Tag: Deviramma

  • ದೇವಿರಮ್ಮನಿಗೆ ಮೈಸೂರು ಅರಸರ ಮನೆತನದಿಂದ ಬಾಗಿನ ಅರ್ಪಣೆ

    ದೇವಿರಮ್ಮನಿಗೆ ಮೈಸೂರು ಅರಸರ ಮನೆತನದಿಂದ ಬಾಗಿನ ಅರ್ಪಣೆ

    • ಗಾಳಿ ರೂಪದಲ್ಲಿ ದೇಗುಲ ಪ್ರವೇಶಿಸಿದ ದೇವಿರಮ್ಮ

    ಚಿಕ್ಕಮಗಳೂರು: ದೇವಿರಮ್ಮನ (Deviramma) ಬೆಟ್ಟದಲ್ಲಿ ಜಾತ್ರಾ ಮಹೋತ್ಸವ ಹಿನ್ನೆಲೆ, ಪ್ರತಿ ವರ್ಷದಂತೆ ಮೈಸೂರು (Mysuru) ಅರಸರ ಮನೆತನದಿಂದ ದೇವಿಗೆ ಬಾಗಿನ ಅರ್ಪಣೆ ಮಾಡಲಾಗಿದೆ.

    ಅನಾದಿ ಕಾಲದಿಂದಲೂ ಅರಸರ ಮನೆತನದಿಂದ ಜಾತ್ರೆಯಲ್ಲಿ ದೇವೀರಮ್ಮನಿಗೆ ಬಾಗಿನ ಕೊಡುವ ಸಂಪ್ರದಾಯವಿದೆ. ಮೈಸೂರು ಸಂಸ್ಥಾನದ ಪರವಾಗಿ ಆಗಮಿಸಿದ ಅರಸು ಸಂಘದ ರಾಜ್ಯಾಧ್ಯಕ್ಷ ದಿನೇಶ್ ತಂಡಕ್ಕೆ ದೇವಾಲಯದ ಆಡಳಿತ ಮಂಡಳಿ ಸ್ವಾಗತಿಸಿತು. ಬಳಿಕ ಹಣ್ಣು, ಕಾಯಿ, ವಿಳ್ಯೆದೆಲೆ, ಸೀರೆ, ಅರಿಶಿನ-ಕುಂಕುಮ ಅರ್ಪಣೆ ಮಾಡಲಾಯಿತು. ಇದನ್ನೂ ಓದಿ: ಚಿಕ್ಕಮಗಳೂರು | ಬಿಂಡಿಗ ದೇವಿರಮ್ಮನ ದರ್ಶನಕ್ಕೆ ಕಾದು ನಿಂತ ಸಾವಿರಾರು ಭಕ್ತರಿಗೆ ಮಳೆ ಸವಾಲು

    ರಾಕ್ಷನನ್ನ ಸಂಹರಿಸಿದ ಚಾಮುಂಡೇಶ್ವರಿ ಶಾಂತರೂಪ ತಾಳಿದ್ದು ಬಿಂಡಿಗ ಬೆಟ್ಟದಲ್ಲಿ ಎನ್ನುವ ನಂಬಿಕೆ ಇದೆ. ಇನ್ನೂ ರಾಜರ ಆಳ್ವಿಕೆಯಲ್ಲೂ ಮೈಸೂರಿನಿಂದ ಬಾಗಿನದ ವಸ್ತುಗಳು ಬರುತ್ತಿದ್ದವು.

    ದೇವಿರಮ್ಮನ ಬೆಟ್ಟದ ತಪ್ಪಲಿನ ಕೆಳಭಾಗದಲ್ಲಿರುವ ದೇವಸ್ಥಾನಕ್ಕೆ ಗಾಳಿ ರೂಪದಲ್ಲಿ ದೇವಿರಮ್ಮ ಪ್ರವೇಶಿಸಿದ್ದಾಳೆ. ವರ್ಷಕ್ಕೊಮ್ಮೆ ಬೆಟ್ಟದ ಮೇಲೆ ಭಕ್ತರಿಗೆ ದರ್ಶನ ನೀಡುವ ದೇವೀರಮ್ಮ, ಉಳಿದ 364 ದಿನ ದೇವಸ್ಥಾನದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾಳೆ.

