Tag: devotee

  • ಸಿದ್ದಗಂಗಾ ಮಠಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್ ಪಾಸ್ ಕಾಮಗಾರಿ ವಿಳಂಬ- ಭಕ್ತಾದಿಗಳಿಂದ ಆಕ್ರೋಶ

    ಸಿದ್ದಗಂಗಾ ಮಠಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್ ಪಾಸ್ ಕಾಮಗಾರಿ ವಿಳಂಬ- ಭಕ್ತಾದಿಗಳಿಂದ ಆಕ್ರೋಶ

    ತುಮಕೂರು: ಕಳೆದ ಎರಡು ವರ್ಷಗಳಿಂದ ಸಿದ್ದಗಂಗಾ ಮಠಕ್ಕೆ ಆಗಮಿಸುವ ಭಕ್ತಾದಿಗಳು ನಿತ್ಯಕಿರಿಕಿರಿ ಅನುಭವಿಸುತ್ತಿದ್ದಾರೆ. ಕ್ಯಾತಸಂದ್ರ ಸರ್ಕಲ್ ನಿಂದ ಮಠ ಕೇವಲ 200 ಮೀಟರ್ ದೂರದಲ್ಲಿದ್ದರೂ ಸುಮಾರು 2 ಕಿಮಿ ದೂರ ಸುತ್ತಿಬಳಸಿ ಬರುವ ಅನಿವಾರ್ಯತೆ ಇದೆ. ಇಷ್ಟೆಲ್ಲಾ ಸಮಸ್ಯೆಗೆ ಮೂಲ ಕಾರಣ ಮಠಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಅರ್ಧಕ್ಕೆ ನಿಂತಿರೋದು.

    ಕ್ಯಾತಸಂದ್ರ ಸರ್ಕಲ್ ನಿಂದ ಸಿದ್ದಗಂಗಾ ಮಠಕ್ಕೆ ಕೇವಲ 200 ಮೀಟರ್ ದೂರ ಅಷ್ಟೇ. ರೈಲ್ವೆಗೇಟ್ ಮೂಲಕ ಇಷ್ಟು ದಿನ ಭಕ್ತಾದಿಗಳು ಶ್ರೀಮಠಕ್ಕೆ ಹೋಗುತ್ತಿದ್ದರು. ಆಗಾಗ ರೈಲ್ವೆಗೇಟ್ ಹಾಕೊದ್ರಿಂದ ಸಂಚಾರಕ್ಕೆ ಅಡ್ಡಿಯಾಗುತಿತ್ತು. ಮಠದ ಭಕ್ತಾದಿಗಳಿಗೆ ಈ ಕಿರಿಕಿರಿ ತಪ್ಪಿಸಲು ರೈಲ್ವೆ ಅಂಡರ್ ಪಾಸ್ ನಿರ್ಮಿಸಿ ಕೊಡಲು ರೇಲ್ವೆ ಇಲಾಖೆ ಒಪ್ಪಿಕೊಂಡಿತ್ತು.

    2019 ನವೆಂಬರ್ ತಿಂಗಳಿಂದ ಕಾಮಗಾರಿಯನ್ನೂ ಆರಂಭಿಸಿತ್ತು. ರೈಲ್ವೆ ಇಲಾಖೆ ಅಂಡರ್ ಪಾಸ್ ಕಾಮಗಾರಿ ಪೂರ್ಣಗೊಳಿಸಿದರೂ ಅಂಡರ್ ಪಾಸ್ ನಂತರದ ರಸ್ತೆ ನಿರ್ಮಾಣ ಕೆಲಸ ನೆನೆಗುದಿಗೆ ಬಿದ್ದಿದೆ. ಈ ರಸ್ತೆ ನಿರ್ಮಾಣ ಜವಾಬ್ದಾರಿ ಲೋಕೋಪಯೋಗಿ ಇಲಾಖೆಯದ್ದು. ರಸ್ತೆ ನಿರ್ಮಾಣಕ್ಕೆ ಬೇಕಾದ ಭೂಮಿ ಸ್ವಾಧೀನಪಡಿಸಿಕೊಂಡು ಬೇಗ ಕಾಮಗಾರಿ ಆರಂಭ ಮಾಡಬೇಕಿದ್ದ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ಮೌನವಹಿಸಿದ್ದಾರೆ. ಪರಿಣಾಮ ಭಕ್ತಾದಿಗಳಿಗೆ ತೊಂದರೆಯಾಗುತ್ತಿದೆ.  ಇದನ್ನೂ ಓದಿ: ಸರ್ಕಾರದಿಂದ್ಲೇ ಹುಚ್ಚಗಣಿ ದೇವಸ್ಥಾನ ಪುನರ್ ನಿರ್ಮಾಣ- ಸಂಪುಟ ಸಭೆಯಲ್ಲಿ ತೀರ್ಮಾನ ನಿರೀಕ್ಷೆ

    ರಸ್ತೆ ನಿರ್ಮಾಣಕ್ಕೆ ವಶಪಡಿಸಿಕೊಳ್ಳಲಾಗುವ ಭೂಮಿಗೆ ನೀಡುವ ಪರಿಹಾರದಲ್ಲಿ ತಾರತಮ್ಯ ಮಾಡುತ್ತಿರುವುದರಿಂದ ಮೂರ್ನಾಲ್ಕು ಜನರು ಜಾಗ ನೀಡಲು ಒಪ್ಪುತ್ತಿಲ್ಲ. ವಾಣಿಜ್ಯ ಉದ್ದೇಶದಿಂದ ಪರಿವರ್ತನೆಯಾದ ಒಂದು ಅಡಿ ಜಾಗಕ್ಕೆ 3700 ರೂ ಪರಿಹಾರ ನಿಗದಿ ಮಾಡಿದರೆ, ಕಂದಾಯ ಭೂಮಿಗೆ ಅಡಿಯೊಂದಕ್ಕೆ 700 ರೂ. ಪರಿಹಾರ ನಿಗದಿ ಮಾಡಿದ್ದಾರೆ. ಇದರಿಂದ ಕಂದಾಯ ಭೂಮಿ ಹೊಂದಿರುವ ನಾಲ್ಕು ಜನರು ರಸ್ತೆಗೆ ಜಾಗಬಿಟ್ಟುಕೊಡಲು ಒಪ್ಪುತಿಲ್ಲ. ತಮಗೂ ವಾಣಿಜ್ಯ ಭೂಮಿಗೆ ಕೊಟ್ಟ ದರವೇ ನಿಗದಿ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಈ ಕಾರಣದಿಂದಾಗಿ ರಸ್ತೆ ಕಾಮಗಾರಿ ಆರಂಭವಾಗಿಲ್ಲ.

