Tag: Destruction

  • 30 ವರ್ಷಗಳಿಂದ ಬೆಳೆದು ನಿಂತಿದ್ದ ತೋಟ ನಾಶ ಮಾಡಿದ್ರಾ ತಹಶೀಲ್ದಾರ್?

    30 ವರ್ಷಗಳಿಂದ ಬೆಳೆದು ನಿಂತಿದ್ದ ತೋಟ ನಾಶ ಮಾಡಿದ್ರಾ ತಹಶೀಲ್ದಾರ್?

    – ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
    – ಜಾತ್ರೆಗೆ ಜಾಗ ಸಾಕಾಗಲ್ಲವೆಂದು ತೋಟ ನಾಶ

    ತುಮಕೂರು: ಸುಮಾರು 30 ವರ್ಷಗಳಿಂದ ಬೆಳೆದು ನಿಂತಿದ್ದ ತೋಟವನ್ನು ಏಕಾಏಕಿ ಉರುಳಿಸಿ ತಹಶೀಲ್ದಾರ್ ದರ್ಪ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ತುಮಕೂರು ಜಿಲ್ಲೆಯ ಗುಬ್ಬಿ ತಹಶೀಲ್ದಾರ್ ಮಮತಾ ಅವರ ಮೇಲೆ ಆರೋಪ ಕೇಳಿ ಬಂದಿದೆ. ತಾಲೂಕಿನ ತಿಪ್ಪೂರು ಗ್ರಾಮದ ಸಣ್ಣಕೆಂಪಯ್ಯ ಮತ್ತು ಸಿದ್ದಮ್ಮ ಅವರಿಗೆ ಉಡುಸಲಮ್ಮ ದೇವಸ್ಥಾನದಿಂದ ಕೊಡುಗೆಯಾಗಿ 5.18 ಎಕರೆ ಜಮೀನು ನೀಡಲಾಗಿತ್ತು. ಕಳೆದ 30 ವರ್ಷಗಳಿಂದಲೂ ತೆಂಗು, ಅಡಿಕೆ, ಬಾಳೆ ಬೆಳೆದುಕೊಂಡು ಬಂದಿದ್ದಾರೆ. ಈ ನಡುವೆ ಉಡುಸಲಮ್ಮ ದೇವರ ಜಾತ್ರೆಗೆ ಜಾಗ ಸಾಕಾಗುವುದಿಲ್ಲ ಎಂದು ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ತಹಶಿಲ್ದಾರ್ ಮಮತಾ ಅವರು ತೋಟವನ್ನು ಉರುಳಿಸಲು ಆದೇಶ ಕೊಟ್ಟಿದ್ದಾರೆ ಎನ್ನಲಾಗಿದೆ.

    ಅದರಂತೆ ಗ್ರಾಮ ಲೆಕ್ಕಿಗ ಮುರುಳಿ ಯಾವುದೇ ನೋಟಿಸ್ ನೀಡದೇ ಏಕಾಏಕಿ ತೋಟಕ್ಕೆ ನುಗ್ಗಿ ಫಸಲಿಗೆ ಬಂದಿದ್ದ 300 ಅಡಿಕೆ, 30 ತೆಂಗು ಮತ್ತು ಬಾಳೆ ಗಿಡಗಳನ್ನು ಉರುಳಿಸಿದ್ದಾರೆ. ಸಣ್ಣ ಕೆಂಪಯ್ಯ ಮತ್ತು ಸಿದ್ದಮ್ಮ ಕುಟುಂಬ ಉಡುಸಲಮ್ಮ ದೇವಸ್ಥಾನದ ಅರ್ಚಕರಾಗಿದ್ದಾರೆ. ಹೀಗಾಗಿ ಈ ಕುಟುಂಬಕ್ಕೆ ದೇವಸ್ಥಾನದಿಂದಲೇ ಜಮೀನು ಕೊಡುಗೆಯಾಗಿ ಕೊಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ ಜಮೀನು ಪೂರ್ಣ ಸ್ವಾಧೀನ ಕೋರಿ ಜಿಲ್ಲಾ ನ್ಯಾಯಾಲಯದಲ್ಲಿ ಮುನಿ ಕೆಂಪಯ್ಯ ಕುಟುಂಬ ಅರ್ಜಿ ಸಲ್ಲಿಸಿತ್ತು. ಆದರೆ ಅಧಿಕಾರಿಗಳು ಏಕಾಏಕಿ ಗಿಡಗಳನ್ನು ನಾಶ ಮಾಡಿದ್ದಾರೆ.

    ಈ ನಡುವೆ ಸಣ್ಣ ಕೆಂಪಯ್ಯ ಮತ್ತು ಸಿದ್ದಮ್ಮರ ಮಧ್ಯೆಯೇ ಜಮೀನು ಹಂಚಿಕೆಯಲ್ಲಿ ವಿವಾದ ಉಂಟಾಗಿತ್ತು. ಇದರ ಲಾಭ ಪಡೆದುಕೊಂಡ ತಾಲೂಕು ಆಡಳಿತ ಏಕಾಏಕಿ ತೋಟವನ್ನು ಉರುಳಿಸಿದೆ. ಗುಬ್ಬಿ ಪೊಲೀಸರ ಸಮುಖದಲ್ಲೇ ಗ್ರಾಮ ಲೆಕ್ಕಿಗ ಮುರುಳಿ ಮರಗಳನ್ನು ಕಡಿದಿದ್ದಾರೆ. ಇದರಿಂದ ಆಘಾತಕ್ಕೊಳಗಾದ ಕುಟುಂಬ ದುಃಖದ ಮಡುವಿನಲ್ಲಿದೆ. ಮುನಿ ಕೆಂಪಯ್ಯ ಕುಟುಂಬದ ಆಕ್ರಂದನದ ವಿಡಿಯೋ ವೈರಲ್ ಆಗಿದೆ.

  • ಗದಗ ಸುತ್ತಮುತ್ತ ಆಲಿಕಲ್ಲು ಸಹಿತ ಧಾರಾಕಾರ ಮಳೆ

    ಗದಗ ಸುತ್ತಮುತ್ತ ಆಲಿಕಲ್ಲು ಸಹಿತ ಧಾರಾಕಾರ ಮಳೆ

    – ಅಪಾರ ಪ್ರಮಾಣದ ಮಾವು, ಸಪೋಟ ಬೆಳೆ ನಾಶ

    ಗದಗ: ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಸಂಜೆ ವೇಳೆಗೆ ಗುಡುಗು, ಸಿಡಿಲು ಸಹಿತ ಧಾರಕಾರ ಆಲಿಕಲ್ಲು ಮಳೆಯಾಗಿದ್ದು, ಬೇಸಿಗೆಯ ಬಿಸಿಲಿನಲ್ಲಿ ಬೆಂಡಾದ ಭೂಮಿಗೆ ಮಳೆ ತಂಪೆರಿದಿದೆ.

    ಮಳೆಯೊಂದಿಗೆ ಬಿರುಸಿನ ಗಾಳಿ ಬೀಸಿದ ಪರಿಣಾಮ ಹಲವೆಡೆ ಮರ, ವಿದ್ಯುತ್ ಕಂಬಗಳು ಧರೆಗುರಳಿದ ಮಾಹಿತಿ ಲಭಿಸಿದೆ. ಇತ್ತ ನಿನ್ನೆ ರಾತ್ರಿಯೂ ಕೂಡ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯಾಗಿದ್ದು, ಅಕಾಲಿಕ ಮಳೆಗೆ ಬೇಸಿಗೆಯ ನಡುವೆಯೂ ನೀರುಣಿಸಿ ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದ ಮಾವು, ಸಪೋಟ ಬೆಳೆದ ರೈತರಿಗೆ ಭಾರೀ ಪ್ರಮಾಣದಲ್ಲಿ ನಷ್ಟವಾಗಿದೆ.

    ರಾತ್ರೋರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಸಾವಿರಾರು ಎಕರೆಯಲ್ಲಿ ಬೆಳೆದ ಮಾವಿನ ಗಿಡಗಳ ಫಸಲು ನೆಲಕ್ಕುರುಳಿದೆ. ಅಕಾಲಿಕ ಮಳೆಯ ಹೊಡೆತಕ್ಕೆ ಮಾವು ಬೆಳೆಗಾರರು ಕಂಗಾಲಾಗಿದ್ದಾರೆ.

    ಗದಗ ತಾಲೂಕಿನ ಹುಲಕೋಟಿ, ಹೊಸಹಳ್ಳಿ, ಶಾಗೋಟಿ, ದುಂದೂರ ಗ್ರಾಮಗಳ ಭಾಗದಲ್ಲಿ ಮಳೆಯಾಗಿದ್ದು, ಈ ಭಾಗದಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಮಾವು ಬೆಳೆದಿದ್ದಾರೆ. ಇಲ್ಲಿ ಬೆಳೆದ ಮಾವಿನ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದ್ದು, ಸತತ ನಾಲ್ಕು ವರ್ಷಗಳ ಬರಕ್ಕೆ ಮಂಕಾಗಿದ್ದ ಮಾವು ಬೆಳೆಗಾರರ ಮುಖದಲ್ಲಿ ಈ ಬಾರಿ ಮಂದಹಾಸ ಮೂಡಿತ್ತು. ಹೀಗಾಗಿ ಒಳ್ಳೆಯ ಲಾಭದ ನಿರೀಕ್ಷೆಯಲ್ಲಿ ಇದ್ದ ರೈತರಿಗೆ ಸಿಡಿಲು ಬಡಿದಂತಾಗಿದೆ.

    ಮಾವು ಮಾತ್ರವಲ್ಲ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಸಪೋಟ ಹಣ್ಣಿನ ಗಿಡಗಳು ಮುರಿದಿದ್ದು, ರೈತರಿಗೆ ತುಂಬಲಾರದ ನಷ್ಟ ಉಂಟಾಗಿದೆ. ಈ ಬಗ್ಗೆ ರೈತರು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಕೂಡ ಯಾವೊಬ್ಬ ಅಧಿಕಾರಿಗಳು ತೋಟದ ಕಡೆ ಸುಳಿದಿಲ್ಲ ಎಂದು ರೈತರು ಆರೋಪ ಮಾಡಿದ್ದಾರೆ. ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದು, ಸರ್ಕಾರದಿಂದ ಪರಿಹಾರಕ್ಕೆ ಆಗ್ರಹಿಸಿದ್ದಾರೆ.

  • ಕಾರವಾರದಲ್ಲಿ 23.73 ಲಕ್ಷ ರೂ. ಮೌಲ್ಯದ ಮದ್ಯ ನಾಶ

    ಕಾರವಾರದಲ್ಲಿ 23.73 ಲಕ್ಷ ರೂ. ಮೌಲ್ಯದ ಮದ್ಯ ನಾಶ

    ಕಾರವಾರ: ವಿವಿಧ ಮೊಕದ್ದಮೆಗಳಲ್ಲಿ ವಶಪಡಿಸಿಕೊಂಡ ಸುಮಾರು 8,170.75 ಲೀಟರ್ ಗೋವಾ ಹಾಗೂ ಕರ್ನಾಟಕದ ಮದ್ಯವನ್ನು ಕಾರವಾರದ ಅಬಕಾರಿ ಇಲಾಖೆಯ ಕಚೇರಿ ಆವರಣದಲ್ಲಿ ನಾಶಪಡಿಸಲಾಯಿತು.

    ವಿಧಾನಸಭಾ ಚುನಾವಣೆಯಿಂದ ಈವರೆಗೂ ಜಿಲ್ಲೆಯಾದ್ಯಾಂತ 121 ವಿವಿಧ ಮೊಕದ್ದಮೆಯನ್ನು ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ದಾಖಲಿಸಿಕೊಂಡಿದೆ. ಈ ಪ್ರಕರಣ ಅಡಿಯಲ್ಲಿ ಒಟ್ಟು 23.73 ಲಕ್ಷ ರೂ. ಮೌಲ್ಯದ 8,170.75 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿತ್ತು.

    ಕಳ್ಳಬಟ್ಟಿ, ಗೋವಾ ಮದ್ಯ, ಬಿಯರ್, ಐಎಂಎಫ್‍ಎಲ್ ಹಾಗೂ ಸೇದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅಂಕೋಲಾ, ಕುಮಟಾ, ಹೊನ್ನವಾರ ಬಟ್ಕಾಳ, ಯಲ್ಲಾಪುರ, ಶಿರಸಿ, ದಂಡೇಲಿ ವ್ಯಾಪ್ತಿಯಲ್ಲಿ ಪ್ರಕರಣಗಳು ದಾಖಲಾಗಿದೆ. ಇದರಲ್ಲಿ 459 ಲೀಟರ್ ಮದ್ಯ, 518 ಲೀಟರ್ ಬಿಯರ್ ವಶಕ್ಕೆ ಪಡೆಯಲಾಗಿದ್ದು, ಒಟ್ಟು 23.73 ಲಕ್ಷ ರೂ ಮೌಲ್ಯದ 8,170.75 ಲೀಟರ್ ಮದ್ಯಗಳನ್ನು ನಾಶಪಡಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv