Tag: Development

  • ನೀವು ಕಟ್ತಿರೋ ಟ್ಯಾಕ್ಸ್ ಸರ್ಕಾರಕ್ಕೆ ಹೋಗ್ತಿಲ್ಲ – ಸಾವಿರ ಕೋಟಿ ಬಾಕಿ ಉಳಿಸಿಕೊಂಡ ಬಿಬಿಎಂಪಿ

    ನೀವು ಕಟ್ತಿರೋ ಟ್ಯಾಕ್ಸ್ ಸರ್ಕಾರಕ್ಕೆ ಹೋಗ್ತಿಲ್ಲ – ಸಾವಿರ ಕೋಟಿ ಬಾಕಿ ಉಳಿಸಿಕೊಂಡ ಬಿಬಿಎಂಪಿ

    ಬೆಂಗಳೂರು: ಅಭಿವೃದ್ಧಿ ಮಾಡಲಿ ಅಂತ ಪ್ರತಿ ವರ್ಷ ಕಟ್ಟುತ್ತಿರುವ ತೆರಿಗೆಯನ್ನ ಬಿಬಿಎಂಪಿ ಸಂಬಂಧಿಸಿದ ಇಲಾಖೆಗಳಿಗೆ ಪಾವತಿಸಿಯೇ ಇಲ್ಲ. ಆ ಮೂಲಕ ರಾಜ್ಯ ಸರ್ಕಾರ ಹಾಗೂ ಬೆಂಗಳೂರಿಗರಿಗೆ ಪಾಲಿಕೆ ವಂಚನೆ ಎಸಗಿದೆ.

    ಬೆಂಗಳೂರನ್ನ ಅಭಿವೃದ್ಧಿ ಮಾಡುವುದು ಬಿಬಿಎಂಪಿಯ ಆದ್ಯ ಕರ್ತವ್ಯ. ಇದಕ್ಕಾಗಿ ಸಾರ್ವಜನಿಕರಿಂದ ಇಂತಿಷ್ಟು ತೆರಿಗೆ ಅಂತನೂ ಸಂಗ್ರಹ ಮಾಡುತ್ತಿದೆ. ಆ ಮೂಲಕ ರಸ್ತೆ, ನೀರು, ಬೆಳಕು ನೀಡುವ ಕೆಲಸ ಮಾಡುತ್ತಿದೆ. ಇದರ ಜೊತೆಗೆ ಹೆಲ್ತ್ ಸೆಸ್, ಬೆಗ್ಗರ್ ಸೆಸ್, ಲೈಬ್ರರಿ ಸೆಸ್ ಅಂತನೂ ಹಣ ಸಂಗ್ರಹಿಸುತ್ತಿದೆ. ಆದರೆ ಹೀಗೆ ಸಂಗ್ರಹ ಮಾಡಿದ ಹಣ ಸಂಬಂಧಪಟ್ಟ ಇಲಾಖೆಗೆ ನೀಡದೆ ಪಾಲಿಕೆ ವಂಚನೆ ಮಾಡಿದೆ.

    ಹೌದು ಇತ್ತೀಚೆಗೆ ಬಿಡುಗಡೆಯಾದ ಆಡಿಟ್ ವರದಿಯಲ್ಲಿ ಈ ಅಂಶ ಉಲ್ಲೇಖವಾಗಿದ್ದು, ಕಳೆದ ಐದು ವರ್ಷದಲ್ಲಿ ಬರೋಬ್ಬರಿ 1293 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ.

    ಬಿಬಿಎಂಪಿ ಉಳಿಸಿಕೊಂಡ ತೆರಿಗೆ ಬಾಕಿ
    * ಹೆಲ್ತ್ ಸೆಸ್ – 950.79 ಕೋಟಿ
    * ಲೈಬ್ರರಿ ಸೆಸ್ – 231.42 ಕೋಟಿ
    * ಬೆಗ್ಗರ್ ಸೆಸ್ – 111.37 ಕೋಟಿ
    * ಬಾಕಿಯಿರೋ ಹಣ – 1293 ಕೋಟಿ

    ಬಿಬಿಎಂಪಿ ಕಳೆದ 5 ವರ್ಷಗಳಲ್ಲಿ ವಿವಿಧ ಇಲಾಖೆಗಳಿಗೆ ಪಾವತಿಸಬೇಕಾದ ಹಣವನ್ನ ಪಾವತಿಸಿಲ್ಲ. ಸಂಗ್ರಹ ಮಾಡಲಾಗಿರುವ 950 ಕೋಟಿ ರೂಪಾಯಿ ಹೆಲ್ತ್ ಸೆಸ್ ನಲ್ಲಿ ಒಂದೇ ಒಂದು ರೂಪಾಯಿಯನ್ನ ಆಯಾ ಇಲಾಖೆಗೆ ಪಾವತಿಸಿಲ್ಲ. ಲೈಬ್ರರಿ ಸೆಸ್ 380 ಕೋಟಿ ರೂಪಾಯಿ ಸಂಗ್ರಹಿಸಲಾಗಿದ್ದು, ಅದರಲ್ಲಿ 231 ಕೋಟಿ ಬಾಕಿ ಉಳಿಸಿಕೊಂಡಿದೆ. 190 ಕೋಟಿ ರೂಪಾಯಿ ಬೆಗ್ಗರ್ ಸೆಸ್ ನಲ್ಲಿ 111 ಕೋಟಿ ಪಾವತಿಸಿಲ್ಲ. ಒಟ್ಟಾರೆ ಬಿಬಿಎಂಪಿ 1,293 ಕೋಟಿಯಷ್ಟು ಹಣವನ್ನ ಸಂಬಂಧಿಸಿದ ಇಲಾಖೆಗಳಿಗೆ ಪಾವತಿಸಿಲ್ಲ ಎಂದು ಬಿಬಿಎಂಪಿ ವಿಪಕ್ಷದ ನಾಯಕ ಪದ್ಮನಾಭರೆಡ್ಡಿ ತಿಳಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಶಿವರಾಜ್, ಅಷ್ಟೊಂದು ಹಣ ಬಾಕಿ ಉಳಿಸಿಕೊಂಡಿಲ್ಲ ಅಂತ ತೇಪೆ ಹಚ್ಚೋಕೆ ನೋಡುತ್ತಿದ್ದಾರೆ. ವರದಿ ತರಿಸಿ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

    ಸರ್ಕಾರಕ್ಕೆ ತೆರಿಗೆ ಕಟ್ಟುವ ಮಾತೇ ಇಲ್ಲ. ಬಿಬಿಎಂಪಿ ಸಹ ಶಾಲಾ ಕಾಲೇಜು ಹಾಗೂ ಆಸ್ಪತ್ರೆಗಳನ್ನು ನಡೆಸುತ್ತಿಲ್ಲವಾ ಅಂತ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

    ಸರ್ಕಾರದಿಂದ ಹಣ ಬಂದಿಲ್ಲ. ಹೀಗಾಗಿ ಅಭಿವೃದ್ಧಿ ಆಗುತ್ತಿಲ್ಲ ಅಂತ ಹೇಳುವ ಪಾಲಿಕೆ ಈಗಲಾದರೂ ತೆರಿಗೆದಾರರಿಂದ ಸಂಗ್ರಹಿಸಿದ ಹಣವನ್ನ ಸದ್ಬಳಕೆ ಮಾಡಿಕೊಳ್ಳಬೇಕು ಎಂಬ ಮಾತು ಕೇಳಿ ಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಳ್ಳಂಬೆಳಗ್ಗೆ ಬೇಗೂರು ಕೆರೆ ಪ್ರದಕ್ಷಿಣೆ ಮಾಡಿದ್ರು ಜಿಲ್ಲಾಧಿಕಾರಿ

    ಬೆಳ್ಳಂಬೆಳಗ್ಗೆ ಬೇಗೂರು ಕೆರೆ ಪ್ರದಕ್ಷಿಣೆ ಮಾಡಿದ್ರು ಜಿಲ್ಲಾಧಿಕಾರಿ

    – ಸಮಯ ಪಾಲನೆ ಬಗ್ಗೆ ಅಧಿಕಾರಿಗಳಿಗೆ ಡಿಸಿ ಕ್ಲಾಸ್

    ಬೆಂಗಳೂರು: ಬೆಳ್ಳಂಬೆಳಗ್ಗೆಯೇ ನೆಲಮಂಗಲದ ಬೇಗೂರು ಕೆರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕರಿಗೌಡರವರು ಭೇಟಿ ನೀಡಿ ಪ್ರದಕ್ಷಿಣೆ ಹಾಕಿದ್ದಾರೆ.

    ಜಿಲ್ಲೆಯ ಪ್ರತಿ ತಾಲೂಕಿನ ಪ್ರಮುಖ ಕೆರೆಗಳಿಗೆ ಭೇಟಿ ನೀಡಿ ಕೆರೆಗಳ ಪುನಶ್ಚೇತನಕ್ಕೆ ಜಿಲ್ಲಾಧಿಕಾರಿ ಕರೀಗೌಡ ಮುಂದಾಗಿದ್ದಾರೆ. ಅಂತೆಯೇ ಇಂದು ಬೆಳ್ಳಂಬೆಳಗ್ಗೆ 6 ಗಂಟೆ ಸುಮಾರಿಗೆ ನೆಲಮಂಗಲ ಪ್ರಮುಖ ಕೆರೆಯಾದ ಬೇಗೂರು ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ ಈ ವೇಳೆ ಸಾರ್ವಜನಿಕರು ಹಾಗೂ ಕೆಲ ಅಧಿಕಾರಿಗಳು ಬಾರದ ಕಾರಣ ಸಮಯ ಪಾಲನೆ ಬಗ್ಗೆ ಎಲ್ಲರಿಗೂ ಡಿಸಿ ಕ್ಲಾಸ್ ತೆಗೆದುಕೊಂಡಿದ್ದರು.

    ಬಳಿಕ ಮಾಧ್ಯಮಗಳೊಂದಿಗೆ ಮಾತಾನಾಡಿದ ಜಿಲ್ಲಾಧಿಕಾರಿ, ಒಟ್ಟು 116 ಎಕರೆಯಷ್ಟು ವಿಶಾಲವಾಗಿರುವ ಕೆರೆಯನ್ನ ಅಭಿವೃದ್ಧಿ ಮಾಡುವ ನೆಪದಲ್ಲಿ ಆರ್ಟ್ ಆಫ್ ಲೀವಿಂಗ್ ಸಂಸ್ಥೆ ಸಿಎಸ್‍ಆರ್ (ಖಾಸಗಿ ಕಂಪನಿಗಳ ಸಾಮಾಜಿಕ ಜವಾಬ್ದಾರಿ ನಿರ್ವಹಣೆ) ಅಡಿ ಎಚ್‍ಎಎಲ್ ನಿಂದ 16 ಕೋಟಿ ರೂಪಾಯಿ ಹಣ ಸಂಗ್ರಹ ಮಾಡಿ ವಂಚನೆ ಮಾಡಿದ್ದಾರೆಂದು ಡಿಸಿ ಕರಿಗೌಡ ಗಂಭೀರವಾದ ಆರೋಪ ಮಾಡಿದರು.

    ಕೆರೆಯಲ್ಲಿ 2 ಗಿಡ 1 ಕೃಷಿ ಹೊಂಡದ ಮಾದರಿ ಗುಂಡಿಗಳನ್ನ ತೆಗೆದು 16 ಕೋಟಿಗಳಷ್ಟು ಲೆಕ್ಕ ತೋರಿಸಿದ್ದಾರೆ. ಇದರಲ್ಲಿ ಮೇಲ್ನೋಟಕ್ಕೆ ವಂಚನೆ ಎಸಗಿರುವುದು ಕಾಣುತ್ತದೆ ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಹಾತ್ಮಾ ಗಾಂಧೀಜಿಯವರ ಕನಸನ್ನ ನನಸು ಮಾಡಿದ ಕೋಟೆನಾಡಿನ ಗ್ರಾಮ

