Tag: deve gowda

  • ರಾಜ್ಯಸಭಾ ಸದಸ್ಯರಾಗಿ ದೇವೇಗೌಡರು ಪ್ರಮಾಣ ವಚನ ಸ್ವೀಕಾರ

    ರಾಜ್ಯಸಭಾ ಸದಸ್ಯರಾಗಿ ದೇವೇಗೌಡರು ಪ್ರಮಾಣ ವಚನ ಸ್ವೀಕಾರ

    ನವದೆಹಲಿ: ಮಾಜಿ ಪ್ರಧಾನ ಮಂತ್ರಿ ಮತ್ತು ಜಾತ್ಯಾತೀತ ಜೆಡಿಎಸ್ ಮುಖ್ಯಸ್ಥ ಎಚ್.ಡಿ.ದೇವೇಗೌಡ ಅವರು ಇಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

    ಇದೇ ಮೊದಲ ಬಾರಿಗೆ ಸಂಸತ್‍ನ ಮುಂಗಾರು ಅಧಿವೇಶನ ಭಾನುವಾರ ಕೂಡ ನಡೆಯುತ್ತಿದೆ. ಹೀಗಾಗಿ ದೇವೇಗೌಡರು ಶನಿವಾರ ರಾತ್ರಿಯೇ ದೆಹಲಿಗೆ ಹೋಗಿದ್ದರು. ಇಂದು ಬೆಳಗ್ಗೆ ಸುಮಾರು 9 ಗಂಟೆಗೆ ರಾಜ್ಯಸಭೆ ಸಭಾಧ್ಯಕ್ಷ ವೆಂಕಯ್ಯನಾಯ್ಡು ಸಮ್ಮುಖದಲ್ಲಿ ಎಚ್.ಡಿ.ದೇವೇಗೌಡ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

    ರಾಜ್ಯಸಭೆ ಸದಸ್ಯರಾದ ಬಳಿಕ ಇದೇ ಮೊದಲ ಬಾರಿ ದೇವೇಗೌಡರು ಕಲಾಪಕ್ಕೆ ಹಾಜರಾಗಿದ್ದಾರೆ. ದೇವೇಗೌಡರು 24 ವರ್ಷಗಳ ಬಳಿಕ ಎರಡನೇ ಬಾರಿಗೆ ರಾಜ್ಯಸಭೆ ಸದಸ್ಯರಾಗಿದ್ದಾರೆ. ಈ ಹಿಂದೆ ಪ್ರಧಾನ ಮಂತ್ರಿಯಾಗಿದ್ದ ವೇಳೆ ಅವರು ಮೇಲ್ಮನೆಗೆ ಆಯ್ಕೆಯಾಗಿದ್ದರು.

    ರಾಜ್ಯಸಭೆಯಲ್ಲಿ ತೆರವಾದ ನಾಲ್ಕು ಸ್ಥಾನಗಳಿಗಾಗಿ ಜೂನ್ 12ರಂದು ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ದೇವೇಗೌಡರು ಕಾಂಗ್ರೆಸ್ ಬೆಂಬಲದೊಂದಿಗೆ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. 61 ಹೊಸ ಸದಸ್ಯರಲ್ಲಿ 45 ಮಂದಿ ಜುಲೈ 22 ರಂದು ಸಂಸತ್ ಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು.

    ಕೊರೊನಾ ಹಿನ್ನೆಲೆ ಹಿರಿಯ ನಾಗರಿಕರಿಗೆ ಪ್ರಯಾಣಿಸಲು ಕೋವಿಡ್ ಪ್ರೇರಿತ ನಿರ್ಬಂಧಗಳಿಂದಾಗಿ ಆಗ ದೇವೇಗೌರಡು ನವದೆಹಲಿಗೆ ಹೋಗಲು ಸಾಧ್ಯವಾಗಲಿಲ್ಲ. ಇದೀಗ ವೈದ್ಯರ ಸಲಹೆಯ ಮೇರೆಗೆ ದೇವೇಗೌಡರು ತಮ್ಮ ಪತ್ನಿ ಚೆನ್ನಮ್ಮ ಅವರೊಂದಿಗೆ ದೆಹಲಿಗೆ ಹೋಗಿದ್ದು, ಪ್ರಮಾಣ ವಚನ ಸ್ವೀಕರಿಸಿದ್ದಾರೆ.

    ಶನಿವಾರ ಹಿಂದಿ ಹೇರಿಕೆಯ ಬಗ್ಗೆ ಸಂಸದೆ ಸುಮಲತಾ ಅಂಬರೀಷ್ ಸಂಸತ್‍ನಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಲೋಕಸಭೆ ಕಲಾಪದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಂಸದೆ ಸುಮಲತಾ, ಹಿಂದಿ ಹೇರಿಕೆಯಿಂದ ಪ್ರಾದೇಶಿಕ ಭಾಷೆಗಳಿಗೆ ಹಾನಿ ಉಂಟಾಗಲಿದೆ. ಹೀಗಾಗಿ ಹಿಂದಿ ಹೇರಿಕೆಯನ್ನು ಕನ್ನಡಿಗರಾದ ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಜನರ ಭಾವನೆಯೂ ಇದೆ ಆಗಿದೆ. ಕೇಂದ್ರ ಸರ್ಕಾರ, ತ್ರಿಭಾಷ ಸೂತ್ರದ ಜಾರಿ ವಿಚಾರದಲ್ಲಿ ಪುನರ್‍ವಿಮರ್ಷೆ ಮಾಡಿಕೊಳ್ಳಬೇಕು ಎಂದು ಸುಮಲತಾ ಅಂಬರೀಶ್ ಆಗ್ರಹಿಸಿದ್ದರು.

  • ದೇವೇಗೌಡರ ಪಕ್ಷದಲ್ಲಿ ಟಿಕೆಟ್ ಪಡೆಯಲು ದುಡ್ಡು ಕೊಡಬೇಕು: ಕೆ.ಎನ್.ರಾಜಣ್ಣ

    ದೇವೇಗೌಡರ ಪಕ್ಷದಲ್ಲಿ ಟಿಕೆಟ್ ಪಡೆಯಲು ದುಡ್ಡು ಕೊಡಬೇಕು: ಕೆ.ಎನ್.ರಾಜಣ್ಣ

    – ಪಕ್ಷ ಟಿಕೆಟ್ ಕೊಟ್ಟರೆ ಆಗಲ್ಲ, ದುಡ್ಡು ಕೊಡಬೇಕು

    ತುಮಕೂರು: ದೇವೇಗೌಡರ ಪಕ್ಷದಲ್ಲಿ ಟಿಕೆಟ್ ಪಡೆಯಲು ಅಭ್ಯರ್ಥಿಗಳು ದುಡ್ಡು ಕೊಡಬೇಕು ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ.

    ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಕೆಪಿಸಿಸಿ ಅಧ್ಯಕ್ಷರ ಜೊತೆ ಮಾತಾಡಿ ಬಂದಿದ್ದೇನೆ. ಶಿರಾ ಕ್ಷೇತ್ರದಲ್ಲಿ ಹಿಂದುಳಿದ ಸಮುದಾಯಕ್ಕೆ ಟಿಕೆಟ್ ಕೊಡಬೇಕು ಅನ್ನೋದು ನನ್ನ ಅಭಿಪ್ರಾಯ ಎಂದು ತಿಳಿಸಿದರು.

    ಬಿಹಾರ ಚುನಾವಣೆ ಸಂದರ್ಭದಲ್ಲಿ ಶಿರಾ ಉಪ ಚುನಾವಣೆ ನಡೆಯಬಹುದು ಎಂದು ಅಂದುಕೊಂಡಿದ್ದೇನೆ. ಅದಕ್ಕೂ ಮುಂಚೆಯೇ ನಡೆಯಬಹುದು ಹೇಳುವುದಕ್ಕೆ ಬರುವುದಿಲ್ಲ. ಟೆಕೆಟ್ ವಿಚಾರದಲ್ಲಿ ರಾಜ್ಯದ ಮುಖಂಡರು ಯಾವ ತೀರ್ಮಾನ ಮಾಡುತ್ತಾರೋ ಗೊತ್ತಿಲ್ಲ. ನನಗೆ ಟಿಕೆಟ್ ಕೊಟ್ಟರೆ ಮಾತ್ರ ಆಗಲ್ಲ. ಪಕ್ಷದಿಂದ ದುಡ್ಡು ಕೊಡಬೇಕು. ದುಡ್ಡು ಇಲ್ಲದೇ ಟಿಕೆಟ್ ತಗೊಂಡು ಏನ್ ಮಾಡಲಿ ಎಂದು ಕೆ.ಎನ್ ರಾಜಣ್ಣ ಪ್ರಶ್ನಿಸಿದರು.

    ನಂತರ ಯಾರು ದುಡ್ಡು ಕೊಡಬೇಕು ಎಂಬ ಪ್ರಶ್ನೆಗೆ ಉತ್ತರಿಸಿರುವ ರಾಜಣ್ಣ, ಪಕ್ಷವೇ ನಮಗೆ ದುಡ್ಡುಕೊಡಬೇಕು. ಇದೇನು ದೇವೇಗೌಡರ ಪಕ್ಷಣ ಅಭ್ಯರ್ಥಿಗಳೇ ದುಡ್ಡು ಕೊಟ್ಟು ಬಿ-ಫಾರ್ಮ್ ಇಸ್ಕೊಂಡು ಬರೋಕೆ. ಇದು ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟ ಹಣವನ್ನು ಕೊಡಬೇಕು. ದೇವೇಗೌಡರ ಪಕ್ಷದಲ್ಲಿ ಟಿಕೆಟ್ ಪಡೆಯಲೂ ಅಭ್ಯರ್ಥಿಗಳು ದುಡ್ಡು ಕೊಡಬೇಕು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಕೊಟ್ಟು ಪಕ್ಷವೇ ಅಭ್ಯರ್ಥಿಗಳಿಗೆ ಹಣ ಕೊಡುತ್ತದೆ ಎಂದು ತಿಳಿಸಿದ್ದಾರೆ.

  • ದೇವೇಗೌಡರ ನೇತೃತ್ವದಲ್ಲಿ ನಾಳೆ ಹಾಸನದಲ್ಲಿ ಪ್ರತಿಭಟನೆ: ಹೆಚ್‍ಡಿ.ರೇವಣ್ಣ

    ದೇವೇಗೌಡರ ನೇತೃತ್ವದಲ್ಲಿ ನಾಳೆ ಹಾಸನದಲ್ಲಿ ಪ್ರತಿಭಟನೆ: ಹೆಚ್‍ಡಿ.ರೇವಣ್ಣ

    ಹಾಸನ: ರೈತ ಮತ್ತು ಕಾರ್ಮಿಕರ ಹಿತಕ್ಕೆ ಧಕ್ಕೆ ತರುವ ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳಲು ಒತ್ತಾಯಿಸಿ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಹಾಸನದಲ್ಲಿ ಆಗಸ್ಟ್ 14ರ ಶುಕ್ರವಾರ ಮಧ್ಯಾಹ್ನ 12ಕ್ಕೆ ಬೃಹತ್ ಪ್ರತಿಭಟನೆ ಮಾಡುವುದಾಗಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ.

    ಹಾಸನದಲ್ಲಿ ಮಾತನಾಡಿದ ಅವರು, ಪ್ರಗತಿಪರ, ರೈತಪರ ಮತ್ತು ಕಾರ್ಮಿಕರ ಪರ ಇರುವ ಕಾಯ್ದೆಗಳು ಕರ್ನಾಟಕ ಭೂ ಸುಧಾರಣೆ ಕಾಯ್ದೆ-1961, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ನಿಯಂತ್ರಣ ಮತ್ತು ಅಭಿವೃದ್ಧಿ ಕಾಯಿದೆ-1966 ಮತ್ತು ಕೈಗಾರಿಕಾ ವ್ಯಾಜ್ಯ ಕಾಯ್ದೆ-1947, ಕಾರ್ಖಾನೆ ಕಾಯ್ದೆ-1948 ಹಾಗೂ ಗುತ್ತಿಗೆ ಕಾರ್ಮಿಕರ ನಿಯಂತ್ರಣ ಮತ್ತು ನಿರ್ಮೂಲನೆ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಮೂಲಕ ರೈತ ಮತ್ತು ಕಾರ್ಮಿಕರ ಹಿತಕ್ಕೆ ಧಕ್ಕೆ ತರುವ ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳಲು ಒತ್ತಾಯಿಸಿ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಸಂಸದರು, ಶಾಸಕರು, ಜಿಪಂ ಸದಸ್ಯರು, ಪಕ್ಷದ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಎಲ್ಲಾ ಸೇರಿ ಹೇಮಾವತಿ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ಮೂಲಕ ಬಂದು ಡಿಸಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.