    ಇನ್ನು ಅಂಡರ್ ಪಾಸ್ ಕಾಮಗಾರಿ ಆರಂಭವಾದ ದಿನದಿಂದ ರೈಲ್ವೆಗೇಟ್ ಮುಚ್ಚಲಾಗಿದೆ. ಪರಿಣಾಮ ಭಕ್ತಾದಿಗಳು ಬಟವಾಡಿ ಮೂಲಕ ಹಾದು ಎಚ್ ಎಮ್ ಟಿ ಮೂಲಕ ಮಠಕ್ಕೆ ಸುತ್ತಿಬಳಸಿ ಬರಬೇಕು. ಅತ್ತ ಸ್ವಾಮಿಜಿಗಳು, ಮಠದ ವಿದ್ಯಾರ್ಥಿಗಳೂ 2-3 ಕಿಮಿ ದೂರ ಸುತ್ತಿಬಳಸಿ ಓಡಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ಭೂಮಿ ಮಾಲೀಕರು- ಲೊಕೋಪಯೋಗಿ ಇಲಾಖೆ ನಡುವಿನ ನಾ…ಕೊಡೆ, ನೀ..ಬಿಡೆ ಧೋರಣೆಯಿಂದಾಗಿ ಭಕ್ತಾಧಿಗಳು, ಮಠದ ವಿದ್ಯಾರ್ಥಿಗಳು ನಿತ್ಯಕಿರಿಕಿರಿ ಅನುಭವಿಸುವಂತಾಗಿದೆ.

  • 6,50,000 ರೂ.ಗೆ ದೇವರ ತೆಂಗಿನಕಾಯಿ ಖರೀದಿಸಿದ ಭಕ್ತ!

    6,50,000 ರೂ.ಗೆ ದೇವರ ತೆಂಗಿನಕಾಯಿ ಖರೀದಿಸಿದ ಭಕ್ತ!

    ಬಾಗಲಕೋಟೆ: ತಿಕೋಟಾ ಮೂಲದ ಭಕ್ತರೊಬ್ಬರು 6 ಲಕ್ಷದ 50 ಸಾವಿರ ರೂಪಾಯಿಗೆ ದೇವರ ತೆಂಗಿನಕಾಯಿ ಖರೀದಿಸಿ ಭಾರೀ ಅಚ್ಚರಿ ಮೂಡಿಸಿದ್ದಾರೆ.

    ವಿಜಯಪುರ ಜಿಲ್ಲೆ ತಿಕೋಟಾ ಮೂಲದ ನಿವಾಸಿ ಮಹಾವೀರ ಹರಕೆ 6,50,000 ರೂ. ಸವಾಲು ಕೂಗಿ ತೆಂಗಿನಕಾಯಿ ಪಡೆದ ವ್ಯಕ್ತಿ. ಬಾಗಲಕೋಟೆಯ ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದಲ್ಲಿ ಮಾಳಿಂಗರಾಯನ ಜಾತ್ರೆಯಲ್ಲಿ ಈ ಘಟನೆ ನಡೆದಿದೆ. ಮಾಳಿಂಗರಾಯ ಜಾತ್ರೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮೊತ್ತಕ್ಕೆ ಕಾಯಿ ಮಾರಾಟವಾಗಿದೆ.

    ಪ್ರತಿ ವರ್ಷ ಶ್ರಾವಣ ಮಾಸದ ಮುಕ್ತಾಯದ ವೇಳೆ ಮಾಳಿಂಗರಾಯ ಜಾತ್ರೆ ನಡೆಯುತ್ತದೆ. ಜಾತ್ರೆ ಬಳಿಕ ದೇವರ ಗದ್ದುಗೆ ಮೇಲಿನ ತೆಂಗಿನಕಾಯಿ ಹಾಗೂ ಪಲ್ಲಕ್ಕಿ ಮೇಲಿನ ಕಾಯಿಗಳ ಹರಾಜು ನಡೆಯುತ್ತದೆ. ಗದ್ದುಗೆ ಮೇಲಿನ ಪಲ್ಲಕ್ಕಿ ಮೇಲಿನ ಕಾಯಿ ಮನೆಗೆ ಒಯ್ದರೆ ಒಳಿತಾಗುತ್ತದೆ ಎಂಬುದು ನಂಬಿಕೆ. ಪಲ್ಲಕ್ಕಿ 10 ಕಾಯಿಗಳಿರುತ್ತೆವೆ, ಮಾಳಿಂಗರಾಯನ ಗದ್ದುಗೆ ಮೇಲೆ ಒಂದು ಕಾಯಿ ಇರುತ್ತದೆ. ಇದನ್ನೂ ಓದಿ: ರೈಲು ತಡವಾದರೆ ಪ್ರಯಾಣಿಕರಿಗೆ ಕೊಡಬೇಕು ಪರಿಹಾರ: ಸುಪ್ರೀಂ ಕೋರ್ಟ್

    ಬೀರಲಿಂಗೇಶ್ವರ್ ಪಲ್ಲಕ್ಕಿ ಮೇಲೆ 2 ಕಾಯಿಗಳಿರುತ್ತವೆ. ಅದರಲ್ಲಿ ಮಾಳಿಂಗರಾಯನ ಗದ್ದುಗೆ ಮೇಲೆ ಒಂದು ಕಾಯಿಗೆ ಭಾರೀ ಬೇಡಿಕೆಯಿರುತ್ತೆ. ಮಾಳಿಂಗರಾಯ ಗದ್ದುಗೆ ಕಾಯಿಂದ ಮನೆ ಹಾಗೂ ಉದ್ಯಮಕ್ಕೆ ಶುಭವಾಗಲಿದೆಯೆಂದು ಇದನ್ನು ಖರೀದಿಸುತ್ತಾರೆ.

  • ಇಂದಿನಿಂದ ಪ್ರಖ್ಯಾತ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಸರ್ವದರ್ಶನಕ್ಕೆ ಅವಕಾಶ

    ಇಂದಿನಿಂದ ಪ್ರಖ್ಯಾತ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಸರ್ವದರ್ಶನಕ್ಕೆ ಅವಕಾಶ

    – ಮೊದಲಿಗೆ ಚಿತ್ತೂರು ಜಿಲ್ಲೆಯ ಭಕ್ತರಿಗೆ ಅವಕಾಶ

    ಹೈದರಾಬಾದ್: ಮಹಾಮಾರಿ ಕೊರೊನಾ ವೈರಸ್ ಅಬ್ಬರ ತಗ್ಗುತ್ತಿರುವ ಹೊತ್ತಲ್ಲಿ ತಿರುಪತಿ ತಿಮ್ಮಪ್ಪನ ಭಕ್ತರಿಗೆ ತಿರುಪತಿ ದೇಗುಲದ ಆಡಳಿತ ಮಂಡಳಿ (ಟಿಟಿಡಿ) ಸಿಹಿಸುದ್ದಿ ನೀಡಿದೆ.

    ಇಂದಿನಿಂದ ಪ್ರಖ್ಯಾತ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಸರ್ವದರ್ಶನಕ್ಕೆ ಅವಕಾಶ ನೀಡಲಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ಟೋಕನ್ ವಿತರಣೆ ನಡೆಯಲಿದೆ. ಮೊದಲಿಗೆ ಚಿತ್ತೂರು ಜಿಲ್ಲೆಯ ಭಕ್ತರಿಗೆ ಅವಕಾಶ ನೀಡಲಾಗಿದ್ದು ಪ್ರತಿದಿನ 2 ಸಾವಿರ ಟೋಕನ್ ವಿತರಿಸಲಾಗುತ್ತದೆ. ಶ್ರೀನಿವಾಸ ಕಾಂಪ್ಲೆಕ್ಸ್ ನ ಕೌಂಟರ್ ಗಳಲ್ಲಿ ಟೋಕನ್ ಸಿಗಲಿದೆ. ಈ ಮೊದಲು ಸರ್ವದರ್ಶನಕ್ಕೆ 8 ಸಾವಿರ ಟೋಕನ್ ವಿತರಿಸಲಾಗುತ್ತಿತ್ತು.

    ಈ ಹಿಂದೆ ತಿರುಪತಿಯಲ್ಲಿ ನೀಡಲಾಗುವ ಲಡ್ಡು ಪ್ರಸಾದದ ವಿಲೇವಾರಿಗಾಗಿ ಪರಿಸರ ಸ್ನೇಹಿ ಬ್ಯಾಗ್‍ಗಳನ್ನು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ತಯಾರಿಸಿತ್ತು. ಹೊಸ ಬ್ಯಾಗ್‍ಗಳಲ್ಲಿ ಲಡ್ಡು ವಿತರಿಸುವ ಕೌಂಟರ್ ಅನ್ನು ಡಿಆರ್‍ಡಿಒ ಮುಖ್ಯಸ್ಥ ಸತೀಶ್ ರೆಡ್ಡಿ ಹಾಗೂ ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ಮುಖ್ಯಸ್ಥ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎಸ್ ಜವಾಹರ್ ರೆಡ್ಡಿ ಉದ್ಘಾಟಿಸಿದ್ದರು. ಇದನ್ನೂ ಓದಿ: ನೇಪಾಳದಲ್ಲಿ ಪ್ರವಾಹ – 50ಕ್ಕೂ ಹೆಚ್ಚು ಮಂದಿ ನೀರಿನಲ್ಲಿ ಕೊಚ್ಚಿ ಹೋದ್ರು!

    ಸಾಂಪ್ರದಾಯಿಕವಾಗಿ ಬಳಸಲಾಗುವ ಪ್ಲಾಸ್ಟಿಕ್ ಬ್ಯಾಗ್‍ಗಳು, ಪೆಟ್ರೋಕೆಮಿಕಲ್ಸ್‍ನಿಂದ ತಯಾರಿಸಲ್ಪಟ್ಟಿರುತ್ತವೆ. ಅವು ಆರೋಗ್ಯಕ್ಕೆ ಹಾನಿಕಾರಕ. ಅಂಥ ಬ್ಯಾಗ್‍ಗಳು ಮಣ್ಣಿನಲ್ಲಿ ಕೊಳೆಯಲು 200ಕ್ಕೂ ಹೆಚ್ಚು ವರ್ಷಗಳನ್ನು ತೆಗೆದುಕೊಳ್ಳುತ್ತವೆ. ಆದರೆ ಡಿಆರ್‍ಡಿಒ ತಯಾರಿಸಿರುವ ಬ್ಯಾಗ್‍ಗಳು, ಆರೋಗ್ಯಕ್ಕೆ ಹಾನಿಕಾರವಲ್ಲ. ಮಣ್ಣಿನಲ್ಲಿ ಬೇಗನೇ ಕೊಳೆಯುತ್ತವೆ. ಅಲ್ಲದೆ ಇವುಗಳ ತಯಾರಿಕಾ ವೆಚ್ಚವೂ ಕಡಿಮೆ ಎಂದು ಸತೀಶ್ ರೆಡ್ಡಿ ತಿಳಿಸಿದ್ದರು.

  • ಇತಿಹಾಸ ಪ್ರಸಿದ್ಧ ಬಯಲು ಆಂಜನೇಯ ದೇವಾಲಯದಲ್ಲಿ ಪೂಜೆ ಪುರಸ್ಕಾರ- ಭಕ್ತರ ಸಂಖ್ಯೆ ಇಳಿಕೆ

    ಇತಿಹಾಸ ಪ್ರಸಿದ್ಧ ಬಯಲು ಆಂಜನೇಯ ದೇವಾಲಯದಲ್ಲಿ ಪೂಜೆ ಪುರಸ್ಕಾರ- ಭಕ್ತರ ಸಂಖ್ಯೆ ಇಳಿಕೆ

    ನೆಲಮಂಗಲ: ಮುಜರಾಯಿ ಇಲಾಖೆಯ ಎ ಗ್ರೇಡ್ ಶ್ರೇಣಿಯ ಗೊಲ್ಲಹಳ್ಳಿ ಬಯಲು ಆಂಜನೇಯ ದೇವಾಲಯ ಮುಕ್ತವಾಗಿದೆ.

    ಕೋವಿಡ್ 19ನಿಂದ ಇಡೀ ರಾಜ್ಯವೇ ಲಾಕ್‍ಡೌನ್ ಆಗಿ, ಇಂದಿನಿಂದ ಅನ್‍ಲಾಕ್ ಆಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದೇವಾಲಯಗಳು ದರ್ಶನಕ್ಕೆ ಮುಕ್ತವಾಗಿದೆ. ನೆಲಮಂಗಲ ಗ್ರಾಮಾಂತರ ಭಾಗದ, ಮುಜರಾಯಿ ಇಲಾಖೆಯ ಎ ಗ್ರೇಡ್ ಶ್ರೇಣಿಯ ರೈಲ್ವೆ ಗೊಲ್ಲಹಳ್ಳಿ (ಬೈರಶೆಟ್ಟಿಹಳ್ಳಿ) ಇತಿಹಾಸ ಪ್ರಸಿದ್ದ ಶ್ರೀ ಬೈಲಾಂಜನೇಯ ದೇವಾಲಯದಲ್ಲಿ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ.

    ಮುಜರಾಯಿ ಇಲಾಖೆ ದೇವಾಲಯವಾದ್ದರಿಂದ ಸರ್ಕಾರದ ಯೋಜನೆಗಳಿಗೆ ಒಳಪಡುವ ಗೊಲ್ಲಹಳ್ಳಿ ಆಂಜನೇಯ ದೇವಾಲಯದ ಬೆಳಗ್ಗೆಯೇ ದೇವಾಲಯ ಆವರಣ ಸ್ವಚ್ಚತೆಯಾಗಿದೆ. ಕೋವಿಡ್ ಹಿನ್ನೆಲೆ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಇಲ್ಲ ಎಂದು ಪ್ರಧಾನ ಅರ್ಚಕರಾದ ವಸಂತ್ ಕುಮಾರ್ ಹಾಗೂ ಪಾರಪತ್ತೇದಾರ ಶ್ರೀನಿವಾಸ್ ತಿಳಿಸಿದ್ದಾರೆ.

    ಕೋವಿಡ್ ನಿಯಮ ಎಚ್ಚರಿಕೆ ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಕಟ್ಟುನಿಟ್ಟಾಗಿ ಪಾಲಿಸಿದ್ದಾರೆ. ಆದರೆ ಮೊದಲ ದಿನವಾದ ಇಂದು ಭಕ್ತರ ಸಂಖ್ಯೆ ಕಡೆಮೆ ಇದ್ದು ಮುಂದಿನ ದಿನಗಳಲ್ಲಿ ಭಕ್ತರು ಬರುವ ವಿಶ್ವಾಸವನ್ನ ಅರ್ಚಕರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಕೆಟ್ಟವರೊಂದಿಗೆ ಒಳ್ಳೆಯವರ ಸೇರ್ಪಡೆ – ಬಿಎಸ್‍ವೈ ವಿರುದ್ಧ ಗುಡುಗಿದ ಯತ್ನಾಳ್

  • ಇಂದಿನಿಂದ ಮಂತ್ರಾಲಯದಲ್ಲಿ ರಾಯರ ದರ್ಶನಕ್ಕೆ ಅವಕಾಶ

    ಇಂದಿನಿಂದ ಮಂತ್ರಾಲಯದಲ್ಲಿ ರಾಯರ ದರ್ಶನಕ್ಕೆ ಅವಕಾಶ

    ರಾಯಚೂರು: ಕೊರೊನಾ 2ನೇ ಅಲೆ ಇಳಿಕೆ ಹಿನ್ನೆಲೆ 52 ದಿನಗಳ ಬಳಿಕ ಇಂದಿನಿಂದ ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಭಕ್ತರಿಗೆ ರಾಯರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆವರೆಗೆ ಹಾಗೂ ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ದರ್ಶನಕ್ಕೆ ಅನುವುಮಾಡಲಾಗಿದೆ.

    ಕೋವಿಡ್ ನಿಯಮಗಳನ್ನು ಪಾಲಿಸುವ ಭಕ್ತರಿಗೆ ಮಾತ್ರ ದೇವಾಲಯದ ಒಳಗೆ ಪ್ರವೇಶ ನೀಡಲಾಗುತ್ತಿದೆ. ಥರ್ಮಲ್ ಸ್ಕ್ಯಾನರ್, ಸ್ಯಾನಿಟೈಸರ್ ವ್ಯವಸ್ಥೆಮಾಡಲಾಗಿದೆ. ಮಠದ ಪ್ರಾಂಗಣದಲ್ಲಿ ಪ್ರದಕ್ಷಿಣೆ ನಿಷೇಧಿಸಲಾಗಿದ್ದು, ಭಕ್ತರಿಗೆ ಪರಿಮಳ ಪ್ರಸಾದ ಮಾತ್ರ ನೀಡಲಾಗುತ್ತಿದೆ. ಮಠದ ಸಿಬ್ಬಂದಿ ಮಾತ್ರ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಂದು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಭಕ್ತರು ರಾಯರ ದರ್ಶನ ಪಡೆಯುತ್ತಿದ್ದಾರೆ.

    ಆಂಧ್ರ ಪ್ರದೇಶದಲ್ಲೂ ಲಾಕ್‍ಡೌನ್ ಸಡಿಲಿಕೆಯಾಗಿರುವ ಹಿನ್ನೆಲೆ ಇಂದಿನಿಂದ ಮಂತ್ರಾಲಯ ಮಠದ ಮುಖ್ಯದ್ವಾರ ತೆರೆಯಲಾಗಿದೆ. ರಾಯಚೂರಿನಿಂದ ಮಂತ್ರಾಲಯ ಸೇರಿದಂತೆ ಆಂಧ್ರ ಪ್ರದೇಶಕ್ಕೆ ಬಸ್‍ಗಳ ಓಡಾಟ ಸಹ ಇಂದಿನಿಂದ ಆರಂಭವಾಗಿದೆ. ಇಷ್ಟು ದಿನ ರಾಜ್ಯದ ವಿವಿಧೆಡೆಯಿಂದ ಬರುತ್ತಿದ್ದ ಭಕ್ತರು ಮುಖ್ಯ ದ್ವಾರಕ್ಕೆ ಪ್ರಾರ್ಥನೆ ಸಲ್ಲಿಸಿ ಹೋಗುತ್ತಿದ್ದರು. ಈಗ ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆ ಕೋವಿಡ್ ನಿಯಮಗಳ ಅನ್ವಯ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

    ರಾಯರ ಭಕ್ತರಿಗೆ ಮುಕ್ತ ಅವಕಾಶ ನೀಡಲು ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿ ಆದೇಶ ನೀಡಿದ್ದು, ಅದರಂತೆ ಮಠದ ಆಡಳಿತ ಮಂಡಳಿ ನಿರ್ಧರಿಸಿತ್ತು. ಕೋವಿಡ್ ನಿಯಮಗಳಿಗೆ ಒಳಪಟ್ಟು ದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೆ ಭಕ್ತಾದಿಗಳು ಸಹ ಮಾಸ್ಕ್, ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮಂತ್ರಾಲಯ ಮಠದ ವ್ಯವಸ್ಥಾಪಕ ವೆಂಕಟೇಶ ಜೋಷಿ ಹೇಳಿದ್ದರು ಮೂರು ದಿನಗಳ ಹಿಂದೆ ತಿಳಿಸಿದ್ದರು.

  • ನಾಡಿನೆಲ್ಲೆಡೆ ವೈಕುಂಠ ಏಕಾದಶಿ ಆಚರಣೆ – ಜಗತ್ ರಕ್ಷಕನ ದರ್ಶನಕ್ಕೂ ಕೊರೊನಾ ಅಡ್ಡಗಾಲು

    ನಾಡಿನೆಲ್ಲೆಡೆ ವೈಕುಂಠ ಏಕಾದಶಿ ಆಚರಣೆ – ಜಗತ್ ರಕ್ಷಕನ ದರ್ಶನಕ್ಕೂ ಕೊರೊನಾ ಅಡ್ಡಗಾಲು

    ಬೆಂಗಳೂರು: ಇಂದು ವೈಕುಂಠ ಏಕಾದಶಿ ಸಂಭ್ರಮವಾಗಿದ್ದು, ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆ. ಎಲ್ಲೆಲ್ಲೂ ಗೋವಿಂದ..ಗೋವಿಂದ ನಾಮಸ್ಮರಣೆ ಕೇಳಿಬರುತ್ತಿದೆ. ಆದರೆ ದೇಗುಲಗಳಲ್ಲಿ ದರ್ಶನಕ್ಕೂ ಕೊರೊನಾ ಅಡ್ಡಗಾಲು ಹಾಕಿದೆ.

    ಕೊರೊನಾದಿಂದಾಗಿ ಬಹುತೇಕ ದೇವಾಲಯಗಳಲ್ಲಿ ಭಕ್ತರಿಗೆ ನಿಷೇಧ ಹೇರಲಾಗಿದೆ. ಇಸ್ಕಾನ್ ದೇಗುಲದಲ್ಲಿ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ. ಭಕ್ತರಿಗೆ ಆನ್‍ಲೈನ್ ಮೂಲಕ ಶ್ರೀವಾರಿಯ ದರ್ಶನ ಭಾಗ್ಯ ಕಲ್ಪಿಸಲಾಗಿದೆ. ಬೆಂಗಳೂರಿನ ಟಿಟಿಡಿ ದೇಗುಲದಲ್ಲಿ ಬೆಳಗ್ಗೆಯಿಂದಲೇ ಭಕ್ತರ ಸಾಲುಗಟ್ಟಿ ನಿಂತಿದ್ದಾರೆ. ಈ ಬಾರಿ 10 ದಿನಗಳ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ.

    ಮಲ್ಲೇಶ್ವರಂನಲ್ಲಿರೋ ತಿರುಪತಿ ತಿರುಮಲ ದೇವಸ್ಥಾನದ ಬಳಿ ಕೂಡ ಭಕ್ತರು ಕ್ಯೂನಲ್ಲಿ ನಿಂತಿದ್ದಾರೆ. ಕೊವೀಡ್ ಹಿನ್ನೆಲೆ ಈ ಬಾರಿ 10 ದಿನ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಒಂದೇ ದಿನ ಲಕ್ಷಾಂತರ ಭಕ್ತಾದಿಗಳು ದರ್ಶನಕ್ಕೆ ಬರುತ್ತಾರೆ. ಕೋವಿಡ್ ನಿಯಮ ಪಾಲನೆ ಮಾಡೊದಕ್ಕೆ ಆಗೋದಿಲ್ಲ ಅನ್ನೋ ಕಾರಣಕ್ಕೆ 10 ದಿನ ಭಕ್ತಾದಿಗಳ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ.

    ಮಹಾಲಕ್ಷ್ಮೀ ಲೇಔಟ್ ವೆಂಕಟೇಶ್ವರ ದೇವಾಲಯದಲ್ಲಿ ಸ್ವರ್ಗದ ಬಾಗಿಲು ವ್ಯವಸ್ಥೆ ಇಲ್ಲ. ಕೋವಿಡ್ ಹಿನ್ನೆಲೆಯಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಈವರೆಗೂ ಸಾವಿರಾರು ಭಕ್ತರು ದೇವರ ದರ್ಶನ ಮಾಡಿದ್ದಾರೆ. ಅರ್ಚನೆ, ಪ್ರಸಾದ, ತೀರ್ಥ ಹಾಗೂ ಮಂಗಳಾರತಿ ಸಹ ಕೊಡಲ್ಲ.

