Tag: devotee

  • ಜನ ಈಗ ಸಾಹುಕಾರರಾಗಿದ್ದಾರೆ, ಹೀಗಾಗಿ ಅನ್ನದ ಬೆಲೆ ಗೊತ್ತಿಲ್ಲ: ಸಿದ್ದಗಂಗಾ ಮಠದ ವಿದ್ಯಾರ್ಥಿ

    ಜನ ಈಗ ಸಾಹುಕಾರರಾಗಿದ್ದಾರೆ, ಹೀಗಾಗಿ ಅನ್ನದ ಬೆಲೆ ಗೊತ್ತಿಲ್ಲ: ಸಿದ್ದಗಂಗಾ ಮಠದ ವಿದ್ಯಾರ್ಥಿ

    ತುಮಕೂರು: ಭಕ್ತರೊಬ್ಬರು ಅನ್ನ ಚೆಲ್ಲಲು ಮುಂದಾದಾಗ ಸಿದ್ದಗಂಗಾ ಮಠದ ಬಾಲಕ ಅವರಿಗೆ ಅನ್ನದ ಮಹತ್ವವನ್ನು ತಿಳಿಸಿದ ವಿಡಿಯೋ ವೈರಲ್ ಆಗಿದೆ. ಈ ವಿಚಾರದ ಬಗ್ಗೆ 8ನೇ ತರಗತಿ ವಿದ್ಯಾರ್ಥಿ ಶಿವು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿ ಜನ ಈಗ ದುಡಿದು ಸಾಹಕಾರರಾಗಿದ್ದಾರೆ. ಹೀಗಾಗಿ ಅನ್ನದ ಬೆಲೆ ಗೊತ್ತಿಲ್ಲ ಎಂದು ತಿಳಿಸಿದ್ದಾನೆ.

    ಶಿವಕುಮಾರ ಸ್ವಾಮೀಜಿಯವರು ಶಿವೈಕ್ಯರಾದ ಬಳಿಕ ಸಿದ್ದಗಂಗಾ ಮಠಕ್ಕೆ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ದಾಸೋಹ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯಲು ಮಠದ ಸಿಬ್ಬಂದಿಯ ಜೊತೆ ಮಕ್ಕಳು ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದರು.

    ಈ ಸಂದರ್ಭದಲ್ಲಿ ಭಕ್ತರ ಜೊತೆಗಿನ ತನ್ನ ಸಂಭಾಷಣೆಯ ವಿಡಿಯೋ ವೈರಲ್ ಆಗಿದ್ದಕ್ಕೆ ಪ್ರತಿಕ್ರಿಯಿಸಿದ ಶಿವು, ಶ್ರೀಗಳ ಅಂತಿಮ ದರ್ಶನಕ್ಕೆ ಬಂದ ಭಕ್ತರು ಮಂಗಳವಾರ ಎಂಟು ಗಂಟೆಯಿಂದ ಅನ್ನವನ್ನು ವ್ಯರ್ಥ ಮಾಡುತ್ತಿದ್ದರು. ಈ ವಿಚಾರ ಮಠದವರಿಗೆ ಗೊತ್ತಾಗಿ ಯಾರೂ ಊಟವನ್ನು ವ್ಯರ್ಥ ಮಾಡದಂತೆ ನೋಡಿಕೋ ಎಂದು ನನ್ನಲ್ಲಿ ಹೇಳಿದರು. ಈ ಸಮಯದಲ್ಲಿ ಭಕ್ತರೊಬ್ಬರು ಸಾಂಬರ್ ಇಲ್ಲ ಎಂದು ಹೇಳಿ ಅನ್ನ ಚೆಲ್ಲಲು ಬಂದಾಗ ನಾನು ಅನ್ನವನ್ನು ವ್ಯರ್ಥಮಾಡಬೇಡಿ ಎಂದು ಹೇಳಿದೆ ಎಂದು ಘಟನೆಯನ್ನು ವಿವರಿಸಿದ್ದಾನೆ.

    ಮಂಗಳವಾರ ಬಹಳಷ್ಟು ಭಕ್ತರು ಜಾಸ್ತಿ ಅನ್ನ ಬೇಕು ಎಂದು ಹಾಕಿಸಿಕೊಂಡು ಬಳಿಕ ಎಸೆಯುತ್ತಿದ್ದರು. ಅನ್ನವನ್ನು ಎಸೆಯುತ್ತಿದ್ದಾಗ ಎಷ್ಟು ಬೇಕೋ ಅಷ್ಟು ಅನ್ನವನ್ನು ಮಾತ್ರ ಹಾಕಬೇಕು ಎಂದು ಹೇಳುತ್ತಿದ್ದೆ. ಭಕ್ತರು ಎರಡನೇ ಸರಿ ಹೋದರೂ ಅವರಿಗೆ ಊಟ ಕೊಡುತ್ತಿದ್ದರು. ಆದರೆ ಕೆಲವರು ಮತ್ತೆ ಸಾಂಬರ್ ಹಾಕಿಸಿಕೊಳ್ಳಬೇಕೆಂದರೆ ಸರದಿಯಲ್ಲಿ ನಿಲ್ಲಬೇಕು. ಯಾರು ಸರದಿಯಲ್ಲಿ ನಿಲ್ಲುತ್ತಾರೆ ಎಂದು ಭಾವಿಸಿ ಅನ್ನವನ್ನು ಚೆಲ್ಲುತ್ತಿದ್ದರು. ಬಳಿಕ ನಾನೇ ಅವರ ತಟ್ಟೆಗೆ ಸಾಂಬಾರ್ ಹಾಕಿಸಿಕೊಡುತ್ತಿದ್ದೆ. ಕೆಲವರು ನನ್ನ ಜೊತೆ ಅನ್ನ ಸೇವಿಸಲು ಸಾಧ್ಯವಿಲ್ಲ ಎಂದು ವಾದಿಸುತ್ತಿದ್ದರು. ತಿನ್ನುವುದಕ್ಕೆ ಶಕ್ತಿ ಇಲ್ಲ ಎಂದು ಭಕ್ತರು ಹೇಳುತ್ತಿದ್ದರೂ ನಾನು ಎಸೆಯಲು ಬಿಡಲಿಲ್ಲ. ನೀವು ಅನ್ನ ತಿನ್ನುವವರೆಗೂ ನಾನು ತಟ್ಟೆಯನ್ನು ಎಸೆಯಲು ಬಿಡಲಿಲ್ಲ ಎಂದು ಭಕ್ತರಿಗೆ ಹೇಳುತ್ತಿದ್ದೆ ಎಂದು ಶಿವು ಆ ಸಂದರ್ಭವನ್ನು ವಿವರಿಸಿದ್ದಾನೆ.


    ನಗರಗಳಲ್ಲಿ ಹೆಚ್ಚು ಹಣ ನೀಡುವುದರಿಂದ ಜನ ಈಗ ಸಾಹುಕಾರರಾಗಿದ್ದಾರೆ. ಹಾಗಾಗಿ ಜನರಿಗೆ ಅನ್ನದ ಬೆಲೆ ಗೊತ್ತಿಲ್ಲ. ಜನಗಳು ಈಗ ನೀರು ಇಲ್ಲ ಎಂದು ಪರದಾಡುತ್ತಾರೆ. ಮುಂದೆ ಅನ್ನಕ್ಕಾಗಿಯೂ ಪರದಾಡಬಹುದು. ಈ ಹಿಂದೆ ಅನ್ನಕ್ಕಾಗಿ ಕಷ್ಟಪಡುತ್ತಿದ್ದರು. ನನ್ನ ಅಣ್ಣ ಓದುತ್ತಿದ್ದ ಕಾಲದಲ್ಲಿ ಆತ ಕೇವಲ ಗಂಜಿ ಕುಡಿದು ಶಾಲೆಗೆ ಹೋಗುತ್ತಿದ್ದ. ನಾವು ಶ್ರವಣಬೆಳಗೊಳಕ್ಕೆ ಹೋದಾಗ ನಮ್ಮ ಸರ್ ಅನ್ನವನ್ನು ವ್ಯರ್ಥ ಮಾಡಬಾರದು ಎಂದು ತಿಳಿಸಿದ್ದರು ಎಂದು ಗುರುಗಳು ಹೇಳಿಕೊಟ್ಟ ಪಾಠದ ವಿಚಾರವನ್ನು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡುವಾಗ ಶಿವು ತಿಳಿಸಿದ್ದಾನೆ.

    https://www.youtube.com/watch?v=5hHFioXJN0M

    https://www.youtube.com/watch?v=5uh3fpEysn8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಕ್ತರ ಮನೆಗೆ ಪೂಜೆಗೆಂದು ಬಂದು ಪಾದುಕೆ ಬಿಟ್ಟು ಹೋಗಿದ್ರು!

    ಭಕ್ತರ ಮನೆಗೆ ಪೂಜೆಗೆಂದು ಬಂದು ಪಾದುಕೆ ಬಿಟ್ಟು ಹೋಗಿದ್ರು!

    ಚಾಮರಾಜನಗರ: ನಡೆದಾಡುವ ದೇವರು ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳು ಹತ್ತು ವರ್ಷಗಳ ಹಿಂದೆ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು.

    ಇಲ್ಲಿನ ನಿಜಗುಣ ರಾಜು ಮನೆಗೆ ಪೂಜೆಗೆಂದು ಬಂದಿದ್ದ ಶ್ರೀಗಳು ಪೂಜೆಯ ನಂತರ ತಮ್ಮ ಪಾದುಕೆಗಳನ್ನು ಬಿಟ್ಟು ಹೋಗಿದ್ದಾರೆ. ಅಂದಿನಿಂದಲೂ ಈ ಭಕ್ತರ ಮನೆಯಲ್ಲಿ ಶ್ರೀಗಳ ಪಾದುಕೆಗೂ ನಿತ್ಯ ಪೂಜೆ ನಡೆಯುತ್ತಿದೆ. ಅಂದು 101 ವರ್ಷಗಳಾಗಿದ್ದರೂ ದೂರದ ತುಮಕೂರಿನಿಂದ ಚಾಮರಾಜನಗರದವರೆಗೂ ಕಾರಿನಲ್ಲಿ ಬಂದಿದ್ದರು.

    ಬೆಳಗ್ಗೆಯಿಂದ ಸಂಜೆಯವರೆಗೂ ಇಲ್ಲಿಯೇ ಇದ್ದು ಭಕ್ತರಿಗೆ ದರ್ಶನ ಭಾಗ್ಯ ನೀಡಿದ್ದ ಡಾ. ಶಿವಕುಮಾರ ಸ್ವಾಮಿಗಳು ಎಲ್ಲರನ್ನು ಲವಲವಿಕೆಯಿಂದಲೇ ಮಾತನಾಡಿಸಿದ್ದರು. ಈ ಪಾದುಕೆಗಳನ್ನು ತಮ್ಮ ಮನೆಯಲ್ಲಿ ಬಿಟ್ಟು ಹೋದ ನಂತರ ತಮಗೆ ಎಲ್ಲಾ ರೀತಿಯ ಅನುಕೂಲಗಳು ಉಂಟಾಗಿವೆ. ಶ್ರೀಗಳ ಪಾದುಕೆಗಳೇ ತಮಗೆ ಶ್ರೀರಕ್ಷೆಯಾಗಿವೆ ಎನ್ನುವ ಅವರು ಪ್ರತಿನಿತ್ಯ ಈ ಪಾದುಕೆಗಳನ್ನು ಪೂಜಿಸಿದ ನಂತರವಷ್ಟೇ ತಮ್ಮ ಇತರ ಕೆಲಸಗಳನ್ನು ಆರಂಭಿಸುತ್ತೇವೆ ಎನ್ನುತ್ತಾರೆ.

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ(111) ಇಂದು ನಿಧನರಾಗಿದ್ದಾರೆ. ನಡೆದಾಡುವ ದೇವರೇ ಎಂದು ಕರೆಸಿಕೊಳ್ಳುತ್ತಿದ್ದ ಶ್ರೀಗಳು ಅಪಾರ ಭಕ್ತರನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಈಗಾಗಲೇ ನಾಡಿನಾದ್ಯಂತ ಮೌನ ಆವರಿಸಿದ್ದು, ಶ್ರೀಗಳ ಅಂತಿಮ ದರ್ಶನ ಪಡೆಯಲು ಭಕ್ತರು ಕಾಯುತ್ತಿದ್ದಾರೆ. ಸಿದ್ದಗಂಗಾ ಮಠದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಾರ್ವಜನಿಕರು ಶಾಂತಿಯಿಂದ ಇರಬೇಕು ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೀಗಳ ಆರೋಗ್ಯದ ಕುರಿತು ಭಕ್ತರಲ್ಲಿ ಡಾ. ಪರಮೇಶ್ ಮನವಿ

    ಶ್ರೀಗಳ ಆರೋಗ್ಯದ ಕುರಿತು ಭಕ್ತರಲ್ಲಿ ಡಾ. ಪರಮೇಶ್ ಮನವಿ

    ತುಮಕೂರು: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಬೆಳಗ್ಗಿಗಿಂತ ಈಗ ಸ್ವಲ್ಪ ಮಟ್ಟಿನ ಚೇತರಿಕೆ ಕಂಡುಬಂದಿದ್ದು, ಯಾರೂ ಕೂಡ ಮಠದತ್ತ ಬರಬೇಡಿ ಎಂದು ವೈದ್ಯ ಪರಮೇಶ್ ಅವರು ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಶ್ರೀಗಳ ಆರೋಗ್ಯದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಗಳ ಆರೋಗ್ಯ ಸರಿಯಿಲ್ಲ ಎಂದು ಮಾಧ್ಯಮದ ಮೂಲಕ ತಿಳಿದುಕೊಂಡು ಎಲ್ಲರೂ ಬಂದು ಇಲ್ಲಿ ಇದ್ದುಕೊಂಡು ಅನಾನುಕೂಲ ಮಾಡಿಕೊಳ್ಳಬಾರದು. ಯಾಕಂದ್ರೆ ಇದರಿಂದ ಮಠದ ವ್ಯವಸ್ಥೆಗೂ ಅನಾನುಕೂಲವಾಗುತ್ತದೆ. ಹೀಗಾಗಿ ದಯವಿಟ್ಟು ಯಾರೂ ಮಠಕ್ಕೆ ಬಂದು ಶ್ರೀಗಳ ದರ್ಶನಕ್ಕಾಗಿ ಕಾಯಬೇಡಿ. ಮಠಕ್ಕೆ ದಯಮಾಡಿ ಯಾರೂ ಬರಬೇಡಿ. ಅಂತಹ ಏನಾದ್ರೂ ತೊಂದರೆಗಳಿದ್ದರೆ ನಾವೇ ಮಾಧ್ಯಮದ ಮುಖಾಂತರ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.

    ಒಟ್ಟಿನಲ್ಲಿ ಸ್ವಾಮೀಜಿಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಲ್ಲಾ ರೀತಿಯಲ್ಲೂ ಪ್ರಯತ್ನ ಪಡುತ್ತಿದ್ದೇವೆ. ಹೀಗಾಗಿ ಭಕ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

    ಬೆಂಗಳೂರಿನ ಬಿಜಿಎಸ್ ಹಾಗೂ ಕೆಲ ತಜ್ಞ ವೈದ್ಯರನ್ನು ಬರಲು ಹೇಳಿದ್ದೇವೆ. ಈ ಮೂಲಕ ಚಿಕಿತ್ಸೆಗೆ ಸಲಹೆ ಕೊಡುವಂತೆ ಕೇಳಿಕೊಂಡಿದ್ದೇವೆ. ಹೀಗಾಗಿ ಅವರು ಶ್ರೀಘ್ರವೇ ತುಮಕೂರಿಗೆ ಬರಲಿದ್ದಾರೆ. ಇದಕ್ಕಾಗಿ ಸ್ವಲ್ಪ ಸಮಯ ಬೇಕು. ಸ್ವಾಮೀಜಿಗಳ ಆರೋಗ್ಯ ಗಂಭೀರವಾಗಿದ್ದರೂ ನಮ್ಮ ಕೈಲಾದಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಆದ್ರೆ ಸದ್ಯಕ್ಕೆ ಭಕ್ತರು ಆತಂಕ ಪಡುವ ಅವಶ್ಯಕತೆ ಇಲ್ಲ. ಅಂತಹ ಏನಾದ್ರೂ ತೊಂದರೆಗಳಾದರೆ ಚಿಕಿತ್ಸೆಯಲ್ಲಿ ಸರಿಯಾಗಿಲ್ಲ ಅಥವಾ ಸಮಸ್ಯೆಗಳಾದ್ರೆ ಮಾಧ್ಯಮದ ಮೂಲಕ ಎಲ್ಲರಿಗೂ ತಿಳಿಸುತ್ತೇವೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಬರಿಮಲೆಗೆ ತೆರಳಲು ಯತ್ನಿಸ್ತಿದ್ದ ಇಬ್ಬರು ಯುವತಿಯರ ಬಂಧನ

    ಶಬರಿಮಲೆಗೆ ತೆರಳಲು ಯತ್ನಿಸ್ತಿದ್ದ ಇಬ್ಬರು ಯುವತಿಯರ ಬಂಧನ

    ಮಂಗಳೂರು: ಭಾರೀ ವಿರೋಧದ ನಡುವೆಯೂ ಕೆಲ ಮಹಿಳೆಯರು ಶಬರಿಮಲೆ ಅಯ್ಯಪ್ಪನ ದರ್ಶನವನ್ನು ಮಾಡಿದ್ದರು. ಈಗ ಶಬರಿಮಲೆಗೆ ತೆರಳಲು ಯತ್ನಿಸುತ್ತಿದ್ದ ಇಬ್ಬರು ಯುವತಿಯರನ್ನು ಕೇರಳದ ಚೆಂಗನ್ನೂರು ರೈಲ್ವೇ ನಿಲ್ದಾಣದಲ್ಲಿ ಬಂಧಿಸಲಾಗಿದೆ.

    ಮಂಗಳೂರಿನ ಅಯ್ಯಪ್ಪ ಭಕ್ತರು ಯುವತಿಯರನ್ನು ಪೊಲೀಸರಿಗೆ ಹಿಡಿದು ಕೊಟ್ಟಿದ್ದಾರೆ. ಆಂಧ್ರ ಪ್ರದೇಶದ ಮೂಲದ ಯುವತಿಯರು ಅಯ್ಯಪ್ಪ ಭಕ್ತರ ಸೋಗಿನಲ್ಲಿ ತೆರಳುತ್ತಿದ್ದರು. ಇದನ್ನು ಮಂಗಳೂರು ಅಪ್ಪಯ್ಯ ಭಕ್ತರು ಪತ್ತೆ ಮಾಡಿದ್ದು, ಕೂಡಲೇ ಯುವತಿಯರ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಕೊನೆಗೂ ಶಬರಿಮಲೆ ದೇವಾಲಯಕ್ಕೆ ಇಬ್ಬರು ಮಹಿಳೆಯರು ಎಂಟ್ರಿ!

    ಶಬರಿಮಲೆ ಅಪ್ಪಯ್ಯನ ದರ್ಶನಕ್ಕೆ ಬರುವವರನ್ನು ಅಲ್ಲಿನ ಭಕ್ತರು ಪರಿಶೀಲನೆ ನಡೆಸುತ್ತಿದ್ದಾರೆ. ಅದರಲ್ಲೂ ಮಹಿಳೆಯರು ಮಾಲಾಧಾರಣೆ ಮಾಡಿ ಬಂದವರ ಮೇಲೆ ಹೆಚ್ಚಿನ ಗಮನವಿಡುತ್ತಿದ್ದಾರೆ. ಇಬ್ಬರು ಯುವತಿಯರು ಮಂಗಳೂರಿನಿಂದ ಮಾಲಾಧಾರಣೆ ಧಿರಿಸಿನಲ್ಲಿ ಹೋಗಿದ್ದು, ಕೇರಳದ ಚೆಂಗನ್ನೂರು ರೈಲ್ವೇ ನಿಲ್ದಾಣದಲ್ಲಿ ಇಳಿದಿದ್ದಾರೆ. ಇದೇ ರೈಲು ನಿಲ್ದಾಣದಲ್ಲಿ ಮಂಗಳೂರಿನಿಂದ ಹೋಗಿದ್ದ ಭಕ್ತರು ಇಳಿದಿದ್ದಾರೆ. ಆಗ ಅವರ ಅನುಮಾನದ ಮೇಲೆ ಅವರನ್ನು ಪ್ರಶ್ನೆ ಮಾಡಿದ್ದು, ಬಳಿಕ ಅಲ್ಲಿನ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಶಬರಿಮಲೆ ಎಂಟ್ರಿಗೆ ಕೊಡಗಲ್ಲೇ ಸ್ಕೆಚ್- ಲಾಡ್ಜ್‌ನಲ್ಲಿ ಉಳಿದಿದ್ರು ಬಿಂದು, ಕನಕದುರ್ಗ

    ಅಪ್ಪಯ್ಯನ ದರ್ಶನ ಮಾಡಲು ಬಂದಿದ್ದೇವೆ. ಸುಪ್ರಿಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ದರ್ಶನ ಮಾಡುತ್ತೇವೆ ಎಂದು ಯುವತಿಯರು ಹೇಳಿದ್ದಾರೆ. ಆದರೆ ಅಲ್ಲಿದ್ದ ಎಲ್ಲರು ಅವರ ಪ್ರವೇಶವನ್ನು ವಿರೋಧಿಸಿದ್ದು, ಪೊಲೀಸರು ಸುರಕ್ಷತೆ ದೃಷ್ಟಿಯಿಂದ ಕರೆದುಕೊಂಡು ಹೋಗಿ ಬಳಿಕ ಅವರನ್ನು ವಾಪಸ್ ಕಳುಹಿಸಿದ್ದಾರೆ.  ಇದನ್ನೂ ಓದಿ: ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನ ಪಡೆದ `ಮೂರನೇ ಮಹಿಳೆ’..!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಷ ಪ್ರಸಾದ ಸೇವಿಸಿ ಚಿಕಿತ್ಸೆ ಪಡೆದಿದ್ದ 6 ಮಂದಿ ಮತ್ತೆ ಆಸ್ಪತ್ರೆಗೆ ದಾಖಲು

    ವಿಷ ಪ್ರಸಾದ ಸೇವಿಸಿ ಚಿಕಿತ್ಸೆ ಪಡೆದಿದ್ದ 6 ಮಂದಿ ಮತ್ತೆ ಆಸ್ಪತ್ರೆಗೆ ದಾಖಲು

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಸೇವಿಸಿ ಚಿಕಿತ್ಸೆ ಪಡೆದಿದ್ದ 6 ಮಂದಿಗೆ ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಎಂ.ಜಿ.ದೊಡ್ಡಿ ಗ್ರಾಮದ ರೇಖಾ, ಪಳನಿಯಮ್ಮ, ಮಲ್ಲಿಗೆ, ವೀರಮ್ಮ, ಕಮಲ ಮತ್ತು ಪಳನಿ ಎಂಬವರಿಗೆ ಹೊಟ್ಟೆ ಉರಿ, ಎದೆ ನೋವು, ತಲೆ ನೋವು, ವಾಂತಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಇತ್ತ ಸುಳ್ವಾಡಿ ದುರಂತ ಇನ್ನು ಹಸಿಯಾಗಿರುವಾಗಲೇ ಅಂಥದ್ದೇ ಪ್ರಕರಣವೊಂದು ಯಾದಗಿರಿಯಲ್ಲಿ ಬೆಳಕಿಗೆ ಬಂದಿದೆ. ಅಲ್ಲಿ ಮಾರಮ್ಮನ ಪ್ರಸಾದದಲ್ಲಿ ವಿಷ ಬೆರೆಸಿದರೆ, ಇಲ್ಲಿ ಕುಡಿಯುವ ನೀರಿಗೆ ದುಷ್ಕರ್ಮಿಗಳು ಕ್ರಿಮಿನಾಶಕ ಬೆರೆಸಿದ್ದಾರೆ. ಸುರಪುರ ತಾಲೂಕಿನ ಮುದನೂರ ಕೆ ಗ್ರಾಮದ ಹೊರಭಾಗದಲ್ಲಿರುವ ಬಾವಿಯ ನೀರು ಶಾಖಾಪುರ ಹಾಗೂ ತೆಗ್ಗಳ್ಳಿ ಗ್ರಾಮಕ್ಕೆ ಫಿಲ್ಟರ್ ಅಗಿ ಸರಬರಾಜಾಗ್ತಿತ್ತು. ಆದ್ರೆ ಯಾರೋ ಕಿಡಿಗೇಡಿಗಳು ಈ ನೀರಿಗೆ ಭತ್ತದ ಬೆಳೆಗೆ ಸಿಂಪಡಿಸುವ ಕ್ರಿಮಿನಾಶಕ ಬೆರೆಸಿದ್ದಾರೆ.

    ಈ ನೀರು ಕುಡಿದ ಪಂಪ್ ಆಪರೇಟರ್ ತಾಯಿ ನಾಗಮ್ಮ ಸೇರಿ ಐವರು ಅಸ್ವಸ್ಥರಾಗಿದ್ದು ಕೆಂಬಾವಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಪಂಪ್ ಆಪರೇಟರ್ ಮೌನೇಶ್ ನೀರು ಪೂರೈಕೆ ಸ್ಥಗಿತಗೊಳಿಸಿ ಗ್ರಾಮದಲ್ಲಿ ಯಾರು ಈ ನೀರು ಕುಡಿಯಬೇಡಿ ಎಂದು ಡಂಗೂರ ಸಾರಿಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಸದ್ಯ ಬಾವಿಯ ನೀರು ಖಾಲಿ ಮಾಡಿಸಲಾಗ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗೋಪುರ ವಿಚಾರಕ್ಕೆ ಅಸಮಾಧಾನವಿತ್ತು, ಆದ್ರೆ ವಿಷ ಬೆರೆಸಿಲ್ಲ- ಶಂಕಿತರಿಂದ ಗೊಂದಲದ ಹೇಳಿಕೆ

    ಗೋಪುರ ವಿಚಾರಕ್ಕೆ ಅಸಮಾಧಾನವಿತ್ತು, ಆದ್ರೆ ವಿಷ ಬೆರೆಸಿಲ್ಲ- ಶಂಕಿತರಿಂದ ಗೊಂದಲದ ಹೇಳಿಕೆ

    ಚಾಮರಾಜನಗರ: ಇಲ್ಲಿ ಸುಳುವಾಡಿ ಮಾರಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿದ ಬಳಿಕ ಮೃತಪಟ್ಟ ಭಕ್ತರ ಸಂಖ್ಯೆ ಇಂದು 18ಕ್ಕೆ ಏರಿದೆ. ಆದ್ರೆ ಇತ್ತ ವಶಕ್ಕೆ ಪಡೆದ ಇಬ್ಬರು ಶಂಕಿತರು ಪ್ರಕರಣದ ಬಗ್ಗೆ ಗೊಂದಲವಾದ ಹೇಳಿಕೆ ನೀಡುತ್ತಿದ್ದಾರೆ.

