Tag: Devon Conway

  • ಚೆನ್ನೈ ತಂಡದ ಆರಂಭಿಕ ಆಟಗಾರ ಐಪಿಎಲ್‌ನಿಂದ ಔಟ್‌ – ಸಿಎಸ್‌ಕೆಗೆ ಭಾರೀ ಆಘಾತ

    ಚೆನ್ನೈ ತಂಡದ ಆರಂಭಿಕ ಆಟಗಾರ ಐಪಿಎಲ್‌ನಿಂದ ಔಟ್‌ – ಸಿಎಸ್‌ಕೆಗೆ ಭಾರೀ ಆಘಾತ

    – ಆರಂಭಿಕನಾಗಿ ರಚಿನ್‌ ರವೀಂದ್ರ ಕಣಕ್ಕಳಿಯುವ ಸಾಧ್ಯತೆ

    ಚೆನ್ನೈ: ಇದೇ ಮಾರ್ಚ್‌ 22ರಿಂದ 2024ರ ಐಪಿಎಲ್‌ (IPL 2024) ಟೂರ್ನಿ ಆರಂಭಗೊಳ್ಳಲಿದೆ. ಈ ಹೊತ್ತಿನಲ್ಲೇ ಹಾಲಿ ಚಾಂಪಿಯನ್ಸ್‌ ತಂಡಕ್ಕೆ ಭಾರೀ ಆಘಾತವಾಗಿದೆ. ಚೆನ್ನೈ ಸೂಪರ್‌ಕಿಂಗ್ಸ್‌ ತಂಡದ ಆರಂಭಿಕ ಆಟಗಾರ ಡಿವೋನ್‌ ಕಾನ್ವೆ (Devon Conway) ಮೊದಲ ಸುತ್ತಿನ 4 ಪಂದ್ಯಗಳಿಂದ (ಮಾ.22 ರಿಂದ ಏ.7ರ ವರೆಗೆ ನಡೆಯಲಿರುವ ಪಂದ್ಯಗಳು) ಹೊರಗುಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಆಸ್ಟ್ರೇಲಿಯಾದಲ್ಲಿ (Australia) ನಡೆಯುತ್ತಿರುವ ಬಿಗ್‌ಬ್ಯಾಶ್‌ ಲೀಗ್‌ ಟಿ20 (BBL T20I) ಸರಣಿಯಲ್ಲಿ ಕಾನ್ವೆ, ತಮ್ಮ ಎಡಗೈನ ಹೆಬ್ಬೆರಳಿಗೆ ಪೆಟ್ಟಾಗಿಸಿಕೊಂಡು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಅನೇಕ ಬಾರಿ ಸ್ಕ್ಯಾನ್‌ ಮಾಡಿದ ನಂತರ ತುಂಬಾ ಪೆಟ್ಟಾಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ತಜ್ಞರ ಸಲಹೆಯಂತೆ ಕಾನ್ವೆ 8 ವಾರಗಳ ಕಾಲ ವಿಶ್ರಾಂತಿ ಪಡೆಯಲು ಮುಂದಾಗಿದ್ದಾರೆ. ಹಾಗಾಗಿ ಮಾರ್ಚ್‌ 22ರಿಂದ ಏಪ್ರಿಲ್‌ 7ರ ವರೆಗೆ ನಡೆಯಲಿರುವ ಮೊದಲ 21 ಪಂದ್ಯಗಳಿಗೆ ಕಾನ್ವೆ ಗೈರಾಗಲಿದ್ದಾರೆ ಎಂದು ಸಿಎಸ್‌ಕೆ ತಂಡದ ಮೂಲಗಳು ಹೇಳಿವೆ.

    ಮೇ ತಿಂಗಳಿನಿಂದ ಅವರು ಚೆನ್ನೈ ತಂಡವನ್ನು ಸೇರಿಕೊಳ್ಳಲಿದ್ದಾರೆ. ಮೊದಲ ಸುತ್ತಿಗೆ ಅವರು ಗೈರಾಗುವುದರಿಂದ ಆರಂಭಿಕ ಋತುರಾಜ್‌ ಗಾಯಕ್ವಾಡ್‌ ಅವರೊಂದಿಗೆ ರಚಿನ್‌ ರವೀಂದ್ರ ಕಣಕ್ಕಿಳಿಯಲಿದ್ದಾರೆ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಾ.22 ರಿಂದ IPL ಶುರು; ಉದ್ಘಾಟನಾ ಪಂದ್ಯದಲ್ಲೇ ಚೆನ್ನೈ-ಆರ್‌ಸಿಬಿ ನಡುವೆ ಹೈವೋಲ್ಟೇಜ್‌ ಕದನ!

    2023ರ ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧ ಸ್ಫೋಟಕ ಪ್ರದರ್ಶನ ನೀಡಿದ್ದ ಡಿವೋನ್‌ ಕಾನ್ವೆ 16 ಪಂದ್ಯಗಳಿಂದ 6 ಅರ್ಧಶತಕಗಳೊಂದಿಗೆ 672 ರನ್‌ ಗಳಿಸಿದ್ದರು. ಈ ಮೂಲಕ 16ನೇ ಆವೃತ್ತಿಯ ಸೀರಿಸ್‌ನಲ್ಲಿ ಅತಿಹೆಚ್ಚು ರನ್‌ಗಳಿಸಿದ್ದ 3ನೇ ಆಟಗಾರನಾಗಿ ಹೊರಹೊಮ್ಮಿದ್ದರು.

    ಮಾರ್ಚ್‌ 22ರಿಂದ ಐಪಿಎಲ್‌: ಲೋಕಸಭಾ ಚುನಾವಣೆ (Lok Sabha Elections) ಹಿನ್ನೆಲೆ ಮೊದಲ 15 ದಿನಗಳ ಕಾಲ ನಡೆಯುವ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ. ಚುನಾವಣಾ ದಿನಾಂಕ ಪ್ರಕಟವಾದ ಬಳಿಕ ಮುಂದಿನ ವೇಳಾಪಟ್ಟಿ ಪ್ರಕಟಿಸುವುದಾಗಿ ಬಿಸಿಸಿಐ (BCCI) ಸ್ಪಷ್ಟಪಡಿಸಿದೆ. ಇದನ್ನೂ ಓದಿ: 20 ಕೋಟಿಯ ಸರದಾರ ಪ್ಯಾಟ್‌ ಕಮ್ಮಿನ್ಸ್‌ ಈಗ ಸನ್‌ರೈಸರ್ಸ್‌ ನಾಯಕ

    ಯಾರ ನಡುವೆ, ಯಾವ ದಿನ, ಎಲ್ಲಿ ಪಂದ್ಯ?
    1. ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಮಾರ್ಚ್ 22 ಚೆನ್ನೈ,
    2. ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಮಾರ್ಚ್ 23, ಮೊಹಾಲಿ,
    3. ಕೋಲ್ಕತ್ತಾ ನೈಟ್​ ರೈಡರ್ಸ್ vs ಸನ್​ರೈಸರ್ಸ್ ಹೈದರಾಬಾದ್, ಮಾರ್ಚ್ 23, ಕೋಲ್ಕತ್ತಾ
    4. ರಾಜಸ್ಥಾನ್ ರಾಯಲ್ಸ್ vs ಲಕ್ನೋ ಸೂಪರ್ ಜೈಂಟ್ಸ್, ಮಾರ್ಚ್ 24, ಜೈಪುರ
    5. ಗುಜರಾತ್ ಟೈಟಾನ್ಸ್ vs ಮುಂಬೈ ಇಂಡಿಯನ್ಸ್, ಮಾರ್ಚ್ 24, ಅಹಮದಾಬಾದ್
    6. ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್, ಮಾರ್ಚ್ 25, ಬೆಂಗಳೂರು
    7. ಚೆನ್ನೈ ಸೂಪರ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್, ಮಾರ್ಚ್ 26, ಚೆನ್ನೈ
    8. ಸನ್​ರೈಸರ್ಸ್ ಹೈದರಾಬಾದ್ vs ಮುಂಬೈ ಇಂಡಿಯನ್ಸ್, ಮಾರ್ಚ್ 27, ಹೈದರಾಬಾದ್
    9. ಆರ್‌ಆರ್‌ vs ಡೆಲ್ಲಿ ಕ್ಯಾಪಿಟಲ್ಸ್, ಮಾರ್ಚ್ 28 ಜೈಪುರ
    10. ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್​ ರೈಡರ್ಸ್, ಮಾರ್ಚ್ 29 ಬೆಂಗಳೂರು
    11. ಲಕ್ನೋ ಸೂಪರ್ ಜೈಂಟ್ಸ್ vs ಪಂಜಾಬ್ ಕಿಂಗ್ಸ್, ಮಾರ್ಚ್ 30, ಲಕ್ನೋ
    12. ಗುಜರಾತ್ ಟೈಟಾನ್ಸ್ vs ಸನ್​ರೈಸರ್ಸ್ ಹೈದರಾಬಾದ್, ಮಾರ್ಚ್ 31, ಅಹಮದಾಬಾದ್
    13. ಡೆಲ್ಲಿ ಕ್ಯಾಪಿಟಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಮಾರ್ಚ್ 31, ವಿಶಾಖಪಟ್ಟಣಂ
    14. ಮುಂಬೈ ಇಂಡಿಯನ್ಸ್ vs ರಾಜಸ್ಥಾನ್ ರಾಯಲ್ಸ್, ಏಪ್ರಿಲ್ 1, ಮುಂಬೈ
    15. ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಲಕ್ನೋ ಸೂಪರ್ ಜೈಂಟ್ಸ್, ಏಪ್ರಿಲ್ 2, ಬೆಂಗಳೂರು
    16. ಡೆಲ್ಲಿ ಕ್ಯಾಪಿಟಲ್ಸ್ vs ಕೋಲ್ಕತ್ತಾ ನೈಟ್​ ರೈಡರ್ಸ್, ಏಪ್ರಿಲ್ 3, ವಿಶಾಖಪಟ್ಟಣಂ
    17. ಗುಜರಾತ್ ಟೈಟಾನ್ಸ್ vs ಪಂಜಾಬ್ ಕಿಂಗ್ಸ್, ಏಪ್ರಿಲ್ 4, ಅಹಮದಾಬಾದ್
    18. ಸನ್​ರೈಸರ್ಸ್ ಹೈದರಾಬಾದ್ vs ಚೆನ್ನೈ ಸೂಪರ್ ಕಿಂಗ್ಸ್, ಏಪ್ರಿಲ್ 5, ಹೈದರಾಬಾದ್
    19. ರಾಜಸ್ಥಾನ್ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಏಪ್ರಿಲ್ 6, ಜೈಪುರ
    20. ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಏಪ್ರಿಲ್ 7, ಮುಂಬೈ
    21. ಲಕ್ನೋ ಸೂಪರ್ ಜೈಂಟ್ಸ್ vs ಗುಜರಾತ್ ಟೈಟಾನ್ಸ್, ಏಪ್ರಿಲ್ 7, ಲಕ್ನೋ

  • World Cup 2023: ಚೊಚ್ಚಲ ಪಂದ್ಯದಲ್ಲೇ ಸೇಡು ತೀರಿಸಿಕೊಂಡ ಕಿವೀಸ್‌; ಇಂಗ್ಲೆಂಡ್‌ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ

    World Cup 2023: ಚೊಚ್ಚಲ ಪಂದ್ಯದಲ್ಲೇ ಸೇಡು ತೀರಿಸಿಕೊಂಡ ಕಿವೀಸ್‌; ಇಂಗ್ಲೆಂಡ್‌ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ

    ಅಹಮದಾಬಾದ್:‌ ಏಕದಿನ ವಿಶ್ವಕಪ್‌ (ODI World Cup) ಟೂರ್ನಿಯ ಚೊಚ್ಚಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ಸ್‌ ಇಂಗ್ಲೆಂಡ್‌ (England) ತಂಡದ ವಿರುದ್ಧ ಕಿವೀಸ್‌ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 2019ರ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ವಿರೋಚಿತ ಸೋಲನುಭವಿಸಿ, ಟ್ರೋಫಿ ಕಳೆದುಕೊಂಡಿದ್ದ ಕಿವೀಸ್‌ ಪಡೆ ಮೊದಲ ಪಂದ್ಯದಲ್ಲೇ ಆಂಗ್ಲರಿಗೆ ತಿರುಗೇಟು ನೀಡಿದೆ.

    ಗುರುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ‌ ಪಂದ್ಯದಲ್ಲಿ ನ್ಯೂಜಿಲೆಂಡ್ (New Zealand) ತಂಡವು ಹಾಲಿ ಚಾಂಪಿಯನ್ಸ್‌ ಇಂಗ್ಲೆಂಡ್‌ ವಿರುದ್ಧ 9 ವಿಕೆಟ್‌ಗಳ ಜಯ ಸಾಧಿಸಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಇಂಗ್ಲೆಂಡ್‌ 50 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 282 ರನ್‌ ಗಳಿಸಿತ್ತು. 283 ರನ್‌ ಗುರಿ ಪಡೆದ ಕಿವೀಸ್‌ ಕೇವಲ 36.2 ಓವರ್‌ಗಳಲ್ಲೇ 1 ವಿಕೆಟ್‌ ನಷ್ಟಕ್ಕೆ ಗುರಿ ತಲುಪಿತು.

    ಚೇಸಿಂಗ್‌ ಆರಂಭಿಸಿದ ನ್ಯೂಜಿಲೆಂಡ್‌ ಪರ ಆರಂಭಿಕ ಆಟಗಾರ ವಿಲ್‌ ಯಂಗ್‌ ಮೊದಲ ಎಸೆತದಲ್ಲೇ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಇದರಿಂದ ಇಂಗ್ಲೆಂಡ್‌ ತಂಡ ಗೆಲುವಿನ ಕನಸು ಕಂಡಿತ್ತು. ಆದ್ರೆ 2ನೇ ವಿಕೆಟ್‌ಗೆ ಜೊತೆಯಾದ ಡಿವೋನ್‌ ಕಾನ್ವೆ (Devon Conway) ಹಾಗೂ ಆಲ್‌ರೌಂಡರ್‌ ರಚಿನ್ ರವೀಂದ್ರ (Rachin Ravindra) ಜೋಡಿ ಇಂಗ್ಲೆಂಡ್‌ ಬೌಲರ್‌ಗಳನ್ನು ಹಿಗ್ಗಾಮುಗ್ಗ ಚೆಂಡಾಡಿದರು.

    ಮೊದಲ 10 ಓವರ್‌ಗಳಲ್ಲಿ 81 ರನ್‌ಗಳಿಗೆ ಒಂದು ವಿಕೆಟ್‌ ಕಳೆದುಕೊಂಡಿದ್ದ ಕಿವೀಸ್‌ 20 ಓವರ್‌ಗಳಲ್ಲಿ 154 ರನ್‌ ಹಾಗೂ 35‌ ಓವರ್‌ಗಳಲ್ಲಿ 265 ರನ್‌ ಚಚ್ಚಿತ್ತು. ಮುರಿಯದ 2ನೇ ವಿಕೆಟ್‌ಗೆ ಕಾನ್ವೆ ಹಾಗೂ ರವೀಂದ್ರ ಜೋಡಿ ಭರ್ಜರಿ ಶತಕಗಳೊಂದಿಗೆ 211 ಎಸೆತಗಳಲ್ಲಿ 273 ರನ್‌ ಸಿಡಿತ್ತು. ಡಿವೋನ್‌ ಕಾನ್ವೇ 121 ಎಸೆತಗಳಲ್ಲಿ 152 ರನ್‌ ಚಚ್ಚಿದರೆ (19 ಬೌಂಡರಿ, 3 ಸಿಕ್ಸರ್‌), ರಚಿನ್‌ ರವೀಂದ್ರ 96 ಎಸೆತಗಳಲ್ಲಿ 123 ರನ್‌ (11 ಬೌಂಡರಿ, 5 ಸಿಕ್ಸರ್‌) ಸಿಡಿಸಿ ಮಿಂಚಿದರು.

    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌, 50 ಓವರ್‌ಗಳ ಅಂತ್ಯಕ್ಕೆ 9 ವಿಕೆಟ್‌ ನಷ್ಟಕ್ಕೆ 282 ರನ್‌ ಗಳಿಸಿತ್ತು. ಇಂಗ್ಲೆಂಡ್ ಪರ ಆರಂಭಿಕರಾಗಿ ಕಣ್ಕಿಳಿದ ಜಾನಿ ಬೈರ್‌ಸ್ಟೋವ್‌ 33 ರನ್‌, ಡೇವಿಡ್‌ ಮಲಾನ್‌ 14 ರನ್‌ ಗಳಿಸಿ ಔಟಾಗುತ್ತಿದ್ದಂತೆ ಕಣಕ್ಕಿಳಿದ ಜೋ ರೂಟ್‌ 86 ಎಸೆತಗಳಲ್ಲಿ 77 ರನ್‌ ಸಿಡಿಸಿದರು.

    ಇದರೊಂದಿಗೆ ಹ್ಯಾರಿ ಬ್ರೂಕ್‌ 25 ರನ್‌, ಮೋಯಿನ್‌ ಅಲಿ 11 ರನ್‌ ಗಳಿಸಿದ್ರೆ, ಜೋಸ್‌ ಬಟ್ಲರ್‌ 42 ಎಸೆತಗಳಲ್ಲಿ 43 ರನ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌ 22 ಎಸೆತಗಳಲ್ಲಿ 20 ರನ್‌, ಸ್ಯಾಮ್‌ ಕರ್ರನ್‌ 14 ರನ್‌, ಕ್ರಿಸ್ ವೋಕ್ಸ್ 11 ರನ್‌ಗಳ ಕೊಡುಗೆ ನೀಡಿದರು. ಕೊನೆಯಲ್ಲಿ ಆದಿಲ್ ರಶೀದ್ 15 ರನ್‌ ಹಾಗೂ ಮಾರ್ಕ್ ವುಡ್ 13 ರನ್‌ ಗಳಿಸಿ ಅಜೇಯರಾಗುಳಿದರು.

    ನ್ಯೂಜಿಲೆಂಡ್‌ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಮ್ಯಾಟ್‌ ಹೆನ್ರಿ 3 ವಿಕೆಟ್‌ ಪಡೆದರೆ, ಗ್ಲೆನ್‌ ಫಿಲಿಪ್ಸ್‌ ಮತ್ತು ಮಿಚೆಲ್‌ ಸ್ಯಾಂಟ್ನರ್‌ ತಲಾ ಎರಡೆರಡು ಹಾಗೂ ಟ್ರೆಂಟ್‌ ಬೌಲ್ಟ್‌ ಮತ್ತು ರಚಿನ್ ರವೀಂದ್ರ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    2019ರಲ್ಲಿ ಏನಾಗಿತ್ತು?
    ಇಂಗ್ಲೆಂಡಿನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಜುಲೈ 14 ರಂದು ನಡೆದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಮಾಡಿತು. ನಿಗದಿತ 50 ಓವರ್‌ಗಳಲ್ಲಿ ಇಂಗ್ಲೆಂಡ್‍ಗೆ 241 ರನ್‍ಗಳ ಗುರಿ ನೀಡಿತು. ಆದರೆ ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಪರ ಕೊನೆಯ ಓವರಿನ ಮೂರನೇ ಎಸೆತದಲ್ಲಿ ಬೆನ್‌ ಸ್ಟೋಕ್ಸ್‌ ಸಿಕ್ಸ್‌ ಹೊಡೆದರೆ 4ನೇ ಎಸೆತದಲ್ಲೂ 6ರನ್‌ ಬಂದಿತ್ತು. ಎರಡನೇ ರನ್‌ ಓಡುವ ವೇಳೆ ಚೆಂಡು ಬೆನ್‌ ಸ್ಟೋಕ್ಸ್‌ ಬ್ಯಾಟ್‌ಗೆ ತಾಗಿ ಬೌಂಡರಿಗೆ ಹೋಗಿತ್ತು. ಇದು ಬಹಳ ವಿವಾದಕ್ಕೆ ಕಾರಣವಾಗಿತ್ತು. ಕೊನೆಯ ಎರಡು ಎಸೆತದಲ್ಲಿ ಸಿಂಗಲ್‌ ರನ್‌ ಬಂದ ಕಾರಣ ಪಂದ್ಯ ಟೈ ಆಗಿತ್ತು.

    ಟೈ ಆದ ಕಾರಣ ಐಸಿಸಿ ನಿಯಮದಂತೆ ಸೂಪರ್ ಓವರ್ ಆಡಿಸಲು ತೀರ್ಮಾನ ಮಾಡಲಾಯಿತು. ಸೂಪರ್ ಓವರ್‌ನಲ್ಲಿ ಮೊದಲ ಬ್ಯಾಟ್ ಮಾಡಿದ ಇಂಗ್ಲೆಂಡ್ ಬಟ್ಲರ್ ಮತ್ತು ಸ್ಟೋಕ್ಸ್ ಅವರು ತಲಾ ಒಂದೊಂದು ಬೌಡರಿ ಸಿಡಿಸಿ ನ್ಯೂಜಿಲೆಂಡ್ ತಂಡಕ್ಕೆ 15 ರನ್‍ಗಳ ಗುರಿ ನೀಡಿದರು. ಇದನ್ನು ಬೆನ್ನಟ್ಟಿದ ಕೀವೀಸ್ ಆಟಗಾರರಾದ ಜಿಮ್ಮಿ ನೀಶಮ್ ಮತ್ತು ಮಾರ್ಟಿನ್ ಗುಪ್ಟಿಲ್ ಜೋಫ್ರಾ ಆರ್ಚರ್ ಅವರ ಬೌಲಿಂಗ್‌ ಭರ್ಜರಿ ಬ್ಯಾಟ್ ಬೀಸಿದರು. ನೀಶಮ್ ಅವರು ಒಂದು ಸಿಕ್ಸರ್ ಸಿಡಿಸಿ ಗೆಲ್ಲುವ ಭರವಸೆ ಮೂಡಿಸಿದರು. ಕೊನೆಯ ಎಸೆತದಲ್ಲಿ ಗೆಲ್ಲಲು ನ್ಯೂಜಿಲೆಂಡ್‍ಗೆ 2 ರನ್ ಬೇಕಿತ್ತು. ಆಗ ಸ್ಟ್ರೈಕ್‍ನಲ್ಲಿ ಇದ್ದ ಅನುಭವಿ ಆಟಗಾರ ಮಾರ್ಟಿನ್ ಗುಪ್ಟಿಲ್ ಜೋಫ್ರಾ ಆರ್ಚರ್ ಎಸೆದ ಎಸೆತದಲ್ಲಿ 2 ರನ್ ಕದಿಯಲು ವಿಫಲರಾದರು. ಜೋಫ್ರಾ ಅವರ ಎಸೆತವನ್ನು ಮಿಡ್ ವಿಕೆಟ್ ಕಡೆಗೆ ತಳ್ಳಿದ ಗುಪ್ಟಿಲ್ ಎರಡು ರನ್ ಕದಿಯುವಲ್ಲಿ ಯಶಸ್ವಿಯಾಗಲಿಲ್ಲ. ರಾಯ್ ಅವರು ಎಸೆದ ಉತ್ತಮ ಥ್ರೋವನ್ನು ಬಟ್ಲರ್ ಹಿಡಿದು ರನೌಟ್‌ ಮಾಡಿದರು. ಈ ಮೂಲಕ ಸೂಪರ್ ಓವರ್ ಕೂಡ ಟೈ ಆಯ್ತು.