  • ಶಿರಡಿ ಸಾಯಿಬಾಬಾಗೆ ಕೇವಲ 10 ದಿನದಲ್ಲಿ 3 ಕೋಟಿಗೂ ಅಧಿಕ ದೇಣಿಗೆ

    ಶಿರಡಿ ಸಾಯಿಬಾಬಾಗೆ ಕೇವಲ 10 ದಿನದಲ್ಲಿ 3 ಕೋಟಿಗೂ ಅಧಿಕ ದೇಣಿಗೆ

    – ದರ್ಶನಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ
    – ಭಕ್ತರು ನೀಡಿದ ಚಿನ್ನ, ಬೆಳ್ಳಿಯೆಷ್ಟು?

    ಮುಂಬೈ: ಕೊರೊನಾ ವೈರಸ್ ಭೀತಿಯಿಂದ ಮುಚ್ಚಿದ್ದ ಶಿರಡಿ ಸಾಯಿಬಾಬಾ ಮಂದಿರ ಮತ್ತೆ ಓಪನ್ ಆಗಿದೆ. ಸದ್ಯ ಸಾಯಿಬಾಬಾ ದರ್ಶನಕ್ಕೆ ಭಕ್ತಸಾಗರವೇ ಹರಿದುಬರುತ್ತಿದ್ದು, ಮಂಗಳವಾರದವರೆಗೆ ಸುಮಾರು 1 ಲಕ್ಷಕ್ಕೂ ಹೆಚ್ಚು ಭಕ್ತರು ಸಾಕ್ಷಿಯಾದರು.

    ವಿಶ್ವದಾದ್ಯಂತ ಭಕ್ತರು 3.09 ಕೋಟಿ ರೂ., 2,85,629 ರೂ. ಮೌಲ್ಯದ 64 ಗ್ರಾಂ ಚಿನ್ನದ ಜೊತೆಗೆ 93,000 ರೂ. ಮೌಲ್ಯದ 2.8 ಕೆ.ಜಿ ಬೆಳ್ಳಿಯನ್ನು ದಾನ ಮಾಡಿದ್ದಾರೆ.

    ಆನ್‍ಲೈನ್ ಮೂಲಕ ದೇವರ ದರ್ಶನಕ್ಕೆ ಬುಕ್ ಮಾಡಲಾಗುತ್ತಿದೆ. ನವೆಂಬರ್ 16 ಸೋಮವಾರದಿಂದ ರಾಜ್ಯದ ಎಲ್ಲಾ ದೇವಾಲಯಗಳು ಹಾಗೂ ಪೂಜಾ ಸ್ಥಳಗಳನ್ನು ಮತ್ತೆ ತೆರೆಯಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿತ್ತು.

    ಕಳೆದ ಮಾರ್ಚ್ ತಿಂಗಳಲ್ಲಿ ಕೊರೊನಾ ವೈರಸ್ ನಿಂದಾಗಿ ದೇಶಾದ್ಯಂತ ಲಾಕ್‍ಡೌನ್ ಘೋಷಿಸಿದಾಗಿನಿಂದ ಮಹಾರಾಷ್ಟ್ರದಲ್ಲಿ ಧಾರ್ಮಿಕ ಸ್ಥಳಗಳು ಮುಚ್ಚಲ್ಪಟ್ಟಿತ್ತು. ದೇವಾಲಯಗಳನ್ನು ಪುನಃ ತೆರೆಯುವಂತೆ ವಿರೋಧ ಪಕ್ಷಗಳು ಮತ್ತು ಕೆಲವು ಧಾರ್ಮಿಕ ಗುಂಪುಗಳು ಒತ್ತಾಯಿಸಿದರೂ, ಮಹಾರಾಷ್ಟ್ರ ಸರ್ಕಾರವು ರಾಜ್ಯದಲ್ಲಿ ನಡೆಯುತ್ತಿರುವ ಕೊರೊನಾ ವೈರಸ್ ಪ್ರಕರಣಗಳು ಕಡಿಮೆಯಾಗಲು ಕಾಯುತ್ತಿತ್ತು.

    ಸದ್ಯ ದೇವಾಲಯಗಳನ್ನು ಓಪನ್ ಮಾಡಲು ಅನುಮತಿ ನೀಡಿರುವ ಸಿಎಂ ಉದ್ಧವ್ ಠಾಕ್ರೆ, ರಾಕ್ಷಸ ಕೊರೊನಾ ವೈರಸ್ ಇನ್ನೂ ನಮ್ಮ ನಡುವೆ ಇದೆ ಎಂಬುದನ್ನು ನಾವು ಮರೆಯಲು ಸಾಧ್ಯವಿಲ್ಲ. ನಾಗರಿಕರು ಕೊರೊನಾ ನಿಯಮಗಳನ್ನು ಅನುಸರಿಸಬೇಕು. ಹಬ್ಬಗಳನ್ನು ಆಚರಿಸುವಾಗಲೂ ಎಚ್ಚರದಿಂದರಬೇಕು. ಕೋವಿಡ್ 19 ಸುರಕ್ಷತಾ ಪ್ರೋಟೋಕಾಲ್ ಗಳನ್ನು ಗಮನದಲ್ಲಿಟ್ಟುಕೊಂಡು ಹಬ್ಬಗಳನ್ನು ಆಚರಿಸುವಂತೆ ತಿಳಿಸಿದ್ದರು.