    ಎರಡು ದಿನದಿಂದ ಬೆಟ್ಟದ ಮೇಲಿದ್ದ ದೇವಿ ಇಂದು ಕೆಳಗಿರುವ ದೇಗುಲದ ಗರ್ಭಗುಡಿ ಪ್ರವೇಶಿಸಿದ್ದಾಳೆ. ಈ ಬಾರಿ ಎರಡು ದಿನ ಬೆಟ್ಟ ಹತ್ತಲು ಅವಕಾಶ ನೀಡಲಾಗಿತ್ತು. ಎರಡು ದಿನದಲ್ಲಿ ಸುಮಾರು 70 ಸಾವಿರಕ್ಕೂ ಅಧಿಕ ಭಕ್ತರು ಬರೀಗಾಲಿನಲ್ಲಿ ಬೆಟ್ಟವನ್ನ ಏರಿ ತಾಯಿಯ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ: ದೇವಿರಮ್ಮ ಬೆಟ್ಟ ಏರುವಾಗ ಇಬ್ಬರು ಅಸ್ವಸ್ಥ – ಬೆಟ್ಟದಿಂದ ಹೊತ್ತುತಂದ ಅಗ್ನಿಶಾಮಕ ಸಿಬ್ಬಂದಿ

  • ಚಿಕ್ಕಮಗಳೂರು | ಬಿಂಡಿಗ ದೇವಿರಮ್ಮನ ದರ್ಶನಕ್ಕೆ ಕಾದು ನಿಂತ ಸಾವಿರಾರು ಭಕ್ತರಿಗೆ ಮಳೆ ಸವಾಲು

    ಚಿಕ್ಕಮಗಳೂರು | ಬಿಂಡಿಗ ದೇವಿರಮ್ಮನ ದರ್ಶನಕ್ಕೆ ಕಾದು ನಿಂತ ಸಾವಿರಾರು ಭಕ್ತರಿಗೆ ಮಳೆ ಸವಾಲು

    ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ಶಕ್ತಿ ದೇವತೆ ದೇವೀರಮ್ಮನ ಜಾತ್ರೆಯ ಸಲುವಾಗಿ ಸಾವಿರಾರು ಭಕ್ತರು ಬೆಟ್ಟ ಹತ್ತಲು ಕಾತುರರಾಗಿದ್ದಾರೆ. ಆದರೆ, ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಆರಂಭವಾದ ಧಾರಾಕಾರ ಮಳೆ ಬೆಟ್ಟ ಹತ್ತುವ ಭಕ್ತರಿಗೆ ಸವಾಲಾಗಿ ಪರಿಣಮಿಸಿದೆ. ದೇವಿರಮ್ಮನನ್ನು ಕಣ್ತುಂಬಿಕೊಳ್ಳಲು ಮಳೆಯ ನಡುವೆಯೇ ಭಕ್ತರು ಬೆಟ್ಟವನ್ನು ಹತ್ತಲು ಅನಿವಾರ್ಯತೆ ಎದುರಾಗಿದೆ.

    ಸಮುದ್ರ ಮಟ್ಟದಿಂದ ಬರೋಬ್ಬರಿ 3,800 ಅಡಿಗೂ ಹೆಚ್ಚು ಎತ್ತರದಲ್ಲಿರುವ ದೇವೀರಮ್ಮನ ದೇಗುಲಕ್ಕೆ ತೆರಳಲು ಭಕ್ತರು ಸುಮಾರು 5-6 ಕಿ.ಮೀ. ದೂರದ ಪಿರಮಿಡ್ ಆಕಾರದ ಕಡಿದಾದ ಬೆಟ್ಟವನ್ನು ಹತ್ತಬೇಕು. ಈ ಬಾರಿ ಜಿಲ್ಲಾಡಳಿತ ಮತ್ತು ದೇವಸ್ಥಾನ ಸಮಿತಿ ಭಾನುವಾರ (ಅ.19) ಮತ್ತು ಸೋಮವಾರ (ಅ.20) ಎರಡು ದಿನ ಬೆಟ್ಟ ಹತ್ತಲು ಅವಕಾಶ ನೀಡಿದೆ. ಈ ಎರಡು ದಿನಗಳಲ್ಲಿ 60 ರಿಂದ 70 ಸಾವಿರಕ್ಕೂ ಹೆಚ್ಚು ಭಕ್ತರು ಬೆಟ್ಟ ಹತ್ತುವ ನಿರೀಕ್ಷೆಯಿದೆ. ಆದರೆ, ಭಾನುವಾರ-ಸೋಮವಾರ ಎರಡು ದಿನಗಳಲ್ಲಿ ಜಿಲ್ಲೆಯಲ್ಲಿ 10 ರಿಂದ 30 ಮಿ.ಮೀ. ಮಳೆ ಬೀಳುವ ಸಾಧ್ಯತೆಯಿದೆ ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ದೇವಿರಮ್ಮನ ದರ್ಶನದಿಂದ ದೀಪಾವಳಿಗೆ ಚಾಲನೆ – ಏನಿದು ಮಲೆನಾಡಿಗರ ಹಬ್ಬದ ವಿಶೇಷ?

    ಶನಿವಾರ (ಅ.18) ಸಂಜೆಯಿಂದಲೇ ಧಾರಾಕಾರ ಮಳೆ ಆರಂಭವಾಗಿದೆ. ಮಳೆಯ ಪ್ರಮಾಣ ಹೆಚ್ಚಾದರೆ, ಗುಡ್ಡವು ಜಾರುವ ಸಾಧ್ಯತೆ ಇರುವುದರಿಂದ, ಭಕ್ತರು ಅತ್ಯಂತ ಎಚ್ಚರಿಕೆಯಿಂದ ಬೆಟ್ಟ ಹತ್ತಬೇಕಾಗಿದೆ. ಯಾವುದೇ ತೊಂದರೆಗಳು ಆಗದಂತೆ ಮುನ್ನೆಚ್ಚರಿಕೆವಹಿಸಿರುವ ಜಿಲ್ಲಾಡಳಿತ, ಬೆಟ್ಟ ಹತ್ತುವ ಭಕ್ತರಿಗಾಗಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

    ಭಕ್ತರು ವೈಯಕ್ತಿಕ ಸುರಕ್ಷತೆಯೊಂದಿಗೆ ಮತ್ತು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಬೆಟ್ಟ ಹತ್ತಲು ಸೂಚನೆ ನೀಡಲಾಗಿದೆ. ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್‌ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮಳೆಯ ಸವಾಲಿನ ನಡುವೆಯೂ ಭಕ್ತರು ದೇವೀರಮ್ಮನ ದರ್ಶನಕ್ಕೆ ಉತ್ಸುಕರಾಗಿದ್ದಾರೆ. ಮಳೆ ಹೀಗೆ ಮುಂದುವರೆದರೆ ಸೋಮವಾರ ಬೆಟ್ಟ ಹತ್ತುವ ಭಕ್ತರಿಗೆ ಜಿಲ್ಲಾಡಳಿತ ನಿರ್ಬಂಧ ಹೇರುವ ಸಾಧ್ಯತೆಯೂ ಇದೆ. ಇದನ್ನೂ ಓದಿ: ವರ್ಷಕ್ಕೊಮ್ಮೆ ದರ್ಶನ ಕೊಡುವ ದೇವಿರಮ್ಮನ ಪೂಜೆಗೆ ಭಕ್ತರ ದಂಡು

  • ವರ್ಷಕ್ಕೊಮ್ಮೆ ಪೂಜೆ ಸಲ್ಲುವ ಬೆಟ್ಟದ ತುದಿಯ ದೇವೀರಮ್ಮನ ನೋಡಲು ಹರಿದು ಬಂದ ಭಕ್ತಸಾಗರ

    ವರ್ಷಕ್ಕೊಮ್ಮೆ ಪೂಜೆ ಸಲ್ಲುವ ಬೆಟ್ಟದ ತುದಿಯ ದೇವೀರಮ್ಮನ ನೋಡಲು ಹರಿದು ಬಂದ ಭಕ್ತಸಾಗರ

    ಚಿಕ್ಕಮಗಳೂರು: ಸಮುದ್ರ ಮಟ್ಟದಿಂದ ಸುಮಾರು 3,800 ಅಡಿ ಎತ್ತರದ ಗುಡ್ಡದ (Hill) ತುದಿಯಲ್ಲಿರುವ ತಾಲೂಕಿನ ಬಿಂಡಿಗ (Bindiga) ದೇವೀರಮ್ಮನ (Deviramma) ದರ್ಶನಕ್ಕಾಗಿ ಇಂದು ಸುಮಾರು 1 ಲಕ್ಷಕ್ಕೂ ಅಧಿಕ ಭಕ್ತರು ಬೆಟ್ಟ ಹತ್ತಿದ್ದಾರೆ. ತಾಯಿಯ ದರ್ಶನ ಪಡೆದು ಪುನೀತರಾಗಿದ್ದಾರೆ.

    ಭಾನುವಾರ ಸಂಜೆಯಿಂದಲೇ ಕೆಎಸ್‌ಆರ್‌ಟಿಸಿ ಬಸ್ಸನ್ನು ಹತ್ತಿ ಬಿಂಡಿಗ ಗ್ರಾಮದತ್ತ ಸಾವಿರಾರು ಭಕ್ತರು ಸಾಗಿದ್ದರು. ಬಳಿಕ ರಾತ್ರಿಯಿಂದಲೇ ಬೆಟ್ಟ ಹತ್ತೋಕೆ ಆರಂಭಿಸಿದ್ದರು. ಸೋಮವಾರ ಬೆಳಗಿನ ಜಾವ ದೇವೀರಮ್ಮ ತಾಯಿಗೆ ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದ್ದಾರೆ.

    ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಭಕ್ತರು ಆಯಾಸವನ್ನು ಲೆಕ್ಕಿಸದೇ ಪಿರಮಿಡ್ ಆಕಾರದ ಬೆಟ್ಟವನ್ನು ಉತ್ಸಾಹದಿಂದ ಹತ್ತಿದರು. ಕಾಫಿತೋಟ, ಕಲ್ಲುಮುಳ್ಳಿನ, ಕಡಿದಾದ ರಸ್ತೆಯಲ್ಲಿ ಒಬ್ಬರ ಕೈಯನ್ನೊಬ್ಬರು ಹಿಡಿದುಕೊಂಡು ಸರದಿ ಸಾಲಲ್ಲಿ ಸಾಗಿ ಗುಡ್ಡದ ತುದಿಯ ದೇವಿ ದರ್ಶನ ಪಡೆದಿದ್ದಾರೆ.

    ವಾಹನಗಳಲ್ಲಿ ಮಲ್ಲೇನಹಳ್ಳಿಗೆ ತೆರಳಿದ ಭಕ್ತರು 4 ಕಿ.ಮೀ ದೂರದಲ್ಲೇ ಗಾಡಿ ನಿಲ್ಲಿಸಿ ಕಾಫಿ ತೋಟದೊಳಗಿನಿಂದ ನಡೆಯೋಕೆ ಆರಂಭಿಸಿದ್ದರು. ದೇವಿಯ ದರ್ಶನ ಪಡೆದು ಹಿಂದಿರುಗುವಾಗ ಸೂರ್ಯ ಕ್ರಮೇಣ ನೆತ್ತಿ ಮೇಲೆ ಬರುತ್ತಿದ್ದಂತೆ ಭಕ್ತರು ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಂಡರು.

    ದೇವೀರಮ್ಮ ದೀಪೋತ್ಸವದ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಡಿವೈಎಸ್‌ಪಿ, 8 ಮಂದಿ ಸಿಪಿಐ, 32 ಪಿಎಸ್‌ಐ, 87 ಎಎಸ್‌ಐ, 453 ಮುಖ್ಯ ಪೇದೆ ಮತ್ತು ಪೇದೆ, 62 ಗೃಹ ರಕ್ಷಕದಳ ಹಾಗೂ 6 ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿತ್ತು.

    ಮಲ್ಲೇನಹಳ್ಳಿ ಸಮೀಪ 15 ಎಕರೆ ಪ್ರದೇಶದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿತ್ತು. ಬೆಟ್ಟಕ್ಕೆ ಸಾಗುವ ಭಕ್ತರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಭಕ್ತರು ಸುರಕ್ಷಿತವಾಗಿ ಬೆಟ್ಟ ಹತ್ತಲು ಅಗ್ನಿಶಾಮಕ ದಳ, ಗ್ರಾಮಸ್ಥರು ಮತ್ತು ಸ್ವಯಂ ಸೇವಕರನ್ನು ನಿಯೋಜಿಸಲಾಗಿತ್ತು.

    ಕಳೆದ 2-3 ವರ್ಷಗಳಿಂದ ಕೊರೊನಾ, ಮಳೆ ಕಾರಣಕ್ಕೆ ಬೆಟ್ಟ ಹತ್ತುವವರ ಸಂಖ್ಯೆ ತೀವ್ರ ಇಳಿಮುಖವಾಗಿತ್ತು. ಆದರೆ ಈ ವರ್ಷ ಊಹೆಗೂ ಮೀರಿ ಭಕ್ತರ ಸಾಗರವೇ ಹರಿದು, ಬೆಟ್ಟ ಹತ್ತಿ ತಾಯಿಯ ದರ್ಶನ ಪಡೆದಿದ್ದಾರೆ. ದೀಪಾವಳಿ ಅಮಾವಾಸ್ಯೆಯ ಹಿಂದಿನ ದಿನ ಬೆಟ್ಟದಲ್ಲಿರುವ ಶಿವನ ಅಸ್ತ್ರಗಳುಳ್ಳ ದುರ್ಗೆಗೆ ವಿಶೇಷ ಪೂಜೆ ನಡೆಯುತ್ತದೆ. ಆ ಪೂಜೆಯನ್ನು ನೋಡಿ ಕಣ್ತುಂಬಿಕೊಳ್ಳಲು ಭಕ್ತರು ಬಿಂಡಿಗ ಗ್ರಾಮಕ್ಕೆ ಬಂದೇ ಬರುತ್ತಾರೆ. ಇಲ್ಲಿ ಹರಕೆ ಕಟ್ಟಿದರೆ, ಆ ಹರಕೆ ಈಡೇರುವುದರಲ್ಲಿ ಅನುಮಾನವಿಲ್ಲ. ಅದಕ್ಕಾಗಿ ಹರಕೆ ಕಟ್ಟಿದ, ಕಟ್ಟದ ಭಕ್ತರು ಪ್ರತಿ ವರ್ಷ ಇಲ್ಲಿಗೆ ಬಂದೇ ಬರುತ್ತಾರೆ. ಇದನ್ನೂ ಓದಿ: UK ಪ್ರಧಾನಿಯಾದ ರಿಷಿ ಸುನಾಕ್ – ಸಾಮಾಜಿಕ ಜಾಲತಾಣದಲ್ಲಿ ಆಶಿಶ್ ನೆಹ್ರಾ ಫೋಟೋ ಟ್ರೆಂಡ್

    ವಿದ್ಯುತ್ ಸಂಪರ್ಕ ಕೂಡ ಇಲ್ಲದ, ಆ ಕಲ್ಲು-ಬಂಡೆ, ಮುಳ್ಳುಗಳ ಬೆಟ್ಟದಲ್ಲಿ ಭಕ್ತರು ಭಾನುವಾರ ರಾತ್ರಿ 10 ಗಂಟೆಯಿಂದಲೇ ಬೆಟ್ಟ ಹತ್ತೋಕೆ ಶುರು ಮಾಡಿ ರಾತ್ರೋರಾತ್ರಿ ಕೆಳಗಿಳಿಯುತ್ತಾರೆ. ಹರಕೆ ಕಟ್ಟಿಕೊಂಡವರು ಬೆಟ್ಟ ಹತ್ತುವಾಗ ಎಷ್ಟೇ ಕಷ್ಟವಾದರೂ ಅವರ ಶಕ್ತಿಗನುಸಾರವಾಗಿ ಸೌದೆಯನ್ನು ಹೊತ್ತೊಯ್ಯುತ್ತಾರೆ. ಇದರ ಜೊತೆಗೆ, ಸೀರೆ, ತುಪ್ಪ, ಬೆಣ್ಣೆ, ಕಾಯಿ, ಬಾಳೆಹಣ್ಣನ್ನು ದೇವಿಗೆ ಸಮರ್ಪಿಸುತ್ತಾರೆ.

    ಸಮುದ್ರ ಮಟ್ಟದಿಂದ ಸುಮಾರು 3,800 ಅಡಿ ಎತ್ತದಲ್ಲಿರುವ ದೇವೀರಮ್ಮನ ಬೆಟ್ಟದಲ್ಲಿ ವರ್ಷಕ್ಕೊಮ್ಮೆ ಮಾತ್ರವೇ ಪೂಜೆ ನಡೆಯುತ್ತದೆ. ವೃತದ ಮೂಲಕ ಹರಕೆ ಕಟ್ಟಿ ಉಪವಾಸವಿದ್ದವರು ದೇವರಿಗೆ ಪೂಜೆ ಸಲ್ಲಿಸಿದ ಬಳಿಕ, ಬೆಟ್ಟದಲ್ಲಿ ಸಂಜೆ ದೀಪ ಬೆಳಗಿದ ನಂತರವೇ ಊಟ ಮಾಡುತ್ತಾರೆ. ಸಂಜೆ ಭಕ್ತರು ತಂದ ಸೌದೆ, ಎಣ್ಣೆ, ಬೆಣ್ಣೆ, ಸೀರೆ, ರವಕೆಗಳಿಗೆ ಅಗ್ನಿ ಸ್ಪರ್ಶ ಮಾಡಿದ ಮೇಲೆ ಚಿಕ್ಕಮಗಳೂರಿನ (Chikkamagaluru) ಸುತ್ತಮುತ್ತಲಿನ ಜನರು ಆ ಜ್ಯೋತಿಯನ್ನು ಭಕ್ತಿಯಿಂದ ನೋಡುತ್ತಾರೆ. ಬಳಿಕ ಅದಕ್ಕೆ ಆರತಿ ಮಾಡಿ, ದೀಪಾವಳಿಯನ್ನು ಆಚರಿಸುತ್ತಾರೆ. ಇದನ್ನೂ ಓದಿ: ಎಸ್ಸಿ, ಎಸ್ಟಿ ಮೀಸಲಾತಿ ಕಾಂಗ್ರೆಸ್‌ ಪಕ್ಷದ ಕೂಸು – ಡಿಕೆಶಿ

    ಈ ಬೆಟ್ಟದ ತಾಯಿಗೂ ಮೈಸೂರು ಅರಸರಿಗೂ ತೀರಾ ಅವಿನಾಭಾವ ಸಂಬಂಧವಿದೆ. ಪ್ರತಿ ವರ್ಷ ಮೈಸೂರಿನ ಅರಮನೆಯಿಂದ ಈ ದೇವಾಲಯಕ್ಕೆ ಇಂದಿಗೂ ಎಣ್ಣೆ, ಸೀರೆ, ಅರಿಶಿನ, ಕುಂಕುಮ ಸೇರಿದಂತೆ ಪೂಜೆಯ ವಸ್ತುಗಳು ಬರುತ್ತದೆ. ಈ ವರ್ಷ ಪುನೀತ್ ರಾಜ್‌ಕುಮಾರ್ ಅವರ ಸಾವಿರಾರು ಅಭಿಮಾನಿಗಳು ಕೂಡಾ ಬೆಟ್ಟ ಹತ್ತಿದ್ದು, ಅಪ್ಪುವಿನ ಫ್ಲೆಕ್ಸ್ ಹಿಡಿದು ಗುಡ್ಡದ ತುದಿಯಲ್ಲಿ ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಆದರೆ ಒಂದು ರಾತ್ರಿ, ಒಂದು ಹಗಲಲ್ಲಿ ಬರುವ ಸುಮಾರು ಲಕ್ಷದಷ್ಟು ಭಕ್ತರನ್ನು ನಿಭಾಯಿಸಿ, ಸಂಭಾಳಿಸುವಷ್ಟರಲ್ಲಿ ಪೊಲೀಸರು ಮಾತ್ರ ಹೈರಾಣಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಂಡಿಗ ದೇವಿರಮ್ಮ ದರ್ಶನಕ್ಕೆ ಸಾಗರೋಪಾದಿಯಲ್ಲಿ ಹರಿದು ಬರುತ್ತಿರುವ ಭಕ್ತರು

    ಬಿಂಡಿಗ ದೇವಿರಮ್ಮ ದರ್ಶನಕ್ಕೆ ಸಾಗರೋಪಾದಿಯಲ್ಲಿ ಹರಿದು ಬರುತ್ತಿರುವ ಭಕ್ತರು

    ಚಿಕ್ಕಮಗಳೂರು: ವರ್ಷಕ್ಕೊಮ್ಮೆ ಮಾತ್ರ ತೆರೆಯುವ ಜಿಲ್ಲೆಯ ಮಲ್ಲೇನಹಳ್ಳಿ ಗ್ರಾಮದ ಬಿಂಡಿಗ ದೇವಿರಮ್ಮ ದೇಗುಲಕ್ಕೆ ಸಾಗರೋಪಾದಿಯಲ್ಲಿ ಭಕ್ತರು ಹರಿದು ಬರುತ್ತಿದ್ದಾರೆ.

    ಚಂದ್ರದ್ರೋಣ ಪರ್ವತ ಶ್ರೇಣಿಗೆ ಹೊಂದಿಕೊಂಡಿರುವ ಬಿಂಡಿಗ ದೇವಿರಮ್ಮ ಬೆಟ್ಟವು 3 ಸಾವಿರ ಅಡಿ ಎತ್ತರವಿದ್ದು, ಜಿಲ್ಲೆ, ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಇದರಿಂದಾಗಿ ಚಿಕ್ಕಮಗಳೂರು ನಗರ ಸೇರಿದಂತೆ ಮಲ್ಲೇನಹಳ್ಳಿಯಲ್ಲಿ ಪೊಲೀಸ್ ಬಿಗಿ ಬಂದೋ ಬಸ್ತ್ ಒದಗಿಸಲಾಗಿದೆ.

    ವಿಶೇಷತೆ ಏನು?:
    ಮಲ್ಲೇನಹಳ್ಳಿ ಸಮೀಪದ ಬಿಂಡಿಗ ದೇವಿರಮ್ಮ ದೀಪೋತ್ಸವ ದೀಪಾವಳಿಯಂದು ನಡೆಯುತ್ತದೆ. ಅಂದು ದೀಪ ಹಚ್ಚುವುದು, ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ವರ್ಷಪೂರ್ತಿ ತಣ್ಣಗೆ ಇರುವ ಈ ಬೆಟ್ಟವನ್ನು ಏರಲು ಮಧ್ಯರಾತ್ರಿಯಿಂದಲೇ ಭಕ್ತರು ಸಕಲ ಸಿದ್ಧತೆ ಮಾಡಿಕೊಂಡಿರುತ್ತಾರೆ. ಬೆಟ್ಟದಲ್ಲಿ ಕಡಿದಾದ ಅಂಕು ಡೊಂಕಿನ ಹಾದಿಯಿದ್ದು, ಸಾಲು-ಸಾಲಾಗಿ ಜನರು ಬೆಟ್ಟ ಹತ್ತುತ್ತಾರೆ.

    ಮಳೆ, ಚಳಿ, ಗಾಳಿಯನ್ನು ಲೆಕ್ಕಿಸದೇ ಬೆಟ್ಟವೇರಿ, ದೇವಿಯ ದರ್ಶನ ಪಡೆದು ಧನ್ಯರಾಗುತ್ತಾರೆ. ಬೆಟ್ಟದ ಕೆಳಭಾಗದಲ್ಲಿ ದೇವಿರಮ್ಮ ದೇವಾಲಯವಿದ್ದು, ಪ್ರತಿ ದೀಪಾವಳಿ ದಿನದಂದು ಉತ್ಸವ ಮೂರ್ತಿಯನ್ನು ಬೆಟ್ಟಕ್ಕೆ ತಂದು ಇಡಲಾಗುತ್ತದೆ. ಇಲ್ಲಿಗೆ ಆಗಮಿಸುವ ಭಕ್ತರು ದೇವಿ ಪೂಜೆಯಲ್ಲಿ ಭಾಗವಹಿಸಿ, ವಿಶ್ರಾಂತಿ ಪಡೆದು ಮತ್ತೆ ಕೆಳಗೆ ಇಳಿಯುತ್ತಾರೆ. ಬೆಟ್ಟ ಏರುವುದು ಎಷ್ಟು ಕಷ್ಟವೋ ಅಷ್ಟೇ ಪ್ರಮಾಣದಲ್ಲಿ ಇಳಿಯುವುದೂ ಸಾಹಸವೇ ಆಗಿದೆ.

    ರಾಜ್ಯ ಸೇರಿದಂತೆ, ನೆರೆಯ ರಾಜ್ಯಗಳಿಂದ ಅನೇಕ ಭಕ್ತರು ಇಲ್ಲಿಗೆ ಬರುತ್ತಾರೆ. ದಣಿವು, ಆಯಾಸವನ್ನು ಲೆಕ್ಕಿಸದೇ ಬೆಟ್ಟ ಹತ್ತಿ ದೇವಿಯ ದರ್ಶನ ಪಡೆಯುತ್ತಾರೆ. ಬೆಟ್ಟದ ಮೇಲೆ ಅಥವಾ ಅಡಿಯಲ್ಲಿ ನಿಂತು ನೋಡಿದರೆ, ಬೆಟ್ಟ ಏರುವ ದೃಶ್ಯವು ಇರುವೆಗಳು ಸಾಲಾಗಿ ಹರಿದು ಹೋಗುತ್ತಿರುವಂತೆ ಕಾಣುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಭಕ್ತರು ಬರುವುದರಿಂದ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗುತ್ತದೆ.

    ಬಿಂಡಿಗ ದೇವಿರಮ್ಮ ದೇಗುಲದಲ್ಲಿ ಇಂದು ಬೆಳಗ್ಗೆ ವಿಶೇಷ ಪೂಜೆ ನಡೆಯುತ್ತದೆ. ಮತ್ತೆ ರಾತ್ರಿ ದೀಪವನ್ನು ಹಚ್ಚಲಾಗುತ್ತದೆ. ದೇಗುಲದಲ್ಲಿ ದೀಪ ಹಚ್ಚಿದ ಬಳಿಕ, ಸುತ್ತಮುತ್ತಲಿನ ಗ್ರಾಮಗಳ ಮನೆಗಳಲ್ಲಿ ದೀಪ ಬೆಳಗಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv