Tag: deve gowda

  • ಸಿದ್ದರಾಮಯ್ಯನವರನ್ನು ಕಟ್ಟಿ ಹಾಕಲು ಎಚ್‍ಡಿಡಿ ಹೊಸ ಸೂತ್ರ

    ಸಿದ್ದರಾಮಯ್ಯನವರನ್ನು ಕಟ್ಟಿ ಹಾಕಲು ಎಚ್‍ಡಿಡಿ ಹೊಸ ಸೂತ್ರ

    ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕಲು ಹೊಸ ತಂತ್ರ ರೂಪಿಸಿದ್ದಾರ ಎನ್ನುವ ಪ್ರಶ್ನೆ ಎದ್ದಿದೆ.

    ಹೌದು. ಜೆಡಿಎಸ್ ಕೋಟಾದಡಿ ಹೆಚ್ ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಸಾಧ್ಯತೆ ಇದೆ. ಈ ಮೂಲಕ ಕುರುಬ ಸಮುದಾಯದ ಮತವನ್ನು ಸೆಳೆಯಲೆಂದೇ ದೇವೇಗೌಡರು ಈ ತಂತ್ರವನ್ನು ಹೂಡಿದ್ದಾರ ಎನ್ನುವ ಪ್ರಶ್ನೆ ಈಗ ರಾಜಕೀಯ ವಲಯದಲ್ಲಿ ಚರ್ಚೆ ಆಗುತ್ತಿದೆ.

    ದೋಸ್ತಿ ಸರ್ಕಾರದಲ್ಲಿ ಕಾಂಗ್ರೆಸ್ಸಿನ ಎಲ್ಲ ಆಗು-ಹೋಗುಗಳನ್ನು ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರು ನಿಭಾಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾಯಕರಲ್ಲಿ ಅಸಮಾಧಾನ ಏರ್ಪಟ್ಟರೆ ಸಿದ್ದರಾಮಯ್ಯ ಸರಿ ಮಾಡುತ್ತಿದ್ದಾರೆ.

    ಸಿದ್ದರಾಮಯ್ಯ ಮತ್ತು ವಿಶ್ವನಾಥ್ ಅವರ ಮಧ್ಯೆ ವೈಮನಸ್ಸು ಈಗಲೂ ಇದೆ ಎನ್ನುವುದು ಇಬ್ಬರು ನೀಡುತ್ತಿರುವ ಹೇಳಿಕೆಯಿಂದ ಗೊತ್ತಾಗುತ್ತಿದೆ. ಲೋಕಸಭೆಯ ಚುನಾವಣೆಯ ಬಳಿಕ ವಿಶ್ವನಾಥ್ ಅವರು ಬಹಿರಂಗವಾಗಿಯೇ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಈ ವಿಚಾರಕ್ಕೆ ಸಿದ್ದರಾಮಯ್ಯ ಜಾಸ್ತಿ ಪ್ರತಿಕ್ರಿಯೆ ನೀಡದೇ ಒಗ್ಗಟ್ಟು ಪ್ರದರ್ಶಿಸಲು ಮುಂದಾಗಿದ್ದರು.

    ಈಗ ಸಂಪುಟದಲ್ಲಿ ಹಳಬರನ್ನು ಕಿತ್ತು ಹಾಕಿ ಹೊಸಬರಿಗೆ ಸ್ಥಾನ ನೀಡಲಾಗುತ್ತಿದ್ದು, ಜೆಡಿಎಸ್ ಪಟ್ಟಿಯಲ್ಲಿ ವಿಶ್ವನಾಥ್ ಅವರ ಹೆಸರು ಇದೆ ಎನ್ನಲಾಗಿದೆ. ಈ ಹಿಂದೆ ವಿಶ್ವನಾಥ್ ಅವರನ್ನು ಸಮನ್ವಯ ಸಮಿತಿಗೂ ಸೇರಿಸುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದರು. ಜೊತೆಗೆ ಸರ್ಕಾರದ ಒಂದು ಭಾಗವಾಗಿ ವಿಶ್ವನಾಥ್ ಇರಬಾರದು ಎಂಬುದು ಸಿದ್ದರಾಮಯ್ಯ ಅವರು ಬೇಡಿಕೆ ಇಟ್ಟಿದ್ದರು ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು. ಆದರೆ ಈಗ ಹೆಚ್.ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಕೊಟ್ಟರೆ ದೋಸ್ತಿ ಸರ್ಕಾರ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎನ್ನುವ ಪ್ರಶ್ನೆ ಎದ್ದಿದೆ.

    ಈ ಹಿಂದೆ ವಿಶ್ವನಾಥ್ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ಮಾಡಿದಾಗ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಲೆಂದೇ ವಿಶ್ವನಾಥ್ ಅವರಿಗೆ ರಾಜ್ಯಾಧ್ಯಕ್ಷರ ಪಟ್ಟವನ್ನು ನೀಡಲಾಗಿದೆ ಎನ್ನುವ ಚರ್ಚೆ ಕೇಳಿ ಬಂದಿತ್ತು.

  • ಪ್ರೀತಮ್‍ಗೌಡ ಈಗ ಪಪ್ಪು ಆಗ್ತಾರಾ – ಹಳೆಯ ಸವಾಲನ್ನು ನೆನಪಿಸಿದ ಪ್ರಜ್ವಲ್

    ಪ್ರೀತಮ್‍ಗೌಡ ಈಗ ಪಪ್ಪು ಆಗ್ತಾರಾ – ಹಳೆಯ ಸವಾಲನ್ನು ನೆನಪಿಸಿದ ಪ್ರಜ್ವಲ್

    ಹಾಸನ: ಶಾಸಕ ಪ್ರೀತಮ್ ಗೌಡ ಅವರು ಈಗ ಪಪ್ಪು ಆಗುತ್ತಾರ ಎಂದು ಹಳೆಯ ಸವಾಲನ್ನು ಮತ್ತೆ ನೆನಪಿಸುವ ಮೂಲಕ ಹಾಸನ ಜಿಲ್ಲೆಯ ನೂತನ ಸಂಸದ ಪ್ರಜ್ವಲ್ ರೇವಣ್ಣ ಟಾಂಗ್ ನೀಡಿದ್ದಾರೆ.