    ಕೊರೊನಾ ಇರುವುದರಿಂದ ಸಾಮಾಜಿಕ ಅಂತರದಲ್ಲಿ ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡುವುದಾಗಿ ಹೇಳಿದ ಅವರು, ಸರ್ಕಾರ ಪ್ರತಿಭಟನೆಗೂ ಮಣಿಯದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

  • ಅಶಾಂತಿಯೇ ಕೆಲವರ ರಾಜಮಾರ್ಗ ಎಂದಾದ್ರೆ, ಆ ಮಾರ್ಗವನ್ನೇ ಬದಲಿಸಲು ಸರ್ಕಾರ ಬದ್ಧ: ಆರ್.ಅಶೋಕ್

    ಅಶಾಂತಿಯೇ ಕೆಲವರ ರಾಜಮಾರ್ಗ ಎಂದಾದ್ರೆ, ಆ ಮಾರ್ಗವನ್ನೇ ಬದಲಿಸಲು ಸರ್ಕಾರ ಬದ್ಧ: ಆರ್.ಅಶೋಕ್

    – ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ದೇವೇಗೌಡರು ಮನವಿ

    ಬೆಂಗಳೂರು: ಅಶಾಂತಿಯೇ ಕೆಲವರ ರಾಜಮಾರ್ಗ ಎಂದಾದರೆ, ಆ ಮಾರ್ಗವನ್ನೇ ಬದಲಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಕೆಜಿ ಹಳ್ಳಿಯಲ್ಲಿ ನಡೆದ ಗಲಭೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಧರ್ಮದ ಹೆಸರಿನಲ್ಲಿ ಗೂಂಡಾಗಿರಿ ಮಾಡುವವರಿಗೆ ಶಿಕ್ಷೆಯಾಗಬೇಕು: ಹೆಚ್‍ಡಿಕೆ

    “ಶಾಂತಿಯಿಂದ ಬದುಕೋಣ ಎಂಬುದು ನಮ್ಮ ಆಶಯ. ಅಶಾಂತಿಯೇ ಕೆಲವರ ರಾಜಮಾರ್ಗ ಎಂದಾದರೆ, ಆ ಮಾರ್ಗವನ್ನೇ ಬದಲಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಮ್ಮ ಪೊಲೀಸ್ ವ್ಯವಸ್ಥೆ ಸದೃಢವಾಗಿದೆ. ನಿನ್ನೆ ರಾತ್ರಿ ಗಲಭೆ ನಡೆದ ಜಾಗದಲ್ಲಿ ಅಲ್ಲಿನ ಸ್ಥಳೀಯರು SDPI ಕಾರ್ಯವಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ದಿಶೆಯಲ್ಲೂ ಸರ್ಕಾರ ತನಿಖೆ ಮಾಡಲಿದೆ” ಎಂದು ಆರ್.ಅಶೋಕ್ ಟ್ವೀಟ್ ಮೂಲಕ ಕೆಜಿ ಹಳ್ಳಿಯಲ್ಲಿ ನಡೆದ ಗಲಭೆಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಅಲ್ಲದೇ ಎಸ್‍ಡಿಪಿಐ ಸಂಘಟನೆಯ ಪಾತ್ರದ ಬಗ್ಗೆ ತನಿಖೆ ಮಾಡೋದಾಗಿ ಅಶೋಕ್ ಮಾಹಿತಿ ನೀಡಿದ್ದಾರೆ. ಇನ್ನೂ ಡಿಜೆ ಹಳ್ಳಿ ಘಟನೆಗೆ ಮಾಜಿ ಪ್ರಧಾನಿ ದೇವೇಗೌಡ ಕೂಡ ಖಂಡನೆ ವ್ಯಕ್ತ ಪಡಿಸಿದ್ದಾರೆ.

    “ಬೆಂಗಳೂರಿನಲ್ಲಿನ ಗಲಭೆ ಪ್ರಕರಣ ತೀವ್ರ ಖಂಡನೀಯ. ಸಮಾಜದ ಸ್ವಾಸ್ಥ್ಯ ಕದಡುವುದರಿಂದ ಯಾರಿಗೂ ಉಪಯೋಗವಿಲ್ಲ, ಎಲ್ಲರಿಗೂ ನಷ್ಟ. ಪ್ರಚೋದನೆ ಮಾಡುವುದು ತಪ್ಪು, ಪ್ರಚೋದಿತರಾಗಿ ಸಾರ್ವಜನಿಕರು, ಪೊಲೀಸರು, ಪತ್ರಕರ್ತರು ಹೀಗೆ ಎಲ್ಲರ ಮೇಲೆ ಹಲ್ಲೆ ಮಾಡಿ ಗಲಾಟೆ ಮಾಡುವುದೂ ತಪ್ಪು. ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ” ದೇವೇಗೌಡರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

  • ಕಾಂಗ್ರೆಸ್ಸಿನವರು ತಮ್ಮ ಬೇಳೆ ಬೇಯಿಸಿಕೊಳ್ಳಲು ನನ್ನನ್ನು ಪೆದ್ದು ಮಾಡಲು ಮುಂದಾದಿರಿ: ಎಚ್‍ಡಿಕೆ

    ಕಾಂಗ್ರೆಸ್ಸಿನವರು ತಮ್ಮ ಬೇಳೆ ಬೇಯಿಸಿಕೊಳ್ಳಲು ನನ್ನನ್ನು ಪೆದ್ದು ಮಾಡಲು ಮುಂದಾದಿರಿ: ಎಚ್‍ಡಿಕೆ

    – ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ

    ಬೆಂಗಳೂರು: ಕಾಂಗ್ರೆಸ್ಸಿನವರು ತಮ್ಮ ಬೇಳೆ ಬೇಯಿಸಿಕೊಳ್ಳಲು ನನ್ನನ್ನು ಪೆದ್ದು ಮಾಡಲು ಮುಂದಾದಿರಿ. ಆದರೆ ನಾಡಿನ ರೈತರ ಹಿತ ಕಾಯಲು ನಾನು ಜಾಣತನ ಪ್ರದರ್ಶಿಸಿದೆ ಎಂಬುದು ನೆನಪಿರಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

    ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸಿಎಂ ಆದಾಗ ಕಾಂಗ್ರೆಸ್ ನೈತಿಕತೆ ಚೆನ್ನಾಗಿತ್ತೆ? ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಈ ಟ್ವೀಟ್‍ಗೆ ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದು, ಸರಣಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮೊದಲಿಗೆ “ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸಿಎಂ ಆದಾಗ ಕಾಂಗ್ರೆಸ್ ನೈತಿಕತೆ ಚೆನ್ನಾಗಿತ್ತೆ? ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ನನ್ನನ್ನು ನೇರವಾಗಿ ಪ್ರಶ್ನಿಸಲಾಗದ ಕಾಂಗ್ರೆಸ್ಸಿನ ಅತಿರಥ ಮಹಾರಥರು ಪಕ್ಷದ ಟ್ವಿಟ್ಟರ್ ಖಾತೆ ಮೂಲಕ ದಾಳಿ ಮಾಡಿ ಓಡಿ ಹೋಗಿದ್ದಾರೆ. ಆಯ್ತು, ಚರ್ಚೆ ಆರಂಭವಾಗಿದೆ. ಅದನ್ನು ನಾನು ಪೂರ್ತಿಗೊಳಿಸುತ್ತೇನೆ” ಎಂದಿದ್ದಾರೆ.

    ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯದ ನಾಯಕರು ಜೆಡಿಎಸ್ ಎದುರು ನಡು ಬಗ್ಗಿಸಿ ನಾವು ಬೇಡವೆಂದರೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸಿದಿರಿ. ಆನಂತರ ಒತ್ತಡಗಳನ್ನು ಹೇರಿ ಬ್ಯಾಕ್ ಸೀಟ್ ಡ್ರೈವಿಂಗ್ ಮಾಡಿದಾಗ ಕಾಂಗ್ರೆಸ್ಸಿ ನೈತಿಕತೆ ಎಲ್ಲಿತ್ತು? ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

    “ರೈತರ ಸಾಲ ಮನ್ನಾ ಮಾಡಿ ರಾಜಧರ್ಮ ಪಾಲಿಸಬೇಕಿತ್ತು. ನಿಮ್ಮೆಲ್ಲಾ ಆಟಗಳು ಗೊತ್ತಿದ್ದು ಕೂಡ ರಾಜ್ಯದ ಜನತೆಯ ಹಿತಕ್ಕಾಗಿ ನಾನು ಕೂಡ ಚಾಣಕ್ಯ ನೀತಿಯನ್ನು ಪ್ರದರ್ಶಿಸಿ ರೈತರ ಹಿತ ರಕ್ಷಿಸಿದೆ. ಇದರಲ್ಲಿ ನನ್ನ ವೈಯಕ್ತಿಕ ಲಾಭವೇನಿಲ್ಲ. ಬೇಡವೆಂದರೂ ನಮ್ಮ ಮನೆ ಬಾಗಿಲಿಗೆ ಬಂದವರು ನೀವು. ನಾನು ಅಮಾಯಕನಾಗಿರಲಿಲ್ಲ. ಕಾಂಗ್ರೆಸ್ಸಿನವರು ತಮ್ಮ ಬೇಳೆ ಬೇಯಿಸಿಕೊಳ್ಳಲು ನನ್ನನ್ನು ಪೆದ್ದು ಮಾಡಲು ಮುಂದಾದಿರಿ. ಆದರೆ ನಾಡಿನ ರೈತರ ಹಿತ ಕಾಯಲು ನಾನು ಜಾಣತನ ಪ್ರದರ್ಶಿಸಿದೆ ಎಂಬುದು ನೆನಪಿರಲಿ” ಎಂದಿದ್ದಾರೆ.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಾಗ ಕಾಂಗ್ರೆಸ್ಸಿನ ರಾಷ್ಟ್ರ, ರಾಜ್ಯ ನಾಯಕರು ಇದ್ದ ಸಭೆಯಲ್ಲಿ ದೇವೇಗೌಡರು ಕಾಂಗ್ರೆಸ್ಸಿಗೆ ಸಲಹೆ ನೀಡಿ ಖರ್ಗೆ ಆಗಲಿ ಎಂದರು. ಖರ್ಗೆ ಸಿಎಂ ಆಗುವುದನ್ನು ಕಾಂಗ್ರೆಸ್ ಒಳಗಿನ ನಾಯಕರೇ ತಡೆದರು. ಆ ನಾಯಕರುಗಳು ಯಾರ್ಯಾರೆಂದು ಕಾಂಗ್ರೆಸ್ ಹುಡುಕಿಕೊಳ್ಳಲಿ. ಆಗ ಅವರ ನೈತಿಕತೆ ಪ್ರಶ್ನೆಗೆ ಅವರದೇ ನಾಯಕರಿಂದ ಉತ್ತರ ಸಿಗಬಹುದು” ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

    ಕುಮಾರಸ್ವಾಮಿ ಅಜ್ಞಾತ, ಅಪ್ರಸ್ತುತರಾಗಿದ್ದಾರೆ ಎಂದೂ ಕಾಂಗ್ರೆಸ್ಸಿನ ನಾಯಕರು ಪಕ್ಷದ ಟ್ವಿಟ್ವರ್ ಮೂಲಕ ದಾಳಿ ಮಾಡಿದ್ದಾರೆ. ದೇಶದ ಎಷ್ಟು ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರಸ್ತುತವಾಗಿದೆ? ಪ್ರತ್ಯಕ್ಷವಾಗಿ ರಾಜಕಾರಣ ಮಾಡುತ್ತಿದೆ? ಅನಾಥವಾಗಿದೆ? ಇದಕ್ಕೆ ಉತ್ತರಿಸಲು ನಾಯಕರ್ಯಾರಾದರೂ ಇದ್ದಾರೋ? ಇಲ್ಲ ಕಾಂಗ್ರೆಸ್ಸಿನ ಟ್ವಿಟರ್ ಖಾತೆಗೆ ಸೀಮಿತವೋ? ಎಂದು ಸಾಲು ಸಾಲು ಪ್ರಶ್ನೆ ಮಾಡಿದರು.

    “ಬೇರೆ ಪಕ್ಷದ ಶಾಸಕರಿಗೆ ಸ್ವಯಂ ಸೇರ್ಪಡೆಯ ‘ಮಾರುವೇಶ’ ಹಾಕಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಕ್ಕೂ, ಬಿಜೆಪಿ ಅವರು ಆಪರೇಷನ್ ಅಸ್ತ್ರ ಬಳಸಿ ಸರ್ಕಾರವೊಂದನ್ನು ಬುಡಮೇಲು ಮಾಡುವುದಕ್ಕೂ ಅಂತಹ ವ್ಯತ್ಯಾಸವೇನಿಲ್ಲ. ಒಂದು ತೆಳುಗೆರೆಯಷ್ಟೇ ಅಂತರ. ಕಾಂಗ್ರೆಸ್ ಇದರ ಅರ್ಥ ತಿಳಿಯದಷ್ಟು ಕುಬ್ಜ ಸ್ಥಿತಿ ತಲುಪಿರುವುದು ಚೋದ್ಯವೆನಿಸಿದೆ. ಟೀಕೆಗಾಗಿ ಟೀಕೆ ಮಾಡುವ ಇಂತಹ ಮನಸ್ಥಿತಿಯಿಂದಾಗಿಯೇ ಕಾಂಗ್ರೆಸ್ ಇಂದು ಇಂತಹ ದುಃಸ್ಥಿತಿಗೆ ತಲುಪಿದೆ. ಕಪಟ ರಾಜಕಾರಣವನ್ನು ಯಾವ ಬಾಗಿಲಿನಿಂದ ಮಾಡಿದರೂ ಅದು ಅನೀತಿಯೇ ಆಗಿದೆ” ಎಂದರು.

    “ತನ್ನರಿದೆ ಅರಿವೆಂತುಂಟೊ?, ತನ್ನ ಮರೆದ ಮರೆಹೆಂತಂಟೊ?, ಅರೆದು ಮರೆದವರು, ನಿಮ್ಮ ಪ್ರತಿಬಿಂಬದಂತಿಪ್ಪರು ಕಾಣಾ, ಗುಹೇಶ್ವರಾ” ಎಂದು ಕುಮಾರಸ್ವಾಮಿ ಟ್ವೀಟ್‍ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ರಾಜ್ಯಸಭೆಗೆ ಸ್ಪರ್ಧಿಸಲಿದ್ದಾರೆ ಎಚ್‍ಡಿಡಿ – ಜೆಡಿಎಸ್‍ಗೆ ಇರೋ ಸವಾಲು ಏನು?

    ರಾಜ್ಯಸಭೆಗೆ ಸ್ಪರ್ಧಿಸಲಿದ್ದಾರೆ ಎಚ್‍ಡಿಡಿ – ಜೆಡಿಎಸ್‍ಗೆ ಇರೋ ಸವಾಲು ಏನು?

    ಬೆಂಗಳೂರು: ಜೂನ್ 16ರಂದು ನಡೆಯಲಿರುವ ರಾಜ್ಯ ಸಭೆ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಮಾಜಿ ಪ್ರಧಾನಿ ದೇವೇಗೌಡರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ ಕುಮಾರಸ್ವಾಮಿ ಅವರು ಹೇಳಿದ್ದಾರೆ.

    ಇಂದು ಈ ವಿಚಾರವಾಗಿ ಜೆಪಿ ಭವನದಲ್ಲಿ ಜೆಡಿಎಸ್ ಪಕ್ಷದ ಶಾಸಂಗದ ಸಭೆ ನಡೆಸಲಾಗಿತ್ತು. ಈ ಸಭೆಯ ಬಳಿಕ ಮಾತನಾಡಿದ ಕುಮಾರಸ್ವಾಮಿ, ರಾಜ್ಯಸಭೆ ಚುನಾವಣೆ ಜೆಡಿಎಸ್ ಅಭ್ಯರ್ಥಿಯಾಗಿ ದೇವೇಗೌಡ ಸ್ಪರ್ಧೆ ಮಾಡಲಿದ್ದಾರೆ. ರಾಷ್ಟ್ರಕ್ಕೆ ಅವರ ಸೇವೆ ಅವಶ್ಯಕತೆ ಇದೆ. ಹೀಗಾಗಿ ಅವರು ಸ್ಪರ್ಧೆ ಮಾಡುವಂತೆ ಮನವಿ ಮಾಡಿದ್ದೇವೆ ಎಂದರು.

    ಸಭೆಯಲ್ಲಿ ಬೇರೆ ಪಕ್ಷದಿಂದ ಬೆಂಬಲ ಪಡೆಯಬೇಕು ಎಂಬ ಚರ್ಚೆ ಆಗಿಲ್ಲ. ಪಕ್ಷಾತೀತವಾಗಿ ದೇವೇಗೌಡರಿಗೆ ಬೆಂಬಲ ಸಿಗುತ್ತೆ ಎಂಬ ನಂಬಿಕೆ ಇದೆ. ದೇಶಕ್ಕೆ ದೇವೇಗೌಡರ ಸೇವೆ ಅವಶ್ಯಕತೆ ಇದೆ. ಹೀಗಾಗಿ ಅವರು ಸ್ಪರ್ಧೆ ಮಾಡುವಂತೆ ನಾವು ಒಮ್ಮತದಿಂದ ಆಯ್ಕೆ ಮಾಡಿದ್ದೇವೆ. ಇದರಲ್ಲಿ ಕುಟುಂಬ ರಾಜಕೀಯದ ಪ್ರಶ್ನೆ ಇಲ್ಲ ಎಂದು ಕುಮಾರಸ್ವಾಮಿ ದೇವೇಗೌಡರ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಇದೇ ವೇಳೆ ಮಾತನಾಡಿದ ಹಿರಿಯ ನಾಯಕ ಬಸವರಾಜು ಹೊರಟ್ಟಿ, ಇವತ್ತು ಕೇವಲ ರಾಜ್ಯಸಭೆ ಬಗ್ಗೆ ಮಾತ್ರ ಚರ್ಚೆ ಆಗಿದೆ. ವಿಧಾನ ಪರಿಷತ್ ಚುನಾವಣೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಇಂದಿನ ಸಭೆಯಲ್ಲಿ ರಾಜ್ಯಸಭೆಗೆ ದೇವೇಗೌಡರೇ ಸೂಕ್ತ ಎಂದು ನಾವು ಅವರನ್ನು ಒಮ್ಮತದಿಂದ ಆಯ್ಕೆ ಮಾಡಿದ್ದೇವೆ ಎಂದು ಹೇಳಿದರು.

    ಎಚ್‍ಡಿಡಿ ಅಯ್ಕೆ ಆಗ್ತಾರಾ?
    ರಾಜ್ಯಸಭೆಗೆ ಆಯ್ಕೆ ಆಗಬೇಕಾದರೆ ಅಭ್ಯರ್ಥಿಗೆ 45 ಮತಗಳ ಅಗತ್ಯವಿದೆ. ಸದ್ಯ ಜೆಡಿಎಸ್ ಬಳಿ 34 ಮತಗಳಿವೆ. ದೇವೇಗೌಡರು ಆಯ್ಕೆ ಆಗಬೇಕಾದರೆ ಹೆಚ್ಚುವರಿ 12 ಮತಗಳ ಬೇಕಾಗುತ್ತದೆ. ಕಾಂಗ್ರೆಸ್ ಬೆಂಬಲ ನೀಡಿದರೆ ದೇವೇಗೌಡರು ಜಯಗಳಿಸಬಹುದು. ಈ ವೇಳೆ ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಇಳಿಸಲು ಮುಂದಾಗುತ್ತಿದೆ ಎಂಬ ಮಾತು ಕೇಳಿ ಬಂದಿದೆ. ಮೂರನೇ ಅಭ್ಯರ್ಥಿ ಇಳಿಸಿದರೆ ಸ್ಪರ್ಧೆ ಜೋರಾಗಲಿದೆ. ಇದನ್ನು ಓದಿ: ಎಚ್‍ಡಿಡಿ ಸ್ಪರ್ಧೆ ಬಗ್ಗೆ ನಮ್ಮೊಂದಿಗೆ ಯಾರೂ ಚರ್ಚಿಸಿಲ್ಲ- ಡಿಕೆಶಿ

    ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಬಲ 68. ಒಬ್ಬರು ಅಭ್ಯರ್ಥಿ ಆಯ್ಕೆಯಾಗುವುದಕ್ಕೆ 45 ಮತಗಳು ಸಾಕು. ಆದ್ದರಿಂದ ಮಲ್ಲಿಕಾರ್ಜುನ ಖರ್ಗೆ ಸುಲಭವಾಗಿ ಗೆಲುವು ಸಾಧಿಸಲಿದ್ದಾರೆ. ಕಾಂಗ್ರೆಸ್ ಬಳಿ 23 ಹೆಚ್ಚುವರಿ ಮತಗಳಿದ್ದು, ಜೆಡಿಎಸ್ ಬಳಿ 34 ಮತಗಳಿವೆ. ಈ ಎರಡೂ ಪಕ್ಷಗಳ ಒಟ್ಟು 54 ಮತಗಳನ್ನು ಜೆಡಿಎಸ್‍ಗೆ ನೀಡಿದರೆ ದೇವೇಗೌಡ ಅವರು ಗೆಲ್ಲಲಿದ್ದಾರೆ.

  • ಮಲ್ಲಿಕಾರ್ಜುನ್ ಖರ್ಗೆಗೆ ಟಿಕೆಟ್ ಘೋಷಿಸಿದ ಹೈಕಮಾಂಡ್

    ಮಲ್ಲಿಕಾರ್ಜುನ್ ಖರ್ಗೆಗೆ ಟಿಕೆಟ್ ಘೋಷಿಸಿದ ಹೈಕಮಾಂಡ್

    ನವದೆಹಲಿ: ಜೂನ್ 19ರಂದು ನಡೆಯಲಿರುವ ರಾಜ್ಯದ ನಾಲ್ಕು ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸಿದೆ. ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭ್ಯರ್ಥಿಯಾಗಿಸಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆದೇಶ ಹೊರಡಿಸಿದ್ದಾರೆ.

    ರಾಜ್ಯಸಭೆ ಚುನಾವಣೆಗೆ ದಿನಾಂಕ ಘೋಷಣೆ ಯಾಗುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಸಾಕಷ್ಟು ಪೈಪೋಟಿ ಶುರುವಾಗಿತ್ತು. ಕಾಂಗ್ರೆಸ್ ನಾಯಕರಾದ ಬಿ.ಕೆ ಹರಿಪ್ರಸಾದ್ ಮತ್ತು ರಾಜೀವ್ ಗೌಡ ಅವರಿಂದ ಎರಡು ಸ್ಥಾನಗಳು ತೆರವಾಗಿತ್ತು. ಈ ಬಾರಿ ಸಂಖ್ಯೆಗಳ ಕೊರತೆಯಿಂದ ಒಂದು ಸ್ಥಾನವನ್ನು ಮಾತ್ರ ಸುಲಭವಾಗಿ ಗೆಲ್ಲಬಹುದಾಗಿದೆ.

    ಈ ಒಂದು ಸ್ಥಾನಕ್ಕೆ ಬಿ.ಕೆ ಹರಿಪ್ರಸಾದ್ ಮತ್ತು ರಾಜೀವ್‍ಗೌಡ ಮರು ಆಯ್ಕೆ ಬಯಸಿದ್ದರು. ಲೋಕಸಭಾ ಟಿಕೆಟ್ ವಂಚಿತ ಮಾಜಿ ಸಂಸದ ಮುದ್ದಹನುಮೇಗೌಡರು ಕೂಡಾ ಟಿಕೆಟ್‍ಗಾಗಿ ಪ್ರಯತ್ನ ಮಾಡಿದ್ದರು.

    ಲೋಕಸಭೆ ಚುನಾವಣೆಯ ಬಳಿಕ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಗೆ ಆಯ್ಕೆಯಾಗುವ ಇಂಗಿತವನ್ನು ಹೈಕಮಾಂಡ್ ಮುಂದೆ ವ್ಯಕ್ತಪಡಿಸಿದ್ದರು. ಇದಕ್ಕಾಗಿ ಅವರು ನಿರಂತರ ಪ್ರಯತ್ನ ಕೂಡ ಮಾಡುತ್ತಿದ್ದರು. ರಾಜ್ಯಸಭೆಯಲ್ಲಿ ಬಿಜೆಪಿ ವಿರುದ್ಧ ಗಟ್ಟಿ ಧ್ವನಿಯ ಅವಶ್ಯಕತೆ ಹಿನ್ನೆಲೆ ಎಐಸಿಸಿ ರಾಜ್ಯದ ವರದಿಗೂ ಮುನ್ನ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದು ಗೆಲುವು ಬಹುತೇಕ ಖಚಿತವಾಗಿದೆ.

    ಬಿಜೆಪಿಗೆ ಎರಡು ಸ್ಥಾನ ದೊರೆಯಲಿದ್ದು ಬಾಕಿ ಉಳಿದ ಮತ್ತೊಂದು ಸ್ಥಾನಕ್ಕೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಇಂದು ಬೆಂಗಳೂರಿನಲ್ಲಿ ಜೆಡಿಎಲ್‍ಪಿ ಸಭೆ ನಡೆದಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲುನ್ನು ಕಂಡಿದ್ದ ಹೆಚ್‍ಡಿಡಿ ಅವರನ್ನು ಮೈತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ.

    2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 44 ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಪ್ರತಿಪಕ್ಷ ಸ್ಥಾನ ಪಡೆಯಲು ಬೇಕಾದಷ್ಟು ಸ್ಥಾನವನ್ನು ಕಾಂಗ್ರೆಸ್ ಗೆದ್ದುಕೊಂಡಿರಲಿಲ್ಲ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದರು.

  • ಸರ್ಕಾರದ ವಿರುದ್ಧ ಜೆಡಿಎಸ್ ಶಾಸಕರ ಆಕ್ರೋಶ: ಹೆಚ್‍ಡಿಡಿ ನೇತೃತ್ವದಲ್ಲಿ ಸಭೆ

    ಸರ್ಕಾರದ ವಿರುದ್ಧ ಜೆಡಿಎಸ್ ಶಾಸಕರ ಆಕ್ರೋಶ: ಹೆಚ್‍ಡಿಡಿ ನೇತೃತ್ವದಲ್ಲಿ ಸಭೆ

    ಹಾಸನ: ಕೊರೊನಾ ಸಂಕಷ್ಟದಲ್ಲೂ ಹಾಸನ ಜಿಲ್ಲೆಗೆ ರಾಜ್ಯ ಸರ್ಕಾರಿಂದ ಯಾವುದೇ ಅನುದಾನ ಸಿಗುತ್ತಿಲ್ಲ ಎಂದು ಜೆಡಿಎಸ್ ಶಾಸಕರು ಆಕ್ರೋಶ ಹೊರಹಾಕಿದ್ದಾರೆ.

    ಇಂದು ಮಾಜಿ ಪ್ರಧಾನಿ ದೇವೇಗೌಡರು ಹಾಸನಕ್ಕೆ ಭೇಟಿ ನೀಡಿ ಜನಸಾಮಾನ್ಯರಿಗೆ ಹಂಚಲು ಆಹಾರ ಧಾನ್ಯಗಳ ಕಿಟ್ ಅನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು. ಇದಕ್ಕೂ ಮುನ್ನ ಪಕ್ಷದ ಕಾರ್ಯಕರ್ತರೊಂದಿಗೆ ಮಾಜಿ ಪ್ರಧಾನಿ ದೇವೇಗೌಡರು ಸಂಸದರ ನಿವಾಸದಲ್ಲಿ ಚರ್ಚೆ ನಡೆಸಿದರು.

    ಈ ವೇಳೆ ರಾಜ್ಯ ಸರ್ಕಾರದ ಕಾರ್ಯವೈಖರಿ ವಿರುದ್ಧ ಜೆಡಿಎಸ್ ಶಾಸಕರು ತಮ್ಮ ಅಸಮಾಧಾನ ಹೊರಹಾಕಿದರು. ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಬಾಲಕೃಷ್ಣ, ಕೊರೊನಾ ಎಂದುಕೊಂಡು ನಮಗೆ ಯಾವ ಅನುದಾನ ಕೊಟ್ಟಿಲ್ಲ ಎಂದರು. ಆಗ ಮಾತನಾಡಿದ ಹೆಚ್‍ಡಿ.ರೇವಣ್ಣ, ಸರ್ಕಾರದಿಂದ ಬಂದ ಹಣ ಯಾವುದಕ್ಕೆ ಖರ್ಚು ಮಾಡಿದ್ದೀರಿ ಅಂದರೆ ಉಸಿರಿಲ್ಲ. ಹೆಚ್ಚಿನ ಬೆಲೆಗೆ ದಿನಸಿ ಮಾರಾಟ ಮಾಡುತ್ತಿದ್ದಾರೆ. ಅವರ ವಿರುದ್ಧವೂ ಕ್ರಮವಿಲ್ಲ, ಜಿಲ್ಲಾಡಳಿತ ಸತ್ತು ಹೋಗಿದೆ ಎಂದು ಆಕ್ರೋಶ ಹೊರಹಾಕಿದರು.

    ಇದೇ ವೇಳೆ ಧ್ವನಿಗೂಡಿಸಿದ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ, ಕಾರ್ಡ್ ಇಲ್ಲದವರಿಗೂ ರೇಷನ್ ಕೊಡುತ್ತೇವೆ ಅಂದರು. ಇದುವರೆಗೂ ಯಾರಿಗೆ ಕೊಟ್ಟಿದ್ದಾರೆ. ನಮ್ಮ ನಮ್ಮ ತಾಲೂಕು ಉಳಿಸಿಕೊಳ್ಳೋಣ ನಡೀರಿ ಈ ಕಷ್ಟ ಕಾಲದಲ್ಲಿ ಇದರ ಬಗ್ಗೆ ಮಾತನಾಡುವುದು ಬೇಡ ಎಂದು ಚರ್ಚೆಗೆ ಫುಲ್ ಸ್ಟಾಪ್ ಇಟ್ಟರು.

  • ಸಚಿವ ನಾರಾಯಣಗೌಡ ವಿರುದ್ಧ ಫೀಲ್ಡಿಗಿಳಿದ ಹೆಚ್‍ಡಿಡಿ

    ಸಚಿವ ನಾರಾಯಣಗೌಡ ವಿರುದ್ಧ ಫೀಲ್ಡಿಗಿಳಿದ ಹೆಚ್‍ಡಿಡಿ

    ಮಂಡ್ಯ: ಕೆಆರ್ ಪೇಟೆ ಬೈ ಎಲೆಕ್ಷನ್ ಬಳಿಕ ಸಕ್ಕರೆನಾಡಲ್ಲಿ ಬಿಜೆಪಿ ವರ್ಸಸ್ ಜೆಡಿಎಸ್ ನಡುವೆ ವಾರ್ ಶುರುವಾಗಿದೆ. ಸಚಿವ ನಾರಾಯಣಗೌಡ ವಿರುದ್ಧ ದಳಪತಿಗಳು ದ್ವೇಷ ರಾಜಕಾರಣದ ಆರೋಪ ಮಾಡುತ್ತಿದ್ದು, ಇಂದು ಸ್ವತಃ ದೇವೇಗೌಡರೇ ಫೀಲ್ಡಿಗಿಳಿದು ನಾರಾಯಣಗೌಡ ಹಾಗೂ ಅಧಿಕಾರಿಗಳ ವಿರುದ್ಧ ಗುಡಗಿದ್ದಾರೆ.

    ಕೆಆರ್ ಪೇಟೆ ಬೈ ಎಲೆಕ್ಷನ್ ಬಳಿಕ ಕಾಂಗ್ರೆಸ್ ವರ್ಸಸ್ ಜೆಡಿಎಸ್ ಅಂತಿದ್ದ ಮಂಡ್ಯದಲ್ಲಿ ಬಿಜೆಪಿ ವರ್ಸಸ್ ಜೆಡಿಎಸ್ ಎಂಬ ವಾತಾವರಣ ನಿರ್ಮಾಣವಾಗಿದೆ. ಸಚಿವ ನಾರಾಯಣಗೌಡ ವಿರುದ್ಧ ಜೆಡಿಎಸ್ ನಾಯಕರು ದ್ವೇಷ ರಾಜಕಾರಣದ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಇಂದು ಫೀಲ್ಡಿಗಿಳಿದ ಮಾಜಿ ಪ್ರಧಾನಿ ದೇವೇಗೌಡರು ಕೆಆರ್ ಪೇಟೆ ಕಾರ್ಯಕರ್ತರ ಕುಂದು ಕೊರತೆ ಆಲಿಸಿ, ಸಚಿವ ನಾರಾಯಣಗೌಡ ಹಾಗೂ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

    ಅಷ್ಟಕ್ಕೂ ದೇವೇಗೌಡರ ಅಸಮಾಧಾನಕ್ಕೆ ಕಾರಣ ಜೆಡಿಎಸ್ ಜಿ.ಪಂ ಸದಸ್ಯ ಎಚ್.ಟಿ ಮಂಜು ಮಾಲೀಕತ್ವದ ಕ್ರಷರ್ ಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಕೆಆರ್ ಪೇಟೆ ತಾಲೂಕಿನ ಹರಳಹಳ್ಳಿ ಬಳಿಯ ಈ ಕ್ರಷರ್ ಗೆ ಕಾನೂನು ಪ್ರಕಾರ ಅನುಮತಿ ಇದ್ದರೂ ಅಧಿಕಾರಿಗಳು ನಾರಾಯಣಗೌಡರ ಮಾತು ಕೇಳಿ ಕ್ರಷರ್ ಮುಚ್ಚಿಸಿದ್ದಾರೆಂದು ಹೆಚ್‍ಡಿಡಿ ಅಸಮಾಧಾನ ಹೊರಹಾಕಿದ್ದಾರೆ.

    ಜೆಡಿಎಸ್‍ನಲ್ಲಿದ್ದಾಗ ಕ್ರಷರ್ ನಡೆಸಲು ಅನುಮತಿ ಕೋರಿ ನಾರಾಯಣಗೌಡ ಬರೆದಿದ್ದ ಪತ್ರ ಹಾಗೂ ಬಿಜೆಪಿ ಸೇರಿ ಸಚಿವರಾದ ಮೇಲೆ ಕ್ರಷರ್ ಅನುಮತಿ ರದ್ದು ಪಡೆಸುವಂತೆ ಸಿಎಂಗೆ ಬರೆದಿರುವ ಪತ್ರ ಓದಿ ನಾರಾಯಣಗೌಡರ ಇಬ್ಬಗೆ ನೀತಿ ವಿವರಿಸಿದರು. ಜೊತೆಗೆ ಮಂಡ್ಯ ಡಿಸಿ ವೆಂಕಟೇಶ್ ಬಗ್ಗೆ ಕಿಡಿಕಾರಿದ ದೊಡ್ಡಗೌಡರು, ವೆಂಕಟೇಶ್ ಒಬ್ಬ ದಕ್ಷ ಅಧಿಕಾರಿ ಆದರೆ ಸಚಿವರ ಮಾತು ಕೇಳಿ ಹೀಗೇ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ನಾರಾಯಣಗೌಡರ ದ್ವೇಷ ರಾಜಕಾರಣ ವಿರುದ್ಧ ದೇವೇಗೌಡರು ಇಂದು ಪ್ರತಿಭಟನೆಗೆ ನಿರ್ಧರಿಸಿದರು. ಆದರೆ ಅದ್ಯಾಕೋ ಏನೋ ಕೊನೆ ಕ್ಷಣದಲ್ಲಿ ಪ್ರತಿಭಟನೆ ಕೈಬಿಟ್ಟ ದೊಡ್ಡಗೌಡರು, ಹರಳಹಳ್ಳಿ ಬಳಿಯ ಟಿಜೆ ಕ್ರಷರ್ ಗೆ ಭೇಟಿ ಕೊಟ್ಟು ಕೇವಲ ವೀಕ್ಷಣೆ ನಡೆಸಿದರು. ಬಳಿಕ ಕ್ರಷರ್ ಬಳಿ ಸೇರಿದ್ದ ಕಾರ್ಯಕರ್ತರ ಕುಂದು ಕೊರತೆ ಆಲಿಸಿ, ನಮ್ಮ ಪಕ್ಷದವರಿಗೆ ತೊಂದರೆ ಕೊಟ್ಟರೆ ಹೋರಾಟ ಶತಸಿದ್ಧ ಎಂದು ಎಚ್ಚರಿಸಿ, ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

  • ಹೆಚ್‍ಡಿಡಿ, ಹೆಚ್‍ಡಿಕೆ, ಡಿ.ಸಿ ತಮ್ಮಣ್ಣ ವಿರುದ್ಧ ಭೂಕಬಳಿಕೆ ಆರೋಪ ಮಾಡಿದ ಹಿರೇಮಠ್

    ಹೆಚ್‍ಡಿಡಿ, ಹೆಚ್‍ಡಿಕೆ, ಡಿ.ಸಿ ತಮ್ಮಣ್ಣ ವಿರುದ್ಧ ಭೂಕಬಳಿಕೆ ಆರೋಪ ಮಾಡಿದ ಹಿರೇಮಠ್

    ಗದಗ: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಡಿ.ಸಿ ತಮ್ಮಣ್ಣ ವಿರುದ್ಧ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್ ಹಿರೇಮಠ್ ಭೂಕಬಳಿಕೆ ಆರೋಪ ಮಾಡಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಚ್.ಡಿ ದೇವೇಗೌಡರು, ಕುಮಾರಸ್ವಾಮಿ ಹಾಗೂ ಡಿ.ಸಿ ತಮ್ಮಣ್ಣ, ರಾಮನಗರ ತಾಲೂಕಿನ ಬಿಡದಿ ಹೋಬಳಿ ಕೆತಿನಹಳ್ಳಿ ಗ್ರಾಮದ 110 ಗೋಮಾಳ ಸೇರಿದಂತೆ 200 ಎಕರೆ ಜಮೀನನ್ನು ಕಬಳಿಸಿದ್ದಾರೆ. ಅತಿಕ್ರಮಣ ಮಾಡಿದವರ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.

    ಇದೇ ವೇಳೆ ಕಪ್ಪತ್ತಗುಡ್ಡಕ್ಕೆ ಕಂಟಕ ಬಂದರೆ ಮತ್ತೆ ಹೋರಾಟ ಮಾಡುವುದಾಗಿ ಎಸ್.ಆರ್ ಹಿರೇಮಠ್ ಎಚ್ಚರಿಕೆ ನೀಡಿದರು. ಈ ಹಿಂದೆ ಕಪ್ಪತ್ತಗುಡ್ಡಕ್ಕೆ ಅಕ್ರಮ ಗಣಿಗಾರಿಕೆ ನಡೆಸಲು ಕಂಪನಿಗಳು ಮುಂದೆ ಬಂದಿದ್ದವು. ಬಲ್ಡೋಟಾ ಹಾಗೂ ಪೋಸ್ಕೋ ಕಂಪನಿಗಳು ಹುನ್ನಾರ ನಡೆಸಿದ್ದವು. ತೋಂಟದಾರ್ಯ ಸ್ವಾಮೀಜಿ ಹಾಗೂ ಹೋರಾಟಗಾರರು ಪ್ರತಿಭಟನೆ ನಡೆಸಿದ ಪ್ರತಿಫಲವಾಗಿ ಈ ಕಂಪನಿಗಳು ದೂರ ಸರಿದ್ದವು.

    ಬಲ್ಡೋಟಾ ಕಂಪನಿ ಪಿಐಎಎಲ್ ಸೋಗಿನಲ್ಲಿ ಬಹಳಷ್ಟು ಪ್ರಯತ್ನ ನಡೆಸಿತು. ಆದರೆ ಅದೆಲ್ಲವೂ ಶತಾಯಗತಾಯ ಸೋಲನುಭವಿಸಬೇಕಾಯಿತು. ನೂತನ ಸಚಿವ ಆನಂದ ಸಿಂಗ್ ಹಾಗೂ ಗಣಿ ಮತ್ತು ವಿಜ್ಞಾನ ಸಚಿವ ಸಿ.ಸಿ ಪಾಟೀಲ್ ಕಪ್ಪತ್ತಗುಡ್ಡದ ಮೇಲೆ ಕಣ್ಣು ಹಾಕಿದ್ದಾರೆ. ಆದರೆ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಪ್ರಯತ್ನ ಮುಂದುವರಿಸಿವೆ. ಕಪ್ಪತ್ತಗುಡ್ಡದ ತಂಟೆಗೆ ಬಂದರೆ ಮತ್ತೆ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಈ ಸುದ್ದಿಗೋಷ್ಠಿನಲ್ಲಿ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಕುಷ್ಟಗಿ, ಎಸ್.ಕೆ ಪೂಜಾರ್, ಚಂದ್ರು ಚವ್ಹಾಣ್ ಉಪಸ್ಥಿತರಿದ್ದರು.