Tag: devotees died

  • ಹೊಸ ವರ್ಷದಂದೇ ದುರಂತ – ವೈಷ್ಣೋ ದೇವಿ ದೇಗುಲದಲ್ಲಿ ಕಾಲ್ತುಳಿತದಿಂದ 12 ಮಂದಿ ದುರ್ಮರಣ

    ಶ್ರೀನಗರ: ಹೊಸ ವರ್ಷ ಎಲ್ಲರಿಗೂ ಹರುಷ, ಶುಭ ತರಲೆಂದು ಎಲ್ಲರೂ ಪ್ರಾರ್ಥಿಸುತ್ತಾರೆ. ಆದರೆ ಹೊಸ ವರ್ಷದ ಆರಂಭದ ಸಂದರ್ಭದಲ್ಲೇ ದುರಂತ ಘಟನೆಯೊಂದು ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ಮಾತಾ ವೈಷ್ಣೋ ದೇವಿ ದೇಗುಲದಲ್ಲಿ ಕಾಲ್ತುಳಿತದಿಂದಾಗಿ 12 ಯಾತ್ರಾರ್ಥಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

    ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ದೇವರ ದರ್ಶನಕ್ಕಾಗಿ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು. ಈ ವೇಳೆ ನೂಕಾಟ ಆಗಿ ಕೆಲವರು ಕಾಲ್ತುಳಿತದಿಂದ ಮೃತಪಟ್ಟಿದ್ದಾರೆ. ಇನ್ನೂ ಹಲವು ಮಂದಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿ- ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಯುವಕರು

    ವೈಷ್ಣೋ ದೇವಿ ಭವನಕ್ಕೆ ಅನುಮತಿ ಇಲ್ಲದೇ ಸಾವಿರಾರು ಭಕ್ತರ ದಂಡು ಆಗಮಿಸಿದೆ. ಈ ವೇಳೆ ನೂಕುನುಗ್ಗಲಿನಿಂದ ಹಲವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ದುರಂತಕ್ಕೆ ಪ್ರಧಾನಿ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಮಾತಾ ವೈಷ್ಣೋ ದೇವಿ ಭವನದಲ್ಲಿ ನೂಕುನುಗ್ಗಲು ಉಂಟಾದ ಪರಿಣಾಮ ಪ್ರಾಣಹಾನಿಯಾಗಿರುವುದು ಅತೀವ ದುಃಖ ತಂದಿದೆ ಎಂದು ದುಃಖತಪ್ತ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಳೆದ ವರ್ಷದಂತೆ ಈ ಬಾರಿಯೂ ಸರಳವಾಗಿಯೇ ಹೊಸ ವರ್ಷ ಆಚರಣೆ

    ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಮತ್ತು ಗಾಯಾಳುಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಪ್ರಧಾನ ಮಂತ್ರಿ ವಿಪತ್ತು ಪರಿಹಾರ ನಿಧಿಯಿಂದಲೂ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಮತ್ತು ಗಾಯಾಳುಗಳಿಗೆ ತಲಾ 50,000 ರೂ. ಪರಿಹಾರ ಘೋಷಿಸಲಾಗಿದೆ.

    ಮಾತಾ ವೈಷ್ಣೋ ದೇವಿ ದೇಗುಲದಲ್ಲಿ ಕಾಲ್ತುಳಿತದಿಂದ ಉಂಟಾದ ದುರಂತ ಪರಿಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ವೈಯಕ್ತಿಕವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದು, ಸೂಕ್ತ ನಿಗಾ ವಹಿಸಲು ತಿಳಿಸಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ತಿಳಿಸಿದ್ದಾರೆ.