Tag: details

  • ಜ್ವರ, ಕೆಮ್ಮಿಗೆ ಮಾತ್ರೆ ತೆಗೆದುಕೊಳ್ಳುವರ ವಿವರವನ್ನು ತೆಗೆದುಕೊಳ್ಳಿ

    ಜ್ವರ, ಕೆಮ್ಮಿಗೆ ಮಾತ್ರೆ ತೆಗೆದುಕೊಳ್ಳುವರ ವಿವರವನ್ನು ತೆಗೆದುಕೊಳ್ಳಿ

    – ಮೆಡಿಕಲ್ ಸ್ಟೋರ್‌ಗಳಿಗೆ ಆಂಧ್ರ ಸರ್ಕಾರ ಸೂಚನೆ

    ಹೈದರಾಬಾದ್: ಜ್ವರ, ಕೆಮ್ಮು ಮತ್ತು ಶೀತ ಎಂದು ಬಂದು ಮಾತ್ರೆ ತೆಗದುಕೊಂಡು ಹೋಗುವವರ ವಿವರವನ್ನು ಪಡೆದುಕೊಳ್ಳಿ ಎಂದು ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ಮೆಡಿಕಲ್ ಶಾಪ್‍ಗಳಿಗೆ ಸೂಚನೆ ನೀಡಿವೆ.

    ದೇಶದಲ್ಲಿ ದಿನೇ ದಿನೇ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ದೇಶನ್ನೇ ಲಾಕ್‍ಡೌನ್ ಮಾಡಿದ್ದರೂ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹೀಗಾಗಿ ಸೋಂಕಿತರ ಪತ್ತೆಗಾಗಿ ರಾಜ್ಯ ಸರ್ಕಾರಗಳು ವಿವಿಧ ನಿಯಮಗಳನ್ನು ಅನುಸರಿಸುತ್ತಿವೆ. ಈ ನಿಟ್ಟಿನಲ್ಲಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ಈ ನಿರ್ಧಾರವನ್ನು ಕೈಗೊಂಡಿವೆ.

    ಲಾಕ್‍ಡೌನ್ ಇದ್ದರೂ ದೇಶದ್ಯಾಂತ ಮೆಡಿಕಲ್ ಶಾಪ್‍ಗಳು ಓಪನ್ ಇವೆ. ಈ ಮೆಡಿಕಲ್‍ಗಳಿಗೆ ನಮಗೆ ಶೀತ, ಕೆಮ್ಮು ಮತ್ತು ಜ್ವರ ಇದೆ ಎಂದು ಮಾತ್ರೆ ತೆಗೆದುಕೊಳ್ಳಲು ಬರುವವರ ವಿವರವನ್ನು ಮೆಡಿಕಲ್ ಶಾಪ್ ಮಾಲೀಕರು ಪಡೆದುಕೊಳ್ಳಬೇಕು. ಜೊತೆಗೆ ಪ್ರತಿದಿನ ನಾವು ಸೂಚಿಸಿದ ಸ್ಥಳೀಯ ಅಧಿಕಾರಿಗಳಿಗೆ ಅದನ್ನು ನೀಡಬೇಕು. ಆ ಅಧಿಕಾರಿಗಳು ಅವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸುತ್ತಾರೆ ಎಂದು ಸರ್ಕಾರಗಳು ತಿಳಿಸಿವೆ.

    ಇತ್ತೀಚೆಗೆ ಕೊರೊನಾ ಲಕ್ಷಣಗಳು ಇಲ್ಲದಿರುವ ವ್ಯಕ್ತಿಗಳಲ್ಲಿ ಸೋಂಕು ಇರುವುದು ಪರೀಕ್ಷೆಯಲ್ಲಿ ಪತ್ತೆಯಾಗುತ್ತಿದೆ. ಕೆಲವರು ರೋಗದ ಲಕ್ಷಣ ಇದ್ದರೂ ಕೊರೊನಾ ಪರೀಕ್ಷೆಗೆ ಒಳಗಾಗುತ್ತಿಲ್ಲ ಆದ್ದರಿಂದ ಸರ್ಕಾರಗಳು ಈ ನಿರ್ಧಾರವನ್ನು ಕೈಗೊಂಡಿವೆ. ಈಗಾಗಲೇ ಅಂಧ್ರಪ್ರದೇಶದಲ್ಲಿ 603 ಕೊರೊನಾ ಪ್ರಕರಣಗಳು ಮತ್ತು ತೆಲಂಗಾಣದಲ್ಲಿ 800 ಕೊರೊನಾ ಪ್ರಕರಣಗಳು ದಾಖಲಾಗಿವೆ.

    ಇಡೀ ಭಾರತದಲ್ಲಿ 15,712 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, 507 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ 2,231 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಹೀಗಾಗಿ ಈವರೆಗೆ ಇಡೀ ವಿಶ್ವದಲ್ಲಿ 23,29,651 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 1,60,721 ಜನರು ಮೃತಪಟ್ಟಿದ್ದಾರೆ. ವಿಶ್ವವ್ಯಾಪಿ 5,95,433 ಜನರು ರೋಗದಿಂದ ಗುಣವಾಗಿ ಹೊರಬಂದಿದ್ದಾರೆ.

  • ತನಿಖೆ ವೇಳೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮನ್ಸೂರ್ ಖಾನ್

    ತನಿಖೆ ವೇಳೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮನ್ಸೂರ್ ಖಾನ್

    ಬೆಂಗಳೂರು: ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ ಪ್ರಾಥಮಿಕ ತನಿಖೆ ವೇಳೆ ಸ್ಫೋಟಕ ಮಾಹಿತಿ ತಿಳಿಸಿದ್ದಾನೆ.

    ಜಾರಿ ನಿದೇಶನಾಲಯ(ಇಡಿ) ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದ ವೇಳೆ ಪ್ರಕರಣದ ಕುರಿತು ಸ್ಫೋಟಕ ಮಾಹಿತಿಯನ್ನು ಮನ್ಸೂರ್ ಬಾಯ್ಬಿಟ್ಟಿದ್ದಾನೆ. ಈ ವೇಳೆ 1000ಕ್ಕೂ ಹೆಚ್ಚು ಕೋಟಿ ಮೌಲ್ಯದ ವ್ಯವಹಾರದ ರಹಸ್ಯ ವಿವರವನ್ನು ಇಡಿ ಅಧಿಕಾರಿಗಳು ಪಡೆದಿದ್ದಾರೆ ಎನ್ನಲಾಗಿದೆ. ಅಲ್ಲದೆ ಕೆಲ ಪ್ರಭಾವಿಗಳ ಹೆಸರುಗಳನ್ನು ಕೂಡ ಮನ್ಸೂರ್ ಪ್ರಸ್ತಾಪಿಸಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಪ್ರಭಾವಿಗಳ ಜೊತೆಗಿನ ನಂಟು ಹಾಗೂ ಪ್ರಭಾವಿಗಳಿಗೆ ಹಂಚಿಕೆಯಾಗಿರುವ ಐಎಂಎನ ಲಾಭಾಂಶದ ಕುರಿತು ಮನ್ಸೂರ್ ಬಾಯ್ಬಿಟ್ಟಿದ್ದಾನೆ. ಮನ್ಸೂರ್ ಗೆ ಜೀವ ಬೆದರಿಕೆ ಇರುವ ಹಿನ್ನೆಲೆ ಆತನಿಗೆ ಹೈ ಸೆಕ್ಯುರಿಟಿ ನೀಡಲಾಗಿದೆ. ಹೀಗಾಗಿ ಖಾನ್ ಗೆ ರಾತ್ರಿಯಿಡಿ ಬಿಗಿ ಭದ್ರತೆ ಒದಗಿಸಲಾಗುತ್ತಿದೆ. ಸದ್ಯ ಶಾಂತಿನಗರದ ಇಡಿ ಕಚೇರಿಯಲ್ಲಿ ಮನ್ಸೂರ್ ನನ್ನು ಇಡಿ ಅಧಿಕಾರಿಗಳು ಇರಿಸಿದ್ದಾರೆ.

    ಶನಿವಾರ ಬೆಂಗಳೂರಿನ ಶಾಂತಿ ನಗರದಲ್ಲಿರುವ ಇಡಿ ಕಚೇರಿಗೆ ಕರೆತಂದ ಬಳಿಕ ಸಿವಿಲ್ ಕೋರ್ಟ್ ಗೆ ಇಡಿ ಅಧಿಕಾರಿಗಳು ಹಾಜರುಪಡಿಸಿದ್ದರು. ಹಲವು ವಿಷಯಗಳ ಕುರಿತು ವಿಚಾರಣೆ ನಡೆಸಬೇಕಿದೆ. ಆದ್ದರಿಂದ 15 ದಿನಗಳ ಕಾಲ ವಶಕ್ಕೆ ನೀಡಿ ಅಂತ ಇಡಿ ಕೇಳಿತು. ಆದರೆ, ಕೇವಲ 3 ದಿನಗಳಿಗೆ ಮಾತ್ರ ನೀಡೋದಾಗಿ ಜಡ್ಜ್ ಆದೇಶಿಸಿದರು. ಹೀಗಾಗಿ ಖಾನ್‍ನನ್ನು 3 ದಿನಗಳ ಅವಧಿಗೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಲಾಗಿದೆ.

    ಐಎಂಎ ಕಚೇರಿ ಸೇರಿದಂತೆ ಮನ್ಸೂರ್ ಖಾನ್ ಮನೆ ಮೇಲೆ ದಾಳಿ ನಡೆಸಿದ ವೇಳೆ ಲಭ್ಯವಾದ ಆಸ್ತಿಪಾಸ್ತಿ, ಚಿನ್ನಾಭರಣಗಳು, ದಾಖಲೆಗಳ ಕುರಿತು ಇಡಿ ವಿಚಾರಣೆ ನಡೆಸುತ್ತಿದೆ. ಇನ್ನೊಂದೆಡೆ, ಎಸ್‍ಐಟಿ ಹಾಗೂ ತೆಲಂಗಾಣ ಪೊಲೀಸರು ಕೂಡ ಮನ್ಸೂರ್ ನನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದ್ದಾರೆ.

    ವಂಚನೆ ಎಸಗಿ ಮನ್ಸೂರ್ ಖಾನ್ ದುಬೈಗೆ ತೆರಳಿದ್ದ. ಈತನ ಚಲನವಲನಗಳ ಕಣ್ಣಿಟ್ಟಿತ್ತ ಎಸ್‍ಐಟಿ ಭಾರತಕ್ಕೆ ಬರುವಂತೆ ಹೇಳಿತ್ತು. ಅಲ್ಲದೇ ರಕ್ಷಣೆ ನೀಡಲಾಗುವುದು ಎಂದು ಎಸ್‍ಐಟಿ ಹೇಳಿತ್ತು. ದುಬೈನಿಂದ ದೆಹಲಿಗೆ ಬಂದಿಳಿದ ಮನ್ಸೂರ್ ಖಾನ್‍ನನ್ನು ಗುರುವಾರ ಮಧ್ಯರಾತ್ರಿ 1:50ರ ಸುಮಾರಿಗೆ ಬಂಧಿಸಲಾಗಿತ್ತು. ಮನ್ಸೂರ್ ಖಾನ್‍ನನ್ನು ಇ.ಡಿ ಅಧಿಕಾರಿಗಳು ವಿಚಾರಣೆ ಪೂರ್ಣಗೊಳಿಸಿದ ಬಳಿಕ ಎಸ್‍ಐಟಿ ಅಧಿಕಾರಿಗಳಿಗೆ ಹಸ್ತಾಂತರಿಸಲಿದ್ದಾರೆ.

  • ಯಾವೆಲ್ಲ ರೈತರಿಗೆ 6 ಸಾವಿರ ರೂ. ಸಿಗುತ್ತೆ? ಅರ್ಹತೆ ಏನು? ಯಾವಾಗ ಕೊನೆಯ ದಿನ? ಇಲ್ಲಿದೆ ಪೂರ್ಣ ಮಾಹಿತಿ

    ಯಾವೆಲ್ಲ ರೈತರಿಗೆ 6 ಸಾವಿರ ರೂ. ಸಿಗುತ್ತೆ? ಅರ್ಹತೆ ಏನು? ಯಾವಾಗ ಕೊನೆಯ ದಿನ? ಇಲ್ಲಿದೆ ಪೂರ್ಣ ಮಾಹಿತಿ

    ಬಾರಿಯ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ರೈತರಿಗೆ ನೆರವಾಗುವ ಉದ್ದೇಶದಿಂದ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಹೆಸರಿನಲ್ಲಿ ಯೋಜನೆಯನ್ನು ಆರಂಭಿಸಿದೆ. ವರ್ಷಕ್ಕೆ 6 ಸಾವಿರ ರೂ. ಹಣ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಲಿದ್ದು ಈ ಯೋಜನೆಗೆ ಯಾವೆಲ್ಲ ರೈತರು ಅರ್ಹರಾಗುತ್ತಾರೆ? ಕೊನೆಯ ದಿನ ಏನು ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.

    ಅರ್ಹತೆಗಳು ಏನು?
    2 ಹೆಕ್ಟೇರ್(4.94 ಎಕ್ರೆ) ಅಥವಾ ಅದಕ್ಕಿಂತ ಕಡಿಮೆ ಕೃಷಿ ಭೂಮಿಯನ್ನು ಹೊಂದಿರುವ ರೈತ ಕುಟುಂಬ ಈ ಯೋಜನೆಯ ಲಾಭವನ್ನು ಪಡೆಯಬಹುದು. 2019 ಫೆ.1ರ ಒಳಗಡೆ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಭೂ ದಾಖಲೆಗಳಲ್ಲಿ ನೊಂದಣಿಯಾದ ರೈತರು ಈ ಯೋಜನೆಗೆ ಅರ್ಹರಾಗುತ್ತಾರೆ. ಸರ್ಕಾರಿ ಉದ್ಯೋಗಿಗಳ ಪೈಕಿ ಗ್ರೂಪ್ ಡಿ/ ಬಹು ಕಾರ್ಯ ನಿರ್ವಹಿಸುವ ಸರ್ಕಾರಿ ನೌಕಕರು/ ನಾಲ್ಕನೇಯ ವರ್ಗದ ಸಿಬ್ಬಂದಿ ಸಹ ಈ ಯೋಜನೆಯ ಫಲಾನುಭವಿಗಳಾಗಬಹುದು.

    ಎಲ್ಲಿ ಅರ್ಜಿ ಸಲ್ಲಿಸಬೇಕು?
    ಪಿಎಂ-ಕಿಸಾನ್ ಯೋಜನೆಗೆಂದು ಕೇಂದ್ರ ಸರ್ಕಾರ pmkisan.nic.in ವೆಬ್‍ಸೈಟ್ ತೆರೆದಿದೆ. ಈ ಯೋಜನೆಗೆ ಅರ್ಹತೆ ಪಡೆದ ರೈತರು ಈ ಅಧಿಕೃತ ವೆಬ್‍ಸೈಟ್‍ಗೆ ಭೇಟಿ ನೀಡಿ ಪಿಎಂ-ಕಿಸಾನ್ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿಯಬಹುದು. ಆನ್‍ಲೈನ್ ಮೂಲಕ ಈ ವೆಬ್‍ಸೈಟ್ ನಲ್ಲಿ ರೈತರು ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ರೈತರು ತಮ್ಮ ಹೆಸರನ್ನು ಹಾಗೂ ವಿವರಗಳನ್ನು ನೊಂದಾಯಿಸಲು ಫೆ. 25 ಕೊನೆಯ ದಿನಾಂಕವಾಗಿದೆ.

    ಯಾವ ದಾಖಲೆಗಳು ಬೇಕು?
    ಸರ್ಕಾರದಿಂದ ಅನುಮೋದಿಸಿದ ಐಡಿ ಪುರಾವೆಗಳು, ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ಮಾಹಿತಿ, ಕೃಷಿ ಭೂವಿಯ ದಾಖಲೆಗಳು ರೈತರ ಬಳಿ ಇರಬೇಕಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಇರಲೇಬೇಕು.

    ಈ ಯೋಜನೆಯಲ್ಲಿ ಗ್ರಾಮೀಣ ಕೃಷಿ ಭೂಮಿ ಅಥವಾ ನಗರ ಕೃಷಿ ಭೂಮಿಯೆಂದು ತಾರತಮ್ಯ ಮಾಡುವುದಿಲ್ಲ. ಗ್ರಾಮೀಣ ಹಾಗೂ ನಗರ ವ್ಯಾಪ್ತಿಗೆ ಬರುವ ಎರಡು ಕೃಷಿ ಭೂಮಿಗಳ ರೈತರು ಈ ಯೋಜನೆಗೆ ಅರ್ಹರು. ನಗರದಲ್ಲಿರುವ ಕೃಷಿ ಭೂಮಿಯನ್ನು ಪ್ರಸ್ತುತ ಈಗ ಕೃಷಿಗೆ ಚಟುವಟಿಕೆಗೆ ಬಳಸುತ್ತಿದ್ದರೆ ಮಾತ್ರ ಯೋಜನೆಯ ಫಲವನ್ನು ಪಡೆಯಬಹುದು.

    ಎಷ್ಟು ಹಣ ಬರುತ್ತದೆ?
    2 ಹೆಕ್ಟೇರ್ ಜಮೀನು ಹೊಂದಿರುವ ಸಣ್ಣ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಷಕ್ಕೆ 6 ಸಾವಿರ ರೂ. ಮೊತ್ತವನ್ನು 2 ಸಾವಿರ ರೂ. ನಂತೆ ಮೂರು ಕಂತುಗಳಲ್ಲಿ ಜಮೆ ಮಾಡುವ `ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಎಂದು ಕರೆಯಲಾಗುವ ಯೋಜನೆಯನ್ನು ಹಣಕಾಸು ಸಚಿವ ಪಿಯೂಶ್ ಗೋಯಲ್ ಈ ಬಾರಿಯ ಬಜೆಟ್ ನಲ್ಲಿ ಘೋಷಿಸಿದ್ದರು.

    ಈ ಯೋಜನೆಯಿಂದ 12 ಕೋಟಿಯಷ್ಟು ಸಣ್ಣ ಮತ್ತು ಬಡರೈತರಿಗೆ ಪ್ರಯೋಜನವಾಗಲಿದ್ದು, 2019-20ರ ಸಾಲಿನಲ್ಲಿ ಸರ್ಕಾರಕ್ಕೆ 75 ಸಾವಿರ ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ. ಕೃಷಿ ಸಂಬಂಧಿ ಇತರ ಚಟುವಟಿಕೆಗಳಿಗೆ ಈ ಹಣ ನೆರವಾಗಲಿದೆ. ರೈತರು ಗೌರವಯುತ ಜೀವನ ಸಾಗಿಸಲು ಇದರಿಂದ ಸಾಧ್ಯವಾಗುತ್ತದೆ. 2018-19ರ ಸಾಲಿನಲ್ಲಿ ಪರಿಷ್ಕೃತ ಅಂದಾಜು ವಿಭಾಗದಲ್ಲಿ 20 ಸಾವಿರ ಕೋಟಿ ರೂ. ನೀಡಲಾಗಿದೆ. 2018ರ ಡಿಸೆಂಬರ್ ಪೂರ್ವಾನ್ವಯದಂತೆ ಈ ಯೋಜನೆ ಜಾರಿಯಾಗಲಿದೆ ಎಂದು ಗೋಯಲ್ ತಿಳಿಸಿದ್ದರು.

    ಚುನಾವಣೆಗೆ ಮೊದಲು ಬೀಳುತ್ತೆ ಹಣ:
    ಲೋಕಸಭಾ ಚುನಾವಣೆಯ ಒಳಗಡೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ ರೈತರ ಖಾತೆಗಳಿಗೆ 4 ಸಾವಿರ ರೂ. ಜಮೆಯಾಗುವ ಸಾಧ್ಯತೆಯಿದೆ. ಈ ಯೋಜನೆ ಅನ್ವಯ ಮೊದಲ ಕಂತನ್ನು ಮಾರ್ಚ್ 31ರ ಒಳಗಡೆ ಹಾಕಲು ಕೇಂದ್ರ ಸರ್ಕಾರ ಪ್ಲಾನ್ ಮಾಡಿದೆ. ಇದರ ಜೊತೆಯಲ್ಲೇ ಎರಡನೇ ಕಂತಿನ ಹಣವನ್ನು ಲೋಕಸಭಾ ಚುನಾವಣೆಯ ಒಳಗಡೆ ಜಮೆ ಮಾಡಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಈ ಸಂಬಂಧ ವಿವಿಧ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಕೃಷಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿದ್ದು, ಶೀಘ್ರವೇ ರೈತರ ಮಾಹಿತಿಯನ್ನು ನೀಡುವಂತೆ ಮನವಿ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv