Tag: Devdutt Padikkal

  • ಮ್ಯಾಕ್ಸಿ, ಡುಪ್ಲೆಸಿಸ್‌ ಭರ್ಜರಿ ಫಿಫ್ಟಿ; ಬೆಂಗ್ಳೂರಿನಲ್ಲಿ RCB ʻಹಸಿರು ಕ್ರಾಂತಿʼ- ರಾಯಲ್ಸ್‌ ವಿರುದ್ಧ 7 ರನ್‌ ರೋಚಕ ಜಯ

    ಮ್ಯಾಕ್ಸಿ, ಡುಪ್ಲೆಸಿಸ್‌ ಭರ್ಜರಿ ಫಿಫ್ಟಿ; ಬೆಂಗ್ಳೂರಿನಲ್ಲಿ RCB ʻಹಸಿರು ಕ್ರಾಂತಿʼ- ರಾಯಲ್ಸ್‌ ವಿರುದ್ಧ 7 ರನ್‌ ರೋಚಕ ಜಯ

    ಬೆಂಗಳೂರು: ಗ್ಲೇನ್‌ ಮ್ಯಾಕ್ಸ್‌ವೆಲ್‌ (Glenn Maxwell) ಹಾಗೂ ಫಾಫ್‌ ಡು ಪ್ಲೆಸಿಸ್‌‌ (Faf du Plessis) ಭರ್ಜರಿ ಬ್ಯಾಟಿಂಗ್‌ ಹಾಗೂ ಹರ್ಷಲ್‌ ಪಟೇಲ್‌ ಮಾರಕ ಬೌಲಿಂಗ್‌ ದಾಳಿ ನೆರವಿನಿಂದ ಆರ್‌ಸಿಬಿ (RCB) ತವರಿನಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 7 ರನ್‌ಗಳ ರೋಚಕ ಜಯ ಸಾಧಿಸಿದೆ.

    ಕೊನೆಯ ಓವರ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ 20 ರನ್‌ಗಳ ಅಗತ್ಯವಿತ್ತು. ಈ ವೇಳೆ ಮೊದಲ ಎಸೆತವನ್ನೇ ಬೌಂಡರಿಗಟ್ಟಿದ ಅಶ್ವಿನ್‌ 2ನೇ ಎಸೆತದಲ್ಲಿ 2 ರನ್‌ ತೆಗೆದುಕೊಂಡರು. 3ನೇ ಎಸೆತದಲ್ಲಿ ಮತ್ತೊಂದು ಬೌಂಡರಿ ಸಿಡಿಸಿದಾಗ ಇನ್ನೇನು ಪಂದ್ಯ ಗೆದ್ದೇ ಬಿಟ್ಟಿತ್ತು ಎನ್ನುವಷ್ಟು ಆರ್‌ಸಿಬಿ ಫ್ಯಾನ್ಸ್‌ ಆತಂಕಗೊಂಡಿದ್ದರು. ಆದ್ರೆ ಅಶ್ವಿನ್‌ 4ನೇ ಎಸೆತದಲ್ಲಿ ಸಿಕ್ಸರ್‌ ಸಿಡಿಸಲು ಯತ್ನಿಸಿ ಕ್ಯಾಚ್‌ ನೀಡಿ ರಾಜಸ್ಥಾನ್‌ ತಂಡಕ್ಕೆ ನಿರಾಸೆ ಮೂಡಿಸಿದರು. 5ನೇ ಎಸೆತದಲ್ಲಿ ಧ್ರುವ್‌ ಜುರೆಲ್‌ 1 ರನ್‌ ಕದ್ದರೆ, 6ನೇ ಎಸೆತದಲ್ಲಿ ಅಬ್ದುಲ್‌ ಬಶಿತ್‌ 1 ರನ್‌ ಗಳಿಸಿದರು.

    ತವರಿನಲ್ಲಿ ರಾಜಸ್ಥಾನ್‌ ರಾಯಲ್ಸ್‌ (Rajasthan Royals) ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ (Royal Challengers Bangalore) 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 189 ರನ್‌ ಗಳಿಸಿತ್ತು. 190 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 182 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ರಾಜಸ್ಥಾನ್‌ಗೆ ಆರಂಭದಲ್ಲೇ ಆಘಾತ ಎದುರಾಯಿತು. ಆರಂಭಿಕ ಜೋಸ್‌ ಬಟ್ಲರ್‌ ಎರಡೇ ಎಸೆತಗಳಲ್ಲಿ ವಿಕೆಟ್‌ ಒಪ್ಪಿಸಿದರು. ಬಳಿಕ 2ನೇ ವಿಕೆಟ್‌ಗೆ ಜೊತೆಯಾದ ಯಶಸ್ವಿ ಜೈಸ್ವಾಲ್‌ (Yashasvi Jaiswal) ಹಾಗೂ ದೇವದತ್‌ ಪಡಿಕಲ್‌ (Devdutt Padikkal) ಭರ್ಜರಿ ಬ್ಯಾಟಿಂಗ್‌ ಮಾಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. 66 ಎಸೆತಗಳಲ್ಲಿ ಈ ಜೋಡಿ 98 ರನ್‌ ಕಲೆಹಾಕಿತ್ತು. ಇದರಿಂದ ತಂಡದಲ್ಲಿ ಮತ್ತೆ ಗೆಲುವಿನ ನಗೆ ಚಿಮ್ಮಿತ್ತು. ಪಡಿಕಲ್‌ 54 ರನ್‌ (34 ಎಸೆತ, 7 ಬೌಂಡರಿ, 1 ಸಿಕ್ಸರ್)‌ ಗಳಿಸಿ ಔಟಾಗುತ್ತಿದ್ದಂತೆ, ಯಶಸ್ವಿ ಜೈಸ್ವಾಲ್‌ 47 ರನ್‌ (37 ಎಸೆತ, 5 ಬೌಂಡರಿ, 2 ಸಿಕ್ಸರ್‌) ಬಾರಿಸಿ ವಿಕೆಟ್‌ ಒಪ್ಪಿಸಿದರು.

    ನಂತರ 15‌ ಎಸೆತಗಳಲ್ಲಿ 22 ರನ್‌ ಗಳಿಸಿದ್ದ ನಾಯಕ ಸಂಜು ಸ್ಯಾಮ್ಸನ್‌ (Sanju Samson) ಆಕ್ರಮಣಕಾರಿ ಬ್ಯಾಟಿಂಗ್‌ ಆರಂಭಿಸುತ್ತಿದ್ದಂತೆ ಕ್ಯಾಚ್‌ ನೀಡಿ ಔಟಾದರು. ಈ ಬೆನ್ನಲ್ಲೇ ಶಿಮ್ರಾನ್‌ ಹೆಟ್ಮೇಯರ್‌ ವಿಕೆಟ್‌ ಕೈಚೆಲ್ಲಿದರು. ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ರವಿಚಂದ್ರನ್‌ ಅಶ್ವಿನ್‌ 6 ಎಸೆತಗಳಲ್ಲಿ 12 ರನ್‌ ಗಳಿಸಿ ಔಟಾದರೆ, ಧ್ರುವ್‌ ಜುರೆಲ್‌ 16 ಎಸೆತಗಳಲ್ಲಿ 34 ರನ್‌ (2 ಸಿಕ್ಸರ್‌, 2 ಬೌಂಡರಿ) ಸಿಡಿಸಿ ಅಜೇಯರಾಗುಳಿದರು.

    ಆರ್‌ಸಿಬಿ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಹರ್ಷಲ್‌ ಪಟೇಲ್‌ ಪ್ರಮುಖ ಮೂರು ವಿಕೆಟ್‌ ಕಿತ್ತರೆ, ಮೊಹಮ್ಮದ್‌ ಸಿರಾಜ್‌, ಡೇವಿಡ್‌ ವಿಲ್ಲಿ ತಲಾ ಒಂದೊಂದು ವಿಕೆಟ್‌ ಪಡೆದರು.

    ಆರಂಭಿಕರಾಗಿ ಕಣಕ್ಕಿಳಿದ ಕೊಹ್ಲಿ ಮೊದಲ ಎಸೆತದಲ್ಲೇ ಟ್ರೆಂಟ್‌ ಬೋಲ್ಟ್‌ ಬೌಲಿಂಗ್‌ ದಾಳಿಗೆ ಔಟಾದರು, ಈ ಬೆನ್ನಲ್ಲೇ ಶಹಬಾಜ್‌ ಅಹ್ಮದ್‌ ಕೂಡ 2 ರನ್‌ ಗಳಿಸಿ ಔಟಾದರು. ಇದರಿಂದ ಆರಂಭದಲ್ಲೇ ಆರ್‌ಸಿಬಿಗೆ ಸಂಕಷ್ಟ ಎದುರಾಗಿತ್ತು.

    ಬಳಿಕ ಒಂದಾದ ಫಾಫ್‌ ಡು ಪ್ಲೆಸಿಸ್‌ ಹಾಗೂ ಸಿಕ್ಸರ್‌ ವೀರ ಗ್ಲೇನ್‌ ಮ್ಯಾಕ್ಸ್‌ವೆಲ್‌ ರಾಜಸ್ಥಾನ್‌ ಬೌಲರ್‌ಗಳನ್ನ ಚೆಂಡಾಡಿದರು. 3ನೇ ವಿಕೆಟ್‌ಗೆ ಈ ಜೋಡಿ 66 ಎಸೆತಗಳಲ್ಲಿ ಬರೋಬ್ಬರಿ 127 ರನ್‌ ಸಿಡಿಸಿತ್ತು. ಈ ವೇಳೆ ಡುಪ್ಲೆಸಿಸ್‌ 39 ಎಸೆತಗಳಲ್ಲಿ 62 ರನ್‌ (8 ಬೌಂಡರಿ, 2 ಸಿಕ್ಸರ್)‌ ಸಿಡಿಸಿದರೆ, ಮ್ಯಾಕ್ಸ್‌ವೆಲ್‌ 77 ರನ್‌ (44 ಎಸೆತ, 4 ಸಿಕ್ಸರ್‌, 6 ಬೌಂಡರಿ) ಚಚ್ಚಿದರು.

    ಈ ಜೋಡಿ ವಿಕೆಟ್‌ ಕಳೆದುಕೊಳ್ಳುತ್ತಿದ್ದಂತೆ ರನ್‌ ವೇಗ ಕಡಿಮೆಯಾಗುವ ಜೊತೆಗೆ ಒಂದೊಂದೇ ವಿಕೆಟ್‌ ಪತನಗೊಂಡಿತು. ಮಹಿಪಾಲ್‌ ಲೊಮ್ರೋರ್‌ 8 ರನ್‌, ದಿನೇಶ್‌ ಕಾರ್ತಿಕ್‌ 16 ರನ್‌, ವಾನಿಂದು ಹಸರಂಗ 6 ರನ್‌ ಗಳಿಸಿದರೆ, ಸುಯಶ್‌ ಪ್ರಭುದೇಸಾಯ್‌ ಹಾಗೂ ವಿಜಯ್‌ಕುಮಾರ್‌ ವೈಶಾಕ್‌ ಶೂನ್ಯ ಸುತ್ತಿದರು. ಮೊಹಮ್ಮದ್‌ ಸಿರಾಜ್‌ 1 ರನ್‌ ಹಾಗೂ ಡೇವಿಡ್ ವಿಲ್ಲಿ 4 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

    ರಾಜಸ್ಥಾನ್‌ ರಾಯಲ್ಸ್‌ ಪರ ಟ್ರೆಂಟ್‌ ಬೋಲ್ಟ್‌ ಹಾಗೂ ಸಂದೀಪ್‌ ಶರ್ಮಾ ತಲಾ 2 ವಿಕೆಟ್‌ ಕಿತ್ತರೆ, ರವಿಚಂದ್ರನ್‌ ಅಶ್ವಿನ್‌, ಯಜುವೇಂದ್ರ ಚಹಾಲ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

  • IPL 2023: ಕೊನೆಯವರೆಗೂ ಹೋರಾಡಿ ಸೋತ ಚೆನ್ನೈ – ರಾಜಸ್ಥಾನ್‌ ರಾಯಲ್ಸ್‌ಗೆ 3 ರನ್‌ಗಳ ರೋಚಕ ಜಯ

    IPL 2023: ಕೊನೆಯವರೆಗೂ ಹೋರಾಡಿ ಸೋತ ಚೆನ್ನೈ – ರಾಜಸ್ಥಾನ್‌ ರಾಯಲ್ಸ್‌ಗೆ 3 ರನ್‌ಗಳ ರೋಚಕ ಜಯ

    ಚೆನ್ನೈ: ಕೊನೆಯಲ್ಲಿ ಸಿಎಸ್‌ಕೆ ನಾಯಕ ಎಂ.ಎಸ್‌ ಧೋನಿ (MS Dhoni), ರವೀಂದ್ರ ಜಡೇಜಾ (Ravindra Jadeja) ಸಿಕ್ಸರ್‌ ಬೌಂಡರಿಗಳ ಬ್ಯಾಟಿಂಗ್‌ ಹೋರಾಟದ ಹೊರತಾಗಿಯೂ ರಾಜಸ್ಥಾನ್‌ ರಾಯಲ್ಸ್‌ (Rajasthan Royals) 3 ರನ್‌ಗಳ ರೋಚಕ ಜಯ ಸಾಧಿಸಿತು.

    ಕೊನೆಯ ಓವರ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ಗೆ (Chennai Super Kings) 21 ರನ್‌ಗಳ ಅಗತ್ಯವಿತ್ತು. ಈ ವೇಳೆ ಬೌಲಿಂಗ್‌ಗೆ ಬಂದ ಸಂದೀಪ್‌ ಶರ್ಮಾ ಸತತ 2 ವೈಡ್‌ ನೀಡಿ ಆತಂಕ ಹೆಚ್ಚಿಸಿದ್ದರು. ನಂತರ ಕ್ರೀಸ್‌ನಲ್ಲಿ ಉಳಿದುಕೊಂಡಿದ್ದ ಧೋನಿ ಮೊದಲ ಎಸೆತದಲ್ಲಿ ರನ್‌ ಕದಿಯುವಲ್ಲಿ ವಿಫಲರಾದರು. ಆದರೆ 2-3ನೇ ಎಸೆತಗಳಲ್ಲಿ ಭರ್ಜರಿ ಸಿಕ್ಸರ್‌ ಬಾರಿಸಿ, 4ನೇ ಎಸೆತದಲ್ಲಿ 1 ರನ್‌ ಕದ್ದರು. ಇನ್ನೂ 2 ಎಸೆತಗಳಲ್ಲಿ 6 ರನ್‌ಗಳ ಅಗತ್ಯವಿತ್ತು, ಈ ವೇಳೆ ಕ್ರೀಸ್‌ಗೆ ಬಂದ ಜಡೇಜಾ 5ನೇ ಎಸೆತದಲ್ಲಿ 1 ರನ್‌ ತೆಗೆದುಕೊಂಡರು. ಕೊನೆಯ ಎಸೆತದಲ್ಲಿ ಮಹಿ ಸಿಕ್ಸರ್‌ ಬಾರಿಸಲು ಪ್ರಯತ್ನಿಸಿ ಕೇವಲ 1 ರನ್‌ ಕದ್ದರು. ಪರಿಣಾಮ ಸಿಎಸ್‌ಕೆ 3 ರನ್‌ಗಳಿಂದ ವಿರೋಚಿತ ಸೋಲನುಭವಿಸಿತು.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಸಂಜು ಸ್ಯಾಮ್ಸನ್‌ ನಾಯಕತ್ವದ ರಾಜಸ್ಥಾನ್‌ ರಾಯಲ್ಸ್‌ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 175 ರನ್‌ ಗಳಿಸಿತು. 176 ರನ್‌ಗಳ ಗುರಿ ಬೆನ್ನತ್ತಿದ್ದ ಸಿಎಸ್‌ಕೆ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 172 ರನ್‌ ಗಳಿಸಿ ವಿರೋಚಿತ ಸೋಲನುಭವಿಸಿತು.

    ಚೇಸಿಂಗ್‌ ಆರಂಭಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಕಳೆದ ಮೂರು ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿದ್ದ ಋತುರಾಜ್‌ ಗಾಯಕ್ವಾಡ್‌ 8 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಈ ವೇಳೆ 2ನೇ ವಿಕೆಟ್‌ಗೆ ಜೊತೆಯಾದ ಅಜಿಂಕ್ಯ ರಹಾನೆ, ಡಿವೋನ್‌ ಕಾನ್ವೆ ಉತ್ತಮ ಇನ್ನಿಂಗ್ಸ್‌ ಕಟ್ಟುವಲ್ಲಿ ಯಶಸ್ವಿಯಾದರು. 19 ಎಸೆತಗಳಲ್ಲಿ 31 ರನ್‌ (2 ಬೌಂಡರಿ, 1‌ ಸಿಕ್ಸರ್) ಸ್ಫೋಟಕ ಬ್ಯಾಟಿಂಗ್‌ ಮಾಡುತ್ತಿದ್ದ ರಹಾನೆ ಅಶ್ವಿನ್‌ ಬೌಲಿಂಗ್‌ನಲ್ಲಿ ಔಟಾಗಿ ಹೊರನಡೆದರು. ಬಳಿಕ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸುತ್ತಿದ್ದ ಡಿವೋನ್ವೆ 50 ರನ್‌ (38 ಎಸೆತ, 6 ಬೌಂಡರಿ) ಕ್ಯಾಚ್‌ ನೀಡಿ ಔಟಾದರು.

    ನಂತರ ಕಣಕ್ಕಿಳಿದ ನಾಯಕ ಎಂ.ಎಸ್‌ ಧೋನಿ, ರವೀಂದ್ರ ಜಡೇಜಾ ಸಿಕ್ಸರ್‌, ಬೌಂಡರಿ ಅಬ್ಬರಿಸಲು ಶುರು ಮಾಡಿದರು. 30 ಎಸೆತಗಳಲ್ಲಿ ಈ ಜೋಡಿ ಮುರಿಯದ 7ನೇ ವಿಕೆಟ್‌ಗೆ 59 ರನ್‌ ಬಾರಿಸಿತ್ತು. ಧೋನಿ 17 ಎಸೆತಗಳಲ್ಲಿ 32 ರನ್‌ (3 ಸಿಕ್ಸರ್‌, 1 ಬೌಂಡರಿ) ಬಾರಿಸಿದರೆ, ಜಡೇಜಾ 15 ಎಸೆತಗಳಲ್ಲಿ 25 ರನ್‌ (2 ಸಿಕ್ಸರ್‌, 1 ಬೌಂಡರಿ) ಗಳಿಸಿದರು. ಶಿವಂ ದುಬೆ 8 ರನ್‌, ಮೊಯಿನ್‌ ಅಲಿ 7 ರನ್‌, ಅಂಬಟಿ ರಾಯುಡು 1 ರನ್‌ ಗಳಿಸಿದರು.

    ರಾಜಸ್ಥಾನ್‌ ರಾಯಲ್ಸ್‌ ಪರ ರವಿಚಂದ್ರನ್‌ ಅಶ್ಚಿನ್‌ (Ravichandran Ashwin) 4 ಓವರ್‌ಗಳಲ್ಲಿ 25 ರನ್‌ ನೀಡಿ 2 ವಿಕೆಟ್‌ ಕಿತ್ತರೆ, ಯಜುವೇಂದ್ರ ಚಾಹಲ್‌ 4 ಓವರ್‌ಗಳಲ್ಲಿ 27 ರನ್‌ ನೀಡಿ 2 ವಿಕೆಟ್‌ ಪಡೆದುಕೊಂಡರು ಇನ್ನೂ ಆಡಂ ಜಂಪಾ, ಸಂದೀಪ್‌ ಶರ್ಮಾ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ಟಾಸ್ ಸೋತು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ (CKS) ಆರಂಭದಲ್ಲೇ ವಿಕೆಟ್ ಪಡೆಯುವ ಮೂಲಕ ಉತ್ತಮ ಆರಂಭ ಮಾಡಿದರು. ರಾಜಸ್ಥಾನ್‌ ರಾಯಲ್ಸ್‌ ತಂಡದ ಆರಂಭಿಕ ಯಶಸ್ವಿ ಜೈಸ್ವಾಲ್ 8 ಎಸೆತಗಳಲ್ಲಿ 10 ರನ್ ಗಳಿಸಿ ಔಟಾದರು. 2ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಮತ್ತು ಜೋಸ್ ಬಟ್ಲರ್ ಉತ್ತಮ ಜೊತೆಯಾಟದ ಮೂಲಕ ತಂಡಕ್ಕೆ ಆಸರೆಯಾದರು.

    ಈ ಜೋಡಿ 2ನೇ ವಿಕೆಟ್‌ಗೆ 41 ಎಸೆತಗಳಲ್ಲಿ 77 ರನ್‌ಗಳ ಜೊತೆಯಾಟ ಆಡಿತು. ದೇವದತ್ ಪಡಿಕ್ಕಲ್ (Devdutt Padikkal) 26 ಎಸೆತಗಳಲ್ಲಿ 5 ಬೌಂಡರಿ ಸಹಿತ 38 ರನ್ ಗಳಿಸಿ ಪೆವಿಲಿಯನ್‌ ಸೇರಿದರು. ನಂತರ ಕ್ರೀಸ್‌ಗೆ ಬಂದ ನಾಯಕ ಸಂಜು ಸ್ಯಾಮ್ಸನ್ ಎರಡೇ ಎಸೆತಗಳಲ್ಲಿ ರನ್ ಗಳಿಸದೇ ಔಟಾದರು. ಇನ್ನೂ ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದ ರವಿಚಂದ್ರನ್ ಅಶ್ವಿನ್ ಜವಾಬ್ದಾರಿಯುತ ಆಟವಾಡಿದರು. 22 ಎಸೆತಗಳಲ್ಲಿ 30 ರನ್ (1 ಬೌಂಡರಿ, 2 ಸಿಕ್ಸರ್) ಗಳಿಸಿದರು. ಎಂದಿನಂತೆ ಉತ್ತಮ ಫಾರ್ಮ್‌ನಲ್ಲಿ ಬ್ಯಾಟಿಂಗ್‌ ಮುಂದುವರಿಸಿದ ಜೋಸ್‌ ಬಟ್ಲರ್‌ (Jos Buttler) ಬೊಂಬಾಟ್‌ ಬ್ಯಾಟಿಂಗ್‌ ಮಾಡಿದರು.

    36 ಎಸೆತಗಳಲ್ಲಿ 52 ರನ್ (1 ಬೌಂಡರಿ, 3 ಸಿಕ್ಸರ್) ಗಳಿಸಿ ಮೊಯೀನ್ ಅಲಿ ಸ್ಪಿನ್‌ ದಾಳಿಗೆ ಕ್ಲೀನ್ ಬೌಲ್ಡ್ ಆದರು. ಧ್ರುವ್ ಜುರೆಲ್ 6 ಎಸೆತಗಳಲ್ಲಿ 4 ರನ್ ಗಳಿಸಿ ಔಟಾದರೇ, ಜೇಸನ್ ಹೋಲ್ಡರ್ ರನ್ ಖಾತೆ ತೆರೆಯದೇ ಔಟ್ ಆದರು. ಕೊನೆಯಲ್ಲಿ ಶಿಮ್ರಾನ್ ಹೆಟ್ಮೆಯರ್‌ ಸಿಕ್ಸರ್‌, ಬೌಂಡರಿಗಳ ಸ್ಫೋಟಕ ಬ್ಯಾಟಿಂಗ್‌ ನಡೆಸಿ, 18 ಎಸೆತಗಳಲ್ಲಿ 30 ರನ್ (2 ಬೌಂಡರಿ, 2 ಸಿಕ್ಸರ್‌) ಗಳಿಸಿ ಅಜೇಯರಾಗುಳಿದರು.

    ಜಡೇಜಾ ಜಾದು: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಸ್ಪಿನ್‌ ಜಾದು ಮಾಡಿದ ರವೀಂದ್ರ ಜಡೇಜಾ ಆಕ್ರಮಣಕಾರಿ ಬ್ಯಾಟಿಂಗ್‌ ಮಾಡುತ್ತಿದ್ದ ದೇವದತ್ ಪಡಿಕ್ಕಲ್‌ರನ್ನ ಔಟ್ ಮಾಡಿದರು. ಅದೇ ಓವರ್ ನಲ್ಲಿ ನಾಯಕ ಸಂಜು ಸ್ಯಾಮ್ಸನ್‌ರನ್ನ ಕ್ಲೀನ್‌ ಬೌಲ್ಡ್ ಮಾಡಿದರು. 4 ಓವರ್ ಗಳಲ್ಲಿ 21 ರನ್ ನೀಡಿ 2 ವಿಕೆಟ್ ಪಡೆದುಕೊಂಡರು. ಆಕಾಶ್ ಸಿಂಗ್ ಮತ್ತು ತುಷಾರ್ ದೇಶಪಾಂಡೆ ಕೂಡ ತಲಾ 2 ವಿಕೆಟ್ ಪಡೆದು ಮಿಂಚಿದರೆ, ಮೊಯಿನ್‌ ಅಲಿ 1 ವಿಕೆಟ್‌ ಕಿತ್ತರು.

  • IPL 2023: ಕೊನೆಯವರೆಗೂ ಹೋರಾಡಿ ಸೋತ ರಾಜಸ್ಥಾನ್‌ – ಪಂಜಾಬ್‌ಗೆ 5 ರನ್‌ಗಳ ರೋಚಕ ಜಯ

    IPL 2023: ಕೊನೆಯವರೆಗೂ ಹೋರಾಡಿ ಸೋತ ರಾಜಸ್ಥಾನ್‌ – ಪಂಜಾಬ್‌ಗೆ 5 ರನ್‌ಗಳ ರೋಚಕ ಜಯ

    ಗುವಾಹಟಿ: ನಾಯಕ ಶಿಖರ್‌ ಧವನ್‌ (Shikhar Dhawan), ಪ್ರಭ್‌ಸಿಮ್ರಾನ್‌ ಸಿಂಗ್‌ (Prabhsimran Singh) ಸಿಕ್ಸರ್‌, ಬೌಂಡರಿ ಬ್ಯಾಟಿಂಗ್‌ ಹಾಗೂ ನಾಥನ್ ಎಲ್ಲಿಸ್ ಬೆಂಕಿ ಬೌಲಿಂಗ್‌ ದಾಳಿ ನೆರವಿನಿಂದ ಪಂಜಾಬ್‌ ಕಿಂಗ್ಸ್‌ ತಂಡವು ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 5 ರನ್‌ಗಳ ರೋಚಕ ಜಯ ಸಾಧಿಸಿದ್ದು, 16ನೇ ಐಪಿಎಲ್‌ ಆವೃತ್ತಿಯಲ್ಲಿ ಸತತ 2ನೇ ಗೆಲುವು ದಾಖಲಿಸಿದೆ.

    ಗುವಾಹಟಿಯ ಬರ್ಸಾಪರಾ ಸ್ಟೇಡಿಯಂನಲ್ಲಿ ರಾಜಸ್ಥಾನ ರಾಯಲ್ಸ್ (Rajasthan Royals) ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಂಗ್‌ ಮಾಡಿದ ಪಂಜಾಬ್‌ ಕಿಂಗ್ಸ್‌ (Punjab Kings) ತಂಡವು 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 197 ರನ್ ಗಳಿಸಿತು. 198 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 192 ರನ್‌ ಹೋರಾಡಿ ಸೂತಿತು. ಇದನ್ನೂ ಓದಿ: ಸುದರ್ಶನ್‌ ಫಿಫ್ಟಿ, ಮಿಲ್ಲರ್‌ ಸ್ಫೋಟಕ ಆಟ – ಗುಜರಾತ್‌ಗೆ ಸತತ ಎರಡನೇ ಜಯ

    15 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 124 ರನ್‌ ಗಳಿಸಿದ್ದ ರಾಜಸ್ಥಾನ್‌ ತಂಡ ಸಂಕಷ್ಟಕ್ಕೆ ಗುರಿಯಾಗಿತ್ತು. ಆದರೆ 7ನೇ ವಿಕೆಟ್‌ಗೆ ಜೊತೆಯಾದ ಶಿಮ್ರಾನ್‌ ಹೆಟ್ಮೆಯರ್‌ ಹಾಗೂ ಧ್ರುವ್‌ ಜುರೆಲ್‌ ಭರ್ಜರಿ ಸಿಕ್ಸರ್‌, ಬೌಂಡರಿ ಸಿಡಿಸಿ ಪಂಜಾಬ್‌ ಬೌಲರ್‌ಗಳನ್ನ ಬೆಂಡೆತ್ತಿದರು. 26 ಎಸೆತಗಳಲ್ಲಿ ಬರೋಬ್ಬರಿ 61 ರನ್‌ ಚಚ್ಚಿದರು.

    18ನೇ ಓವರ್‌ನಲ್ಲಿ 19 ರನ್‌, 19ನೇ ಓವರ್‌ನಲ್ಲಿ 18 ರನ್‌ ಬಂದ ಹಿನ್ನೆಲೆಯಲ್ಲಿ ಕೊನೆಯ ಓವರ್‌ ಅತ್ಯಂತ ರೋಚಕತೆಯಿಂದ ಕೂಡಿತ್ತು. ಕೊನೆಯ 6 ಎಸೆತಗಳಲ್ಲಿ ರಾಜಸ್ಥಾನ್‌ಗೆ 15 ರನ್‌ಗಳ ಅಗತ್ಯವಿತ್ತು. ಈ ವೇಳೆ ಜುರೆಲ್‌ ಮೊದಲ ಎಸೆತದಲ್ಲಿ 1 ರನ್‌ ಕದ್ದರೆ, 2ನೇ ಎಸೆತದಲ್ಲಿ ಹೆಟ್ಮೆಯರ್‌ 2 ರನ್‌ ಕದ್ದರು. 3ನೇ ಎಸೆತದಲ್ಲಿ 2ರನ್‌ ಕದಿಯಲು ಯತ್ನಿಸಿ ಹೆಟ್ಮೆಯರ್‌ ರನೌಟ್‌ಗೆ ತುತ್ತಾದರು. ಕೊನೆಯ 3 ಎಸೆತಗಳಲ್ಲಿ 13 ರನ್‌ಗಳ ಅಗತ್ಯವಿದ್ದಾಗ 2 ಎಸೆತಗಳಲ್ಲಿ ಒಂದೊಂದು ರನ್‌ಗಳಷ್ಟೇ ಸೇರ್ಪಡೆಯಾಯಿತು. ಕೊನೆಯ ಎಸೆತವನ್ನು ಧ್ರುವ್‌ ಜುರೆಲ್‌ ಬೌಂಡರಿಗಟ್ಟಿದರು. ಅಂತಿಮವಾಗಿ ರಾಜಸ್ಥಾನ್‌ 5 ರನ್‌ಗಳ ವಿರೋಚಿತ ಸೋಲು ಅನುಭವಿಸಿತು.

    ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್‌, ರವಿಚಂದ್ರನ್‌ ಅಶ್ವಿನ್‌ ಹಾಗೂ ಜೋಸ್‌ ಬಟ್ಲರ್‌ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. ಜೈಸ್ವಾಲ್‌ 11 ರನ್‌ ಗಳಿಸಿದರೆ, ಬಟ್ಲರ್‌ 11 ಎಸೆತಗಳಲ್ಲಿ 19 ರನ್‌ ಹೊಡೆದರು. ಆದರೆ ಅಶ್ವಿನ್‌ ಶೂನ್ಯಕ್ಕೆ ಔಟಾಗಿ ಪೆವಿಲಿಯನ್‌ ಸೇರಿಕೊಂಡರು. ಒಂದೆಡೆ ವಿಕೆಟ್‌ ಕಳೆದುಕೊಳ್ಳುತ್ತಿದ್ದರೂ ರನ್‌ ಕಲೆಹಾಕುತ್ತಾ ತಂಡ ಮುನ್ನಡೆದಿತ್ತು. 4ನೇ ವಿಕೆಟ್‌ಗೆ ಜೊತೆಯಾದ ನಾಯಕ ಸಂಜು ಸ್ಯಾಮ್ಸನ್‌ ಹಾಗೂ ದೇವದತ್‌ ಪಡಿಕಲ್‌ ಉತ್ತಮ ಜೊತೆಯಾಟವಾಡಿದರು. 32 ಎಸೆತಗಳಲ್ಲಿ 34 ರನ್‌ ಕಲೆಹಾಕಿ ತಂಡಕ್ಕೆ ಸ್ವಲ್ಪ ಚೇತರಿಕೆ ನೀಡಿತ್ತು. ಇದನ್ನೂ ಓದಿ:  ICC ರ‍್ಯಾಂಕಿಂಗ್‌ನಲ್ಲಿ ಕೊಹ್ಲಿಯನ್ನು ಹಿಂದಿಕ್ಕಿದ ಗಿಲ್

    ಅಷ್ಟರಲ್ಲೇ 42 ರನ್‌ (25 ಎಸೆತ, 5 ಬೌಂಡರಿ, 1 ಸಿಕ್ಸರ್‌) ಗಳಿಸಿ ಆಟವಾಡುತ್ತಿದ್ದ ಸಂಜು ಸ್ಯಾಮ್ಸನ್‌ ಸಿಕ್ಸರ್‌ ಚಚ್ಚಲು ಯತ್ನಿಸಿ ಕ್ಯಾಚ್‌ ನೀಡಿ ಔಟಾದರು. ಈ ಬೆನ್ನಲ್ಲೇ ರಿಯಾನ್‌ ಪರಾಗ್‌ 20 ರನ್‌ (12 ಎಸೆತ, 2 ಸಿಕ್ಸರ್‌, 1 ಬೌಂಡರಿ), ದೇವದತ್‌ ಪಡಿಕಲ್‌ 21 ರನ್‌ (26 ಎಸೆತ, 1 ಬೌಂಡರಿ) ಗಳಿಸಿ ವಿಕೆಟ್‌ ಒಪ್ಪಿಸಿದರು. ಇದರಿಂದ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ಗೆಲುವಿನ ಭರವಸೆ ಕೈತಪ್ಪಿತು. ಕೊನೆಯಲ್ಲಿ ಶಿಮ್ರಾನ್ ಹೆಟ್ಮೆಯರ್ ಸ್ಫೋಟಕ 36 ರನ್‌ (18 ಎಸೆತ, 3 ಸಿಕ್ಸರ್‌, 1 ಬೌಂಡರಿ) ಚಚ್ಚಿದರೆ, ಧ್ರುವ್‌ 15 ಎಸೆತಗಳಲ್ಲೇ 32 ರನ್‌ ಬಾರಿಸಿದರು. ಜೇಸನ್‌ ಹೋಲ್ಡರ್‌ 1 ರನ್‌ ಗಳಿಸಿ ಅಜೇಯರಾಗುಳಿದರು.

    ನಾಥನ್ ಎಲ್ಲಿಸ್ ಬೌಲಿಂಗ್‌ ಮಿಂಚು:
    ಪಂಜಾಬ್‌ ಕಿಂಗ್ಸ್‌ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ನಾಥನ್‌ ಎಲ್ಲಿಸ್‌ ರಾಜಸ್ಥಾನ ತಂಡದ ಪ್ರಮುಖ‌ ಬ್ಯಾಟ್ಸ್‌ಮ್ಯಾನ್‌ಗಳನ್ನ ಪೆವಿಲಿಯನ್‌ಗೆ ಕಳುಹಿಸುವಲ್ಲಿ ಯಶಸ್ವಿಯಾದರು. 4 ಓವರ್‌ಗಳಲ್ಲಿ 30 ರನ್‌ ನೀಡಿ ಪ್ರಮುಖ ನಾಲ್ಕು ವಿಕೆಟ್‌ ಕಿತ್ತರೆ, ಅರ್ಶ್‌ ದೀಪ್‌ ಸಿಂಗ್‌ 2 ವಿಕೆಟ್‌ ಪಡೆದರು.

    ಇದಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ತಂಡದ ಪರ ಬ್ಯಾಟಿಂಗ್ ಆರಂಭಿಸಿದ ನಾಯಕ ಶಿಖರ್ ಧವನ್ ಮತ್ತು ಪ್ರಭ್‌ಸಿಮ್ರಾನ್ ಸಿಂಗ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 9.1 ಓವರ್‌ಗಳಲ್ಲಿ ಭರ್ಜರಿ 90 ರನ್‌ ಕಲೆಹಾಕಿತು. ಪ್ರಭ್‌ಸಿಮ್ರಾನ್ ಸಿಂಗ್ ಸ್ಫೋಟಕ 60 ರನ್ (34 ಎಸೆತ, 7 ಬೌಂಡರಿ, 3 ಸಿಕ್ಸರ್‌) ಬಾರಿಸಿ ಔಟಾದರು. ನಂತರ ಕಣಕ್ಕಿಳಿದ ಭಾನುಕ ರಾಜಪಕ್ಸ 1 ರನ್ ಗಳಿಸಿ ಆಡುತ್ತಿದ್ದಾಗಲೇ ಗಾಯಗೊಂಡು ಹೊರನಡೆದರು. ಬಳಿಕ ಕ್ರೀಸ್‌ಗಿಳಿದ ಜಿತೇಶ್ ಶರ್ಮಾ 16 ಎಸೆತಗಳಲ್ಲಿ 27 ರನ್ (2 ಬೌಂಡರಿ, 1 ಸಿಕ್ಸರ್) ಗಳಿಸಿದರೆ, ಶಾರೂಖ್ ಖಾನ್ 10 ಎಸೆತಗಳಲ್ಲಿ 11 ರನ್ ಗಳಿಸಿ ಕೊನೆಯ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು.

    ಧವನ್‌ಗೆ ಕೈತಪ್ಪಿದ ಶತಕ:
    ಆರಂಭದಿಂದ ಕೊನೆಯವರೆಗೂ ಹೋರಾಡಿದ ನಾಯಕ ಶಿಖರ್ ಧವನ್ 56 ಎಸೆತಗಳಲ್ಲಿ 86 ರನ್ ಬಾರಿಸಿ (9 ಬೌಂಡರಿ, 3 ಸಿಕ್ಸರ್) ತಂಡದ ಮೊತ್ತ 190 ರನ್‌ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಸಿಕ್ಸರ್‌, ಬೌಂಡರಿ ಅಬ್ಬರಿಸುತ್ತಾ ರಾಜಸ್ಥಾನ್‌ ಬೌಲರ್‌ಗಳನ್ನ ಬೆಂಡೆತ್ತಿದರು.

    ರನ್‌ ನೀಡಿದ ಹೊರತಾಗಿಯೂ ಉತ್ತಮ ಬೌಲಿಂಗ್‌ ದಾಳಿ ನಡೆಸಿದ ರಾಜಸ್ಥಾನ್‌ ರಾಯಲ್ಸ್‌ ತಂಡದ ಪರ ಜೇಸನ್ ಹೋಲ್ಡರ್ 4 ಓವರ್‌ಗಳಲ್ಲಿ 29 ರನ್ ನೀಡಿ 2 ವಿಕೆಟ್ ಕಿತ್ತರೆ, ಆರ್‌. ಅಶ್ವಿನ್ 4 ಓವರ್‌ಗಳಲ್ಲಿ 25 ರನ್ ನೀಡಿ 1 ವಿಕೆಟ್ ಪಡೆದರು, ಯಜುವೇಂದ್ರ ಚಾಹಲ್ 4 ಓವರ್‌ಗಳಲ್ಲಿ 50 ರನ್ ನೀಡಿ 1 ವಿಕೆಟ್ ಉರುಳಿಸಿದರು.

  • ಆರ್​ಸಿಬಿ ಕ್ಯಾಪ್ಟನ್ ರೇಸ್‍ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್

    ಆರ್​ಸಿಬಿ ಕ್ಯಾಪ್ಟನ್ ರೇಸ್‍ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್

    ಬೆಂಗಳೂರು: ದುಬೈನಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯ ಐಪಿಎಲ್ ಬಳಿಕ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಾಯಕತ್ವಕ್ಕೆ ಗುಡ್ ಬೈ ಹೇಳುವುದಾಗಿ ವಿರಾಟ್ ಕೊಹ್ಲಿ ಈಗಾಗಲೇ ಹೇಳಿಕೆ ನೀಡಿದ್ದಾರೆ. ಇದೀಗ ವಿರಾಟ್ ಬಳಿಕ ತಂಡದಲ್ಲಿರುವ ಯುವ ಆಟಗಾರ ಕನ್ನಡಿಗ ದೇವದತ್ ಪಡಿಕ್ಕಲ್‍ಗೆ ನಾಯಕತ್ವ ಪಟ್ಟ ಕಟ್ಟಲು ಆರ್​ಸಿಬಿ ತಂಡ ಚಿಂತಿಸಿದೆ.

    ಆರ್​ಸಿಬಿ ತಂಡವನ್ನು 2021ರ ಐಪಿಎಲ್ ಬಳಿಕ ಮುನ್ನಡೆಸಿದ ಕೊಹ್ಲಿ ಇದೀಗ ನಾಯಕತ್ವ ತ್ಯಜಿಸಿ ಕೇವಲ ಆಟಗಾರನಾಗಿ ಆಡುವುದಾಗಿ ಹೇಳಿಕೊಂಡಿದ್ದಾರೆ. ಹಾಗಾಗಿ ಮುಂದಿನ ನಾಯಕ ಆಯ್ಕೆಗಾಗಿ ತಂಡ ಈಗಿನಿಂದಲೇ ಪ್ರಯತ್ನ ಮುಂದುವರೆಸಿದೆ. ನಾಯಕತ್ವ ರೇಸ್ ನಲ್ಲಿ ಕೆಲ ಆಟಗಾರರ ಹೆಸರು ಕೇಳಿಬರುತ್ತಿದೆ. ಪ್ರಮುಖವಾಗಿ ತಂಡದಲ್ಲಿರುವ ಅನುಭವಿ ಆಟಗಾರ ಮಿಸ್ಟರ್ 360 ಬ್ಯಾಟ್ಸ್‌ಮ್ಯಾನ್‌ ಖ್ಯಾತಿಯ ಎಬಿಡಿ ವಿಲಿಯರ್ಸ್‍ಗೆನಾಯಕತ್ವ ನೀಡಬಹುದೆಂಬ ನಿರೀಕ್ಷೆ ಇದೆ. ಇದನ್ನೂ ಓದಿ: ಕ್ರಿಕೆಟ್‍ನಲ್ಲಿ ಲಿಂಗ ಸಮಾನತೆಗಾಗಿ ಬ್ಯಾಟ್ಸ್‌ಮ್ಯಾನ್‌ ಬದಲಾಗಿ ‘ಬ್ಯಾಟರ್’ ಪದ ಬಳಕೆ

    ಎಬಿಡಿಗೆ ಈಗಾಗಲೇ 37 ವರ್ಷ, ವಯಸ್ಸಿನ ಪರಿಮಿತಿಯಲ್ಲಿ ನಾಯಕತ್ವ ನೇಮಿಸಲು ಹೊರಟರೆ ಯುವ ಆಟಗಾರರ ಸಾಲಲ್ಲಿ ಮೊದಲಿಗರಾಗಿ ಕಾಣಸಿಗುವುದು ಆರ್​ಸಿಬಿಯ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್. ಹಾಗಾಗಿ ಆರ್​ಸಿಬಿಯ ಭವಿಷ್ಯದ ಬಗ್ಗೆ ಗಮನಿಸಿದರೆ ಪಡಿಕ್ಕಲ್ ಉತ್ತಮ ಆಯ್ಕೆ ಆದರೆ ಅನುಭವವನ್ನು ಗಮನಿಸಿದರೆ ಎಬಿಡಿ ಉತ್ತಮವಾಗಿ ಗೋಚರಿಸುತ್ತಾರೆ. ಇವರೊಂದಿಗೆ ಯಜುವೇಂದ್ರ ಚಹಲ್, ಗ್ಲೇನ್ ಮ್ಯಾಕ್ಸ್​ವೆಲ್ ಹೆಸರು ಕೂಡ ಕೇಳಿಬರುತ್ತಿದ್ದು, ಆರ್​ಸಿಬಿ ಫ್ರಾಂಚೈಸ್ ಯಾರಿಗೆ ಮಣೆಹಾಕಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಇದನ್ನೂ ಓದಿ: ಎಬಿಡಿ, ಪಡಿಕ್ಕಲ್ ಜೊತೆಗೆ ದಾಖಲೆ ಹಂಚಿಕೊಂಡ ಕೆಎಲ್ ರಾಹುಲ್

  • ಭಾರತ ಪರ ಕ್ರಿಕೆಟ್ ಆಡಿದ 21ನೇ ಶತಮಾನದಲ್ಲಿ ಜನಿಸಿದ ಮೊದಲ ಆಟಗಾರ ಯಾರು ಗೊತ್ತಾ?

    ಭಾರತ ಪರ ಕ್ರಿಕೆಟ್ ಆಡಿದ 21ನೇ ಶತಮಾನದಲ್ಲಿ ಜನಿಸಿದ ಮೊದಲ ಆಟಗಾರ ಯಾರು ಗೊತ್ತಾ?

    ಕೊಲಂಬೋ: ಭಾರತ ಹಾಗೂ ಶ್ರೀಲಂಕಾ ಸರಣಿ ಮುಕ್ತಾಯಗೊಂಡಿದೆ. ಆದರೆ ಈ ಸರಣಿಯಲ್ಲಿ ಹಲವು ಬಗೆಯ ವೈಶಿಷ್ಟ್ಯವನ್ನು ಭಾರತ ತಂಡ ಅನುಭವಿಸಿದೆ. ಅದರಂತೆ 21ನೇ ಶತಮಾನದಲ್ಲಿ ಜನಿಸಿದ ಆಟಗಾರನೊಬ್ಬ ಮೊದಲ ಬಾರಿಗೆ ಭಾರತ ತಂಡದಲ್ಲಿ ಆಡಿ ಸಾಧನೆ ಮಾಡಿದ್ದಾರೆ.

    ಶ್ರೀಲಂಕಾ ಸರಣಿಗೆ ಭಾರತದ ಯುವ ತಂಡವನ್ನು ಕಳುಹಿಸಿಕೊಡಲಾಗಿತ್ತು. ಇದರಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಕೂಡ ಸ್ಥಾನ ಪಡೆದಿದ್ದರು. ಬಳಿಕ ಇವರಿಗೆ ಟಿ20 ಸರಣಿಯಲ್ಲಿ ಭಾರತದ ಪರ ಆಡುವ ಅವಕಾಶ ಕೂಡ ಸಿಕ್ಕಿತು. ಪಡಿಕ್ಕಲ್ 2000ರ ಜುಲೈ 7 ರಂದು ಜನಿಸಿದ್ದು, ಬಳಿಕ ಇದೀಗ ಭಾರತ ತಂಡದ ಪರ ಕ್ರಿಕೆಟ್ ಆಡಿದ್ದಾರೆ. ಈ ಮೂಲಕ ಪಡಿಕ್ಕಲ್ 21ನೇ ಶತಮಾನದಲ್ಲಿ ಹುಟ್ಟಿ ಭಾರತ ತಂಡವನ್ನು ಪ್ರತಿನಿಧಿಸಿದ ಮೊದಲ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಐಪಿಎಲ್‍ಗೂ ಮುನ್ನ ಡ್ಯಾಶಿಂಗ್ ಲುಕ್‍ನಲ್ಲಿ ಕಾಣಿಸಿಕೊಂಡ ಧೋನಿ

    ಪಡಿಕ್ಕಲ್ ಭಾರತ ತಂಡದ ಪರ ಎರಡು ಟಿ20 ಪಂದ್ಯಗಳನ್ನು ಆಡುವ ಅವಕಾಶ ಪಡೆದರು ಕೂಡ ಅದನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ಎರಡು ಪಂದ್ಯಗಳಿಂದ ಕೇವಲ 38 ರನ್ ಗಳನ್ನು ಬಾರಿಸಲಷ್ಟೇ ಶಕ್ತರಾದರು. ಆದರೆ ಮುಂದಿನ ಭವಿಷ್ಯದ ತಾರೆಯಾಗಿ ಗುರುತಿಸಿಕೊಂಡಿರುವ ಪಡಿಕ್ಕಲ್‍ಗೆ ಇನ್ನಷ್ಟು ಅವಕಾಶ ಕೊಡಬೇಕಾಗಿದೆ.

    ಶ್ರೀಲಂಕಾ ಪ್ರವಾಸ ಕೈಗೊಂಡ ಭಾರತ ತಂಡದಲ್ಲಿ ನಾಯಕನಾಗಿ ಶಿಖರ್ ಧವನ್ ಮೊದಲ ಬಾರಿಗೆ ಭಾರತ ತಂಡವನ್ನು ಮುನ್ನಡೆಸಿದರೆ, ತಂಡದ ಕೋಚ್ ಆಗಿ ಮೊದಲ ಬಾರಿಗೆ ಕನ್ನಡಿಗ ರಾಹುಲ್ ದ್ರಾವಿಡ್ ಅವರು ಕಾರ್ಯ ನಿರ್ವಹಿಸಿದ್ದರು. ಸರಣಿಯಲ್ಲಿ ಭಾರತ ತಂಡ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದರೆ. ಟಿ20 ಸರಣಿಯನ್ನು 1-2 ಅಂತರದಲ್ಲಿ ಸೋತು ಮಿಶ್ರ ಫಲ ಅನುಭವಿಸಿದೆ.

  • ಐಪಿಎಲ್ ಆರಂಭಕ್ಕೂ ಮೊದಲೇ  ಆರ್​ಸಿಬಿಗೆ ಬಿಗ್‍ಶಾಕ್

    ಐಪಿಎಲ್ ಆರಂಭಕ್ಕೂ ಮೊದಲೇ ಆರ್​ಸಿಬಿಗೆ ಬಿಗ್‍ಶಾಕ್

    ಚೆನ್ನೈ: 14ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರ ಕನ್ನಡಿಗ ದೇವದತ್ ಪಡೀಕಲ್‍ಗೆ ಕೊರೊನಾ ದೃಢಪಟ್ಟಿದೆ.

    ಐಪಿಎಲ್ ಆರಂಭಕ್ಕೆ ಇನ್ನು 5 ದಿನ ಬಾಕಿ ಇದ್ದು, ಈ ಟೂರ್ನಿ ಆರಂಭಕ್ಕೂ ಮೊದಲೇ ಆರ್​ಸಿಬಿಗೆ ಹಿನ್ನಡೆ ಉಂಟಾಗಿದೆ. ಪಡೀಕಲ್‍ಗೆ ಕೊರೊನಾ ಪಾಸಿಟಿವ್ ಬರುತ್ತಿದ್ದಂತೆ ಅವರನ್ನು ತಂಗಿರುವ ಹೊಟೇಲ್‍ನಲ್ಲೇ ಐಸೋಲೇಶನ್‍ನಲ್ಲಿಡಲಾಗಿದೆ. ಈ ಮೊದಲು ಕೋಲ್ಕತ್ತಾ ತಂಡದ ಆಟಗಾರ ರೋಹಿತ್ ರಾಣಾ ಮತ್ತು ಡೆಲ್ಲಿ ತಂಡದ ಅಕ್ಷರ್ ಪಟೇಲ್ ಅವರಿಗೆ ಕೊರೊನಾ ದೃಢಪಟ್ಟಿತ್ತು.

    ದೇವದತ್ ಪಡೀಕಲ್ ಕಳೆದ ಬಾರಿಯ ಐಪಿಎಲ್‍ನಲ್ಲಿ ಆರ್​ಸಿಬಿ ಪರವಾಗಿ ಉತ್ತಮವಾಗಿ ಬ್ಯಾಟ್ ಬೀಸಿದ್ದು, 15 ಪಂದ್ಯಗಳಿಂದ 31.53 ಸರಾಸರಿಯಲ್ಲಿ 473 ರನ್ ಬಾರಿಸಿದ್ದರು. ಹಾಗೇ ಕೆಲದಿನಗಳ ಹಿಂದೆ ನಡೆದ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕ ತಂಡದ ಪರ ಆಡಿರುವ ಪಡೀಕಲ್ 218 ರನ್ ಮತ್ತು ವಿಜಯ್ ಹಜಾರೆ ಟೂರ್ನಿಯಲ್ಲಿ 737 ರನ್ ಸಿಡಿಸಿ ಭರ್ಜರಿ ಫಾರ್ಮ್‍ನಲ್ಲಿದ್ದರು. ಆದರೆ ಇದೀಗ ಕೊರೊನಾದಿಂದಾಗಿ ಮೊದಲೆರಡು ಪಂದ್ಯಗಳಿಂದ ಪಡಿಕಲ್ ಅವರನ್ನು ದೂರ ಇಡಲು ತಂಡ ಮುಂದಾಗಿದೆ.

    ಆರ್​ಸಿಬಿ ತಂಡ ತನ್ನ ಮೊದಲ ಪಂದ್ಯವನ್ನು ಎಪ್ರಿಲ್ 9 ರಂದು ಮುಂಬೈ ವಿರುದ್ಧ ಚೆನ್ನೈನಲ್ಲಿ ಆಡಲಿದೆ. ಎಪ್ರಿಲ್ 9 ರಿಂದ ಮೇ 30ರ ವರೆಗೆ ಒಟ್ಟು 6 ನಗರಗಳಲ್ಲಿ ಐಪಿಎಲ್ ಪಂದ್ಯಾಟಗಳನ್ನು ನಡೆಸಲು ಬಿಸಿಸಿಐ ಮುಂದಾಗಿದೆ.

  • ಹೈದರಾಬಾದ್‍ನ ಆ ಬೌಲರ್‌ಗೆ ಬ್ಯಾಟ್ ಬೀಸುವುದು ಬಹಳ ಕಷ್ಟ: ಪಡಿಕ್ಕಲ್

    ಹೈದರಾಬಾದ್‍ನ ಆ ಬೌಲರ್‌ಗೆ ಬ್ಯಾಟ್ ಬೀಸುವುದು ಬಹಳ ಕಷ್ಟ: ಪಡಿಕ್ಕಲ್

    – ಅವಕಾಶ ಬಂದ್ರೆ ಎರಡು ಕೈಯಿಂದ ಬಾಚಿಕೊಳ್ತೇನೆ

    ಬೆಂಗಳೂರು: ಸನ್‍ರೈಸಸ್ ಹೈದರಾಬಾದ್ ತಂಡದ ಸ್ಪಿನ್ನರ್ ರಶೀದ್ ಖಾನ್ ಬೌಲಿಂಗ್ ವಿರುದ್ಧ ಬ್ಯಾಟ್ ಬೀಸುವುದು ಬಹಳ ಕಷ್ಟ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ದೇವದತ್ ಪಡಿಕ್ಕಲ್ ಹೇಳಿದ್ದಾರೆ.

    ಕರ್ನಾಟಕದ ದೇವದತ್ ಪಡಿಕ್ಕಲ್ ಈ ಬಾರಿ ತಾವಾಡಿದ ಮೊದಲ ಐಪಿಎಲ್ ಆವೃತ್ತಿಯಲ್ಲೇ ದಾಖಲೆಯ ಆಟವಾಡಿದ್ದಾರೆ. ಆರ್‌ಸಿಬಿ ಪರ ಆರಂಭಿಕನಾಗಿ ಬ್ಯಾಟ್ ಬೀಸಿ ಐದು ಅರ್ಧಶತಕಗಳನ್ನು ಸಿಡಿಸುವ ಮೂಲಕ ಸಾಧನೆ ಮಾಡಿದ್ದಾರೆ. ಜೊತೆಗೆ ವಿಶ್ವದ ಡೆಡ್ಲಿ ಬೌಲರ್ ಗಳಾದ ಜಸ್ಪ್ರಿತ್ ಬುಮ್ರಾ, ಟ್ರೆಂಟ್ ಬೌಲ್ಟ್ ಮತ್ತು ಕಗಿಸೊ ರಬಾಡಾರನ್ನು ಸಮರ್ಥವಾಗಿ ಎದುರಿಸು ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ.

    ಐಪಿಎಲ್ ಮುಗಿದ ನಂತರ ಬೌಲರ್ ಗಳ ವಿಚಾರವಾಗಿ ಮಾತನಾಡಿರುವ ಪಡಿಕ್ಕಲ್, ನಾನು ದೇಶೀಯ ಕ್ರಿಕೆಟ್‍ನಲ್ಲಿ ವೇಗದ ಬೌಲರ್ ಗಳನ್ನು ಫೇಸ್ ಮಾಡಿದ್ದೇನೆ. ಹೀಗಾಗಿ ವೇಗದ ಬೌಲರ್ ಗಳನ್ನು ಐಪಿಎಲ್‍ನಲ್ಲಿ ಸಮರ್ಥವಾಗಿ ಎದುರಿಸಿದ್ದೇನೆ. ಆದರೆ ಐಪಿಎಲ್‍ನಲ್ಲಿ ಸ್ಪಿನ್ ಬೌಲರ್ ಗಳನ್ನು ಫೇಸ್ ಮಾಡುವುದು ಬಹಳ ಕಷ್ಟವಾಗಿತ್ತು. ಅದರಲ್ಲೂ ಹೈದರಾಬಾದ್ ತಂಡದ ಸ್ಪಿನ್ನರ್ ರಶೀದ್ ಖಾನ್ ವಿರುದ್ಧ ಬ್ಯಾಟ್ ಬೀಸುವುದು ಕಷ್ಟ ಎಂದು ಹೇಳಿದ್ದಾರೆ.

    ಐಪಿಎಲ್‍ನಲ್ಲಿ ಭರ್ಜರಿ ಪ್ರದರ್ಶನ ನೀಡಿದರು. ಪಡಿಕ್ಕಲ್ ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಗೆ ಆಯ್ಕೆಯಾಗುವಲ್ಲಿ ವಿಫಲರಾದರು. ಆದರೆ ಈ ವಿಚಾರವಾಗಿ ಮಾತನಾಡಿರುವ ಪಡಿಕ್ಕಲ್, ತಮ್ಮ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವುದು ಪ್ರತಿಯೊಬ್ಬ ಕ್ರಿಕೆಟ್ ಆಟಗಾರನ ಡ್ರೀಮ್ ಆಗಿರುತ್ತದೆ. ನಾನು ಕೂಡ ಟೀಂ ಇಂಡಿಯಾಗೆ ಆಡುವ ಆಸೆ ಇಟ್ಟುಕೊಂಡಿದ್ದೇನೆ. ಅದಕ್ಕಾಗಿಯೇ ಶ್ರಮ ಪಡುತ್ತಿದ್ದೇನೆ. ಅವಕಾಶ ಬಂದರೆ ಎರಡೂ ಕೈಯಿಂದ ಬಾಚಿಕೊಳ್ಳುತ್ತೇನೆ ಎಂದು ಪಡಿಕ್ಕಲ್ ತಿಳಿಸಿದ್ದಾರೆ.

    ಐಪಿಎಲ್ 2020ರ ಆವೃತ್ತಿ ಉದಯೋನ್ಮುಖ ಆಟಗಾರ ಪ್ರಶಸ್ತಿ ಪಡೆದಿದ್ದ ಪಡಿಕ್ಕಲ್, ಮಾಧ್ಯಮಗಳೊಂದಿಗೆ ಮಾತನಾಡಿ, ಇದು ಆರಂಭ ಮಾತ್ರ. ನನ್ನ ಆಟ ಮತ್ತಷ್ಟು ಸುಧಾರಿಸಿಕೊಳ್ಳಬೇಕಿದೆ. ಇನ್ನಿಂಗ್ಸ್ ಆರಂಭ ಮಾಡುವ ವಿಚಾರದಲ್ಲಿ ವಿರಾಟ್ ಕೊಹ್ಲಿ ಸಾಕಷ್ಟು ಸಹಾಯ ಮಾಡಿದ್ದರು. ಯಶಸ್ಸನ್ನು ತಲೆಗೇರಿಕೊಳ್ಳದೆ ಶ್ರಮವಹಿಸಿಬೇಕು. ದೇಶಕ್ಕಾಗಿ ಆಡಬೇಕು ಎಂಬ ಅಲೋಚನೆಗಳನ್ನು ಬಿಟ್ಟು ಕೇವಲ ನಿನ್ನ ಆಟವನ್ನು ಎಂಜಾಯ್ ಮಾಡುತ್ತಾ ಮುಂದೇ ಸಾಗು. ಎಲ್ಲವೂ ನಡೆಯಬೇಕಾದ ಸಂದರ್ಭದಲ್ಲಿ ನಡೆಯುತ್ತದೆ ಎಂದು ಸಲಹೆ ನೀಡಿದ್ದರು ಎಂದು ಪಡಿಕ್ಕಲ್ ತಿಳಿಸಿದ್ದಾರೆ.

    2020ರ ಆವೃತ್ತಿಯಲ್ಲಿ ಪ್ಲೇ ಆಫ್ ಪ್ರವೇಶಿಸಿದ ಆರ್‌ಸಿಬಿ ತಂಡದಲ್ಲಿ ಪಡಿಕ್ಕಲ್ ಹೆಚ್ಚು ಗಮನ ಸೆಳೆದರು. ಟೂರ್ನಿಯಲ್ಲಿ 15 ಪಂದ್ಯಗಳನ್ನು ಆಡಿರುವ ಯುವ ಆಟಗಾರ ಪಡಿಕ್ಕಲ್ 5 ಶತಕದ ಜೊತೆಗೆ 473 ರನ್ಸ್ ಗಳಿಸಿದ್ದು, ಪಾದಾರ್ಪಣೆ ಮಾಡಿದ ವರ್ಷದಲ್ಲೇ ಅತ್ಯಧಿಕ ರನ್ ಗಳಿಸಿದ ಶ್ರೇಯಸ್ ಅಯ್ಯರ್ ದಾಖಲೆಯನ್ನು ಅಳಿಸಿ ಹಾಕಿದ್ದರು.

  • ಯಶಸ್ಸನ್ನು ತಲೆಗೇರಿಸಿಕೊಳ್ಳಬೇಡ- ಪಡಿಕ್ಕಲ್‍ಗೆ ಕೊಹ್ಲಿ ಸಲಹೆ

    ಯಶಸ್ಸನ್ನು ತಲೆಗೇರಿಸಿಕೊಳ್ಳಬೇಡ- ಪಡಿಕ್ಕಲ್‍ಗೆ ಕೊಹ್ಲಿ ಸಲಹೆ

    ಮುಂಬೈ: ಯಶಸ್ಸನ್ನು ಯಾವುದೇ ಕಾರಣಕ್ಕೂ ತಲೆಗೇರಿಸಿಕೊಳ್ಳದೆ ಶ್ರಮವಹಿಸಬೇಕಿದೆ ಎಂದು ನಾಯಕ ವಿರಾಟ್ ಕೊಹ್ಲಿ ಅವರು ಸಲಹೆ ನೀಡಿದ್ದರು ಎಂದು ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ತಿಳಿಸಿದ್ದಾರೆ.

    ಐಪಿಎಲ್ 2020ರ ಆವೃತ್ತಿ ಉದಯೋನ್ಮುಖ ಆಟಗಾರ ಪ್ರಶಸ್ತಿ ಪಡೆದಿರುವ ಪಡಿಕ್ಕಲ್, ಮಾಧ್ಯಮಗಳೊಂದಿಗೆ ಮಾತನಾಡಿ ಇದು ಆರಂಭ ಮಾತ್ರ. ನನ್ನ ಆಟ ಮತ್ತಷ್ಟು ಸುಧಾರಿಸಿಕೊಳ್ಳಬೇಕಿದೆ. ಇನ್ನಿಂಗ್ಸ್ ಆರಂಭ ಮಾಡುವ ವಿಚಾರದಲ್ಲಿ ಸಾಕಷ್ಟು ಸಹಾಯ ಮಾಡಿದ್ದರು. ಯಶಸ್ಸನ್ನು ತಲೆಗೇರಿಕೊಳ್ಳದೆ ಶ್ರಮವಹಿಸಿಬೇಕು. ದೇಶಕ್ಕಾಗಿ ಆಡಬೇಕು ಎಂಬ ಅಲೋಚನೆಗಳನ್ನು ಬಿಟ್ಟು ಕೇವಲ ನಿನ್ನ ಆಟವನ್ನು ಎಂಜಾಯ್ ಮಾಡುತ್ತಾ ಮುಂದೇ ಸಾಗು. ಎಲ್ಲವೂ ನಡೆಯಬೇಕಾದ ಸಂದರ್ಭದಲ್ಲಿ ನಡೆಯುತ್ತದೆ ಎಂದು ಸಲಹೆ ನೀಡಿದ್ದರು ಎಂದು ಪಡಿಕ್ಕಲ್ ತಿಳಿಸಿದ್ದಾರೆ.

    ಹಿರಿಯ ಆಟಗಾರರಿಂದ ಸಾಕಷ್ಟು ಕಲಿತಿದ್ದೇನೆ. ಸಂಕಷ್ಟದ ಸಂದರ್ಭಗಳನ್ನು ಎದುರಿಸುವ ವಿಚಾರದಲ್ಲಿ ನನ್ನ ದೃಷ್ಟಿಕೋನವೂ ಬದಲಾಗಿದೆ. ಹಿರಿಯ ಆಟಗಾರರು ಪಂದ್ಯದ ಫಲಿತಾಂಶದ ಬಗ್ಗೆ ಸಂಬಂಧವಿಲ್ಲದೇ ಸ್ಥಿರ ಪ್ರದರ್ಶನ ನೀಡುವತ್ತ ಗಮನ ನೀಡುತ್ತಾರೆ. ಗೆಲುವು ಪಡೆದರೆ ಹೆಮ್ಮೆ ಪಟ್ಟು ಹಿಗ್ಗಿ ಹೋಗುವುದಿಲ್ಲ, ಸೋತರೆ ಕುಗ್ಗುವುದಿಲ್ಲ. ಇದು ನನಗೆ ಪ್ರೇರಣೆಯಾಗಿದೆ ಎಂದು ಪಡಿಕ್ಕಲ್ ಹೇಳಿದ್ದಾರೆ.

    2020ರ ಆವೃತ್ತಿಯಲ್ಲಿ ಪ್ಲೇ ಆಫ್ ಪ್ರವೇಶಿಸಿದ ಆರ್ ಸಿಬಿ ತಂಡದಲ್ಲಿ ಪಡಿಕ್ಕಲ್ ಹೆಚ್ಚು ಗಮನ ಸೆಳೆದರು. 15 ಪಂದ್ಯಗಳನ್ನು ಟೂರ್ನಿಯಲ್ಲಿ ಆಡಿರುವ ಯುವ ಆಟಗಾರ 473 ರನ್ಸ್ ಗಳಿಸಿದ್ದು, ಪಾದಾರ್ಪಣೆ ಮಾಡಿದ ವರ್ಷದಲ್ಲೇ ಅತ್ಯಧಿಕ ರನ್ ಗಳಿಸಿದ ಶ್ರೇಯಸ್ ಅಯ್ಯರ್ ದಾಖಲೆಯನ್ನು ಅಳಿಸಿ ಹಾಕಿದ್ದರು.

  • ಎಬಿಡಿ, ಪಡಿಕ್ಕಲ್ ಜೊತೆಗೆ ದಾಖಲೆ ಹಂಚಿಕೊಂಡ ಕೆಎಲ್ ರಾಹುಲ್

    ಎಬಿಡಿ, ಪಡಿಕ್ಕಲ್ ಜೊತೆಗೆ ದಾಖಲೆ ಹಂಚಿಕೊಂಡ ಕೆಎಲ್ ರಾಹುಲ್

    ನವದೆಹಲಿ: ಐಪಿಎಲ್-2020ಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಮತ್ತು ಸ್ಫೋಟಕ ಆಟಗಾರ ಎಬಿಡಿ ವಿಲಿಯರ್ಸ್ ದಾಖಲೆಯೊಂದನ್ನು ಸಮನಾಗಿ ಹಂಚಿಕೊಂಡಿದ್ದಾರೆ.

    ಕೊರೊನಾ ನಡುವೆಯೂ ಯುಎಇಯಲ್ಲಿ ನಡೆದ ಐಪಿಎಲ್-2020 ಯಶಸ್ವಿಯಾಗಿ ಮುಗಿದಿದೆ. ಹಲವಾರು ಅಡೆತಡೆಗಳ ನಡುವೆ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡಿ ಸಕ್ಸಸ್ ಕಂಡಿದೆ. ಅಂತಯೇ ಟೂರ್ನಿಯುದ್ದಕ್ಕೂ ಭರ್ಜರಿಯಾಗಿ ಆಡಿದ ಮುಂಬೈ ಇಂಡಿಯನ್ಸ್ ಐದನೇ ಬಾರಿಗೆ ಚಾಂಪಿಯನ್ ಆಗಿದೆ. ಶ್ರೇಯಸ್ ಐಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ರನ್ನರ್ ಆಫ್ ಆಗಿದೆ.

    ಈ ಬಾರಿಯ ಐಪಿಎಲ್‍ನಲ್ಲಿ ಕರ್ನಾಟಕದ ಆಟಗಾರರದ ಕೆಎಲ್ ರಾಹುಲ್ ಮತ್ತು ಯುವ ಆಟಗಾರ ದೇವದತ್ ಪಡಿಕ್ಕಲ್ ಉತ್ತಮವಾಗಿ ಬ್ಯಾಟ್ ಬೀಸಿದರು. ಜೊತೆಗೆ ಇಬ್ಬರು ಈ ಬಾರಿಯ ಐಪಿಎಲ್‍ನಲ್ಲಿ ಐದು ಅರ್ಧಶತಕ ಸಿಡಿಸಿದ್ದು, ಐಪಿಎಲ್-2020ಯಲ್ಲಿ ಅತೀ ಹೆಚ್ಚು ಅರ್ಧಶತಕ ಸಿಡಿಸಿದ ದಾಖಲೆಯನ್ನು ಎಬಿಡಿ ವಿಲಿಯರ್ಸ್ ಅವರ ಜೊತೆ ಹಂಚಿಕೊಂಡಿದ್ದಾರೆ. ಇದ ಜೊತೆಗೆ ಕರ್ನಾಟದ ಇಬ್ಬರು ಆಟಗಾರರು ಅತೀ ಹೆಚ್ಚು ಅರ್ಧಶತಕ ಸಿಡಿಸಿದಂತಾಗಿದೆ.

    ಐಪಿಎಲ್-2020ಯಲ್ಲಿ ಈ ಬಾರಿ ದೇವದತ್ ಪಡಿಕ್ಕಲ್ ಅವರು ಉತ್ತಮ ಫಾರ್ಮ್ ನಲ್ಲಿದ್ದರು. ಈ ಬಾರಿಯ ಐಪಿಎಲ್‍ನಲ್ಲಿ 15 ಪಂದ್ಯಗಳನ್ನು ಆಡಿದ ಪಡಿಕ್ಕಲ್ ಐದು ಅರ್ಧಶತಕದ ನೆರವಿನಿಂದ 473 ರನ್ ಸಿಡಿಸಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಎಂಟನೇ ಸ್ಥಾನ ಪಡೆದುಕೊಂಡಿದ್ದಾರೆ. ಜೊತೆಗೆ ಐಪಿಎಲ್ ಪಾದಾರ್ಪಣೆ ಟೂರ್ನಿಯಲ್ಲೇ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

    ಇದೇ ಮೊದಲ ಬಾರಿಗೆ ಐಪಿಎಲ್‍ನಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದ ರಾಹುಲ್, ಕ್ಯಾಪ್ಟನ್ ಆಗಿ ವಿಫಲವಾದರೂ ಆಟಗಾರನಾಗಿ ಒಳ್ಳೆಯ ಲಯದಲ್ಲಿ ಕಾಣಿಸಿಕೊಂಡಿದ್ದರು. ತಾವಾಡಿದ 14 ಪಂದ್ಯಗಳಲ್ಲಿ ಒಂದು ಶತಕ ಮತ್ತು ಐದು ಅರ್ಧಶತಕದ ನೆರವಿನಿಂದ ಬರೋಬ್ಬರಿ 670 ರನ್ ಸಿಡಿಸಿ, ಐಪಿಎಲ್-2020ಯ ಆರೆಂಜ್ ಕ್ಯಾಪ್ ವಿನ್ನರ್ ಆಗಿ ಹೊರಹೊಮ್ಮಿದರು.

    ಎಬಿಡಿ ವಿಲಿಯರ್ಸ್ ಈ ಬಾರಿ ಆರ್‍ಸಿಬಿ ತಂಡಕ್ಕೆ ಆಧಾರ ಸ್ಥಂಭದಂತೆ ಬ್ಯಾಟ್ ಬೀಸಿದರು. ಜೊತೆಗೆ ಬೆಂಗಳೂರು ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬಿದ್ದರು. ಐಪಿಎಲ್-2020ಯಲ್ಲಿ 15 ಪಂದ್ಯಗಳನ್ನಾಡಿ ಎಬಿಡಿ ಐದು ಅರ್ಧಶತಕದ ನೆರವಿನಿಂದ 454 ರನ್ ಸಿಡಿಸಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿ ಇದ್ದಾರೆ.

  • 6 ಮಂದಿ ಯುವ ಪ್ರತಿಭೆಗಳನ್ನು ಗುರುತಿಸಿದ ಗಂಗೂಲಿ- ಸ್ಪೆಷಲ್ ಮೆಸೇಜ್

    6 ಮಂದಿ ಯುವ ಪ್ರತಿಭೆಗಳನ್ನು ಗುರುತಿಸಿದ ಗಂಗೂಲಿ- ಸ್ಪೆಷಲ್ ಮೆಸೇಜ್

    ಮುಂಬೈ: ಕಳೆದ ಮೂರು ಐಪಿಎಲ್ ಆವೃತ್ತಿಗಳಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಮುಂಬೈ ಇಂಡಿಯನ್ಸ್ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ಸೇರಿದಂತೆ ಭಾರತ 6 ಮಂದಿ ಯುವ ಆಟಗಾರರ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಸೂರ್ಯಕುಮಾರ್ ಯಾದವ್ ಐಪಿಎಲ್ ಸೇರಿದಂತೆ, ರಣಜಿ ಪಂದ್ಯಗಳಲ್ಲಿಯೂ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಈ ಬಾರಿ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೆ ಆತನ ಆಯ್ಕೆ ಖಚಿತ ಎಂದು ಹಲವು ಮಾಜಿ ಆಟಗಾರರು ಊಹೆ ಮಾಡಿದ್ದರು. ಆದರೆ ಆಯ್ಕೆ ಸಮಿತಿ ಮಾತ್ರ ಸೂರ್ಯ ಅವರಿಗೆ ಅವಕಾಶ ನೀಡಿರಲಿಲ್ಲ. ಇದರೊಂದಿಗೆ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡದ ಕುರಿತು ಹಲವರು ಚರ್ಚೆ ನಡೆಸಿದ್ದರು.

    ಇದೇ ಸಂದರ್ಭದಲ್ಲಿ ಸೂರ್ಯಕುಮಾರ್ ಯಾದವ್ ಕುರಿತು ಪ್ರತಿಕ್ರಿಯೆ ನೀಡಿರುವ ಸೌರವ್ ಗಂಗೂಲಿ, ಆತನ ಸಮಯ ಬರುತ್ತದೆ ಎಂದು ಹೇಳಿದ್ದಾರೆ. 2018 ಐಪಿಎಲ್ ಟೂರ್ನಿಯಲ್ಲಿ ಮುಂಬೈ ಪರ 14 ಪಂದ್ಯಗಳನ್ನಾಡಿದ್ದ ಸೂರ್ಯಕುಮಾರ್ ಯಾದವ್ 512 ರನ್ ಗಳಿಸಿದ್ದರು. 2019ರಲ್ಲಿ 16 ಪಂದ್ಯಗಳೊಂದಿಗೆ 424 ರನ್ ಹಾಗೂ 2020ರ ಟೂರ್ನಿಯಲ್ಲಿ 400* ರನ್ ಗಳಿಸಿದ್ದಾರೆ. ಇದನ್ನೂ ಓದಿ: ಅರ್ಧಶತಕ ಸಿಡಿಸಿ 2 ದಾಖಲೆ ನಿರ್ಮಿಸಿದ ಪಡಿಕ್ಕಲ್‌

    ಸೂರ್ಯಕುಮಾರ್ ಯಾದವ್ ಅವರೊಂದಿಗೆ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿರುವ ಸಂಜು ಸ್ಯಾಮ್ಸನ್, ಕೋಲ್ಕತ್ತಾ ತಂಡದ ರಾಹುಲ್ ತ್ರಿಪಾಠಿ, ವರುಣ್ ಚಕ್ರವರ್ತಿ, ಶುಭಮನ್ ಗಿಲ್, ಬೆಂಗಳೂರು ತಂಡದ ಆರಂಭಿಕ ದೇವ್‍ದತ್ ಪಡಿಕ್ಕಲ್ ರಂತಹ ಆಟಗಾರರನ್ನು ಗುರುತಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಸಂಜು ಸ್ಯಾಮ್ಸನ್, ವರುಣ್ ಚಕ್ತವರ್ತಿ ಆಸ್ಟ್ರೇಲಿಯಾ ಟೂರ್ನಿಯ ಟಿ20 ಸರಣಿಗೆ ಆಯ್ಕೆಯಾಗಿದ್ದು, ಚಕ್ರವರ್ತಿ ಭಾರತ ತಂಡಕ್ಕೆ ಮೊದಲ ಬಾರಿ ಆಯ್ಕೆಯಾಗಿದ್ದಾರೆ. ಇತ್ತ ಬೆಂಗಳೂರು ತಂಡದ ಆರಂಭಿಕರಾಗಿ ಕಣಕ್ಕೆ ಇಳಿಯುತ್ತಿದ್ದು, 14 ಪಂದ್ಯಗಳಲ್ಲಿ 472 ರನ್ ಗಳಿಸಿದ್ದಾರೆ. ಆ ಮೂಲಕ 2020ರ ಐಪಿಎಲ್ ಟೂರ್ನಿಯ ಉದಯೋನ್ಮುಖ ಆಟಗಾರರ ಪಟ್ಟಿಯ ರೇಸ್‍ನಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತ ತ್ರಿಪಾಠಿ ಐಪಿಎಲ್ ಟೂರ್ನಿಯ ದ್ವಿತೀಯಾರ್ಧದಲ್ಲಿ ಉತ್ತಮ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಜ್ಯ, ದೇಶ ಹೆಮ್ಮೆ ಪಡುವಂತೆ ಆಡುತ್ತೇನೆ: ಸರ್ಕಾರಕ್ಕೆ ಥ್ಯಾಂಕ್ಸ್ ಹೇಳಿದ ರಾಹುಲ್