Tag: Development

  • ತಂಟೆಗೆ ಬಂದವರಿಗೆ ಬುದ್ದಿ ಕಲಿಸಿ ದೊಡ್ಡ ಸಂದೇಶ ರವಾನಿಸಿದ್ದೀರಿ: ಮೋದಿ ಘರ್ಜನೆ

    ತಂಟೆಗೆ ಬಂದವರಿಗೆ ಬುದ್ದಿ ಕಲಿಸಿ ದೊಡ್ಡ ಸಂದೇಶ ರವಾನಿಸಿದ್ದೀರಿ: ಮೋದಿ ಘರ್ಜನೆ

    – ಶಾಂತಿ ನಮ್ಮ ಬಲಹೀನತೆ ಅಲ್ಲ
    – ರಾಷ್ಟ್ರ ರಕ್ಷಣೆಯ ವಿಚಾರ ಬಂದಾಗ ಇಬ್ಬರು ತಾಯಂದಿರನ್ನು ನೆನೆಯುತ್ತೇನೆ
    – ಇಡೀ ಭಾರತವೇ ನಿಮ್ಮ ಜೊತೆಗಿದೆ

    ಲಡಾಖ್‌: ಭಾರತದ ತಂಟೆಗೆ ಬಂದವರಿಗೆ ಸೈನಿಕರು ದೊಡ್ಡ ಸಂದೇಶವನ್ನು ರವಾನಿಸಿದ್ದಾರೆ. ತಂಟೆಕಾರರಿಗೆ ಸೂಕ್ತ ಪ್ರತ್ಯುತ್ತರ ನೀಡಿದ್ದೀರಿ. ಈಗ ಭಾರತದ ಶಕ್ತಿ ಇಡೀ ವಿಶ್ವಕ್ಕೆ ಅರ್ಥವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಗಲ್ವಾನ್‌ ಘರ್ಷಣೆಯ ಬಳಿಕ ನಿಮು ಸೇನಾ ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು. ಗಲ್ವಾನ್ ಕಣಿಯಲ್ಲಿ ಹುತಾತ್ಮರಾದ ಸೈನಿಕರಿಗೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇವೆ. ಇದು ದೇಶಕ್ಕೆ ಸರ್ವಸ್ವ ತ್ಯಾಗ ಮಾಡುವ ರಾಷ್ಟ್ರ ಭಕ್ತರ ಭೂಮಿ. ವೀರತ್ವ ನಮ್ಮ‌ ಭೂಮಿಯಲ್ಲಿದೆ. ಆ ವೀರತನ ನಿಮ್ಮ ಮುಖಗಳಲ್ಲಿ ಕಾಣಿಸುತ್ತಿದೆ. ದೇಶದ ಪ್ರತಿ ಮೂಲೆಯಿಂದ ಬಂದ ಸೈನಿಕರು ತಮ್ಮ ಪರಾಕ್ರಮ ತೋರಿಸಿದ್ದಾರೆ. ಅವರ ಪರಾಕ್ರಮಕ್ಕೆ ಇಡೀ ದೇಶ ಗೌರವಿಸುತ್ತಿದೆ. ನಿಮ್ಮ ವೀರತ್ವ ಮತ್ತು ಪರಾಕ್ರಮದಿಂದ ನಾವು ಎದೆಯುಬ್ಬಿಸಿ ನಿಲ್ಲುವಂತಾಗಿದೆ ಎಂದು ಸೈನಿಕರ ಪರಾಕ್ರಮವನ್ನು ಕೊಂಡಾಡಿದರು.

    ಸೈನಿಕರ ಸೇವೆ ಯಾವುದಕ್ಕೂ ಕಡಿಮೆ ಇಲ್ಲ. ಸಂಕಷ್ಟದ ಸಮಯದಲ್ಲಿ ಎಷ್ಟು ಎತ್ತರದ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದೀರಿ. ಸವಾಲಿನ ಕಾರ್ಯ ನಿರ್ವಹಿಸುತ್ತಿದ್ದೀರಿ. ನಿಮ್ಮ ತ್ಯಾಗ ಬಲಿದಾನಕ್ಕೆ ಸಮನಾದದ್ದು ಯಾವುದು ಇಲ್ಲ ಎಂದು ಹೇಳಿದರು.

    ಭಾರತ ಶಾಂತಿ ಮತ್ತು ಸ್ನೇಹವನ್ನು ಬಯಸುತ್ತದೆ. ಶಾಂತಿ ಎನ್ನುವುದು ಬಲಹೀನತೆ ಅಲ್ಲ. ಶಾಂತವಾಗಿರುವುದು ಒಂದು ಶಕ್ತಿ. ಭಾರತೀಯ ಸೇನೆಗೆ ನಾವು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದ್ದೇವೆ. ವೇಗವಾಗಿ ಸೇನೆಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ. ಶಾಂತಿ ಹಾಳು ಮಾಡುವ ಪ್ರಯತ್ನವನ್ನು ಯಾರೇ ಮಾಡಿದರೂ ಸೂಕ್ತ ಉತ್ತರ ನೀಡಲು ಸಿದ್ದ ಎನ್ನುವುದೇ ಇದರ ಅರ್ಥ ಎಂದು ಚೀನಾದ ಹೆಸರನ್ನು ಉಲ್ಲೇಖಿಸದೇ ಮಾತಿನಲ್ಲೇ ಮೋದಿ ತಿರುಗೇಟು ನೀಡಿದರು.

    ವಿಸ್ತರಿಸುವ ಯುಗ ಮುಗಿದಿದೆ. ಈಗ ವಿಕಾಸವಾದ ಯುಗ ಆರಂಭವಾಗಿದೆ. ವಿಕಾಸವಾದ ಈಗ ಅವಶ್ಯಕತೆ ಇದೆ. ಕಷ್ಟದ ಕಾಲದಲ್ಲಿ ನಾವು ಜಯಗಳಿಸುತ್ತಲೇ ಇರೋಣ. ಭಾರತದ ಹೊಸ ಕನಸುಗಳೊಂದಿಗೆ ಗಡಿಯಲ್ಲಿ ನೀವೂ ರಕ್ಷಣೆ ನಿಂತಿದ್ದೀರಿ. ಆ ಕನಸುಗಳನ್ನು ಈಡೇರಿಸುವ ಕೆಲಸ ಮಾಡುತ್ತೇವೆ. ಆತ್ಮ ನಿರ್ಭರ ಭಾರತ್ ನಿರ್ಮಾಣ ಮಾಡಿದ ಬಳಿಕ ಭಾರತ ಮತ್ತಷ್ಟು ಶಕ್ತಿಶಾಲಿಯಾಗಲಿದೆ. ದೇಶದ ಜನರು ನಿಮ್ಮೊಂದಿಗೆ ಇರಲಿದ್ದಾರೆ. ವಿಕಾಸವಾದದ ಸ್ಪರ್ಧೆ ನಡೆಯುತ್ತಿದ್ದು ಎಲ್ಲ ದೇಶಗಳು ಇದನ್ನು ಒಪ್ಪಿಕೊಂಡಿದೆ ಎಂದು ಹೇಳಿದರು.

    ರಾಷ್ಟ್ರದ ರಕ್ಷಣೆ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಇಬ್ಬರು ತಾಯಂದಿರನ್ನು ನೆನೆಯುತ್ತೇನೆ. ಭಾರತ ಮಾತೆಯ ಜೊತೆಗೆ ವೀರ ಸೈನಿಕರಿಗೆ ಜನ್ಮ ನೀಡಿದ ಸೈನಿಕರ ತಾಯಂದಿರ ಬಗ್ಗೆ ನೆನೆಯುತ್ತೇನೆ. ಹೆಗಲಿಗೆ ಹೆಗಲು ಕೊಟ್ಟು ಭಾರತ ಮಾತೆ ರಕ್ಷಣೆ ಮಾಡುತ್ತಿದ್ದೀರಿ ಎಂದು ಹೇಳುವ ಮೂಲಕ ಮೋದಿ ಸೈನಿಕರ ಗುಣಗಾನ ಮಾಡಿದರು.

    ಸೈನಿಕರ ನೆರವಿಗಾಗಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು ಗಡಿ ಭಾಗದಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚು ಸೇವಾ ವಸ್ತುಗಳನ್ನು ರವಾನಿಸುವ ವ್ಯವಸ್ಥೆ ಮಾಡಿದ್ದೇವೆ. ತುಂಬಾ ವಿಳಂಬವಾಗಿದ್ದ ಸಿಡಿಎಸ್ ನೇಮಕ ಮಾಡಲಾಗಿದ್ದು ಮೂರು ಸೇನೆಗಳ ನಡುವೆ ಸಮನ್ವಯ ಸಾಧಿಸುತ್ತಿದ್ದೇವೆ. ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ನಿರ್ಮಾಣ ಮಾಡಿದ್ದೇವೆ. ಒನ್ ರ‍್ಯಾಂಕ್ ಒನ್ ಪೆನ್ಷನ್ ಜಾರಿ ತಂದಿದ್ದೇವೆ ಎಂದು ಹೇಳಿದರು.

  • ತಾಲೂಕಿನ ವಿದ್ಯಾರ್ಥಿಗಳಿಗೆ ಶೇ.25 ಮೀಸಲು – ಎರಡು ಶನಿವಾರ ಬ್ಯಾಗ್ ರಹಿತ ದಿನ, ಯಾವ ಸಮುದಾಯಕ್ಕೆ ಎಷ್ಟು ಕೋಟಿ ಹಂಚಿಕೆ?

    ತಾಲೂಕಿನ ವಿದ್ಯಾರ್ಥಿಗಳಿಗೆ ಶೇ.25 ಮೀಸಲು – ಎರಡು ಶನಿವಾರ ಬ್ಯಾಗ್ ರಹಿತ ದಿನ, ಯಾವ ಸಮುದಾಯಕ್ಕೆ ಎಷ್ಟು ಕೋಟಿ ಹಂಚಿಕೆ?

    ಬೆಂಗಳೂರು: 2020-21ನೇ ಸಾಲಿನಲ್ಲಿ ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ ಒಟ್ಟು 72,093 ಕೋಟಿ ರೂ. ಅನುದಾನವನ್ನು ಯಡಿಯೂರಪ್ಪ ಪ್ರಕಟಿಸಿದ್ದಾರೆ.

    ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರ ಕಲ್ಯಾಣಕ್ಕೆ ಎಸ್‍ಸಿಎಸ್‍ಪಿ/ ಟಿಎಸ್‍ಪಿ ಅಡಿ 26,930 ಕೋಟಿ ರೂ. ಅನುದಾನ ನಿಗದಿ. ಇದು ನಿಯಮಾನುಸಾರ ಹಂಚಿಕೆ ಮಾಡಬೇಕಾದ ಮೊತ್ತಕ್ಕಿಂತ ಹೆಚ್ಚು.

    ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ನಡೆಸುವ ವಸತಿ ಶಾಲೆಗಳಲ್ಲಿ ಆಯಾ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಕನಿಷ್ಠ ಶೇ. 25 ರಷ್ಟು ಸೀಟು ಹಂಚಿಕೆಗೆ ಕ್ರಮ. ಈ ವಸತಿ ಶಾಲೆಗಳಿಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮೇಲ್ವಿಚಾರಣಾ ಸಮಿತಿ ರಚನೆ.

    ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ/ಯುವತಿಯರಿಗೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಮೂಲಕ ವಾಹನ ಚಾಲನಾ ತರಬೇತಿ, ವಿವಿಧ ಪ್ಯಾರಾಮೆಡಿಕಲ್ ಸರ್ಟಿಫಿಕೇಟ್ ಕೋರ್ಸುಗಳೊಂದಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಸಣ್ಣ ಸರಕು ಸಾಗಾಣಿಕೆ ವಾಹನ ಖರೀದಿಗೆ ಸಾಲದ ಸೌಲಭ್ಯ ನೀಡಲು ಕ್ರಮ.

    ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ನಿರ್ವಹಿಸುತ್ತಿರುವ ಸಹಕಾರ ಸಂಘಗಳಿಗೆ ಆರ್ಥಿಕ ಚಟುವಟಿಕೆಗಳಿಗಾಗಿ ನೀಡುವ ಷೇರು ಬಂಡವಾಳ ದ್ವಿಗುಣಗೊಳಿಸಿ 20 ಲಕ್ಷ ರೂ. ಗಳಿಗೆ ಹೆಚ್ಚಳ. ಪ್ರತಿ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ, ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಜಡಗ ಮತ್ತು ಬಾಲ ಇವರ ಹೆಸರಿನಲ್ಲಿ ಒಂದು ಲಕ್ಷ ರೂ. ನಗದು ಪ್ರಶಸ್ತಿ ನೀಡಲು ಕ್ರಮ. 60 ಲಕ್ಷ ರೂ. ಅನುದಾನ.

    ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳಲ್ಲಿ ಬುಡಕಟ್ಟು ಜನರ ಪಾರಂಪರಿಕ ವೈದ್ಯಪದ್ಧತಿ ಮತ್ತು ಆಚರಣೆಗಳ ದಾಖಲೀಕರಣ ಮತ್ತು ಆಯ್ದ ಔಷಧಿಗಳ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಎರಡು ಕೋಟಿ ರೂ. ಅನುದಾನ.

    “ಚರ್ಮ ಶಿಲ್ಪ” ಎಂಬ ಯಂತ್ರಾಧಾರಿತ ಉತ್ಪಾದನಾ ಘಟಕಗಳ ಸ್ಥಾಪನೆಗೆ 250 ಚರ್ಮ ಕುಶಲಕರ್ಮಿಗಳಿಗೆ ಡಾ|| ಬಾಬು ಜಗಜೀವನ್‍ರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಮೂಲಕ ಘಟಕ ವೆಚ್ಚ 10 ಲಕ್ಷ ರೂ.ಗಳಲ್ಲಿ ಐದು ಲಕ್ಷ ರೂ. ಸಹಾಯಧನ. 12.50 ಕೋಟಿ ರೂ. ಅನುದಾನ.

    ಅಲೆಮಾರಿ/ಅರೆ ಅಲೆಮಾರಿ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ 78 ಕೋಟಿ ರೂ. ಅನುದಾನ. ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಹಾಗೂ ವಿವಿಧ ನಿಗಮಗಳಿಗೆ 125 ಕೋಟಿ ರೂ. ಅನುದಾನ.

    ಇ-ವಾಣಿಜ್ಯ ಉತ್ಪನ್ನಗಳನ್ನು ಸರಬರಾಜು ಮಾಡುವ ಯುವಕರಿಗೆ ಬೈಕ್ ಕೊಳ್ಳಲು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಸಾವಿರ ಯುವಕರಿಗೆ ತಲಾ 25,000 ರೂ.ಗಳಂತೆ 2.5 ಕೋಟಿ ರೂ. ಆರ್ಥಿಕ ನೆರವು. ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಅಧಿಸೂಚಿತವಲ್ಲದ ಕೊಳಚೆ ಪ್ರದೇಶಗಳ ಅಭಿವೃದ್ಧಿಗೆ 200 ಕೋಟಿ ರೂ. ಅನುದಾನ

    ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಐದು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪದವಿ ಪೂರ್ವ ಕಾಲೇಜನ್ನಾಗಿ ಉನ್ನತೀಕರಿಸಲು ಕ್ರಮ. ಕ್ರೈಸ್ತ ಸಮುದಾಯದವರ ಸರ್ವತೋಮುಖ ಅಭಿವೃದ್ಧಿಗೆ 200 ಕೋಟಿ ರೂ. ಅನುದಾನ.

    ಅಪೂರ್ಣ ಹಂತದ ಎರಡು ಲಕ್ಷ ಮನೆಗಳನ್ನು ಪೂರ್ಣಗೊಳಿಸಿ, ವಸತಿ ರಹಿತರಿಗೆ ಹಂಚಿಕೆ ಮಾಡಲು 2500 ಕೋಟಿ ರೂ. ಸರ್ಕಾರದ ವಸತಿ ಯೋಜನೆಗಳಡಿ ಮನೆಗಳನ್ನು ನಿರ್ಮಿಸಿಕೊಂಡು ಹತ್ತು ವರ್ಷವಾಗಿದ್ದಲ್ಲಿ, ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಅಡಮಾನವಿಡಲಾದ ನಿವೇಶನವನ್ನು ಡೀಮ್ಡ್ ರಿಲೀಸ್ ಎಂದು ಪರಿಗಣಿಸಲು ಕ್ರಮ.

    ಒಂದೇ ಸೂರಿನಡಿ ಪೂರ್ವ ಪ್ರಾಥಮಿಕ ತರಗತಿಗಳಿಂದ ಪದವಿಪೂರ್ವ ತರಗತಿವರೆಗೆ ಶಿಕ್ಷಣ ನೀಡುವ 276 ಕರ್ನಾಟಕ ಪಬ್ಲಿಕ್ ಶಾಲೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ. ನಬಾರ್ಡ್ ಸಹಯೋಗದಲ್ಲಿ 758 ಕೋಟಿ ರೂ. ವೆಚ್ಚದಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ 26 ಜಿಲ್ಲೆಗಳ 3386 ಸರ್ಕಾರಿ ಶಾಲೆಗಳ 6469 ಶಾಲಾ ಕೊಠಡಿಗಳ ಪುನರ್ ನಿರ್ಮಾಣಕ್ಕೆ ಕ್ರಮ.

    ಶಾಸಕರು ತಮ್ಮ ಕ್ಷೇತ್ರದ ವ್ಯಾಪ್ತಿಯ ತಲಾ ಮೂರು ಶಾಲೆಗಳ ದತ್ತು ಸ್ವೀಕಾರ ಮತ್ತು ಅಭಿವೃದ್ಧಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕ್ರಮ. ಪ್ರತಿ ತಿಂಗಳಲ್ಲಿ ಎರಡು ಶನಿವಾರಗಳಂದು ಬ್ಯಾಗ್ ರಹಿತ ದಿನ, “ಸಂಭ್ರಮ ಶನಿವಾರ” ಆಚರಣೆ.

    ದಾವಣಗೆರೆ, ಉಡುಪಿ ಮತ್ತು ದೊಡ್ಡಬಳ್ಳಾಪುರದಲ್ಲಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರಗಳಿಗೆ ನಾಲ್ಕು ಕೋಟಿ ರೂ. ಅನುದಾನ. ಶಿಕ್ಷಕರ ಸೇವಾ ಸೌಲಭ್ಯಗಳನ್ನು ಅಂತರ್ಜಾಲದ ಮೂಲಕ ಒದಗಿಸಲು “ಶಿಕ್ಷಕ ಮಿತ್ರ” ಎಂಬ ಮೊಬೈಲ್ ಆಪ್ ಅಭಿವೃದ್ಧಿ. 400 ಸರ್ಕಾರಿ ಉರ್ದು ಶಾಲೆಗಳಲ್ಲಿ ಉರ್ದು ಮಾಧ್ಯಮದೊಂದಿಗೆ ಆಂಗ್ಲ ಮಾಧ್ಯಮ ಪ್ರಾರಂಭಕ್ಕೆ ಒಂದು ಕೋಟಿ ರೂ. ಅನುದಾನ.

    ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜನ್ನು ಐ.ಐ.ಟಿ. ಮಾದರಿಯಲ್ಲಿ ಸ್ವಾಯತ್ತಗೊಳಿಸಿ ಅಭಿವೃದ್ಧಿಪಡಿಸಲು 10 ಕೋಟಿ ರೂ. ಅನುದಾನ. ತಂತ್ರಜ್ಞಾನದ ನೆರವಿನಿಂದ ರಾಜ್ಯದ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಆಡಳಿತ ವ್ಯವಸ್ಥೆಯ ಸಮರ್ಥ ನಿರ್ವಹಣೆಗೆ ಒಂದು ಕೋಟಿ ರೂ.ಗಳ ವೆಚ್ಚದಲ್ಲಿ ಶಾಶ್ವತ ವ್ಯವಸ್ಥೆ.

    ಇಂಟರ್ಯಾಕ್ಟೀವ್ ಆನ್-ಲೈನ್ ಕೋರ್ಸ್ ಗಳನ್ನು ಪ್ರಾರಂಭ ಹಾಗೂ ಗುಣಾತ್ಮಕ ಇ-ಕಂಟೆಂಟ್ ಅಭಿವೃದ್ಧಿಗೆ ಒಂದು ಕೋಟಿ ರೂ. ವೆಚ್ಚ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಡಿ ತಲಾ ಐದು ಕೋಟಿ ರೂ. ವೆಚ್ಚದಲ್ಲಿ ಜಿಯೋಸ್ಪೇಶಿಯಲ್ ತಂತ್ರಜ್ಞಾನ ಕೇಂದ್ರ ಸ್ಥಾಪನೆ.

  • ಸರ್ಕಾರಿ ಶಾಲೆ ಅಭಿವೃದ್ಧಿಗಾಗಿ ಜೇಬಿನಲ್ಲಿದ್ದ ಎಲ್ಲ ಹಣ ಕೊಟ್ಟ ಶಾಸಕ

    ಸರ್ಕಾರಿ ಶಾಲೆ ಅಭಿವೃದ್ಧಿಗಾಗಿ ಜೇಬಿನಲ್ಲಿದ್ದ ಎಲ್ಲ ಹಣ ಕೊಟ್ಟ ಶಾಸಕ

    ಚಿಕ್ಕೋಡಿ: ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ತಮ್ಮ ಜೇಬಿನಲ್ಲಿದ್ದ ಎಲ್ಲ ಹಣವನ್ನು ಕುಡಚಿ ಶಾಸಕ ಪಿ.ರಾಜೀವ್ ನೀಡಿದ್ದಾರೆ. ಶಾಲೆಯ ಬೆಳವಣಿಗೆ ಕಂಡು ಮತ್ತಷ್ಟು ಅಭಿವೃದ್ಧಿ ಆಗಲಿ ಎಂದು ತನ್ನ ಜೇಬಿನಲ್ಲಿದ್ದ ಎಲ್ಲಾ ಹಣ ನೀಡಿದರು.

    ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ಅಂಬೇಡ್ಕರ ನಗರದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗೆ ಕುಡಚಿ ಶಾಸಕ ಪಿ ರಾಜೀವ್ ಭೇಟಿ ನೀಡಿದ್ದರು. ಖಾಸಗಿ ಶಾಲೆಗಳನ್ನು ಮೀರಿಸುವ ಮಟ್ಟದಲ್ಲಿ ಅಭಿವೃದ್ಧಿ ಆಗಿರುವ ಈ ಶಾಲೆಯನ್ನ ಕಂಡು ಸಂತಸಗೊಂಡ ರಾಜೀವ್ ಅವರು ತನ್ನ ಜೇಬಿನಲ್ಲಿದ್ದ 18 ಸಾವಿರ ರೂ. ಅನ್ನು ಶಾಲೆ ಅಭಿವೃದ್ಧಿಗಾಗಿ ಶಿಕ್ಷಕರಿಗೆ ನೀಡಿದರು.

    ಇದೇ ವೇಳೆ ಶಾಲೆ ಅನುದಾನಕ್ಕೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದರು. ನಿಡಗುಂದಿ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿ ಖಾಸಗಿ ಶಾಲೆಗಳಂತೆ ಡಿಜಿಟಲ್ ಕ್ಲಾಸ್ ರೂಮ್ ಹಾಗೂ ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಇಂಗ್ಲಿಷ್ ಭಾಷೆಯಲ್ಲಿ ಪ್ರಾವಿಣ್ಯರನ್ನಾಗಿ ಮಾಡುತ್ತಿರುವ ಶಾಲಾ ಮುಖ್ಯೋಪಾಧ್ಯಯ ವೀರಣ್ಣಾ ಮಡಿವಾಳರ ಅವರನ್ನ ಶಾಸಕರು ಹಾಡಿ ಹೊಗಳಿದರು. ಜೊತೆಗೆ ನಿಮ್ಮ ಈ ಸಾರ್ಥಕ ಸೇವೆ ಮುಂದುವರಿಯಲಿ ಎಂದು ಆಶಿಸಿದರು.

  • ನಮ್ಮ ಕೈಲಿ ಆಗ್ಲಿಲ್ಲ, ಆ ಪುಣ್ಯಾತ್ಮ ಮಂಡ್ಯ ಅಭಿವೃದ್ಧಿ ಮಾಡಲಿ – ಎಚ್‍ಡಿಕೆ ವ್ಯಂಗ್ಯ

    ನಮ್ಮ ಕೈಲಿ ಆಗ್ಲಿಲ್ಲ, ಆ ಪುಣ್ಯಾತ್ಮ ಮಂಡ್ಯ ಅಭಿವೃದ್ಧಿ ಮಾಡಲಿ – ಎಚ್‍ಡಿಕೆ ವ್ಯಂಗ್ಯ

    ಮೈಸೂರು: ನಮ್ಮ ಕೈಲಿ ಆಗಲಿಲ್ಲ ಆ ಪುಣ್ಯಾತ್ಮ ಮಂಡ್ಯ ಅಭಿವೃದ್ಧಿ ಮಾಡಲಿ ಎಂದು ಹೇಳುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ನಾರಾಯಣ ಗೌಡ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ಎಚ್‍ಡಿ ಕೋಟೆಯಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಅವರು, ಈ ಸರ್ಕಾರದಲ್ಲಿ ಮಧ್ಯಾಹ್ನಕ್ಕೊಂದು ಸಂಜೆಗೊಂದು ತೀರ್ಮಾನ ಆಗುತ್ತಿದೆ. ಮುಂದೆ ಏನಾಗಲಿದೆ ಎಂಬುದನ್ನ ಕಾದು ನೋಡೋಣ. ಯಡಿಯೂರಪ್ಪನವರು ಸರ್ಕಾರ ಹೇಗೆ ಉಳಿಸಿ ಕೊಳ್ಳಬೇಕೆಂಬುದರಲ್ಲಿ ತಜ್ಞರಿದ್ದಾರೆ. ಸರ್ಕಾರ ಬಿಳಿಸೋದು ಹಾಗೂ ಸರ್ಕಾರ ರಚಿಸೋದು ಅವರಿಗೆ ಕರಗತ ಆಗಿದೆ. ಆ ಅನುಭವದಲ್ಲಿ ಈ ಸರ್ಕಾರ ಉಳಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ನನಗೆ ಇದೆ ಎಂದು ಹೇಳಿದರು.

    ಸರ್ಕಾರ ಎಷ್ಟು ದಿನ ಇರುತ್ತೆ ಅಂತ ಹೇಳೋಕೆ ನಾನು ಭವಿಷ್ಯಕಾರನಲ್ಲ. ಆದರೆ ಇಂದಿನ ಕಾರ್ಯಕ್ರಮಕ್ಕೆ ನನಗೆ ಯಾವುದೇ ಆಹ್ವಾನ ಬಂದಿಲ್ಲ ಹಾಗಾಗಿ ಪೂರ್ವ ನಿಯೋಜಿತ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದೇನೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಬಹಳ ಕಷ್ಟ ಪಟ್ಟು, ಆಸೆ ಹೊತ್ತು ಮಂತ್ರಿಗಳಾಗಿದ್ದಾರೆ. ಅವರಿಂದ ನಾನು ಒಳ್ಳೆಯ ಆಡಳಿತ ನಿರೀಕ್ಷೆ ಮಾಡುತ್ತೇನೆ ಎಂದು ತಿಳಿಸಿದರು.

    ಮಂಡ್ಯದಲ್ಲಿ ನಾರಾಯಣಗೌಡ ಅಭಿವೃದ್ಧಿ ಮಾಡಿ ತೋರಿಸಲಿ. ನಮ್ ಕೈಯಲ್ಲಂತು ಆಗಲಿಲ್ಲ ಆ ಪುಣ್ಯಾತ್ಮ ಮಾಡಲಿ. ಹೊಸ ಸಚಿವರು ಟೀಕೆ ಮಾಡುತ್ತಾರೋ ಅಭಿವೃದ್ಧಿ ಮಾಡುತ್ತಾರೋ ಕಾದು ನೋಡೋಣ. ನಮ್ಮ ಪಕ್ಷಗಳಿಂದ ಹೊರ ಹೋದ ಶಾಸಕರಿಗೆ ತೃಪ್ತಿ ಆಗಿದೆ. ಅವರು ಇದೀಗಾ ಸಂಪತ್ಭರಿತರಾಗಿದ್ದಾರೆಂದು ನೂತನ ಸಚಿವರಿಗೆ ಎಚ್‍ಡಿಕೆ ವ್ಯಂಗ್ಯವಾಡಿ ಶುಭಾಶಯ ಕೋರಿದ್ದಾರೆ.

  • ಸುಂದರ, ಸ್ವಸ್ಥ ಬೆಂಗಳೂರು ನಿರ್ಮಾಣಕ್ಕೆ ನಮ್ಮ ಆದ್ಯತೆ: ಡಾ. ಅಶ್ವತ್ಥನಾರಾಯಣ್

    ಸುಂದರ, ಸ್ವಸ್ಥ ಬೆಂಗಳೂರು ನಿರ್ಮಾಣಕ್ಕೆ ನಮ್ಮ ಆದ್ಯತೆ: ಡಾ. ಅಶ್ವತ್ಥನಾರಾಯಣ್

    ಬೆಂಗಳೂರು: ಸುಂದರ ಮತ್ತು ಸ್ವಸ್ಥ ನಗರಕ್ಕಾಗಿ ನೂತನ ಪಾರ್ಕಿಂಗ್ ನೀತಿ, ಹಳೆ ವಾಹನಗಳ ಸ್ಕ್ರ್ಯಾಪ್ ಯಾರ್ಡ್, ಎಲ್ಲ ರಸ್ತೆಗಳಲ್ಲೂ ಕಡ್ಡಾಯ ಬೀದಿ ದೀಪ ಮತ್ತು ಉತ್ತಮ ಪಾದಚಾರಿ ರಸ್ತೆ ನಿರ್ಮಾಣ ಮಾಡವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಬೆಂಗಳೂರು ಅಭಿವೃದ್ಧಿ ಕುರಿತ ಬಜೆಟ್ ಪೂರ್ವ ಸಭೆಯಲ್ಲಿ ಚರ್ಚಿಸಲಾಯಿತು.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2020-21ನೇ ಸಾಲಿನ ಬಜೆಟ್ ಸಿದ್ಧಪಡಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದು, ಅದಕ್ಕೆ ಪೂರಕವಾಗಿ ಬೆಂಗಳೂರು ನಗರದ ಅಭಿವೃದ್ಧಿ ಸಂಬಂಧ ಬಜೆಟ್ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತಾವನೆಗಳನ್ನು ಸಿದ್ಧಪಡಿಸುವುದರ ಜತೆಗೆ ನಗರದಲ್ಲಿ ಆದಾಯ ಸಂಗ್ರಹಣೆ ಹೆಚ್ಚಿಸಲು ಕೈಗೊಳ್ಳಬಹುದಾದ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಗಿದೆ.

    ಬೆಂಗಳೂರು ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ಮಾಣ, ಬೃಹತ್ ನೀರುಗಾಲುವೆ ಅಭಿವೃದ್ಧಿ/ನವೀಕರಣ, ಸಂಚಾರ ವ್ಯವಸ್ಥೆ ಸುಧಾರಣೆ, ಸಮಗ್ರ ಟ್ರಾಫಿಕ್ ನಿರ್ವಹಣೆಗೆ ಏಕೀಕೃತ ನಿಯಂತ್ರಣ ಕೇಂದ್ರ, ಘನ ತ್ಯಾಜ್ಯ ನಿರ್ವಹಣೆ, ಕೆರೆಗಳ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಪೂರಕ ಯೋಜನೆಗಳಿಗೆ ಅನುದಾನ ಕೋರಲು ಸಭೆಯಲ್ಲಿ ನಿರ್ಧರಿಸಲಾಗಿದೆ.

    ಬಹು ಹಂತದ ಕಾರ್ ಪಾರ್ಕಿಂಗ್ ಮತ್ತು ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನೊಳಗೊಂಡ ಪಾರ್ಕಿಂಗ್ ನೀತಿ ಜಾರಿ ಹಾಗೂ ಹಳೆಯ ವಾಹನಗಳ ಸ್ಕ್ರ್ಯಾಪ್ ಯಾರ್ಡ್ ನಿರ್ಮಿಸುವ ಯೋಜನೆ ಬಗ್ಗೆ ಚರ್ಚೆಯಾಗಿದೆ. ನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಶಿಸ್ತು ಬದ್ಧ ಕ್ರಮ ಕೈಗೊಳ್ಳಲು ಬಜೆಟ್‍ನಲ್ಲಿ ಅನುದಾನ ಕೇಳಲಾಗುವುದು ಎಂದು ಡಾ. ಅಶ್ವತ್ಥನಾರಾಯಣ್ ತಿಳಿಸಿದ್ದಾರೆ.

    ಮುಂದಿನ 3 ವರ್ಷಗಳಲ್ಲಿ 1200 ಕಿ.ಮೀ. ಪಾದಚಾರಿ ರಸ್ತೆ ಅಭಿವೃದ್ಧಿ ಪಡಿಸಲಾಗುವುದು. ಪಾದಚಾರಿ ರಸ್ತೆಯ ಒತ್ತುವರಿಯನ್ನು ಕಿಂಚಿತ್ತೂ ಸಹಿಸಿಕೊಳ್ಳುವುದಿಲ್ಲ. ಅದೇ ರೀತಿ ಬೀದಿ ದೀಪಗಳನ್ನು ಕಡ್ಡಾಯವಾಗಿ ಅಳವಡಿಸಿ ಅದರ ಸೂಕ್ತ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುವುದು. ರಸ್ತೆ ಬದಿಯ ಮರಗಳನ್ನು ಅಂದವಾಗಿ ಕತ್ತರಿಸಿ ನಗರ ಸುಂದರೀಕರಣಕ್ಕೆ ಆದ್ಯತೆ ನಿಡಲಾಗುವುದು. ಇದಲ್ಲದೇ ನಗರ 9 ಕಡೆಗಳಲ್ಲಿ ವಿದ್ಯುತ್ ಚಿತಾಗಾರ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

    ಆದಾಯ ಹೆಚ್ಚಳಕ್ಕೆ ಕ್ರಮ
    1. ಮುಂಬೈ ಮಾದರಿಯಲ್ಲಿ ನಗರದಲ್ಲೂ 24*7 ಶಾಪಿಂಗ್ ನಡೆಸಲು ಅವಕಾಶ ಕಲ್ಪಿಸುವ ಬಗ್ಗೆ ಚಿಂತನೆ ನಡೆದಿದ್ದು, ವಸತಿಯೇತರ ಪ್ರದೇಶಗಳಲ್ಲಿ ಮತ್ತು ಮದ್ಯ ಪೂರೈಕೆ ಮಾಡದ ಮಳಿಗೆಗಳಲ್ಲಿ ಮಾತ್ರ 24*7 ವಹಿವಾಟು ನಡೆಸಲು ಅವಕಾಶ
    2. ಕೇಂದ್ರ ಸರ್ಕಾರ ಅನುಮೂದಿಸಿರುವ ಶಾಪ್ಸ್ ಅಂಡ್ ಎಸ್ಟಾಬ್ಲಿಷ್‍ಮೆಂಟ್ ಕಾಯ್ದೆ ಅನುಷ್ಠಾನದ ಮೂಲಕ ಬೆಂಗಳೂರು ಮಹಾನಗರ ಪಾಲಿಕೆಯ ಆದಾಯ ಹೆಚ್ಚಳಕ್ಕೆ ಕ್ರಮ.
    3. ಸಾರಿಗೆ ಆಧಾರಿತ ಅಭಿವೃದ್ಧಿ ನೀತಿ (ಟಿಓಡಿ)ಯನ್ನು ಬಿಎಂಆರ್‌ಸಿಎಲ್ ಜಾಲ ಹಾಗೂ ಬಿಎಂಟಿಸಿ ನಿಲ್ದಾಣಗಳ ಬಳಿ ಅನುಷ್ಠಾನಗೊಳಿಸುವ ಮೂಲಕ ಮೂಲಸೌಕರ್ಯ ಯೋಜನೆಗಳಿಗೆ ಬಂಡವಾಳ ಆಕರ್ಷಣೆ.

    ಪ್ರಮುಖ ಪ್ರಸ್ತಾವನೆಗಳು
    *ಬೆಂಗಳೂರು ಟ್ರಾನ್ಸಿಟ್ ಚಾಲೆಂಜ್ ಫಂಡ್ ಪ್ರಸ್ತಾವನೆಗೆ 50 ಕೋಟಿ ರೂ. ಬೇಡಿಕೆ
    *ಬೆಂಗಳೂರಿನಲ್ಲಿ ಗಾಳಿ ಗುಣಮಟ್ಟ ನಿಗಾ ಕೇಂದ್ರಗಳ ಸಂಖ್ಯೆ ದ್ವಿಗುಣಗೊಳಿಸಲು 52.5 ಕೋಟಿ ರೂ. ಬೇಡಿಕೆ
    *ಬಿಬಿಎಂಪಿ ವ್ಯಾಪ್ತಿಯ ಉದ್ಯಾನವನಗಳನ್ನು ಅರಣ್ಯೀಕರಣ ಮಾಡಿ, ನಗರದ ಸೌಂದರ್ಯ ಹೆಚ್ಚಿಸುವ ಜತೆಗೆ ವಾಯು ಮಾಲಿನ್ಯ ನಿಯಂತ್ರಿಸಲು ಸಾಧ್ಯ. ಅದಕ್ಕಾಗಿ 300 ಕೋಟಿ ರೂ. ಅನುದಾನಕ್ಕೆ ಮನವಿ
    *ಪಾಲಿಕೆ ವ್ಯಾಪ್ತಿಯಲ್ಲಿ ಕ್ರೀಡಾ ಮೂಲಭೂತ ಸೌಕರ್ಯಕ್ಕೆ 250 ಕೋಟಿ ರೂ. ಅನುದಾನಕ್ಕೆ ಮನವಿ

    ಬೆಂಗಳೂರು ನಗರದ ಅಭಿವೃದ್ಧಿಗೆ ಕೈಗೊಳ್ಳಬಹುದಾದ ಯೋಜನೆಗಳ ಕುರಿತು ಉಪಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥನಾರಾಯಣ್ ಅವರ ನೇತೃತ್ವದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಶಾಸಕರಾದ ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜು, ಎಸ್.ಆರ್.ವಿಶ್ವನಾಥ್, ಗೋಪಾಲಯ್ಯ, ಕೃಷ್ಣಪ್ಪ, ರಘು ಸೇರಿದಂತೆ ನಗರದ ಬಿಜೆಪಿ ಶಾಸಕರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

  • ಗ್ರಾಮ ದತ್ತು ಪಡೆದ ಸಿನಿಮಾ ತಂಡ

    ಗ್ರಾಮ ದತ್ತು ಪಡೆದ ಸಿನಿಮಾ ತಂಡ

    ಬಾಗಲಕೋಟೆ: ಸಿನಿಮಾ ತಂಡವೊಂದು ಜಿಲ್ಲೆಯ ಬಾದಾಮಿ ತಾಲೂಕಿನ ಕರ್ಲಕೊಪ್ಪ ಗ್ರಾಮವನ್ನು ದತ್ತು ಪಡೆದುಕೊಂಡು ಮಾದರಿಯನ್ನಾಗಿ ಮಾಡಲು ಮುಂದಾಗಿದೆ.

    ‘ಥರ್ಡ್ ಕ್ಲಾಸ್’ ಸಿನಿಮಾದ ನಾಯಕ ಜಗದೀಶ್ ಗ್ರಾಮವನ್ನು ದತ್ತು ಪಡೆದುಕೊಂಡಿದ್ದಾರೆ. ಇವರಿಗೆ ಸಿನಿಮಾ ತಂಡ ಕೂಡ ಸಾಥ್ ನೀಡಿದೆ. ಇತ್ತೀಚೆಗೆ ಮಲ್ಲಪ್ರಭಾ ನದಿಯ ಪ್ರವಾಹದಿಂದ ಹಾನಿಯಾಗಿದ್ದ ಕರ್ಲಕೊಪ್ಪ ಗ್ರಾಮದಲ್ಲಿ ಶಾಲೆಯ ಕಟ್ಟಡ ಸೇರಿದಂತೆ, ರಸ್ತೆ ಅಭಿವೃದ್ಧಿ ಹಾಗೂ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲು ಈ ಸಿನಿಮಾ ತಂಡ ಮುಂದಾಗಿದೆ.

    ಈ ಹಿನ್ನೆಲೆಯಲ್ಲಿ ಬಾಗಲಕೋಟೆ ನಗರಕ್ಕೆ ಸಿನಿಮಾ ಪ್ರಚಾರಕ್ಕೆ ಆಗಮಿಸಿದ ಚಿತ್ರದ ನಾಯಕ ನಮ್ಮ ಜಗದೀಶ್ ಹಾಗೂ ನಟಿ ರೂಪಿಕಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪ್ರವಾಹದಿಂದ ಹಾನಿಯಾದ ಮಕ್ಕಳಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡುತ್ತೇವೆ. ಸಿನಿಮಾ ತಂಡ ಗ್ರಾಮ ವಾಸ್ತವ್ಯ ಮಾಡಿ, ಜಾಗೃತಿ ಮೂಡಿಸುವ ಜೊತೆಗೆ ವಿವಿಧ ಬಗೆಯ ಅಭಿವೃದ್ಧಿ ಕಾರ್ಯಗಳಿಂದ ಸಮಾಜ ಸುಧಾರಣೆ ಮಾಡಲು ಮುಂದಾಗಿದ್ದಾರೆ.

  • ಖಾಸಗಿ ಶಾಲೆಯನ್ನೇ ಮೀರಿಸುವಂತಿದೆ ಸರ್ಕಾರಿ ಶಾಲೆ – ಶಿಕ್ಷಕನ ಪರಿಶ್ರಮಕ್ಕೆ ಗ್ರಾಮಸ್ಥರು ಫಿದಾ

    ಖಾಸಗಿ ಶಾಲೆಯನ್ನೇ ಮೀರಿಸುವಂತಿದೆ ಸರ್ಕಾರಿ ಶಾಲೆ – ಶಿಕ್ಷಕನ ಪರಿಶ್ರಮಕ್ಕೆ ಗ್ರಾಮಸ್ಥರು ಫಿದಾ

    ಚಿತ್ರದುರ್ಗ: ಸರ್ಕಾರಿ ಶಾಲೆ ಅಂದರೆ ಮೂಗು ಮುರಿಯೋರೇ ಹೆಚ್ಚು. ಆದರೆ ಸರ್ಕಾರಿ ಶಾಲೆಯು ಸಹ ಖಾಸಗಿ ಶಾಲೆಗಳಿಗಿಂತ ಕಮ್ಮಿ ಏನಿಲ್ಲ ಎಂಬುದನ್ನು ಸಾಭೀತು ಮಾಡಲು ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಅಜ್ಜನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ಮಂಜಪ್ಪ ಮುಂದಾಗಿದ್ದಾರೆ.

    ಚಿತ್ರಕಲೆ ಪ್ರಾವಿಣ್ಯತೆ ಹೊಂದಿರುವ ಚಳ್ಳಕೆರೆಯ ಕಲಾವಿದರನ್ನು ಕರೆಸಿ, ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಸುಲಭವಾಗಿ ಪಾಠ ಪ್ರವಚನ ಅರ್ಥವಾಗುವಂತೆ ಗೋಡೆಯ ಮೇಲೆ ಬಣ್ಣ ಬಣ್ಣದ ಸುಂಧರ ಚಿತ್ತಾರಗಳನ್ನು ಅರಳಿಸಿರುವ ಕಾರ್ಯವನ್ನು ಮಾಡುತ್ತಿದ್ದಾರೆ. ಅಜ್ಜನಹಳ್ಳಿಯ ಸರ್ಕಾರಿ ಶಾಲೆಯ ನಲಿ-ಕಲಿ ಕೊಠಡಿ ಮತ್ತು ಕಲಿಕೆಯ ಪಯಣಕ್ಕೆ ಸಿದ್ಧತೆಗೊಂಡಿರುವ ಚಿಣ್ಣರ ಎಕ್ಸ್ ಪ್ರೆಸ್ ರೈಲು ಅನಾವರಣಗೊಂಡಿದೆ.

    ಸತತ 4-5 ವರ್ಷಗಳಿಂದ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ಎಸ್.ಡಿ.ಎಮ್.ಸಿ.ಮತ್ತು ಸಮುದಾಯದ ಸಹಭಾಗಿತ್ವದಲ್ಲಿ ವನ ಮಹೋತ್ಸವ ಕಾರ್ಯಕ್ರಮದ ಮೂಲಕ 150*130 ಅಡಿ ವಿಸ್ತೀರ್ಣವನ್ನು ಹೊಂದಿರುವ ವಿಶಾಲವಾದ ಶಾಲಾ ಮೈದಾನದಲ್ಲಿ ಕೊಠಡಿಗಳನ್ನು ಹೊರತುಪಡಿಸಿ ಉಳಿದಿರುವ ಮೈದಾನದ ತುಂಬೆಲ್ಲಾ ವಿವಿಧ ಜಾತಿಯ ಸುಮಾರು 160 ಕ್ಕೂ ಹೆಚ್ಚು ಸಸಿಗಳನ್ನು ಸಾಲು ಸಾಲಾಗಿ ನೆಟ್ಟು ಪೋಷಿಸಿಲಾಗುತ್ತಿದೆ. ಈಗ ಶಾಲಾ ಆವರಣದಲ್ಲಿರುವ ಎಲ್ಲಾ ಸಸಿಗಳು ಬೆಳೆದು ಬೃಹತ್ ಮರಗಳಾಗಿವೆ. ಸದ್ಯ ಬರದ ನಾಡಿನಲ್ಲಿ ಈ ಶಾಲಾ ಪರಿಸರ ಒಂದು ಸುಂದರ ವನವಂತಾಗಿದೆ.

    ಶಾಲೆಯ ಅಭಿವೃದ್ಧಿ ಹಾಗೂ ಕಾರ್ಯ ಚಟುವಟಿಕೆಗಳನ್ನು ಕೆಲವೊಮ್ಮೆ ರಜಾದಿನಗಳಲ್ಲೂ ನಿಸ್ವಾರ್ಥದಿಂದ ಮಾಡುತ್ತಾ ಬಂದಿದ್ದಾರೆ. ಈ ಸಂಬಂಧ ಶಿಕ್ಷಕ ಮಂಜಪ್ಪನವರ ಕುಟುಂಬದ ಸದಸ್ಯರು ಅವರೊಂದಿಗೆ ಮುನಿಸಿಕೊಂಡಿದ್ದುಂಟು. ಆದರೂ, ಸಹ ಅವರ ವೈಯುಕ್ತಿಕ ಕೆಲಸಗಳನ್ನೂ ಬದಿಗಿಟ್ಟು ಶಾಲೆಯ ಆವರಣದಲ್ಲಿ ಸುಂದರ ಪರಿಸರ ನಿರ್ಮಾಣ ಮಾಡುವಲ್ಲಿ ಶಿಕ್ಷಕರು ಮಾಡಿರುವ ಸೇವೆಗೆ ಗ್ರಾಮಸ್ಥರು ಫುಲ್ ಫಿದಾ ಆಗಿದ್ದಾರೆ.

    ಸತತ 10 ವರ್ಷಗಳಿಂದ ತಮ್ಮ ಛಲ ಬಿಡದೆ ಮಾಡಿದ ಶ್ರಮ ಶಾಲೆಯ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿದೆ. ಇದು ಶಿಕ್ಷಕರಿಗೆ ತೃಪ್ತಿ ಮತ್ತು ಸಮಾಧಾನ ತಂದಿದೆ. ಹೀಗಾಗಿ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಾ ಖಾಸಗಿ ಶಾಲೆಯನ್ನೇ ಮೀರಿಸುವಂತಿರುವ ಸರ್ಕಾರಿ ಶಾಲೆಯಲ್ಲಿ ಇರುವ ಇವರೊಬ್ಬರೇ ಶಿಕ್ಷಕರು ಇಷ್ಟೆಲ್ಲಾ ಸೇವೆ ಮಾಡುತ್ತಿದ್ದಾರೆ.

    ಸಾಧನೆಯ ಗುರಿಯೆಂಬುದು ಅನಂತ ಮತ್ತು ಅಪರಿಮಿತ ಎಂಬಂತೆ ಶಿಕ್ಷಕ ಮಂಜಪ್ಪ ಅವರು, ಸದರಿ ಶಾಲೆಯ 10 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ ನಿಸ್ವಾರ್ಥ, ಪ್ರಾಮಾಣಿಕ ಸೇವೆ ಮಾಡಿದ್ದಾರೆ. ಈ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿರುವ, ಉತ್ತಮ ವಾತಾವರಣವನ್ನು ಕಲ್ಪಿಸಿರುವ ಹಾಗೂ ನಿರಂತರ ಪ್ರೋತ್ಸಾಹ, ಸಹಕಾರವನ್ನು ನೀಡುತ್ತಿರುವ ಗ್ರಾಮದ ಹಳೆಯ ವಿದ್ಯಾರ್ಥಿಗಳು, ಶಾಲಾ ಎಸ್.ಡಿ.ಎಂ.ಸಿ. ಸಮುದಾಯ ವರ್ಗದವರಿಗೆ ಹಾಗೂ ಸದಾ ಎಲ್ಲಾ ಕಾರ್ಯಗಳಲ್ಲೂ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಸಹೋದ್ಯೋಗಿಗಳಿಗೆ ಧನ್ಯವಾದ ಹೇಳಿದ್ದಾರೆ.

  • ದಕ್ಷಿಣಕಾಶಿ ಶಿವಗಂಗೆ ದೇವಾಲಯದ ಅಭಿವೃದ್ಧಿ ನನ್ನ ಆದ್ಯತೆ: ಎಸ್.ಟಿ ಸಿದ್ದರಾಜು

    ದಕ್ಷಿಣಕಾಶಿ ಶಿವಗಂಗೆ ದೇವಾಲಯದ ಅಭಿವೃದ್ಧಿ ನನ್ನ ಆದ್ಯತೆ: ಎಸ್.ಟಿ ಸಿದ್ದರಾಜು

    ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶ್ರೀ ಕ್ಷೇತ್ರ, ಚಾರಣಿಗರ ಸ್ವರ್ಗ, ದಕ್ಷಿಣಕಾಶಿ ಶಿವಗಂಗೆ ದೇವಾಲಯದ ಅಭಿವೃದ್ಧಿ ಸಮಿತಿ ಹಾಗೂ ಕಾರ್ಯಕ್ರಮ ಅನುಷ್ಠಾನಕ್ಕೆ ನೂತನ ಅಧ್ಯಕ್ಷರಾಗಿ ಎಸ್.ಟಿ ಸಿದ್ದರಾಜು ಆಯ್ಕೆಯಾಗಿದ್ದಾರೆ ಎಂದು ಉಪತಹಶೀಲ್ದಾರ್ ಜುಂಜೇಗೌಡ ಘೋಷಣೆ ಮಾಡಿದರು.

    ಶಿವಗಂಗೆ ಬೆಟ್ಟದ ಶ್ರೀ ಹೊನ್ನಾದೇವಿ ಗಂಗಾಧರೇಶ್ವರ ಸ್ವಾಮಿ ದಾಸೋಹ ಭವನದ ಸಭಾಂಗಣದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಕಳೆದ ಸಾಲಿನಲ್ಲಿ ಅಧ್ಯಕ್ಷರಾಗಿದ್ದ ರೇಣುಕೇಶ್ವರ್ ಸ್ವ ನಿರ್ಧಾರದಿಂದ ಅಧ್ಯಕ್ಷ ಸ್ಥಾನ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ, ಸಭೆಯ ಒಮ್ಮತ ತೀರ್ಮಾನದಂತೆ ಸಿದ್ದರಾಜುರನ್ನು ಆಯ್ಕೆ ಮಾಡಿದರು.

    ನಂತರ ಮಾತನಾಡಿದ ನೂತನ ಅಧ್ಯಕ್ಷ ಸಿದ್ದರಾಜು, ಮೂರು ವರ್ಷಗಳ ಅವಧಿಗೆ, ಮೂರು ಜನರ ಮಧ್ಯೆ ಹೊಂದಾಣಿಕೆ ಸೂತ್ರವನ್ನು ಅನುಸರಿಸಿ ಇಂದು ನಾನು ಅಧಿಕಾರ ಸ್ವೀಕರಿಸಿದ್ದೇನೆ. ಶ್ರೀಗಂಗಾಧರೇಶ್ವರ ಸ್ವಾಮಿ ಗಿರಿಜಾ ಕಲ್ಯಾಣೋತ್ಸವಕ್ಕೆ ಇನ್ನೂ 15 ದಿನಗಳು ಬಾಕಿ ಉಳಿದಿರುವ ದಿನದಲ್ಲಿ, ದಾಸೋಹ ವ್ಯವಸ್ಥೆ, ಮೆಟ್ಟಿಲು ನಿರ್ಮಾಣ, ಜೊತೆಗೆ ದೇವಾಲಯದ ಆಡಳಿತ ಮಂಡಳಿಯಲ್ಲಿರುವ 11 ಲಕ್ಷ ಹಿಂಡಿಗಂಟ್ಟು ಹಾಗೂ 25 ಲಕ್ಷ ಸಾಲದ ಮೊತ್ತದ ನಿಯಂತ್ರಣ, ಆದಾಯ ಮೂಲ ಹೆಚ್ಚಿಸುವುದು ಮತ್ತು ವಿವಿಧ ಸಂಘಸಂಸ್ಥೆ ಹಾಗೂ ಅರಣ್ಯ ಇಲಾಖೆ ನೆಟ್ಟಿರುವ ಗಿಡಗಳ ಪೋಷಣೆ ಹಾಗೂ ಸ್ವಚ್ಚತೆ ಬಗ್ಗೆ ಗಮನ ಹರಿಸುವೇ, ಪ್ರವಾಸೋದ್ಯಮ ಇಲಾಖೆಯ ಗಮನಕ್ಕೆ ತಂದು ಹೆಚ್ಚಿನ ಅಭಿವೃದ್ಧಿ ಮಾಡುತ್ತೇವೆ ಎಂದರು.

    ಈ ವೇಳೆಯಲ್ಲಿ ದೇವಾಲಯದ ಸಿಇಓ ಚಂದ್ರಶೇಖರ್, ಗ್ರಾಮ ಪಂಚಾಯ್ತಿ ಅಧ್ಯಕ್ಷ ಹನುಮಂತರಾಯಪ್ಪ, ದೇವಾಲಯ ಅಭಿವೃದ್ಧಿ ಸಮಿತಿ ಸದಸ್ಯರಾದ ಬರಗೇನಹಳ್ಳಿ ರಾಜಣ್ಣ, ಶಿವರಾಂ, ಯಡಿಯೂರಾಪ್ಪ, ರಾಜು ದೀಕ್ಷಿತ್, ಮಂಗಳಾ, ಸಿದ್ದಗಂಗಮ್ಮ, ರೇಣುಕೇಶ್ವರ್, ಮುಖಂಡರಾದ ಆಂಜನಮೂರ್ತಿ, ದಿನೇಶ್, ನಟರಾಜು, ರೇಣುಕಪ್ರಸಾದ್, ಇನ್ನೀತರರಿದ್ದರು.

  • ಕೆರೆಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಸಿದ್ಧ: ವಿಶ್ವನಾಥ್ ಭರವಸೆ

    ಕೆರೆಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಸಿದ್ಧ: ವಿಶ್ವನಾಥ್ ಭರವಸೆ

    ನೆಲಮಂಗಲ: ಬೆಂಗಳೂರಿನ ಕೊಳಚೆ ನೀರು ಗ್ರಾಮೀಣ ಭಾಗದ ಕೆರೆಗಳಿಗೆ ಹರಿದು ಬರದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಸ್.ಆರ್ ವಿಶ್ವನಾಥ್ ತಿಳಿಸಿದ್ದಾರೆ.

    ದಾಸನಪುರ ಹೋಬಳಿಯ ಕಾಚೋಹಳ್ಳಿ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಲುಷಿತ ನೀರು ಸೇರದಂತೆ ಮೂರು ಕೆರೆಗಳನ್ನು ಅಭಿವೃದ್ಧಿಪಡಿಸಲು ಮುಖ್ಯಮಂತ್ರಿಗಳು ವಿಶೇಷ ಅನುದಾನ ನೀಡಿದ್ದಾರೆ. ನಗರದಿಂದ ಯಥೇಚ್ಛವಾಗಿ ಕೊಳಚೆ ನೀರು ಹರಿದು ಬರುತ್ತಿರುವ ಪರಿಣಾಮ ಯಲಹಂಕ ಕ್ಷೇತ್ರ ವ್ಯಾಪ್ತಿಯ ಕಾಚೋಹಳ್ಳಿ, ಮಾಚೋಹಳ್ಳಿ ಹಾಗೂ ಗಂಗೊಂಡನಹಳ್ಳಿ ಕೆರೆಗಳು ಮಲಿನಗೊಂಡಿದ್ದು ಪುನರುಜ್ಜೀವನಗೊಳಿಸಲು ಪ್ರತಿ ಕೆರೆಯ ಅಭಿವೃದ್ಧಿಗೆ ತಲಾ ಎರಡು ಕಾಲು ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.

    ಜಲಮೂಲಗಳ ರಕ್ಷಣೆಗೆ ಬಿಜೆಪಿ ಸರ್ಕಾರ ವಿಶೇಷ ಒತ್ತು ನೀಡಿದ್ದು, ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಶುದ್ಧೀಕರಿಸಿದ ನೀರನ್ನು ಮಾತ್ರ ಹರಿಸುವ ಬೃಹತ್ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

    ಇದೇ ವೇಳೆ ದಾಸನಪುರ ಹೋಬಳಿ ಸೇರಿದಂತೆ ಕ್ಷೇತ್ರದ ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿ ಹಾಗೂ ಗ್ರಾಮಸ್ಥರ ಜೀವನಮಟ್ಟ ಸುಧಾರಣೆಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು. ಕಾಚೋಹಳ್ಳಿ ಹಾಗೂ ಕಿತ್ತನಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ಶುದ್ಧ ನೀರಿನ ಘಟಕ, ಅಂಗನವಾಡಿ ನಿರ್ಮಾಣ ಸೇರಿದಂತೆ ಇಪ್ಪತ್ತೈದು ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

  • ಗ್ರಾಮೀಣ ಪ್ರದೇಶದ ರಸ್ತೆ ದೇಶದ ಅಭಿವೃದ್ಧಿಗೆ ಸೂಚಿಸುತ್ತದೆ: ಶಾಸಕ ಸಿ.ಪುಟ್ಟರಂಗಶೆಟ್ಟಿ

    ಗ್ರಾಮೀಣ ಪ್ರದೇಶದ ರಸ್ತೆ ದೇಶದ ಅಭಿವೃದ್ಧಿಗೆ ಸೂಚಿಸುತ್ತದೆ: ಶಾಸಕ ಸಿ.ಪುಟ್ಟರಂಗಶೆಟ್ಟಿ

    ಚಾಮರಾಜನಗರ: ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳು ಅಭಿವೃದ್ಧಿ ದೇಶದ ಪ್ರಗತಿಯನ್ನು ಸೂಚಿಸುತ್ತಿವೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ವ್ಯಾಖ್ಯಾನಿಸಿದರು.

    ಚಾಮರಾಜನಗರ ತಾಲೂಕಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಎಸ್.ಇ.ಪಿ. ಹಾಗೂ ಟಿ.ಎಸ್.ಪಿ, ಯೋಜನೆಡಿಯಲ್ಲಿ, ಕಾವೇರಿ ನೀರಾವರಿ ನಿಗಮದಿಂದ ಮಲ್ಲಯ್ಯನಪುರ ಗ್ರಾಮದ ಪರಿಶಿಷ್ಟ ಜಾತಿ ಬಡಾವಣೆಯ ಬೀದಿಗೆ ಅಂದಾಜು ಮೊತ್ತ 7 ಲಕ್ಷ ರೂ., ಬಸವಾಪುರ ಗ್ರಾಮದ ಪರಿಶಿಷ್ಟ ಪಂಗಡದ ನಾಯಕರ ಬಡಾವಣೆಯ ಬೀದಿಗೆ 10 ಲಕ್ಷ ರೂ., ಹೊಂಗಲವಾಡಿ ಗ್ರಾಮದ ಪರಿಶಿಷ್ಟ ಜಾತಿ ಕಾಲನಿಗೆ 10 ಲಕ್ಷ ರೂ., ಸಿದ್ದಯ್ಯನಪುರ ಗ್ರಾಮದ ಪರಿಶಿಷ್ಟ ಬಡಾವಣೆಯ ಬೀದಿಗೆ 20 ಲಕ್ಷ ರೂ.ಗಳಲ್ಲಿ ಸಿ.ಸಿ.ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಸಿ.ಪುಟ್ಟರಂಗಶೆಟ್ಟಿ ಭೂಮಿಪೂಜೆ ನೆರವೇರಿಸಿದರು.

    ಭೂಮಿ ಪೂಜೆ ನಂತರ ಮಾತನಾಡಿದ ಅವರು, ತಮ್ಮ ಕ್ಷೇತ್ರ ವ್ಯಾಪ್ತಿಯ ಪ್ರತಿ ಗ್ರಾಮಗಳಿಗೆ ಅಗತ್ಯವಾಗಿ ಬೇಕಾದ ರಸ್ತೆ, ಚರಂಡಿ, ಸಮುದಾಯ ಭವನ, ಕುಡಿಯುವ ನೀರು ಸೇರಿದಂತೆ ಇತರೆ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಲಾಗುತ್ತಿದೆ. ಇಂದು ಪರಿಶಿಷ್ಟ ಜಾತಿ ಬಡಾವಣೆ ಹಾಗೂ ಪರಿಶಿಷ್ಟ ಪಂಗಡದ ಬಡಾವಣೆಗೆಯ ಸಿ.ಸಿ.ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ ಎಂದರು. ಈ ವೇಳೆ ಕಾಮಗಾರಿ ನಿರ್ವಹಿಸುತ್ತಿರುವ ಇಂಜಿನಿಯರ್ ಗುತ್ತಿಗೆದಾರರು ಗುಣಮಟ್ಟದಿಂದ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.