    ನಾವು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆವು. ಗೋಪುರ ವಿಚಾರಕ್ಕೆ ಅಸಮಾಧಾನ ಇದ್ದದ್ದು ನಿಜ. ಆದ್ರೆ ವಿಷ ಬೆರೆಸಿಲ್ಲ. ಈ ಘಟನೆಯಲ್ಲಿ ನನ್ನ ಸಂಬಂಧಿಗಳು ಕೂಡ ಆಸ್ಪತ್ರೆಯ ಪಾಲಾಗಿದ್ದಾರೆ ಎಂದು ಪೊಲೀಸರ ಮುಂದೆ ಶಂಕಿತ ಮಾದೇಶ್ ಹೇಳಿಕೆ ನೀಡಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ.

    ಪ್ರಕರಣ ಸಂಬಂಧ ನಾಲ್ವರು ಶಂಕಿತರನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಲಾಗುತ್ತಿದೆ. ಸದ್ಯ ಆಹಾರದ ವಸ್ತುವನ್ನು ಎಫ್ ಎಸ್ ಎಲ್ ಗೆ ರವಾನೆ ಮಾಡಲಾಗಿದೆ. ಆಹಾರದಲ್ಲಿ ಯಾವ ವಿಷಕಾರಿ ಅಂಶ ಇದೆ ಎಂಬುದರ ಬಗ್ಗೆ ತಿಳಿದುಕೊಳ್ಳಲಾಗುತ್ತಿದೆ. ವೈದ್ಯರು ಕ್ರಿಮಿನಾಶಕ ಬೆರೆಸಿರುವುದಾಗಿ ಅಭಿಪ್ರಾಯ ಪಟ್ಟಿದ್ದಾರೆ. ತನಿಖೆ ನಡೆಯುತ್ತಾ ಇದೆ ಶಂಕಿತರೇ ದ್ವಂದ್ವದಲ್ಲಿ ಇರೋದು ಸ್ವಲ್ಪ ಕಷ್ಟವಾಗ್ತಿದೆ ಅಂತ ತಿಳಿದುಬಂದಿದೆ.

    ಘಟನೆ ವಿವರ:
    ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನದ ಗೋಪುರ ಶಂಕುಸ್ಥಾಪನೆ ಶುಕ್ರವಾರ ನಡೆದಿತ್ತು. ವಿವಿಧ ಪೂಜಾ ಕಾರ್ಯಗಳು ಮುಗಿದ ಬಳಿಕ ಮಧ್ಯಾಹ್ನ ಭಕ್ತರಿಗೆ ಪ್ರಸಾದ (ರೈಸ್‍ಬಾತ್) ವ್ಯವಸ್ಥೆ ಮಾಡಲಾಗಿತ್ತು. ಸುಳ್ವಾಡಿ ಸುತ್ತಮುತ್ತಲಿನ ಅನೇಕ ಗ್ರಾಮದ ಜನರು ದೇವಿಯ ದರ್ಶನಕ್ಕೆ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಶಂಕುಸ್ಥಾಪನೆ ಬಳಿಕ ಕೆಲವರು ಪ್ರಸಾದ ಸೇವಿಸಿ ತಮ್ಮ ಮನೆಗೆ ಹಾಗೂ ಊರುಗಳಿಗೆ ತೆರಳಿದರು. ದೇವಸ್ಥಾನದ ಪ್ರಸಾದ ಸೇವಿಸಿದ ಬಳಿಕ ಎಲ್ಲರ ಕಣ್ಣುಗಳು ನೀಲಿ ಬಣ್ಣಕ್ಕೆ ತಿರುಗಿದೆ. ಎಲ್ಲರನ್ನೂ ಗಮನಿಸಿದಾಗ ಉಸಿರಾಟದ ತೊಂದರೆ ಕಾಣಿಸಿದೆ. ಪ್ರಸಾದದಲ್ಲಿ ಕ್ರಿಮಿನಾಶಕ ಅಥವಾ ಟಿಕ್-20 ಬೆರೆಸಿರುವ ಸಾಧ್ಯತೆ ಇದೆ ಎಂದು ಮೈಸೂರು ಜಿಲ್ಲಾಸ್ಪತ್ರೆ ಡಿ.ಎಚ್.ಒ ಡಾ.ಬಸವರಾಜ್ ಹೇಳಿದ್ದರು.


    ದೇವಾಲಯ ಬಂದ್:
    ಇನ್ನು ದುರಂತದ ಪರಿಣಾಮ ಇತಿಹಾಸದಲ್ಲೇ ಮೊದಲ ಬಾರಿಗೆ ಸುಳ್ವಾಡಿಯ ಕಿಚ್ಚುಗುತ್ತು ಮಾರಮ್ಮ ಗುಡಿಗೆ ಬೀಗ ಜಡಿಯಲಾಗಿದೆ. ನಿತ್ಯವೂ ಧಾರ್ಮಿಕ ಚಟುವಟಿಕೆಗಳಿಂದ ಕೂಡಿರುತ್ತಿದ್ದ ದೇವಸ್ಥಾನವನ್ನು ಬಂದ್ ಮಾಡಲಾಗಿದೆ. ದೇವಸ್ಥಾನದ ಪುರೋಹಿತರು, ಅಡುಗೆ ತಯಾರಕರು, ಭದ್ರತಾ ಸಿಬ್ಬಂದಿಯ ಕುಟುಂಬಗಳಲ್ಲೂ ಸಾವು, ನೋವು ಸಂಭವಿಸಿದ್ದು, ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಾದಪ್ಪನ ಭಕ್ತರೇ ಸನ್ನಿಧಿಯಲ್ಲಿ ಸ್ನಾನ ಮಾಡುವ ಮೊದಲು ಎಚ್ಚರ..!

    ಮಾದಪ್ಪನ ಭಕ್ತರೇ ಸನ್ನಿಧಿಯಲ್ಲಿ ಸ್ನಾನ ಮಾಡುವ ಮೊದಲು ಎಚ್ಚರ..!

    ಚಾಮರಾಜನಗರ: ಪಾವಿತ್ರತೆಗೆ ಹೆಸರಾಗಿರುವ ಮಲೆಮಹದೇಶ್ವರ ಬೆಟ್ಟದಲ್ಲಿ ಸ್ನಾನ ಮಾಡಿದರೆ ಪಾಪಗಳು ಕಳೆದು ಹೋಗುತ್ತವೆ ಎಂದುಕೊಂಡಿರುವ ಭಕ್ತರಿಗೆ ಕಾಯಿಲೆಗಳು ಬರುವ ಎಲ್ಲಾ ಲಕ್ಷಣಗಳು ಮಾದಪ್ಪನ ಸನ್ನಿಧಿಯಲ್ಲಿ ಗೋಚರವಾಗುತ್ತಿವೆ.

    ರಾಜ್ಯದಲ್ಲಿ ಅತೀ ಹೆಚ್ಚು ಆದಾಯ ತಂದುಕೊಡುವ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿರುವ ಮಲೆಮಹದೇಶ್ವರ ಬೆಟ್ಟ ಇದೀಗ ಅಕ್ಷರಶಃ ಕಾಯಿಲೆಗಳನ್ನು ತಂದೊಡ್ಡುವ ಸ್ಥಿತಿಯಲ್ಲಿ ಇದೆ.

    ಮಾದಪ್ಪನ ದರ್ಶನ ಪಡೆಯುವ ಮುನ್ನ ಸನ್ನಿಧಿಯಲ್ಲಿರುವ ಅಂತರಗಂಗೆಯಲ್ಲಿ ಭಕ್ತರು ಮುಳುಗಿದರೆ ಪಾವಿತ್ರತೆ ಬರುತ್ತೆ ಎಂದು ನಂಬಿದ್ದಾರೆ. ಆದರೆ ಇದೀಗ ಈ ಅಂತರ ಗಂಗೆಯಲ್ಲಿ ಮುಳುಗಿದರೆ ಪಾವಿತ್ರತೆ ಬರಲ್ಲ, ಬದಲಾಗಿ ಕಾಯಿಲೆಗಳು ಬಂದೊದಗುತ್ತವೆ. ಪಾವಿತ್ರತೆಗೆ ಹೆಸರಾಗಿರುವ ಅಂತರಗಂಗೆ ಇದೀಗ ಅಕ್ಷರಶಃ ಮಲೀನಗೊಂಡು ಕೊಳಕು ನಾರುತ್ತಿದೆ ಎಂದು ಭಕ್ತರು ಹೇಳುತ್ತಿದ್ದಾರೆ.

    ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರದ ಬೇಜವಾಬ್ದಾರಿಯಿಂದ ಅಂತರಗಂಗೆಯಲ್ಲಿ ಕೊಳಕು ನೀರು ಸೇರಿಕೊಂಡು ಈ ನೀರು ತನ್ನ ಪವಿತ್ರತೆ ಕಳೆದುಕೊಂಡು ಕಾಯಿಲೆಯನ್ನು ತಂದೊಡ್ಡುವ  ಸ್ಥಾನವಾಗಿ ಬದಲಾಗಿದೆ. ಈ ನೀರಲ್ಲಿ ಪ್ರತಿನಿತ್ಯ ಸಾವಿರಾರು ಭಕ್ತರು ಮುಳುಗಿ ಮಾದಪ್ಪನ ದರ್ಶನ ಪಡೆಯುತ್ತಾರೆ.

    ಇದಲ್ಲದೇ ನವಂಬರ್ 6, 7 ರಂದು ಮಾದಪ್ಪನ ಬೆಟ್ಟದಲ್ಲಿ ನಡೆಯುವ ದೀಪಾವಳಿ ದೊಡ್ಡ ರಥೋತ್ಸವಕ್ಕೆ ಲಕ್ಷಕ್ಕೂ ಅಧಿಕ ಭಕ್ತರು ಬರುತ್ತಾರೆ. ಅವರೆಲ್ಲರೂ ಇದೇ ಅಂತರಗಂಗೆಗೆ ಬಂದು ಮುಳುಗುತ್ತಾರೆ. ಭಕ್ತರು ಇಲ್ಲಿ ಮುಳುಗಿದರೆ ಜೀವನ ಪವಿತ್ರವಾಗುತ್ತೆ ಎಂಬ ಭಾವನೆಯಿಂದ ಮುಳುಗುತ್ತಾರೆ. ಆದರೆ ಪ್ರಾಧಿಕಾರದ ಕುರುಡು ನಡೆಯಿಂದ ಭಕ್ತರು ಮಾರಕ ಕಾಯಿಲೆಗಳಿಗೆ ತುತ್ತಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಭಕ್ತ ಶಿವಕುಮಾರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಾಮಿಸ್ ಮುಂದಿನ ಸಲ ಬರೋವಾಗ ಇನ್ನು ಒಳ್ಳೆಯವನಾಗಿರ್ತೀನಿ – ದೇವರಿಗೆ ಭಕ್ತನ ಪತ್ರ

    ಪ್ರಾಮಿಸ್ ಮುಂದಿನ ಸಲ ಬರೋವಾಗ ಇನ್ನು ಒಳ್ಳೆಯವನಾಗಿರ್ತೀನಿ – ದೇವರಿಗೆ ಭಕ್ತನ ಪತ್ರ

    ಚಿಕ್ಕಮಗಳೂರು: ದೇವರಲ್ಲಿ ಕೆಲವು ಭಕ್ತರು ಹರಕೆ ಕಟ್ಟಿಕೊಳ್ಳುತ್ತಾರೆ. ಬೇಡಿಕೆಗಳ ಪತ್ರ ಬರೆದು ಹುಂಡಿಯಲ್ಲಿ ಹಾಕುತ್ತಾರೆ. ಆದರೆ ಇಲ್ಲೊಬ್ಬ ದೇವರನ್ನು ಸ್ನೇಹಿತನಂತೆ ಸಲುಗೆಯಿಂದ ಪತ್ರವೊಂದನ್ನು ಬರೆದಿದ್ದಾನೆ.

    ದಕ್ಷಿಣ ಕಾಶಿ ಎಂದೇ ಖ್ಯಾತಿಯಾಗಿರುವ ಕಾಫಿನಾಡಿನ ಕಳಸಾದ ಕಲಸೇಶ್ವರ ಸ್ವಾಮಿಗೆ ಭಕ್ತನೊಬ್ಬ ಇಂಗ್ಲೀಷ್ ಮಿಶ್ರಿತ ಪತ್ರ ಬರೆದು ನಿವೇದಿಸಿಕೊಂಡಿದ್ದಾನೆ. ಪತ್ರದಲ್ಲಿ “ನನ್ನ ದೇವರಾದ ಶ್ರೀ ಕಲಶೇಶ್ವರ ಸ್ವಾಮಿಗಳಿಗೆ ಎಂದು ಪ್ರಾರಂಭಿಸಿದ್ದು, ಪ್ರತೀ ಸಲ ಬಂದಾಗಲು ಪತ್ರ ಬರೆಯುತ್ತೇನೆ. ಆದರೆ ಆ ಪತ್ರ ಏನಾಗುತ್ತದೋ ಗೊತ್ತಿಲ್ಲ. ಈ ಸಲ ನಾನು ಆದಷ್ಟು ಕೆಲಸ ಮುಗಿಸಿದ್ದೀನಿ. ಆದರೆ ಮುಖ್ಯವಾದದ್ದನ್ನೇ ಮಾಡಿಲ್ಲ. ನನಗೆ ಖಂಡಿತ ನಂಬಿಕೆ ಇದೆ. ನಾನು ಒಂದಲ್ಲ ಒಂದು ದಿನ ನೀವು ಅಂದುಕೊಂಡ ಹಾಗೆ ಆಗುತ್ತೇನೆ ಅಂತ ಬರೆದಿದ್ದಾನೆ.

