Tag: Devarahipparagi

  • ಉತ್ತರ ಕರ್ನಾಟಕದತ್ತ ಕುಮಾರಸ್ವಾಮಿ ಚಿತ್ತ?

    ಉತ್ತರ ಕರ್ನಾಟಕದತ್ತ ಕುಮಾರಸ್ವಾಮಿ ಚಿತ್ತ?

    ಬೆಂಗಳೂರು: 2018ರಲ್ಲಿ ಹೇಗಾದರೂ ಮಾಡಿ ಸರ್ಕಾರ ರಚಿಸಲೇಬೇಕೆಂದು ತೀರ್ಮಾನಿಸಿರುವ ರಾಜಕೀಯ ಪಕ್ಷಗಳು ಉತ್ತರ ಕರ್ನಾಟಕದತ್ತ ಕಣ್ಣು ಹಾಕಿವೆ. ಈಗ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಅವರ ಸರದಿ. ತಮ್ಮ ಮೂಲಕ್ಷೇತ್ರ ರಾಮನಗರವನ್ನು ತೊರೆದು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ.

    ಪೂರ್ವ ಸಿದ್ಧತೆಯಾಗಿ ನವೆಂಬರ್ ನಲ್ಲಿ ನಾಲ್ಕು ದಿನಗಳ ಕಾಲ ಹೆಚ್‍ಡಿಕೆ ದೇವರ ಹಿಪ್ಪರಗಿ ಪ್ರವಾಸ ಮಾಡಲಿದ್ದಾರೆ. ಕ್ಷೇತ್ರದಲ್ಲಿ ಪ್ರತಿಯೊಂದು ಹಳ್ಳಿಗೆ ಭೇಟಿ ಕೊಟ್ಟು ಮತದಾರರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ನಿಮ್ಮನ್ನು ನಂಬಿ ಬರ್ತೀನಿ. ನನ್ನನ್ನು ಸೋಲಿಸಿದ್ರೆ ನಿಮಗೆ ಕಷ್ಟ. ನೀವು ನನ್ನನ್ನು ಗೆಲ್ಲಿಸಿದ್ರೆ ಮುಂದೆ ನಾನು ರಾಜ್ಯದ ಸಿಎಂ ಆಗ್ತೀನಿ. ಆಗ ನಿಮ್ಮ ಕ್ಷೇತ್ರಕ್ಕೆ ಇನ್ನಷ್ಟು ಒಳ್ಳೆಯದಾಗುತ್ತೆ ಅನ್ನೋ ಮೂಲಕ ಭಾವನಾತ್ಮಕವಾಗಿ ಮತದಾರರನ್ನು ಹಿಡಿದಿಟ್ಟುಕೊಳ್ಳಲು ಯತ್ನಿಸಲಿದ್ದಾರೆ ಎಂದು ಹೇಳಲಾಗ್ತಿದೆ.

    ಇತ್ತೀಚೆಗಷ್ಟೇ ಕಾಂಗ್ರೆಸ್‍ನಿಂದ ಅಮಾನತುಗೊಂಡು ಜೆಡಿಎಸ್‍ಗೆ ಸೇರ್ಪಡೆಯಾಗಿರುವ ದೇವರಹಿಪ್ಪರಗಿ ಶಾಸಕ ಎಎಸ್ ಪಾಟೀಲ್ ನಡಹಳ್ಳಿ ತಮ್ಮ ಕ್ಷೇತ್ರವನ್ನು ಕುಮಾರಸ್ವಾಮಿಗೆ ಬಿಟ್ಟುಕೊಡಲಿದ್ದಾರೆ ಎನ್ನಲಾಗಿದೆ. ನಡಹಳ್ಳಿ ಮುದ್ದೇಬಿಹಾಳದಿಂದ ಸ್ಪರ್ಧಿಸಲಿದ್ದಾರೆ. ಇವೆಲ್ಲದ್ದಕ್ಕೂ ಮೊದಲು ರಾಮನಗರದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ಕರೆದು ರಾಮನಗರ ತೊರೆದು ದೇವರ ಹಿಪ್ಪರಗಿಯಲ್ಲಿ ಯಾಕೆ ಸ್ಪರ್ಧೆ ಅನ್ನೋ ಅನಿವಾರ್ಯತೆಯ ಬಗ್ಗೆ ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.

  • ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ಪಲ್ಟಿ-ನಾಲ್ವರ ದುರ್ಮರಣ-ನಾಲ್ವರು ಗಂಭೀರ

    ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ಪಲ್ಟಿ-ನಾಲ್ವರ ದುರ್ಮರಣ-ನಾಲ್ವರು ಗಂಭೀರ

    ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ಒಂದು ಪಲ್ಟಿ ಹೊಡೆದಿದ್ದು, ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ದೇವರಹಿಪ್ಪರಗಿ ಪಟ್ಟಣದ ಬಳಿ ನಡೆದಿದೆ.

    ಓರ್ವ ಮಹಿಳೆ ಸೇರಿದಂತೆ ಮೂವರು ಪುರುಷರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕೆಎ 48 ಎಂ 3625. ನಂಬರಿನ ಕ್ರೂಸರನ್ನು ಚಲಾಯಿಸುತ್ತಿದ್ದ ಚಾಲಕ ಅಬ್ದುಲ್ (35), ಮಹಾನಂದ ಕೆರೂರ (40), ಮಾನಿಂಗಸಾಹುಕಾರ ಕಾಸರ್ (50) ಮೃತ ದುರ್ದೈವಿಗಳು. ಮೃತ ಮಹಿಳೆಯ ಹೆಸರು ತಿಳಿದು ಬಂದಿಲ್ಲ. ಮೃತರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ಬನಹಟ್ಟಿ ಗ್ರಾಮದವರು ಎಂದು ತಿಳಿದು ಬಂದಿದೆ.

    ಅಪಘಾತದಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ದೇವರ ಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.