    ಮಹಾತ್ಮಾ ಗಾಂಧೀಜಿಯವರ ಕನಸನ್ನ ನನಸು ಮಾಡಿದ ಕೋಟೆನಾಡಿನ ಗ್ರಾಮ

    ಚಿತ್ರದುರ್ಗ: ಗ್ರಾಮೀಣಾಭಿವೃದ್ಧಿಯೇ ದೇಶ ಅಭಿವೃದ್ಧಿ ಅಂತ ಮಾಹತ್ಮಾ ಗಾಂಧೀಜಿ ಹೇಳಿದ್ದಾರೆ. ಆದರೆ ಇಂದಿಗೂ ಗ್ರಾಮೀಣ ಭಾಗದ ಸ್ಥಿತಿಗತಿಗಳ ಬಗ್ಗೆ ಅವಲೋಕಿಸಿದರೆ ಎಲ್ಲಿಯೂ ಅಭಿವೃದ್ಧಿಯಾಗಲಿಲ್ಲ. ಆದರೆ ಕೋಟೆನಾಡಿನ ಗ್ರಾಮವೊಂದು ನಗರ ಮಾದರಿಯಲ್ಲಿ ಅಭಿವೃದ್ಧಿ ಕಂಡಿದೆ.

    ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡ ಚೆಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ದೊಡ್ಡ ಬೀರನಹಳ್ಳಿ ನಗರದಂತೆ ಅಭಿವೃದ್ಧಿಯಾಗಿದೆ. ಇಲ್ಲಿ ಗ್ರಾಮದ ಜನರ ಸಹಕಾರದೊಂದಿಗೆ ಗ್ರಾಮ ಪಂಚಾಯತಿ ಸದಸ್ಯರು ಈ ಗ್ರಾಮೀಣಾಭಿವೃದ್ಧಿಗೆ ಶ್ರಮಿಸಿದ್ದಾರೆ. ಪರಿಣಾಮ ಮಾಹತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಇಲ್ಲಿ ಮಾಡಿಸಲಾಗಿದೆ.

    ಗಲ್ಲಿ ಗಲ್ಲಿಯಲ್ಲೂ ಗುಣಮಟ್ಟದ ಸಿಮೆಂಟ್ ರಸ್ತೆಗಳು, ರಸ್ತೆಗಳ ತಿರುವಿನಲ್ಲಿ ಮಾರ್ಗ ಸೂಚಿಸುವ ನಾಮಪಲಕಗಳು ಹಾಗು ಚರಂಡಿ, ನೀರು ಸೇರಿದಂತೆ ಸಕಲ ಮೂಲಭೂತ ಸೌಲಭ್ಯಗಳೂ ಇಲ್ಲಿ ಲಭ್ಯವಿದೆ. ಹೀಗಾಗಿ ನಗರಗಳಲ್ಲೇ ಆಗದ ಅಭಿವೃದ್ಧಿ ಈ ಊರಲ್ಲಿ ಆಗಿದ್ದಕ್ಕೆ ಗ್ರಾಮೀಣಾಭಿವೃದ್ಧಿ ಬಗ್ಗೆ ಜನಪ್ರತಿನಿಧಿಗಳು ಕಾಳಜಿ ಹೊಂದಿದ್ದೇ ಇದಕ್ಕೆ ಕಾರಣ ಅಂತ ಸ್ಥಳೀಯ ಓಂಕಾರಮೂರ್ತಿ ಹೇಳಿದ್ದಾರೆ.

    ಗ್ರಾಮದ ರಸ್ತೆಗಳಲ್ಲಿ ಅಳವಡಿಸಿದ್ದ ನಾಮಫಲಕಗಳು ಎಲ್ಲರ ಗಮನ ಸೆಳೆಯುತ್ತಿವೆ. ಗ್ರಾಮದಲ್ಲಿ ಕ್ರಾಸ್ ಹಾಗೂ ದೇಗುಲ ಸೇರಿದಂತೆ ಇತರೆ ಮಾಹಿತಿಯನ್ನು ನಾಮಫಲಕದ ಮೂಲಕ ತಿಳಿಯಬಹುದಾಗಿದೆ. ಅಂತೆಯೇ ನಾಮಫಲಕಗಳಲ್ಲಿ ಕಾನೂನು, ಪರಿಸರ ಸೇರಿದಂತೆ ಇತರೆ ಉತ್ತಮ ನುಡಿಗಳನ್ನು ಬರೆಸಲಾಗಿದೆ. ನಗರ ಪ್ರದೇಶಗಲ್ಲಿ ಕೆಲವೆಡೆ ಅಳವಡಿಸಿದ್ದನ್ನು ಕಂಡಾಗ ನಮ್ಮೂರಲ್ಲೇಕೆ ಈ ಮಾದರಿಯ ನಾಮಫಲಕಗಳನ್ನು ಅಳವಡಿಸಬಾರದು ಎಂದು ಈ ನಿರ್ಧಾರ ಕೈಗೊಂಡೆವು ಎಂದು ಗ್ರಾ.ಪಂ. ಸದಸ್ಯ ಧನಂಜಯ ತಿಳಿಸಿದ್ದಾರೆ.

    ಕೋಟೆನಾಡು ಚಿತ್ರದುರ್ಗದ ದೊಡ್ಡ ಬೀರನಹಳ್ಳಿ ಈಗ ಅಭಿವೃದ್ಧಿಯ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ಆದರೆ ಇತರೆ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಮತ್ತು ಸದಸ್ಯರು ನಮ್ಮೂರಲ್ಲೇಕೆ ಈ ರೀತಿ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದರ ಬಗ್ಗೆ ಚಿಂತಿಸಬೇಕಿದೆ. ಆ ಮೂಲಕ ಗಾಂಧೀಜಿಯವರ ಗ್ರಾಮ ಭಾರತದ ಕನಸು ನನಸಾಗಿಸಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಚ್ಚಹಸಿರಾಗಿ ಸುಂದರವಾಗಿದ್ದ ಪಾರ್ಕ್ ಅಭಿವೃದ್ಧಿಗೆ ಬರೋಬ್ಬರಿ 1.30 ಕೋಟಿ ರೂ. ಖರ್ಚು!

    ಹಚ್ಚಹಸಿರಾಗಿ ಸುಂದರವಾಗಿದ್ದ ಪಾರ್ಕ್ ಅಭಿವೃದ್ಧಿಗೆ ಬರೋಬ್ಬರಿ 1.30 ಕೋಟಿ ರೂ. ಖರ್ಚು!

