Tag: deve gowda

  • ರಾಜ್ಯ ಬಿಜೆಪಿಯ ಮೊದಲ ರಾಜ್ಯಾಧ್ಯಕ್ಷ ಎ.ಕೆ.ಸುಬ್ಬಯ್ಯ ನಿಧನ

    ರಾಜ್ಯ ಬಿಜೆಪಿಯ ಮೊದಲ ರಾಜ್ಯಾಧ್ಯಕ್ಷ ಎ.ಕೆ.ಸುಬ್ಬಯ್ಯ ನಿಧನ

    ಬೆಂಗಳೂರು: ಹಿರಿಯ ರಾಜಕಾರಣಿ ಮತ್ತು ಹೋರಾಟಗಾರ, ರಾಜ್ಯ ಬಿಜೆಪಿಯ ಮೊದಲ ರಾಜ್ಯಾಧ್ಯಕ್ಷ ಎ.ಕೆ.ಸುಬ್ಬಯ್ಯ(85) ವಯೋಸಹಜ ಕಾಯಿಲೆಯಿಂದ ವಿಧಿವಶರಾಗಿದ್ದಾರೆ.

    ಎ.ಕೆ.ಸುಬ್ಬಯ್ಯ ಅವರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಮಧ್ಯಾಹ್ನ ಸುಮಾರು 2.47ಕ್ಕೆ ನಿಧನರಾಗಿದ್ದಾರೆ. ಎ.ಕೆ.ಸುಬ್ಬಯ್ಯ ಅವರು ಕಿಡ್ನಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. ಕೆಲವು ದಿನಗಳ ಹಿಂದೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

    ಆರ್.ಟಿ ನಗರ ನಿವಾಸಕ್ಕೆ ಪಾರ್ಥಿವ ಶರೀರವನ್ನು ರವಾನೆ ಮಾಡಲಾಗಿದ್ದು, ನಿವಾಸದ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬುಧವಾರ ಕೊಡಗಿನ ಸ್ವಗ್ರಾಮಕ್ಕೆ ಪಾರ್ಥಿವ ಶರೀರವನ್ನು ರವಾನೆ ಮಾಡಲಿದ್ದು, ಸಂಜೆ ಸ್ವಗ್ರಾಮದಲ್ಲೇ ಅಂತ್ಯಸಂಸ್ಕಾರ ಮಾಡಲಾಗುತ್ತದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

    ಎ.ಕೆ.ಸುಬ್ಬಯ್ಯ ಅವರು ಮೂಲತಃ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೆಳ್ಳೂರು ಗ್ರಾಮದವರಾಗಿದ್ದು, ಕರ್ನಾಟಕ ಹೈಕೋರ್ಟ್ ವಕೀಲರಾಗಿದ್ದರು. ಸುಬ್ಬಯ್ಯ ಅವರು 1988 ಮತ್ತು 1994 ರ ನಡುವೆ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಕಾಂಗ್ರೆಸ್ ಸೇರುವ ಮೊದಲು ಬಿಜೆಪಿಯ ಮೊದಲ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕರ್ನಾಟಕದಲ್ಲಿ ಸ್ಥಾನ ಪಡೆಯುವ ಉದ್ದೇಶದಿಂದ 1980 ರಲ್ಲಿ ಎ.ಕೆ.ಸುಬ್ಬಯ್ಯ ಅವರು ಲಾಲ್‍ಬಾಗ್ ಸಿಲ್ವರ್ ಜುಬಿಲಿ ಹಾಲ್‍ನಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

    ಯುವ ಆರ್‍ಎಸ್‍ಎಸ್ ಕಾರ್ಯಕರ್ತರು ಬಿಜೆಪಿಗೆ ಸೇರಲು ಮತ್ತು ಕರ್ನಾಟಕದಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಿದ ಕೀರ್ತಿ ಎ.ಕೆ ಸುಬ್ಬಯ್ಯ ಅವರಿಗೆ ಸಲ್ಲುತ್ತದೆ. ಸುಬ್ಬಯ್ಯ ಅವರ ನಾಯಕತ್ವದಲ್ಲಿ 1983 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ 110 ಸ್ಥಾನಗಳಲ್ಲಿ 18 ಸ್ಥಾನಗಳನ್ನು ಗೆಲ್ಲುವ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು.

    ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು “ದೈವಾದಿನರಾದ ಹಿರಿಯ ನಾಯಕ ಎ.ಕೆ. ಸುಬ್ಬಯ್ಯನವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ಭಗವಂತ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಜನಸಂಘದಿಂದ ಬಂದು ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ನಂತರ ಹಲವಾರು ಸಮಾಜಮುಖಿ ಹೋರಾಟಗಳಲ್ಲಿ ಭಾಗಿಯಾಗಿರುವ ಎ.ಕೆ. ಸುಬ್ಬಯ್ಯನವರು ಅಗಲಿರುವ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಅವರು ನನ್ನ ಆತ್ಮೀಯ ಸ್ನೇಹಿತರಾಗಿದ್ದು, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನನ್ನ ಜೊತೆ ಸೆರೆಮನೆ ವಾಸವನ್ನು ಅನುಭವಿಸಿದ್ದರು” ಎಂದು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

  • ಚಲುವರಾಯಸ್ವಾಮಿ ಒಬ್ಬ ರಾಜಕೀಯ ವ್ಯಭಿಚಾರಿ: ಸುರೇಶ್ ಗೌಡ

    ಚಲುವರಾಯಸ್ವಾಮಿ ಒಬ್ಬ ರಾಜಕೀಯ ವ್ಯಭಿಚಾರಿ: ಸುರೇಶ್ ಗೌಡ

    ಮಂಡ್ಯ: ಮಾಜಿ ಸಚಿವ ಎನ್ ಚಲುವರಾಯಸ್ವಾಮಿ ರಾಜಕೀಯ ವ್ಯಭಿಚಾರಿ ಎಂದು ಜೆಡಿಎಸ್ ಶಾಸಕ ಸುರೇಶ್ ಗೌಡ ಕಿಡಿಕಾರಿದ್ದಾರೆ.

    ಇಂದು ಮಂಡ್ಯ ಜಿಲ್ಲೆ, ನಾಗಮಂಗಲ ಪಟ್ಟಣದಲ್ಲಿ ದೇವೇಗೌಡರ ಕುಟುಂಬದ ಬಗ್ಗೆ ಮಾಜಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಆತ ರಾಜ್ಯ ಮಟ್ಟದ ನಾಯಕರ ಜೊತೆ ಗುರುತಿಸಿಕೊಳ್ಳುವುದಕ್ಕೆ ಪ್ರಚಾರಕ್ಕಾಗಿ ಹಾಗೆಲ್ಲಾ ಮಾತನಾಡುತ್ತಾನೆ ಎಂದು ವಾಗ್ದಾಳಿ ಮಾಡಿದರು.

    ಕ್ಷೇತ್ರದ ಜನರು ನೀಡಿರುವ ತೀರ್ಪಿಗೆ ಬೆಲೆ ಕೊಟ್ಟು ಸುಮ್ಮನಿರುವುದು ಒಳಿತು. ಮೈತ್ರಿ ಸರ್ಕಾರ ಬಿದ್ದಾಗಲೇ ನಾವು ಮಧ್ಯಂತರ ಚುನಾವಣೆಗೆ ರೆಡಿಯಾಗಿದ್ದೇವೆ. ನಮಗೆ ಯಾರೂ ಅನಿವಾರ್ಯವಲ್ಲ. ಆದರೆ ನಾವು ಎಲ್ಲರಿಗೂ ಅನಿವಾರ್ಯವಾಗಿದ್ದೇವೆ. ಕಾಂಗ್ರೆಸ್ ಕೆಲ ನಾಯಕರಿಂದ ಕುಮಾರಸ್ವಾಮಿ ಅವರು ಬೇಸರಗೊಂಡು ಈ ರೀತಿ ಹೇಳಿಕೆಗಳನ್ನು ನೀಡಿದ್ದಾರೆ ಅವರ ಬಗ್ಗೆ ಯಾರು ವ್ಯಂಗ್ಯವಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

  • ಈಗ ಒಬ್ಬರಿಗೊಬ್ಬರ ಮೇಲೆ ಕೆಸರೆರೆಚಿಕೊಂಡರೆ ಮೈತ್ರಿ ಸರ್ಕಾರ ವಾಪಸ್ ಬರುತ್ತಾ: ಪುಟ್ಟರಾಜು

    ಈಗ ಒಬ್ಬರಿಗೊಬ್ಬರ ಮೇಲೆ ಕೆಸರೆರೆಚಿಕೊಂಡರೆ ಮೈತ್ರಿ ಸರ್ಕಾರ ವಾಪಸ್ ಬರುತ್ತಾ: ಪುಟ್ಟರಾಜು

    – ಹೆಚ್‍ಡಿಕೆಗೆ ಟೋಪಿ ಹಾಕೋದು ಹೇಳಿಕೊಟ್ಟಿದ್ದು ಚಲುವರಾಯಸ್ವಾಮಿ

    ಮಂಡ್ಯ: ಈಗ ಒಬ್ಬರಿಗೊಬ್ಬರ ಮೇಲೆ ಕೆಸರೆರೆಚಿಕೊಂಡರೆ ಮೈತ್ರಿ ಸರ್ಕಾರ ವಾಪಸ್ ಬರುತ್ತಾ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಪ್ರಶ್ನಿಸಿದರು.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮೈತ್ರಿ ಮುಂದುವರಿಯುವುದರ ಬಗ್ಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರು ತೀರ್ಮಾನ ಮಾಡುತ್ತಾರೆ. ಈಗ ಸಮ್ಮಿಶ್ರ ಸರ್ಕಾರ ಮುಗಿದು ಹೋದ ಕಥೆಯಾಗಿದೆ. ಈ ಒಬ್ಬರಿಗೊಬ್ಬರ ಮೇಲೆ ಕೆಸರೆರೆಚಿಕೊಂಡರೆ ಸಮ್ಮಿಶ್ರ ಸರ್ಕಾರ ವಾಪಸ್ ಬರುತ್ತಾ ಎಂದು ಪ್ರಶ್ನಿಸಿದರು.

    ಸಿದ್ದರಾಮಯ್ಯ ಅವರ ಬಗ್ಗೆ ದೇವೇಗೌಡರು ಹೇಳಿಕೆ ವಿಚಾರವಾಗಿ ಮಾತನಾಡಿದ ಪುಟ್ಟರಾಜು, ಎಂಪಿ ಚುನಾವಣೆ ಸಮಯದಲ್ಲಿ ಸಿದ್ದರಾಮಯ್ಯನ ಕೆಲ ಪಕ್ಕಾ ಬೆಂಬಲಿಗರೇ ನಿಖಿಲ್ ಸೋಲುತ್ತಾರೆ ಎಂದು ಮಾತನಾಡಿದ್ದರು. ಇದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಈ ವಿಚಾರಕ್ಕೆ ಮನನೊಂದ ಹೆಚ್‍ಡಿಡಿ ಈ ರೀತಿ ಹೇಳಿದ್ದಾರೆ. ಈಗ ಅದರ ಬಗ್ಗೆ ಮಾತನಾಡುವುದು ಬೇಡ. ನಮಗೆ ವಹಿಸಿದ ಜವಾಬ್ದಾರಿಯನ್ನು ಮಾತ್ರ ನಾವು ಮಾಡುತ್ತೇವೆ ಎಂದು ತಿಳಿಸಿದರು.

    ಹಳೆ ಮೈಸೂರು ಪ್ರಾಂತ್ಯದಲ್ಲಿ ಮೊದಲಿನಿಂದಲೂ ನಮಗೆ ಮತ್ತು ಕಾಂಗ್ರೆಸ್‍ಗೆ ಫೈಟ್ ಇತ್ತು. ನಾವು ಶತ್ರುಗಳಾಗಿಯೇ ಹೊಡೆದಾಡಿಕೊಂಡು ಬಂದವರು. ಈಗ ಒಂದಾಗಿ ಕೆಲಸ ಮಾಡುವ ವೇಳೆ ಈ ರೀತಿಯ ಬೆಳವಣಿಗೆ ಸಹಜ. ಇದನ್ನು ಸರಿಪಡಿಸುವ ಕೆಲಸವನ್ನು ನಮ್ಮ ನಾಯಕರು ಮಾಡುತ್ತಾರೆ. ಈ ಬಗ್ಗೆ ನಮ್ಮ ನಾಯಕರ ಬಳಿ ಹೇಳಿದ್ದೇನೆ, ಬೇಡ ಎಂದರೆ ಬಿಟ್ಟಾಕಿ. ಆದರ ಬದಲು ಹೀಗೆ ಕಿತ್ತಾಡೋದು ಬೇಡಾ ಎಂದು ಹೇಳಿದ್ದೇನೆ ಎಂದು ಹೇಳಿದರು.

    ಈ ವೇಳೆ ಮಾಜಿ ಶಾಸಕ ಚಲುವರಾಯಸ್ವಾಮಿ ಬಗ್ಗೆ ಮಾತನಾಡಿದ ಅವರು, ಚಲುವರಾಯಸ್ವಾಮಿ ಯಾರ ಬೆನ್ನ ಹಿಂದೆ ನಿಂತಿದ್ದಾರೆ ಎಂದು ನನಗೆ ಗೊತ್ತಿಲ್ಲ. ಯಡಿಯೂರಪ್ಪ ಅವರ ಬೆನ್ನ ಹಿಂದೆಯೋ ಸಿದ್ದರಾಮಯ್ಯ ಅವರ ಬೆನ್ನ ಹಿಂದೆಯೋ ಎಂದು ಅರ್ಥ ಆಗುತ್ತಿಲ್ಲ. ಹೆಚ್‍ಡಿಕೆಗೆ ಟೋಪಿ ಹಾಕೋದು ಹೇಳಿಕೊಟ್ಟಿದ್ದೇ ಚಲುವರಾಯಸ್ವಾಮಿ. ಇದರ ಬಗ್ಗೆ ನಾನು ಆಮೇಲೆ ಮಾತಾಡುತ್ತೇನೆ ಎಂದು ಕಿಡಿಕಾರಿದರು.

  • ಹಾಲು ಕುಡಿದ ಮಕ್ಕಳೇ ಬದ್ಕಲ್ಲ, ಇನ್ನು ವಿಷ ಕುಡಿದೋರು ಬದುಕ್ತಾರಾ- ಸಿದ್ದರಾಮಯ್ಯ ವ್ಯಂಗ್ಯ

    ಹಾಲು ಕುಡಿದ ಮಕ್ಕಳೇ ಬದ್ಕಲ್ಲ, ಇನ್ನು ವಿಷ ಕುಡಿದೋರು ಬದುಕ್ತಾರಾ- ಸಿದ್ದರಾಮಯ್ಯ ವ್ಯಂಗ್ಯ

    ಹುಬ್ಬಳ್ಳಿ: ಹಾಲು ಕುಡಿದ ಮಕ್ಕಳು ಬದುಕಲ್ಲ. ಇನ್ನು ವಿಷ ಕುಡಿದವರು ಬದುಕುತ್ತಾರಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

    ಇಂದು ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಿಎಸ್‍ವೈ ಸರ್ಕಾರ ಬಹಳ ದಿನ ಇರುತ್ತೆ ಎಂದು ಯಾರಿಗೂ ನಂಬಿಕೆ ಇಲ್ಲ. ರೆಬಲ್ಸ್ ಗಳನ್ನಿಟ್ಟುಕೊಂಡು ಸರ್ಕಾರ ಮುನ್ನೆಡೆಸೋಕ್ಕಾಗುತ್ತಾ. ಹಾಲು ಕುಡಿದ ಮಕ್ಕಳೆ ಬದುಕಲ್ಲ. ಇನ್ನು ವಿಷ ಕುಡಿದವರು ಬದಕ್ತಾರಾ ಎಂದು ಹೇಳಿದರು.

    ಬಿಜೆಪಿ ಸರ್ಕಾರದ ಸಚಿವರು ನೆರೆಪಿಡಿತ ಜಿಲ್ಲೆಗಳಲ್ಲಿ ಇರಬೇಕಿತ್ತು. ಆದರೆ ದೆಹಲಿ ಟು ಬೆಂಗಳೂರು ಮಧ್ಯೆ ಟೂರ್ ಮಾಡುತ್ತಿದ್ದಾರೆ. ದೊಡ್ಡ ಪ್ರಮಾಣದಲ್ಲಿ ನೆರೆ ಹಾನಿಯಾದರೂ ಕೇಂದ್ರದಿಂದ ಸೂಕ್ತ ಪರಿಹಾರ ತರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ವಾಮ ಮಾರ್ಗದಿಂದ ಸರ್ಕಾರ ರಚನೆ ಮಾಡಿದ್ದಾರೆ. ಈಗಲಾದರೂ ಬಿಜೆಪಿ ನಾಯಕರು ಜನರ ಕಡೆ ನೋಡಬೇಕು ಎಂದು ಬಿಜೆಪಿ ಶಾಸಕರನ್ನು ತರಾಟೆಗೆ ತೆಗೆದುಕೊಂಡರು.

    ದೇವೇಗೌಡರ ಕುಟುಂಬದವರು ಮಾಡಿದ ಆರೋಪದ ಬಗ್ಗೆ ನಾನು ಸುಧೀರ್ಘವಾಗಿ ಉತ್ತರ ಕೊಟ್ಟಿದ್ದೇನೆ. ಬೈರತಿ ಬಸವರಾಜು ಮತ್ತು ಸೋಮಶೇಖರ್‍ ರನ್ನು ನಾನು ಮುಂಬೈಗೆ ಕಳುಸಿದ್ದೇನೆ ಎಂದು ಅವರು ಹೇಳುತ್ತಾರೆ. ಹಾಗಾದರೆ ವಿಶ್ವನಾಥ್, ನಾರಾಯಣಗೌಡ ಮತ್ತು ಗೋಪಾಲಯ್ಯರನ್ನು ಯಾರು ಕಳುಹಿಸಿದ್ದು, ಅವರು ಜೆಡಿಎಸ್‍ನವರು ಅಲ್ಲವೆ. ಹೆಚ್‍ಡಿಕೆ ಮತ್ತು ಹೆಚ್‍ಡಿಡಿ ನನ್ನ ಮೇಲೆ ಗೂಬೆ ಕೂರಿಸೋಕೆ ನೋಡುತ್ತಿದ್ದಾರೆ ಎಂದು ಆರೋಪಿಸಿದರು.

    ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದ ಬಗ್ಗೆ ಕೇಳಿದಾಗ, ಆ ಬಗ್ಗೆ ನನಗೇನು ಗೊತ್ತಿಲ್ಲ. ಇವತ್ತು ಗುಲಾಮ್ ನಬಿ ಅಜಾದ್ ಬರುತ್ತಾರೆ ಎಂದು ಕೇಳಿದ್ದೇನೆ. ಆದರೆ ನಾನು ನೆರೆ ಪೀಡಿತ ಪ್ರದೇಶಗಳ ಪ್ರವಾಸದಲ್ಲಿದ್ದೇನೆ ಎಂದು ಹೇಳಿದರು.

  • ಸಿದ್ದರಾಮಯ್ಯ, ಹೆಚ್‍ಡಿಡಿ ಇಬ್ಬರು ಬೆನ್ನಿಗೆ ಚೂರಿ ಹಾಕುವವರೇ: ವಿ.ಶ್ರೀನಿವಾಸ್ ಪ್ರಸಾದ್

    ಸಿದ್ದರಾಮಯ್ಯ, ಹೆಚ್‍ಡಿಡಿ ಇಬ್ಬರು ಬೆನ್ನಿಗೆ ಚೂರಿ ಹಾಕುವವರೇ: ವಿ.ಶ್ರೀನಿವಾಸ್ ಪ್ರಸಾದ್

    – ಸಿದ್ದರಾಮಯ್ಯ ಬೆನ್ನಿಗೆ ಚೂರಿ ಹಾಕಿಯೇ ಮೇಲೆ ಬಂದಿದ್ದು

    ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ದೇವೇಗೌಡ ಇಬ್ಬರು ಬೆನ್ನಿಗೆ ಚೂರಿ ಹಾಕುವವರೇ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ಮಾಡಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಬೆನ್ನಿಗೆ ಚೂರಿ ಹಾಕಿಯೇ ಮೇಲೆ ಬಂದಿದ್ದು. ದೇವೇಗೌಡರು ಸಹ ಬೆನ್ನಿಗೆ ಚೂರಿ ಹಾಕಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಾಯಿಗೆ ಬಂದಂತೆ ಅಪ್ಪನಾಣೆ ಇಟ್ಟುಕೊಂಡು ಮಾತನಾಡಿದರು. ಆದರೆ ಲೋಕಸಭೆಯಲ್ಲಿ ಭಾಯಿ, ಭಾಯಿ ಎಂದು ಅಕ್ಕಪಕ್ಕದಲ್ಲಿ ಕುಳಿತುಕೊಂಡರು ಎಂದು ವ್ಯಂಗ್ಯವಾಡಿದರು.

    ಕಳೆದ ಮೂರು ದಿನದಿಂದ ಒಬ್ಬರ ಮೇಲೋಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಜನ ಎಲ್ಲವನ್ನು ನೋಡುತ್ತಿದ್ದಾರೆ. ಇವರನ್ನು ನೋಡಿ ಜನ ಅಸಹ್ಯ ಪಡುತ್ತಿದ್ದಾರೆ. ವಿರೋಧ ಪಕ್ಷದಲ್ಲಿದ್ದೀರಾ. ಈಗಲಾದರೂ ಗಂಭೀರವಾಗಿ ಇರುವುದನ್ನು ಕಲಿಯಿರಿ ಎಂದು ದೇವೇಗೌಡರು ಹಾಗೂ ಸಿದ್ದರಾಮಯ್ಯಗೆ ಹೆಸರನ್ನು ಹೇಳಿ ವಿ.ಶ್ರೀನಿವಾಸ್ ಪ್ರಸಾದ್ ಸಲಹೆ ನೀಡಿದರು.

    ಮಾನಸಿಕವಾಗಿ ಅವರು ಮೈತ್ರಿಯಾಗಿರಲಿಲ್ಲ. ದೈಹಿಕವಾಗಿ ಬಂದು ಒಟ್ಟಿಗೆ ಕುಳಿತುಕೊಳ್ಳುತ್ತಿದ್ದರು. ಸದನದಲ್ಲಿ ಪಾಯಿಂಟ್ ಆಫ್ ಆರ್ಡರ್ ಎತ್ತಿ ಆಗಿನ ಸಿಎಂ ಕುಮಾರಸ್ವಾಮಿಯನ್ನು ಸಮರ್ಥಿಸಿಕೊಂಡಿದ್ದು ಸಿದ್ದರಾಮಯ್ಯನೇ ಅಲ್ವಾ. ಈಗ ಏಕೆ ಅವರ ವಿರುದ್ಧ ಮಾತನಾಡುತ್ತಿದ್ದಾರೆ. ಇವರ ಹೇಳಿಕೆಗಳನ್ನು ನೋಡುತ್ತಿದ್ದರೆ ಜನರಿಗೆ ಅಸಹ್ಯವಾಗುತ್ತದೆ ಎಂದು ಕಿಡಿಕಾರಿದರು.

  • ಹೆಚ್‍ಡಿಡಿ ಅಂತರಂಗದಲ್ಲಿದ್ದ ಸತ್ಯ ಈಗ ಬಹಿರಂಗ: ಬಸವರಾಜ ಬೊಮ್ಮಾಯಿ

    ಹೆಚ್‍ಡಿಡಿ ಅಂತರಂಗದಲ್ಲಿದ್ದ ಸತ್ಯ ಈಗ ಬಹಿರಂಗ: ಬಸವರಾಜ ಬೊಮ್ಮಾಯಿ

    ಹಾವೇರಿ: ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು ಗಂಭೀರ ಆರೋಪ ಮಾಡಿದ್ದು, ದೇವೇಗೌಡರು ಅಂತರಂಗದಲ್ಲಿ ಇದ್ದ ಸತ್ಯ ಈಗ ಬಹಿರಂಗವಾಗಿದೆ ಎಂದು ನೂತನ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಹಾವೇರಿಯಲ್ಲಿ ಮಾತನಾಡಿದ ಅವರು, ಯಾವ ವಿಚಾರ ಅಂತರಂಗಕ್ಕೆ ಗೊತ್ತಿತ್ತು, ಇದನ್ನು ದೇವೇಗೌಡರು ಇಂದು ಬಹಿರಂಗಗೊಳಿಸಿದ್ದಾರೆ. ಇದು ಮುಂದಿನ ದಿನದ ರಾಜ್ಯ ರಾಜಕಾರಣದ ಮೇಲೆ ಬಹುದೊಡ್ಡ ಪರಿಣಾಮ ಬೀರಲಿದೆ ಎಂದು ಭವಿಷ್ಯ ನುಡಿದರು.

    ಇದೇ ವೇಳೆ ನೆರೆ ಪರಿಹಾರ ಪರಿಶೀಲನಾ ಸಭೆಯಲ್ಲಿ ತಹಶೀಲ್ದಾರಗಳಿಗೆ ಕ್ಲಾಸ್ ತೆಗೆದುಕೊಂಡ ಅವರು, ಸಂತ್ರಸ್ತರಿಗೆ 10 ಸಾವಿರ ಪರಿಹಾರ ಹಣ ಕೊಡುವುದಕ್ಕೆ ಏಕೆ ವಿಳಂಬವಾಯಿತು. ಮೊದಲು ನಿಮ್ಮ ಮನೋಭಾವನೆ ಬದಲಾಯಿಸಿಕೊಳ್ಳಿ. ಹೆಚ್ಚು ಮಳೆಯಾದಲ್ಲಿ ಕಡಿಮೆ ಪರಿಹಾರ ಕೊಡುತ್ತೀರಾ ಎಂದು ಶಿಗ್ಗಾಂವಿ ತಹಶೀಲ್ದಾರ್ ವಿರುದ್ಧ ಕಿಡಿಕಾರಿದರು. ಅಲ್ಲದೇ ಪ್ರತಿ ತಹಶೀಲ್ದಾರಗಳಿಗೂ ಹೀಗೆ ಮಾಡಿದರೆ ನಿಮ್ಮನ್ನು ಯಾಕೆ ಅಮಾನತುಗೊಳಿಸಬಾರದು ಎಂದು ಪ್ರಶ್ನಿಸುವ ಮೂಲಕ ಖಡಕ್ ಎಚ್ಚರಿಕೆ ನೀಡಿದರು.

    ದೇವೇಗೌಡರು ಹೇಳಿದ್ದೇನು?
    ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು ಕಾಂಗ್ರೆಸ್‍ನ ಉದ್ದೇಶವಾಗಿತ್ತು. ಆದರೆ, ಹೈಕಮಾಂಡ್ ಮೈತ್ರಿ ನಿರ್ಧಾರಕ್ಕೆ ಸಿದ್ದರಾಮಯ್ಯ ಒಪ್ಪಿಗೆ ಇರಲಿಲ್ಲ. ನನ್ನ ಮತ್ತು ಕುಮಾರಸ್ವಾಮಿ ಜೊತೆಗೆ ಬಗೆಹರಿಯದ ಕದನ ಸಿದ್ದರಾಮಯ್ಯಗಿತ್ತು. ಅಷ್ಟೇ ಅಲ್ಲದೇ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯ ಸ್ಥಾನದಲ್ಲಿ ನೋಡಲು ಸಿದ್ದರಾಮಯ್ಯನವರಿಗೆ ಆಗ್ತಿರಲಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‍ನಿಂದಾದ ಸೋಲಿನಿಂದ ಕಂಗೆಟ್ಟಿದ್ದ ಸಿದ್ದರಾಮಯ್ಯನನವರಿಗೆ ಅಸಾಧ್ಯ ಸಿಟ್ಟು ತರಿಸಿತ್ತು.

    ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಬೆಂಬಲಿಗರು ನಮ್ಮ ವಿರುದ್ಧ ಬಹಿರಂಗವಾಗಿ ಕೆಲಸ ಮಾಡಿದ್ದರಿಂದ ತುಮಕೂರಿನಲ್ಲಿ ನಾನು ಮತ್ತು ಮಂಡ್ಯದಲ್ಲಿ ನಿಖಿಲ್ ಸೋಲಲು ಕಾರಣವಾಯಿತು. ನಮ್ಮ ವಿರುದ್ಧ ಕೆಲಸ ಮಾಡಿದ ಕಾಂಗ್ರೆಸ್ಸಿನವರಿಗೆ ಅವರು ನೋಟಿಸ್ ನೀಡಲಿಲ್ಲ. ಸದ್ಯಕ್ಕೆ ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ವಿರುದ್ಧ ಹೋರಾಡಲು ಯಾರೂ ಇಲ್ಲ ಎಂದು ಕಿಡಿಕಾರಿದ್ದರು.

  • ನನ್ನ ಮಗನ ಸರ್ಕಾರ ಬೀಳಿಸಲು ಕೆಲ ಕಾಂಗ್ರೆಸ್‍ನವರು ಬಿಜೆಪಿ ಜೊತೆ ಕೈಜೋಡಿಸಿದ್ರು – ಹೆಚ್‍ಡಿಡಿ

    ನನ್ನ ಮಗನ ಸರ್ಕಾರ ಬೀಳಿಸಲು ಕೆಲ ಕಾಂಗ್ರೆಸ್‍ನವರು ಬಿಜೆಪಿ ಜೊತೆ ಕೈಜೋಡಿಸಿದ್ರು – ಹೆಚ್‍ಡಿಡಿ

    – ಈವರೆಗೂ ಒಂದೇ ಒಂದು ರೂಪಾಯಿ ಮೋದಿ ಕೊಟ್ಟಿಲ್ಲ

    ಬೆಂಗಳೂರು: ಕುಮಾರಸ್ವಾಮಿ ಸರ್ಕಾರ ಬೀಳಿಸಲು ಕಾಂಗ್ರೆಸ್ಸಿನ ಕೆಲವರು ಬಿಜೆಪಿ ಜೊತೆ ಕೈ ಜೋಡಿಸಿದ್ದರು ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.

    ಇಂದು ಜೆಪಿ ಭವನದಲ್ಲಿ ಮಾತಾನಾಡಿದ ಅವರು, ಕುಮಾರಸ್ವಾಮಿ ಸಿಎಂ ಕುರ್ಚಿ ಮೇಲೆ ಕುಳಿತಿರುವುದನ್ನು ಕೆಲವರಿಗೆ ನೋಡೋಕೆ ಆಗಲಿಲ್ಲ. ಕೆಲವು ಕಾಂಗ್ರೆಸ್ ಮಿತ್ರರಿಗೆ ಸರ್ಕಾರ ಕೆಡವಬೇಕಿತ್ತು. ಹೀಗಾಗಿ ಬಿಜೆಪಿಯವರ ಜೊತೆ ಕೈ ಜೋಡಿಸಿ ಸರ್ಕಾರ ತೆಗೆದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ನೆರೆ ಪರಿಹಾರದ ಹಣ ಬಿಡುಗಡೆ ಮಾಡದ್ದಕ್ಕೆ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ ದೇವೇಗೌಡರು ಈವರೆಗೂ ಒಂದೇ ಒಂದು ರೂಪಾಯಿ ಮೋದಿ ಕೊಟ್ಟಿಲ್ಲ. ಈಗ ಕೊಟ್ಟಿರೋದು ಹಿಂದಿನ ಬರದ ಅನುದಾನ ಅಷ್ಟೇ. ನರೇಗಾದ ಕೂಲಿ ಹಣ ಕೂಡಾ ಕೇಂದ್ರ ಸರ್ಕಾರ ಕೊಟ್ಟಿಲ್ಲ. 26 ಸಂಸದರನ್ನು ಜನ ಕಳಿಸಿದ್ದಾರೆ. ಇವರೆಲ್ಲ ಏನೋ ಕಡಿದು ಕಟ್ಟೆ ಹಾಕ್ತೀನಿ ಅಂತಾರೆ ನೋಡೋಣ ಏನ್ ಕೊಡುತ್ತಾರೆ ಎಂದು ಕಿಡಿಕಾರಿದರು.

    ಈ ದೇವೇಗೌಡ ಸುಮ್ಮನೆ ಕುಳಿತುಕೊಳ್ಳೊಲ್ಲ. ಯಾರಿಗೂ ಹೆದರಬೇಕಿಲ್ಲ, ಯಾರ ದಾಕ್ಷಿಣ್ಯವೂ ಇಲ್ಲ. ನಾನು ವ್ಯಕ್ತಿಗತ ಟೀಕೆ ಮಾಡುವುದಿಲ್ಲ. ರಾಜ್ಯದ ಮಹಾಜನತೆ ಪಾಪ ಅವರಿಗೆ ಆಶೀರ್ವಾದ ಮಾಡಿಬಿಟ್ಟರು. ಅವರನ್ನು ಹಿಡಿದು ನಿಲ್ಲಿಸಲು ಆಗುತ್ತಿಲ್ಲ. ಹಾಲು ಕಾದಷ್ಟು ಒಳ್ಳೆಯದು ನೋಡೋಣ ಬಿಡಿ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈಗ ದೆಹಲಿಯಲ್ಲಿ ಹೋರಾಟ ಮಾಡೋಕೆ ನನ್ನ ಬಳಿ ಯಾರು ಇಲ್ಲ. ನನ್ನ ಮೊಮ್ಮಗ ಒಬ್ಬ ಮಾತ್ರ ದೆಹಲಿಯಲ್ಲಿ ಇದ್ದಾನೆ ಅಷ್ಟೇ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

  • ಸಿದ್ದರಾಮಯ್ಯ ಎಲ್ಲಿದ್ದಾರೋ ಗೊತ್ತಾಗುತ್ತಿಲ್ಲ, ಅವರು ಬೇಗ ಹೊರಗೆ ಬರಲಿ: ಎಚ್. ವಿಶ್ವನಾಥ್

    ಸಿದ್ದರಾಮಯ್ಯ ಎಲ್ಲಿದ್ದಾರೋ ಗೊತ್ತಾಗುತ್ತಿಲ್ಲ, ಅವರು ಬೇಗ ಹೊರಗೆ ಬರಲಿ: ಎಚ್. ವಿಶ್ವನಾಥ್

    ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಿದ್ದಾರೋ ಗೊತ್ತಾಗುತ್ತಿಲ್ಲ. ಮೈಸೂರಲ್ಲೂ ಕಾಣುತ್ತಿಲ್ಲ, ಬಾದಾಮಿ ಕ್ಷೇತ್ರದಲ್ಲೂ ಕಾಣುತ್ತಿಲ್ಲ. ಅವರ ಬೇಗ ಹೊರಗೆ ಬಂದು ಸರ್ಕಾರಕ್ಕೆ ಮಾರ್ಗದರ್ಶನ ಮಾಡಬೇಕು ಎಂದು ಅನರ್ಹ ಶಾಸಕ ಎಚ್. ವಿಶ್ವನಾಥ್ ಹೇಳಿದ್ದಾರೆ.

    ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸಿಎಂ ಯಡಿಯೂರಪ್ಪಗೆ ಬರೆದ ಪತ್ರದಲ್ಲಿ ಒಳ್ಳೆಯ ಸಲಹೆ ಕೊಟ್ಟಿದ್ದಾರೆ. ಒಬ್ಬ ಮತ್ಸದ್ದಿಯಾಗಿ ಅವರು ಕೊಟ್ಟ ಸಲಹೆಗಳು ಬಹಳ ಉತ್ತಮವಾಗಿವೆ ಎಂದು ಹೇಳಿದರು.

    ಇದೇ ವೇಳೆ ರಾಜ್ಯದಲ್ಲಿ ದೂರವಾಣಿ ಕದ್ದಾಲಿಕೆ ದೊಡ್ಡ ಮಟ್ಟದಲ್ಲಿ ನಡೆದಿದೆ. ಸಿದ್ದರಾಮಯ್ಯ ಅವರ ಪಿಎ ವೆಂಕಟೇಶ್ ಎಂಬವರ ಫೋನ್ ಕದ್ದಾಲಿಕೆ ಮಾಡಲಾಗಿದೆ. ರೆಬೆಲ್ ಶಾಸಕರ ದೂರವಾಣಿ ಕದ್ದಾಲಿಕೆ ಮಾಡಲಾಗಿದೆ. ಹೀಗೆ ಕದ್ದಾಲಿಕೆ ಮಾಡಿ ರೆಬೆಲ್ ಶಾಸಕರನ್ನು ಸಿಎಂ (ಹೆಚ್‍ಡಿಕೆ) ಕಚೇರಿಯಿಂದ ಬ್ಲಾಕ್ ಮೇಲ್ ಮಾಡಲಾಯಿತು. ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದವನ ದೂರವಾಣಿಯನ್ನು ಜೆಡಿಎಸ್ ಮುಖ್ಯಮಂತ್ರಿಯೇ ಕದ್ದಾಲಿಕೆ ಮಾಡಿದ್ದಾರೆ. ನಮ್ಮ ಮೇಲೆ ನಿಮಗೆ ವಿಶ್ವಾಸ ಇರಲಿಲ್ಲವೇ ಎಂದು ವಿಶ್ವನಾಥ್ ಪ್ರಶ್ನೆ ಮಾಡಿದರು.

    ವಿಶ್ವನಾಥ್ ಮಾತನಾಡಿರುವುದು ಸಿಕ್ಕಿದೆ ಚೀ ಚೀ ಕೇಳಿಸಿಕೊಳ್ಳಲು ಆಗಲ್ಲ ಎಂದು ಕುಮಾರಸ್ವಾಮಿ ಸದನದಲ್ಲಿ ಹೇಳಿದ್ದರು. ನಾನು ಮೊಬೈಲ್‍ನಲ್ಲಿ ಸಾವಿರ ಮಾತನಾಡುತ್ತೇನೆ. ಹೀಗೆ ಮಾತಾಡಬೇಕು ಎಂದು ಹೇಳೋಕೆ ನೀವು ಯಾರು? ಬೆಂಗಳೂರು ಪೊಲೀಸ್ ಆಯುಕ್ತರ ದೂರವಾಣಿಯೆ ಕದ್ದಾಲಿಕೆ ಮಾಡಲಾಗಿದೆ. ರಾಜ್ಯದ ಸಿಎಂ ಆಗಿ ಹೆಚ್‍ಡಿಕೆ ಎಲ್ಲಾ ಕಾನೂನು ಉಲ್ಲಂಘನೆ ಮಾಡಿದರು. ಹಳ್ಳಿ ಕಡೆ ಮನೆಯವರಿಗೆ ಮನೆಯವರೇ ಮದ್ದು ಹಾಕುತ್ತಾರೆ ಎನ್ನುವ ಮಾತಿದೆ ಇದು ಅದೇ ಕಥೆ ಎಂದು ವ್ಯಂಗ್ಯವಾಡಿದರು.

    ಜಿಟಿ ದೇವೇಗೌಡರ ಜೊತೆ ಸಿಎಂ ಭೇಟಿ ವಿಚಾರವಾಗಿ ಮಾತನಾಡಿದ ವಿಶ್ವನಾಥ್, ಸಿಎಂ ಭೇಟಿ ಸಹಜ, ಇಬ್ಬರು ರಾಜಕಾರಣಿಗಳು ಭೇಟಿಯಾದ ಮೇಲೆ ರಾಜಕಾರಣ ಮಾತನಾಡದೆ ಇರೋಕೆ ಆಗುತ್ತಾ? ಜಿಟಿ ದೇವೇಗೌಡರಿಗೆ ಬಿಜೆಪಿ ಹಳೆಯ ಪಾರ್ಟಿ, ಅವರೇನೂ ಬಿಜೆಪಿಗೆ ಹೊಸಬರಲ್ಲ. ನೆರೆ ಪ್ರವಾಹದ ಹಿನ್ನೆಲೆಯಲ್ಲಿ ಸರಳ ದಸರಾ ಮಾಡಬಾರದು, ದಸರಾ ಅದ್ಧೂರಿಯಾಗೆ ಮಾಡಬೇಕು. ದಸರಾದಲ್ಲಿ ಸರಳತೆ ಬೇಡ ಎಲ್ಲಾ ಕಷ್ಟ ನಿವಾರಿಸು ಅಂತಾನೇ ನಾಡಹಬ್ಬ ಮಾಡುವುದು ಇದರಲ್ಲಿ ಸರಳತೆ ಬೇಡ ಎಂದು ಹೇಳಿದರು.

    ಶಾಸಕರ ಅನರ್ಹತೆ ಪ್ರಕರಣದಲ್ಲಿ ನ್ಯಾಯಾಲಯದ ನಿಲುವಿಗೆ ಎಚ್.ವಿಶ್ವನಾಥ್ ಪ್ರತಿಕ್ರಿಯಿಸಿ, ಇದನ್ನು ತ್ವರಿತಗತಿಯಲ್ಲಿ ವಿಚಾರಣೆ ಸಾಧ್ಯವಿಲ್ಲ. ನಮಗೆ ಅನರ್ಹಗೊಳಿಸವಾಗ ನಿಯಮಗಳನ್ನು ಪಾಲಿಸಿಲ್ಲ. ನಮಗೆ ನ್ಯಾಯ ಸಿಕ್ಕಿಲ್ಲ. ಈ ವಿಚಾರವಾಗಿ ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ. ನಾವು ಎಲ್ಲರೂ ಧೈರ್ಯವಾಗಿದ್ದೇವೆ. ನಾವೆಲ್ಲರೂ ಧೈರ್ಯವಂತರೇ ಇರುವುದು ಎಂದು ಹೇಳಿದರು.

  • ತುಮಕೂರಲ್ಲಿ ಸೋತಿದ್ದು ವರದಾನ, ಸೋಲಿಸಿದ ಮಹಾನುಭಾವರಿಗೆ ನಮಸ್ಕಾರ: ಹೆಚ್‍ಡಿಡಿ

    ತುಮಕೂರಲ್ಲಿ ಸೋತಿದ್ದು ವರದಾನ, ಸೋಲಿಸಿದ ಮಹಾನುಭಾವರಿಗೆ ನಮಸ್ಕಾರ: ಹೆಚ್‍ಡಿಡಿ

    ಬೆಂಗಳೂರು: ಕಳೆದ ಲೋಕಸಭೆ ಚುನಾವಣೆಯಲ್ಲಿ ತುಮಕೂರಲ್ಲಿ ಸೋತಿದ್ದು ವರದಾನ ಅಂದುಕೊಳ್ತೀನಿ. ಸೋಲಿಸಿದ ಮಹಾನುಭಾವರಿಗೆ ನಮಸ್ಕಾರ. ಅವರಿಗೆ ಕೆಟ್ಟದ್ದು ಬಯಸೋಕೆ ಹೋಗಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ.

    ಇಂದು ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ತುಮಕೂರಿನಲ್ಲಿ ಸೋತಿದ್ದೆ ನನಗೆ ವರದಾನವಾಗಿದೆ. ಸೋಲಿಸಿದ ಪುಣ್ಯಾತ್ಮರಿಗೆ ಒಳ್ಳೆಯದಾಗಲಿ. ಈ ಸೋಲು ನನ್ನಲ್ಲಿ ಹೋರಾಟದ ಕೆಚ್ಚನ್ನು ಇನ್ನೂ ಹೆಚ್ಚು ಮಾಡಿದೆ. ಮತ್ತೆ ಪಕ್ಷ ಸಂಘಟನೆ ಮಾಡುತ್ತೇನೆ. ನೀವೆಲ್ಲ ನನ್ನ ಜೊತೆ ಇರಿ ಎಂದು ಜೆಡಿಎಸ್ ಕಾರ್ಯಕರ್ತರಿಗೆ ಕರೆ ಕೊಟ್ಟರು.

    14 ತಿಂಗಳು ಸರ್ಕಾರ ಮಾಡಿ ಸರ್ಕಾರ ಪತನವಾಯಿತು. ಸರ್ಕಾರ ಹೋಗಲು ಯಾರು ಹೊಣೆ ಎಂದು ಗೊತ್ತಿಲ್ಲ. ಅದಕ್ಕೆ ನಾವು ಕಾರಣ ಇರಬಹುದು. ಅನೇಕರು ಯಾಕೆ ಸಮ್ಮಿಶ್ರ ಸರ್ಕಾರಕ್ಕೆ ಒಪ್ಪಿಕೊಂಡ್ರಿ ಎಂದು ಕೇಳಿದರು. ಇದಕ್ಕೆ ನಾನೇ ಕಾರಣ ಇದರಿಂದ ನನ್ನ ಹಾದಿಯಾಗಿ ಅನೇಕರು ಸೋತರು. ಈ ಪಕ್ಷ ಉಳಿಸೋದು ನಿಮ್ಮ ಕೈಯಲ್ಲಿ ಇದೆ. ಯಾರು 3 ಜನ ಹೊರಗೆ ಹೋದರು ಅವರ ವಿರುದ್ಧ ಕ್ಷೇತ್ರದ ಜನರ ಜೊತೆ ಮಾತನಾಡಿ ಅಭ್ಯರ್ಥಿ ಹಾಕ್ತೀವಿ. ಯಾರ ಬಗ್ಗೆ ನಾನು ದೋಷ ಮಾಡಲ್ಲ. ಎಲ್ಲದ್ದಕ್ಕೂ ನಾನೇ ಕಾರಣ ಎಂದು ಹೇಳಿದರು.

    ನಾನು ದೇವರನ್ನು ನಂಬುತ್ತೇನೆ. ಆದರೆ ನನ್ನನ್ನೂ ಸೇರಿಸಿ ಎಲ್ಲಾ ಸೋತ ಮೇಲೆ ಯಾರನ್ನೂ ದೂಷಣೆ ಮಾಡಲ್ಲ. ಯಾರು ಹೋದರು, ಯಾರು ಇದ್ದಾರೆ ಎಂಬುದರ ಬಗ್ಗೆ ನಾನು ಮಾತನಾಡುವುದಿಲ್ಲ. ಉಳಿದಿರುವವರಲ್ಲೇ ಸೂಕ್ತ ಅಭ್ಯರ್ಥಿಗಳನ್ನು ಹುಡುಕುತ್ತೇವೆ. ರಾಜ್ಯದಲ್ಲಿ ಮಳೆ ಆದರೂ ನೀವೆಲ್ಲ ಬಂದಿದ್ದೀರಿ ಅಂದರೆ ಪಕ್ಷ ಉಳಿಸುವ ಛಲ ನಿಮ್ಮಲ್ಲಿದೆ ಎಂದು ಸಂತಸ ವ್ಯಕ್ತ ಪಡಿಸಿದರು.

    ಚುನಾವಣೆ ಯಾವಾಗ ಬರುತ್ತೆ ಅನ್ನೋದು ಯಾರಿಗೂ ಗೊತ್ತಿಲ್ಲ. ಮುಖ್ಯಮಂತ್ರಿಗಳು ಮೂರು ವರ್ಷ ಹತ್ತು ತಿಂಗಳು ಸರ್ಕಾರ ಮಾಡೋದಿದ್ದರೆ ಮಾಡಲಿ. ಮೋದಿ, ಅಮಿತ್ ಶಾ ಇಬ್ಬರೇ ಎಲ್ಲಾ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ಯಾವಾಗ ಯಾವ ತೀರ್ಮಾನ ತೆಗೆದುಕೊಳ್ತಾರೋ ಗೊತ್ತಿಲ್ಲ ಎಂದು ಬಿಜೆಪಿ ವಿರುದ್ಧ ಗುಡುಗಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ಅವರ ಯೋಜನೆ ಮುಂದುವರಿಸಿಕೊಂಡು ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡಿದರು. ಈ ರೀತಿಯ ಯೋಜನೆ ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಉತ್ತರ ಕರ್ನಾಟಕ ಭಾಗದಲ್ಲಿ ದೊಡ್ಡ ರೈತರ ಸಮಾವೇಶ ಮಾಡ್ತೀನಿ. ಯಾವಾಗಲೇ ಚುನಾವಣೆ ಬರಲಿ ಕಾರ್ಯಕರ್ತರು ಸದಾ ಸಿದ್ಧವಾಗಿ ಇರಬೇಕು. ಹೀಗಾಗಿ ಸಮಾವೇಶ ಮಾಡುತ್ತಿದ್ದೇನೆ ಎಂದು ತಿಳಿಸಿದರು.

    ಯಾವಾಗ ಬೇಕಾದರೂ ಮಧ್ಯಂತರ ಚುನಾವಣೆ ಬರಬಹುದು ಎಂದು ಸೂಚನೆ ಕೊಟ್ಟ ದೇವೇಗೌಡರು ಸೆಪ್ಟೆಂಬರ್‍ನಲ್ಲಿ ರೈತರ ಸಮಾವೇಶ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ-ಪಂಗಡಗಳ ಮೂರು ಸಮಾವೇಶ ಮಾಡುತ್ತೇನೆ ಎಂದು ಘೋಷಣೆ ಮಾಡಿದರು.

  • ದೇವೇಗೌಡ ಅಂಡ್ ಕಂಪನಿಯ ಹೇಳಿಕೆಯನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ: ಶೆಟ್ಟರ್

    ದೇವೇಗೌಡ ಅಂಡ್ ಕಂಪನಿಯ ಹೇಳಿಕೆಯನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ: ಶೆಟ್ಟರ್

    – ಸಚಿವ ಸಂಪುಟ ವಿಸ್ತರಣೆ ವಿಚಾರ ಸಿಎಂಗೆ ಬಿಟ್ಟದ್ದು

    ಹುಬ್ಬಳ್ಳಿ: ದೇವೇಗೌಡ ಅಂಡ್ ಕಂಪನಿಯ ಹೇಳಿಕೆಯನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರ ರಾಜಕೀಯ ನಿವೃತ್ತಿ ಹೇಳಿಕೆ ವಿಚಾರವಾಗಿ ಮಾತನಾಡಿದ ಶೆಟ್ಟರ್, ದೇವೇಗೌಡ ಅಂಡ್ ಕಂಪನಿಯ ಹೇಳಿಕೆಯನ್ನು ಯಾವುದೇ ರೀತಿ ಸೀರಿಯಸ್ ಆಗಿ ತೆಗೆದುಕೊಳ್ಳಲಾಗುವುದಿಲ್ಲ ಎಂದು ಹೇಳಿದರು.

    ಸಚಿವ ಸಂಪುಟ ವಿಸ್ತರಣೆ ವಿಚಾರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಬಿಟ್ಟದ್ದು. ನಾಳೆ ಅಥವಾ ನಾಡಿದ್ದು ಯಡಿಯೂರಪ್ಪ ಅವರು ದೆಹಲಿಗೆ ತೆರಳಲಿದ್ದಾರೆ. ಹೈಕಮಾಂಡ್‍ನ ನಿರ್ದೇಶನದಂತೆ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದು ತಳಿಸಿದರು.

    ಡಿಸಿಎಂ ಸ್ಥಾನ ನೇಮಕ ಮಾಡುವ ವಿಚಾರ ಹೈಕಮಾಂಡ್ ನಿರ್ಧರಿಸಲಿದೆ. ಉತ್ತರ ಕರ್ನಾಟಕ ಭಾಗದವರಿಗೆ ಸಚಿವ ಸ್ಥಾನ ನೀಡುವ ವಿಚಾರ ಸಿಎಂ ವಿವೇಚನೆಗೆ ಬಿಟ್ಟಿದ್ದು. ಉತ್ತರ ದಕ್ಷಿಣ ಎನ್ನುವ ಭೇದ ಭಾವ ಇಲ್ಲ ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಶ್ರಮಿಸಲಿದೆ. ಉತ್ತರ ಕರ್ನಾಟಕ ಭಾಗದಲ್ಲಿನ ನೆರೆ ಹಾವಳಿ ಕುರಿತು ಸಿಎಂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ ಬಿಜೆಪಿ ಸರ್ಕಾರ ಸ್ಪಂದಿಸಲಿದೆ ಎಂದು ತಿಳಿಸಿದರು.

    ನಾನು ಯಾವುದೇ ಸ್ಥಾನದ ನಿರೀಕ್ಷೆಯಲ್ಲಿಲ್ಲ ಪಕ್ಷ ನನಗೆ ಯಾವುದೇ ಜವಾಬ್ದಾರಿ ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತೇನೆ. ಅತೃಪ್ತ ಶಾಸಕರು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಸಮರ್ಥರಿದ್ದಾರೆ. ಅವರು ಹೊಸ ಪಕ್ಷವನ್ನು ಬೇಕಾದರೂ ಹುಟ್ಟು ಹಾಕಬಹುದು. ಅವರೊಂದಿಗೆ ನಮ್ಮ ನಾಯಕರು ಮಾತನಾಡಿದ್ದಾರೆ ಆದ್ರೆ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.