Tag: deve gowda

  • ಸಾವಿರಾರು ಜನ್ರಿಗೆ ದಾರಿಯಾಗಿದ್ದ ನಂದಾದೀಪ ಆರೋಯ್ತು- ಹೆಚ್‍ಡಿಡಿ ಸಂತಾಪ

    ಸಾವಿರಾರು ಜನ್ರಿಗೆ ದಾರಿಯಾಗಿದ್ದ ನಂದಾದೀಪ ಆರೋಯ್ತು- ಹೆಚ್‍ಡಿಡಿ ಸಂತಾಪ

    ಬೆಂಗಳೂರು: ಸಾವಿರಾರು ಜನರಿಗೆ ಸ್ವಾಭಿಮಾನದಿಂದ ಬದುಕಲು ದಾರಿ ಮಾಡಿಕೊಟ್ಟಿದ್ದ ನಂದಾದೀಪ ಆರಿಹೋದ ಸುದ್ದಿಯನ್ನು ನಮಗೆಲ್ಲರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರು ಉದ್ಯಮಿ ಸಿದ್ಧಾರ್ಥ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

    ಸಿದ್ಧಾರ್ಥ್ ಅವರದ್ದು ತುಂಬಾ ಸರಳ ವ್ಯಕ್ತಿತ್ವ. ನಿಜಕ್ಕೂ ಅವರ ನಿಧನದಿಂದ ದೇಶಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ. ಇಡೀ ದೇಶಕ್ಕೆ ಕಗ್ಗತ್ತಲಾವರಿಸಿದೆ ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸುಮಾರು 35 ವರ್ಷಗಳಿಂದ ನಾನು ಸಿದ್ದಾರ್ಥ್ ಅವರನ್ನು ಬಲ್ಲೆ. ಈ ದಿನ ಆ ಸಜ್ಜನ ವ್ಯಕ್ತಿ ಇಲ್ಲವೆಂದರೆ ನನಗೆ ನಂಬಲಸಾಧ್ಯ. ಅವರ ಈ ದಾರುಣ ಸಾವಿನ ಕುರಿತು ಸರ್ಕಾರ ಸೂಕ್ತ ತನಿಖೆ ನಡೆಸಲಿ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ಹಾಗೂ ನಾಡಿನ ಅಸಂಖ್ಯಾತ ಕಾರ್ಮಿಕ ಬಂಧುಗಳಿಗೆ, ಅಭಿಮಾನಿಗಳಿಗೆ ದೇವರು ದುಃಖ ಭರಿಸುವ ಶಕ್ತಿ ತುಂಬಲಿ ಎಂದು ಹೇಳಿದ್ದಾರೆ.

    ಇಂದು ಬೆಳಗ್ಗೆ ಸಿದ್ಧಾರ್ಥ್ ಮೃತದೇಹ ಮಂಗಳೂರು- ಉಳ್ಳಾಲ ನಡುವೆ ಇರುವ ನೇತ್ರಾವತಿ ನದಿ ಸಮೀಪದ ಹೊಯಿಗೆ ಬಜಾರ್ ಎಂಬ ಪ್ರದೇಶದಲ್ಲಿ ದೊರಕಿದೆ. ಬೆಳಗ್ಗೆ 6.30ರ ಸುಮಾರಿಗೆ ಸ್ಥಳೀಯ ಮೀನುಗಾರರು ಮೀನು ಹಿಡಿಯಲು ಹೋದಾಗ ನದಿಯಲ್ಲಿ ತೇಲಾಡುತ್ತಿದ್ದ ಶವವನ್ನು ಕಂಡು ಅನುಮಾನದಿಂದ ದೋಣಿ ಬದಿಯಲ್ಲಿ ಹಿಡಿದುಕೊಂಡು ದಡ ತಲುಪಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

  • ಜೆಡಿಎಸ್‍ನ ಮುಂದಿನ ನಡೆಯೇನು?

    ಜೆಡಿಎಸ್‍ನ ಮುಂದಿನ ನಡೆಯೇನು?

    ಬೆಂಗಳೂರು: ಮೈತ್ರಿ ಸರ್ಕಾರ ಬಿದ್ದು ಹೋದ ಬೆನ್ನಲ್ಲೇ ಜೆಡಿಎಸ್ ಪಕ್ಷದಲ್ಲೀಗ ಮೌನ ಆವರಿಸಿದ್ದು, ಇಂದು ಬೆಂಗಳೂರಿನ ಜೆಪಿ ಭವನದಲ್ಲಿ ಶಾಸಕರ ಸಭೆ ನಡೆಯಲಿದೆ.

    ಅನಿರೀಕ್ಷಿತವಾಗಿ ಸಿಕ್ಕ ಅಧಿಕಾರ ಅಲ್ಪಾವಧಿಗೆ ಹೋಗಿದ್ದರಿಂದ ಈಗ ಗೌಡರ ಕುಟುಂಬದ ಚಿತ್ತ ಸಹಜವಾಗಿಯೇ ಪಕ್ಷ ಸಂಘಟನೆಯತ್ತ ಹೊರಳುವ ಸಾಧ್ಯತೆ ಇದೆ. ಲೋಕಸಭಾ ಸೋಲಿನ ಬಳಿಕ ಮಾಜಿ ಪ್ರಧಾನಿ ದೇವೇಗೌಡರು ರಾಜ್ಯಾದ್ಯಂತ ಪಾದಯಾತ್ರೆ ಕೈಗೊಂಡು ಪಕ್ಷ ಬಲವರ್ಧನೆಯ ಘೋಷಣೆ ಮಾಡಿದ್ದರು.

    ಆಗಸ್ಟ್ 20ರಿಂದ ನಂಜನಗೂಡಿನಿಂದ ಮೊದಲ ಹಂತದ ಪಾದಯಾತ್ರೆ ಆರಂಭವಾಗಿ ಜೆಡಿಎಸ್ ಪ್ರಾಬಲ್ಯ ಇರುವ ದಕ್ಷಿಣ ಕರ್ನಾಟಕ ಭಾಗದಲ್ಲಿ ಸಂಚರಿಸಲಿದ್ದು, ಎರಡನೇ ಹಂತದಲ್ಲಿ ಉತ್ತರ ಕರ್ನಾಟಕದಲ್ಲಿ ಸಾಗಲಿದೆ.

    ಮುಂದಿನ ನಡೆಯೇನು..?
    ಮೊದಲಿಗೆ ಪಕ್ಷಕ್ಕೆ ದ್ರೋಹ ಬಗೆದವರಿಗೆ ಸರಿಯಾಗಿ ಪಾಠ ಕಲಿಸಲು ದೇವೇಗೌಡರು ನಿರ್ಧಾರ ಮಾಡಿದ್ದಾರೆ. ಮೂವರು ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ರಾಜಕೀಯ ಜೀವನ ಮುಗಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ನಂತರ ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡುವುದು ಅವರ ಮುಂದಿನ ಗುರಿಯಾಗಿದ್ದು, ತಾತ, ಅಪ್ಪ, ಮಗನಿಂದ ಜೆಡಿಎಸ್ ಪಾರ್ಟಿ ಉಳಿವಿಗೆ ಕೆಲಸ ಪ್ರಾರಂಭಿಸುವುದಾಗಿದೆ.

    ಆಗಸ್ಟ್ ತಿಂಗಳಿಂದಲೇ ದೇವೇಗೌಡರು ಪಕ್ಷ ಸಂಘಟನೆ ಕೆಲಸ ಶುರು ಮಾಡಲಿದ್ದು, ಮೊದಲಿಗೆ ಪಾದಯಾತ್ರೆ ಮೂಲಕ ಪಕ್ಷ ಸಂಘಟನೆ ಮಾಡಲು ನಿರ್ಧರಿಸಿದ್ದಾರೆ. ದೇವೇಗೌಡ, ಕುಮಾರಸ್ವಾಮಿ, ನಿಖಿಲ್ ಪಾದಯಾತ್ರೆ ಪ್ಲಾನ್ ಮಾಡಿದ್ದಾರೆ. ಮುಖ್ಯವಾಗಿ ಪಕ್ಷಕ್ಕೆ ದ್ರೋಹ ಬಗೆದ ಅತೃಪ್ತರನ್ನ ಉಪ ಚುನಾವಣೆಯಲ್ಲಿ ಸೋಲಿಸುವುದು ಗೌಡರ ಕುಟುಂಬದ ಮೊದಲ ಟಾರ್ಗೆಟ್ ಆಗಿದೆ ಎಂದು ಹೇಳಲಾಗುತ್ತಿದೆ.

  • ಕೊನೆ ಕ್ಷಣದಲ್ಲಿ ಸರ್ಕಾರ ಉಳಿಸಲು ಗೌಡರ ಮಾಸ್ಟರ್ ಪ್ಲ್ಯಾನ್

    ಕೊನೆ ಕ್ಷಣದಲ್ಲಿ ಸರ್ಕಾರ ಉಳಿಸಲು ಗೌಡರ ಮಾಸ್ಟರ್ ಪ್ಲ್ಯಾನ್

    ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಬಹುಮತದ ಟೆನ್ಶನ್ ಆಗಿದೆ. ಇತ್ತ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಹೆಜ್ಜೆ ನಿಗೂಢವಾಗಿದ್ದು, ಸರ್ಕಾರ ಉಳಿಸಲು ದೇವೇಗೌಡರು ಕೊನೆ ಕ್ಷಣದ ಕಸರತ್ತು ನಡೆಸುತ್ತಿದ್ದಾರೆ.

    ದೇವೇಗೌಡರು ಬಹುಮತದವರೆಗೂ ಕಾದು ನೋಡಿ ಎಂದಿದ್ದಾರೆ. ಹೀಗಾಗಿ ಜೆಡಿಎಸ್ ಶಾಸಕರಿಗೂ ದೇವೇಗೌಡರ ನಡೆ ಅರ್ಥವಾಗುತ್ತಿಲ್ಲ. ಬುಧವಾರ ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ ಜೊತೆ ದೇವೇಗೌಡ ಅವರು ಸುದೀರ್ಘ ಚರ್ಚೆ ನಡೆಸಿದ್ದಾರೆ. ಹೀಗಾಗಿ ಕಾನೂನಿನ ಹೋರಾಟದಲ್ಲೇ ಸರ್ಕಾರ ಉಳಿಸಿಕೊಳ್ಳಲು ದೇವೇಗೌಡರ ರಣತಂತ್ರ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಏನದು ಮಾಸ್ಟರ್ ಪ್ಲ್ಯಾನ್?
    ಬಹುಮತದ ಚರ್ಚೆಯನ್ನು ಎರಡು ಮೂರು ದಿನ ಎಳೆಯುವುದು. ಈ ವೇಳೆ ಸುಪ್ರೀಂಕೋರ್ಟ್ ನೀಡಿದ್ದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ವಿಪ್ ಗೊಂದಲದ ಬಗ್ಗೆ ನಿವಾರಣೆ ಮಾಡಿಕೊಳ್ಳುವುದು. ಒಂದು ವೇಳೆ ವಿಪ್ ಉಲ್ಲಂಘಿಸಿದ್ದಕ್ಕೆ ಶಾಸಕರನ್ನು ಅನರ್ಹತೆ ಮಾಡಬಹುದು ಎಂದು ತೀರ್ಪು ನೀಡಿದರೆ ಅನರ್ಹತೆ ಅಸ್ತ್ರ ಬಳಸಿ ಕೊನೆ ಕ್ಷಣದಲ್ಲಿ ಸರ್ಕಾರವನ್ನು ರಕ್ಷಿಸಬಹುದು ಎನ್ನುವ ಲೆಕ್ಕಾಚಾರವನ್ನು ಹಾಕಿಕೊಂಡಿದ್ದಾರೆ.

    ಬಹುಮತ ಚರ್ಚೆಯಲ್ಲಿ ಸಿಗಬಹುದಾದ ಸಮಯದಲ್ಲಿ 3-4 ಜನ ಅತೃಪ್ತರನ್ನ ಸಾಧ್ಯವಾದಷ್ಟು ಮನವೊಲಿಸುವುದು. ಬೆಂಗಳೂರಿನ ಶಾಸಕರಾದ ಸೋಮಶೇಖರ್, ಭೈರತಿ ಬಸವರಾಜ್, ಮುನಿರತ್ನ ಮತ್ತು ಚಿಕ್ಕಬಳ್ಳಾಪುರದ ಸುಧಾಕರ್ ಅವರ ಮನವೊಲಿಕೆಗೆ ಯತ್ನ ಮಾಡುವುದು. ಒಂದು ವೇಳೆ ಅತೃಪ್ತರ ಪೈಕಿ 3-4 ಜನ ಕೊನೆ ಕ್ಷಣದಲ್ಲಿ ಬೆಂಬಲ ಕೊಟ್ಟರೆ ಸರ್ಕಾರ ಸೇಫ್ ಆಗುತ್ತದೆ.

    ಬಹುಮತದ ಚರ್ಚೆ ವೇಳೆ ಸಿಗಬಹುದಾದ ಸಮಯದಲ್ಲಿ ಸಾಧ್ಯವಾದಷ್ಟು ರಿವರ್ಸ್ ಆಪರೇಷನ್ ಮಾಡುವುದಕ್ಕೆ ಪ್ರಯತ್ನ ಮಾಡುವುದು. 3-4 ಜನ ಬಿಜೆಪಿ ಶಾಸಕರನ್ನು ಸೆಳೆದರೂ ಸರ್ಕಾರ ಸೇಫ್ ಆಗುತ್ತದೆ. ಒಂದು ವೇಳೆ ಸರ್ಕಾರ ಉಳಿಸಿಕೊಳ್ಳಲು ಆಗದೇ ಇದ್ದರೆ ಸರ್ಕಾರ ಬಿದ್ದ ನಂತರ ಬಿಜೆಪಿ ವರಿಷ್ಠರ ಜೊತೆ ಮಾತಾಡಿ ಬಿಜೆಪಿ ಬಾಹ್ಯ ಬೆಂಬಲ ನೀಡಿ ಸರ್ಕಾರದ ಭಾಗವಾಗಿ ಪಕ್ಷವನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ.

    ಒಟ್ಟು 224 ಮಂದಿ ಶಾಸಕರ ಪೈಕಿ 16 ಮಂದಿ ಶಾಸಕರ ರಾಜೀನಾಮೆ ನೀಡಿದ್ದರಿಂದ ಸದನದ ಬಲ 208ಕ್ಕೆ ಕುಸಿದಿದೆ. ಒಟ್ಟು 79 ಕಾಂಗ್ರೆಸ್ ಶಾಸಕರ ಪೈಕಿ 13 ಮಂದಿ ರಾಜೀನಾಮೆ ನೀಡಿದ್ದು, ಸ್ಪೀಕರ್ ಸೇರಿ 66 ಸದಸ್ಯರ ಬಲ ಹೊಂದಿದ್ದಾರೆ. ಮೂರು ಮಂದಿ ಜೆಡಿಎಸ್ ಶಾಸಕರ ರಾಜೀನಾಮೆಯಿಂದ ದಳ ಶಾಸಕರ ಸಂಖ್ಯೆ 34ಕ್ಕೆ ಕುಸಿದಿದೆ. ಇಬ್ಬರು ಪಕ್ಷೇತರರ ಬೆಂಬಲದಿಂದ ಬಿಜೆಪಿ ಬಲ 107ಕ್ಕೆ ಏರಿಕೆಯಾಗಿದ್ದರೆ ಬಿಎಸ್‍ಪಿ ಶಾಸಕ ಎನ್ ಮಹೇಶ್ ವಿಧಾನಸಭೆಯಲ್ಲಿ ಪ್ರತ್ಯೇಕ ಸೀಟ್ ಕೇಳಿದ್ದಾರೆ. 208 ಶಾಸಕರು ಇರುವ ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ 105 ಶಾಸಕರ ಅಗತ್ಯವಿದೆ. ಸದ್ಯದ ಪರಿಸ್ಥಿತಿಯಲ್ಲಿ ದೋಸ್ತಿಗಳಿಗೆ 99 ಶಾಸಕರ ಬೆಂಬಲವಿದೆ.

  • ಸಿಎಂ ತನ್ನ ಹೆಸ್ರು ಉಳಿಸಿಕೊಳ್ಳಲು ರೇವಣ್ಣನ ಹೆಸ್ರಿಗೆ ಡ್ಯಾಮೇಜ್ ಮಾಡ್ತಿದ್ದಾರೆ: ಚಲುವರಾಯಸ್ವಾಮಿ

    ಸಿಎಂ ತನ್ನ ಹೆಸ್ರು ಉಳಿಸಿಕೊಳ್ಳಲು ರೇವಣ್ಣನ ಹೆಸ್ರಿಗೆ ಡ್ಯಾಮೇಜ್ ಮಾಡ್ತಿದ್ದಾರೆ: ಚಲುವರಾಯಸ್ವಾಮಿ

    ಮಂಡ್ಯ: ರಾಜ್ಯದಲ್ಲಿ ಮುಖ್ಯಮಂತ್ರಿಗಳು ತನ್ನ ಹೆಸರನ್ನು ಉಳಿಸಿಕೊಳ್ಳಲು ರೇವಣ್ಣನ ಹೆಸರನ್ನು ಡ್ಯಾಮೇಜ್ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಚಲುವರಾಯಸ್ವಾಮಿ ಆರೋಪಿಸಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಈ ಸ್ಥಿತಿಗೆ ಮುಖ್ಯಮಂತ್ರಿಗಳೇ ಕಾರಣ. ಆದರೆ ರೇವಣ್ಣ ಅವರಿಂದ ಈ ರೀತಿ ಆಗಿದೆ ಅಂತಿದ್ದಾರೆ. ಹಾಗಾದರೆ ಅವರನ್ನೇ ಸಚಿವ ಸ್ಥಾನದಿಂದ ಹೊರಗಿಟ್ಟು ಸರ್ಕಾರ ನಡೆಸಬಹುದಿತ್ತು ಎಂದು ಗರಂ ಆದರು.

    ಮೈತ್ರಿ ಸರ್ಕಾರ ಈ ರೀತಿ ಆಗಲು ಅಣ್ಣ-ತಮ್ಮಂದಿರೇ ಹೊಣೆ ಮುಖ್ಯಮಂತ್ರಿ ಇಲ್ಲದೇ ರೇವಣ್ಣ ಒಬ್ಬರೇ ಹೊಣೆಯಾಗಲು ಸಾಧ್ಯವಿಲ್ಲ. ಅಂತಿಮವಾಗಿ ಸಹಿ ಹಾಕುವವರು, ನಿರ್ಧಾರ ತೆಗೆದುಕೊಳ್ಳುವವರು ಮುಖ್ಯಮಂತ್ರಿ ತಾನೇ. ಮುಖ್ಯಮಂತ್ರಿಗಳು ತನ್ನ ಹೆಸರು ಉಳಿಸಿಕೊಳ್ಳಲು ರೇವಣ್ಣ ಹೆಸರು ಡ್ಯಾಮೇಜ್ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

    ರಾಜ್ಯದಲ್ಲಿ ನಡೆಯುತ್ತಿರವ ವಿದ್ಯಮಾನಗಳಿಗೆ ನೇರ ಹೊಣೆ ಮುಖ್ಯಮಂತ್ರಿಯೇ ಹೊರತು ರೇವಣ್ಣ ಅಲ್ಲ. ರಾಜಕೀಯ ಅನುಭವ ಇಲ್ಲದವರು ರೇವಣ್ಣ ಎನ್ನುತ್ತಾರೆ ಅಷ್ಟೇ. ರೇವಣ್ಣ ಅವರು ಮುಖ್ಯಮಂತ್ರಿಗಳನ್ನು ಮೀರಿ ಏನು ಮಾಡಲು ಸಾಧ್ಯ. ಹೀಗಾಗಿ ರೇವಣ್ಣ ಅವರ ಹಿಂದೆ ಮುಖ್ಯಮಂತ್ರಿಗಳು ಇದ್ದಾರೆ ಎಂದು ಸಿಎಂ ವಿರುದ್ಧ ಕಿಡಿಕಾರಿದರು.

    ದೇವೇಗೌಡರ ಕುಟುಂಬದವರ ಕಿರುಕುಳ ರಾಜೀನಾಮೆಗೆ ಕಾರಣ ಎಂಬ ವಿಚಾರದ ಬಗ್ಗೆ ಮಾತನಾಡಿ, ಹೆಗಡೆಯವರ ಕಾಲದಿಂದ ಇಲ್ಲಿಯವರೆಗೂ ಅದು ಮುಂದುವರಿದಿದೆ ಎಂದು ಪರೋಕ್ಷವಾಗಿ ಕಿರುಕುಳದ ಬಗ್ಗೆ ಚಲುವರಾಯ ಸ್ವಾಮಿ ಒಪ್ಪಿಕೊಂಡರು. ನಾವು ಏಳು ಜನ ತಪ್ಪು ಮಾಡಿ ಪಕ್ಷ ಬಿಟ್ಟು ಬರಲಿಲ್ಲ. ಇಂದು ನಾರಾಯಣಗೌಡ ಪಕ್ಷ ಬಿಟ್ಟು ಬಂದು ಮಾತನಾಡುತ್ತಿದ್ದಾರೆ. ಅದೇ ಸ್ಥಿತಿ ಸಚಿವ ಪುಟ್ಟರಾಜುಗೂ ಬರಬಹುದು ಎಂದು ಭವಿಷ್ಯ ನುಡಿದರು.

  • ಸರ್ಕಾರ ಉಳಿಸಲು ದೇವರ ಮೊರೆ ಹೋದ ರೇವಣ್ಣ

    ಸರ್ಕಾರ ಉಳಿಸಲು ದೇವರ ಮೊರೆ ಹೋದ ರೇವಣ್ಣ

    ಚಿಕ್ಕಮಗಳೂರು: ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲು ಸಿಎಂ ಸಭೆ ಮೇಲೆ ಸಭೆ ಮಾಡುತ್ತಿದ್ದಾರೆ. ಇತ್ತ ಸರ್ಕಾರ ಉಳಿಸಲು ರೇವಣ್ಣ ದೇವರ ಮೊರೆ ಹೋಗಿದ್ದಾರೆ.

    ಇಂದು ಬೆಳಗ್ಗೆಯೇ ರೇವಣ್ಣ ಶೃಂಗೇರಿ ದೇವಾಲಯಕ್ಕೆ ಹೋಗಿ ಶಾರದೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಾರದಾಂಬೆ ದೇವೇಗೌಡರ ಕುಟುಂಬದ ಇಷ್ಟದ ದೇವರಾಗಿದ್ದು, ಹೀಗಾಗಿ ಒಂದೇ ವಾರದಲ್ಲಿ ಎರಡು ಬಾರಿ ಶೃಂಗೇರಿಗೆ ರೇವಣ್ಣ ಬಂದು ಪೂಜೆ ಸಲ್ಲಿಸಿದ್ದಾರೆ.

    ಈ ಹಿಂದೆ ದೇವೇಗೌಡರು ಶೃಂಗೇರಿಯಲ್ಲಿ ಅತಿರುದ್ರ ಮಹಾಯಾಗ ನಡೆಸಿದ್ದರು. ನಂತರ ಸರ್ಕಾರಕ್ಕೆ ಸಂಚಕಾರ ಬಂದಾಗ ದೇವೇಗೌಡರು ಒಂದೊಂದು ಯಾಗ ನಡೆಸಿದ್ದರು. ಅಷ್ಟೇ ಅಲ್ಲದೇ ಸಿಎಂ ಕೂಡ ತಮ್ಮ ಕುರ್ಚಿ ಉಳಿವಿಗಾಗಿ ಶೃಂಗೇರಿಯಲ್ಲಿ ಮೂರ್ನಾಲ್ಕು ಯಾಗ ಮಾಡಿಸಿದ್ದರು. ಇಂದು ರೇವಣ್ಣ ಮತ್ತೆ ಶಾರದಾಂಬೆ ದರ್ಶನ ಪಡೆದು ವಿಶೇಷ ಪೂಜೆ ಮಾಡಿಸಿದ್ದಾರೆ.

    ವಿಧಾನ ಸಭೆ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಬಿ ಫಾರಂಗಳನ್ನು ಶೃಂಗೇರಿಗೆ ತಂದು ಪೂಜೆ ಮಾಡಿ ಬಳಿಕ ನಾಮಪತ್ರ ಸಲ್ಲಿಸಲಾಗಿತ್ತು.

    ಇತ್ತ ಮಾಜಿ ಪ್ರಧಾನಿ ದೇವೇಗೌಡರು ಕೂಡ ಸರ್ಕಾರ ಉಳಿಸಿಕೊಳ್ಳಲು ದೇವರ ಮೊರೆ ಹೋಗಿದ್ದಾರೆ. ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನ ಈಶ್ವರನ ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಂದು ಬೆಳಗ್ಗೆ ಸುಮಾರು 6 ಗಂಟೆಗೆ ಪದ್ಮನಾಭ ನಗರದ ಮನೆಯಿಂದ ಹೋಗಿ ಪೂಜೆ ಮಾಡಿಸಿ ಬಂದಿದ್ದರು.

  • ಗೌಡರ ಕುಟುಂಬದ ಹೆಣ್ಣುಮಕ್ಕಳ ಕಿರುಕುಳದಿಂದ ನನಗೆ ತುಂಬಾ ಬೇಸರವಾಗಿದೆ – ನಾರಾಯಣಗೌಡ

    ಗೌಡರ ಕುಟುಂಬದ ಹೆಣ್ಣುಮಕ್ಕಳ ಕಿರುಕುಳದಿಂದ ನನಗೆ ತುಂಬಾ ಬೇಸರವಾಗಿದೆ – ನಾರಾಯಣಗೌಡ

    ಬೆಂಗಳೂರು: ಜೆಡಿಎಸ್ ಪಕ್ಷದಲ್ಲಿ ನನಗೆ ತುಂಬಾ ನೋವಾಗಿದೆ. ವಿಶೇಷವಾಗಿ ದೇವೇಗೌಡ ಕುಟುಂಬದ ಹೆಣ್ಣುಮಕ್ಕಳ ಕಿರುಕುಳದಿಂದ ನನಗೆ ತುಂಬಾ ಬೇಸರವಾಗಿದೆ ಎಂದು ರಾಜೀನಾಮೆ ನೀಡಿರುವ ಕೆ.ಆರ್ ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡ ಅವರು ಹೇಳಿದ್ದಾರೆ.

    ಇಂದು ಮುಂಬೈನಿಂದ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ಅವರು, ನಾನು ಬೇಸರಗೊಂಡಿರುವ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೆ. ಆದರೆ ಅದರಿಂದ ಯಾವುದೇ ರೀತಿಯ ಪ್ರಯೋಜನ ಆಗಲಿಲ್ಲ ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದರು.

    ಈಗ ನನ್ನನ್ನು ಅಪರೇಷನ್ ಕಮಲಕ್ಕೆ ಒಳಗಾಗಿದ್ದೀರಿ. ದುಡ್ಡು ತಗೆಕೊಂಡಿದ್ದೇನೆ ಎನ್ನುತ್ತೀರಿ. ಅದರೆ ಚಿಕ್ಕ ವಯಸ್ಸಿನಲ್ಲಿ ಮುಂಬೈಗೆ ಹೋಗಿ 2 ರೂಪಾಯಿಯಲ್ಲಿ ಜೀವನ ನಡೆಸಿ ಉದ್ಯಮಿ ಅಗಿದ್ದೇನೆ. ನನ್ನ ಪೋಷಕರ ಕ್ಷೇತ್ರವಾದ ಕಾರಣ ಸಮಾಜ ಸೇವೆ ಮಾಡಬೇಕು ಎಂದು ನಾನು ಕೆ.ಆರ್ ಪೇಟೆಗೆ ಬಂದೆ. ಕ್ಷೇತ್ರದ ಜನ ಹಾಗೂ ದೇವೇಗೌಡರ ಆಶೀರ್ವಾದದಿಂದ ನಾನು ಚುನಾವಣೆ ಗೆದ್ದೆ. ಅದರೆ ದೇವೇಗೌಡರು ಹಾಗೂ ಅವರ ಕುಟುಂಬದವರೇ ಕಿರುಕುಳ ನೀಡಿದ ಮೇಲೆ ನಾನು ಏನು ಮಾಡಲಿ ಎಂದು ಪ್ರಶ್ನಿಸಿದರು.

    ಇನ್ನೂ ಬಿಜೆಪಿ ಸೇರುವ ಬಗ್ಗೆ ನಾನು ತೀರ್ಮಾನ ಮಾಡಿಲ್ಲ. ರಾಜೀನಾಮೆ ಅಂಗೀಕಾರವಾದ ನಂತರ ಬಿಜೆಪಿ ಸೇರುವ ಬಗ್ಗೆ ಬೆಂಬಲಿಗರ ಅಭಿಪ್ರಾಯ ಪಡೆಯುತ್ತೇನೆ. ಮುಂದೆ ಚುನಾವಣೆಗೆ ನಿಲ್ಲುವ ಬಗ್ಗೆ ಕ್ಷೇತ್ರ ಜನರು ಹಾಗೂ ಬೆಂಬಲಿಗರ ಅಭಿಪ್ರಾಯ ಪಡೆಯುತ್ತೇನೆ. ಮೊನ್ನೆ ಸಂಜೆ ನಾನು ಕ್ಷೇತ್ರಕ್ಕೆ ಬಂದು ಬೆಂಬಲಿಗರ ಜೊತೆ ಸಭೆ ಮಾಡಿ ಹೋಗಿದ್ದೇನೆ ಎಂದು ತಿಳಿಸಿದರು.

    ಇದೇ ವೇಳೆ ಮನೆ ಖಾಲಿ ಮಾಡಿರುವ ಬಗ್ಗೆ ಸ್ಪಷ್ಟನೆ ನೀಡಿದ ಅವರು, ನಾನು ರಾತ್ರೋ ರಾತ್ರಿ ಮನೆ ಖಾಲಿ ಮಾಡಿಲ್ಲ. ಸಚಿವ ತಮ್ಮಣ್ಣ ಬಳಿ ನಾನು ನೋವು ಹೇಳಿಕೊಂಡಿದ್ದೇನೆ. ಮುಖ್ಯಮಂತ್ರಿ ಅವರ ಮೇಲೆ ಬೇಸರ ವ್ಯಕ್ತಪಡಿಸುವ ಪ್ರಶ್ನೆಯೇ ಇಲ್ಲ. ದೇವೇಗೌಡರು ಹಾಗೂ ಅವರ ಕುಟುಂಬದವರೇ ನನ್ನನ್ನು ಚುನಾವಣೆಗೆ ನಿಲ್ಲಿಸಿದರು. ನನಗೆ ಯಾವ ಪಕ್ಷದಿಂದ ಆಫರ್ ಬಂದಿಲ್ಲ, ಆ ಬಗ್ಗೆ ನಾನು ಯೋಚನೆ ಮಾಡಿಲ್ಲ ಎಂದು ಹೇಳಿದರು.

  • ತಡರಾತ್ರಿ ಸೋನಿಯಾ ಗಾಂಧಿಗೆ ಎಚ್‍ಡಿಡಿ ಕರೆ – ಮಾಜಿ ಸಿಎಂ ವಿರುದ್ಧ ಕಿಡಿ

    ತಡರಾತ್ರಿ ಸೋನಿಯಾ ಗಾಂಧಿಗೆ ಎಚ್‍ಡಿಡಿ ಕರೆ – ಮಾಜಿ ಸಿಎಂ ವಿರುದ್ಧ ಕಿಡಿ

    ಬೆಂಗಳೂರು: ಕಳೆದ ದಿನ 14 ಅತೃಪ್ತ ಶಾಸಕರು ರಾಜೀನಾಮೆ ಕೊಟ್ಟ ಹಿನ್ನೆಲೆಯಲ್ಲಿ ತಡರಾತ್ರಿ ಮಾಜಿ ಪ್ರಧಾನಿ ದೇವೇಗೌಡರು ಸೋನಿಯಾ ಗಾಂಧಿಗೆ ಕರೆಮಾಡಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಹಿಂದೆಯೇ ನಾನು ನಿಮಗೆ ಪತ್ರ ಬರೆದು ಎಚ್ಚರಿಸಿದ್ದೆ. ಆದರೆ ನೀವು ಅದನ್ನ ಗಂಭೀರವಾಗಿ ಪರಿಗಣಿಸಲಿಲ್ಲ. ನಿಮ್ಮ ಪುತ್ರ ಕಳೆದ 6 ವರ್ಷದಿಂದ ಇಡಿ ಪಕ್ಷವನ್ನೆ ಸಿದ್ದರಾಮಯ್ಯ ಅವರ ಕೈಗೆ ಕೊಟ್ಟು ಮೈ ಮರೆತರು. ಇದರಿಂದ ಈಗ ದೋಸ್ತಿ ಸರ್ಕಾರಕ್ಕೆ ಗಂಡಾಂತರ ಬಂದಿದೆ ಎಂದು ದೇವೇಗೌಡರು ಅಸಮಾಧಾನ ಹೊರಹಾಕಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ರಾಜೀನಾಮೆ ನೀಡಿರುವ ಶಾಸಕರ ಪೈಕಿ ಸಿದ್ದರಾಮಯ್ಯ ಬೆಂಬಲಿಗರ ಸಂಖ್ಯೆಯೇ ಜಾಸ್ತಿಯಿದೆ. ಸಿದ್ದರಾಮಯ್ಯ ಶಾಸಕರ ರಾಜೀನಾಮೆಗೆ ಕುಮ್ಮಕ್ಕು ನೀಡಿ ನಮ್ಮ ಪಕ್ಷವನ್ನ ಹಾಳು ಮಾಡುವ ಜೊತೆಗೆ ರಾಜಕೀಯ ಪುನರ್ಜನ್ಮ ಕೊಟ್ಟ ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡಿದ್ದಾರೆ. ಕಾಲ ಮಿಂಚಿ ಹೋಗಿದೆ. ನೀವು ಯಾವ ಉದ್ದೇಶದಿಂದ ಸರ್ಕಾರ ರಚಿಸೋಣ ಎಂದು ಹೇಳಿ ನಾವು ಸರ್ಕಾರ ರಚಿಸಿದ್ದೆವೋ ಆ ಸಿದ್ಧಾಂತ ಹಾಳಾಗಿ ಬಿಜೆಪಿ ತಲೆ ಎತ್ತುವಂತೆ ಮಾಡುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ ಎಂದು ಸೋನಿಯ ಗಾಂಧಿಗೆ ಫೋನ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ಕಾಂಗ್ರೆಸ್ ಮತ್ತು ಜೆಡಿಎಸ್ ಅತೃಪ್ತ ಶಾಸಕರು ಸೇರಿದಂತೆ ಒಟ್ಟು 13 ಮಂದಿ ಕಳೆದ ದಿನ ಸ್ಪೀಕರ್ ಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇಂದು ಸಿಎಂ ಅಮೆರಿಕದಿಂದ ಬೆಂಗಳೂರಿಗೆ ವಾಪಸ್ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಬಂದ ನಂತರ ಅವರ ನಡೆ ಏನು ಎಂದು ತಿಳಿದುಕೊಂಡು ಹೈಕಮಾಂಡ್ ಮುಂದಿನ ಹೆಜ್ಜೆಯಿಡಲು ಕಾಯುತ್ತಿದೆ.

  • ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ ಜೆಡಿಎಸ್ ಕಥೆ: ಆರ್. ಅಶೋಕ್

    ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ ಜೆಡಿಎಸ್ ಕಥೆ: ಆರ್. ಅಶೋಕ್

    – ನಾವು ಹುಟ್ಟಿದಾಗಿನಿಂದಲೂ ಅನ್ನ ತಿನ್ನುತ್ತಿದ್ದೇವೆ, ಸಗಣಿ ತಿಂತಿಲ್ಲ

    ಮೈಸೂರು: ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ ಹಾಗಾಗಿದೆ ಜೆಡಿಎಸ್ ಕಥೆ ಎಂದು ದಳ ನಾಯಕರ ಪಾದಯಾತ್ರೆ ಬಗ್ಗೆ ಮಾಜಿ ಡಿಸಿಎಂ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‍ನ ದಂಡನಾಯಕ ದೇವೇಗೌಡರೇ ಸೋತಿದ್ದಾರೆ. ಇದ್ದರಿಂದ ಜೆಡಿಎಸ್ ಪಕ್ಷ ದಿಕ್ಕು ದೆಸೆ ಇಲ್ಲದಂತಾಗಿದೆ. ದೇವೇಗೌಡರಿಗೆ ವಯಸ್ಸಾಗಿದೆ. ಅವರು ಮುಂದೆ ಚುನಾವಣೆಗೆ ಸ್ಪರ್ಧೆ ಮಾಡಲ್ಲ, ಮಾಡಲ್ಲ ಅಂತಾರೆ. ಆದರೆ ಅವರು ಸ್ಪರ್ಧೆ ಮಾಡುತ್ತಾರೆ ಎಂದರು.

    ಮಧ್ಯಂತರ ಚುನಾವಣೆ ಬಂದರೆ ಯಾವುದೇ ಕಾರಣಕ್ಕೂ ಬಿಜೆಪಿಯಿಂದ ಬರಲ್ಲ. ನಿತ್ಯವೂ ನಾವು ಅವರಿಗೆ ಟಾಂಗ್ ಕೋಡೋ ಬದಲು ಸುಮ್ಮನಿದ್ದರೆ ಮೈತ್ರಿ ಸರ್ಕಾರವೇ, ಸರ್ಕಾರವನ್ನು ಫಿನಿಶ್ ಮಾಡಿ ಬಿಡಲಿದೆ. ಈ ಸರ್ಕಾರ ಬದುಕಿದೆಯೋ ಸತ್ತಿದ್ಯೋ ಎಂದು ಡಾಕ್ಟರ್ ಬಿಪಿ ಚೆಕ್ ಮಾಡುವಂತಾಗಿದೆ. ಇವರ ಆಡಳಿತ 1 ವರ್ಷದಿಂದ ಇರುತ್ತೋ ಹೋಗುತ್ತೋ ಎನ್ನುವ ರೀತಿ ಇದೆ. ಮಧ್ಯಂತರ ಚುನಾವಣೆ ಬರುವುದಾದರೆ ಜೆಡಿಎಸ್- ಕಾಂಗ್ರೆಸ್ ಜಗಳದಿಂದ ಬರುತ್ತದೆ ಎಂದರು.

    ಈ ಸರ್ಕಾರ ಬೇಕಿರೋದು ಕೇವಲ ಮೂರು ಜನಕ್ಕೆ ಮಾತ್ರ. ಡಿಕೆ ಶಿವಕುಮಾರ್, ಕುಮಾರಸ್ವಾಮಿ ಹಾಗೂ ಪರಮೇಶ್ವರ್‍ಗೆ ಮಾತ್ರ ಈ ಸರ್ಕಾರ ಬೇಕಾಗಿದೆ. ಕಾಂಗ್ರೆಸ್‍ಗೂ ಬೇಕಿಲ್ಲ, ಜೆಡಿಎಸ್‍ಗೂ ಈ ಮೈತ್ರಿ ಬೇಕಿಲ್ಲ. ಕೇವಲ ಅಧಿಕಾರದ ಆಸೆಗೆ ಇವರು ಅಂಟಿಕೊಂಡಿದ್ದಾರೆ. ಕರ್ನಾಟಕದ ಜನ ಕಾಂಗ್ರೆಸ್‍ಗೆ ಒಂದು ನಾಮ, ಜೆಡಿಎಸ್‍ಗೊಂದು ನಾಮ ಹಾಕಿದ್ದಾರೆ. ಹೀಗೆ ನಾಮ ಹಾಕಿದ ಮೇಲೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕಿತ್ತು ಎಂದು ಕಿಡಿಕಾರಿದರು.

    ಕೇವಲ ಅಧಿಕಾರಕ್ಕಾಗಿ ಸ್ವಾರ್ಥ ಸಾಧನೆಗಾಗಿ ಸರ್ಕಾರ ನಡೆಸುತ್ತಿದ್ದಾರೆ. ಆದರೆ ಇರುವಷ್ಟು ದಿನ ಅಧಿಕಾರದಲ್ಲಿ ಇದ್ದು ಆಡಳಿತ ನಡೆಸುತ್ತಿದ್ದಾರೆ. ಸರ್ಕಾರ ಮಾಡೋ ಯೋಗ್ಯತೆ ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಿ. ನಾವು ಸರ್ಕಾರವನ್ನು ಮಾಡುತ್ತಿವಿ ಎಂದು ಮೈತ್ರಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

    ನನ್ನ ಅನ್ನ ತಿಂತಿದೀರ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಅದನ್ನು ಅವರ ಮನೆಯಿಂದ ತಂದು ಕೊಡ್ತಿದ್ದಾರಾ.? ಅವರ ಮನೆ ದುಡ್ಡು ಕೊಟ್ಟು, ರೋಡ್ ಮಾಡಿದರೆ, ಹಾಲು ಕೊಟ್ಟಿದ್ದರೆ, ಅಕ್ಕಿ ಕೊಟ್ಟಿದರೆ ಲೆಕ್ಕ ಬರಲಿ. ಸ್ವಾಮಿ ಈ ಪ್ರಪಂಚ ಹುಟ್ಟಿದಾಗಿನಿಂದಲೂ ನಾವು ಅನ್ನ ತಿನ್ನುತ್ತಿದ್ದೇವೆ, ಸಗಣಿ ತಿಂತಿಲ್ಲ. ತೆರಿಗೆ ಹಣದಿಂದ ಎಲ್ಲಾ ನಡಿತಿರೋದು. ಯಾರು ತಮ್ಮ ಮನೆಯಿಂದ ತಂದು ಕೊಡಲ್ಲ ಎಂದು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.

  • ಸರ್ಕಾರಿ ದುಡ್ಡು ಜೆಡಿಎಸ್ ಜಾತ್ರೆ – ಗ್ರಾಮ ವಾಸ್ತವ್ಯಕ್ಕೆ ರವಿಕುಮಾರ್ ವ್ಯಂಗ್ಯ

    ಸರ್ಕಾರಿ ದುಡ್ಡು ಜೆಡಿಎಸ್ ಜಾತ್ರೆ – ಗ್ರಾಮ ವಾಸ್ತವ್ಯಕ್ಕೆ ರವಿಕುಮಾರ್ ವ್ಯಂಗ್ಯ

    – ಸಿಎಂ ಕನಸಿನಲ್ಲೂ ಮೋದಿ ಕಾಡ್ತಿದ್ದಾರೆ

    ಯಾದಗಿರಿ: ಸರ್ಕಾರದ ದುಡ್ಡಿನಲ್ಲಿ ಜೆಡಿಎಸ್ ಗ್ರಾಮ ವಾಸ್ತವ್ಯ ಎಂಬ ಜಾತ್ರೆ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವ್ಯಂಗ್ಯವಾಡಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕನಸಿನಲ್ಲೂ ಮೋದಿ ಕಾಡುತ್ತಿದ್ದಾರೆ. ವೈಟಿಪಿಎಸ್ ಸಿಬ್ಬಂದಿಗೆ ಲಾಠಿ ಬೀಸಲು ಹೇಳುತ್ತಿರಾ. ಕರ್ನಾಟಕದಲ್ಲಿ ಪೊಲೀಸ್ ರಾಜ್ಯ ನಿರ್ಮಿಸಲು ನೀವು ಹೊರಟಿದ್ದೀರಾ ಎಂದು ಪ್ರಶ್ನಿಸಿ ಮುಖ್ಯಮಂತ್ರಿಗಳ ವಿರುದ್ಧ ಗುಡುಗಿದರು.

    ಸರ್ಕಾರದ ದುಡ್ಡಿನಲ್ಲಿ ಸಿಎಂ ಜೆಡಿಎಸ್ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಈ ಬಗ್ಗೆ ಸ್ಪಷ್ಟನೆಯನ್ನು ಕೊಡಬೇಕು. ಮಾಜಿ ಪ್ರಧಾನಿ ದೇವೇಗೌಡರು ಪುತ್ರನ ವ್ಯಾಮೋಹದಲ್ಲಿದ್ದಾರೆ. ಸಿಎಂ ಏನೇ ತಪ್ಪು ಮಾಡಿದರೂ ದೊಡ್ಡಗೌಡರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಶಾಲೆಗಳಿಗೆ ಮೂಲ ಸೌಕರ್ಯವನ್ನು ನೀಡದೆ. ಸಿಎಂ ‘ಗ್ರಾಮ ಡ್ರಾಮ’ ಮಾಡುತ್ತಿದ್ದಾರೆ. ನಾಟಕ ಮಾಡೋದನ್ನು ಬಿಟ್ಟು ನಿಜವಾದ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಹೇಳಿದರು.

    ಹೊಳೆನರಸೀಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದಾರೆ. ಆದರೆ ಯಾದಗಿರಿಗೆ ಸಿಎಂ ಮೆಡಿಕಲ್ ಕಾಲೇಜು ಬೇಡ ಎನ್ನುತ್ತಾರೆ. ಸಿಎಂ ಗ್ರಾಮ ವಾಸ್ತವ್ಯಕ್ಕೆ ನಿಂಬೆಹಣ್ಣಿನ ಶಕ್ತಿ ಅಡ್ಡಿ ಮಾಡುತ್ತಿದೆ ಎಂದು ದೇವೇಗೌಡರ ಕಾಲೆಳೆದ ರವಿಕುಮಾರ್, ಒಂದು ವರ್ಷ ರೆಸಾರ್ಟ್ ವಾಸವಾಯ್ತು, ಈಗ ಗ್ರಾಮ ಡ್ರಾಮ ನಂತರ ಅಮೆರಿಕಾಗೆ ಸಿಎಂ ತೆರಳಲಿದ್ದಾರೆ ಎಂದು ವ್ಯಂಗ್ಯವಾಡಿದರು.

  • ಮಧ್ಯಂತರ ಚುನಾವಣೆಗೆ ಸಿದ್ಧವಾಗುತ್ತಿವೆಯಾ ದೋಸ್ತಿ ಪಕ್ಷಗಳು?

    ಮಧ್ಯಂತರ ಚುನಾವಣೆಗೆ ಸಿದ್ಧವಾಗುತ್ತಿವೆಯಾ ದೋಸ್ತಿ ಪಕ್ಷಗಳು?

    ಬೆಂಗಳೂರು: ಮಧ್ಯಂತರ ಚುನಾವಣೆ ನಡೆಯಲ್ಲ ಎಂದು ಜೆಡಿಎಸ್ ವರಿಷ್ಠ ಎಚ್‍ಡಿ ದೇವೇಗೌಡರು ಮತ್ತು ಸಮನ್ವಯ ಸಮಿತಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದರೂ ಎರಡೂ ದೋಸ್ತಿ ಪಕ್ಷಗಳು ಮಾತ್ರ ಮಧ್ಯಂತರ ಚುನಾವಣೆಗಾಗಿ ಸಿದ್ಧವಾಗುತ್ತಿದೆಯಾ ಎಂಬ ಅನುಮಾನ ಮೂಡಿದೆ.

    ಯೋಗ ದಿನದಂದು ಮಧ್ಯಂತರ ಚುನಾವಣೆ ಬಗ್ಗೆ ಮಾತಾಡಿ ನಂತರ ಸ್ಪಷ್ಟನೆ ನೀಡಿದ್ದ ದೇವೇಗೌಡರು ಈಗ ಮಧ್ಯಂತರ ಚುನಾವಣೆಗಾಗಿ ಪಕ್ಷ ಸಂಘಟನೆಗೆ ಮತ್ತಷ್ಟು ಚುರುಕು ನೀಡಿದ್ದಾರೆ. ಸಭೆಗಳ ಮೇಲೆ ಸಭೆ ನಡೆಸುತ್ತಿರುವ ಮಾಜಿ ಪ್ರಧಾನಿಗಳು ಯಾವುದೇ ಸಮಯದಲ್ಲೂ ಚುನಾವಣೆ ಬರಬಹುದು. ಬೂತ್ ಮಟ್ಟದಲ್ಲಿ ಪಕ್ಷ ಕಟ್ಟಿ ಜಿಲ್ಲಾ ಮಟ್ಟದಲ್ಲಿ ಸದಸ್ಯರ ನೋಂದಣಿಗೆ ಚಾಲನೆ ಕೊಡಬೇಕು ಮತ್ತು ಜನರೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

    ಜೆಡಿಎಸ್ ಪಕ್ಷ ಸಂಘಟನೆ ಭಾಗವಾಗಿ ಶೀಘ್ರವೇ ಮಹಿಳಾ ಸಮಾವೇಶ ಮತ್ತು ಪರಿಶಿಷ್ಟ ಜಾತಿ-ಪಂಗಡಗಳ ಸಮುದಾಯದ ಸಮಾವೇಶವನ್ನು ಕೂಡ ನಡೆಸಲು ನಿರ್ಧರಿಸಲಾಗುತ್ತಿದೆ. ಇತ್ತ ಕಾಂಗ್ರೆಸ್‍ನಿಂದ ದೂರ ಉಳಿದಿರುವ ಅಹಿಂದ ಮತಗಳನ್ನು ಮತ್ತೆ ಸೆಳೆಯುವ ಸಲುವಾಗಿ ಆಗಸ್ಟ್‍ನಲ್ಲಿ ಬೃಹತ್ ಅಹಿಂದ ಸಮಾವೇಶಕ್ಕೆ ನಡೆಸಲು ಸಿದ್ದರಾಮಯ್ಯ ಅವರು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಮಧ್ಯಂತರ ಚುನಾವಣೆಯ ಅನುಮಾನ ಹೊತ್ತಲ್ಲೇ ದೋಸ್ತಿಗಳ ಮುಸುಕಿನ ಗುದ್ದಾಟಕ್ಕೆ ತೇಪೆ ಹಾಕಲು ಕಾಂಗ್ರೆಸ್ ಹೈ ಕಮಾಂಡ್ ತೀರ್ಮಾನ ಮಾಡಿದೆ. ಈ ಮೂಲಕ ಲೋಕಸಭಾ ಚುನಾವಣೆಯವರೆಗೆ ಮೈತ್ರಿ ಸಹಿಸಿಕೊಳ್ಳಿ ಎಂದಿದ್ದ ಕಾಂಗ್ರೆಸ್ ಹೈಕಮಾಂಡ್ ಇನ್ನು ಒಂದಷ್ಟು ದಿನ ಜೆಡಿಎಸ್ ದೋಸ್ತಿ ಸಹಿಸಿಕೊಳ್ಳಿ ಎನ್ನುವ ಕಿವಿ ಮಾತು ಹೇಳೋಕೆ ಮುಂದಾಯ್ತಾ ಎಂಬ ಅನುಮಾನವೊಂದು ರಾಜ್ಯ ರಾಜಕಾರಣದಲ್ಲಿ ಮೂಡಿದೆ. ಏಕೆಂದರೆ ಜೆಡಿಎಸ್ ನಾಯಕರ ಮಧ್ಯಂತರ ಚುನಾವಣೆಯ ಮಾತಿನ ಮಧ್ಯೆಯೂ ಕಾಂಗ್ರೆಸ್, ಜೆಡಿಎಸ್ ಸ್ನೇಹಕ್ಕೆ ಜೋತು ಬೀಳುತ್ತಿದೆ. ದೋಸ್ತಿ ನಾಯಕರ ಸಣ್ಣಪುಟ್ಟ ಅಸಮಧಾನಕ್ಕೂ ಕಾಂಗ್ರೆಸ್ ಹೈಕಮಾಂಡ್ ತೇಪೆ ಹಚ್ಚಲು ಮುಂದಾಗಿದೆ.