    ಅಷ್ಟೇ ಅಲ್ಲದೇ ಕಳಸಾದ ಜನ ತುಂಬಾ ಒಳ್ಳೆಯವರು. ನಾನು ಕೆಟ್ಟವನು ಅದಕ್ಕೆ ನನಗೆ ಹೀಗಾಗಿದೆ. ಪತ್ರದಲ್ಲಿ ಈ ಸಲ ಕೆಟ್ಟ ಶಬ್ದಗಳನ್ನ ಕಡಿಮೆ ಮಾಡಿದ್ದೇನೆ. ಮುಂದಿನ ಸಲ ಇನ್ನೂ ಬದಲಾವಣೆ ಜೊತೆ ಬರುತ್ತೇನೆ. ದೇವರೆ ನಾನು ಹಂತಹಂತವಾಗಿ ಒಳ್ಳೆಯವನಾಗಲು ಅವಕಾಶ ಕೊಡಿ. ನಾನು ನಿಮಗೆ ಮೋಸ ಮಾಡಿರಬಹುದು. ಆದರೆ ನಾನು ನಿಮಗೆ ಕೊಡುವ ಗೌರವವನ್ನು ಬೇರೆಯಾರಿಗೂ ಕೊಡುವುದಿಲ್ಲ ಎಂದು ಉಲ್ಲೇಖಿಸಿದ್ದಾನೆ.

    ಪ್ರಾಮಿಸ್ ದೇವರೆ ಮುಂದಿನ ಸಲ ಬರುವಾಗ ಇನ್ನು ಒಳ್ಳೆಯವನಾಗಿರುತ್ತೀನಿ. ಯಾರು ಏನೇ ಮಾಡಿದರೂ, ನೀವು ನನ್ನ ಜೊತೆ ಇರಿ. ನನ್ನ ಮನಸ್ಸೇ ನನ್ನ ದೊಡ್ಡ ವೈರಿ. ಅದನ್ನು ನಿಯಂತ್ರಿಸಲು ನನಗೆ ಸಹಾಯ ಮಾಡಿ. ನನಗೆ ನಿಮ್ಮನ್ನು ಬಿಟ್ಟು ಯಾರು ಇಲ್ಲ ಇಲ್ಲಿ ಎಂದು ಪತ್ರದ ಮೂಲಕ ಮನವಿ ಮಾಡಿದ್ದಾನೆ.

    ಪತ್ರದ ಸಾರಾಂಶ ನೋಡಿದರೆ ಆತನಿಗೆ ಮಾಡಿದ ತಪ್ಪಿನ ಅರಿವಾಗಿ ಪಾಪ ಪ್ರಜ್ಞೆ ಕಾಡುತ್ತಿರುವಂತೆ ಭಾಸವಾಗುತ್ತಿದೆ ಎಂದು ಅಲ್ಲಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚೆಲುವನಾರಾಯಣ ಸ್ವಾಮಿ  ಮೆರವಣಿಗೆಯಲ್ಲಿ ಅಪಶಕುನ- ಉತ್ಸವದ ವೇಳೆ ಮುರಿದು ಬಿದ್ದ ಬೊಂಬು

    ಚೆಲುವನಾರಾಯಣ ಸ್ವಾಮಿ ಮೆರವಣಿಗೆಯಲ್ಲಿ ಅಪಶಕುನ- ಉತ್ಸವದ ವೇಳೆ ಮುರಿದು ಬಿದ್ದ ಬೊಂಬು

    ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿರುವ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ  ಅಂದರೆ ಮೈಸೂರು ರಾಜರಿಗೆ ವಿಶೇಷವಾದ ಭಕ್ತಿ, ನಂಬಿಕೆ ಇದೆ. ಚೆಲುವನಾರಾಯಣ ಸ್ವಾಮಿ  ದೇವಾಲಯದ ಅಭಿವೃದ್ಧಿಗೆ ಮೈಸೂರು ಮಹಾರಾಜರ ಕೊಡುಗೆ ಅಪಾರ. ಹೀಗಾಗಿ ಕೆಲವು ವಿಶೇಷ ಸಂದರ್ಭಗಳಲ್ಲಿ ಚೆಲುವನಾರಾಯಣ ಸ್ವಾಮಿಗೆ ಮೈಸೂರು ಮಹಾರಾಜರ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತೆ. ಅದೇ ರೀತಿ ವಿಜಯದಶಮಿಯ ದಿನ ಚೆಲುವನಾರಾಯಣ ಸ್ವಾಮಿ ಉತ್ಸವ ಮೂರ್ತಿಗೆ ರಾಜರ ವೇಷ ಧರಿಸಿ ಮೆರವಣಿಗೆ ಮಾಡುವಾಗ ಅಪಶಕುನ ಜರುಗಿ ಹೋಗಿದೆ.

    ಶುಕ್ರವಾರ ವಿಜಯದಶಮಿ ಆದ್ದರಿಂದ ಮೇಲುಕೋಟೆ ಚೆಲುವನಾರಾಯಣ ಸ್ವಾಮಿಗೆ ಅಶ್ವವಾಹನೋತ್ಸವ ಸಂಭ್ರಮದಿಂದ ಜರುಗುತ್ತಿತ್ತು. ಮಹಾರಾಜರ ಅಲಂಕಾರದಲ್ಲಿದ್ದ ಚೆಲುವನಾರಾಯಣ ಸ್ವಾಮಿ ಉತ್ಸವ ಮೂರ್ತಿಯನ್ನು ಆಂಜನೇಯಸ್ವಾಮಿ ದೇವಾಲಯದ ಬಳಿಯಿರುವ ಬನ್ನಿ ಮಂಟಪದವರೆಗೂ ಹೊತ್ತುಕೊಂಡು ಬರಲಾಯಿತು. ಆ ನಂತರ ಬನ್ನಿ ಪೂಜೆ ನೆರವೇರಿಸಿ ದೇವಾಲಯಕ್ಕೆ ಮರಳಿ ಬರಲಾಗುತ್ತಿತ್ತು. ಈ ವೇಳೆ ರಾಜ ಬೀದಿಯಲ್ಲಿ ಇದ್ದಕ್ಕಿದ್ದಂತೆ ಅಪಶಕುನ ನಡೆದು ಹೋಯಿತು. ಭಕ್ತಾದಿಗಳು ನೋಡು ನೋಡುತ್ತಿದ್ದಂತೆ, ಅಶ್ವಾರೋಹಿಯಾಗಿದ್ದ ಚೆಲುವನಾರಾಯಣ ಸ್ವಾಮಿಯನ್ನು ಹೊತ್ತಿದ್ದ ಮರದ ಬೊಂಬು ಮುರಿದು ಹೋಯಿತು. ಇನ್ನೇನು ದೇವರ ವಿಗ್ರಹ ನೆಲಕ್ಕೆ ಬಿತ್ತು ಎನ್ನುವಷ್ಟರಲ್ಲಿ ಸುತ್ತಲೂ ನೆರೆದಿದ್ದ ಭಕ್ತರು ಚೆಲುವನಾರಾಯಣ ಸ್ವಾಮಿ ವಿಗ್ರಹ ನೆಲಕ್ಕೆ ಬೀಳದಂತೆ ಹಿಡಿದುಕೊಂಡರು.

