್ಲಿಸಿದ್ದು ಹೀಗೆ

    ಧರಂ ಸಿಂಗ್ ಜೇವರ್ಗಿ ಕ್ಷೇತ್ರದ ಮತ ಪ್ರಭುಗಳಿಗೆ ಕೊನೇ ಬಾರಿ ನಮನ ಸಲ್ಲಿಸಿದ್ದು ಹೀಗೆ

    ಕಲಬುರಗಿ: 2014ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಧರಂ ಸಿಂಗ್ ಪುತ್ರ ಅಜಯ್ ಸಿಂಗ್ ಜೇವರ್ಗಿ ಕ್ಷೇತ್ರದಿಂದ 37 ಸಾವಿರ ಮತಗಳಿಂದ ಜಯಗಳಿಸಿದ್ದರು. ಪುತ್ರನ ಗೆಲುವಿನ ಬಳಿಕ ಮಾತನಾಡಿದ್ದ ಧರಂ ಸಿಂಗ್ ಇದು ನನ್ನ ಕೊನೆಯ ಭಾಷಣ ಎಂದು ಕಣ್ಣೀರು ಹಾಕಿದ್ದರು.

    2014ರ ಚುನಾವಣೆಯಲ್ಲಿ ಧರಂ ಸಿಂಗ್ ಪುತ್ರ ಅಜಯ್ ಸಿಂಗ್ 37 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದರು. ನಂತರ ಕ್ಷೇತ್ರದ ಜನರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಧರಂಸಿಂಗ್ ಇದು ನನ್ನ ಕೊನೆಯ ಭಾಷಣ, ಇನ್ನು ಮುಂದೆ ಕ್ಷೇತ್ರದ ಜನ ನನ್ನ ಪುತ್ರ ಅಜಯ್ ಸಿಂಗ್ ಅವರಿಗೆ ಆರ್ಶಿರ್ವಾದ ಮಾಡಬೇಕು ಅಂತಾ ಕಣ್ಣೀರು ಹಾಕಿದ್ದರು.

    ಧರಂಸಿಂಗ್ ಅವರ ಮಾತು ಕೇಳಿದ ಅವರ ಪುತ್ರ ಅಜಯ್ ಸಿಂಗ್ ಹಾಗು ಕ್ಷೇತ್ರದ ಜನರಲ್ಲಿ ಸಹ ಕಣ್ಣಿರು ತುಂಬಿ ಬಂದಿತ್ತು. ಧರಂಸಿಂಗ್ ನಂತರ ಅವರ ಪುತ್ರ ಅಜಯ್ ಸಿಂಗ್ ತಂದೆಯ ಮಾತಿಗೇ ಕಣ್ಣಿರಿನಲ್ಲಿಯೇ ಉತ್ತರ ಕೊಟ್ಟಿದ್ದರು.

     

  • ಧರಂಸಿಂಗ್ ಉತ್ತಮ ಆಡಳಿತಗಾರರು, ಅವರ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟ: ಹೆಚ್‍ಡಿಡಿ

    ಧರಂಸಿಂಗ್ ಉತ್ತಮ ಆಡಳಿತಗಾರರು, ಅವರ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟ: ಹೆಚ್‍ಡಿಡಿ

    ವಿಜಯಪುರ: ಮಾಜಿ ಸಿಎಂ ಧರಂಸಿಂಗ್ ನಿಧನಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಂತಾಪ ಸೂಚಿಸಿದ್ದಾರೆ.

    ಇಂದು ವಿಜಯಪುರದಲ್ಲಿ ಮಾತನಾಡಿದ ಅವರು, ನಾನು ಧರಂ ಸಿಂಗ್ ಹಲವು ವರ್ಷಗಳ ಸ್ನೇಹಿತರು. ಅವರ ಆತ್ಮಕ್ಕೆ ಶಾಂತಿ ಕೋರುತ್ತೇವೆ. ಧರಂಸಿಂಗ್ ಒಬ್ಬ ಒಳ್ಳೆಯ ನಾಯಕ. ಅವರು ಮೊದಲ ಬಾರಿಗೆ ಶಾಸಕರಾದಾಗ ನಾನು ವಿರೋಧ ಪಕ್ಷದ ನಾಯಕನಾಗಿದ್ದೆ. ಅವರು ಉತ್ತಮ ಆಡಳಿತಗಾರರು ಅಂತಾ ಹೇಳಿದ್ರು.

    ಅವರ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನ ಭಗವಂತ ನೀಡಲಿ ಅಂತಾ ಸಂತಾಪ ಸೂಚಿಸಿದ್ರು.

    ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಧರಂ ಸಿಂಗ್ ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ  ಗುರುವಾರವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

     ಕಲಬುರಗಿ ಜಿಲ್ಲೆಯ, ಜೇವರ್ಗಿ ತಾಲೂಕಿನ, ನೇಲೋಗಿ ಗ್ರಾಮದಲ್ಲಿ 1936 ರಲ್ಲಿ ಜನಿಸಿದ ಧರಂ ಸಿಂಗ್, ಹೈದರಾಬಾದ್ ನ ಓಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಎಂಎ ಹಾಗೂ ಎಲ್‍ಎಲ್‍ಬಿ ಪದವಿಗಳನ್ನು ಪಡೆದಿದ್ದಾರೆ. ವಕೀಲರಾಗಿ ಸ್ವಲ್ಪ ಕಾಲ ಕಾರ್ಯ ನಿರ್ವಹಿಸಿದ ಮೇಲೆ 60 ರ ದಶಕದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾದರು.

    ಜೇವರ್ಗಿ ವಿಧಾನಸಭಾ ಕ್ಷೇತ್ರದಿಂದ ಸತತ 7 ಬಾರಿ ಚುನಾಯಿತರಾಗಿದ್ದ ಇವರು 1980 ರಲ್ಲಿ ಗುಲ್ಬರ್ಗ ಕ್ಷೇತ್ರದಿಂದ ಲೋಕಸಭೆಗೆ ಸಹ ಚುನಾಯಿತರಾಗಿದ್ದರು.

    2004ರ ಮೇ 28 ರಿಂದ ಜನವರಿ 2016ರವರೆಗೆ ಧರಂ ಸಿಂಗ್ ಮುಖ್ಯಮಂತ್ರಿಯಾಗಿ ಕರ್ನಾಟಕವನ್ನು ಮುನ್ನಡೆಸಿದ್ದರು. ಮುಖ್ಯಮಂತ್ರಿಯಾಗುವ ಮೊದಲು ಕರ್ನಾಟಕ ಸರ್ಕಾರದಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿದ್ದರು.

    ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ಲೋಕೋಪಯೊಗಿ ಖಾತೆಯನ್ನು ನಿರ್ವಹಿಸಿದ್ದರು. ಇದಕ್ಕಿಂತ ಮೊದಲು ಗೃಹ ಖಾತೆ, ಸಮಾಜ ಸುಧಾರಣಾ ಖಾತೆ, ಅಬಕಾರಿ ಖಾತೆ ಮೊದಲಾದ ಖಾತೆಗಳನ್ನು ನಿರ್ವಹಿಸಿದ್ದರು. ಕೆಪಿಸಿಸಿ (ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ) ಯ ಅಧ್ಯಕ್ಷತೆಯನ್ನು ಸಹ ವಹಿಸಿದ್ದರು.

  • ರಾಮನಗರ: ಧರಂ ಸಿಂಗ್ ಸಾವಿನ ವಿಚಾರ ಗೊತ್ತಿದ್ರೂ ಕಾಂಗ್ರೆಸ್‍ನಲ್ಲಿ ಸಂಭ್ರಮಾಚರಣೆ

    ರಾಮನಗರ: ಧರಂ ಸಿಂಗ್ ಸಾವಿನ ವಿಚಾರ ಗೊತ್ತಿದ್ರೂ ಕಾಂಗ್ರೆಸ್‍ನಲ್ಲಿ ಸಂಭ್ರಮಾಚರಣೆ

    ರಾಮನಗರ: ಮಾಜಿ ಸಿಎಂ, ಕಾಂಗ್ರೆಸ್ ಹಿರಿಯ ಮುಖಂಡ ಎನ್.ಧರಂ ಸಿಂಗ್ ನಿಧನದ ನಡುವೆಯೂ ರಾಮನಗರ ಜಿಲ್ಲಾ ಕಾಂಗ್ರೆಸ್‍ನಲ್ಲಿ ಮಾತ್ರ ಪದಗ್ರಹಣ ಸಂಭ್ರಮಾಚರಣೆ ನಡೆಯುತ್ತಿದೆ.

    ಇಂದು ಜಿಲ್ಲೆಯ ವಿವಿಧ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಸಮಾರಂಭ ನಡೆಯುತ್ತಿತ್ತು. ಧರಂ ಸಿಂಗ್ ನಿಧನದ ಸುದ್ದಿ ತಿಳಿದ ಬಳಿಕವೂ ಕಾಂಗ್ರೆಸ್‍ನ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಪದಗ್ರಹಣ ಕಾರ್ಯಕ್ರಮ ನಡೆಸಿದ್ದಾರೆ.

    ಸಮಾರಂಭದಲ್ಲಿ ಮಾಜಿ ಶಾಸಕ ಹಾಗೂ ಹಾಲಿ ಎಂಎಲ್‍ಸಿಗಳಾದ ಸಿ.ಎಂ.ಲಿಂಗಪ್ಪ, ರವಿ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿಯಹುಲ್ಲಾ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದೆ.

    ಕಾರ್ಯಕ್ರಮ ಆರಂಭವಾದ ನಂತರ ಮಾಜಿ ಮುಖ್ಯಮಂತ್ರಿಗಳ ಸಾವಿನ ಸುದ್ದಿ ತಿಳಿದಿದೆ. ಕೊನೆಯ ಗಳಿಗೆಯಲ್ಲಿ ಕಾರ್ಯಕ್ರಮವನ್ನು ರದ್ದು ಮಾಡಲು ಆಗಲಿಲ್ಲ. ಒಂದು ವೇಳೆ ಪದಗ್ರಹಣವನ್ನು ಮುಂದೂಡಿದರೆ 15 ದಿನಗಳ ಮುಂದೂಡಬೇಕಾಗುತ್ತದೆ ಎಂದು ಎಂಎಲ್‍ಸಿ ಸಿ.ಎಂ.ಲಿಂಗಪ್ಪ ಹೇಳಿದ್ದಾರೆ.