ಮೈಸೂರು: ಕೊಡಗು ಆಸ್ಪತ್ರೆ ಅಭಿವೃದ್ಧಿ ಆಗುತ್ತಿದೆ. ಹೀಗಿರುವಾಗ ಅಭಿಯಾನ ಮಾಡುವುದರಲ್ಲಿ ಅರ್ಥ ಇಲ್ಲ ಎಂದು ಸಚಿವ ಸಾ.ರಾ. ಮಹೇಶ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರಿಗೆ ಪ್ರಚಾರದ ಹುಚ್ಚು ಇದೆ. ಹೀಗಾಗಿ ಅವರಿಗೆ ಇಷ್ಟ ಬಂದ ಹಾಗೇ ಮಾತನಾಡುತ್ತಿದ್ದಾರೆ. ಸಿಎಂ ಈಗಾಗಲೇ ಕೊಡಗು ಜಿಲ್ಲಾಸ್ಪತ್ರೆ ಅಭಿವೃದ್ಧಿಗೆ ನೂರು ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಹೀಗಿರುವಾಗ ಅಭಿಯಾನ ಮಾಡುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊಡಗು ಆಸ್ಪತ್ರೆ ಅಭಿಯಾನಕ್ಕೆ ಕೈಜೋಡಿಸಿದ ಕಿಚ್ಚ ಸುದೀಪ್
ಸದ್ಯ ಕೊಡಗು ಆಸ್ಪತ್ರೆ ಅಭಿವೃದ್ಧಿ ಆಗುತ್ತಿದೆ. ಈ ಹಂತದಲ್ಲಿ ಅಭಿಯಾನ ಮಾಡುತ್ತಿದ್ದಾರೆ. ಮುಂದೆ ಆಸ್ಪತ್ರೆ ಚೆನ್ನಾಗಿ ಆದರೆ ನಮ್ಮ ಒತ್ತಡದಿಂದಲೇ ಕೆಲಸ ಆಯಿತು ಎಂದು ಹೇಳಿಕೊಳ್ಳುತ್ತಾರೆ ಎಂದರು. ಇದನ್ನು ಓದಿ:ಸಿಎಂ ಬಳಿ ನಟಿ ರಶ್ಮಿಕಾ, ಹರ್ಷಿಕಾ ಮನವಿ
ಇದೇ ವೇಳೆ ಉನ್ನತ ಶಿಕ್ಷಣ ಸಚಿವ ಜಿ.ಡಿ ದೇವೇಗೌಡ ಮಾತನಾಡಿ, ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಮಾತನಾಡಿ, ವಿಶ್ವನಾಥ್ ಅವರ ರಾಜೀನಾಮೆ ಇನ್ನೂ ಅಂಗೀಕಾರ ಆಗಿಲ್ಲ. ಅಂಗೀಕಾರ ಆದ ಮೇಲೆ ಬದಲಾವಣೆ ಬಗ್ಗೆ ಮಾತನಾಡುತ್ತೇವೆ. ಅವರ ರಾಜೀನಾಮೆ ಅಂಗೀಕಾರ ಆಗುವವರೆಗೂ ಬೇರೆ ಹೆಸರುಗಳ ಬಗ್ಗೆ ಚರ್ಚೆ ಮಾಡುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕೊಡಗು ಸಂತ್ರಸ್ತರಿಗೆ ನಿರ್ಮಿಸುತ್ತಿರೋ ಮನೆಗಳು ಚೆನ್ನಾಗಿಲ್ಲ: ಹರ್ಷಿಕಾ ಪೂಣಚ್ಚ
ನಿಖಿಲ್ ಜೆಡಿಎಸ್ ರಾಜ್ಯಾಧ್ಯಕ್ಷರ ರೇಸ್ ನಲ್ಲಿ ಇಲ್ಲ. ಯಾರ್ಯಾರೋ ಏನೇನೋ ಮಾತನಾಡುತ್ತಿದ್ದಾರೆ. ನಿಖಿಲ್ ಅವರನ್ನು ಜೆಡಿಎಸ್ ಯುವ ಘಟಕ ಸ್ಥಾನಕ್ಕೆ ಕೆಲವರು ಪ್ರಸ್ತಾಪ ಮಾಡಿದ್ದಾರೆ. ಈ ಬಗ್ಗೆ ಚರ್ಚೆ ಮಾಡಬೇಕು ಎಂದು ಹೇಳಿದ್ದಾರೆ.
ಬೆಂಗಳೂರು: ಎಚ್‍ಡಿ ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಸೇರಿ ಸಮ್ಮಿಶ್ರ ಸರ್ಕಾರ ನಡೆಸಿದ್ದ ವೇಳೆ ಕೈಗೊಂಡಿದ್ದ ಗ್ರಾಮ ವಾಸ್ತವ್ಯದ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿತ್ತು. ಗ್ರಾಮ ವಾಸ್ತವ್ಯದ ಲೋಪ ದೋಷಗಳು ಏನು? ಯಾವೆಲ್ಲಾ ಗ್ರಾಮಗಳಲ್ಲಿ ಅಭಿವೃದ್ಧಿ ಆಗಿದೆ. ಇಂದಿಗೂ ಗ್ರಾಮದಲ್ಲಿ ಯಾವೆಲ್ಲಾ ಸಮಸ್ಯೆಗಳು ಇದೆ ಎಂಬುವುದರ ವಾಸ್ತವತೆಯನ್ನು ತೆರೆದಿಟ್ಟಿತ್ತು.
ಪಬ್ಲಿಕ್ ಟಿವಿಯ ವರದಿಯ ನೋಡಿರುವ ಸಿಎಂ ಕುಮಾರಸ್ವಾಮಿ ಅವರು ವರದಿಯ ಸಕರಾತ್ಮಕ ಅಂಶಗಳನ್ನು ಸ್ವೀಕರಿಸಿ, ಗ್ರಾಮಗಳ ಕುಂದು ಕೊರತೆಗಳ ನಿವಾರಣೆಗೆ ಕಾರ್ಯ ನಿರ್ವಹಿಸುತ್ತೇನೆ. ಅಲ್ಲದೇ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಅಧಿಕಾರ ವ್ಯಾಪ್ತಿಯಲ್ಲಿ ಕಾರ್ಯಗಳನ್ನು ಕೈಗೊಳ್ಳುತ್ತೇನೆ ಎಂದು ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿದ್ದಾರೆ.
ಪಬ್ಲಿಕ್ ಟಿವಿ ವರದಿಯಲ್ಲಿ ಸಿಎಂ ಕುಮಾರಸ್ವಾಮಿ ಅವರು ವಾಸ್ತವ್ಯ ಮಾಡಿದ್ದ ಗ್ರಾಮದಗಳಲ್ಲಿ ಇಂದಿಗೂ ಯಾವ ಸಮಸ್ಯೆಗಳಿವೆ ಎಂಬುವುದನ್ನು ವಿಸ್ತಾವರವಾಗಿ ವಿವರಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆಯುತ್ತೇನೆ. ಅಧಿಕಾರಿಗಳು, ಸ್ಥಳೀಯ ನಾಯಕರ ಗಮನಕ್ಕೆ ತಂದು ಕಾರ್ಯಗಳನ್ನು ಮಾಡುತ್ತೇನೆ. ಮುಂದಿನ ಕಾರ್ಯಕ್ರಮಗಳಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಸಾಧ್ಯವಾಗುವುದನ್ನು ಅನುಸರಿಸಲು ಖಂಡಿತ ಪ್ರಯತ್ನಿಸುವೆ ಎಂದಿದ್ದಾರೆ. ಇದನ್ನು ಓದಿ: ಸಿಎಂ ವಾಸ್ತವ್ಯ ಮಾಡಿದ್ದ ಗ್ರಾಮಗಳ ಸ್ಥಿತಿ ಈಗ ಹೇಗಿದೆ? ಎಷ್ಟು ಭರವಸೆ ಪೂರ್ಣವಾಗಿದೆ? – ಕಂಪ್ಲೀಟ್ ವರದಿ ಓದಿ
ಸಿಎಂ ಹೇಳಿಕೆಯಲ್ಲಿ ಏನಿದೆ?
ನಾನು ಗ್ರಾಮ ವಾಸ್ತವ್ಯ ಮಾಡುವೆನೆಂದು ಘೋಷಿಸಿದ ದಿನದಿಂದ ಮಾಧ್ಯಮಗಳಲ್ಲಿ ನಾನು 2006-07 ರ ಅವಧಿಯಲ್ಲಿ ವಾಸ್ತವ್ಯ ಮಾಡಿದ ಗ್ರಾಮಗಳ ಸ್ಥಿತಿ-ಗತಿ, ಕುಟುಂಬಗಳ ಕುರಿತು ವರದಿಗಳನ್ನು ಪ್ರಕಟಿಸುತ್ತಿರುವುದನ್ನು ಗಮನಿಸುತ್ತಿರುವೆ. ಈ ಹಿನ್ನೆಲೆಯಲ್ಲಿ ಎರಡು ಮಾತು:
ಗ್ರಾಮ ವಾಸ್ತವ್ಯ ಎನ್ನುವುದು ಯಾವುದೇ ಜನಪ್ರಿಯತೆ ಗಿಟ್ಟಿಸುವ ಗಿಮಿಕ್ ಅಲ್ಲ. ಈ ಪರಿಕಲ್ಪನೆಯ ಮೂಲ ಪುರುಷನೂ ನಾನಲ್ಲ. ನನ್ನ ಗ್ರಾಮ ವಾಸ್ತವ್ಯ ಪ್ರಾರಂಭವಾಗಿದ್ದು ಆಕಸ್ಮಿಕವಾಗಿ, ಪ್ರವಾಹ ಪೀಡಿತ ಕೃಷ್ಣಾ ನದಿ ದಂಡೆಯ ಪಿ.ಕೆ. ನಾಗನೂರಿನಿಂದ ಎನ್ನುವುದು ನಿಮಗೆಲ್ಲಾ ತಿಳಿದ ವಿಚಾರ. ಗ್ರಾಮ ವಾಸ್ತವ್ಯ ಎಂಬ ಪದವನ್ನು ಚಾಲ್ತಿಗೆ ತಂದವರೂ ನಮ್ಮ ಮಾಧ್ಯಮ ಮಿತ್ರರೇ. ಆದರೆ ಈ ಸಂದರ್ಭದಲ್ಲಿ ಜನರು ತೋರಿದ ಪ್ರೀತಿ, ವಿಶ್ವಾಸ ನನ್ನನ್ನು ಮೂಕವಿಸ್ಮಿತನನ್ನಾಗಿಸಿದೆ. ಜನರ ಸಮಸ್ಯೆಗಳು, ಬದುಕಿನ ಕಟು ವಾಸ್ತವಗಳನ್ನು ಅರಿಯಲು ನೆರವಾಗಿದೆ. ಸರ್ಕಾರದಿಂದ ಆಗಬೇಕಾದ್ದು ಏನು ಎಂಬ ಬಗ್ಗೆ ನೇರ, ಸರಳವಾದ ಅತ್ಯುತ್ತಮ ಸಲಹೆಗಳೂ ಬಂದಿವೆ.
ಸಾರಾಯಿ ನಿಷೇಧ, ಲಾಟರಿ ನಿಷೇಧ, ಸಾಲ ಮನ್ನಾ, ಸಾವಿರಕ್ಕೂ ಹೆಚ್ಚು ಪ್ರೌಢಶಾಲೆಗಳು, 500ಕ್ಕೂ ಹೆಚ್ಚು ಪಿಯು ಹಾಗೂ ಪದವಿ ಕಾಲೇಜುಗಳ ಸ್ಥಾಪನೆ, ಗ್ರಾಮಗಳ ಸಮಗ್ರ ಅಭಿವೃದ್ಧಿಯ ಪರಿಕಲ್ಪನೆಯ ಸುವರ್ಣ ಗ್ರಾಮ ಯೋಜನೆ – ಇವೆಲ್ಲಾ ಗ್ರಾಮವಾಸ್ತವ್ಯದ ಫಲಶ್ರುತಿಗಳು. ನನ್ನ ಅಧಿಕಾರಾವಧಿಯ ನಂತರ ಸುವರ್ಣ ಗ್ರಾಮ ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ಬಾರದೇ ಇರುವುದು ವಿಷಾದನೀಯ.
ಗ್ರಾಮ ವಾಸ್ತವ್ಯದ ಮುಖ್ಯ ಗುರಿ, ಆಡಳಿತ ಯಂತ್ರದ ಕಾರ್ಯವೈಖರಿ ಅರಿಯುವುದು. ಸರ್ಕಾರ ರೂಪಿಸಿದ ಯೋಜನೆ ಫಲಕಾರಿಯೇ? ಜನರ ಅಭಿಪ್ರಾಯವೇನು ಎಂಬುದನ್ನು ಅರಿಯುವುದು, ಸುತ್ತಲಿನ ಗ್ರಾಮಗಳ ಜನರೂ ಸೇರುತ್ತಾರೆ. ಅವರಿಂದ ಅಹವಾಲು ಸ್ವೀಕರಿಸಿ ಪರಿಹರಿಸುವುದು. ಕಾನೂನು ವ್ಯಾಪ್ತಿಯಲ್ಲಿ ಇವುಗಳನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಕೆಲವು ಮನವಿಗಳನ್ನು ಪರಿಗಣಿಸಲು ಸಾಧ್ಯವಾಗದೆ ಇರಬಹುದು. ಇಂಥವುಗಳನ್ನು ನೀವು ಮತ್ತೆ ಗಮನಕ್ಕೆ ತರುತ್ತಿದ್ದೀರಿ. ಖಂಡಿತವಾಗಿಯೂ ಅವುಗಳನ್ನು ಗಂಭೀರವಾಗಿ ಪರಿಶೀಲಿಸುವೆ. ಆ ಗ್ರಾಮದ ಅಭಿವೃದ್ಧಿ ಗ್ರಾಮ ವಾಸ್ತವ್ಯದ ಫಲಶ್ರುತಿಯ ಒಂದು ಭಾಗವಷ್ಟೆ. ಅದೇ ಕೇಂದ್ರ ಗುರಿಯಲ್ಲ.
ಜನರಿಗೆ ಅಗತ್ಯವಿರುವ ಯೋಜನೆಗಳನ್ನು ಜಾರಿಗೊಳಿಸಿದಾಗ ಅವು ಸಹಜವಾಗಿಯೇ ಯಶಸ್ವಿಯಾಗುತ್ತವೆ. ಅದೇ ರೀತಿ ಯೋಜನೆಗಳನ್ನು ರೂಪಿಸಿ, ಸರ್ಕಾರ ಜನರ ಮೇಲೆ ಹೇರಿದರೆ ಯಶಸ್ವಿಯಾಗದು. ಈ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದು ನನ್ನ ಅನುಭವ.
ಅಂತೆಯೇ ಎಚ್‍ಐವಿ ಪೀಡಿತ ಕುಟುಂಬವೊಂದರ ಮನೆಯಲ್ಲಿ ನಾನು ವಾಸ್ತವ್ಯ ಹೂಡಿದ್ದರಿಂದ ಆ ಕುಟುಂಬ ಊರನ್ನೇ ತೊರೆದಿದೆ ಎಂದು ವರದಿಯಾಗಿದೆ. ಇದು ನಿಜಕ್ಕೂ ದುರದೃಷ್ಣಕರ. ಎಚ್‍ಐವಿ/ ಏಯ್ಡ್ಸ್ ಬಗ್ಗೆ ಜನರಿಗಿರುವ ಅಂಧ ವಿಶ್ವಾಸವನ್ನು ದೂರ ಮಾಡುವ ಉದ್ದೇಶದಿಂದ ಏಯ್ಡ್ಸ್ ನಿಯಂತ್ರಣ ಮಂಡಳಿ ಅಧಿಕಾರಿಗಳ ಮನವಿಯ ಮೇರೆಗೆ ಅಲ್ಲಿ ವಾಸ್ತವ್ಯ ಮಾಡಿದ್ದೆ. ಆದರೆ ಸಮಾಜ ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸಿಲ್ಲ ಎನ್ನುವುದು ನಿಜಕ್ಕೂ ಬೇಸರದ ಸಂಗತಿ. ಆದರೆ ವೈಯಕ್ತಿಕವಾಗಿಯೂ ನಾನು ಆ ಕುಟುಂಬಕ್ಕೆ ನೆರವಾಗಿದ್ದು, ಅದನ್ನು ಇಲ್ಲಿ ಚರ್ಚಿಸಲು ಹೋಗುವುದಿಲ್ಲ. ಮತ್ತೊಮ್ಮೆ ಆ ಕುಟುಂಬ ವನ್ನು ಸಂಪರ್ಕಿಸಿ ಹೇಗೆ ನೆರವಾಗಬಹುದು ಎಂದು ಪರಿಶೀಲಿಸುವೆ.
https://www.youtube.com/watch?v=YgZ7K9ZSD2E
ಮಾಧ್ಯಮಗಳು ಪ್ರಕಟಿಸುತ್ತಿರುವ ವರದಿಗಳಲ್ಲಿರುವ ಸಕಾರಾತ್ಮಕ ಸಲಹೆಗಳನ್ನು ಮುಕ್ತ, ಪ್ರಾಂಜಲ ಮನಸ್ಸಿನಿಂದ ಸ್ವೀಕರಿಸುವೆ. ಮುಂದಿನ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಸಾಧ್ಯವಾಗುವುದನ್ನು ಅನುಸರಿಸಲು ಖಂಡಿತ ಪ್ರಯತ್ನಿಸುವೆ ಎಂದಿದ್ದಾರೆ.
ಬಳ್ಳಾರಿ: ಸರ್ಕಾರ, ರಾಜಕಾರಣಿಗಳು, ಶ್ರೀಮಂತ ದಾನಿಗಳು ಸಾಮಾನ್ಯವಾಗಿ ಹಳ್ಳಿಗಳನ್ನು ದತ್ತು ಪಡೆಯುತ್ತಾರೆ. ಆದರೆ ಬಳ್ಳಾರಿ ಜಿಲ್ಲೆಯ ಜಾನೆಕುಂಟೆ ಗ್ರಾಮವನ್ನು ಕಾಲೇಜು ವಿದ್ಯಾರ್ಥಿಗಳು ದತ್ತು ಪಡೆದು ಅಭಿವೃದ್ಧಿಗೆ ಮುಂದಾಗಿದ್ದಾರೆ.
ಬಳ್ಳಾರಿಯ ಆರ್ ವೈಎಂಇಸಿ ಎಂಜಿನಿಯರ್ ಕಾಲೇಜಿನ ವಿದ್ಯಾರ್ಥಿಗಳು ಪ್ರತಿ ವರ್ಷ ಗಿಡ ನೆಟ್ಟು ಸ್ವಚ್ಚತಾ ಅಭಿಯಾನ ಮಾಡುತ್ತಿದ್ದರು. ಈ ಕಾಲೇಜಿನ ವಿದ್ಯಾರ್ಥಿಗಳು ಈ ಬಾರಿ ಬಳ್ಳಾರಿ ಪಕ್ಕದಲ್ಲಿರುವ ಅಭಿವೃದ್ಧಿ ಕಾಣದ ಜಾನೆಕುಂಟೆ ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿಗೆ ಮುಂದಾಗಿದ್ದಾರೆ.
ಸುಮಾರು 350 ಮನೆಗಳಿರುವ ಜಾನೆಕುಂಟೆ ಗ್ರಾಮದಲ್ಲಿ ಮೂಲಸೌಕರ್ಯ ಸೇರಿದಂತೆ ಶಾಲೆ ಮತ್ತು ಅಂಗನವಾಡಿಯನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ವಿದ್ಯಾರ್ಥಿಗಳು ಹೊಂದಿದ್ದಾರೆ. ಮೊದಲ ಹಂತದಲ್ಲಿ ಜನರಲ್ಲಿ ಜಾಗೃತಿ ಜೊತೆಗೆ ಅರ್ಧಕ್ಕೆ ನಿಂತಿರುವ ಅಂಗನವಾಡಿ ಕಟ್ಟಡವನ್ನು ನಿರ್ಮಾಣ ಮಾಡಲು ವಿದ್ಯಾರ್ಥಿಗಳು ಮುಂದಾಗಿದ್ದಾರೆ.
ವಿದ್ಯಾರ್ಥಿಗಳ ಕೆಲಸಕ್ಕೆ ಉಪನ್ಯಾಸಕರು ಮತ್ತು ಕಾಲೇಜು ಆಡಳಿತ ಮಂಡಳಿ ಸಹ ಸಾಥ್ ನೀಡಿದೆ. ಈ ಗ್ರಾಮವೂ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬಂದರೂ ರಸ್ತೆಗಳು, ಮೂಲಭೂತ ಸೌಲಭ್ಯಗಳು ಕಲ್ಪಿಸುವುದಕ್ಕೆ ಕಾಲೇಜಿನ ವಿದ್ಯಾರ್ಥಿಗಳು ಪಂಚಾಯ್ತಿ ಜೊತೆಗೆ ಕೈ ಜೋಡಿಸಿ ಜನರಿಗೆ ಅರಿವು ಮೂಡಿಸವುದರ ಜೊತೆಗೆ ಅಭಿವೃದ್ಧಿಗೆ ಮುಂದಾಗಿದ್ದಾರೆ.
ವಿದ್ಯಾರ್ಥಿಗಳು ಜಾನೆಕುಂಟೆ ಗ್ರಾಮದ ಅಭಿವೃದ್ಧಿಗಾಗಿ ಗ್ರಾಮವನ್ನು ದತ್ತು ಪಡೆದ ನಂತರ ಗ್ರಾಮದ ಅಭಿವೃದ್ಧಿಗಾಗಿ ಕಾಲೇಜು ಆಡಳಿತ ಮಂಡಳಿ ಸೇರಿದಂತೆ ಗ್ರಾಮದ ಮುಖಂಡರು ಕೂಡ ಹಣಕಾಸಿನ ನೇರವು ನೀಡಿದ್ದಾರೆ. ಅಲ್ಲದೇ, ಮೊದಲ ಬಾರಿಗೆ ಇಂತಹದ್ದೊಂದು ಪ್ರಯತ್ನಕ್ಕೆ ವಿದ್ಯಾರ್ಥಿಗಳೊಂದಿಗೆ ಕಾಲೇಜು ಆಡಳಿತ ಮಂಡಳಿ ಕೈ ಹಾಕಿದ್ದು ವಿಶೇಷವಾಗಿದೆ.
ಮಂಡ್ಯ: ಜಿಲ್ಲೆಯ ಅಭಿವೃದ್ಧಿಗೆ ಭಾರೀ ಬಹುಮತದಲ್ಲಿ ಮತದಾರರು ನಮಗೇ ಆಶೀರ್ವಾದ ಮಾಡಿದ್ದಾರೆ. ನನ್ನ ಮೇಲೆ ಜಿಲ್ಲೆ ಜನ ಅವರ ಋಣಭಾರ ಇದೆ. ಆದರಿಂದ ಕಳೆದ 25 ವರ್ಷದಿಂದ ಜಿಲ್ಲೆಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕಿದೆ. ಜಿಲ್ಲೆಯ ಅಭಿವೃದ್ಧಿಯೊಂದಿಗೆ ರಾಜ್ಯದ ಸಮಗ್ರ ಅಭಿವೃದ್ಧಿ ನನಗೆ ಜವಾಬ್ದಾರಿ ಎಂದು ಸಿಎಂ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಜಿಲ್ಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ನಡೆಸುವುದು ಮಗುವನ್ನು ಹೆರುವಾಗ ತಾಯಿ ಪಡುವ ನೋವಿನಂತೆ ಇರುತ್ತದೆ. ಆದರೆ ಮಗುವಾದಾಗ ತೃಪ್ತಿ ಇರುತ್ತೆ. ಆದೇ ರೀತಿ ಸಮ್ಮಿಶ್ರ ಸರ್ಕಾರದ ಆಡಳಿತ ನಮಗೇ ತೃಪ್ತಿ ಇದೆ ಎಂದು ಹೇಳಿದರು.
ಮಂಡ್ಯ ಜಿಲ್ಲೆಗೆ ಬಜೆಟ್ ಮಾತ್ರವಲ್ಲದೇ ಕೆಲವು ಸ್ವತಂತ್ರ ನಿರ್ಧಾರಗಳನ್ನು ಕೈಗೊಂಡು ಕೆಲವು ಯೋಜನೆಗಳನ್ನು ಜಾರಿ ಮಾಡಿದ್ದೇನೆ. ಆದರೆ ಈ ಮೊತ್ತವನ್ನು ನಾನು ಹೇಳಿದರೆ ಬೇರೆ ಕಡೆ ಶುರುವಾಗುತ್ತೆ. ಆದ್ದರಿಂದ ಹಾಗಾಗಿ ಹೇಳಲೋ ಬೇಡವೋ ಎಂಬಂತಾಗಿದೆ. ಕುಮಾರಣ್ಣ ಮಂಡ್ಯಗೆ ಮಾತ್ರ ಕೊಟ್ಟಿದ್ದಾರೆ ಎಂಬ ಪ್ರಶ್ನೆ ಬರದಂತೆ ಎಲ್ಲಾ ಜಿಲ್ಲೆಗಳಲ್ಲೂ ಕೆಲ ಸಂಸ್ಥೆಗಳನ್ನು ಆರಂಭಿಸಲು ಉದ್ದೇಶಿಸಿದ್ದೇನೆ. ಮುಂದಿನ ತಿಂಗಳಿನಿಂದ ಈ ಯೋಜನೆಗಳ ಜಾರಿ ಆರಂಭವಾಗುತ್ತದೆ. ಕೈಗಾರಿಕೆಗಳ ಅಭಿವೃದ್ಧಿಯಿಂದ ಪ್ರತಿ ಜಿಲ್ಲೆಯ ಆಯಾ ಜಿಲ್ಲೆಯ ಯುವ ಸಮುದಾಯಕ್ಕೆ ಉದ್ಯೋಗ ಲಭಿಸಲಿದೆ ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ಒಟ್ಟಾರೆ ಸುಮಾರು 603 ಕೋಟಿ ರೂ. ವೆಚ್ಚದಲ್ಲಿ ಮೊದಲನೇ ಹಂತದ ಕಾಮಗಾರಿಗಳಿಗೆ ಈ ವಾರದಲ್ಲಿ ಚಾಲನೆ ನೀಡುತ್ತೇನೆ. ಫೆಬ್ರವರಿ 27 ರಂದು ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಮಂಡ್ಯದಲ್ಲಿ ಸರ್ಕಾರಿ ಕಾರ್ಯಕ್ರಮ ಆಯೋಜಿಸಲು ಸೂಚನೆ ನೀಡಲಾಗಿದೆ. ಸರ್ಕಾರದಲ್ಲಿ ಹಣದ ಕೊರತೆಯಿಲ್ಲ. ಸಾಲಮನ್ನಾಕ್ಕೂ ವಿವಿಧ ಯೋಜನೆಗಳಿಗೆ ಹಣ ಬಿಡುಗಡೆಗೂ ಕೊರತೆಯಿಲ್ಲ. ಒಟ್ಟಾರೆ ವಿವಿಧ ಇಲಾಖೆಗಳಿಗೆ ಸೇರಿದಂತೆ ಇದೇ ತಿಂಗಳು 27 ರಂದು ಸರ್ಕಾರಿ ಕಾರ್ಯಕ್ರಮ ಮಾಡಿ ಮಂಡ್ಯ ಜಿಲ್ಲೆಗೆ ಒಟ್ಟು 5 ಸಾವಿರ ಕೋಟಿ ರೂ. ಮಿಗಿಲಾದ ಯೋಜನೆಗಳನ್ನು ಜಾರಿಗೆ ತರಲಾಗುತ್ತೆ ಎಂದು ತಿಳಿಸಿದರು.
ಇದೇ ವೇಳೆ ಸಮ್ಮಿಶ್ರ ಸರ್ಕಾರಕ್ಕೆ ನೀಡುವ ಡೆಡ್ ಲೈನ್‍ಗಳ ಕುರಿತು ಪ್ರಶ್ನೆಗೆ ಉತ್ತರಿಸಿದ ಸಿಎಂ, ಸರ್ಕಾರಕ್ಕೆ ಡೆಡ್ ಲೈನ್ ಕೊಡುವವಳು ತಾಯಿ ಚಾಮುಂಡೇಶ್ವರಿ. ಮನುಷ್ಯರು ಕೊಡುವ ಡೆಡ್ ಲೈನ್‍ಗೆ ನಾನು ಏಕೆ ಹೆದರಲಿ ಎಂದು ವ್ಯಂಗ್ಯವಾಡಿದರು.
ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾಡಬೇಕಿದ್ದ ಅಭಿವೃದ್ಧಿ ಕಾಮಗಾರಿಯ ಉದ್ಘಾಟನೆಯನ್ನು ಅವರ ಗೈರು ಹಾಜರಿಯಲ್ಲಿ ಪುತ್ರ ನೆರವೇರಿಸಿದ್ದು, ಈ ಮೂಲಕ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ.
ಇಂದು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮುತಗಾ ಗ್ರಾಮದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯ ಏರ್ಪಡಿಸಲಾಗಿತ್ತು. ಆದರೆ ಈ ವೇಳೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗೈರು ಹಾಜರಿ ಆಗಿದ್ದರು. ಪರಿಣಾಮ ಜನಪ್ರತಿನಿಧಿಗಳು ಮಾಡಬೇಕಿದ್ದ ಕಾರ್ಯವನ್ನು ಶಾಸಕಿ ಪುತ್ರ ಮನ್ರಾಲ್ ಮಾಡಿದ್ದು, ಕ್ಷೇತ್ರದಲ್ಲಿ ತಮ್ಮ ದರ್ಬಾರ್ ನಡೆಸಿದ್ದಾರೆ.
ಶಿಷ್ಟಾಚಾರ ಪ್ರಕಾರ ಕ್ಷೇತ್ರದ ಶಾಸಕರು ಗೈರು ಹಾಜರಿ ಇರುವ ವೇಳೆ ಆ ಕ್ಷೇತ್ರದ ಇತರೇ ಜನ ಪ್ರತಿನಿಧಿಗಳಾದ ಗ್ರಾಮ ಪಂಚಾಯತ್ ಅಧ್ಯಕ್ಷ ಅಥವಾ ತಾಲೂಕು ಪಂಚಾಯತ್ ಅಧ್ಯಕ್ಷರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಾರೆ. ಇಲ್ಲವಾದರೆ ಇಲಾಖೆಗೆ ಸಂಬಂಧಿಸಿದ ಉನ್ನತ ಅಧಿಕಾರಿಗಳು ಈ ಕಾರ್ಯವನ್ನು ನಡೆಸುತ್ತಾರೆ. ಆದರೆ ಇಲ್ಲಿ ಮಾತ್ರ ಶಾಸಕರ ಪುತ್ರ ಚಾಲನೆ ನೀಡಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಈ ಕುರಿತು ಸ್ಥಳೀಯ ಬಿಜೆಪಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದು, ಅವರ ವಿರೋಧದ ನಡುವೆಯೇ ಕಾರ್ಯಕ್ರಮ ನಡೆದಿದೆ.
ಬೆಂಗಳೂರು: ಉತ್ತರ ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ಕುಮಾರಸ್ವಾಮಿ ಸರ್ಕಾರ ಕತ್ತರಿ ಹಾಕಿದೆ. ಸಿದ್ದರಾಮಯ್ಯ ಅವಧಿಯಲ್ಲಿ ಘೋಷಣೆಯಾಗಿದ್ದ ಅನುದಾನಗಳಿಗೆ ಸಿಎಂ ಕುಮಾರಸ್ವಾಮಿ ತಡೆ ನೀಡಿದ್ದಾರೆ.
ಸಾಲಮನ್ನಾಕ್ಕಾಗಿ ಹಣ ಹೊಂದಿಸಲು ಉತ್ತರ ಕರ್ನಾಟಕಕ್ಕೆ ಕುಮಾರಸ್ವಾಮಿ ಆಡಳಿತ ಬರೆ ಎಳೆದಿದೆ. ಬಜೆಟ್‍ನಲ್ಲಿ ಘೋಷಣೆ ಆಗಿ ಟೆಂಡರ್ ಮುಗಿದಿದ್ದರೂ ಸಮ್ಮಿಶ್ರ ಸರ್ಕಾರ ಇವುಗಳಿಗೆಲ್ಲ ಬ್ರೇಕ್ ಹಾಕಿದೆ.
ಯಾವೆಲ್ಲಾ ಯೋಜನೆಗಳಿಗೆ ಕತ್ತರಿ?
– ಕೃಷ್ಣಾ ಭಾಗ್ಯಜಲ ನಿಗಮ – 1,427 ಕೋಟಿ ರೂ.
– ಕಾವೇರಿ ನೀರಾವರಿ ನಿಗಮ – 688.75 ಕೋಟಿ ರೂ.
– ಕರ್ನಾಟಕ ನೀರಾವರಿ ನಿಗಮ – 1,825.73 ಕೋಟಿ ರೂ.
– ಕಿತ್ತೂರು, ಬೈಲಹೊಂಗಲ, ಸವದತ್ತಿ ತಾಲೂಕುಗಳ ಕೆರೆ ತುಂಬಿಸುವ ಯೋಜನೆ
– ಕೊಪ್ಪಳದ ಬಹದ್ದೂರ್ ಬಂಡಿ ಏತ ನೀರಾವರಿ ಯೋಜನೆ
– ಬಸವ ಅಂತರಾಷ್ಟ್ರೀಯ ಕೇಂದ್ರ ಮತ್ತು ಮ್ಯೂಸಿಯಂ ಯೋಜನೆ
– ಆಲಮಟ್ಟಿ ಎಡದಂಡೆ ಕಾಲುವೆಗಳ ಆಧುನೀಕರಣ ಯೋಜನೆ
– ಗಂಡೂರಿ ನಾಲಾ ಮತ್ತು ಮುಲ್ಲಾಮಾರಿ ಯೋಜನೆ
ಬೆಳಗಾವಿ: ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ನನ್ನ ನಡುವೆಯೂ ಯಾವುದೇ ಜಟಾಪಟಿ ಇಲ್ಲ ಎಂದು ಮಹಿಳಾ ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಹೇಳಿದ್ದಾರೆ.
ಬೆಳಗಾವಿ ಸುವರ್ಣ ಗಾರ್ಡನ್ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಯಾವ ಜಟಾಪಟಿ ಇಲ್ಲ. ನನ್ನ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆಯೂ ಯಾವುದೇ ಅಸಮಾಧಾನವಿಲ್ಲ. ಎಲ್ಲದಕ್ಕೂ ಆ ಹೆಣ್ಣು ಮಗಳನ್ನು ಯಾಕೆ ಎಳೆದು ತರುತ್ತೀರಾ ಎಂದು ಹೇಳುವ ಮೂಲಕ ಹೆಬ್ಬಾಳ್ಕರ್ ಪರ ಬ್ಯಾಟ್ ಬೀಸಿದರು.
ಇದೇ ವೇಳೆ ಕರಾವಳಿ ಭಾಗಕ್ಕೆ ಸಭಾಪತಿ ಆಯ್ಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸಭಾಪತಿ ಆಯ್ಕೆ ವಿಚಾರದಲ್ಲಿ ಯಾವುದೇ ರಾಜಕಾರಣ ಇಲ್ಲ. ಎಸ್.ಆರ್ ಪಾಟೀಲ ಅವರು ಪಕ್ಷದ ಹಿರಿಯರು ಹಾಗೂ ಏಳು ಬಾರಿ ಆಯ್ಕೆ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯ ಸ್ಥಾನ ಸಿಗಬಹುದು. ಉತ್ತರ ಕರ್ನಾಟಕ ರಾಜ್ಯದ ಹೃದಯ ಭಾಗ, ಉತ್ತರ ಯಾವತ್ತು ಮೇಲ್ಬಾಗದಲ್ಲಿರುತ್ತೆ. ಆ ಹೃದಯ ಭಾಗಕ್ಕೆ ತೊಂದರೆಯಾದರೆ ನಮ್ಮ ಬದುಕೇ ನಿಂತು ಹೋಗುತ್ತದೆ. ರಾಜ್ಯ ಸರ್ಕಾರ ರೈತರ ಬಹುದೊಡ್ಡ ಸಾಲಮನ್ನಾ ಮಾಡಿದ್ದು, ಇಲ್ಲಿ ಯಾವುದೇ ತಾರತಮ್ಯ ಇಲ್ಲ ಎಂದರು. ಇದನ್ನು ಓದಿ: ಜಗತ್ತಲ್ಲಿ ಎಲ್ಲದಕ್ಕೂ ಔಷಧವಿದೆ, ಆದರೆ ಹೊಟ್ಟೆಕಿಚ್ಚಿಗಿಲ್ಲ: ಹೆಬ್ಬಾಳ್ಕರ್ ಗೆ ಜಯಮಾಲಾ ಟಾಂಗ್
ಪ್ರತಿಭಟನಾಕಾರರ ಮನವಿ ಬಗ್ಗೆ ಪ್ರತಿಕ್ರಿಯೆ ನೀಡಿ, ಸರ್ಕಾರ ಗಮನಕ್ಕೆ ಹೋರಾಟಗಾರರ ಬೇಡಿಕೆಯನ್ನು ತಲುಪಿಸುತ್ತೇನೆ. ಇವರ ಬೇಡಿಕೆ ಈಡೇರಿಸಲು ಸರ್ಕಾರದ ಪರ ಬದ್ಧರಾಗಿದ್ದು, ಖಾಯಂ ಮಾಡಬೇಕು ಎಂಬ ಬೇಡಿಕೆಯೂ ಇದೆ. ಈ ಕುರಿತು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಿಎಂ ಗಮನಕ್ಕೂ ತರುತ್ತೇನೆ ಎಂದರು.
ಮಂಡ್ಯ: ಜಿಲ್ಲೆಯ ಧಾರ್ಮಿಕ ಕ್ಷೇತ್ರವಾಗಿರುವ ಮೇಲುಕೋಟೆಯನ್ನು ಇನ್ಫೋಸಿಸ್ ಫೌಂಡೇಶನ್ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಅಭಿವೃದ್ಧಿ ಪಡಿಸುವುದಾಗಿ ಸುಧಾಮೂರ್ತಿಯವರು ಹೇಳಿದ್ದಾರೆ.
ಮೇಲುಕೋಟೆ ಅಭಿವೃದ್ಧಿ ವಿಚಾರವಾಗಿ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ಮೇಲುಕೋಟೆ ನೋಡುವುದಕ್ಕೆ ಖುಷಿಯಾಗುತ್ತದೆ. ಇದೊಂದು ಧಾರ್ಮಿಕ ಕ್ಷೇತ್ರವಾಗಿದೆ. ಇಲ್ಲಿ ಹೊಯ್ಸಳರು ಹಾಗೂ ಮೈಸೂರು ರಾಜರ ಕಾಲದ ಕುರುಹುಗಳಿವೆ. ಹೀಗಾಗಿ ಮೇಲುಕೋಟೆ ಕ್ಷೇತ್ರವನ್ನು ಅಭಿವೃದ್ಧಿ ಹಾಗೂ ನಿರ್ವಹಣೆ ಮಾಡಬೇಕಾಗಿದೆ. ಮೈಸೂರು ದಸರಾ ಉದ್ಘಾಟನೆಗೆ ಬಂದಾಗಲೇ ಸರ್ಕಾರದ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದ್ದೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲವೆಂದು ತಿಳಿಸಿದರು.
ಮೇಲುಕೋಟೆ ಅಭಿವೃದ್ಧಿ ವಿಚಾರಕ್ಕೆ ರಾಜ್ಯ ಸರ್ಕಾರವು ನಮ್ಮೊಂದಿಗೆ ಕೈ ಜೋಡಿಸುವ ಭರವಸೆಯನ್ನು ನೀಡಿದೆ. ಇಲ್ಲಿ ಒಂದು, ಎರಡು ಕೊಳಗಳಿಲ್ಲ. ನೂರಕ್ಕೂ ಹೆಚ್ಚು ಕೊಳಗಳಿವೆ. ಸರ್ಕಾರದ ಸಹಯೋಗದೊಂದಿಗೆ ಮೇಲುಕೋಟೆಯ ಅಭಿವೃದ್ಧಿಯ ಜವಾಬ್ದಾರಿಯನ್ನು ಹೊತ್ತಿದ್ದೇವೆ. ಪಾರಂಪರಿಕ ಕಟ್ಟಡಗಳಿಗೆ ಧಕ್ಕೆಯಾಗದಂತೆ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಿದ್ದೇವೆ. ಆದಷ್ಟು ಬೇಗ ಈ ಯೋಜನೆ ಕಾರ್ಯರೂಪಕ್ಕೆ ಬರುವುದಾಗಿ ಹೇಳಿದರು.
ಇದೇ ವೇಳೆ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ರಾಜ್ಯ ಸರ್ಕಾರ ಹಾಗೂ ಇನ್ಫೋಸಿಸ್ ಸಂಸ್ಥೆ ಜೊತೆಯಾಗಿ ಮೇಲುಕೋಟೆ ಅಭಿವೃದ್ಧಿಗೆ ಮುಂದಾಗಿದೆ. ಸರ್ಕಾರ ಇನ್ಫೋಸಿಸ್ ಸಂಸ್ಥೆಗೆ ಎಲ್ಲಾ ರೀತಿಯ ಸಹಕಾರವನ್ನು ನೀಡಲಿದೆ. ಇದಲ್ಲದೇ ಇನ್ಫೋಸಿಸ್ ಸಹ ರಾಜ್ಯ ಸರ್ಕಾರಕ್ಕೆ ಸಲಹೆಗಳನ್ನು ನೀಡುತ್ತಲೇ ಬಂದಿದೆ. ಈಗ ಮೇಲುಕೋಟೆ ಪಾರಂಪರಿಕ ಸ್ಥಳಗಳ ಅಭಿವೃದ್ಧಿಗೆ ಸಂಸ್ಥೆ ಮುಂದಾಗಿರುವುದು ಖುಷಿ ವಿಚಾರವಾಗಿದೆ. ಮೇಲುಕೋಟೆ ಸಂಪೂರ್ಣ ಅಭಿವೃದ್ಧಿಗೆ ಪ್ರಾಧಿಕಾರ ರಚನೆಯಾಗಲಿದೆ. ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯ ನಂತರ ಮೇಲುಕೋಟೆ ಕಲ್ಯಾಣಿ, ಭುವನೇಶ್ವರಿ ಮಂಟಪವನ್ನು ಸುಧಾಮೂರ್ತಿಯವರು ವೀಕ್ಷಣೆ ಮಾಡಿದರು. ಈ ವೇಳೆ ಮಂಟಪದ ಮೇಲೆ ಬೆಳದಿರುವ ಗಿಡವನ್ನು ನೋಡಿ, ಕೂಡಲೇ ತೆಗೆದು ಹಾಕುವಂತೆ ಸೂಚನೆ ನೀಡಿದರು. ಗಿಡ ಹೀಗೆ ಬೆಳೆದರೆ ಕೆಲವೇ ವರ್ಷಗಳಲ್ಲಿ ಮಂಟಪವನ್ನು ಆಕ್ರಮಿಸಿ ಹಾಳು ಮಾಡುತ್ತದೆಂದು ಆತಂಕ ಹೊರಹಾಕಿದರು.
ಮಡಿಕೇರಿ: ನಾನು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದು, ರಾಜಕೀಯ ವಿಚಾರಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕೀಯದ ಬಗ್ಗೆ ಮಾತನಾಡಿದರೆ ದಿನವಿಡಿ ಅದನ್ನೇ ಹೈಲೈಟ್ ಮಾಡುತ್ತಾರೆ. ಒಳ್ಳೆಯ ಕೆಲಸಗಳು ಈ ವೇಳೆ ಗಣನೆಗೆ ಬರುವುದಿಲ್ಲ. ಅದ್ದರಿಂದ ರಾಜಕೀಯದ ಬಗ್ಗೆ ಸದ್ಯಕ್ಕೆ ಮಾತನಾಡಲ್ಲ. ನಾನು ಅಭಿವೃದ್ಧಿಯ ಬಗ್ಗೆ ಗಮನ ಹರಿಸಿದ್ದೇನೆ ಎಂದರು.
ಇದೇ ವೇಳೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಉಸ್ತುವಾರಿ ವಹಿಸಿಕೊಳ್ಳಲು ಈಶ್ವರಪ್ಪ ನಿರಾಕರಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ, ಈಶ್ವರಪ್ಪ ಅವರಿಗೆ ಮೈಸೂರು ದೂರವಾಗುತ್ತದೆ. ಉಸ್ತುವಾರಿ ವಹಿಸಿಕೊಂಡರೆ ಸಾಕಷ್ಟು ಬಾರಿ ಭೇಟಿ ಕೊಟ್ಟು ಪರಿಶೀಲನೆ ನಡೆಸಬೇಕು. ಇದರಿಂದ ಅವರಿಗೆ ಕ್ಷೇತ್ರಕ್ಕೆ ಬಂದು ಹೋಗುವುದು ಕಷ್ಟ ಆಗುತ್ತೆ. ಹೀಗಾಗಿ ನಿರಾಕರಿಸಿದ್ದಾರೆ ಅಷ್ಟೇ ಅದರಲ್ಲಿ ಬೇರೆ ಯಾವುದೇ ಉದ್ದೇಶ ಇಲ್ಲ ಎಂದರು. ಇದನ್ನು ಓದಿ :ಲೋಕಸಭೆಯಲ್ಲಿ 28 ಕ್ಷೇತ್ರಗಳನ್ನು ಗೆಲ್ಲಲು ಉಸ್ತುವಾರಿಗಳನ್ನು ನೇಮಿಸಿದ್ದೇವೆ: ಈಶ್ವರಪ್ಪ
ಮೈಸೂರು-ಮಂಗಳೂರು ಹೆದ್ದಾರಿ ವಿಸ್ತರಣೆಗೆ ಬದ್ಧ ಎಂದು ಪುನರ್ ಉಚ್ಚರಿಸಿದ ಸಂಸದ ಪ್ರತಾಪ್ ಸಿಂಹ, ಚತುಷ್ಪತ ರಸ್ತೆ ನಿರ್ಮಾಣಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆದರೆ ಹೆದ್ದಾರಿ ರಸ್ತೆ ವಿಸ್ತರಣೆಯಿಂದ ಕೊಡಗಿನ ಪರಿಸರಕ್ಕೆ ಕೇಂದ್ರದಿಂದ ಹಾನಿಯಾಗಲ್ಲ. ಒಳ್ಳೆ ಕೆಲಸ ಮಾಡುವಾಗ ವಿರೋಧ ವ್ಯಕ್ತವಾಗುವುದ ಸಹಜ. ಬೇಕೋ, ಬೇಡವೋ ಎಂಬುದನ್ನು ಅಂತಿಮವಾಗಿ ಜನ ತೀರ್ಮಾನಿಸಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಚಿತ್ರದುರ್ಗ: ತಾಯಿ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದನ್ನು ಪ್ರಶ್ನಿಸಿದ ಯುವಕನೊಬ್ಬನ ಮೇಲೆ ದುಷ್ಕರ್ಮಿಗಳ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಹೊಸದುರ್ಗ ತಾಲೂಕಿನ ಮಾಡದಕೆರೆ ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಗೊಲ್ಲರಹಟ್ಟಿ ನಿವಾಸಿ ಚಿದಾನಂದ(26) ಹಲ್ಲೆಗೊಳಗಾದ ಯುವಕ. ಆರೋಪಿಗಳಾದ ಶ್ರೀನಿವಾಸ, ಸುನಿಲ್, ಮಂಜ, ಪ್ರವೀಣ್ ಸೇರಿದಂತೆ ಏಳು ಜನರು ಹಲ್ಲೆ ನಡೆಸಿ, ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆ ವೇಳೆ ಚಿದಾನಂದ ತಾಯಿ ಸಿದ್ದಮ್ಮ ಅವರ ಮೇಲೂ ಹಲ್ಲೆ ನಡೆದಿದೆ.
ಆಗಿದ್ದೇನು?:
ಚಿದಾನಂದ ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುಂದುವರಿಯುತ್ತಿದ್ದರು. ಇದನ್ನು ಸಹಿಸದ ಅದೇ ಗ್ರಾಮದ ಮತ್ತೊಂದು ಕೋಮಿನ ಯುವಕರು ಇಂದು ಮದ್ಯ ಸೇವನೆ ಮಾಡಿ ಚಿದಾನಂದ ಮನೆಗೆ ಬಂದಿದ್ದರು. ಮನೆಯ ಮುಂದೆ ನಿಂತು ಸಿದ್ದಮ್ಮ ಅವರ ಜೊತೆಗೆ ಅಸಭ್ಯ ವರ್ತಿಸಿ, ನಿಂದಿಸಿದ್ದಾರೆ. ಈ ವೇಳೆ ಚಿದಾನಂದ ಮಧ್ಯ ಪ್ರವೇಶಿಸುತ್ತಿದ್ದಂತೆ ಅವರ ತಲೆಗೆ ಇಟ್ಟಿಗೆಯಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾರೆ.
ಘಟನೆಯಿಂದಾಗಿ ಚಿದಾನಂದ ಅವರ ಎದೆಗೆ ಬಲವಾದ ಪೆಟ್ಟು ಬಿದ್ದಿದ್ದು, ತಲೆಗೆ ಗಂಭೀರ ಗಾಯವಾಗಿದೆ. ಇದನ್ನು ತಡೆಯಲು ಬಂದಿದ್ದ ಸಿದ್ದಮ್ಮ ಅವರಿಗೂ ದುಷ್ಕರ್ಮಿಗಳು ಹೊಡೆದಿದ್ದಾರೆ. ಈ ವೇಳೆ ಗ್ರಾಮಸ್ಥರು ಸ್ಥಳಕ್ಕೆ ಬರುತ್ತಿದ್ದಂತೆ ಅಲ್ಲಿಂದ ಯುವಕರು ಪರಾರಿಯಾಗಿದ್ದಾರೆ. ತಕ್ಷಣವೇ ಗಾಯಾಳು ಚಿದಾನಂದ ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮಗನ ಶೈಕ್ಷಣಿಕ ಹಾಗೂ ಆರ್ಥಿಕಾಭಿವೃದ್ಧಿ ಸಹಿಸಲಾಗದೇ ಈ ಕೃತ್ಯ ಎಸಗಿದ್ದಾರೆ ಎಂದು ಚಿದಾನಂದ ತಾಯಿ ಸಿದ್ದಮ್ಮ ಆರೋಪಿಸಿದ್ದಾರೆ. ಹೊಸದುರ್ಗ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.