  • ನಾನು ಕುಡಿಯೋದಿಲ್ಲ, ಸಂಜೆ ಸ್ವಲ್ಪ ಸ್ವಲ್ಪ ಅಷ್ಟೇ ತೆಗೆದುಕೊಳ್ತೇನೆ – ಹಾಸನಾಂಬೆಗೆ ಭಕ್ತನ ವಿಚಿತ್ರ ಕೋರಿಕೆ

    ನಾನು ಕುಡಿಯೋದಿಲ್ಲ, ಸಂಜೆ ಸ್ವಲ್ಪ ಸ್ವಲ್ಪ ಅಷ್ಟೇ ತೆಗೆದುಕೊಳ್ತೇನೆ – ಹಾಸನಾಂಬೆಗೆ ಭಕ್ತನ ವಿಚಿತ್ರ ಕೋರಿಕೆ

    – 22 ಲಕ್ಷದ 79 ಸಾವಿರದ 772 ರೂ. ಸಂಗ್ರಹ

    ಹಾಸನ: ಹಾಸನಾಂಬೆಯ ಹುಂಡಿಗೆ ಎಂದಿನಂತೆ ಈ ಬಾರಿಯೂ ಕಾಣಿಕೆ ಜೊತೆಗೆ ವಿವಿಧ ರೀತಿಯ ನಿವೇದನೆ ಸಲ್ಲಿಸಿ ಭಕ್ತರು ಪತ್ರ ಬರೆದು ಹಾಕಿದ್ದಾರೆ.

    ಕೌಟುಂಬಿಕ ಸಮಸ್ಯೆ, ಸಾಲ ತೀರಿಸು, ಹಣಕಾಸು ಸಮಸ್ಯೆ ಬಗೆಹರಿಸು ತಾಯಿ, ಒಳ್ಳೆಯ ಕೆಲಸ ಕೊಡಿಸು, ನನಗೆ ನನ್ನ ಹೆಂಡತಿ ಮಕ್ಕಳು ಬೇಕು, ನನಗೆ ಮದುವೆ ಆಗಬೇಕು ಅಮ್ಮ, ದೊಡ್ಡಮೊತ್ತದ ಲಾಟರಿ ಹೊಡೆಸು ತಾಯಿ, ಕುಟುಂಬದವರನ್ನು ಕಾಪಾಡು ತಾಯಿ, ಪ್ರಾಣಿ ಪಕ್ಷಿಗಳನ್ನು ಕಾಪಾಡು ತಾಯಿ ಹಾಸನಾಂಬೆ ಎಂದು ಹಲವರು ಪ್ರಾರ್ಥನೆ ಸಲ್ಲಿಸಿದ್ದರು.

    ಕೊರೊನಾ ಹೋಗಲಾಡಿಸು ಎಂದು ಕೇಳಿಕೊಂಡಿರುವ ಹಲವರು, ಪತ್ನಿ-ಮಕ್ಕಳ ಒಂದು ಮಾಡು, ನನ್ನ ಗಂಡ ಕುಡಿಯುವುದು ಬಿಡಿಸು ಎಂದು ಪತ್ರದ ಮೂಲಕ ನಿವೇದನೆ ಮಾಡಿಕೊಂಡಿದ್ದರು. ಇದೇ ರೀತಿ ಹಾಸನಾಂಬೆ ಪಾಸ್ ವಿತರಣೆ ತಾರತಮ್ಯದ ವಿರುದ್ಧ ಪತ್ರದ ಮೂಲಕ ಕೆಲವರು ಅಸಮಾಧಾನ ಹೊರಹಾಕಿದ್ದರು. ಮತ್ತೊಬ್ಬ ಭಕ್ತನಂತು ಕುಡಿಯುವುದನ್ನು ಬಿಡುತ್ತೇನೆ. ಆದರೆ ಸಂಜೆ ಸ್ವಲ್ಪ ಸ್ವಲ್ಪ ಕುಡಿಯುತ್ತೇನೆ ಎಂದು ಬರೆದು ಹಾಕಿದ್ದ.

    ಪತ್ರಿವರ್ಷ ಕಾಣಿಕೆ ರೂಪದಲ್ಲಿ ಕೋಟಿ ಕೋಟಿ ಬರುತ್ತಿದ್ದ ಆದಾಯ ಇಳಿಕೆ ಕಂಡಿದ್ದು, ಈ ಬಾರಿ ಸಾರ್ವಜನಿಕ ದರ್ಶನ ನಿಷೇಧದಿಂದ ಆದಾಯ ಕಡಿಮೆಯಾಗಿದೆ. ಹುಂಡಿಯಲ್ಲಿ ಈ ಬಾರಿ 22 ಲಕ್ಷದ 79 ಸಾವಿರದ 772 ರೂಪಾಯಿ ಸಂಗ್ರಹವಾಗಿದೆ. ಈ ಬಾರಿ ಸಾರ್ವಜನಿಕರಿಗೆ ದೇವಿ ದರ್ಶನ ನಿರ್ಬಂಧ ಹಿನ್ನೆಲೆಯಲ್ಲಿ ಹುಂಡಿ ಹಣದಲ್ಲಿ ಭಾರೀ ಇಳಿಕೆಯಾಗಿದೆ. ಕಳೆದ ವರ್ಷ 10 ದಿನಗಳಲ್ಲಿ ಮೂರೂವರೆ ಕೋಟಿ ಹಣ ಹುಂಡಿಯಲ್ಲಿ ಸಂಗ್ರಹವಾಗಿತ್ತು. ಈ ಬಾರಿ ಕೊರೊನಾ ಎಫೆಕ್ಟ್ ನಿಂದ ನವೆಂಬರ್ 5 ರಿಂದ 16 ರವೆರೆಗೆ ನಡೆದಿದ್ದ ಹಾಸನಾಂಬೆ ಉತ್ಸವ ಸರಳವಾಗಿ ನಡೆಸಲಾಗಿತ್ತು.

  • ಶಬರಿಮಲೆಗೆ ಹೋಗುವ ಭಕ್ತರಿಗೆ ಮಾರ್ಗಸೂಚಿ ಬಿಡುಗಡೆ

    ಶಬರಿಮಲೆಗೆ ಹೋಗುವ ಭಕ್ತರಿಗೆ ಮಾರ್ಗಸೂಚಿ ಬಿಡುಗಡೆ

    ಬೆಂಗಳೂರು/ತಿರುವನಂತಪುರಂ: ಶಬರಿ ಮಲೆ ದೇವಸ್ಥಾನಕ್ಕೆ ಹೋಗುವ ಭಕ್ತರಿಗಾಗಿ ಕೇರಳ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಏಳು ಮಾರ್ಗ ಸೂಚಿಗಳನ್ನು ಒಳಗೊಂಡ ಪ್ರಕಟಣೆಯನ್ನು ಧಾರ್ಮಿಕ ದತ್ತಿ ಇಲಾಖೆ ಕನ್ನಡದಲ್ಲೇ  ಬಿಡುಗಡೆ ಮಾಡಿದೆ.