    ಈ ಘಟನೆ ನಡೆಯುತ್ತಿದ್ದಂತೆಯೇ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ಭಕ್ತರು ಇದೇನು ಅಪಶಕುನದ ಮುನ್ಸೂಚನೆಯಾ ಎಂದು ಮಾತನಾಡಲು ಆರಂಭಿಸಿದ್ದಾರೆ. ಹಿಂದೆಲ್ಲ ಮೈಸೂರು ಮಹಾರಾಜರೇ ಮುಂದೆ ನಿಂತು ಚೆಲುವನಾರಾಯಣ ಸ್ವಾಮಿಯ ಅಶ್ವವಾಹನೋತ್ಸವ ನಡೆಸುತ್ತಿದ್ದರು. ಇತಿಹಾಸದಲ್ಲಿ ಒಮ್ಮೆಯೂ ಕೂಡ ಉತ್ಸವದ ವೇಳೆ ಈ ರೀತಿ ಅವಘಡ ಸಂಭವಿಸಿರಲಿಲ್ಲ. ಮೈಸೂರು ಅರಮನೆಯಲ್ಲಿ ಸೂತಕದ ಛಾಯೆ ಇರುವಾಗಲೇ ಇದೇ ಮೊದಲ ಬಾರಿಗೆ ಈ ರೀತಿ ಅವಘಡ ಸಂಭವಿಸಿದೆ. ಈ ರೀತಿಯ ಘಟನೆಗಳನ್ನು ಶಕುನ ಅಪಶಕುನದ ರೀತಿ ನೋಡುತ್ತೇವೆ. ಇದು ಊರಿಗೆ ದೇವರಿಗೆ ಆಗುವ ಅಪಚಾರದ ಮುನ್ಸೂಚನೆ ಇರಬಹುದು. ಮಹಾರಾಜರಿಗೆ ಸಂಕಟ ಆಗುವ ಸಮಸ್ಯೆಗಳು ಹೆಚ್ಚಾಗುವ ಮುನ್ಸೂಚನೆಯೂ ಇರಬಹುದು ಎಂದು ಮೇಲುಕೋಟೆ ಸ್ಥಾನಾಚಾರ್ಯರಾದ ಶ್ರೀನಿವಾಸನ್ ನರಸಿಂಹನ್ ಗುರೂಜಿ ಹೇಳುತ್ತಾರೆ.

    ಉತ್ಸವ ನಡೆಯುವಾಗ ಅಶ್ವಾರೋಹಿಯಾದ ಚೆಲುವನಾರಾಯಣ ಸ್ವಾಮಿಯನ್ನು ಹೊತ್ತಿದ್ದ ಬೊಂಬು ಮುರಿಯಲು ದೇವಾಲಯದ ಆಡಳಿತ ಮಂಡಳಿಯ ನಿರ್ಲಕ್ಷ್ಯ ಕಾರಣ ಎಂಬ ಮಾತು ಕೇಳಿ ಬರುತ್ತಿದೆ. ಉತ್ಸವ ಮೂರ್ತಿ ಹೊರುವ ಬೊಂಬು ಗಟ್ಟಿಯಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸದ ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧವೂ ಅಸಮಾಧಾನ ಕೇಳಿ ಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾನವ ಕುಲದ ಏಕತೆ, ವಿಶ್ವಶಾಂತಿಗಾಗಿ ವ್ಯಕ್ತಿಯಿಂದ 40 ಕಿ.ಮೀ ಉರುಳು ಸೇವೆ

    ಮಾನವ ಕುಲದ ಏಕತೆ, ವಿಶ್ವಶಾಂತಿಗಾಗಿ ವ್ಯಕ್ತಿಯಿಂದ 40 ಕಿ.ಮೀ ಉರುಳು ಸೇವೆ

    ಧಾರವಾಡ: ಮಾನವ ಕುಲದ ಏಕತೆ ಹಾಗೂ ವಿಶ್ವಶಾಂತಿಗಾಗಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಸುಮಾರು 40 ಕಿಲೋ ಮೀಟರ್ ಉರುಳು ಸೇವೆಯನ್ನ ಆರಂಭಿಸಿದ್ದಾರೆ.

    ಜಿಲ್ಲೆಯ ಕಲಘಟಗಿ ತಾಲೂಕಿನ ಎಮ್ಮೇಟ್ಟಿ ಗ್ರಾಮದ ಈಶ್ವರ ತೋರಣಕಟ್ಟಿ ಅವರೇ ಈ ಉರುಳು ಸೇವೆಯನ್ನ ಆರಂಭಿಸಿದ್ದಾರೆ. ಧಾರವಾಡ ನಗರದ ಗಾಂಧಿಚೌಕದಿಂದ ತಮ್ಮ ಸೇವೆಯನ್ನ ಆರಂಭಿಸಿರುವ ಇವರು, ಮೂರು ದಿನಗಳ ನಂತರ ಎಮ್ಮೇಟ್ಟಿ ಗ್ರಾಮಕ್ಕೆ ತಲುಪಲಿದ್ದಾರೆ.

    ನಗರದ ರಸ್ತೆಗಳಲ್ಲೇ ಉರುಳು ಸೇವೆಯನ್ನ ಆರಂಭಿಸಿರುವ ಇವರು, ಸೆಪ್ಟೆಂಬರ್ 2 ರಂದು ತಮ್ಮ ಗ್ರಾಮಕ್ಕೆ ತಲುಪಲಿದ್ದಾರೆ. ಕಳೆದ 19 ವರ್ಷಗಳಿಂದ ಇವರು ಇದೇ ರೀತಿ ಸೇವೆಯನ್ನ ಮಾಡುತ್ತಾ ಬಂದಿದ್ದಾರೆ. ಉರುಳು ಸೇವೆ ಮಾಡುತ್ತಿರುವ ಇವರಿಗೆ ಅನೇಕರು ಸಾಥ್ ನೀಡಿದ್ದಾರೆ. ತಮ್ಮ ಉರುಳು ಸೇವೆಯ ನಂತರ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವನ್ನು ಕೂಡಾ ಇವರು ಇಟ್ಟುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv