Tag: deve gowda

  • ಇಂದಿರಾ ಗಾಂಧಿಯಂತೆ ಆಗ್ತಿದ್ದಾರೆ ಮೋದಿ, ಇದು ಅಹಂಕಾರದ ಪರಮಾವಧಿ: ದತ್ತಾ

    ಇಂದಿರಾ ಗಾಂಧಿಯಂತೆ ಆಗ್ತಿದ್ದಾರೆ ಮೋದಿ, ಇದು ಅಹಂಕಾರದ ಪರಮಾವಧಿ: ದತ್ತಾ

    ಬೆಂಗಳೂರು: ನಾನೇ ಪ್ರಧಾನಿ, ನಂದೇ ಪಕ್ಷ ಎಂದು ಇಂದಿರಾ ಗಾಂಧಿಯವರು ವರ್ತಿಸಿದ್ದರು. ಅದೇ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವರ್ತಿಸುತ್ತಿದ್ದಾರೆ ಎಂದು ಶಾಸಕ ವೈಎಸ್‍ವಿ ದತ್ತಾ ಹೇಳಿದ್ದಾರೆ.

    ಇದು ಅಹಂಕಾರದ ಪರಮಾವಧಿ. ಒಂದೇ ದೇಶ ಒಂದೇ ಮೋದಿ ಎನ್ನುವ ಕಾಲ ಬರುತ್ತೆ ಎಚ್ಚರ. ಈಗ ಆಹಾರದ ಮೇಲೆ ತುರ್ತು ಪರಿಸ್ಥಿತಿ ಇದೆ. ಮುಂದೆ ರಾಜಕೀಯದ ಮೇಲೆ ತುರ್ತು ಪರಿಸ್ಥಿತಿ ಬರಬಹುದು ಎಂದು ಹೇಳಿದರು.

    ದೇವೇಗೌಡರ ಆತ್ಮಚರಿತ್ರೆಯ ಟ್ರೇಲರ್ ಇವತ್ತು ಬಿಡುಗಡೆ ಮಾಡಲು ತಿಳಿಸಿದ್ದೆ. ಆದರೆ ನವೆಂಬರ್ ತಿಂಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಆತ್ಮಚರಿತ್ರೆ ಬಿಡುಗಡೆಯಾಗಲಿದೆ. ಈ ಆತ್ಮಚರಿತ್ರೆಯು ಬರಿ ದೇವೇಗೌಡರ ಆತ್ಮಚರಿತ್ರೆ ಅಲ್ಲ, ಇತಿಹಾಸ ಬರೆಯುವವರಿಗೆ ಸ್ಫೂರ್ತಿಯಾಗಲಿದೆ ಎಂದು ತಿಳಿಸಿದರು.

    ಇನ್ನೂ ನಾಳೆ ನಾಡಿದ್ದರಲ್ಲಿ ಸ್ಫೋಟಕ ಮಾಹಿತಿಗಳ ನೈಜ ಚಿತ್ರಣಗಳು ಹಾಗೂ ರಾಜಕಾರಣಿಗಳ ಬಂಡವಾಳ ಹೊರಗೆ ಬರುತ್ತಿದೆ ಅದನ್ನು ನೋಡೋಣ. ಯುವಕರು ಫ್ಲೆಕ್ಸ್ ಬ್ಯಾನರ್‍ಗಿಂತ ಪಾದಯಾತ್ರೆಗೆ ಮುಂದಾಗಬೇಕು. ಪಾದಯಾತ್ರೆ ಅದ್ಭುತವಾದ ಪ್ರಯೋಗ, ಫೇಸ್‍ಬುಕ್ ವಾಟ್ಸಪ್ ಜೊತೆಗೆ ನಿಮ್ಮ ಕಾಲಿಗೂ ಕೆಲಸ ಕೊಡಿ ಎಂದು ದತ್ತಾ ಯುವಕರಿಗೆ ಕರೆ ನೀಡಿದರು.

  • ಪ್ರತಿಭಟನೆ ವೇಳೆ ದೇವೇಗೌಡ್ರ ಎದುರೇ ಕೈಕೈ ಮಿಲಾಯಿಸಿದ ಜೆಡಿಎಸ್ ಕಾರ್ಯಕರ್ತರು

    ಪ್ರತಿಭಟನೆ ವೇಳೆ ದೇವೇಗೌಡ್ರ ಎದುರೇ ಕೈಕೈ ಮಿಲಾಯಿಸಿದ ಜೆಡಿಎಸ್ ಕಾರ್ಯಕರ್ತರು

    ಹಾಸನ: ನೀರಾವರಿ ಹೋರಾಟದ ಸ್ಥಳಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಭೇಟಿ ನೀಡಿದ್ದ ವೇಳೆ ಜೆಡಿಎಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಡೆದಿರುವ ಘಟನೆ ಹಾಸನದಲ್ಲಿ ನಡೆದಿದೆ.

    ಬೇಲೂರು ತಾಲೂಕಿನ ರಣಘಟ್ಟ ಒಡ್ಡು ಬಳಿ ಈ ಘಟನೆ ನಡೆದಿದೆ. ಜೆಡಿಎಸ್ ಹಿರಿಯ ನಾಯಕರಾದ ದೇವೇಗೌಡರು ರಣಘಟ್ಟ ಒಡ್ಡು ಬಳಿ ನೀರಾವರಿ ಹೋರಾಟ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸ್ಥಳದಲ್ಲಿ ಹೋರಾಟಗಾರರನ್ನು ಉದ್ದೇಶಿಸಿ ನೀರಾವರಿ ಹೋರಾಟದ ಬಗ್ಗೆ ದೇವೇಗೌಡರು ಮಾತನಾಡಿದರು.