    ಫೈನಲ್‍ನಲ್ಲಿ ಸೂಪರ್ ಓವರ್ ಕೂಡ ಟೈ ಆದ ಕಾರಣ ಐಸಿಸಿ ನಿಯಮದಂತೆ ಹೆಚ್ಚು ಬೌಂಡರಿ ಸಿಡಿಸಿದ ತಂಡಕ್ಕೆ ಗೆಲುವು ಎಂದು ಘೋಷಣೆ ಮಾಡಲಾಯಿತು. ಪಂದ್ಯದಲ್ಲಿ ಹೆಚ್ಚು ಬೌಂಡರಿ ಹೊಡೆದಿದ್ದ ಇಂಗ್ಲೆಂಡ್ ಗೆಲುವು ಸಾಧಿಸಿತು. ಈ ಮೂಲಕ ಮೊದಲ ಬಾರಿಗೆ ಇಂಗ್ಲೆಂಡ್ ವಿಶ್ವಕಪ್ ಮುತ್ತಿಕ್ಕಿತು. ಸತತ ಎರಡನೇ ಬಾರಿ ಫೈನಲ್‍ನಲ್ಲಿ ಸೋತ ನ್ಯೂಜಿಲೆಂಡ್ ದ್ವಿತೀಯಸ್ಥಾನಿಯಾಗಿ ನಿರ್ಗಮಿಸಿತು. ಈ ಪಂದ್ಯದಲ್ಲಿ ಇಂಗ್ಲೆಂಡ್‌ 26 ಬೌಂಡರಿ ಹೊಡೆದಿದ್ದರೆ ನ್ಯೂಜಿಲೆಂಡ್‌ 17 ಬೌಂಡರಿ ಹೊಡೆದಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • World Cup 2023: ಚೊಚ್ಚಲ ಪಂದ್ಯದಲ್ಲೇ ಮೋದಿ ಕ್ರಿಕೆಟ್‌ ಅಂಗಳದಲ್ಲಿ ಇತಿಹಾಸ ಬರೆದ ಇಂಗ್ಲೆಂಡ್‌

    World Cup 2023: ಚೊಚ್ಚಲ ಪಂದ್ಯದಲ್ಲೇ ಮೋದಿ ಕ್ರಿಕೆಟ್‌ ಅಂಗಳದಲ್ಲಿ ಇತಿಹಾಸ ಬರೆದ ಇಂಗ್ಲೆಂಡ್‌

    ಅಹಮದಾಬಾದ್:‌ 2023ನೇ ಸಾಲಿನ ಐಸಿಸಿ ಏಕದಿನ ವಿಶ್ವಕಪ್‌ (World Cup 2023) ಟೂರ್ನಿಯು ಗುರುವಾರದಿಂದ (ಅ.5) ಆರಂಭಗೊಂಡಿದ್ದು, ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ಸ್‌ ಇಂಗ್ಲೆಂಡ್‌ ತಂಡವು (England Team) ಹೊಸ ಇತಿಹಾಸ ಸೃಷ್ಟಿಸಿದೆ.

    ಆರಂಭಿಕ ಆಟಗಾರನಿಂದ ಹಿಡಿದು ಕೊನೆಯ ಬ್ಯಾಟ್ಸ್‌ಮ್ಯಾನ್‌ ವರೆಗೂ ಪ್ರತಿಯೊಬ್ಬರು ಎರಡಂಕಿಯ ರನ್‌ಗಳನ್ನು ದಾಖಲಿಸುವ ಮೂಲಕ ಇಂಗ್ಲೆಂಡ್‌ ತಂಡವು ವಿಶೇಷ ಸಾಧನೆ ಮಾಡಿದೆ. ಇದನ್ನೂ ಓದಿ: ICC World Cup 2023: ಇಂದಿನಿಂದ ವಿಶ್ವಕಪ್‌ ಮಹಾಸಮರ – ಇಂದು ಇಂಗ್ಲೆಂಡ್‌ ವಿರುದ್ಧ ನ್ಯೂಜಿಲೆಂಡ್ ಸೆಣಸಾಟ

    ಈ ಪಂದ್ಯದಲ್ಲಿ ಟಾಸ್‌ ಸೋತ ಇಂಗ್ಲೆಂಡ್‌ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆಯಿತು. 50 ಓವರ್‌ಗಳ ಅಂತ್ಯಕ್ಕೆ 9 ವಿಕೆಟ್‌ ನಷ್ಟಕ್ಕೆ 282 ರನ್‌ ಗಳಿಸಿ, ಎದುರಾಳಿ ತಂಡಕ್ಕೆ 283 ರನ್‌ಗಳ ಗುರಿ ನೀಡಿತು. ಇಂಗ್ಲೆಂಡ್ ಪರ ಆರಂಭಿಕರಾಗಿ ಕಣ್ಕಿಳಿದ ಜಾನಿ ಬೈರ್‌ಸ್ಟೋವ್‌ 33 ರನ್‌, ಡೇವಿಡ್‌ ಮಲಾನ್‌ 14 ರನ್‌ ಗಳಿಸಿ ಔಟಾಗುತ್ತಿದ್ದಂತೆ ಕಣಕ್ಕಿಳಿದ ಜೋ ರೂಟ್‌ 86 ಎಸೆತಗಳಲ್ಲಿ 77 ರನ್‌ ಸಿಡಿಸಿದರು.

    ಇದರೊಂದಿಗೆ ಹ್ಯಾರಿ ಬ್ರೂಕ್‌ 25 ರನ್‌, ಮೋಯಿನ್‌ ಅಲಿ 11 ರನ್‌ ಗಳಿಸಿದ್ರೆ, ಜೋಸ್‌ ಬಟ್ಲರ್‌ 42 ಎಸೆತಗಳಲ್ಲಿ 43 ರನ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌ 22 ಎಸೆತಗಳಲ್ಲಿ 20 ರನ್‌, ಸ್ಯಾಮ್‌ ಕರ್ರನ್‌ 14 ರನ್‌, ಕ್ರಿಸ್ ವೋಕ್ಸ್ 11 ರನ್‌ಗಳ ಕೊಡುಗೆ ನೀಡಿದರು. ಕೊನೆಯಲ್ಲಿ ಆದಿಲ್ ರಶೀದ್ 15 ರನ್‌ ಹಾಗೂ ಮಾರ್ಕ್ ವುಡ್ 13 ರನ್‌ ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ ಇಂಗ್ಲೆಂಡ್‌ ತಂಡವು 50 ಓವರ್‌ಗಳಲ್ಲಿ 282 ರನ್‌ ಗಳಿಸಿತು. ಇದನ್ನೂ ಓದಿ: Asian Games 2023- ಗ್ರೀಕೊ ರೋಮನ್ ಕುಸ್ತಿಯಲ್ಲಿ ಭಾರತಕ್ಕೆ 13 ವರ್ಷಗಳ ಬಳಿಕ ಪದಕ

    ನ್ಯೂಜಿಲೆಂಡ್‌ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ ಮ್ಯಾಟ್‌ ಹೆನ್ರಿ 3 ವಿಕೆಟ್‌ ಪಡೆದರೆ, ಗ್ಲೆನ್‌ ಫಿಲಿಪ್ಸ್‌ ಮತ್ತು ಮಿಚೆಲ್‌ ಸ್ಯಾಂಟ್ನರ್‌ ತಲಾ ಎರಡೆರಡು ಹಾಗೂ ಟ್ರೆಂಟ್‌ ಬೌಲ್ಟ್‌ ಮತ್ತು ರಚಿನ್ ರವೀಂದ್ರ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ಇಂಗ್ಲೆಂಡ್‌ ಪ್ಲೇಯಿಂಗ್‌ 11: ಜಾನಿ ಬೈರ್‌ಸ್ಟೋವ್, ಡಾವಿಡ್ ಮಲಾನ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಮೊಯೀನ್ ಅಲಿ, ಸ್ಯಾಮ್ ಕರನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್ ಇದನ್ನೂ ಓದಿ: ಹೈದರಾಬಾದ್ ಬಿರಿಯಾನಿಯಿಂದಾಗಿ ಸ್ವಲ್ಪ ಸ್ಲೋ – ಅಭ್ಯಾಸ ಪಂದ್ಯದ ಸೋಲಿಗೆ ಪಾಕ್ ಆಟಗಾರನ ಪ್ರತಿಕ್ರಿಯೆ

    ನ್ಯೂಜಿಲೆಂಡ್‌ ಪ್ಲೇಯಿಂಗ್‌ 11: ಡಿವೋನ್‌ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಟಾಮ್ ಲಾಂಥಮ್‌ (ನಾಯಕ), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮ್ಯಾಟ್ ಹೆನ್ರಿ, ಮಿಚೆಲ್ ಸ್ಯಾಂಟ್ನರ್, ಜೇಮ್ಸ್ ನೀಶಮ್, ಟ್ರೆಂಟ್ ಬೌಲ್ಟ್.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • IPLನಲ್ಲಿ ದುಡ್ಡೋ ದುಡ್ಡು; ಚಾಂಪಿಯನ್ಸ್‌ ತಂಡಕ್ಕೆ 20 ಕೋಟಿ, ಲಕ್ಷ ಲಕ್ಷ ಬಾಚಿಕೊಂಡ ಗಿಲ್‌ – ಯಾರಿಗೆ ಎಷ್ಟೆಷ್ಟು ಲಕ್ಷ?

    IPLನಲ್ಲಿ ದುಡ್ಡೋ ದುಡ್ಡು; ಚಾಂಪಿಯನ್ಸ್‌ ತಂಡಕ್ಕೆ 20 ಕೋಟಿ, ಲಕ್ಷ ಲಕ್ಷ ಬಾಚಿಕೊಂಡ ಗಿಲ್‌ – ಯಾರಿಗೆ ಎಷ್ಟೆಷ್ಟು ಲಕ್ಷ?

    ಅಹಮದಾಬಾದ್‌: 16ನೇ ಐಪಿಎಲ್‌ ಆವೃತ್ತಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಈ ಐಪಿಎಲ್‌ (IPL) ಆವೃತ್ತಿಯಲ್ಲಿ ಉದಯೋನ್ಮುಖ ಪ್ರತಿಭೆಗಳು ಬೆಳಕಿಗೆ ಬಂದಿದ್ದಾರೆ. ಆಟಗಾರರ ಅತ್ಯದ್ಭುತ ಪ್ರದರ್ಶನದಿಂದ ಅತಿಹೆಚ್ಚು ಬಾರಿ 200ಕ್ಕೂ ಹೆಚ್ಚು ರನ್‌ ದಾಖಲಾಗಿದೆ. ಅದಕ್ಕಾಗಿ ಲಕ್ಷ ಲಕ್ಷ ಹಣವನ್ನ ಬಾಚಿಕೊಂಡಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.

    ಈ ಬಾರಿ ಐಪಿಎಲ್‌ ಆವೃತ್ತಿಯಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ (LSG) ತಂಡ 257 ರನ್‌ ಗಳಿಸಿದ್ದು ಈ ಬಾರಿ ಅತಿಹೆಚ್ಚಿನ ರನ್‌ ಹಾಗೂ ಐಪಿಎಲ್‌ ಇತಿಹಾಸದಲ್ಲೇ 2ನೇ ದೊಡ್ಡಮೊತ್ತ ಎನಿಸಿಕೊಂಡರೆ ಈ ಸೀಸನ್‌ನಲ್ಲಿ ಆರ್‌ಸಿಬಿ ವಿರುದ್ಧ ರಾಜಸ್ಥಾನ್‌ ರಾಯಲ್ಸ್‌ (RR) 59 ರನ್‌ಗಳಿಗೆ ಆಲೌಟ್‌ ಆಗಿದ್ದು, ಅತ್ಯಂತ ಕಳಪೆ ಪ್ರದರ್ಶನ ನೀಡಿದ ಪಂದ್ಯವಾಗಿತ್ತು.

    2023ರ ಐಪಿಎಲ್‌ ಪ್ರಶಸ್ತಿ ವಿಜೇತರ ಪಟ್ಟಿ:

    ಚಾಂಪಿಯನ್ಸ್‌: ಸಿಎಸ್‌ಕೆ-20 ಕೋಟಿ ರೂ.
    ರನ್ನರ್‌ ಅಪ್: ಗುಜರಾತ್ ಟೈಟಾನ್ಸ್-12.5 ಕೋಟಿ ರೂ.

    ಆರೆಂಜ್ ಕ್ಯಾಪ್: ಶುಭಮನ್ ಗಿಲ್- 890 ರನ್ -10 ಲಕ್ಷ ರೂ.
    ಪರ್ಪಲ್ ಕ್ಯಾಪ್: ಮೊಹಮ್ಮದ್ ಶಮಿ- 28 ವಿಕೆಟ್- 10 ಲಕ್ಷ ರೂ.

    ಸೀಸನ್‌ನ ಉದಯೋನ್ಮುಖ ಆಟಗಾರ: ಯಶಸ್ವಿ ಜೈಸ್ವಾಲ್- ಆರ್‌ಆರ್-10 ಲಕ್ಷ ರೂ.
    ಸೂಪರ್ ಸ್ಟ್ರೆಕರ್- ಗ್ಲೆನ್ ಮ್ಯಾಕ್ಸ್‌ವೆಲ್: ಆರ್‌ಸಿಬಿ-183.48 ಸ್ಟ್ರೈಕ್‌ರೇಟ್‌ -10 ಲಕ್ಷ ರೂ.

    ಮೋಸ್ಟ್‌ ವ್ಯಾಲ್ಯುಯೆಬಲ್ ಪ್ಲೇಯರ್‌: ಶುಭಮನ್ ಗಿಲ್ – 10 ಲಕ್ಷ ರೂ.
    ಗೇಮ್ ಚೇಂಜರ್- ಶುಭಮನ್ ಗಿಲ್- 10 ಲಕ್ಷ ರೂ.

    ಅತಿ ಹೆಚ್ಚು ಬೌಂಡರಿ: ಶುಭಮನ್ ಗಿಲ್- 85- 10 ಲಕ್ಷ ರೂ.
    ಅತಿ ಉದ್ದದ ಸಿಕ್ಸರ್- ಫಾಫ್ ಡು ಪ್ಲೆಸಿಸ್: ಆರ್‌ಸಿಬಿ- 115 ಮೀಟರ್-10 ಲಕ್ಷ ರೂ.
    ಸೀಸನ್‌ನ ಅದ್ಭುತ ಕ್ಯಾಚ್: ರಶೀದ್ ಖಾನ್- ಗುಜರಾತ್ ಟೈಟಾನ್ಸ್- 10 ಲಕ್ಷ ರೂ.
    ಮನರಂಜಿಸಿದ ತಂಡ- ಡೆಲ್ಲಿ ಕ್ಯಾಪಿಟಲ್ಸ್

    ಫೈನಲ್ ಪಂದ್ಯದ ಪ್ರಶಸ್ತಿಗಳ ವಿವರ:

    ಸೂಪರ್‌ ಸ್ಟ್ರೆಕರ್: ಅಜಿಂಕ್ಯ ರಹಾನೆ- 1 ಲಕ್ಷ ರೂ.
    ಗೇಮ್ ಚೇಂಜರ್: ಸಾಯಿ ಸುದರ್ಶನ್- 1 ಲಕ್ಷ ರೂ.
    ವ್ಯಾಲ್ಯುಯೆಬಲ್ ಪ್ಲೇಯರ್‌: ಸಾಯಿ ಸುದರ್ಶನ್- 1 ಲಕ್ಷ ರೂ.

    ಅತಿ ಉದ್ದದ ಸಿಕ್ಸರ್: ಸಾಯಿ ಸುದರ್ಶನ್- 1 ಲಕ್ಷ ರೂ.
    ಅದ್ಭುತ ಕ್ಯಾಚ್: ಎಂ.ಎಸ್ ಧೋನಿ- 1 ಲಕ್ಷ ರೂ.
    ಪಂದ್ಯ ಶ್ರೇಷ್ಠ: ಡೆವೋನ್ ಕಾನ್ವೇ – 1 ಲಕ್ಷ ರೂ

  • Record… Record… Record: ಫೈನಲ್‌ ಮ್ಯಾಚ್‌ನಲ್ಲಿ ಎಲ್ಲಾ ದಾಖಲೆ ಉಡೀಸ್‌ – ಜಿಯೋಸಿನಿಮಾದಲ್ಲಿ ಏಕಕಾಲಕ್ಕೆ 3.2 ಕೋಟಿ ಜನ ವೀಕ್ಷಣೆ

    Record… Record… Record: ಫೈನಲ್‌ ಮ್ಯಾಚ್‌ನಲ್ಲಿ ಎಲ್ಲಾ ದಾಖಲೆ ಉಡೀಸ್‌ – ಜಿಯೋಸಿನಿಮಾದಲ್ಲಿ ಏಕಕಾಲಕ್ಕೆ 3.2 ಕೋಟಿ ಜನ ವೀಕ್ಷಣೆ

    ಮುಂಬೈ: ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಟಾಟಾ ಐಪಿಎಲ್ 2023ರ ಫೈನಲ್‌ ಪಂದ್ಯ ಜಿಯೋಸಿನಿಮಾದಲ್ಲಿ‌ ಏಕಕಾಲಕ್ಕೆ 3.2 ಕೋಟಿ ಜನರಿಂದ ವೀಕ್ಷಣೆ ಕಂಡಿದ್ದು, ಹಿಂದಿನ ಎಲ್ಲಾ ದಾಖಲೆಗಳನ್ನ ಪುಡಿಪುಡಿ ಮಾಡಿದೆ.

    ಸೋಮವಾರ ನರೇಂದ್ರಮೋದಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್‌ ಟೈಟಾನ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಪಂದ್ಯವು ರೋಚಕತೆಯಿಂದ ಕೂಡಿತ್ತು. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಗುಜರಾತ್‌ ಟೈಟಾನ್ಸ್‌ ಭರ್ಜರಿ ಪ್ರದರ್ಶನ ನೀಡಿತು. ಸಾಯಿ ಸುದರ್ಶನ್‌ 18.3ನೇ ಓವರ್‌ನಲ್ಲಿ ಬ್ಯಾಟಿಂಗ್‌ ಮಾಡುತ್ತಿದ್ದ ವೇಳೆ ಪಂದ್ಯದ ವೀಕ್ಷಕರ ಸಂಖ್ಯೆ 3 ಕೋಟಿಗೆ ತಲುಪಿತ್ತು. 19.1ನೇ ಓವರ್‌ನಲ್ಲಿದ್ದಾಗ 3.1 ಕೋಟಿ ಇದ್ದ ವೀಕ್ಷಕರ ಸಂಖ್ಯೆ ಕೊನೆಯ 3 ಎಸೆತಗಳು ಬಾಕಿಯಿರುವಂತೆ 3.2 ಕೋಟಿಗೆ ತಲುಪಿತ್ತು. ಇದು ಈ ಹಿಂದಿನ ಎಲ್ಲ ದಾಖಲೆಗಳನ್ನ ಉಡೀಸ್‌ ಮಾಡಿದೆ.

    ಜಿಯೋಸಿನಿಮಾ ಹಾಲಿ ಐಪಿಎಲ್ ಆವೃತ್ತಿಯಲ್ಲಿ ಸತತ 4ನೇ ಬಾರಿಗೆ ತನ್ನದೇ ವೀಕ್ಷಕರ ದಾಖಲೆಯನ್ನ ಮುರಿದಿದೆ. ಜೊತೆಗೆ 2019ರ ಐಸಿಸಿ ಏಕದಿನ ವಿಶ್ವಕಪ್ ವೇಳೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದ ವೇಳೆ ನಿರ್ಮಿಸಲ್ಪಟ್ಟಿದ್ದ ವಿಶ್ವದಾಖಲೆಗಳೆಲ್ಲವನ್ನೂ ನುಚ್ಚುನೂರು ಮಾಡಿದೆ. 2013ರ ವಿಶ್ವಕಪ್‌ ಪಂದ್ಯವನ್ನು 2.53 ಕೋಟಿ ಮಂದಿ ವೀಕ್ಷಣೆ ಮಾಡಿದ್ದರು. ಇದನ್ನೂ ಓದಿ: IPL Champions 2023: ಕೊನೆಯಲ್ಲಿ ಜಡೇಜಾ ಜಾದು, 5ನೇ ಬಾರಿಗೆ ಚೆನ್ನೈಗೆ ಚಾಂಪಿಯನ್‌ ಕಿರೀಟ

    ಏಪ್ರಿಲ್ 17ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಪಂದ್ಯದ ವೇಳೆ ಎಂ.ಎಸ್ ಧೋನಿ ಅವರ ಆಟ ವೀಕ್ಷಿಸಲು 2.4 ಕೋಟಿ ವೀಕ್ಷಕರು ಜಿಯೋಸಿನಿಮಾದಲ್ಲಿ ಒಟ್ಟಾಗಿ ಸೇರಿದ್ದು ಹಿಂದಿನ ದಾಖಲೆ ಎನಿಸಿತ್ತು. ಅದಕ್ಕೂ ಮುನ್ನ ಏಪ್ರಿಲ್ 12ರಂದು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಗತವೈಭವ ನೆನಪಿಸುವಂಥ ಬ್ಯಾಟಿಂಗ್ ಪ್ರದರ್ಶಿಸಿದಾಗ ಗರಿಷ್ಠ 2.2 ಕೋಟಿ ವೀಕ್ಷಕರ ದಾಖಲೆ ಕಂಡಿತ್ತು. ಇದನ್ನೂ ಓದಿ: IPL 2023 Finals: ಜೋರಾಯ್ತು ಮ್ಯಾಚ್‌ ಫಿಕ್ಸಿಂಗ್‌ ಸದ್ದು, ಪಂದ್ಯ ಆರಂಭಕ್ಕೂ ಮುನ್ನವೇ ರಿಸಲ್ಟ್ – CSK ರನ್ನರ್ ಅಪ್?

    ಟಾಟಾ ಐಪಿಎಲ್ 2023ರ ಪಂದ್ಯಗಳನ್ನು ವೀಕ್ಷಿಸಲು ಜಿಯೋಸಿನಿಮಾ, ಕ್ರಿಕೆಟ್ ಅಭಿಮಾನಿಗಳ ಪ್ರಮುಖ ಆದ್ಯತೆ ಆಗಿದೆ ಎಂಬುದಕ್ಕೆ ಈ ದಾಖಲೆಗಳು ಸಾಕ್ಷಿಯಾಗಿವೆ. ರೋಚಕ ಪಂದ್ಯಗಳನ್ನು ವೀಕ್ಷಿಸುವ ವೇಳೆ ಜಿಯೋಸಿನಿಮಾದಲ್ಲಿ ಅಭಿಮಾನಿ ಕೇಂದ್ರಿತವಾದ ಹಲವಾರು ಕೊಡುಗೆಗಳನ್ನು ನೀಡಲಾಗುತ್ತಿತ್ತು. ಉದಾಹರಣೆಗೆ ಎಲ್ಲಾ ನೆಟ್ವರ್ಕ್ ಚಂದಾದಾರರಿಗೆ ಉಚಿತ ಸ್ಟ್ರೀಮಿಂಗ್ ನೀಡಲಾಗಿತ್ತು. 4K ಸ್ಟ್ರೀಮಿಂಗ್ ಜೊತೆಗೆ 12 ಭಾಷೆಗಳಲ್ಲಿ ವೀಕ್ಷಕ ವಿವರಣೆ ನೀಡಲಾಗುತ್ತಿದೆ. ಜೀತೋ ಧನ್ ಧನಾ ಧನ್ ಸ್ಪರ್ಧೆಯ ಮೂಲಕ ಪ್ರತೀ ಪಂದ್ಯದ ವೀಕ್ಷಣೆಯ ವೇಳೆ ಕಾರು ಗೆಲ್ಲುವ ಜೊತೆ ಅತ್ಯಾಕರ್ಷಕ ಬಹುಮಾನಗಳನ್ನೂ ವಿತರಿಸಲಾಗುತ್ತಿತ್ತು.

    ಟಾಟಾ ಐಪಿಎಲ್ 2023ರ ಡಿಜಿಟಲ್ ಸ್ಟ್ರೀಮಿಂಗ್‌ಗಾಗಿ ಜಿಯೋಸಿನಿಮಾ 26 ಅಗ್ರ ಬ್ರ್ಯಾಂಡ್‌ಗಳ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಅವುಗಳಲ್ಲಿ (ಸಹ-ಪ್ರಸ್ತುತ ಪ್ರಾಯೋಜಕ) ಡ್ರೀಮ್11, (ಕೋ-ಪವರ್ಡ್) ಜಿಯೋಮಾರ್ಟ್, ಫೋನ್‌ಪೇ, ಟಿಯಾಗೋ ಇವಿ, ಜಿಯೋ (ಸಹ ಪ್ರಾಯೋಜಕ) ಆ್ಯಪ್ಪಿ ಫಿಜ್, ಇಟಿಮನೀ, ಕ್ಯಾಸ್ಟ್ರಾಲ್, ಟಿವಿಎಸ್, ಓರಿಯೊ, ಬಿಂಗೋ, ಸ್ಟಿಂಗ್, ಅಜಿಯೋ, ಹೈಯರ್, ರುಪೇ, ಲೂಯಿಸ್ ಜೀನ್ಸ್, ಅಮೆಜಾನ್, ರಾಪಿಡೊ, ಅಲ್ಟ್ರಾ ಟೆಕ್ ಸಿಮೆಂಟ್, ಪೂಮಾ, ಕಮಲಾ ಪಸಂದ್, ಕಿಂಗ್‌ಫಿಶರ್ ಪವರ್ ಸೋಡಾ, ಜಿಂದಾಲ್ ಪ್ಯಾಂಥರ್ ಟಿಎಂಟಿ ರೆಬಾರ್, ಸೌದಿ ಪ್ರವಾಸೋದ್ಯಮ, ಸ್ಪಾಟಿಫೈ ಮತ್ತು ಎಎಂಎಫ್ಐ ಸೇರಿವೆ.

  • IPL Champions 2023: ಕೊನೆಯಲ್ಲಿ ಜಡೇಜಾ ಜಾದು, 5ನೇ ಬಾರಿಗೆ ಚೆನ್ನೈಗೆ ಚಾಂಪಿಯನ್‌ ಕಿರೀಟ

    IPL Champions 2023: ಕೊನೆಯಲ್ಲಿ ಜಡೇಜಾ ಜಾದು, 5ನೇ ಬಾರಿಗೆ ಚೆನ್ನೈಗೆ ಚಾಂಪಿಯನ್‌ ಕಿರೀಟ

    ಅಹಮದಾಬಾದ್‌: ಕೊನೆಯ ಎರಡು ಎಸೆತಗಳಲ್ಲಿ ರವೀಂದ್ರ ಜಡೇಜಾ (Ravindra Jadeja) ಸಿಡಿಸಿದ ಭರ್ಜರಿ ಸಿಕ್ಸರ್‌, ಬೌಂಡರಿ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ರೋಚಕ ಜಯ ಸಾಧಿಸಿ 2023ರ ಟಾಟಾ ಐಪಿಎಲ್‌ (TaTa IPL) ಚಾಂಪಿಯನ್‌ ಕಿರೀಟ ಮುಡಿಗೇರಿಸಿಕೊಂಡಿದೆ.

    ಐಪಿಎಲ್‌ ಆವೃತ್ತಿಯಲ್ಲಿ 4 ಬಾರಿ ಚಾಂಪಿಯನ್‌ ಕಿರೀಟ ಮುಡಿಗೇರಿಸಿಕೊಂಡಿದ್ದ ಎಂ.ಎಸ್‌. ಧೋನಿ (MS Dhoni) ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ಬಲಿಷ್ಠ ಗುಜರಾತ್‌ ಟೈಟಾನ್ಸ್‌ಗೆ (GT) ಮಣ್ಣುಮುಕ್ಕಿಸಿ 5ನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಇದರೊಂದಿಗೆ 5 ಬಾರಿ ಐಪಿಎಲ್‌ ಕಪ್‌ ಗೆದ್ದ ಮುಂಬೈ ಇಂಡಿಯನ್ಸ್‌ ದಾಖಲೆಯನ್ನ ಸರಿಗಟ್ಟಿದೆ. ಗುಜರಾತ್‌ ಟೈಟಾನ್ಸ್‌ ತಾನು ಆಡಿದ 2ನೇ ಆವೃತ್ತಿಯಲ್ಲಿ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ. ವಿಶೇಷವೆಂದರೆ ಚೆನ್ನೈ ತಂಡದಲ್ಲಿ ಸ್ಟಾರ್‌ ಆಟಗಾರನಾಗಿ ಮಿಂಚಿದ್ದ ಅಂಬಾಟಿ ರಾಯುಡು (Ambati Rayudu) ಗೆಲುವಿನೊಂದಿಗೆ ಐಪಿಎಲ್‌ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. 250 ಪಂದ್ಯವನ್ನಾಡಿದ ಸಾಧನೆ ಮಾಡಿದ ಎಂ.ಎಸ್‌ ಧೋನಿ ಸಹ ಇದೇ ಗೆಲುವಿನೊಂದಿಗೆ ವಿದಾಯ ಹೇಳುವ ಸಾಧ್ಯತೆಗಳಿವೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಟೈಟಾನ್ಸ್‌ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ ಬರೋಬ್ಬರಿ 214 ರನ್‌ ಗಳಿಸಿತ್ತು. ಚೇಸಿಂಗ್‌ ಆರಂಭಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ಮೂರು ಎಸೆತಗಳನ್ನು ಎದುರಿಸುತ್ತಿದ್ದಂತೆ ಮಳೆ ಒಕ್ಕರಿಸಿತು. ಇದರಿಂದ ಸಿಎಸ್‌ಕೆ ಇನ್ನಿಂಗ್ಸ್‌ ಆರಂಭಗೊಳ್ಳುವುದು 1:30 ಗಂಟೆಗೂ ಅಧಿಕ ಕಾಲ ತಡವಾಯಿತು. 10:30ರ ವೇಳೆಗೆಲ್ಲಾ ಮಳೆ ಬಿಡುವುಕೊಟ್ಟರೂ ಮೈದಾನ ಹದಗೊಳಿಸುವುದಕ್ಕೆ 1 ಗಂಟೆಗೂ ಅಧಿಕ ಸಮಯ ತೆಗೆದುಕೊಳ್ಳಲಾಯಿತು. ಹಾಗಾಗಿ ತಡವಾಗಿದ್ದರಿಂದ ಡಕ್ವರ್ತ್‌ ಲೂಯಿಸ್ ನಿಯಮ ಅನ್ವಯಿಸಿ, ಓವರ್‌ಗಳನ್ನ ಕಡಿತಗೊಳಿಸಲಾಯಿತು. ಡಕ್ವರ್ತ್‌ ಲೂಯಿಸ್‌ (DSL) ನಿಯಮದ ಪ್ರಕಾರ 15 ಓವರ್‌ಗಳಲ್ಲಿ 171 ರನ್‌ ಟಾರ್ಗೆಟ್‌ ಪಡೆದು ಇನ್ನಿಂಗ್ಸ್‌ ಆರಂಭಿಸಿದ ಸಿಎಸ್‌ಕೆ 15 ಓವರ್‌ಗಳಲ್ಲಿ 171 ರನ್‌ ಚಚ್ಚುವ ಮೂಲಕ ಗೆಲುವು ಸಾಧಿಸಿತು.

    ಕೊನೆಯ 20 ಎಸೆತಗಳಲ್ಲಿ 50 ರನ್‌ಗಳ ಅಗತ್ಯವಿತ್ತು. ಈ ವೇಳೆ ರಶೀದ್‌ ಖಾನ್‌ ಬೌಲಿಂಗ್‌ನ ಕೊನೆಯ ಎರಡು ಎಸೆತಗಳನ್ನು ಶಿವಂ ದುಬೆ (Shivam Dube) ಭರ್ಜರಿ ಸಿಕ್ಸರ್‌ ಬಾರಿಸಿದರು. ಇನ್ನೂ ಕೊನೆಯ 18 ಎಸೆತಗಳಲ್ಲಿ 38 ರನ್‌ಗಳು ಬೇಕಾಗಿದ್ದಾಗ ಕೊನೆಯ ಐಪಿಎಲ್‌ ಪಂದ್ಯವಾಡಿದ ಅಂಬಾಟಿ ರಾಯುಡು, ಮೋಹಿತ್‌ ಶರ್ಮಾ ಬೌಲಿಂಗ್‌ನ ಮೊದಲ ಮೂರು ಎಸೆತಗಳಲ್ಲಿ 2 ಸಿಕ್ಸರ್‌, 1 ಬೌಂಡರಿ ಬಾರಿಸಿದರು. ಇದರಿಂದ ಕಠಿಣ ಪರಿಸ್ಥಿತಿಯಲ್ಲಿದ್ದ ಚೆನ್ನೈಗೆ ಸಂಜೀವಿನಿ ಸಿಕ್ಕಂತಾಯಿತು. ಕೊನೆಯ 6 ಎಸೆತಗಳಲ್ಲಿ 13 ರನ್‌ ಅಗತ್ಯವಿದ್ದಾಗ ಮತ್ತೆ ಮೋಹಿತ್‌ ಶರ್ಮಾ ಬೌಲಿಂಗ್‌ನಲ್ಲಿದ್ದರು. ಮೊದಲ 4 ಎಸೆತಗಳಲ್ಲಿ ಕೇವಲ 3 ರನ್‌ ಸೇರ್ಪಡೆಯಾಯಿತು. 5ನೇ ಎಸೆತದಲ್ಲಿ ಸಿಕ್ಸ್‌ ಬಾರಿಸಿದ ಜಡೇಜಾ 6ನೇ ಎಸೆತದಲ್ಲಿ ಬೌಂಡರಿ ಚಚ್ಚುವ ಮೂಲ ಗೆಲುವು ತಂದುಕೊಟ್ಟರು.

    ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್‌ ಗಾಯಕ್ವಾಡ್‌ ಹಾಗೂ ಡಿವೋನ್‌ ಕಾನ್ವೆ ಆರಂಭದಿಂದಲೇ ಗುಜರಾತ್‌ ಬೌಲರ್‌ಗಳನ್ನ ಬೆಂಡೆತ್ತಲು ಶುರು ಮಾಡಿತು. ಮೊದಲ ವಿಕೆಟ್‌ಕೆ ಈ ಜೋಡಿ 6.3 ಓವರ್‌ಗಳಲ್ಲಿ ಭರ್ಜರಿ 74 ರನ್‌ ಸಿಡಿಸಿತ್ತು. ಈ ವೇಳೆ ಋತುರಾಜ್‌ ಗಾಯಕ್ವಾಡ್‌ ದೊಡ್ಡ ಹೊಡೆತ ಹೊಡೆಯಲು ಯತ್ನಿಸಿ ಕ್ಯಾಚ್‌ ನೀಡಿ ಔಟಾದರು. ಋತುರಾಜ್‌ 16 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್‌ನೊಂದಿಗೆ 26 ರನ್‌ ಗಳಿಸಿ ಪೆವಿಲಿಯನ್‌ ಸೇರುತ್ತಿದ್ದಂತೆ ಡಿವೋನ್‌ ಕಾನ್ವೆ ಸಹ 47 ರನ್‌ (25 ಎಸೆತ, 4 ಬೌಂಡರಿ, 2 ಸಿಕ್ಸರ್‌) ಗಳಿಸಿ ಔಟಾದರು. ನಂತರದಲ್ಲಿ ಕಣಕ್ಕಿಳಿದ ಅಜಿಂಕ್ಯಾ ರಹಾನೆ 13 ಎಸೆತಗಳಲ್ಲಿ ಸ್ಫೋಟಕ 27 ರನ್‌ (2 ಸಿಕ್ಸರ್‌, 2 ಬೌಂಡರಿ) ಚಚ್ಚಿ ಔಟಾದರು. ಅಂಬಾಟಿ ರಾಯುಡು 19 ರನ್‌ (8 ಎಸೆತ, 2 ಸಿಕ್ಸರ್‌, 1 ಬೌಂಡರಿ) ಚಚ್ಚಿದರು.‌ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಿವಂ ದುಬೆ ಅಜೇಯ 32 ರನ್‌ (21 ಎಸೆತ, 2 ಸಿಕ್ಸ್‌), ರವೀಂದ್ರ ಜಡೇಜಾ 15 ರನ್‌ (6‌ ಎಸೆತ, 1 ಸಿಕ್ಸ್‌, 1 ಬೌಂಡರಿ) ಗಳಿಸಿ ಕ್ರೀಸ್‌ನಲ್ಲಿ ಉಳಿದರು.

    ಆರಂಭಿಕರಾಗಿ ಕಣಕ್ಕಿಳಿದ ಶುಭಮನ್‌ ಗಿಲ್‌ ಹಾಗೂ ವೃದ್ಧಿಮಾನ್‌ ಸಾಹಾ ಜೋಡಿ ಉತ್ತಮ ಆರಂಭ ನೀಡಿತ್ತು. ಮೊದಲ ವಿಕೆಟ್‌ ಜೊತೆಯಾಟಕ್ಕೆ 42 ಎಸೆತಗಳಲ್ಲಿ 67 ರನ್‌ ಗಳಿಸಿತ್ತು. 2ನೇ ಓವರ್‌ನಲ್ಲೇ ಕ್ಯಾಚ್‌ ನಿಂದ ತಪ್ಪಿಸಿಕೊಂಡಿದ್ದ ಗಿಲ್‌ ಧೋನಿ ಮ್ಯಾಜಿಕ್‌ ಸ್ಟಂಪ್‌ಗೆ ವಿಕೆಟ್‌ ಒಪ್ಪಿಸಲೇಬೇಕಾಯಿತು. ನಂತರ ಕಣಕ್ಕಿಳಿದ ಆಟಗಾರರು ಚೆನ್ನೈ ಬೌಲರ್‌ಗಳನ್ನ ಹಿಗ್ಗಾಮುಗ್ಗಾ ಚೆಂಡಾಡಿದರು.

    ಬಳಿಕ ಸಾಹಿ ಸುದರ್ಶನ್‌ ಹಾಗೂ ವೃದ್ಧಿಮಾನ್‌ ಸಾಹಾ ಜೋಡಿ 42 ಎಸೆತಗಳಲ್ಲಿ 64 ರನ್‌ ಜೊತೆಯಾಟ ನೀಡಿದರೆ, ಸುದರ್ಶನ್‌ ಹಾಗೂ ಹಾರ್ದಿಕ್‌ ಪಾಂಡ್ಯ ಜೋಡಿ 33 ಎಸೆತಗಳಲ್ಲೇ ಸ್ಫೋಟಕ 81 ರನ್‌ ಚಚ್ಚಿತ್ತು. ಇದರ ಪರಿಣಾಮ ಮೊದಲ 10 ಓವರ್‌ನಲ್ಲಿ ಒಂದು ವಿಕೆಟ್‌ ಕಳೆದುಕೊಂಡು ಕೇವಲ 86 ರನ್‌ ಕಲೆಹಾಕಿದ್ದ ಟೈಟಾನ್ಸ್‌ ಮುಂದಿನ 10 ಓವರ್‌ಗಳಲ್ಲಿ 128 ರನ್‌ ಗಳಿಸುವ ಮೂಲಕ ತಂಡದ ಮೊತ್ತ 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾಯಿತು. ಸಾಯಿ ಸುದರ್ಶನ್‌ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಕೊನೆಯ ೫ ಓವರ್‌ಗಳಲ್ಲಿ 71 ರನ್‌ ಸೇರ್ಪಡೆಯಾಯಿತು.

    ಗುಜರಾತ್‌ ಟೈಟಾನ್ಸ್‌ ಪರ ವೃದ್ಧಿಮಾನ್‌ ಸಾಹಾ 54 ರನ್‌ (39 ಎಸೆತ, 5 ಬೌಂಡರಿ, 1 ಸಿಕ್ಸರ್‌), ಶುಭಮನ್‌ ಗಿಲ್‌ 39 ರನ್‌ (20 ಎಸೆತ, 7 ಬೌಂಡರಿ), ಹಾರ್ದಿಕ್‌ ಪಾಂಡ್ಯ 21 ರನ್‌ ಗಳಿಸಿದರು. ಇನ್ನೂ 204.25 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಸಾಯಿ ಸುದರ್ಶನ್‌ 47 ಎಸೆತಗಳಲ್ಲಿ 96 ರನ್‌ (6 ಸಿಕ್ಸರ್‌, 8 ಬೌಂಡರಿ) ಸಿಡಿಸಿ ಶತಕ ವಂಚಿತರಾದರು.

    ಸಿಎಸ್‌ಕೆ ಪರ ಮಹೇಶ್‌ ಪತಿರಣ 2 ವಿಕೆಟ್‌ ಪಡೆದರೆ, ರವೀಂದ್ರ ಜಡೇಜಾ ಹಾಗೂ ದೀಪಕ್‌ ಚಹಾರ್‌ ತಲಾ ಒಂದೊಂದು ವಿಕೆಟ್‌ ಪಡೆದರು.

  • IPL 2023 Final: ಗುಜರಾತ್‌ಗೆ ಗುನ್ನ ಕೊಟ್ಟ ಚೆನ್ನೈ – 10ನೇ ಬಾರಿಗೆ ಫೈನಲ್‌ಗೆ CSK ಎಂಟ್ರಿ

    IPL 2023 Final: ಗುಜರಾತ್‌ಗೆ ಗುನ್ನ ಕೊಟ್ಟ ಚೆನ್ನೈ – 10ನೇ ಬಾರಿಗೆ ಫೈನಲ್‌ಗೆ CSK ಎಂಟ್ರಿ

    – ಟೈಟಾನ್ಸ್‌ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ಗೆ 15 ರನ್‌ಗಳ ಭರ್ಜರಿ ಜಯ

    ಚೆನ್ನೈ: ಸಂಘಟಿತ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಪ್ರದರ್ಶನದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings), ಹಾಲಿ ಚಾಂಪಿಯನ್ಸ್‌ ಗುಜರಾತ್‌ ಟೈಟಾನ್ಸ್‌ (Gujarat Titans) ವಿರುದ್ಧ 15 ರನ್‌ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 10ನೇ ಬಾರಿಗೆ ಐಪಿಎಲ್‌ ಫೈನಲ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದೆ.

    ಈವರೆಗೆ ಐಪಿಎಲ್‌ನಲ್ಲಿ (IPL 2023) 4 ಬಾರಿ ಚಾಂಪಿಯನ್ಸ್‌ ಕಿರೀಟ ಧರಿಸಿರುವ ಚೆನ್ನೈ 10ನೇ ಬಾರಿಗೆ ಫೈನಲ್‌ ಪ್ರವೇಶಿಸಿದೆ. ಇನ್ನೂ ಮೊದಲ ಆವೃತ್ತಿಯಲ್ಲೇ ಚಾಂಪಿಯನ್‌ ಆದ ಹಾರ್ದಿಕ್‌ ಪಾಂಡ್ಯ ನಾಯಕತ್ವದ ಗುಜರಾತ್‌ ಟೈಟಾನ್ಸ್‌ ಸೋತು 2ನೇ ಎಲಿಮಿನೇಟರ್‌ ಹಂತ ತಲುಪಿದೆ.

    ಮೇ 24 ರಂದು ಮುಂಬೈ ಇಂಡಿಯನ್ಸ್‌ (Mumbai Indians) ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ (LSG) ವಿರುದ್ಧ ಮೊದಲ ಎಲಿಮಿನೇಟರ್‌ ಪಂದ್ಯ ನಡೆಯಲಿದ್ದು, ಗೆದ್ದ ತಂಡದೊಂದಿಗೆ 2ನೇ ಎಲಿಮಿನೇಟರ್‌ ಪಂದ್ಯದಲ್ಲಿ ಟೈಟಾನ್ಸ್‌ ಸೆಣಸಲಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 172 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಹಾಲಿ ಚಾಂಪಿಯನ್ಸ್‌ ಗುಜರಾತ್‌ ಟೈಟಾನ್ಸ್‌ 20 ಓವರ್‌ಗಳಲ್ಲಿ 157 ರನ್‌ಗಳಿಗೆ ಸರ್ವಪತನಕಂಡಿತು.

    ಚೇಸಿಂಗ್‌ ಆರಂಭಿಸಿದ ಟೈಟಾನ್ಸ್‌ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. 22 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡಿತು. ಬಳಿಕ ನಿಧಾನಗತಿ ಬ್ಯಾಟಿಂಗ್‌ನೊಂದಿಗೆ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ಮಹಿ ಮ್ಯಾಜಿಕ್‌ ನೊಂದಿಗೆ ಬೌಲಿಂಗ್‌ನಲ್ಲಿ ಉತ್ತಮ ಹಿಡಿತ ಸಾಧಿಸಿದ ಚೆನ್ನೈ ತಂಡ ಗುಜರಾತ್‌ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳನ್ನ ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.

    ಗುಜರಾತ್‌ ಟೈಟಾನ್ಸ್‌ ಪರ ಶುಭಮನ್‌ ಗಿಲ್‌ (Shubman Gill) 42 ರನ್‌ (38 ರನ್‌, 4 ಬೌಂಡರಿ, 1 ಸಿಕ್ಸ್‌), ವೃದ್ಧಿಮಾನ್‌ ಸಾಹಾ 12 ರನ್‌, ದಸುನ್‌ ಶನಾಕ 17 ರನ್‌, ವಿಜಯ್‌ ಶಂಕರ್‌ 14 ರನ್‌ ಗಳಿಸಿದ್ರೆ, ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ರಶೀದ್‌ ಖಾನ್‌ 16 ಎಸೆತಗಳಲ್ಲಿ ಬರೋಬ್ಬರಿ 30 ರನ್‌ ಚಚ್ಚಿ ವಿಕೆಟ್‌ ಕೈಚೆಲ್ಲಿದರು. ಬಳಿಕ ತಂಡ ಸೋಲುವುದು ಖಚಿತವಾಯಿತು.

    ಸಿಎಸ್‌ಕೆ ಪರ ದೀಪಕ್‌ ಚಹಾರ್‌, ಮಹೀಶ್‌ ತೀಕ್ಷಣ ಹಾಗೂ ರವೀಂದ್ರ ಜಡೇಜಾ, ಮಥೀಶ ಪತಿರಣ ತಲಾ 2 ವಿಕೆಟ್‌ ಕಿತ್ತರೆ ತುಷಾರ್‌ ದೇಶ್‌ಪಾಂಡೆ ಒಂದು ವಿಕೆಟ್‌ ಪಡೆದು ಮಿಂಚಿದರು.

    ಮೊದಲು ಬ್ಯಾಟಿಂಗ್‌ ಮಾಡಿದ ಸಿಎಸ್‌ಕೆ ಋತುರಾಜ್‌ ಗಾಯಕ್ವಾಡ್‌ (Ruturaj Gaikwad) ಹಾಗೂ ಡಿವೋನ್‌ ಕಾನ್ವೆ (Devon Conway) ಜೋಡಿ ಉತ್ತಮ ಆರಂಭ ನೀಡಿತು. ಮೊದಲ ವಿಕೆಟ್‌ಗೆ ಈ ಜೋಡಿ 10.3 ಓವರ್‌ಗಳಲ್ಲಿ 87 ರನ್‌ ಗಳಿಸಿತ್ತು. ಋತುರಾಜ್‌ 44 ಎಸೆತಗಳಲ್ಲಿ ಭರ್ಜರಿ 66 ರನ್‌ (7 ಬೌಂಡರಿ, 1 ಸಿಕ್ಸರ್)‌ ಔಟಾದರು. ಈ ಬೆನ್ನಲ್ಲೇ 40 ರನ್‌ (34 ಎಸೆತ, 4 ಬೌಂಡರಿ) ಗಳಿಸಿ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿದರು.

    ಇನ್ನೂ ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ 17 ರನ್‌, ಅಂಬಟಿ ರಾಯುಡು 17 ರನ್‌ ಹಾಗೂ ರವೀಂದ್ರ ಜಡೇಜಾ 22 ರನ್‌, ಮೊಯಿನ್‌ ಅಲಿ 9 ರನ್‌ ಗಳಿಸಿ ತಂಡ ಮೊತ್ತ 170ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಆರಂಭದಿಂದಲೂ ಸಾಧಾರಣ ಬ್ಯಾಟಿಂಗ್‌ ನಡೆಸಿದ ಸಿಎಸ್‌ಕೆ ಕೊನೆಯ 3 ಓವರ್‌ಗಳಲ್ಲಿ ಸ್ಫೋಟಕ 35 ರನ್‌ ಬಾರಿಸಿ ತಂಡದ ಮೊತ್ತ ಹೆಚ್ಚಿಸಿಕೊಂಡಿತು.

    ಗುಜರಾತ್‌ ಟೈಟಾನ್ಸ್‌ ಪರ ಮೊಹಮ್ಮದ್‌ ಶಮಿ ಹಾಗೂ ಮೋಹಿತ್‌ ಶರ್ಮಾ ತಲಾ 2 ವಿಕೆಟ್‌ ಕಿತ್ತರೆ, ದರ್ಶನ್‌ ನಾಲ್ಕಂಡೆ, ರಶೀದ್‌ ಖಾನ್‌ ಹಾಗೂ ನೂರ್‌ ಅಹ್ಮದ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

  • ಮಹಿ ನೋಡಲು 2,185 Km ನಿಂದ ಬಂದ ಯುವಕ, ಟ್ರಿಪ್‌ ಮಿಸ್‌ ಮಾಡಿಕೊಂಡ ಯುವತಿ

    ಮಹಿ ನೋಡಲು 2,185 Km ನಿಂದ ಬಂದ ಯುವಕ, ಟ್ರಿಪ್‌ ಮಿಸ್‌ ಮಾಡಿಕೊಂಡ ಯುವತಿ

    ನವದೆಹಲಿ: ಶನಿವಾರ ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ತಂಡಗಳ ನಡುವಿನ ಪಂದ್ಯ ರೋಚಕತೆಯಿಂದ ಕೂಡಿತ್ತು. ಕ್ರೀಡಾಂಗಣದ ತುಂಬಾ ಸಿಎಸ್‌ಕೆ ಅಭಿಮಾನಿಗಳೇ (CSK Fans) ಹೆಚ್ಚಿನ ಸಂಖ್ಯೆಯಲ್ಲಿದ್ದರು. ಶಿಳ್ಳೆ, ಚಪ್ಪಾಳೆ ಮಳೆಗರೆಯುತ್ತಾ ಆಟಗಾರರನ್ನ ಹುರಿದುಂಬಿಸಿದರು.

    ಕೊನೆಯ ಲೀಗ್‌ ಪಂದ್ಯವನ್ನಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌ ರನ್‌ ಹೊಳೆಯಲ್ಲಿ ತೇಲಾಡಿತು. ಕೊನೆಯವೆರೆಗೂ ಸಿಕ್ಸರ್‌, ಬೌಂಡರಿ ಅಬ್ಬರಿಸುತ್ತಾ ಅಭಿಮಾನಿಗಳ ಕಣ್ಣಿಗೆ ಹಬ್ಬವನ್ನುಂಟುಮಾಡಿತು. ಈ ವೇಳೆ ಸಿಎಸ್‌ಕೆ ಅಭಿಮಾನಿಗಳು ವಿಶೇಷ ಪೋಸ್ಟರ್‌ಗಳನ್ನು ಹಿಡಿದು ಗಮನ ಸೆಳೆದರು. ಇದನ್ನೂ ಓದಿ: ಧೋನಿ ಕ್ಯಾಪ್ಟನ್‌ ಆಗಿದ್ದಿದ್ದರೆ RCB ಮೂರು ಬಾರಿ ಕಪ್‌ ಗೆಲ್ಲುತ್ತಿತ್ತು ಎಂದ ಪಾಕ್‌ ಮಾಜಿ ಕ್ರಿಕೆಟಿಗ

    ಅಭಿಮಾನಿಯೊಬ್ಬರು ʻಮಹಿ (MS Dhoni) ನೋಡಲು 2,185 ಕಿಮೀ ಟ್ರಾವೆಲ್‌ ಮಾಡಿ ಬಂದಿದ್ದೇನೆʼ ಎಂದು ಹಿಡಿದುಕೊಂಡಿದ್ದರೆ, ಮತ್ತೊಬ್ಬಳು ಯುವತಿ ʻಮಹಿ ನೋಡೋದಕ್ಕಾಗಿ ನನ್ನ ಟ್ರಿಪ್‌ ಮಿಸ್‌ ಮಾಡಿಕೊಂಡೆʼ ಅಂತಾ ಪೋಸ್ಟರ್‌ ಹಿಡಿದುಕೊಂಡಿದ್ದು ಕ್ಯಾಮೆರಾದಲ್ಲಿ ಸೆರೆಯಾಯಿತು. ಇಷ್ಟು ದಿನ 6 ಅಥವಾ 7ನೇ ವಿಕೆಟ್‌ಗೆ ಕ್ರೀಸ್‌ಗೆ ಬರುತ್ತಿದ್ದ ಮಹಿ, ಶನಿವಾರ ಅಭಿಮಾನಿಗಳಿಗೆ ನಿರಾಸೆಯುಂಟಾಗದಿರಲೆಂದು 4ನೇ ವಿಕೆಟ್‌ಗೆ ಕಣಕ್ಕಿಳಿದಿದ್ದರು. ಆದ್ರೆ ಸಿಕ್ಸರ್‌, ಬೌಂಡರಿ ಸಿಡಿಸದೇ ಒಂದು, 2 ರನ್‌ ಕದಿಯುವಷ್ಟರಲ್ಲೇ ಯಶಸ್ವಿಯಾದರು.

    ಈ ಹಿಂದೆ ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ‌ ಗೋವಾ ಮೂಲದ ಧೋನಿ ಅಭಿಮಾನಿಯೊಬ್ಬ, ತನ್ನ ಬೈಕ್‌ ಮಾರಿ ಐಪಿಎಲ್‌ ಟಿಕೆಟ್‌ ಖರೀದಿಸಿದ್ದ. ಮತ್ತೊಬ್ಬ ಅಭಿಮಾನಿ 1,700 ಕಿಮೀ ನಿಂದ ಟ್ರಾವೆಲ್‌ ಮಾಡಿ ಬಂದಿರುವುದಾಗಿ ಹೇಳಿಕೊಂಡಿದ್ದ. ಪೋಸ್ಟರ್‌ ವೈರಲ್‌ ಆಗುತ್ತಿದ್ದಂತೆ ಸಿಎಸ್‌ಕೆ ಅಭಿಮಾನಿಗಳು ನೀನು ಪಕ್ಕಾ ಫ್ಯಾನ್‌ ಬಿಡು ಗುರು ಅಂತಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಧೋನಿ ನೋಡಲು ಬೈಕ್‌ ಮಾರಿ IPL ಟಿಕೆಟ್‌ ಖರೀದಿಸಿದ ಅಭಿಮಾನಿ

    2023ರ 16ನೇ ಐಪಿಎಲ್‌ ಆವೃತ್ತಿ ಮಹೇಂದ್ರ ಸಿಂಗ್‌ ಧೋನಿ ಅವರ ಕೊನೆಯ ಐಪಿಎಲ್‌ ಆಗಿದೆ. ಆದ್ದರಿಂದ ಪ್ರತಿ ಪಂದ್ಯದಲ್ಲೂ ಧೋನಿ ಆಟವನ್ನ ನೋಡಲು ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ.

    ಶನಿವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಸಿಎಸ್‌ಕೆ 3 ವಿಕೆಟ್‌ ನಷ್ಟಕ್ಕೆ 223 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು. ಈ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 146 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

  • IPL 2023: ಗೆದ್ದು ಪ್ಲೇ ಆಫ್‌ಗೆ ಹಾರಿದ ಚೆನ್ನೈ – ಹೀನಾಯವಾಗಿ ಸೋತು ಆಟ ಮುಗಿಸಿದ ಡೆಲ್ಲಿ ಕ್ಯಾಪಿಟಲ್ಸ್‌

    IPL 2023: ಗೆದ್ದು ಪ್ಲೇ ಆಫ್‌ಗೆ ಹಾರಿದ ಚೆನ್ನೈ – ಹೀನಾಯವಾಗಿ ಸೋತು ಆಟ ಮುಗಿಸಿದ ಡೆಲ್ಲಿ ಕ್ಯಾಪಿಟಲ್ಸ್‌

    ನವದೆಹಲಿ: ಭರ್ಜರಿ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings), ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 77 ರನ್‌ಗಳ ಭರ್ಜರಿ ಜಯ ಸಾಧಿಸಿ 2023ರ ಐಪಿಎಲ್‌ ಪ್ಲೇ ಆಫ್‌ (IPL Playoffs) ಪ್ರವೇಶಿಸಿದೆ. ಈ ಆವೃತ್ತಿಯಲ್ಲಿ ಕೊನೆಯ ಲೀಗ್‌ ಪಂದ್ಯವನ್ನಾಡಿದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ಹೀನಾಯವಾಗಿ ಸೋತು ವಿದಾಯ ಹೇಳಿದೆ.

    14ರ ಪೈಕಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ 17 ಅಂಕ ಪಡೆದು +0652 ರನ್‌ರೇಟ್‌ನೊಂದಿಗೆ ಚೆನ್ನೈ 2ನೇ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ಪ್ಲೇ ಆಫ್‌ ಪ್ರವೇಶಿಸಿದ 2ನೇ ತಂಡವಾಗಿದೆ.

    ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಸಿಎಸ್‌ಕೆ 3 ವಿಕೆಟ್‌ ನಷ್ಟಕ್ಕೆ 223 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು. ಈ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 146 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಚೇಸಿಂಗ್‌ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ಆರಂಭದಿಂದಲೇ ರನ್‌ ಕದಿಯಲು ಹೆಣಗಾಡುತ್ತಿತ್ತು. ಜೊತೆಗೆ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ನಾಯಕ ಡೇವಿಡ್‌ ವಾರ್ನರ್‌ (David Warner) ಅರ್ಧಶತಕ ಗಳಿಸಿದರೂ ನಿಧಾನಗತಿಯ ಬ್ಯಾಟಿಂಗ್‌ನಿಂದ ತಂಡವನ್ನು ಸೋಲಿನ ಸುಳಿಗೆ ತಳ್ಳಿದರು. ಅಂತಿಮವಾಗಿ ಡೆಲ್ಲಿ 146 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಇದನ್ನೂ ಓದಿ: RCB ಮ್ಯಾಚ್‌ ನೋಡಲು ಟಿಕೆಟ್ ಸಿಗದಿದ್ದಕ್ಕೆ ರೊಚ್ಚಿಗೆದ್ರು ಫ್ಯಾನ್ಸ್‌ – ದ್ರಾವಿಡ್‌ ಕಾರಿಗೆ ಮುತ್ತಿಗೆ

    ಡೆಲ್ಲಿ ಪರ ಡೇವಿಡ್‌ ವಾರ್ನರ್‌ 86 ರನ್‌ (58 ಎಸೆತ, 5 ಸಿಕ್ಸರ್‌, 7 ಬೌಂಡರಿ) ಗಳಿಸಿ ಏಕಾಂಗಿ ಹೋರಾಟ ನಡೆಸಿದ್ದು ಬಿಟ್ಟರೆ, ಯಾರೊಬ್ಬರೂ ಸ್ಥಿರವಾಗಿ ನಿಲ್ಲದ ಕಾರಣ ಡೆಲ್ಲಿ ತಂಡ ಹೀನಾಯವಾಗಿ ಸೋಲಬೇಕಾಯಿತು. ಇದನ್ನೂ ಓದಿ: IPL 2023: ಸಂಜು ಸೈನ್ಯಕ್ಕೆ ಪ್ಲೇ ಆಫ್‌ ಕನಸು ಜೀವಂತ – ರಾಜಸ್ಥಾನ್‌ಗೆ 4 ವಿಕೆಟ್‌ಗಳ ರೋಚಕ ಜಯ

    ಮೊದಲು ಬ್ಯಾಟಿಂಗ್‌ ಮಾಡಿದ ಸಿಎಸ್‌ಕೆ ತಂಡದ ಆರಂಭಿಕರು ಡೆಲ್ಲಿ ಬೌಲರ್‌ಗಳನ್ನ ಚೆಂಡಾಡಿದರು. ಋತುರಾಜ್‌ ಗಾಯಕ್ವಾಡ್‌ (Ruturaj Gaikwad) ಹಾಗೂ ಡಿವೋನ್‌ ಕಾನ್ವೆ (Devon Conway) ಜೋಡಿ ಮೊದಲ ವಿಕೆಟ್‌ ಪತನಕ್ಕೆ 14.3 ಓವರ್‌ಗಳಲ್ಲಿ 141 ರನ್‌ ಪೇರಿಸಿತ್ತು. ಇದರೊಂದಿಗೆ ಶಿವಂ ದುಬೆ, ರವೀಂದ್ರ ಜಡೇಜಾ ಅವರ ಸ್ಫೋಟಕ ಬ್ಯಾಟಿಂಗ್‌ ಸಹ ತಂಡದ ಬೃಹತ್‌ ಮೊತ್ತಕ್ಕೆ ಕಾರಣವಾಯಿತು.

    ಸಿಎಸ್‌ಕೆ ಪರ ಋತುರಾಜ್‌ ಗಾಯಕ್ವಾಡ್‌ 79 ರನ್‌ (50 ಎಸೆತ, 7 ಸಿಕ್ಸರ್‌, 3 ಬೌಂಡರಿ), ಡಿವೋನ್‌ ಕಾನ್ವೆ 87 ರನ್‌ (52 ಎಸೆತ, 11 ಬೌಂಡರಿ, 3 ಸಿಕ್ಸರ್‌), ಶಿವಂ ದುಬೆ 22 ರನ್‌ (9 ಎಸೆತ, 3 ಸಿಕ್ಸರ್)‌, ರವೀಂದ್ರ ಜಡೇಜಾ 20 ರನ್‌ (7 ಎಸೆತ, 3 ಬೌಂಡರಿ, 1 ಸಿಕ್ಸರ್)‌ ಗಳಿಸಿದರೆ, ನಾಯಕ ಎಂ.ಎಸ್‌ ಧೋನಿ (MS Dhoni) 4 ಎಸೆತಗಳಲ್ಲಿ 5 ರನ್‌ ಗಳಿಸಿ ಅಜೇಯರಾಗುಳಿದರು.

  • ಮಕಾಡೆ ಮಲಗಿದ ಮುಂಬೈ, ಚೆನ್ನೈಗೆ 6 ವಿಕೆಟ್‌ಗಳ ಜಯ – CSK ಪ್ಲೆ ಆಫ್‌ಗೆ ಇನ್ನೆರಡೇ ಹೆಜ್ಜೆ ಬಾಕಿ

    ಮಕಾಡೆ ಮಲಗಿದ ಮುಂಬೈ, ಚೆನ್ನೈಗೆ 6 ವಿಕೆಟ್‌ಗಳ ಜಯ – CSK ಪ್ಲೆ ಆಫ್‌ಗೆ ಇನ್ನೆರಡೇ ಹೆಜ್ಜೆ ಬಾಕಿ

    ಚೆನ್ನೈ: ಸಂಘಟಿತ ಬೌಲಿಂಗ್‌ ದಾಳಿ ಹಾಗೂ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ತವರಿನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings), ಮುಂಬೈ ಇಂಡಿಯನ್ಸ್ (Mumba Indians) ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಪಾಯಿಟ್ಸ್‌ ಪಟ್ಟಿಯಲ್ಲಿ ‌ಒಂದು ಸ್ಥಾನ ಮೇಲಕ್ಕೆ ಜಿಗಿದಿದೆ.

    11 ಪಂದ್ಯಗಳ ಪೈಕಿ 6 ರಲ್ಲಿ ಗೆಲುವು ಸಾಧಿಸಿರುವ ಚೆನ್ನೈ ಸೂಪರ್‌ ಕಿಂಗ್ಸ್‌ 13 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಿದರೆ, 10 ಪಂದ್ಯಗಳಲ್ಲಿ ತಲಾ 5ರಲ್ಲಿ ಗೆಲುವು ಸಾಧಿಸಿರುವ ಲಕ್ನೋ ಸೂಪರ್‌ ಜೈಂಟ್ಸ್‌ 11 ಅಂಕಗಳೊಂದಿಗೆ 3 ಹಾಗೂ ರಾಜಸ್ಥಾನ್‌ ರಾಯಲ್ಸ್‌ 10 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಗುಜರಾತ್‌ ಟೈಟಾನ್ಸ್‌ಗೆ 9 ವಿಕೆಟ್‌ಗಳ ಭರ್ಜರಿ ಜಯ – ಪಾಂಡ್ಯ ಪಡೆ ಬಹುತೇಕ ಪ್ಲೇ ಆಫ್‌ಗೆ; ಈ ಸಲ ಕಪ್‌ ಯಾರದ್ದು?

    ಶನಿವಾರ ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 139 ರನ್‌ ಗಳಿಸಿತ್ತು. 140 ರನ್‌ ಗುರಿ ಪಡೆದ ಸಿಎಸ್‌ಕೆ 17.4 ಓವರ್‌ಗಳಲ್ಲೇ 4 ವಿಕೆಟ್‌ ನಷ್ಟಕ್ಕೆ 140 ರನ್‌ ಗಳಿಸಿ ಜಯ ಸಾಧಿಸಿತು. ಇದನ್ನೂ ಓದಿ: ಯುದ್ಧ ಮುಂದುವರಿಸಲಿ – ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ದಾದಾ

    ಗೆಲುವಿಗೆ 140 ರನ್‌ಗಳ ಸಾಧಾರಣ ರನ್‌ ಗುರಿ ಪಡೆದ ಚೆನ್ನೈ ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್‌ ಮಾಡಲು ಮುಂದಾಯಿತು. ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್‌ ಗಾಯಕ್ವಾಡ್‌ ಭರ್ಜರಿ ಸಿಕ್ಸರ್‌, ಬೌಂಡರಿ ಸಿಡಿದರು. ಆದ್ರೆ 16 ಎಸೆತಗಳಲ್ಲಿ 30 ರನ್‌ (4 ಬೌಂಡರಿ, 2 ಸಿಕ್ಸರ್‌) ಗಳಿಸುತ್ತಿದ್ದಂತೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿದರು. ಬಳಿಕ ಕಣಕ್ಕಿಳಿದ ಅಜಿಂಕ್ಯಾ ರಹಾನೆ (Ajinkya Rahane) ಕೂಡ ಭರ್ಜರಿ ಬ್ಯಾಟಿಂಗ್‌ ಮಾಡಿದರು. ಒಂದೆಡೆ ವಿಕೆಟ್‌ ಕಳೆದುಕೊಳ್ಳುತ್ತಿದ್ದರೂ ರನ್‌ ಕಲೆಹಾಕುತ್ತಾ ಸಾಗಿದ ಚೆನ್ನೈ ಬಹುಬೇಗನೆ ಗುರಿ ತಲುಪಿತು.

    ಸಿಎಸ್‌ಕೆ ಪರ ಋತುರಾಜ್‌ ಗಾಯಕ್ವಾಡ್‌ 30 ರನ್‌, ಡಿವೋನ್‌ ಕಾನ್ವೆ (Devon Conway) 44 ರನ್‌ (42 ಎಸೆತ, 4 ಬೌಂಡರಿ), ಅಜಿಂಕ್ಯಾ ರಹಾನೆ 21 (17 ಎಸೆತ, 1 ಸಿಕ್ಸರ್‌, 1 ಬೌಂಡರಿ), ಅಂಬಟಿ ರಾಯುಡು 12 ರನ್‌ ಹಾಗೂ ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಶಿವಂ ದುಬೆ 25 ರನ್‌ (17 ಎಸೆತ, 3 ಸಿಕ್ಸರ್‌) ಚಚ್ಚಿದರು. ನಾಯಕ ಎಂ.ಎಸ್‌ ಧೋನಿ (MS Dhoni) 3 ಎಸೆತಗಳಲ್ಲಿ 2 ರನ್‌ ಗಳಿಸಿ ಅಜೇಯರಾಗುಳಿದರು.

    ಮುಂಬೈ ಪರ ಪಿಯೂಷ್‌ ಚಾವ್ಲಾ 2 ವಿಕೆಟ್‌ ಕಿತ್ತರೆ, ಟ್ರಿಸ್ಟಾನ್ ಸ್ಟಬ್ಸ್ ಹಾಗೂ ಆಕಾಶ್‌ ಮಧ್ವಾಲ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್‌ ಕಳಪೆ‌ ಪ್ರದರ್ಶನ ನೀಡಿತು. ಆರಂಭಿಕರಾಗಿ ಕಣಕ್ಕಿಳಿದ ಕ್ಯಾಮರೂನ್‌ ಗ್ರೀನ್‌ 6 ರನ್‌, ಇಶಾನ್‌ ಕಿಶನ್‌ 7 ರನ್‌ ಗಳಿಸಿ ಔಟಾಗುತ್ತಿದ್ದಂತೆ ನಾಯಕ ರೋಹಿತ್‌ ಶರ್ಮಾ (Rohit Sharma) ಮತ್ತೆ ಡಕೌಟ್‌ ಆಗಿ ನಿರಾಸೆ ಅನುಭವಿಸಿದರು. ಮಧ್ಯಮ ಕ್ರಮಾಂಕದಲ್ಲಿ ಜೊತೆಯಾದ ಸೂರ್ಯಕುಮಾರ್‌ ಯಾದವ್‌ ಹಾಗೂ ನೆಹಾಲ್‌ ವಧೇರಾ ಸಣ್ಣ ಜೊತೆಯಾಟ ನೀಡಿದರು. 46 ಎಸೆತಗಳಲ್ಲಿ ಈ ಜೋಡಿ 55 ರನ್‌ ಗಳಿಸಿತ್ತು. ಆದ್ರೆ ಸೂರ್ಯಕುಮಾರ್‌ (Suryakumar Yadav) ಔಟಾಗಿ ಮತ್ತೆ ನಿರಾಸೆ ಮೂಡಿಸಿದರು. ಏಕಾಂಗಿ ಹೋರಾಟ ನಡೆಸಿದ ನೆಹಾಲ್‌ ವಧೇರಾ (Nehal Wadhera) ಅರ್ಧಶತಕ ಗಳಿಸಿ ತಂಡಕ್ಕೆ ಆಸರೆಯಾದರು.

    ಮುಂಬೈ ಪರ ನೆಹಾಲ್‌ ವಧೇರಾ 64 ರನ್‌ (51 ಎಸೆತ, 8 ಬೌಂಡರಿ, 1 ಸಿಕ್ಸರ್‌), ಸೂರ್ಯಕುಮಾರ್‌ ಯಾದವ್‌ 26 ರನ್‌ (22 ಎಸೆತ, 3 ಬೌಂಡರಿ), ಟ್ರಿಸ್ಟಾನ್ ಸ್ಟಬ್ಸ್ 20 ರನ್‌ (21 ಎಸೆತ, 2 ಬೌಂಡರಿ) ಗಳಿಸಿದ್ದು ಬಿಟ್ಟರೆ, ಉಳಿದ ಯಾರೊಬ್ಬರೂ 10 ರನ್‌ ಸಹ ಗಳಿಸದ್ದೇ ಇದ್ದದ್ದು ತಂಡದ ಸೋಲಿಗೆ ಕಾರಣವಾಯಿತು.

    ಸಿಎಸ್‌ಕೆ ಪರ ಮಿಂಚಿನ ಬೌಲಿಂಗ್‌ ದಾಳಿ ನಡೆಸಿದ ಮಹೇಶ್‌ ಪತಿರಣ 3 ವಿಕೆಟ್‌ ಕಿತ್ತರೆ, ದೀಪಕ್‌ ಚಹಾರ್‌ ಹಾಗೂ ತುಷಾರ್‌ ದೇಶ್‌ಪಾಂಡೆ ತಲಾ 2 ವಿಕೆಟ್‌ ಹಾಗೂ ರವೀಂದ್ರ ಜಡೇಜಾ 1 ವಿಕೆಟ್‌ ಪಡೆದು ಮಿಂಚಿದರು.