    ಬೆಂಗಳೂರು: ನಗರದ ಶಾಸಕ ಹಾಗೂ ಬಿಬಿಎಂಪಿ ಸದಸ್ಯರು ಸೇರಿ ಹಚ್ಚಹಸಿರಾಗಿ ಎಲ್ಲ ಸೌಲಭ್ಯವಿದ್ದ ಪಾರ್ಕ್ ಅಭಿವೃದ್ಧಿ ಮಾಡುತ್ತೇವೆ ಎಂದು ಸುಮಾರು 1.30 ಕೋಟಿ ಖರ್ಚು ಮಾಡಿದ್ದಾರೆ.

    ಶಂಕರಮಠ ಬಳಿಯ ಸ್ವಾಮಿ ವಿವೇಕಾನಂದ ಪಾರ್ಕ್ ಅಭಿವೃದ್ಧಿಗಾಗಿ ಕೋಟ್ಯಾಂತರ ರೂ. ಖರ್ಚು ಮಾಡಿದ್ದಾರೆ. ಈಗಾಗಲೇ ಈ ಪಾರ್ಕಿನಲ್ಲಿ ವಾಕಿಂಗ್ ಪಾಥ್ ಗಳಿಗೆ ಕಾಬುಲ್ ಕಲ್ಲು, ಸಾವಿರಾರು ವರ್ಷ ಆದ್ರೂ ಅಲುಗಾಡದ ಕಲ್ಲುಗಳು ಮತ್ತು ಹಸಿರು ಗಿಡ ಮರಗಳು ಇದ್ದವು. ಆದರೆ ಈ ಪಾರ್ಕನ್ನು ಶಾಸಕ ಗೋಪಾಲಯ್ಯ ಹಾಗೂ ಬಿಬಿಎಂಪಿ ಸದಸ್ಯರು ಸೇರಿ ಅಭಿವೃದ್ಧಿ ಮಾಡುತ್ತೇವೆ ಅಂತ ಚೆನ್ನಾಗಿದ್ದ ಗಿಡಗಳನ್ನ, ಕಲ್ಲುಗಳನ್ನ ಕಿತ್ತು ಹೊಸದಾಗಿ ಕಾಂಕ್ರೀಟ್ ಹಾಕಿ ಟೈಲ್ಸ್ ಪಾಥ್ ಮಾಡುತ್ತಿದ್ದಾರೆ.

    ಟೈಲ್ಸ್ ಪಾಥ್ ನಲ್ಲಿ ಮಳೆ ನೀರು ಬಂದರೆ ನೀರು ಭೂಮಿಗೆ ಇಂಗೋದೆ ಇಲ್ಲ. ಹಳೆಯ ವಾಕಿಂಗ್ ಪಾಥ್ ಗೆ ಏನಾಗಿತ್ತು. ಅಭಿವೃದ್ಧಿ ಮಾಡಿ ಅಂದರೆ ಅನಾವಶ್ಯಕವಾಗಿ ದುಡ್ಡನ್ನ ಯಾಕೆ ಹಾಳು ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ನರೇಂದ್ರ ಬಾಬು ಅವರು ಆಕ್ರೋಶಗೊಂಡು ಪ್ರಶ್ನಿಸಿದ್ದಾರೆ.

    ಈ ಪಾರ್ಕ್ ನಲ್ಲಿ ಈಗಾಗಲೇ ಒಂದು ಓಪನ್ ಜಿಮ್ ಇದೆ. ಇದೀಗ ಮತ್ತೊಂದು ಜಿಮ್ ಮಾಡುತ್ತಿದ್ದಾರೆ. ಇದಕ್ಕಾಗಿ 30 ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಇದ್ದ ಗಿಡಗಳನ್ನೆಲ್ಲ ಕಡಿದು ಹಾಕಿ ಹೊಸ ಗಿಡಗಳನ್ನ ನೆಡುವುದಕ್ಕೆ 30 ಲಕ್ಷ ರೂಪಾಯಿಗಳನ್ನ ಬಳಸುತ್ತಿದ್ದಾರೆ. ಅಷ್ಟೇ ಅಲ್ಲದೇ ಅಭಿವೃದ್ಧಿ ಹೆಸರಲ್ಲಿ ಚೆನ್ನಾಗಿ ಬೆಳೆದಿದ್ದ ಮರಗಳಿಗೆ ಕೊಡಲಿ ಹಾಕಿದ್ದಾರೆ. ಅಭಿವೃದ್ಧಿ ಕಾಮಗಾರಿ ಬಗ್ಗೆ ಟೆಂಡರ್ ಪಡೆದಿರುವವರು ಯಾರು?, ಯಾವ ನಿಧಿಯಿಂದ ಹಣ ಬಂದಿದೆ? ಎಷ್ಟು ಹಣದಲ್ಲಿ ಕಾಮಗಾರಿ ನಡೆಯುತ್ತಿದೆ? ಅಂತಾ ಸರ್ವಾಜನಿಕರಿಗೆ ತಿಳಿಯುವಂತೆ ನೋಟಿಸ್ ಹಾಕಬೇಕು. ಆದ್ರೆ ಇಲ್ಲಿ ಅದೂ ಕೂಡ ಹಾಕಿಲ್ಲ. ಈ ಪಾರ್ಕ್ ಅಭಿವೃದ್ಧಿಗೆ ಸುಮಾರು 1.30 ಕೋಟಿ ಖರ್ಚು ಮಾಡುತ್ತಿದ್ದು, ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ನಾವು ಈ ಸಂಬಂಧ ದೂರು ದಾಖಲು ಮಾಡುತ್ತೇವೆ ಎಂದು ಮಾಜಿ ಉಪಮೇಯರ್ ಹರೀಶ್ ಎಚ್ಚರಿಸಿದ್ದಾರೆ.

    ಮಾಜಿ ಶಾಸಕ ನರೇಂದ್ರ ಬಾಬು

    ಈ ಬಗ್ಗೆ ಶಾಸಕ ಗೋಪಾಲಯ್ಯ ಪ್ರತಿಕ್ರಿಯಿಸಿ, ಯಾವುದೇ ದುಂದುವೆಚ್ಚ ಮಾಡುತ್ತಿಲ್ಲ. ಹಣ ದುರುಪಯೋಗ ಮಾಡಿದರೆ ಜನ ಮತ್ತೆ ನನ್ನ ಶಾಸಕ ಮಾಡುತ್ತಿರಲಿಲ್ಲ. ನನ್ನ ಕ್ಷೇತ್ರದ ಇತರೆ ಪಾರ್ಕ್ ನ ಅಭಿವೃದ್ಧಿ ಮಾದರಿಯಲ್ಲೇ ಇಲ್ಲೂ ಅಭಿವೃದ್ಧಿ ಮಾಡುತ್ತಿದ್ದೇವೆ. ಜನರ ಜೊತೆ ಮಾತನಾಡಿಯೇ ಅಲ್ಲಿ ಹೊಸ ಮಾದರಿಯ ಪಾರ್ಕ್ ಮಾಡುತ್ತಿರುವುದು. ಪಾರ್ಕ್ ಉದ್ಘಾಟನೆಯಾದ ಮೇಲೆ ನೋಡಿ ಬೆಂಗಳೂರಿನ ಬೆಸ್ಟ್ ಪಾರ್ಕ್ ಆಗುತ್ತದೆ ಎಂದು ಹೇಳುವ ಮೂಲಕ ಸಮರ್ಥಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ರಾಜ್ಯ ಸಿಎಂ ಕುಮಾರಸ್ವಾಮಿಯವರ ಅಪ್ಪನ ಮನೆ ಆಸ್ತಿಯಲ್ಲ: ನಡಹಳ್ಳಿ

    ರಾಜ್ಯ ಸಿಎಂ ಕುಮಾರಸ್ವಾಮಿಯವರ ಅಪ್ಪನ ಮನೆ ಆಸ್ತಿಯಲ್ಲ: ನಡಹಳ್ಳಿ

    ವಿಜಯಪುರ: ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅಪ್ಪನ ಮನೆಯ ಆಸ್ತಿಯಲ್ಲ, ಇದು ಕನ್ನಡಿಗರ ಆಸ್ತಿ ಎಂದು ಮುದ್ದೇಬಿಹಾಳ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ವಾಗ್ದಾಳಿ ನಡೆಸಿದ್ದಾರೆ.

    ತಾಳಿಕೋಟೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರು, ಬೆಂಗಳೂರಿನಿಂದ ಬರುವ ಆದಾಯದಲ್ಲಿ ಶೇಕಡಾ 60ರಷ್ಟು ಉತ್ತರ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳುತ್ತಾರೆ. ಹಾಗಾದರೆ ಬೆಂಗಳೂರು ಅವರ ಆಸ್ತಿಯೇ, ಕನ್ನಡಿಗರಿಗೆ ಸೇರಿಲ್ಲವೇ ಎಂದು ಪ್ರಶ್ನಿಸಿ, ಉತ್ತರ ಕರ್ನಾಟಕದ ಸುಮಾರು 12 ಲಕ್ಷ ಜನರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

    ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾಜಿ ಸಿಎಂ ಧರ್ಮಸಿಂಗ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯಲು ನಾನೇ ಕಾರಣವೆಂದು ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ. ಅವರಷ್ಟೇ ಅಲ್ಲದೆ ಉತ್ತರ ಕರ್ನಾಟಕದ ಅನೇಕ ನಾಯಕರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸುವಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕುಟುಂಬದವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಿದರು.

    ಅಭಿವೃದ್ಧಿಯಾಗಬೇಕೆಂದು ಜನತೆ ಕೇಳಿದ್ದು ಕುಮಾರಸ್ವಾಮಿಯನ್ನಲ್ಲ, ನಾಡಿನ ಮುಖ್ಯಮಂತ್ರಿಯನ್ನು. ಆದರೆ ಇದಕ್ಕೆ ಸೂಕ್ತ ಉತ್ತರ ನೀಡದೆ, ಉತ್ತರ ಕರ್ನಾಟಕದ ಜನತೆ ನಮಗೆ ಮತ ಹಾಕಿಲ್ಲವೆಂದು ಅವರು ಹೇಳಿದ್ದು ಸರಿಯಲ್ಲ. ಹೀಗೆ ಮಾತನಾಡುವ ಮೂಲಕ ಪ್ರತ್ಯೇಕತೆ ಬೇಡಿಕೆಗೆ ಕುಮ್ಮಕ್ಕು ನೀಡುತ್ತಿದ್ದು, ತಮ್ಮ ಮನಸ್ಸಿನಲ್ಲಿರುವ ಕರ್ನಾಟಕ ಇಬ್ಭಾಗವಾಗಬೇಕೆಂಬ ಆಸೆಯನ್ನು ಹೊರಹಾಕಿದ್ದಾರೆ ಎಂದು ಆರೋಪಿಸಿದರು.

  • ಪ್ರತ್ಯೇಕ ರಾಜ್ಯ ಕೇಳುವ ನಾಯಕರು ಉ.ಕರ್ನಾಟಕದ ಮುಖ್ಯಮಂತ್ರಿ ಆಕಾಂಕ್ಷಿಗಳು: ಸೊಬರದಮಠ

    ಪ್ರತ್ಯೇಕ ರಾಜ್ಯ ಕೇಳುವ ನಾಯಕರು ಉ.ಕರ್ನಾಟಕದ ಮುಖ್ಯಮಂತ್ರಿ ಆಕಾಂಕ್ಷಿಗಳು: ಸೊಬರದಮಠ

    ಗದಗ: ಪ್ರತ್ಯೇಕ ರಾಜ್ಯದ ಧ್ವನಿ ಎತ್ತಿರುವ ನಾಯಕರು ಉತ್ತರ ಕರ್ನಾಟಕ ರಚನೆಯಾದ ಮೇಲೆ ಮುಖ್ಯಮಂತ್ರಿ ಆಕಾಂಕ್ಷಿಗಳಿದ್ದಾರೆ ಎಂದು ರೈತಸೇನಾ ರಾಜ್ಯಾಧ್ಯಕ್ಷ ವೀರೇಶ್ ಸೊಬರದಮಠ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರತ್ಯೇಕ ರಾಜ್ಯದ ಕೂಗಿಗೆ ಮಹದಾಯಿ ಹೋರಾಟವನ್ನು ಬಳಸುವುದು ಸೂಕ್ತವಲ್ಲ. ಮಹದಾಯಿ ಹೋರಾಟಕ್ಕೂ ಹಾಗೂ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗಿಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಅಭಿವೃದ್ಧಿಯಾಗಿಲ್ಲ ಎನ್ನುವ ಬಗ್ಗೆ ನಮಗೂ ನೋವಿದೆ. ಅಭಿವೃದ್ಧಿ ಕೂಗಿಗೆ ನಮ್ಮ ರೈತಸೇನಾ ಧ್ವನಿಗೂಡಿಸುತ್ತದೆ. ಆದರೆ ಮಹದಾಯಿ ಹೋರಾಟ ಅಖಂಡ ಕರ್ನಾಟಕದ ಹೋರಾಟ ಎಂದು ತಿಳಿಸಿದರು.

    ಮಹದಾಯಿ ಹೋರಾಟ ಉತ್ತರ ಕರ್ನಾಟಕ್ಕೆ ಸೀಮಿತವಾದ ಹೋರಾಟವಲ್ಲ. ದೇಶದಲ್ಲಿ ಪ್ರಚಲಿತವಿರುವ ಹೋರಾಟವಾಗಿದೆ. ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕಾದರೆ ಜನಪ್ರತಿನಿಧಿಗಳ ಮನೆ ಮುಂದೆ ಪ್ರತಿಭಟಿಸಬೇಕು. ಜಾತಿ ಹೋಗಲಾಡಿಸಿ ನಾವೆಲ್ಲ ಒಗ್ಗಟ್ಟು ತೋರಿಸಿದರೆ ರಾಜಕಾರಣಿಗಳು ಅಭಿವೃದ್ಧಿಗೆ ಮುಂದಾಗುತ್ತಾರೆ. ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಮಹದಾಯಿ ಹಾಗೂ ಉತ್ತರ ಕರ್ನಾಟಕ ಅಭಿವೃದ್ಧಿ ಕಂಡಿಲ್ಲ ಎಂದು ಹೇಳಿದರು.

    ಉತ್ತರ ಕರ್ನಾಟಕ ಅಭಿವೃದ್ಧಿಗೆ ಎಲ್ಲ ಸಂಘ, ಸಂಟನೆಗಳು ಒಂದಾಗಬೇಕು. ಇದಕ್ಕೆ ಶಾಸಕರು, ವಿಧಾನ ಪರಿಷತ್ ಸದಸ್ಯರು ಪೂರಕ ಬೆಂಬಲ ಸಿಕ್ಕಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

  • ಉತ್ತರ ಕರ್ನಾಟಕ ಅಭಿವೃದ್ಧಿ: ಸಿಎಂ ಎಚ್‍ಡಿಕೆಗೆ ದಿಂಗಾಲೇಶ್ವರ ಶ್ರೀ ಎಚ್ಚರಿಕೆ

    ಉತ್ತರ ಕರ್ನಾಟಕ ಅಭಿವೃದ್ಧಿ: ಸಿಎಂ ಎಚ್‍ಡಿಕೆಗೆ ದಿಂಗಾಲೇಶ್ವರ ಶ್ರೀ ಎಚ್ಚರಿಕೆ

    ದಾವಣಗೆರೆ: ಉತ್ತರ ಕರ್ನಾಟಕದ ಅಭಿವೃದ್ಧಿ ಮಾಡದಿದ್ದರೆ ಎಲ್ಲಾ ಮಠಾಧೀಶರು ಪ್ರತ್ಯೇಕ ರಾಜ್ಯದ ಪರ ನಿಲ್ಲಬೇಕಾಗುತ್ತದೆ ಎಂದು ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಎಚ್ಚರಿಕೆ ನೀಡಿದ್ದಾರೆ.

    ನಗರದ ತೊಗಟಿವೀರಪ್ಪ ಕಲ್ಯಾಣ ಮಂಟಪದಲ್ಲಿ ಮಾತನಾಡಿದ ಅವರು, ಸಿ.ಎಂ.ಕುಮಾರಸ್ವಾಮಿ ಅವರು ಚುನಾವಣಾ ಪೂರ್ವದಲ್ಲಿ ಆಶ್ವಾಸನೆ ನೀಡಿ, ಸರ್ಕಾರ ರಚನೆಯಾದ ಬಳಿಕ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ. ಉತ್ತರ ಕರ್ನಾಟಕವನ್ನು ಮೈಸೂರು, ತುಮಕೂರು, ಬೆಂಗಳೂರು, ಹಾಸನದ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎಂದು ಆಗ್ರಹಿಸಿದರು.

    ಉತ್ತರ ಕರ್ನಾಟಕದಲ್ಲಿ ಕೇವಲ ಇಲ್ಲ, ಇಲ್ಲ ಎನ್ನುವ ಧ್ವನಿ ಕೇಳಿಬರುತ್ತಿದೆ. ಕೇವಲ ದಕ್ಷಿಣ ಕರ್ನಾಟಕದ ಭಾಗಗಳು ಮಾತ್ರ ಅಭಿವೃದ್ಧಿಯಾಗಿವೆ. ಬೆಂಗಳೂರಿನಿಂದ 50 ಕಿ.ಮೀ. ದೂರವಿರುವ ಹಳ್ಳಿಗಳಿಗೂ ಮೂಲಸೌಕರ್ಯ ನೀಡಲಾಗಿದೆ. ಆದರೆ ಉತ್ತರ ಕರ್ನಾಟಕ ನಗರ ಪ್ರದೇಶದಲ್ಲಿ ಇಂತಹ ಮೂಲಸೌಕರ್ಯಗಳಿಲ್ಲ. ದಕ್ಷಿಣ ಕರ್ನಾಟಕದಲ್ಲಿ ಬಳಕೆ ಮಾಡಿ ಬಿಟ್ಟ ಬಸ್ಸುಗಳನ್ನು ನಮ್ಮ ಹಳ್ಳಿಗಳಿಗೆ ಬಿಡಲಾಗುತ್ತದೆ. ಇದು ಯಾವ ನ್ಯಾಯ? ತಾರತಮ್ಯ ಹೀಗೆ ಮುಂದುವರಿದರೆ ಪ್ರತ್ಯೇಕ ರಾಜ್ಯದ ಕೂಗು ಅನಿವಾರ್ಯವಾಗುತ್ತದೆ ಎಂದು ಕಿಡಿಕಾರಿದರು.

    ಜುಲೈ 31ಕ್ಕೆ ಉ.ಕ ಶ್ರೀಗಳ ಸಭೆ:
    ಇದೇ ವೇಳೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಜುಲೈ 31ರಂದು ಉತ್ತರ ಕರ್ನಾಟಕ ಸ್ವಾಮೀಜಿಗಳ ಸಭೆ ಆಯೋಜಿಸಲಾಗಿದೆ. ನಮ್ಮ ಪ್ರತಿಭಟನೆ ವ್ಯಾಪಕವಾಗುವ ಮುನ್ನವೇ ಸಂಬಂಧಪಟ್ಟ ರಾಜಕೀಯ ನಾಯಕರು ಹಾಗೂ ಅಧಿಕಾರಿಗಳು ನಿಗಾವಹಿಸಬೇಕು. ಬೆಳಗಾವಿಯನ್ನು 2ನೇ ರಾಜಧಾನಿಯಾಗಿ ಮಾಡಬೇಕು. ಜೊತೆಗೆ 20 ಮುಖ್ಯ ಇಲಾಖೆಗಳು ಉತ್ತರ ಕರ್ನಾಟಕದಲ್ಲಿ ವಿಕೇಂದ್ರೀಕೃತವಾಗಬೇಕು. ಉತ್ತರ ಕರ್ನಾಟಕಕ್ಕೆ ನ್ಯಾಯ ಒದಗಿಸಿದರೆ ಪ್ರತ್ಯೇಕ ರಾಜ್ಯದ ಕೂಗು ಶಮನವಾಗುತ್ತದೆ. ಇಲ್ಲದಿದ್ದರೇ ಪ್ರತಿಭಟನೆ ಬಿಸಿ ಸಿಎಂ ಕುಮಾರಸ್ವಾಮಿ ಅವರಿಗೆ ತಟ್ಟಲಿದೆ ಎಂದು ಖಾರವಾಗಿಯೇ ನುಡಿದರು.

  • ಗಡಿ ಜಿಲ್ಲೆ ಅಭಿವೃದ್ಧಿ ಕನಸಿಗೆ ತೊಡಕಾದ ಮೂಲಭೂತ ಸೌಲಭ್ಯ- ಸರ್ಕಾರದ 800ಕೋಟಿ ರೂ. ಯೋಜನೆ ವ್ಯರ್ಥ

    ಗಡಿ ಜಿಲ್ಲೆ ಅಭಿವೃದ್ಧಿ ಕನಸಿಗೆ ತೊಡಕಾದ ಮೂಲಭೂತ ಸೌಲಭ್ಯ- ಸರ್ಕಾರದ 800ಕೋಟಿ ರೂ. ಯೋಜನೆ ವ್ಯರ್ಥ

    ಚಾಮರಾಜನಗರ: ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕೈಗಾರಿಕೋದ್ಯಮವನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಸಿದ್ದರಾಮಯ್ಯ ಸರ್ಕಾರ 800 ಕೋಟಿಗೂ ಅಧಿಕ ಹಣ ಖರ್ಚು ಮಾಡಿರುವ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

    ರಾಜ್ಯದಲ್ಲಿ 5 ವರ್ಷಗಳ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ, ಚಾಮರಾಜನಗರ ಹೊರವಲಯದ ಬದನಗುಪ್ಪೆ ಬಳಿ 2000 ಎಕರೆ ಪ್ರದೇಶದವನ್ನು ಖರೀದಿಸಿ ಜಮೀನನ್ನು ಕೈಗಾರಿಕೋದ್ಯಮಕ್ಕಾಗಿ ಅಭಿವೃದ್ಧಿಪಡಿಸಲಾಗಿತ್ತು. ಈ ದೃಷ್ಟಿಯಿಂದ ತಮಿಳುನಾಡಿನ ಕೊಯಮತ್ತೂರಿನಲ್ಲಿ ಇಡೀ ಮಂತ್ರಿ ಮಂಡಲ ರೋಡ್ ಶೋ ನಡೆಸಿತ್ತು. ಇದರಿಂದರ 150 ಜನ ಉದ್ಯಮಿಗಳು ಈ ಪ್ರದೇಶದಲ್ಲಿ 12 ಸಾವಿರ ಕೋಟಿ ಬಂಡವಾಳ ಹೂಡಲು ಮುಂದೆ ಬಂದಿದ್ದರು. ಆದರೆ ಸರ್ಕಾರ ಕೈಗಾರಿಗಾ ಪ್ರದೇಶದಲ್ಲಿ ನೀರು ಮತ್ತು ಇನ್ನಿತರ ಸೌಲಭ್ಯವನ್ನು ಕಲ್ಪಿಸದೆ ನಿರ್ಲಕ್ಷ್ಯ ವಹಿಸಿದೆ.

    ಈ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೇ ಉದ್ಯಮಿಗಳು ಇಲ್ಲಿ ಬಂಡವಾಳ ಹೂಡಿಕೆ ಮಾಡುವುದಕ್ಕೆ ಹಿಂದೆ ಸರಿದಿದ್ದಾರೆ. ಹೀಗಾಗಿ 5 ವರ್ಷಗಳಿಂದ ಈ ಪ್ರದೇಶ ಯಾವುದೇ ಅಭಿವೃದ್ಧಿ ಚಟುವಿಟಿಕೆ ಇಲ್ಲದೇ ಸ್ತಬ್ಧವಾಗಿದೆ. ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಸೋಮವಾರ(ನಾಳೆ) ಜಿಲ್ಲೆಯ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಇದರ ಅಭಿವೃದ್ಧಿಗೆ ಮತ್ತಷ್ಟು ಹಣ ಸುರಿಯಲಿದ್ದಾರೆ. ಸರ್ಕಾರದ ಹಣ ಮಾತ್ರ ನೀರಿನ ಹಾಗೆ ಖರ್ಚಾಗುತ್ತಿದ್ದು, ಇಲ್ಲಿ ಉದ್ಯಮಿಗಳನ್ನು ಕರೆತರಲು ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

  • ಪ್ರತ್ಯೇಕ ರಾಜ್ಯಕ್ಕಾಗಿ ಉತ್ತರ ಕರ್ನಾಟಕ ಬಂದ್ – ರೈತ ಸಂಘ ಸ್ಪಷ್ಟನೆ

    ಪ್ರತ್ಯೇಕ ರಾಜ್ಯಕ್ಕಾಗಿ ಉತ್ತರ ಕರ್ನಾಟಕ ಬಂದ್ – ರೈತ ಸಂಘ ಸ್ಪಷ್ಟನೆ

    ಬೆಂಗಳೂರು: ಸಿಎಂ ಕುಮಾರಸ್ವಾಮಿ ಬಜೆಟ್ ನಲ್ಲಿ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದ್ದಾರೆಂದು ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗು ಕೇಳಿಬಂದಿದೆ.

    ಸಿಎಂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ತನ್ನ ಚೊಚ್ಚಲ ಬಜೆಟ್‍ ಮಂಡಿಸಿದ್ದೇ ತಡ ಅದರಲ್ಲಿ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ ಎಂಬ ಕೂಗು ಕೇಳಿ ಬಂದಿತ್ತು. ಈಗ ಆ ಬೆನ್ನಲ್ಲೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಕೂಗು ಕೇಳಿ ಬರುತ್ತಿದೆ.

    ಈಗಾಗಲೇ ಪ್ರತ್ಯೇಕ ರಾಜ್ಯ ಕೂಗು ಭುಗಿಲೆದ್ದಿದ್ದು ಅಗಸ್ಟ್ 2 ರಂದು 13 ಜಿಲ್ಲೆಗಳನ್ನು ಒಳಗೊಂಡಂತೆ ಬಂದ್ ಆಚರಿಸಲಾಗುವುದು ಎಂದು ಉತ್ತರ ಕರ್ನಾಟಕ ರೈತ ಸಂಘ ಘೋಷಿಸಿದೆ. ಪ್ರತ್ಯೇಕ ರಾಜ್ಯವಾದರೆ ಮಾತ್ರ ಉತ್ತರ ಕರ್ನಾಟಕ ಅಭಿವೃದ್ಧಿ ಆಗಲು ಸಾಧ್ಯ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಪ್ರಾರಂಭ ಮಾಡಲಾಗುವುದು ಅಂತ ಸಂಘ ತಿಳಿಸಿದೆ.

    ಸಮ್ಮಿಶ್ರ ಸರ್ಕಾರ ಮಂಡಿಸಿದ್ದ ಹೊಸ ಬಜೆಟ್, ಸಮಗ್ರ ಕರ್ನಾಟಕ ಅಭಿವೃದ್ಧಿಯ ದೃಷ್ಟಿಕೋನ ಹೊಂದಿಲ್ಲ ಎಂದು ಸಾಕಷ್ಟು ವಿರೋಧ ಕೇಳಿಬಂದಿತ್ತು. ಆದರೆ ಈಗ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯ ಬೇಕು ಎಂದು ಉತ್ತರ ಕರ್ನಾಟಕ ರೈತರ ಸಂಘ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.

  • ನನ್ನ ಕ್ಷೇತ್ರ ಬದಾಮಿ ಅಭಿವೃದ್ಧಿ ಮಾಡಿ – ಸಿಎಂ ಕುಮಾರಸ್ವಾಮಿಗೆ ಸಿದ್ದರಾಮಯ್ಯ ಪತ್ರ

    ನನ್ನ ಕ್ಷೇತ್ರ ಬದಾಮಿ ಅಭಿವೃದ್ಧಿ ಮಾಡಿ – ಸಿಎಂ ಕುಮಾರಸ್ವಾಮಿಗೆ ಸಿದ್ದರಾಮಯ್ಯ ಪತ್ರ

    ಬೆಂಗಳೂರು: ನನ್ನ ಕ್ಷೇತ್ರದಲ್ಲಿ ಜವಳಿ ಪಾರ್ಕ್ ಮಾಡಿ, ನನ್ನ ಕ್ಷೇತ್ರದ ಜನ ಗುಳೆ ಹೋಗುವುದನ್ನು ತಡೆಯಿರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

    ಬಾಗಲಕೋಟೆ ಜಿಲ್ಲೆ ಬಾದಾಮಿ ಶಾಸಕರೂ ಆಗಿರುವ ಸಿದ್ದರಾಮಯ್ಯ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿ ಮಾಡಲು ಸಹಕಾರ ಕೋರಿ 5 ದಿನಗಳ ಅವಧಿಯಲ್ಲಿ ಎರಡು ಪತ್ರ ಬರೆದಿದ್ದಾರೆ. ಮೊದಲ ಪಾತ್ರ ಜೂನ್ 20 ರಂದು ಬರೆದಿದ್ದು, ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪರ್ವತಿಕೆರೆ, ಗಂಜಿಕೆರೆ, ಹಿರೆಕೆರೆಗಳಿಗೆ ಮಲಪ್ರಭ ನದಿ (ಅಸಂಗಿ) ಬ್ಯಾರೇಜ್ ನಿಂದ ನೀರು ತುಂಬಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಪತ್ರದೊಂದಿಗೆ ಮೂರು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಾಗಿ 12 ಕೋಟಿ ರೂ. ಅಂದಾಜು ಪಟ್ಟಿಯನ್ನು ಲಗತ್ತಿಸಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

    ಮತ್ತೊಂದು ಪತ್ರ ಜೂನ್ 25 ರಂದು ಬರೆಯಲಾಗಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ ಸಂಘಟಿತ ಹಾಗೂ ಅಸಂಘಟಿತ ವಲಯದಲ್ಲಿ ದುಡಿಯುವ ನೇಕಾರರ ವಲಸೆಯನ್ನು ತಪ್ಪಿಸಲು ಜವಳಿ ಪಾರ್ಕ್, ಪವರ್ ಲೂಮ್ ಪಾರ್ಕ್, ಗಾರ್ಮೆಂಟ್ ಕಂಪೆನಿ ನಿರ್ಮಾಣ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದ್ದಾರೆ.