    ಈ ಸಂದರ್ಭದಲ್ಲೊ ರೈತ ಸಂಘದ ಮುಖಂಡರೊಬ್ಬರು ಸಭೆಯಲ್ಲಿ ಅಸಭ್ಯವಾಗಿ ನಡೆದುಕೊಂಡರು ಎಂಬುದು ಜೆಡಿಎಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು. ಇದರಿಂದ ದೇವೇಗೌಡರ ಮುಂದೆಯೇ ಜಗಳ ಶುರುವಾಗಿ ವಿಕೋಪಕ್ಕೆ ಹೋಗಿ ಕೈಕೈ ಮಿಲಾಯಿಸುವ ಮಟ್ಟಕ್ಕೆ ಬೆಳೆಯಿತು.

    ಇನ್ನು ಸ್ಥಳದಲ್ಲೇ ಇದ್ದ ಪೊಲೀಸರು ಜೆಡಿಎಸ್ ಕಾರ್ಯಕರ್ತರ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವಲ್ಲಿ ಯಶಸ್ವಿಯಾದರು.

  • ದೇವೇಗೌಡರ ಆತ್ಮಚರಿತ್ರೆ ಬಿಡುಗಡೆಯಾದ್ರೆ ರಾಷ್ಟ್ರೀಯ ಪಕ್ಷಗಳ ಬಣ್ಣ ಬಯಲಾಗುತ್ತೆ: ವೈಎಸ್‍ವಿ ದತ್ತಾ

    ದೇವೇಗೌಡರ ಆತ್ಮಚರಿತ್ರೆ ಬಿಡುಗಡೆಯಾದ್ರೆ ರಾಷ್ಟ್ರೀಯ ಪಕ್ಷಗಳ ಬಣ್ಣ ಬಯಲಾಗುತ್ತೆ: ವೈಎಸ್‍ವಿ ದತ್ತಾ

    ರಾಯಚೂರು: ಇದೇ ನವೆಂಬರ್ ತಿಂಗಳಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆತ್ಮಚರಿತ್ರೆ ಬಿಡುಗಡೆಯಾಗಲಿದ್ದು, ಸಾಕಷ್ಟು ಸ್ಫೋಟಕ ಮಾಹಿತಿಗಳು ಬೆಳಕಿಗೆ ಬರಲಿವೆ ಎಂದು ಜೆಡಿಎಸ್ ವಕ್ತಾರ ವೈಎಸ್‍ವಿ ದತ್ತಾ ಹೇಳಿದ್ದಾರೆ.

    ರಾಯಚೂರಿನಲ್ಲಿ ಮಾತನಾಡಿದ ದತ್ತಾ, ಗೌಡರ ಆತ್ಮಚರಿತ್ರೆ ತಾವೇ ಬರೆಯುತ್ತಿದ್ದು ಅನೇಕ ರಾಜಕಾರಣಿಗಳ ವಾಸ್ತವ ಚಿತ್ರಣಗಳು ಬಯಲಾಗಲಿವೆ. ಎಲ್ಲಾ ರಾಷ್ಟ್ರೀಯ ಪಕ್ಷಗಳ ಬಣ್ಣಬಯಲಾಗಲಿದೆ. ಆಡಿಯೋ ರೂಪದಲ್ಲೂ ಆತ್ಮಚರಿತ್ರೆ ಹೊರತರುತ್ತಿದ್ದು, ಅಕ್ಟೋಬರ್ 11 ರಿಂದ ಒಂದೊಂದೆ ಸಂಗತಿಗಳ ಟ್ರೇಲರ್ ಬಿಡುಗಡೆ ಮಾಡಲಾಗುವುದು ಎಂದರು.

    ಕಾಂಗ್ರೆಸ್, ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ಪರಸ್ಥರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿವೆ. ತಮ್ಮ ಮೂಗಿನ ನೇರಕ್ಕೆ ಸಮೀಕ್ಷೆಗಳನ್ನ ಮಾಡಿಸುತ್ತಿವೆ. ಆದ್ರೆ ಜನ ಪ್ರಾದೇಶಿಕ ಪಕ್ಷವನ್ನ ಅಧಿಕಾರಕ್ಕೆ ತರುವ ನಿರ್ಧಾರ ಮಾಡಿದ್ದಾರೆ ಎಂದರು. ಎಚ್.ಡಿ.ಕುಮಾರಸ್ವಾಮಿಯವರು ಗುಣಮುಖರಾದ ಮೇಲೆ ರಾಜ್ಯ ಪ್ರವಾಸ ಮಾಡಲಿದ್ದಾರೆ. ಇನ್ನೂ ನಾಲ್ಕು ತಿಂಗಳಲ್ಲಿ ಜನಾಭಿಪ್ರಾಯ ಬೆಳಕಿಗೆ ಬರಲಿದೆ ಎಂದರು.

    ಕಾಂಗ್ರೆಸ್ ಸರ್ಕಾರ ಕೇವಲ ಪ್ರಚಾರ ಪಡೆಯುತ್ತಿದೆ. ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನದಲ್ಲಿ ಸೋತಿದೆ ಅಂತ ಆರೋಪಿಸಿದರು. ಮೌಢ್ಯ ನಿಷೇಧ ಕಾಯಿದೆ ಜಾರಿಗೆ ತಮ್ಮ ಸಹಮತವಿದ್ದು, ಎಲ್ಲಾ ಧರ್ಮಗಳಿಗೂ ಅನ್ವಯವಾಗುವಂತ ಕಾಯಿದೆ ಜಾರಿ ಮಾಡಬೇಕು ಎಂದು ದತ್ತಾ ಹೇಳಿದರು.

  • ಸಿಎಂ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ: ಎಚ್‍ಡಿಡಿ

    ಸಿಎಂ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ: ಎಚ್‍ಡಿಡಿ

    ಮಂಡ್ಯ: ಮಣ್ಣಿನ ಮಕ್ಕಳು ಎಂದು ಹೇಳಿಕೊಂಡು ತಿರುಗಾಡುವವರಿಂದ ಮಣ್ಣಿನ ಮಕ್ಕಳಿಗೆ ಏನೂ ಉಪಯೋಗವಾಗಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಮಾಜಿ ಪ್ರಧಾನಿ ದೇವೇಗೌಡ ನಿರಾಕರಿಸಿದ್ದಾರೆ.

    ಇನ್ನೊಬ್ಬರಿಗೆ ಠೀಕೆ ಮಾಡುವ ಅವಶ್ಯಕತೆ ನನಗಿಲ್ಲ. ಸಿದ್ದರಾಮಯ್ಯ, ಯಡಿಯೂರಪ್ಪ, ಮೋದಿ ಯಾರನ್ನೂ ಕುರಿತು ಠೀಕೆ ಮಾಡಬೇಕಾದ್ದಿಲ್ಲ. ನನಗೆ ಎಲ್ಲವೂ ಗೊತ್ತಿದೆ, ಆದರೆ ಅವರಿಗೆ ಇಂತಹ ವಿಷಯದಲ್ಲಿ ನಾನು ಪ್ರತಿಕ್ರಿಯೆ ನೀಡಬೇಕಿಲ್ಲ ಎಂದು ಹೇಳಿದರು.

    ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಬಗ್ಗೆ ಮಾತನಾಡಿದ ಅವರು, ಅದರ ಬಗ್ಗೆ ಯೋಚನೆ ಮಾಡುತ್ತಿದ್ದೇನೆ. ವಾಸ್ತವಾಂಶ ಹೇಳೋದು ಕಷ್ಟ ಇದೆ. ಕೇಂದ್ರ ಸರ್ಕಾರದ ಪ್ರತಿನಿಧಿ ವಾದ ಮಂಡನೆ ಮಾಡುವಾಗ ಕಾವೇರಿ ನೀರು ನಿರ್ವಹಣ ಮಂಡಳಿ ಪಾರ್ಲಿಮೆಂಟ್‍ಗೆ ಇರೋ ಪವರ್ಸ್ ಎಂದು ಹೇಳಿದ್ದಾರೆ. ನ್ಯಾಯಪೀಠ ನಾವೇ ಮಾಡಿದರೆ ನಿಮಗೆ ಸಮಾಧಾನ ಇಲ್ಲವೇ ಎಂದು ಹೇಳಿದೆ. ಅದಕ್ಕೆ ನೀವೇ ಮಾಡಿದರೆ ಆಗಬಹುದು ಎಂದು ಉತ್ತರಿಸಿದ್ದಾರೆ. ಆದರೆ ಇದನ್ನು ಕರ್ನಾಟಕದ ನಾವು ವಿರೋಧ ಮಾಡಲೇಬೇಕು ಎಂದು ನಿರ್ಧಾರ ಮಾಡಿದ್ದೇವೆ. ರಾಜ್ಯ ಸರ್ಕಾರ ಮತ್ತು ನಮ್ಮ ವಕೀಲರು ಚರ್ಚಿಸುತ್ತಿದ್ದಾರೆ. ನೋಡೋಣ ಅವರು ಏನು ಮಾಡುತ್ತಾರೆ ಎಂದು ದೇವೇಗೌಡರು ತಿಳಿಸಿದರು.

    ಮಗನ ಆರೋಗ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ಎಚ್‍ಡಿಡಿ, ಕುಮಾರಸ್ವಾಮಿ ಆರೋಗ್ಯವಾಗಿದ್ದು, ವೈದ್ಯರು ಒಂದುವಾರ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯಲು ತಿಳಿಸಿದ್ದಾರೆ. ತೊಂದರೆಯೇನಿಲ್ಲ ಎಂದು ಹೇಳಿದರು.

    ಮಾದ್ಯಮಗಳು ಕೇಳಿದ ಶ್ರೀರಂಗಪಟ್ಟಣ ಕ್ಷೇತ್ರದ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ದೇವೇಗೌಡರು ನಿರಾಕರಿಸಿದರು.

  • ಎರಡೂ ರಾಷ್ಟ್ರೀಯ ಪಕ್ಷಗಳನ್ನು ಎದುರಿಸುವ ಶಕ್ತಿ ನನಗಿದೆ: ದೇವೇಗೌಡ

    ಎರಡೂ ರಾಷ್ಟ್ರೀಯ ಪಕ್ಷಗಳನ್ನು ಎದುರಿಸುವ ಶಕ್ತಿ ನನಗಿದೆ: ದೇವೇಗೌಡ

    ಹಾಸನ: ರಾಜ್ಯಕ್ಕೆ ಅಮಿತ್ ಶಾ, ರಾಹುಲ್ ಗಾಂಧಿ ಯಾರೇ ಬರಲಿ ಎರಡೂ ರಾಜಕೀಯ ಪಕ್ಷಗಳನ್ನು ಎದುರಿಸುವ ಶಕ್ತಿ ನನಗಿದೆ. ಆ ಶಕ್ತಿಯನ್ನ ನನಗೆ ದೇವರು ಕೊಟ್ಟಿದ್ದಾನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ.

    ಹಾಸನ ಜಿಲ್ಲೆಯ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದಲ್ಲಿ ಇಂದು ಶ್ರಾವಣ ಮಾಸದ ಮೂರನೇ ಶನಿವಾರದ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಿವನು ಕೊಟ್ಟಿರುವ ಜೋಳಿಗೆಯನ್ನು ಗೂಟಕ್ಕೆ ನೇತು ಹಾಕಿ ಸುಮ್ಮನಿದ್ರೆ ಹೇಗೆ ಭಿಕ್ಷೆ ಬೀಳೋದಿಲ್ಲವೋ ಹಾಗೇ ನಾನು ನನ್ನ ಜನರ ಬಳಿಗೆ ಹೋಗುತ್ತೇನೆ ಎಂದರು.

    ಎರಡೂ ರಾಷ್ಟ್ರೀಯ ಪಕ್ಷಗಳನ್ನು ಎದುರಿಸಲು ಅನುಗ್ರಹಿಸು ಎಂದು ನನ್ನ ಕುಲದೇವರು ಈಶ್ವರ ಮತ್ತು ರಂಗನಾಥ ಸ್ವಾಮಿಯನ್ನು ಬೇಡಿಕೊಂಡಿದ್ದೇನೆ. ನಮ್ಮ ಪಾಲಿಗೆ ಜನರೇ ಪುಣ್ಯಾತ್ಮರು. ನನ್ನ ಮುಂದಿನ ಹೋರಾಟಕ್ಕೆ ಜನರೇ ಶಕ್ತಿಕೊಡಬೇಕು. ಇದರ ಹೊರತಾಗಿ ನಾನು ದುಡ್ಡಿನಿಂದ ರಾಜಕೀಯ ಮಾಡಲು ಆಗುವುದಿಲ್ಲ. ಬರುವ ಚುನಾವಣೆಯಲ್ಲಿ ಜೆಡಿಎಸ್ ಬಗ್ಗೆ ಅಪಹಾಸ್ಯ ಮಾಡುತ್ತಿದ್ದಾರೆ. ಆದರೆ 224 ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳನ್ನು ಹಾಕುತ್ತೇವೆ. ಇದಕ್ಕಾಗಿ ಇಂದಿನಿಂದಲೇ ಸಾಮೂಹಿಕ ನಾಯಕತ್ವದಡಿಯಲ್ಲಿ ಹೋರಾಟ ಶುರು ಮಾಡುತ್ತೇವೆ. ವಿರೋಧಿಗಳ ನಗೆಪಾಟಲು ನೋಡುತ್ತಲೇ ನಾನು ಮುನ್ನುಗ್ಗುತ್ತೇನೆ ಎಂದು ತಿರುಗೇಟು ನೀಡಿದರು.

    ಮುಂದಿನ 15 ದಿನಗಳಲ್ಲಿ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಕಾವೇರಿ ನೀರು ಹಂಚಿಕೆ ಸಂಬಂಧ ತೀರ್ಪು ನೀಡಲಿದೆ. ತಮಿಳುನಾಡು ವಾದವನ್ನು ನಾನು ಗಮನಿಸುತ್ತಿದ್ದೇನೆ. 1924ರಲ್ಲಿ ಆಗಿರುವ ನೀರು ಹಂಚಿಕೆ ಒಪ್ಪಂದವನ್ನು ರದ್ದು ಮಾಡಬೇಕು ಎಂದು ನಾನು ಶಾಸಕನಾಗಿದ್ದಾಗಲೇ ವಿಧಾನಸಭೆಯಲ್ಲಿ ಖಾಸಗಿ ನಿರ್ಣಯ ಮಂಡನೆ ಮಾಡಿದ್ದೆ. ಅದೆಲ್ಲವನ್ನೂ ನ್ಯಾಯಪೀಠಕ್ಕೆ ಮನವರಿಕೆ ಮಾಡಲಾಗಿದೆ. ದೇವರ ಅನುಗ್ರಹದಿಂದ ಕಾವೇರಿ ನಮ್ಮ ಪಾಲಿಗೂ ಉಳಿಯಬಹುದು ಎಂದು ಆಶಿಸಿದರು.

    ಭಾರತ-ಚೀನಾ ನಡುವೆ ಯುದ್ಧ ನಡೆಯುವ ಸನ್ನಿವೇಶ ನಿರ್ಮಾಣವಾಗಿದೆ. ಇದಕ್ಕೆ ಯಾರು ಹೊಣೆ ಎಂದು ನಾನು ಹೇಳೋದಿಲ್ಲ. ಆದರೆ ಎಲ್ಲಾ ಸನ್ನಿವೇಶವನ್ನು ಕೇಂದ್ರ ಸರ್ಕಾರ ಎದುರಿಸಲು ಸಿದ್ಧವಿದೆ. ನಮ್ಮ ಸೈನಿಕರು ಸಮರ್ಥರಿದ್ದಾರೆ. ಕಾರ್ಗಿಲ್ ಯುದ್ಧ ಸಂದರ್ಭಕ್ಕಿಂತಲೂ ನಾವೀಗ ಪ್ರಬಲರಾಗಿದ್ದೇವೆ. 2 ದೇಶಗಳ ನಡುವೆ ಯುದ್ಧದ ಮಟ್ಟಕ್ಕೆ ಹೋಗುತ್ತೋ? ಇಲ್ಲವೋ? ಗೊತ್ತಿಲ್ಲ. ಆದರೆ ಈ ವಿಷಯದಲ್ಲಿ ರಾಜಕೀಯ ಮಾಡದೇ ನಾವೆಲ್ಲರೂ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  • ಚಾಮರಾಜಪೇಟೆಯಲ್ಲಿ ಜೆಡಿಎಸ್ ಗೆದ್ದರೆ ನನ್ನ ರುಂಡ ಕತ್ತರಿಸಿಡುತ್ತೇನೆ: ಜಮೀರ್ ಅಹ್ಮದ್

    ಚಾಮರಾಜಪೇಟೆಯಲ್ಲಿ ಜೆಡಿಎಸ್ ಗೆದ್ದರೆ ನನ್ನ ರುಂಡ ಕತ್ತರಿಸಿಡುತ್ತೇನೆ: ಜಮೀರ್ ಅಹ್ಮದ್

    ಬೆಂಗಳೂರು: ಚಾಮರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದರೆ ನನ್ನ ರುಂಡ ಕತ್ತರಿಸಿ ಇಡುತ್ತೇನೆ ಎಂದು ಚಾಮರಾಜ ಪೇಟೆ ಶಾಸಕ ಜಮೀರ್ ಅಹಮದ್ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಸವಾಲೆಸೆದಿದ್ದಾರೆ.

    ಚಾಮರಾಜಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಲ್ಲ. ಗೆಲ್ಲುವುದಿರಲಿ ಈ ಕ್ಷೇತ್ರದಲ್ಲಿ ಠೇವಣಿಯೂ ಸಿಗಲ್ಲ. ನಿನ್ನೆ ದೇವೇಗೌಡರು ಹೇಳಿದ ಮಾತು ನನಗೆ ಬೇಸರ ತರಿಸಿದೆ ಎಂದರು. ನನ್ನ ಕ್ಷೇತ್ರದಲ್ಲಿ ಸಮಾವೇಶ ನಡೆಸಲು ಒಂದು ತಿಂಗಳಿನಿಂದ ಪ್ರಯತ್ನಪಟ್ಟಿದ್ದರು. ಆದರೆ, ನಿನ್ನೆ ನಡೆದ ಜೆಡಿಎಸ್ ಸಮಾವೇಶಕ್ಕೆ ಎಷ್ಟು ಜನ ಬಂದಿದ್ದರು ಎನ್ನುವುದು ಎಲ್ರಿಗೂ ಗೊತ್ತಿದೆ. ಚಾಮರಾಜಪೇಟೆ ಕ್ಷೇತ್ರದಲ್ಲಿ ನಾನು ನನ್ನ ಸ್ವಂತ ಬಲದಿಂದ ಗೆದ್ದಿದ್ದೇನೆ ಎಂದರು.

    ದೇವೇಗೌಡರ ಬಗ್ಗೆ ತುಂಬಾ ಗೌರವವಿದೆ. ಆದರೆ, ಈ ರೀತಿ ರಾಜಕೀಯ ಮಾಡ್ತಾರೆ ಅಂತಾ ಅಂದ್ಕೊಂಡಿರಲಿಲ್ಲ. ನಾನು ಯಾವತ್ತೂ ಕೀಳುಮಟ್ಟದ ರಾಜಕಾರಣ ಮಾಡಿಲ್ಲ. ಜಮೀರ್ ಅಹ್ಮದ್ ಮುಖ ನೋಡಿ ಚುನಾವಣೆಯಲ್ಲಿ ಜೆಡಿಎಸ್ ಗೆ ಮತ ಹಾಕಿದ್ದಾರೆ. ಚಾಮರಾಜಪೇಟೆ ಕ್ಷೇತ್ರದಲ್ಲಿ ಜನ ನನ್ನನ್ನು ಇಷ್ಟಪಡುತ್ತಾರೆ ದೇವೇಗೌಡರನ್ನಲ್ಲ. ಎಲ್ಲ ಸಮುದಾಯದ ಜನರು ಜಮೀರ್ ನಮ್ಮ ಮನೆಯ ಮಗ ಎಂದು ಭಾವಿಸಿದ್ದಾರೆ. ಅಲ್ಪಸಂಖ್ಯಾತರ ಬಗ್ಗೆ ದೇವೇಗೌಡರಿಗೆ ಕಾಳಜಿಯಿಲ್ಲ ಎಂದು ಆರೋಪಿಸಿದರು.

    ನಿನ್ನೆ ಸಮಾವೇಶದಲ್ಲಿ ಏನಾಗಿತ್ತು..?: ಚಾಮರಾಜಪೇಟೆ ಕಸ್ತೂರಿಬಾ ನಗರದ ಸಂಯುಕ್ತ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಿನ್ನೆ ಜೆಡಿಎಸ್ ಸಮಾವೇಶ ನಡೆದಿತ್ತು. ಈ ಸಮಾವೇಶದಲ್ಲಿ ದೇವೇಗೌಡರು ಬಂಡಾಯ ಶಾಸಕರಿಗೆ ಸವಾಲ್ ಹಾಕಿದ್ದರು. ನಾನು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಎಲ್ಲಾ 8 ಕ್ಷೇತ್ರಗಳಲ್ಲಿ ನೋಡುತ್ತೇನೆ. ನನ್ನ ಕಾರ್ಯಕರ್ತರಿಗೆ ಈ ಕ್ಷೇತ್ರದಲ್ಲಿ ತೊಂದರೆ ಕೊಟ್ರೆ ಸಿದ್ದರಾಮಯ್ಯ ಅವರ ಮುಂದೆ ಧರಣಿ ಮಾಡುತ್ತೇನೆ. ನನ್ನ ಹಿಂದೆ ಬಂದ ಅಜೀಮ್, ಇಬ್ರಾಹಿಂಗೆ ನಾನು ಮೋಸ ಮಾಡಿಲ್ಲ ಎಂದಿದ್ದರು.

    ನಾನು ಬೇರೆಯವರನ್ನು ಟೀಕೆ ಮಾಡೋದಿಲ್ಲ. ಇದರಿಂದ ನಾನು ದೊಡ್ಡವನಾಗೋದಿಲ್ಲ ಎಂದು ಪರೋಕ್ಷವಾಗಿ ಜಮೀರ್ ಅಹ್ಮದ್ ಗೆ ಟಾಂಗ್ ನೀಡಿದ ದೇವೇಗೌಡರು, ಜಮೀರ್ ನನ್ನ ಸ್ನೇಹಿತ ಅಂದಿದ್ದರು. ಅವತ್ತು ಗಲ್ಲಿ ಗಲ್ಲಿ ಸುತ್ತಿ ಗೆಲ್ಲಿಸಿದ್ದೆ. ಇವತ್ತು ಸಭೆ ಮಾಡುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ರು. ಕೆಲವರು ಕೇಸ್ ಹಾಕ್ತಾರೆ ಸರ್ ಅಂತ ಹೇಳಿದ್ರು. ಆದ್ರೆ ನಾನು ಬಿಡಲಿಲ್ಲ, ಸಭೆ ಮಾಡುತ್ತಿದ್ದೇನೆ ಎಂದಿದ್ದರು.

  • ವಿಶ್ವನಾಥ್ ಸೇರ್ಪಡೆಯಿಂದ ಅಸಮಾಧಾನ ಇಲ್ಲ, ಜೆಡಿಎಸ್‍ನಲ್ಲಿ ಹೆಚ್‍ಡಿಕೆ-ದೇವೇಗೌಡರ ಮಾತೇ ಅಂತಿಮ: ರೇವಣ್ಣ

    ವಿಶ್ವನಾಥ್ ಸೇರ್ಪಡೆಯಿಂದ ಅಸಮಾಧಾನ ಇಲ್ಲ, ಜೆಡಿಎಸ್‍ನಲ್ಲಿ ಹೆಚ್‍ಡಿಕೆ-ದೇವೇಗೌಡರ ಮಾತೇ ಅಂತಿಮ: ರೇವಣ್ಣ

    ಮೈಸೂರು: ಮಾಜಿ ಸಂಸದ ಎಚ್. ವಿಶ್ವನಾಥ್ ಅವರು ಜೆಡಿಎಸ್‍ಗೆ ಸೇರ್ಪಡೆಯಾಗಿರುವುದರಿಂದ ಯಾವುದೇ ರೀತಿಯ ಅಸಮಾಧಾನ ಉಂಟಾಗಿಲ್ಲ. ಜೆಡಿಎಸ್ ನಲ್ಲಿ ಕುಮಾರಸ್ವಾಮಿ, ದೇವೇಗೌಡರು ಹೇಳುವ ಮಾತೇ ಅಂತಿಮ ಎಂದು ಜೆಡಿಎಸ್ ನ ಹಿರಿಯ ನಾಯಕ ಎಚ್.ಡಿ.ರೇವಣ್ಣ ಹೇಳಿದ್ದಾರೆ.

    ಇಂದು ಮೈಸೂರಿನಲ್ಲಿ ಆಷಾಢ ಶುಕ್ರವಾರದ ಪ್ರಯುಕ್ತ ನಾಡಿನ ಆಧಿದೇವತೆ ಚಾಮುಂಡೇಶ್ವರಿ ದೇವಿಗೆ ಪತ್ನಿ ಜೊತೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಜೆಡಿಎಸ್ ನಲ್ಲಿ ಯಾವುದೇ ರೀತಿಯ ಗೊಂದಲ, ಭಿನ್ನಾಭಿಪ್ರಾಯಗಳಿಲ್ಲ. ಜೆಡಿಎಸ್ ಪಕ್ಷಕ್ಕೆ ಸಂಬಂಧಿಸಿದಂತೆ ಪುತ್ರ ಪ್ರಜ್ಚಲ್ ನೀಡಿರುವ ಹೇಳಿಕೆಗೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ. ಜೆಡಿಎಸ್ ನಲ್ಲಿ ಕುಮಾರಸ್ವಾಮಿ, ದೇವೇಗೌಡರು ಹೇಳುವ ಮಾತೇ ಅಂತಿಮ, ಅವರ ಮಾತನ್ನು ಯಾರೂ ಮೀರುವುದಿಲ್ಲ. ಜೆಡಿಎಸ್ ನಲ್ಲಿ ಯಾವುದೇ ರೀತಿಯ ಅಸಮಾಧಾನ ಇಲ್ಲ. ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ ಅಂದ್ರು.

    ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಮಾಜಿ ಸಂಸದ ಎಚ್. ವಿಶ್ವನಾಥ್ ಅವರು ಜೆಡಿಎಸ್‍ಗೆ ಸೇರ್ಪಡೆಯಾಗಿರುವುದರಿಂದ ಯಾವುದೇ ರೀತಿಯ ಅಸಮಾಧಾನ ಉಂಟಾಗಿಲ್ಲ. ಅವರು ಹಿರಿಯ ರಾಜಕೀಯ ನಾಯಕರು, ಅವರ ಸೇರ್ಪಡೆಯಿಂದ ಜೆಡಿಎಸ್ ಗೆ ಮತ್ತಷ್ಟು ಬಲ ಬಂದಿದೆ ಎಂದು ಹೇಳಿದರು.

    ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಸ್ಫೋಟದಿಂದ ತೆನೆಯಲ್ಲಿ ತಳಮಳ- ಮೊಮ್ಮಗನ ಮೇಲೆ ದೇವೇಗೌಡ್ರು ಬೇಸರ

  • ಫೇಸ್‍ಬುಕ್, ಟ್ವಿಟ್ಟರ್ ಖಾತೆಗೆ ಚಾಲನೆ ನೀಡಿದ ಸಂಸದ ಪುಟ್ಟರಾಜು

    ಫೇಸ್‍ಬುಕ್, ಟ್ವಿಟ್ಟರ್ ಖಾತೆಗೆ ಚಾಲನೆ ನೀಡಿದ ಸಂಸದ ಪುಟ್ಟರಾಜು

    – ‘ಸಿಎಸ್‍ಪಿ ಮಂಡ್ಯ’ ಹೊಸ ಆ್ಯಪ್ ಗೆ ಚಾಲನೆ

    ಮಂಡ್ಯ: ಮಾಜಿ ಸಂಸದೆ ರಮ್ಯಾ ನಂತರ ಇದೀಗ ಹಾಲಿ ಸಂಸದ ಪುಟ್ಟರಾಜು ಸಾಮಾಜಿಕ ಜಾಲತಾಣದ ಮೂಲಕ ಮತದಾರರನ್ನು ತಲಪುವ ಪ್ರಯತ್ನ ಮಾಡುತ್ತಿದ್ದಾರೆ.

    ಇಂದು ಅಧಿಕೃತವಾಗಿ ಪುಟ್ಟರಾಜು ತಮ್ಮ ಫೇಸ್‍ಬುಕ್, ಟ್ವಿಟ್ಟರ್ ಖಾತೆಗೆ ಮಂಡ್ಯ ಸಂಸದರ ಕಚೇರಿಯಲ್ಲಿ ಚಾಲನೆ ನೀಡಿದರು. ಫೇಸ್‍ಬುಕ್, ಟ್ವಿಟರ್ ಖಾತೆ ಬಳಸದವರಿಗಾಗಿ `ಸಿಎಸ್‍ಪಿ ಮಂಡ್ಯ’ ಎಂಬ ಹೊಸ ಆ್ಯಪ್ ಕೂಡ ಓಪನ್ ಮಾಡಲಾಗಿದೆ.

    ಸಾಮಾಜಿಕ ಜಾಲತಾಣಗಳ ಮೂಲಕ ಮಂಡ್ಯ ಜನ ತಮ್ಮ ಸಮಸ್ಯೆ ಹೇಳಿಕೊಳ್ಳಬಹುದು. ತಮ್ಮ ಅಮೂಲ್ಯ ಸಲಹೆ ಇದ್ದರೆ ಅದನ್ನು ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ನೀಡಬಹುದು. ತಮ್ಮ ಸಮಸ್ಯೆಗೆ ತಕ್ಷಣ ಸ್ಪಂದಿಸುತ್ತೇನೆ ಅಂತ ಪುಟ್ಟರಾಜು ಹೇಳಿದ್ರು.

    ಇದೇ ಸಂದರ್ಭದಲ್ಲಿ ಮಾಜಿ ಸಂಸದೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರೂ ಜಿಲ್ಲೆಯಲ್ಲಿ ಮಾತ್ರ ಲಭ್ಯರಿಲ್ಲ ಎಂಬ ಬಗ್ಗೆ ಪ್ರಶ್ನಿಸಿದಾಗ ಅದರ ಬಗ್ಗೆ ಮಾತನಾಡಲು ನಿರಾಕರಿಸಿದ ಪುಟ್ಟರಾಜು, ಬೇರೆಯವರ ವಿಚಾರ ಪ್ರಸ್ತಾಪ ಮಾಡುವ ಅಗತ್ಯವಿಲ್ಲ. ನನ್ನ ಮೊಬೈಲ್ ನಂಬರ್ ಪ್ರತಿ ಮನೆಯಲ್ಲೂ ಇದೆ. ಯಾವಾಗ ಕರೆ ಮಾಡಿದರೂ ರಿಸೀವ್ ಮಾಡಿ ಜನರ ಸಮಸ್ಯೆ ಆಲಿಸುತ್ತೇನೆ ಎಂದರು.

    ಜಿ.ಟಿ. ದೇವೇಗೌಡರ ಬಗ್ಗೆ ಮಾತನಾಡಿ, ಅವರು ನಮ್ಮ ಮನೆಯ ಹಿರಿಯ ಮಗನಿದ್ದಂತೆ. ಎಲ್ಲ ಸಮಸ್ಯೆಗಳನ್ನೂ ಕೂತು ಬಗೆಹರಿಸಿಕೊಳ್ಳುತ್ತೇವೆ. ನಾವು ಪ್ರತಿನಿತ್ಯ ಅವರ ಸಂಪರ್ಕದಲ್ಲಿದ್ದೇವೆ. ಕೆಲವೊಂದು ನ್ಯೂನತೆಗಳ ಬಗ್ಗೆ ಹೇಳುತ್ತಿದ್ದಾರೆ. ಎಲ್ಲವನ್ನೂ ಸರಿಪಡಿಸಿಕೊಂಡು ಒಟ್ಟಿಗೆ ಹೋಗುತ್ತೇವೆ ಅಂದ್ರು.

    ಇನ್ನು ಸಂಸದರು ಸಾಮಾಜಿಕ ಜಾಲತಾಣಗಳ ಮೂಲಕ ಜನರ ಸಮಸ್ಯೆ ಆಲಿಸಲು ಹೊರಟಿರುವ ಬಗ್ಗೆ ಜಿಲ್ಲೆಯ ಜನರು ಸ್ವಾಗತಿಸಿದ್ದು, ಮಾಜಿ ಸಂಸದೆ ರಮ್ಯಾ ರೀತಿ ಬರೀ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸಕ್ರಿಯರಾಗಿರದೆ ಜಿಲ್ಲೆಯ ಜನರ ಮಧ್ಯೆಯಿದ್ದು ಕೆಲಸವನ್ನೂ ಮಾಡಬೇಕು ಎಂದು ಸಲಹೆ ನೀಡಿದರು.

     

  • ಮಠಾಧೀಶರೊಬ್ಬರು 30 ಕೋಟಿ ಜನಸಂಖ್ಯೆ ರಾಜ್ಯವನ್ನ ಆಳುತ್ತಿದ್ದಾರೆ, ಎಲ್ಲಿಗೆ ಬಂತು ದೇಶ: ಎಚ್‍ಡಿಡಿ ಪ್ರಶ್ನೆ

    ಮಠಾಧೀಶರೊಬ್ಬರು 30 ಕೋಟಿ ಜನಸಂಖ್ಯೆ ರಾಜ್ಯವನ್ನ ಆಳುತ್ತಿದ್ದಾರೆ, ಎಲ್ಲಿಗೆ ಬಂತು ದೇಶ: ಎಚ್‍ಡಿಡಿ ಪ್ರಶ್ನೆ

    ಬೆಂಗಳೂರು: 2018ರ ವಿಧಾನಸಭೆ ಚುನಾವಣೆಗೆ ರಣಕಹಳೆ ಊದಿರುವ ಜೆಡಿಎಸ್ ಇಂದು ಸ್ವಾಭಿಮಾನಿ ಸಮಾನತೆ ಸಮಾವೇಶ ನಡೆಸಿತು. ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಎಚ್‍ಡಿ ರೇವಣ್ಣ ಸೇರಿದಂತೆ ಜೆಡಿಎಸ್ ಪಕ್ಷ ಮುಖಂಡರು ಭಾಗವಹಿಸಿದ್ದರು.

    ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನೂತನವಾಗಿ ನಿರ್ಮಾಣ ಮಾಡಿದ ಜೆಡಿಎಸ್ ಕಚೇರಿಗೆ ಜೆಪಿ ಭವನ ಅಂತ ನಾಮಕರಣ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರುವ ರಾಜಕೀಯ ನಿರ್ಣಯ ಅಂಗೀಕಾರ ಮಾಡಲಾಯ್ತು.

    ಈ ವೇಳೆ ಮಾತನಾಡಿದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ, ಒಂದೇ ವರ್ಷದಲ್ಲಿ ಜೆಪಿ ಭವನ ನಿರ್ಮಾಣ ಮಾಡಿದ್ದೇವೆ, ಮಹಾತ್ಮಾ ಗಾಂಧಿ ಬಿಟ್ಟರೆ, ನಾನು ಜಯಪ್ರಕಾಶ್ ನಾರಾಯಣ ಅವರನ್ನು ಒಪ್ಪಿದ್ದೇನೆ. ಹೀಗಾಗಿ ಅವ್ರ ಹೆಸ್ರನ್ನ ಕಚೇರಿಗೆ ಇಟ್ಟಿದ್ದೇನೆ ಎಂದರು.

    ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಹೆಸರನ್ನು ಹೇಳದೇ ಪರೋಕ್ಷ ವಾಗ್ದಾಳಿ ನಡೆಸಿದ ದೇವೇಗೌಡರು, ಮಠಾಧೀಶರೊಬ್ಬರು 30 ಕೋಟಿ ಜನ ಸಂಖ್ಯೆ ರಾಜ್ಯವನ್ನ ಆಳುತ್ತಿದ್ದಾರೆ. ಮುಂದೆ ಏನಾಗುತ್ತೋ ಈ ದೇಶ? ನಾನು 10 ತಿಂಗಳು ದೇಶದ ಅಧಿಕಾರ ನಡೆಸಿದ್ದೇನೆ. ಎಲ್ಲರಿಗೂ ಸಮಾನ ಅವಕಾಶ ನೀಡಿದ್ದೇನೆ ಎಂದರು.

    ರಾಜ್ಯಕ್ಕೆ ಪ್ರಾದೇಶಿಕ ಪಕ್ಷ ಬೇಕೇ? ಬೇಡವೋ ಎಂಬುದನ್ನು ರಾಜ್ಯದ 6 ಕೋಟಿ ಜನ ತೀರ್ಮಾನ ಮಾಡಬೇಕು. ದೇಶದಲ್ಲಿ ಜನತಾ ಪರಿವಾರ ಒಂದೂಗೂಡಿಸುವ ಮೊದಲು ರಾಜ್ಯದಲ್ಲಿ ಒಂದಾಗಬೇಕು. ಆ ಕೆಲಸವನ್ನು ನಾನೇ ಮಾಡುತ್ತೇನೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಶಿರಾದ ಕಲಾವಿದರೊಬ್ಬರು ಕುಮಾರಸ್ವಾಮಿ ಅವಧಿಯಲ್ಲಿ ಆದ ಕೆಲಸ ಕುರಿತು ಗೀತೆ ರಚಿಸಿ ಪ್ರಸಾರ ಮಾಡಲಾಯಿತು. ಈ ಹಾಡಿಗೆ ಕಾರ್ಯಕರ್ತರು ಕುಣಿದು ಕುಪ್ಪಳಿಸಿದ್ರು.

    ಇದನ್ನೂ ಓದಿ: ಬಿಜೆಪಿ ಎಲೆಕ್ಷನ್‍ಗೆ ಜನಾರ್ದನ ರೆಡ್ಡಿಯಿಂದ 500 ಕೋಟಿ ಹಣ:ಎಚ್‍ಡಿಕೆ ಬಾಂಬ್