    ಶಬರಿಮಲೆ ವೆಬ್ ಸೈಟ್ ನಲ್ಲಿ ನೊಂದಾಯಿಸಿಕೊಂಡು ಅನುಮತಿ ಪಡೆದ ಭಕ್ತರಿಗಷ್ಟೆ ಅವಕಾಶ ನೀಡಲಾಗುತ್ತದೆ. ಪ್ರತಿದಿನ 1 ಸಾವಿರ ಭಕ್ತರಿಗೆ ವಾರಾಂತ್ಯದಲ್ಲಿ 2 ಸಾವಿರ ಭಕ್ತರಿಗೆ ದೇವಸ್ಥಾನ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ದೇವಸ್ಥಾನ ಭೇಟಿಯ 48 ಗಂಟೆ ಅವಧಿಗೆ ಮೊದಲು ಕೋವಿಡ್ ಟೆಸ್ಟ್ ಮಾಡಿಸಿದ ಸರ್ಟಿಫಿಕೇಟ್ ಹೊಂದುವುದು ಕಡ್ಡಾಯ. 10 ವರ್ಷದ ಒಳಗಿನ ಮಕ್ಕಳು 60-65 ವರ್ಷ ಮೇಲ್ಪಟ್ಟ ಹಿರಿಯರು ಹಾಗೂ ಅನಾರೋಗ್ಯದಿಂದ ನಳಲುತ್ತಿರುವವರಿಗೆ ಪ್ರವೇಶ ನಿರಾಕರಣೆ. ಇದನ್ನೂ ಓದಿ: 2 ಗ್ರಾಂ 900 ಮಿಲಿ ಚಿನ್ನದಲ್ಲಿ ಅರಳಿದ ಶಬರಿಮಲೆ ದೇವಾಲಯ

    ಬಿಪಿಎಲ್ ಕಾರ್ಡ್ ಅಥವಾ ಆಯುಷ್ಮಾನ್ ಕಾರ್ಡ್ ಹೊಂದಿದ್ದರೆ ಅದನ್ನು ಜೊತೆಗೆ ಕೊಂಡೊಯ್ಯಬೇಕು. ತುಪ್ಪದ ಅಭಿಷೇಕ, ಪಂಪಾ ನದಿಯಲ್ಲಿ ಸ್ನಾನ ಹಾಗೂ ರಾತ್ರಿ ಉಳಿದುಕೊಳ್ಳುವುದು ಯಾವುದಕ್ಕೂ ಅವಕಾಶ ಇಲ್ಲ. ಎರುಮೆಲು ಮತ್ತು ವೇದಸಾರಿಕ್ಕರ ಎರಡು ಮಾರ್ಗದಲ್ಲಷ್ಟೆ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.

  • ತಲಕಾವೇರಿ ತೀರ್ಥೋದ್ಭವಕ್ಕೆ ಭಕ್ತರಿಗೆ ನಿರ್ಬಂಧ

    ತಲಕಾವೇರಿ ತೀರ್ಥೋದ್ಭವಕ್ಕೆ ಭಕ್ತರಿಗೆ ನಿರ್ಬಂಧ

    ಮಡಿಕೇರಿ: ಇದೇ ಅಕ್ಟೋಬರ್ 17 ರಂದು ಕನ್ನಡನಾಡಿನ ಜೀವ ನದಿ ತಲಕಾವೇರಿಯಲ್ಲಿ ತೀರ್ಥೋದ್ಭವ ಜರುಗಲಿದೆ. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಕಾವೇರಿ ತೀರ್ಥೋದ್ಭವದ ವೇಳೆಯಲ್ಲಿ ಭಕ್ತರಿಗೆ ನಿರ್ಬಂಧ ಮಾಡಲಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕೆ ಜಾಯ್ ತಿಳಿಸಿದ್ದಾರೆ.

    ಮಡಿಕೇರಿ ತಾಲೂಕಿನ ತಲಕಾವೇರಿಯಲ್ಲಿ ತೀರ್ಥೋದ್ಭವ ಜನದಟ್ಟಣೆ ಆಗದಂತೆ ಸಾಂಪ್ರದಾಯಿಕ ವಿಧಿ-ವಿಧಾನಗಳಿಗೆ ಧಕ್ಕೆಯಾಗದಂತೆ ಪೂಜಾ ವಿಧಿ-ವಿಧಾನಗಳು ನಡೆಯಲಿದೆ. ಅಷ್ಟೇ ಅಲ್ಲದೇ ಈ ಬಾರಿ ತೀರ್ಥೋದ್ಭವದಲ್ಲಿ ಸ್ವಯಂಸೇವಕರು ಹಾಗೂ ಅರ್ಚಕಗಳಿಗೂ ಆರ್‍ಟಿಪಿಸಿಆರ್ ಕೊರೊನಾ ಟೆಸ್ಟ್ ಕಡ್ಡಾಯ. ಕೊವೀಡ್ ಪರೀಕ್ಷಾ ತಪಾಸಣೆಗೆ ಒಳಗಾಗಿ ನೆಗೆಟಿವ್ ವರದಿ ಬರುವವರಿಗೆ ಕಾರ್ಯಕ್ರಮಕ್ಕೆ ಭಾಗವಹಿಸಲು ಪೊಲೀಸ್ ಇಲಾಖೆ ಪಾಸ್ ನೀಡಲಿದೆ.

    ಅಷ್ಟೇ ಅಲ್ಲದೇ ಈ ಬಾರಿ ಅಕ್ಟೋಬರ್ 17 ಮತ್ತು 26 ದಸರಾ ಇರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗುವುದು. ಪ್ರವಾಸಿಗರು ಸ್ಥಳೀಯರು ಸಹಕಾರಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.