    ಬೇಲೂರು ಚನ್ನಕೇಶವನ ದರ್ಶನ ಪಡೆದು ಮಾತನಾಡಿದ ಪ್ರಜ್ವಲ್ ರೇವಣ್ಣ, ಚುನಾವಣೆಗೂ ಮುನ್ನ ಪ್ರಜ್ವಲ್‍ರನ್ನು ಪ್ರೀತಮ್ ಹಾಸನದ ಪಪ್ಪು ಎಂದಿದ್ದರು. ಇದಕ್ಕೆ ಪ್ರಜ್ವಲ್ ಹಾಸನ ಕ್ಷೇತ್ರದಲ್ಲಿ ಲೀಡ್ ಪಡೆದ ನಂತರ ಯಾರು ಪಪ್ಪು ಎನ್ನುವುದು ಹೇಳುತ್ತೇನೆ ಎಂದು ಸವಾಲ್ ಹಾಕಿದ್ದರು. ಅದರಂತೆ ಈಗ ಹಾಸನ ಕ್ಷೇತ್ರದಲ್ಲಿ 15 ಸಾವಿರ ಲೀಡ್ ಪಡೆದಿರುವ ಪ್ರಜ್ವಲ್ ಪ್ರೀತಮ್ ಗೌಡ ಪಪ್ಪು ಎಂದು ಒಪ್ಪಿಕೊಳ್ಳಬೇಕು ಎಂದು ಸವಾಲನ್ನು ನೆನೆಪಿಸಿದ್ದಾರೆ.

     

    ಇದೇ ವೇಳೆ ರಾಜೀನಾಮೆ ಕುರಿತು ಮಾತನಾಡಿದ ಅವರು, ಸಂಸತ್ ಸ್ಥಾನಕ್ಕೆ ರಾಜೀನಾಮೆ ಕೊಡುವ ತೀರ್ಮಾನಕ್ಕೆ ನಾನು ಬದ್ಧ, ರಾಜ್ಯ ಹಾಗೂ ರೈತರ ಹಿತದೃಷ್ಟಿಯಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ. ಹಾಸನದ ಮಾಜಿ ಪ್ರಧಾನಿ ದೇವೇಗೌಡರೂ ಸೋತರೂ ಅವರ ಶಕ್ತಿ ಕುಗ್ಗಿಲ್ಲ. ಅವರ ಶಕ್ತಿ ನಮ್ಮ ಪಕ್ಷದ ಎಲ್ಲರ ಮೇಲಿದೆ. ಅವರ ಆಶೀರ್ವಾದ ಇದ್ದರೆ ನಾವು ಏನು ಬೇಕಾದರೂ ಜಯಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ದೇವೇಗೌಡರಿಗೆ ಕೇಂದ್ರ ಮಟ್ಟದಲ್ಲಿ ಬಹಳ ದೊಡ್ಡ ಗೌರವವಿದೆ ಇದರಿಂದ ರಾಜ್ಯಕ್ಕೆ ಹಲವು ರೀತಿಯ ಅನುದಾನ ತರಲು ಸಹಕಾರಿಯಾಗುತ್ತದೆ. ಹಾಗಾಗಿಯೇ ರಾಜೀನಾಮೆ ವಿಚಾರವನ್ನು ಅವರ ಮುಂದೆ ಇಟ್ಟು ಬಂದಿದ್ದೇನೆ. ನಾನು ಜೂನ್ 4 ರಂದು ಪ್ರಮಾಣ ವಚನ ಸ್ವೀಕಾರ ಮಾಡುತ್ತೇನೆ. ಆ ನಂತರ ನಾನು ಹಾಗೂ ಜಿಲ್ಲಾ ನಾಯಕರು ಗೌಡರ ಬಳಿ ಹೋಗಿ ರಾಜೀನಾಮೆ ವಿಚಾರದಲ್ಲಿ ಮತ್ತೆ ಒತ್ತಡ ಹಾಕುತ್ತೇವೆ ಎಂದು ಹೇಳಿದ್ದಾರೆ.

    ರಾಜೀನಾಮೆ ಮಾತು ಕೇವಲ ಗಿಮಿಕ್ ಎಂಬ ಎ. ಮಂಜು ಮಾತಿಗೆ ತಿರುಗೇಟು ನೀಡಿದ ಪ್ರಜ್ವಲ್, ಸೋತು ಸುಣ್ಣವಾಗಿರುವವರು ಮನೆಯಲ್ಲಿ ಇರಲಿ. ಅದನ್ನು ಬಿಟ್ಟು ಬಾಯಿಗೆ ಬಂದಂತೆ ಮಾತನಾಡಬಾರದು. ಎಲ್ಲಾ ಅಲೆಯ ನಡುವೆ ನಾವು 1.40 ಲಕ್ಷ ಮತದಿಂದ ಗೆದ್ದಿದ್ದೇವೆ ಎಂದರೆ ಜನರು ನಾವು ಮಾಡಿದ ಅಭಿವೃದ್ಧಿ ಮತ್ತು ಸರ್ಕಾರವನ್ನು ಒಪ್ಪಿದ್ದಾರೆ ಎಂದರ್ಥ ಎಂದು ತಿಳಿಸಿದರು.

  • ಮೈತ್ರಿಯಿಂದ ಎರಡು ಕುಟುಂಬಗಳಿಗೆ ಮಾತ್ರ ಲಾಭ – ಎ.ಮಂಜು

    ಮೈತ್ರಿಯಿಂದ ಎರಡು ಕುಟುಂಬಗಳಿಗೆ ಮಾತ್ರ ಲಾಭ – ಎ.ಮಂಜು

    ಹಾಸನ: ಮೈತ್ರಿಯಿಂದ ಲೋಕಸಭಾ ಚುನಾವಣೆಯಲ್ಲಿ ಎರಡು ಕುಟುಂಬದವರಿಗೆ ಮಾತ್ರ ಲಾಭವಾಗಿದೆ ಎಂದು ಹಾಸನ ಪರಾಚಿತ ಬಿಜೆಪಿ ಅಭ್ಯರ್ಥಿ ಎ.ಮಂಜು ಹೇಳಿದ್ದಾರೆ.

    ಅರಕಲಗೂಡಿನಲ್ಲಿ ಮಾತನಾಡಿದ ಅವರು, ಒಂದು ದೇವೇಗೌಡರ ಮೊಮ್ಮಗ ಪ್ರಜ್ವಲ್‍ನನ್ನು ರಾಜಕೀಯಕ್ಕೆ ತರಲು, ಮತ್ತೊಂದು ಡಿ.ಕೆ.ಶಿವಕುಮಾರ್ ತಮ್ಮನನ್ನು ಗೆಲ್ಲಿಸಲು ಮಾತ್ರ ಈ ಮೈತ್ರಿ ಲಾಭವಾಗಿದೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್‍ಗೆ ಶೂನ್ಯವಾಗಿದೆ. ಚುನಾವಣೆಗೂ ಮುನ್ನವೇ ಮೈತ್ರಿಯಿಂದ ಕಾಂಗ್ರೆಸ್ ನಿರ್ನಾಮವಾಗಲಿದೆ ಎಂದು ನಾನೇ ಭವಿಷ್ಯ ನುಡಿದಿದ್ದೆ. ಅದು ಈಗ ನಿಜವಾಗಿದೆ ಎಂದರು.

    ನೂತನವಾಗಿ ಆಯ್ಕೆಯಾದ ಸಂಸದ ಪ್ರಜ್ವಲ್ ರೇವಣ್ಣ ರಾಜೀನಾಮೆ ನೀಡುವ ಹೇಳಿಕೆಯನ್ನು ಮನಃಪೂರ್ವಕವಾಗಿ ಹೇಳಿಲ್ಲ. ಇದು ನಾಟಕವೋ ಮತ್ತೊಂದೋ ಮುಂದೆ ನೋಡೋಣ. ರಾಜೀನಾಮೆ ಕೊಡುತ್ತೇನೆ ಎಂಬ ಬಗ್ಗೆ ನನಗೆ ಮಾಧ್ಯಮದಲ್ಲಿ ನೋಡಿ ಗೊತ್ತಾಯಿತು. ಅದು ಅವರ ವೈಯಕ್ತಿಕ ವಿಚಾರವಾಗಿದೆ. ದೇವೇಗೌಡರ ಈ ಪರಿಸ್ಥಿತಿಗೆ ಇವರೇ ಕಾರಣರಾಗಿದ್ದಾರೆ. ದೇವೇಗೌಡರು ಹಾಸನದಿಂದ ನಿಲ್ಲಲಿ ಎಂದು ರಾಜಕೀಯ ವಿರೋಧಿಯಾದರೂ ನಾನೇ ಹೇಳಿದ್ದೆ. ಅಂದು ದೇವೇಗೌಡರನ್ನು ಇಲ್ಲಿಂದ ಓಡಿಸಿದ್ದು ಇವರೇ, ಬಹುಶಃ ಇವತ್ತು ಅರಿವಾಗಿದೆ ಅನಿಸುತ್ತಿದೆ ಎಂದರು.

    ದೇವೇಗೌಡರನ್ನ ಇಲ್ಲಿಂದ ತಳ್ಳಿದ್ದರು ಎಂಬ ಅಪವಾದ ಅವರ ಮೇಲಿದೆ. ಈಗ ಭವಾನಿ ರೇವಣ್ಣ ಕಣ್ಣೀರು ಹಾಕಿದ್ದರಂತೆ. ಅವರಿಗೆ ಅವತ್ತು ನಮ್ಮ ಮಾವ ಎಂಬ ಗೌರವ ಇರಲಿಲ್ಲವೆ ಎಂದು ಜನರು ಮಾತನಾಡುತ್ತಿದ್ದಾರೆ. ಅವರ ಮೇಲೆ ಗೌರವ ಇದ್ದಿದ್ದರೆ ಇದೆಲ್ಲವನ್ನು ಮೊದಲೇ ತಿಳಿದುಕೊಳ್ಳಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ದೇವೇಗೌಡರನ್ನು ಹಾಸನದಿಂದ ಇವರೇ ಹೋಗುವ ರೀತಿ ಮಾಡಿದ್ದಾರೆ. ಇದು ಹಾಸನ ಜನರ ಮನಸ್ಸಿನಲ್ಲಿ ಇದೆ ಎಂದು ತಿಳಿದಿದ್ದು, ಇದರಿಂದ ತಪ್ಪಿಸಿಕೊಳ್ಳಲು ಈ ರೀತಿ ಮಾತನಾಡುತ್ತಿದ್ದಾರೆ ಎಂಬುದು ನಮ್ಮ ಅಭಿಪ್ರಾಯವಾಗಿದೆ. ಪ್ರಜ್ವಲ್ ತಮ್ಮ ಹೇಳಿಕೆಯನ್ನ ಮನಃಪೂರ್ವಕವಾಗಿ ಹೇಳಿಲ್ಲ. ಇದು ನಾಟಕವೋ ಮತ್ತೊಂದು ಮುಂದೆ ನೋಡೋಣ ಎಂದು ವ್ಯಂಗ್ಯ ಮಾಡಿದ್ದಾರೆ.

    ದೇವೇಗೌಡರು ರಾಜ್ಯದ ಶಕ್ತಿ ಎಂದು ಈಗ ಅರಿವಾಗಿದೆಯಾ? ದೇವೇಗೌಡರು ಕುಟುಂಬದ ಶಕ್ತಿ ಮಾತ್ರವಾಗಿದ್ದರೂ ಈಗ ಅವರು ಮೈತ್ರಿಗೂ ಶಕ್ತಿಯಾಗಲಿಲ್ಲ. ದೇವೇಗೌಡರು ಗೆಲ್ಲಬೇಕು ಎಂಬ ಆಸೆ ಎಲ್ಲರಿಗೂ ಇದೆ. ಅವರು ಸೋತಿದ್ದು ನಿಜವಾಗಿಯೂ ನನಗೆ ಬೇಸರವಾಗಿದೆ. ಹಾಸನದಲ್ಲಿ ಚುನಾವಣೆ ಗೆದ್ದಿರುವುದು ಜೆಡಿಎಸ್ ಅಲ್ಲ, ಮೈತ್ರಿ ಗೆದ್ದಿದೆ. ಜನರನ್ನ ದಾರಿತಪ್ಪಿಸಲು ಪ್ರಜ್ವಲ್ ರಾಜೀನಾಮೆ ಹೇಳಿಕೆ ನೀಡಿದ್ದಾರೆ ಎಂದು ಮಂಜು ಟೀಕಿಸಿದರು.

  • ತುಮಕೂರಲ್ಲಿ ಫಲಿಸದ ಮೈತ್ರಿ – ದೇವೇಗೌಡರಿಗೆ ಸೋಲು

    ತುಮಕೂರಲ್ಲಿ ಫಲಿಸದ ಮೈತ್ರಿ – ದೇವೇಗೌಡರಿಗೆ ಸೋಲು

    ತುಮಕೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಅಳೆದು-ತೂಗಿ ಕೊನೆಯದಾಗಿ ತುಮಕೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಸ್ಪರ್ಧಿಸಿದ್ದರು. ಆದರೆ ಇಂದಿನ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರು ದೇವೇಗೌಡರ ವಿರುದ್ಧ 12,887 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

    ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು 5,96,231 ಮತಗಳನ್ನು ಪಡೆದಿದ್ದರೆ, ದೇವೇಗೌಡರು 5,83,344 ಮತಗಳನ್ನು ಗಳಿಸಿದ್ದಾರೆ. ಈ ಮೂಲಕ ಬಸವರಾಜು ಅವರು 12,887 ಬಹುಮತಗಳ ಅಂತರದಲ್ಲಿ ಗೆಲವು ಸಾಧಿಸಿದ್ದಾರೆ.

    ಬಸವರಾಜು ಗೆಲುವಿಗೆ ಕಾರಣ?
    ನಾಲ್ಕು ಬಾರಿ ಸಂಸದರಾಗಿ 30 ವರ್ಷಗಳ ನಿರಂತರ ರಾಜಕೀಯ ಅನುಭವಿರುವ ಜಿ.ಎಸ್ ಬಸವರಾಜುಗೆ ಕ್ಷೇತ್ರದಲ್ಲಿ ಉತ್ತಮ ಸಂಪರ್ಕ ಹೊಂದಿದ್ದರು. ಪ್ರತಿ ಹಳ್ಳಿ ಹಾಗೂ ಗ್ರಾಮ ಪಂಚಾಯ್ತಿ ಮಟ್ಟದಲ್ಲೂ ವಿಶ್ವಾಸಾರ್ಹ ಮುಖಂಡರ ಸಂಪರ್ಕ ಹೊಂದಿದ್ದರು.

    ಮಧುಗಿರಿ-ಕೊರಟಗೆರೆ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಅಸ್ಥಿತ್ವವೇ ಇಲ್ಲವಾಗಿತ್ತು. 60 ವರ್ಷಗಳಲ್ಲಿ ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಒಂದೇ ಒಂದು ಬಾರಿ ಗೆಲುವು ಸಾಧಿಸಿಲ್ಲ. ಆದರೆ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್. ರಾಜಣ್ಣರ ಕೃಪಾಕಟಾಕ್ಷ ಬಿಜೆಪಿ ಮೇಲಿತ್ತು. ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವಿನ ಅಸಮಧಾನ, ಶೀತಲ ಸಮರ, ಕೋಪ-ತಾಪಗಳು ಬಿಜೆಪಿಗೆ ಮತಗಳಾಗಿ ಪರಿವರ್ತನೆಯಾಗಿವೆ.

    ಕೆ.ಎನ್ ರಾಜಣ್ಣ ತೆರೆಮರೆಯಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಿದ್ದರು. ಜಿಲ್ಲೆಯಲ್ಲಿ ನಾಯಕ ಸಮುದಾಯದ ಪ್ರಬಲ ಮುಖಂಡನಾಗಿರುವ ಕೆ.ಎನ್ ರಾಜಣ್ಣ ನಾಯಕ ಸಮುದಾಯದ ಮತಗಳು ಬಿಜೆಪಿಗೆ ಬಿದ್ದಿವೆ. ಒಟ್ಟು 8 ಕ್ಷೇತ್ರಗಳಲ್ಲಿ 4 ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇರುವುದು. ಅಲ್ಲದೆ ಮೋದಿ ಅಲೆ ಕೂಡ ವರ್ಕೌಟ್ ಆಗಿದೆ. ಮತ್ತೆ ದೇವೇಗೌಡರ ಮೇಲಿನ ಸಿಟ್ಟಿನಿಂದ ಕುರುಬರು ಮೈತ್ರಿ ಅಭ್ಯರ್ಥಿಗೆ ಮತಹಾಕದೇ ಬಿಜೆಪಿಗೆ ಹಾಕಿರುವ ಸಾಧ್ಯತೆ ಇದೆ. ಅದೇ ರೀತಿ ಗೊಲ್ಲಸಮುದಾಯದ ಮತ ಕೂಡಾ ಬಿಜೆಪಿ ಬುಟ್ಟಿಗೆ ಬಿದ್ದಿವೆ.

    ದೇವೇಗೌಡರ ಸೋಲಿಗೆ ಕಾರಣ?
    ಹೇಮಾವತಿ ನೀರನ್ನು ತುಮಕೂರು ಜಿಲ್ಲೆಗೆ ಕೊಡುವಲ್ಲಿ ತಾರತಮ್ಯ ಮಾಡಿದ್ದಾರೆ ಎಂಬ ವಿಚಾರ ಮತಗಳಿಗೆ ಹೊಡೆತ ಕೊಟ್ಟಿದೆ. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯರನ್ನು ದೇವೇಗೌಡರು ಸೋಲಿಸಿದ್ದಾರೆ ಎಂಬ ಆರೋಪದಿಂದಾಗಿ ಕುರುಬ ಸಮುದಾಯದವರು ಮತಹಾಕಿಲ್ಲ. ಅದೇ ರೀತಿ ಕಳೆದ ಬಾರಿಯ ಅಭ್ಯರ್ಥಿ ಗೊಲ್ಲಸಮುದಾಯದ ಎ.ಕೃಷ್ಣಪ್ಪರ ಸಾವಿಗೆ ಜೆಡಿಎಸ್ ಕಾರಣ ಅನ್ನುವ ಗಂಭೀರ ಆರೋಪ ಕೂಡ ಇದೆ. ಇದರ ಪರಿಣಾಮ ಗೊಲ್ಲ ಸಮುದಾಯದವರು ಕೈ ಹಿಡಿದಿಲ್ಲ.

    ಕೆ.ಎನ್.ರಾಜಣ್ಣ ಹಾಗೂ ಮುದ್ದಹನುಮೇಗೌಡರಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಕ್ಷೇತ್ರದ ಕಾಂಗ್ರೆಸ್ ಮುಖಂಡರಲ್ಲಿ ಅಸಮಾಧಾನ ಉಂಟಾಗಿತ್ತು. ಮುದ್ದಹನುಮೇಗೌಡ ತಟಸ್ಥವಾಗಿದ್ದರೂ ರಾಜಣ್ಣ ತೆರೆಮರೆಯಲ್ಲಿ ಬಿಜೆಪಿಗೆ ಸಹಕರಿಸಿದ್ದರು. ಬೇರೆ ಜಿಲ್ಲೆಯಿಂದ ಬಂದ ದೇವೇಗೌಡರಿಗೆ ಜಿಲ್ಲೆಯ ಜನತೆ ಅಷ್ಟೊಂದು ಮತ ಹಾಕಿಲ್ಲ. ಜೊತೆಗೆ ಕುಟುಂಬ ರಾಜಕಾರಣದ ವಿರೋಧವೂ ಇತ್ತು.

  • ಮತ್ತೆ ಪ್ರಧಾನಿ ಆಗಬೇಕು ಎಂದು ಕನಸು ಕಂಡಿದ್ದ ದೇವೇಗೌಡರ ಆಸೆಗೆ ತಣ್ಣೀರು ಬಿತ್ತು – ಜಿ.ಎಸ್.ಬಸವರಾಜು

    ಮತ್ತೆ ಪ್ರಧಾನಿ ಆಗಬೇಕು ಎಂದು ಕನಸು ಕಂಡಿದ್ದ ದೇವೇಗೌಡರ ಆಸೆಗೆ ತಣ್ಣೀರು ಬಿತ್ತು – ಜಿ.ಎಸ್.ಬಸವರಾಜು

    ತುಮಕೂರು: ಇವತ್ತಿನ ಎಕ್ಸಿಟ್ ಪೋಲ್ ಸಮೀಕ್ಷೆ ನೋಡಿ ಮತ್ತೆ ಪ್ರಧಾನಿ ಆಗಬೇಕು ಎಂದು ಕನಸು ಕಂಡಿದ್ದ ದೇವೇಗೌಡರ ಆಸೆಗೆ ತಣ್ಣೀರು ಬಿದ್ದಿದೆ ಎಂದು ತುಮಕೂರಿನ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರು ವ್ಯಂಗ್ಯವಾಡಿದ್ದಾರೆ.

    ಇಂದಿಗೆ ಏಳು ಹಂತದಲ್ಲಿ ನಡೆದ ಲೋಕಸಭಾ ಚುನಾವಣೆ ಮುಗಿದಿದೆ. ಇದರ ಬೆನ್ನಲ್ಲೇ ಹಲವಾರು ಸಮೀಕ್ಷೆಗಳ ಪ್ರಕಾರ ಬಿಜೆಪಿ ಪಕ್ಷ ಮುಂಚೂಣಿಯಲ್ಲಿದ್ದು, ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿ.ಎಸ್.ಬಸವರಾಜು ಅವರು, ಮೋದಿ ಮತ್ತೇ ಪ್ರಧಾನಿ ಅನ್ನೋದನ್ನು ಸಮೀಕ್ಷೆ ಸಾಬೀತು ಮಾಡಿದೆ ಎಂದು ಹೇಳಿದ್ದಾರೆ.

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತುಮಕೂರಲ್ಲಿ ನಾವು ನೂರಕ್ಕೆ ನೂರರಷ್ಟು ಗೆಲ್ಲುತ್ತೇವೆ. ಎಕ್ಸಿಟ್ ಪೋಲ್‍ನಲ್ಲಿ ಮೋಸ ಇಲ್ಲ. ಇದು ಒಂದು ರೀತಿ ಶಾಸ್ತ್ರ ಹೇಳಿದಹಾಗೆ ನೂರಕ್ಕೆ 80% ಸತ್ಯ ಇರುತ್ತದೆ. ಚುನಾವಣೋತ್ತರ ಸಮೀಕ್ಷೆ ಯಿಂದ ದೇವೇಗೌಡರಿಗೆ ನಿದ್ದೆ ಬರುವುದಿಲ್ಲ. ಈ ಸಮೀಕ್ಷೆ ಬಂದು ಮತ್ತೆ ಪ್ರಧಾನಿಯಾಗುವ ಕನಸು ಕಂಡಿದ್ದ ದೇವೇಗೌಡರು ಅವರ ಆಸೆಗೆ ತಣ್ಣೀರು ಬಿದ್ದ ಹಾಗಾಗಿದೆ ಎಂದು ಹೇಳಿದರು.

    ಅತ್ಯಂತ ಉತ್ತಮ ಪ್ರಜಾಪ್ರಭುತ್ವಕ್ಕಾಗಿ ಜನರು ಈ ತೀರ್ಪು ನೀಡಿದ್ದಾರೆ. ಯುವಕರು ಯುವತಿಯರು ಮತ್ತು ಪ್ರಜ್ಞಾವಂತರು ಬಿಜೆಪಿಗೆ ಮತಹಾಕಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಡೈವೋರ್ಸ್ ಪಡೆದ ಗಂಡ ಹೆಂಡತಿ ಇದ್ದ ಹಾಗೆ. ಅವರ ಕ್ಷೇತ್ರದಲ್ಲಿ ಇವರು, ಇವರ ಕ್ಷೇತ್ರದಲ್ಲಿ ಅವರು ಸರಿಯಾಗಿ ಕೆಲಸ ಮಾಡಿಲ್ಲ. ಮೈಸೂರಲ್ಲಿ ಜೆಡಿಎಸ್ ನವರು ಬಿಜೆಪಿಗೆ ಹಾಕಿದರೆ ತುಮಕೂರಲ್ಲಿ ಕಾಂಗ್ರೆಸ್ ನವರು ಬಿಜೆಪಿಗೆ ಮತ ಹಾಕಿದ್ದಾರೆ. ಇದನ್ನು ನೋಡಿದರೆ ಡೈವೋರ್ಸ್ ಕೊಟ್ಟ ಗಂಡ, ಹೆಂಡತಿ ಮಗಳ ಮದುವೆಗೆ ಬಂದಹಾಗೆ ಬಂದು ಹೋಗಿದ್ದಾರೆ. ಒಬ್ಬರ ಮುಖ ಒಬ್ಬರು ನೋಡಿಲ್ಲ ಎಂದು ಮೈತ್ರಿ ನಾಯಕರನ್ನು ಲೇವಡಿ ಮಾಡಿದರು.

  • ತಿರುಪತಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ ಸಿಎಂ ಹೆಚ್‍ಡಿಕೆ

    ತಿರುಪತಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ ಸಿಎಂ ಹೆಚ್‍ಡಿಕೆ

    ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಮ್ಮ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಕೂಟ 18 ಕ್ಷೇತ್ರಗಳಲ್ಲಿ ಗೆಲ್ಲುತ್ತದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ತಿರುಪತಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮಾತು ಕೊಟ್ಟಿದ್ದೇವೆ. ಅದರಂತೆ ನಮ್ಮ ಮೈತ್ರಿ ಕೂಟ 18 ಸ್ಥಾನ ಗೆಲ್ಲುತ್ತದೆ. ನಮ್ಮ ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ.

    ಇದೇ ವೇಳೆ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ, ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ನಾವು ಕಾಂಗ್ರೆಸ್ ಜೊತೆ ಇದ್ದೇವೆ ಎಲ್ಲರೂ ಫಲಿತಾಂಶ ಬರುವವರೆಗೂ ಕಾಯಬೇಕು ಎಂದು ಹೇಳಿದರು.

    ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರಿಗಿಂದು 87 ನೇ ವರ್ಷದ ಹುಟ್ಟುಹಬ್ಬ. ಈ ಹಿನ್ನೆಲೆ ದೇವೇಗೌಡರು ಕುಟುಂಬ ಸಮೇತ ತಿರುಪತಿಗೆ ತೆರಳಿದ್ದಾರೆ. ದೇವೇಗೌಡರ ಕುಟುಂಬ ಶುಕ್ರವಾರ ಸಂಜೆ ವಿಶೇಷ ವಿಮಾನದಲ್ಲಿ ತಿರುಪತಿಗೆ ತೆರಳಿತ್ತು. ದೇವೇಗೌಡರು, ಚೆನ್ನಮ್ಮ, ಸಿಎಂ ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ ಸೇರಿದಂತೆ 23 ಜನ ಕುಟುಂಬ ಸದಸ್ಯರು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಬೆಳಗ್ಗೆ 5 ಗಂಟೆಗೆ ದೇವೇಗೌಡರು ತಿರುಪತಿ ತಿಮ್ಮಪ್ಪನಿಗೆ ಸುಪ್ರಭಾತ ಸೇವೆ ಸಲ್ಲಿಸಿದರು.

    ದೇವೇಗೌಡರು ಪ್ರತಿ ಹುಟ್ಟುಹಬ್ಬಕ್ಕೆ ತಿರುಪತಿಗೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಅದರಲ್ಲೂ ಈ ಬಾರಿ ರಾಜಕೀಯ ಆಗ್ನಿಪರೀಕ್ಷೆ, ಮೊಮ್ಮಕ್ಕಳ ಭವಿಷ್ಯದ ನಿರ್ಧಾರಕ್ಕೆ 5 ದಿನ ಬಾಕಿ ಇರೋದು ವಿಶೇಷವಾಗಿದೆ.

  • ಜೆಡಿಎಸ್ ಕುಟುಂಬ ರಾಜಕಾರಣದ ಸಿಂಬಲ್ ಕಣ್ಣೀರು: ಜಗದೀಶ್ ಶೆಟ್ಟರ್ ಲೇವಡಿ

    ಜೆಡಿಎಸ್ ಕುಟುಂಬ ರಾಜಕಾರಣದ ಸಿಂಬಲ್ ಕಣ್ಣೀರು: ಜಗದೀಶ್ ಶೆಟ್ಟರ್ ಲೇವಡಿ

    ಹುಬ್ಬಳ್ಳಿ: ಜೆಡಿಎಸ್ ಕುಟುಂಬ ರಾಜಕಾರಣದ ಸಂಕೇತವೇ ಕಣ್ಣೀರಾಗಿದೆ. ಸಿಎಂ ಕುಮಾರಸ್ವಾಮಿ ಅವರು ಸೋಲುವ ಭೀತಿಯಿಂದ ಕಣ್ಣೀರು ಹಾಕುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಜಗದೀಶ್ ಶೆಟ್ಟರ್, ದೇವೇಗೌಡರು ಮತ್ತು ಜೆಡಿಎಸ್ ಕುಟುಂಬ ರಾಜಕಾರಣದ ಸಿಂಬಲ್ ಕಣ್ಣೀರಾಗಿದೆ.  ಸಿಎಂ ಕುಮಾರಸ್ವಾಮಿ ಅವರು ಹತಾಶರಾಗಿದ್ದು, ಯಾವುದೇ ಕಾರಣಕ್ಕೂ ನಾನು ಕಣ್ಣೀರು ಹಾಕುವುದಿಲ್ಲ ಎಂದು ಹೇಳಿದ್ದರು. ಆದರೆ ಮತ್ತೆ ಸೋಮವಾರ ಹತಾಶರಾಗಿ ಕಣ್ಣೀರು ಹಾಕಿದ್ದಾರೆ. ಈ ಮೂಲಕ ಕುಮಾರಸ್ವಾಮಿ ಅಳುಮಂಜಿ ಅನ್ನೋದು ಮತ್ತೆ ಸಾಬೀತಾಗಿದೆ ಎಂದು ವ್ಯಂಗ್ಯವಾಡಿದರು.

    ಕಣ್ಣಿರು ಸುರಿಸಿ ಅಧಿಕಾರ ಹಿಡಿಯಬೇಕು ಅಂತ ಜೆಡಿಎಸ್ ಹೊರಟಿದೆ. ಆದರೆ ಅದು ಸಾಧ್ಯವಾಗುವುದಿಲ್ಲ. ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಬಿಜೆಪಿ ಅಲೆಯಿದೆ. ಬಿಜೆಪಿ ಶಿಸ್ತು ಬದ್ಧವಾಗಿ ಪ್ರಚಾರ ಮಾಡುತ್ತಿದೆ. ನರೇಂದ್ರ ಮೋದಿ, ಅಮಿತ್ ಷಾ ಅವರು ದೊಡ್ಡ ಮಟ್ಟದಲ್ಲಿ ರ‍್ಯಾಲಿಗಳಿಂದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದಾರೆ. ಕಾಂಗ್ರೆಸ್-ಜೆಡಿಎಸ್ ನಾಯಕರ ಮಧ್ಯೆ ಮುಸುಕಿನ ಗುದ್ದಾಟ ಮುಂದುವರಿದಿದೆ. ಇದರಿಂದ ಮೈತ್ರಿ ಸರ್ಕಾರದಲ್ಲಿ ಅಸಮಾಧಾನದಿಂದ ಕಾಂಗ್ರೆಸ್ ಜೆಡಿಎಸ್ ಮುಳುವಾಗಲಿದೆ ಎಂದು ಶೆಟ್ಟರ್ ಹೇಳಿದರು.

  • ಮಾಜಿ ಪ್ರಧಾನಿ ದೇವೇಗೌಡರ ಕಾರು ತಡೆದ ಚುನಾವಣಾ ಸಿಬ್ಬಂದಿ!

    ಮಾಜಿ ಪ್ರಧಾನಿ ದೇವೇಗೌಡರ ಕಾರು ತಡೆದ ಚುನಾವಣಾ ಸಿಬ್ಬಂದಿ!

    ತುಮಕೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕಾರನ್ನು ತುಮಕೂರು ನಗರದ ಹೊರವಲಯದಲ್ಲಿ ತಪಾಸಣೆ ಮಾಡಲಾಗಿದೆ.

    ಕುಣಿಗಲ್ ಚೆಕ್ ಪೊಸ್ಟ್ ನಲ್ಲಿ ಚುನಾವಣೆ ಅಧಿಕಾರಿಗಳು ಜೆಡಿಎಸ್ ಆಭ್ಯರ್ಥಿ ಎಚ್.ಡಿ ದೇವೇಗೌಡರ ಕಾರನ್ನು ತಪಾಸಣೆ ಮಾಡಿದ್ದಾರೆ. ದೇವೇಗೌಡರು ಇಂದು ಜೆಡಿಎಸ್ ಮುಖಂಡರನ್ನು ಭೇಟಿ ಮಾಡಲು ತುಮಕೂರಿನಿಂದ ಗ್ರಾಮಾಂತರ ಕ್ಷೇತ್ರವಾದ ಗೂಳೂರು ಕಡೆಗೆ ಹೋಗುತ್ತಿದ್ದರು.ಇದನ್ನೂ ಓದಿ: ಚೆಕ್‌ಪೋಸ್ಟ್‌ನಲ್ಲಿ ಸಿಎಂ ಕಾರು ತಡೆದು ಪರಿಶೀಲನೆ

    ಈ ವೇಳೆ ಕುಣಿಗಲ್ ಚೆಕ್ ಪೋಸ್ಟ್ ಬಳಿ ಚುನಾವಣಾ ಸಿಬ್ಬಂದಿ ದೇವೇಗೌಡರ ಕಾರು ನಿಲ್ಲಿಸಿ ತಪಾಸಣೆ ಮಾಡಿದ್ದಾರೆ. ಕಾರು ಪರಿಶೀಲನೆ ಮಾಡಿದ ನಂತರ ದೇವೇಗೌಡರು ಗೂಳೂರಿಗೆ ತೆರಳಿದ್ದಾರೆ. ಈ ಹಿಂದೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಕಾರನ್ನು ಕೂಡ ಹಾಸನ ಗಡಿ ಹಿರೀಸಾವೆ ಚೆಕ್ ಪೋಸ್ಟ್ ನಲ್ಲಿ ತಡೆದು ಚುನಾಚಣಾ ಸಿಬ್ಬಂದಿ ಪರಿಶೀಲನೆ ನಡೆಸಿದ್ದರು.

    ಸಿಎಂ ಕುಮಾರಸ್ವಾಮಿ ಅವರು ಜಿಲ್ಲೆಯ ಚನ್ನರಾಯಪಟ್ಟಣಕ್ಕೆ ತೆರಳುತ್ತಿದ್ದರು. ಈ ವೇಳೆ ಹಿರೀಸಾವೆ ಚೆಕ್ ಪೋಸ್ಟ್ ಬಳಿ ಸಿಎಂ ಕಾರು ಬರುತ್ತಿದ್ದಂತೆಯೇ, ಅದನ್ನು ತಡೆದು ಪೊಲೀಸ್ ಹಾಗೂ ಚುನಾವಣಾ ಸಿಬ್ಬಂದಿ ವಾಹನವನ್ನು ತಪಾಸಣೆ ಮಾಡಿದ್ದರು.

  • ಗೌಡ್ರ ಕುಟುಂಬದಲ್ಲೀಗ ಎಲೆಕ್ಷನ್ ಫಿಟ್‍ನೆಸ್ ಮಂತ್ರ – ಡಯೆಟ್‍ಗೆ ರೇವಣ್ಣ ನೋ ನೋ

    ಗೌಡ್ರ ಕುಟುಂಬದಲ್ಲೀಗ ಎಲೆಕ್ಷನ್ ಫಿಟ್‍ನೆಸ್ ಮಂತ್ರ – ಡಯೆಟ್‍ಗೆ ರೇವಣ್ಣ ನೋ ನೋ

    ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದಿಂದ ಮೂರು ಜನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಹೀಗಾಗಿ ಅವರ ಮನೆಯಲ್ಲಿ ಫುಲ್ ಟೈಂ ಪಾಲಿಟಿಕ್ಸ್ ಟೆನ್ಶನ್ ಇರುತ್ತದೆ. ಆದರೂ ಇದರ ಮಧ್ಯೆ ಗೌಡರ ಕುಟುಂಬ ಚುನಾವಣೆ ಸಮಯದಲ್ಲಿ ಫುಲ್ ಹೆಲ್ತ್ ಫಿಟ್‍ನೆಸ್ ಮಂತ್ರ ಪಠಿಸುತ್ತಿದೆ.

    ಹೌದು. ತುಮಕೂರು, ಹಾಸನ, ಮಂಡ್ಯ ಎಂದು ಫುಲ್ ಎಲೆಕ್ಷನ್ ಪ್ರಚಾರಕ್ಕೆ ಓಡಾಡುತ್ತಿರುವ ಗೌಡರು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಇವರ ಜೊತೆಗೆ ಸಿಎಂ ಕುಮಾರಸ್ವಾಮಿ ಅವರು ಕೂಡ ಆರೋಗ್ಯದ ಮಂತ್ರ ಜಪಿಸುತ್ತಲೇ ಮಗನಿಗಾಗಿ ಪ್ರಚಾರದ ಹುರುಪಿನಲ್ಲಿದ್ದಾರೆ.

    ದೇವೇಗೌಡರು ಮುದ್ದೆ ಬಸ್ಸಾರು ಬಿಟ್ರೆ ಮಾಂಸಹಾರ ಸೇವನೆ ಮಾಡುತ್ತಿಲ್ಲ. ಮಧ್ಯಾಹ್ನ, ಬೆಳಗ್ಗೆ ಹಸಿಕಾಳು ಇದ್ದೇ ಇರುತ್ತದೆ. ದೇವೇಗೌಡರು ಅಪ್ಪಿತಪ್ಪಿಯೂ ಜಿಡ್ಡು ಪದಾರ್ಥ ಮತ್ತು ಸ್ವೀಟ್ ಮುಟ್ಟವಂತಿಲ್ಲ. ನಿತ್ಯ ಬಿಸಿನೀರು ಸೇವನೆ ಮಾಡುತ್ತಾರೆ. ಸಮಯ ಸಿಕ್ಕಾಗ ಪ್ರಾಣಯಾಮ ಮಾಡುತ್ತಾರೆ. ಜೊತೆಗೆ ವೈದ್ಯರು ಕೊಟ್ಟ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿ ಕೂಡ ವಾಕಿಂಗ್, ಮುದ್ದೆಯೂಟ ಮಾಡುತ್ತಾರೆ. ಪ್ರತೀ ದಿನ ಹೆಲ್ತ್ ಚೆಕಪ್ ಇರುತ್ತದೆ. ಮನೆಯಲ್ಲಿ ಇಬ್ಬರು ರಕ್ತದೊತ್ತಡ, ಬಿಪಿ ಶುಗರ್ ಲೆವೆಲ್ ನಿತ್ಯ ಚೆಕ್ ಮಾಡುತ್ತಿದ್ದಾರೆ. ಅಗತ್ಯವಿದ್ದರೆ ಮಾತ್ರ ವೈದ್ಯರ ಸಲಹೆ ಪಡೆದುಕೊಳ್ಳುತ್ತಾರೆ ಎಂದು ಡಾ. ಮಂಜುನಾಥ್ ತಿಳಿಸಿದ್ದಾರೆ.

    ರೇವಣ್ಣ ಮಾತ್ರ ಚುನಾವಣೆ ಸಂದರ್ಭದಲ್ಲಿ ದೇವಸ್ಥಾನಕ್ಕೆ ಹೋಗುವ ಅವರು ಅಲ್ಲಿ ಕೊಡುವ ಪ್ರಸಾದ ತಿಂದು ತಿಂದು ಶುಗರ್ ಲೆವಲ್ ಹೆಚ್ಚು ಮಾಡಿಕೊಳ್ಳುತ್ತಾರೆ. ವೈದ್ಯರ ಡಯೆಟ್ ಟಿಪ್ಸ್ ಪಾಲಿಸೋದು ಸ್ವಲ್ಪ ಕಡಿಮೆ. ಇದಕ್ಕಾಗಿ ಚುನಾವಣಾ ಟೈಂನಲ್ಲಿ ಪ್ರಸಾದ ತಿನ್ನೋದು ಸ್ವಲ್ಪ ಕಡಿಮೆ ಮಾಡಿ ಎಂದು ವೈದ್ಯರು ಸಲಹೆ ಕೊಟ್ಟಿದ್ದಾರೆ.

  • ತುಮಕೂರಲ್ಲಿ ದೇವೇಗೌಡರಿಗೆ ಮತ್ತೊಂದು ಶಾಕ್!

    ತುಮಕೂರಲ್ಲಿ ದೇವೇಗೌಡರಿಗೆ ಮತ್ತೊಂದು ಶಾಕ್!

    ತುಮಕೂರು: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡು ಅಳೆದು ತೂಗಿ ಕೊನೆಗೆ ತುಮಕೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ಈಗ ಅದೇ ಕ್ಷೇತ್ರದಿಂದ ದೇವೇಗೌಡರಿಗೆ ಮತ್ತೊಂದು ಬಿಗ್ ಶಾಕ್ ಆಗಿದೆ.

    ಒಂದು ಕಡೆ ಮುದ್ದಹನುಮೇಗೌಡರ ಬಂಡಾಯ ನಡೆಸುತ್ತಿದ್ದಾರೆ. ಇತ್ತ ಸಂಸದರ ಬಂಡಾಯದ ಜೊತೆಗೆ ಕೆ.ಎನ್ ರಾಜಣ್ಣನೂ ರೆಬಲ್ ಆಗಿದ್ದು, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ರಾಜಣ್ಣ ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

    ಸೋಮವಾರ ಕೈ ಬಂಡಾಯ ಅಭ್ಯರ್ಥಿಯಾಗಿ ಕೆ.ಎನ್ ರಾಜಣ್ಣ ನಾಮಪತ್ರ ಸಲ್ಲಿಸಲಿದ್ದಾರೆ. ಒಂದು ವೇಳೆ ಮುದ್ದಹನುಮೇಗೌಡರು ನಾಮಪತ್ರ ವಾಪಸ್ ಪಡೆದರೆ, ದೇವೇಗೌಡರ ವಿರುದ್ಧ ಗುಟುರು ಹಾಕಲು ರಾಜಣ್ಣ ಸಿದ್ಧವಾಗುತ್ತಿದ್ದಾರೆ.

    ಕಾಂಗ್ರೆಸ್ಸಿನ ಹಾಲಿ ಸಂಸದರಾದ ಮುದ್ದೆಹನುಮೇಗೌಡರಿಗೆ ಲೋಕಸಭಾ ಚುನವಣಾ ಟಿಕೆಟ್ ಕೈ ತಪ್ಪಿದೆ. ಇದರಿಂದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಮುದ್ದೆಹನುಮೇಗೌಡರು ತಾನು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದರು. ನಾಳೆ ನಾಮಪತ್ರ ಸಲ್ಲಿಸಲು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ.

    ಇತ್ತ ಡಿಸಿಎಂ ಪರಮೇಶ್ವರ್ ಅವರು ಕಾಂಗ್ರೆಸ್ ನಾಯಕರನ್ನು ಕರೆದು ಖಾಸಗಿ ಹೋಟೆಲಿನಲ್ಲಿ ಸಭೆ ನಡೆಸುತ್ತಿದ್ದಾರೆ. ಆದರೆ ಈ ಸಭೆಗೆ ಬಂಡಾಯ ಅಭ್ಯರ್ಥಿಗಳಾದ ಮುದ್ದೆಹನುಮೇಗೌಡ ಮತ್ತು ರಾಜಣ್ಣ ಇಬ್ಬರು ಗೈರಾಗಿದ್ದಾರೆ. ಅಷ್ಟೇ ಅಲ್ಲದೇ ಮುದ್ದಹನುಮೇಗೌಡ ತುಮಕೂರಿನ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜೊತೆ ತಮ್ಮ ಸಭೆಯನ್ನು ಮುಂದುವರಿಸಿದ್ದಾರೆ. ಕೊರಟಗೆರೆ ಕಾಂಗ್ರೆಸ್ ಮುಖಂಡ ಎ.ಡಿ.ಬಲರಾಮಯ್ಯ ಮನೆಯಲ್ಲಿ ಸಭೆಯನ್ನು ಆಯೋಜನೆ ಮಾಡಲಾಗಿದ್ದು, ಕಾರ್ಯಕರ್ತರ ಜೊತೆ ಚುನಾವಣಾ ಸಮಾಲೋಚನೆ ನಡೆಸುತ್ತಿದ್ದಾರೆ.